ಸಂಗೀತ ಗಂಧರ್ವ ಲೋಕದ ಕೊಡುಗೆಯಿರಬೇಕು. ಯಾರದೇ ಮನಸು ಎಷ್ಟೇ ದುಃಖದಲ್ಲಿರಲಿ ಎಂಥದೇ ನೋವಿರಲಿ ಅದನ್ನು ಮಾಯಿಸುವ ಶಕ್ತಿ ಸಂಗೀತಕ್ಕಿದೆ. ಹಾಡುತ್ತಾ ಕುಳಿತರೆ ಪ್ರಪಂಚವೇ ಮರೆತು ಹೋಗುತ್ತದೆ. ಒಂದೊಂದು ರಾಗವೂ ವಿಶಿಷ್ಟ. ಕೆಲ ರಾಗಗಳಿಗೆ ರೋಗಗಳನ್ನು ವಾಸಿಮಾಡುವ ಚಿಕಿತ್ಸಕ ಶಕ್ತಿಯೂ ಇದೆ. ನನ್ನಿಷ್ಟದ ಬಹಳ ಚಂದದ ರಾಗಗಳ ದೊಡ್ಡದೊಂದು ಪಟ್ಟಿಯೇ ಇದೆ. ಜೀವನ್ ಪುರಿ, ಆಢಾಣ, ದರ್ಬಾರಿ ಕಾನಡಾ, ಪಹಾಡ್, ಬಿಹಾಗ್, ಶಿವರಂಜನಿ, ಮುಲ್ತಾನಿ, ಹಂಸಧ್ವನಿ, ಪೂರಿಯಾ, ಮದಮಾದ್ ಸಾರಂಗ, ಯಮನ್, ಮಧುವಂತಿ…. ಓಹ್ ಎಷ್ಟೆಲ್ಲಾ ಹೊನ್ನ ಜೇನಿನ ರಾಗಗಳು… “ದರಬಾರ ಕೋ ಆ ಮೋರಾ” ಎಂದು ಆಢಾಣದಲ್ಲಿ ಕರೆಯುತ್ತಿದ್ದರೆ ಯಾವ ನವಿಲಾದರೂ ಕುಣಿದು ಬರಬೇಕು…
ಆಶಾ ಜಗದೀಶ್ ಅಂಕಣ

 

ತೆಲುಗಿನ ‘ಸ್ವಾತಿ ಕಿರಣಂ’ ಒಂದು ಸಂಗೀತಮಯ ಚಿತ್ರ. ದ್ರೋಣಾಚಾರ್ಯರನ್ನು ತನ್ನ ಪರೋಕ್ಷ ಗುರುವೆಂದು ನಂಬಿದಂತಹ ಏಕಲವ್ಯನಂತೆ ಇಲ್ಲಿ ಗಂಗ ಎಂಬ ಸಾಧಕ ಶಿಷ್ಯ. ಇಲ್ಲಿಯೂ ಶಿಷ್ಯನನ್ನು ಬಲಿ ತೆಗೆದುಕೊಳ್ಳುವಂತಹ ದ್ರೋಣಾಚಾರ್ಯ ಗುರುವೊಬ್ಬ. ದ್ರೋಣಾಚಾರ್ಯರಿಗೆ ತಾವು ಅರ್ಜುನನಿಗೆ ಕೊಟ್ಟ ಮಾತನ್ನು ಉಳಿಸಿಕೊಳ್ಳುವ(ದ್ರೋಣಾಚಾರ್ಯರ ಶಿಷ್ಯನಿಗೆ ಪ್ರತಿಸ್ಪರ್ಧಿಯಾದನೆನ್ನುವುದಕ್ಕಿಂತಲೂ ಅವನಿಗಿಂತಲೂ ಪ್ರತಿಭಾವಂತನಾದುದೇ ಅವನು ತನ್ನ ಭವಿಷ್ಯವನ್ನು ಕಳೆದುಕೊಳ್ಳಲು ಕಾರಣವಾಯಿತಾ..) ಕಾರಣವಿತ್ತು. ಈರ್ಷೆ ಮತ್ತು ಪ್ರತಿಸ್ಪರ್ಧಿಯನ್ನು ಅಂತ್ಯಗೊಳಿಸಿಯಾದರೂ ತಾನು ಮೆರೆಯಬೇಕೆನ್ನುವ ಅರ್ಜುನನ ಹಪಾಹಪಿಯೂ ಇತ್ತು. ಸ್ವಾತಿ ಕಿರಣದಲ್ಲಿ ಗುರುವೇ ಶಿಷ್ಯನನ್ನು ಪ್ರತಿಸ್ಪರ್ಧಿಯಂತೆ ಕಾಣುವುದು ಈರ್ಷೆಯಿಂದ ಕುದಿಯುವುದು ದುರಂತ. ಕೊನೆಗೆ ಗಂಗನನ್ನು ಮಗನಂತೆ ಕಂಡ ಗುರುಪತ್ನಿ “ಗಂಗನಿ ಚಂಪಿಂದಿ ಆ ದೇವುಡಾ ಈ ದೇವುಡಾ..” ಎಂದು ಹುಚ್ಚಿಯಂತೆ ದೇವರ ಕಡೆಗೊಮ್ಮೆ ಗುರುವಿನ ಕಡೆಗೊಮ್ಮೆ ತೋರಿಸುತ್ತಾ ಒಬ್ಬೊಬ್ಬರನ್ನೇ ಕೇಳುವುದು ಕರುಳು ಹಿಂಡಿದಂತಿದೆ. ಅವನ ಸಾವಿನಿಂದ ಗುರುವಿಗೆ ಜ್ಞಾನೋದಯವಾಗುತ್ತದೆ. ಆದರೆ ಆತ್ಮಹತ್ಯೆ ಮಾಡಿಕೊಂಡ ಆ ಬಾಲ ಗಂಧರ್ವ, ಹುಟ್ಟು ಪ್ರತಿಭೆ (ನಟ- ಮಾಸ್ಟರ್ ಮಂಜುನಾಥ್) ಮಾತ್ರ ನಮ್ಮೊಳಗೊಂದು ಚಿರಂತನ ನೋವಾಗಿ ಉಳಿದುಕೊಂಡುಬಿಡುತ್ತಾನೆ.

