“ಪ್ರಶಾಂತಾ ನಾಳೇ ನೀ ರಜಾ ತಗೋ, ಎಲ್ಲಿನೂ ತಿರಗಲಿಕ್ಕ ಹೋಗಬ್ಯಾಡಾ, ಎರಡ ದಿವಸ ಆತು ನಳಾ ಬಂದಿಲ್ಲಾ. ನಾಳೆ ಗ್ಯಾರಂಟೀ ಬರತದ, ನೀನ ಮಡಿನೀರ ತುಂಬಬೇಕ ಈ ಸರತೆ” ಅಂತ ಸೋಮವಾರ ರಾತ್ರಿ ಊಟಕ್ಕ ಕೂತಾಗ ನಮ್ಮವ್ವಾ ಒಂದು ದೂಡ್ದ ಬಾಂಬ್ ಹಾಕಿದ್ಲು. “ಯಾಕ, ನಿಮ್ಮಪ್ಪನ ಶ್ರಾದ್ಧ ಮನ್ನೇನ ಮುಗದದ, ನಿಮ್ಮವ್ವಾ ಇನ್ನೂ ಗಟ್ಟಿ ಇದ್ದಾಳ ಮತ್ಯಾಕ ಮಡಿನೀರು?” ಅಂದೆ. “ಯಪ್ಪಾ ಬ್ರಾಹ್ಮಣರ ಮನ್ಯಾಗ ಅಪ್ಪಿ-ತಪ್ಪಿ ಹುಟ್ಟಿ ನೋಡ. ಮಡಿನೀರ ಏನ್ ಶ್ರಾದ್ಧಕ್ಕ ಇಷ್ಟ ತುಂಬತಾರೇನ? ನಿನ್ನೀ  ಇಂದ  ಶ್ರಾವಣ ಮಾಸ ಸುರು ಆತು, ನಾಡದ ಬುಧವಾರ ಗೌರಿ ಕುಡುಸೋದು” ಅಂದ್ಲು. ಆತ ತೊಗೋ ಇನ್ನ ಬುಧವಾರದಿಂದ ಹಿಡದ ಶನಿವಾರ ಮಟಾ ದಿವಸಾ ನಮ್ಮವ್ವಂದ ಮಡಿಲೇ ರಾಜ್ಯಭಾರ. ‘ಅಲ್ಲೆ ಮುಟ್ಟ ಬ್ಯಾಡಾ-ಇಲ್ಲೆ ಮುಟ್ಟ ಬ್ಯಾಡಾ, ಅಕಿನ್ನ ಮುಟ್ಟಿ-ಗಿಟ್ಟಿ, ಅಕಿನೂ ಮಡಿಲೇ ಇದ್ದಾಳ’ ಅಂತ ಅಡಿಗಿ ಮನ್ಯಾಗ , ದೇವರ ಮನ್ಯಾಗ ನಮ್ಮವ್ವಾ ಕರ್ಫ್ಯೂ ಹೇರಿ ಬಿಡತಾಳ. ಶ್ರಾವಣ ಮಾಸ ಮುಗಿಯೋತನಕ ಹಿಂತಾ ಪರಿಸ್ಥಿತಿ ಇರತದಲಾ ರಾತ್ರಿ ಹೆಂಡತಿನ ಮುಟ್ಟಬೇಕಾರೂ ನಮ್ಮವ್ವನ್ನ ‘ನಿನ್ನ ಸೊಸಿ ಮೈಲಗಿ ಆದರ ನಡಿತದ ಎನವಾ?’ ಅಂತ ಕೇಳಿ ಮುಟ್ಟಬೇಕು.

“ನಾನ ಯಾಕ ತುಂಬಬೇಕು ನಿನ್ನ ಸೊಸಿಗೆ ಹೇಳಲಾ ” ಅಂದೆ ” ಅಕೀ ಹೆಂಗ ತುಂಬಬೇಕೋ ? ಹುಚ್ಚರಂಗ ಮಾತಡ್ತಿಯಲ್ಲಾ, ನೀ ಆದರ ಒಂದ ಒದ್ದಿ ಚಡ್ದಿ ಹಾಕ್ಕೊಂಡ ಭಡಾ-ಭಡಾ ನಾಲ್ಕ ಕೊಡಾ ತಿಕ್ಕಿ – ತೊಳದು- ತುಂಬಿ ಇಡ್ತಿ, ಇನ್ನ ಅಷ್ಟಕ್ಕ ಅಕಿಗೆ ಒದ್ದಿ  ಬಟ್ಟಿ ಹಾಕಿಸಿ ಹೊರಗಿಂದ ನೀರ ಹೊರಸಬೇಕ ಎನ್?” ಅಂದ್ಲು, ಅದು ಖರೇನ ಅನಸ್ತು ಏನಿಲ್ಲದ ಅಕಿದ ಮೂಗ ಯಾವಗಲು ಸೋರತಿರತದ, ಇನ್ನ ಮಡಿನೀರ ತುಂಬಿದ್ದ ನೆವಾ ಸಿಕ್ಕರ ಸಾಕ ಶ್ರಾವಣ ಮುಗಿಯೋ ಮಟಾ ಮಕ್ಕೊಂಡ ಬಿಡತಾಳ, ಮುಂದ ಹಗಲ ಹೋತ್ತಿನಾಗ ಮುಟ್ಟೋದ ದೂರ ಉಳಿತ ರಾತ್ರಿನೂ ಮುಟ್ಟಲಾರದಂಗ ಆಗತದ. ಆಮೇಲೆ ನಮ್ಮವ್ವಾ  ಮಡೀಲೇ ಅಡಗಿ ಮಾಡಬೇಕಾರ ಕಾಯಿಪಲ್ಯಾ ಹೆಚ್ಚಲಿಕ್ಕೆ ನಾ ಇಲ್ಲಾ ನಮ್ಮಪ್ಪಾ ಕೂಡಬೇಕಾಗತದ ಅಂತ ಅಕಿನ್ನ ಲಿಸ್ಟನಾಗಿಂದ ಡ್ರಾಪ್ ಮಾಡಿದೆ.

