ಹಾಸ್ಟೆಲ್‌ನಲ್ಲಿ ನಮಗೆ ಪ್ರತಿ ತಿಂಗಳು ಸ್ನಾನಕ್ಕೆ ಮೈಸೋಪು, ತಲೆಗೆ ಎಣ್ಣೆ, ಬಟ್ಟೆ ತೊಳೆಯಲು ಹರಸನ್ ಸೋಪು ಕೊಡುತ್ತಿದ್ದರು. ವಾರ್ಡನ್ ನಿರಂಜನಾಚಾರಿ ಕೆಲವೊಮ್ಮೆ ತಿಂಗಳ ಪ್ರಾರಂಭದಲ್ಲೆ ಎಲ್ಲ ಸಾಮಗ್ರಿಗಳನ್ನ ತಂದು ಗೋಡೊನ್ ತುಂಬಿಸಿರುತ್ತಿದ್ದರು. ಆದರೆ ಎರಡು ಮೂರು ತಿಂಗಳಾದರೂ ಅವು ನಮ್ಮ ಕೈಸೇರುತ್ತಿರಲಿಲ್ಲ. ಕೊಂಡು ತರಲು ಹಾಸ್ಟೆಲ್ನ ಯಾವ ಹುಡುಗರ ಹತ್ತಿರವೂ ಬಿಡಿಗಾಸೂ ಇರುತ್ತಿರಲಿಲ್ಲ. ಬಟ್ಟೆಗಳಂತೂ ಮಾಸಿ ಚುಮ್ಮಟವಾಗಿರುತ್ತಿದ್ದವು. ಬಟ್ಟೆ ಒಗೆಯಬೇಕೆಂದುಕೊಂಡ ವಿದ್ಯಾರ್ಥಿಗಳು ತಮ್ಮ ಬಳಿಯಲ್ಲಿ ಇಲ್ಲದ ಬಟ್ಟೆ ಸೋಪು ಗೋಡೋನಿನೊಳಗೆ ಭದ್ರವಾಗಿರುವುದನ್ನ ಕಿಟಕಿ ಸಂದಿಯಲ್ಲಿ ಕಣ್ಣಿಕ್ಕಿ ನೋಡಿ ಆಸೆಮಾಡಿಕೊಳ್ಳುತ್ತಿದ್ದರು.
‘ಟ್ರಂಕು ತಟ್ಟೆ’ ಸರಣಿಯಲ್ಲಿ ಗುರುಪ್ರಸಾದ್ ಕಂಟಲಗೆರೆ ಅನುಭವ ಕಥನದ ಹತ್ತನೆಯ ಕಂತು.


ಸಮಾಜ ಕಲ್ಯಾಣಾಧಿಕಾರಿ ಓಬಣ್ಣ

ಆ ಘಟನೆ ನಡೆದಂದಿನಿಂದ ಮುಂದಿನ ಕೆಲ ದಿನಗಳವರೆಗೆ ನಮ್ಮ ಹಾಸ್ಟೆಲ್‍ಗೆ ಭೇಟಿ ನೀಡುವ ಅಧಿಕಾರಿಗಳ ಸಂಖ್ಯೆ ಹೆಚ್ಚಾಗಿತ್ತು. ಬೆಳಗ್ಗೆ ಸಂಜೆ ಯಾರಾದರೊಬ್ಬರು ಇದ್ದೆ ಇರುತ್ತಿದ್ದರು. ನಿಮಿತ್ತ ಹಾಸ್ಟೆಲ್ ಶೌಚಾಲಯ, ಕಾರಿಡಾರ್ ಎಲ್ಲವೂ ಪಳಪಳನೆ ಹೊಳೆಯುತ್ತಿದ್ದವು. ಒಂದು ದಿನ ತುಮಕೂರು ಜಿಲ್ಲಾ ಸಮಾಜ ಕಲ್ಯಾಣಾಧಿಕಾರಿಯಾಗಿದ್ದ ಬಿ.ಡಿ. ಓಬಪ್ಪನವರು ಚಿ.ನಾ.ಹಳ್ಳಿಗೆ ಭೇಟಿನೀಡುತ್ತಾರೆಂಬ ಸುದ್ದಿ ಹಬ್ಬಿ, ಹಾಸ್ಟೆಲ್ ಸಿಬ್ಬಂದಿಗಳಲ್ಲಿ ಸಂಚಲನ ಮೂಡಿಸಿತ್ತು. ಎಲ್ಲರೂ ತರಗುಟ್ಟುತ್ತಿದ್ದರು. ಎತ್ತರದ ಆಳಾಗಿದ್ದ ಓಬಣ್ಣನವರು ಹಾಸ್ಟೆಲ್‌ಗೆ ಬಂದವರೆ ‘ಎಲ್ಲಿ ಗುರು, ಜೆಪಿ’ ಎಂದು ನಮ್ಮನ್ನ ಹುಡುಕತೊಡಗಿದರು. ನಮ್ಮನ್ನು ಕಂಡವರೆ ‘ಅಪ್ಪ ಚೆನ್ನಾಗಿದರೇನಪ್ಪ, ಅಮ್ಮ ಚನ್ನಾಗಿದರೇನಪ್ಪ’ ಎಂದು ಕೇಳುತ್ತ ‘ನಾನ್ಯಾರು ಗೊತ್ತಾತೇನೊ ಮಾರಾಯ’ ಎಂದು ದುರ್ಗದ ಅವರದೇ ಶೈಲಿಯಲ್ಲಿ ಕೇಳತೊಡಗಿದರು. ನಾವು ತಬ್ಬಿಬ್ಬು! ನಮ್ಮಂತೆಯೆ ಸಿಬ್ಬಂದಿಯೂ..

