ಫಣೀಂದ್ರನ ಗಲಿಬಿಲಿ ಸಂಸಾರ, ಕಾಣದ ಕೈ, ದೂರದ ಬೆಟ್ಟ ಕಣ್ಣಿಗೆ ನುಣ್ಣಗೆ, ಹೃದಯಾಂತರಾಳದಲಿ, ತ್ಯಾಗ, ದೊಡ್ಡವರೆಲ್ಲ ಜಾಣರಲ್ಲ, ಕಂದಾ ನೀ ನಗುತಿರು ಮತ್ತು ಸೂತ್ರಧಾರ ಮತ್ತು ಇತರ ಕಥೆಗಳು ಇಲ್ಲಿ ತಮ್ಮ ವಸ್ತು ವಿಷಯಗಳಿಂದ ಗಮನ ಸೆಳೆಯುತ್ತವೆ. ಹೃದಯಾಂತರಾಳದಲ್ಲಿ ಮತ್ತು ಕಂದ ನೀನು ನಗುತಿರು ಕತೆಗಳು ಮಾನವೀಯತೆಯ ಆರ್ದ್ರವಾದ ದನಿಯನ್ನು ಬಿಂಬಿಸಿದರೆ, ದೂರದ ಬೆಟ್ಟ ಮತ್ತು ಕಾಣದ ಕೈಗಳು ಆ ಬಾಳಿನ ಸಹಜವಾದ ಚಿತ್ರವನ್ನು ನೆಚ್ಚಿಕೊಂಡಿವೆ.
ಶೈಲಜಾ ಸುರೇಶ್‌ ರಾವ್‌ ನಾಯಕ್ ಕಥಾ ಸಂಕಲನಕ್ಕೆ ವಾಸುದೇವ ನಾಡಿಗ್‌ ಬರೆದ ಮುನ್ನುಡಿ

 

ಬಾಗಲೋಡಿ ದೇವರಾಯ ಮತ್ತು ಮಾಸ್ತಿ ವೆಂಕಟೇಶ ಅಯ್ಯಂಗಾರರ ಆದಿಯಾಗಿ ಹೊಸಗನ್ನಡ ಕಥಾ ಸಾಹಿತ್ಯಕ್ಕೆ ಎಪ್ಪತ್ತು ಎಂಬತ್ತು ವರ್ಷಗಳ ಚರಿತ್ರೆಯೇ ಇದೆ. ಅದರಲ್ಲೂ ಪಂಜೆ ಮಂಗೇಶರಾಯರು, ಗೊರೂರು ರಾಮಸ್ವಾಮಿ ಅಯ್ಯಂಗಾರ್ ಮತ್ತು ಕುವೆಂಪು ಅವರಂತಹ ಹಿರಿಯ ಕತೆಗಾರರ ದಟ್ಟವಾದ ಛಾಯೆ ನಮ್ಮ ಕಥನ ಸಾಹಿತ್ಯದ ಮೇಲೆ ಇದೆ. ಓದಬೇಕಷ್ಟೆ.

ಕಾದಂಬರಿಯನ್ನು ಕರತಲದ ರಂಗಭೂಮಿ ಎಂದು ಕರೆಯಲಾಗಿದೆ ಮತ್ತು ಸಣ್ಣಕತೆಯನ್ನು ಪರಿಣಾಮಕಾರಿ ದೃಶ್ಯವೊಂದರ ಸ್ನ್ಯಾಪ್ ಎನ್ನಲಾಗಿದೆ ಕೂಡ. ಇಂತಹ ‘ಕರತಲ ರಂಗಭೂಮಿ’ ಮತ್ತು ‘ಫೋಟೋ ಸ್ನ್ಯಾಪ್’ಗಳ ಪ್ರಭಾವ ಮತ್ತು ಪರಿಣಾಮ ಸಾಹಿತ್ಯದ ಉದ್ದಕ್ಕೂ ಚಾಚಿಕೊಂಡಿದೆ. ಇಂತಹ ವಿಸ್ತೃತವಾದ ಪರಂಪರೆಯನ್ನು ನಾವು ಮಾತಾಡಿಸಬೇಕಾದುದು ಈ ಹೊತ್ತಿನ ತುರ್ತು.

