ಅದೆಷ್ಟು ಕಣ್ಣೀರು ಹೀಗೇ ಇಂಗಿಹೋಗಿವೆ, ಕಣ್ಣಾಲಿಯ ಒಳಗೇ ಒಣಗಿಹೋಗಿವೆ? ದೇವಸಾಗರದ ಜನ ಕರೆಯುವಂತೆ ಗೋಪಜ್ಜ ಆಗ ಗೋಪಜ್ಜನಾಗಿರಲಿಲ್ಲ. ದೇವರಕೆರೆಯ ಬಿಷ್ಟಪ್ಪನ ಮಗ ಗೋಪಾಲ ಆಗ ಹದಿಹರೆಯದ ಹುಡುಗ. ದೇವರಕೆರೆಯ ತೋಡಿನಿಂದ ಹರಿದ ನೀರನ್ನ ಕಟ್ಟಿಹಾಕಿ, ಒಂದೇ ರಾತ್ರಿಯಲ್ಲಿ ಹೊಲದ ಬದುವಿಗುಂಟ ಹರಿಸಿ, ಇಡೀ ಹೊಲ ನಳನಳಿಸುವಂತೆ ಮಾಡುವ ಕಸುವಿನವ!
‘ನಾನು ಮೆಚ್ಚಿದ ನನ್ನ ಕಥೆʼಯ ಸರಣಿಯಲ್ಲಿ ಆನಂದ ಋಗ್ವೇದಿ ಬರೆದ ಕಥೆ ಹೊತ್ತು ಮುಳುಗಿದ ಹೊತ್ತು ‘

 

“ಚೆಕ್‍ ಡ್ಯಾಂನಲ್ಲಿ ನೀರು ಕಮ್ಮಿಯಾಗಿ ದೇವರಕೆರೆ, ಮತ್ತೆ ಆ ವೇಣುಗೋಪಾಲಸ್ವಾಮಿ ದೇವಸ್ಥಾನ ಕಾಣಿಸ್ತಿದಾವಂತೆ” ಎಂಬ ಮಾತು ದೇವಸಾಗರ ಎಂಬ ಆ ಊರ ಮನೆಮನೆಗಳಲ್ಲಿ, ಎಲ್ಲರ ಕಿವಿಗಳಲ್ಲಿ ಮೊಳಗಿ…. ಆ ದನಿ ಪೇಪರ್‍ ನವರಿಗೂ ತಲುಪಿ ಆ ಪ್ರದೇಶಕ್ಕೇ ದೊಡ್ಡ ಸುದ್ದಿಯಾಗಿತ್ತು.

ಈಗ್ಗೆ ನಲವತ್ತು ವರ್ಷಗಳ ಕೆಳಗೆ ತುಂಗಭದ್ರಾ ನದಿಗೆ ಅಡ್ಡಲಾಗಿ ಒಂದು ಚೆಕ್‍ ಡ್ಯಾಂ ಕಟ್ಟಿಸಬೇಕು ಅಂತ ಯೋಜನೆ ಹುಟ್ಟಿ, ಅದಕ್ಕೆ ನದಿ ಹರಿದು ಬರುವ ದಾರಿಯಲ್ಲಿ ಪುಟ್ಟ ಗುಡ್ಡದ ಬದಿಯಲ್ಲಿರುವ ಈ ತಗ್ಗಿನ ಪ್ರದೇಶವೇ ಸೂಕ್ತ ಎಂದು ನಿರ್ಧರಿಸಿ – ಚೆಕ್‌ ಡ್ಯಾಂ ಕಟ್ಟಿಸಿದಾಗ ಅದರಲ್ಲಿ ಈ ಕೆರೆಕಟ್ಟೆ, ಅದರ ಬದಿಯಲ್ಲಿದ್ದ ಪುರಾತನ ವಾಸ್ತುಶಿಲ್ಪದ ವೇಣುಗೋಪಾಲಸ್ವಾಮಿ ದೇವಾಲಯ ಎಲ್ಲಾ ಮುಳುಗಿ ಹೋಗಿದ್ದುವು. ಎಂದೂ ಬತ್ತದ ನೀರಿನ ಒರತೆಯ ಆ ಕೆರೆ – ಅದ್ಯಾವುದೋ ಡಣಾಯಕ ಕಟ್ಟಿಸಿದ್ದಂತೆ – ದೇವರ ಕೆರೆ ಎಂದೇ ಪ್ರಸಿದ್ಧವಾಗಿತ್ತು. ಅದರ ಬದಿಯ ದೇವಾಲಯಕ್ಕೆ ದೊಡ್ಡ ಹೆಸರೇ ಇತ್ತು. ವರ್ಷಕ್ಕೊಮ್ಮೆ ನಡೆಯುವ ತೆಪ್ಪೋತ್ಸವ, ನವರಾತ್ರಿಯ ದೀಪೋತ್ಸವಕ್ಕೆ ಆ ಪ್ರದೇಶದ ನೂರಾರು ಹಳ್ಳಿಯ ಜನ ಬಂದು ಸೇರುತ್ತಿದ್ದರು. ವೈಕುಂಠ ಏಕಾದಶಿ ಮರುದಿವಸ ನಡೆಯೋ ವೇಣುಗೋಪಾಲಸ್ವಾಮಿ ತೇರಿಗೆ ಬಂದು ಸಾವಿರಾರು ಜನ ತೇರಿನ ಹಗ್ಗ ಎಳೆದು ಹರಕೆ ತೀರಿಸೋರು. ಕೊಳಲು ಹಿಡಿದ ಮೂರಡಿ ಎತ್ತರದ ಬಾಲಗೋಪಾಲ ವಿಗ್ರಹಕ್ಕೆ – ಅದ್ಯಾವುದೋ ರಾಜರ ಕಾಲದ ಆಭರಣಗಳೆಲ್ಲಾ ಕಾಲಾಂತರದಲ್ಲಿ ಕರಗಿ- ಬರಿಯ ಹೂವಿನ ಅಲಂಕಾರ ಮಾಡಿದರೂ ತುಂಬಾ ಮುದ್ದಾಗಿ ಕಾಣುತ್ತಿದ್ದ ಆ ಬಾಲಕೃಷ್ಣನ ನೆನೆದೇ ಅದೆಷ್ಟೋ ಬಸಿರಿ ಹೆಂಗಸರು ಗಂಡು ಮಗುವನ್ನು ಹೆತ್ತದ್ದಂತೆ! ಇಂತಹ ನೂರಾರು ನೆನಪಿನೆಳೆಗಳ ಇತಿಹಾಸದ ಹಾಳೆಯಲ್ಲಿ ಹುದುಗಿ ಹೋಗಿದ್ದ ಆ ದೇವಾಲಯ ಮತ್ತೆ ನೀರಿನಿಂದ ಮೇಲೆದ್ದು ತೋರುತ್ತಿದ್ದುದು ಆ ಬರಗಾಲದಲ್ಲೂ ಜನರ ಮನಸ್ಸಿಗೆ ಮುದ ನೀಡಿದಂತಿತ್ತು.

ಮುಳುಗಿದ್ದ ದೇವಾಲಯದ ಗೋಪುರ, ಅದರ ಪೌಳಿ ಕಾಣಿಸ್ತಿದೆ ಎಂದಾಗ ಎಲ್ಲರೊಳಗೂ ಮೂಡಿದ್ದ ಕುತೂಹಲ ಮೂಡದ ಗೋಪಜ್ಜ, ಅದೇ ದೇವಸ್ಥಾನದ ಎದುರಿನಲ್ಲಿ ಬೋಳು ಮರದ ಬೊಡ್ಡೆ ಮತ್ತು ಅದರಡಿಯ ಕಟ್ಟೆ ಕಾಣಿಸ್ತಿದಾವೆ ಎಂದ ಕೂಡಲೇ ಪುಳಕಗೊಂಡಂತೆ ಎದ್ದು ಕೂತ.

