ಸಿನೆಮಾ ರಂಗಕ್ಕೆ ಹೋಗಬೇಡ ಎಂದ ತಾಯಿಯ ಮಾತನ್ನು ಪಕ್ಕಕ್ಕಿಟ್ಟು ಮುಂಬೈಗೆ ಬಂದಾಗ ಜೇಬಿನಲ್ಲಿ ಕಿರುಗಾಸು ಇಲ್ಲದ ಬಿರ್ಜು ಮಹಾರಾಜ್ ಮಾಧುರಿ ದೀಕ್ಷಿತ್ ರಿಂದ ಹಿಡಿದು  ದೀಪಿಕಾಳವರೆಗೂ ನೂರಕ್ಕೂ ಹೆಚ್ಚು ಸಿನೆಮಾಗಳಿಗೆ ನೃತ್ಯ ಸಂಯೋಜನೆ ಮಾಡಿದ್ದಾರೆ. ಆದರೂ ಪ್ರೀತಿ ಮಾಡುವುದು ಮಾತ್ರ ಕಮಲಹಾಸನ್‌ನನ್ನು. ವಿಶ್ವರೂಪಂ ಸಿನೆಮಾ ಸಮಯದಲ್ಲಿ ‘ಆತ ತರಬೇತಿ ಸಮಯದಲ್ಲಿ ನೃತ್ಯ ಮಾಡುತ್ತಿದ್ದನ್ನು ನೋಡಿ ಎಷ್ಟೋ ಬಾರಿ ನಾನೇ ನರ್ತಿಸುತ್ತಿದ್ದೇನೆ ಎನ್ನಿಸಿಬಿಡುತ್ತಿತ್ತು’ ಎನ್ನುವಾಗ ಬಿರ್ಜು ಅವರ ಉಸಿರಿನಲ್ಲಿ ಜೀವ ಆಡಿದಂತೆನಿಸಿತು. ‘ಕಂಡಷ್ಟೂ ಪ್ರಪಂಚ’ ಅಂಕಣದಲ್ಲಿ ಲಕ್ನೋ ಭೇಟಿಯ ಕುರಿತು  ಅಂಜಲಿ ರಾಮಣ್ಣ ಬರಹ.

 

‘ಈಗಲೂ ನನಗೆ ಸ್ವಾತಂತ್ರ್ಯ ಎಂದರೆ ನೃತ್ಯ ಮಾತ್ರ’ ಎನ್ನುವಾಗ ಆಡಿಸಿದ ಅವರ ಬೆರಳುಗಳಲ್ಲಿ ಕೊಳಲುಲಿತಕ್ಕೆ ಮುತ್ತಿನ ಕುಚ್ಚು ಕಟ್ಟುತ್ತಿರುವ ರಾಧೆಯ ಕಣ್ಣ್ರೆಪ್ಪೆಯ ಲಾಲಿತ್ಯವಿತ್ತು. “ಲಕ್ನೋದ ಮಣ್ಣನ್ನು ಮುಟ್ಟಿದವನೂ ನೃತ್ಯವೇ ಆಗಿ ಬಿಡುತ್ತಾನೆ. ಈಗ ನಡೆಯುತ್ತಿರುವುದೆಲ್ಲಾ ನೃತ್ಯದ ಹೆಸರಿನಲ್ಲಿ ಸರ್ಕಸ್. ಸಂಗೀತವೂ ಭಾರತೀಯವಾಗಿ ಉಳಿದಿಲ್ಲ. ಆದರೂ ನಾನು ಈ ಕಾಲದ ಹಾಡುಗಳನ್ನು ಕೇಳುತ್ತೇನೆ. ಯಾಕಂದ್ರೆ ನೂರು ಕಲ್ಲುಗಳಲ್ಲಿ ಒಂದು ಮುತ್ತು ಸಿಗುವ ಸಾಧ್ಯತೆ ಇದೆ ಎಂದು ನಂಬಿದ್ದೇನೆ. ಮನಸ್ಸಿನ ಮತ್ತೊಂದು ರೂಪವೇ ನೃತ್ಯ. ಅದಕ್ಕೇ ಮನಸ್ಸು ಮಾಡಿದವರೆಲ್ಲರೂ ನೃತ್ಯ ಕಲಿಯಬಹುದು. ನಿಜಾರ್ಥದಲ್ಲಿ ನೃತ್ಯವೇ ಜಗತ್ತಿನ ಶಾಂತಿದೂತ. ಹಾಗೆ ನೋಡಿದರೆ ಯಾವುದೇ ಕಲೆ ಕಲಿತವನೂ ಅಂತರಂಗದಿಂದ ಸತ್ಯವೇ ಆಗಿರುತ್ತಾನೆ” ಎಂದು ನಿಧಾನಗತಿಯಲ್ಲಿ ಒಂದೇ ಸಮನೆ ನನ್ನ ಕಣ್ಣುಗಳನ್ನೇ ನೋಡುತ್ತಾ ಮಾತನಾಡುತ್ತಿದ್ದವರು ಆಕಾಶದಂತೆ ಗೋಚರಿಸುತ್ತಿದ್ದರು. ಬೆಂಗಳೂರಿನಲ್ಲಿ ಸಿಕ್ಕವರು ಲಕ್ನೋಗೆ ಬಾ ಎಂದರು.

