ಇನ್ನೆಷ್ಟು ದಿನ ಹೀಗೆ…

ನಾನೂ ನಿಮ್ಮೊಳಗೊಬ್ಬ
ಒಪ್ಪುವಿರಾದರೆ,
ಒಳಬರುವೆ ಅಪ್ಪುವಿರಾ
ಬಾಹುಗಳೆನ್ನದೇ
ಹೆಗಲು
ಬಾಗಿದೆಯಷ್ಟೇ
ಋಣಭಾರ
ಎಣಿಸದಿರಿ ಶ್ರಮ ಫಲ
ಹೊತ್ತುದೇನೆಂದಿರಾ
ಹಿತ್ತಲ ಬದಿ ಕಣ್ಣಾಡಿಸಿ
ಖಾಲಿಯಾಗಿದೆ ;

ನನ್ನಜ್ಜನೂ ಹೀಗೇ
ನಿಮ್ಮಜ್ಜನ ಕಾಲ
ನಿತ್ಯ ಕಾಯಕ ಎಸೆದ ಕಡ್ಡಿ
ತ್ಯಜಿಸಿದುದೆಲ್ಲವೂ, ಅದೋ
ಅಲ್ಲಿತ್ತು ತಿಪ್ಪೆ ಈಗಿಲ್ಲ ಬಿಡಿ
ಧೂಪ ದೀಪದ ಮಳಿಗೆ
ಅವನ ಹೆಗಲಿನಲಿ
ಬೆವರೂ ಜಾರುತಿತ್ತಂತೆ
ಇಳಿಜಾರು ಬಂಡೆಯಂತೆ ;

ನನ್ನಪ್ಪನ ಮಾತು ಬಿಡಿ
ಮುಂದುವರೆದ ಭಾಗ
ನಿಮ್ಮಜ್ಜನ ಪಟ ನೋಡಿ
ಜರಿ ಪೇಟ ಕೊರಳ ಚಿನ್ನ
ಹುರಿ ಮೀಸೆ ಗತ್ತು ಗಮ್ಮತ್ತು
ಹಮ್ಮು ಬಿಮ್ಮು ಏನೆಲ್ಲಾ
ಇತಿಹಾಸ ಎನ್ನುವಿರಾ
ಈಗ ಅಗೆಯುತ್ತಿದ್ದೇವೆ
ಮೂಳೆ ತುಂಡುಗಳೆಲ್ಲಾ
ಒಂದೇ ಬಣ್ಣ !

ಕಾರುಣ್ಯದ ಹಸಿವಿಲ್ಲ
ಔದಾರ್ಯದ ಹಂಗೇಕೆ
ನವಿರು ನುಡಿ ನಾರುಮಡಿ
ತೆರೆಮರೆಯಲದೇನು ನಾತ
ಗ್ರಹಿಸಬಲ್ಲೆವು ಸ್ವಾಮಿ
ಭುಜ ಜಗ್ಗಿದೆ ಜಗ್ಗದ
ಗುಂಡಿಗೆಯೂ ಇದೆ
ಬೆವರಿನೊಡೆಯರು
ನೆತ್ತರಿನಾಳುಗಳಲ್ಲ !

ಎದೆ ಸೀಳುವ ಯುಗ
ಅಕ್ಷರಗಳೆಲ್ಲೆನುವಿರಾ
ನುಂಗಿದ ವೇದನೆಗಳಲಿವೆ
ಕೋಟಿ ಕೋಟಿ
ಪಾದಗಳಿವೆ ಸ್ವಾಮಿ
ಎಷ್ಟೆಂದು ತೊಳೆಯುವಿರಿ
ಪಾಪ ನಿಮ್ಮೊಳಗಿದೆ
ಗಂಗೆಯೇ ಮಲಿನ
ನಿಮ್ಮದೇನುಂಟಲ್ಲಿ !

ಗಾಂಧಿ ಆಯಿತು
ಲೋಹಿಯಾ ಮಾರ್ಕ್ಸ್
ಅಂಬೇಡ್ಕರ್
ಅವಿಸಿಬಿಟ್ಟಿರಿ ಗಾಜು
ಸಿಮೆಂಟು ಶಿಲೆಗಳಲ್ಲಿ
ಹಾರ-ತುರಾಯಿಗಳ ನಡುವೆ
ಇನ್ನೆಷ್ಟು ಪಠಿಸುವಿರಿ
ತತ್ವಸಮಾಧಿಯ ಮೇಲೆ
ಮುಕ್ತರಾಗಲಿ ಬಿಡಿ
ಹರಿದಾಡಲಿ ಚಿಂತನೆಗಳು ;

ಬಗೆದಿರಲ್ಲವೇ ಎದೆ
ನೂರೆಂಟು ಮಾತೇಕೆ
ನರಗಂಟುಗಳಲಿ ನೋಡಿ
ಬೀಜಗಳು ಮೊಳೆಯುತಿವೆ
ಬೇರು ನೆಲೆಗಾಣುತಿದೆ
ಚಿವುಟಲಾರಿರಿ ಕುಡಿಯ
ಎಲ್ಲರಿಹರಿಲ್ಲಿ ಆಳದಲಿ
ಕಳಚಿಬಿಡಿ ವ್ಯಸನ
ಇನ್ನಿರದಿಲ್ಲಿ ಮಸಣ!