‘ಜೀವಕೊಡಲೇ ಚಹಾ ಕುಡಿಯಲೇ..’ ಎಂಬ ಕಾದಂಬರಿಯು ಮೇಲ್ನೋಟಕ್ಕೆ  ತ್ರಿಕೋನ ಪ್ರೇಮ ಕತೆ  ಅನಿಸಿದರೂ ಇಲ್ಲಿ ಹಲವು ಆಯಾಮಗಳಿವೆ. ಕೊನೆಯವರೆಗೂ, ತನ್ನದೂ ಪ್ರೀತಿಯೇ ಎಂದು ಅರಿಯರಲಾರದೇ ತಲ್ಲಣಗೊಳ್ಳುವ ಹುಡುಗನ ಪಾಡು ಇಲ್ಲಿದೆ.  ಗಾಲಿಬ್ ಕವಿತೆ ಮೂಲಕ ತನ್ನದೇ ಭಾವ ಬೆರೆಸಿ ಶಾಯರಿ ರಚಿಸಿ ಪ್ರೀತಿ ವ್ಯಕ್ತಪಡಿಸುವ ಫಾತಿಮಾ, ಸಲಿಂಗಕಾಮ ಆಯ್ಕೆ ಮಾಡಿಕೊಳ್ಳುವ ದಿಟ್ಟೆ ಚಿತ್ರಾ, ಕೊನೆಗೂ ದಕ್ಕಿದ ಪ್ರೀತಿಯ ಸಾಕ್ಷಾತ್ಕಾರದ ಸನ್ನಿವೇಶಗಳಿವೆ. ಈ ಹಂತದಲ್ಲಿ ಕಾದಂಬರಿಯು  ವಿಭಿನ್ನ ತಿರುವು ಪಡೆದುಕೊಳ್ಳುವುದು.  ಆ ತಿರುವೇನು ಎಂಬುದನ್ನು ಓದುಗರೇ ಕಂಡುಕೊಳ್ಳಬೇಕು.
ಕೊಂಕಣಿಯಿಂದ ಕನ್ನಡಕ್ಕೆ ಅನುವಾದಗೊಂಡ ಕಾದಂಬರಿಯ ಕುರಿತು ತಮ್ಮ ಅನಿಸಿಕೆ ಬರೆದಿದ್ದಾರೆ ಜ್ಯೋತಿ ಭಟ್

 

ಕನ್ನಡಕ್ಕೆ ಅಷ್ಟೇನೂ ಪರಿಚಿತವಲ್ಲದ ಕೊಂಕಣಿ ಸಾಹಿತ್ಯದ ಪ್ರಖ್ಯಾತ ಲೇಖಕ, ಕಥೆಗಾರ ದಾಮೋದರ ಮಾವಜೋ ಅವರ “ಜೀವಕೊಡಲೇ ಚಹ ಕುಡಿಯಲೇ” (ಕನ್ನಡಕ್ಕೆ ಅನುವಾದ; ಕಿಶೂ ಬಾರ್ಕುರು) ಕಾದಂಬರಿ ಪ್ರಸ್ತುತ ಸದ್ದಿಲ್ಲದೇ ಓದುಗ ವರ್ಗವನ್ನು ತನ್ನತ್ತ ಸೆಳೆಯುತ್ತಿದೆ. ಇತ್ತೀಚೆಗಷ್ಟೇ ಜ್ಞಾನಪೀಠ ಪುರಸ್ಕಾರಕ್ಕೂ ಭಾಜನರಾಗಿರುವ ದಾಮೋದರ್ ಮಾವಾಜೋ ಕನ್ನಡ ಸಾಹಿತ್ಯದ ಬಗೆಗೂ ಪ್ರೀತಿ ಹೊಂದಿರುವರು.

