ನನಗೆ ಜನರನ್ನ, ಅವರ ನಡವಳಿಕೆಯನ್ನ ಗಮನಿಸುವುದು ಒಂದು ಥರದ ಹವ್ಯಾಸವೆಂದೇ ಹೇಳ್ಬೇಕು. ಜನರು ಸೇರುವ ಕಡೆ ನನಗೆ ಅದೇ ಒಂದು ಮೋಜು. ಸಮಾರಂಭಗಳಿರಲಿ, ಸೂತಕವಿರಲಿ ಜನರು ನಟಿಸೋದರಲ್ಲೇ ಹೆಚ್ಚಿನ ಆನಂದ ಪಡೆಯುತ್ತಾರಾ? ಎಷ್ಟು ಕೃತಕವಾಗಿ ನಡೆದುಕೊಳ್ತಾರೆ! ಬರೀ ಮುಖವಾಡ. ‘ನಾನಿರೋದೇ ಹೀಗೆ’ ಅನ್ನೋ ಥರ ಬದುಕೋರು ತುಂಬಾ ಕಡಿಮೆ. ನನಗೆ ನಟನೆ ಒಲಿದು ಬರಲಿಲ್ಲ ! ನಟಿಸಲು ಬಾರದ ನಾನು ಪ್ರೀತಿ ನಟಿಸೋದರ ಬದಲು ಮೌನದ ಗುಹೆ ಸೇರಿ ಅವರನ್ನೆಲ್ಲ ಗಮನಿಸೋದಿಕ್ಕೆ ಶುರು ಮಾಡಿಬಿಡ್ತೀನಿ. ಬಣ್ಣ ಬಣ್ಣದ ಮುಖವಾಡ ಹೊತ್ತವರ ನಡುವೆ ನನ್ನದೇ ಮುಖ ಹೊತ್ತ ನಾನು ಗುಂಪಿನಲ್ಲಿ ಒಂದಾಗದೇ, ಗೋವಿಂದನಾಗದೇ ನೀರಿಂದ ಹೊರ ಬಿದ್ದ ಮೀನು !

ಮೊನ್ನೆ ಹೀಗಾಯ್ತು … ನನ್ನ ದೂರದ ಸಂಬಂಧಿಯೊಬ್ಬರು ತೀರಿಕೊಂಡರು. ೮೩ ವರ್ಷ ವಯಸ್ಸಾಗಿತ್ತು. ನಾನಾ ರೋಗಗಳು. ತುಂಬ ನರಳಾಟ ಪಾಪದವರದ್ದು. ಕಳೆದ ೮ ತಿಂಗಳಿಂದಲಂತೂ ಬದುಕು ದುರ್ಭರ ಅವರದ್ದು. ಮೊದಲೆಲ್ಲ ಮಂಡಿನೋವಿನಿಂದ ನರಳುತ್ತಿದ್ದವರು ಕೊನೆ ಕೊನೆಗೆ ನಡೆಯೋದಿಕ್ಕೂ ಕಷ್ಟ ಪಡ್ತಿದ್ರು. ಆ ನಂತರ ಶುರುವಾಗಿದ್ದು ಅಲ್ಜ಼ೈಮರ್ಸ್ ಖಾಯಿಲೆ. ಅಡಿಗೆ ಶುರು ಮಾಡಿದ ಅವರಿಗೆ ಸ್ವಲ್ಪ ಹೊತ್ತಿನಲ್ಲೇ ಒಲೆಯ ಮೇಲೆ ಏನಿಟ್ಟೆನೆಂಬುದೂ ನೆನಪಿರುತ್ತಿರಲಿಲ್ಲ! ಮೊದಲಲ್ಲಿ ಅರುಳು ಮರುಳು ಅಂತ ಎಲ್ಲರೂ ಹಗುರವಾಗಿ ತೆಗೆದುಕೊಂಡರು ಅಂತ ಕಾಣತ್ತೆ. ಆ ನಂತರ ಮರೆವು ವಿಪರೀತವಾಯ್ತು. ಮನೆಗೆ ಬಂದ ಮಗಳನ್ನ ಹಿಂದಿನ ದಿನ ತಾನೇ ನೋಡಿದ್ದರೂ ’ ಏನೇ ಎಷ್ಟು ದಿನ ಆಯ್ತು ನಿನ್ನ ನೋಡಿ .. ಆಗಾಗ ಬರಬಾರದಾ?’ ಅಂದರಂತೆ. ಆಗಲೇ ಎಲ್ಲರಿಗೂ ಪರಿಸ್ಥಿತಿ ಎಲ್ಲಿಗೆ ಮುಟ್ಟಿದೆ ಎಂದು ಅರ್ಥವಾಗಿದ್ದು. ಆಮೇಲೆಲ್ಲ ಇಳಿಜಾರಿನ ಪ್ರಯಾಣವೇ ಅವರದ್ದು. ಒಂದಿಷ್ಟು ದಿನಕ್ಕೆ ಗಂಟಲಲ್ಲಿ ನೀರು ಕೂಡಾ ಇಳಿಯದ ಸ್ಥಿತಿ. ಬಾಯಿಗೆ ಊಟವಿಟ್ಟರೆ ನುಂಗುವುದು ಕೂಡಾ ಆಗುತ್ತಿರಲಿಲ್ಲವಂತೆ! ಆಮೇಲೆ ಕೊನೆಕೊನೆಗೆ ಪಾರ್ಶ್ವವಾಯು ಬೇರೆ .. ಅದೂ ಬಲಗಡೆ ಭಾಗಕ್ಕೆ. ಮಾತು ನಿಂತು ಹೋಗಿತ್ತು. ಸಕ್ಕರೆ ಖಾಯಿಲೆಯಿಂದಾಗಿ ಕಣ್ಣು ಕೂಡಾ ಕಾಣದ ಹಾಗೆ ಆಯ್ತಂತೆ ಕೊನೆ ಕೊನೆಗೆ. ಮಲಗಿದ್ದಲ್ಲೇ ಮಲಗಿ ಬೆನ್ನೆಲ್ಲ ವ್ರಣ. ಅಲ್ಲೆಲ್ಲ ಕೀವು ಸೇರಿ ಮನೆಯೆಲ್ಲ ವಾಸನೆ ಹರಡಿತ್ತು. ಕೊನೆಗೆ ಸಾಯುವ ೧೦ ದಿನ ಮೊದಲು ಕೋಮಾಗೆ ಜಾರಿದ್ದರು. ನನಗಂತೂ ಕೇಳಿಯೇ ಮೈ ತಣ್ಣಗಾಗಿತ್ತು. ಇನ್ನು ಅನುಭವಿಸಿದ ಅವರ ಪಾಡು ಹೇಗಿತ್ತೋ ..

ಆಕೆಗೆ ಮೂವರು ಗಂಡು ಮತ್ತು ಒಬ್ಬಳು ಹೆಣ್ಣು ಮಗಳು. ಅವರ ಜೊತೆ ಯಾವ ಮಕ್ಕಳೂ ಇರಲಿಲ್ಲ ! ಅಜ್ಜಿ-ತಾತ ಇಬ್ಬರೇ. ಚಿಕ್ಕದೊಂದು ಸೈಟಿನಲ್ಲಿ ಪುಟ್ಟದೊಂದು ಮನೆ. ಅದೂ ಒಂದಿದ್ದರೆ ಒಂದಿಲ್ಲ ಅನ್ನುವ ಥರ. ತಾತನಿಗೆ ಆಗಲೇ ೬೮ ವರ್ಷ. ರಿಟೈರ್ ಆಗಿ ೧೦ ವರ್ಷ ಆಗಿಹೋಗಿತ್ತು. ಅಂಥಾ ಒಳ್ಳೆಯ ಕೆಲಸವೇನೂ ಇರದಿದ್ದರೂ ಆ ಆದಾಯ ಕೂಡಾ ನಿಂತು ಹೋಗಿ ಅಲ್ಲಿ ಇಲ್ಲಿ ಸಣ್ಣ ಪುಟ್ಟ ಕೆಲಸಕ್ಕೆ ಸೇರಿ ಆ ವಯಸ್ಸಿನಲ್ಲೂ ದುಡಿಯುತ್ತಿತ್ತು ಆ ತಾತ. ಅದೆಷ್ಟು ಸಂಬಳ ಬರ್ತಿತ್ತೋ ಗೊತ್ತಿಲ್ಲ. ಒಟ್ಟಿನಲ್ಲಿ ಇಬ್ಬರಿಗೆ ಕೂಡಾ ಆರಾಮವಾಗಿ ಸಾಕು ಅನ್ನಿಸದ ಆದಾಯ ಅವರದ್ದು. ಮಕ್ಕಳಲ್ಲಿ ಒಬ್ಬರೂ ಜೊತೆಗೆ ಇರಲಿಲ್ಲ. ಎಲ್ಲ ಬೇರೆ ಬೇರೆ ಸಂಸಾರ. ಅಜ್ಜಿಗೆ ಆಗಲೆ ೬೦ ವರ್ಷ. ಇಬ್ರೂ ಮಾತಿನ ಬಲದಿಂದಲೇ ಬದುಕ್ತಿದ್ದಾರೇನೋ ಅನ್ನೋ ಹಾಗೆ ಯಾವಾಗಲೂ ವಟ ವಟಗುಟ್ಟುತ್ತಿದ್ದರು. ತಾತ ಅಸಾಧ್ಯ ಮುಂಗೋಪಿ. ಕೈಲಾಗದಿದ್ದುದಕ್ಕೋ ಏನೋ ಅಜ್ಜಿಯ ಮೇಲೆ ಹರಿಹಾಯುತ್ತಿತ್ತು ಯಾವಾಗಲೂ. ಅಜ್ಜಿಯೂ ಏನು ಕಡಿಮೆ ಇರಲಿಲ್ಲ. ಮಾತಿಗೊಂದು ಎದುರುತ್ತರ ಕೊಡುತ್ತಿತ್ತು! ಇನ್ನಿಷ್ಟು ಸಿಟ್ಟು ತಾತನಿಗೆ …. ಒಟ್ಟಿನಲ್ಲಿ ಜಗದ ಸುಮಾರು ಗಂಡ ಹೆಂಡಿರ ಹಾಗೆ ನಿರಂತರ ಜಗಳವಾಡುತ್ತಾ ಸುಖವಾಗಿ ಬದುಕಿದ್ದರು!!

