ಕೋವಿಡ್ ಸೋಂಕಿನ ಭಯದಿಂದ ಕಳೆದೆರಡು ವರ್ಷಗಳಲ್ಲಿ ಶಾಲೆಗಳಲ್ಲಿ ಮಕ್ಕಳ ಕಲರವವೇ ಇರಲಿಲ್ಲ. ಇದೀಗ ಮತ್ತೆ ಪುಟಾಣಿ ಮಕ್ಕಳು ಶಾಲೆಯ ತರಗತಿಗಳನ್ನು ಪ್ರವೇಶಿಸಿದ್ದಾರೆ. ಹಾಗಾಗಿ ಮನೆಯೊಳಗೂ ಜೀವನೋತ್ಸಾಹ ತುಂಬಿದೆ. ಮಕ್ಕಳಿಗಾಗಿ ಶಾಪಿಂಗ್, ಸ್ಪರ್ಧೆಗಳಿಗಾಗಿ ತಯಾರಿ, ಪರೀಕ್ಷೆಗಳಿಗಾಗಿ ಓದು, ಆಟೋಟಗಳಿಗಾಗಿ ಸಿದ್ಧತೆಗಳನ್ನು ಮಾಡುವುದರಲ್ಲಿ ಮಕ್ಕಳೂ, ಅವರ ಜೊತೆಗೆ ಪೋಷಕರೂ ಬ್ಯುಸಿಯಾಗಿದ್ದಾರೆ. ಮಕ್ಕಳ ದಿನಾಚರಣೆಯ ಸಂದರ್ಭದಲ್ಲಿ ಲವಲವಿಕೆಯ ಈ ನೋಟಗಳು ಮರಳಿರುವುದು ನಿಜಕ್ಕೂ ಸಂತೋಷದ ವಿಷಯ. ಕೋಡಿಬೆಟ್ಟು ರಾಜಲಕ್ಷ್ಮಿ ಬರಹ ಇಲ್ಲಿದೆ.

ಕಳೆದು ಹೋದ ಚಿತ್ರಗಳು ಅಂತೂ ಇಂತೂ ಮತ್ತೆ ಕಾಣಲು ಸಿಕ್ಕವೆಂದು ಬಹಳ ಖುಷಿಯಾಗುತ್ತಿದೆ.

ಯಾವ ಚಿತ್ರಗಳೆಂದು ಕೇಳುವಿರಾ. ಅದೇ ರಸ್ತೆಯಂಚಿನಲ್ಲಿ ಕಂದನ ಯೂನಿಫಾರಂ ಟೈ ಸರಿ ಮಾಡುತ್ತಾ ಸ್ಕೂಲ್ ವ್ಯಾನ್ ಗೆ ಕಾಯುತ್ತಿರುವ ಅಮ್ಮನ ಚಿತ್ರ, ಕಿಕ್ಕಿರಿದ ರಸ್ತೆಯಲ್ಲಿ ಗಡಿಬಿಡಿ ಮಾಡುತ್ತಾ ವಾಹನ ಓಡಿಸುವ ಡ್ರೈವರ್ ಮುಖದಲ್ಲಿ ಧಾವಂತದ ಚಿತ್ರ, ಕೆನ್ನೆ ಕದಪುಗಳನ್ನು ಕೊಳಕು ಮಾಡಿಕೊಂಡು ಒಂದು ಶೂ ಕೈಯಲ್ಲಿ ಹಿಡಿದುಕೊಂಡು ಬಂದು ಅಮ್ಮನಿಂದ ಬೈಸಿಕೊಳ್ಳುತ್ತಿರುವ ಕಂದನ ಚಿತ್ರ, ಆ ದೊಡ್ಡ ಶಾಲೆಯ ದೊಡ್ಡ ಅಂಗಳದಲ್ಲಿ ಮಕ್ಕಳ ‘ಹೋ..’ ಎಂಬ ಚೌಕಟ್ಟಿಗೆ ಸಿಗದ ಕಲರವದ ಚಿತ್ರ,.. ಬೆನ್ನಿಗೆ ಬ್ಯಾಗು ಏರಿಸಿಕೊಂಡು ಗುಂಪು ಗುಂಪಾಗಿ ಸಾಗುವ ಮಕ್ಕಳ ಚಿತ್ರಗಳು, ಮಡಚಿ ಕಟ್ಟಿದ ಎರಡು ಜಡೆಗಳ ಜೋಪಾನ ಮಾಡಿಕೊಳ್ಳುವ ವಿದ್ಯಾರ್ಥಿನಿಯರ ನಗು, ಸ್ಟೇಷನರಿ ಅಂಗಡಿಯಲ್ಲಿ ‘ಅಂಕಲ್ ಅಂಕಲ್ ..’ ಎನ್ನುವ ಗಲಾಟೆ.. ಚಾರ್ಟುಗಳು, ಪ್ರೊಜೆಕ್ಟ್ ಗಳು ಎಂದು ತಲೆಬಿಸಿ ಮಾಡಿಕೊಳ್ಳುವ ಅಮ್ಮಂದಿರು…