ಓಬಣ್ಣ ಎಂಬ ಹೆಸರು ಕೇಳಿದ್ದ ನಾವು ಊರಿಗೋಗಿ ಅಪ್ಪನಲ್ಲಿ ಕೇಳಿದಾಗಲೇ ಗೊತ್ತಾದದ್ದು, ಅವರು ಬೇರೆ ಯಾರು ಅಲ್ಲ, ನಮ್ಮ ಅಪ್ಪನ ಎರಡನೇ ಅಕ್ಕನಾದ ಗೌರತ್ತೆಯ ಅಳಿಯ ಎಂದು. ಹಾಸ್ಯ ಮನೋಭಾವದ ಓಬಣ್ಣನ ದೊಡ್ಡತನವೆಂದರೆ ಆತ ದೊಡ್ಡ ಮಟ್ಟದ ಅಧಿಕಾರಿಯಾಗಿದ್ದರೂ ಸಂಬಂಧಗಳಿಗೆ ಬೆಲೆಕೊಟ್ಟು ಹುಡುಕಿಕೊಂಡು ಬರುತ್ತಿದ್ದರು. ಅವರು ಬಡವರೇ ಇರಲಿ, ನಿರ್ಗತಿಕರೇ ಇರಲಿ. ಈ ಹುಡುಗರು ಸಾಹೇಬರ ಸಂಬಂಧಿಗಳೆಂದು ಗೊತ್ತಾದ ಮೇಲಂತು, ಇಲಾಖೆಯೊಳಗೆ ನಮ್ಮ ಮರ್ಯಾದೆ ಇನ್ನೂ ಹೆಚ್ಚಾಯಿತು. ಹನುಮಂತನಂತೂ ದಿನೆ ದಿನೆ ಕುಸಿದೇ ಹೋದ.

ಶಾಲೆಯ ವಾತಾವರಣ ತಿಪಟೂರಿಗಿಂತ ಭಿನ್ನವಾಗಿತ್ತು. ಡಿವಿಪಿ ಸ್ಕೂಲಿನಲ್ಲಿ ತಪ್ಪಿಸಿಕೊಳ್ಳುವ ವಿದ್ಯಾರ್ಥಿಗಳ ಸಂಖ್ಯೆ ಕಡಿಮೆ ಇರುತ್ತಿತ್ತು. ಶಿಕ್ಷೆಯ ಪ್ರಮಾಣ ಜೀರೊ ಎನ್ನುವ ಮಟ್ಟಕ್ಕೆ ಇದ್ದುದೇ ಇದಕ್ಕೆ ಕಾರಣವಿರಬಹುದು. ಶಿಕ್ಷಕರು ಪ್ರಜಾಸತ್ತಾತ್ಮಕವಾಗಿ ನಡೆದುಕೊಳ್ಳುತ್ತ ವಿದ್ಯಾರ್ಥಿಗಳನ್ನು ಗೌರವದಿಂದ ನಡೆಸಿಕೊಳ್ಳುತ್ತಿದ್ದರು. ನಾನಿದ್ದ ಒಂಭತ್ತನೆ ತರಗತಿಗೆ ಹಾಸ್ಟೆಲ್‌ನಿಂದ ಬರುತ್ತಿದ್ದ ಪುಟ್ಟರಾಜ ನಾಯ್ಕ ಓದಿನಲ್ಲಿ ಮುಂದಿದ್ದ. ಹತ್ತನೆ ತರಗತಿಯ ಬಸಂತ ಆ ಶಾಲೆಯ ‘ಎ’ ಶ್ರೇಣಿಯಲ್ಲಿದ್ದ ಹುಡುಗರಿಗೆ ಸ್ಪರ್ಧೆ ಒಡ್ಡುತ್ತಿದ್ದ. ಈ ಪರಿಸರ ನನ್ನೊಳಗೂ ಓದನ್ನ ಬಿಟ್ಟುಕೊಳ್ಳುವಂತೆ ಮಾಡಿತು. ಕನ್ನಡಕ ಹಾಕುತ್ತಿದ್ದ ಪುಟ್ರಾಜ ಗಣಿತ ಮತ್ತು ವಿಜ್ಞಾನಕ್ಕೆ ಟ್ಯೂಷನ್‌ಗೆ ಹೋಗುತ್ತಿದ್ದ. ಸದಾ ಅವನ ಜೊತೆಯಿರುತ್ತಿದ್ದ ನಾನೂ ಸಹ ಅಪ್ಪನಿಗೆ ಹೇಳಿ, ದುಡ್ಡಿನ ಅನುಮತಿ ಪಡೆದು ಬೆಳಗ್ಗೆ ಆರಕ್ಕೆ ಎದ್ದು ಟ್ಯೂಷನ್‌ಗೆ ಹೋಗತೊಡಗಿದೆ. ಶಾಲೆಯಲ್ಲಿ ಬರಿ ಇಂಗ್ಲಿಷ್‌ನಲ್ಲೆ ಹೇಳಿ ಕನ್ಫ್ಯೂಸ್ ಮಾಡುತ್ತಿದ್ದ ವಿಜ್ಞಾನದ ಮೇಷ್ಟ್ರು, ಟ್ಯೂಷನ್‌ನಲ್ಲಿ ಮಾತ್ರ ಕನ್ನಡದಲ್ಲೂ ಹೇಳಿ ಅರ್ಥಮಾಡಿಸುತ್ತಿದ್ದರು. ಈಗ ಶಾಲೆಯ ಪಾಠ ನಿಧಾನಕ್ಕೆ ಅರ್ಥವಾಗತೊಡಗಿತು. ನನ್ನ ಓದಿನ ಪ್ರಗತಿ ತೀರ ಉನ್ನತ ಮಟ್ಟಕ್ಕಲ್ಲದಿದ್ದರೂ ಪರವಾಗಿಲ್ಲ ಎನ್ನುವ ಮಟ್ಟಕ್ಕೆ ಇತ್ತು. ಸಾಬರ ಹುಡುಗರು ನನಗಿಂತ ಕೆಳಗಿದ್ದು ನಾನು ಮಧ್ಯಮ ಕ್ರಮಾಂಕ ಕಾಯ್ದುಕೊಳ್ಳುವಂತಾಗಿತ್ತು.