“ನೋಡವಾ ರಜಾ ಹಾಕಲಿಕ್ಕೆ ಆಗಂಗಿಲ್ಲಾ. ನೀ ಹೇಳಿದಾಗ ಒಮ್ಮೆ ಶ್ರಾವಣಮಾಸದಾಗ ರಜಾ ಹಾಕ್ಕೋತ ಕೂತರ, ನಮ್ಮ ಕಂಪನ್ಯಾಗ ನಂದ ‘ಪಕ್ಷ ಮಾಸ’ ಮಾಡತಾರ. ನಳಾ ಬಂದರ ಫೋನ್ ಮಾಡು ನಾ ಬರ್ತೇನಿ” ಅಂದೆ.

ಇಷ್ಟ ವರ್ಷ ನಮ್ಮಪ್ಪ ಘಟ್ಟಿ ಇದ್ದಾ ಅವನ ತುಂಬತಿದ್ದಾ, ಈಗ ಅವಂಗೂ ಆಗಂಗಿಲ್ಲಾ, ಅದಕ್ಕ ಈಗ ಮಡಿ ನೀರ ತುಂಬೋದು ನನ್ನ ಕೊರಳಿಗೆ ಬಂದದ. ಒಮ್ಮೊಮ್ಮೆ ಅನಸ್ತದ, ಅರ್ಧಾ ನಮ್ಮಪ್ಪಾ ಹಣ್ಣ ಆಗಿದ್ದ ನಮ್ಮವ್ವನ ಮಡಿನೀರ ತುಂಬಿ-ತುಂಬಿ ಅಂತ, ಪಾಪಾ ವಾರದಾಗ ನಾಲ್ಕ ದಿವಸ ನಾಲ್ಕ- ನಾಲ್ಕ ತಾಸ ವದ್ದಿ ಪಂಜಿ ಉಟಗೊಂಡ ನೈವಿದ್ಯಾ – ಮಂಗಳಾರತಿ ಮಾಡಿ ಮಾಡಿ ಅವಂಗ ಇವತ್ತಿಗೂ ವರ್ಷಾ ಶ್ರಾವಣಮಾಸದಾಗ ಕಾಯಂ ಕೆಮ್ಮಬರತದ.

“ಅಲ್ಲವಾ ಶ್ರಾವಣಮಾಸ ನಾಲ್ಕ ವಾರ ಇರತದ, ಕಡೀ ಶುಕ್ರವಾರ ಗೌರಿ ಕುಡಿಸಿದರ ಆತು, ನೀ ಸುಳ್ಳ ಒಂದನೇವಾರನ ಗೌರಿ ಕುಡಿಸಿ ನಮ್ಮೆಲ್ಲಾರದು ನಾಲ್ಕ ವಾರಗಟ್ಟಲೇ ಜೀವ ತಿನ್ನಬ್ಯಾಡಾ, ಪ್ರೇರಣಾಗ ಎರಡ ಮಕ್ಕಳನ್ನ ಕಟಕೊಂಡ ಮಾಡಲಿಕ್ಕ ಆಗಂಗಿಲ್ಲಾ , ನಿನಗೂ ವಯಸ್ಸಾತು ಒಬ್ಬಕಿನ ಎಷ್ಟಂತ ಮಾಡತಿ” ಅಂತ ಅಂದೆ. “ಯಾಕ ನಾ ಇಷ್ಟ ವರ್ಷ ಮಾಡಕೊಂಡ ಬಂದಿಲ್ಲ ಏನ? ನೀವ ಸಣ್ಣವರಿದ್ದಾಗ ನಿಮ್ಮಂತಾ ಎರಡ ಮಕ್ಕಳನ್ನ ಕಟಕೊಂಡ ನಾ ಎಲ್ಲಾ ಮಾಡಕೊಂಡ ಮತ್ತ ಪ್ರೆಸ್ ನಾಗ ಎಂಟ ತಾಸ ಕೆಲಸಕ್ಕ ಹೋಗತ್ತಿದ್ದೆ, ದೇವರು-ದಿಂಡರು ಒಮ್ಮೆ ಮಾಡಕೋತ ಬಂದ ಮ್ಯಾಲೇ ಬಿಡಬಾರದು. ನನ್ನ ಕೈ ಕಾಲ ಗಟ್ಟಿ ಇರೋತನಕ ನಾ ಮಾಡತೇನಿ, ಮುಂದ ನೀವ ಏನರ ಹಾಳ ಗುಂಡಿ ಬೀಳರಿ” ಅಂತ ಇತಿಹಾಸಕ್ಕ ಹೋದಳು.

