ಗುಲಾಮನಾಗುವುದೆಂದರೆ….

ಗುಲಾಮನಾಗಿರುವುದು ಎಷ್ಟು ಸೊಗಸು !?
ನಿನ್ನ ಪಾದಗಳ ಬಳಿ ಕುಳಿತು
ವಿನಯಿಯಾಗುವುದು
ಮಧುಪಾತ್ರೆಗೆ ಬೇಡುವುದು ಚೆಂದ
ಬೇಗಂ

ಜೀವನವಿಡೀ ಗುಲಾಮನಾಗಿಯೇ ಇರುವೆ
ನೀ ಕನ್ನಡಿ ಎದುರು ವೈಯಾರದಿ ನಿಂತು
ಹೆರಳು ಚೆಲ್ಲಿ
ಕಿವಿಯೋಲೆ ಬಿಚ್ಚುತ್ತಾ ಅಣಿಯಾಗುವಾಗ
ನಾ ಮಗುವಿನಂತೆ ಸೆರಗು ಹಿಡಿದೇ
ಹಿಂದೆ ಸುತ್ತುವುದು
ನೆನೆದೇ ರೋಮಾಂಚಿತನಾಗುತ್ತೇನೆ

ನಿನ್ನ ಬಳಿ ಬೊಗಸೆಯೊಡ್ಡಿ ಬೇಡುವುದು
ಎಷ್ಟು ಸುಂದರ ಭಿಕ್ಷೆ

ಒಂದೇ ಒಂದು ಹನಿ ಪ್ರೀತಿಗಾಗಿ
ನಾನು ಭೂಮಿಗೆ ಇಳಿಯುವುದು
ಚೆಲುವಿನ ಚೆಲುವು

ನಿನಗೆ ಗುಲಾಮನಾಗುವುದೆಂದರೆ
ನಿನ್ನೊಳಗಿನ ಬೆಳಕೇ ನಾನಾಗುವುದು

ತುಟಿಗಳ ಬೆಸೆಯುವುದು
ಸಾಮಾನ್ಯವೇ ?!!!

ಗುಲಾಮನಾಗುವುದೆಂದರೆ
ಒಂದೇ ಜನ್ಮ ಸಾಲದು
ಎಷ್ಟು ಜನ್ಮಗಳನೆತ್ತಿದರೂ
ಸನಿಹಕೆ ಕಾಯುತ್ತಾ ಕುಳಿತುಕೊಳ್ಳುವೆ
ಬೆರಳ ಸಂಗೀತವ ಕೇಳುವೆ
ಧಮನಿಗೆ ಕಿವಿಯಾಗುವೆ
ಕಂಗಳಿಗೆ ಭಾಷ್ಯ ಬರೆಯುವೆ
ತುಟಿಗಳ ಮೇಲೆ ನದಿ ಹರಿಸುವೆ
ಎದೆಯ ಹಾಡಿಗೆ ಕಡಲ ಬಿತ್ತುವೆ

ನಡುವ ಬಯಲಿನಲ್ಲಿ ಜಿಂಕೆಗಳ ಚಂಚಲತೆಯ ನಿಲ್ಲಿಸುವೆ

ಗುಲಾಮನಾಗುವೆ ನಿನಗೆ
ನಿನ್ನ ಚರಣಗಳಿಗೆ ಹಣೆಯಿಕ್ಕುವೆ
ನಿನ್ನ ಹಣೆಗೆ ಚಂದ್ರ ಬಿಂಬವಾಗುವೆ