ನಮಗೆ ಯಾಕೆ ಹೀಗಾಗುತ್ತೆ ಅನ್ನುವ ಪ್ರಶ್ನೆಯೇ ಒಂದು ತಾತ್ವಿಕ ಪ್ರಮೇಯವಾಗಿಯೂ, ಮನಸ್ಸು ಕೆಲಸ ಮಾಡುವ ರೀತಿಯ ತಿಳುವಳಿಕೆಯಾಗಿಯೂ ಸರಿಯಲ್ಲವೆಂದು ಕಾಣುತ್ತದೆ. ನಾವು ಜೀವನವನ್ನು, ಮನಷ್ಯರನ್ನು, ಬಂದ ಹಾಗೆ, ಅವರು ಇರುವ ಹಾಗೆ ಒಪ್ಪಿಕೊಳ್ಳುವ ನಮ್ರತೆಯನ್ನು ತೋರಿಸುವುದಿಲ್ಲ. ಎಲ್ಲ ಘಟನೆಗಳ ಮೇಲೂ ನಮ್ಮ ನಿಯಂತ್ರಣವಿರಬೇಕು, ಇರುತ್ತದೆ. ನಾವು ಇಷ್ಟಪಟ್ಟ ಹಾಗೆಯೇ ಜಗತ್ತು ನಡೆಯಬೇಕು. ಎಲ್ಲ ಬಂಧುಮಿತ್ರರೂ ನಾವು ಭಾವಿಸಿದಂತೆ ನಡೆಯಬೇಕು, ಬದುಕಬೇಕು ಎಂಬ ಧೋರಣೆಯಿಂದಲೇ ನಮ್ಮಲ್ಲಿ ಮೂಡುವ ಅಸಂಗತ ಪ್ರಶ್ನೆ.
ಕೆ. ಸತ್ಯನಾರಾಯಣ ಬರೆಯುವ “ಬೀದಿ ಜಗಳ ಮತ್ತು ಇತರೆ ಪ್ರಬಂಧಗಳು” ಸರಣಿಯ ಎಂಟನೆಯ ಪ್ರಬಂಧ ನಿಮ್ಮ ಓದಿಗೆ

ಈ ಭುವಿಯಲ್ಲಿ ಹುಟ್ಟಿ ಕಾಲ ಮತ್ತು ಬದುಕು ಎರಡನ್ನೂ ಸವೆಸಿ ನಿರ್ಗಮಿಸಬೇಕಾದ ಪ್ರತಿಯೊಬ್ಬ ಮನುಷ್ಯನಿಗೂ, ಪ್ರತಿಯೊಂದು ಕುಟುಂಬಕ್ಕೂ – ನಮಗೇ ಯಾಕೆ ಹೀಗೆ, ಹೀಗೆಲ್ಲ ಆಗುತ್ತೆ ಎಂಬ ಪ್ರಶ್ನೆ ಮತ್ತೆ ಮತ್ತೆ ಎದುರಾಗುತ್ತಲೇ ಇರುತ್ತದೆ. ನಿರಂತರವಾಗಿ ಇದೊಂದೇ ಪ್ರಶ್ನೆ ಉತ್ತರವಿಲ್ಲದೆ ಮತ್ತೆ ಮತ್ತೆ ಎದುರಾಗುತ್ತಿದ್ದರೆ ಆತ್ಮಹತ್ಯೆಯೊಂದೇ ಸರಿಯಾದ ಉತ್ತರವಾಗಬಲ್ಲದು ಎಂದು ಬಲ್ಲವರು ಹೇಳುತ್ತಾರೆ. ಸೃಷ್ಟಿಕರ್ತನು ಕರುಣಾಮಯಿಯಾದ್ದರಿಂದ ಈ ಪ್ರಶ್ನೆ ನಮ್ಮೆಲ್ಲರಿಗೂ ಎದುರಾಗುವ ಸಂದರ್ಭಗಳ ನಡುವೆ ಕಾಲಾಂತರ ಅಥವಾ ಮಧ್ಯವಿರಾಮವಿರುತ್ತದೆ. ಅಂತಹ ಒಂದು ವಿರಾಮದಲ್ಲಿ ಈ ಪ್ರಬಂಧವನ್ನು ಬರೆದಿರುವೆನು ಮತ್ತು ನೀವು ಕೂಡ ನಿಮಗೆ ದೊರಕಿದ ಅಂತಹದೊಂದು ವಿರಾಮದಲ್ಲಿ ಇದನ್ನು ಓದುತ್ತಿರುವಿರಿ.

ಕಷ್ಟ, ಇಳಿತ, ದುರಾದೃಷ್ಟ, ಸೋಲು, ವಂಚನೆ, ಹತಾಳೆ ಎದುರಾದಾಗ ಮಾತ್ರ ನಾವು ಈ ಪ್ರಶ್ನೆಯನ್ನು ಕೇಳಿಕೊಳ್ಳುತ್ತಲೇ ಇರುತ್ತೇವೆಯೇ ಹೊರತು ಸುಖ, ಸಂತೋಷ ಎದುರಾದಾಗಲಲ್ಲ. ಯಾರಿಗೂ ಸಿಗದ ಸುಖ, ಸಂತೋಷ ಎದುರಾದಾಗ, ಯಾರಿಗೂ ಒಲಿಯದ ಶುಕ್ರದೆಸೆ, ಅದೃಷ್ಟ ನಮ್ಮ ಮನೆಗೇ ಬಂದಾಗ, ಈ ಪ್ರಶ್ನೆಯನ್ನು ಕೇಳಿಕೊಳ್ಳುವ ವ್ಯವಧಾನವೇ ನಮಗಿರುವುದಿಲ್ಲ. ಅಷ್ಟೊಂದು ಸುಖ, ಸಂತೋಷ, ಸಂಭ್ರಮಗಳಲ್ಲಿ ಮುಳುಗಿಹೋಗಿರುತ್ತೇವೆ. ಎಷ್ಟೆಂದರೆ, ಇದನ್ನೆಲ್ಲ ಇನ್ನೊಬ್ಬರಿಗೆ ಹಂಚುವುದಿರಲಿ, ತಿಳಿಸಲು ಕೂಡ ಹೋಗುವುದಿಲ್ಲ. ಇದನ್ನೆಲ್ಲ ಪಡೆಯಲು ನಾವು ಮಾತ್ರ, ನಾವು ಮಾತ್ರವೇ ಅರ್ಹರು ಎಂಬಂತೆ ಬೀಗುತ್ತಿರುತ್ತೇವೆ. ಇದನ್ನೆಲ್ಲ ಗುಟ್ಟಾಗಿ ಮುಚ್ಚಿಟ್ಟು ಅನುಭವಿಸಿದಾಗಲೇ ನಮಗೆ ಸಂತೋಷ. ಆದರೆ, ಇದೆಲ್ಲ ಇನ್ನೊಬ್ಬರಿಗೆ ಹಾಗೇ ತಿಳಿದುಬಿಡಲಿ ಎಂಬ ಒಳ ಆಸೆಯೂ ಇರುತ್ತದೆ, ಮಾತ್ರವಲ್ಲ, ಇನ್ನೊಬ್ಬರಿಗೆ ನಮ್ಮ ಸುಖ ಸಂತೋಷದ ವಿವರ ಗೊತ್ತಾಗಲಿ ಎನ್ನುವುದಕ್ಕಿಂತ, ಹಾಗೆ ಗೊತ್ತಾಗಿ ನಮ್ಮ ಬಗ್ಗೆ ಅಸೂಯೆ ಪಟ್ಟು ಕೀಳರಿಮೆ ಅನುಭವಿಸಲಿ ಎಂಬ ಆಸೆ ಯಾರಿಗಿರುವುದಿಲ್ಲ. ಹುಲುಮಾನವರಾಗಿಲ್ಲದೆ ಹೋದವರು ಮಾತ್ರ ಇಂತಹ ಆಸೆಯನ್ನು ಖಂಡಿತವಾಗಿ ಗೆದ್ದಿರುತ್ತಾರೆ. ನಮಗೇ ಯಾಕೆ ಹೀಗೆಲ್ಲ ಆಗುತ್ತೆ ಎನ್ನುವ ಪ್ರಶ್ನೆಯನ್ನು ಕೇಳಿಕೊಳ್ಳುತ್ತಿದ್ದರೂ, ಇನ್ನೊಬ್ಬರಿಗೆ ಯಾಕೆ ಹೀಗಾಗುತ್ತಿಲ್ಲ, ಯಾಕೆ ಅವರು ಕೂಡ ನಮ್ಮ ಹಾಗೆ ಕಷ್ಟನಷ್ಟಕ್ಕೆ ಸಿಕ್ಕಿಹಾಕಿಕೊಂಡು ಪರದಾಡುತ್ತಿಲ್ಲ ಎಂಬ ಪ್ರಶ್ನೆಯೇ ನಮ್ಮಲ್ಲಿರುವುದು ಎಂಬುದನ್ನು ಒಪ್ಪಿಕೊಂಡು ಮಾತ್ರ ಮುಂದಿನ ಸಾಲುಗಳನ್ನು ಓದಿ.

