ಮಲ್ಲಿಕಾರ್ಜುನ ದೇವಾಲಯಕ್ಕೆ ಶಿಖರವಿಲ್ಲ. ರಾಮೇಶ್ವರ ಗುಡಿಗಿಂತ ವಿಸ್ತೀರ್ಣದಲ್ಲಿ ದೊಡ್ಡದಾದ ಈ ಗುಡಿ ನಕ್ಷತ್ರಾಕಾರದ ತಳಹದಿ ಹೊಂದಿದ್ದು ತೆರೆದ ಮಂಟಪದ ಕಕ್ಷಾಸನವೂ ನಕ್ಷತ್ರದ ಆಕಾರದಲ್ಲೇ ಮುಂದುವರೆದಿದೆ. ಮೂರು ಕಡೆ ತೆರೆದ ಬಾಗಿಲು. ಮುಂಭಾಗದ ಬಾಗಿಲಲ್ಲೇ ದೊಡ್ಡ ನಂದಿ ಶಿವನಿಗೆ ಅಭಿಮುಖನಾಗಿ ಕುಳಿತಿದ್ದಾನೆ. ನಂದಿಯ ಸಾಲಂಕೃತ ಶಿಲ್ಪ ಮುದ್ದಾಗಿದೆ. ನಂದಿಯ ಕಣ್ಣು, ಕಿವಿ, ಮುಖ, ಗಂಗೆದೊಗಲುಗಳ ಮೇಲೆ ಮೂಡಿಸಿರುವ ಗೆರೆಗಳು ವಿಶಿಷ್ಟವಾಗಿವೆ. ಕೊರಳ ಸರ, ಕಿರುಗಂಟೆಗಳ ಹಾರ ಆಕರ್ಷಕವಾಗಿದೆ. ಕಕ್ಷಾಸನದ ಕಿರುಗಂಬಗಳೂ ಮಂಟಪದ ದೊಡ್ಡಕಂಬಗಳೂ ವಿಭಿನ್ನ ಕೆತ್ತನೆಯ ವಿನ್ಯಾಸಗಳಿಂದ ಗಮನಸೆಳೆಯುತ್ತವೆ.
ಟಿ.ಎಸ್.‌ ಗೋಪಾಲ್‌ ಬರೆಯುವ ದೇಗುಲಗಳ ಸರಣಿಯ ಎಪ್ಪತ್ತೆಂಟನೆಯ ಕಂತು

 

ನಮ್ಮ ನಾಡಿನ ಯಾವುದೇ ಪುರಾತನ ದೇವಾಲಯವನ್ನು ನೋಡುವಾಗ ಅದು ಕೇವಲ ತತ್ಕಾಲದ ಒಂದು ಧಾರ್ಮಿಕ ಕ್ಷೇತ್ರವಾಗಿತ್ತೆಂದು ಭಾವಿಸುವುದು ತಪ್ಪಾಗುತ್ತದೆ. ಅಂತಹ ದೇವಾಲಯವು ತನ್ನ ನಿರ್ಮಾಣಕಾಲದ ರಾಜಕೀಯ, ಸಾಂಸ್ಕೃತಿಕ ಹಾಗೂ ಸಾಮಾಜಿಕ ಸಂದರ್ಭಗಳನ್ನೂ ಪ್ರತಿನಿಧಿಸುತ್ತಿರಬಹುದೆಂಬ ದೃಷ್ಟಿಯಿಂದ ನೋಡುವಾಗ ಅನೇಕ ಹೊಸ ಅಂಶಗಳನ್ನು ಅರಿತುಕೊಳ್ಳಲು ಸಾಧ್ಯವಾಗುತ್ತದೆ. ಇದಕ್ಕೆ ಪೂರಕವಾದ ಶಾಸನ ಮತ್ತಿತರ ದಾಖಲೆಗಳ ಪರಿಶೀಲನೆಯಿಂದ ಚರಿತ್ರೆಗೆ ಸಂಬಂಧಿಸಿದ ಅನೇಕ ವಿಷಯಗಳೂ ಮನದಟ್ಟಾಗುತ್ತವೆ.