“ಯಾನು? ಆ ಗುಡೀ ಹತ್ರದ ಕಟ್ಟೆಕೂಡಾ ಕಾಣ್ತದಂತಾ?” ಅಂತ ಹೋಗಿಬರೋ ಹುಡುಗರಿಗೆ ಕೇಳಿ, ಅವರು ಹೌದೆಂದಾಗ ಆತನ ಇಳೀ ವಯಸ್ಸಿನ ದೇಹವೆತ್ತಿಕೊಂಡೂ ಭಾರದ ಹೆಜ್ಜೆ ಇಡದೇ ಹಗೂರಕ್ಕೆ ತೇಲುವಂತೆ ನಡೆಯತ್ತಾ, ಚೆಕ್‌ ಡ್ಯಾಂ ಜೌಗಿನಲ್ಲಿ ಕಾಲಿರಿಸಿದಾಗ – ಬರಬಿದ್ದು, ನದಿಯಲ್ಲಿ ನೀರು ಕಡಿಮೆಯಾಗಿ, ಇನ್ನೂ ಮಳೆಗಾಲ ಪ್ರಾರಂಭವಾಗಿರದ- ಆ ಬೇಸಿಗೆಯ ಮಧ್ಯಾಹ್ನ: ಬಿರಿದ ನೆಲದ ಬಿರುಕುಗಳನ್ನ ಹುಷಾರಾಗಿ ದಾಟಿ ಕಟ್ಟೆಯ ಬಳಿಗೆ ಬಂದಾಗ, ಗೋಪಜ್ಜನ ಮುಖದಲ್ಲಿ ಮಧ್ಯಾಹ್ನದ ಪ್ರಖರತೆ ಪ್ರತಿಫಲಿಸುತ್ತಿತ್ತು! ಸುಮಾರು ವರ್ಷ ನೀರಿನಲ್ಲಿ ಮುಳುಗಿಹೋಗಿದ್ದ ಕಟ್ಟೆಯ ಕಲ್ಲುಗಳೆಲ್ಲಾ ಸಡಿಲಾಗಿ, ಅಂಕುಡೊಂಕಾಗಿದ್ದ ಕಟ್ಟೆಯಲ್ಲಿ ಪಾಚಿ ತುಂಬಿಕೊಂಡಿತ್ತು. ಹಚ್ಚ ಹಸುರಿಗೆ ಕಾಣುತ್ತಿದ್ದ ಕಟ್ಟೆಯ ನಡುವೆ ಎಂದೋ ಸತ್ತುಹೋದ ಬೇವಿನ ಮರದ ಬೊಡ್ಡೆ ಅನಾಥ ಸ್ಮಾರಕದಂತೆ ನಿಂತುಕೊಂಡಿತ್ತು. ಅಪ್ರಯತ್ನವಾಗಿ ಉಕ್ಕಿಬಂದ ಕಣ್ಣೀರನ್ನ ವರೆಸಿಕೊಳ್ಳುತ್ತಲೇ ಗೋಪಜ್ಜ ‘ಬೇವಿನಮರದಮ್ಮ ಅದ್ಹೆಂಗೆ ಬರೀ ಬೊಡ್ಡೆಯಾಗವ್ಳೆ!’ ಎಂದು ಕಳವಳಿಸಿದ. ಬಿಸಿಲಗಾಳಿಗೆ ಆಗಲೇ ಒಣಗಿದಂತಾಗಿದ್ದ ಕಟ್ಟೆಯ ಮೇಲಿನ ಹಾವಸೆಯನ್ನ ಮುಟ್ಟಿ ಸಾವರಿಸಿಕೊಂಡು ಕೂತ ಗೋಪಜ್ಜನಿಗೆ ಅರವತ್ತು ವರ್ಷಗಳ ಹಿಂದಿನ ಆ ಅದೇ ಹುಡುಗುತನ ಮೈತುಂಬಿಕೊಂಡಂತಾಗಿ ಒಮ್ಮೆ ನವಿರಾಗಿ ನಡುಗಿದ!

ಅದೆಷ್ಟು ದಿನಗಳು ಇಲ್ಲೇ ಈ ಕಟ್ಟೆಯ ಮೇಲೆ ಕಳೆದಿವೆ? ಗೋಪಜ್ಜನ ಬಾಲ್ಯದ ಬೆರಗು, ಹುಡುಗುತನ, ಯೌವನದ ಹುರುಪು ಎಲ್ಲಾ ಕಂಡ ಬೇವಿನಮರದಮ್ಮನ ಬೊಡ್ಡೆ ತೊಗಟೆ ಕಳಚಿದ ಬೆತ್ತಲೆ ದೇಹದಂತೆ ಕಂಡು ಗೋಪಜ್ಜ ‘ಬೇಜಾರಾಗ್ಬೇಡವ್ವ’ ಅಂತ ಕೈಮುಗಿದ. ಬೇವಿನ ಕಟ್ಟೆಯಿಂದ ಉತ್ತರಕ್ಕೆ ತಿರುಗಿದರೆ ವರ್ಷಾನುವರ್ಷ ನೀರಲ್ಲಿ ಮುಳುಗಿದರೂ ಕುಸಿದಿಲ್ಲದ ವೇಣುಗೋಪಾಲಸ್ವಾಮಿ ದೇವಸ್ಥಾನ, ಪಶ್ಚಿಮಕ್ಕೆ ಗುಡ್ಡ, ಅದರ ಬುಡದಿಂದ ಕಟ್ಟೆಯವರೆಗಿನ ಆ ಜೌಗು ನೆಲದಲ್ಲಿ ಗೋಪಜ್ಜ ಥೇಟು ಹುಡುಗನಂತೆ ನಡೆದಾಡಿದ. ಅಲ್ಲಿದ್ದ ಕುಣಿಯೊಂದನ್ನು ದಿಟ್ಟಿಸಿ ಅದೇ ಬಾವಿಯೆಂದು ಗುರುತುಹಿಡಿದು, ಹೂಳು ತುಂಬಿದ ಆ ಪುಟ್ಟ ಹೊಂಡದಂತ ಕುಣಿಯ ಹತ್ತಿರವೇ ನಿಂತು ಕಣ್ಣೀರು ವರೆಸಿಕೊಂಡ. ಆದರೂ ಒಂದೆರಡು ಹನಿಗಳು ಆ ಕುಣಿಯಲ್ಲಿ ಬಿದ್ದು ಇಂಗಿಹೋದವು!