ಮೊದಲ ಬಾರಿ ಕದ್ದ ಸೋಪು

ಈ ದಿನಗಳಲ್ಲೇ ನನ್ನ ದೇಹ ಪ್ರಕೃತಿ ಬದಲಾವಣೆಗೊಳಪಡುತ್ತಿತ್ತು. ತುಟಿ ಮೇಲೆ ಸಣ್ಣಗೆ ಮೀಸೆ, ಮುಖದ ತುಂಬ ಮೊಡವೆಗಳು ಎಲ್ಲೆಂದರಲ್ಲಿ ಏಳುತ್ತ ಕಿರಿಕಿರಿ ಉಂಟು ಮಾಡುತ್ತಿತ್ತು. ನನ್ನ ಒಂಭತ್ತನೆಯ ತರಗತಿಗೆ ಹಾಗು ಹಾಸ್ಟೆಲ್‌ಗೆ ಶ್ರೀನಿವಾಸನೆಂಬ ಇನ್ನೊಬ್ಬ ಗೆಳೆಯ ಸೇರಿಕೊಂಡ. ಸಾಲ್ಕಟ್ಟೆ ಗ್ರಾಮದವನಾದ ಆತ ಬೆಂಗಳೂರಿನ ಕಾನ್ವೆಂಟ್‌ನಿಂದ ಬಂದಿದ್ದರೂ ಓದಿನಲ್ಲಿ ನನ್ನಷ್ಟೆ ಇದ್ದ. ಇದು ನಾವಿಬ್ಬರು ಕೆಲವೊಮ್ಮೆ ಜೊತೆಗಿರಲು ನೆರವಾಗಿತ್ತು.

ಈಗಿನಂತೆ ಮಧ್ಯಾಹ್ನದ ಬಿಸಿಊಟವಿರದ ಆ ದಿನಗಳಲ್ಲಿ ಕೆಲವೊಮ್ಮೆ ಹಸಿದುಕೊಂಡಿರಬೇಕಾಗುತ್ತಿತ್ತು. ಇಂಥ ಒಂದು ಮಧ್ಯಾಹ್ನ ಸೀನ ‘ನಿನ್ನ ಹತ್ತಿರ ಎಷ್ಟು ದುಡ್ಡಿದೆ’ ಕೇಳಿದ. ಎರಡು ರೂಪಾಯಿ ಇರುವುದನ್ನ ಹೇಳಿದೆ. ‘ಬಾ ಆಗುತ್ತೆ’ ಎಂದು ರೋಡ್ ಪಕ್ಕದಲ್ಲಿದ್ದ ಗುಡಿಸಲು ಹೋಟೆಲ್‌ಗೆ ಕರೆದುಕೊಂಡು ಹೋಗಿ ಇಡ್ಲಿ ಆರ್ಡರ್ ಮಾಡಿದ. ತಲಾಗೊಂದೊಂದು ತಟ್ಟೆ ಇಡ್ಲಿ ಕೊಟ್ಟರು. ತಿಂದಾದ ನಂತರ ನನ್ನ ಬಳಿ ಇದ್ದ ಎರಡು ರೂಪಾಯಿಗೆ ತನ್ನ ಎರಡು ರೂಪಾಯಿಯನ್ನೂ ಸೇರಿಸಿ ಹೋಟೆಲ್‌ನವರಿಗೆ ಕೊಟ್ಟು ಬಂದ. ಇದುವರೆಗೂ ನಮ್ಮ ಬಳಿಯಿದ್ದ ಚಿಲ್ಲರೆ ಹಣಕ್ಕೆ ಕೇವಲ ಸೀಬೆಕಾಯಿ, ಎರ್ದೆಹಣ್ಣು ಮಾತ್ರ ಬರುತ್ತದೆಂದು ಭಾವಿಸಿದ್ದ ನನಗೆ ಅದೇ ದುಡ್ಡಿಗೆ ಹೊಟ್ಟೆ ತುಂಬಿಸುವ ಇಡ್ಲಿಯೂ ಸಿಗುತ್ತದೆಂಬುದನ್ನು ಮತ್ತು ಸ್ವಾತಂತ್ರ್ಯವಾಗಿ ಹೋಟೆಲ್‌ಗೆ ಹೋಗುವುದನ್ನ ಸೀನ ಮೊದಲಬಾರಿಗೆ ತೋರಿಸಿಕೊಟ್ಟ. ಆ ನಂತರ ಹಲವು ದಿನ ಹೀಗೆ ನಡೆಯಿತು. ಸೋಮುವಾರದ ಸಂತೆಯ ದಿನದಂದು ಅದೆ ಎರಡು ರೂಪಾಯಿಗೆ ಒಂದು ಲೀಟರ್ ಪುರಿ ಕೊಡುತ್ತಿದ್ದರು. ಸಂಜೆ ಮೈದಾನದಲ್ಲಿ ಕೂತು ಪುರಿ ಖಾಲಿ ಮಾಡಿ ಹಾಸ್ಟೆಲ್‍ಗೆ ಹಿಂತಿರುಗುತ್ತಿದ್ದೆವು.

ಹಾಸ್ಟೆಲ್‌ನಲ್ಲಿ ನಮಗೆ ಪ್ರತಿ ತಿಂಗಳು ಸ್ನಾನಕ್ಕೆ ಮೈಸೋಪು, ತಲೆಗೆ ಎಣ್ಣೆ, ಬಟ್ಟೆ ತೊಳೆಯಲು ಹರಸನ್ ಸೋಪು ಕೊಡುತ್ತಿದ್ದರು. ವಾರ್ಡನ್ ನಿರಂಜನಾಚಾರಿ ಕೆಲವೊಮ್ಮೆ ತಿಂಗಳ ಪ್ರಾರಂಭದಲ್ಲೆ ಎಲ್ಲ ಸಾಮಗ್ರಿಗಳನ್ನ ತಂದು ಗೋಡೊನ್ ತುಂಬಿಸಿರುತ್ತಿದ್ದರು. ಆದರೆ ಎರಡು ಮೂರು ತಿಂಗಳಾದರೂ ಅವು ನಮ್ಮ ಕೈಸೇರುತ್ತಿರಲಿಲ್ಲ. ಕೊಂಡು ತರಲು ಹಾಸ್ಟೆಲ್ನ ಯಾವ ಹುಡುಗರ ಹತ್ತಿರವೂ ಬಿಡಿಗಾಸೂ ಇರುತ್ತಿರಲಿಲ್ಲ. ಬಟ್ಟೆಗಳಂತೂ ಮಾಸಿ ಚುಮ್ಮಟವಾಗಿರುತ್ತಿದ್ದವು. ಬಟ್ಟೆ ಒಗೆಯಬೇಕೆಂದುಕೊಂಡ ವಿದ್ಯಾರ್ಥಿಗಳು ತಮ್ಮ ಬಳಿಯಲ್ಲಿ ಇಲ್ಲದ ಬಟ್ಟೆ ಸೋಪು ಗೋಡೋನಿನೊಳಗೆ ಭದ್ರವಾಗಿರುವುದನ್ನ ಕಿಟಕಿ ಸಂದಿಯಲ್ಲಿ ಕಣ್ಣಿಕ್ಕಿ ನೋಡಿ ಆಸೆಮಾಡಿಕೊಳ್ಳುತ್ತಿದ್ದರು. ಕಿಟಕಿಮಾತ್ರ ಎಷ್ಟು ತೋತರೂ ಬರುತ್ತಿರಲಿಲ್ಲ.