ಅತ್ತ ಆಧುನಿಕತೆಗೆ ತೀರಾ ಒಡ್ಡಿಕೊಳ್ಳಲಾಗದ ಇತ್ತ ಕೌಟುಂಬಿಕ ಮೌಲ್ಯಗಳನ್ನು ಮೀರಲಾಗದ ಯುವ ಮನಸ್ಸುಗಳ ಹೋಯ್ದಾಟವೇ ಈ ಕಾದಂಬರಿಯ ಮುಖ್ಯ ಜೀವಾಳ.

(ದಾಮೋದರ ಮಾವಜೋ)

ದುರಂತ ಪ್ರೇಮಕಥೆ ಹಾಗೂ ಹದಿ ಹರೆಯದ ತಲ್ಲಣಕ್ಕೆ ವಿಭಿನ್ನ ಆಯಾಮ ನೀಡಿರುವುದು ಈ ಕಾದಂಬರಿಯ ವಿಶಿಷ್ಟತೆ . ಯುವ ತಲೆಮಾರಿನ ಕಣ್ಣುಗಳಿಂದಲೇ ಜೀವನ ಗ್ರಹಿಕೆ ಸಾಗುವ ಕಥನ ಕೊನೆಗೆ ಒಂದು ರೀತಿಯ ಅಲೌಕಿಕ ಜಿಜ್ಞಾಸೆಯನ್ನೂ ನಮ್ಮೆದುರಿಗೆ ತೆರೆದಿಡುವುದರಲ್ಲಿ ಸಂದೇಹವೇ ಇಲ್ಲ. ಗೋವಾದ ಕೊಂಕಣಿ ಸಮುದಾಯದ ಮಧ್ಯಮವರ್ಗದ ಕುಟುಂಬದಲ್ಲಿ ಬೆಳೆಯುತ್ತಿರುವ ಹದಿಹರೆಯದ ಹುಡುಗನ ಜೀವನದಲ್ಲಿ ನಡೆಯುವ ಕಥನ ನಮ್ಮದೇ ಆಗಿಬಿಡುವಷ್ಟು ಆಪ್ತತೆ ಇಲ್ಲಿದೆ.

ಅತ್ಯಂತ ಶಿಸ್ತು, ಕಟ್ಟುಪಾಡಿನಲ್ಲೇ ಮಗನನ್ನು ಕಟ್ಟಿಹಾಕುವ ಅಪ್ಪ, ಸದಾ ಗೊಣಗುಡುತ್ತಲೇ ಇರುವ ಅಮ್ಮ, ಗೆಳೆಯರೊಡನೆ ಗೋಲಿ ಆಟವಾಡಲೂ ಸಾಧ್ಯವಾಗದೇ ಕತ್ತಲ ಕೋಣೆಯಲ್ಲಿ ಒಂಟಿಯಾಗಿ ಕಳೆದು, ನಿಜವಾದ ಬಾಲ್ಯವನ್ನೇ ಕಾಣದ ‘ಬಾಬು’ ಉರುಫ್ ವಿಪಿನ್. ಮಕ್ಕಳು ಚಹಾ ಕುಡಿಯಬಾರದೆಂಬ ಮನೋಸ್ಥಿತಿ, ಆದರೆ ಕೊನೆಗೆ ಅದೇ ತಂದೆಯ ಅನಾರೋಗ್ಯದಲ್ಲಿ ಓರ್ವ ಮಗನಾಗಿ ಸೇವೆ ಮಾಡುವ ರೀತಿ, ಇದಕ್ಕೆ ವಿಭಿನ್ನವಾಗಿ ಬೇರೆ ಬೇರೆ ಪರಿಸರ, ಸಂಸ್ಕೃತಿಯಲ್ಲಿ ಬೆಳೆಸಿದ ಮಕ್ಕಳ ಮುಖಾಮುಖಿಯಾಗಿಸುವ ರೀತಿ ಇವೆಲ್ಲವೂ ಕಥೆಯ ಮತ್ತೊಂದು ಮಗ್ಗುಲನ್ನು ಪರಿಚಯಿಸುತ್ತವೆ.

