ಹಿಂದೆ ಒಬ್ಬ ಮಹಿಳೆ ನದಿ ತಟದಲ್ಲಿ ಕೂತಿದ್ದಾಗ ಆಮೆಯೇ ನದಿಯ ಮೇಲೆ ಬಂದು ತನ್ನ ಕವಚವನ್ನು ಕೊಟ್ಟಿತಂತೆ. ಅದನ್ನವಳು ತಂದು ತನ್ನ ಹಿಮ್ಮಡಿಗೆ ತೊಟ್ಟಳು. ನಡಿಗೆಗೆ ಅದರ ಸದ್ದಿಗೆ ಒಂದು ಲಯ ಹುಟ್ಟಿತು. ಅವಳಿಗೆ ಅದರೊಳಗೆ ಸಣ್ಣಗೆಜ್ಜೆ ಸದ್ದಿರಬೇಕು ಅನ್ನಿಸಿತು. ಝುಳುಝುಳು ಹರಿವ ನದಿಯ ಬಳಿ ಹೋಗಿ ನಯವಾದ ಕಲ್ಲುಗಳನ್ನು ಕೊಡು ಎಂದು ಕೇಳಿದಳಂತೆ. “ನಾನು ನಲಿಯಬೇಕು. ನುಲಿಯಬೇಕು. ಮನೋಲ್ಲಾಸಕ್ಕಾಗಿ ಕುಣಿಯಬೇಕು. ಮನೆಗೆ ಹೋದ ಮೇಲೂ ಈ ನಿನ್ನ ಸಂಗೀತ ನನ್ನ ಕಿವಿಯಲ್ಲಿರಬೇಕು” ಎಂದಳಂತೆ. ಆಗ ಅದು ತನ್ನ ಹಾಡಿನಲ್ಲಿ ಮಿಂದು ನಯವಾಗಿದ್ದ ಕಲ್ಲನ್ನು ಅವಳಿಗೆ ಕೊಟ್ಟಿತಂತೆ.
ಸುಜಾತಾ ಎಚ್.ಆರ್. ಬರೆಯುವ ತಿರುಗಾಟ ಕಥಾನಕದ ಎರಡನೆಯ ಕಂತು

 

ಎರಡು ಮೂರು ದಿನದಲ್ಲಿ ಇದ್ದಕ್ಕಿದ್ದಂತೆ ಅಮೇರಿಕಾಗೆ ಹೊರಡುವುದು ಎಂದು ನಿಶ್ಚಯವಾಯಿತು. ನಡುರಾತ್ರಿಯಲ್ಲಿ ಪ್ರಯಾಣ ಹೊರಟೆವು. ಪ್ರವಾಸ ಹಾಗೂ ವಿಮಾನ ಹಲವು ವರುಷಗಳಿಂದ ಜೀವಕ್ಕೆ ಒಗ್ಗಿಹೋಗಿರುವುದರಿಂದ ೨೨ ಗಂಟೆಯ ದೀರ್ಘಪ್ರಯಾಣ ಬೇಸರ ತರಿಸುತ್ತಿತ್ತು. ಎಂದಿನಂತೆ ಬೆಲ್ಟ್ ಕಟ್ಟಿ ಕುಳಿತಾಗ, ರನ್ವೇಯಲ್ಲಿ ಟೇಕ್ ಆಫ್ ಆಗಲು ತಡಮಾಡಿದರೂ ಸರಿಯಾದ ಸಮಯಕ್ಕೆ ಹೊರಟ ವಿಮಾನ ಗರಗುಡುವ ಸದ್ದಲ್ಲೇ ನಾಕಾರು ನಿಮಿಷ ನಡುಗುತ್ತ ನಮ್ಮೊಳಗೆ ಗೊತ್ತಿಲ್ಲದ ಒಂದು ನಡುಕವನ್ನು ತಂದು ಹಾಕಿ ಗಾಳಿಗೆದುರಾಗಿ ಮೊಗವೆತ್ತಿ ನುಗ್ಗುತಿತ್ತು. ಕೆಲ ಹೊತ್ತಿನ ನಂತರ ಗಾಳಿಯ ಸದ್ದು ಹಾಗೂ ನಡುಕ ಮಾತ್ರ ಅದು ಹಾರುವುದನ್ನು ಸಾರುತಿತ್ತು.

ವಿಮಾನದ ಕಿಟಕಿಯಲ್ಲಿ ಬಗ್ಗಿ ನೋಡಿದೆ. ನೆಲ ಕೆಳಗಿಳಿಯುತಿತ್ತು. ಅಬ್ಬ! ನೆಲಕೆ ರಂಗೋಲಿ ಬರೆದು ದೀಪವಿಟ್ಟವರಾರು? ಅಲಕಾ ನಗರಿಯ ಚೆಲುವು! ಕಣ್ಣಿಗೆ ಹಬ್ಬ…. ಓ! ಚಿಕ್ಕಿ ಕಣ್ಣು ಕೊಟ್ಟು ನೋಡುತ್ತಿದೆ. ನೆಲದ ಮೇಲೆ ರತ್ನ ಮಾಣಿಕ್ಯಗಳನ್ನು, ವಜ್ರ ವೈಢೂರ್ಯಗಳನ್ನು ಹರಡಿದ ವ್ಯಾಪಾರಿ ಇರುಳಲ್ಲಿ ಅದನ್ನು ಹಾಗೇ ಬಿಟ್ಟು ಮಲಗಲು ಎದ್ದು ಹೋಗಿದ್ದಾನೇನೋ ಅನ್ನಿಸಿತು. ಚೈನಾದ ಯಾತ್ರಿಕ ಹ್ಯೂಯನತ್ಸಾಂಗ್ ಹೇಳಿದಂತೆ “ಹಂಪಿಯ ಇಕ್ಕೆಲದಲ್ಲಿ ರತ್ನಮಾಣಿಕ್ಯಗಳನ್ನು ವಜ್ರ ವೈಢೂರ್ಯಗಳನ್ನು ರಸ್ತೆಯ ಬದಿಯಲ್ಲಿ ರಾಶಿ ರಾಶಿ ಹಾಕಿ ಮಾರುತ್ತಿದ್ದರು. ವಿಜಯನಗರದ ಅರಸರ ಕಾಲ ಅಷ್ಟು ಸಂಪದ್ಭರಿತವಾಗಿತ್ತು”. ಎನ್ನುವ ಅವನ ಕಣ್ಣೋಟವನ್ನು ಇಂದು ನೆನಪಿಸುವಂತೆ ಕಾಣುತ್ತಿತ್ತು.

ಕೇವಲ ಕೆಲವೇ ನಿಮಿಷಗಳು. ವಿಮಾನ ಹಕ್ಕಿಯ ಮೇಲೆ ಮೋಡದ ಮಾಡನ್ನೆ ಏರಿದ್ದೆವು. ರಾತ್ರಿಸಮಯದಲ್ಲಿ ಬಿಳಿ ಮೋಡದ ದಟ್ಟತೆಯೂ ಕಾಣಿಸದೆ ದಬ್ಬು ಹೊಯ್ದ ಆಗಸದ ನಿರ್ವಾತ ಹಾಗೂ ದಟ್ಟ ಕಪ್ಪು ನೀಲಿಯಂಚು ಕಾಣಿಸುತ್ತಿತು. ಜೊತೆಗೆ ಅರ್ಧ ಗೋಲಾಕಾರದಲ್ಲಿ ಚಿಕ್ಕಿಗಳು ಹಚ್ಚಗೆ ಮಿನುಗುತ್ತಿದ್ದವು. ನಮ್ಮ ಮುಂದಿನ ಟಿ. ವಿ. ಸ್ಕ್ರೀನಿನಲ್ಲಿ ಮುಟ್ಟಿದರೆ ಮೂಡುವ ಬೇಕಾದ ಚಿತ್ರವಿತ್ತು. ಬೇಡವೆಂದವರಿಗೆ ವಿಮಾನದ ಪಥ ಛಾಲನೆಯಲ್ಲಿತ್ತು. ಇಂತಿಷ್ಟು ದೂರ, ಸಮಯ, ಹೊರಡುವ ಇಳಿಯುವ ಹೊತ್ತು, ಸಾಗಿದ ದೂರ, ತಲುಪುವ ದೂರ. ಸಮಯದ ವ್ಯತ್ಯಾಸ. ಸಿಕ್ಕುವ ದೇಶ, ಖಂಡ, ಸಮುದ್ರ ಸಾಗರಗಳು. ಎಲ್ಲವನ್ನೂ ಸಾರಿ, ತೊರೆದು ಹಾರುವ ಹಕ್ಕಿಯ ಹೊಟ್ಟೆಯಲ್ಲಿ ಮನೆಮಠವನ್ನು ತೊರೆದು ಬಂದು ಕುಳಿತು ಹೊರಟ ನಮಗೆ ಈ ಮುಗಿಲ ದಾರಿಯ ತೋರುವನಾರೋ… ಯಾಕೋ…. ಕಾಳಿದಾಸನ ಮೇಘದೂತ ನೆನಪಿಗೆ ಬಂತು.