ಒಂದು ದಿನ ಪುಟ್ಟ ರಾತ್ರಿ ಹನ್ನೊಂದರ ನಂತರ ಪಿಸುದನಿಯಲ್ಲಿ ಎಬ್ಬಿಸಿದ. ಉಳಿದ ಹುಡುಗರೆಲ್ಲ ನಿದ್ರೆ ಹೋಗಿದ್ದರು. ಪುಟ್ಟ ಮತ್ತು ಬಸಂತ ಲಂಬಾಣಿ ಭಾಷೆಯಲ್ಲಿ ಮಾತಾಡಿಕೊಳ್ಳುತ್ತಿದ್ದರು. ಅವರು ನಡೆಸಲುದ್ದೇಶಿಸಿರುವ ಸಂಚನ್ನ ನನಗೆ ಹೇಳಬೇಕೊ ಬೇಡವೊ ಎಂಬ ಗೊಂದಲದಲ್ಲಿದ್ದಂತ್ತಿತ್ತು. ಕೊನೆಗೆ ಪುಟ್ಟ ‘ಬಟ್ಟೆ ಸೋಪ್ ಬೇಕೇನೊ?’ ಕೇಳಿದ. ಅನುಮಾನದಲ್ಲಿದ್ದ ನಾನು ಅವರ ಜೊತೆ ಹೆಜ್ಜೆ ಹಾಕಿದೆ. ಗೋಡೋನಿನ ಕಿಟಕಿ ಬಳಿ ನಿಂತೆವು. ಬಸಂತನ ಬಳಿ ಕಬ್ಬಿಣದ ಕೊಕ್ಕೆ ಆಕಾರದ ತಂತಿ ಇತ್ತು. ಅದನ್ನು ಕಿಟಕಿ ಸಂದಿಯಲ್ಲಿ ತೂರಿಸಿ ತುಂಬ ಹೊತ್ತು ಪ್ರಯತ್ನಿಸಿದ ನಂತರ ಒಳಗಿನಿಂದ ಹಾಕಿದ್ದ ಲಾಕ್ ಓಪನ್ ಆಗಿ ಕಿಟಕಿ ತೆರೆಯಲ್ಪಟ್ಟಿತು. ಇದೆಲ್ಲ ನಡೆಯುವಾಗ ನನಗೆ ಭಯವಾಗುತ್ತಿತ್ತು. ಹಾಸ್ಟೆಲ್‌ನ ಎಂಟ್ರೆಂಸ್ ಬಾಗಿಲ ಕಡೆಯೇ ನೋಡುತ್ತಿದ್ದೆ. ವಾರ್ಡನ್‌ಗೆ ಹೊತ್ತುಗೊತ್ತು ಇರುತ್ತಿರಲಿಲ್ಲ. ಯಾವಾಗೆಂದರೆ ಆವಾಗ ಕೆಲವೊಮ್ಮೆ ಮಧ್ಯರಾತ್ರಿಯೂ ಪ್ರವೇಶಿಸಿಬಿಡುತ್ತಿದ್ದರು. ಪುಟ್ಟ ಮತ್ತು ಬಸಂತ ಸತತ ಪ್ರಯತ್ನದ ನಂತರ ದೂರದಲ್ಲಿದ್ದ ಸೋಪಿನ ಪೆಂಡಿಯನ್ನು ಕೈಗೆ ಸಿಗುವಷ್ಟು ಹತ್ತಿರಕ್ಕೆ ಎಳೆದುಕೊಂಡರು. ಒಂದು ಎರಡು ಮೂರು ಹೀಗೆ ಹರಸನ್ ಸೋಪುಗಳನ್ನು ಚಡ್ಡಿ ಜೋಬಿಗೂ ಅಂಗಿ ಜೋಬಿಗೂ ತುಂಬಿಕೊಂಡರು. ನಾನು ಒಂದಕ್ಕೆ ತೃಪ್ತಿ ಪಟ್ಟುಕೊಂಡೆ. ಅದರ ಜೊತೆಯಲ್ಲೆ ಕೈಗೆ ಸಿಕ್ಕಿದ ಕಡ್ಳೆ ಬೀಜ, ಕಡ್ಳೆ ಎಲ್ಲವನ್ನೂ ಬಾಯಿಗೊಷ್ಟು ಜೋಬಿಗೊಷ್ಟು ತುಂಬಿಕೊಂಡೆವು.

ಇದುವರೆಗೂ ನಮ್ಮ ಬಳಿಯಿದ್ದ ಚಿಲ್ಲರೆ ಹಣಕ್ಕೆ ಕೇವಲ ಸೀಬೆಕಾಯಿ, ಎರ್ದೆಹಣ್ಣು ಮಾತ್ರ ಬರುತ್ತದೆಂದು ಭಾವಿಸಿದ್ದ ನನಗೆ ಅದೇ ದುಡ್ಡಿಗೆ ಹೊಟ್ಟೆ ತುಂಬಿಸುವ ಇಡ್ಲಿಯೂ ಸಿಗುತ್ತದೆಂಬುದನ್ನು ಮತ್ತು ಸ್ವಾತಂತ್ರ್ಯವಾಗಿ ಹೋಟೆಲ್‌ಗೆ ಹೋಗುವುದನ್ನ ಸೀನ ಮೊದಲಬಾರಿಗೆ ತೋರಿಸಿಕೊಟ್ಟ.