ಆವಾಗಿನ ಕಾಲನ ಬ್ಯಾರೇ ಇತ್ತು. ಓಣಿಗೊಂದು ಸರ್ಕಾರಿ ನಳಾ ಅಂತ ಇರ್ತಿತ್ತು. ಅದು ದಿವಸಾ  ಬರತಿತ್ತು .ನಳಾ ಬರದಿದ್ದರು ಓಣ್ಯಾಗ ಒಂದ ಹ್ಯಾಂಡ ಪಂಪ ಬೋರರ ಇರತಿತ್ತು.  ಸರ್ಕಾರಿ ನಳಾ ಅಂದರ ಒಂದ ಥರಾ ಸೆಕ್ಯುಲರ್ ನಳಾ ಇದ್ದಂಗ ಯಾರ ಬೇಕಾದವರು ತುಂಬಕೊಬಹುದು. ನಮ್ಮಂತಾವರು ಒಂದ ಲಂಡ ಪಂಜಿ ಉಟಗೊಂಡ ಹೋದರ “ಭಟ್ಟರ ಬಂದಾರ ಅವರಿಗೆ ಎರಡ ಕೋಡಾ ಬಿಡರಿ” ಅಂತ ತಮ್ಮ ಪಾಳೆ ಕೊಟ್ಟ ಜನಾ ದಾರಿ ಬಿಡತಿದ್ದರು. ಆವಾಗ ನಮ್ಮಂದಿ ಇನ್ನೂ ದಾರಿ ಬಿಟ್ಟಿದ್ದಿಲ್ಲಾ ಹಿಂಗಾಗಿ ಮಂದಿ ನಮಗ ದಾರಿ ಬಿಡತಿದ್ದರು. ಈಗ ಜನಾ ದಾರಿ ಬಿಡೋದು ದೂರ ಹೋತು ನಳಾ ಬಿಡೋರು ನಮಗ ಸರಿಯಾಗಿ ನಳಾ ಬಿಡಂಗಿಲ್ಲಾ. ಆಗಿನ ಕಾಲದಾಗ ನಾ ನಸಿಕಲೇ ಐದ ಘಂಟೆಕ್ಕ ಎದ್ದ ಬರೇ ಬತ್ತಲೇ ಸರ್ಕಾರಿ ನಳದಾಗಿಂದ ಮಡಿನೀರ ತುಂಬಿದ್ದರು ಯಾರ ನೋಡೊರಿದ್ದಿದ್ದಿಲ್ಲಾ.

ಈಗ ವಾರಕ್ಕೊಮ್ಮೆ ನಳಾ, ಅದು ಗ್ಯಾರಂಟಿ ಇಲ್ಲಾ, ಅದೂ ಎಷ್ಟ ದಪ್ಪ ಇರತದ ಅಂದರ ಇಪ್ಪತ್ತ ನಿಮಿಷಕ್ಕ ಒಂದ ಕೊಡಾ ತುಂಬತದ. ವದ್ದಿ ಚಡ್ಡಿ ಮ್ಯಾಲೆ ನಾಲ್ಕ ಕೊಡಾ ತಿಕ್ಕಿ -ತೊಳದು- ತುಂಬಿ ಇಡೋದರಾಗ ತೊಡಿ ಹೆಪ್ಪ ಗಟ್ಟಿ ಹೋಗಿರ್ತದ.  ನಮ್ಮ ರೇಣುಕಾ ನಗರದಾಗ ನನ್ನ ಪುಣ್ಯಾಕ್ಕ ಬೋರ್ ಇಲ್ಲಾ, ಇಲ್ಲಾಂದರ ನಮ್ಮವ್ವ  ಒದ್ದಿ ಚಡ್ಡಿ ಮ್ಯಾಲೇ ಮಡಿಲೇ ಇಡಿ ಓಣಿ ಮಂದಿ ನೋಡೋ ಹಂಗ ಬೋರ್ ಹೊಡಿಸಿ ನೀರ ತುಂಬಸೋಕಿನ.

