ಆಕೆ ಅಗಸಿಯ ಕಡೆಗೆ ಹೋಗುತ್ತಿರುವುದರಿಂದ ಏನಾಗಿದೆ ಎಂದು ಕೇಳಿಯೆಬಿಟ್ಟೆ. ಅಡುಗೆಯಲ್ಲಿ ಉಪ್ಪಿಲ್ಲವೆಂದು ಗಂಡ ಹೊಡೆದಿರುವುದಾಗಿ ತಿಳಿಸಿದಳು. ‘ಆತ ಹಣ ಕೊಡದಿದ್ದರೆ ಉಪ್ಪು ಎಲ್ಲಿಂದ ತರಲಿ’ ಎಂದು ಕೇಳಿದಳು. ಈ ರೀತಿ ಬದುಕುವುದಕ್ಕಿಂತ ಸಾಯುವುದೇ ಮೇಲು ಎಂದು ಬಾವಿಗೆ ಹಾರುವುದಾಗಿ ಹೊರಟೇಬಿಟ್ಟಳು. ಮತ್ತೆ ತಡೆದೆ. ಬಿಗಿ ಮುಷ್ಟಿಯಲ್ಲಿದ್ದ ನಾಲ್ಕಾಣೆಯನ್ನು ತೋರಿಸುತ್ತ ‘ಇದನ್ನು ಕೊಟ್ಟರೆ ವಾಪಸ್ ಹೋಗುವೆಯಾ’ ಎಂದು ಕೇಳಿದೆ. ಆಕೆ ಕೃತಜ್ಞತೆಯಿಂದ ತೆಗೆದುಕೊಂಡು ಮನೆಯ ದಾರಿ ಹಿಡಿದಳು. ಆ ನಾಲ್ಕಾಣೆಯನ್ನು ಖರ್ಚು ಮಾಡಿದೆನೆಂದು ಭಾವಿಸಿ ತಾಯಿ ಬಡಿದದ್ದು ನೋವೆನಿಸಲಿಲ್ಲ. ಒಂದು ಹೆಣ್ಣಿನ ಜೀವ ಉಳಿಸಿದ ಆ ನಾಲ್ಕಾಣೆ ನನ್ನ ಮನದಲ್ಲಿ ಹೊಳೆಯುತ್ತಲೇ ಇದೆ.
ರಂಜಾನ್‌ ದರ್ಗಾ ಬರೆಯುವ ಆತ್ಮಕತೆ ʻನೆನಪಾದಾಗಲೆಲ್ಲʼ ಸರಣಿಯ 58ನೇ ಕಂತು ನಿಮ್ಮ ಓದಿಗೆ.

1962ನೇ ಇಸ್ವಿ, ಆಗ ನಾನು 11 ವರ್ಷದ ಬಾಲಕ. ಒಂದು ದಿನ ಡೊಮನಾಳ ಗ್ರಾಮದ ನನ್ನ ಹಿರಿಯ ಮಿತ್ರ ತುಕಾರಾಮ ಶಿವಶರಣ ಅವರ ಕಿರಿಯಣ್ಣ ಮನೆಗೆ ಬಂದಿದ್ದರು. ಅವರ ಹಿರಿಯಣ್ಣ ಕೂಡ ವಿಜಾಪುರಕ್ಕೆ ಬಂದಿದ್ದರೂ ಮನೆಗೆ ಬಂದಿರಲಿಲ್ಲ. ಏಕೆಂದರೆ ಚಕ್ಕಡಿ ತುಂಬ ಜೋಳದ ಚೀಲ ತುಂಬಿಕೊಂಡು ಅಡತಿ ಅಂಗಡಿಗೆ ಬಂದಿದ್ದರು. ಲಿಲಾವ್ ವೇಳೆ ವ್ಯಾಪಾರಿಗಳು ಅವರ ಜೋಳವನ್ನು ಖರೀದಿಸಿದ್ದರು. ಹೀಗಾಗಿ ಅವರು ಹಣ ಪಡೆಯುವವರೆಗೆ ಅಡತಿ ಅಂಗಡಿಯಲ್ಲಿ ಕೂಡಬೇಕಾಗಿತ್ತು.

ಆ ಕಾಲದಲ್ಲಿ ರೈತನಿಗೆ ಬಿಚಾಯತ ಎಂದು ಕರೆಯುತ್ತಿದ್ದರು. ಪಾಪದ ಮನುಷ್ಯ, ಮುಗ್ಧ ಮನುಷ್ಯ, ನಿರಕ್ಷರಿ ಮನುಷ್ಯ, ಅಸಹಾಯಕ ಮನುಷ್ಯ ಎಂದು ಮುಂತಾದ ಅರ್ಥಗಳನ್ನು ಆ ಶಬ್ದ ಸ್ಫುರಿಸುತ್ತಿತ್ತು. ಅಡತಿ ಅಂಗಡಿ ಮಾಲೀಕರಾದ ದಲಾಲರು ತಮ್ಮ ಕಮೀಷನ್ ತೆಗೆದುಕೊಳ್ಳುವುದರ ಜೊತೆಗೆ ನಿರ್ಮಾಣ ಹಂತದಲ್ಲಿರುವ ಗುಡಿಗಳಿಗಾಗಿ ಹಣ ಸಂಗ್ರಹಿಸುವುದಕ್ಕಾಗಿ ಗುಡಿಪಟ್ಟಿ, ಸ್ಥಳೀಯ ಖಾಸಗಿ ಶಿಕ್ಷಣ ಸಂಸ್ಥೆಗಳ ಏಳ್ಗೆಗಾಗಿ ಸಾಲಿಪಟ್ಟಿ ಎಂದು ಒಂದಿಷ್ಟು ಹಣವನ್ನು ತಮ್ಮ ಕಮೀಷನ್ ಜೊತೆಗೆ ಕಡಿತಗೊಳಿಸಿ ಉಳಿದುದನ್ನು ರೈತರಿಗೆ ಕೊಡುತ್ತಿದ್ದರು.

