“ನಿರ್ದೇಶಕ ಫ಼ರ್ಹಾದಿ ಕಟ್ಟಕಡೆಯವರೆಗೂ ಗಾಳಿಪಟವನ್ನು ತೋರಿಸುವುದೇ ಇಲ್ಲ. ಫ್ರೇಂ ನ ಎಡಕ್ಕೆ, ಬಲಕ್ಕೆ, ಒಮ್ಮೊಮ್ಮೆ ಹೊರಕ್ಕೆ ಎಲಿಯ ಮುಖ ಚಲಿಸುತ್ತಲೇ ಇರುತ್ತದೆ. ಗಾಳಿಪಟದ ಹಾರಾಟ ಅವಳ ಮುಖದಲ್ಲೇ ನಮಗೆ ಕಾಣಿಸುತ್ತಿರುತ್ತದೆ. ಫ಼ರ್ಹಾದಿ ಇಲ್ಲಿ ಎಲಿಯ ಚಲನೆಯ ಮೂಲಕ ಅವಳ ಬದುಕು ಮತ್ತು ಗಾಳಿಪಟ ಎರಡನ್ನೂ ಕಟ್ಟಿಕೊಟ್ಟುಬಿಡುತ್ತಾನೆ. ನಾನು ಇದುವರೆಗೂ ನೋಡಿರುವ ಚಲನಚಿತ್ರದ ದೃಶ್ಯಗಳಲ್ಲಿಯೇ ಸಿನೆಮಾಟೋಗ್ರಫಿಯಲ್ಲಿ ಅತ್ಯುತ್ತಮ ಎನ್ನಿಸಿರುವ ದೃಶ್ಯಗಳಲ್ಲಿ ಇದೂ ಒಂದು.”
ಲೇಖಕಿ ಸಂಧ್ಯಾರಾಣಿ ಬರೆಯುವ ಲೋಕ ಸಿನೆಮಾ ಟಾಕೀಸಿನಲ್ಲಿ ಇರಾನಿನ ಸಿನೆಮಾ ‘ಅಬೋಟ್ ಎಲಿ’

“A bitter ending is better than, bitterness without ending”

ಮುಕ್ತಾಯವೇ ಇಲ್ಲದ ಕಹಿಗಿಂತ, ಕಹಿಯಾದ ಮುಕ್ತಾಯವೇ ಮೇಲು – ಇಡೀ ಚಿತ್ರದಲ್ಲಿ ನನ್ನನ್ನು ಭಾವನಾತ್ಮಕವಾಗಿ ತಾಕಿದ್ದು ಈ ಒಂದು ಸಾಲು. ಸಾಧಾರಣವಾಗಿ ಚಿತ್ರ, ನಾಟಕ, ಅಕ್ಷರಗಳು ನನ್ನನ್ನು ತಾಕುವುದು ಅವುಗಳ ಭಾವಸಾಂದ್ರತೆಯ ಮೂಲಕವೇ. ನನ್ನ ಈ ಕ್ಯೂ (EQ), ನನ್ನ ಐಕ್ಯೂ (IQ) ಗಿಂತ ಬಲವಾಗಿದೆ ಎನ್ನುವುದು ನನಗೆ ಒಮ್ಮೊಮ್ಮೆ ಶಕ್ತಿಯೂ ಹೌದು ಮತ್ತು ಬಹುಶಃ ಮಿತಿಯೂ ಹೌದು. ಆದರೆ ಅಸ್ಗರ್ ಫ಼ರ್ಹಾದಿಯ ಈ ಚಿತ್ರ, ಅಬೋಟ್ ಎಲಿ (About Eli) ಯಲ್ಲಿ ಭಾವತೀವ್ರತೆಯ ಜೊತೆಜೊತೆಯಲ್ಲಿ ಮತ್ತೇನೋ ಇತ್ತು.