ಅವರ 78ನೆಯ ಹುಟ್ಟುಹಬ್ಬಕ್ಕೆ ತಾವು ಹುಟ್ಟಿದ ಮನೆಯನ್ನೇ ಕಥಕ್ ವಸ್ತು ಸಂಗ್ರಹಾಲಯವಾಗಿ ಜಗತ್ತಿಗೆ ಕೊಡುಗೆ ನೀಡಿದ ಬಿರ್ಜು ಮಹರಾಜ್ ಜಿ ಅವರ ಪಕ್ಕದಲ್ಲಿಯೇ ನಿಂತಿದ್ದೆ ಅವತ್ತು. ಮಂತ್ರಿಗಳು, ಮಹೋದಯರು, ಅವರು ಇವರು ಎಲ್ಲರೂ ಬಂದು, ಆ ಕಾರ್ಯಕ್ರಮ ಇದ್ದದ್ದು ಸಂಜೆ ಆರಕ್ಕೆ. ಅಲ್ಲಿಯವರೆಗೂ ಸುಮ್ಮನೆ ಕೂಡುವ ಜಾಯಮಾನವೇ ನಂದು?  ಸರಿ ಹೊರಟೆ ತಿರುತಿರು ತಿರುಗಲು.

ಆ ಊರಲ್ಲಿ ರೂಮಿ ಗೇಟ್ ಅಂತ ಒಂದು ಸುಂದರವಾದ, ಕುಸುರಿ ಕಲೆಯಿಂದ  ರಮ್ಯವಾಗಿರುವ ಹೆಬ್ಬಾಗಿಲಿದೆ. ಅದಕ್ಕೂ ಕವಿ ರೂಮಿಗೂ ಏನೋ ಸಂಬಂಧ ಇರಲೇ ಬೇಕು ಎಂದು ನಿರ್ಧರಿಸಿಕೊಂಡು,  ಪದೇ ಪದೇ ಅದಕ್ಕೆ ಸುತ್ತು ಬರುತ್ತಿದ್ದೆ. ಉಹುಂ, ಅದು ಹಾಗಲ್ಲ. ಬೆಳೆಯುತ್ತಿದ್ದ ಜನಸಂಖ್ಯೆಯಿಂದಾಗಿ ಹರಡಿಕೊಳ್ಳುತ್ತಿದ್ದ ಊರನ್ನು ವಿಭಾಗಿಸಲು 1784ರಲ್ಲಿ ಇದ್ದ ನವಾಬರು ಅವಧಿ ಶೈಲಿಯಲ್ಲಿ ಕಟ್ಟಿಸಿದ ಹೆಬ್ಬಾಗಿಲು, ಇಷ್ಟೇ ಅದರ ಚರಿತ್ರೆ. ಈಗಂತೂ ಅದು ಪಾನ್ ಪಿಚ್ಕಾರಿ, ನಾಯಿ ಹಂದಿಗಳ ಖಾಸಗೀ ಜಾಗ ಆಗಿಬಿಟ್ಟಿದೆ.

