ಸೃಷ್ಟಿಯ ನಿಗೂಢತೆಯ ಬಗ್ಗೆ ಸದಾ ವಿಸ್ಮಯವನ್ನು, ಕುತೂಹಲವನ್ನೂ ಹೊಂದಿದ್ದ, ಆ ವಿಸ್ಮಯವನ್ನು ಕಾವ್ಯಸಾಲುಗಳಲ್ಲಿ ಪ್ರತಿಬಿಂಬಿಸುತ್ತಿದ್ದ, ಹಿರಿಯ ಕವಿ ಚೆನ್ನವೀರಣ ಕಣವಿ ತೀರಿಕೊಂಡಿದ್ದಾರೆ. ಚೆಂಬೆಳಕಿನ ಕವಿ, ಸುನೀತಗಳ ಸಾಮ್ರಾಟ, ನಾಡೋಜ ಮುಂತಾದ ಅನೇಕ ಬಿರುದುಗಳು ಅವರಿಗೆ ಸಂದಿದ್ದರೂ ಅವರು, ಕನ್ನಡ ಭಾವಗೀತೆ ಪರಂಪರೆಯ ಶ್ರೇಷ್ಟ ಕವಿಗಳಲ್ಲಿ ಒಬ್ಬರು. ಅವರ ಕಾವ್ಯದಲ್ಲಿ ಭಾವತೀವ್ರತೆಗೇ ಆದ್ಯತೆ.
‘ಪೃಥ್ವಿ ತೂಗಿದೆ ಸೂರ್ಯಚಂದ್ರರಿಗೂ ಜೋಕಾಲಿ’ ಎಂದು ಬರೆದ ಕವಿ ಅವರು. ಅವರು ಬರೆದ  ‘ಬಿಸ್ಮಿಲ್ಲಾರ ಶಹನಾಯಿ ವಾದನ ಕೇಳಿ’ ಕವಿತೆಯ ಕುರಿತು ಲೇಖಕಿ ಡಾ. ಗೀತಾ ವಸಂತ್ ಬರೆದ ಬರಹವೊಂದು ಅವರ ನೆನಪಿಗಾಗಿ ಇಲ್ಲಿದೆ.

ನಾದದ ಮೋಡಿಗೊಳಗಾದ ಒಂದು ಅಪೂರ್ವ ಕ್ಷಣದಲ್ಲಿ ಅನುಭಾವದ ನೆಲೆಗಳನ್ನು ಸ್ಪರ್ಶಿಸಿದ ರೋಮಾಂಚನವನ್ನು ಕವಿತೆ ಕಾಣಿಸುತ್ತದೆ. ನಾದವು ಉಂಟು ಮಾಡಿದ ಸಂಚಲನವನ್ನು ಮೂರ್ತಗೊಳಿಸುವುದು ಹೇಗೆ ? ಆ ಅನುಭವ ನಾದದ ಜೊತೆಗೆ ಬಗೆಬಗೆಯಾಗಿ ಹರಿಯುತ್ತ ಒಂದು ಚೈತನ್ಯಮಯ ವಿಶ್ವವನ್ನೇ ಮನದೊಳಗೆ ಸೃಷ್ಟಿಸಿಬಿಟ್ಟಿದೆ. ಆ ಲೋಕದ ಅನುಭಾವವನ್ನು ಕೇಳಲು ಈ ಲೋಕದ ಪ್ರತಿಮೆಗಳೇ ಬೇಕು.

ನಾದದ ಬೀಜ ಮನದೊಳಗೆ ಇಳಿದದ್ದೇ ತಡ, ಒಂದೇ ಉಸಿರಿಗೆ ಥಟ್ಟನೆ ಹಸಿರು ಹೊಮ್ಮಿ ಬಿಟ್ಟಿದೆ ! ಖಾಲಿ ಮನದಂಗಳವೆಲ್ಲ ಸೃಷ್ಟಿ ಸಂಭ್ರಮದಿಂದ ತೂಗುತ್ತದೆ. ನೂರಾರು ಬಗೆಯ ಭಾವಗಳು ಹೂವಾಗಿ ಅರಳಿ ತಮ್ಮ ಕುಸುಮವನೆತ್ತಿ ಗಾಳಿಗೊಡ್ಡಿವೆ. ಆ ಗಾಳಿಯಲೆ ಅವುಗಳ ನರುಗಂಪನ್ನು ಧರಿಸಿ ಆ ವಾತಾವರಣವನ್ನೇ ಗಂಧಮಯಗೊಳಿಸಿದೆ. ನಾದವು ಅದರ ಪಾಡಿಗೆ ಬೆಳೆಯುತ್ತ ಹೋದಂತೆ ಇತ್ತ ಮನದಲ್ಲಿ ಸೃಷ್ಟಿಶೀಲ ಸಾಧ್ಯತೆಗಳು ಥಟ್ಟನೆ ಬಿಚ್ಚಿಕೊಂಡಿ ಬೆಳೆಯುತ್ತ ಹೋಗುವ ಬಗೆಯೇ ವಿಸ್ಮಯ. ನೂರೆಂಟು ಭಾವಗಳು ಬೆರೆತ ಆ ಉನ್ಮತ್ತ ಸ್ಥಿತಿಯನ್ನು ಏನೆನ್ನಬೇಕು ? ಅಲ್ಲಿ ನಾದದ ನರುಗಂಪು ವ್ಯಾಪಿಸಿಕೊಂಡು, ಎಲ್ಲವನ್ನೂ ನಾದಮಯಗೊಳಿಸಿದೆ. ಅದರ ಸವಿಯನ್ನು ಹೀರಿ ಮನದುಂಬಿದ ದುಂಬಿಯಂತಾಗಿದ್ದಾನೆ ಕೇಳುಗ.

