ಅವರು ಮೊದಲ ಬಾರಿಗೆ ತಾಂಜಾನಿಯಾಕ್ಕೆ ಬಂದಿದ್ದರು, ಹೆಚ್ಚಿನ ಮಾಹಿತಿ ಇಲ್ಲದೆ ಕೈಲಿದ್ದ ಲ್ಯಾಪ್ ಟಾಪ್ ಬಹಳ ಸುಲಭವಾಗಿ ಹೆಗಲಿಗೆ ಹಾಕಿಕೊಂಡು ಸುತ್ತಾಡಿದ್ದಾರೆ. ಇವರಿಗೆ ಇಂಗ್ಲೀಷ್ ಸರಿಯಾಗಿ ಬರುವುದಿಲ್ಲ ಮತ್ತು ಹೊಸಬರು ಎನ್ನುವುದು ಕೆಲವರಿಗೆ ಗೊತ್ತಾಗಿ ಸಣ್ಣ ಕಳ್ಳರು ಇವರನ್ನು ಹಿಂಬಾಲಿಸಿದ್ದಾರೆ. ಕಡಿಮೆ ಜನರು ಓಡಾಡುವ ಸ್ಥಳ ಬಂದಾಗ ಇವರ ಕೈಲಿದ್ದ ಕ್ಯಾಮೆರಾ, ಲ್ಯಾಪ್ ಟಾಪ್ ಮತ್ತು ಒಬ್ಬರ ಪೋನ್ ಕಿತ್ತುಕೊಂಡು ಓಡಿದ್ದಾರೆ. ಅವರನ್ನು ಹಿಂಬಾಲಿಸಿ ಹೇಗೋ ಲ್ಯಾಪ್ ಟಾಪ್ ಹಿಂದಕ್ಕೆ ಕಸಿದುಕೊಂಡಿದ್ದೆ ಒಂದು ಸಾಹಸವಾಗಿತ್ತು.
ಪ್ರಶಾಂತ್‌ ಬೀಚಿ ಬರೆಯುವ ಅಂಕಣ

 

ನಾನು ಏನೇ ಕೇಳಿದರೂ, ದೊಡ್ಡವನಾದಮೇಲೆ ತಿಳಿಯುತ್ತದೆ ಎಂದು ಚಿಕ್ಕವನಾಗಿದ್ದಾಗ ಹೇಳುತ್ತಿದ್ದರು. ದೊಡ್ಡವನಾಗುತ್ತಿರುವಾಗ ಬುದ್ದಿ ಬಂದಮೇಲೆ ತಿಳಿಯುತ್ತದೆ ಎನ್ನುತ್ತಿದ್ದರು. ದೊಡ್ಡವನಾಗಿ ಬುದ್ದಿ ಬಂದಿದೆ ಎನ್ನುವ ಸ್ಥಿತಿಗೆ ಬರಲೇ ಇಲ್ಲ. ಆದರೂ ಯಾರಿಗೆ, ಯಾವಾಗ, ಏನು ತಿಳಿಯುತ್ತದೆ ಎನ್ನುವುದೆ ಸೋಜಿಗ.

ಶಾಲೆಯಲ್ಲಿದ್ದಾಗ ಅರ್ಥವಾಗದಿದ್ದರೆ ಎಷ್ಟು ಸಾರಿ ಬೇಕಾದರು ಕೇಳಿ ಎಂದ ಮಾಸ್ತರರಿಗೆ, ಮೂರನೆ ಬಾರಿ ಕೇಳಿದ ಪ್ರಶ್ನೆಯನ್ನೆ ಕೇಳಿದ್ದಕ್ಕೆ, ಮಾಸ್ತರರು ಹೇಳಿದ್ದು ‘ನಿನಗೆ ಅರ್ಥವಾಗುವುದಿಲ್ಲ ಬಿಡು’.