ಇಂತಹ ಅದೆಷ್ಟೋ ಚಿತ್ರಗಳ ನೋಡಿದ ಅನುಭವದಲ್ಲಿ ಮನಸ್ಸು ಉಲ್ಲಸಿತವಾಗಿದೆ, ಭಾರವಾಗಿದೆ, ಕರಗಿ ಹೋಗಿದೆ. ಉಪಾಸನೆ, ಸಂಧ್ಯಾರಾಗ, ಹಂಸಗೀತೆ, ಮಲಯ ಮಾರುತ… ಇನ್ನೂ ಹಲವು ಸಂಗೀತವನ್ನು ಆಧರಿಸಿದ ಚಿತ್ರಗಳನ್ನು, ಕಾದಂಬರಿಗಳನ್ನು ನೋಡುವ ವಿಪರೀತ ಹುಚ್ಚಿತ್ತು ನನಗೆ. ಅವುಗಳನ್ನು ನೋಡಿದಾಗಲೆಲ್ಲ ರೋಮಾಂಚನವಾಗುತ್ತಿತ್ತು. ನಾನೂ ಅಂತಹ ಸಾಧನೆ ಮಾಡಬೇಕು ಅನಿಸುತ್ತಿತ್ತು. ಅದಕ್ಕಾಗಿಯೇ ನೋಡುತ್ತಿದ್ದೆ. ಅದು ಆ ಚಿತ್ರಗಳ ಶಕ್ತಿಯೂ ಹೌದು. ನೋಡಿದ ಒಂದಷ್ಟು ದಿನಗಳು ನನ್ನವಲ್ಲ.