ತೀರಾ ಸಂಕೋಚ ಪ್ರವೃತ್ತಿಯ ಬಾಬು ಪ್ರಥಮ ಬಾರಿಗೆ ನೆರೆಮನೆ ಆಂಟಿಯ ಕೈಯಲ್ಲಿ ಕೇಕ್ ತಿನ್ನುವುದೂ, ಕಾಫಿಯ ರುಚಿ ಸವಿಯುವುದು ಜೊತೆಗೆ ಆಕೆಯಿಂದ ಮುದ್ದುಮಾಡಿಸಿಕೊಂಡ ಬಗೆ ಮುಂದೆ ಕಾಫಿಯ ಕುರಿತು ರೇಜಿಗೆಯನ್ನೇ ಹುಟ್ಟಿಸುವಂತೆ ಮಾಡಿದ್ದೂ ಬಾಲ್ಯದಲ್ಲಿ ಅನೇಕರು ಅನುಭವಿಸಿದ ಈ ತೆರನಾದ ಲೈಂಗಿಕ ಮುಜುಗರವನ್ನು ಧ್ವನಿಸುತ್ತವೆ.  ಹೇಳಿಕೊಳ್ಳಲು ಬಂಧು ಬಾಂಧವರಿದ್ದರೂ, ಅವರು ಯಾರೂ ತನ್ನವರು ಅಲ್ಲ ಎಂಬ ಭಾವನೆ ಸಣ್ಣ ವಯಸ್ಸಿನಲ್ಲಿಯೇ ಮೂಡುವುದುನ್ನು ಕಾಣಬಹುದು.

“ನಿನ್ನ ಮನೆಗೊಂದು ಮನೆಯ ಕಳೆಯಿಲ್ಲ. ಮಾಮ ಅವಳಿಗೆ ಹೇಳಿದ್ದ. ನಂತರ ನಾನು ಅಮ್ಮನಲ್ಲಿ ಕೇಳಿದ್ದೆ, ಮನೆಯ ಕಳೆ ಎಂದರೇನು. ಅಮ್ಮ ಹೇಳಿದ್ರು, ಮನೆಯ ಮಂದಿಯ ಮಧ್ಯದಲ್ಲಿ ಎಲ್ಲ ಸರಿಯಿದ್ದರೆ ಆ ಮನೆಗೆ ಕಳೆ”

ಕಾದಂಬರಿಯುದ್ದಕ್ಕೂ ಸಾಹಿತ್ಯ ಮತ್ತು ಅದರ ಓದಿನ ವಿಸ್ತಾರ ಪ್ರಸ್ತಾಪಗೊಳ್ಳತ್ತ ಸಾಗುತ್ತದೆ. ವಿಪಿನ್ ಶಾಲೆ ಕಲಿಯುತ್ತಿರುವಾಗ ಸಿಗುವ ಇಂಗ್ಲಿಷ್ ಮೇಷ್ಟ್ರು ಮಾರ್ಟಿನ್ ಮತ್ತು ಅವರ ಜೀವನ ದರ್ಶನ ಮಾಡಿಸುವ ರೀತಿ ನಿಜಕ್ಕೂ ಆಸಕ್ತಿದಾಯಕ. ಥಾಮಸ್ ಹಾರ್ಡಿಯಿಂದ ಹಿಡಿದು ಆಲ್ಬರ್ಟ್ ಕಮೂ, ಕಾಫ್ಕ ಹೀಗೆ ಪುಸ್ತಕದ ಗೀಳು ವಿಪಿನ್ ಮಾತ್ರವಲ್ಲ, ಆತನ ಗೆಳತಿಯರಿಗೂ ಮುಂದೊಂದು ದಿನ ಬದುಕಿನಲ್ಲಿ ಗಟ್ಟಿಯಾದ ನಿರ್ಧಾರ ಮಾಡುವಷ್ಟು ಪ್ರಭಾವ ಗೊಳಿಸಿದ್ದಂತೂ ನಿಜ.