ಈ ಎಲ್ಲ ನೋಟಗಳು ಎಷ್ಟೊಂದು ಮುಖ್ಯವಾಗಿದ್ದವು ಎಂದು ಗೊತ್ತಾಗಿದ್ದೇ ಕೋವಿಡ್ ದೆಸೆಯಿಂದ ಲಾಕ್ ಡೌನ್ ಹೇರಿದ್ದಾಗ. ಪೂರ್ಣ ಲಾಕ್ ಡೌನ್ ಹೇರಿದ್ದಾಗ ಎಲ್ಲರೂ ಮನೆಯೊಳಗೇ ಅನಿವಾರ್ಯವಾಗಿ ಇರಬೇಕಾಯಿತು. ಆಗ ಮಕ್ಕಳು ಜೊತೆಗಿದ್ದುದೇ ದೊಡ್ಡವರಿಗೆ ಖುಷಿಯ ವಿಷಯವಾಗಿತ್ತು. ಆದರೆ ಲಾಕ್ ಡೌನ್ ಅನ್ನು ಹಂತ ಹಂತವಾಗಿ ತೆರವುಗೊಳಿಸಿದಾಗ, ಸಾಮಾಜಿಕ ಚಟುವಟಿಕೆಗಳು ಬಿರುಸು ಪಡೆದುಕೊಳ್ಳಲಾರಂಭಿಸಿದವು. ಆಗ ದೈನಂದಿನ ಓಡಾಟದಲ್ಲಿ ಮಕ್ಕಳ ಗೈರುಹಾಜರಿಯು ಎದ್ದು ಕಾಣಲಾರಂಭಿಸಿತು.

ಖಾಲಿ ಮೈದಾನಗಳು, ಸ್ಕೂಲ್ ವ್ಯಾನ್ ಗಳಿಲ್ಲದ ಟ್ರಾಫಿಕ್ಕು, ಖಾಲಿ ಖಾಲಿಯಾಗಿ ಕಾಣುವ ಪುಸ್ತಕದಂಗಡಿಗಳು, ಯೂನಿಫಾರಂ, ಛತ್ರಿ, ಟಿಫನ್ ಬಾಕ್ಸ್ ಎಂಬ ಶಾಪಿಂಗ್ ಇಲ್ಲದ ಬೋಳು ಬೋಳು ದೃಶ್ಯಗಳು, ಬಿರುಬೇಸಗೆಯ ಹೂದೋಟದಂತೆ ಕಾಣುತ್ತಿದ್ದವು.