ಬಹುಪಾಲು ರೈತರು, ದಲಾಲರು ಮತ್ತು ವ್ಯಾಪಾರಿಗಳು ಲಿಂಗಾಯತರೇ ಇರುವ ಕಾರಣ ಇದೆಲ್ಲ ನಡೆದುಹೋಗುತ್ತಿತ್ತು. ದಲಿತರು ಮತ್ತು ಮುಸ್ಲಿಮರು ಮುಂತಾದವರು ರೈತರಲ್ಲಿ ಅಲ್ಪಸಂಖ್ಯಾತರಾಗಿದ್ದರು. ಆದರೆ ಅವರು ಇಂಥ ವಿದಾಯಕ ಕಾರ್ಯಗಳಿಗೆ ಸ್ಪಂದಿಸುತ್ತಿದ್ದರು.

ವಿಜಾಪುರದಲ್ಲಿ ಬಿ.ಎಲ್.ಡಿ.ಇ. ಸಂಸ್ಥೆಯಂಥ ಬೃಹತ್ ಲಿಂಗಾಯತ ಶಿಕ್ಷಣ ಸಂಸ್ಥೆ ತಲೆ ಎತ್ತಬೇಕಾದರೆ ಅದರ ಹಿಂದೆ ರೈತರ ದೇಣಿಗೆಯ ಪಾತ್ರ ಹಿರಿದಾಗಿದೆ. ಅದರೆ ಅದು ಎಲೆಯ ಮರೆಯ ಕಾಯಿಯಂತಾಗಿದೆ.

ದಲಾಲರು, ವ್ಯಾಪಾರಿಗಳು ಮುಂತಾದವರು ರೈತರ ಉತ್ಪನ್ನಗಳ ಮೇಲೆಯೆ ಬದುಕುವಂಥವರು. ದಲಾಲರು ಮತ್ತು ವ್ಯಾಪಾರಿಗಳ ಹಾಗೆ ಆಹಾರ ಧಾನ್ಯ ಬೆಳೆಯುವ ಯಾವ ರೈತನೂ ಶ್ರೀಮಂತನಾಗಲು ಸಾಧ್ಯವಿಲ್ಲ. ಆಗಿನ ಕಾಲದಲ್ಲಿ ರೈತರ ಶ್ರೀಮಂತಿಕೆಯನ್ನು ಅವರ ಭೂಮಿಯ ವಿಸ್ತಾರ ಮತ್ತು ಜೋಡೆತ್ತುಗಳ ಸಂಖ್ಯೆ ಎಷ್ಟು ಎಂಬುದರ ಮೇಲೆ ಅಳೆಯಲಾಗುತ್ತಿತ್ತು ಹೊರತಾಗಿ ಆತ ಬೆಳೆದ ಬೆಳೆಗೆ ಎಷ್ಟು ಲಾಭ ಬಂದಿತು ಎಂಬುದರ ಕಡೆಗೆ ಲಕ್ಷ್ಯವಿರುತ್ತಿರಲಿಲ್ಲ.

ಹನ್ನೆರಡು ಎತ್ತಿನ ಒಕ್ಕಲುತನದ ರೈತರಿಗೂ ತೇಜಿ-ಮಂದಿ ವ್ಯಾಪಾರದ ಯಾವ ತಂತ್ರಗಳೂ ಗೊತ್ತಾಗುತ್ತಿರಲಿಲ್ಲ. ಬಾಂಬೆ ಮಾರುಕಟ್ಟೆ ಮೇಲೆ ವ್ಯವಸಾಯೋತ್ಪನ್ನಗಳ ಪೇಟೆ ಧಾರಣೆ ನಿರ್ಧಾರವಾಗುತ್ತಿತ್ತು. ವ್ಯಾಪಾರಿ ವರ್ಗದವರು ಫೋನ್ ಮೂಲಕ ಉತ್ಪನ್ನಗಳ ಬಾಂಬೆ ಧಾರಣೆ ತಿಳಿದುಕೊಳ್ಳುತ್ತಿದ್ದರು. ಈ ಸಂಪರ್ಕಜಾಲ ಅವರಿಗೆ ಮಾತ್ರ ಗೊತ್ತಿರುತ್ತಿತ್ತು. ಪಾಪ ರೈತರಿಗೆ ಇದೆಲ್ಲ ಎಲ್ಲಿ ತಿಳಿಯಬೇಕು?