ಸಂಪ್ರದಾಯದ ಕುಟುಂಬದಲ್ಲಿ ಬರುವ ಸಣ್ಣ ಸಣ್ಣ ಸಂಗತಿಗಳನ್ನೂ ಈ ಕಾದಂಬರಿ ತುಂಬಾ ಚೆನ್ನಾಗಿ ಅನಾವರಣಗೊಳಿಸಿದೆ. ಮಗನಿಗೆ ಶನಿ ಹಿಡಿದಿದೆ ಎಂದು ಮಂತ್ರವಾದಿಯಿಂದ ಭೂತ ಬಿಡಿಸುವುದು , ಅದಕ್ಕಾಗಿ ಬಾಬು (ವಿಪಿನ್)ವನ್ನು ಕತ್ತಲಕೋಣೆಯಲ್ಲಿ ಕೂಡಿಹಾಕುವುದು ಆತನಿಗೆ ಬೇರೆಯದೇ ಅನುಭವ ನೀಡುತ್ತದೆ.

“ಬೆಳಕಿದೆಯಂದರೆ ನನಗೆ ಅಸ್ತಿತ್ವ ಇದೆ. ಬೆಳಕಿಲ್ಲದಿದ್ರೆ ನೆರಳೂ ನನ್ನ ಬಿಟ್ಟು ಹೋಗುತ್ತದೆ. ನಾಚಿಕೆ ಅವಮಾನ ನೋಡಲು ಯಾರೂ ಇಲ್ಲ ಈ ಕತ್ತಲೊಳಗೆ… ಈ ಕತ್ತಲು ನನ್ನ ಸಂಗಾತಿ. ಕತ್ತಲೊಳಗೆ ನನ್ನ ಚಿತ್ತ ಪ್ರವೃತ್ತಿಗಳು ಪ್ರಫುಲ್ಲವಾಗುತ್ತದೆ”

ಕಾದಂಬರಿ ಪಯಣ ನಿಜವಾದ ಅರ್ಥದಲ್ಲಿ ಅನಾವರಣ ಗೊಳ್ಳುವುದೇ ವಿಪಿನ್ ಚಹಾ ಕುಡಿಯಲು ಪ್ರಾರಂಭಿಸಿ ಕಾಲೇಜಿಗೆ ಹೋಗುವಾಗಿನ ದಿನಗಳಿಂದ. ವಿಜ್ಞಾನ ವಿದ್ಯಾರ್ಥಿಯಾದರೂ ಸಾಹಿತ್ಯ ಪುಸ್ತಕಗಳ ಓದಿನ ಗೀಳು ಹಚ್ಚಿಸಿದ್ದು ಡಾ. ಗುರು ಮಾರ್ಟಿನ್ ಪ್ರಭಾವ. ಸಾಲದಕ್ಕೆ, ಅವನಿಗರಿವಿಲ್ಲದಂತೇ ಹುಡುಗಿಯನ್ನು ರಕ್ಷಣೆ ಮಾಡುವ ಮೂಲಕ ಕಾಲೇಜಿನ ಹೀರೊ ಆಗುವ ರೀತಿ, ಸಿನಿಮೀಯ ಅನಿಸಿದರೂ ಇದನ್ನು ಒಂದು ನವಿರಾದ ಭಾವದೊಂದಿಗೆ ಹೆಣೆಯಲಾಗಿದೆ.

ಯುವ ತಲೆಮಾರಿನ ಕಣ್ಣುಗಳಿಂದಲೇ ಜೀವನ ಗ್ರಹಿಕೆ ಸಾಗುವ ಕಥನ ಕೊನೆಗೆ ಒಂದು ರೀತಿಯ ಅಲೌಕಿಕ ಜಿಜ್ಞಾಸೆಯನ್ನೂ ನಮ್ಮೆದುರಿಗೆ ತೆರೆದಿಡುವುದರಲ್ಲಿ ಸಂದೇಹವೇ ಇಲ್ಲ. ಗೋವಾದ ಕೊಂಕಣಿ ಸಮುದಾಯದ ಮಧ್ಯಮವರ್ಗದ ಕುಟುಂಬದಲ್ಲಿ ಬೆಳೆಯುತ್ತಿರುವ ಹದಿಹರೆಯದ ಹುಡುಗನ ಜೀವನದಲ್ಲಿ ನಡೆಯುವ ಕಥನ ನಮ್ಮದೇ ಆಗಿಬಿಡುವಷ್ಟು ಆಪ್ತತೆ ಇಲ್ಲಿದೆ.