ಯಾವುದೇ ನಿರೀಕ್ಷೆ ಇಲ್ಲದಾಗ, ಯಾವ ಮಾನದಂಡವನ್ನೂ ಮುಟ್ಟಬೇಕಾದ, ಮೀರಬೇಕಾದ ಒತ್ತಡ ಇಲ್ಲದಾಗ ಪ್ರತಿಭಾವಂತ ನಿರ್ದೇಶಕನಲ್ಲಿ ಇರುವ ಒಂದು ಪ್ರಾಮಾಣಿಕತೆ, ನಿರಾಳತೆ, ಸ್ವಾತಂತ್ರ್ಯ ಮತ್ತು ದುನಿಯಾದ ಬಗೆಗಿನ ಒಂದು ಸವಾಲು ಈ ಚಿತ್ರದಲ್ಲಿ ಕಾಣಿಸುತ್ತಿತ್ತು. ಫ಼ರ್ಹಾದಿಯ ಮಿಕ್ಕ ಎರಡು ಚಿತ್ರಗಳಾದ ‘ಎ ಸಪರೇಷನ್’ ಮತ್ತು ‘ದಿ ಸೇಲ್ಸ್ ಮ್ಯಾನ್’ ಚಿತ್ರಗಳನ್ನು ನಾನು ನೋಡಿದ್ದೆ, ಎರಡೂ ವಿಶ್ವ ಮಟ್ಟದಲ್ಲಿ ಪ್ರಶಸ್ತಿ ಗಳಿಸಿದ, ಅನೇಕ ಚರ್ಚೆಗಳನ್ನು ಹುಟ್ಟು ಹಾಕಿದ ಚಿತ್ರಗಳು. ಆತ ತನ್ನ ಚಿತ್ರಗಳಲ್ಲಿ ವೈಯಕ್ತಿಕ ಸಂಬಂಧಗಳ ಮೂಲಕ ಸಾಮಾಜಿಕ ವಾಸ್ತವವನ್ನು ಅತ್ಯಂತ ಸೂಕ್ಷ್ಮ ಕಲೆಗಾರಿಕೆಯಿಂದ ಸೋಸುತ್ತಾ ಹೋಗುತ್ತಾನೆ. ಅವನ ಚಿತ್ರಗಳು ಏಕ ಸಮಯದಲ್ಲಿ ಒಂದು ಬದುಕು ಮತ್ತು ಒಂದು ಸಮಾಜ ಎರಡರ ಚಿತ್ರಣವನ್ನೂ ನಮ್ಮ ಮುಂದಿಡುತ್ತಾ ಹೋಗುತ್ತವೆ. ಇವೆರಡೂ ಚಿತ್ರಗಳಿಗಿಂತ ಮೊದಲು ಬಂದ ಚಿತ್ರ, ಅಬೋಟ್ ಎಲಿ. ಯಾವುದೇ ಮುನ್ನುಡಿ ಇಲ್ಲದೆ, ಕತೆ ಹೇಳದೆ ಫ಼ರ್ಹಾದಿ ನಿಮ್ಮನ್ನು ನೇರವಾಗಿ ವಾರಾಂತ್ಯದ ಪ್ರವಾಸಕ್ಕೆ ಬಂದ ಕುಟುಂಬ ಒಂದರ ನಡುವೆ ತಂದು ಬಿಟ್ಟು ಬಿಡುತ್ತಾನೆ.