ದೊಡ್ಡವರಿಗೆ ಗೊತ್ತೇ ಆಗದಂತೆ ಈ ಮಕ್ಕಳು ಅವರ ಬದುಕನ್ನು ಎಷ್ಟೊಂದು ಮುದಗೊಳಿಸಿದ್ದರು. ಜೂನ್‍ ಜುಲೈ ಬಂತೆಂದರೆ ರಸ್ತೆ ರಸ್ತೆಯಲ್ಲಿಯೂ ಶಾಲಾವಾಹನಗಳು ಕಿಕ್ಕಿರಿದಿರುತ್ತಿದ್ದವು. ಶಾಲಾವಾಹನದ ಚಾಲಕರಿಗೆ ಎಲ್ಲರೂ ಮನಸ್ಸಿನಲ್ಲಿಯೇ ಶಾಪಹಾಕಿಕೊಂಡು, ಅವುಗಳೆಡೆಯಲ್ಲಿ ಬೈಕು ತೂರಿಸಿಕೊಂಡು ಕಚೇರಿಗೆ ಹೋಗುವುದಿತ್ತು. ಸ್ನೇಹಿತೆ ನಿಲೀಮಳ ಪತಿ ಸುರೇಶ್‍ ಅಂತೂ ರಸ್ತೆಯಲ್ಲಿ ಅಂಬ್ಯುಲೆನ್ಸ್‌ಗಳಿಗೆ ದಾರಿ ಬಿಟ್ಟಂತೆ ಶಾಲಾವಾಹನಗಳಿಗೂ ದಾರಿಬಿಡುತ್ತಿದ್ದರು. ಅಷ್ಟೊಂದು ಮಕ್ಕಳನ್ನು ಕರೆದುಕೊಂಡು ಹೋಗುತ್ತ, ಅವರ ಅಮ್ಮಂದಿರ ಆತಂಕ, ಸೂಚನೆಗಳಿಗೆ ಪ್ರತಿಕ್ರಿಯಿಸುತ್ತ ಬದುಕು ನಿಭಾಯಿಸುವ ಆ ಚಾಲಕರ ಮನಸ್ಥಿತಿಯ ಬಗ್ಗೆ ಸುರೇಶ್‌ಗೆ ತುಂಬ ಗೌರವವಿರುತ್ತಿತ್ತು. ಅವರೆಲ್ಲರೂ ಮೌನವಾಗಿ ಎರಡು ವರ್ಷಗಳ ಕಂದಕವನ್ನು ದಾಟಿ ಮತ್ತೆ ರಸ್ತೆಯಲ್ಲಿ ಕಲರವ ತುಂಬಿದ್ದಾರೆ. ಶಾಲಾ ವಾಹನದ ಹಾರನ್ ಗಳು ಈಗ್ಯಾಕೋ ಅಷ್ಟೇನೂ ಕಿರಿಕಿರಿ ಎನಿಸುತ್ತಿಲ್ಲವಲ್ಲ ಎಂದು ಅಚ್ಚರಿಯಾಗುತ್ತಿದೆ.

ಯೂನಿಫಾರಂ ಹೊಂದಿಸುವ ಗಡಿಬಿಡಿಯಿಲ್ಲದೇ, ಪುಸ್ತಕಕ್ಕೆ ಬೈಂಡ್‍ ಹಾಕುವ ಕೆಲಸವಿಲ್ಲದೇ ಗುಲಾಬಿ ಬಣ್ಣದ ಸ್ಕೂಲ್‍ ಬ್ಯಾಗ್‍ ಬೇಕು ಎನ್ನುವ ಮಗಳಿಗೆ ಬ್ಯಾಗ್‍ ಹುಡುಕುತ್ತ ಅಲೆದಾಡುವ ಪ್ರಮೇಯವಿಲ್ಲದೇ, ಶಾಲಾರಂಭದ ದಿನ ಹೇಗಿರಬೇಕು ಎಂದು ಯೋಚಿಸುತ್ತ ಫೋನ್‍ ಮಾಡುವ ಶಾಲೆಯ ಮಾಸ್ತರರ ಕರೆಯಿಲ್ಲದೇ, ಶಾಲಾಅಭಿವೃದ್ಧಿ ಮಂಡಳಿಯ ಮೀಟಿಂಗ್‍ ಇಲ್ಲದೇ, ದಂಡೆತ್ತಿ ಹೋಗುವ ಸೈನಿಕರಂತೆ ಅಪ್ಪ ಅಮ್ಮಂದಿರಿಗೆ ಶಾಲೆಗೆ ನುಗ್ಗುವ, ಮಕ್ಕಳನ್ನು ಕರೆತರುವ ಕೆಲಸವೇ ಇಲ್ಲದೇ, ಅವರ ಬದುಕಿಗೆ ಒಂದು ಸೂತ್ರವೇ ಇಲ್ಲದಂತಾಗಿತ್ತು.