ಒಂದು ಮರಿನಿದ್ದೆ ಆದ ಮೇಲೆ ಕಿಟಕಿಯೇರಿಸಿದರೆ ಕಣ್ ಚುಚ್ಚುವ ಬೆಳಕು. ಪರಿಚಾರಿಕೆಯರು ಚುರುಕಾಗಿ ಎರಡನೇ ಬಾರಿ ತಿನಿಸು ಕೊಡುವ ಸಡಗರ ಮಾಡಿದರು. ಮೊದಲನೇ ಬಾರಿಯೇ ಅರ್ಧ ಸೇರಿದ್ದ ಊಟ, ಈ ಬಾರಿ ಯಾವುದೋ ಹಸಿ ಮೀನನ್ನು ರುಬ್ಬಿಟ್ಟಂಥ ಬಟ್ಟಲು ನೋಡಿದ್ದೆ ಮನಸ್ಸು ಮೀನಂತೆ ವಿಲವಿಲ ಒದ್ದಾಡಿ, ಒಂದು ಹಿಡಿ ಬನ್ನು ಬೆಣ್ಣೆಯಲ್ಲಿ ಹಾಗೂ ಜ್ಯೂಸಿನಿಂದ ಸಮಾಧಾನಗೊಂಡು ಅವರು ಬಾಯಿಬಿಚ್ಚಿ ಹಿಡಿದು ತಂದ ಪ್ಲಾಸ್ಟಿಕ್ ಬ್ಯಾಗ್ನಲ್ಲಿ, ತಿಂದ ಡಬ್ಬಿ ಹಾಕುವಾಗ ಬಣ್ಣದ ತುಟಿ ಬಿರಿದು ಹೆಣ್ಣುಮಕ್ಕಳು ನಗುವುದನ್ನು ಕಂಡಾಗ, ಈ ಹೆಣ್ಣುಮಕ್ಕಳು ಬದುಕನ್ನೇ ಬಿಚ್ಚಿಟ್ಟ ಹಾಗೆ ತೋರಿತು.

ಬೆಳಗು ಕಣ್ಣುಬಿಡುವುದರಲ್ಲಿ ಹಾಂಕಾಂಗ್ ವಿಮಾನ ನಿಲ್ದಾಣ ಕ್ಯಾತೆ ಪೆಸಿಫಿಕ್ ಎಂಬ ಈ ಹಕ್ಕಿಯ ಕಣ್ಣಿಗಿಳಿದಿತ್ತು. ಅದೇನದು? ಸಮುದ್ರಕ್ಕೆ ಚಾಚಿಕೊಂಡ ಮೈಲಿಗಟ್ಟಳೆ ಸೇತುವೆ. ಸಮುದ್ರಕ್ಕೆ ತಾಕಿದಂತಿರುವ ತಿರುಗು ಮುರುವಿನ ರನ್ವೇಗಳಿರುವ ನಿಲ್ದಾಣ. ಪಕ್ಕಕ್ಕೆ ಲಾಂಚ್ ಗಳ ತಂಗುದಾಣ. ಕುದುರೆ ಲಾಳದಂತೆ ಹಬ್ಬಿರುವ ಬೆಟ್ಟ ಸಾಲು. ಸಮುದ್ರಕ್ಕೆ ಚಾಚಿಕೊಂಡ ನೆಲದಲ್ಲಿ ನಿಂತಿದ್ದ ನೂರಾರು ಹಾರು ಹಕ್ಕಿಗಳು. ಸಮುದ್ರದ ಭರತಾ ಬಂದರೇನು ಗತಿ! ವಿಮಾನ ಇಳಿಯುತ್ತಿದೆ…. ರೆಕ್ಕೆಯ ಪಕ್ಕೆ ಮೇಲೆ, ಕೆಳಗೆ ಗಾಳಿಯನ್ನು ಹಿಡಿದು ಬಿಡುವಾಟದಲ್ಲಿ ಏರಿಳಿಯುತ್ತಿದೆ.

ವಿಮಾನವೇ ತನ್ನ ಮೈ ಝೋಮ್ಗುಡುವ ಸದ್ದಿನಿಂದ ಬಿಡುಗಡೆಯನ್ನು ಹೊಂದಿದ ಹಾಗೇ ನಿಧಾನ ಲೋಹದ ಕಟ್ಟುಗಳು ಹೊರ ಚಾಚಿ ಕಾಲು ನೀಡಿತು. ಚಕ್ರವನ್ನು ಪಾದದಂತೆ ವಿಮಾನ ಹಕ್ಕಿ ಕೆಳಗೆ ಬಿಟ್ಟಿತು. ಹಕ್ಕಿ ಎತ್ತರದಿಂದ ಇಳಿವಾಗ ಹಿಂದಕ್ಕೆ ಮಡಚಿದ್ದ ಕಾಲನ್ನು ರೆಕ್ಕೆ ಬಡಿಯುತ್ತ ನೆಲಕ್ಕಿಳಿಬಿಟ್ಟು ಇಳಿವ ಹಾಗೆ ಥೇಟ್!

ಯಾವುದೋ ಮಗುವೊಂದು ಕಿವಿ ಹಿಡಿದು ಅಳುತ್ತಿದೆ, ಎತ್ತರದಿಂದ ಕೆಳಗಿಳಿಯುವ ವಾಯುಭಾರದ ಒತ್ತಡಕ್ಕೆ. ಅದರಮ್ಮ ಪರಿಛಾರಿಕೆ ಕೊಟ್ಟ ನೀರನ್ನು ಕುಡಿಸುತ್ತಿದ್ದಾಳೆ. ನಿಧನಿಧಾನಕ್ಕೆ ಗುಟುಕರಿಸು ಎನ್ನುತ್ತಿದ್ದಾಳೆ. ಮುತ್ತು ಕೊಟ್ಟು ಕಿವಿ ಬಿಡುತ್ತೆ ಅನ್ನುತ್ತಿದ್ದಾಳೆ. ಮತ್ತೊಂದು ಮುದ್ದು ಕೊಟ್ಟು ತನ್ನ ಸೊಂಟಕ್ಕೆ ಕಟ್ಟಿಕೊಂಡ ಕಾಂಗರೂವಿನ ಚೀಲಕ್ಕೆ ಮಗುವನ್ನು ಬೆಚ್ಚಗೆ ಸೇರಿಸಿದಳು. ವಿಮಾನ ಪಾದವೂರಿತು. ಧಡ್ಡ್… ಧಡಕ್ಕನೆ ಸದ್ದು. ಮಕ್ಕಳನ್ನು ಗಾಳಿಗೆಸೆದು ಹಿಡಿದಂತೆ…. ಗರ್ರನೆ ತಿರುಗುವ ರನ್ ವೇ. “ನಿಮ್ಮ ಕಿಂಕಿಣಿಗಳನ್ನು ಚಾಲೂ ಮಾಡಿಕೊಳ್ಳಿ”. ವಾಟ್ಸ್ ಆ್ಯಪ್ ನ ಕಿಣಿಕಿಣಿ ಸದ್ದು…. ವಿಮಾನ ಚಕ್ರ ನೆಲದಲ್ಲಿ ಕಾಲೂರಿ ನಿಲ್ಲುತ್ತಿದ್ದಂತೆ ಕಿವಿಗೆ ಬಂದಿಳಿಯಿತು. “ಮರ ಬಿಟ್ಟರೂ ಮರದ ಹನಿ ಬಿಡದು. ಏ ಗಿಣಿ ಏ ಗಿಣಿಯೇ….”