ತುಂಬ ದುಃಖದಲ್ಲಿದ್ದ ಸ್ನೇಹಿತ ಕೆಲಸ ಕಳೆದುಕೊಂಡಿದ್ದ, ಹಣವಿರಲಿಲ್ಲ, ಮನೆಯಲ್ಲಿ ಬಹಳ ಸಮಸ್ಯೆ. ಸಾಧ್ಯವಾದ ಸಹಾಯ ಮಾಡಿ ಸಮಾಧಾನ ಹೇಳಲು ಹೋದಾಗ, ಅವನು ಹೇಳಿದ್ದು ‘ನಿನಗೆ ಅರ್ಥವಾಗುವುದಿಲ್ಲ ಬಿಡು’.

ಪ್ರೀತಿಸಿದ ಹುಡುಗಿಗಾಗಿ ಅಪ್ಪ-ಅಮ್ಮನನ್ನು ಬಿಟ್ಟು ಬಂದ ಹುಡುಗನಿಗೆ, ಹುಡುಗಿ ತಾನು ಮನೆ ಬಿಟ್ಟು ಬರುವುದಿಲ್ಲ ಎಂದು ಹೇಳುತ್ತಾಳೆ. ಅವಳಿಗೆ ಕಾರಣ ಕೇಳಿದರೆ ಅವಳು ಹೇಳಿದ್ದು ‘ನಿನಗೆ ಅರ್ಥವಾಗುವುದಿಲ್ಲ ಬಿಡು’.

ಕೆಲಸ ಕಲಿಯುವಾಗ ಪ್ರತಿಯೊಂದಕ್ಕೂ ಕುತೂಹಲದಿಂದ ಇದು ಯಾಕೆ ಹಿಂಗೆ, ಅದು ಯಾಕೆ ಹಿಂಗೆ ಎಂದು ಕೇಳಿದ್ದಕ್ಕೆ ನನಗೆ ಕೆಲಸ ಕಲಿಸಿಕೊಡುತ್ತಿದ್ದವನು ಹೇಳಿದ್ದು ‘ನಿನಗೆ ಅರ್ಥವಾಗುವುದಿಲ್ಲ ಬಿಡು’.

ಮದುವೆಯಾಗಿ ಹೆಂಡತಿಗೆ ಖುಷಿಪಡಿಸಲು ಮಾಡುತ್ತಿದ್ದ ಎಲ್ಲಾ ಪ್ರಯತ್ನಗಳು ವಿಫಲವಾಗುತ್ತಿದ್ದಾಗ ಸೋತು ಅವಳಲ್ಲೆ ಏನು ಮಾಡಬೇಕೆಂದು ಕೇಳಿದಾಗ ಅವಳು ಹೇಳಿದ್ದು ‘ನಿನಗೆ ಅರ್ಥವಾಗುವುದಿಲ್ಲ ಬಿಡು’.

ಅದ್ಯಾವುದೂ ಅರ್ಥವಾಗದೆ, ಆಗಿದ್ದು ಒಂದೆ. ‘ಮಕ್ಕಳು’, ಮಕ್ಕಳಿಗೆ ಆಟವಾಡುವುದು ಕಲಿಸಲು ಬರದಿದ್ದಾಗ, ಹೇಗೆ ಆಡುವುದು ಎಂದು ಕೇಳಿದರೆ ಅವರು ಅದನ್ನೆ ಹೇಳುತ್ತಿದ್ದರು ‘ನಿನಗೆ ಅರ್ಥವಾಗುವುದಿಲ್ಲ ಬಿಡು’.

ವಯಸ್ಸಿಗೆ ಬಂದ ಮಕ್ಕಳನ್ನು ಸರಿ ದಾರಿಯಲ್ಲಿ ನಡೆಯಲು ಹೇಳಿದಾಗ ಅವರು ಹೇಳಿದ್ದು ‘ನಿನಗೆ ಅರ್ಥವಾಗುವುದಿಲ್ಲ ಬಿಡು’.
ಮದುವೆಗೆ ಬಂದ ಮಕ್ಕಳಿಗೆ ಇಂಥಹ ಹುಡುಗ ಅಥವ ಹುಡುಗಿಯನ್ನು ಏಕೆ ಆರಿಸಿಕೊಳ್ಳುತ್ತೀಯ ಎಂದು ಕೇಳಿದಾಗ ಅವರು ಹೇಳಿದ್ದು ‘ನಿನಗೆ ಅರ್ಥವಾಗುವುದಿಲ್ಲ ಬಿಡು’.