ಈ ವರ್ಷದ ನವೆಂಬರ್ ಆ ಖುಷಿ, ಜವಾಬ್ದಾರಿಗಳನ್ನೆಲ್ಲ ಮರಳಿ ತಂದುಕೊಟ್ಟಿದೆ. ಆ ಮಟ್ಟಿಗೆ ಈ ವರ್ಷದ ಮಕ್ಕಳ ದಿನಾಚರಣೆಗೆ ಒಂದಿಷ್ಟು ಬಣ್ಣ ತುಂಬಿದಂತಾಗಿದೆ.

ಸಾಮಾನ್ಯವಾಗಿ ಶೈಕ್ಷಣಿಕ ವರ್ಷದಲ್ಲಿ ನವೆಂಬರ್- ಡಿಸೆಂಬರ್ ಬಂತೆಂದರೆ, ಶಾಲೆಗಳಲ್ಲಿ ಕ್ರೀಡಾ ದಿನಾಚರಣೆಗಳ, ವಾರ್ಷಿಕೋತ್ಸವಗಳ ಭರಾಟೆ. ಮಕ್ಕಳೋ ಒಂದಲ್ಲ ಒಂದು ಹಾಡನ್ನು ಗುನುಗುತ್ತ, ವೇಷಭೂಷಣಗಳಿಗಾಗಿ ಸಿದ್ಧತೆಗಳನ್ನು ಮಾಡಿಕೊಳ್ಳುತ್ತ, ವಿವಿಧ ಸ್ಪರ್ಧೆಗಳಲ್ಲಿ ತಾವೇ ಗೆಲ್ಲಬೇಕು ಎಂಬ ಹುಮ್ಮಸ್ಸಿನಲ್ಲಿ ಓಡಾಡುವ ಸಮಯವಿದು. ಅಂದರೆ, ಶಾಲೆಯಲ್ಲಿ ಮಕ್ಕಳು ಮನಸ್ಫೂರ್ತಿಯಾಗಿ ಚಟುವಟಿಕೆಗಳಲ್ಲಿ ತೊಡಗಿಸಿಕೊಳ್ಳುವ ಸೀಸನ್ನು. ಫಿಲ್ಮ್ ಡಾನ್ಸ್, ಶಾಸ್ತ್ರೀಯ ನೃತ್ಯ, ನಾಟಕ, ಭಾಷಣ ಸ್ಪರ್ಧೆ, ಪೋಸ್ಟರ್ ಮಾಡುವುದು, ಮೆಹಂದಿ ಸ್ಪರ್ಧೆ, ಅಡುಗೆ ಸ್ಪರ್ಧೆ.. ಅಬ್ಬಬ್ಬಾ.. ಒಂದೊಂದು ಮಗು ಒಂದೊಂದು ವಿಚಾರವನ್ನು ಆಯ್ಕೆ ಮಾಡಿಕೊಂಡು, ಬಹಳ ಟೆನ್ಶನ್‌ನಲ್ಲಿ ಸಿದ್ಧತೆಗಳನ್ನು ಮಾಡಿಕೊಳ್ಳುವ ಹೊತ್ತು.

ವಾರ್ಷಿಕೋತ್ಸವದ ದಿನ ಶಾಲೆಯ ವೇದಿಕೆ ಮುಂದಿರುವ ತುಂಬಿದ ಸಭೆಯನ್ನು ನೋಡಿ ನಡುಗುವ ಕಾಲು, ಕೈಗಳನ್ನು ನಿಭಾಯಿಸುತ್ತ, ಹತ್ತು ಹಲವು ಕಾರ್ಯಕ್ರಮಗಳಲ್ಲಿ ಭಾಗವಹಿಸುವ ಮಕ್ಕಳ ಗಡಣ. ಡಾನ್ಸ್ ಮರೆತು ನಿಂತು ಬಿಡುವ ಪುಟ್ಟ ಕಂದ. ಮತ್ತೆ ವೇದಿಕೆಯ ಅಂಚಿನಲ್ಲಿ ನೃತ್ಯ ಮಾಡುವ ಟೀಚರ್‌ನತ್ತ ಕಣ್ಣು ಹಾಯಿಸುತ್ತ, ಡಾನ್ಸ್ ನೆನಪು ಮಾಡಿಕೊಳ್ಳುವ ಪುಟಾಣಿ. ಭಾಷಣ ತಪ್ಪಿ ಹೋಗಿ, ಕಂಗಾಲಾಗುವ ಹುಡುಗ. ಮತ್ತೆ ಶುರುವಿನಿಂದ ಭಾಷಣ ಆರಂಭಿಸಿ ಚಪ್ಪಾಳೆ ಗಿಟ್ಟಿಸಿಕೊಳ್ಳುವ ಪೋರ. ಅಹಾ… ಮಕ್ಕಳ ತಪ್ಪುಗಳೂ ಎಷ್ಟು ಚಂದ!