ಕಳೆದ ಎರಡು ಮೂರು ದಶಕಗಳ ನಡುವಿನ ಯುವ ತಲೆಮಾರು ಮತ್ತು ಮಧ್ಯಮ ವರ್ಗ ಆಧುನಿಕತೆ ಮತ್ತು ಜಗತ್ತಿನ ಹಲವಾರು ಸಂಗತಿಗಳಿಗೆ ಆಗಷ್ಟೇ ತೆರೆದುಕೊಳ್ಳುವ ಸನ್ನಿವೇಶವನ್ನು ಕಥಾನಾಯಕನ ಕಣ್ಣಿಂದ ಮಾತ್ರ ನೋಡಲಾಗಿದೆ. ತೀರಾ ಸಂಕೋಚ ಸ್ವಭಾವದ ವಿಪಿನ್‌ಗೆ ಸಿಗುವ ಗೆಳತಿಯರು ಚಿತ್ರ, ಫಾತಿಮಾ.  ಒಬ್ಬಳು ಸಾಹಿತ್ಯ, ಫಿಲಾಸಫಿ ಎಂದು ಮುಕ್ತವಾಗಿ ಮಾತನಾಡುವಳು, ಇನ್ನೊಬ್ಬಳು ಶಾಯರಿ, ಹಾಡಿನ ಮೂಲಕವೇ ಸೆಳೆಯುವಳು.  ಜೀವದ ಗೆಳತಿಯರು. ಜೀವನದ ಪ್ರತಿ ಹಂತದಲ್ಲಿಯೂ ಪರಸ್ಪರ ಸಾಥ್ ನೀಡಿದ ಬಗೆ ಆಪ್ತವೆನಿಸುವುದು.

ಡಾಕ್ಟರ್ ಆಗುವ ಕನಸನ್ನು ಬದಿಗಿಟ್ಟು ತನ್ನ ಮನೆಯಲ್ಲೇ ಅಪ್ಪನ ಅನಾರೋಗ್ಯಕ್ಕೆ ಸೇವೆ ಮಾಡಲೆಂದು ಬಂದವನಿಗೆ ಶಿಕ್ಷಣ ನೀಡುವ ಮೂಲಕ,  ಮುಂದೊಂದು ದಿನ  ಶೆಫ್ ಆಗಬೇಕೆಂಬ ಅವನ ಕನಸಿಗೆ ನೀರೆರೆವ ಮಾನವೀಯತೆ. ಜೊತೆಗೆ ತನ್ನ ಭಾಷೆ ಸಲುವಾಗಿ ಏನಾದರೂ ಮಾಡಬೇಕೆಂಬ ಹಂಬಲ, ಸಾಮಾಜಿಕವಾಗಿ ಸೇವೆ ಮಾಡುವ ತುಡಿತ, ಇನ್ನು ಬಹು ಮುಖ್ಯವಾಗಿ ಹೆಣ್ಣುಮಕ್ಕಳ ಮೇಲೆ ಈಗಲೂ ನಡೆಯುತ್ತಿರುವ ಪೋಲಿಸ್ ಅನೈತಿಕಗಿರಿಯನ್ನು ಪಸ್ತಾಪಿಸುವ ಈ ಕಥಾನಕ, ಅದನ್ನು ಬಹಳ ದಿಟ್ಟವಾಗಿ ಎದುರಿಸುವ ಧೈರ್ಯವನ್ನೂ ತೋರುತ್ತದೆ. ಹಾಗಾಗಿಯೇ ಎಲ್ಲಿಯೂ ಉತ್ಪ್ರೇಕ್ಷೆ ಅನಿಸದೇ ಕಾದಂಬರಿ ನಮ್ಮನ್ನು ತಟ್ಟುತ್ತದೆ.