ಕುದುರೆ ಲಾಳದಂತೆ ಹಬ್ಬಿರುವ ಬೆಟ್ಟ ಸಾಲು. ಸಮುದ್ರಕ್ಕೆ ಚಾಚಿಕೊಂಡ ನೆಲದಲ್ಲಿ ನಿಂತಿದ್ದ ನೂರಾರು ಹಾರು ಹಕ್ಕಿಗಳು. ಸಮುದ್ರದ ಭರತಾ ಬಂದರೇನು ಗತಿ! ವಿಮಾನ ಇಳಿಯುತ್ತಿದೆ…. ರೆಕ್ಕೆಯ ಪಕ್ಕೆ ಮೇಲೆ, ಕೆಳಗೆ ಗಾಳಿಯನ್ನು ಹಿಡಿದು ಬಿಡುವಾಟದಲ್ಲಿ ಏರಿಳಿಯುತ್ತಿದೆ.

ಪೈಲಟ್ ಆಗಲೇ ಉಲಿದಿದ್ದ. ಇಲ್ಲಿ ಕಾಲ ೨ ಗಂಟೆ ೩೦ ನಿಮಿಷ. ಭಾರತಕ್ಕಿಂತ ಮುಂದಂತೆ. ಮೊಬೈಲನಲ್ಲಿ ತಾನೇ ತಾನಾಗಿ ಟೈಮ್ ಹೊಂದಿಕೊಂಡಿತ್ತು. ನಮ್ಮೂರ ಜನ ಫೇಸ್ಬುಕ್ ನಲ್ಲಿ ಹಾಕಿದ ಕಾಮೆಂಟ್ ಇಳಿದು ನಿಧಾನ ನೋಡೋಣ ಎಂದು ಮುಂದೆ ಹೋದೆವು. ಚೆಕ್ ಇನ್ ಆಗಿದ್ದು ಬಿಟ್ಟರೆ ಲಗೇಜ್ ನ ಗೊಡವೆಯಿಲ್ಲ. ಇನ್ನು ಲಗೇಜ್ ಅಮೆರಿಕಾದಲ್ಲೇ ಸಿಗುವುದು. ಹಗುರಾಗಿ ಏರ್ಪೋರ್ಟ್ ಅನ್ನು ನೋಡುತ್ತ ಹಗುರ ಬ್ಯಾಗಿನ ಜೊತೆ ನಮ್ಮ ನಿತ್ಯ ಕರ್ಮಗಳನ್ನು ಮುಗಿಸಿದೆವು. ಹಲ್ಲುಜ್ಜುವಾಗ ರೈಲ್ವೇ ಸ್ಟೇಷನ್ನಿನಲ್ಲಿ ಹಲ್ಲುಜ್ಜುವ ನಮ್ಮೂರಿನ ಜನರು ನೆನಪಿಗೆ ಬಂದರು. ಅಲ್ಲಿ ಅವರು ಹೊರಗಿನ ಗಾಳಿಯಲ್ಲಿ ನಿಂತು ತಮ್ಮ ಕೆಲಸ ಮಾಡಿಕೊಂಡರೆ, ನಾವು ಏ.ಸಿ.ರೂಮಿನ ರೆಸ್ಟ್ ರೂಮ್ ನಲ್ಲಿದ್ದೆವು. ಅಷ್ಟೇ… ಇಲ್ಲಿಂದ ಶುರುವಾದ ರೆಸ್ಟ್ ರೂಮಿನ ಫಜೀತಿ ಪ್ರಯಾಣದುದ್ದಕ್ಕೂ ಬೆಳೆದಿತ್ತು.

ಟಿಷ್ಯು ಪೇಪರ್ ನಲ್ಲಿ ಶೌಚವನ್ನು ಶುಚಿಗೊಳಿಸುವುದೊಂದು ಅತ್ರುಪ್ತ ಬೇತಾಳದಂತೆ ಪ್ರತಿಬಾರಿಯೂ ಬೆನ್ನೇರಿ ಪ್ರಕ್ರಿಯೆಯಾಗಿ ರೂಪಗೊಂಡು ಕೈ ತೊಳೆದರೂ ತೊಳೆದುಕೊಳ್ಳಲಾರದೆ ಮನದಲ್ಲುಳಿದು ಹೊರಬಂದರೂ… ಜಗತ್ತಿನ ನೂರೆಂಟು ವೇಷಭೂಷಣಗಳನ್ನು ನೋಡುವಾಗ ಅದು ಮರೆವಿಗೆ ಜಾರುತಿತ್ತು ಪ್ರತಿಬಾರಿಯೂ….

ಏರ್ಪೋರ್ಟನ್ನೆಲ್ಲಾ ಸುತ್ತಾಯಿತು. ಎಸ್ಕಲೇಟರುಗಳ ಮೇಲೆ ಫರ್ಲಾಂಗುಗಟ್ಟಳೆ ನಡೆದು, ಇಳಿದು ಹತ್ತಿ, ನಾವು ನಿಂತ ಕಡೆಗೆ ಬಂದು ಆತು ನಿಂತ ಟ್ರೇನ್ ಹತ್ತಿ ಮತ್ತೊಂದು ಟರ್ಮಿನಲ್ ತಲುಪಿದೆವು. ಇನ್ನೂ ಟೈಮ್ ಇತ್ತು ಎಂದು ಕಾಫಿ ಕುಡಿಯಲು ಹೋದೆವು. ಕಾಫಿ ಕೇಳಿದಾಗ ಅಮೇರಿಕನ್ ಡಾಲರ್ ನಲ್ಲಿ ನಾವು ವ್ಯವಹರಿಸುವುದಿಲ್ಲ ಎಂದಾಗ ಪೆಚ್ಚಾದೆವು. ದುಡ್ಡಿದ್ದವರು ದೊಡ್ಡಪ್ಪ ಅನ್ನುವ ನಮ್ಮ ಗಾದೆ ಇಲ್ಲಿ ಸುಳ್ಳಾಗಿತ್ತು. ಎಂದಿಗೂ ಚಲಾವಣೆಯಲ್ಲಿರುವುದೇ ಮುಖ್ಯ. ಅದಕ್ಕಾಗಿಯೇ ನಮ್ಮ ರಾಜಕಾರಣಿಗಳು ಇಷ್ಟು ಒದ್ದಾಡ್ತಾರಲ್ಲ!

ಅಮೇರಿಕಾ ವಿಮಾನವನ್ನೇರಿ ಕುಳಿತಾಗ ಎಲ್ಲ ಇದೇ ಡಿಟ್ಟೋ… ಡಿಟ್ಟೋ…. ರುಬ್ಬಿದ ಮೀನಿನ ಬದಲು ಕೋಸಿನ ಎಲೆ, ಹಾಳುಮೂಳು, ಇದ್ದಿದ್ರಲ್ಲಿ ಸುಧಾರಣೆ ಎಂದು ಬಾಯಿಗಿಟ್ಟೆವು. ಅಕ್ಕಪಕ್ಕದಲ್ಲಿ ಲಾರ್ಜು, ಸ್ಮಾಲು ಮಾತುಗಳು
ಕೇಳಿ ಬರುತ್ತಿದ್ದವು. ಹದಿನಾಕು ಗಂಟೆ ಪ್ರಯಾಣ ಉಳಿದಿತ್ತು. ಭಾರವೆನ್ನಿಸಿದರೂ ಹಗುರೇ ಆಗಿತ್ತು ಪ್ರಯಾಣ.

ನಿದ್ದೆ ಹೇಗೆ ಬಂತೋ… ಹಗಲೋ, ಇರುಳೋ …. ಏನೋ ಒಂದು. ನಾವು ಡಲ್ಲಾಸ್ ತಲುಪಿದಾಗ ರಾತ್ರಿ ಬೆಳಗು ಒಂದೂ ಅರಿಯದೆ ಸಂಜೆ ನಾಲ್ಕು ಗಂಟೆಯ ಸಮಯವಾಗಿತ್ತು. ಲಾಂಗ್ ಕ್ಯೂನಲ್ಲಿ ಇಮ್ಮಿಗ್ರೇಷನ್ ತಲುಪಿದಾಗ ಹಳದಿ ಜನರು, ಕಪ್ಪು ಜನರು, ಹೆಚ್ಚಿನ ಸಂಖ್ಯೆಯಲ್ಲಿದ್ದರು. ಬೇಧಭಾವವಿಲ್ಲದ ಒಂದು ಗೆದ್ದಲು ಸಾಲಿನಂತೆ ಕಾಣುತಿತ್ತು.