ಈ ಪ್ರಶ್ನೆಗೆ, ಪ್ರಶ್ನೆಗಳಿಗೆಲ್ಲ ಎರಡು ಸ್ತರಗಳಿರುತ್ತವೆ. ಮೊದಲನೆಯದು ಹೋಲಿಕೆ ಮತ್ತು ಸ್ಪರ್ಧೆಯಿಂದ ಮೂಡುವುದು. ನಾವು ಯಾವಾಗಲೂ ನಮ್ಮನ್ನು ಇನ್ನೊಬ್ಬರಿಗೆ ಹೋಲಿಸಿಕೊಳ್ಳುತ್ತಿರುತ್ತೇವೆ. ಅವರಂತಿರಲು ಇಷ್ಟಪಡುತ್ತೇವೆ. ಅವರು ಬಯಸುವುದನ್ನೆಲ್ಲ ನಾವೂ ಬಯಸುತ್ತೇವೆ. ಅದನ್ನು ಪಡೆಯಲು ನಾವು ಅವರಿಗಿಂತ ಹೆಚ್ಚು ಅರ್ಹರು ಎಂದು ಭಾವಿಸುತ್ತೇವೆ. ಯಾವಾಗಲೂ ನಮ್ಮ ಸ್ಪರ್ಧೆ ನಮ್ಮಂತೆಯೇ ಇರುವವರ ಜೊತೆ ಇರುತ್ತದೆ. ನಮ್ಮಂತೆಯೇ ಇರುವವರು ಗೆಲ್ಲುವುದೆಂದರೇನು? ನಾವೇ ಯಾವಾಗಲೂ ಗೆಲ್ಲಬೇಕು, ಎಲ್ಲ ಅದೃಷ್ಟ, ಎಲ್ಲ ಪುರಸ್ಕಾರ, ಸಕಲ ಶುಕ್ರದೆಸೆ ನಮಗೇ ಸಿಗಬೇಕೆಂದು ಬಯಸುತ್ತೇವೆ. ಇದೆಲ್ಲ ನಮಗೆ ಸಿಗದೇ ಹೋದಾಗ, ನಮ್ಮಂತೆ ಇರುವ ಅವರೆಲ್ಲರಿಗೂ ಇದೆಲ್ಲ ಖಂಡಿತ ಸಿಗಬಾರದು, ಸಿಗಲೇಬಾರದು ಎಂಬ ಆಸೆಯೇ ಹೆಚ್ಚಾಗಿರುತ್ತದೆ. ಕಲಾವಿದ ಎಸ್‌. ಪಿ. ಬಾಲಸುಬ್ರಹ್ಮಣ್ಯಂ, ಈ ಮನೋಧರ್ಮ, ವಿದ್ಯಮಾನವನ್ನು ತುಂಬಾ ಚೆನ್ನಾಗಿ ವಿವರಿಸಿದರು. ಬದುಕಿನ ಯಾವುದೇ ಕ್ಷೇತ್ರದಲ್ಲಿ ನೀವು ತೊಡಗಿಕೊಂಡಿರಿ, ನಿಮ್ಮಷ್ಟೇ ಪ್ರತಿಭೆ, ಸಾಮರ್ಥ್ಯ, ಕಲಾವಂತಿಕೆ ಇರುವವರು ನಿಮ್ಮ ಸಮೀಪ, ಸುತ್ತಮುತ್ತಲಲ್ಲೇ ಇನ್ನೂ ನಾಲ್ಕಾರು ಜನ ಇದ್ದೇ ಇರುತ್ತಾರೆ. ಹೆಚ್ಚು ಕಡಿಮೆ ಎಲ್ಲ ದೃಷ್ಟಿಯಿಂದಲೂ ನಿಮಗೆ ಅವರು ಸಮಾನರು. ನಿಮ್ಮ ನಡುವೆಯೇ ಒಂದು ಸ್ಪರ್ಧೆ ಯಾವಾಗಲೂ ಇರುತ್ತದೆ. ಬಹಿರಂಗವಾಗಿ, ಗುದ್ದು ಮುಸುಕಿನಾಟದಲ್ಲಿ, ಸಣ್ಣತನದಲ್ಲಿ. ಆದರೆ ಎಲ್ಲ ಅವಕಾಶ, ಅದೃಷ್ಟಗಳು ಒಬ್ಬರಿಗೇ ಒಲಿಯುವುದಿಲ್ಲ. ನಿಮಗಂತೂ ಖಂಡಿತ ಒಲಿಯುವುದಿಲ್ಲ. ಎಲ್ಲರಿಗೂ ಸಮಾನ ಯೋಗ್ಯತೆ ಇದ್ದರೂ ಯೋಗ, ಅದೃಷ್ಟ ಎಲ್ಲರಿಗೂ ಸಮನಾಗಿರುವುದಿಲ್ಲ. ಹಾಗೆಂದು ನೀವು ಇವರುಗಳ ಸಂಬಂಧವನ್ನು ಕಳೆದುಕೊಳ್ಳಲು ಸಾಧ್ಯವಾಗುವುದಿಲ್ಲ. ಏಕೆಂದರೆ, ನಿಮ್ಮ ಪ್ರತಿಭೆ ಅರಳುವುದೇ ಇಂತವರೊಡನೆ ಇರುವ ಒಡನಾಟ, ಸ್ಪರ್ಧೆಯಲ್ಲಿ.

