ನನ್ನ ಕುರಿತಾದ ಈ ಆವಿಷ್ಕಾರದಿಂದ ನನಗೇನು ಅಚ್ಚರಿಯಾಗಲಿಲ್ಲ. ಸ್ವಂತ ದೃಷ್ಟಿಕೋನವನ್ನು ಬೆಳೆಸಿಕೊಳ್ಳುವುದು ಅಷ್ಟು ಸುಲಭವಲ್ಲ. ಆದರೆ ಹರೆಯದ ಯುವಕನಾಗಿದ್ದಾಗ ಈ ಅಸಾಮಾರ್ಥ್ಯ ನನ್ನೊಳಗೊಂದು ಅಸಹನೆ, ಅತೃಪ್ತಿಯನ್ನು ಹುಟ್ಟುಹಾಕಿತ್ತು. ನನ್ನದೇ ರೀತಿಯಲ್ಲಿ ಎಲ್ಲವನ್ನೂ ನೋಡಬೇಕು ಎನ್ನುವ ಹಠ ನನ್ನಲ್ಲಿ ಅಸಹನೆಯನ್ನು ಬೆಳೆಸಿತ್ತು. ಪ್ರತಿಯೊಂದು ಚಿತ್ರಪ್ರದರ್ಶನಕ್ಕೆ ಹೋದಾಗಲೂ ಜಪಾನಿನ ಪ್ರತಿ ಚಿತ್ರಕಲಾವಿದನು ತನ್ನದೇ ಆದ ಶೈಲಿ ಹಾಗೂ ಸ್ವಂತ ದೃಷ್ಟಿಕೋನವನ್ನು ಹೊಂದಿದ್ದಾನೆ ಅನ್ನಿಸುತ್ತಿತ್ತು. ಇದರಿಂದ ಹೆಚ್ಚೆಚ್ಚು ಕಿರಿಕಿರಿಯಾಗುತ್ತಿತ್ತು.
ಹೇಮಾ.ಎಸ್. ಅನುವಾದಿಸಿರುವ ಅಕಿರ ಕುರಸೋವ ಆತ್ಮಕತೆಯ ಅಧ್ಯಾಯ.

 

ಒಂದು ವೇಳೆ ಆ ರೀತಿ ಆಗದಿದ್ದರೆ….? ಈಗಲೂ ನನಗೆ ಕೆಲವೊಮ್ಮೆ ಅಚ್ಚರಿಯಾಗುತ್ತದೆ. ಒಂದು ವೇಳೆ ನನ್ನಣ್ಣ ಆತ್ಮಹತ್ಯೆ ಮಾಡಿಕೊಳ್ಳದಿದ್ದರೆ ನನ್ನ ಹಾಗೆ ಸಿನೆಮಾ ಪ್ರಪಂಚದೊಳಗೆ ಹೆಜ್ಜೆ ಇಡುತ್ತಿದ್ದನೇ? ಅವನಿಗೆ ಸಿನೆಮಾಗಳ ಬಗ್ಗೆ ಬಹಳಷ್ಟು ತಿಳಿದಿತ್ತು. ಸಿನೆಮಾ ಕಲೆಯನ್ನು ಅರ್ಥಮಾಡಿಕೊಳ್ಳುವಷ್ಟು ಪ್ರತಿಭೆ ಇತ್ತು. ಸಿನೆಮಾ ಪ್ರಪಂಚದಲ್ಲಿ ಅವನನ್ನು ಮೆಚ್ಚುತ್ತಿದ್ದ ಹಲವು ಸ್ನೇಹಿತರಿದ್ದರು. ಅವನಿಗಿನ್ನೂ ಚಿಕ್ಕವಯಸ್ಸು. ಅವನು ಬಯಸಿದ್ದರೆ ಖಂಡಿತ ದೊಡ್ಡಹೆಸರು ಮಾಡುತ್ತಿದ್ದ.