ಅಮೇರಿಕಾದ ಡಲ್ಲಾಸ್ ನಲ್ಲಿಳಿದು ಕರೆತರಲು ಬಂದಿದ್ದ ಸ್ನೇಹಿತರಾದ ರೆಡ್ಡಿ ಹಾಗೂ ರಾಜಶ್ರೀ ಅವರ ಮನೆಗೆ ಇನಿತೂ ತೊಂದರೆಯಾಗದಂತೆ ತಲುಪಿದಾಗ ಜೆಟ್ ಲಾಗ್ ಏನೂ ಇಲ್ಲ ಅನ್ನಿಸಿತು. ವಿಮಾನದಲ್ಲಿ ಮೇಲಿಂದ ಕಂಡಂತೆ ಜಾರುಮಳಿಗೆಗಳ ಗ್ರೂಪ್ ಹೌಸ್ ಗಳ ನೈಜತೆ, ಸರಳ ವಾಸ್ತುಶಿಲ್ಪ, ಹಸಿರು ಹುಲ್ಲು ಹಾಸು, ವಿಸ್ತಾರವಾಗಿ ಹರವಿ ಬಿದ್ದ ನೆಲ, ದೊಡ್ದ ರಸ್ತೆಗಳು, ನಿರಂತರ ಚಲನೆಯಲ್ಲಿರುವ ಕಾರುಗಳು, ದಾರಿಯ ಕೈಕಂಬಗಳು ಅಮೇರಿಕಾದ ಶಿಸ್ತಿನ ಸಿಪಾಯಿಗಳಂತೆ ತೋರಿದವು. ಹಾಗೇ ಅಮೇರಿಕಾದ ವಾತಾವರಣ ಕಲಾವಿದನೊಬ್ಬ ಚಿತ್ರ ಬಿಡಿಸಿದಂತಿದೆ ಎಂದು ಒಮ್ಮೆಲೆ ಅನ್ನಿಸಿಬಿಟ್ಟಿತು. ಅಂಥದ್ದೇ ಒಂದು ಬಡಾವಣೆಯ ಸರಳ ಸುಂದರ ಮನೆಯ ಮುಂದೆ ನಮ್ಮ ಕಾರು ನಿಂತಾಗ ಕನ್ನಡದ ಹರಟೆಯಲ್ಲಿ, ನಮ್ಮೂರಿನ ಮನೆಗೆ ಬಂದಂತೆ ಅನ್ನಿಸಿತು.

ಅಲ್ಲಿಯೇ ಐದು ದಿನ ಉಳಿದಿದ್ದ ನಮಗೆ ಅವರೊಡನೆ ಅಡ್ಡಾಡುವ ಹಾಗೂ ಅವರ ಇಂಡೋ ಅಮೇರಿಕನ್ ಜನಜೀವನದ ಶೈಲಿಯನ್ನ ಕಾಣುವುದು ನಮ್ಮ ಸಹಜ ಕುತೂಹಲವಾಗಿತ್ತು. ರೆಡ್ಡಿ ದಂಪತಿಗಳಂತೂ ನಮಗೆ ಯಾವುದೇ ತೊಂದರೆಯಾಗದಂತೆ ಉಪಚರಿಸುತ್ತ ಅಮೇರಿಕಾದ ನಡೆನುಡಿಗಳನ್ನು, ಅವರ ಅನುಭವಗಳನ್ನು ಹೇಳಿಕೊಳ್ಳುತ್ತಿದ್ದರು.

“ನಮ್ಮ ನೆಲಕ್ಕೆ ತಿರುಗಿ ವಾಪಾಸ್ ಬಂದುಬಿಡಬೇಕು ಅನ್ನಿಸೊಲ್ವಾ?” ಎಂದು ಕೇಳಿದ್ದಕ್ಕೆ “ಬಂದ ದಿನದಿಂದಲೂ ನನ್ನೂರಿಗೆ ಹಿಂತಿರುಗಬೇಕು ಎಂದು ಅನ್ನಿಸುತ್ತಲೇ ಇದೆ. ಆದರೆ ಇದ್ದೂರಿನ ಹೊಂದಾಣಿಕೆಯೂ ಅಷ್ಟು ಸುಲಭವಾಗಿ ನಮ್ಮನ್ನು ಬಿಟ್ಟುಕೊಡಲಾರದು. ಇಲ್ಲಿಯ ಗಳಿಕೆ, ಸೌಲಭ್ಯ, ಅನಿವಾರ್ಯತೆ, ಮಕ್ಕಳ ಭವಿಷ್ಯ, ಹಣ ಹೂಡಿಕೆಗಳು ಆ ಕನಸನ್ನು ಮುಂದೂಡುತ್ತಿವೆ. ಇಲ್ಲೇ ಬೆಳೆದ ಮಕ್ಕಳು ಅಲ್ಲಿಗೆ ಬರಲಾರರು. ಅಲ್ಲಿರುವ ನನ್ನ ತಾಯಿ ಇಲ್ಲಿಗೆ ಬರಲಾರರು. ಮುಂದೆ ನಮ್ಮ ಬಳಿ ಹೀಗೆಯೇ ನಮ್ಮ ಮಕ್ಕಳೂ ಉಳಿಯುವುದಿಲ್ಲ. ಆದರೂ ಈ ದೇಶ ನಮ್ಮ ಬದುಕನ್ನು ವಿಸ್ತರಿಸಿದ್ದು ಸುಳ್ಳಲ್ಲ. ನನ್ನೂರು ನಮಗೆ ಜೀವ. ಹಾಗೆಂದು ಈಗಿರುವ ಊರು ನನ್ನದಲ್ಲ ಅನ್ನುವ ಹಾಗಿಲ್ಲ. ನೋಡೋಣ ಮುಂದೆ.” ಈಗ ಇಡೀ ಜಗತ್ತು ಒಂದೇ ಆಗುತ್ತಿದೆ. ಎಲ್ಲರೂ ಒಂಟಿಬಡುಕರಾಗುತ್ತಿದ್ದೇವೆ ಅಂದುಕೊಂಡೆ . ಹೌದು! ಜೊತೆಗಿರಲು ಈಗ ಯಾರಿಗೆ ಸಮಯವಿದೆ?

ಆಸೆಯಿಂದ ಹೇಳಿದರೂ ಅವರಿಗೆ ತನ್ನ ಊರು ಕೂಡ ಈಗ ಬದಲಾಗಿದೆ ಅನ್ನುವ ಸತ್ಯ ಮರೆ ಮಾಚುವಂತಿಲ್ಲದೆ  ನಿಚ್ಚಳವಾಗಿತ್ತು. ಅವರೂರಿನ ಮೋಹವೇ ಏರ್ಪೋರ್ಟ್ ನಲ್ಲಿ ಗಂಟೆಗಟ್ಟಳೆ ನಮ್ಮನ್ನು ಕಾದು, ಕೈ ಬೀಸಿ ಏರ್ಪೋರ್ಟ್ ನಲ್ಲಿ ಕಳುಹುವವರೆಗೂ ನಮ್ಮೊಂದಿಗೇ ಇದ್ದು ಅಮೇರಿಕಾ ತಿರುಗಾಟ ಹೆಚ್ಚು ಅರ್ಥವಾಗುವಂತೆ, ನಮಗೆ ನೀರು ಕುಡಿದಷ್ಟು ಸುಲಭವಾಗುವಂತೆ ಮಾಡಿತ್ತು. ಅದರೊಂದಿಗೆ ನಮ್ಮ ನೆಂಟರ ಮಕ್ಕಳ ಮನೆಗಳ ಆತಿಥ್ಯ…. ಸಮುದ್ರಗಳನ್ನೆ ದಾಟಿ ಆ ತುದಿಯಿಂದ ಈ ತುದಿಗೆ ಬಂದು ನೆಲೆಸಿದ ನಮ್ಮ ದೇಶದವರು ಅದರಲ್ಲೂ ಕನ್ನಡದವರು ಡಲ್ಲಾಸ್ ನಲ್ಲೇ ಇಷ್ಟು ಮಂದಿ! ಎಂದಾಗ ನಮ್ಮ ಹುಬ್ಬೇರಿತ್ತು. ಮಲಗಲು ಹೋಗುವ ಸಮಯ. ಮಾತು ಮುಗಿದಿತ್ತು. ಡಲ್ಲಾಸ್ ನ ಗಂಟೆ ೧೨ ಆಗಿತ್ತು. ಊರಿಂದ ಬಂದ ಒಂದು ಫೋನಿಗೆ ನಾನು “ಇಷ್ಟೊತ್ತಿಗೆ ಯಾಕೆ ಮಾಡಿದ್ದೀರಿ?” ಎಂದಾಗ “ಸಾರಿ, ಸ್ನಾನ ಮಾಡ್ತಿದ್ದ್ರಾ?” ಎಂದರು ಅತ್ತ ಕಡೆಯವರು. ನನಗೆ ಹೊಳೆಯಿತು.