ಶಿವಶರಣ ಅವರ ಹಿರಿಯಣ್ಣ ಬಹಳ ಮುಗ್ಧ. ದಲಾಲರ ಅಂಗಡಿಯಲ್ಲೂ ತಾನೊಬ್ಬ ದಲಿತ ಎಂಬ ಭಾವನೆಯಲ್ಲೇ ಇರುತ್ತಿದ್ದ. ತಾವು ಅಸ್ಪೃಶ್ಯರು ಎಂಬ ಭಾವ ಕಲಿತ ದಲಿತರಲ್ಲೂ ಜಾಗೃತವಾಗಿರುವಂತೆ ನಮ್ಮ ನೀಚ ಸಾಮಾಜಿಕ ವ್ಯವಸ್ಥೆ ನೋಡಿಕೊಂಡಿದೆ. ಇಷ್ಟೆಲ್ಲ ವಿಜ್ಞಾನ ಮತ್ತು ತಂತ್ರಜ್ಞಾನದ ಬೆಳವಣಿಗೆಯಾದರೂ ಇನ್ನೂ ಅನೇಕ ದಲಿತ ಮಿತ್ರರು ಈ ಭಾವದಿಂದ ಹೊರಬಂದಿಲ್ಲ.

ಸಾಯಂಕಾಲ ಸಮೀಪಿಸುತ್ತಿದ್ದುದರಿಂದ ಶಿವಶರಣರ ಕಿರಿಯಣ್ಣ ಅಡತಿ ಅಂಗಡಿಗೆ ಹೋಗಲು ಸಿದ್ಧರಾದರು. ಅವರು ತಮ್ಮ ಅಣ್ಣನ ಕೂಡ ಎತ್ತಿನಗಾಡಿ ತೆಗೆದುಕೊಂಡು ರಾತ್ರಿಯಾಗುವುದರೊಳಗಾಗಿ ತಮ್ಮ ಹಳ್ಳಿಗೆ ಹೋಗಬೇಕಿತ್ತು.

ಆ ಕಾಲದಲ್ಲಿ ಪರವೂರಿನಿಂದ ಅಪರೂಪಕ್ಕೆ ಭೇಟಿಯಾಗಲು ತಮ್ಮ ಸಂಬಂಧಿಕರು ಅಥವಾ ಪರಿಚಯದವರ ಮನೆಗೆ ಬಂದವರು ಹೋಗುವಾಗ ಮಕ್ಕಳ ಕೈಯಲ್ಲಿ ಬಿಡಿಗಾಸು ಕೊಡುವ ಪದ್ಧತಿ ಇತ್ತು. ಅವರು ಹೋಗುವಾಗ ನನಗೆ ನಾಲ್ಕಾಣೆ ಕೊಟ್ಟರು. ನನ್ನ ತಾಯಿ ಅವರನ್ನು ಬೀಳ್ಕೊಡುವ ಸಂದರ್ಭದಲ್ಲೇ ನಾನು ಆ ನಾಲ್ಕಾಣೆಯನ್ನು ಬಿಗಿ ಮುಷ್ಟಿಯಲ್ಲಿ ಹಿಡಿದು ಜೇಬಿಗೆ ಇಳಿಬಿಟ್ಟು ನಾಗಾಲೋಟದಿಂದ ಹೊರಬಿದ್ದೆ. ಅವರು ಹೋದ ಮೇಲೆ ನನ್ನ ತಾಯಿ ಆ ಹೊಳೆಯುವ ಹೊಸ ನಾಣ್ಯವನ್ನು ಕಸಿದುಕೊಳ್ಳುತ್ತಾಳೆ ಎಂಬ ಆತಂಕದಿಂದ ಮತ್ತು ಅದು ಸಿಕ್ಕ ಖುಷಿಯಿಂದ ಓಡತೊಡಗಿದೆ.

ಆಗಿನ ಕಾಲದಲ್ಲಿ ಮಕ್ಕಳಿಗೆ ಬಹುದೊಡ್ಡ ಮೊತ್ತವಾದ ನಾಲ್ಕಾಣೆಯ ಖುಷಿಯಲ್ಲಿ ಓಡುತ್ತ ಓಡುತ್ತ ಎರಡು ಕಿಲೊ ಮೀಟರ್ ದೂರದ ಬಂಬಾಳ ಅಗಸಿಯವರೆಗೆ ಹೋದೆ. ಸೂರ್ಯಾಸ್ತದ ಸಮಯವಾಗಿದ್ದರಿಂದ ಅಗಸಿ ದಾಟಿ ಕೋಟೆಗೋಡೆ ಆಚೆ ಹೋಗುವ ಧೈರ್ಯವಾಗಲಿಲ್ಲ. ಆ ಕಡೆಯ ಹಾಳುಭೂಮಿಯಲ್ಲಿ ಬಹಳಷ್ಟು ಗಿಡಗಂಟಿಗಳು ಬೆಳೆದಿದ್ದವು. ಅಲ್ಲದೆ ಆದಿಲಶಾಹಿ ಕಾಲದ ಅನೇಕ ಹಾಳುಬಾವಿಗಳಿದ್ದವು. ಅಗಸಿ ಆಚೆಗಿನ ವಾತಾವರಣ ಭಯಾನಕವೆನಿಸುತ್ತಿತ್ತು. ಹೀಗಾಗಿ ಅಲ್ಲಿಂದಲೇ ಮರಳಿದೆ.