ಬೇರೆ ಬೇರೆ ಮನೆ ಮಾಡಿದ ಹೊಸದರಲ್ಲಿ ಮನದಲ್ಲಿದ್ದ ಅಳುಕಿಗೋ ಏನೋ ಎಲ್ಲರೂ ಒಂದಿಷ್ಟು ದಿನ ಅಪ್ಪ, ಅಮ್ಮನ ಮನೆಗೆ ಓಡಾಡಿದ್ದೇ ಓಡಾಡಿದ್ದು. ಆಮೇಲೆ ಅವರಿಗೂ ಜವಾಬ್ದಾರಿ ಎಲ್ಲ ಆದ ಮೇಲೆ ಕೊನೆಗೆ ಉಳಿದದ್ದು ಇಬ್ಬರೇ. ನಾವು ಎಂದೋ ಒಂದು ದಿನ ಹೋದರೆ ಬಿಡುವಿಲ್ಲದಂತೆ ಮಾತು. ಒಬ್ಬರೊಬ್ಬರ ಮೇಲೆ ದೂರುಗಳು. ಆಮೇಲೆ ನಾಲ್ಕು ಸಮಾಧಾನದ ಮಾತು. ಅಲ್ಲಿಗೆ ಅಂದಿನ ಭೇಟಿಯ ಮುಕ್ತಾಯ ಭಾಷಣ .. ಕಣ್ಣಲ್ಲಿಷ್ಟು ನೀರು ’ನೀನಾದರೂ ಬಂದು ಹೋಗ್ತಿರು …’ ಅನ್ನುವ ಮಾತು ಎಲ್ಲವೂ ಎಂದಿನಂತೆ ನಡೆಯುತ್ತಿತ್ತು. ಆಮೇಲೆ ಎಂದೋ ಒಂದು ದಿನ ಇದ್ದ ಮನೆಯನ್ನೂ ಮಾರಿಸಿದ್ದರು ಗಂಡುಮಕ್ಕಳು. ಅಜ್ಜಿ, ತಾತನಿಗೂ ದೊಡ್ಡ ಮನಸ್ಸು ಮಾಡಿ ಒಂಡು ಪಾಲು ಕೊಟ್ಟರಂತೆ! ಇದ್ದ ಮನೆಯನ್ನೂ ಕಳೆದುಕೊಂಡ ಮೇಲೆ ಇನ್ನೂ ಪುಟ್ಟ ಮನೆಯನ್ನು ಭೋಗ್ಯಕ್ಕೆ ಹಾಕಿಕೊಂಡು ಅಲ್ಲಿಗೆ ಹೋದರು. ಹೀಗೇ ಅವರ ಬದುಕು ನಾನು ಕಂಡ ಹಾಗೆ ಅದೆಷ್ಟೋ ವರ್ಷಗಳಿಂದ ! ಅಂಥ ಕಷ್ಟದ ಬದುಕು ಕಂಡ ಅಜ್ಜಿಗೆ ಸಾವು ಕೂಡಾ ಅಷ್ಟೇ ಕಷ್ಟದಾಯಕವಾಗಿತ್ತಲ್ಲಾ ಪಾಪ!

ಈ ಅಜ್ಜಿಯೇ ಮೊನ್ನೆ ಮೊನ್ನೆ ಸತ್ತಿದ್ದು .. ಛೆ ! ಸತ್ತಿದ್ದು ಅನ್ನಬಾರದೋ ಏನೋ .. ದೈವಾಧೀನರಾದರು ಅನ್ನುವುದು ಸರಿಯಲ್ಲವಾ?!