ಲಾಕ್ ಡೌನ್ ಅನ್ನು ಹಂತ ಹಂತವಾಗಿ ತೆರವುಗೊಳಿಸಿದಾಗ, ಸಾಮಾಜಿಕ ಚಟುವಟಿಕೆಗಳು ಬಿರುಸು ಪಡೆದುಕೊಳ್ಳಲಾರಂಭಿಸಿದವು. ಆಗ ದೈನಂದಿನ ಓಡಾಟದಲ್ಲಿ ಮಕ್ಕಳ ಗೈರುಹಾಜರಿಯು ಎದ್ದು ಕಾಣಲಾರಂಭಿಸಿತು.

ಮಕ್ಕಳು ತೊದಲುತ್ತ ಹೇಳುವುದ
ನಕ್ಕು ನಿರ್ಲಕ್ಷಿಸಬೇಡ
ಅಲ್ಲಿ ಮುಪ್ಪಿನವನ
ಜ್ಞಾನಕ್ಕಿಂತ
ಸತ್ಯದ ರೇಖೆಗಳಿವೆ
(ನೀಲು)

ಮಕ್ಕಳು ತೊದಲುತ್ತ ಹೇಳುವ, ಸೊಟ್ಟದಾಗಿ ಬರೆಯುವ ಖುಷಿಗೆ ಮತ್ತೆ ತರಗತಿಗಳೆಂಬ ವೇದಿಕೆಗಳು ಸಿಕ್ಕಿವೆ. ಕಳೆದ ವರ್ಷ ಹೊಸ ಶಾಲೆಗೆ ಸೇರಲು ಪುಟಾಣಿ ಶ್ರೀನಿಧಿ ಪ್ರವೇಶ ಪರೀಕ್ಷೆ ಬರೆಯಬೇಕಾಯಿತು. ಅದಕ್ಕಾಗಿ ಅವಳಮ್ಮ ಬಹಳ ತಯಾರಿಗಳನ್ನು ಮಾಡುತ್ತಿದ್ದರು. ಮಗಳ ಜುಟ್ಟು ಹಿಡಿದು ಡೈನಿಂಗ್ ಚೆಯರ್ ಗೆ ಬಹುತೇಕ ಕಟ್ಟಿ ಹಾಕಿದಂತೆ ಕುಳ್ಳಿರಿಸಿ 1ರಿಂದ 500ರವರೆಗಿನ ಅಂಕಿಗಳು, ಇಂಗ್ಲಿಷ್, ಕನ್ನಡ ಮತ್ತು ಹಿಂದಿಯ ಪದಗಳ ಬರವಣಿಗೆಯನ್ನು ಅಭ್ಯಾಸ ಮಾಡಿಸಿದ್ದರು.