ಮೊಮ್ಮಕ್ಕಳನ್ನು ಬೆಳೆಸುವ ಬಗೆಗೆ ಪ್ರಶ್ನೆ ಕೇಳಿದಾಗಲೂ ನನಗೆ ಹೇಳಿದರು ‘ನಿನಗೆ ಅರ್ಥವಾಗುವುದಿಲ್ಲ ಬಿಡು’.

ನನ್ನಿಷ್ಟದಂತೆ ನಾನು ಬದುಕಬೇಕೆಂದು ನನ್ನ ಆಸೆಯನ್ನು ಹೇಳಿದಾಗಲು ಅದನ್ನು ತಿರಸ್ಕರಿಸಿ ಅವರು ಹೇಳಿದ್ದು ‘ನಿನಗೆ ಅರ್ಥವಾಗುವುದಿಲ್ಲ ಬಿಡು’.

ಹುಟ್ಟಿನಿಂದ ಸಾಯುವ ತನಕ ಮನುಷ್ಯ ಅರ್ಥವಾಗದೆ ಬದುಕಿಬಿಡುತ್ತಾನೆ. ಬದುಕು ಎನ್ನುವುದು ಎಷ್ಟು ವಿಸ್ಮಯವಲ್ಲವೆ!

ಮರೆತುಹೋಗಿದ್ದ ಇಸ್ರೇಲ್ ಕಥೆ ನೆನಪಾಗಿದ್ದು ಮತ್ತೆ ಯುದ್ಧ ಶುರುವಾದ ಮೇಲೆ. ಅದು ಸುಮಾರು ಎರಡು ಸಾವಿರದ ಆರನೆ ಇಸವಿ, ನಾನು ತಾಂಜಾನಿಯಾದ ಅರುಷ ಎನ್ನುವ ಊರಿನಲ್ಲಿ ವಾಸವಾಗಿದ್ದೆ. ಕಂಪ್ಯೂಟರ್ ರಿಪೇರಿ ಮಾಡಿಸಿಕೊಳ್ಳಲು ಒಬ್ಬ ಮನುಷ್ಯ ಬಂದ. ಅರೆಬರೆ ಇಂಗ್ಲೀಷ್ ನಲ್ಲಿ ತನ್ನ ಅಗತ್ಯವನ್ನು ಹೇಳಿಕೊಂಡು, ಯಾವಾಗ ರಿಪೇರಿ ಆಗಬಹುದು ಎಂದು ಕೇಳಿದ. ಎರಡು ದಿನಗಳು ಬಿಟ್ಟು ಬರಲು ಹೇಳಿದ್ದೆ. ಆದರೆ ಮಾರನೆ ದಿನದ ಬೆಳಿಗ್ಗೆಯೆ ಬಂದು ಕುಳಿತಿದ್ದ ಜೊತೆಗೆ ಇನ್ನೊಬ್ಬಳು ಹುಡುಗಿ ಕೂಡ ಇದ್ದಳು. ಇಬ್ಬರೂ ನೋಡಿ ನಕ್ಕು ಅಲ್ಲೆ ಕುಳಿತಿದ್ದರು. ಸ್ವಲ್ಪ ಹೊತ್ತು ಬಿಟ್ಟ ನಂತರ ನಾನು ಮತ್ತೆ ಹೊರಗೆ ಬಂದಾಗ ಅಲ್ಲೆ ಕೂತಿದ್ದರು. ಕುತೂಹಲಕ್ಕೆ ಕೇಳಿದೆ, ‘ಕ್ಷಮಿಸಿ, ನಾನು ಎರಡು ದಿನ ಬಿಟ್ಟು ಬರಲು ಹೇಳಿದ್ದೆ, ನೀವು ನಾಳೆ ಬನ್ನಿ’. ಅದಕ್ಕೆ ಹುಡುಗಿ ಹೇಳಿದಳು, ‘ನಿಮಗೆ ತೊಂದರೆ ಇಲ್ಲ ಎಂದರೆ ಇಲ್ಲೆ ಕೂತು ಸಂಜೆ ಹೋಗಬಹುದೆ?’ ಅವಳ ಇಂಗ್ಲೀಷ್ ಸ್ವಲ್ಪ ಸುಧಾರಿಸಿದ್ದಾಗಿತ್ತು. ನನ್ನದು ಯಾವುದೇ ಆಕ್ಷೇಪಣೆ ಇಲ್ಲದ್ದರಿಂದ ಅವರು ಅಲ್ಲೆ ಕೂತಿದ್ದರು.

