ಇಂದಿನ ಲಂಡನ್ನಿನ ವೈಶಿಷ್ಟ್ಯವನ್ನು ವಲಸಿಗರ ಕಣ್ಣಲ್ಲಿ ಸರಳವಾಗಿ ವ್ಯಾಖ್ಯಾನಿಸುವುದಾದರೆ, ಬ್ರಿಟಿಷರಲ್ಲದ ಬಿಳಿಯರಲ್ಲದ ಜನರು ಅತ್ಯಂತ ವೇಗವಾಗಿ,  ಹೆಚ್ಚೇನೂ ಅಡೆತಡೆ ಇಲ್ಲದೆ ಸಾಂಸ್ಕೃತಿಕವಾಗಿ ಸಾಮಾಜಿಕವಾಗಿ ಸ್ವೀಕೃತರಾಗುವ ತಾಣ  ಎನ್ನಬಹುದು.  ಹೀಗೆ ಲಂಡನ್ ನಗರದ ಆದಿಪುರಾಣದೊಂದಿಗೆ ‘ನೀಲಿ ಫಲಕಗಳಲಿ ನೆನಪಾಗಿ ನಿಂದವರು’ ಎಂಬ ಹೊಸ ಸರಣಿಯನ್ನು ಆರಂಭಿಸಿದ್ದಾರೆ ಲೇಖಕ ಯೋಗೀಂದ್ರ ಮರವಂತೆ. ಹದಿನೈದು ದಿನಗಳಿಗೊಮ್ಮ ಪ್ರಕಟವಾಗುವ ಈ ಸರಣಿಯು ಹೊಸ ನೋಟ, ಹೊಸ ವಿಚಾರಗಳ ವೇದಿಕೆ.

 

ಲಂಡನ್ನಿನ ಆದಿಪುರಾಣದಿಂದ ನೀಲಿ ಫಲಕಗಳತ್ತ

“ಈ ಲಂಡನ್ ಎನ್ನುವುದು ಊರೋ ರಾಜ್ಯವೋ ದೇಶವೋ?” ಅಂತ ಭಾರತದಲ್ಲಿರುವ ಸ್ನೇಹಿತನೊಬ್ಬ ಕೇಳಿದಾಗ, ಲಂಡನ್ನಿಂದ ನೂರಾ ಅರವತ್ತು ಕಿಲೋಮೀಟರು ದೂರದ ಬ್ರಿಸ್ಟಲ್ ಅಲ್ಲಿ ವಾಸಿಸುವ ನಾನು, “ಎಲ್ಲ ನಗರಗಳಂತಹ ಗೌಜು ಗಿಜಿಗಿಜಿಯ ನಗರ, ಎಲ್ಲ ದೇಶಗಳ ರಾಜಧಾನಿಗಳಂತಹ ಇನ್ನೊಂದು ರಾಜಧಾನಿ” ಅಂತ ಹೇಳಿದ್ದೆ. ಇದೇ ಪ್ರಶ್ನೆಯನ್ನು ಒಂದು ವೇಳೆ ಲಂಡನ್ ನಲ್ಲಿಯೇ ವಾಸಿಸುವ ನಾಗರಿಕರಿಗೆ ಯಾರಾದರೂ ಕೇಳಿದ್ದರೆ ಅವರು, “ನಮಗೆ, ಲಂಡನ್ನೇ ದೇಶ ಅಥವಾ ದೇಶಕ್ಕಿಂತಲೂ ಹೆಚ್ಚು” ಎಂದು ಉತ್ತರಿಸುವ ಸಾಧ್ಯತೆ ಇತ್ತೇನೋ.

