ಅನ್ನವೂ ಭಿನ್ನ
ಅವಳು ಅನ್ನ ಮಾಡುತ್ತಿದ್ದಾಗ
ಪಾತ್ರೆಯ ಎಸರು ಕೊತಕೊತಿಸಿ
ಅಕ್ಕಿಯೊಂದಿಗೆ ಮರಳುವಾಗ
ಉರಿಯ ಹೊರ ಹಿರಿದು
ಅನ್ನವನು ಅರಳಲು ಬಿಟ್ಟು
ನಿಗಿನಿಗಿ ಕೆಂಡಗಳನು
ಮುಂದೊಲೆಗೆ ಸರಿಸಿ
ಉಫ್ ಉಫಿಸಿ ಬೆರಳುರಿಯ ಊಬಿಸಿ
ಸಾರಿಗೆ ಒಗ್ಗರಣೆ ಹಾಕಿದರೆ
ಒಂದು ಕಡೆ ಅನ್ನ ಇನ್ನೊಂದು ಕಡೆ ಸಾರು
ತಮ್ಮಷ್ಟಕ್ಕೆ ತಾವು ಮಗ್ನ
ಉಳಿದ ಕೆಲಸಗಳ ಸೌರಿಸುವ ಅವಳೀಗ
ಬೆಂಕಿಯಿಂದ ಬಿಸಿಲ ಬಾಣಲೆಗೆ
ಮಲ್ಲಿಗೆಯ ಹೂ ಅನ್ನ, ಘಮ್ಮನೆಯ ಸಾರು
ಒಲೆಯಲ್ಲಿ ಉಳಿದ ಬಿಸಿಯ ಬೂದಿ.
ಕೆಲಸ ಮುಗಿಸಿ ಅವಳ ಕಾಯುತ್ತ
ಇವಳು ಅನ್ನ ಮಾಡುವಾಗ
ಅಳತೆಯ ಅಕ್ಕಿ, ನೀರುಗಳ ಒಳಸೇರಿಸಿ
ಭದ್ರಪಡಿಸಿ ಮುಚ್ಚಳವ
ಮೇಲೊಂದು ಸೀಟಿಯ ಮೊಟಕಿ
ಒಂದರ ಹಿಂದೊಂದು ಹೊತ್ತಿಸುವ ಬರ್ನರ್‌ನಲ್ಲಿ
ಅನ್ನ, ಸಾರು, ಪಲ್ಯಗಳು
ಸರದಿಯಲ್ಲಿ ಕೂಗಿ ಹೇಳುತ್ತವೆ ನಾನು ರೆಡಿ
ಅವಳು ಒಂದಾದ ಮೇಲೆ ಒಂದರ ಕಿವಿ ಹಿಂಡಿ
ಅವಳ ಮೊಬೈಲಿನ ಕೀಲಿಮಣೆಗಳು ಅಣಕಿಸಿ
ಎಲ್ಲವೂ ಗಪ್ ಚುಪ್
ಆದರೂ ಸಿಡಿಮಿಡಿಸಿ
ಹುಶ್ ಶ್….ಶ್ ಗುಟ್ಟಿ ಗಮನ ಸೆಳೆಯಲು
ಟಿಣಿಂಗ್ ಟಿಣಿಂಗ್ ನಗುವ ಲ್ಯಾಪ್‌ಟಾಪ್‌ನ
ಅವಳು ಸವರಿ
ಅದರ ಕಿಸಿಕಿಸಿ ಮುಸಿಮುಸಿಗೆ
ಇವು ಬೆಪ್ಪಾಗಿ
ಪ್ರತಿರೋಧಿಸಲು ಇದ್ದಲ್ಲೆ ತಣಿದು
ಬೆಂಕಿ ಬಿಸಿಲು ಬೆವರಿನದು ಸ್ನೇಹದ ನಂಟು
ಕಾಲದ ವೇಗಕ್ಕೆ ಕಾಲವೇ ಕಗ್ಗಂಟು.
ನೂತನ ದೋಶೆಟ್ಟಿ ಉತ್ತರ ಕನ್ನಡ ಜಿಲ್ಲೆಯ ಸಿದ್ದಾಪುರದವರು. ಆಕಾಶವಾಣಿಯಲ್ಲಿ ಕಾರ್ಯಕ್ರಮ ನಿರ್ವಾಹಕಿಯಾಗಿ ಕೆಲಸ ಮಾಡುತ್ತಿದ್ದಾರೆ. ಕಾಲವೆಂಬ ಮಹಾಮನೆ, ಭಾಗೀರತಿ ಉಳಿಸಿದ ಪ್ರಶ್ನೆಗಳು ಅವರ ಪ್ರಮುಖ ಸಂಕಲನಗಳು. ಯಾವ ವೆಬ್‌ಸೈಟಿನಲ್ಲೂ ಉತ್ತರವಿಲ್ಲ ಅವರ ಪ್ರಕಟಿತ ಕಥಾ ಸಂಕಲನ.