ಈಗ ಕಿಟಕಿಯನ್ನು ಮೊದಲಿನ ಮಾಮೂಲು ಸ್ಥಿತಿಗೆ ತರುವ ಸವಾಲು ಎದುರಾಯಿತು. ಎಲ್ಲರೂ ಸಾಕಷ್ಟು ಪ್ರಯತ್ನ ಹಾಕಿ ಕೆಳಗೆ ಇಟ್ಟಾಡಿರುವ ಕಡ್ಳೆಯನ್ನು ಆದುಕೊಂಡೆವು. ಕಿಟಕಿ ಯತಾ ಸ್ಥಿತಿಗೆ ಬಂದಿತಾದರು ಲಾಕ್ ಹಾಕುವುದು ಅಷ್ಟು ಸುಲಭವಿರಲಿಲ್ಲ. ಏನಾದರಾಗಲೀ ಎಂದು ಹಾಗೆ ಬಿಟ್ಟು ರೂಮಿಗೆ ವಾಪಾಸ್ ಆದೆವು. ಟ್ರಂಕಿನ ತಳಭಾಗದಲ್ಲಿ ಗೌಪ್ಯವಾಗಿ ಸೋಪುಗಳನ್ನು ಅಡಗಿಸಿಟ್ಟೆವು. ಕಣ್ಣು ಮುಚ್ಚಿ ಮಲಗಿದಾಗಲೂ ನನಗೆ ಬೆಳಗ್ಗೆಯದ್ದೇ ಚಿಂತೆ. ಪುಟ್ಟ ಮತ್ತು ಬಸಂತ ನಿರಾಳವಾಗಿ ಮಲಗಿದರು. ಅವರ ನಿರಾಳತೆ ಮತ್ತು ಚಾಕಾಚಕ್ಯತೆ ಇದು ಅವರ ಮೊದಲ ಸಾಹಸವಂತೂ ಅಲ್ಲವೆಂಬುದನ್ನ ಖಾತ್ರಿಗೊಳಿಸಿತ್ತು.

ಹೊಸ ಬಟ್ಟೆ ತೊಡುವ ಸಂಭ್ರಮ

ಪುಟ್ಟ ಮತ್ತು ಬಸಂತ ಇನ್ನಿತರ ಲಂಬಾಣಿ ಹುಡುಗರ ಜೊತೆ ರಾತ್ರಿ ಹೊತ್ತು ಬಸವಯ್ಯನ ಟೆಂಟ್‌ಗೆ ಸಿನಿಮಾ ನೋಡಲು ಹೋಗುತ್ತಿದ್ದರು. ಅಲ್ಲಿ ಕನ್ನಡದ ಬದಲಿಗೆ ಹಿಂದಿ ಮತ್ತು ಇತರ ಭಾಷೆಯ ಸಿನಿಮಾಗಳೇ ಹೆಚ್ಚು ಪ್ರದರ್ಶನಗೊಳ್ಳುತ್ತಿದ್ದರಿಂದ ನಾನು ಹೋಗುತ್ತಿರಲಿಲ್ಲ. ಹಾಗಾಗಿ ಸಿನಿಮಾ ಇಲ್ಲಿ ದೂರವೇ ಉಳಿಯಿತು. ಅಂತೂ ಇಂತು ಒಂಭತ್ತನ್ನ ಪೂರೈಸಿ ಹತ್ತಕ್ಕೆ ಪಾದಾರ್ಪಣೆ ಮಾಡಿದೆ. ಈಗ ಓದಿನ ಬಗ್ಗೆ ಹೆಚ್ಚಿನ ಜವಾಬ್ದಾರಿ ಬಂದಿತು. ಫೇಲಾಗಿ ಬಿಟ್ಟರೆ! ಎಂಬ ಭಯದ ಕುದುರೆ ಸದಾ ಅಟ್ಟಿಸಿಕೊಂಡು ಬರುತ್ತಿತ್ತು. ಆದ್ದರಿಂದ ಪ್ರಾರಂಭದಿಂದಲೇ ಗಮನವಿಟ್ಟು ಪಾಠಕೇಳಲು ಶುರುಮಾಡಿದೆ. ಗಣಿತ, ವಿಜ್ಞಾನ ವಿಷಯಗಳಿಗೆ ಟ್ಯೂಷನ್‌ಗೆ ಹೋಗುವುದೂ ನಡೆಯುತ್ತಿತ್ತು. ಡಿ.ವಿ.ಪಿ ಶಾಲೆಯ ಮತ್ತೊಂದು ಹೆಗ್ಗಳಿಕೆ ಎಂದರೆ ಇಲ್ಲಿ ಓದುವ ಮತ್ತು ಓದದಿರುವ ವಿದ್ಯಾರ್ಥಿಗಳ ನಡುವೆ ಉತ್ತಮ ಸಂಬಂಧ ಇರುತ್ತಿತ್ತು. ಇತರೆ ಶಾಲೆಗಳಲ್ಲಿ ಅವರದೇ ಒಂದು ಇವರದೇ ಒಂದು ಗುಂಪಾಗಿ ಕೆಳಕ್ಕೆ ಬಿದ್ದವರು ಮೇಲೇಳಲು ಅವಕಾಶವೇ ಇರುತ್ತಿರಲಿಲ್ಲ. ಇದಕ್ಕೆ ಶಿಕ್ಷಕರ ಕುಮ್ಮಕ್ಕೂ ಸೇರಿರುತ್ತಿತ್ತೇನೊ..

ಈ ಸಂಪ್ರದಾಯಕ್ಕೆ ತದ್ವಿರುದ್ದ ಎಂಬಂತೆ ಡಿ.ವಿ.ಪಿ ಶಾಲೆಯಲ್ಲಿ ಮುಸ್ಲಿಂ ಮತ್ತು ದಲಿತ ವಿದ್ಯಾರ್ಥಿಗಳಲ್ಲಿರುವ ಇನ್ನಿತರೆ ಪ್ರತಿಭೆಗಳನ್ನು ಇಲ್ಲಿನವರು ಶ್ಲಾಘಿಸುತ್ತಿದ್ದರು. ಇದರಿಂದ ಯಾರಲ್ಲೂ ನಾನು ಕಮ್ಮಿ ಎಂಬ ಮನೋಭಾವ ಇದ್ದಂತಿರಲಿಲ್ಲ. ಈ ನಿಟ್ಟಿನಲ್ಲಿ ಚಿತ್ರ ಬರೆಯುವುದರಲ್ಲಿ ಮುಂದಿದ್ದ ನನಗೆ ಯೋಗೀಶ, ಯಶ್ವಂತ, ಹರೀಶ ಮುಂತಾದ ಸ್ಥಿತಿವಂತ ವಿದ್ಯಾರ್ಥಿಗಳ ಸ್ನೇಹವೂ ಸಿಕ್ಕಿತ್ತು.