ಆದರೆ ಅವನೊಮ್ಮೆ ನಿರ್ಧಾರ ಮಾಡಿಬಿಟ್ಟ ಮೇಲೆ ಯಾರೂ ಅವನ ಮನಸ್ಸನ್ನು ಬದಲಿಸಲು ಸಾಧ್ಯವಿರಲಿಲ್ಲ. ಮಾಧ್ಯಮಿಕ ಶಾಲೆಯ ಪ್ರವೇಶ ಪರೀಕ್ಷೆಯಲ್ಲಿ ಪ್ರತಿಭಾವಂತ ವಿದ್ಯಾರ್ಥಿಯಾಗಿದ್ದು ಅನುತ್ತೀರ್ಣನಾಗಿದ್ದ. ಆ ಮೊದಲ ಸೋಲನ್ನೇ ಅವನಿಂದ ಅರಗಿಸಿಕೊಳ್ಳಲಾಗಿರಲಿಲ್ಲ. ಆ ಸಮಯದಲ್ಲೇ ಅವನು ಬದುಕಿನ ಕುರಿತು ಬಹಳ ಜಾಣತನದ ಆದರೆ ನಿರಾಶಾವಾದದ ದೃಷ್ಟಿಕೋನವನ್ನು ಬೆಳೆಸಿಕೊಂಡಿದ್ದ. ಮನುಷ್ಯ ಶ್ರಮವೆಲ್ಲ ವ್ಯರ್ಥ ಅದು ಗೋರಿಯ ಮೇಲಿನ ನರ್ತನದಂತೆ ಎಂದು ನಿರ್ಧರಿಸಿಬಿಟ್ಟಿದ್ದ. The Last Lineನ ನಾಯಕ ತನ್ನದೇ ತತ್ವದೃಷ್ಟಿಯನ್ನು ಹೇಳುತ್ತಿದ್ದಾನೆ ಅಂದತಕ್ಷಣ ಅದಕ್ಕೆ ಇನ್ನಷ್ಟು ಗಾಢವಾಗಿ ಅಂಟಿಕೊಂಡುಬಿಟ್ಟ. ನನ್ನಣ್ಣನಿಗೆ ಎಲ್ಲ ವಿಷಯಗಳ ಬಗೆಗೂ ಬಹುಬೇಗ ನಿರಾಸಕ್ತಿ ಹುಟ್ಟಿಬಿಡುತ್ತಿತ್ತು. ಅವನೆಂದೋ ಹೇಳಿದ ಮಾತಿಗೆ ಅವನು ಜೋತುಬೀಳುತ್ತಿರಲಿಲ್ಲ. ತನ್ನ ಪ್ರಾಪಂಚಿಕ ಬದುಕಿನ ವ್ಯವಹಾರಗಳೆಲ್ಲ ಛಿದ್ರವಾಗಿ ತಾನೆಂದೂ ಇಷ್ಟಪಡದ ರೀತಿಯಲ್ಲಿ ಕುರೂಪವಾಗುತ್ತಿರುವುದನ್ನು ಕಂಡುಕೊಂಡಿದ್ದ.

ಕೆಲವರ್ಷಗಳ ನಂತರ  ಯಮಮಾಟೊ ಕಜ್ರೊ (Yamamoto Kajiro ) ಅವರ Tsuzurikata kyoshitsu (Compostion Class, 1938) ಎನ್ನುವ ಚಿತ್ರಕ್ಕೆ ಮುಖ್ಯ ಸಹನಿರ್ದೇಶಕನಾಗಿ ಕೆಲಸ ಮಾಡುತ್ತಿದ್ದೆ. ಅದರ ನಾಯಕ ಟೊಕುಗಾವಾ ಮ್ಯೂಸಿ (Tokugawa Musei). ಆತ ಮೂಕಿ ಚಿತ್ರಗಳ ಜನಪ್ರಿಯ ನಿರೂಪಕ. ಒಂದು ದಿನ ಆತ ನನ್ನನ್ನು ದೀರ್ಘವಾಗಿ ಕುತೂಹಲದಿಂದ ನಿಟ್ಟಿಸಿ “ನೀನು ನಿಮ್ಮಣ್ಣನ ತರಹಾನೆ. ಆದರೆ ಆತ ನೆಗಟೀವ್ ನೀನು ಪಾಸಿಟೀವ್” ಅಂದರು. ನನ್ನಣ್ಣನ ಪ್ರಭಾವ ನನ್ನ ಮೇಲಾಗಿರುವುದನ್ನು ಕುರಿತು ಹೇಳುತ್ತಿರಬಹುದು ಎಂದುಕೊಂಡೆ. ಆತ ಮುಂದುವರೆದು ನೀವಿಬ್ಬರೂ ನೋಡಲು ಒಂದೇ ತರಹ ಇದ್ದೀರಿ. ಆದರೆ ನಿನ್ನಣ್ಣನ ಮುಖಭಾವದಲ್ಲಿ ವಿಷಾದದ ಛಾಯೆಯಿತ್ತು. ಅವನ ವ್ಯಕ್ತಿತ್ವದಲ್ಲೂ ಅದು ಕಾಣುತ್ತಿತ್ತು. ನನ್ನ ವ್ಯಕ್ತಿತ್ವ ಹಾಗೂ ಮುಖ ಅವನದಕ್ಕೆ ತದ್ವಿರುದ್ಧವಾಗಿ ಪ್ರಕಾಶಮಾನವಾಗಿ ಖುಷಿಯಿಂದ ಕಳೆಕಳೆಯಾಗಿದೆ ಅಂತ ಮ್ಯೂಸಿಗೆ ಅನ್ನಿಸಿತು.