ಅದೆಷ್ಟು ಕಣ್ಣೀರು ಹೀಗೇ ಇಂಗಿಹೋಗಿವೆ, ಕಣ್ಣಾಲಿಯ ಒಳಗೇ ಒಣಗಿಹೋಗಿವೆ? ದೇವಸಾಗರದ ಜನ ಕರೆಯುವಂತೆ ಗೋಪಜ್ಜ ಆಗ ಗೋಪಜ್ಜನಾಗಿರಲಿಲ್ಲ. ದೇವರಕೆರೆಯ ಬಿಷ್ಟಪ್ಪನ ಮಗ ಗೋಪಾಲ ಆಗ ಹದಿಹರೆಯದ ಹುಡುಗ. ದೇವರಕೆರೆಯ ತೋಡಿನಿಂದ ಹರಿದ ನೀರನ್ನ ಕಟ್ಟಿಹಾಕಿ, ಒಂದೇ ರಾತ್ರಿಯಲ್ಲಿ ಹೊಲದ ಬದುವಿಗುಂಟ ಹರಿಸಿ, ಇಡೀ ಹೊಲ ನಳನಳಿಸುವಂತೆ ಮಾಡುವ ಕಸುವಿನವ! ನೆಲವ ಹರಗಿ, ನೀರು ಹಣಿಸಿ, ಭತ್ತ ಬಿತ್ತಿ ಬೆಳೆ ಬಂಗಾರದ ತೆನೆಬಿಟ್ಟು ಗಾಳಿಗೆ ತೂಗಾಡುವಾಗ “ಭಲರೇ” ಎಂದು ಮೆಚ್ಚುಗೆ ಸೂಸಿ ಆ ಹೊಲದೊಡೆಯ ಶಾನುಭೋಗ ಕೃಷ್ಣಪ್ಪ ಬಂದು ನಿಂತಿರುತ್ತಿದ್ದರು! ಬಿಷ್ಟಪ್ಪನ ಬೆವರು, ಗೋಪಾಲನ ಹರೆಯ ಎಲ್ಲಾ ಉಂಡ ಆ ನೆಲ ಬಂಗಾರದ ಪೈರಾಗಿ ಇಡೀ ನೆಲವೇ ಬಂಗಾರದ ಛಾದರವನ್ನ ಹೊದ್ದಂತೆ ಕಾಣಿಸುತ್ತಿತ್ತು! ಅಂತಹ ಆ ಹೊಲ ಬಿಷ್ಟಪ್ಪನ ಬದುಕು, ಗೋಪಾಲನ ಕಣ್ಣ ಮಣಿ, ನೋಡುಗರ ಕಣ್ಣ ಹಬ್ಬ – ಈಗ ಬೀಳು ನೆಲವಾಗಿ, ಜೌಗುಜೌಗಾಗಿ, ಬತ್ತಿದ ಕೆರೆಯ- ಬಿಸಿಲಿಗೆ ಬಿರಿದ ಚರ್ಮದಂತಹ ನೆಲವಾಗಿ – ಕಂಡಾಗ, ಗೋಪಾಲನಿಗೆ ಅಂದರೆ ಗೋಪಜ್ಜನಿಗೆ ಎಂತಹದೋ ಕಸಿವಿಸಿಯನ್ನ ಹೊಟ್ಟೆಯೊಳಗೆ ತುಂಬಿಸಿದಂತಾಗಿ ಆತ ಅಲ್ಲೇ ಕುಸಿದು ಕುಳಿತ. ಈ ಕುಸಿತ ಇಂದು ಮೊದಲಲ್ಲ!

ಸರಕಾರಿ ದಾಸ್ತಾವೇಜಿನಲ್ಲಿ ಹದಿಮೂರೆಕರೆ ಆರು ಗುಂಟೆಯ ಆ ಜಮೀನು ಶಾನುಭೋಗ ಕೃಷ್ಣಪ್ಪನವರದಾಗಿತ್ತು. ಸಮೀಪದ ಬೆಳವನಹಳ್ಳಿಯ ಶಾನುಭೋಗರಾಗಿದ್ದ ಅವರಿಗೆ ದೇವರಕೆರೆ ಸೇರಿದಂತೆ ಹದಿನಾರು ಹಳ್ಳಿಗಳ ಶಾನುಭೋಗಿಕೆ ಇತ್ತು. ಕಟ್ಟುಮಸ್ತು ಕುದುರೆ ಏರಿ, ರುಮಾಲು ತಲೆಗೇರಿಸಿಕೊಂಡು ಊರು ಪ್ರವೇಶಿಸಿದರೆ ಊರ ಜನ ಒಮ್ಮೆ ಮೈ ಕೊಡವಿ ಎದ್ದು ನಿಂತರೆ, ರೈತರೆಲ್ಲಾ ಚಾವಡಿಯ ಮುಂದೆ ನೆರೆದು ವಲ್ಲಿಯನ್ನು ಕೈಯಲ್ಲಿ ಹಿಡಿದು ಬಾಗಿರುತ್ತಿದ್ದರು! ಊರೇ ನಡುಗಿದರೂ ನಡುಗಿಸುವಂತಹ ನಿಲುವಾಗಿರಲಿಲ್ಲ ಕೃಷ್ಣಪ್ಪನದು. ಗಂಟೆ ಹೊಡೆದಂತೆ ಮೂಡಿಬರುವ ಆತನ ದನಿಯಲ್ಲಿ ದರ್ಪವಿರುತ್ತಿರಲಿಲ್ಲ. ನಗೆಯಲ್ಲಿ ವಂಚನೆ ಕಾಣಿಸದೆ ಇದ್ದರೂ ಆತನ ನಾಜೂಕಿನ ಮಾತಿಗೇ ಆ ಊರುಗಳ ಜನ ಬೆಚ್ಚುತ್ತಿದ್ದಂತಿತ್ತು. ಆ ಊರ ತಳವಾರಿಕೆ ಮಾಡೋ ಬಿಷ್ಟಪ್ಪ ಬಂದು ಶಾನುಭೋಗರ ಕುದುರೆ ಕಟ್ಟಿ, ಹುಲ್ಲು ಹುರುಳಿ ಇಟ್ಟು, ಚಾವಡಿಯಲ್ಲಿ ನಿಂತನೆಂದರೆ, ಗಂಟಲ ಕೆರೆತಕ್ಕೊಮ್ಮೆ ಕೆಮ್ಮಿ ಕೃಷ್ಣಪ್ಪ ಮೊದಲು ಲೋಕಾಭಿರಾಮ, ನಂತರ ಕಂದಾಯ, ಆನಂತರ ರಾಜಕೀಯ, ಕೊನೆಗೆ ಜೋತಿಷ್ಯ ಮಳೆ-ಬೆಳೆ ಮಾತಾಡಿ, ಪಂಚಾಯ್ತಿಯ ಪಂಚರನ್ನು ಆಪ್ತವಾಗಿ ವಿಚಾರಿಸಿಕೊಂಡು- ಮಧ್ಯಾಹ್ನದ ಏರು ಬಿಸಿಲಿನಲ್ಲಿ ನಿಧಾನಕ್ಕೆ ಎದ್ದು ವೇಣುಗೋಪಾಲಸ್ವಾಮಿ ದೇವಾಲಯ ಹೊಕ್ಕರೆ ನಡು ಹಗಲಿನಲ್ಲೂ ಸೂರ್ಯ ನಾಚಿದಂತೆನಿಸುತ್ತಿತ್ತು. ದೇವಾಲಯದ ಮಹಾ ಮಂಗಳಾರತಿ ಪಡೆದು, ಪಕ್ಕದಲ್ಲೇ ಪಾತರದ ಚನ್ನಮ್ಮನ ಮನೆಯನ್ನು ಶಾನುಭೋಗರು ಹೊಕ್ಕರೆ – ಸೂರ್ಯ ಮುಳುಗಿ ಬಿಡಲು ತವಕಿಸುತ್ತಿದ್ದ! ಸೂರ್ಯ ಮುಳುಗಿದ ಆ ಅಂತಹ ಕೆಂಪು ಸಂಜೆಗಳಲ್ಲಿ ಇದೇ ಕಟ್ಟೆಯ ಮೇಲೆ ಶಾನುಭೋಗರು ಹೊಲವನ್ನು ದಿಟ್ಟಿಸುತ್ತಾ ಕೂರುತ್ತಿದ್ದುದು ಈ ಬೇವಿನ ಮರದಮ್ಮನಿಗೆ ಗೊತ್ತು. ಅದೇ ಗೋಪಜ್ಜನ ನೆನಪಿಗೂ ಬಂತು ಈ ಹೊತ್ತು.