ಸಾವಿನ ಮನೆಗಳ ಅಸಹಜ ಮೌನ ನನ್ನನ್ನು ತಬ್ಬಿಬ್ಬು ಮಾಡುತ್ತದೆ. ಪ್ರಾಣವಿಲ್ಲದ ದೇಹ ಕೊನೆಯ ಯಾತ್ರೆ ಇನ್ನೂ ಹೊರಟಿರಲಿಲ್ಲ. ಆ ಸ್ಥಿತಿಯಲ್ಲಿದ್ದ ಜೀವ ಇಂದು ಹೋಗುತ್ತದೋ, ನಾಳೆ ಹೋಗುತ್ತದೋ (ಕೆಲವೊಮ್ಮೆ ಯಾಕಾದರೂ ಹೋಗಲಿಲ್ಲವೋ) ಅನ್ನೋದೆಲ್ಲ ಗೊತ್ತಿದ್ದೇ ಆದರೂ ಆ ಸತ್ತ ಮನೆಯಲ್ಲಿ ಮೌನವಿದ್ದೇ ತೀರಬೇಕು. ಸುತ್ತ ನೆರೆದಿದ್ದ ಮಕ್ಕಳು, ಮೊಮ್ಮಕ್ಕಳು, ಸೊಸೆಯಂದಿರು, ಅಳಿಯ. ತೀರಾ ಕೊನೆಯ ದಿನಗಳಲ್ಲಿ ಮಗನ ಮನೆಯ ವಾಸ. ಅದೂ ಜ್ಞಾನವಿಲ್ಲದ ಸ್ಥಿತಿಯಲ್ಲಿದ್ದಾಗ. ಸರಿಯಿರುವಾಗಲೇ ಇದ್ದಿದ್ದರೆ ಅಜ್ಜಿ ಒಂದಿಷ್ಟು ಸಂಭ್ರಮವಾದರೂ ಪಟ್ಟಿರುತ್ತಿದ್ದರೇನೋ. ಕೊನೆಯ ದರ್ಶನ ಪಡೆಯಲು ಹೊರಗಿನವರು ಬಂದಾಗೊಮ್ಮೆ ಅಲ್ಲಿ ಒಂದಿಷ್ಟು ಜೀವ ಸಂಚಾರ! ಬಂದವರೂ ಪಾಪ ಬೆನ್ನು ಸವರಿ ’ಏನ್ಮಾಡೋದು ಇಷ್ಟೇ ಲಭ್ಯ ಇದ್ದಿದ್ದು… ಸಮಾಧಾನ ಮಾಡ್ಕೊಳ್ಳಿ …’ ಅಂತ ಶುರು ಮಾಡ್ತಿದ್ದ ಹಾಗೆಯೇ ಸಮಾಧಾನವಾಗೇ ಕೂತಿದ್ದವರು ಹಾಗೆ ಹೇಳಿದ ವ್ಯಕ್ತಿಗೆ ಮುಜುಗರವಾಗಬಾರದೋ ಎಂಬಂತೆ ಕಣ್ಣಲ್ಲೆಲ್ಲಾ ನೀರು ತುಂಬಿಕೊಳ್ತಿದ್ದರು ! ಇದು ಒಂದು ಸಲವಲ್ಲ, ಎರಡು ಸಲವಲ್ಲ … ಪ್ರತಿ ವ್ಯಕ್ತಿ ಬಂದಾಗಲೂ ಅವರು ಅದೇ ಮಾತು ಹೇಳೋದು, ಇವರು ನಾಟಕೀಯವಾಗಿ ಸೆರಗನ್ನು ಕಣ್ಣಿಗೆ ಒತ್ತಿಕೊಳ್ಳುವುದು. ನನಗಂತೂ ಮನಸ್ಸಿನ ಒಂದು ಕಡೆ ನಗು, ಮತ್ತೊಂದು ಕಡೆ ತೆಳು ವಿಷಾದ. ಸತ್ತ ಮನೆಯಲ್ಲಿ ನಕ್ಕರೆ ಶತ್ರುಗಳ ಹಾಗೆ ಕಾಣ್ತಾರಲ್ಲ ಅದಕ್ಕೋಸ್ಕರ ನಗು ತಡೆ ಹಿಡಿದೆ. ಅಲ್ಲಿ ಯಾರಿಗಾದರೂ ಅಳು ಬಂದಿದ್ದೇ ಆದರೆ ಆ ತಾತನಿಗೆ ಮಾತ್ರ. ೬೫, ೭೦ ವರ್ಷದ ದಾಂಪತ್ಯವಿರಬೇಕು .. ಆಗೀಗ ಒಂದು ಹನಿ ಕಣ್ಣೀರು ಹಾಕ್ತಾ ಕೂತಿದ್ದರು. ಅಲ್ಲೇ ಫೋನಿನಲ್ಲಿ ಸೊಸೆ ಅಡುಗೆಯವರಿಗೆ ಊಟ ತಂದಿಡಲು ಪಿಸು ಮಾತಿನಲ್ಲಿ ಹೇಳುತ್ತಿದ್ದರು. ಮೊಮ್ಮಗನಿಗೆ ಪರೀಕ್ಷೆ .. ಆಗೀಗ ವಾಚ್ ನೋಡಿಕೊಳ್ತಿದ್ದ. ರೂಮಿನಲ್ಲಿ ಮೊಮ್ಮಗಳು ಮಗುವಿಗೆ ಹೊರಗಿನಿಂದ ತರಿಸಿದ ಇಡ್ಲಿ ಗುಟ್ಟಾಗಿ ತಿನ್ನಿಸುತ್ತ ಕೂತಿದ್ದಳು. ಇನ್ನೂ ಹದಿಹರೆಯದ ಮೊಮ್ಮಗಳು ದೊಡ್ಡಪ್ಪನ ಮಗಳ ಜೊತೆ ಅದೇನೋ ಪಿಸುಗುಡುತ್ತಾ ನಗುತ್ತಿದ್ದಳು. ಅದೂ ಮೆಲ್ಲಗೆ … ಯಾರಿಗೂ ಆದಷ್ಟೂ ತಿಳಿಯದ ಹಾಗೆ. ನಾನು ಎಲ್ಲದಕ್ಕೂ ಮೂಕ ಪ್ರೇಕ್ಷಕಳು. ಮರಿಮಗು ಚಿಕ್ಕದು ಅದಕ್ಕೆ ಊಟ ರಾಜಾರೋಷವಾಗೇ ಮಾಡಿಸಬಹುದಿತ್ತಲ್ಲವಾ? ಪ್ರಶ್ನೆಯೊಂದು ಮನಸ್ಸಿಗೆ ಬಂತು. ಓಹ್! ಮುಖವಾಡದ ಬದುಕು ಇದು .. ಕೂಡಲೇ ನೆನಪಾಗಿ ಸುಮ್ಮನಾದೆ. ಅಂತೂ ಎಲ್ಲ ಕಾರ್ಯಗಳು ಮುಗಿದು ದೇಹ ಹೊರಡುವ ಸಮಯ ಬಂತು. ಕಳಿಸಿ ಒಂದಕ್ಷರ ಮಾತಿಲ್ಲದೇ ಮನೆಗೆ ಹೊರಟೆ.

ಇನ್ನು ಆತ್ಮವನ್ನು ಸ್ವರ್ಗಕ್ಕೆ ಸೇರಿಸುವ ಕಾರ್ಯ ಶುರುವಾಗುವ ದಿನದವರೆಗೆ ನನಗಂತೂ ಬಿಡುವು ಈ ನಾಟಕದಿಂದ!

ಹತ್ತನೆಯ ದಿನ ಧರ್ಮೋದಕಕ್ಕೆ ಹೆಂಗಸರಿಗೆ ಬರಹೇಳುವುದಿಲ್ಲವಾದ್ದರಿಂದ ಅವತ್ತು ಬಚಾವಾದೆ. ೧೨, ೧೩ ನೆ ದಿನಕ್ಕೆ ಬರ ಹೇಳಿದ್ದರು. ನಾಟಕ ಪ್ರದರ್ಶನಕ್ಕೆ ಹೊರಟೆ. ಸ್ವಲ್ಪ ಎಲ್ಲರ ಮುಖದಲ್ಲೂ ಸುಳಿದಾಡುವ ನಗು. ಅದೂ ಕಂಡೂ ಕಾಣದ ಹಾಗೆ ಅಷ್ಟೇ. ಬಂದವರನ್ನ ಬನ್ನಿ ಎನ್ನುವುದಿಲ್ಲ ಯಾರೂ ಮುಕ್ತವಾಗಿ. ಹೊರಡುವಾಗ ಹೇಳಿ ಹೊರಡುವ ಹಾಗಿಲ್ಲ. ಏನೆಲ್ಲ ಕಟ್ಟುಪಾಡುಗಳು! ಸಹಜವಾಗಿ ಬದುಕಲು ಯಾರಿಗೂ ಆಗುವುದೇ ಇಲ್ಲ. ಎಷ್ಟೊಂದು ಶಾಸ್ತ್ರಗಳು ! ನಾನು ಮೂಕಪ್ರೇಕ್ಷಕಳು. ಸುಮ್ಮನೆ ಕೂತು ಎಲ್ಲ ನೋಡುತ್ತಿದ್ದೆ. ತಿಥಿ ಮುಗಿದ ಮೇಲೆ ನಮಸ್ಕಾರ ಮಾಡಲು ಎಲ್ಲರನ್ನೂ ಕರೆದರು. ಬಂದವರೆಲ್ಲ ಅಡ್ಡಬೀಳುವ ಕಾರ್ಯಕ್ರಮ. ಮೊದಲು ಮನೆಯವರ ಸರದಿ. ತಾತ ಮೊದಲು ಅಡ್ಡ ಬಿದ್ದವರು ಎರಡು ನಿಮಿಷ ಹಾಗೇ ಅಳುತ್ತಾ ಅಲ್ಲೇ ಕೂತಿದ್ದರು. ಪಾಪ ಏನು