ನಾನು ಊಟ ಮುಗಿಸಿ ಬಂದಾಗಲೂ ಅಲ್ಲೇ ಕೂತು ಸಣ್ಣದಾಗಿ ಏನೇನೊ ಮಾತನಾಡಿಕೊಳ್ಳುತ್ತಿದ್ದರು. ತಮ್ಮ ಕೈಲಿದ್ದ ಫೋನಿನಲ್ಲೆ ಮೆಸೆಜ್ ಕಳಿಸುತ್ತಾ ಅದರ ಬಗ್ಗೆ ಮಾತನಾಡಿಕೊಳ್ಳುತ್ತಿದ್ದರು. ನನ್ನನ್ನು ನೋಡಿದಾಗಲೆಲ್ಲ ಇಬ್ಬರು ನಗು ಬೀರಿ ಗಂಭೀರವಾಗಿ ಕೂತಿರುತ್ತಿದ್ದರು. ಅವರು ಏನೋ ಹೇಳಬೇಕೆಂದಿದ್ದಾರೆ ಅನ್ನಿಸತೊಡಗಿತು. ಇಬ್ಬರನ್ನು ಒಳಕ್ಕೆ ಕರೆದು ಮಾತನಾಡಲು ಶುರುಮಾಡಿದೆ. ಆಗ ತಿಳಿಯಿತು, ಅವರು ಇಸ್ರೇಲ್ ನಿಂದ ಬಂದಿದ್ದಾರೆ. ಅವರು ಮಾತನಾಡುತ್ತಿದ್ದ ಭಾಷೆ ಹಿಬ್ರೂ. ಅವನ ಹೆಸರು ರಾವಿಡ್ ಗಲಿಲಿ ಮತ್ತು ಅವಳ ಹೆಸರು ಮಾಯಾ.

ದೊಡ್ಡವನಾಗುತ್ತಿರುವಾಗ ಬುದ್ದಿ ಬಂದಮೇಲೆ ತಿಳಿಯುತ್ತದೆ ಎನ್ನುತ್ತಿದ್ದರು. ದೊಡ್ಡವನಾಗಿ ಬುದ್ದಿ ಬಂದಿದೆ ಎನ್ನುವ ಸ್ಥಿತಿಗೆ ಬರಲೇ ಇಲ್ಲ. ಆದರೂ ಯಾರಿಗೆ, ಯಾವಾಗ, ಏನು ತಿಳಿಯುತ್ತದೆ ಎನ್ನುವುದೆ ಸೋಜಿಗ.