ಇನ್ನೊಂದು ಸ್ತರ ಆಧ್ಯಾತ್ಮಿಕ ಸ್ವರೂಪದ್ದು. ಜಗತ್ತಿನ ಬಗ್ಗೆ, ಸೃಷ್ಟಿಯ ಬಗ್ಗೆ ಇರುವ ಅಂತಿಮ ಪ್ರಶ್ನೆಗಳಿಗೆ ಸಂಬಂಧಿಸಿದ್ದು. ಯಾರಿಗೆ ಎಷ್ಟು ಆಯಸ್ಸು, ಯಾರು ಯಾರ ಮಕ್ಕಳಾಗಿ ಹುಟ್ಟುತ್ತಾರೆ, ಯಾರು ಬಂಜೆಯಾಗುತ್ತಾರೆ, ಯಾರಿಗೆ ಅಕಾಲಿಕ ಮರಣ, ಯಾರಿಗೆ ಆತ್ಯಂತಿಕ ಕಾಯಿಲೆ, ಯಾರಿಗೆ ಯಾವ ಅಪಘಾತ, ಇದಕ್ಕೆಲ್ಲ ಎಲ್ಲೂ ಯಾವ ಸಂದರ್ಭ ಸನ್ನಿವೇಶದಲ್ಲೂ ನಿರ್ದಿಷ್ಟವಾದ ಉತ್ತರವಿರುವುದಿಲ್ಲ, ಸಮಾಧಾನವೂ ಇರುವುದಿಲ್ಲ. ಪ್ರಕೃತಿ, ಸೃಷ್ಟಿ ಕೂಡ ನಿಮ್ಮನ್ನು ಒಂದು ದುರಾದೃಷ್ಟದ ಸತ್ಯವನ್ನು ಪ್ರಕಟಿಸಲು ಆಯ್ಕೆ ಮಾಡಿಕೊಳ್ಳಬಹುದು. ಮೂರು-ನಾಲ್ಕು ದಶಕಗಳ ಹಿಂದಿನ ಮಾತು. ಆವಾಗ ನನಗಿನ್ನೂ ಮದುವೆ ಆಗಿರಲಿಲ್ಲ. ಲೈಂಗಿಕತೆ, ವೈವಾಹಿಕ ಜೀವನ, ಬಸುರಿ, ಬಾಣಂತನ ಕುರಿತಂತೆ ವಿಚಾರಗಳು ಕೂಡ ಅಸ್ಪಷ್ಟವಾಗಿದ್ದವು. ಕವಿ ಗೋಪಾಲಕೃಷ್ಣ ಅಡಿಗರ ಮನೆಗೆ ಹೋಗಿದ್ದೆ. ಕರಾವಳಿಯ ಹಳ್ಳಿ ಕಡೆಯಿಂದ ಅವರ ನೆಂಟರೊಬ್ಬರು ಬಂದಿದ್ದರು. ಕಷ್ಟ ಸುಖ, ಬದುಕಿನ ಬವಣೆಗಳನ್ನೆಲ್ಲ ಪರಸ್ಪರ ಹೇಳಿಕೊಳ್ಳುತ್ತಾ, ಚರ್ಚಿಸುತ್ತಾ ಹೋದರು. ಕುಶಲದ ಮಾತುಗಳೂ ಆದವು. ಅತಿಥಿ ಹೋದ ನಂತರ, ಅಡಿಗರು ಭಾರವಾದ ಧ್ವನಿಯಲ್ಲಿ ಹೇಳಿದರು, “ನೋಡು, ಇಷ್ಟಕ್ಕೇ ಈತನ ಬವಣೆ ಮುಗಿಯುವುದಿಲ್ಲ. ಈತನಿಗೆ ಮಕ್ಕಳು ಕೂಡ ಇಲ್ಲ. Nature is cruel to him. ಒಂದು ವಂಶವಾಹಿನಿ, ವಂಶಾವಳಿ, ಮನೆತನ ಮುಂದುವರೆದುಕೊಂಡು ಹೋಗುತ್ತೆ, ಹೋಗುತ್ತಲೇ ಇರುತ್ತೆ. ಆದರೆ ಪ್ರಕೃತಿ, ಸೃಷ್ಟಿ ನಿಯಮ ಯಾರೋ ಒಬ್ಬರನ್ನು ಆಯ್ದುಕೊಂಡು, ಸಾಕು ಇನ್ನು ಇವರ ಮೂಲಕ ಸಂತತಿ ನಿಲ್ಲಲಿ ಎಂದು ನಿರ್ಧರಿಸಿಬಿಡುತ್ತೆ. ಅಂತಹ ಗಂಡು-ಹೆಣ್ಣುಗಳನ್ನು ಒಟ್ಟಿಗೆ ತಂದುಬಿಡುತ್ತೆ. You get chosen not to choose further. ಯಾರೂ ಏನೂ ಮಾಡುವ ಹಾಗಿಲ್ಲ.”

ಆವತ್ತು ನನಗೆ ಅವರ ಮಾತುಗಳ ಮಹತ್ವ ಅರ್ಥವಾಗಲಿಲ್ಲ. ತುಂಬಾ ದಿನಗಳೇ ಬೇಕಾದವು. ದಸ್ತೊವಸ್ಕಿ ಇದನ್ನೆ ಇನ್ನೊಂದು ರೀತಿಯಲ್ಲಿ ನಿರಂತರ ಪ್ರಶ್ನೆಯಾಗಿ ತನ್ನ ಕೃತಿಗಳಲ್ಲಿ ಕೇಳಿಕೊಳ್ಳುತ್ತಲೇ ಇರುತ್ತಾನೆ. ಮಕ್ಕಳು ಏಕೆ ಅಪ್ರಾಪ್ತ ವಯಸ್ಸಿನಲ್ಲಿ ಸಾಯುತ್ತಾರೆ. ಏಕೆ ಅವರಿಗೆ ಮಾರಣಾಂತಿಕ ಕಾಯಿಲೆ ಬರುತ್ತದೆ? ದೇವರಿಗೆ ಅವರ ಬಗ್ಗೆ ಅಷ್ಟೊಂದು ಪ್ರೀತಿಯೇ? ಈ ಜಗತ್ತು ಅಂತಹ ಸುಂದರ ಮುಗ್ಧ ಮಕ್ಕಳಿಗೆ ಬದುಕಿ ಬಾಳುವ ಒಳ್ಳೆಯ, ಅರ್ಹ ಸ್ಥಳವಲ್ಲ ಎಂಬುದು ಪ್ರಕೃತಿ ನಿಯಮವೇ? ಈ ಪ್ರಶ್ನೆಗಳಿಗೆ ಅವನು ಉತ್ತರ ಹೇಳುವುದಿಲ್ಲ. ಇಂತಹ ಸಂದರ್ಭ ಸನ್ನಿವೇಶಗಳನ್ನು ನಿಮ್ಮ ಮುಂದೆ ಆತ ಮತ್ತೆ ಮತ್ತೆ ಮುಂದಿಡುತ್ತಾನೆ. ಸೃಷ್ಟಿ ಕೂಡ ಇದೇ ಪ್ರಶ್ನೆ ಕೇಳುತ್ತದೆ, ಕೇಳುತ್ತಲೇ ಇರುತ್ತದೆ. ಪ್ರಶ್ನೆಯ ನಿಗೂಢತೆ ಅರ್ಥವಾಗದೆ ನಾವು ಇದನ್ನು ಪೆದ್ದುಪೆದ್ದಾಗಿ ನಮಗೇ ಏಕೆ ಹೀಗೆ ಆಗುತ್ತೆ ಎಂದು ಮಾರ್ಪಡಿಸಿಕೊಳ್ಳುತ್ತೇವೆ.