ಅಲ್ಲಿಂದ ಮುಂದೆ ಹೋಗಿ ಬಲಕ್ಕೆ ತಿರುಗಿದರೆ ಕಾಲು ನಿಲ್ಲುವುದು ಹುಸೈನಾಬಾದ್ ಆರ್ಟ್ ಗ್ಯಾಲರಿಯಲ್ಲಿ. ಕೇವಲ 18 ನವಾಬರ ಆಳೆತ್ತರದ ಪೋರ್ಟ್ರೇಟ್‌ಗಳು. ಯೂರೋಪಿನ ಕಲಾವಿದರು 1838ರಲ್ಲಿ ಆನೆಯ ಚರ್ಮದ ಮೇಲೆ ಮಾಡಿರುವ ಬಣ್ಣದ ಚಿತ್ತಾರ. ಖಾಸ್ ಬಾತ್ ಎಂದರೆ ನೋಡುವವರು ಎಲ್ಲಿ ನಿಂತು ನೋಡಿದರೂ ಆ ಹದಿನೆಂಟೂ ನವಾಬರು ನೋಡುಗನ ಕಣ್ಣಲ್ಲಿ ಕಣ್ಣಿಟ್ಟು ನೋಡುತ್ತಿದ್ದರೆ ಎಂದು ಭಾಸವಾಗುತ್ತದೆ. ಈ ಅದ್ಭುತ ನೋಡಲು ಕೇವಲ ಐವತ್ತು ರೂಪಾಯಿಗಳ ಟಿಕೆಟ್.

ಮಸೀದಿಗಳು , ದರ್ಗಾಗಳು, ಮುಷಾಯಿರಗಳು, ನಮಾಜುಗಳು ಸಮೃದ್ಧಿಯಾಗಿ ಸಿಗುವ ಲಕ್ನೋದಲ್ಲಿ ಮಾಂಸಾಹಾರಿಗಳಿಗೆ ಒಂದು ದಿನದ ಹೆಚ್ಚಿನ ಪ್ರವಾಸ ಬೇಕಾದರೆ ನನ್ನಂತಹ ಪುಳಿಚಾರರಿಗೆ ’ಕಾಶ್ತಾ’ ಎನ್ನುವ ಕಚೋರಿಯಂತಹ ಕರಿದ ತಿಂಡಿ ಅದರ ಜೊತೆಗಿನ ಚನ ಮಸಾಲವೇ ಸೊಗಸು ಎನ್ನಿಸುತ್ತೆ. ತಿಂದು, ಕೈ ತೊಳೆದು, ಆಕೆಯಷ್ಟೇ ಗಟ್ಟಿ ಬಿಸಿಲಿನಲ್ಲಿ ಕಾಲಿಟ್ಟಿದ್ದು ಮಾಯಾವತಿ ಕಟ್ಟಿಸಿರುವ ಅಂಬೇಡ್ಕರ್ ಪಾರ್ಕಿಗೆ. ಅಬ್ಬಬ್ಬಾ, ಅದೇನು ಫಳಗುಟ್ಟುತ್ತಿತ್ತು ಅಲ್ಲಿನ ಕಲ್ಲಿನ ಆನೆಗಳು, ಅಮೃತ ಶಿಲೆಯ ನೆಲ, ಸುಡುಸುಡು ಆಕಾಶ. 150 ಎಕರೆ ಭೂಮಿಯನ್ನು ಅಗೆದು, ಕೊರೆದು ಕೊಚ್ಚಿ ಈ ಪಾರ್ಕ್ ನಿರ್ಮಾಣ ಆಗಿದೆ. ಕಾನ್ಷಿರಾಮ್, ಫುಲೆ, ಅಂಬೇಡ್ಕರ್ ಮುಂತಾದವರ ಹತ್ತಾಳು ಎತ್ತರ, ಗಾತ್ರದ ಪ್ರತಿಮೆಗಳು, ಬುದ್ಧ ತತ್ವ ಸಾರುವ ಮಾತುಗಳು, ಫೋಟೋ ಗ್ಯಾಲೆರಿ ಹೀಗೆ ಇನ್ನೂ ಏನೇನೋ ಇವೆ. ಇಂತಹ ಆಕೃತಿಗಳು, ಕೆಲಸಗಳೂ ಕೂಡ ಜಗತ್ತಿನ ಬೇರೆಲ್ಲೆಡೆಯೂ ಸಿಗುವ ಸಾಧ್ಯತೆ ಇದೆ. ಆದರೆ ಮಾಯಾವತಿ ಅಕ್ಕನವರ 150 ಅಡಿ ಎತ್ತರದ ಪ್ರತಿಮೆ ಮತ್ತೆಲ್ಲಾದರೂ ಉಂಟೇ?! ಅಯ್ಯೋ ಅದೂ ಮುಂದೊಮ್ಮೆ ಮತ್ತೆಲ್ಲೋ ಸಿಕ್ಕೀತು ಆದರೆ ಆಕೆಯ ಕೈಯಲ್ಲಿನ ವ್ಯಾನಿಟಿ ಬ್ಯಾಗ್ ಇಲ್ಲಿ ಅಲ್ಲದೆ ಮತ್ತೆಲ್ಲೂ ಸಿಗದು.