2017ರಲ್ಲಿ ಬ್ರಿಟನ್ನಿನ ಪತ್ರಿಕೆಯೊಂದು ಲಂಡನ್ ವಾಸಿಗಳಿಗೆ “ನಿಮ್ಮ ಗುರುತು ಏನು?” ಎನ್ನುವ ಪ್ರಶ್ನೆಯೊಂದಿಗೆ ಸಮೀಕ್ಷೆ ನಡೆಸಿದಾಗ ಹೆಚ್ಚಿನವರು ಉತ್ತರಿಸಿದ್ದು “ತಾವು ಮೊದಲು ಲಂಡನ್ನಿಗರು ನಂತರ ಬ್ರಿಟಿಷರು” ಎಂದು. ಇನ್ನು ಕೆಲ ಆಂಗ್ಲ ಸಿನಿಮಾಗಳಲ್ಲಿ ಲಂಡನ್‌ನಲ್ಲಿ ಇರುವ ಪಾತ್ರಗಳು ತಾವು “ಮೊದಲು ಲಂಡನ್ ನವರು ಆಮೇಲೆ ಆಂಗ್ಲರು” ಎಂದು ಡೈಲಾಗ್ ಹೊಡೆದು ಸ್ಥಳೀಯ ಪ್ರೇಕ್ಷಕರಿಗೆ ರೋಮಾಂಚನ ನೀಡುವ ಸನ್ನಿವೇಶಗಳಿವೆ. ತಾವು ಇರುವ ಊರನ್ನೇ ತಮ್ಮ ಅಸ್ಮಿತೆ ಎಂದು ತಿಳಿಯುವಂತಹದ್ದು ಮತ್ತೆ ಆ ಊರು, ದೇಶ ಭಾಷೆಯ ಕಲ್ಪನೆಗಿಂತ ಆಳವಾಗಿ ಗಾಢವಾಗಿ ಆವರಿಸುವಂತಹದ್ದು ಜಗತ್ತಿನಲ್ಲಿ ಲಂಡನ್‌ನಂತಹ ಚರ್ಯೆ ಇರುವ ಕೆಲವು ಮೆಟ್ರೋಪಾಲಿಟನ್ನಿನ ವಾಸಿಗಳ ಸಹಜ ಸಾಮಾನ್ಯ ಅನುಭವ ಅಭಿಪ್ರಾಯ ಇರಬಹುದು. ಸಾವಿರದ ಆರುನೂರು ಚದರ ಕಿಲೋಮೀಟರುಗಳಲ್ಲಿ ತೊಂಭತ್ತು ಲಕ್ಷ ದಟ್ಟ ಜನಸಂಖ್ಯೆಯ, ಅವರಲ್ಲಿ 37% ಜನರು ಜಗತ್ತಿನ ವಿವಿಧ ದಿಕ್ಕುದೆಸೆಯ ವೈವಿಧ್ಯಮಯ ವಲಸಿಗರೇ ಇರುವ, ಆ ಎಲ್ಲರ ನಡುವೆ ಮುನ್ನೂರು ಭಾಷೆಗಳು ಚಲಾವಣೆಯಲ್ಲಿರುವ, ಅಲ್ಲಿ ವಾಸಿಸುವ ಜನರು ಸಂಭ್ರಮಿಸುವ ಎಲ್ಲ ಹಬ್ಬಗಳೂ ಸಡಗರದಲ್ಲಿ ಮುಕ್ತವಾಗಿ ಆಚರಿಸಲ್ಪಡುವ, ವರ್ಷದ ಎಲ್ಲ ದಿನಗಳಲ್ಲೂ ಯಾತ್ರಿಗಳು ದುಂಬಾಲು ಬಿದ್ದು ನೋಡಬರುವ, ನಗರದ ಈ ತುದಿಯಿಂದ ಆ ತುದಿಯ ತನಕ ಎಲ್ಲ ಬಗೆಯ ವೃತ್ತಿಗಳಲ್ಲಿ ಜೀವನ ಕಂಡುಕೊಳ್ಳುವವರೂ ಟ್ಯೂಬ್ ರೈಲಿನ ಒಂದೇ ಬೋಗಿಯಲ್ಲಿ ಕೂತು ನಿಂತು ಸಂಚರಿಸುವ, ದುಡಿಮೆ ಉದ್ಯೋಗಗಳೇ ಇಹ ಪರದ ಧರ್ಮ ಎಂದು ನಂಬಿಸುವ, ನಿತ್ಯವೂ ಅವಕಾಶ ಉದ್ಯೋಗಗಳನ್ನು ಸೃಷ್ಟಿಸುವ, ಕನಸುಗಳನ್ನು ಕಟ್ಟುವ ಕೆಡಹುವ, ಅದೃಷ್ಟನಗರಿಯಲ್ಲಿನ ಮನುಷ್ಯರಿಗೆ ತಮ್ಮ ಮೂಲಭೂತ ಅಸ್ಮಿತೆಯೇ ಈ ನಗರ ಎಂದು ಅನಿಸಿದರೆ ಆಶ್ಚರ್ಯ ಅಲ್ಲ. ಇಂದಿನ ಲಂಡನ್ನಿನ ವೈಶಿಷ್ಟ್ಯವನ್ನು ವಲಸಿಗರ ಕಣ್ಣಲ್ಲಿ ಸರಳವಾಗಿ ವ್ಯಾಖ್ಯಾನಿಸುವುದಾದರೆ, ಬ್ರಿಟಿಷರಲ್ಲದ ಬಿಳಿಯರಲ್ಲದ ಜನರು ಅತ್ಯಂತ ವೇಗವಾಗಿ ಹೆಚ್ಚೇನೂ ಅಡೆತಡೆ ಇಲ್ಲದೆ ಸಾಂಸ್ಕೃತಿಕವಾಗಿ ಸಾಮಾಜಿಕವಾಗಿ ಸ್ವೀಕೃತರಾಗುವ ತಾಣ. ಅದೇ ವಲಸಿಗರು ಲಂಡನ್ ಬಿಟ್ಟು ಯುನೈಟೆಡ್ ಕಿಂಗ್ಡಮ್ ನ ಬೇರೆ ಯಾವುದೇ ಭಾಗಕ್ಕೆ ಹೋದರೂ ಅಲ್ಲಿನವರೇ ಅನಿಸಿಕೊಳ್ಳಲು ಹಲವು ವರುಷಗಳು, ದಶಕಗಳು ಸಾಕಾಗುವುದಿಲ್ಲ ಎಂದು ಅನುಭವಗಳು ಅಧ್ಯಯನಗಳು ಹೇಳುತ್ತವೆ.

ಸಂಪ್ರದಾಯಸ್ಥರೇ ತುಂಬಿರುವ ಇಂಗ್ಲೆಂಡ್ ಎನ್ನುವ ಪ್ರಾಂತ್ಯದ ಹಾಗು ಯುನೈಟೆಡ್ ಕಿಂಗ್ಡಮ್ ಎನ್ನುವ ಒಕ್ಕೂಟ ದೇಶದ ರಾಜಧಾನಿ ಎನ್ನುವುದು ಲಂಡನ್ ನ ಔಪಚಾರಿಕ ಅಧಿ ಕೃತ ಗುರುತು ಪರಿಚಯ. ಇಂತಹ ಲಂಡನ್ನಿನ ಬೀದಿ ಕಟ್ಟಡ ಗಾಳಿ ಬೆಳಕು ಕತ್ತಲೆಗಳ ಹಾದಿಗಳಲ್ಲಿ ಅಲೆದಷ್ಟೂ ಇನ್ನೂ ಮುಂದೇನೋ ಇದೆ ಎಂದು ತೋರುವ, ನಿರ್ಲಿಪ್ತ ಮೇಲ್ಮೈ ಇರುವ ಆಲಸಿ ಜ್ವಾಲಾಮುಖಿಯ ಅಂತರಾಳದಲ್ಲಿ ಕೊತಕೊತ ಕುದಿಯುತ್ತಿರುವ ಲಾವಾದಂತೆ ಸಜೀವವಾಗಿರುವ, ಆಗೊಮ್ಮೆ ಈಗೊಮ್ಮೆ ಅನ್ವೇಷಕರ ವಶವಾಗಿ ಕಣ್ಣೆದುರು ಬರುವ ಅಸಂಖ್ಯ ಕತೆ ಪುರಾಣಗಳು ಹುದುಗಿವೆ.