ಕುಟುಂಬದಲ್ಲಿ ಸ್ವತಂತ್ರತೆ, ಪ್ರೀತಿ ಮತ್ತು ಹದಿಹರೆಯದ ಮಕ್ಕಳ ಜೊತೆ ಆಪ್ತವಾಗಿ ಹೇಗೆ ನಡೆದುಕೊಳ್ಳಬೇಕೆಂದು ತೋರಿಸುವ ಬಗೆ ಒಂದೆಡೆಯಾದರೆ, ಮುಸ್ಲಿಂ ಸಮುದಾಯದಲ್ಲಿ ಬೆಳೆದ ಹೆಣ್ಣುಮಗಳೊಬ್ಬಳು ತನ್ನ ಬಾಲ್ಯದಲ್ಲಾದ ಲೈಂಗಿಕ ಹಿಂಸೆ ಮೀರಿ ಪ್ರೇಮದ ಅನುಭಾವ ಮಟ್ಟಕ್ಕೆ ತೆರಳುವ ರೀತಿಯೇ ಸೋಜಿಗ. ಆಕೆಯ ಅಣ್ಣನ ಮುಂದೆಯೇ ಹಲವಾರು ಅವಮಾನಗಳು ನಡೆದರೂ ಅದನ್ನು ವಿರೋಧಿಸಲಾಗದ ಅಸಹಾಯಕತನ, ಬೇಗೆ, ಸಮುದಾಯದ ಕಟ್ಟುಪಾಡು, ಒಲ್ಲದ ಮದುವೆ.. ಇವ್ಯಾವುದೂ ಬಾಧಿಸದೇ ತನ್ನವನಿಗಾಗಿಯೇ ಜೀವ ಎಂಬ ಪೂರ್ಣತೆಯು ಈ ಕಥಾನಕದ ಅನುಭವದಲ್ಲಿ ದಕ್ಕುವುದು.

ಮೇಲ್ನೋಟಕ್ಕೆ ಇದೊಂದು ತ್ರಿಕೋನ ಪ್ರೇಮ ಕಥೆ  ಅನಿಸಿದರೂ ಕೊನೆಯವರೆಗೂ, ತನ್ನದೂ ಪ್ರೀತಿಯೇ ಎಂದು ಅರಿಯರಲಾರದೇ ತಲ್ಲಣಗೊಳ್ಳುವ ಹುಡುಗನ ಪಾಡು ಇಲ್ಲಿದೆ.   ಗಾಲಿಬ್ ಕವಿತೆ ಮೂಲಕ ತನ್ನದೇ ಭಾವ ಬೆರೆಸಿ ಶಾಯರಿ ರಚಿಸಿ ಪ್ರೀತಿ ವ್ಯಕ್ತಪಡಿಸುವ ಫಾತಿಮಾ, ಸಲಿಂಗಕಾಮ ಆಯ್ಕೆ ಮಾಡಿಕೊಳ್ಳುವ ದಿಟ್ಟೆ ಚಿತ್ರಾ, ಕೊನೆಗೂ ದಕ್ಕಿದ ಪ್ರೀತಿಯ ಸಾಕ್ಷಾತ್ಕಾರ – ಇವಿಷ್ಟೇ ಆಗಿದ್ದರೆ ಎಲ್ಲವೂ ಸುಖಾಂತ.  ಆದರೆ ಈ ಹಂತದಲ್ಲಿ ಕಾದಂಬರಿಯು ಅತ್ಯಂತ ವಿಭಿನ್ನ ತಿರುವು ಪಡೆದುಕೊಳ್ಳುವುದು. ಆ ತಿರುವಿಗೆ ಓದುಗರು ತಮ್ಮನ್ನು ಒಡ್ಡಿಕೊಳ್ಳಬೇಕು.