ಅವರ 78ನೆಯ ಹುಟ್ಟುಹಬ್ಬಕ್ಕೆ ತಾವು ಹುಟ್ಟಿದ ಮನೆಯನ್ನೇ ಕಥಕ್ ವಸ್ತು ಸಂಗ್ರಹಾಲಯವಾಗಿ ಜಗತ್ತಿಗೆ ಕೊಡುಗೆ ನೀಡಿದ ಬಿರ್ಜು ಮಹರಾಜ್ ಪಕ್ಕದಲ್ಲಿನಿಂತಿದ್ದೆ ಅವತ್ತು.

ಗಂಟೆ ನಾಲ್ಕಾಯಿತು. ಶಾಖಕ್ಕೆ ಸಿಕ್ಕು ಹಲಸಿನ ಮುಳ್ಕದಂತೆ ಕಾಣುತ್ತಿದ್ದ ಮುಖಕ್ಕೆ ಸ್ನೋ ಪೌಡರ್ ಮೆತ್ತಿಕೊಂಡು ಅಲ್ಲಿಗೆ ಹೋಗಲು ಸಮಯವಾಗುತ್ತಿತ್ತು. ತಯಾರಾಗಿ ಗೌತಮ್ (ಆಟೋ ಚಾಲಕ) ಹಿಂದೆ ಕುಳಿತು ವೀಣಾಳ ಕೈ ಹಿಡಿದು ತಲುಪಿದ್ದು ಪ್ರಪಂಚದ ಮೊದಲ ಕಥಕ್ ನೃತ್ಯ ಸಂಗ್ರಹಾಲಯಕ್ಕೆ. ಆ ದಿನಕ್ಕಾಗಿಯೇ ಬಣ್ಣ ಮೆತ್ತಿಕೊಂಡು ಥಳಗುಟ್ಟುತ್ತಿದ್ದ ಗೋಡೆಗಳಿಂದ ಮಣ್ಣಿನ ಘಮಲು ಮೂಗಿಗೇರುತ್ತಿತ್ತು. ದೊಡ್ಡವರೆಲ್ಲಾ ಒಬ್ಬರಾದ ನಂತರ ಒಬ್ಬರು ಪೈಪೋಟಿಗೆ ಬಿದ್ದು ಭಾಷಣ ಮಾಡುತ್ತಿದ್ದರು. ಮಾಧ್ಯಮದವರು ಪ್ರಶ್ನೆಗಳನ್ನು ಕ್ಲಿಕ್‌ಕ್ಲಿಕ್ ಎನಿಸಿಕೊಳ್ಳುತ್ತಿದ್ದರು. ಊರೂರಿಂದ ಬಂದಿದ್ದ ಕಥಕ್ ಕಲಾವಿದರು ಉತ್ಸಾಹದಲ್ಲಿ ಗೆಜ್ಜೆ ಚನ್‌ಚನಿಸುತ್ತಿದ್ದರು. ಬಿರ್ಜು ಅವರು ಮೊದಲು ಬಳಸಿದ ಗೆಜ್ಜೆ, ಅವರ ಮನೆತನದಿಂದ ಬಂದ ಹತ್ತಾರು ಘುಂಘುರುಗಳು, ವೇಷಭೂಷಣ, ಬದಲಾದ ಪ್ರಸಾಧನಗಳ ಫೋಟೊಗಳು ಹೀಗೆ ಸಂಬಂಧಪಟ್ಟ ಎಲ್ಲವನ್ನೂ ಅಲ್ಲಿ ಇಡಲಾಗಿದೆ.