ಇಂಗ್ಲೆಂಡ್‌ನಲ್ಲಿ ಪ್ರಚಲಿತ ಇರುವ ಚರಿತ್ರೆಯ ಯಾವ ಪುಸ್ತಕ ತಿರುವಿದರೂ ಅವೆಲ್ಲ ಲಂಡನ್ನಿನ ಹುಟ್ಟು ಬೆಳವಣಿಗೆಯ ಆದಿಪುರಾಣವನ್ನು ರೋಮನ್ನರ “ಲಂಡನ್ನಿಯುಮ್” ಇಂದ ಆರಂಭಿಸುತ್ತವೆ. ಕ್ರಿಸ್ತಶಕ 43ರ ಹೊತ್ತಿಗೆ ಇಂಗ್ಲೆಂಡ್ ನ ಥೇಮ್ಸ್ ತಟದ ಪ್ರಾಂತ್ಯ ರೋಮನ್ನರ ವಶ ಆಗಿದ್ದನ್ನು ತಿಳಿಸುತ್ತವೆ. ದೂರದ ರೋಮಿನಿಂದ ಸಾಗರ ಮಾರ್ಗವಾಗಿ ನಾವೆಯಲ್ಲಿ ಇಂಗ್ಲೆಂಡ್ ನ ಈಶಾನ್ಯಕ್ಕಿರುವ ಥೇಮ್ಸ್ ನದಿಯ ತಪ್ಪಲಿನ ಪ್ರದೇಶವನ್ನು ತಲುಪಿದ ಒಂದಿಷ್ಟು ರೋಮನ್ನರು ವ್ಯಾಪಾರಕ್ಕಾಗಿ ಅಲ್ಲೇ ನೆಲೆನಿಂತರು. ಈ ಥೇಮ್ಸ್ ನದಿ, ಲಂಡನ್ನಿನ ಪಶ್ಚಿಮಕ್ಕಿರುವ ಗ್ಲಾಸ್ಟರ್ ಎನ್ನುವ ಊರಿನಲ್ಲಿ ಹುಟ್ಟಿ, ಲಂಡನ್ ಒಳಗೆ ಥಳುಕಿ ಬಳುಕಿ ಮುರಿದು ಬಾಗಿ ಹಾದು ಮುನ್ನೂರೈವತ್ತು ಕೀಲೊಮೀಟರ್ ವೈಯ್ಯಾರದ ಚಲನೆಯ ಬಳಿಕ ಲಂಡನ್ ಸಮೀಪದ ಸಮುದ್ರದಲ್ಲಿ ಕರಗಿ ಮರೆಯಾಗುತ್ತದೆ. ಸಮುದ್ರ ಮಾರ್ಗವಾಗಿ ಒಳಬರುವ ಅವಕಾಶ ಒದಗಿಸುವ ಥೇಮ್ಸ್, ಎರಡು ಸಾವಿರ ವರ್ಷಗಳ ಹಿಂದೆ ರೋಮನ್ನರ ಕಾಲದಲ್ಲಿಯೂ ಲಂಡನ್ ಎಂಬ ಊರಿನ ಜೀವನದಿಯಾಗಿಯೇ ಇತ್ತೆಂದು ಅಂದಿನ ಕತೆಗಳು ಸಾರುತ್ತವೆ. ರೋಮನ್ನರು ಇಂತಹ ಈ ಪ್ರದೇಶವನ್ನು “ಲಂಡನ್ನಿಯುಮ್” ಎಂದು ಕರೆದರು. ಲ್ಯಾಟಿನ್ ಮೂಲದ ಈ ಶಬ್ದ, ನದಿಯ ದಡದ ಊರನ್ನು ಸೂಚಿಸುತ್ತದೆ ಎಂದು ಕೆಲವರು ಹೇಳುತ್ತಾರೆ. ಲಂಡನ್ನಿಯುಮ್ ಅನ್ನು ವಾಣಿಜ್ಯ ನಗರವಾಗಿ ಬಳಸಿದ ಬೆಳೆಸಿದ ರೋಮನ್ನರು ಸುತ್ತಲೂ ಗೋಡೆಯನ್ನು ಕಟ್ಟಿದರು. ಆ ಲಂಡನ್ನಿನ ವ್ಯಾಪ್ತಿ ಇಂದಿನ ಲಂಡನ್ ಅಷ್ಟು ವಿಶಾಲ ಅಲ್ಲದಿದ್ದರೂ ಇಂದಿನ ಲಂಡನ್ನಿನದೇ ಸಣ್ಣ ಭಾಗವಾಗಿತ್ತು.
ಥೇಮ್ಸ್ ನದಿಗೆ ಸೇತುವೆ ಕಟ್ಟಿದರು, ಸೈನ್ಯವನ್ನು ಒಳತಂದರು, ಕಟ್ಟಡಗಳನ್ನು ಎಬ್ಬಿಸಿದರು. ಆಕರ್ಷಕ ವ್ಯಾಪಾರಿ ಕೇಂದ್ರವಾಗಿ ಬೆಳೆಯುತ್ತಿದ್ದ ನಗರಕ್ಕೆ ಮುಂದೆ ನೆರೆಯ ಒಳ ಹೊರಗಿನ ಪ್ರಾಂತ್ಯಗಳ ದಾಳಿಯೂ ಆಯಿತು. ಆ ದಾಳಿಗಳಿಂದ ಬೆಂಕಿ ಅಪಘಾತವೂ ಸಂಭವಿಸಿ ಹಲವು ರೋಮನ್ ಕಟ್ಟಡಗಳು ನಾಶ ಆದವು. ಆದರೆ ಹಿಂದೆ ಇದ್ದದ್ದಕ್ಕಿಂತ ಹೆಚ್ಚು ಸೌಧಗಳನ್ನು ಮತ್ತೆ ನಿರ್ಮಿಸಲಾಯಿತು. ಕಟ್ಟಡಗಳು ಬೂದಿಯಾಗುವುದು ಮತ್ತೆ ಮರುಹುಟ್ಟು ಪಡೆದು ಎದ್ದು ನಿಲ್ಲುವುದು ಈ ನೆಲದ ಅಲಿಖಿತ ವಿಧಿಯೇ ಇರಬೇಕು.