ಅಷ್ಟರಾಗ ನನ್ನ ಮಗಾ ಎಡಗಯ್ಯಾಗ ತಾಟ ಹಿಡಕೊಂಡ ಟಿ.ವಿ ಮುಂದ ಹೋದಾ, ಶುರುವಾತ ನೋಡ್ರಿ ನಮ್ಮವ್ವಂದ ಪ್ರವಚನಾ
“ಇನ್ನ ಮನ್ಯಾಗ ಗೌರಿ ಕುಡಸ್ತದ, ಎಡಗಯ್ಯಾಗ ತಾಟ ಹಿಡಕೊಂಡ ಮನಿಯಲ್ಲಾ ತಿರಗಬ್ಯಾಡ್ರಿ, ಎಂಜಲಾ, ಮುಸರಿ ಸ್ವಲ್ಪ ಲಕ್ಷ ಇರಲಿ, ಮಡಿ-ಮೈಲಿಗೆ ಸ್ವಲ್ಪ ಕಲೀರಿ, ಮೈ ಮ್ಯಾಲೇ ತಾಟ ಇಟ್ಗೋಬ್ಯಾಡರಿ. ಎಡಗೈಲೆ ಮುಸರಿ ಮುಟ್ಟಿದ್ರ ಕೈಗೇ ನೀರ ಹಚ್ಚಗೊಳ್ರಿ ” ಅಂದ್ಲು. ಅಕೀ ಹೇಳದಂಗ ಮುಸರಿ ಮುಟ್ಟಿದಾಗ ಒಮ್ಮೆ ಎಡಗೈಗೆ ನೀರ ಹಚ್ಚಗೋತ ಹೊಂಟರ ಊಟಾ ಮುಗಿಯೋದ್ರಾಗ ಬಟ್ಟ ಶಲತ ಹೋಗತಾವ ಅನಸ್ತು. ಅಷ್ಟಸಲಾ ಎಡಗೈಲೆ ಮುಸರಿ ಮುಟ್ಟೊ ಮಂದಿ ನಾವು.

“ಪ್ರಥಮ… ಅಕೀ ನಿನಗ ಹೇಳೋದು ” ಅಂತ ನಾ ನನ್ನ ಮಗ್ಗ ಜೋರ ಮಾಡಿದೆ

“ಇಬ್ಬರಿಗೂ ಬಂತು. ನೀ ಏನ್ ಕಡಿಮಿ ಇದ್ದಿ, ನೀನು ಅವನ. ಅಪ್ಪನಂಗ ಮಗಾ ” ಅಂದ್ಲು. ನಾ ನಮ್ಮಪ್ಪನ ಮಾರಿ ನೋಡಿದೆ. ಅಂವಾ ಇದೇನೂ ತನಗ ಸಂಬಂದ ಇಲ್ಲಾ ಅನ್ನೊರಂಗ ಗೊಡೆ ಮ್ಯಾಲೆ ಹೂವಿನ ಮಾಲಿ ಹಾಕಿದ್ದ ಅವರಪ್ಪನ ಫೊಟೊ ನೋಡ್ಕೊತ ಕೂತಿದ್ದಾ. ಇಷ್ಟಕ್ಕ ಮುಗಿಲಿಲ್ಲಾ ನಮ್ಮವ್ವನ ಪುರಾಣ.

“ಬಚ್ಚಲದಾಗಿಂದು, ಸಂಡಾಸಾನಾಗಿಂದು  ಚಪ್ಪಲ್ ಹಾಕ್ಕೊಂಡ ಮನಿ ತುಂಬಾ ಅಡ್ಡಾಡ ಬ್ಯಾಡ್ರಿ, ಸುಡಗಾಡ ಈಗಿನ ಮನ್ಯಾಗ ಸಂಡಾಸನಾಗ ಬಚ್ಚಲ ಇರತದ, ಮೊದ್ಲಿನ ಕಾಲದ ಮನ್ಯಾಗ, ಸಂಡಾಸ ಮನಿ ಬಿಟ್ಟ ಮೂರ ಮಾರ ದೂರ ಇರತಿತ್ತು”

“ಲೇ ಅಜ್ಜಿ ಹೇಳೋದ ಕೇಳ ” ಅಂತ ಮತ್ತ ನನ್ನ ಮಗನ್ನ ಒದರಿದೆ, ಅಂವಾ “ಇದ ನನಗಲ್ಲ ಪಪ್ಪಾ, ನಿನಗ” ಅಂದಾ

ನಾ ಸುಮ್ಮನ ಬಾಯಿ ಮುಚ್ಚಗೊಂಡ ‘ಹೂಂ’ ಅಂದೆ, ಅಕಿ ಹೇಳೋದು ಖರೇನ. ಮೊದಲ ಸಂಡಾಸ ಮತ್ತ ಬಚ್ಚಲಾ ಬ್ಯಾರೆ – ಬ್ಯಾರೆ