(ಶೈಲಜಾ ಸುರೇಶ್‌ ರಾವ್‌ ನಾಯಕ್)

ಬರೆಯುವವರೇ ಹೆಚ್ಚಾದ ಮತ್ತು ಓದದೇ ಬರೆಯುವವರು ಹೆಚ್ಚಿದ ಈ ಕಾಲಘಟ್ಟದಲ್ಲಿ ಹಿಂದಣವನ್ನು ಅರಿಯುವ ಕಾಳಜಿ ತೀರಾ ಅತ್ಯಗತ್ಯ. ಕಥನ ಸಾಹಿತ್ಯ ಎಂದರೆ ಕೇವಲ ಕಥನಗಳ ಮಾಲಿಕೆಯಲ್ಲ. ಬದಲಿಗೆ ಕಾಲಘಟ್ಟವೊಂದರ ಬಹು ಆಯಾಮಗಳ ದಾಖಲೆಯೂ ಹೌದು. ಹಾಗಾಗಿ ಚರಿತ್ರೆಗಳು ಮಾಡುವ ಕೆಲಸವನ್ನು ಕಥನ ಸಾಹಿತ್ಯ ಮಾಡುತ್ತವೆ, ಹಾಗಾಗಿ ಓದಲೇ ಬೇಕು. ಮುಖ್ಯವಾಗಿ ಬರಹಗಾರರು. ಸಾಹಿತ್ಯ ಬಾಳಿನ ಅಭಿವ್ಯಕ್ತಿ ಎಂದು ಒಪ್ಪುವುದಾದರೆ ಕಥನ ಸಾಹಿತ್ಯ ಅದರ ಬಹುದೊಡ್ಡ ಮಾರ್ಗ ಕೂಡಾ.

ಸದ್ಯ ಹದಿಮೂರು ಕತೆಗಳಿರುವ ಶೈಲಜಾ ಸುರೇಶ್‌ ರಾವ್‌ ನಾಯಕ್ ಅವರ ಕಥಾ ಸಂಕಲನ ಸೂತ್ರಧಾರ ಮತ್ತು ಇತರ ಕತೆಗಳು ಕೂಡಾ ಬಾಳಿನ ಕ್ರಮಗಳ ಅಭಿವ್ಯಕ್ತಿಯ ಭಿನ್ನ ಮಾದರಿಗಳೇ ಆಗಿವೆ. ಅಕ್ಷರಗಳಲ್ಲಿ ದಾಖಲಿಸಿಟ್ಟ ಇಲ್ಲಿನ ಬಾಳಿನ ಕ್ರಮಗಳು ಅನೇಕ ಅನುಭವಗಳನ್ನು ಮತ್ತು ಸಂವೇದನೆಗಳನ್ನು ಹಾಸುತ್ತವೆ. ನಾನು ಕಥೆಗಳ ಬಗ್ಗೆ ಸಾರಾಂಶ ಬರೆಯುವ ಅಥವಾ ಅದನ್ನು ಅರ್ಥೈಸುವ ಸಾಹಸಕ್ಕೆ ಹೋಗಲಾರೆ. ಬದಲಿಗೆ ಇಲ್ಲಿನ ಸಾಮಾನ್ಯ ಮತ್ತು ವಿಶೇಷ ಎನಿಸುವ ಸಂಗತಿಗಳನ್ನು ಕುರಿತು ಹಂಚಿಕೊಳ್ಳಲು ಬಯಸುತ್ತೇನೆ.

ಇಲ್ಲಿನ ಬಹುತೇಕ ಕತೆಗಳು ಉತ್ತಮ ಪುರುಷ (ನಾನು)ದಲ್ಲೇ ಆರಂಭವಾಗುತ್ತವೆ. ಇದು ಒಂದು ಬಗೆಯಲ್ಲಿ ಸಾಕ್ಷಿ ಪ್ರಜ್ಞೆಯ ಸರಳ ಕಥನಕ್ರಮ ಕೂಡಾ. ಕಂಡದ್ದು ಮತ್ತು ಹತ್ತಿರದಿಂದ ಅನುಭವಿಸಿದ ಸಂಗತಿಗಳನ್ನೇ ಅನ್ಯ ಹೆಸರುಗಳಿಂದ ಚಿತ್ರಿಸುವ ಈ ಕ್ರಮವು ಸ್ವಗತದ ಧಾಟಿಯದ್ದು, ‘ಕತೆಯೊಂದನ್ನು ಹೇಳುವೆ’ ಎಂದು ಹೊರಟಾಗೆಲ್ಲ, ‘ನಾನು ಇದನ್ನು ಕಂಡೆ, ಇದನ್ನು ಕೇಳಿದೆ, ನಿಮಗೂ ಹೇಳಬೇಕು’ ಎಂಬ ಹಂಬಲ ಇಲ್ಲಿ ಹರಿದಾಡುತ್ತದೆ ಮತ್ತು ಅದು ಹೆಚ್ಚು ಕಲಾತ್ಮಕತೆ ಹಾಗೂ ಸಂಕೀರ್ಣತೆಯನ್ನು ಬಯಸದೆ, ಸರಾಗವಾಗಿ ಕತೆಯನ್ನು ಒಪ್ಪಿಸುವ ನೆಲೆಯಲ್ಲಿಯೇ ಸಾಗುತ್ತದೆ ಕೂಡ. ಶೈಲಜಾ ಅವರ ಇಲ್ಲಿನ ಕಥನಕ್ರಮ ಕೂಡಾ ಸರಳ ಮತ್ತು ನಿರಾಡಂಬರ. ಇದು ಕತೆ, ಇಲ್ಲಿ ಕೇಳಿ, ಹೀಗಿದೆ ಎಂದು ಮುಗಿಸಿಬಿಡುವ ಸಾಂಪ್ರದಾಯಿಕ ಕಥನ ಶೈಲಿ ಇದು.