ರೋಮನ್ನರ ಕೆಲವು ತಲೆಮಾರುಗಳು ಇಲ್ಲೇ ಜೀವನ ನಡೆಸಿದವು. ಕ್ರಿಸ್ತಶಕ 400ರ ಹೊತ್ತಿಗೆ ಲಂಡನ್ನಿಯುಮ್ ನ ಜನಸಂಖ್ಯೆ ನಲವತ್ತು ಸಾವಿರವನ್ನು ಮುಟ್ಟಿತು. ಕ್ರಿಸ್ತಶಕ 476ರಲ್ಲಿ ರೋಮನ್ ಚಕ್ರಾಧಿಪತ್ಯದ ಪತನದ ನಂತರ ಲಂಡನ್ನಿಯುಮ್ ಆಂಗ್ಲ ಪಾಳೇಗಾರರ ಅಧಿಪತ್ಯಕ್ಕೆ ಒಳಗಾಯಿತು. ಕ್ರಿಸ್ತಶಕ ಎಂಟನೆಯ ಶತಮಾನದಲ್ಲಿ ಆಲ್ಫ್ರೆಡ್ ದಿ ಗ್ರೇಟ್ ಎನ್ನುವಾತ ನಗರದ ಹೆಸರನ್ನು ಆಂಗ್ಲೀಕರಣಗೊಳಿಸಿ “ಲಂಡನ್ಬರ್ಹ್ ” (Londonbruh, ಲಂಡನ್ ನಗರ ಎನ್ನುವ ಅರ್ಥ) ಎನ್ನುವುದಾಗಿ ಬದಲಿಸಿದ, ಸಂಕ್ಷಿಪ್ತವಾಗಿ ಆಡುಮಾತಿನಲ್ಲಿ ಅದೇ ಮುಂದೆ “ಲಂಡನ್” ಎಂದು ಜನಜನಿತವಾಯಿತು. ಐದರಿಂದ ಹತ್ತನೆಯ ಶತಮಾನ ಸ್ಯಾಕ್ಸನ್ ರ ವಶದಲ್ಲಿಯೂ ಹತ್ತನೆಯ ಶತಮಾನದಲ್ಲಿ ನಾರ್ಮನ್ ವಂಶಸ್ಥರ ಆಡಳಿತಕ್ಕೂ ಇಂಗ್ಲೆಂಡ್ ಒಳಪಟ್ಟಿತು. ಹತ್ತನೆಯ ಶತಮಾನದಲ್ಲಿ ನಾರ್ಮನ್ನರ ಆಡಳಿತದ ಕೇಂದ್ರ ವ್ಯವಸ್ಥೆ ಲಂಡನ್ ಅಲ್ಲಿಯೇ ಇತ್ತು. ವಾಣಿಜ್ಯ ನಗರಿಯಾಗಿ ಇರುವ ದೀರ್ಘ ಇತಿಹಾಸ ಹಾಗು ಹತ್ತನೆಯ ಶತಮಾನದಲ್ಲಿ ನಾರ್ಮನ್ನರ ಆಡಳಿತದ ಕೇಂದ್ರ ವ್ಯವಸ್ಥೆ ಇದ್ದ ಜಾಗ, ಇವೆರಡೂ ಹಿನ್ನೆಲೆಗಳ ಕಾರಣಕ್ಕೆ ಲಂಡನ್ , ಇಂಗ್ಲೆಂಡ್ ಪ್ರಾಂತ್ಯದ ರಾಜಧಾನಿಯಾಗಲು ಸಹಜ ಸೂಕ್ತ ಆಯ್ಕೆ ಆಯಿತು. ಹದಿನಾರು ಹದಿನೇಳನೆಯ ಶತಮಾನಗಳ ಟ್ಯೂಡೋರ್ ದೊರೆಯ ಕಾಲದಲ್ಲಿ ಲಂಡನ್ ನ ಭೌಗೋಳಿಕ ವ್ಯಾಪ್ತಿ ವಿಸ್ತಾರ ಆಯಿತು. ಜನಸಂಖ್ಯೆ ಸುಮಾರು ಒಂದು ಲಕ್ಷಕ್ಕೆ ಹೆಚ್ಚಿತು. ಸರಕಾರೀ ಆಡಳಿತ ವ್ಯವಸ್ಥೆಯ ಕೇಂದ್ರವಾಯಿತು. 1665ರಲ್ಲಿ ಲಂಡನ್ ಪ್ಲೇಗ್ ಸಾಂಕ್ರಾಮಿಕಕ್ಕೆ ತುತ್ತಾದಾಗ 70,000 ಜನರು ಮಡಿದರು, ಮುಂದಿನ ವರ್ಷ ಲಂಡನ್ ನ ಬಹುತೇಕ ಕಟ್ಟಡಗಳು ಮಹಾನ್ ಅಗ್ನಿ ದುರಂತದಲ್ಲಿ ಸುಟ್ಟುಹೋದವು. ಅಂದು ಅಳಿದ ಲಂಡನ್ ಮುಂದೆ ಹತ್ತು ವರ್ಷಗಳಲ್ಲಿ ಹೊಸ ರೂಪದಲ್ಲಿ ಹೊಸ ಕಟ್ಟಡಗಳೊಡನೆ ಮರುಹುಟ್ಟು ಕಂಡಿತು. ಅರಮನೆಗಳು, ಸಭಾಭವನಗಳು ರಂಗಮಂದಿರಗಳು, ಸಂಗ್ರಹಾಲಯಗಳು ಕಟ್ಟಲ್ಪಟ್ಟವು. 12-13ನೆಯ ಶತಮಾಗಳಿಂದ ಆಡಳಿತ ಕೇಂದ್ರವಾಗಿದ್ದ ಲಂಡನ್, ಈ ಹೊತ್ತಿಗೆ ಸಾಂಸ್ಕೃತಿಕ ಕೇಂದ್ರವಾಗಿಯೂ ಗುರುತು ಪಡೆಯಿತು.

ಥೇಮ್ಸ್ ನದಿಗೆ ಸೇತುವೆ ಕಟ್ಟಿದರು, ಸೈನ್ಯವನ್ನು ಒಳತಂದರು, ಕಟ್ಟಡಗಳನ್ನು ಎಬ್ಬಿಸಿದರು. ಆಕರ್ಷಕ ವ್ಯಾಪಾರಿ ಕೇಂದ್ರವಾಗಿ ಬೆಳೆಯುತ್ತಿದ್ದ ನಗರಕ್ಕೆ ಮುಂದೆ ನೆರೆಯ ಒಳ ಹೊರಗಿನ ಪ್ರಾಂತ್ಯಗಳ ದಾಳಿಯೂ ಆಯಿತು. ಆ ದಾಳಿಗಳಿಂದ ಬೆಂಕಿ ಅಪಘಾತವೂ ಸಂಭವಿಸಿ ಹಲವು ರೋಮನ್ ಕಟ್ಟಡಗಳು ನಾಶ ಆದವು. ಆದರೆ ಹಿಂದೆ ಇದ್ದದ್ದಕ್ಕಿಂತ ಹೆಚ್ಚು ಸೌಧಗಳನ್ನು ಮತ್ತೆ ನಿರ್ಮಿಸಲಾಯಿತು

ಹದಿನೆಂಟನೆಯ ಶತಮಾನದ ಕೈಗಾರಿಕಾ ಕ್ರಾಂತಿಯ ಮುಂದುವರಿದ ಭಾಗವಾಗಿ 1890ರಲ್ಲಿ ಲಂಡನ್ ಅಲ್ಲಿ ಭೂಗರ್ಭ ರೈಲ್ವೇ ವ್ಯವಸ್ಥೆ ಆರಂಭವಾಯಿತು. ಲಂಡನ್ ನ ಮೂಲೆಮೂಲೆಗಳ ನಡುವೆ ಸಂಪರ್ಕ ಒದಗಿಸುವ ನೆಲದಡಿಯ ಬಹು ಅಂತಸ್ತಿನ ರೈಲ್ವೇ ಮಾರ್ಗಗಳು ಈಗಲೂ ಲಂಡನ್ನಿನ ವಿಶೇಷತೆಗಳಲ್ಲಿ ಒಂದು. ಇಂತಹ ಲಂಡನ್ ಅನ್ನು ರಾಜಧಾನಿಯಾಗಿಸಿಕೊಂಡ ಲಂಡನ್ 1707ರಲ್ಲಿ, ವೇಲ್ಸ್ ಹಾಗು ಸ್ಕಾಟ್ಲೆಂಡ್ ಎನ್ನುವ ನೆರೆಯ ಎರಡು ಪ್ರಾಂತ್ಯಗಳ ನಡುವಿನ ಆಡಳಿತದ ಗಡಿಗಳನ್ನು ಅಳಿಸಿಕೊಂಡು ಬ್ರಿಟನ್ ಎನ್ನುವ ರಾಜಕೀಯ ಒಕ್ಕೂಟವಾಯಿತು. 1922ರಲ್ಲಿ ಈ ವ್ಯವಸ್ಥೆಗೆ ಉತ್ತರ ಐರ್ಲೆಂಡ್ ಕೂಡ ಸೇರಿ ಯುನೈಟೆಡ್ ಕಿಂಗ್ಡಮ್‌ನ ಸ್ಥಾಪನೆ ಆಯಿತು. ಭೌಗೋಳಿಕ ರಾಜಕೀಯ ಗಡಿಗಳು ಮರೆಯಾಗಿದ್ದರೂ ಈ ನಾಲ್ಕು ಪ್ರಾಂತ್ಯಗಳ ಜನಸಾಮಾನ್ಯರು ಈಗಲೂ ಚಾರಿತ್ರಿಕ ಕಾರಣಗಳಿಗೆ ಮಾನಸಿಕ ಗೆರೆಗಳನ್ನು ಅಳಿಸಲಾಗದೇ ಒಬ್ಬರನ್ನೊಬ್ಬರು ವ್ಯಂಗ್ಯ ತಮಾಷೆ ಮಾಡುವುದು ನಡೆಯುತ್ತದೆ.