ಇರತಿದ್ವು ಹಳ್ಯಾಗ ಅಂತೂ ಸಂಡಾಸ ಇರತಿದ್ದೀಲ್ಲಾ. ಹೊಲಕ್ಕ ಗೊಬ್ಬರ ಆಗತದ ಆಂತ ಎಲ್ಲಾರೂ ಹೊಲಕ್ಕ ಹೋಗಿ ಗೊಬ್ಬರಾ ಹಾಕಿ ಬರತಿದ್ದರು. ಈಗ ಎಲ್ಲಾ ಒಂದರಾಗ. ಈಗೇನರ ಬಚ್ಚಲದಾಗ ಮಡಿ ಅರಬಿ ಒಣಾ ಹಾಕಿದರ ಸಂಡಾಸದಾಗ ಹಾಕಿದಂಗ ಅನಸ್ತದ. ಬಚ್ಚಲದಾಗ ಮಂತ್ರ ಹೇಳ್ಕೋತ ಮಡಿಲೇ ಸ್ನಾನ ಮಾಡಬೇಕಾರ ಹಿಂದ ತಿರುಗಿ ನೋಡಿದ್ರ ಮೂಗ ಮುಚಗೊಂಡ ಮಂತ್ರ ಹೇಳ್ಬೇಕಾಗತದ.

ಇತ್ತಲಾಗ ನಮ್ಮವ್ವನ ಪ್ರವಚನ ಹಂಗ ಮುಂದವರಿತು. “ಮ್ಯಾಲೇ ಮಡಿ ಅರಬಿ ಒಣಾ ಹಾಕಿರತದ, ದೇವರ ಮನ್ಯಾಗ ಎರಡ ಕೋಡಾ ಮಡಿನೀರ ತುಂಬಿ ಇಟ್ಟಿರತದ  ಅವನ್ನ ಮುಟ್ಟಿ-ಗಿಟ್ಟಿ, ಬಚ್ಚಲದಾಗ ಉಚ್ಚಿ ಹೋಯದ ಹಂಗ ಬರಬ್ಯಾಡಾ, ಕಾಲಿಗೆ ಮತ್ತ ಬಚ್ಚಲಕ್ಕ ಎರಡಕ್ಕೂ ನೀರ ಹಾಕ್ಕೊಂಡ ಬಾ” ನಾ ಅದಕ್ಕೂ ‘ಹೂಂ’ ಅಂದೆ

“ಯೇ, ಇದ ನಿನಗಲ್ಲಾ, ನಿನ್ನ ಮಗ್ಗ ಹೇಳಿದ್ದ” ಅಂದ್ಲು, ‘ಹೌದಲಾ !’ ಅಂತ ಸುಮ್ಮನಾದೆ.

ನಮ್ಮವ್ವನ ಇನಸ್ಟ್ರಕ್ಸ್ಯನ್ಸ್ ಹಂಗ ಮುಂದವರಿಲಕ್ಕತ್ತಿತ್ತು, ನಾ ಹೇಳಿದೆ ” ನೋಡವಾ ಇನ್ನೋಮ್ಮೆ ವಿಚಾರಮಾಡು, ಸುಮ್ಮನ ಕಡೀ ಶುಕ್ರವಾರ ಗೌರಿ ಕುಡಿಸೋಣಂತ ಮದ್ಲ ತುಟ್ಟಿಕಾಲ, ಇಪ್ಪತ್ತ ರೂಪಾಯಕ್ಕ ಯಾ ಮುತ್ತೈದ್ಯಾರೂ ಬರಂಗಿಲ್ಲಾ. ಕಡಿಮಿ ಅಂದರ ಐವತ್ತ  ರೂಪಾಯಿ ಕೊಡಬೇಕು. ಆಮೇಲೆ ಗಾಡಿ ಖರ್ಚ ಬ್ಯಾರೇ ಕೊಡಬೇಕು. ಮನ್ಯಾಗ ಪ್ರಶಸ್ತಿನೂ ಸಣ್ಣಕಿದ್ದಾಳ, ಮಡಿ-ಮೈಲಗಿ ಅಕಿಗೆ ತಿಳಿಯಂಗಿಲ್ಲಾ, ಮುಟ್ಟ ಬ್ಯಾಡಾ ಅಂದರ ಮುದ್ದಾಂ ಮುಟ್ಟತಾಳ. ನೀ ಆಮೇಲೇ ಅಕಿದ ಎಲ್ಲಾ ಅರಬಿ ಕಳದ ಎಲ್ಲೆ ಮುಟ್ಟಿದರು ನಡಿತದ ಅಂತ ಶ್ರಾವಣ ಮುಗಿಯೋ ಮಟಾ ಬರೆ ಬತ್ತಲೆ ಅಡ್ಡಾಡಸ ಬ್ಯಾಡಾ. ಪಾಪಾ ಕೂಸ ಜಡ್ಡ ಬಿದ್ದರ ಏನ್ ಮಡೋದು. ಎಲ್ಲಾರಿಗೂ ತ್ರಾಸ ಆಗತದ, ನೀ ಮಧ್ಯಾಹ್ನ ಮಂಗಳಾರತಿಗೆ ದಿವಸಾ ಆಫೀಸ್ ಬಿಟ್ಟ ಲಗೂನ ಬಾ ಅಂದರ ಆಮೇಲೇ ನನಗ ಆಫೀಸನಾಗ ದಿವಸಾ ‘ಮುದ್ರಾ’ ಹಾಕತಾರ, ನೀ ಏನ ಮಾಡೋದ ಎಲ್ಲಾ ಕಡೀ ವಾರಾನ ಮಾಡು, ಇನ್ನೂ ಮುಂದ ಅಷ್ಟಮಿ ಗೌರಿ ಇದ್ದಾಳ, ಸ್ವರ್ಣ ಗೌರಿ ಇದ್ದಾಳ, ಅವನ್ನೇಲ್ಲಾ ಮಾಡೊದ ಅದನ ಅದ” ಅಂದೆ. ಆದರ ನಮ್ಮವ್ವ ಕೇಳೋ ಹಂಗ ಕಾಣಲಿಲ್ಲ.