ಇಷ್ಟೆಲ್ಲಾ ಆಡಂಬರ ಪ್ರಕಾಶದಲ್ಲಿ ಸ್ಥಾನಿಕಗೊಂಡಿದ್ದು ಮಾತ್ರ ತಲತ್ ಮೆಹಮೂದ್‌ನ ಧ್ವನಿಯಲ್ಲಿನ ಆಳ, ನಿಮ್ಮಿಯ ಮುಖದಲ್ಲಿನ ತುಂಟ ಭಾವ ನನಗೆ ಬಲು ಪ್ರಿಯ. ‘ನಿನಗೆ ಗೊತ್ತಾ ನಟಿ ನರ್ಗೀಸ್‌ಳ ತಾಯಿ ಕೂಡ ನನ್ನ ತಂದೆಯವರ ಬಳಿಯೇ ನೃತ್ಯ ಕಲಿತದ್ದು’ ಎಂದು ಬೆಂಗಳೂರಿನಲ್ಲಿ ಸಿಕ್ಕಾಗ ಚಂಗನೆ ಜಿಗಿಯುತ್ತಾ ಹೇಳಿದರು ಬಿರ್ಜು ಅವರು.

ಸಿನೆಮಾ ರಂಗಕ್ಕೆ ಹೋಗಬೇಡ ಎಂದ ತಾಯಿಯ ಮಾತನ್ನು ಪಕ್ಕಕ್ಕಿಟ್ಟು ಮುಂಬೈಗೆ ಬಂದಾಗ ಜೇಬಿನಲ್ಲಿ ಕಿರುಗಾಸು ಇಲ್ಲದ ಇಂದಿನ ಮಹಾರಾಜ್ ಈವರೆಗೂ ಮಾಧುರಿ ದೀಕ್ಷಿತ್ ರಿಂದ ಹಿಡಿದು  ದೀಪಿಕಾಳವರೆಗೂ ನೂರಕ್ಕೂ ಹೆಚ್ಚು ಸಿನೆಮಾಗಳಿಗೆ ನೃತ್ಯ ಸಂಯೋಜನೆ ಮಾಡಿದ್ದಾರೆ. ಆದರೂ ಪ್ರೀತಿ ಮಾಡುವುದು ಮಾತ್ರ ಕಮಲಹಾಸನ್‌ನನ್ನು. ವಿಶ್ವರೂಪಂ ಸಿನೆಮಾ ಸಮಯದಲ್ಲಿ ‘ಆತ ತರಬೇತಿ ಸಮಯದಲ್ಲಿ ನೃತ್ಯ ಮಾಡುತ್ತಿದ್ದನ್ನು ನೋಡಿ ಎಷ್ಟೋ ಬಾರಿ ನಾನೇ ನರ್ತಿಸುತ್ತಿದ್ದೇನೆ ಎನ್ನಿಸಿಬಿಡುತ್ತಿತ್ತು’ ಎನ್ನುವಾಗ ಬಿರ್ಜು ಅವರ ಉಸಿರಿನಲ್ಲಿ ಜೀವ ಆಡಿದಂತೆನಿಸಿತು.