ಆದಿಕಾಲವನ್ನು ಪಾರು ಮಾಡಿಕೊಂಡು ಈ ಕಾಲಕ್ಕೆ ಬಂದಾಗ ಸಂದರ್ಭಕ್ಕೆ ತಕ್ಕಂತೆ ಭೂಭಾಗಗಳನ್ನು ಅಳಿಸಿಯೋ ಜೋಡಿಸಿಯೋ ಇಂಗ್ಲೆಂಡ್, ಬ್ರಿಟನ್, ಯು.ಕೆ. ಎಂದು ಕರೆಸಿಕೊಳ್ಳುವ ಜಲಾವೃತ ಪುಟ್ಟ ನೆಲ ಆಕಾರ ಪಡೆಯುತ್ತದೆ. ಅಟ್ಲಾಂಟಿಕ್ ಸಾಗರ ಹಾಗು ಯುರೋಪ್ ಖಂಡದಿಂದ ಸುತ್ತುವರಿದ ಈ ನೆಲ ಅನಾದಿ ಕಾಲದಿಂದಲೂ ಹವಾಮಾನ ವೈಪರೀತ್ಯವನ್ನು ಅನುಭವಿಸಿದ ವೈಶಿಷ್ಟ್ಯಪೂರ್ಣ ಪ್ರದೇಶ ಎಂದು ಇಲ್ಲಿನ ಇತಿಹಾಸಕಾರರು ಬಣ್ಣಿಸುತ್ತಾರೆ. ಮಿಲಿಯನ್ ವರ್ಷಗಳ ಹಿಂದೆ ಸಾಗಿ ಅಂದಿನಿಂದ ಇಂದಿನವರೆಗಿನ ಹವಾಮಾನ ಬದಲಾವಣೆಯನ್ನು ಗಮನಿಸುತ್ತ ಸಾಗಿದರೆ ಮೆಡಿಟರೇನಿಯನ್ ಭೂಭಾಗದ ಉಷ್ಣ ಹವೆಯಿಂದ ಹಿಡಿದು ಅತಿ ಶೀತದ ಹಲಗೆಗಳಿಂದ ನೆಲವೆಲ್ಲ ಮುಚ್ಚಿದ್ದ ಕಾಲಗಳು ಕಣ್ಣೆದುರು ಬರುತ್ತವೆ. ಯುರೋಪ್ ಖಂಡದೊಂದಿಗೆ ಬೆಸೆದುಕೊಂಡಿದ್ದ ಭೂಭಾಗ ಕಾಲ ಕ್ರಮೇಣ ಬೇರೆಯಾಗಿ ದ್ವೀಪವಾಗಿ ಮಾರ್ಪಟ್ಟದ್ದು ತಿಳಿಯುತ್ತದೆ.

ವಲಸಿಗರು ಲಂಡನ್ ಬಿಟ್ಟು ಯುನೈಟೆಡ್ ಕಿಂಗ್ಡಮ್ ನ ಬೇರೆ ಯಾವುದೇ ಭಾಗಕ್ಕೆ ಹೋದರೂ ಅಲ್ಲಿನವರೇ ಅನಿಸಿಕೊಳ್ಳಲು ವರುಷಗಳು ದಶಕಗಳು ಸಾಕಾಗುವುದಿಲ್ಲ ಎಂದು ಅನುಭವಗಳು ಅಧ್ಯಯನಗಳು ಹೇಳುತ್ತವೆ.

ಲಂಡನ್‌ನಲ್ಲಿರುವ ರಾಷ್ಟ್ರೀಯ ಇತಿಹಾಸ ಸಂಗ್ರಹಾಲಯದ ಶೋಧನೆಯ ಪ್ರಕಾರ ಒಂಭತ್ತೂವರೆ ಲಕ್ಷ ವರ್ಷಗಳ ಹಿಂದೆಯೂ ಇಲ್ಲಿ ಮನುಷ್ಯರಂತಹ ಜೀವಿಗಳು ಇದ್ದವು. ಆ ಕಾಲದ ಆದಿಮಾನವರ ತಲೆಬುರುಡೆ ಎಲುಬುಗಳು ಸಿಕ್ಕಿರದಿದ್ದರೂ ಅವರು ಬಳಸುತ್ತಿದ್ದ ಕಲ್ಲಿನ ಆಯುಧಗಳನ್ನು ಮಾನವನಂತಹ ಜೀವಿಯ ಹೆಜ್ಜೆಗಳನ್ನು ಗುರುತಿಸಿ ದಾಖಲಿಸಲಾಗಿದೆ.. ಈ ಮಾಹಿತಿಗಳು ಸ್ಪೇನ್ ಅಲ್ಲಿ ದೊರಕಿದ “Homo Antecessor” ಪ್ರಬೇಧದ ಮಾನವರ ಪಳೆಯುಳಿಕೆಯೊಡನೆ ಹೊಂದುತ್ತವೆ. ಐದು ಲಕ್ಷ ವರ್ಷಗಳ ಹಿಂದೆ ಇದಕ್ಕಿಂತ ಭಿನ್ನ ಮಾದರಿಯ “Homo Heidelbergensis” ಎನ್ನುವ ಜಾತಿಯ ಮನುಷ್ಯರ ಪಳೆಯುಳಿಕೆಗಳು ಬ್ರಿಟಿನ್ನಿನ ಬೇರೆಬೇರೆ ಕಡೆಗಳಲ್ಲಿ ದೊರಕಿದ್ದವು. ಆ ಮೂಳೆಗಳನ್ನು ಸೂಕ್ಷ್ಮವಾಗಿ ಪರಿಶೀಲಿಸಿದಾಗ ಅವುಗಳ ಮೇಲೆ ತೋಳ ಹಾಗು ಹೀನಾಗಳಂಥ ಪ್ರಾಣಿಗಳ ಉಗುರಿನ ಗುರುತುಗಳು ಕಂಡುಬಂದುದು ಇವರ ಮೇಲೆ ಆಗಿರಬಹುದಾದ ದಾಳಿ ಅಥವಾ ಆ ಮಾನವರ ಸಾವಿನ ಕಾರಣಗಳ ಬಗ್ಗೆ ಹೇಳುತ್ತವೆ. 1935ರಲ್ಲಿ ಲಂಡನ್ ಅಲ್ಲಿ ವಾಸಿಸುತ್ತಿದ್ದ ದಂತವೈದ್ಯನೊಬ್ಬನಿಗೆ ಸಮೀಪದ ಕೆಂಟ್ ಪ್ರದೇಶದಲ್ಲಿ ತಲೆಬುರುಡೆಯ ಚೂರೊಂದು ಸಿಕ್ಕಿತು. ಇದನ್ನು ಬ್ರಿಟಿಷ್ ಮ್ಯೂಸಿಯುಮ್ ನ ವಶಕ್ಕೆ ನೀಡಲಾಯಿತು, ಮುಂದೆ ಇನ್ನೊಂದು ಚೂರು ದೊರೆಯಿತು. ಇಪ್ಪತ್ತು ವರ್ಷಗಳ ನಂತರ ಅದೇ ತಲೆಬುರುಡೆಯ ಮೂರನೆಯ ಭಾಗವೂ ಸಿಕ್ಕಿತು.