ಚಲನಚಿತ್ರಗಳಷ್ಟೇ ಅಲ್ಲದೆ ಅನಕೃ ಅವರ ಸಂಧ್ಯಾರಾಗ (ಇದಕ್ಕೂ ಮೊದಲು ಸಂಗೀತವನ್ನು ಆಧರಿಸಿ ಉದಯರಾಗ ಎನ್ನುವ ಕಾದಂಬರಿ ಬರೆದಿದ್ದರು ಅನಕೃ) ಮತ್ತು ತರಾಸು ಅವರ ಹಂಸಗೀತೆ (ತರಾಸು ಅವರ ವೆಂಕಟಸುಬ್ಬಯ್ಯ ಸಹ ಅದ್ಭುತವಾದ ಕೃತಿ) ಎರಡೂ ನಾನು ಪ್ರೀತಿಯಿಂದ ಕೊಂಡು ತಂದು ಓದಿದ್ದ ಪುಸ್ತಕಗಳು. ಹಂಸಗೀತೆ ಓದುವಾಗ ಸಂಗೀತದ ಮತ್ತು ಸಂಗೀತಕಾರನ ಬಗ್ಗೆ ತರಾಸು ಕೊಡುವ ನಿಖರ ವಿವರಣೆಗಳು ಅದೆಷ್ಟು ಮನಮುಟ್ಟುತ್ತವೆ ಎಂದರೆ ಅವರ ಪರಕಾಯ ಪ್ರವೇಶಕ್ಕೆ ಮಾರುಹೋಗದೆ ಇರಲಾಗದು.

ಹಂಸಗೀತೆಯ ಕೆಲವು ಮಾತುಗಳನ್ನು ಕೇಳಿ,

“ವಿಚಾರದ ಹಾದಿಯಲ್ಲಿ ನಡೆದರೆ ವೇದಾಂತ, ಹಾಡಿನ ದಾರಿಯಲ್ಲಿ ನಡೆದರೆ ನಾದಾಂತ”

“ವೇದ ಬ್ರಹ್ಮ ನಾದ ಬ್ರಹ್ಮ ಎರಡೂ ಒಂದೇ…”

“ಕವಿಗೂ ಸಂಗೀತಗಾರನಿಗೂ ಮುಖ್ಯವಾಗಿ ಬೇಕಾದದ್ದು ಪ್ರತಿಭೆ, ಭಾವವನ್ನು ಅನುಭವಿಸುವ ಪ್ರತಿಭೆ, ಭಾವವನ್ನು ಪ್ರಕಾಶಗೊಳಿಸುವ ಪ್ರತಿಭೆ. ಪ್ರತಿಭೆಗೆ ಶಾಸ್ತ್ರಜ್ಞಾನವಿದ್ದರೆ ವಜ್ರಕ್ಕೆ ಕುಂದಣ ಇಟ್ಟಂತೆ. ಕುಂದಣವಿಲ್ಲದೇ ವಜ್ರ ಹೊಳೆಯುವುದಿಲ್ಲವೇ ಹಾಗೆ ಶಾಸ್ತ್ರಜ್ಞಾನವಿಲ್ಲದೆಯೂ ಪ್ರತಿಭೆ ಹೊಳೆಯುತ್ತದೆ. ಆದರೆ ಹಾಗೆಂದು ಶಾಸ್ತ್ರವನ್ನು ತಳ್ಳಲಾಗದು.”

ಇಂತಹ ಅಸಂಖ್ಯ ತಪೋ ಮಂಥನ ಮಾಡಬೇಕಾದ ವಿಚಾರಗಳು ಈ ಕಾದಂಬರಿಯ ತುಂಬಕ್ಕೂ ಹರಡಿಕೊಂಡಿವೆ.

ಇನ್ನು ಸಂಧ್ಯಾರಾಗ ಚಲನಚಿತ್ರದ ಭೀಮಸೇನ ಜೋಶಿ, ಬಾಲಮುರಳಿ ಕೃಷ್ಣ ಮತ್ತು ಎಸ್.ಜಾನಕಿಯವರು ಹಾಡಿರುವ ಹಿಂದೂಸ್ಥಾನಿ ಮತ್ತು ಕರ್ನಾಟಿಕ್ ಎರಡೂ ಶೈಲಿಯ ಒಂದೇ ಚಿತ್ರದ ಮೂರೂ ಭಿನ್ನ “ನಂಬಿದೇ… ನಿನ್ನ ನಾದ ದೇವತೆಯೇ.. ಅಭಿಮಾನ ಪಡೆದ ತಾಯೇ ಭಾರತಿಯೇ…” ಎನ್ನುವ ಸುಶ್ರಾವ್ಯ ಗೀತೆಯನ್ನು ಕೇಳದ, ಗುನುಗದ ಹೃದಯಗಳಿರಲಿಕ್ಕೆ ಸಾಧ್ಯವೇ… ಅದೆಷ್ಟು ಚಂದದ ಗೀತೆ ಅದು. ಮಹಾನ್ ಗಾಯಕರ ದನಿಗಳಿಂದಾಗಿ ಇನ್ನಿಲ್ಲದಂತೆ ಸಾರ್ಥಕವಾಗಿಬಿಟ್ಟಿದೆ.