ಶ್ರೀನಿಧಿಗೆ ಗುಲಾಬಿ ಬಣ್ಣ ಇಷ್ಟ. ಗುಲಾಬಿ ಬಾರ್ಬಿ, ಗುಲಾಬಿ ಬಣ್ಣದ ಬರ್ತ್ ಡೇ ಕೇಕ್, ಗುಲಾಬಿ ಸೈಕಲ್, ಗುಲಾಬಿ ಗೋಡೆಗಳು.. ಶ್ರೀನಿಧಿಯೇ ಗುಲಾಬಿಯಂತೆ. ಹಾಗಾಗಿ what is your favorite color ? ಎಂಬ ಪ್ರಶ್ನೆಗೆ ಅವಳು ಅಮ್ಮನ ಬಳಿ ‘ಪಿಂಕ್’ ಎಂದಳು. ಸರಿ, p, I, n, k ಎಂದು ಬರೆಯಿಸುವ ಹೊತ್ತಿಗೆ ಅಮ್ಮನಿಗೆ ಸುಸ್ತಾಯಿತು. ‘ಬುಗುರಿಯಂತೆ ತಿರುಗುವ ಈ ಹುಡುಗಿಗೆ ಈ ಪದವನ್ನು ಬರೆಯಲು ಹೇಗಪ್ಪಾ ಹೇಳಿಕೊಡುವುದು’ ಎಂದು ತಲೆಮೇಲೆ ಕೈ ಹೊತ್ತ ಅಮ್ಮನಿಗೆ ಹೊಸದೊಂದು ವಿಚಾರ ಹೊಳೆಯಿತು. ‘ಪುಟ್ಟೀ, ನಾಳೆ ಪರೀಕ್ಷೆಯ ಮಟ್ಟಿಗೆ ನಿನ್ನ ಇಷ್ಟದ ಬಣ್ಣ ‘ರೆಡ್’ ಎಂದು ಬರೆದುಬಿಡು. ಆ ಸ್ಪೆಲ್ಲಿಂಗ್ ನಿಂಗೆ ಈಗಾಗಲೇ ಗೊತ್ತಿದೆ ಅಲ್ವ. ಅದರಲ್ಲಿ ಮೂರೇ ಅಕ್ಷರ ಸುಲಭವಾಗಿದೆ’ ಎಂದು ಹೇಳಿದರು.

ಶ್ರೀನಿಧಿಗೆ ಈ ಐಡಿಯಾ ಭಾರೀ ಖುಷಿ ಕೊಟ್ಟಿತು.

ಒಂದೂವರೆ ಗಂಟೆಯ ಪರೀಕ್ಷೆ. ಒಂದೂವರೆ ನಿಮಿಷವೂ ಒಂದೇ ಕಡೆ ಕುಳಿತುಕೊಳ್ಳದ ಈ ಹುಡುಗಿ ಪರೀಕ್ಷೆ ಬರೆಯುತ್ತಾಳೆ ಎಂಬ ಭರವಸೆಯೇ ಶ್ರೀನಿಧಿಯ ಅಮ್ಮನಿಗೆ ಇರಲಿಲ್ಲ. ಆದರೂ ಪರೀಕ್ಷೆ ಮುಗಿಯಿತು.

ಅಮ್ಮ ಮಗಳಿಗೆ ಪ್ರಾಂಶುಪಾಲರ ಕೊಠಡಿಯಿಂದ ಕರೆ ಬಂತು.

‘ನೀನು ಆಯ್ಕೆ ಆಗಿದ್ದಿ ಶ್ರೀನಿಧಿ’ ಎನ್ನುತ್ತ ಪ್ರಾಂಶುಪಾಲರು ಒಂದು ಚಾಕೊಲೇಟ್ ಕೊಟ್ಟರು. ಅಮ್ಮನಿಗೂ ಅಚ್ಚರಿ. ಸದ್ಯ ನನ್ನ ಮಗಳು ತೀರಾ ದಡ್ಡಿ ಏನಲ್ಲ ಎಂಬ ಸಮಾಧಾನ ಮೂಡಿತು. ಒಂದೆರಡು ಮಾತುಕತೆಯ ನಂತರ, ‘ಮಗಳು ಬರೆದ ಉತ್ತರ ಪತ್ರಿಕೆಯನ್ನು ನೋಡಬಹುದಾ’ ಎಂದು ಕೇಳಿದರು.

ಉತ್ತರ ಪತ್ರಿಕೆ ಆರು ಪುಟಗಳಷ್ಟು ದೀರ್ಘವಿತ್ತು. ಅಂಕಿಗಳು, ಅಕ್ಷರಗಳು, ಚಿತ್ರಗಳು ಎಲ್ಲವೂ ಅಲ್ಲಿದ್ದವು. ‘ಇಷ್ಟದ ಬಣ್ಣ’ ಎಂಬ ಪ್ರಶ್ನೆಯ ಮುಂದೆ ‘ರೆಡ್’ ಎಂದೇ ಬರೆದಿದ್ದಳು. ಅಮ್ಮನ ಮುಖದಲ್ಲಿ ನಗು ಸುಳಿಯಿತು. ಆದರೆ ಮುಂದಿನ ಪುಟದಲ್ಲಿ ‘ತಂದೆಯ ಹೆಸರು’ ಎಂಬ ಪ್ರಶ್ನೆಯ ಮುಂದೆ ‘ಶಶಿ’ ಎಂದು ಬರೆದಿದ್ದು ನೋಡಿ, ಅಚ್ಚರಿಯಾಯಿತು.