ಫ಼್ಲ್ಯಾಷ್ ಬ್ಯಾಕ್ ಬಂದಿತೋ ಏನೋ. ಅವರ ದುಃಖ ಕಂಡು ಮನಸ್ಸು ಸ್ವಲ್ಪ ಮುದುಡಿತು. ಆ ನಂತರ ಮನೆಯ ಉಳಿದ ಸದಸ್ಯರ ಸರದಿ. ಸೀನ್ ಬದಲಿಸಿದ ತರಹ ನಮಸ್ಕರಿಸಿದ ಮನೆಯ ಸದಸ್ಯರೆಲ್ಲರೂ ಅತ್ತಿದ್ದೇ ಅತ್ತಿದ್ದು. ಪಾಪ ಎಷ್ಟು ಅಳುಕೋ ಮನದಲ್ಲಿ ! ಸೊಸೆಯಂದಿರಂತೂ ಅದ್ಭುತವಾಗಿ ಅಳುತ್ತಿದ್ದರು. ಬಂದ ಹೆಂಗಸೊಬ್ಬರು ’ಸಮಾಧಾನ ಮಾಡ್ಕೊಳ್ಳಿ .. ಬೇಕಾದಷ್ಟು ಮಾಡಿದೀರ ಇರುವಾಗ ….’ ಅಂತ ಏನೇನೋ ಹೇಳ್ತಿದ್ದರು. ನನಗೆ ಒಂದೇ ಆಶ್ಚರ್ಯ ! ಹಾಗೆ ಹೇಳಿದವರಿಗೂ, ಹೇಳಿಸಿಕೊಂಡವರಿಬ್ಬರಿಗೂ ಗೊತ್ತು ನಿಜಾಂಶ ಏನು ಎಂದು, ಬದುಕಿರುವವರೆಗೆ ಒಂದಿಷ್ಟು ಸುಖವೂ ಆ ಅಜ್ಜಿಗೆ ಕೊಡಲಿಲ್ಲವೆಂದು, ಇದ್ದ ಒಂದೇ ಮನೆಯನ್ನು ಮಾರಿಸಿ ಅಪ್ಪ, ಅಮ್ಮನಿಗೆ ನೆಲೆ ಇಲ್ಲದಂತೆ ಮಾಡಿದರೆಂದು … ಆದರೂ ಸುಳ್ಳು ಮುಖವಾಡಗಳು. ಅವರು ಸಮಾಧಾನ ಹೇಳುವುದು, ಇವರು ಅದನ್ನು ನಂಬಿ ಸೀಕರಿಸಿದಂತೆ ನಟಿಸುವುದು!

ಮುತ್ತೈದೆಯಾಗಿ ಸತ್ತದ್ದರಿಂದ ಮಂಗಳವಾರ ವೈಕುಂಠ ಸಮಾರಾಧನೆ ನಡೆಸಲು ಒಳ್ಳೆಯ ದಿನ ಅಲ್ಲವಂತೆ. ಹಾಗಾಗಿ ಅದನ್ನು ಬುಧವಾರ ಇಟ್ಟುಕೊಂಡಿದ್ದಾರಂತೆ … ಪಿಸುಗುಟ್ಟಿದರು ಒಬ್ಬರು. ಸತ್ತ ಮೇಲೆ ಒಳ್ಳೆಯ ದಿನವೇನು, ಕೆಟ್ಟ ದಿನವೇನು!! ಕೆಟ್ಟ ದಿನ ಬಂದಿದ್ದಕ್ಕೇ ಸತ್ತಿದ್ದು .. ಅಲ್ಲವಾ?ನಾಲಿಗೆ ತುದಿಗೆ ಬಂದ ಮಾತನ್ನ ಆಡುವ ಹಾಗಿಲ್ಲ. ನನ್ನನ್ನು ಜಾತಿ ಭ್ರಷ್ಟಳು, ಧರ್ಮ ಭ್ರಷ್ಟಳು ಎನ್ನುವ ಹಾಗೆ ನೋಡುತ್ತಾರೆ. ಅದಾದರೂ ಪರವಾಗಿಲ್ಲ ಎಂದು ಹೇಳಿಯೇ ಬಿಟ್ಟೆ ಅಂತಲೇ ಇಟ್ಟುಕೊಂಡರೂ ನನ್ನ ಮಾತನ್ನು ಯಾರು ಕೇಳುವವರಿದ್ದಾರೆ ಅಲ್ಲಿ? ಎಲ್ಲಿ ಹೇಳಬೇಕೋ ಅಲ್ಲಿ ನನ್ನ ಅಭಿಪ್ರಾಯ ಹೇಳುವುದು ಸರಿ ಅಂತ ನಿರ್ಧರಿಸಿದೆ. ಇನ್ನು ಆತ್ಮವನ್ನು ಸ್ವರ್ಗಕ್ಕೆ ಸೇರಿಸುವ ಪುರೋಹಿತರಿಗೆ ಪಾಪ ಅವತ್ತಿನ ದಿನದ ಅದೆಷ್ಟನೆಯದ್ದೋ ಇದು … ಬಾಯಲ್ಲಿ ಮಂತ್ರ ಹೇಳುತ್ತಿದ್ದರೂ ಕೈಯ್ಯಲ್ಲಿ ಯಾರಿಗೋ ಏನೇನೋ ಸಂಜ್ಞೆಗಳು, ಗುರುತುಗಳು. ಊಟದ ಟೇಬಲ್ ಹಾಕಲು ಒಬ್ಬ ಹುಡುಗನಿಗೆ ಸಂಜ್ಞೆ ಮಾಡುತ್ತಿದ್ದರು. ಪಕ್ಕದಲ್ಲಿ ಇದ್ದ ಅಸಿಸ್ಟೆಂಟ್‌ಗೆ ಏನೋ ಸಲಹೆ, ಸೂಚನೆಗಳು. ಎಲ್ಲ ಕೆಲಸದ ಹಾಗೆ ಇದೂ ಒಂದು ಕೆಲಸವೇನೋ ಅನ್ನುವಂತೆ ಯಾಂತ್ರಿಕವಾಗಿ ಎಲ್ಲ ನಡೆಯುತ್ತಿತ್ತು. ಒಬ್ಬರಿಗೂ ಶ್ರದ್ಧೆಯಿಲ್ಲ! ಇವರೆಲ್ಲ ಅದೇನು ಹೇಳಿ ನಮ್ಮ ಆತ್ಮವನ್ನು ಸ್ವರ್ಗಕ್ಕೆ ಕಳಿಸಿಯಾರು? ಅನ್ನುವ ಆಲೋಚನೆ ಬಂತು. ದೇವರ ಬಳಿ ನಮ್ಮನ್ನು ಸ್ವರ್ಗಕ್ಕೆ ಸೇರಿಸುವಂತೆ ಕೇಳಿಕೊಳ್ಳುವ ಪುರೋಹಿತರಿಗೆ ನಾಟಕಕ್ಕಾಗಿಯಾದರೂ ಶ್ರದ್ಧೆ ತೋರಿಸುವ ಮನಸಿಲ್ಲ. ಬೇರೆಯವರೆಲ್ಲ ಅಷ್ಟು ಚೆನ್ನಾಗಿ ನಟಿಸುತ್ತಿರಬೇಕಾದರೆ ಇವರೂ ಅದರಲ್ಲಿ ಭಾಗಿಯಾಗಬಾರದೇ?! ಏನೇನೋ ತುಂಟ ಆಲೋಚನೆಗಳು ನನಗೆ!

ಮನಸ್ಸಿಗೆ ಯಾಕೋ ಎಲ್ಲ ಸುಸ್ತು ತರಿಸಿತು.

ನನ್ನ ಮಟ್ಟಿಗೆ ಹೇಳುವುದಾದರೆ ನನಗೆ ಯಾವ ಆಚಾರ ವಿಚಾರದಲ್ಲೂ ಅತೀ ನಂಬಿಕೆಯಿಲ್ಲ. ಅಪ್ಪ-ಅಮ್ಮ ಬದುಕಿರುವವರು ಮತ್ತು ಮುಖ್ಯವಾಗಿ ಹೆಂಗಸರು ಸ್ಮಶಾನಕ್ಕೆ ಹೋದರೆ ಕೇಡು ಎನ್ನುತ್ತಾರಲ್ಲ .. ನನ್ನ ದೊಡ್ಡಮ್ಮನ ಮಗ ನನ್ನ ಪ್ರೀತಿಪಾತ್ರನಾದವನು. ಅವನ ಅಕಾಲ ಮರಣವಾದಾಗ ನಮ್ಮ ಮನೆಯ ಎಲ್ಲ ಸದಸ್ಯರೂ ಇದೆಲ್ಲ ಆಚಾರ, ವಿಚಾರ ಮೀರಿ ಸ್ಮಶಾನಕ್ಕೆ ಹೋಗಿದ್ದೆವು ಮತ್ತು ಅದಾಗಿ ೧೯ ವರ್ಷಗಳ ನಂತರವೂ ನಾನು, ನನ್ನ ಅಪ್ಪ, ಅಮ್ಮ ಎಲ್ಲರೂ ಬದುಕೇ ಇದ್ದೇವೆ! ಅದಕ್ಕಿಂತ ಹೆಚ್ಚಾಗಿ ಸುಮ್ಮನೆ ಸ್ಮಶಾನ ಹೇಗಿರುತ್ತದೆಂತ ನೋಡಲು ಅಲ್ಲಿ ಹೋಗಿ ಕೂತು ಬರುತ್ತಿದ್ದ ದಿನಗಳೂ ಇದ್ದವು ನಾನು ಶಾಲೆಯಲ್ಲಿ ಓದುತ್ತಿರುವಾಗ ! ಹರಿಶ್ಚಂದ್ರ ಘಾಟ್‌ನ ಸಮಾಧಿಗಳ ಮೇಲೆ ಕೂತು ಊಟ ಕೂಡಾ ಮಾಡುತ್ತಿದ್ದೆವು ಒಮ್ಮೊಮ್ಮೆ!!