ಈ ಪ್ರಶ್ನೆ ಆಗಾಗ್ಗೆ ಮಾತ್ರವೇ ಎದುರಾಗುತ್ತದೆ ಎಂದು ನಾನು ಪ್ರಾರಂಭದಲ್ಲಿ ಹೇಳಿದ್ದು ಪೂರ್ತಿ ಸತ್ಯವಲ್ಲ. ಒಂದೇ ಕುಟುಂಬದಲ್ಲಿ ಹುಟ್ಟಿದ ಮಕ್ಕಳಲ್ಲಿ ಎಷ್ಟೊಂದು ವ್ಯತ್ಯಾಸವಿರುತ್ತದೆ. ಬುದ್ಧಿಮಾಂದ್ಯರು, ಅಂಗವಿಕಲರು, ಪ್ರತಿಭಾವಂತರು, ಸುಂದರರೂ ಒಬ್ಬರೇ ತಾಯಿತಂದೆಗೆ ಮಕ್ಕಳಾಗಿರುವುದಿಲ್ಲವೇ? ಇದನ್ನು ತಾಯಿ-ತಂದೆಗಳು ಹೇಗೆ ಎದುರಿಸಬೇಕು? ಯಾವ ಧರ್ಮ, ಯಾವ ತತ್ವಶಾಸ್ತ್ರವೂ ಇದಕ್ಕೆ ಉತ್ತರ ಹೇಳಿಕೊಡುವುದಿಲ್ಲ. ನನಗೆ ಕೊಲ್ಹಾಪುರದಲ್ಲಿ ಆಪ್ತವಾಗಿದ್ದ ಒಂದು ಪ್ರಭಾವಿ ಶ್ರೀಮಂತ, ಅಧಿಕಾರಸ್ಥ ಕುಟುಂಬದಲ್ಲಿ ನೆನಪಿನ ಶಕ್ತಿ ಕೊಂಚವೂ ಇಲ್ಲದ ಒಂದು ಮಗು ಹುಟ್ಟಿತು. ಆ ಮಗು ತಮ್ಮದೆಂದು ಒಪ್ಪಿಕೊಳ್ಳಲು, ಅದಕ್ಕೆ ಬೇಕಾದ ಚಿಕಿತ್ಸೆ ಕೊಡಿಸಲು, ನಿರಂತರ ಗಮನ ಕೊಡಲು ದಂಪತಿಗಳಿಗೆ ತುಂಬಾ ಕಷ್ಟವಾಯಿತು. ನಮಗೇ ಯಾಕೆ ಹೀಗಾಯಿತು ಎಂದು ಪ್ರತಿಯೊಬ್ಬರನ್ನೂ ಕೇಳುತ್ತಿದ್ದರು, ಕೇಳುತ್ತಲೇ ಇರೋರು. ಅವರಿಗೆ ಇನ್ನೊಂದು ಮಗುವನ್ನು ಮಾಡಿಕೊಳ್ಳುವ ಧೈರ್ಯವೇ ಬರಲಿಲ್ಲ. ಇಡೀ ನಗರವೇ ಅವರನ್ನು ಪುಸಲಾಯಿಸಿದರೂ, ಯಾರೊಬ್ಬರಿಗೂ ಅವರಿಗೆ ಭರವಸೆ ಕೊಡುವ ಧೈರ್ಯವಿರಲಿಲ್ಲ, ಮುಂದಿನ ಮಗು ಸಾಧಾರಣವಾಗಿರುತ್ತೆ, ಸಾಮಾನ್ಯವಾಗಿರುತ್ತೆ ಎಂದು ಹೇಳಲು. ಆದರೂ ದೇವರು ಇನ್ನು ಮುಂದೆ ಕರುಣಾಮಯಿಯಾಗಿರಲು ನಿರ್ಧರಿಸಿದ ಎಂದು ಹೇಳುತ್ತಾರಲ್ಲ ಹಾಗೆ, ಎರಡನೆ ಮಗು ಎಲ್ಲ ಮಕ್ಕಳಂತೆಯೇ ಇತ್ತು.

ಇಡೀ ಜಗತ್ತಿಗೇ ಗೊತ್ತಿರುವ ಒಂದು ಕುಟುಂಬದಲ್ಲೂ ಹೀಗಾಯಿತು. ಇದು ದೇವರು ತಮ್ಮನ್ನು ಪರೀಕ್ಷೆ ಮಾಡುತ್ತಿರುವ ರೀತಿ ಎಂದು ತಿಳಿದರು. ಇನ್ನೂ ಹೆಚ್ಚು ಸಂವೇದನಾಶೀಲರಾದರು, ಸೂಕ್ಷ್ಮಮತಿಗಳಾದರು. ಇಂತಹ ಮಕ್ಕಳಿಗೆಲ್ಲ ಶಿಕ್ಷಣ, ತರಬೇತಿ, ಆರೋಗ್ಯದ ವ್ಯವಸ್ಥೆ ಮಾಡಿದರು. ಸಂಸ್ಥೆಗಳನ್ನು ಸ್ಥಾಪಿಸಿದರು. ನಾಯಕತ್ವ ಒದಗಿಸಿದರು. ನಾವು ಹೀಗೆಲ್ಲ ಸಮಾಜದೊಡನೆ ತೊಡಗಲೆಂದೇ ದೇವರು ನಮಗೆ ಇಂತಹ ಮಗು ಕೊಟ್ಟ ಎಂದು ವಿನೀತಭಾವದಲ್ಲಿ ಹೇಳಿದರು. ಅವರ ಮಗುವೇ ಬಹುಕಾಲ ಬಾಳಲಿಲ್ಲ. ಆದರೆ ಈ ದಂಪತಿಗಳು ಎಷ್ಟು ದೊಡ್ಡವರೆಂದರೆ, ಮಗು ತೀರಿಹೋದ ಮೇಲೂ ಇನ್ನೂ ಆ ಸಂಸ್ಥೆಗಳನ್ನು ನಡೆಸುತ್ತಿದ್ದಾರೆ.