ಹೀಗೆ ಹುಚ್ಚು ಹಿಡಿದವಳಂತೆ ಇಂತಹ ಕತೆಗಳಲ್ಲಿ ನನ್ನನ್ನು ನಾನು ಕಂಡುಕೊಳ್ಳುತ್ತಾ ಹುಡುಕಿಕೊಳ್ಳುತ್ತಾ ಸಮೀಕರಿಸಿಕೊಳ್ಳುತ್ತಿದ್ದರ ಹಿಂದಿನ ಕಾರಣವೆಂದರೆ ನನಗೆ ಸಂಗೀತದಲ್ಲಿದ್ದ ಆಸಕ್ತಿ, ಪ್ರೀತಿ ಮತ್ತು ಗಾಯನ ಶಕ್ತಿ.

ಕೇಳುವವರು ಇಷ್ಟಪಡುವಂತ ದನಿ ಇತ್ತು ನನಗೆ. ಚಿಕ್ಕಂದಿನಿಂದಲೂ ಶಾಲೆಯ ಅಷ್ಟೂ ಹಾಡಿನ ಚಟುವಟಿಕೆಗಳಲ್ಲಿ ನಾನಿರುತ್ತಿದ್ದೆ. ಒಮ್ಮೆ ಸಂಗೀತ ತರಗತಿಗೆ ಸೇರಿ ಬಿಟ್ಟದ್ದೂ ಆಯಿತು. ಬಲವಂತ ಮಾಡಿ ಕಳಿಸುವಷ್ಟು ಆಸಕ್ತಿ ಮನೆಯಲ್ಲಿ ಯಾರಿಗೂ ಇರಲಿಲ್ಲ. ಆದರೆ ಹಾಡು ನನ್ನೊಳಗೆ ಮೊಟ್ಟೆ ಇಟ್ಟಿತು…. ಮರಿ ಮಾಡಿತು…. ರೆಕ್ಕೆ ಬಲಿತು ಒಂದಿನ ಹೊರಕ್ಕೆ ಹಾರಿಯೂ ಬಿಟ್ಟಿತು… ನನಗೆ ನನ್ನೊಳಗಿನ ಹಾಡುಗಾರ್ತಿಯ ಗುರುತು ಸಿಕ್ಕಿತ್ತು. ಅದು ಸಿಕ್ಕದ್ದು ನನ್ನ ಗೆಳತಿಯರಿಂದ.

ಸಂಗೀತವನ್ನು ಆಧರಿಸಿದ ಚಿತ್ರಗಳನ್ನು, ಕಾದಂಬರಿಗಳನ್ನು ನೋಡುವ ವಿಪರೀತ ಹುಚ್ಚಿತ್ತು ನನಗೆ. ಅವುಗಳನ್ನು ನೋಡಿದಾಗಲೆಲ್ಲ ರೋಮಾಂಚನವಾಗುತ್ತಿತ್ತು. ನಾನೂ ಅಂತಹ ಸಾಧನೆ ಮಾಡಬೇಕು ಅನಿಸುತ್ತಿತ್ತು. ಅದಕ್ಕಾಗಿಯೇ ನೋಡುತ್ತಿದ್ದೆ. ಅದು ಆ ಚಿತ್ರಗಳ ಶಕ್ತಿಯೂ ಹೌದು.

ಯಾರೆಂದು ಹೆಸರಿಸಲಿ… ಎಷ್ಟೊಂಜನ… ನನ್ನ ಬಾಲ್ಯ ಸ್ನೇಹಿತರು ಮತ್ತು ಡಯಟ್ ಸ್ನೇಹಿತೆಯರು. ಅದೆಷ್ಟು ನನ್ನ ಹಾಡನ್ನು ಪ್ರೀತಿಸುತ್ತಿದ್ದರು… ನಾನೇನು ಮಹಾನ್ ಗಾಯಕಿ ಆಗಿರಲಿಲ್ಲ. ನನ್ನ ಯೋಗ್ಯತೆಯ ಅರಿವು ನನಗಿತ್ತು. ಆದರೆ ಅವರ ಪ್ರೀತಿ ಅಪಾರ. ಡಯಟ್ ಕೋಗಿಲೆ ಅನಿಸಿಕೊಂಡಲ್ಲಿಂದ ಕೆಲಸಕ್ಕೆ ಸೇರಿದ ಮೇಲೆ ಗುಡಿಬಂಡೆ ಕೋಗಿಲೆ ಅನಿಸಿಕೊಂಡಲ್ಲಿಯವರೆಗೂ… ಮುಂದುವರಿದ ಆ ಪ್ರೀತಿಯನ್ನು ಮರೆಯಲಾರೆ.