ಮನಸ್ಸಿನ ಮಧ್ಯ ಬಿಂದುವು ದತನ್ನ ಸುತ್ತಲೂ ಕನಸು ಕಾಮನಬಿಲ್ಲುಗಳ ವರ್ತುಲ ರಚಿಸಿಕೊಳ್ಳುತ್ತಿದೆ. ಕನಸಲ್ಲಿ ಬೆರೆತಂಥ ಬಣ್ಣಗಳಾವುವು ? ಹೇಳಲಾಗದು. ಅದು ಅನುಭವಕ್ಕೆ ಮಾತ್ರ ಗೊತ್ತು. ಕಾಮನಬಿ್ಲು ಬಯಕೆಗಳಿಗೆ ಮೋಹಕ್ಕೆ, ರಾಗಕ್ಕೆ ಅಮೂರ್ತ ಚೆಲುವಿಗೆ ಮೂರ್ತದ ಮೈಯ್ಯಾಗಿ ಮೂಡುತ್ತದೆ. ಅದು ಸ್ವರ್ಗೀಯ ಬೆರಗು. ಕನಸಿನಂತೆ ಕೈಗೆ ಸಿಗದೇ ಕಾಡುವ ಅಮೂರ್ತ ಹಂಬಲ. ಆ ಕಾಮನಬಿಲ್ಲು ನೆಲಮುಗಿಲುಗಳನ್ನೇ ತನ್ನ ಮಾಂತ್ರಿಕ ಸ್ಪರ್ಶದಿಂದ ಬಂಧಿಸಿಬಿಟ್ಟಿದೆ. ಆಗ ದ್ವೈತವಳಿದು ಅದ್ವೈತ ಸಂಭವಿಸಿದೆ. ನಾದದ ಪ್ರಭಾವ ವಲಯದಲ್ಲಿ ವಿಭಜನೆಯಿಲ್ಲ. ಅದರ ಅಖಂಡ ಅನುಭೂತಿಯಲ್ಲಿ ಸಿಗುವುದು ಸಂಪೂರ್ಣ ಆನಂದ. ಆ ಆನಂದಕ್ಕೆ ಜೀವಮೂಲವು ಮಿಡಿದಿದೆ. ಪರವಶಗೊಂಡಿದೆ. ಆದ್ದರಿಂದ ಇಹಪರಗಳನ್ನು ಒಟ್ಟಿಗೆ ತಂದುಕಟ್ಟುವುದೂ ನಾದಕ್ಕೆ ಸಾಧ್ಯ.

ಮೋಡದೊಡಲಿಗೆ ಮಿಂಚು ಸಂಚರಿಸಿದಂತೆ ಅನಿರೀಕ್ಷಿತವಾಗಿ ಮೂಡಿದ ಆನಂದದ ಕೆಲವು ಕ್ಷಣಗಳದ್ದಾದರೂ ಅದು ಮೂಡಿದ ಪರಿಣಾಮ ಅಗಾಧವಾದುದು. ಆ ಮಿಂಚು ರಾಗದಲ್ಲೂ ಮೂಡಿ, ಆ ರಾಗದಿಂದ ಸಂಚಲಿಸಿದ ಭಾವದಲ್ಲ ಮೂಡಿ ಮರೆಯಾಗುತ್ತದೆ. ಹಾಗಾಗಿ ಎರಡು ನೆಲೆಯಲ್ಲ ಸೃಷ್ಟಕ್ರಿಯೆ ನಡೆಯುತ್ತದೆ. ಆ ಮಿಂಚಿನ ಸ್ಪರ್ಶದಿಂದ ಹನಿಗರೆದು ಮಳೆಯಾದ ರಾಗಲಹರಿ ತೆರೆ ತೆರೆ ಯಾಗಿ ಚಲಿಸುತ್ತ ಕಡಲನ್ನೇ ತಟ್ಟಿನಿಂತಿದೆ. ಭವ್ಯತೆಯ ದಿವ್ಯದರ್ಶನವನ್ನು ಮಾಡಿಸಿದೆ.