ಬೆಂಗಳೂರಿನ ಚಳಿಗೆ ಒಡೆಯುವ ಚರ್ಮ, ಲಕ್ನೋದ ಬಿಸಿಲಿಗೆ ಕರಕಾಗುವ ತ್ವಚೆ, ಕ್ಯಾಲೆಂಡರ್ ಓಟಕ್ಕೆ ಪೈಪೋಟಿ ನೀಡುತ್ತಾ ತೆಳುವಾಗುತ್ತಿರುವ ನೆತ್ತಿ ಇವುಗಳ ಸಹವಾಸದೊಂದಿಗೆ ನೆನಪಾಗುತ್ತೆ ಅವತ್ತು ಬಿರ್ಜು ಅವರು ಹೇಳಿದ ಮತ್ತೊಂದು ಮಾತು. ನಲವತ್ತರ ಆಸುಪಾಸಿನ ದಿನಗಳಲ್ಲಿ ಅವರಿಗೆ ಹೊಟ್ಟೆ ಬಂದು, ಕಣ್ಣ ಕೆಳಗೆ ಚೀಲ ಕಾಣಿಸಿಕೊಂಡಿತ್ತು. ಅಮೇರಿಕಾದಿಂದ ಇವರ ತಂಡವನ್ನು ಕಾರ್ಯಕ್ರಮವೊಂದಕ್ಕೆ ಆಯ್ಕೆ ಮಾಡಲು ಬಂದಿದ್ದ ಆಯೋಜಕರು ಇವರ ರೂಪು ನೋಡಿ ‘ಬೇಡ’ ಎಂದು ಬಿಟ್ಟರಂತೆ. ಆದರೆ ನಾಟ್ಯ ನೋಡಿದ ನಂತರ ಒಪ್ಪಿದ್ದರೂ ನಿತ್ಯವೂ ಇವರು ಸಪೂರ ಸುಂದರ ದೇಹಕ್ಕಾಗಿ ಹಪಹಪಿಸುವುದು ತಪ್ಪಲಿಲ್ಲವಂತೆ.

ಹೀಗೆ ನಾಟ್ಯಕ್ಕೆ ಜೀವ ತುಂಬಿದ ಮಾಂತ್ರಿಕನ ಶಿಷ್ಯೆ ವೀಣಾ ಭಟ್ ಈ ಎಲ್ಲಾ ಆಗುಗಳಿಗೆ ಕಾರಣಳಾದ, ಜೊತೆಯಾದ ಗೆಳತಿ. ಅವಳಿಂದ ಸಾಮಿಪ್ಯ ಸಿಕ್ಕಿದ್ದ ಬಿರ್ಜು ಮಹರಾಜ್, ಕಳೆದ ವಾರ ದೇಹದಲ್ಲಿನ ಪಯಣ ಮುಗಿಸಿ ಹೋಗಿದ್ದಾರೆ. ಆದರೆ ಅವರೇ ಕರೆಸಿಕೊಂಡಿದ್ದ ಲಕ್ನೋ ನಗರದಿಂದ ಮತ್ತೂ ಆಸಕ್ತಿ ಹುಟ್ಟಿಸಿದ ಮತ್ತೆರಡು ನಗರಗಳಿಗೆ ನನ್ನ ಪ್ರಯಾಣವನ್ನು ಮುಂದುವರೆಸುತ್ತಾ….