ವೆಕ್ಸಾ ಕೆಯ್ನೊಸ್ಕೆ (Uekusa Keinosuke) ಕೂಡ ನನ್ನ ವ್ಯಕ್ತಿತ್ವ ಸೂರ್ಯಕಾಂತಿಯ ಹಾಗಿದೆ ಅಂದಿದ್ದ. ಅವರು ಹೇಳಿದ್ದರಲ್ಲಿ ನಿಜವಿರಬಹುದು. ನಾನು ನನ್ನಣ್ಣಗಿಂತ ಹೆಚ್ಚು ಆಶಾವಾದಿ. ಆದರೆ ನನಗನ್ನಿಸುವುದು ನನ್ನಣ್ಣ ಛಾಯಾಚಿತ್ರದ ನೆಗಟೀವ್ ನಂತಾದರೆ ನಾನು ಅದರಿಂದ ಪ್ರಿಂಟಾದ ಪಾಸಿಟೀವ್ ಚಿತ್ರ.

ನನ್ನಣ್ಣ ಸತ್ತಾಗ ನನಗೆ ಇಪ್ಪತ್ತ ಮೂರು ವರ್ಷ. ಚಿತ್ರ ಜಗತ್ತನ್ನು ಪ್ರವೇಶಿಸಿದಾಗ ಇಪ್ಪತ್ತಾರು ವರ್ಷ. ನಡುವಿನ ಮೂರು ವರ್ಷಗಳಲ್ಲಿ ಬದುಕಿನಲ್ಲಿ ಮಹತ್ವವಾದದ್ದೇನು ನಡೆಯಲಿಲ್ಲ. ನನ್ನಣ್ಣನ ಆತ್ಮಹತ್ಯೆಯೊಂದೇ ಮುಖ್ಯವಾದ ಘಟನೆ. ಬಹಳ ದಿನಗಳಿಂದ ಸುದ್ದಿಯೇ ಇರದಿದ್ದ ದೊಡ್ಡಣ್ಣ ಕೂಡ ಕಾಯಿಲೆಯಿಂದ ಸತ್ತ ಎನ್ನುವ ಸುದ್ದಿ ಬಂತು. ಇಬ್ಬರು ಅಣ್ಣಂದಿರು ಸತ್ತು ಹೋದದ್ದರಿಂದ ಮನೆಗೆ ನಾನೊಬ್ಬನೇ ಮಗನಾಗಿಬಿಟ್ಟೆ. ಅಪ್ಪ ಅಮ್ಮನ ಜವಾಬ್ದಾರಿ ಸಂಪೂರ್ಣ ನನ್ನದಾಯಿತು. ಗುರಿ ಇಲ್ಲದ ನನ್ನ ಬದುಕಿನ ಕುರಿತು ನನಗೆ ಅಸಹನೆ ಉಂಟಾಗತೊಡಗಿತು.