ಎಲ್ಲವೂ ಹೀಗೇ ನಡೆಯುತ್ತಿತ್ತು. ದಿನ ಬೆಳಗಾಗುತ್ತಿತ್ತು, ನಡು ಹಗಲು ಸೂರ್ಯ ಶಾನುಭೋಗರ ಕೃಷ್ಣಾವತಾರಕ್ಕೆ ನಾಚಿ ಬೇಗ ಮುಳುಗಿ ಸಂಜೆಯಾಗುತ್ತಿತ್ತು. ರಾತ್ರಿಗಳಲ್ಲಿ ಬೆಳೆದು ನಿಂತ ಪೈರು ಕಾಯಲು ಗೋಪಾಲ ಈ ಕಟ್ಟೆಯ ಮೇಲೆ ಕೂತು ಲಾಟೀನು ಹಚ್ಚುತ್ತಿರುವಾಗ ಕೆರೆಯ ಮೇಲಿಂದ ಹಾದು ಬಂದ ತಂಗಾಳಿ ಆತನ ಹರೆಯದ ಮೈಗೆ ತಂಪಾಗಿಸುವ ಬದಲು ಕಿಚ್ಚು ಹಚ್ಚುತ್ತಿತ್ತು. ಸಂಜೆಯ ಮಹಾ ಮಂಗಳಾರತಿಯ ಸದ್ದು ವೇಣುಗೋಪಾಲಸ್ವಾಮಿ ದೇವಾಲಯದಿಂದ ದೊಡ್ಡ ಘಂಟಾನಾದವಾಗಿ ಹೊಮ್ಮಿದರೂ, ಆ ಗಟ್ಟಿ ಶಬ್ದದ ನಡುವೆಯೂ ಪಾತರದ ಚನ್ನಮ್ಮನ ಮಗಳು ಚಂದ್ರಿಯ ನೃತ್ಯಾಭ್ಯಾಸದ ಗೆಜ್ಜೆ ಗಿಲುಕು ಧ್ವನಿ ಗೋಪಾಲನ ಕಿವಿಗೆ ಬಿದ್ದೇ ಬಿಡುತ್ತಿತ್ತು. ಮೈನೆರೆಯದ ಆ ಎಳೆಯ ಹುಡುಗಿಯ ಕಾಲ್ಗಜ್ಜೆನಾದ ನಿಂತು ಹೋದರೂ ಇರುಳೆಲ್ಲಾ ಗೋಪಾಲನ ಕಿವಿಯಲ್ಲಿ ಹಾಗೇ ರಿಂಗಣಿಸುತ್ತಿದ್ದುದನ್ನು ಬೇವಿನ ಮರದಮ್ಮ ಬಲ್ಲವಳಾಗಿದ್ದಳು!

ಬಿರಿದ ನೆಲದ ಬಿರುಕುಗಳನ್ನ ಹುಷಾರಾಗಿ ದಾಟಿ ಕಟ್ಟೆಯ ಬಳಿಗೆ ಬಂದಾಗ, ಗೋಪಜ್ಜನ ಮುಖದಲ್ಲಿ ಮಧ್ಯಾಹ್ನದ ಪ್ರಖರತೆ ಪ್ರತಿಫಲಿಸುತ್ತಿತ್ತು!

ಎಲ್ಲವೂ ಬದಲಾಗುತ್ತದೆ. ರಾತ್ರಿಯ ಜಾವದಿಂದ ಜಾವಕ್ಕೆ ನಕ್ಷತ್ರಗಳ ಚಲನೆ, ದಿನದಿಂದ ದಿನಕ್ಕೆ ಋತು ವರ್ತಮಾನ ಎಲ್ಲಾ. ಆ ಎಲ್ಲಾ ಬದಲಾವಣೆಯ ಗಾಳಿ ಬೀಸಲು ಕೆರೆಯ ಮೇಲೆ ಹಾದು, ವೇಣುಗೋಪಾಲಸ್ವಾಮಿ ಗುಡಿಯ ಗಂಟೆ ಬಾರಿಸಿ, ಬೇವಿನ ಮರದಮ್ಮನ ತಲೆತೂಗಿಸಿ ಊರ ಪ್ರವೇಶಿಸಬೇಕಿತ್ತು. ಹಾಗೆ ಬದಲಾವಣೆಯ ಗಾಳಿ ಬೀಸಿ, ಹೊಸ ಸರ್ಕಾರ ಹಳೆಯ ಶಾನುಭೋಗರನ್ನೆಲ್ಲಾ ತೆಗೆದು ಹೊಸದಾಗಿ ವಿಲೇಜ್ ಅಕೌಂಟೆಂಟ್‍ ರನ್ನ ಊರೂರುಗಳಿಗೆ ನೇಮಿಸಿತ್ತು. ವಂಶಪಾರಂಪರ್ಯವಾಗಿ ಪಟೇಲಿಕೆ, ಗೌಡಿಕೆ ಪಡೆದಿದ್ದ ಮನೆತನಗಳ ಹಿರಿಯರು ಚಾವಡಿಯಿಂದ ಕೆಳಗಿಳಿದಿದ್ದೇ ಛೇರ್ಮನ್ನರ ಕುರ್ಚಿಯೊಂದು ಚಾವಡಿಯಲ್ಲಿ ಬಂದು ಕೂತಿತ್ತು. ಅಂತಹ ಒಂದು ಬದಲಾದ ದಿನದ ಹಗಲೇ ಪಾತರದ ಚನ್ನಮ್ಮನ ಮಗಳು ಚಂದ್ರಿ ಮೈನೆರೆದಿದ್ದು! ಚಂದ್ರಿ ದೊಡ್ಡೋಳಾದ ವಿಷಯ ಬಲುಬೇಗ ಊರ ತುಂಬಾ ಹರಡಿ ಗೋಪಾಲನ ಕಿವಿಗೂ ಬಿದ್ದು ಮೈಬೆಚ್ಚಗಾಗುವ ಹೊತ್ತಿಗೇ, ಚಾವಡಿಯಲ್ಲಿ ಲೋಕಾಭಿರಾಮ ಹರಟೆಗೆ ಕೂತ ಊರ ಪಂಚರಲ್ಲಿ ವೇಣುಗೋಪಾಲಸ್ವಾಮಿ ಗುಡಿಯ ಪೂಜೆ ಮಾಡುವ ಐಗಳು ಕೂಡಾ ಮದನೋನ್ಮಾದದಿಂದ ಚಡಪಡಿಸಿದ್ದರು! ಇಳೀ ಸಂಜೆಯ ಹೊತ್ತು ಗುಡಿಯ ಪೌಳಿಯ ಹಿಂದೆ ನಿಂತು ವಿಷಯವನ್ನ ಶಾನುಭೋಗರಿಗೆ ಹೇಳಿ ಕಳಿಸೋಣ ಎಂದು ಚನ್ನಮ್ಮ ಅಂದರೆ – ‘ಮುತ್ತು ಕಟ್ಟೋದು ನಾನೇ ಆಗಿರುವಾಗ ಅವರಿಗ್ಯಾಕೆ? ಅವರಿಗೆ ಚಂದ್ರಿ ಮಗಳ ಸಮಾನ’ ಎಂದು ಐಗಳು ತಲೆಕೊಡವಿ ಬಿಟ್ಟಿದ್ದರು. ಅದ್ಯಾವುದೂ ಗೊತ್ತಿಲ್ಲದ ಚಂದ್ರಿಯ ಗೆಜ್ಜೆ ಅಭ್ಯಾಸದಂತೆ ಗಿಲುಕು ಗಿಲುಕು ಎಂದು ರಿಂಗಣಿಸಿದಾಗ ಗೋಪಾಲ ಬೇವಿನ ಮರದ ಕಟ್ಟೆಯ ಮೇಲೆ ಕೂತೇ ಚಿಕ್ಕಿಗಳನ್ನೆಣಿಸುತ್ತಾ ರಾತ್ರಿ ಕಳೆದಿದ್ದ!