ಫಣೀಂದ್ರನ ಗಲಿಬಿಲಿ ಸಂಸಾರ, ಕಾಣದ ಕೈ, ದೂರದ ಬೆಟ್ಟ ಕಣ್ಣಿಗೆ ನುಣ್ಣಗೆ, ಹೃದಯಾಂತರಾಳದಲಿ, ತ್ಯಾಗ, ದೊಡ್ಡವರೆಲ್ಲ ಜಾಣರಲ್ಲ, ಕಂದಾ ನೀ ನಗುತಿರು ಮತ್ತು ಸೂತ್ರಧಾರ ಮತ್ತು ಇತರ ಕಥೆಗಳು ಇಲ್ಲಿ ತಮ್ಮ ವಸ್ತು ವಿಷಯಗಳಿಂದ ಗಮನ ಸೆಳೆಯುತ್ತವೆ. ಹೃದಯಾಂತರಾಳದಲ್ಲಿ ಮತ್ತು ಕಂದ ನೀನು ನಗುತಿರು ಕತೆಗಳು ಮಾನವೀಯತೆಯ ಆರ್ದ್ರವಾದ ದನಿಯನ್ನು ಬಿಂಬಿಸಿದರೆ, ದೂರದ ಬೆಟ್ಟ ಮತ್ತು ಕಾಣದ ಕೈಗಳು ಆ ಬಾಳಿನ ಸಹಜವಾದ ಚಿತ್ರವನ್ನು ನೆಚ್ಚಿಕೊಂಡಿವೆ. ಕಥೆಗಾರ್ತಿಗೆ ಕಥೆಯನ್ನು ಹೇಳುವಲ್ಲಿ ಇರುವ ಉತ್ಸಾಹ ಮತ್ತು ಅಭಿವ್ಯಕ್ತಿಯ ಹಂಬಲ ಇಲ್ಲಿ ಪ್ರಶಂಸನೀಯ. ಆದರೆ ಕಥನ ಕಲೆ ಇಲ್ಲಿಗೆ ಮುಗಿಯುವುದಿಲ್ಲ. ಅದು ವಸ್ತುವಿನ ಆಯ್ಕೆ, ಭಾಷಾಕ್ರಮ ಮತ್ತು ತಂತ್ರವನ್ನು ನಿರೀಕ್ಷೆ ಮಾಡುತ್ತದೆ. ಕಥಾವಸ್ತು ಯಾವುದಿದ್ದರೂ, ಹೇಗಿದ್ದರೂ ಹೊಸದೋ, ಹಳತೋ ಅದನ್ನು ಹೇಳುವ ಕ್ರಮ ಆ ಕಥೆಗೆ ಹೊಸ ಸ್ಪರ್ಷ ನೀಡಬಲ್ಲದು. ಈ ನಿಟ್ಟಿನಲ್ಲೇ ಕತೆಯ ಯಶಸ್ಸು ಅಡಗಿದೆ.