ನಾಲ್ಕಾಣೆ ಹಿಡಿದ ಬಿಗಿಮುಷ್ಟಿ ಜೇಬಿನಲ್ಲೇ ಇತ್ತು. ಸಾವಕಾಶವಾಗಿ ಮನೆಯ ಕಡೆಗೆ ಹೆಜ್ಜೆಗಳನ್ನು ಇಡತೊಡಗಿದೆ. ಆ ಕ್ಷಣ ಅಲ್ಲಿ ಯಾರೂ ಇರಲಿಲ್ಲ. ಆದರೆ ಎದುರಿಗೆ ಹದಿಹರೆಯದ ಒಡ್ಡರ ಹೆಣ್ಣುಮಗಳೊಬ್ಬಳು ಬರುವುದು ಕಾಣಿಸಿತು. ಮೈಮೇಲೆ ದೆವ್ವ ಬಂದವರ ಹಾಗೆ ಆ ಕಪ್ಪುಸುಂದರಿ ತೀವ್ರಗತಿಯಿಂದ ಬರುತ್ತಿದ್ದಳು. ಸಮೀಪ ಬಂದಮೇಲೆ ಅವಳ ಕಣ್ಣಲ್ಲಿ ನೀರು ಹರಿಯುತ್ತಿರುವುದು ಕಾಣಿಸಿತು. ಆಕೆ ಅಗಸಿಯ ಕಡೆಗೆ ಹೋಗುತ್ತಿರುವುದರಿಂದ ಏನಾಗಿದೆ ಎಂದು ಕೇಳಿಯೆಬಿಟ್ಟೆ. ಅಡುಗೆಯಲ್ಲಿ ಉಪ್ಪಿಲ್ಲವೆಂದು ಗಂಡ ಹೊಡೆದಿರುವುದಾಗಿ ತಿಳಿಸಿದಳು. ‘ಆತ ಹಣ ಕೊಡದಿದ್ದರೆ ಉಪ್ಪು ಎಲ್ಲಿಂದ ತರಲಿ’ ಎಂದು ಕೇಳಿದಳು. ಈ ರೀತಿ ಬದುಕುವುದಕ್ಕಿಂತ ಸಾಯುವುದೇ ಮೇಲು ಎಂದು ಬಾವಿಗೆ ಹಾರುವುದಾಗಿ ಹೊರಟೇಬಿಟ್ಟಳು. ಮತ್ತೆ ತಡೆದೆ. ಬಿಗಿ ಮುಷ್ಟಿಯಲ್ಲಿದ್ದ ನಾಲ್ಕಾಣೆಯನ್ನು ತೋರಿಸುತ್ತ ‘ಇದನ್ನು ಕೊಟ್ಟರೆ ವಾಪಸ್ ಹೋಗುವೆಯಾ’ ಎಂದು ಕೇಳಿದೆ. ಆಕೆ ಕೃತಜ್ಞತೆಯಿಂದ ತೆಗೆದುಕೊಂಡು ಮನೆಯ ದಾರಿ ಹಿಡಿದಳು. ನಾನು ಮತ್ತೆ ಖುಷಿಯಿಂದ ಓಡುತ್ತ ಓಡುತ್ತ ಮನೆ ಸೇರಿದೆ. ಆ ನಾಲ್ಕಾಣೆಯನ್ನು ಖರ್ಚು ಮಾಡಿದೆನೆಂದು ಭಾವಿಸಿ ತಾಯಿ ಬಡಿದದ್ದು ನೋವೆನಿಸಲಿಲ್ಲ. ಒಂದು ಹೆಣ್ಣಿನ ಜೀವ ಉಳಿಸಿದ ಆ ನಾಲ್ಕಾಣೆ ನನ್ನ ಮನದಲ್ಲಿ ಹೊಳೆಯುತ್ತಲೇ ಇದೆ.

ನನ್ನ ಹಿರಿಯ ಮಿತ್ರ ತುಕಾರಾಮ ಶಿವಶರಣ ಮೌಲ್ಯಭರಿತ ಮನುಷ್ಯ. ತಾವು ಹರಿಜನ (ಆಗ ದಲಿತ ಶಬ್ದ ಪ್ರಚಲಿತವಿರಲಿಲ್ಲ) ಎಂಬ ಕೀಳರಿಮೆ ಯಾವತ್ತೂ ಇರಲಿಲ್ಲ. ಜಾತಿಯ ಬಗ್ಗೆ ಎಂದೂ ಮಾತನಾಡಿದವರಲ್ಲ. ಮೇಲ್ಜಾತಿಗಳ ಬಗ್ಗೆ ಯಾವುದೇ ರೀತಿಯ ಅಸಹನೆಯೂ ಇರಲಿಲ್ಲ. ದೊಡ್ಡದೊಡ್ಡ ಮಾತುಗಳನ್ನು ಆಡುತ್ತಲೂ ಇರಲಿಲ್ಲ. ಹಿತಮಿತಮೃದುವಚನದ ಅವರು ಸರಳ ಸಹಜ ಆದರೆ ಗಂಭೀರ ವ್ಯಕ್ತಿತ್ವದ ಮಾದರಿ ಮನುಷ್ಯರಾಗಿದ್ದರು. ನಿಷ್ಠಾವಂತ ವಿದ್ಯಾರ್ಥಿಯಾಗಿದ್ದ ಅವರು ಕಾಲೇಜು ಸೇರಿದ ಹೊಸದರಲ್ಲಿ ಮೊದಲ ಸಲ ತಮ್ಮ ಊರಿಗೆ ಕರೆದುಕೊಂಡು ಹೋಗಿದ್ದರು. ಅವರ ಮನೆ ತೋಟದಲ್ಲಿತ್ತು. ಡೊಮನಾಳ ಹಳ್ಳಿಯನ್ನು ದಾಟಿ ಅವರ ತೋಟಕ್ಕೆ ಹೋಗಬೇಕಿತ್ತು. ಅವರು ಮನೆಗೆ ಹೋದರೆ ಮನೆಯಲ್ಲಿದ್ದವರಿಗೆಲ್ಲ ಸಂಭ್ರಮ. ಇವರು ಯಾವಾಗ ಬರುತ್ತಾರೆ ಎಂಬುದು ಅನೇಕ ಸಲ ಅವರಿಗೆ ಗೊತ್ತಿರುತ್ತಿದ್ದಿಲ್ಲ. ಆಗ ಇಡೀ ಹಳ್ಳಿಯಲ್ಲಿ ಯಾರ ಮನೆಯಲ್ಲೂ ದೂರವಾಣಿ ವ್ಯವಸ್ಥೆ ಇರಲಿಲ್ಲ. ಇವರ ಮನೆ ಹಳ್ಳಿಯಿಂದ ದೂರವಿರುವುದರಿಂದ ಸಂಪರ್ಕ ಇನ್ನೂ ಕಠಿಣವಾಗಿತ್ತು.