ಪಾಪಾ ಹಳೇ ಮಂದಿ ಹಂಗ ಬಿಡಲಿಕ್ಕ ಮನಸು ಆಗಾಂಗಿಲ್ಲಾ, ನಮ್ಮಂತಾ ಹೋಸಾ ಮಂದಿ ಗೋಳ ಹೊಯ್ಕೋಳ್ಳೊದು ಬಿಡಂಗಿಲ್ಲಾ, ಕಡಿಗೆ ಅಕಿದ ಆಗ್ಲಿ, ಅಕಿಮನಸ್ಸರ ಯಾಕ ನೊಯಿಸೋದು ಅಂತ ಅಕಿ ಹೇಳಿದ್ದಕ್ಕೆಲ್ಲಾ ಹೂಂ ಅಂದೆ , “ಅಲ್ಲವಾ ಅಕಸ್ಮಾತ್ ನಾಳೇನೂ ನಳಾ ಬರದಿದ್ರ ಹೆಂಗ?”  ಅಂದೆ.  ” ನೀ ಅಡ್ಡ ಬಾಯಿ ಹಾಕ ಬ್ಯಾಡೋ ಶನಿ, ಹಂಗ ಏನರ ಆದರ ಅನಿವಾರ್ಯ, ಮತ್ತೇನ ಮಾಡೋದು ಕಡಿ ಶುಕ್ರವಾರನ ಕೂಡಸೋದು. ಈ ಸಲಾ ಎರಡನೇ ಶುಕ್ರವಾರ ಕೂಡಸಲಿಕ್ಕೆ ಬರಂಗಿಲ್ಲಾ, ನಿನ್ನ ಹೆಂಡತಿ ಒಳಗ ಇರಂಗಿಲ್ಲಾ ” ಅಂದ್ಲು. ಯಾಕ ಎಲ್ಲೆ ಹೋಗ್ತಾಳ ಅನ್ನೋವಿದ್ದೆ ಆಮೇಲೆ ತಿಳಿತು. ಗಂಡಸರಿಗು ಒಂದ ಹಿಂತಾ ನೆಪಾ ಇರಬೇಕಿತ್ತು ಅನಸ್ತು.

ಅಷ್ಟರಾಗ ನಮ್ಮವ್ವಗ ಧಾರವಾಡದಿಂದ ನಮ್ಮ ಶಶಿ ಮೌಶಿದ ಫೋನ್ ಬಂತು. ಅದು- ಇದು ಎಲ್ಲಾ ಮಾತಾಡಿ ಮತ್ತ ವಿಷಯ ಶ್ರಾವಣ ಮಾಸಕ್ಕ ಬಂತು

“ಎನವಾ ಸಿಂಧು ಮತ್ತ ಗೌರಿ ಈ ಸಲಾ ಯಾವಾಗ ಕೂಡಿಸೋರು ” ಅಂತ ಕೇಳಿದ್ಲು,
“ಒಂದನೇ ವಾರನ ಕೂಡಸಬೇಕು ಅಂತ ಮಾಡೇನಿ, ಆದ್ರ ಸುಡಗಾಡ ನಳಾನ ಬಂದಿಲ್ಲಾ, ಮನ್ನೆ ಬರಬೇಕಿತ್ತು, ನೋಡೊದ್ವಾ,
ಎನರ ನಾಳೆ’ ನಳಾ ಬಂದ್ರ… ಗೌರಿ ಕುಡಸೋದು’ ಇಲ್ಲಾಂದ್ರ ಕಡೀ ವಾರ” ಅಂತ ಫೋನ್ ಇಟ್ಟಳು.
ಈಗ ಎನಿದ್ರು ನಾಳೇ ನಳಾ ಬರೋದನ್ನ ಕಾಯಕೋತ ನಮ್ಮವ್ವಾ ನಳದ ಮುಂದ ಕೂಡೋಕಿ.