ಪ್ರಸ್ತುತ ಶೈಲಜಾ ಸುರೇಶ್‌ರಾವ್ ಅವರು ಈ ದೆಸೆಯಲ್ಲಿ ಒಂದಿಷ್ಟು ಪ್ರಯೋಗ ಶೀಲರಾಗಬೇಕಾದುದು ಅಪೇಕ್ಷಣೀಯ. ಇಲ್ಲಿನ ಕೆಲವು ಕತೆಗಳು ಕೂಡ ಇದನ್ನೇ ಬಯಸುತ್ತವೆ. ಉದಾಹರಣೆಗೆ ಮೆಹರುನ್ನೀಸಾ ಮತ್ತು ಹೃದಯಾಂತರಾಳದಲ್ಲಿ ವಸ್ತು ಬಹಳ ಗಾಢವಾಗಿದೆ. ಆದರೆ ಅದನ್ನು ನಿರೂಪಿಸುವ ಕ್ರಮದಲ್ಲಿ ಇನ್ನಷ್ಟು ಕುಸುರಿತನ ಮಾಡಿದ್ದರೆ ಹೆಚ್ಚು ಕಲಾತ್ಮಕಗೊಳ್ಳುತ್ತಿತ್ತು. ಕತೆಯನ್ನು ಹೇಳುವ ಹಂಬಲದ ಜೊತೆಗೆ ಹೇಗೆ ಹೇಳಬೇಕು? ಎಂಬ ನಿರೂಪಣ ಕ್ರಮದ ಕುರಿತ ಜಿಜ್ಞಾಸೆಗೆ ಲೇಖಕಿ ತೊಡಗಿದರೆ ಅಚ್ಚರಿಗಳನ್ನೇ ಸಾಧಿಸಬಹುದು. ಇದಕ್ಕೆ ಬೇಕಾದುದು ಅಪಾರವಾದ ಮಾದರಿ ಓದು ಮತ್ತು ವಸ್ತುವನ್ನು ಮಾಗಿಸಲು ಬೇಕಾದ ಧ್ಯಾನ. ಇವೇ ಯಾವೊಬ್ಬ ಕಲಾವಿದ ಇರಲಿ, ಬರಹಗಾರ ಇರಲಿ ಅನನ್ಯತೆ ತಂದು ಕೊಡಬಲ್ಲದು.

ಮಾಸ್ತಿ ಕಥಾ ಪರಂಪರೆಯ ಕೊಡಗಿನ ಗೌರಮ್ಮ ಮತ್ತು ವೈದೇಹಿ, ನೇಮಿಚಂದ್ರ, ಆಲನಹಳ್ಳಿ ಕೃಷ್ಣ, ಬೆಸಗರಹಳ್ಳಿ ರಾಮಣ್ಣ, ಕೆ ಸದಾಶಿವ, ಎಂ ವ್ಯಾಸ, ಪೂರ್ಣಚಂದ್ರ ತೇಜಸ್ವಿ, ಲಂಕೇಶ್, ಯಶವಂತ ಚಿತ್ತಾಲ, ಶಾಂತಿನಾಥ ದೇಸಾಯಿ, ದೇವನೂರು ಮಹಾದೇವ ಹೀಗೆ ಅನನ್ಯವಾದ ಕಥನ ಮಾದರಿಗಳ ಸಾಧ್ಯತೆಗಳೇ ನಮ್ಮ ಕಣ್ಣ ಮುಂದೆ ಇವೆ. ಇಂತವುಗಳ ಓದು ಮತ್ತು ಬದುಕನ್ನು ನೋಡುವ ಕ್ರಮ ಹೊಸ ಕಥಾನಕಗಳನ್ನು ಕಟ್ಟಿಕೊಡಬಲ್ಲದು.

ಈ ಸಂದರ್ಭದಲ್ಲಿ ನಿರಂಜನರು ಸಂಪಾದಿಸಿಕೊಟ್ಟ ವಿಶ್ವಕಥಾ ಕೋಶ ಸಂಪುಟಗಳನ್ನು ಯಾವತ್ತೂ ಮರೆಯುವಂತಿಲ್ಲ. ಮಾಸ್ತಿಯವರ ಕಥೆಗಳು ಹೇಗೆ ಬರಹಗಾರನಿಗೆ ಪಠ್ಯವೋ, ಈ ಸಂಪುಟಗಳು ಕೂಡಾ ಅತ್ಯುತ್ತಮ ಆಕರಗಳು. ಈ ಇಂತಹ ಓದು ಮತ್ತು ಅನುಸಂಧಾನಗಳ ಮೂಲಕ ಶೈಲಜಾ ಅವರ ಮುಂದಿನ ಕಥನ ಕ್ರಮ ಇನ್ನೂ ಗಟ್ಟಿಯಾಗಬಲ್ಲದೆಂದು ಆಶಿಸುವೆ.

(ಕೃತಿ: ಸೂತ್ರಧಾರ ಮತ್ತು ಇತರ ಕಥೆಗಳು (ಕಥಾ ಸಂಕಲನ), ಲೇಖಕರು: ಶೈಲಜಾ ಸುರೇಶ್‌ ರಾವ್‌ ನಾಯಕ್, ಪ್ರಕಾಶಕರು: ಸಾಹಿತ್ಯಲೋಕ ಪಬ್ಲಿಕೇಷನ್ಸ್‌, ಬೆಲೆ: 110/-)