ಅವರು ಮೊದಲ ಬಾರಿಗೆ ತಾಂಜಾನಿಯಾಕ್ಕೆ ಬಂದಿದ್ದರು, ಹೆಚ್ಚಿನ ಮಾಹಿತಿ ಇಲ್ಲದೆ ಕೈಲಿದ್ದ ಲ್ಯಾಪ್ ಟಾಪ್ ಬಹಳ ಸುಲಭವಾಗಿ ಹೆಗಲಿಗೆ ಹಾಕಿಕೊಂಡು ಸುತ್ತಾಡಿದ್ದಾರೆ. ಇವರಿಗೆ ಇಂಗ್ಲೀಷ್ ಸರಿಯಾಗಿ ಬರುವುದಿಲ್ಲ ಮತ್ತು ಹೊಸಬರು ಎನ್ನುವುದು ಕೆಲವರಿಗೆ ಗೊತ್ತಾಗಿ ಸಣ್ಣ ಕಳ್ಳರು ಇವರನ್ನು ಹಿಂಬಾಲಿಸಿದ್ದಾರೆ. ಕಡಿಮೆ ಜನರು ಓಡಾಡುವ ಸ್ಥಳ ಬಂದಾಗ ಇವರ ಕೈಲಿದ್ದ ಕ್ಯಾಮೆರಾ, ಲ್ಯಾಪ್ ಟಾಪ್ ಮತ್ತು ಒಬ್ಬರ ಪೋನ್ ಕಿತ್ತುಕೊಂಡು ಓಡಿದ್ದಾರೆ. ಅವರನ್ನು ಹಿಂಬಾಲಿಸಿ ಹೇಗೋ ಲ್ಯಾಪ್ ಟಾಪ್ ಹಿಂದಕ್ಕೆ ಕಸಿದುಕೊಂಡಿದ್ದೆ ಒಂದು ಸಾಹಸವಾಗಿತ್ತು.

ಸಾಮಾನ್ಯವಾಗಿ ಯಾರು ಹೀಗೆ ಕಳ್ಳರನ್ನು ಹಿಂಬಾಲಿಸಿ ಕಿತ್ತುಕೊಳ್ಳುವುದಕ್ಕೆ ಹೋಗುವುದಿಲ್ಲ, ಅದು ಬಹಳ ಅಪಾಯಕಾರಿ. ಏಕೆಂದರೆ, ಹೆಚ್ಚಿನ ಸಮಯ ಕಳ್ಳರು ಕುಡಿದಿರುತ್ತಾರೆ, ಇಲ್ಲವೆ ಗಾಂಜಾ ಸೇವಿಸಿರುತ್ತಾರೆ. ಅಂಥಹ ಸಮಯದಲ್ಲಿ ಅವರು ಚಾಕು ಹಾಕುವುದಕ್ಕೂ ಹೆದರುವುದಿಲ್ಲ. ರಾವಿಡ್ ಗಲಿಲಿ ಮತ್ತು ಮಾಯಾಗೆ ತಾಂಜಾನಿಯಾದ ನೈಜತೆಯ ಹೆಚ್ಚಿನ ಅರಿವಿರಲಿಲ್ಲ. ಅವರಿಗಾದ ಅಘಾತದಿಂದ ಇಬ್ಬರೂ ಹೊರಗೆ ಬಂದಿರಲಿಲ್ಲ, ಹಾಗಾಗಿ ಲ್ಯಾಪ್ ಟಾಪ್ ರಿಪೇರಿ ಆಗುವವರೆಗೂ ಅಲ್ಲೆ ಇದ್ದು ತೆಗೆದುಕೊಂಡು ಹೋಗುವುದಾಗಿ ಹೇಳಿದರು.

ಅವರ ಕಥೆ ಕೇಳಿ ಬಹಳ ಬೇಸರವಾಯಿತು, ಹಾಗಾಗಿ ಅವತ್ತೆ ಅದನ್ನು ಸರಿಪಡಿಸಿಕೊಡುವುದಾಗಿ ಹೇಳಿದೆ. ಅವರಿಗೂ ನನ್ನ ಜೊತೆ ಮಾತನಾಡಿ ಸಮಾಧಾನವಾಯಿತು. ನಾನು ಸ್ವಲ್ಪ ಆರಾಮಾಗಿದ್ದೆ, ಅವರೊಡನೆ ಹರಟಲು ಶುರುಮಾಡಿದೆ. ಅವರ ತಾಂಜಾನಿಯಾಗಿ ಯಾಕೆ ಬಂದರು, ಎಲ್ಲಿಂದ ಬಂದರು ಎನ್ನುವ ಎಲ್ಲಾ ಮಾಹಿತಿ ಕುತೂಹಲದಿಂದ ಕೇಳಿಸಿಕೊಳ್ಳುತ್ತಿದ್ದೆ.