ಪ್ರೀತಿಯ ಅನುಭೂತಿಯ ಜೊತೆಗೆ ಹುಟ್ಟಿಕೊಳ್ಳುವ ಹಲವಾರು ಜಿಜ್ಞಾಸೆ ಈ ಕಾದಂಬರಿಯುದ್ದಕ್ಕೂ ನಮ್ಮನ್ನು ಕಾಡುವಂತೆ ಮಾಡುತ್ತದೆ.
“ನಿನ್ನ ಒಂದು ರಾತ್ರಿಯ ಜೊತೆ ನಂಗೆ ಇಡೀ ಜನ್ಮಕ್ಕೆ ಸಾಕು, ಮುಂಬಯಿಗೆ ಬಾ ನನ್ನ ನಿನ್ನ ಕನಸನ್ನು ಪೂರ್ಣಗೊಳಿಸಲು. ನಮ್ಮ ಪ್ರೀತಿಯ ಪೂರ್ಣತ್ವ ಮುಂಬಯಿಯಲ್ಲಿ ಆಗಲಿಕ್ಕಿದೆ. ಆದರೆ ನನಗೆ ಯಾಕೆ ಹೀಗೆ ಕತ್ತಲಿನಲ್ಲಿಟ್ಟೆ”

ಒಂದು ಭಾರವಾದ ನಿಟ್ಟುಸಿರು, ತಣ್ಣನೆಯ ವಿಷಾದ.. ಜೊತೆಗೆ ಚಹ ಕುಡಿಯಲೇ ಬೇಕಾದ ತುರ್ತು.

ಏಕಕಾಲಕ್ಕೆ ಇವೆಲ್ಲ ಅನುಭವಗಳನ್ನು ಕಟ್ಟಿಕೊಡುವಕಾದಂಬರಿ ‘…ಚಹಾ ಕುಡಿಯಲೇ’ ನಮ್ಮಮನೆಯಂಗಳದಲ್ಲೇ ನಡೆಯುತ್ತಿರುವ ಕಥನ ಅನ್ನಿಸುವಷ್ಟು ಆಪತ್ತೆಯಿದೆ, ಮಧ್ಯಮವರ್ಗದ ಮಕ್ಕಳಲ್ಲಿ ಬಯಸುವ ಸುಸಂಸ್ಕೃತ ಪಾಠದ ಧಾವಂತವಿದೆ. ಬಾಲ್ಯದ ಅನಾಥ ಕನಸುಗಳು ಚೆಲ್ಲಾಪಿಲ್ಲಿಯಾಗಿ ಬಿದ್ದಿವೆ. ಹದಿಹರೆಯದ ತಲ್ಲಣ ನವಿರು ಪ್ರೀತಿ,  ದುರಂತ, ಮತ್ತದರಲ್ಲಿಯೇ ಹುಡುಕಾಟ ನಡೆಸುವ ಅಲೌಕಿಕ ಬದುಕಿನ ಸ್ಪರ್ಶವಿದೆ. ಭಾವನೆಗಳ ಏರಿಳಿತದ ಸಂಗಾತಿಯಾಗಿ ಚಹವಿದೆ. ಜೊತೆಗೆ ಕಾಫಿಯ ಘಮಲು ಪಸರಿಸಿದೆ.

(ಕೃತಿ: ಜೀವ ಕೊಡಲೇ? ಚಹ ಕುಡಿಯಲೇ (ಕಾದಂಬರಿ), ಕೊಂಕಣಿ ಮೂಲ: ದಾಮೋದರ ಮಾವಜೋ, ಕನ್ನಡಕ್ಕೆ: ಕಿಶೂ ಬಾರ್ಕೂರು, ಪ್ರಕಾಶನ: ಬಹುವಚನ, ಬೆಲೆ: 400/-)