ಶಿವಮೊಗ್ಗ ಜಿಲ್ಲೆಯ ಸಾಗರದ ಆಸುಪಾಸಿನಲ್ಲಿ ಹೀಗೆ ಅಂದಿನ ಚರಿತ್ರೆಯ ಮೇಲೆ ಬೆಳಕು ಚೆಲ್ಲುವ ಅನೇಕ ದೇವಾಲಯಗಳನ್ನು ಕಾಣಬಹುದು. ಇಂಥ ಕೇಂದ್ರಗಳಲ್ಲಿ ಕೆಳದಿ, ಇಕ್ಕೇರಿಗಳಂತೆ ಪ್ರಸಿದ್ಧಿ ಪಡೆದ ಊರುಗಳಲ್ಲದೆ ನಾಡಕಲಸಿಯಂತಹ ಅಜ್ಞಾತಗ್ರಾಮವೂ ಸೇರುತ್ತದೆ. ಸಾಗರದಿಂದ ಹತ್ತು ಕಿ.ಮೀ. ದೂರದಲ್ಲಿರುವ ಈ ಹಳ್ಳಿಯನ್ನು ಕೆಳದಿಯ ಕಡೆಯಿಂದಲೂ ತಲುಪಬಹುದು. ಇಂದಿಗೆ ಸಾಧಾರಣ ಗ್ರಾಮದಂತೆ ತೋರುವ ಈ ಪ್ರದೇಶವು ಒಂದು ಕಾಲಕ್ಕೆ ಕಲಸೆನಾಡು ಎಂದು ಪ್ರಸಿದ್ಧಿಪಡೆದ ಪ್ರಾಂತ್ಯದ ರಾಜಧಾನಿಯಾಗಿತ್ತು.


ಹನ್ನೆರಡನೆಯ ಶತಮಾನದಲ್ಲಿ ಈ ಪ್ರದೇಶವು ಹೊಯ್ಸಳರ ಆಧಿಪತ್ಯಕ್ಕೆ ಒಳಪಟ್ಟಿತ್ತು. ಕ್ರಿ.ಶ. 1218ರಲ್ಲಿ ಬಾಳೆಯಮ್ಮ ಪೆಗ್ಗಡೆಯೆಂಬ ಸ್ಥಳೀಯ ಅರಸನು ಇಲ್ಲಿ ದೇಗುಲಗಳನ್ನು ಕಟ್ಟಿಸಿದನು. ರಾಮೇಶ್ವರ ಹಾಗೂ ಮಲ್ಲಿಕಾರ್ಜುನ ದೇವರ ಈ ದೇಗುಲಗಳು ಅಕ್ಕಪಕ್ಕದಲ್ಲಿದ್ದು ಹೊಯ್ಸಳ ಶೈಲಿಯ ನಿರ್ಮಿತಿಗಳಾಗಿವೆ.

ಆವರಣದೊಳಗೆ ಕಾಲಿಟ್ಟೊಡನೆ ಕಾಣುವ ಗುಡಿ ರಾಮೇಶ್ವರ ದೇವರದು. ಪ್ರವೇಶದ್ವಾರದ ಸೋಪಾನದ ಅಕ್ಕಪಕ್ಕ ಒಂದೆಡೆ ಆನೆಯೂ ಇನ್ನೊಂದೆಡೆ ನಂದಿಯೂ ಇರುವುದನ್ನು ಕಂಡಾಗ ಆಶ್ಚರ್ಯವಾಗುತ್ತದೆ. ಆದರೆ ಅಲ್ಲಿರಬೇಕಾಗಿದ್ದ ಆನೆಯೊಂದು ಭಗ್ನವಾದ ಕಾರಣ ಖಾಲಿಯಿದ್ದ ಜಾಗದಲ್ಲಿ ಮತ್ತೆಲ್ಲೋ ಇದ್ದ ನಂದಿಯನ್ನು ಕರೆತಂದು ಕೂರಿಸಲಾಗಿದೆ, ಅಷ್ಟೆ. ಗುಡಿಯ ಕಕ್ಷಾಸನದ (ಒರಗು ಜಗಲಿ) ಹೊರಭಾಗದ ಪಟ್ಟಿಕೆಯ ಮೇಲೆ ಅನೇಕ ಮಿಥುನಶಿಲ್ಪಗಳಿರುವುದೊಂದು ವಿಶೇಷ. ಇದೇ ಪಟ್ಟಿಕೆಯಲ್ಲಿ ಜೀರ್ಕೊಳವೆಗಳನ್ನು ಹಿಡಿದು ಓಕುಳಿಯಾಡುತ್ತಿರುವ ಗೋಪಿಕೆಯರ ದೃಶ್ಯ ಮೋಹಕವಾಗಿದೆ.