ಆಗಿನ ಕಾಲದಲ್ಲಿ ಕಲಾವಿದನಾಗಿ ಯಶಸ್ಸುಗಳಿಸುವುದು ಇನ್ನೂ ಕಷ್ಟವಿತ್ತು. ಚಿತ್ರಕಲಾವಿದನಾಗಿ ನನ್ನ ಸಾಮರ್ಥ್ಯದ ಬಗ್ಗೆ ನನಗೆ ಅನುಮಾನಗಳು ಶುರುವಾಯಿತು. ಸಿಜಾ಼ನ್ ನ  (Cezanne) ಕುರಿತಾದ ಪ್ರಬಂಧವನ್ನು ಓದಿದ ನಂತರ. ಮನೆಯಿಂದ ಹೊರಗೆ ಅಡಿಯಿಟ್ಟಕೂಡಲೇ ಕಾಣುವ ಮನೆಗಳು, ಬೀದಿಗಳು, ಮರಗಳು ಎಲ್ಲವೂ ಅವನ ಚಿತ್ರಗಳಂತೆ ಕಾಣಲಾರಂಭಿಸಿದವು. ವ್ಯಾನ್ ಗೊ (Van Gogh) ಅಥವ ಉಟ್ರಿಲ್ಲೊ (Utrillo) ಚಿತ್ರಗಳನ್ನು ನೋಡಿದಾಗಲೂ ಹೀಗೆ ಅನ್ನಿಸುತ್ತಿತ್ತು. ಅವು ಪ್ರಪಂಚವನ್ನು ನೋಡುತ್ತಿದ್ದ ನನ್ನ ದೃಷ್ಟಿಕೋನವನ್ನೇ ಬದಲಿಸಿತು. ಸಾಮಾನ್ಯವಾಗಿ ನಾನು ನೋಡುತ್ತಿದ್ದ ಪ್ರಪಂಚಕ್ಕಿಂತ ಇದು ಭಿನ್ನವಾಗಿತ್ತು. ಇನ್ನೂ ಸ್ಪಷ್ಟವಾಗಿ ಹೇಳಬೇಕೆಂದರೆ ನನಗೆ ಇಂದಿಗೂ ವಸ್ತುಗಳನ್ನು ಸಂಪೂರ್ಣವಾಗಿ ನನ್ನದೇ ರೀತಿಯಲ್ಲಿ ಭಿನ್ನವಾಗಿ ನೋಡಲು ಬರುವುದಿಲ್ಲ.

(ಯಮಮಾಟೊ ಕಜ್ರೊ)

ನನ್ನ ಕುರಿತಾದ ಈ ಆವಿಷ್ಕಾರದಿಂದ ನನಗೇನು ಅಚ್ಚರಿಯಾಗಲಿಲ್ಲ. ಸ್ವಂತ ದೃಷ್ಟಿಕೋನವನ್ನು ಬೆಳೆಸಿಕೊಳ್ಳುವುದು ಅಷ್ಟು ಸುಲಭವಲ್ಲ. ಆದರೆ ಹರೆಯದ ಯುವಕನಾಗಿದ್ದಾಗ ಈ ಅಸಾಮಾರ್ಥ್ಯ ನನ್ನೊಳಗೊಂದು ಅಸಹನೆ, ಅತೃಪ್ತಿಯನ್ನು ಹುಟ್ಟುಹಾಕಿತ್ತು. ನನ್ನದೇ ರೀತಿಯಲ್ಲಿ ಎಲ್ಲವನ್ನೂ ನೋಡಬೇಕು ಎನ್ನುವ ಹಠ ನನ್ನಲ್ಲಿ ಅಸಹನೆಯನ್ನು ಬೆಳೆಸಿತ್ತು. ಪ್ರತಿಯೊಂದು ಚಿತ್ರಪ್ರದರ್ಶನಕ್ಕೆ ಹೋದಾಗಲೂ ಜಪಾನಿನ ಪ್ರತಿ ಚಿತ್ರಕಲಾವಿದನು ತನ್ನದೇ ಆದ ಶೈಲಿ ಹಾಗೂ ಸ್ವಂತ ದೃಷ್ಟಿಕೋನವನ್ನು ಹೊಂದಿದ್ದಾನೆ ಅನ್ನಿಸುತ್ತಿತ್ತು. ಇದರಿಂದ ಹೆಚ್ಚೆಚ್ಚು ಕಿರಿಕಿರಿಯಾಗುತ್ತಿತ್ತು.