ಐಶಾರಾಮಿ ಹಿನ್ನೆಲೆಯ ವಿದ್ಯಾರ್ಥಿಗಳಿಂದಲೇ ತುಂಬಿದ್ದ ನನ್ನ ಇಂಗ್ಲೀಷ್ ಮೀಡಿಯಮ್ ಶಾಲೆ ಬುಧವಾರ ಬಂತೆಂದರೆ ರಂಗಾಗುತ್ತಿತ್ತು. ಅದು ಕಲರ್ ಡ್ರೆಸ್‌ನ ದಿನ. ವಾರ ಪೂರ್ತಿ ಯೂನಿಫಾರ್ಮ್‌ನಲ್ಲೆ ಬರುತ್ತಿದ್ದ ತಮ್ಮ ಮಕ್ಕಳಿಗೆ ಆ ದಿನ ಅವರ ತಂದೆ ತಾಯಂದಿರು ಬಣ್ಣ ಬಣ್ಣದ ದುಬಾರಿ ಬೆಲೆಯ ಬಟ್ಟೆಗಳನ್ನು ಹಾಕಿ ಕಳುಹಿಸುತ್ತಿದ್ದರು. ಬರ್ತಡೆಗೊ ಹಬ್ಬಕ್ಕೊ ತಂದ ಹೊಸ ಬಟ್ಟೆಗಳಿಗೆ ಅವತ್ತು ಪ್ರದರ್ಶನ ಭಾಗ್ಯ ಸಿಗುತ್ತಿತ್ತು. ನನ್ನ ಬಳಿ ಅಪ್ಪ ಕೊಡಿಸಿದ್ದ ಸ್ಕೂಲ್ ಯೂನಿಫಾರ್ಮ್‌ ಬಿಟ್ಟರೆ ಇನ್ನೊಂದು ಇರಲಿಲ್ಲ. ಹಾಸ್ಟೆಲ್‌ನಲ್ಲಿ ವರ್ಷಕ್ಕೆ ಎರಡು ಜೊತೆ ನೀಲಿ ಪ್ಯಾಂಟ್ ಮತ್ತು ಹಳದಿ ಅಂಗಿ ಕೊಡುತ್ತಿದ್ದರು. ಅಪ್ಪ ಹೆಚ್ಚೆಂದರೆ ಹಾಸ್ಟೆಲ್‌ನಲ್ಲಿ ಕೊಟ್ಟ ಪ್ಯಾಂಟ್‌ಗಳಲ್ಲಿದ್ದ ಕಾಜ ಗುಂಡಿ ತೆಗೆಸಿ ತೆಗೆಯಲು ಹಾಕಲು ಸುಲಭವಾಗುವಂತೆ ಜಿಪ್ ಹಾಕಿಸಿ ಕೊಡುತ್ತಿತ್ತು. ನಾನು ಅದನ್ನೆ ನೀಟಾಗಿ ತೊಳೆದು ಟ್ರಂಕ್ ಒಳಗೆ ಮಡುಚಿಟ್ಟುಕೊಂಡು ಬಳಸುತ್ತಿದ್ದೆ. ಹತ್ತನೆ ತರಗತಿ ಅರ್ಧ ಮುಗಿಯುವವರೆಗು ಹೀಗೆ ಇತ್ತು.

ಒಂದು ಬುಧವಾರ ಹೊಸಬಟ್ಟೆ ತೊಟ್ಟು ಬಂದಿದ್ದ ಕ್ಲಾಸ್ ಮೇಟ್ ಯಶ್ವಂತ ಊಟದ ವಿರಾಮದ ವೇಳೆಯಲ್ಲಿ ‘ಏನ್ಲ ನೀನು ದಿನ ಇವುನ್ನೆ ಆಕ್ಯಂಡು ಬತ್ತಿಯ, ನಿಮ್ಮಪ್ಪ ನಿಂಗೆ ಬೇರೆ ಬಟ್ಟೆನೆ ಕೊಡ್ಸಿಲ್ವ’ ಎಂದು ಕೇಳಿಯೇ ಬಿಟ್ಟ. ಆಕ್ಷಣ ನಾನು ಏನು ಉತ್ತರ ಕೊಟ್ಟೆನೊ ಗೊತ್ತಿಲ್ಲ. ಆದರೆ ಆ ಮಾತು ನನ್ನ ಬಹಳ ಚಿಂತೆಗೀಡುಮಾಡಿಬಿಟ್ಟಿತು. ವಾಸ್ತವದಲ್ಲಿ ಅದುವರೆಗೂ ನನಗೆ ಅದೊಂದು ಕೊರತೆ ಎಂದು ಅನಿಸಿಯೇ ಇರಲಿಲ್ಲ. ಒಂದೆರೆಡು ದಿನ ಹೀಗೆ ಕೊರಗಿ ಒಂದು ನಿರ್ಧಾರಕ್ಕೆ ಬಂದೆ. ಗೆಳೆಯ ಯಶ್ವಂತ ಹೀಗೆ ಕೇಳಿದ, ನನ್ನ ಹತ್ತಿರ ಬಟ್ಟೆ ಇಲ್ಲ, ಅವಮಾನವಾಗುತ್ತಿದೆ. ಹೊಸದಾದ ಎರಡು ಪ್ಯಾಂಟ್ ಮತ್ತು ಶರ್ಟ್ ಬೇಕು ಎಂದು ಅಪ್ಪನಿಗೊಂದು ಪತ್ರ ಬರೆದು ಪೋಸ್ಟ್ ಮಾಡಿದೆ. ಅಪ್ಪನ ಪ್ರತಿಕ್ರಿಯೆ ಹೇಗಿರಬಹುದೆಂದು ಹೆದರಿದ್ದೆ ಕೂಡ.