ಆಯತಾಕಾರದ ಕಿರುಗೋಡೆ ಇಡಿಯ ಮುಖಮಂಟಪವನ್ನು ಸುತ್ತುವರೆದಿದೆ. ಕೆಳಭಾಗದ ಪಟ್ಟಿಕೆಗಳಲ್ಲಿ ಕಿರುಗೋಪುರಗಳನ್ನೂ ಕಂಬವಿನ್ಯಾಸಗಳನ್ನೂ ಮೂಡಿಸಿದೆ. ದೇಗುಲದೊಳಕ್ಕೆ ಕಾಲಿರಿಸಿದ ಕೂಡಲೇ ಶಿವನಿಗೆ ಅಭಿಮುಖನಾಗಿ ಕುಳಿತ ನಂದಿ ಕಾಣುತ್ತದೆ. ಸುತ್ತಲೂ ಒರಗುಜಗಲಿ. ಜಗುಲಿಯ ಮೇಲಿನ ಕಿರುಗಂಬಗಳೂ ನವರಂಗದ ಕಂಬಗಳೂ ತಿರುಗಣೆಯಿಂದ ಮಾಡಿದ್ದು ಅವುಗಳ ಮೇಲಿನ ಕೆತ್ತನೆ ಚಿತ್ತಾರಗಳು ಸೊಗಸಾಗಿವೆ.

ಶಿವಲಿಂಗವಿರುವ ಗರ್ಭಗುಡಿಯ ಸುತ್ತ ಕಿರಿದಾದ ಪ್ರದಕ್ಷಿಣಾಪಥವಿರುವುದು ವಿಶೇಷ. ಬೇರಾವ ಹೊಯ್ಸಳ ದೇಗುಲದಲ್ಲೂ ಈ ಮಾದರಿ ಕಾಣದು. ಹೊರಗಿನ ಕೋಷ್ಠದಲ್ಲಿ ಇರಿಸಿರುವ ಗಣೇಶ ಮತ್ತು ಮಾಧವನ ಮೂರ್ತಿಗಳು ಭಗ್ನವಾಗಿದ್ದರೂ ಸುಲಕ್ಷಣವಾಗಿವೆ. ದೇಗುಲಕ್ಕೆ ಏಳು ತಲದ ಮೆಟ್ಟಿಲುಮೆಟ್ಟಿಲಾದ ಶಿಖರವಿದ್ದು ಶುಕನಾಸಿಯ ಮುಂಭಾಗದಲ್ಲಿ ತಾಂಡವಶಿವನ ಮೂರ್ತಿ ಕಂಡುಬರುತ್ತದೆ.

ಮಲ್ಲಿಕಾರ್ಜುನ ದೇವಾಲಯಕ್ಕೆ ಶಿಖರವಿಲ್ಲ. ರಾಮೇಶ್ವರ ಗುಡಿಗಿಂತ ವಿಸ್ತೀರ್ಣದಲ್ಲಿ ದೊಡ್ಡದಾದ ಈ ಗುಡಿ ನಕ್ಷತ್ರಾಕಾರದ ತಳಹದಿ ಹೊಂದಿದ್ದು ತೆರೆದ ಮಂಟಪದ ಕಕ್ಷಾಸನವೂ ನಕ್ಷತ್ರದ ಆಕಾರದಲ್ಲೇ ಮುಂದುವರೆದಿದೆ. ಮೂರು ಕಡೆ ತೆರೆದ ಬಾಗಿಲು. ಮುಂಭಾಗದ ಬಾಗಿಲಲ್ಲೇ ದೊಡ್ಡ ನಂದಿ ಶಿವನಿಗೆ ಅಭಿಮುಖನಾಗಿ ಕುಳಿತಿದ್ದಾನೆ. ನಂದಿಯ ಸಾಲಂಕೃತ ಶಿಲ್ಪ ಮುದ್ದಾಗಿದೆ. ನಂದಿಯ ಕಣ್ಣು, ಕಿವಿ, ಮುಖ, ಗಂಗೆದೊಗಲುಗಳ ಮೇಲೆ ಮೂಡಿಸಿರುವ ಗೆರೆಗಳು ವಿಶಿಷ್ಟವಾಗಿವೆ. ಕೊರಳ ಸರ, ಕಿರುಗಂಟೆಗಳ ಹಾರ ಆಕರ್ಷಕವಾಗಿದೆ. ಕಕ್ಷಾಸನದ ಕಿರುಗಂಬಗಳೂ ಮಂಟಪದ ದೊಡ್ಡಕಂಬಗಳೂ ವಿಭಿನ್ನ ಕೆತ್ತನೆಯ ವಿನ್ಯಾಸಗಳಿಂದ ಗಮನಸೆಳೆಯುತ್ತವೆ.