ಈಗ ಆ ದೃಶ್ಯವನ್ನು ಮತ್ತೆ ನೆನಪಿಸಿಕೊಂಡಾಗ ನಾನು ನೋಡಿದ ಚಿತ್ರಕಾರರ ಕೃತಿಗಳಲ್ಲಿ ಕೆಲವರಿಗೆ ಮಾತ್ರ ಸ್ವಂತಿಕೆ ಸಾಧ್ಯವಾಗಿತ್ತು ಎನ್ನುವುದು ಅರಿವಾಗುತ್ತದೆ. ಹಲವರು ಹಲವು ಬಗೆಯ ತಂತ್ರಗಳನ್ನು ತಮ್ಮ ಕಲೆಯ ಮೇಲೆ ಹೇರಿದ್ದರು. ಹಾಗಾಗಿ ಆ ಚಿತ್ರಗಳಲ್ಲಿ ಆತ್ಮವೇ ಇರಲಿಲ್ಲ. ಅದೊಂದು ಹಾಡು ಬರೆದವರು ಯಾರು ನೆನಪಾಗುತ್ತಿಲ್ಲ. ಒಬ್ಬನಿಗೆ ಕೆಂಪು ಬಣ್ಣವನ್ನು ಸರಿಯಾಗಿ ಇದೇ ಕೆಂಪು ಎಂದು ಗುರುತಿಸಲು ಬರುತ್ತಿರುವುದಿಲ್ಲ. ಇದೇ ಅನಿಶ್ಚಿತತೆಯಲ್ಲಿ ಅವನು ವರ್ಷಗಳನ್ನು ಕಳೆದುಬಿಡುತ್ತಾನೆ. ಕಡೆಗೂ ಅವನು ಆ ಬಣ್ಣವನ್ನು ಗುರುತಿಸುವುದನ್ನು ಕಲಿಯುವ ವೇಳೆಗೆ ಮುದುಕನಾಗಿರುತ್ತಾನೆ. ಇದು ಕೂಡ ಅದೇ ತರಹ. ಹರೆಯದಲ್ಲಿ ಸ್ವ-ಅಭಿವ್ಯಕ್ತಿಯ ಬಯಕೆ ಎಷ್ಟು ತೀವ್ರವಾಗಿರುತ್ತದೆಂದರೆ ಹಲವರು ತೋರಿಕೆಯ ಭರದಲ್ಲಿ ತಮ್ಮ ಸ್ವಂತಿಕೆಯನ್ನು ಕಳೆದುಕೊಂಡು ಬಿಡುತ್ತಾರೆ. ನಾನು ಕೂಡ ಇದಕ್ಕೆ ಹೊರತಲ್ಲ. ತಾಂತ್ರಿಕತೆಗೆ ಒತ್ತು ಕೊಟ್ಟು ಚಿತ್ರಗಳನ್ನು ಬರೆಯುತ್ತಾ ಹೋದೆ. ಅವೆಲ್ಲ ನನ್ನ ಬಗೆಗಿನ ಅತೃಪ್ತಿಯನ್ನು ಹೆಚ್ಚಿಸಿದವು ಅಷ್ಟೇ. ನಿಧಾನವಾಗಿ ನನ್ನ ಸಾಮರ್ಥ್ಯದ ಬಗ್ಗೆ ನಂಬಿಕೆ ಕಳೆದುಕೊಳ್ಳಲಾರಂಭಿಸಿದೆ. ಕ್ರಮೇಣವಾಗಿ ಚಿತ್ರ ಬರೆಯುವುದೇ ನೋವಿನ ಸಂಗತಿಯಾಗಿಬಿಟ್ಟಿತು.

ಇಬ್ಬರು ಅಣ್ಣಂದಿರು ಸತ್ತು ಹೋದದ್ದರಿಂದ ಮನೆಗೆ ನಾನೊಬ್ಬನೇ ಮಗನಾಗಿಬಿಟ್ಟೆ. ಅಪ್ಪ ಅಮ್ಮನ ಜವಾಬ್ದಾರಿ ಸಂಪೂರ್ಣ ನನ್ನದಾಯಿತು. ಗುರಿ ಇಲ್ಲದ ನನ್ನ ಬದುಕಿನ ಕುರಿತು ನನಗೆ ಅಸಹನೆ ಉಂಟಾಗತೊಡಗಿತು.

ಕ್ಯಾನ್ವಾಸ್ ಹಾಗೂ ಬಣ್ಣಗಳನ್ನು ಕೊಳ್ಳುವ ಸಲುವಾಗಿ ಹಣಕ್ಕಾಗಿ ಭಯಂಕರ ಬೇಸರ ಹುಟ್ಟಿಸುವ ಕೆಲಸಗಳನ್ನು ಮಾಡಬೇಕಾಯಿತು. ಪತ್ರಿಕೆಗಳಿಗೆ ಚಿತ್ರ ಬರೆಯುವುದು, ಅಡುಗೆ ತರಗತಿಗಳಲ್ಲಿ ಮೂಲಂಗಿ ಕತ್ತರಿಸುವುದು ಹೇಗೆ ಎಂದು ಪಾಠ ಹೇಳಲು ಅನುಕೂಲವಾಗುವಂತಹ ಚಿತ್ರಗಳನ್ನು ಬರೆಯುವುದು ಮತ್ತು ಬೇಸ್ ಬಾಲ್ ಪತ್ರಿಕೆಗಳಿಗೆ ವ್ಯಂಗ್ಯಚಿತ್ರಗಳನ್ನು ಬರೆಯುವುದು ಈ ರೀತಿಯ ಕೆಲಸಗಳನ್ನು ಮಾಡಬೇಕಾಯಿತು. ಈ ರೀತಿಯ ಚಿತ್ರಗಳನ್ನು ಬರೆಯಲು ನನ್ನಲ್ಲಿ ಉತ್ಸಾಹವಾಗಲಿ ಆಸಕ್ತಿಯಾಗಲಿ ಇರಲಿಲ್ಲ. ಇಂತಹ ಚಿತ್ರಗಳನ್ನು ಬರೆಯಲು ಸಮಯ ವಿನಿಯೋಗಿಸಬೇಕಾಗಿ ಬಂದದ್ದರಿಂದ ಚಿತ್ರ ಬರೆಯಬೇಕೆನ್ನುವ ನನ್ನ ಆಸಕ್ತಿ ಮತ್ತಷ್ಟು ಕುಂದಿತು.