ಸಮುದ್ರ ಮಂಥನವಾದಾಗ ಅಮೃತದ ಜೊತೆಗೆ ವಿಷವೂ ಹೊರಬಂದಿತಂತೆ. ಹಾಗೆ ಪ್ರೀತಿಯ ಜೊತೆಗೆ ಕೆಲವರ ಈರ್ಷೆಯೂ ಸಿಕ್ಕಿತು. ಆದರೆ ಎಷ್ಟೆಲ್ಲ ಚಂದದ ಅನುಭವಗಳನ್ನು ಕೊಟ್ಟಿತು ಈ ಹಾಡು… ದ್ವೇಷವನ್ನು ಕಾಣಲಾಗದಷ್ಟು ಪ್ರೀತಿಯನ್ನು ತುಂಬಿಬಿಟ್ಟಿತು.

ನಾನು ಪರಿತಪಿಸಿ ಹುಡುಕಿದ ಸಂಗೀತ ಗುರುಗಳು ನನಗೆ ಸಿಕ್ಕಿದರು. ಹಿಂದೂಸ್ಥಾನಿ ಸಂಗೀತದ ‘ಸಾಪಾಸಾ’ ವನ್ನು ಕಲಿಯಲು ಶುರು ಮಾಡಿದಾಗ ನನ್ನಲ್ಲಿದ್ದ ನಾನು ಹಾಡುತ್ತೇನೆ ಎಂಬ ಸಣ್ಣ ಜಂಭ ಆವಿಯಾಯಿತು. ಮೊಟ್ಟ ಮೊದಲ ಬಾರಿ ಸಂಗೀತ ತರಗತಿಗೆ ಹೋದಾಗ ನಿಜಕ್ಕೂ ನನ್ನ ಗುರುಗಳು ಚಂದ ಹಾಡ್ತಿ ಹಾಗೆ ಹೀಗೆ ಅಂತ ಹೇಳಿ ಉಬ್ಬಿಸಿಬಿಟ್ಟಿದ್ದರು. ಆದರೆ ಎರಡನೇ ದಿನದಿಂದ ಶುರುವಾಯ್ತು ನೋಡಿ… ಶ್ರುತಿ ಸೇರ್ತಿಲ್ಲ, ತಾಳ ತಪ್ತಿದೆ ಹೀಗೆ… ನನಗೆ ಶ್ರುತಿ ಅಂದರೇನು ತಾಳ ಅಂದರೇನು ಎಂದು ಗೊತ್ತಾಗ್ಲಿಕ್ಕೇ ಹದಿನೈದು ದಿನ ಬೇಕಾಯ್ತು. ನಂತರ ಸರಳ ವರಸೆ, ಜಂಟಿ ವರಸೆ, ಅಲಂಕಾರಗಳು ಸುಲಲಿತವಾದವು. ಎಲ್ಲ ಮುಗಿದು ರಾಗ ಶುರುವಾದಾಗ ಸ ರಿ ಗ ಮ ಪ ದ ನಿ ಎನ್ನುವ ಶುದ್ಧ ಸ್ವರಗಳ ಜೊತೆಗೆ ಕೋಮಲ ಗ ದ ನಿ ಮತ್ತು ತೀವ್ರ ಮ ಗಳ ಪರಿಚಯವಾಗಿ ಅವುಗಳನ್ನು ಗುರುತಿಸಲಿಕ್ಕೆ ಹಾಡಲಿಕ್ಕೆ ಕಲಿಯಲು ಮತ್ತೊಂದಿಷ್ಟು ದಿನಗಳ ತಪಸ್ಸು….