ಸುಮಾರು ಇದೇ ದಿನಗಳಲ್ಲಿ ತಾಲ್ಲೂಕು ಬೋರ್ಡಿಗೆ ಚುನಾವಣೆ ಬಂದುದು ಅಂತ ಗೋಪಜ್ಜನಿಗೆ ನೆನಪು. ಆ ಚುನಾವಣೆಯಲ್ಲಿ – ಶಾನುಭೋಗಿಕೆಯ ಅಧಿಕಾರ ಕಳೆದುಕೊಂಡಿದ್ದ – ಕೃಷ್ಣಪ್ಪ ಛೇರ್ಮನ್ನರಾಗುವ ಕನಸು ಕಂಡು ಎಲೆಕ್ಷನ್‍ ಗೆ ನಿಂತಿದ್ದರು. ಗಾಂಧಿ ಸತ್ತು ಹೋದ ನಂತರದ ಆ ದಿನಗಳ ಎಲೆಕ್ಷನ್ ಸುಲಭವಾಗಿರಲಿಲ್ಲ. ಕೃಷ್ಣಪ್ಪ ಶಾನುಭೋಗರಾಗಿದ್ದ ಆ ಹದಿನಾರು ಹಳ್ಳಿಗಳೂ ಸೇರಿದಂತೆ ಇಡೀ ತಾಲ್ಲೂಕಿನಲ್ಲೇ ಎಲೆಕ್ಷನ್ ಎಂದ ಕೂಡಲೇ ರಾಜಕೀಯ ಮೇಲಾಟ, ಜಾತಿ ಲೆಕ್ಕಾಚಾರ, ಮಠಗಳಲ್ಲಿ ಚಿಂತನ-ಮಂಥನ ಎಲ್ಲಾ ನಡೆಯತೊಡಗಿದ್ದವು. ಕೃಷ್ಣಪ್ಪನೂ ಕೈಬಿಚ್ಚಿ ಖರ್ಚು ಮಾಡತೊಡಗಿದ್ದರು. ಅವರ ಹೆಂಡತಿ ಶೇಷಮ್ಮನ ಬಂಗಾರ, ಮನೆಯ ಬೆಳ್ಳಿ, ನಗ ನಾಣ್ಯ ಎಲ್ಲಾ ಓಟಿನ ನೋಟಾಗಿ ಪರಿವರ್ತಿತವಾಗಿದ್ದ ಆ ಎಲೆಕ್ಷನ್ ದಿನಗಳಲ್ಲಿ ಕೈಕಟ್ಟಿದಂತಾಗಿ ಈ ದೇವರಕೆರೆಯ ಜಮೀನನ್ನು ಸಾಲ ಪಡೆದ ಹಣಖಾತ್ರಿಯಾಗಿ ಇದೇ ಐಗಳಿಗೆ ಬರೆದುಕೊಟ್ಟುಬಿಟ್ಟರು! ಎಲೆಕ್ಷನ್‍ ನಲ್ಲಿ ಕೃಷ್ಣಪ್ಪನನ್ನ ಶತಾಯಗತಾಯ ಸೋಲಿಸಲೇಬೇಕೆಂದು ಶಪಥ ತೊಟ್ಟವರಂತೆ ಹಲವು ಊರ ಪಂಚರು ತೀರ್ಮಾನಿಸಿದ್ದರೆ, ಐಗಳು ಮಾತ್ರ ಯಾವುದೇ ಕಾರಣಕ್ಕೂ ಮುತ್ತು ಕಟ್ಟುವ ಮುಂಚೆ ಚಂದ್ರಿ ದೊಡ್ಡೋಳಾದ್ದು ಕೃಷ್ಣಪ್ಪನಿಗೆ ತಿಳಿಯದಿರಲಿ ಎಂದು ಹಲುಬುತ್ತಿದ್ದರು!

ಆ ಎಲೆಕ್ಷನ್ ಸಾಮಾನ್ಯ ಎಲೆಕ್ಷನ್ ಆಗಿ ಉಳಿದಿರಲಿಲ್ಲ. ಇಷ್ಟು ವರ್ಷಗಳ ಕೃಷ್ಣಪ್ಪನ ನಾಜೂಕಿನ ಬುದ್ಧಿವಂತಿಕೆಗೆ, ಅಧಿಕಾರಕ್ಕೆ ಎದುರಾಗಿ ನಿಲ್ಲದವರೆಲ್ಲಾ ಎದೆ ಸಟೆಸಿ ನಿಂತು ಎರಡು ಶಕ್ತಿಗಳ ನಡುವೆ, ಎರಡು ಮಠಗಳ ನಡುವೆ, ಎರಡು ಮದಗಜಗಳ ನಡುವೆ ನಡೆದ ಯುದ್ಧದಂತಿತ್ತು. ಯುದ್ಧ ಮುಗಿದ ಇರುಳು ಕತ್ತಲಿಗೂ ಹಗಲಿನ ತವಕ, ಗೂಡುಗಳಲ್ಲಿ ರೆಕ್ಕೆ ಮುದುರಿರದ ಹಕ್ಕಿಗಳ ಗುಟುರು, ನಾಳೆ ಏನಾಗುತ್ತದೋ ಎಂಬ ಕಾತರದಿಂದ ಊರೂರುಗಳು ಎದ್ದು ಕೂತಾಗ – ಆ ರಾತ್ರಿಯೂ ನಿದ್ದೆಗೆಟ್ಟ ಗೋಪಾಲ ಚಂದ್ರಿಯೊಂದಿಗಿನ ಹಗಲುಗನಸಿನಲ್ಲಿ ವಿಹರಿಸಿದ್ದ. ಸಂಜೆ ಮತ ಎಣಿಕೆ ಮುಗಿದು ತಹಶೀಲ್ದಾರರು ಕೃಷ್ಣಪ್ಪನ ಸೋಲನ್ನು ಘೋಷಿಸಿದಾಗ – ಸೂರ್ಯ ಬಹಳ ಹೊತ್ತು ಮುಳುಗಿರಲಿಲ್ಲ! ಊರುಗಳಿಗೆ ಊರೇ ಸಂಭ್ರಮಿಸಿದಂತೆ, ಜನರೆಲ್ಲಾ ಲೆಕ್ಕ ಹಾಕಿದಂತೆ ಕೃಷ್ಣಪ್ಪ ಕುಸಿದು ಹೋಗಲಿಲ್ಲ. ಬದಲಿಗೆ ಅವರೇ ಗೆದ್ದವರನ್ನೆಲ್ಲಾ ಕರೆದು ಮನೆಯಲ್ಲಿ ಹೋಳಿಗೆ ಊಟ ಹಾಕಿಸಿದ್ದರು. ಜನರಿಗೆ ಈ ಹಾರುವಯ್ಯನ ನಾಜೂಕುತನ, ಮೃದು ಮಾತಿನಲ್ಲೇ ತನ್ನ ಎಣಿಕೆ ತಪ್ಪದಂತೆ ನಡೆಸಿಬಿಡುವ ಬುದ್ಧಿವಂತಿಕೆ ಅರ್ಥವೇ ಆಗಿರಲಿಲ್ಲ. ಆದರೆ ಅಷ್ಟು ಹೊತ್ತಿಗೆ ಗುಡಿಯ ಐಗಳಿಗೆ ಚಂದ್ರಿಯಷ್ಟೇ ಅಲ್ಲ, ಈ ಕೆರೆ ದಂಡೆಯ ಶಾನುಭೋಗರ ಜಮೀನೂ ತನ್ನದಾಗಬೇಕು ಎಂಬ ಹುಕಿಯೊಂದು ಹೊಕ್ಕಿಬಿಟ್ಟಿತ್ತು!