ಓ! ನಮ್ಮೂರಲ್ಲಿ ಗಂಟೆಯೀಗ ಮುಂದಿದೆ. ಬೆಳಗಿನ ೧೦:೪೦. ಪ್ರಗತಿಯಲ್ಲಿ ಅಮೇರಿಕಾ ಎಷ್ಟಾದರೂ ಮುಂದಿರಲಿ. ಸಮಯದಲ್ಲಿ ಪಶ್ಚಿಮದವರು ನಮಗಿಂತ ೧೦ ಗಂಟೆ ೨೦ನಿಮಿಷ ಹಿಂದೆ! ಆದರೂ ಅಮೇರಿಕಾ ಖಂಡ ಭಾರೀ ದೊಡ್ಡದಪ್ಪ. ನಮ್ಮ ಏಷ್ಯಾ ಖಂಡ ಏನೂ ಕಡಿಮೆಯಿಲ್ಲ ಬಿಡಿ . ಆದರೂ, ವಿರಳ ಜನವಸತಿಯ ಈ ದೇಶವನ್ನು ಭಾರತ ಎಂದು ತಪ್ಪಾಗಿ ಕಂಡುಹಿಡಿದನಲ್ಲ ಆ ಕೊಲಂಬಸ್. ನಮ್ಮನ್ನು ಹುಡುಕಿಬಂದು ಇಲ್ಲಿಯ ಜನರನ್ನು “ರೆಡ್ ಇಂಡಿಯನ್ಸ್” ಅಂದು ಹೊಸ ಹೆಸರಿಟ್ಟನಲ್ಲ. ದೇವಾ! ಅವರನ್ನು ನೋಡುವ ಕುತೂಹಲಕ್ಕೆ ಒಂದು ಗತಿ ಕಾಣಿಸಬೇಕಲ್ಲ. ಅವರು ನಾವು ಒಂದೇ ಹುಟ್ಟಿನ ಹೋಲಿಕೆಯವರಂತಲ್ಲ! ನಾಳೆ ಎದ್ದಾಗ ರೆಡ್ಡಿಗೆ ಕೇಳೊಣ ಎಂದು ಮಲಗಿದೆ.

ಆದರೂ ನಮ್ಮ ದೇಶವನ್ನು ಕೊಲಂಬಸ್ ಹುಡುಕಿ ಬರಲು ಸಾಂಬಾರವೋ, ಸಮೃದ್ಧಿಯೋ? ಏನೋ ಒಂದು ಕಾರಣ. ನಮ್ಮ ಭಾರತದಲ್ಲಿನ ಪಿತುಗುಡುವ ಜನರ ಮುಂದೆ… ಇಲ್ಲಿಯ ಜನರಿಲ್ಲದ ನೀರವತೆ ನನಗೆ ಕಲಾವಿದನೊಬ್ಬನ ಪೇಂಟಿಂಗ್ ನಂತೆ ಕಂಡಿದ್ದಕ್ಕೆ ಕಾರಣ ಹೊಳೆಯಿತು.

ನಮ್ಮೂರಲ್ಲಿ ಸೀನ್ ಚೇಂಜ್ ಆದಂತೆ ಜನ ಸಾಗುತ್ತಿರುತ್ತಾರೆ. ಬರುವ ವಾಹನಗಳೇ ಹೆದರಿ ತಟ್ಟನೆ ನಿಲ್ಲುವಂತೆ. ಯಾಕೆಂದರೆ ಅಲ್ಲಿ ಅವರವರ ದಾರಿಗಳನ್ನು ಅವರವರೇ ಹುಡುಕಿಕೊಳ್ಳಬೇಕು. ಬದುಕಲು ಅವರವರೇ ಒಬ್ಬರ ಮೇಲೊಬ್ಬರು ಹೇರಿಕೊಂಡು ಮುನ್ನುಗ್ಗುವಂತೆ. ಸರದಿಯ ಸಾಲು ನಮಗೆ ಗೊತ್ತಿಲ್ಲ. ಸರಕಾರವಂತೂ ಜನರನ್ನು ಜೀವ ಎಂದುಕೊಳ್ಳುವುದೇ ಇಲ್ಲ.

ಓ! ನಮ್ಮೂರಲ್ಲಿ ಗಂಟೆಯೀಗ ಮುಂದಿದೆ. ಬೆಳಗಿನ ೧೦:೪೦. ಪ್ರಗತಿಯಲ್ಲಿ ಅಮೇರಿಕಾ ಎಷ್ಟಾದರೂ ಮುಂದಿರಲಿ. ಸಮಯದಲ್ಲಿ ಪಶ್ಚಿಮದವರು ನಮಗಿಂತ ೧೦ ಗಂಟೆ ೨೦ನಿಮಿಷ ಹಿಂದೆ! ಆದರೂ ಅಮೇರಿಕಾ ಖಂಡ ಭಾರೀ ದೊಡ್ಡದಪ್ಪ. ನಮ್ಮ ಏಷ್ಯಾ ಖಂಡ ಏನೂ ಕಡಿಮೆಯಿಲ್ಲ ಬಿಡಿ . ಆದರೂ, ವಿರಳ ಜನವಸತಿಯ ಈ ದೇಶವನ್ನು ಭಾರತ ಎಂದು ತಪ್ಪಾಗಿ ಕಂಡುಹಿಡಿದನಲ್ಲ ಆ ಕೊಲಂಬಸ್.

ಸರಕಾರದ ಭದ್ರ ಸ್ಥಾನದಲ್ಲಿ ಕುಳಿತವರೆಲ್ಲರಿಗೂ ಭದ್ರವಾದ, ಭದ್ರತೆಯಿರುವ ಕಾರಣಕ್ಕೆ ನಮ್ಮಲ್ಲಿ ನಿಯಮಾವಳಿಗಳು ಆಕಳಿಸಿ ಅರೆ ನಿದ್ರೆಯಲ್ಲಿರುತ್ತವೆ. ಅದಕ್ಕಾಗಿ ಜನ ರಾಜಕೀಯದಲ್ಲಿ ಕಾಲೆಳೆದು ಮೇಲಾಟ ನಡೆಸುತ್ತಲೇ ಇರುತ್ತಾರೆ. ಅವರ ಪಾಡೇ ಅವರಿಗೆ ದೊಡ್ಡದಿರುವಾಗ ಜನಸಾಮಾನ್ಯ ಅವರಿಗೆ ಮರೆತೇ ಹೋಗುತ್ತಾನೆ. ಇಲ್ಲಿ ನಿಯಮಗಳೇ ಜನರನ್ನು ರೂಲ್ ಮಾಡುತ್ತವೆ. ಶಿಸ್ತು ಜನಕ್ಕೆ ಒಗ್ಗಿ ಹೋಗಿದೆ.

ಕಾಲೇಜಿನಲ್ಲಿದ್ದಾಗೊಮ್ಮೆ ಸೈನ್ಸ್ ಸ್ಟೂಡೆಂಟ್ ಆದ ನಾನು ಸ್ನೇಹಿತೆಯೊಟ್ಟಿಗೆ ಆರ್ಟ್ಸ್ ಕ್ಲಾಸಿಗೆ ಹೋಗಿ ಕೂತಿದ್ದೆ. ಅಲ್ಲಿ ಮೇಷ್ಟ್ರು ಕೊಟ್ಟ ಲೆಕ್ಚರ್ ನಲ್ಲಿ ಒಂದು ವಾಕ್ಯ ಅಚ್ಚಳಿಯದೆ ಇಂದಿಗೂ ನೆನಪಲ್ಲುಳಿದಿದೆ. “ಭಾರತ ಸಮಶೀತೋಷ್ಣ ವಲಯವಾದ್ದರಿಂದ ಮಕ್ಕಳ ಸಂಖ್ಯೆ ಹೆಚ್ಚು. ಹಾಗಾಗಿ ನಮ್ಮಲ್ಲಿ ಜನಸಂಖ್ಯೆಯೂ ಹೆಚ್ಚು.” ಆವತ್ತು ಉರುಳಾಡಿ ನಕ್ಕಿದ್ದೆ. ನಿಜವಲ್ಲವೇ? ಭಾರತೀಯರು ಸ್ವಚ್ಛಂದ ಜನ. ನಿದ್ದೆ ಆವರಿಸಿದ್ದು ತಿಳಿಯಲಿಲ್ಲ.

ಬೆಳಿಗ್ಗೆ ಎದ್ದಾಗ ಕಿಚೆನ್ ಕಲರವದಿಂದ ತುಂಬಿತ್ತು. ಬೆಳಿಗ್ಗೆ ವಾಕಿಂಗ್ ಹೋದ ರೆಡ್ಡಿ, ನನ್ನ ಗಂಡನನ್ನು ಡೋನಟ್ ಮಾಡುವ ಜಾಗಕ್ಕೆ ಕರೆದುಕೊಂಡು ಹೋಗಿ ಅಲ್ಲೇ ಫ್ರೆಶ್ ಡೋನಟ್ ಮಾಡುವುದನ್ನು ತೋರಿಸಿ ಮನೆಗೆ ಕೊಂಡು ತಂದಿದ್ದರು. ಅಲ್ಲಿಯ ಜನಕ್ಕೆ ಇದನ್ನು ಬೆಳ್ಬೆಳಿಗ್ಗೆಯೇ ತಿನ್ನುವುದು ರೂಢಿಯಂತೆ. ಸ್ವೀಟ್ ತಿಂದಲ್ಲಿ ಬೆಳಿಗ್ಗೆ ಮೈಯಲ್ಲಿ ಎನರ್ಜಿ ತುಂಬುತ್ತದೆ ಅನ್ನುತ್ತಾರೆ. ಉತ್ತರ ಭಾರತದವರು ಬೆಳಗ್ಗೆದ್ದು ಜಿಲೇಬಿ ತಿನ್ನುವ ಹಾಗೆ. ಹಾಗಾಗಿಯೇ ಅಲ್ಲಿಯವರು ಅದನ್ನು ಮುಕ್ಕುತ್ತಾರೆ. ನಾವೂ ತಿಂದೆವು. ನಿಜವಾಗಿ ಬಹಳ ಮೃದುವಾಗಿ ರುಚಿಯಾಗಿದ್ದವು. ರಾಜಶ್ರೀಯವರ ಕಾಫೀ ಕೂಡ.

ಚಿಕ್ಸಾ ನೇಶನ್ ಕಲ್ಚರಲ್ ಮ್ಯೂಸಿಯಂ

ನನ್ನಾಸೆಯಂತೆ ಕಾರು ಪ್ರಯಾಣ ಮಾಡಿ ಫ್ರಿಸ್ಕೋ ದಾಟಿ, ಫೋರ್ಟ್ವರ್ಥ್ ದಾಟಿ, ಎರಡೆರಡು ಹಳ್ಳ ನದಿಗಳನ್ನು ದಾಟಿ ಟೆಕ್ಸಾಸ್ ಅನ್ನೂ ದಾಟಿ, ಓಕ್ಲಹೋಮ ಗಡ್ ದಾಟಿ ೨೦೦ ಮೈಲಿ ಸಾಗಿದ ಮೇಲೆ ರೆಡ್ ಇಂಡಿಯನ್ ಸೆಂಟರ್ ಸಿಕ್ಕಿತು. ಆದರೆ ಅದು ನನ್ನಾಸೆಯಂತೆ ಬುಡಕಟ್ಟು ಪ್ರದೇಶವಾಗಿರಲಿಲ್ಲ. ಇಡೀ ಭೂವಲಯದಿಂದ ಅಮೇರಿಕಾಗೆ ವಲಸೆ ಬಂದ ವಿವಿಧ ಜನರಿಂದ ಅವರು ಮೂಲೆಗುಂಪಾಗಿದ್ದಾರೆ. ಈಗ ಎಲ್ಲೋ ಒಂದೆರಡು ಕಡೆ ಅವರ ಊರುಗಳಿರುವುದು ನಿಜವಾದರೂ,ಅವರ ಸಂಸ್ಕೃತಿಗೆ ಹಾಗೂ ಅವರಿಗೆ ಬಡತನವಿದೆ. ಅಮೇರಿಕಾ ಸರಕಾರ ಅವರನ್ನು ನಗರಗದಂಚಿಗೆ ತಳ್ಳಿದೆ. ವೋಟಿನ ಹಕ್ಕೊಂದನ್ನು ಬಿಟ್ಟರೆ ಅವರಿಗೆ ಬೇರ್ಯಾವ ಸ್ವಾತಂತ್ರವಿಲ್ಲ.

ಜಗತ್ತು ಇಂಥ ವಿಚಾರಗಳಲ್ಲಿ ಒಂದೆ ರೀತಿಯಾಗಿದೆ. ಯಾಕೆಂದರೆ ಒಂದು ಸ್ಥಳಕ್ಕೆ ಬರುವ ಆಗಂತುಕನಿಗೆ ದೇಹ ಬಲ, ಮನೋಬಲ, ಹಣಬಲವಿರುತ್ತದೆ. ಅಲ್ಲಿನ ಮೂಲ ಸಂಸ್ಕೃತಿಗೆ ಅತಿಥಿಯಾಗಿ ಬಂದವನು ಕ್ರಮೇಣ ಆಕ್ರಮಣಕ್ಕೆ ಸಜ್ಜಾಗುತ್ತಾನೆ. ದೇಶ ಸುತ್ತಿರುವ ಇವನು ಅಲ್ಲಿನ ಜನರ ಮುಗ್ಧತೆಯನ್ನು ಬಳಸಿಕೊಳ್ಳುತ್ತಾನೆ. ನಂತರ ಮೂಲ ಬುಡಕಟ್ಟುಗಳನ್ನು ಒಡೆದು ತನ್ನ ವಶಪಡಿಸಿಕೊಳ್ಳುತ್ತಾನೆ.

ಆದರೆ ಈಗ ರೆಡ್ ಇಂಡಿಯನ್ಸ್ ಕೂಡ ನಾಗರೀಕತೆಯ ಅಂಚಿನಿಂದೆದ್ದು ಕ್ಯಾಸಿನೋಗಳನ್ನು ನಡೆಸುತ್ತ ಹಣ ಮಾಡಿಕೊಳ್ಳುತ್ತ ಹೊಡೆದಾಡಿಕೊಳ್ಳುತ್ತ, ತಮ್ಮ ಸಹಜ ದೇಹ ದಾರ್ಢ್ಯದಿಂದ ಪ್ರಬಲರಾಗುತ್ತಿದ್ದಾರೆ. ಆದರೆ ಆಳುವ ನೀತಿ ಅವರ ಮೇಲೆ ಒಂದು ಕಣ್ಣಿಟ್ಟೇ ಇದೆ ಎಂಬುದು ಸುಳ್ಳಲ್ಲ.

ಬಂದ ಆಗಂತುಕರ ಮದ್ದುಗುಂಡು ಕೋವಿಗಳ ಮುಂದೆ ಇವರ ಬಾಣಗಳು ಮುರಿದು ಬಿದ್ದ ಹಾಗೆ ಇಂದು ಅವರ ಸಂಸ್ಕೃತಿ ನಾಶವಾಗಿ ಒಂದೊಳ್ಳೆ ಮ್ಯೂಸಿಯಂನಲ್ಲಿ ದೊಡ್ಡ ದೇಹಗಳನ್ನು ಅಡವಿಟ್ಟು ಮಣಿ ಪೋಣಿಸುತ್ತ ತಮ್ಮ ನೆನಪಿದ್ದ ಕಲೆಯೊಂದನ್ನು ಒಬ್ಬ ರೆಡ್ ಇಂಡಿಯನ್ ತೋರುತ್ತ ಕುಳಿತ್ತಿದ್ದರು. ಅಲ್ಲಿ ಸಿಕ್ಕ ಮೂರು ನಾಕು ಮಂದಿ ಅವರ ಜನರು ನಮ್ಮ ಪಂಜಾಬಿಗಳಂತೆಯೂ… ಕೆಲವರು ನಮ್ಮಂತೆ ಥೇಟ್! ಮೂಗು ಕಣ್ಣು ಬಾಯಿಯ ಚಹರೆ ಹೊಂದಿದವರೂ ಆಗಿದ್ದರು.