ಇಂತಹವರಲ್ಲೆಲ್ಲ ಒಂದು ಸೂಕ್ಷ್ಮ ಪರಿಜ್ಞಾನವನ್ನು ಕಾಣಬಹುದು. ತೀರಾ ವೈಯಕ್ತಿಕ, ಕೌಟುಂಬಿಕ ಪ್ರಶ್ನೆಗಳನ್ನು ಕೂಡ ಆಧ್ಯಾತ್ಮಿಕ, ವಿಶ್ವಾತ್ಮಕ ಪ್ರಶ್ನೆಗಳಾಗಿ ಪರಿವರ್ತಿಸಿಕೊಂಡು ಅದಕ್ಕೆ ಉತ್ತರ, ಸಮಾಧಾನ ಹುಡುಕುವ ಒಂದು ಧೀಮಂತಿಕೆ ಇವರಲ್ಲಿರುತ್ತದೆ. ನನಗೆ ಹೀಗೇಕಾಯಿತು ಎಂದು ಮಾತ್ರ ಕೊರಗುವ ಬದಲು, ನನಗೆ ಹೀಗೆಲ್ಲಾ ಆಗದೇ ಹೋದರೂ, ಆಗದೆ ಹೋದಾಗಲೂ, ಜಗತ್ತಿನಲ್ಲಿ ನನ್ನ ಸಹಜೀವಿಗಳಿಗೆ ಹೀಗಾಗಿದೆಯೆಲ್ಲ, ಹೀಗೇಕೆ ಆಗುತ್ತದೆ ಎಂದು ಯೋಚಿಸುತ್ತಾರೆ. ವೈಯಕ್ತಿಕ, ಕೌಟುಂಬಿಕ ಬದುಕು ಎಲ್ಲ ರೀತಿಯಲ್ಲೂ ಹಸನಾಗಿದ್ದರೂ, ಸಂಪನ್ನವಾಗಿದ್ದರೂ ತಾವೇ ತಾವಾಗಿ ತಮ್ಮ ಬದುಕು, ಚಿಂತನಶೀಲತೆಯನ್ನು ಸಮಸ್ಯಾತ್ಮಕಗೊಳಿಸಿಕೊಂಡು ಎಲ್ಲ ಕಾಲಕ್ಕೂ, ಎಲ್ಲ ದೇಶಗಳಿಗೂ, ಎಲ್ಲ ಮನುಷ್ಯರಿಗೂ ಸಲ್ಲುವ ಉತ್ತರಗಳನ್ನು ಹುಡುಕುತ್ತಾರೆ. ಸಾವು, ನೋವು, ಮುಪ್ಪು, ದುಃಖ ಎಲ್ಲವನ್ನೂ ಗೌತಮ ನೋಡಿದ್ದು ವೈಯಕ್ತಿಕ ಸಂದರ್ಭದಲ್ಲಲ್ಲ. ದಕ್ಷಿಣ ಆಫ್ರಿಕಾದ ರೈಲು ಪ್ರಯಾಣದಲ್ಲಿ ಗಾಂಧಿ ತಮಗಾದ ವೈಯಕ್ತಿಕ ಅವಮಾನವನ್ನು ಜನಾಂಗೀಯ, ನಾಗರಿಕತೆಯ ಪ್ರಶ್ನೆಯಾಗಿ ಪರಿವರ್ತಿಸಿಕೊಂಡರು. ಈ ಪ್ರಬಂಧವನ್ನು ಬರೆಯುತ್ತಿರುವ ನನ್ನನ್ನು, ಓದುತ್ತಿರುವ ನಿಮ್ಮನ್ನು ಕೂಡ ಗಮನಿಸೋಣ. ಎಂತಹ ವಿಶ್ವಾತ್ಮಕ, ಸಾಮಾಜಿಕ ಸಮಸ್ಯೆಗಳನ್ನು ವೈಯಕ್ತಿಕ ಪ್ರಶ್ನೆಗಳನ್ನಾಗಿ ಮಾಡಿಕೊಂಡು ನಮ್ಮ ಸಂವೇದನಾಶೀಲತೆಯನ್ನು ನಾವೇ ಮೊಂಡು ಮಾಡಿಕೊಳ್ಳುತ್ತೇವೆ.

ಇದೆಲ್ಲ ಸರಿ, ಇನ್ನೊಬ್ಬರಿಗೆ ವೈಯಕ್ತಿಕವಾಗಿ, ಕೌಟುಂಬಿಕವಾಗಿ ಬಿಕ್ಕಟ್ಟುಗಳಿದ್ದಾಗ ಅವರೆದುರಿಗೆ ಹೋಗಿ ಕುಳಿತುಕೊಂಡು ವಿಶ್ವಾತ್ಮಕ ನೆಲೆಗಳಲ್ಲಿ ಮಾತನಾಡುವುದು ಕೂಡ ಅಸೂಕ್ಷ್ಮವಾಗುತ್ತದೆ.

ಆದರೆ ಆಧ್ಯಾತ್ಮಿಕ ಪ್ರವೃತ್ತಿಯವರು, ವೈಚಾರಿಕ ಬರಹಗಾರರು ಇನ್ನೊಂದು ರೀತಿಯ ಉತ್ತರ ನೀಡುತ್ತಾರೆ. ಜಗತ್ತು ಇರುವುದು ಮತ್ತು ಚಲಿಸುವುದು ಕೆಲವು Cosmic ನಿಯಮಗಳಿಗನುಗುಣವಾಗಿ. ಸೃಷ್ಟಿಯಲ್ಲಿ Cosmic grace ಎಂಬುದು ಇರುತ್ತದೆ. ಅದು ಯಾರನ್ನು ತಲುಪುತ್ತದೆ, ಏಕೆ, ಹೇಗೆ ತಲುಪುತ್ತದೆ, ಎಷ್ಟು ದಕ್ಕುತ್ತದೆ ಎಂಬುದರ ಮೇಲೆ ವೈಯಕ್ತಿಕ ಆಯ್ಕೆಯಿರುವುದಿಲ್ಲ. ಹಾಗಾಗಿ ಬದುಕು ನೀಡುವ ಆಯ್ಕೆ, ಸ್ವಾತಂತ್ರ‍್ಯ, ಅವಕಾಶಗಳ ಬಗ್ಗೆ ನಾವು ವಿನಯವಂತರಾಗಿರಬೇಕು. ದಕ್ಕಿರುವ ಸ್ವಾತಂತ್ರ‍್ಯ, ಅವಕಾಶಗಳನ್ನು ಜವಾಬ್ದಾರಿಯಿಂದ, ಪ್ರೀತಿಯಿಂದ ನಿರ್ವಹಿಸಬೇಕು. ಇದನ್ನು ಸಂಪೂರ್ಣವಾಗಿ ಒಪ್ಪದವರು ಇನ್ನೊಂದು ಪ್ರಶ್ನೆ ಕೇಳುತ್ತಾರೆ. Cosmic grace ಏಕೆ ಯಾವಾಗಲೂ ಶ್ರೀಮಂತರ, ಉಳ್ಳವರ ಪರವಾಗಿಯೇ ಇರುತ್ತದೆ. ಈ ಪ್ರಶ್ನೆಗೆ ಉತ್ತರವಿಲ್ಲ. ಉತ್ತರ ನೀಡುವ ಅಗತ್ಯವೂ ಇಲ್ಲ. Cosmic graceನ್ನು ಗೌರವಿಸೋಣ. ನಮ್ಮ ಜವಾಬ್ದಾರಿಯನ್ನು ಮರೆಯದಿರೋಣ ಎಂದು ನಮಗೆ ನಾವೇ ಹೇಳಿಕೊಳ್ಳುತ್ತಿರಬೇಕು.