ಮೂರು ದಂಪತಿಗಳು ಮತ್ತವರ ಮಕ್ಕಳು ವಾರಾಂತ್ಯದ ಪ್ರವಾಸಕ್ಕೆಂದು ಸಮುದ್ರ ದಂಡೆಯೊಂದಕ್ಕೆ ಬರುತ್ತಾರೆ. ಆ ಗುಂಪಿನಲ್ಲಿ ಅಹಮದ್ ಆಗಷ್ಟೇ ವಿಚ್ಛೇದನ ಪಡೆದವ. ಸಫೀದೆ ಖುಷಿಯ ಸ್ವಭಾವದ ಹೆಣ್ಣು. ಅವಳ ಓದು, ಸಮಾಜದಲ್ಲಿಯ ಸ್ಥಾನಮಾನ, ಬದುಕಿನ ಗೆಲುವು ಅವಳಲ್ಲಿ ಅಪಾರ ಆತ್ಮವಿಶ್ವಾಸ ತುಂಬಿದೆ. ಅವಳ ಜಗತ್ತಿನಲ್ಲಿ ನಿಂತು ಯೋಚಿಸಬೇಕಾದ ಘಟ್ಟಗಳು ಕಡಿಮೆ, ತನ್ನ ಬದುಕನ್ನಷ್ಟೇ ಅಲ್ಲ, ಸುತ್ತಲಿನವರ ಬದುಕನ್ನೂ ನಿರ್ಧರಿಸುವಷ್ಟು ಜಯಗಳು ಅವಳ ಬದುಕಿನಲ್ಲಿವೆ. ಹಾಗಾಗಿಯೇ ಅವಳು ಅಹಮದ್ ನಿಗೆ ಜೊತೆಯಾಗಬಹುದು ಎನ್ನುವ ಉದ್ದೇಶದಿಂದ ಮಗಳ ಟೀಚರ್ ಎಲಿಯನ್ನು ಬಲವಂತದಿಂದ ಪ್ರವಾಸಕ್ಕೆ ಕರೆದುಕೊಂಡು ಬಂದಿದ್ದಾಳೆ.

ಚಿತ್ರ ಶುರುವಾದಾಗ ನಮ್ಮ ಪರಿಸ್ಥಿತಿ ಥೇಟ್ ಎಲಿಯ ಪರಿಸ್ಥಿತಿಯಂತೆಯೇ ಇರುತ್ತದೆ. ಆ ಎರಡು ಭಿನ್ನಭಿನ್ನ ಜಗತ್ತುಗಳು ಅಚಾನಕ್ ಆಗಿ ಒಂದರೊಡನೊಂದು ಬೆರೆತು ಹೋದಂತ ಕಕ್ಕಾಬಿಕ್ಕಿ ಪರಿಸ್ಥಿತಿಯಲ್ಲಿ ಇಬ್ಬರೂ ಇರುತ್ತೇವೆ. ಪ್ರವಾಸಕ್ಕೆ ಬಂದಿಳಿದ ತಕ್ಷಣ ಎಲ್ಲವೂ ಎಲ್ಲೋ ಶೃತಿ ತಪ್ಪಿದಂತೆ ಇರುತ್ತದೆ. ಇವರು ಕಾದಿರಿಸಿದ ವಸತಿಗೃಹದ ಒಡೆಯರು ಬರುತ್ತಿದ್ದಾದ್ದರಿಂದ ಅದು ಇವರಿಗೆ ಒಂದು ರಾತ್ರಿಯ ಮಟ್ಟಿಗೆ ಮಾತ್ರ ಲಭ್ಯವಿರುತ್ತದೆ. ಅದರ ಕೇರ್ ಟೇಕರ್, ‘ನಾನು ನಿಮಗೆ ಮೊದಲೇ ಹೇಳಿದ್ದೆನಲ್ಲಾ?’ ಎಂದು ಕೇಳಿದಾಗ ಸಫೀದೆ, ಅಯ್ಯೋ ಅದನ್ನು ನಾನು ಎಲ್ಲರಿಗೂ ಹೇಳಿದ್ದರೆ ಪ್ರವಾಸಕ್ಕೆ ಬರಲು ಆಗುತ್ತಿರಲೇ ಇಲ್ಲ ಎಂದು ನಿರಾಳವಾಗಿ ನುಡಿದು ನಮ್ಮಲ್ಲಿ ಅಚ್ಚರಿಯನ್ನು ಹುಟ್ಟಿಸುತ್ತಾಳೆ. ಅಂದರೆ ಗುಂಪಿನ ನಿರ್ಧಾರವನ್ನು ತಾನೊಬ್ಬಳೇ ತೆಗೆದುಕೊಳ್ಳಬಾರದು ಎನ್ನುವ ಪ್ರಜ್ಞೆ ಅವಳ ಆಲೋಚನೆಗಳಲ್ಲಿಯೂ ಇಲ್ಲ!