ಅವರ ಮೂಲವೆಲ್ಲವೂ ಗಾಜಿನಲ್ಲಿ, ಶಿಲೆಯಲ್ಲಿ, ಘನವಾಗಿ ಕುಳಿತಿತ್ತು. ಹೊರಗಿದ್ದವರು ಅದನ್ನು ಕಾಯುವ ಹಾಗೂ ಏನೋ ಒಂದು ಕಲೆಯನ್ನು ತೋರುತ್ತ ಕುಳಿತವರಾಗಿದ್ದರು. ಇಡೀ ಜಗತ್ತಿನ ಬುಡಕಟ್ಟು ಪ್ರಕೃತಿಯೇ ಮ್ಯೂಸಿಯಂನಲ್ಲಿ ಬಂದು ಕುಳಿತುಕೊಳ್ಳುತ್ತಿದೆ. ನಾಗರೀಕತೆಯ ಬಿರುಗಾಳಿಗೆ ಒಡ್ಡಿಕೊಂಡವರೆ ಎಲ್ಲರೂ. ಈಗ ನಾಗರೀಕತೆಯಲ್ಲಿ ಈಜಿ ಮುಂದುವರೆದ ಇವರ ಜನರು ಬೇರೆ ಬೇರೆ ಕಡೆ ನೆಲೆಸಿದ್ದಾರೆ. ನೂರಾರು ಪಂಗಡಗಳ ನೂರಾರು ಬುಡಕಟ್ಟಿನಲ್ಲಿ ಹರವಿ ಹೋದ ಇವರನ್ನು ಐದು ನೆಲಮೂಲವನ್ನಾಗಿ ವಿಂಗಡಿಸಿ ಬುಡಕಟ್ಟಿನ ಮೂಲವನ್ನು ಶೇಖರಿಸಲಾಗಿದೆ.

ಅದರಲ್ಲಿ ನಾವು ಭೇಟಿ ಕೊಟ್ಟಿದ್ದು chicksaw Nation cultural centre, SULPHUR, OKLAHOMA
ಆಗಿತ್ತು. ರಾಜಾರಸ್ತೆಯಿಂದ ಎಲ್ಲಿಗೆ ದಾಟಿದರೂ ಅಚ್ಚುಕಟ್ಟು ಹಸಿರು ತುಂಬಿದ ಭೂ ಭಾಗವನ್ನೇ ನೋಡುತ್ತ ಬಂದ ನಮಗೆ ಬೇರೆ ಬೇರೆ ಹಳ್ಳಿಗಳನ್ನು ಕಾಣುತ್ತಾ ಬಂದ ನಮಗೆ, ತಿರುವು ರಸ್ತೆಯಲ್ಲಿ “ಹೇ… ” ಎನ್ನುವ ಉದ್ಗಾರದಲ್ಲಿ ರೆಡ್ಡಿ ಅಲ್ಲಿಯವರನ್ನು ವಿಚಾರಿಸಿಕೊಂಡು ಇದರ ಗಮ್ಯ ತಲುಪಿದ್ದೆವು. ಹತ್ತಾರು ಎಕರೆಯ ಹಸಿರ ನಡುವೆ ಕೃತಕ ದೊಡ್ಡ ನೀರಿನ ಹೊಂಡದ ಮುಂದೆ ರೆಡ್ ಇಂಡಿಯನ್ ರನ್ನು ಬಿಲ್ಲು ಬಾಣದೊಂದಿಗೆ ಕಲ್ಲಿನ ಪ್ರತಿಮೆಯನ್ನಾಗಿಸಿದ್ದರು. ನಮ್ಮ ಇವರ ನಡುವೆ ಜೀನುಗಳ ಸಾಮ್ಯತೆಯಿದೆ ಎನ್ನುತ್ತಾರಲ್ಲ!

ಮ್ಯೂಸಿಯಂ ಅಚ್ಚುಕಟ್ಟುತನದಿಂದ ತುಂಬಿತ್ತು. ಹೋದೊಡನೆ ರೆಡ್ ಇಂಡಿಯನ್ಸ್ ಡ್ರೆಸ್ಸ್ ಹಾಕಿದ ಹೆಂಗಸು ಓಡಾಡುತ್ತಿದ್ದರೆ ಮ್ಯೂಸಿಯಂ ಹೊರಗಡೆ ಶಾಪ್ ನಲ್ಲಿ ಮಾರಾಟದ ವಸ್ತುಗಳಿದ್ದವು. ಅವು ಎಲ್ಲೆಡೆಯೂ ದೊರೆಯುವಂಥವೇ! ಚರ್ಮ ಹಾಗೂ ಕಲ್ಲಿನ ಚೂರುಗಳಿಂದ ಹಾಗೂ ಸಣ್ಣ ಬಣ್ಣದ ಮಣಿಗಳಿಂದ ವಸ್ತುಗಳನ್ನು ನೇದದ್ದಷ್ಟೇ ವಿಶೇಷವಾಗಿದ್ದವು. ಹೊರ ಬಾಗಿಲಲ್ಲೇ ಅವರ ಕೋಲು ಭರ್ಜಿಗಳು, ಮರದಲ್ಲಿ ಕೊರೆದ ದೋಣಿ, ಹುಟ್ಟುಗಳು, ಪ್ರಾಣಿಚರ್ಮದ ಉಡುಗೆಗಳು ಎಂದಿನಂತೆ ನದಿ ಮೂಲದಲ್ಲಿ ಅವರು ಬದುಕಿದ್ದ ಕಥೆ ಹೇಳುತ್ತಿದ್ದವು.

ಆದರೆ ಈಗ ರೆಡ್ ಇಂಡಿಯನ್ಸ್ ಕೂಡ ನಾಗರೀಕತೆಯ ಅಂಚಿನಿಂದೆದ್ದು ಕ್ಯಾಸಿನೋಗಳನ್ನು ನಡೆಸುತ್ತ ಹಣ ಮಾಡಿಕೊಳ್ಳುತ್ತ ಹೊಡೆದಾಡಿಕೊಳ್ಳುತ್ತ, ತಮ್ಮ ಸಹಜ ದೇಹ ದಾರ್ಢ್ಯದಿಂದ ಪ್ರಬಲರಾಗುತ್ತಿದ್ದಾರೆ. ಆದರೆ ಆಳುವ ನೀತಿ ಅವರ ಮೇಲೆ ಒಂದು ಕಣ್ಣಿಟ್ಟೇ ಇದೆ ಎಂಬುದು ಸುಳ್ಳಲ್ಲ.

ಅಲ್ಲಿ ಕುಳಿತಿದ್ದ ಬೆರಳಿಕೆಯ “ರೆಡ್ ಇಂಡಿಯನ್ಸ್”. ಹಾಗೆ ಕರೆದರೆ ಅವರಿಗೆ ಸಿಟ್ಟು ಬರುತ್ತದಂತೆ. ಬಹುಶಃ ತುಳಿಸಿಕೊಂಡವರು ಎಂದು ಅವರಿಗೆ ಅನ್ನಿಸಬಹುದು. ತಾವು ತಯಾರಿಸಿದ ಕೆಲವು ಬಾಣ ಬಿರುಸು, ಚರ್ಮವನ್ನು ಮಾರಾಟಕ್ಕೆ ಇಟ್ಟುಕೊಂಡಿದ್ದರು. ಒಬ್ಬ ಭಾರೀ ಆಸಾಮಿ ಬಣ್ಣದ ಸಕ್ಕರೆ ಮಣಿಗಳನ್ನು ಕಿವಿಯಾಭರಣ, ಹಾಗೂ ಕೈಬ್ಯಾಂಡ್ ಆಗಿ ಪೋಣಿಸುತ್ತಿದ್ದರು. ಅವರ ಬದುಕನ್ನೇ ಕಡೆಗಣ್ಣಲ್ಲಿ ಪೋಣಿಸಿದಂತೆ. ಆದರೂ ಅವು ಅಕ್ಕರೆಯ ಸಕ್ಕರೆ ಮಣಿಗಳಾಗಿದ್ದವು. ಅವರಿಗೆ ಅಮೂಲ್ಯವಾಗಿದ್ದವೇನೋ ಗೊತ್ತಿಲ್ಲ. ನನಗೆ ಅನುಮಾನ.
ಒಳಗೆ ಹೋದರೆ ‘ಅಟಾ’ ಎಂಬ ಸುಂದರಿ ರಂಗಕರ್ಮಿಯೊಬ್ಬರ ಫೋಟೋಗಳು. ಆಕೆ ಯೂರೋಪ್ ಸುತ್ತಿ ಬಂದು ನ್ಯೂಯಾರ್ಕ್ ನಲ್ಲಿ ಹೆಸರಾಗಿ ಈ ಬುಡಕಟ್ಟಿನ ಜನಜೀವನದ ಶೇಖರಣೆಯಲ್ಲಿ ನೆರವಾಗಿದ್ದರಿಂದ ಅವಳ ಉಲ್ಲೇಖವಿದೆ.

ಒಳ ಹೊಕ್ಕರೆ ಕಲ್ಲಿನ, ಮಣ್ಣಿನ ಹಾಗೂ ಮರದ ಬಳಕೆಯ ವಸ್ತುಗಳಿವೆ. ಆಮೆ ಹಾಗೂ ಎಮ್ಮೆ ಕೋಡಿನ ಅನುಕರಣೆಯ ಗಡಿಗೆಗಳು ಜಾಡಿಗಳು ಹೆಚ್ಚಿವೆ. ಇರುವಷ್ಟು ಸಂಗ್ರಹವನ್ನೇ ಅಚ್ಚುಕಟ್ಟಾಗಿ ಇಡಲಾಗಿದೆ.

ಇದರಲ್ಲಿ ಮಿಸ್ಸಿಸ್ಸಿಪ್ಪಿ ನಾಗರೀಕತೆಯ ಮುಖ್ಯ ಭಾಗದಂತೆ ವಿಶೇಷವಾದ ಕೆಂಪು ಮಣ್ಣಿನಿಂದ ಆದ ಜಾಡಿಗಳಿಗೆ ಮಡಿಕೆಗಳಿಗೆ ಹಾಗೂ ಮಾಡಿದ ಈ ಜನಾಂಗದ ನೈಪುಣ್ಯಕ್ಕೆ ತೆರೆದುಕೊಳ್ಳುವ ಒಂದು ಸುಂದರ ನಾಗರೀಕತೆಯಿದೆ. ಮಣ್ಣೆನ್ನುವುದೇ ಹೊಸತನ್ನು ಹುಟ್ಟಿಸುವ ಮೂಲ. ಜಗತ್ತಿನಾದ್ಯಂತ ಜನರು ಇದನ್ನೇ ನಂಬಿಕೊಂಡು ಬದುಕಿದ್ದರು.

ಎಷ್ಟೇ ನಾಗರೀಕತೆಗಳು ಅಳಿದರೂ ಹಳತನ್ನು ಕರಗಿಸಿ ಹೊಸದನ್ನು ಸೃಷ್ಟಿಸುವ ನೀರು, ಮಣ್ಣು, ಹಸಿರೆಂಬುದು ವಿಸ್ಮಯವೂ… ಜಗತ್ತಿನ ಸತ್ಯವೂ ಆಗಿದೆ. ಮೆಕ್ಕೆ ಜೋಳದ ತೆನೆಗಳಿರುವ ಕುಡಿಕೆಗಳು ಇಲ್ಲಿವೆ. ಬೆಳೆಯೊಂದನ್ನು ದಾಖಲಿಸುವಂತೆ. ಆಮೆಯ ಚಿಪ್ಪು ಹಾಗೂ ಸಣ್ಣ ನದಿಯ ಕಲ್ಲುಗಳಿಂದ ಮಾಡಿದ ಆಭರಣದ ಝಲಗುಡುವ ಸದ್ದು ಇಲ್ಲಿನ ಜನರು ಮಾಡುವ “ಸ್ಟೊಂಪ್ ಡಾನ್ಸ್” (stomp dance) ನ ವಿಶೇಷ. ಇದಕ್ಕೊಂದು ಕಥೆಯಿದೆ. ಅದು ನಂಬಿಕೆಯೂ ಆಗಿದೆ.

ಹಿಂದೆ ಒಬ್ಬ ಮಹಿಳೆ ನದಿ ತಟದಲ್ಲಿ ಕೂತಿದ್ದಾಗ ಆಮೆಯೇ ನದಿಯ ಮೇಲೆ ಬಂದು ತನ್ನ ಕವಚವನ್ನು ಕೊಟ್ಟಿತಂತೆ. ಅದನ್ನವಳು ತಂದು ತನ್ನ ಹಿಮ್ಮಡಿಗೆ ತೊಟ್ಟಳು. ನಡಿಗೆಗೆ ಅದರ ಸದ್ದಿಗೆ ಒಂದು ಲಯ ಹುಟ್ಟಿತು. ಅವಳಿಗೆ ಅದರೊಳಗೆ ಸಣ್ಣಗೆಜ್ಜೆ ಸದ್ದಿರಬೇಕು ಅನ್ನಿಸಿತು. ಝುಳುಝುಳು ಹರಿವ ನದಿಯ ಬಳಿ ಹೋಗಿ ನಯವಾದ ಕಲ್ಲುಗಳನ್ನು ಕೊಡು ಎಂದು ಕೇಳಿದಳಂತೆ. “ನಾನು ನಲಿಯಬೇಕು. ನುಲಿಯಬೇಕು. ಮನೋಲ್ಲಾಸಕ್ಕಾಗಿ ಕುಣಿಯಬೇಕು. ಮನೆಗೆ ಹೋದ ಮೇಲೂ ಈ ನಿನ್ನ ಸಂಗೀತ ನನ್ನ ಕಿವಿಯಲ್ಲಿರಬೇಕು” ಎಂದಳಂತೆ. ಆಗ ಅದು ತನ್ನ ಹಾಡಿನಲ್ಲಿ ಮಿಂದು ನಯವಾಗಿದ್ದ ಕಲ್ಲನ್ನು ಅವಳಿಗೆ ಕೊಟ್ಟಿತಂತೆ. ಇದನ್ನು ಆಮೆಯ ಕವಚದೊಳಗಿರಿಸಿ ಹಿಮ್ಮಡಿಗೆ ಕಟ್ಟಿಕೊಂಡು ತನ್ನ ಮೈ ಮನಸ್ಸಿನ ನಡುವೆ ಒಂದು ತಾಳಲಯಗಳನ್ನು ಅವಳು ಸೃಷ್ಟಿಸಿಕೊಂಡಳಂತೆ. ಆ ಸದ್ದು ನಮ್ಮ ಕರಾವಳಿಯಲ್ಲಿ ಭೂತ ಕೋಲದಲ್ಲಿ ಕಟ್ಟುವ ಗಗ್ಗರದ ಗೆಜ್ಜೆ ಸದ್ದಿನಂತಿರುತ್ತದೆ. ಅದು ಇಂದಿಗೂ ಮೈದುಂಬಿದ ಹೆಣ್ಣಿನ ನೃತ್ಯವಾಗಿ ಪರಂಪರೆಯನ್ನು ಬಿಂಬಿಸುತ್ತ ಮುಂದುವರೆದಿದೆ.

ಈ ಕಥೆ ನದೀ ತೀರದಲ್ಲಿ ಜೀವಿಸಿದ ಜನರ ಪರಸ್ಪರ ನಂಬಿಕೆಯ ಬೇರನ್ನು, ಚೆಲುವನ್ನು, ತನ್ನ ಮೂಲದ ಪ್ರೀತಿಯ ಸೆಲೆಯನ್ನು ಬಿಂಬಿಸುವುದಲ್ಲದೆ ಪ್ರಕೃತಿಯನ್ನು ಕಾಪಾಡಿಕೊಳ್ಳುವುದೂ ಕೂಡ ಆಗಿದೆ. ಮಾತೃ ಸಮಾಜದ ಕುರುಹಿನಂತೆ ಇದು ಇಂದಿಗೂ ಉಳಿದಿದೆ.

ಇಂಥದ್ದೇ ಪ್ರೇರಣೆಯಿಂದ ನಮ್ಮ ಹೆಸರಾಂತ ರಂಗಕರ್ಮಿ ಬಿ.ವಿ. ಕಾರಂತರು ತಮಗೆ ಸಿಕ್ಕುವ ಕಲ್ಲು, ಚಿಪ್ಪು, ತಗಡು ಡಬ್ಬಿಗಳನ್ನೂ ರಂಗಕ್ಕೆ ತಂದು ಮ್ಯೂಸಿಕ್ ಪಿಟ್ಟನ್ನು ಒಂದು ಮೆಟ್ಟಿಲು ಮೇಲಕ್ಕೇರಿಸಿದ್ದರು. ಅದು ಅವರ ಶಿಷ್ಯರಿಂದ ಆಗಾಗ ಪ್ರಯೋಗವಾಗುತ್ತಿದ್ದರೂ ಧಾರವಾಡ ರಂಗಾಯಣದಲ್ಲಿ, ಇತ್ತೀಚೆಗೆ ಮಾತಿಲ್ಲದ ಒಂದು ಅತ್ಯದ್ಭುತ ನಾಟಕ ಪ್ರಯೋಗವಾಗಿ, ಯಶಸ್ಸು ಕೂಡ ಕಂಡಿದೆ.

ಹಳೆಯದು ಹೊಸತಾಗುವ…. ಬಗೆಬಗೆಯು ಬಗೆಯುತ್ತಾ…. ಹೊರ ತೆಗೆಯುವ ದಾರಿಗಳಿವು.