( ವಿಜಾಪುರದಲ್ಲಿನ ಬಂಬಾಳ ಅಗಸಿ, ಚಿತ್ರ: ಸುನೀಲಕುಮಾರ ಸುಧಾಕರ)

ಅಂಗಡಿ ಮಾಲೀಕರಾದ ದಲಾಲರು ತಮ್ಮ ಕಮೀಷನ್ ತೆಗೆದುಕೊಳ್ಳುವುದರ ಜೊತೆಗೆ ನಿರ್ಮಾಣ ಹಂತದಲ್ಲಿರುವ ಗುಡಿಗಳಿಗಾಗಿ ಹಣ ಸಂಗ್ರಹಿಸುವುದಕ್ಕಾಗಿ ಗುಡಿಪಟ್ಟಿ, ಸ್ಥಳೀಯ ಖಾಸಗಿ ಶಿಕ್ಷಣ ಸಂಸ್ಥೆಗಳ ಏಳ್ಗೆಗಾಗಿ ಸಾಲಿಪಟ್ಟಿ ಎಂದು ಒಂದಿಷ್ಟು ಹಣವನ್ನು ತಮ್ಮ ಕಮೀಷನ್ ಜೊತೆಗೆ ಕಡಿತಗೊಳಿಸಿ ಉಳಿದುದನ್ನು ರೈತರಿಗೆ ಕೊಡುತ್ತಿದ್ದರು.

ಮೊದಲ ಸಲ ಅವರ ತೋಟದ ಮನೆಗೆ ಹೋದಾಗ ಮಧ್ಯಾಹ್ನವಾಗಿತ್ತು. ಅವರ ಇಬ್ಬರೂ ಅಣ್ಣಂದಿರ ಹೆಂಡಂದಿರು ಗಡಿಬಿಡಿಯಿಂದ ಅಡುಗೆ ತಯಾರಿ ನಡೆಸಿದರು. ಒಬ್ಬರು ಜವೆ ಕುಟ್ಟಿ, ಗೋದಿ ತೆಗೆದು ಬೀಸುವ ಕಲ್ಲಿಗೆ ಹಾಕಿ ಬೀಸಿಕೊಟ್ಟರು. ಇನ್ನೊಬ್ಬರು ಚಪಾತಿ ಮಾಡಿದರು. ಮತ್ತೊಬ್ಬ ಯುವತಿ ಚವಳಿಕಾಯಿ ಪಲ್ಯ ತಯಾರಿಸಿದಳು. ಆ ಯುವತಿ ತುಕಾರಾಮರ ಪತ್ನಿ ಎಂಬುದು ಗೊತ್ತಾಯಿತು. ಬಹುಶಃ ಬಾಲ್ಯವಿವಾಹ ಇರಬಹುದು. ಹೆಸರು ನಾಗಮ್ಮ. ನಾಗಮ್ಮನ ಜೊತೆ ಇವರೇನು ಮಾತನಾಡಲಿಲ್ಲ. ಆಕೆಗೆ ಒಳಗೊಳಗೆ ಖುಷಿ ಇದ್ದರೂ ತೋರಿಸಿಕೊಡುವ ಸ್ಥಿತಿಯಲ್ಲಿದ್ದಿಲ್ಲ.

ತುಕಾರಾಮರ ತಂದೆಗೆ ಬಹಳ ವಯಸ್ಸಾಗಿತ್ತು. ಮೈದೊಗಲ ಮುದುಡಿಯಾಗಿತ್ತು. ತಮಗೆ ತಾವೇ ಕೈಕಾಲು ತಿಕ್ಕಿಕೊಳ್ಳುತ್ತಿದ್ದರು. ನಾನು ಮೈಕೈ ತಿಕ್ಕಿದೆ.