ರಾವಿಡ್ ಗಲಿಲಿ ಮತ್ತು ಮಾಯಾ ಇಬ್ಬರು ಮದುವೆಯಾಗಿ ಇನ್ನು ವರ್ಷವಾಗಿರಲಿಲ್ಲ. ತಮ್ಮದೆ ಆದ ಒಂದು ಟ್ರಾವೆಲ್ ಕಂಪೆನಿಯನ್ನು ಇಸ್ರೇಲ್ ನಲ್ಲಿ ಹೊಂದಿದ್ದರು. ಅದರ ವಿಸ್ತರಣೆಗಾಗಿ ಮತ್ತು ತಾಂಜಾನಿಯಾದ ಸಫ಼ಾರಿ ಬಗ್ಗೆ ತಿಳಿಯಲು ಬಂದಿದ್ದರು. ಅವರ ಪರಿಚಯವಾದ ಮೇಲೆ ನಾನು ಅವರಿಗೆ ಬಹಳ ಆಪ್ತನಾಗಿದ್ದೆ. ನಂತರ ತಿಳಿಯಿತು ರಾವಿಡ್ ಗೆ ಮಾಯಾ ಎರಡನೆ ಹೆಂಡತಿ ಎಂದು. ಮೊದಲನೆ ಹೆಂಡತಿಯ ಜೊತೆಗೆ ಸರಿ ಬರದ ಕಾರಣ ವಿಚ್ಚೇದನ ಪಡೆದು ಮಾಯಾಳನ್ನು ಮದುವೆಯಾಗಿದ್ದ. ತಮ್ಮ ಟ್ರಾವೆಲ್ ಕಂಪೆನಿಯನ್ನು ಬೆಳೆಸಲು ಮತ್ತು ತಾಂಜಾನಿಯಾದ ಬಗ್ಗೆ ತಿಳಿಯಲು ಇಲ್ಲಿ ಆರು ತಿಂಗಳು ಇರುವ ಯೋಜನೆಯೊಂದಿಗೆ ಬಂದಿದ್ದರು.

ಅರುಷ ದಿಂದ ದೂರದಲ್ಲಿ ಒಂದು ಹಳ್ಳಿ ಇದೆ, ಅಲ್ಲಿ ಎಕೋ ಟೂರಿಸಂ ಹೆಸರಿನಲ್ಲಿ ಒಂದು ಸಂಸ್ಥೆ ಕೆಲಸ ಮಾಡುತ್ತದೆ. ಆ ಕಂಪೆನಿಯ ಜೊತೆಗೆ ಮಾತನಾಡಿ, ಅದೇ ಹಳ್ಳಿಯಲ್ಲಿ ಉಳಿದು ಎಕೋ ಟೋರಿಸಂ ಬಗ್ಗೆ ಅಧ್ಯಯನ ಮಾಡಲು ಬಂದಿದ್ದರು. ನನಗೆ ಅವರ ಪರಿಚಯ ಚೆನ್ನಾಗಿ ಆಗಿದ್ದರಿಂದ ನಂತರದ ದಿನಗಳಲ್ಲಿ ನಾನು ಅವರ ಹಳ್ಳಿಗೆ ಹೋಗಿ ಅಲ್ಲೆ ಉಳಿದು, ಅವರೊಡನೆ ಸುತ್ತ ಮುತ್ತಲಿನ ಜಾಗವನ್ನು ವೀಕ್ಷಿಸಲು ಹೋಗಿದ್ದೆ. ಆಗ ಅವರ ಬಗ್ಗೆ ಇನ್ನಷ್ಟು ತಿಳಿಯಲು ಅವಕಾಶ ಸಿಕ್ಕಿತು.

ಇಸ್ರೇಲ್ ಒಂದು ವಿಶಿಷ್ಟವಾದ ದೇಶ. ಅಲ್ಲಿಯ ಪ್ರತೀ ಪ್ರಜೆಯು ಸೈನ್ಯದಲ್ಲಿ ಎರಡು ವರ್ಷ ಸೇವೆ ಮಾಡಲೇಬೇಕು. ಸೇವೆಗೆ ಸಂಬಳ ಕೂಡ ಸಿಗುತ್ತದೆ. ಆ ದೇಶದ ಪ್ರಧಾನ ಮಂತ್ರಿಯ ಮಗನೆ ಆಗಲಿ ಅಥವ ರಾಷ್ಟ್ರಪತಿಯ ಮಗನೇ ಆಗಲಿ, ಎರಡು ವರ್ಷ ಸೈನ್ಯದಲ್ಲಿ ಕೆಲಸ ಮಾಡಲೇಬೇಕು. ಹಾಗಾಗಿ ಅಲ್ಲಿಯ ಪ್ರತೀ ಪ್ರಜೆಗೆ ಶಿಸ್ತಿನ ಜೀವನ ಮತ್ತೆ ರಾಷ್ಟ್ರ ಪ್ರೇಮ ಜಾಗೃತವಾಗಿರುತ್ತದೆ. ಗಂಡು ಮತ್ತು ಹೆಣ್ಣು ಎನ್ನುವ ಭೇದವಿಲ್ಲದೆ ಶಾಲೆಯಲ್ಲಿರುವಾಗಲೆ ಅಥವ ಶಾಲೆ ಮುಗಿದ ಮೇಲೆ ಕನಿಷ್ಟ ಎರಡು ವರ್ಷ ಸೈನ್ಯದ ತರಬೇತಿ ತೆಗೆದುಕೊಳ್ಳಲೇಬೇಕು. ಹಾಗಾಗಿ ಆ ದೇಶದ ಪ್ರತೀ ಪ್ರಜೆಯೂ ಕೂಡ ಸೈನಿಕ. ಆ ದೇಶದ ನೀರಿನ ನಿರ್ವಹಣೆ ಮತ್ತು ವ್ಯವಸಾಯದ ಬಗ್ಗೆ ಪ್ರಪಂಚಕ್ಕೆ ತಿಳಿದಿದೆ. ಅಲ್ಲಿನ ಡೆಡ್ ಸೀ, ಅದರಲ್ಲಿ ಈಜಲು ಹೋದರೆ ಜನರು ಯಾಕೆ ಮುಳುಗುವುದಿಲ್ಲ ಮತ್ತು ಅದರಲ್ಲಿ ಜಾಸ್ತಿ ಹೊತ್ತು ಈಜಲು ಆಗುವುದಿಲ್ಲ ಎನ್ನುವುದನ್ನು ಸವಿಸ್ತಾರವಾಗಿ ವಿವರಿಸಿದರು. ಜೆರುಸಲೆಂ ಮತ್ತು ಅದರ ಮಹತ್ವ ಒಂದು ತೂಕವಾದರೆ, ಅದಕ್ಕಾಗಿ ಆಗುವ ಜಗಳಗಳದ್ದು ಇನ್ನೊಂದು ತೂಕ. ಹೀಗೆ ಇಸ್ರೇಲ್ ಬಗ್ಗೆ ಹೆಚ್ಚಿನ ಮಾಹಿತಿಯನ್ನು ರಾವಿಡ್ ಮತ್ತು ಮಾಯಾ ಕೊಟ್ಟಿದ್ದರು.