ಎಲೆಕ್ಷನ್ ಮುಗಿದು ನಾಲ್ಕು ತಿಂಗಳ ನಂತರ, ವಾಯಿದೆ ಅವಧಿಯೊಳಗೆ ದುಡ್ಡು ಹೊಂಚಿಕೊಂಡು ಕೃಷ್ಣಪ್ಪ ಐಗಳ ಮನೆಗೆ ಬಂದಾಗ ಐಗಳ ಆ ಹುಕಿ ನಿರ್ಧಾರವಾಗಿ ಬದಲಾಗುತ್ತಿತ್ತು. ಅವರು ಖಡಾಖಂಡಿತವಾಗಿ “ತಾರೀಖಿನ ಲೆಕ್ಕದಲ್ಲಿ ವಾಯಿದೆ ನಾಳೆ ಮುಗೀತದೆ. ಆದ್ರೆ ತಿಥೀ ಲೆಕ್ಕದಲ್ಲಿ ನಿನ್ನೆನೇ ಮುಗಿದು ಹೋಗಿದೆ. ನೀವು ಬರೆದು ಕೊಟ್ಟ ಪತ್ರಕೂಡಾ ತಿಥೀ ಲೆಕ್ಕದಲ್ಲೇ ಇದೆಯಲ್ಲಾ ಶಾನುಭೋಗರೇ?” ಅಂತ ಖಡಕ್ಕಾಗಿ ಹೇಳಿದಾಗ ಕೃಷ್ಣಪ್ಪ ಅರೆಕ್ಷಣ ಅಪ್ರತಿಭರಾಗಿದ್ದರು. ಆದರೆ ಸಾವರಿಸಿಕೊಂಡು “ಅದ್ಹೇಗೆ ಆಗ್ತದೆ ಐನೋರೇ? ನಾನು ಹಣ ಖಾತ್ರಿಗೆ ಪತ್ರ ಬರೆದುಕೊಟ್ಟಾಗ ಮೊದಲು ತಿಥೀ ಲೆಕ್ಕದಲ್ಲಿ ಬರೆದಿದ್ದರೂ, ಸನ್ ಸಾವಿರದೊಂಬೈನೂರಾ…. ಅಂತ ಇಂಗ್ಲೀಷ್ ಲೆಕ್ಕದಲ್ಲೂ ಬರ್ದಿದ್ದೀನಲ್ಲ. ಸುಮ್ನೇ ಮಾತು ಬೆಳೆಸದೇ ಪತ್ರ ವಾಪಸ್ ಕೊಟ್ಬಿಡಿ” ಎಂದಾಗ ಊರವರು ಅವರಿಬ್ಬರ ಆ ಲೆಕ್ಕಾಚಾರ ಅರ್ಥವಾಗದೇ ಇಬ್ಬರ ಮುಖ ನೋಡಿದರು. ಐಗಳು ಹಿಡಿದ ಹಠ ಬಿಡಲಿಲ್ಲ. ಶಾನುಭೋಗರೇನೂ ಕಡಿಮೆಯವರಲ್ಲ. ಮೊದಲೇ ಎಲೆಕ್ಷನ್ ಸೋಲು, ಮತ್ತೆ ಈ ಐಗಳ ಕಿರಿಕಿರಿಗೆ ಕಂಗೆಡದೇ “ಕೋರ್ಟಿಗೆ ಹೋಗ್ತೀನಿ” ಅಂತ ಘೋಷಿಸಿದರು. ಆ ನಿರ್ಧಾರದೊಂದಿಗೆ ದಾಪುಗಾಲಿಟ್ಟು ದೇವಾಲಯದ ಹೊರ ಬಂದ ಕೃಷ್ಣಪ್ಪನವರಿಗೆ ಪೌಳಿಯ ಬದಿಯಲ್ಲಿ ನಿಂತಿದ್ದ ಚನ್ನಮ್ಮ ಚಂದ್ರಿಯ ವಿಷಯ ಹೇಳಿದ್ದು. ಚಂದ್ರಿಯ ವಿಷಯ ಕೇಳಿ ಮುದಗೊಂಡ ಕೃಷ್ಣಪ್ಪನ ಮನಸ್ಸು ‘ಐಗಳು ಆಕೆಗೆ ಮುತ್ತು ಕಟ್ತಾರಂತೆ’ ಎಂದ ಚನ್ನಮ್ಮನ ಮಾತು ಕೇಳಿ ರಕ್ತ ಕುದಿಯತೊಡಗಿತು. ಅವರ ಕಣ್ಣು ಕೆಂಪಗಾಗಿ ಕೆಂಡ ಸುರಿದಂತೆ ‘ಹೌದೇನು? ಅದ್ಹೆಂಗೆ ಮಾಡ್ತಾನೆ ನಾನೂ ನೋಡ್ತೀನಿ’ ಎಂದದ್ದು ಪಕ್ಕದಲ್ಲಿದ್ದ ಗೋಪಾಲನಿಗೆ ಅರ್ಥವಾಗಿದ್ದು ಹೊಲದ ವಿಚಾರವೆಂದೇ. “ಭಿಷ್ಠ” ಎಂದು ಕೂಗಿದ ಶಾನುಭೋಗರು ಆತನ ಕಿವಿಯಲ್ಲಿ ಏನೋ ಉಸಿರಿ ದಾಪುಗಾಲಿನಿಂದ ನಡೆದು ಹೋಗಿದ್ದರು.

ಮುಂಜಾನೆ ನಸುಕಿನಲ್ಲೆದ್ದು ಕೆರೆ ಕಡೆಗೆ ಹೋಗಿ ಕೈಕಾಲು ತೊಳೆದುಕೊಂಡು ನೇರ ಬೇವಿನ ಕಟ್ಟೆಗೆ ಬರೋದು ಗೋಪಾಲನ ರೂಢಿ. ಕಟ್ಟೆಗೆ ಕೂತು ಚುಮುಚುಮು ಬೆಳಕು ಹರಿದು, ಬಂಗಾರದಂತೆ ಫಳಫಳಿಸುವ ಪೈರಿನ ಮೇಲೆಲ್ಲಾ ಬೆಳಕು ಚೆಲ್ಲಿದ ಆ ಹೊತ್ತು ಹೊಲದ ಮಧ್ಯದಲ್ಲೆಲ್ಲೋ ಪೈರುಗಳು ನೆಲಕ್ಕೊರಗಿದಂತೆ ಕಂಡು ಗೋಪಾಲನ ಎದೆಯಲ್ಲಿ ಕಸಿವಿಸಿ ಹುಟ್ಟಿಕೊಂಡಿತು. ಧಾವಿಸಿ ಆ ಜಾಗಕ್ಕೆ ಹೋದಾಗ ಅಲ್ಲಿ ಯಾರೋ ಹೊರಳಾಡಿದಂತೆ, ಬೆಳೆದ ಭತ್ತದ ತೆನೆ ನೆಲದ ಪಾಲಾಗಿತ್ತು. ‘ನಿನ್ನೆ ರಾತ್ರಿ ಹೊಲ ಕಾದ ಪಾಳಿ ಅಪ್ಪನದಿತ್ತು. ಯಾರು ಬಂದು ಹಿಂಗೆ ಮಾಡಿರಬೌದು?ʼ ಎಂದು ಗೊಂದಲಗೊಂಡ ಗೋಪಾಲನಿಗೆ ಫಕ್ಕನೇ ಕಂಡದ್ದು, ಚಂದ್ರಿ ನೃತ್ಯಾಭ್ಯಾಸಕ್ಕೆ ಬಳಸುತ್ತಿದ್ದ ಗೆಜ್ಜೆಯ ಸರ! “ಅರೆ! ಚಂದ್ರೀದೂ” ಎಂದು ಕನಲಿದವ ಏನೋ ಅನುಮಾನ ಬಂದು ಸೀದಾ ಬಾವಿಗೆ ಹೋಗಿ ಇಣುಕಿದಾಗ ಅವಳ ದೇಹ ಬೋರಲಾಗಿ ಕವುಚಿಕೊಂಡು ನೀರಿನಲ್ಲಿ ತೇಲುತಿತ್ತು! “ಚಂದ್ರೀ” ಎಂದು ಆತ ಕಿರುಲಿದ ಸದ್ದು ನೂರ್ಮಡಿ ಪ್ರತಿಧ್ವನಿಸಿ ಇಡೀ ಊರಿಗೆ ಊರೇ ಅಲ್ಲಿ ನೆರೆದುಬಿಟ್ಟಿದ್ದು ಸ್ವಲ್ಪ ಹೊತ್ತಿನಲ್ಲೇ. ನೀರಿಗೆ ಧುಮುಕಿ ಚಂದ್ರಿಯ ಜಡೆ ಹಿಡಿದೆಳೆದು ದೇಹ ಎತ್ತಿ ತಂದು ನೆಲಕ್ಕೆ ಹಾಕಿದ ಗೋಪಾಲ ಒಂದೇ ಸಮನೆ ಬಿಕ್ಕುತ್ತಿದ್ದ. ಸುದ್ದಿ ತಿಳಿದು ಓಡಿಬಂದ ಚನ್ನಮ್ಮ ಮಗಳ ಹೆಣದೆದುರು ಭೋರೆಂದು ವದರಾಡಿ ಅಳುತ್ತಿದ್ದಳು. ದೇವರ ಪೂಜೆಗೆ ಉಟ್ಟ ಮಡಿಯೊಂದಿಗೇ ಓಡಿ ಬಂದ ಐಗಳು ಏನೂ ಹೇಳಲಾಗದೇ ಸುಮ್ಮನೇ ನಿಂತರೆ, ಮಗನ ಅಳು, ಬಿಕ್ಕು, ರೋಧನ ಕಂಡ ಬಿಷ್ಟಪ್ಪ ಜನರ ನಡುವೆ ತಲೆ ಬಗ್ಗಿಸಿ ನಿಂತಿದ್ದ.