ತುಕಾರಾಮರ ತಾಯಿ ಮೃತಪಟ್ಟು ಬಹಳ ದಿನಗಳಾಗಿದ್ದವು. ಆ ನಿರಕ್ಷರಿ ಹೆಣ್ಣುಮಗಳು ತಜ್ಞ ಸೂಲಗಿತ್ತಿ ಆಗಿದ್ದರು. ಹಳ್ಳಿಯ ಗರ್ಭಿಣಿಯರ ಬಾಣೇತನವನ್ನು ಅವರೇ ಮಾಡಿಸುತ್ತಿದ್ದರು. ಹೀಗಾಗಿ ಹಳ್ಳಿಗರಿಗೆ ಅವರ ಬಗ್ಗೆ ಬಹಳ ಗೌರವವಿತ್ತು. ಹರಿಜನರನ್ನು ಮುಟ್ಟಿಸಿಕೊಳ್ಳದ ಮೇಲ್ಜಾತಿ ಜನ ಪ್ರಸವದ ವೇಳೆಯಲ್ಲಿ ಮುಟ್ಟಿಸಿಕೊಳ್ಳುವುದೆಂದರೇನು? ಜಾತಿಗಿಂತ ಜೀವ ಮುಖ್ಯ. ಆದರೆ ನಿತ್ಯ ಜೀವನದಲ್ಲಿ ಜಾತಿಯೆ ಮುಖ್ಯ! ಅಸ್ಪೃಶ್ಯರನ್ನು ಮನೆಯ ಒಳಗೆ ಬಿಟ್ಟುಕೊಳ್ಳದ ಅವರು ಇಂಥ ಪ್ರಸಂಗದಲ್ಲಿ ಹೆರಿಗೆ ಕೋಣೆಯವರೆಗೂ ಕರೆದುಕೊಂಡು ಹೋಗುವುದನ್ನು ಕೇಳಿದೆ. ಅಷ್ಟೇ ಅಲ್ಲದೆ ಅವರ ತಾಯಿ ತೀರಿಕೊಂಡ ಮೇಲೆ, ಗರ್ಭಿಣಿಯರಿಗೆ ಹೆರಿಗೆ ನೋವು ಕಾಣಿಸಿಕೊಂಡಾಗ ಆಕೆಯ ಗೋರಿಯ ಮೇಲಿನ ಒಂದು ಹರಳನ್ನು ಒಯ್ದು ನೀರಲ್ಲಿ ಮುಳುಗಿಸಿ ಆ ನೀರನ್ನು ಕುಡಿಸುತ್ತಿದ್ದರಂತೆ!

ನಾನು ಎರಡನೇ ಸಲ ಡೊಮನಾಳಕ್ಕೆ ಹೋದಾಗ ಮನೆಯವರೆಲ್ಲ ಸೇರಿ ತೋಟದಲ್ಲಿ ಬದನೆಕಾಯಿ ಬಿಡಿಸುತ್ತಿದ್ದರು. ನಾಗಮ್ಮ ಕೂಡ ಗಂಭೀರವಾಗಿ ಬಿಡಿಸುತ್ತಿದ್ದಳು. ಆಕೆಯ ತಂದೆ ಹಳ್ಳಿ ಹಳ್ಳಿ ಸುತ್ತಿ ತತ್ತಿಗಳನ್ನು ಕೊಂಡು ರವಿವಾರದ ಪೇಟೆಯಲ್ಲಿ ವಿಜಾಪುರಕ್ಕೆ ಒಯ್ದು ಮಾರುವ ಕಾಯಕ ಮಾಡುತ್ತಿದ್ದ. ಈ ವಿಷಯವನ್ನು ತುಕಾರಾಮರ ಕಿರಿಯಣ್ಣ ಒಂದಿಷ್ಟು ವ್ಯಂಗ್ಯವಾಗಿ ನಗುತ್ತ ಹೇಳಿದ. ನಾಗಮ್ಮ ಆ ಮನೆಯಲ್ಲಿ ಒಂಟಿತನ ಅನುಭವಿಸುತ್ತಿದ್ದಾಳೆಂದು ಅನಿಸತೊಡಗಿತು. ಗಂಡ ಕೂಡ ಮಾತನಾಡದೆ ಇರುವುದು ಅವರ ದುಃಖಕ್ಕೆ ಕಾರಣವಾಗಿತ್ತು. ಅವಳು ಮಾತನಾಡುವುದನ್ನು ನಾನು ನೋಡಲೇ ಇಲ್ಲ.

ಬಹಳ ಅನ್ಯೋನ್ಯವಾಗಿದ್ದ ಆ ಅಣ್ಣತಮ್ಮಂದಿರಲ್ಲಿ ಏನು ವ್ಯತ್ಯಾಸ ಬಂತೋ ಗೊತ್ತಾಗಲಿಲ್ಲ. ಒಂದು ದಿನ ಆ ಕಿರಿಯಣ್ಣ ಮನೆಗೆ ಬಂದರು. ‘ತುಕಾರಾಮ ಬಂದು ತನ್ನ ಹೆಂಡತಿಯನ್ನು ಕರೆದುಕೊಂಡು ಮನೆಬಿಟ್ಟು ಹೋಗಿದ್ದಾನೆ’ ಎಂದು ನನ್ನ ತಾಯಿಗೆ ತಿಳಿಸಿದರು. ಕೊನೆಗೆ ನಾವಿಬ್ಬರೂ ವಿಜಾಪುರದ ಎಲ್ಲ ಐತಿಹಾಸಿಕ ಸ್ಥಳ, ಬಸ್ ಮತ್ತು ರೈಲುನಿಲ್ದಾಣಗಳನ್ನು ಸುತ್ತಿದೆವು. ಎಲ್ಲಿಯೂ ಸುಳಿವು ಸಿಗಲಿಲ್ಲ. ಕೊನೆಗೆ ಅವರು ತಮ್ಮ ಹಳ್ಳಿಗೆ ವಾಪಸ್ ಹೋದರು.