ಗರ್ಭಗುಡಿಯಲ್ಲಿ ಸಪಾಟಾದ ನೆತ್ತಿಯ ಶಿವಲಿಂಗ. ಒಳಗುಡಿಯ ದೇವಕೋಷ್ಠಗಳಲ್ಲಿ ಗಣಪತಿ, ಮಹಿಷಮರ್ದಿನಿ, ವೀರಭದ್ರ ಹಾಗೂ ಸಪ್ತಮಾತೃಕೆಯರ ಮೂರ್ತಿಗಳಿವೆ. ಎಮ್ಮೆಯ ದೇಹದಿಂದ ನಿಜರೂಪದಲ್ಲಿ ಹೊರಬರುತ್ತಿರುವ ಅಸುರನನ್ನು ಕೊಲ್ಲುತ್ತಿರುವ ದುರ್ಗೆಯ ವಿಗ್ರಹ ತುಸುಭಗ್ನವಾಗಿದ್ದರೂ ಈ ಮಾದರಿಯ ಉತ್ತಮಶಿಲ್ಪವಾಗಿ ವ್ಯಕ್ತಪಡುತ್ತದೆ. ತಾವರೆಯ ಮೇಲೆ ಎಡಗಾಲು ಮಡಿಸಿಕೊಂಡು ಕುಳಿತ ಗಣೇಶನ ಪ್ರತಿಮೆ ಸುಂದರವಾಗಿದೆ.

(ಫೋಟೋಗಳು: ಲೇಖಕರವು)

ಸಪ್ತಮಾತೃಕೆಯರು ತಂತಮ್ಮ ವಾಹನಸಮೇತರಾಗಿ ಕುಳಿತಿರುವುದೊಂದು ವಿಶೇಷ. ಒಳಗುಡಿಯ ಬಾಗಿಲ ಪಕ್ಕದ ಲಂಬವಾದ ಜಾಲಂದ್ರದ ಮೇಲೆ ನರ್ತಕರು ಹಾಗೂ ವಾದ್ಯಗಾರರನ್ನು ಚಿತ್ರಿಸಲಾಗಿದ್ದು ಕಿಟಕಿಯು ವಿಶಿಷ್ಟ ಕೆತ್ತನೆಯಿಂದಾಗಿ ಸೊಗಸಾಗಿ ಕಾಣುತ್ತದೆ.


ದೇಗುಲದ ಹೊರಗೆ ಹಲವು ನಾಗರಕಲ್ಲು, ವೀರಗಲ್ಲುಗಳೂ ಇದ್ದು ಅಧ್ಯಯನಾಸಕ್ತರಿಗೆ ಉಪಯುಕ್ತ ಮಾಹಿತಿ ನೀಡಬಲ್ಲವು. ಸಾಗರದ ಆಸುಪಾಸಿನ ಕೆಳದಿ, ಇಕ್ಕೇರಿ, ವರದಹಳ್ಳಿ ಮೊದಲಾದ ಪ್ರಸಿದ್ಧ ತಾಣಗಳಿಗೆ ಭೇಟಿನೀಡುವವರು ಐತಿಹಾಸಿಕ ಮಹತ್ವದ ನಾಡಕಳಸಿಗೂ ಬಂದು ಇಲ್ಲಿನ ಪುರಾತನ ದೇಗುಲಗಳನ್ನು ವೀಕ್ಷಿಸುವರೆಂಬುದು ನಮ್ಮ ಆಶಯ.