ಆಗಲೂ ಅಷ್ಟೆ, ಇನ್ನೊಂದು ಯೊಚನೆ ಮಾಡದೆ ಅಹಮದ್ ಮತ್ತು ಎಲಿಯನ್ನು ತೋರಿಸಿ, ‘ನೋಡು ಅವರಿಬ್ಬರೂ ಹೊಸದಾಗಿ ಮದುವೆಯಾದವರು, ಈಗ ನೀವು ಬೇರೆ ವಸತಿಯ ವ್ಯವಸ್ಥೆಯನ್ನು ಮಾಡದೇ ಇದ್ದರೆ ಆ ನವದಂಪತಿಗಳು ಕಾರ್ ನಲ್ಲಿ ಮಲಗಬೇಕು’ ಎಂದು ಸರಾಗವಾಗಿ ಸುಳ್ಳು ಹೇಳಿ ಇನ್ನೊಂದು ಕಡಲ ದಂಡೆಯ ಮನೆಯನ್ನು ಗಿಟ್ಟಿಸುತ್ತಾಳೆ. ಸಂಪ್ರದಾಯದ ಹೊಸ್ತಿಲಿನೊಳಗೇ ಬದುಕುವ ಆ ಹಳ್ಳಿಯವರಿಗೆ ಪರಸ್ಪರ ಏನೂ ಅಲ್ಲದ ಹೆಣ್ಣು ಗಂಡುಗಳನ್ನು ದಂಪತಿ ಎಂದು ಪರಿಚಯಿಸುವುದು ನೈತಿಕವಾಗಿ ತಪ್ಪು, ಹಾಗೆ ಪರಿಚಯಿಸಿಕೊಂಡ ಅವರಿಬ್ಬರ ಬದುಕಿನ ಮೇಲೆ ಆ ಸುಳ್ಳು ಪರಿಣಾಮ ಬೀರಬಹುದು ಎನ್ನುವುದನ್ನೂ ಅವಳು ಯೋಚಿಸುವುದಿಲ್ಲ.

ಸರಿ. ಆ ಕಾರಣದಿಂದ ಈ ಗುಂಪಿಗೆ ಇನ್ನೊಂದು ಹಳೆಯ ಮನೆಯ ವ್ಯವಸ್ಥೆ ಆಗುತ್ತದೆ. ಆ ಕೇರ್ ಟೇಕರ್ ಹೆಣ್ಣು ಹೊಸ ಹಾಸಿಗೆಯೊಂದನ್ನು ಹೊರಲಾರದೆ ಹೊತ್ತುಕೊಂಡು ಬಂದು ‘ನವವಿವಾಹಿತೆ’ ಎಲಿಗೆ ಶುಭಾಶಯದ ಒಸಗೆ ಹಾಡನ್ನೂ ಹಾಡುತ್ತಾಳೆ. ಅವಳ ಮುಗ್ಧತೆಯನ್ನು ಕಂಡು ಸಫೀದೆಗೆ ಇನ್ನಿಲ್ಲದ ನಗು. ಅಲ್ಲಿ ಎಲ್ಲರೂ ಕೆಲವು ಸಲ ಸೂಕ್ಷ್ಮವಾಗಿ, ಕೆಲವು ಸಲ ಎಗ್ಗಿಲ್ಲದೆ ಅಹಮದ್ ಮತ್ತು ಎಲಿ ಇಬ್ಬರನ್ನೂ ರೇಗಿಸುತ್ತಿರುತ್ತಾರೆ. ಅವರಿಗೆ ಏಕಾಂತ ಕಲ್ಪಿಸಿಕೊಡುವ ಉದ್ದೆಶದಿಂದಲೇ ಅವರಿಬ್ಬರನ್ನೂ ದಿನಸಿ ತರಲು ಕಾರಿನಲ್ಲಿ ಕಳುಹಿಸುತ್ತಾರೆ. ಆಗ ಎಲಿ ಅಹಮದ್ ನ ಮುರಿದ ಮದುವೆಯ ಬಗ್ಗೆ ಕೇಳಿದಾಗಲೇ ಅವನು ಕಹಿ ಮುಕ್ತಾಯಗಳ (Bitter Ends) ಬಗ್ಗೆ ಮಾತನಾಡುವುದು. ಆಗ ಟೆಲಿಫೋನ್ ನಲ್ಲಿ ಅವಳು ಮಾತನಾಡಿದ ರೀತಿ ನೋಡಿದರೆ ನಮಗೂ ಎಲ್ಲೋ ಏನೋ ಸರಿಯಿಲ್ಲ ಅನ್ನಿಸುತ್ತದೆ. ವಸತಿ ಗೃಹಕ್ಕೆ ಹಿಂದಿರುಗಿದ ಮೇಲೆ ಎಲ್ಲರೂ ಹಾಡಿನಲ್ಲಿ ಮಗ್ನರಾಗಿದ್ದಾಗ ಮನೆಯಿಂದ, ಮನೆಯ ಫ್ರೇಂ ಗಳಿಂದ ಹೊರಗೇ ಉಳಿಯುವ ಎಲಿಯ ಮಾನಸಿಕ ಪರಿಸ್ಥಿತಿಯನ್ನು ಕ್ಯಾಮೆರಾ ಕಟ್ಟಿಕೊಡುತ್ತದೆ.

ಅಸ್ಗರ್ ಫ಼ರ್ಹಾದಿ

ಮರುದಿನ ಎಲಿ ಹೊರಡಬೇಕು ಎನ್ನುತ್ತಾಳೆ, ಸಫೀದೆ ಅವಳನ್ನು ಕಳುಹಿಸಲು ಒಪ್ಪುವುದಿಲ್ಲ, ಜೊತೆಗೆ ಬಂದಿದ್ದೇವೆ, ಜೊತೆಗೇ ಹಿಂದಿರುಗಬೇಕು ಎನ್ನುವುದು ಅವಳ ‘ಆಜ್ಞೆ’. ಎಲಿಯ ಮಾತುಗಳಿಗೆ, ವಿನಂತಿಗಳಿಗೆ ಕಿವುಡಾಗುವ ಅವಳು ಎಲಿಯ ಬ್ಯಾಗ್ ಮುಚ್ಚಿಟ್ಟು, ಫೋನ್ ಕಿತ್ತಿಟ್ಟುಕೊಂಡು ಏನೋ ಸಾಮಾನುಗಳನ್ನು ತರುವುದಿದೆ ಎಂದು ಹೊರಟುಬಿಡುತ್ತಾಳೆ. ಸಮುದ್ರದ ದಂಡೆಯಲ್ಲಿರುವ ಮಕ್ಕಳನ್ನು ನೋಡಿಕೊಳ್ಳುವ ಕೆಲಸ ಎಲಿಯ ಹೆಗಲಿಗೇರುತ್ತದೆ. ಮಕ್ಕಳೊಡನೆ ಎಲಿ ಗಾಳಿಪಟ ಆಡಲು ಬರುತ್ತಾಳೆ.