ಮೂನ್ನೆ ಮಧ್ವ ನವಮಿ ಟೈಮ್ ಒಳಗೂ ಹಿಂಗ ಆಗಿತ್ತೂ, ನಮ್ಮನಿ ಎದುರಗಿನ ಲೈನ್ ಒಳಗ ” ಹಾಯಗ್ರೀವ್ ಆಚಾರ್ಯರು” ಅಂತ ಪಕ್ಕಾ ವೈಷ್ಣವರಿದ್ದಾರ. ಪಾಪಾ ಮಧ್ವ ನವಮಿಗೆ ಮಡ್ನೀರ ತುಂಬಬೇಕಿತ್ತು, ನಳಾ ಒಂದವಾರ ಆದ್ರೂ ಬಂದಿದಿಲ್ಲಾ, ಹೇಳಿ ಕೇಳಿ ಮಧ್ವರೂ, ಇನ್ನ ಮಧ್ವನವಮಿ ಮಾಡಲಿಲ್ಲಾ ಅಂದರ ಹೆಂಗ ನಡಿತದ, ಅವರಿಗೆ-ಇವರಿಗೆ ಫೋನ್ ಮಾಡಿ ಕಡೀಕೂ ಹಿಂದಿನ ದಿವಸ ನಳಾ ಬಿಡಿಸಿಕೊಂಡ್ರು, ಹಾಯಗ್ರೀವ್ ಆಚಾರ್ಯರು ಧಾಬಳಿ( ಪಂಜಿ ತುಂಡ ) ಉಟಕೊಂಡ ಓಣಿ ಮಂದಿಗೆಲ್ಲಾ ಗೊತ್ತಾಗೊ ಹಂಗ ಮಂತ್ರಾ ಹೇಳ್ಕೋತ ಮಡಿನೀರ ತುಂಬಲಿಕ್ಕ ತಯಾರಾದರು, ಅಂತೂ ನೀರ ಬಂತು. ಎರಡ ಕೊಡಾ ಮೈ ಮ್ಯಾಲೇ ಸುರುಕೊಂಡ ಕೊಡಾ-ತಂಬಗಿ-ಥಾಲಿ ಎಲ್ಲಾ ಒಮ್ಮೆ ಹುಣಸಿ ಹಣ್ಣು, ರಂಗೋಲಿ, ಅಂಟ್ಲಕಾಯಿ  ಹಚ್ಚಿ ತೋಳಕೊಂಡ ನಳದ ಮುಂದ ನಡಗಕ್ಕೊತ ನಿಂತರು, ಧಾಬಳಿನೂ ಅಂಟ್ಲಕಾಯಿ, ಹುಣಸಿ ಹಣ್ಣ ಹಚ್ಚಿ ಒಗದಂಗ ಕಾಣತಿತ್ತು. ಅಲ್ಲಾ ವರ್ಷಕ್ಕ ಒಂದ ಸಲಾ ಅದನ್ನ ಎರಿಯಲ್ ಹಚ್ಚಿ ಒಗದರ ಛಲೋ ಇರ್ತಿತ್ತು ಅಂತ ನನಗ ಅನಸ್ತು. ಹೋಗಲಿ ಬಿಡು ನನಗ್ಯಾಕ ವೈಷ್ಣವರ ಉಸಾಬರಿ ಅಂತ ಸುಮ್ಮ ಬಿಟ್ಟೆ. ಅಷ್ಟರಾಗ ಅವರ ಮನೆಯವ್ರು, “ಸ್ವಲ್ಪ ನೀರ ಕುಡದ ನೋಡ್ರಿ, ಬೋರ್ ನೀರ ಬಿಟ್ಟಾನೋ, ಕಾರ್ಪೂರೇಶನ್ ನೀರ ಬಿಟ್ಟಾನೋ” ಅಂದ್ರು. ಹಾಯಗ್ರೀವ್ ಆಚಾರ್ಯರು  ಒಂದ ಬೊಗಸಿ ನೀರ ಕುಡದ ನೋಡಿದರು, ಗೊತ್ತಾಗಲಿಲ್ಲ. ಮತ್ತೋಂದ ಬೊಗಸಿ ನೀರ ಕುಡದ “ಕಾರ್ಪೂರೇಶನ್ ನೀರ ಅನಸ್ತದ, ಸ್ವಲ್ಪ ಕ್ಲೋರಿನ್ ಜಾಸ್ತಿ ಹಾಕ್ಯಾರ” ಅಂತ ಮಡಿನೀರ ತುಂಬಕೊಂಡರು , ಅಂತೂ ರಾಯರ ಇಚ್ಛೆ ನಳಾ ಬಂತು ಅಂತ ಮರದಿವಸ ಮಸ್ತ್ ಮಧ್ವನವಮಿ ಮಾಡಿ, ಊಟಾ ಹೋಡದು ಕುಮಾರ ಪಾರ್ಕಿಗೆ ( ನಮ್ಮ ಮುಂದಿನ ಓಣಿ ) ಪಾನ್ ತಿನ್ನಲಿಕ್ಕೆ ಹೋದರು, ಬರಬೇಕಾರ ನಳಾ ಬಿಡೋ ಬಸ್ಸ್ಯಾ ಸೈಕಲ್ ಮ್ಯಾಲೇ ಹೊಂಟಿದ್ದಾ,  ಆಚಾರ್ಯರು  ಅವನ್ನ ನೋಡಿದವರ  “ಏನಲೇ ಬಸ್ಸ್ಯಾ ಎಷ್ಟ ದಿವಸಾ ಆತೂ ನಳಾನ ಸರಿ ಬಿಡವಲ್ಲಿ. ನಿನ್ನೇ ಹತ್ತ ದಿವಸ ಆದ ಮ್ಯಾಲೇ ನಳಾ ಬಂದದ, ತಿಳಿತದ ಇಲ್ಲೋ”  ಅಂತ ಟಬರ್ ಮಾಡಿದರು, “ಎಲ್ಲೀದ್ರೀ ಸರ್, ಕುಮಾರ ಪಾರ್ಕ ಡ್ರೇನೇಜ್ ಪೈಪ ಒಡದ ನಳದ ಲೈನನಾಗ ಸೇರಿ ಬಿಟೈತಿ, ಅದ ಸರಿ ಆಗೋಮಟಾ ಬಿಡೋದಾ ಬ್ಯಾಡ ಅಂತ ಬಿಟ್ಟಿದ್ದೆ, ನಿನ್ನೆ ನಮ್ಮ ಸಾಹೇಬ್ರೂ ಯಾರೋ ಫೋನ್ ಮಾಡ್ಯಾರ ಅರ್ಜೇಂಟ ನೀರ ಬೇಕೂ ಅಂತ ನೀರ ಬಿಡಸ್ಯಾರ, ನೋಡ್ರಿ ಈಗ ಎಲ್ಲಾರ ಮನ್ಯಾಗೂ ಚರಂಡಿ ನೀರ ಹೋಗ್ಯಾವ ಎಲ್ಲಾರೂ ನಂಗ ಬಯಲಿಕತ್ತಾರ ” ಅಂದಾ.