ಇವು ನಾಲ್ಕು ಲಕ್ಷ ವರ್ಷಗಳ ಹಿಂದೆ ಲಂಡನ್ ಪ್ರದೇಶದಲ್ಲಿ ವಾಸಿಸಿದ್ದ ಮೊದಮೊದಲಿನ “ಲಿಯಾಂಡರ್ತಲ್”(Leanderthal) ಮಾದರಿಯ ಮಾನವರದು ಎಂದು ಗುರುತಿಸಲಾಯಿತು. ಎಳೆಯ ಹುಡುಗಿಯೊಬ್ಬಳ ಅವಶೇಷ ಇವಾಗಿದ್ದು ಈ ಕಾಲದ ಮನುಷ್ಯರ ದೇಹ ರಚನೆಗೆ ಹೆಚ್ಚು ಹೋಲಿಕೆ ಇರುವುದನ್ನು ಗುರುತಿಸಲಾಯಿತು. ಇಪ್ಪತ್ತರ ಆಸುಪಾಸಿನ ಹುಡುಗಿಯ ತಲೆಬುರುಡೆಯ ಚೂರು ಸಿಕ್ಕಿದಲ್ಲೇ ಕಲ್ಲಿನ ಆಯುಧ, ಪ್ರಾಣಿಗಳ ಮೂಳೆ ಕೂಡ ಸಿಕ್ಕಿದವು. ಆಕೆಯ ಬದುಕು ಹೇಗಿದ್ದಿರಬಹುದು? ಸಾವು ಯಾಕಾಗಿರಬಹುದು… ಎನ್ನುವ ಕುತೂಹಲಗಳಿಗೆ ಸಂಪೂರ್ಣ ಉತ್ತರ ಸಿಗದಿದ್ದರೂ ಆಕೆಯನ್ನು ಲಂಡನ್ ಪ್ರದೇಶದ ಮೊದಲ ಮಾನವ, ಮೊಟ್ಟಮೊದಲ ಹುಡುಗಿ, ಮಹಾತಾಯಿ ಎಂದೆಲ್ಲ ಕರೆಯುವುದಿದೆ. ಲಕ್ಷ ಲಕ್ಷ ವರ್ಷಗಳ ಹಿಂದೆ ಬದುಕಿದ್ದು ಹಲವು ಗುಟ್ಟು ಕತೆ ಚರಿತ್ರೆ ಪುರಾಣ ಎಲ್ಲವನ್ನೂ ತನ್ನೊಳಗೆ ಬಂಧಿಸಿಟ್ಟ ಹುಡುಗಿ ಇದೀಗ ಲಂಡನ್ನಿನ ರಾಷ್ಟ್ರೀಯ ಇತಿಹಾಸ ಸಂಗ್ರಹಾಲಯದ ಅಮೂಲ್ಯ ಆಸ್ತಿಯಾಗಿ ತನ್ನನ್ನು ಹುಡುಕಿ ಬರುವವರ ಭೇಟಿಗಾಗಿ ಕಾಯುತ್ತಿರುತ್ತಾಳೆ, ಕತೆಗಳನ್ನು ಪಿಸುಗುಟ್ಟುತ್ತಾಳೆ.

ಲಂಡನ್ನಿನ ಆದಿಪುರಾಣದ ಮೊದಲ ಮಾನವಳನ್ನು ಅರಸುತ್ತ ಅಲ್ಲದಿದ್ದರೂ, ಲಂಡನನ್ನು ಹುಡುಕಿ ಬಂದವರ ಬರುವವರ ಸುದೀರ್ಘ ಯಾದಿಯೇ ಇದೆ. ವಾಣಿಜ್ಯ ಪಟ್ಟಣ, ಆರ್ಥಿಕ ನಗರಿ ಅವಕಾಶಗಳ ಊರಾಗಿರುವ ಲಂಡನ್ ಬರೇ ಯುನೈಟೆಡ್ ಕಿಂಗ್ಡಮ್ ಒಳಗಿನಿಂದ ಅಲ್ಲದೇ ಒಂದನೆಯ ಶತಮಾನದ ರೋಮನ್ನರಿಂದ ಹಿಡಿದು ಇಂದಿನ ಈಗಿನವರೆಗೂ ಜಗತ್ತಿನ ದಿಕ್ಕುದೆಸೆಗಳಿಂದ ಹುಡುಕಿ ಬರುವವರನ್ನು ಆದರಿಸಿ ಒಳಸೇರಿಸಿಕೊಳ್ಳುತ್ತಿದೆ.