ಅತ್ತ ತಿಂಗಳು ಕಳೆದರೂ ಏನೂ ಸುದ್ದಿ ಬರಲಿಲ್ಲ. ಒಂದು ದಿನ ಸಂಜೆ ಶಾಲೆ ಬಿಟ್ಟಾಗ ಅಪ್ಪ ಸ್ಕೂಲ್ ಮುಂದೆ ಪ್ರತ್ಯಕ್ಷವಾಯಿತು. ಅಪ್ಪನನ್ನು ನೋಡಿದೊಡನೆಯೇ ‘ಅಣ್ಣ’ ಎಂದು ಹತ್ತಿರ ಹೋದೆ. ‘ಹಾಸ್ಟೆಲ್‌ಗೆ ಹೋಗಿ ಬ್ಯಾಗಿಟ್ಟು ಬರೋಗ್ರಿ’ ಎಂದು ಕಳುಹಿಸಿತು. ನಾನು ಮತ್ತು ಜೇಪಿ ಅಪ್ಪನನ್ನು ಹಿಂಬಾಲಿಸಿದೆವು. ದಾರಿಯುದ್ದಕ್ಕೂ ಅಪ್ಪ ಊರಿನ ಪರಿಸ್ಥಿತಿಯನ್ನೆಲ್ಲ ನನ್ನ ಮೆದುಳಿಗೆ ಬರೆಯುತ್ತಾ ನಡೆಯಿತು.

ಬಿದ್ದ ತೆಂಗಿನ ಮರಗಳು

ಊರಲ್ಲಿ ಅಪ್ಪನ ಹೆಸರಿಗೆ ಐವತ್ತು ತೆಂಗಿನ ಮರಗಳಿದ್ದವಾದರೂ.. ಅವು ಬಿಡುತ್ತಿದ್ದ ಕಾಯಿಗಳು ಜೆ.ಸಿ.ಪುರದ ರಾಮೇಗೌಡನ ಅಟ್ಟ ಸೇರುತ್ತಿದ್ದವು. ಸಂಸಾರ ನೀಗಿಸಲು ಸದಾ ರಾಮೇಗೌಡ ಮತ್ತು ನಮ್ಮೂರ ಸಣ್ಣಜ್ಜನ ಬಳಿ ಸಾಲ ಮಾಡುತ್ತಿದ್ದ ಅಪ್ಪ, ಸಾಲದ ಮರು ಪಾವತಿಗಾಗಿ ಬಡ್ಡಿ, ಚಕ್ರ ಬಡ್ಡಿ ರೂಪದಲ್ಲಿ ತೋಟದ ತೆಂಗಿನ ಕಾಯಿಗಳೆಲ್ಲವನ್ನು ಅವರ ಅಟ್ಟಕ್ಕೆ ತುಂಬಿಸುತ್ತಿತ್ತು. ಆರಕ್ಕೆ ಮೂರರಂಗೆ ಕಾಯಿ ಹಾಕಿಕೊಳ್ಳುತ್ತಿದ್ದ ಅವರು ಬಡ್ಡಿಗಷ್ಟೆ ಸಮ ಮಾಡಿಕೊಳ್ಳುತ್ತಿದ್ದರು. ಅಸಲು ಹಿಮಾಲಯ ಪರ್ವತವಾಗಿರುತ್ತಿತ್ತು. ತನ್ನ ಬಾಲ್ಯ ಗೃಹಸ್ತ ಎಲ್ಲವನ್ನೂ ಈ ಜಾಲದಲ್ಲೆ ಕಳೆಯುತ್ತಿದ್ದ ಅಪ್ಪನಿಗೆ ಅದರಾಚೆಗಿನ ಬದುಕು ಕಾಣಿಸುತ್ತಿರಲಿಲ್ಲ. ತೆಂಗಿನ ಮರವೆ ಎಲ್ಲ ಎನ್ನುವಂತಾಗಿತ್ತು. ಹೀಗಿರುವಾಗ ಭಾನುವಾರದ ಒಂದು ಮಧ್ಯಾಹ್ನ ನಾವೆಲ್ಲರೂ ತೋಟದಲ್ಲೆ ಇದ್ದೆವು. ಇದ್ದಕ್ಕಿದ್ದಂತೆ ಜೋರಾಗಿ ಮಳೆಗಾಳಿ ಎದ್ದಿತು. ನಾವು ರಕ್ಷಣೆಗೆ ಆಗಲೋ ಈಗಲೋ ಬೀಳುವಂತಿದ್ದ ಅಪ್ಪನೇ ಕಟ್ಟಿದ್ದ ಕರೆಂಟಿನ ಮನೆಯನ್ನು ಆಶ್ರಯಿಸಿದೆವು.