(ತಾನಸೇನರು)

ಸರಿ ಇವಿಷ್ಟೂ ಆಯಿತು. ನಂತರ ರಾಗ, ಆರೋಹ, ಅವರೋಹ, ಪಕ್ಕಡ್, ಸ್ವರ ಪ್ರಸ್ತಾರ, ಔಡವ, ಷಾಡವ, ಸಂಪೂರ್ಣ… ಇತ್ಯಾದಿ ಇತ್ಯಾದಿ ಮಾಹಿತಿಗಳ ತಿಳಿದು ಕಲಿತು ಹಾಡಲು ಶುರುಮಾಡಿದರೆ ಸ್ವರ ಹಾಡಲು ಬರುತ್ತಿದೆ ಆದರೆ ಅವುಗಳ ತಾನ್ ಬರುತ್ತಲೇ ಇಲ್ಲ! ಧ್ವನಿಯನ್ನು ತಾನ್ ಗೆ ಒಗ್ಗಿಸಲು ಕಾಳು ಮೆಣಸು, ಜೇಷ್ಠಮಧು ತಿಂದು, ಉಪ್ಪು ನೀರನ್ನು ಗಾಗಲ್ ಮಾಡಿ ಎಷ್ಟೆಲ್ಲ ಕಷ್ಟಪಟ್ಟು, ಒಂದು ಶುಭದಿನ ಧ್ವನಿಗೆ ತಾನ್ ಹಾಡುವ ಶಕ್ತಿ ಬಂದಾಗ ಓಹ್ ಅದೆಂಥಾ ಆನಂದ ಅದು… ಆದರೂ ಅದು ಗಂಟಲಿನಲ್ಲಿ ಸ್ಥಿರಗೊಳ್ಳಲು ಒಂದಷ್ಟು ಹೆಚ್ಚೇ ಸಮಯ ತೆಗೆದುಕೊಳ್ಳುತ್ತದೆ. ಒಮ್ಮೊಮ್ಮೆ ಚಂದ ಪ್ರಾಕ್ಟೀಸ್ ಮಾಡಿಕೊಂಡು ಹೋಗಿದ್ದರೂ ಗುರುಗಳ ಮುಂದೆ ಹಾಡಲು ಕುಳಿತಾಗ ಒಂದೂ ತಾನ್ ನೆಟ್ಟಗೆ ಬರದೆ ಧ್ವನಿ ಸಪಾಟಾಗಿ ಅದೆಷ್ಟು ಅವಮಾನ! ತುಂಬಿದ ಕಣ್ಗಳ ಅಡಗಿಸಲಾಗದೆ ಅತ್ತದ್ದು… ಅವತ್ತೆಲ್ಲ ಎಂಥದೋ ಕಳೆದುಕೊಂಡ ಭಾವ. ಮರುದಿನ ಹೇಗಾದರೂ ಶತಾಯ ಗತಾಯ ಚಂದ ಹಾಡಿ ಬಂದರೇ ಮನಸಿಗೆ ನೆಮ್ಮದಿ…