‘ತನ್ನ ಜಮೀನು ಅದ್ಹೆಂಗೆ ಉಳಿಸಿಕೊಳ್ತಾನೋ ನೋಡಾಣ’ ಅಂತ ಐಗಳು ಶಾನುಭೋಗರ ವಿರುದ್ಧ ಘಂಟಾಘೋಷವಾಗಿ ಸಮರ ಸಾರಿದ್ದರು. ಅಂದು ಜನರ ಮಧ್ಯೆ ತಲೆ ತಗ್ಗಿಸಿದ್ದ ಬಿಷ್ಟ ಮನೆಗೆ ಬಂದು ನೆಲ ಹಿಡಿದವ ಮತ್ತೆ ಚಂಡು ಎತ್ತಿರಲಿಲ್ಲ. ವರ್ತಮಾನವನ್ನೆಲ್ಲಾ ಗೋಪಾಲನಿಂದ ತಿಳಿದುಕೊಂಡ ಕೃಷ್ಣಪ್ಪ ಒಂದರೆಕ್ಷಣ ಯೋಚಿಸಿ “ಬಾ ಗೋಪಾಲ ತಾಲ್ಲೂಕಾಫೀಸಿಗೆ ಹೋಗಿ ಬರಾಣ. ಅಲ್ಲಿ ಒಂದೆರೆಡು ಕಡೆ ನೀನು ಹೆಬ್ಬೆಟ್ಟು ಹಾಕಬೇಕು. ನಿಮ್ಮಪ್ಪ ಭಿಷ್ಠ, ನೀನು ದುಡಿದು ನನ್ನ ಸಾಕಿದ ಋಣ ತೀರಿಸಬೇಕಿದೆ” ಎಂದು ಗೋಪಾಲನ್ನ ಕರೆದುಕೊಂಡು ಹೋದವರು, ಟೆನೆನ್ಸಿಯ ಫಾರಂ ತುಂಬಿ ಗೋಪಾಲನಿಂದ ಹೆಬ್ಬೆಟ್ಟು ಹಾಕಿಸಿ, ದೇವರಕೆರೆಯ ಅವರ ಜಮೀನಿಗೆ ಗೋಪಾಲನೇ ಟೆನೆಂಟ್ ಎಂದು ಟ್ರಿಬ್ಯೂನಲ್ ನಲ್ಲಿ ದಾವೆ ದಾಖಲಿಸಿ ಬಂದರು! ಅದೆಷ್ಟೋ ದಿನ ಶಾನುಭೋಗರೊಂದಿಗೆ ತಾಲ್ಲೂಕಾಫೀಸು, ಕೋರ್ಟು ಅಂತೆಲ್ಲಾ ಅಲೆದಿದ್ದ ನೆನಪಿದೆ ಗೋಪಜ್ಜನಿಗೆ. ಜಮೀನು ಕೈ ಬಿಡ್ತದೆ ಅಂತ ಐಗಳೂ ತಮ್ಮ ಬಳಿ ಇದ್ದ ಹಣಖಾತ್ರಿ ಪತ್ರವನ್ನ ಹಿಡಿದುಕೊಂಡು ಕೋರ್ಟು ಮೆಟ್ಟಿಲೇರಿದ್ದರು. ಈ ನಡುವೆ ಮತ್ತೊಮ್ಮೆ ಬದಲಾವಣೆಯ ಗಾಳಿ ಬೀಸಿ, ‘ದೇವರಕೆರೆ ಎಂಬ ಈ ಊರು, ಜಮೀನು, ಗುಡಿ ಎಲ್ಲಾ ಇಲ್ಲಿ ಕಟ್ಟೋ ಚೆಕ್‌ ಡ್ಯಾಂನಲ್ಲಿ ಮುಳುಗಿ ಹೋಗ್ತದೆ’ ಎಂಬ ಸುದ್ದಿ ದಟ್ಟವಾಗಿ ಜನರ ಮಾತಿನಲ್ಲಿ ಅದೇ ಚರ್ಚೆಯಾಗಿ, ಊರಜನ ಊರುಬಿಟ್ಟು ಬೇರೆಕಡೆಗೆ ಹೋಗಲು ಸಿದ್ಧರಾಗತೊಡಗಿದರು.

(ಆನಂದ ಋಗ್ವೇದಿ)