ಬಾಗಿಲಾಚೆ ನೋಡಿದರೆ ಮಳೆ ಇಲ್ಲವಾಗಿ ಬರಿ ಗಾಳಿ. ಆ ಗಾಳಿಗೆ ಸಿಕ್ಕ ತೆಂಗಿನ ಮರಗಳು ಆಕಡೆಗೊಮ್ಮೆ ಈಕಡೆಗೊಮ್ಮೆ ಮುರಿದು ಬೀಳುವಷ್ಟು ಬಾಗುತ್ತಿದ್ದವು. ಗರಿ, ಎಡಮಟ್ಟೆ, ಕಾಯಿಗಳು ತಪತಪನೆ ಸುರಿಯುತ್ತಿದ್ದವು. ಇದ್ದಕ್ಕಿದ್ದಂತೆ ಧೋ… ಎನ್ನುವ ದೊಡ್ಡ ಶಬ್ಧ ಅಪ್ಪಳಿಸಿತು. ಏನಾಯಿತೆಂದು ನೋಡಿದರೆ.. ಆ ಮೂಲೆಯ ಒಂದು ತೆಂಗಿನಮರ ಗಾಳಿಯೊಂದಿಗಿನ ತನ್ನ ಸೆಣೆಸಾಟವನ್ನ ನಿಲ್ಲಿಸಿ ದಬ್ ಎಂದು ಮುರಿದು ಬಿದ್ದಿತ್ತು. ಅದನ್ನ ಕಂಡಿದ್ದೆ ಅಮ್ಮ ಎದೆ ಎದೆ ಕೆಚ್ಚಿಕೊಳ್ಳುತ್ತ ‘ಹೋತಲ್ಲಪ್ಪ ನಮ್ಮನೆ ಹಾಳಾಗಿ’ ಎಂದು ಬಾಯಿ ಬಡಿದುಕೊಳ್ಳತೊಡಗಿತು. ಅತ್ತೊಂದು ನಿಮಿಷಕ್ಕೆ ಈ ಮೂಲೆಯ ಇನ್ನೊಂದು ಮರ ಮುರಿದು ಬಿತ್ತು. ಅಮ್ಮನ ದುಃಖ ಇನ್ನೂ ಹೆಚ್ಚಾಗಿ ಹುಯ್ಯೊ ಮಳೆಯನ್ನೂ ಲೆಕ್ಕಿಸದೆ ಮರಗಳೆಡೆಗೆ ಓಡತೊಡಗಿತು. ನಾವು ‘ಅಮ್ಮ ಅಮ್ಮ’ ಎಂದು ಕಿರುಚುತ್ತ ಹಿಂಬಾಲಿಸಲು ಮುಂದಾದೆವು. ಅಪ್ಪ ಓಡಿ ಹೋಗಿ ಅಮ್ಮನನ್ನು ಎಳೆದುಕೊಂಡು ಬಂತು. ಅವತ್ತಿನ ಆಮಳೆ ನಿಲ್ಲುವುದರೊಳಗಾಗಿ ನಮ್ಮ ತೋಟದ ಏಳು ಮರಗಳು ನೆಲಸಮವಾಗಿದ್ದವು. ಎಲ್ಲೆಲ್ಲೂ ಕಾಯಿ ಎಳನೀರು ಬಿದ್ದು ಚಲ್ಲಾ ಪಿಲ್ಲಿಯಾಗಿದ್ದವು. ಅಕ್ಕ ಪಕ್ಕದಲ್ಲೂ ತೆಂಗಿನ ತೋಟಗಳಿದ್ದರೂ ಅಲ್ಲಿ ಈ ಪ್ರಮಾಣದ ಹಾನಿ ಆಗಿರಲಿಲ್ಲ. ಒಂದೊ ಎರೆಡೊ ಬಿದ್ದಿದ್ದವು. ನಮ್ಮ ಏಳು ಮರಗಳು ನೆಲಸಮವಾಗಲು ಕಾರಣವಿತ್ತು. ನಮ್ಮವು ತಾತನ ಕಾಲದ ಅತ್ಯಂತ ಪುರಾತನವಾದ ಎತ್ತರವಾಗಿ ಬೆಳೆದಿದ್ದ ಮರಗಳಾಗಿದ್ದವು ಮತ್ತು ತೋಟಕ್ಕೆ ಮಣ್ಣು ಹೊಡೆಸದೆ ಮರಗಳ ಬೇರುಗಳೆಲ್ಲ ಆಚೆಯೇ ಇದ್ದವು.

ಈ ಘಟನೆ ನಮ್ಮನ್ನು ಎಷ್ಟು ಶೋಕಕ್ಕೀಡುಮಾಡಿತೆಂದರೆ.. ಮನೆಯ ಸದಸ್ಯನನ್ನೆ ಕಳೆದುಕೊಂಡಿದ್ದೇವೇನೊ ಎನ್ನುವಷ್ಟರ ಮಟ್ಟಿಗೆ. ಇದಾದ ಕೆಲ ತಿಂಗಳ ನಂತರ ಸರ್ಕಾರದವರು ತೆಂಗಿನ ಮರ ಕಳೆದುಕೊಂಡವರಿಗೆ ಪರಿಹಾರ ಒದಗಿಸಲು ತೋಟಗಾರಿಕೆ ಇಲಾಖೆಯಿಂದ ಅರ್ಜಿ ಕರೆದಿದ್ದರು. ಅಪ್ಪ ಅದಕ್ಕಾಗಿ ಬಿಡದೆ ಸತತವಾಗಿ ಒಂದು ವಾರ ಹಿಟ್ಟು ನೀರು ಬಿಟ್ಟು ಚಿ.ನಾ.ಹಳ್ಳಿಗೆ ಹೋಗಿ ಬಂದದ್ದರ ಫಲವಾಗಿ, ಪರಿಹಾರದ ರೂಪದಲ್ಲಿ ಎರೆಡು ಸಾವಿರ ರೂಪಾಯಿ ಬಂದಿತ್ತು. ಆ ಹಣ ಕೈಗೆ ಸಿಕ್ಕ ತಕ್ಷಣ ಮಗನಿಗೆ ಬಟ್ಟೆ ಕೊಡಿಸೋಣವೆಂದು ನಮ್ಮನ್ನ ಹುಡುಕಿಕೊಂಡು ಬಂದಿತ್ತು. ಅಪ್ಪನ ಈ ಕಥೆಯನ್ನು ಕೇಳಿಯಾದ ನಂತರ ನಾನು ಬಟ್ಟೆಗೆ ಪತ್ರ ಬರೆಯದಿದ್ದರೇ ಚಂದಿತ್ತು ಎನಿಸಿತು. ಆದರೆ ಇದನ್ನ ವ್ಯಕ್ತಪಡಿಸದೆ ಮೌನವಾಗಿ ಕಾಲಾಕತೊಡಗಿದೆ. ಹೇಗಿದ್ದರೂ ಅಪ್ಪ ಬಟ್ಟೆ ಕೊಡಿಸುತ್ತೆ ಎಂದಾದಮೇಲೆ, ದಾರಿಯುದ್ದಕ್ಕೂ ನಡೆದೋಗುತ್ತಿದ್ದವರ ಪ್ಯಾಂಟಿನ ಬಣ್ಣ ಗೆರೆಗಳನ್ನೇ ನೋಡುತ್ತ ನನ್ನ ಆಯ್ಕೆಯ ಪ್ಯಾಂಟ್ ಹೇಗಿರಬೇಕೆಂದು ಕನಸು ಕಾಣುತ್ತ ಹೆಜ್ಜೆ ಹಾಕತೊಡಗಿದೆ.