ಸಂಗೀತ ಗಂಧರ್ವ ಲೋಕದ ಕೊಡುಗೆಯಿರಬೇಕು. ಯಾರದೇ ಮನಸು ಎಷ್ಟೇ ದುಃಖದಲ್ಲಿರಲಿ ಎಂಥದೇ ನೋವಿರಲಿ ಅದನ್ನು ಮಾಯಿಸುವ ಶಕ್ತಿ ಸಂಗೀತಕ್ಕಿದೆ. ಹಾಡುತ್ತಾ ಕುಳಿತರೆ ಪ್ರಪಂಚವೇ ಮರೆತು ಹೋಗುತ್ತದೆ. ಒಂದೊಂದು ರಾಗವೂ ವಿಶಿಷ್ಟ. ಕೆಲ ರಾಗಗಳಿಗೆ ರೋಗಗಳನ್ನು ವಾಸಿಮಾಡುವ ಚಿಕಿತ್ಸಕ ಶಕ್ತಿಯೂ ಇದೆ. ನನ್ನಿಷ್ಟದ ಬಹಳ ಚಂದದ ರಾಗಗಳ ದೊಡ್ಡದೊಂದು ಪಟ್ಟಿಯೇ ಇದೆ. ಜೀವನ್ ಪುರಿ, ಆಢಾಣ, ದರ್ಬಾರಿ ಕಾನಡಾ, ಪಹಾಡ್, ಬಿಹಾಗ್, ಶಿವರಂಜನಿ, ಮುಲ್ತಾನಿ, ಹಂಸಧ್ವನಿ, ಪೂರಿಯಾ, ಮದಮಾದ್ ಸಾರಂಗ, ಯಮನ್, ಮಧುವಂತಿ…. ಓಹ್ ಎಷ್ಟೆಲ್ಲಾ ಹೊನ್ನ ಜೇನಿನ ರಾಗಗಳು… “ದರಬಾರ ಕೋ ಆ ಮೋರಾ” ಎಂದು ಆಢಾಣದಲ್ಲಿ ಕರೆಯುತ್ತಿದ್ದರೆ ಯಾವ ನವಿಲಾದರೂ ಕುಣಿದು ಬರಬೇಕು… “ಕೈಸೇ ಕಹೂ ಸಜನಿ, ಅಪನೆ ಮನಕಿ ಬತಿಯಾ” ಎನ್ನುವ ಪ್ರಿಯನ ಅಳಲು ಪ್ರಿಯರು ಎದೆ ತಾಕುತ್ತದೆ. ಹಿಂದೆಲ್ಲಾ ಮೇಘ ರಾಗವನ್ನು ಹಾಡಿ ಮಳೆ ತರಿಸುತ್ತಿದ್ದರಂತೆ, ದೀಪಕ್ಕೆ ರಾಗವನ್ನು ಹಾಡಿ ದೀಪವನ್ನು ಹೊತ್ತಿಸುತ್ತಿದ್ದರಂತೆ. ಅವರ ಸಾಧನೆ ಇನ್ನೆಷ್ಟು ಅಲೌಕಿಕವಾಗಿದ್ದಿರಬಹುದು…..

ಒಮ್ಮೆ ತಾನಸೇನರು ದೀಪಕ ರಾಗವನ್ನು ಹಾಡಿದಾಗ ಇಡೀ ವಾತಾವರಣದ ಉಷ್ಣತೆಯೇ ಹೆಚ್ಚಾಗಿ ಅವರು ಮರಣಿಸಿಬಿಡುವಷ್ಟು ವಿಷಮ ಪರಿಸ್ಥಿತಿ ಉಂಟಾಗಿತ್ತಂತೆ. ಆಗ ಅವರ ಮಗಳು ಮೇಘಾ ರಾಗವನ್ನು ಹಾಡಿ ಮಳೆ ತರಿಸಿದಳಂತೆ. ಅಂತೂ ತಾನಸೇನರು ಬದುಕುಳಿದರು. ಸವಾಯಿ ಗಂಧರ್ವರ ನಿಜ ನಾಮ ಅಂತಿದ್ದರೂ ಅವರ ಗಾಯನಕ್ಕೆ ಮನಸೋತ ಜನ ಅವರನ್ನು ಗಂಧರ್ವ ಎಂದು ಕರೆದರಂತೆ… ಈ ಎಲ್ಲ ಅದ್ಭುತಗಳನ್ನು ತಿಳಿಯುತ್ತಾ ಹೋದಂತೆ ಒಂದು ರೀತಿಯ ವೈರಾಗ್ಯ ಭಾವ ನನ್ನನ್ನು ಕವಿಯುತ್ತಿತ್ತು. ನಾನೆಷ್ಟು ಕ್ಷುಲ್ಲಕದವಳು ಅನಿಸಿಬಿಡುತ್ತಿತ್ತು. ಇಲ್ಲಿ ಏನೇ ಮಾಡುವುದು ಅತ್ಯಲ್ಪವೇ, ಅಲೌಕಿಕ ಜ್ಞಾನಕ್ಕಾಗಿ ಮಾಡುವುದರ ಮುಂದೆ ಎನಿಸಿ ಕಣ್ಣು ತುಂಬುತ್ತಿತ್ತು. ಒಮ್ಮೊಮ್ಮೆ ಎಲ್ಲವನ್ನೂ ತ್ಯಜಿಸಿ ಶ್ರುತಿ ಹಿಡಿದು ತಂಬೂರಿ ಮೀಟುತ್ತಾ ಕೂತುಬಿಡಬೇಕು ಎನಿಸಿಬಿಡುತ್ತಿತ್ತು…