ಲಂಡನ್ನನ್ನು ದಿನ ವಾರ ತಿಂಗಳ ಮಟ್ಟಿಗೆ ಭೇಟಿ ಮಾಡುವುದರಿಂದ ಹಿಡಿದು ಇಲ್ಲಿಯೇ ದೀರ್ಘ ಕಾಲ ನಿಲ್ಲುವುದರ ತನಕದ ಎಲ್ಲ ಬಗೆಯ ಭೇಟಿ ವಾಸ್ತವ್ಯಗಳಿಗೂ ಆಶ್ರಯ ನೀಡುತ್ತದೆ. ಮತ್ತೆ ಹಾಗೆ ಒಳಬಂದವರ ಮೇಲೆ ಲಂಡನ್ ತನ್ನ ವರ್ಚಸ್ಸಿನಿಂದ ತೀವ್ರವಾದ ಪ್ರಭಾವನ್ನೂ ಬೀರುತ್ತದೆ. ಲಂಡನ್ ಅನ್ನು ಸೂರ್ಯನ ಬಿರು ಬಿಸಿಲಿನಲ್ಲಿ ಕಾಣುವವರು, ರಾತ್ರಿಯ ಮಿಣುಕು ದೀಪಗಳಲ್ಲಿ ನೋಡಿದವರು ಅಥವಾ ವಿದ್ಯಾರ್ಥಿಗಳಾಗಿ ಬಂದವರು, ಉದ್ಯೋಗಕ್ಕಾಗಿ ಉಳಿದವರು, ತಿರುಗಾಟಕ್ಕೆಂದು ಹೊಕ್ಕವರು, ಇಲ್ಲೇ ಹುಟ್ಟಿ ಅಲೆದು ಅಳಿದವರು, ಅಳಿದು ಉಳಿದವರು ಹೀಗೆ ಎಲ್ಲ ಬಗೆಯ ಅತಿಥಿ ಅಭ್ಯಾಗತರಿಗೂ ಲಂಡನ್ ವಿಭಿನ್ನ ವಿಶೇಷ ಅನುಭವ ಕೊಟ್ಟಿದೆ. ಅಂತಹವರೆಲ್ಲರ ಬದುಕಿನಲ್ಲಿ “ಲಂಡನ್ ದಿನ”ಗಳು ಸ್ಮರಣೀಯವಾಗಿ ನಿಂತಿವೆ. ಮತ್ತೆ ಹೀಗೆ ಬಂದು ಇರುವವರಲ್ಲಿ, ಇದ್ದು ಹೋದವರಲ್ಲಿ ಕೆಲವರನ್ನು ಲಂಡನ್ ಕೂಡ ತನ್ನ ಸ್ಮೃತಿಪಟಲದಲ್ಲಿ ಭದ್ರವಾಗಿ ಕಾಯ್ದಿಟ್ಟುಕೊಂಡಿದೆ.

ಲಂಡನ್ನಿನ ಪ್ರತಿ ಗಲ್ಲಿಯಲ್ಲೂ ಎದುರಾಗುವ ಪುರಾತನ ಕಟ್ಟಡಗಳು, ಪ್ರತಿಮೆಗಳು, ಬೀದಿ ಭವನಗಳ ಮೇಲೆ ಕೆತ್ತಿದ ಹೆಸರುಗಳು, ಥೇಮ್ಸ್ ನದಿಗೆ ಅಡ್ಡದಾಟುವ ಸೇತುವೆಗಳು, ಮಹಾನ್ ಸಂಗ್ರಹಾಲಯಗಳ ಗಾಜಿನ ಕಪಾಟುಗಳಲ್ಲಿ ಖೈದಿಯಾಗಿರುವ ವಸ್ತು ವಿಶೇಷಗಳು ಎಲ್ಲವೂ ಕಳೆದುಹೋದ ಕಾಲವನ್ನು ವ್ಯಕ್ತಿಗಳನ್ನು ಘಟನೆಗಳನ್ನು ಮತ್ತೆ ಬಡಿದು ಎಬ್ಬಿಸಿ ತಂದು ಎದುರು ನಿಲ್ಲಿಸುತ್ತವೆ. ಇನ್ನು ಲಂಡನ್ ತನ್ನೊಳಗೆ ಹುದುಗಿಸಿಕೊಂಡ ಬೆಚ್ಚನೆಯ ನೆನಪುಗಳಲ್ಲಿ ಕುತೂಹಲಕರವಾದವು ವಿಶಿಷ್ಟವಾದವು ಅಲ್ಲಿನ ಕೆಲವು ಮನೆಗಳ ಗೋಡೆಗಳಲ್ಲಿ ಕಾಣಿಸುವ “ನೀಲಿ ಫಲಕಗಳು” ಮೇಲೂ ನಮೂದಾಗಿವೆ. ಅಂದೆಂದೋ ಲಂಡನ್ ಅಲ್ಲಿ ಇದ್ದವರ ಇಂದಿನ ಸ್ಮರಣೆಯಾಗಿ ಈ “blue plaque” ಗಳು ಮನೆಗಳ ಮೇಲೆ ಕಾಣಿಸುತ್ತವೆ. ವಿಜ್ಞಾನಿ, ಕ್ರೀಡಾಪಟು, ನಟ, ಸಂಶೋಧಕ, ರಾಜಕೀಯ ನಾಯಕ, ಕಲಾವಿದ ಅಥವಾ ಇನ್ಯಾರೋ ಅಸಾಧಾರಣರು ಅವರಾಗಿರಬಹುದು, ಈ ಫಲಕಗಳು ಅವರಿದ್ದ ಮನೆಗಳ ದಿನಗಳ ಕತೆಗಳ ಗುಟ್ಟಿನ ಅಟ್ಟಕ್ಕೆ ಮೆಟ್ಟಿಲನ್ನು ಕಟ್ಟುತ್ತವೆ. ಕೆಲವು ತಿಂಗಳೋ ವರ್ಷವೋ ಅಲ್ಲ ಇತ್ತೀಚೆಗೊ ಅಥವಾ ಶತಮಾನಗಳ ಹಿಂದೋ ಲಂಡನ್ನಲ್ಲಿ ತಂಗಿದ್ದ ವ್ಯಕ್ತಿಗಳು ಯುನೈಟೆಡ್ ಕಿಂಗ್ಡಮ್ ಅಥವಾ ಜಗತ್ತಿನ ಬೇರೆ ಭಾಗದಲ್ಲೋ ಅಸಾಮಾನ್ಯರೆನಿಸಿ ಅಸ್ತಂಗತರಾಗಿದ್ದರೂ ಅವರು ಇಂದಿಗೂ ಅವರಿದ್ದ ಮನೆಗಳ ಗೋಡೆಯಲ್ಲಿ ಹೂತಿರುವ “ನೀಲಿ ಫಲಕಗಳ” ನೆಪದಲ್ಲಿ ಶಾಶ್ವತವಾಗಿ ಲಂಡನ್ ಅಲ್ಲಿಯೇ ನೆಲೆಸುವಂತೆ ಆಗಿದೆ. ಅವರಿದ್ದ ಮನೆಯ ಕೋಣೆಗಳಲ್ಲಿ ಈಗಲೂ ಅವರ ಹೆಜ್ಜೆ ಸದ್ದುಗಳು ಕೇಳಿಸಿದಂತಹ, ಮನೆಯ ಎದುರಿನ ಬೀದಿಯಲ್ಲಿ ಈಗಷ್ಟೇ ಅಲೆದಾಡಿದಂತಹ ಅನುಭವ ನೀಡುತ್ತಿವೆ. ಅಂತಹ ನೀಲಿ ಫಲಕಗಳನ್ನು ಆಯ್ದ ವ್ಯಕ್ತಿಗಳು ಇದ್ದುಹೋದ ಮನೆಯ ಗೋಡೆಯಲ್ಲಿ ಕೂರಿಸುವುದು ಸುಮಾರು ನೂರೈವತ್ತು ವರ್ಷಗಳ ಹಿಂದೆಯೇ ಶುರು ಆದ ಸಂಪ್ರದಾಯ. ಅಂದಿನಿಂದ ಇಂದಿನ ತನಕ ಗಾತ್ರ ರೂಪ ಆಕಾರದಲ್ಲಿ ಬದಲಾವಣೆ ಕಂಡಿರುವ ಫಲಕಗಳು ಇದೀಗ ಇಪ್ಪತ್ತು ಇಂಚು ವ್ಯಾಸ ಹಾಗು ಎರಡು ಇಂಚು ದಪ್ಪದ ವೃತ್ತಾಕಾರದಲ್ಲಿ ತಯಾರಿಸಲ್ಪಡುತ್ತವೆ. ಶಾಶ್ವತ ನೀಲಿ ಬಣ್ಣದ ಫಲಕ ಎಂದು ಕರೆಸಿಕೊಳ್ಳುವ ಇವುಗಳ ಮೇಲೆ, ವ್ಯಕ್ತಿಯ ಹೆಸರು, ಅವರು ಯಾವ ಕಾರಣಕ್ಕೆ ಹೆಸರು ಮಾಡಿದರು, ಜನನ ಮರಣಗಳ ವರ್ಷ, ಆ ಮನೆಯಲ್ಲಿ ವಾಸಿಸಿದ್ದ ಕಾಲ ಹೀಗೆ ತೀರ ಸಂಕ್ಷಿಪ್ತವಾದ ಮಾಹಿತಿಗಳನ್ನು ಕೊರೆಯಲಾಗುತ್ತದೆ.