ತುಕಾರಾಮರ ಅಕ್ಕ ಅಥರ್ಗಾ ಗ್ರಾಮದಲ್ಲಿರುವುದು ಗೊತ್ತಿತ್ತು. ನಾನು ಒಂದು ಸಲ ತುಕಾರಾಮ ಜೊತೆ ಅಲ್ಲಿಗೆ ಹೋಗಿದ್ದೆ. ವಿಜಾಪುರದಿಂದ ಇಂಡಿಗೆ ಹೋಗುವಾಗ ಆ ಗ್ರಾಮ ಹತ್ತುವುದು. ನಾನು ಬಸ್ ಚಾರ್ಜ್ ಹೊಂದಿಸಿಕೊಂಡು ಅಥರ್ಗಾಗೆ ಹೋದೆ. ಇಬ್ಬರೂ ಬಂದಿದ್ದಾರೆಂದೂ ಇಂಡಿಯಲ್ಲಿರುವ ಇಂಚಗೇರಿ ಮಾಸ್ತರ ಬಳಿ ಹೋಗಿದ್ದಾರೆಂದು ಅವರ ಅಕ್ಕ ತಿಳಿಸಿದರು. ಅವರ ಮಗಳು ಇಂಚಗೇರಿ ಮಾಸ್ತರ ಮನೆ ನೋಡಿದ್ದಳು. ಹೀಗಾಗಿ ನನ್ನ ಜೊತೆ ಮಗಳನ್ನು ಕಳಿಸಿಕೊಟ್ಟಳು. ಅಲ್ಲಿಂದ ಆ ಸುಡುಬಿಸಿಲಲ್ಲಿ ಅಡ್ಡದಾರಿ ಹಿಡಿದು ಇಂಡಿ ಪಟ್ಟಣ ತಲುಪಿದೆವು. ದಂಪತಿ ನೋಡಿ ಸಮಾಧಾನವಾಯಿತು. ಅವರಿಗೆ ನಡೆದ ವಿಚಾರ ತಿಳಿಸಿದೆ. ಅಲ್ಲಿಂದ ಮುಂದೆ ಏನಾಯಿತೋ ನೆನಪಿಲ್ಲ.

ತುಳಜಾಭವಾನಿ ಭಕ್ತರಾಗಿದ್ದ ಇಂಚಗೇರಿ ಮಾಸ್ತರರಿಗೆ ಅನೇಕ ಜನ ಅನುಯಾಯಿಗಳಿದ್ದರು. ಅವರಲ್ಲಿ ತುಕಾರಮ ಒಬ್ಬರು. ಹೀಗಾಗಿ ನಾನು ಕೂಡ ಅವರ ಅನುಯಾಯಿಯಾದೆ. ಇಂಚಗೇರಿ ಮಾಸ್ತರರಿಗೆ ನಾಲ್ಕು ಜನ ಮಕ್ಕಳು. ಇಬ್ಬರು ಗಂಡುಮಕ್ಕಳ ನಂತರ ಶ್ರೀದೇವಿ ಮತ್ತು ಅವಳ ತಂಗಿ. ಶ್ರೀದೇವಿಗೆ ಮದುವೆಯಾಗಿತ್ತು. ನಿರಕ್ಷರಿಯಾಗಿದ್ದ ಆತ ಒಂದಿಷ್ಟು ಹುಂಬ ಮತ್ತು ದಡ್ಡ ಇದ್ದ. ಇವಳೋ ಬೆಳ್ಳಗೆ ಚೆಂದ ಇದ್ದಳು. ಮ್ಯಾಟ್ರಿಕ್ ಫೇಲಾಗಿದ್ದಳು ಎಂಬ ನೆನಪು. ಅವಳು ಗಂಡನ ಮನೆಗೆ ಕೊನೆಗೂ ಹೋಗಲಿಲ್ಲ. ಹೀಗಾಗಿ ಬಹಳ ದಿನಗಳ ನಂತರ ವಿವಾಹ ವಿಚ್ಛೇದನವಾಯಿತು. ವಿಜಾಪುರದಲ್ಲಿ ನಮ್ಮ ಮನೆಯ ಪಕ್ಕದಲ್ಲೇ ಮನೆ ಹಿಡಿದು, ಸರ್ಕಾರಿ ಹೊಲಿಗೆ ಟ್ರೇನಿಂಗ್ ಸ್ಕೂಲಲ್ಲಿ ಟ್ರೇನಿಂಗ್ ಕೊಡಿಸಿದರು. ತರಬೇತಿ ನಂತರ ಒಂದು ಹೊಲಿಗೆಯಂತ್ರ ಸಿಕ್ಕ ನೆನಪು.