ಗದುಗಿನ ಪುಟ್ಟರಾಜ ಗವಾಯಿಗಳ ಪುಣ್ಯಾಶ್ರಮಕ್ಕೆ ಹೋಗಿದ್ದಾಗ ಬಹಳ ಹಿತವೆನಿಸಿತ್ತು ಆ ಅನುಭವ. ತಪೋಭೂಮಿಯಂತಿದ್ದ ಆ ನೆಲದ ಮೇಲೆ ಪಂಚಾಕ್ಷರಿ ಗವಾಯಿಗಳು ಓಡಾಡಿದ್ದರು. ನನ್ನ ಪುಣ್ಯ, ಅಂದು ಪುಟ್ಟರಾಜ ಗವಾಯಿಯವರನ್ನು ಕಂಡು ಅವರ ಪಾದ ಮುಟ್ಟಿ ನಮಸ್ಕರಿಸಿ ಬಂದದ್ದು. ಪುಣ್ಯಾಶ್ರಮದ ಸುತ್ತ ಅಷ್ಟ ದಿಕ್ಕುಗಳಿಂದಲೂ ಅಹತ ಅನಾಹತ ನಾದಗಳು ಹೊಮ್ಮಿ ಬರುತ್ತಿವೆಯೇನೋ ಎನ್ನಿಸುತ್ತಿತ್ತು. ಎಲ್ಲಿ ನೋಡಿದರೂ ಯಾವುದೋ ಒಂದು ವಾದ್ಯದ ತಂತಿ ಮಿಡಿಯುತ್ತಲೇ ಇರುತ್ತಿತ್ತು. ಅಗಣಿತ ಕಂಠಗಳು ನಾದದ ಉಪಾಸನೆಯಲ್ಲಿ ಲೋಲುಪ್ತವಾಗಿದ್ದವು. ನನಗಲ್ಲೊಮ್ಮೆ ಲೀನವಾಗಿಬಿಡುವ ಆಕಾಂಕ್ಷೆ ಪುಟಿಯುತ್ತಿತ್ತು… ಅಲ್ಲಿಂದ ಹೊರ ಬರುವಾಗ ಕಣ್ಣಲ್ಲಿ ನೀರಿತ್ತು… ಮತ್ತೆಲ್ಲವೂ ಪದಗಳಾಗದ ಅವರ್ಣನೀಯ ಆನಂದವಷ್ಟೇ…

ಹೀಗೆ ಪಂಚಪ್ರಾಣದಂತೆ ಕಲಿತ ವಿದ್ಯೆಯನ್ನು ಪೂರ್ಣಗೊಳಿಸಲಾಗದಿದ್ದಾಗ ಅದೆಷ್ಟು ವ್ಯಥೆಯಾಗಿತ್ತು ನನಗೆ. ಒಂದು ಬದಿ ನೌಕರಿ ಇನ್ನೊಂದು ಬದಿ ಸಂಗೀತ… ನೌಕರಿಯನ್ನು ಆರಿಸಿಕೊಂಡು ಅರಸಿ ಹೊರಟಾಗ ಮರುಗಿದ್ದು ನಾನು, ಸೊರಗಿದ್ದು ನನ್ನ ಸಂಗೀತಾಭ್ಯಾಸ… ಅಲ್ಲಿಗೆ ಎಲ್ಲವೂ ತುಂಡಾಯಿತು. ನಾನು ಸಂಗೀತದ ಭಗ್ನಪ್ರೇಮಿಯಾಗುಳಿದೆ. ಅದೆಷ್ಟೋ ಬಾರಿ ಹೃದಯ ವಿದ್ರಾವಕವೆನಿಸುವಷ್ಟು ಅತ್ತಿದ್ದೇನೆ. ರಾತ್ರಿಗಳ ಕರಾಳ ಏಕಾಂತದಲ್ಲಿ ಚಿತ್ರಹಿಂಸೆಯಾಗುವಷ್ಟು ನೊಂದಿದ್ದೇನೆ. ಆ ನೋವನ್ನು ಮರೆಯಲಿಕ್ಕೆ ಹೆಚ್ಚು ಹೆಚ್ಚು ಓದಲು, ಬರೆಯಲು ಶುರು ಮಾಡಿದೆ ಅನಿಸುತ್ತದೆ…
(ಮುಂದುವರಿಯುತ್ತದೆ)