ಬೇರೆ ಯಾವುದಾದರೂ ಕೆಲಸಕ್ಕೆ ಹೋಗುವ ಕುರಿತು ಯೋಚಿಸಲಾರಂಭಿಸಿದೆ. ಮನಸ್ಸಿನ ಆಳದಲ್ಲಿ ಯಾವ ಕೆಲಸವಾದರೂ ಸರಿ. ಅಪ್ಪ ಅಮ್ಮನಿಗೆ ನೆಮ್ಮದಿ ಸಿಕ್ಕರೆ ಸರಿ ಅನ್ನಿಸಲಾರಂಭಿಸಿತು. ನನ್ನಣ್ಣನ ದಿಢೀರ್ ಸಾವಿನಿಂದ ಈ ಯೋಚನೆ ಇನ್ನಷ್ಟು ತೀವ್ರವಾಯಿತು. ನಾನೇನೂ ಮಾಡುತ್ತಿಲ್ಲ ಅನ್ನುವುದು ಅಣ್ಣನ ಆತ್ಮಹತ್ಯೆಯಿಂದಾಗಿ ಇನ್ನಷ್ಟು ಚುಚ್ಚಲಾರಂಭಿಸಿತು. ಇದು ನನ್ನ ಬದುಕಿನ ಅಪಾಯಕಾರಿ ತಿರುವು ಅನ್ನಿಸಲಾರಂಭಿಸಿತು.

ಎಲ್ಲೂ ನಮ್ಮಪ್ಪ ನನ್ನ ಕೈಬಿಡಲಿಲ್ಲ. ನನಗೆ ಹೆದರಿಕೆ ಹೆಚ್ಚಾದಾಗೆಲ್ಲ ಅವರು ಹೇಳುತ್ತಿದ್ದರು “ಹೆದರಬೇಡ. ರೋಮಾಂಚನವಾಗುವಂಥದ್ದು ಏನೂ ಇಲ್ಲ. ತಾಳ್ಮೆಯಿಂದ ಕಾದರೆ ನನ್ನ ಬದುಕಿನ ದಾರಿ ತನ್ನಂತೆ ತಾನೇ ತೆರೆಯುತ್ತದೆ” ಎಂದು ಹೇಳುತ್ತಿದ್ದರು. ಅವರ ಬದುಕಿನ ಕಡೆಗಿನ ದೃಷ್ಟಿಕೋನವೇನು, ಅವರು ಯಾಕೆ ಹೀಗೆ ಹೇಳುತ್ತಿದ್ದಾರೆ ಅಂತ ಗೊತ್ತಿರಲಿಲ್ಲ. ಬಹುಶಃ ತಮ್ಮ ಬದುಕಿನ ಅನುಭವದ ಹಿನ್ನಲೆಯಲ್ಲಿ ಹೀಗೆ ಹೇಳಿರಬಹುದು. ಅವರು ಹೇಳಿದ್ದು ಮಾತ್ರ ನೂರಕ್ಕೆ ನೂರರಷ್ಟು ನಿಜವಾಯಿತು.

(ವೆಕ್ಸಾ ಕೆಯ್ನೊಸ್ಕೆ)