ತುಕಾರಾಮ ಬಗ್ಗೆ ಶ್ರೀದೇವಿಗೆ ಬಹಳ ಆಕರ್ಷಣೆ. ಆದರೆ ತುಕಾರಾಮ ನಮ್ಮ ಮನೆಗೆ ಬಂದಾಗ ಪಕ್ಕದ ಮನೆಯಲ್ಲಿನ ಶ್ರೀದೇವಿ ಬಳಿ ಇಬ್ಬರೂ ಹೋಗುತ್ತಿದ್ದೆವು. ಒಂದು ಸಲ ಅದೇನೋ ಹೇಳಿದಳು. ಅವರು ಆಕೆಯ ಚಪ್ಪಲನ್ನು ತಲೆಯಮೇಲೆ ಇಟ್ಟುಕೊಂಡು ಅವಳ ಬಯಕೆಯ ಮೇಲೆ ನೀರೆರಿಚಿದರು. ಆದರೂ ಅವಳು ಅವರನ್ನು ಮದುವೆಯಾಗುವ ತೀವ್ರತೆಯಿಂದ ಹೊರಗೆ ಬರಲಿಲ್ಲ.

ತುಕಾರಾಮಗೆ ಸರ್ಕಾರಿ ಕೆಲಸ ಸಿಕ್ಕಿತು. ಯಾವ ಊರಿಗೆ ಹೋದರೋ ನೆನಪಿಲ್ಲ. ಶ್ರೀದೇವಿ ತಮ್ಮ ತಂದೆಯ ಕಡೆಗೆ ಹೋದಳು. ಮುಂದೆ ಅವರ ತಂದೆ ಇಂಡಿ ಪಟ್ಟಣ ಬಿಟ್ಟು ಸೀತಿಮನಿಯ ರೈಲು ನಿಲ್ದಾಣ ಬಳಿ ಬಂದು, ಒಂದು ಸಾಧಾರಣ ಮನೆ ಕಟ್ಟಿ ದೇವೀಪೂಜೆ ಮಾಡಿಕೊಂಡು ಉಳಿದರು. ಹುಣ್ಣಿಮೆ ಅಮಾವಾಸ್ಯೆಗೆ ಭಕ್ತರು ಬಂದು ಪೂಜೆಯಲ್ಲಿ ಪಾಲ್ಗೊಳ್ಳುತ್ತಿದ್ದರು. ನಂತರ ಆಲಮಟ್ಟಿ ಡ್ಯಾಂ ಕಾಮಗಾರಿಯಿಂದಾಗಿ ಆ ಪ್ರದೇಶ ಕೃಷ್ಣಾನದಿಯಲ್ಲಿ ಮುಳುಗಿತು. ಮುಂದೆ ಇವರೆಲ್ಲ ಎಲ್ಲಿ ಹೋದರೋ ಗೊತ್ತಾಗಲಿಲ್ಲ.

ಬಹಳ ವರ್ಷಗಳ ನಂತರ ತುಕಾರಾಮ ಮತ್ತು ಶ್ರೀದೇವಿ ಮದುವೆಯಾದ ಸಮಾಚಾರ ಗೊತ್ತಾಯಿತು. ಈ ಕಾರಣದಿಂದಲೇ ಅವರು ನಮ್ಮ ಮನೆಗೆ ಬರುವುದನ್ನು ನಿಲ್ಲಿಸಿರಬಹುದು. ಅದೇನೇ ಇರಲಿ ಆ ನಾಗಮ್ಮನ ಪಾಡು ಏನಾಯಿತು ಎಂಬ ಯೋಚನೆ ಬಂದಿತು. ಅವರೆಲ್ಲ ಅಣ್ಣ ತಮ್ಮಂದಿರು ಕೂಡಿ ಇದ್ದಾರೆಯೆ ಎಂಬ ಪ್ರಶ್ನೆ ಮೂಡಿತು. ಒಬ್ಬ ಸೂಕ್ಷ್ಮ ಮನಸ್ಸಿನ ಮಾನವೀಯ ವ್ಯಕ್ತಿ ತಮ್ಮ ಅಣ್ಣಂದಿರ ಜೊತೆ ಮುನಿಸಿಕೊಂಡಿದ್ದೇಕೆ? ಬಾಲ್ಯ ವಿವಾಹವಾದ ನಂತರ ಆ ಮುಗ್ಧ ಯುವತಿಯನ್ನು ಬಿಡಲು ಹೇಗೆ ಮನಸಾಯಿತು? ಅಥವಾ ಅವಳೂ ಜೊತೆಯಲ್ಲಿ ಇದ್ದಾಳೋ? ಅವರ ಕುಟುಂಬ ಇನ್ನೂ ಅವಿಭಕ್ತವಾಗಿ ಉಳಿದಿದೆಯಾ? ಗಂಡ, ಹೆಂಡತಿ, ಅಣ್ಣ, ಅಕ್ಕ, ತಮ್ಮ, ತಂಗಿ ಮುಂತಾದವರು ಅನ್ಯೋನ್ಯವಾಗಿ ಇದ್ದಾಗ್ಯೂ ಅವರ ಮಧ್ಯೆ ಮನಸ್ತಾಪ ಏಕಾಗುತ್ತದೆ? ಪ್ರೀತಿ, ವಾತ್ಸಲ್ಯಗಳ ಮಧ್ಯೆಯೆ ಅದು ಹೇಗೆ ಕೇಡಿನ ಬೀಜ ಬಿದ್ದು ಬೆಳೆಯತೊಡಗುತ್ತದೆ. ಇವೆಲ್ಲ ಪ್ರಶ್ನೆಗಳು ಹಾಗೇ ಉಳಿದಿವೆ.