Sad Sadness Man Depression Depressive Loneliness

ನನಗೆ ಹೀಗೇಕಾಯಿತು ಎಂದು ಮಾತ್ರ ಕೊರಗುವ ಬದಲು, ನನಗೆ ಹೀಗೆಲ್ಲಾ ಆಗದೇ ಹೋದರೂ, ಆಗದೆ ಹೋದಾಗಲೂ, ಜಗತ್ತಿನಲ್ಲಿ ನನ್ನ ಸಹಜೀವಿಗಳಿಗೆ ಹೀಗಾಗಿದೆಯೆಲ್ಲ, ಹೀಗೇಕೆ ಆಗುತ್ತದೆ ಎಂದು ಯೋಚಿಸುತ್ತಾರೆ. ವೈಯಕ್ತಿಕ, ಕೌಟುಂಬಿಕ ಬದುಕು ಎಲ್ಲ ರೀತಿಯಲ್ಲೂ ಹಸನಾಗಿದ್ದರೂ, ಸಂಪನ್ನವಾಗಿದ್ದರೂ ತಾವೇ ತಾವಾಗಿ ತಮ್ಮ ಬದುಕು, ಚಿಂತನಶೀಲತೆಯನ್ನು ಸಮಸ್ಯಾತ್ಮಕಗೊಳಿಸಿಕೊಂಡು ಎಲ್ಲ ಕಾಲಕ್ಕೂ, ಎಲ್ಲ ದೇಶಗಳಿಗೂ, ಎಲ್ಲ ಮನುಷ್ಯರಿಗೂ ಸಲ್ಲುವ ಉತ್ತರಗಳನ್ನು ಹುಡುಕುತ್ತಾರೆ.

ನಮಗೇ ಯಾಕೆ ಹೀಗಾಗುತ್ತೆ ಅನ್ನುವ ಪ್ರಶ್ನೆಯಲ್ಲಿ “ನಮ್ಮ” ಪದವನ್ನು ತೆಗೆದು ಯೋಚಿಸುವುದೇ ಹೆಚ್ಚು ಆರೋಗ್ಯಕರವಾದದ್ದು ಎಂಬುದು ಮುಖ್ಯವಾದ ಮಾತು. ನಮ್ಮ ನೆಂಟರಿಷ್ಟರಲ್ಲೇ, ನಮ್ಮ ಆವರಣದಲ್ಲೇ ಅದೆಷ್ಟು ಜನ ಅದೃಷ್ಟಹೀನರು, ಅವಕಾಶಹೀನರು ಇರುತ್ತಾರೆ. ತಮಾಷೆಯೆಂದರೆ, ಅವರು ಹಾಗೆ ಇರುವುದೇ ಸಹಜ ಅನಿಸುತ್ತದೆ. ನಮಗೆ ಮಾತ್ರವಲ್ಲ, ಎಷ್ಟೋ ಸಲ ಸ್ವತಃ ಅವರಿಗೂ ಕೂಡ ಹಾಗೇ ಅನಿಸುತ್ತದೆ. ಕಪ್ಪು ಜನರ ಮನೋಲೋಕವನ್ನು ಅಧ್ಯಯನ ಮಾಡಿರುವರು ಹೇಳಿರುವ ಹಾಗೆ ಪ್ರತಿಭಟನೆ, ಒತ್ತಾಯ, ತಿರಸ್ಕಾರದ ತರಂಗಗಳು ಅಂಥವರ ಅಂತರಂಗದಲ್ಲೂ ಆಗಾಗ್ಗೆಯಾದರೂ ಕ್ಷೀಣವಾಗಿ ಮೂಡುವುದಂತೆ. ಆದರೆ ಅದಕ್ಕೆಲ್ಲ ವಾಸ್ತವ ಜಗತ್ತಿನಲ್ಲಿ ಸ್ಪಂದನವಿಲ್ಲ ಎಂದು ಗೊತ್ತಾದಾಗ, ತಾವಿರುವ ಸ್ಥಿತಿಯೇ ಸಹಜವಾದದ್ದು ಎಂದು ಅವರಿಗೇ ಅನಿಸುತ್ತದಂತೆ. ನಾವೇಕೆ ಹೀಗೆ, ನಮಗೇಕೆ ಈ ಸ್ಥಿತಿ ಎಂದು ಪ್ರಶ್ನೆ ಕೇಳಿಕೊಳ್ಳಲು ಒಂದು ಹವಾ, ಒಂದು ವಾತಾವರಣ ಬೇಕಾಗುತ್ತದಷ್ಟೆ. ಸುಮಾರು ೫೦-೬೦ ರ‍್ಷಗಳ ಕಾಲ ನಮ್ಮ ಬಂಧುಮಿತ್ರರಲ್ಲೇ ಉದ್ಯೋಗವಿಲ್ಲದೆ, ಪ್ರೀತಿಯಿಲ್ಲದೆ, ಪ್ರವಾಸವಿಲ್ಲದೆ, ಹಾಗೇ ಉದುರಿಹೋದವರನ್ನು ನಾನು ನೋಡುತ್ತಲೇ ಬಂದಿದ್ದೇನೆ. ಹೀಗೆ ನೋಡುವುದಕ್ಕೆ ಮನಸ್ಸು ಎಷ್ಟು ಒಗ್ಗಿಹೋಗಿದೆಯೆಂದರೆ, ಅವರೇಕೆ ಹಾಗೆ, ಅವರಿಗೇಕೆ ಹಾಗೆ ಎಂಬ ಪ್ರಶ್ನೆ ನನ್ನ ಮನಸ್ಸಿನಲ್ಲಿ ಒತ್ತಾಯವಾಗಿ ಮೂಡುವುದೇ ಇಲ್ಲ. ಬದಲಿಗೆ ನಮ್ಮ ಕುಟುಂಬದ ಆಸುಪಾಸಿನಲ್ಲಿ ಸಣ್ಣಪುಟ್ಟ ತೊಂದರೆಗಳು, ಸಾಧಾರಣ ಅವಘಡಗಳು ಜರುಗಿದಾಗ, ಅಯ್ಯೋ ಏಕೆ ನಮಗೆ ಮಾತ್ರ ಹೀಗಾಗುತ್ತೆ ಎಂಬ ಪ್ರಶ್ನೆಯನ್ನೇ ದಿನವೂ, ಕ್ಷಣ ಕ್ಷಣವೂ ಮುಂದೆ ಮಾಡಿಕೊಂಡು ಆತ್ಮ ಮರುಕದ ನಿರಂತರ ಧಾರಾವಾಹಿಯಲ್ಲಿ ಮುಳುಗಿಹೋಗುತ್ತೇನೆ. ಅಂಥವರಿಗೆಲ್ಲ ನಾನು ನೆರವಾಗುವುದಿಲ್ಲ ಎಂಬ ಸುಳ್ಳನ್ನು ನಾನು ಹೇಳುವುದಿಲ್ಲ. ನೆರವು, ಕಾಳಜಿಯೆಲ್ಲ ಸಾಂದರ್ಭಿಕವಾಗಿರುತ್ತದೆ. ಬಹು ಬೇಗ ನಮ್ಮ ಗಮನ ನಮ್ಮ ಕಡೆಗೇ ತಿರುಗಿಬಿಡುತ್ತದೆ, ಸಹಜವಾಗಿ-ಸಹಜವಾಗಿಯೆಂಬಂತೆ.