1935 ದಿನಪತ್ರಿಕೆಯನ್ನು ಓದುತ್ತಿದ್ದೆ. ಜಾಹಿರಾತೊಂದು ಗಮನ ಸೆಳೆಯಿತು. P.C.L. (ಎಂದೇ ಅದನ್ನು ಎಲ್ಲರೂ ಕರೆಯುತ್ತಿದ್ದರು. ಅದರ ಪೂರ್ಣ ಹೆಸರು Photo Chemical Laboratory) ಫಿಲ್ಮ್ ಸ್ಟುಡಿಯೋ ಸಹಾಯಕ ನಿರ್ದೇಶಕರನ್ನು ನೇಮಕ ಮಾಡಿಕೊಳ್ಳಲು ಜಾಹಿರಾತು ನೀಡಿತ್ತು. ಆ ಕ್ಷಣದವರೆಗೂ ಸಿನೆಮಾ ಉದ್ಯಮಕ್ಕೆ ಕಾಲಿಡುವ ಕುರಿತು ಯೋಚಿಸಿರಲಿಲ್ಲ. ಆ ಜಾಹಿರಾತನ್ನು ನೋಡಿದ ತಕ್ಷಣ ನನ್ನಲ್ಲಿ ಆಸಕ್ತಿ ಮೂಡಿತು. ಆ ಜಾಹಿರಾತಿನ ಪ್ರಕಾರ ಅಲ್ಲಿ ಕೆಲಸಕ್ಕೆ ಆಯ್ಕೆಯಾಗುವ ಉದ್ಯೋಗಿಗಳಿಗೆ ಮೊದಲ ಪರೀಕ್ಷೆ ಪ್ರಬಂಧ ಬರೆಯುವುದಾಗಿತ್ತು. ಪ್ರಬಂಧದ ವಿಷಯ ಜಪಾನಿ ಸಿನೆಮಾದಲ್ಲಿನ ಮೂಲಭೂತ ನ್ಯೂನ್ಯತೆಗಳು. ಈ ನ್ಯೂನ್ಯತೆಗಳಿಗೆ ಉದಾಹರಣೆಗಳನ್ನು ನೀಡಿ ಅವುಗಳನ್ನು ಸರಿಪಡಿಸಬಹುದಾದ ದಾರಿಗಳನ್ನು ಸೂಚಿಸಬೇಕಿತ್ತು. ಇದು ನನ್ನಲ್ಲಿ ಆಸಕ್ತಿ ಹುಟ್ಟಿಸಿತು. ಈ ಪ್ರಶ್ನೆಯಿಂದಾಗಿ ಹೊಸದಾಗಿ ಹುಟ್ಟಿದ P.C.L. ಕಂಪನಿಯಲ್ಲಿನ ಯುವಮನಸ್ಸುಗಳ ಹುಮ್ಮಸ್ಸಿನ ಸುಳಿವು ಸಿಕ್ಕಂತಾಯಿತು. ಅವರು ಪ್ರಬಂಧಕ್ಕೆ ಕೊಟ್ಟ ವಿಷಯದ ಕುರಿತು ನಾನು ಮಾತಾಡಬಹುದೆನಿಸಿತು. ಜೊತೆಗೆ ನನ್ನೊಳಗಿನ ತುಂಟತನ ಗರಿಗೆದರಿತು. ನ್ಯೂನ್ಯತೆಗಳು ಮೂಲಭೂತವಾದದ್ದು ಎನ್ನುವುದಾದರೆ ಅವುಗಳನ್ನು ಸರಿಪಡಿಸುವುದು ಸಾಧ್ಯವಿಲ್ಲ. ಹಾಗಾಗಿ ಅರ್ಧವ್ಯಂಗ್ಯ ಮಿಶ್ರಿತ ಶೈಲಿಯಲ್ಲಿ ಬರೆಯಲು ಕುಳಿತೆ.

ಪ್ರಬಂಧದಲ್ಲಿ ಏನು ಬರೆದಿದ್ದೆ ಸರಿಯಾಗಿ ನೆನಪಿಲ್ಲ. ಆದರೆ ಅಣ್ಣನ ಮಾರ್ಗದರ್ಶನದಲ್ಲಿ ವಿದೇಶಿ ಚಿತ್ರಗಳ ರುಚಿ ನೋಡಿದ್ದೆ. ಸಿನಿಮಾ ಪ್ರೇಮಿಯಾಗಿ ಜಪಾನಿ ಸಿನಿಮಾದ ಹಲವು ವಿಷಯಗಳ ಕುರಿತು ನನಗೆ ಅತೃಪ್ತಿಯಿತ್ತು. ನನ್ನೊಳಗಿದ್ದ ಅತೃಪ್ತಿಯನ್ನೆಲ್ಲ ಹೊರಹಾಕಿದ್ದೆ. ಪ್ರಬಂಧ ಬರೆದ ಸಮಯವನ್ನು ಬಹಳ ಖುಷಿಯಿಂದ ಅನುಭವಿಸಿದ್ದೆ. ಪರೀಕ್ಷೆಯ ಈ ಪ್ರಬಂಧದ ಜೊತೆಯಲ್ಲಿ ಸಹಾಯಕ ನಿರ್ದೇಶಕ ಹುದ್ದೆಯ ಅಭ್ಯರ್ಥಿಯು ತನ್ನ ವ್ಯಕ್ತಿಗತ ವಿವರಗಳು ಹಾಗೂ ಕುಟುಂಬ ವಿವರಗಳ ಕುರಿತ ಮಾಹಿತಿಯನ್ನು ಒದಗಿಸಬೇಕಿತ್ತು. ಯಾವ ಕೆಲಸವಾದರೂ ಸರಿ ಸೇರುತ್ತೇನೆ ಎಂದು ನಿರ್ಧರಿಸಿದ್ದರಿಂದ ಈ ಎಲ್ಲ ದಾಖಲೆಗಳು ಮೇಜಿನ ಮೇಲೆ ಸಿದ್ಧವಾಗಿ ಕೂತಿದ್ದವು. ಅವುಗಳನ್ನು ಪ್ರಬಂಧದ ಜೊತೆಯಲ್ಲಿ P.C.Lಗೆ ಅಂಚೆಯ ಮುಖಾಂತರ ಕಳಿಸಿದೆ.