ಇದೆಲ್ಲಕ್ಕಿಂತ ಸ್ವಾರಸ್ಯಕರವೆಂದರೆ ಮಾಯಾ ಮೂಲತಃ ಇಸ್ರೇಲ್ ನವಳಲ್ಲ. ಅವರ ಪೂರ್ವಿಕರು ಇಸ್ರೇಲ್ ದೇಶದ ಪಕ್ಕದ ದೇಶದಿಂದ ಬಂದವರು. ಆದರೆ ಮಾಯಾ ಹುಟ್ಟಿ ಬೆಳೆದಿದ್ದು ಇಸ್ರೇಲ್ ಆದ್ದರಿಂದ ಅವಳಿಗೆ ಇಸ್ರೇಲ್ ಪ್ರಾಣ. ಹಾಗೆಂದು ಅವಳ ಪೂರ್ವಿಕರು ಬಂದ ದೇಶದ ಮೇಲೆ ಪ್ರೇಮವಿಲ್ಲದಿದ್ದರೂ ದ್ವೇಷವಿಲ್ಲ. ಯಾವ ದೇಶದಿಂದ ಮಾಯಾಳ ಪೂರ್ವಿಕರು ಬಂದಿದ್ದರೋ, ಆ ದೇಶಕ್ಕೂ ಮತ್ತು ಇಸ್ರೇಲ್ ಗೂ ಹಾವು ಮುಂಗಸಿಯ ನಂಟು. ಎರಡೂ ದೇಶಗಳಿಗೆ ಕನಸಿನಲ್ಲಿ ಕಂಡರೂ ಕೊಲ್ಲುವಂತಹ ದ್ವೇಷ. ಹೀಗಿದ್ದರೂ ರಾವಿಡ್ ಮತ್ತು ಮಾಯಾ ಒಬ್ಬರನೊಬ್ಬರು ಅತಿಯಾಗಿ ಪ್ರೀತಿಸುತ್ತಿದ್ದರು. ಎರಡೂ ದೇಶಗಳ ಬಗ್ಗೆ ರಾಜತಾಂತ್ರಿಕವಾಗಿ ಏನೇ ವೈಮನಸ್ಯವಿದ್ದರೂ, ಇವರುಗಳು ಅದರ ಬಗ್ಗೆ ಮಾತನಾಡುತ್ತಿರಲಿಲ್ಲ. ನಾನೇನಾದರೂ ಅದರ ಬಗ್ಗೆ ಜಾಸ್ತಿ ಕೇಳಿದರೆ ಅವರು ಹೇಳುತ್ತಿದ್ದರು ‘ನಿನಗೆ ಅರ್ಥವಾಗುವುದಿಲ್ಲ ಬಿಡು’.

ಇದು ಒಂದು ಕಥೆಯಲ್ಲ. ತಾಂಜಾನಿಯಾದಲ್ಲೆ ಇನ್ನೊಂದು ಜೋಡಿಯಿದೆ, ರಹೆಮಾನ್ ಮತ್ತು ಮನ್ ಪ್ರೀತ್ ಅವರ ಹೆಸರು. ಪಾಕಿಸ್ತಾನಿನ ಹುಡುಗ ಮತ್ತು ಪಂಜಾಬಿನ ಹುಡುಗಿ. ಮದುವೆಯಾಗಿ ಹನ್ನೆರಡು ವರ್ಷವಾಗಿತ್ತು. ರಹೆಮಾನ್ ಒಬ್ಬಂಟಿಯಾಗಿ ಪಾಕಿಸ್ತಾನಕ್ಕೆ ಹೋಗಿ ಬರುತ್ತಿದ್ದ, ಹಾಗೆ ಮನ್ ಪ್ರೀತ್ ಭಾರತಕ್ಕೆ. ಇಬ್ಬರೂ ಒಟ್ಟಿಗೆ ಇರಲು ಭಾರತವಾಗಲಿ ಅಥವ ಪಾಕಿಸ್ತಾನವಾಗಲಿ ಬಿಡುವುದಿಲ್ಲ ಎಂದು ತಿಳಿದು ಅವರ ಈ ಎರಡು ದೇಶವನ್ನೆ ಬಿಟ್ಟು ಆಫ್ರಿಕಾದ ತಾಂಜಾನಿಯಾದಲ್ಲಿ ಬೀಡು ಬಿಟ್ಟಿದ್ದರು. ಅವರಿಬ್ಬರಲ್ಲಿ ಯಾರಿಗೂ ಈ ಎರಡೂ ದೇಶಗಳ ಬಗ್ಗೆ ಪ್ರೀತಿ ಇಲ್ಲದಿದ್ದರೂ ದ್ವೇಷವಿಲ್ಲ.

ಇದು ಪ್ರಪಂಚದ ಅನೇಕ ದೇಶಗಳಲ್ಲಿರುವ ಸಮಾನಾಂತರ ಸಮಸ್ಯೆ. ಏಕೆ ಎಂದು ಕೇಳುತ್ತೀಯ?

‘ನಿನಗೆ ಅರ್ಥವಾಗುವುದಿಲ್ಲ ಬಿಡು’.