ಒಂದು ಸಂಗತಿ ಮಾತ್ರ ನನಗೆ ಅರ್ಥವಾಗುವುದಿಲ್ಲ. ಯಾಕೆ ಎಲ್ಲ ತೊಂದರೆಗಳು, ಅಪಘಾತಗಳು, ಅವಘಡಗಳು ಒಟ್ಟೊಟ್ಟಿಗೇ ಬರುತ್ತವೆ. ಕೆಲವು ವರ್ಷಗಳ ಕಾಲ ನಮ್ಮ ಕುಟುಂಬದಲ್ಲೇ ವೃತ್ತಿ, ಮಕ್ಕಳ ಶಿಕ್ಷಣ, ಆರೋಗ್ಯ, ಬರವಣಿಗೆ, ಹಣಕಾಸಿನ ವ್ಯವಹಾರ ಯಾವುದೊಂದೂ ನಮ್ಮ ಕೈಗೆ ಹತ್ತುತ್ತಿರಲಿಲ್ಲ. ಆಯ್ತು, ನಮ್ಮ ಪಾಲಿಗೆ ಬಂದದ್ದನ್ನು ನಾವು ಅನುಭವಿಸೋಣ ಎಂದು ಸಮಾಧಾನ ಮಾಡಿಕೊಂಡರೂ, ಯಾಕೆ ಇವೆಲ್ಲ ಒಟ್ಟಿಗೇ ಆಗಬೇಕು, ಒಟ್ಟಿಗೇ ನಮ್ಮನ್ನು ಹಿಂಡಬೇಕು ಎಂಬುದೇ ತಿಳಿಯುತ್ತಿರಲಿಲ್ಲ.

ಇದನ್ನೆಲ್ಲ ವಾಸ್ತವ, ವಸ್ತುನಿಷ್ಠ ಪ್ರಜ್ಞೆಯಲ್ಲಿ ಒಪ್ಪಿಕೊಳ್ಳದೆ ತಪ್ಪಿಸಿಕೊಳ್ಳಲು ಪ್ರಯತ್ನಿಸುತ್ತಿದ್ದೆವು. ಜ್ಯೋತಿಷಿಗಳು ಇದನ್ನು ಬೇರೆ ರೀತಿಯಲ್ಲಿ ವಿವರಿಸುತ್ತಿದ್ದರು. ಕೆಲವು ದೆಸೆಗಳು ಯಾವುದೇ ಕುಂಡಲಿಯಲ್ಲಾದರೂ ಸರಿ ಒಂದಿಷ್ಟು ವರ್ಷ ಅಂತ ನಡೆಯಲೇಬೇಕಾಗಿರುವುದರಿಂದ, ಇಂತಹ ಸನ್ನಿವೇಶ ನಿರ್ಮಾಣವಾಗುತ್ತದೆ. ಇದರಿಂದ ಹೊರಬರುವ ದಾರಿಯೇ ಇಲ್ಲ. ಅಬ್ಬಬ್ಬ ಅಂದರೆ ಒಂದಿಷ್ಟು ಶಾಂತಿ ಹೋಮಗಳ ಮೂಲಕ ದುಷ್ಪರಿಣಾಮಗಳನ್ನು ಕಡಿಮೆ ಮಾಡಿಕೊಳ್ಳಬಹುದು ಅಷ್ಟೆ.

ಯಾವುದೇ ದುರಾದೃಷ್ಟದ ಬೆಳವಣಿಗೆ ಏಕಾಏಕಿ ಜರುಗುವುದಿಲ್ಲ. ಸೂಚನೆ ಕೊಡುತ್ತದೆ. ದೂರದಲ್ಲೇ ಕಾಣಿಸುತ್ತಿರುತ್ತದೆ. ಅದನ್ನು ನೋಡುವ ಕ್ಷಮತೆ ನಮ್ಮಲ್ಲಿರಬೇಕು ಎಂದು ಕೆಲವು ಮಿತ್ರರು ಸಮಾಧಾನ ಹೇಳುತ್ತಿದ್ದರು. ಇಂತಹ ಒಂದು ಸಮಾಧಾನ ನನಗೆ ಉಪದೇಶಿಸಲ್ಪಟ್ಟ ದಿನವೇ ಬಂಧುವೊಬ್ಬರು ಮನೆಗೆ ಬಂದರು. ತಾಯಿ-ತಂದೆ ಇಬ್ಬರನ್ನೂ ಎಂಟು-ಹತ್ತು ದಿನದಲ್ಲೆ ಕಳೆದುಕೊಂಡಿದ್ದರು. ಇಬ್ಬರೂ ದೈವಭಕ್ತರು, ಧರ್ಮಭೀರುಗಳು. ಸಾಯುವುದಕ್ಕೆ ಮುಂಚೆ ನರ್ಸಿಂಗ್‌ ಹೋಂನಲ್ಲಿ ತಿಂಗಳುಗಟ್ಟಲೆ ಹೆಣಗಾಡಬೇಕಾಯಿತು. ಅವರಿಗೆ ಸಮಾಧಾನ ಹೇಳಿ ಕಳಿಸಿದ ಮೇಲೆ ನನಗೆ ದೂರದೃಷ್ಟಿ ಬೋಧಿಸಲು ಬಂದಿದ್ದ ಮಿತ್ರರಿಗೆ ಹೇಳಿದೆ, ನಿಮ್ಮ ನೋಟ ಸರಿಯಾಗಿದೆ. ಅದು ಕೂಡ ಇದೆಲ್ಲ ಯಾವಾಗ ಜರುಗುತ್ತದೆ, ನಾವು ಹೇಗೆ ನೋಡಬೇಕು ಎಂದು ಹೇಳಿಕೊಡುತ್ತದೆಯೇ ಹೊರತು ನಮಗೆ ಯಾಕೆ ಹೀಗಾಗುತ್ತದೆ ಎಂಬ ಪ್ರಶ್ನೆಗೆ ಉತ್ತರಿಸುವುದಿಲ್ಲ.

ನಮಗೆ ಯಾಕೆ ಹೀಗಾಗುತ್ತೆ ಎಂದು ಸದಾ ಕೊರಗುವ ಬದಲು ನಮಗೆ ಯಾಕೆ ಹೀಗಾಗಲಿಲ್ಲ ಎಂದು ಯೋಚಿಸುವುದು (ಆಗಾಗ್ಗೆಯಾದರೂ) ಒಳ್ಳೆಯದು. ನಾವು ಬದುಕಿರುವುದೇ ಎಷ್ಟೋ ಸಲ ನಮ್ಮ ನೆರೆಹೊರೆ, ನಮ್ಮ ಬೀದಿಯವರು, ಬಂಧುಗಳು ಇವರೆಲ್ಲರಿಗೂ ತಾಗುವ, ಇವರೆಲ್ಲರನ್ನೂ ಸೀಳುವ ದುರಾದೃಷ್ಟ ನಮ್ಮ ಬಳಿ ಬರದೇ ಇರುವ ಕೃಪೆ ತೋರುವುದರಿಂದ ಆವಾಗ ನಾವು ಯಾವ ಪ್ರಶ್ನೆಯನ್ನೂ ಕೇಳಿಕೊಳ್ಳುವುದಿಲ್ಲವಲ್ಲ.