ಕೆಲವು ತಿಂಗಳುಗಳ ನಂತರ ಎರಡನೆಯ ಸುತ್ತಿನ ಪರೀಕ್ಷೆಗೆ ಹಾಜರಾಗಲು ಸೂಚಿಸಿ ಪತ್ರ ಬಂದಿತು. ನಿಗದಿತ ದಿನಾಂಕದಂದು ನಿಗದಿತ ಸಮಯಕ್ಕೆ ಸರಿಯಾಗಿ P.C.L ಸ್ಟೂಡಿಯೋಗೆ ಹಾಜರಾಗಲು ತಿಳಿಸಲಾಗಿತ್ತು. ಯಾವುದೋ ಅದೃಷ್ಟದಿಂದ ಆ ರೀತಿಯ ಪ್ರಬಂಧ ಬರೆದು ಅದು ಒಪ್ಪಿತವಾಗಿತ್ತು. ಪತ್ರದಲ್ಲಿನ ಆದೆಶದಂತೆ P.C.L ಸ್ಟುಡಿಯೋಗೆ ಹೋದೆ.

ಸಿನಿಮಾ ಪತ್ರಿಕೆಯೊಂದರಲ್ಲಿ ಒಮ್ಮೆ P.C.L ಸ್ಟುಡಿಯೋದ ಚಿತ್ರ ನೋಡಿದ್ದೆ. ಆ ಚಿತ್ರದಲ್ಲಿ ಬಿಳಿ ಬಣ್ಣದ ಕಟ್ಟದ ಮುಂದೆ ತಾಳೆ ಮರಗಳಿದ್ದವು. ಅದನ್ನು ನೋಡಿ ಈ ಕಟ್ಟಡ ಬಹುಶಃ ಟೊಕಿಯೊದಿಂದ ಬಹುದೂರದಲ್ಲಿರುವ ಚಿಬಾ ಪ್ರದೇಶದಲ್ಲಿರುವ ಸಮುದ್ರ ತೀರದಲ್ಲಿರಬೇಕು ಎಂದುಕೊಂಡೆ. ಆದರೆ ಅದು ಇದ್ದದ್ದು ನಗರದ ನೈಋತ್ಯಭಾಗದ ಅತ್ಯಂತ ನೀರಸ ಪ್ರದೇಶದಲ್ಲಿ. ಜಪಾನಿ ಸಿನೆಮಾ ಉದ್ಯಮದ ವಾಸ್ತವದ ಬಗ್ಗೆ ಅದೆಷ್ಟು ಅಲ್ಪಜ್ಞಾನಿಯಾಗಿದ್ದೆ! ಆ ಉದ್ಯಮದಲ್ಲಿ ಕೆಲಸ ಮಾಡುತ್ತೇನೆಂದು ಕನಸಲ್ಲಿಯೂ ಎಣಿಸಿರಲಿಲ್ಲ! P.C.L. ಸ್ಟುಡಿಯೋಗೆ ಹೋದೆ. ಅಲ್ಲಿ ನನ್ನ ಬದುಕಿನ ಅತ್ಯುತ್ತಮ ಗುರು “ಯಮ ಸ್ಯಾನ್” (Yama-san) ಅವರನ್ನು ಭೇಟಿಯಾದೆ. ಈತ Yamamoto Kajiro ಚಿತ್ರ ನಿರ್ದೇಶಕ.