ಬಾಯಾಗ ಹಾಕ್ಕೊಂಡಿದ್ದ ಸ್ವೀಟ ಕಿಮಾಮ ಪಾನ್ ಥೂ-ಥೂ ಅಂತ ಒಂದ ಹತ್ತ ಸಲಾ ಉಗಳಿ ಹಾಯಗ್ರೀವ್ ಆಚಾರ್ಯರು  ” ಹೌದೇನಲೇ ಬಸ್ಸ್ಯಾ, ಮತ್ತ್ ಛಲೋ ನೀರ ಯಾವಾಗ ಬಿಡತಿ?” ಅಂತ ಕೇಳಿ ಮತ್ತೋಮ್ಮೆ ಥೂ-ಥೂ ಅಂತ ರಸ್ತೆ ತುಂಬ ಉಗಳಿ ಮನಿಹಾದಿಹಿಡದ್ರು. ನಮ್ಮ ಪುಣ್ಯಾ ನಮ್ಮನೀ ನಳದ ಲೈನ್ ಮತ್ತ ಅವರ ಮನಿ ನಳದ ಲೈನ್  ಬ್ಯಾರೇ ಅದ.

ಅನ್ನಂಗ ಛಲೋ ನೆನಪಾತ ನೋಡ್ರಿ, ನಾಳೆ ಬೆಳಿಗ್ಗೆ ಎದ್ದ ಕೂಡಲೆ ಮೊದಲನೇ ಕೆಲಸ ಅಂದ್ರ ಆ ಬಸ್ಸ್ಯಾನ ಹುಡ್ಕೋದು, ಪ್ರತಿಸಲ ನಮಗ ಬೇಕಂದಾಗ ನಳಾ ಬಿಡಲಿಕ್ಕ ಒಂದ ೫೦ ರೂಪಾಯಿ ಕೊಡತಿದ್ದೆ, ಈ ಸಲಾ ಅವಂಗ ಹುಡಕಿ ಒಂದ ಐವತ್ತಲ್ಲಾ ನೂರ ಕೊಟ್ರೂ ಅಡ್ಡಿಯಿಲ್ಲಾ ಎರಡ ದಿವಸ ನೀರ ಬಿಡಬ್ಯಾಡಪಾ ಅಂತ ಹೇಳಿದ್ರಾತು. ನಾಳೇ ಏನರ ನಳಾ ಬಂದರ ಮುಗದ ಹೋತ ನನ್ನ ಕಥಿ, ಮುಂದ ನಾಲ್ಕ ವಾರ ನಮ್ಮವ್ವನ ಹಿಡಿಯೋ ಹಂಗಿಲ್ಲಾ, ನಾವ ಯಾರೂ ಅಕೀನ್ ಮುಟ್ಟೋಹಂಗಿಲ್ಲಾ.

 

.