ನೀರು ನಿಂತು ಮುಳುಗಡೆಯಾಗುವ ಮೊದಲ ದಿನಗಳಲ್ಲಿ ಒಂದು ಮುಂಜಾನೆ ಮಲಗಿದ್ದ ಅಪ್ಪನ ಬಳಿ ಬಂದು ಕೂತ ಗೋಪಾಲ ಆತನ ಮುಖವನ್ನೇ ದಿಟ್ಟಿಸಿ ನೋಡತೊಡಗಿದ್ದ. ನೆಲಹಿಡಿದ ಬಿಷ್ಟ ಅದೆಷ್ಟು ಕೃಶನಾಗಿದ್ದನೆಂದರೆ, ಮಲಗಿದ್ದ ಹಂಚಿಕಡ್ಡಿಯ ಚಾಪೆಯ ಕಡ್ಡಿಯೇ ತಾನಾಗಿದ್ದ. ಆ ಹೊತ್ತು ಮಗನ ಮುಖದ ಖಾಲಿತನ ನೋಡಿ ಕಳವಳಿಸಿ ಮೆಲ್ಲಗೇ “ನನ್ನ ಕ್ಸಮ್ಸಿ ಬಿಡು ಮಗಾ. ಆ ಚಂದ್ರಿ ಮ್ಯಾಲ ನಿಂಗೆ ಮನಸೈತಿ ಅಂತ ಗೊತ್ತಿರಲಿಲ್ಲ. ತನ್ನ ಪಾಲಿಂದು ಎಲ್ಲಿ ಆ ಐಗಳು ಉಂಬ್ತಾರೋ ಅಂತ ಶ್ಯಾನ್ಬೋಗ್ರು ಹೇಳಿದ್ಕೆ ಅವತ್ ರಾತ್ರೆ ಆ ಮಗೀನ ಹೊಲತ್ತಾವ ಹೊತ್ಕಂಡು ಬಂದದ್ದೇ ನಾನು. ಶ್ಯಾನ್ಬೋಗ್ರನ್ನ ನೋಡೇ ಇದ್ದ ಆ ಮಗಾ ಹೆದರ್ಲಿಲ್ಲ, ಆದ್ರ ಏನೂ ಮಾಡ್ಬೇಡಿ ಅಂತ ಅಂಗಲಾಚ್ತು. ಅವರ್ಗೋ ಇಲೆಕ್ಸನ್ ಸೋತ ಕುದಿ, ಐಗ್ಳು ಜಮೀನು ಪತ್ರ ಕೊಡ್ದ ಸಿಟ್ಟು, ಎಲ್ಲಾ ಸೇರಿ ಹುಲಿಯಂಗೆ ಆ ಮಗೀ ಮ್ಯಾಲೆ ಎರಗಿ…. ಬೇವಿನ ಕಟ್ಟೆ ಮ್ಯಾಗೆ ಕೂತ ನಂಗೆ ಏನಾಗ್ತಿದೇ ಅಂತಂಬೋ ಹೊತ್ಗೇ ಆ ಮಗಾ ಬಾವಿಗೆ ಬಿದ್ದ ಸದ್ದು ದಡಕ್ ಅಂತ ಕೇಳ್ತು. ಶ್ಯಾನ್ಬೋಗ್ರು ಬಿಚ್ಚಿದ್ದ ಧೋತ್ರ ಅಂಗೇ ಇಡ್ಕಂಡು ಓಡಿ ಬಂದವ್ರು ‘ಯಾರ್ಗೂ ಹೇಳ್ಬೇಡ’ ಅಂತ ಬಾಸೆ ತಗಂಡು ಕತ್ತಲಲ್ಲಿ ಹೊಂಟೋಗಿದ್ರು…. ನಾನೇ ನಿಂಗೆ ಅನ್ಯಾಯ ಮಾಡ್ಬುಟ್ಟೆ ಮಗಾ. . .” ಅಂತ ಹಲುಬುತ್ತಲೇ ಕಟವಾಯಿಯಲ್ಲಿ ದೈನ್ಯತೆಯ ರಸ ಸುರಿಸಿ ಕಣ್ಣ ತೇಲಿಸಿದ್ದ.

ಗೋಪಾಲನಲ್ಲಿ ಮಾತುಗಳೇ ಉಳಿದಿರಲಿಲ್ಲ. ಅಪ್ಪ ಸತ್ತ ನಾಕೇ ದಿನಕ್ಕೆ ಊರು ಮುಳುಗಡೆಯಾಗಿ ಮನೆ, ಗುಡಿ, ಬೇವಿನ ಮರದ ಕಟ್ಟೆ, ಮುಂದಣ ಜಮೀನು ಎಲ್ಲಾ ನೀರಲ್ಲಿ ಮುಳುಗಿದಂತೇ ಕಣ್ಣ ನೀರು ಇಂಗಿಹೋದ ಗೋಪಾಲ ಒಕ್ಕಲೆದ್ದು ಊರ ಮಂದಿ ಜೊತೆ ಈ ದೇವಸಾಗರದಲ್ಲಿ ನೆಲೆ ನಿಂತ. ಪರಸ್ಪರ ದಾವೆ ಹಾಕಿದ್ದ ಶಾನುಭೋಗರು ಮತ್ತೆ ಐಗಳು ಕೋರ್ಟಿಗೆ ಅಲೆದೂ ಅಲೆದೂ ಕೊನೆಗೆ ಆ ಹೊಲದ ನಿಜವಾದ ಟೆನೆಂಟ್ ಗೋಪಾಲನೆ ಅಂತ ಟ್ರಿಬ್ಯೂನಲ್ ಕೋರ್ಟು ತೀರ್ಪು ನೀಡಿತ್ತಂತೆ! ‘ಆ ಹೊಲಾ ನಿಂದೇ ಆಗಿದ್ದರಿಂದ ನಿಂಗೆ ಮುಳುಗಡೆ ಪರಿಹಾರ ಸಿಕ್ತದೆ. ಅರ್ಜಿ ಹಾಕು’ ಅಂತ ಹೇಳಿದ ವಿಲೇಜ್ ಅಕೌಂಟೆಂಟ್ ದುರ್ಗೋಜಿಯ ಮಾತಿಗೆ ಗೋಪಾಲ ಸುಮ್ಮನೇ ನಕ್ಕಿದ್ದ!

ಬೇವಿನ ಮರದ ಕಟ್ಟೆಯ ಮೇಲೆ ಗೋಪಜ್ಜ ಕೂತಂತೇ ಅವತ್ತಿನಂತೆ ಸಂಜೆಯಾಗತೊಡಗಿತ್ತು. ತನ್ನ ಕಣ್ಣಿನಿಂದ ದಳದಳನೇ ಉದುರುತ್ತಿದ್ದ ನೀರ ಹನಿಗಳನ್ನ ಒರೆಸಿಕೊಳ್ಳುತ್ತಲೇ ಕೂತ ಈ ಅಜ್ಜನನ್ನು ಊರ ಕೆಲ ಹುಡುಗರು ಬಲವಂತದಿಂದ ಡ್ಯಾಂನ ಏರಿ ಕಡೆ ಎಳೆದೊಕೊಂಡು ಬಂದರು. “ಮ್ಯಾಲಿನ ಬದ್ರಾ ಡ್ಯಾಂನಾಗಿಂದ ನೀರು ಬಿಟ್ಟಾರಂತೆ ನದೀಗೆ. ಈಗ ನಮ್ ಡ್ಯಾಮೂ ತುಂಬ್ಕಾತಾದೆ ಬಾ ಯಜ್ಜಾ. . ” ಅಂತ ಹೇಳಿದ ಹುಡುಗರ ಮಾತಿಗೆ ಪ್ರತಿಯಾಗಿ ಗೋಪಜ್ಜ “ಎಲ್ಲಾ ಅವತ್ತೇ ಮುಳುಗ್ಹೋಗದೆ. ಮತ್ತೇನೆ ಉಳಿದೈತಿ ಮುಳುಗಾಕ” ಎಂದ. ಆತನ ಕಣ್ಣೀರೇ ಕೋಡಿಯಾಗಿ, ನಾಲೆಯಾಗಿ, ರಭಸವಾಗಿ ಹರಿದಂತೆ ಡ್ಯಾಂನ ಪಾತ್ರದಲ್ಲಿ ನಿಧಾನಕ್ಕೆ ನೀರು ತುಂಬತೊಡಗಿ ಗುಡಿಯ ಗೋಪುರ, ಬೇವಿನ ಮರದ ಕಟ್ಟೆ, ಅದರ ಮೇಲಿನ ಮರದ ಬೆತ್ತಲೇ ಮರದ ಬೊಡ್ಡೆ ಎಲ್ಲಾ ನೀರಲ್ಲಿ ಮತ್ತೆ ಮುಳುಗತೊಡಗಿದವು.

ಆಗ ಹೊತ್ತೂ ಮುಳುಗಿತು.