ಟೀಚರ್ ಅದಕ್ಕೆ ಕೆಂಪು ಶಾಯಿಯಲ್ಲಿ ರೈಟ್ ಮಾರ್ಕ್ ಹಾಕಿದ್ದರು. ‘ತನ್ನ ಪತಿಯ ಹೆಸರು ಸುದೀಪ್. ಇವಳೇಕೆ ಹೀಗೆ ಬರೆದಳು’ ಎನ್ನುವ ಯೋಚನೆಯನ್ನು ಮನದೊಳಗೆ ಅದುಮಿಕೊಂಡು, ಪ್ರವೇಶ ಪ್ರಕ್ರಿಯೆಗಳನ್ನು ಮುಗಿಸಿದರು. ಮನೆಗೆ ಬರುತ್ತಲೇ, ‘ಯಾಕೆ ತಂದೆಯ ಹೆಸರು ಬೇರೆ ಬರೆದೆ’ ಎಂದು ಸಮಾಧಾನದಲ್ಲಿಯೇ ಕೇಳಿದಾಗ ಶ್ರೀನಿಧಿ ಉತ್ತರ: ‘ಶಶಿ ಸ್ಪೆಲ್ಲಿಂಗ್ ಸುಲಭವಲ್ವಾ ಅಮ್ಮಾ.. ಅದಕ್ಕೇ ಹಾಗೆ ಬರೆದೆ’.

ಇದೀಗ ಮೊನ್ನೆ ತಾನೇ ತನ್ನ ಒಂದನೇ ತರಗತಿಯ ಕೊಠಡಿಯನ್ನು ಪ್ರವೇಶಿಸಿರುವ ಶ್ರೀನಿಧಿ ಮುಂಜಾನೆ ಏಳೂವರೆಗೆಲ್ಲಾ ಸ್ಕೂಲ್ ವ್ಯಾನ್ ಗಾಗಿ ಕಾಯುತ್ತಾಳೆ. ಸಂಜೆ ಮನೆಗೆ ಬಂದವಳೇ ಮಕ್ಕಳ ದಿನಾಚರಣೆಗಾಗಿ ಹೊಸ ನೃತ್ಯವೊಂದರ ಅಭ್ಯಾಸದಲ್ಲಿ ತೊಡಗಿದ್ದಾಳೆ.
ನವೆಂಬರ್ ಮತ್ತು ಡಿಸೆಂಬರ್ ಬಹಳ ಸುಂದರ ತಿಂಗಳು. ಎಂಥಾ ಸೆಕೆಯ ಊರಿನಲ್ಲಿಯೂ ಮುಂಜಾನೆ ಮಂಜುಬಿದ್ದು, ಪ್ರಕೃತಿಯು ಸಿಹಿಯಾಗಿ ಗುನುಗುತ್ತಿರುವಂತೆ ಗೋಚರಿಸುತ್ತದೆ. ಧನುರ್ಮಾಸದಲ್ಲಿ ಆಕಾಶವು ಬಹಳ ಹತ್ತಿರವಾಗಿದ್ದು, ಇನ್ನೇನು ನಕ್ಷತ್ರಗಳೆಲ್ಲಾ ನಮ್ಮ ಬೊಗಸೆಗೆ ಸಿಕ್ಕೇಬಿಟ್ಟವು ಎಂಬಂತೆ ಭಾಸವಾಗುತ್ತದೆ. ಪ್ರಕೃತಿಯ ವಿಲಾಸವನ್ನು ಹೀಗೆ ಎಷ್ಟು ಬೇಕಾದರೂ ವರ್ಣಿಸಬಹುದು. ಆದರೆ ಬದುಕಿನ ವಿಲಾಸದ ಗತಿ ಹಾಗಿರುವುದಿಲ್ಲವಲ್ಲ.