ವ್ಯಕ್ತಿ ಮತ್ತು ವಾಸ್ತವ್ಯವನ್ನು ಜೊತೆಗೂಡಿಸುವ ಫಲಕಗಳಲ್ಲಿ ಆ ಕ್ಷಣಕ್ಕೆ ಕಣ್ಣಿಗೆ ಬೀಳುವ ಅಕ್ಷರಗಳು ಸಾಲುಗಳು ಅತ್ಯಂತ ಸಂಕ್ಷಿಪ್ತವಾದರೂ, ಭವ್ಯವಾದ ವಿಸ್ತಾರವಾದ ಶಾಂತ ಸಾಗರದಂತೆ ತಣ್ಣಗೆ ಕುಳಿತು ಸ್ಮರಣೆಯ ಪ್ರಕ್ಷುಬ್ದ ಅಲೆಗಳನ್ನು ಎಬ್ಬಿಸಲು ಹೊಂಚುಹಾಕಿವೆ. ಯಾವುದೊ ಕಾಲದ ಸದ್ದು ಬಣ್ಣ ವಾಸನೆಗಳಿಗೆ ನಮ್ಮನ್ನು ಕರೆದೊಯ್ಯಲು ಕಾತರಿಸುತ್ತಿವೆ. ಆಯಾ ವ್ಯಕ್ತಿಗಳು ಜಗತ್ತಿನ ಯಾವ ದೇಶ ಊರುಗಳಿಗೆ ಸೇರಿದವರಾಗಿ ಅಲ್ಲಲ್ಲಿ ಅವರಿಗೆ ಸಿಗಬೇಕಾದ ಗೌರವ ಕೃತಜ್ಞತೆ ಸಿಕ್ಕರೂ ಬಿಟ್ಟರೂ ಲಂಡನ್ ಬೀದಿಗಳಲ್ಲಿ ಅವರಿದ್ದು ಹೋದ ಮನೆಗಳಲ್ಲಿ ಒಂದು ಬೊಗಸೆಯಷ್ಟಾದರೂ ಖಾಯಂ ನೆನಪುಗಳು ಹಾಯಾಗಿ ಧೀರೋದ್ಧಾತ ನಿಲುವಿನಲ್ಲಿ ಸುಳಿದಾಡಿಕೊಂಡಿವೆ. ಸದ್ಯಕ್ಕೆ 950ಕ್ಕಿಂತ ಹೆಚ್ಚು ಫಲಕಗಳು ಲಂಡನ್ ಉದ್ದಗಲಕ್ಕೂ ವಿಶಿಷ್ಟ ಚಾರಿತ್ರಿಕ ಎನಿಸಿದ ಮನೆಗಳ ಗೋಡೆಯಲ್ಲಿ ಇವೆ. ನೀಲಿ ಫಲಕವನ್ನು ಮನೆಯ ಗೋಡೆಯಲ್ಲಿ ಕೂರಿಸಿರುವ ಬೀದಿಯೊಂದಕ್ಕೆ ನೀವು ಹಾದಿ ತಪ್ಪಿ ಬಂದಿರಿ ಅಥವಾ ಹುಡುಕಿಕೊಂಡು ಒಳ ಹೊಕ್ಕಿರಿ ಅಂತಾದರೆ, ನಿಮ್ಮನ್ನು ಅಲ್ಲೇ ನಿಲ್ಲಿಸಿ ಆ ವ್ಯಕ್ತಿಯಿಂದ ಅವರ ವಾಸ್ತವ್ಯದವರೆಗೆ ಲಂಡನ್ ಪುರಾಣದಿಂದ ಹಿಡಿದು ಲೋಕ ಚರಿತ್ರೆಯ ತನಕ ಕೈ ಹಿಡಿದುಕೊಂಡು ಸುತ್ತು ಹಾಕಿಸುತ್ತವೆ.

ಲಂಡನ್ನಿನ ಆದಿಪುರಾಣದಿಂದ ಶುರುಮಾಡಿ ನೀಲಿ ಫಲಕಗಳ ಲಂಡನ್ ತನಕ ಹೇಗೋ ಬಂದಾಗಿದೆ. ಈಗ ನೀಲಿ ಫಲಕಗಳ ಮೂಲಕ ಮತ್ತೆ ಹಿಂದೆ ಸಾಗಿ ಸುತ್ತಿ ಬರುವುದು ಬಾಕಿ ಇದೆ. ಜನವರಿಯ ಚಳಿಗಾಲದ ಲಂಡನ್ನಿನಲ್ಲಿ ಇಬ್ಬನಿ ಬಿದ್ದು ಮೆತ್ತಗಾದ ಅಂತಹ ಒಂದು ಬೀದಿ ಎದುರಲ್ಲಿದೆ, ಈ ಬೀದಿಯ ಒಂದು ಮನೆ ಮತ್ತೆ ಮನೆಯ ಗೋಡೆಯಲ್ಲಿ ಸ್ಪಷ್ಟವಾಗಿ ಕಾಣಿಸುತ್ತಿರುವ ನೀಲಿ ಫಲಕ ಮಾತನಾಡುತ್ತಿದೆ. ಇಲ್ಲಿದ್ದವರು …..

(ಮುಂದುವರಿಯುವುದು)