ನನ್ನ ಮನಸ್ಸು ಮೊದಲಿನಿಂದಲೂ ರೆಬೆಲ್ ಸ್ಟಾರ್ ಥರ ! ಈ ಮುಖವಾಡ, ನಾಟಕ ಎಲ್ಲ ನೋಡಿದ ಮೇಲೆ ಕೆಲವು ನಿರ್ಧಾರಗಳನ್ನು ಕೈಗೊಂಡೆ. ಮನೆಗೆ ಹಿಂತಿರುಗಿದ ನಂತರ ನನ್ನ ಮಗನಿಗೆ ಹೇಳಿದೆ ’ ನಾನು ಸತ್ತ ನಂತರ ಅಳು ಬಂದರೆ ಎರಡು ಹನಿ ಕಣ್ಣೀರು ಹಾಕು. ಬೇರೆಯವರಿಗಾಗಿ ಖಂಡಿತ ನಟಿಸಬೇಡ. ನನ್ನ ಶ್ರಾದ್ಧ ಮಾಡಬೇಡ. ಸತ್ತ ನಂತರ ನನ್ನ ದೇಹ ಅಗ್ನಿಗೆ ಆಹುತಿಯಾದ ನಂತರ ನೀನು ನಿನ್ನ ಎಂದಿನ ಕೆಲಸಗಳನ್ನು ಮಾಡಿಕೋ. ರಜೆ ಹಾಕಬೇಡ. ನನ್ನ ಆತ್ಮವನ್ನು ಸ್ವರ್ಗಕ್ಕೆ ಸೇರಿಸುವ ಕಾರ್ಯಕ್ರಮವನ್ನಂತೂ ಇಟ್ಟುಕೊಳ್ಳಲೇಬೇಡ. ಧರ್ಮೋದಕ, ತಿಥಿ, ವೈಕುಂಠ ಸಮಾರಾಧನೆ ಯಾವುದನ್ನೂ ಮಾಡಕೂಡದು. ಇನ್ನು ಪ್ರತಿ ವರ್ಷ ನಾನು ಸತ್ತ ದಿನ ನನ್ನ ನೆನಪಾದರೆ ನನಗೆ ಸಂಬಂಧಿಸಿದ ಜೀವಿಗಳ ಜೊತೆ ಒಟ್ಟಿಗೇ ಕೂತು ಊಟ ಮಾಡು. ಅಪ್ಪಿ ತಪ್ಪಿ ಕೆಲಸದ ಗಡಿಬಿಡಿಯಲ್ಲಿ ಮರೆತು ಹೋದರೆ ನೊಂದುಕೊಳ್ಳಬೇಡ. ಬದುಕಿರುವಾಗ ನನ್ನೊಡನೆ ಇರು, ನಗು, ಮಾತಾಡು. ಸತ್ತ ನಂತರದ್ದೆಲ್ಲ ವ್ಯರ್ಥ. ಆತ್ಮ ಇದೆಯೋ, ಇಲ್ಲವೋ ಕಂಡವರಿಲ್ಲ. ಈಗಿರುವ ನಿನ್ನ ಅಮ್ಮ ಮಾತ್ರ ಸತ್ಯ. ಹಾಗಾಗಿ ಯಾವುದು ಖಚಿತವೋ, ಖಂಡಿತವೋ ಅದು ಮುಖ್ಯ. ಆತ್ಮ, ಸ್ವರ್ಗ ಇದೆಲ್ಲ ನನಗೆ ಗೊತ್ತಿಲ್ಲ ಮಗೂ …. ನಾನು ಸತ್ತ ನಂತರ ನನಗಾಗಿ ಏನಾದರೂ ಶಾಸ್ತ್ರ, ಕರ್ಮ ಅಂತ ಮಾಡಿದ್ದೇ ಆದರೆ ಮತ್ತು ನನಗೊಂದು ಆತ್ಮ ಇದ್ದಿದ್ದೇ ಆದರೆ ನಾನು ಬೇಕಂತಲೇ ಸ್ವರ್ಗಕ್ಕೆ ಹೋಗದೇ ಉಳಿಯುತ್ತೇನೆ. so the choice is yours !’ ಅಂತ.

ಅಬ್ಬ! ಈಗ ನೆಮ್ಮದಿಯಾಯಿತು ….