ಕಳೆದ ವರ್ಷ ವಿದ್ಯಾರ್ಥಿಗಳೆಲ್ಲ ಆನ್ ಲೈನ್ ನಲ್ಲಿಯೇ ವಾರ್ಷಿಕೋತ್ಸವ ಆಚರಿಸಿದರು. ತಮ್ಮ ಭಾಷಣದ, ನೃತ್ಯದ, ಅಡುಗೆಯ ವಿಡಿಯೊಗಳನ್ನು ಅಪ್ ಲೋಡ್ ಮಾಡಿ ಸ್ಪರ್ಧೆಗಳಲ್ಲಿ ಭಾಗವಹಿಸಿದರು. ಆ ಸ್ಪರ್ಧೆಗಳಲ್ಲಿ ಭಾಗವಹಿಸಿ ಗೆದ್ದವರಿಗೆ ಚಪ್ಪಾಳೆಗಳ ಪ್ರೋತ್ಸಾಹ ದೊರೆಯಲಿಲ್ಲ. ಮುಖ್ಯೋಪಾಧ್ಯಾಯರು ಭುಜತಟ್ಟಿ ಅಭಿನಂದಿಸುವ ಖುಷಿ ಸಿಗಲಿಲ್ಲ. ಗೆಲುವಿನ ನಗುವನ್ನು ಧರಿಸಿಕೊಂಡು ಶಾಲೆ ಕಾರಿಡಾರ್ ಗಳಲ್ಲಿ ಸುಖಾಸುಮ್ಮನೇ ಓಡಾಡುವ ಸಂದರ್ಭವೂ ಒದಗಿ ಬರಲಿಲ್ಲ. ಗೆಲುವಿಗಿಂತಲೂ ಮುಖ್ಯವಾದ ಈ ಎಲ್ಲ ಚಟುವಟಿಕೆಗಳಿಂದ ವಂಚಿತರಾದ ಮಕ್ಕಳನ್ನು ನೋಡುವಾಗ ಹಿರಿಯರಿಗೂ ಬೇಸರವೆನಿಸುತ್ತಿತ್ತು. ಈ ಆನ್ ಲೈನ್ ಎಂಬ ಮಾಯೆ ಮಕ್ಕಳಿಂದ ಯಾವೆಲ್ಲಾ ಖುಷಿಗಳನ್ನು ಕಿತ್ತುಕೊಳ್ಳುವುದೋ ಎಂದು ಭಯವಾಗಿತ್ತು.

ಆದ್ದರಿಂದಲೇ ನವೆಂಬರ್ 8 ಬಹಳ ಮಹತ್ವದ ದಿನವಾಗಿಬಿಟ್ಟಿತು. ಅಂದು ಪುಟಾಣಿ ಮಕ್ಕಳ ಶಾಲೆ ಆರಂಭವಾಗಿದ್ದರಿಂದ, ನವೆಂಬರ್ 14ರ ಮಕ್ಕಳ ದಿನಾಚರಣೆಗೆ ನಿಜವಾದ ಮೆರುಗು ದೊರತಂತಾಗಿದೆ. ಮಕ್ಕಳು ಬಾಲ್ಯದಲ್ಲಿ ಸ್ಪರ್ಧೆಗಳಲ್ಲಿ, ಕಿತಾಪತಿಗಳಲ್ಲಿ ತೊಡಗಿಸಿಕೊಳ್ಳದೇ ಇದ್ದರೆ, ದೊಡ್ಡವರು ಟೆನ್ಶನ್ನೇ ಇಲ್ಲದೇ ಜೀವನ ಮಾಡುವುದಾದರೂ ಹೇಗೆ…
ಅದಕ್ಕೇ ಮತ್ತೆ ಲಂಕೇಶ್ ನೆನಪಾಗುತ್ತಾರೆ.

ಇಬ್ಬನಿಯ ಹನಿಯಂತೆ
ಇಂಗಿ ಹೋಗುವ
ಚಿಕ್ಕಂದಿನ ದಿನಗಳು
ಮುಪ್ಪಿನಲ್ಲಿ ಕಾಮನ ಬಿಲ್ಲಿನ ಕೌದಿ
ಹೊದ್ದು ಬರದಿದ್ದರೆ
ಅದು ಬದುಕಲ್ಲ
(ನೀಲು)