ಅನುಭವವು ವಿಸ್ತರಿಸುತ್ತ ತನ್ನ ಭವ್ಯ ಅಪಾರತೆಯಿಂದ ಇಂದ್ರಿಯಾತೀತ ನೆಲೆಗೆ ಸಾಗುವುದು ಕವಿತೆಯಲ್ಲಿ ಸಾಧ್ಯವಾಗಿದೆ. ಅದು ಸಾಧ್ಯವಾದುದು ನಾದದ ಅಖಂಡತೆಯಿಂದ. ಆ ನಾದ ಭೂಮಿಯಾಚೆಗೂ ಮೈಚಾಚಿದೆ. ಇಂದ್ರಿಯಗಳ ಗ್ರಹಿಕೆಯ ಸೀಮೆಯನ್ನು ವಿಸ್ತರಿಸಿದೆ.

‘ಕೋಟಿ ಮೆಲಂತರದ ನೀಹಾರಿಕೆಯ ನಾಡಿ
ಮಿಡಿತ ತಟ್ಟಿತು ಕವಿಗೆ’ ನಾದದ ಕೂದಲೆಳೆಯಲಿ
ಪೃಥ್ವಿ ತೂಗಿದೆ ಸೂರ್ಯಚಂದ್ರರಿಗೂ ಜೋಕಾಲಿ
ಪಾತಾಳಗವಿಗೆ ತೆರೆದವು ನೂರು ಬೆಳಕಿಂಡಿ’’

ಎಂಬ ಸಾಲುಗಳು ಅದನ್ನು ಥಟ್ಟನೆ ಅರಿವಿಗೆ ಬರುವಂತೆ ಮಾಡುತ್ತದೆ. ಸೂಕ್ಷ್ಮಗೊಂಡ ಚೈತನ್ಯದ ಸಂವೇದನೆಯ ಪರಿಇದು. ಅದರ ಅಭಿವ್ಯಕ್ತಿ ಕೂಡ ಕವಿತೆಯಲ್ಲಿ ಅಷ್ಟೇ ಸೂಕ್ಷ್ಮವಾಗಿ, ಶಕ್ತಿಶಾಲಿಯಾಗಿ ಪಡಿಮೂಡಿದೆ. ಸನಾದದ ಸೂಕ್ಷ್ಮತೆಗೆ ಅದೆಷ್ಟು ಶಕ್ತಿಯಿದೆಯೆಂದರೆ ಅದರ ಕೂದಲೆಳೆಯಲ್ಲಿ ಇಡೀ ವಿಶ್ವವೇ ಜೋಕಾಲಿಯಾಡುತ್ತದೆ. ಆ ನಾದ ಇಡೀ ಬ್ರಹ್ಮಾಂಡವನ್ನೇ ತಟ್ಟಿ ಮಲಗಿಸುವ ಜೋಗುಳವಾಗಿದೆ. ಅಲ್ಲಿ ಸೂರ್ಯಚಂದ್ರರು ಮಗುವಾಗಿಬಿಟ್ಟಿದ್ದಾರೆ. ಇಡೀ ವಿಶ್ವವೇ ನಾದದಲ್ಲಿ ಮುಳುಗಿ ವಿಸ್ಮಿತವಾಗಿದೆ. ಇದರಿಂದ ಕಾಣದ ಬೆಳಕನ್ನು ಕಾಣುವುದು, ಅತೀತವಾದದ್ದನ್ನು ಅನುಭವಿಸುವುದು ಸಾಧ್ಯವಾಗಿದೆ. ಪಾತಾಳಗವಿಗೆ ನೂರು ಬೆಳಕಿಂಡಿಗಳು ತೆರೆದುಕೊಂಡ ಅನುಭವ ಅದೇ ಆಗಿದೆ. ನಾದವು ಬೆಳಕಾಗುವ ಬಗೆಯಿದು.

ಶಹನಾಯಿಯ ನಾದ ನಿಂತಾಗ ಒಂದು ಸಲ ಈ ಅನುಭಾವದ ಕೊಂಡಿ ಕಳಚಿದ್ದು, ಹೊಕ್ಕಳ ಬಳ್ಳಿ ಕಳಚಿದಂತಹ ಆಘಾತ. ಸೃಷ್ಟಿಯು ಜೀವಪಡೆದು ಸ್ವತಂತ್ರವಾಗುವಾಗ ಈ ಆಘಾತ ಅನಿವಾರ್ಯ. ಒಂದು ಸೃಷ್ಟಿಯ ನೆಲೆಯಿಂದ ಮತ್ತೊಂದು ಸೃಷ್ಟಿಯ ನೆಲೆಗೆ ಸಾಗುವ ಅನಿವಾರ್ಯತೆಯಿದು. ಅವೆರಡರ ಮಧ್ಯೆ ಇರುವ ಸ್ತಬ್ಧತೆಯಿದು. ನಿಜಕ್ಕೂ ಆ ನಾದ ನಿಂತಿರುವುದಿಲ್ಲ. ಅದು ಸಹೃದಯನ ಪ್ರತಿಸೃಷ್ಟಿಯಲ್ಲಿ ನಿರಂತರವಾಗುತ್ತದೆ.