ನಮಗೆ ಯಾಕೆ ಹೀಗಾಗುತ್ತೆ ಅನ್ನುವ ಪ್ರಶ್ನೆಯೇ ಒಂದು ತಾತ್ವಿಕ ಪ್ರಮೇಯವಾಗಿಯೂ, ಮನಸ್ಸು ಕೆಲಸ ಮಾಡುವ ರೀತಿಯ ತಿಳುವಳಿಕೆಯಾಗಿಯೂ ಸರಿಯಲ್ಲವೆಂದು ಕಾಣುತ್ತದೆ. ನಾವು ಜೀವನವನ್ನು, ಮನಷ್ಯರನ್ನು, ಬಂದ ಹಾಗೆ, ಅವರು ಇರುವ ಹಾಗೆ ಒಪ್ಪಿಕೊಳ್ಳುವ ನಮ್ರತೆಯನ್ನು ತೋರಿಸುವುದಿಲ್ಲ. ಎಲ್ಲ ಘಟನೆಗಳ ಮೇಲೂ ನಮ್ಮ ನಿಯಂತ್ರಣವಿರಬೇಕು, ಇರುತ್ತದೆ. ನಾವು ಇಷ್ಟಪಟ್ಟ ಹಾಗೆಯೇ ಜಗತ್ತು ನಡೆಯಬೇಕು. ಎಲ್ಲ ಬಂಧುಮಿತ್ರರೂ ನಾವು ಭಾವಿಸಿದಂತೆ ನಡೆಯಬೇಕು, ಬದುಕಬೇಕು ಎಂಬ ಧೋರಣೆಯಿಂದಲೇ ನಮ್ಮಲ್ಲಿ ಮೂಡುವ ಅಸಂಗತ ಪ್ರಶ್ನೆ. ನಮಗೇ ಯಾಕೆ ಹೀಗಾಗುತ್ತೆ ಅನ್ನುವುದು ರಾಮಾಯಣ, ಮಹಾಭಾರತದ ಕ್ಷತ್ರಿಯ ಚಕ್ರವರ್ತಿಗಳಿಗೆ ಇಂತಹ ನಮ್ರತೆಯ ಪಾಠವನ್ನು ಸೋದಾಹರಣವಾಗಿ ಕಲಿಸಲೆಂದೇ ಅರಣ್ಯಕಾಂಡ, ಅರಣ್ಯಸರ್ವಗಳ ಹನ್ನೆರಡು-ಹದಿನಾಲ್ಕು ವರ್ಷಗಳ ಕಾಲ ಅರಣ್ಯವಾಸವನ್ನು ಕಡ್ಡಾಯವಾಗಿ ವಿಧಿಸುತ್ತಿದ್ದುದು. ವ್ಯಾಸರು ಹೇಳುವ ಹಾಗೆ ಒಬ್ಬ ಚಕ್ರವರ್ತಿ, ಒಬ್ಬ ಸೇನಾಧಿಪತಿ, ಒಬ್ಬ ಗೃಹಸ್ಥ, ಒಬ್ಬ ಸೇವಕ, ಒಬ್ಬ ಸನ್ಯಾಸಿ, ಎಲ್ಲರೂ ಜೀವನದಲ್ಲಿ ಅನುಭವಿಸಬೇಕಾದ ಕಷ್ಟನಷ್ಟಗಳ ಪ್ರಮಾಣ ಒಂದು ಇರುತ್ತದಂತೆ. ಅನುಭವಿಸುತ್ತಿರುವ, ಅನುಭವಿಸಬೇಕಾದ ದೇಶ, ಕಾಲ, ಹವಾಮಾನ ಬೇರೆಯಾಗಬಹುದು ಅಷ್ಟೇ.

ಪ್ರಾಣಿಲೋಕ, ಸಸ್ಯಲೋಕ, ಪದಾರ್ಥಲೋಕಕ್ಕೆ ಈ ಪ್ರಶ್ನೆ ಇದೆಯೇ ಎಂದು ನಾವು ಯೋಚಿಸುವುದೇ ಇಲ್ಲ. ಹಾಗಾಗಿ, ಇದು ನಮ್ಮ ಮನಸ್ಸಿನ ಸುಖಕ್ಕಾಗಿ ನಾವೇ ಕೇಳಿಕೊಳ್ಳುವ ಒಂದು ಮನುಷ್ಯ ಕೇಂದ್ರಿತ ಪ್ರಶ್ನೆ. ನಮಗೇ ಯಾಕೆ ಹೀಗಾಗುತ್ತೆ ಎಂಬ ಪ್ರಶ್ನೆ ಕೇಳಿಕೊಳ್ಳದೇ ವಿಕಾಸ ನಿಯಮವನ್ನು, ಪರಿವರ್ತನೆಯ ಆಶಯವನ್ನು ಒಪ್ಪಿಕೊಂಡಿರುವುದರಿಂದಲೇ ಜಗತ್ತು ವಿಕಾಸಗೊಂಡು ಈ ಹಂತಕ್ಕೆ ಬಂದಿರುವುದು. ಅಥವಾ ಪ್ರಾಣಿಲೋಕ, ಸಸ್ಯಲೋಕಕ್ಕೂ ಇದೇ ರೀತಿಯ ಪ್ರಶ್ನೆಯಿದ್ದು ಅವೂ ಕೂಡ ಆಗಾಗ್ಗೆ ಈ ಪ್ರಶ್ನೆಯನ್ನು ಕೇಳಿಕೊಳ್ಳುತ್ತಿರಬಹುದು. ಆದರೆ ಅವುಗಳ ಭಾಷೆ, ಮಾತನಾಡಿಕೊಳ್ಳುತ್ತಿರುವ ರೀತಿ ನಮಗೆ ಅರ್ಥವಾಗದಿರಬಹುದು. ಈ ಕಾರಣಕ್ಕಾಗಿಯಾದರೂ ನಾನು, ನಾವು ಕೇಳಿಕೊಳ್ಳುತ್ತಿರುವ ಪ್ರಶ್ನೆ ಪ್ರಬಂಧ ಬರೆಯುತ್ತಿರುವಾಗ, ಓದುವಾಗ ಎಷ್ಟೇ ಮಹತ್ವದ್ದೆನಿಸಿದರೂ, ಜಗತ್ತಿನ ಚಲನೆಯ ದೃಷ್ಟಿಯಿಂದ ನಾವು ಭಾವಿಸಿದಷ್ಟು ಮಹತ್ವದ ಪ್ರಶ್ನೆಯಲ್ಲದಿರಬಹುದು.