ಪ್ರತಿಯೊಂದು ಚಿತ್ರಕ್ಕೂ ಆತ್ಮ ಎನ್ನುವ ದೃಶ್ಯವೊಂದಿರುತ್ತದೆ, ಮಿಕ್ಕದ್ದೆಲ್ಲಾ ಆ ಆತ್ಮಕ್ಕೆ ಶರೀರ, ಮಾತು, ವಸ್ತ್ರ, ಅಲಂಕಾರ ಮಾಡುವ ಕೆಲಸ. ಹಾಗೆ ಈ ಚಿತ್ರದ ಆತ್ಮವಿರುವುದು ಈ ದೃಶ್ಯದಲ್ಲಿ. ಸಾಧಾರಣ ನಿರ್ದೇಶಕರಾದರೆ ಆ ಗಾಳಿಪಟ ಮತ್ತು ಎಲಿಯ ಮುಖ ಎರಡನ್ನೂ ತೋರಿಸಿ, ಅವರಿಬ್ಬರ ಪರಿಸ್ಥಿತಿಯಲ್ಲಿನ ಸಾಮ್ಯತೆಯ ಬಗ್ಗೆ ಮಾತನಾಡಬಹುದು. ಇನ್ನೂ ಸ್ವಲ್ಪ ಜಾಣರಾದರೆ ಆಕಾಶದಲ್ಲಿ ಸ್ವತಂತ್ರವಾಗಿ ಹಾರಾಡುತ್ತಿದ್ದರೂ, ಯಾವುದೋ ಕೈಬೆರಳುಗಳಲ್ಲಿ ಬಂಧಿಯಾಗಿರುವ ಗಾಳಿಪಟವನ್ನು ತೋರಿಸಬಹುದು. ಆದರೆ ಫ಼ರ್ಹಾದಿ ಕಟ್ಟಕಡೆಯವರೆಗೂ ಗಾಳಿಪಟವನ್ನು ತೋರಿಸುವುದೇ ಇಲ್ಲ. ಫ್ರೇಂ ನ ಎಡಕ್ಕೆ, ಬಲಕ್ಕೆ, ಒಮ್ಮೊಮ್ಮೆ ಹೊರಕ್ಕೆ ಎಲಿಯ ಮುಖ ಚಲಿಸುತ್ತಲೇ ಇರುತ್ತದೆ. ಗಾಳಿಪಟದ ಹಾರಾಟ ಅವಳ ಮುಖದಲ್ಲೇ ನಮಗೆ ಕಾಣಿಸುತ್ತಿರುತ್ತದೆ. ಫ಼ರ್ಹಾದಿ ಇಲ್ಲಿ ಎಲಿಯ ಚಲನೆಯ ಮೂಲಕ ಅವಳ ಬದುಕು ಮತ್ತು ಗಾಳಿಪಟ ಎರಡನ್ನೂ ಕಟ್ಟಿಕೊಟ್ಟುಬಿಡುತ್ತಾನೆ. ನಾನು ಇದುವರೆಗೂ ನೋಡಿರುವ ಚಲನಚಿತ್ರದ ದೃಶ್ಯಗಳಲ್ಲಿಯೇ ಸಿನೆಮಾಟೋಗ್ರಫಿಯಲ್ಲಿ ಅತ್ಯುತ್ತಮ ಎನ್ನಿಸಿರುವ ದೃಶ್ಯಗಳಲ್ಲಿ ಇದು ಒಂದು. ಸ್ಟ್ಯಾಂಡ್ ಹಾಕದೆ, ಕೈಲಿ ಹಿಡಿದ ಕ್ಯಾಮೆರಾ ಎಲಿಯ ಮುಖದ ಎಲ್ಲಾ ಭಾವಗಳನ್ನೂ ಎಳೆ ಎಳೆಯಾಗಿ ಬಿಡಿಸಿಡುತ್ತದೆ. ಅದರ ಜರ್ಕ್ ಹುಟ್ಟಿಸುವ ಚಲನೆಯಲ್ಲಿ ಆ ದೃಶ್ಯದ ಅಂತರಾಳದಲ್ಲಿರುವ ಅಲ್ಲೋಲ ಕಲ್ಲೋಲ ಅನುಭವಕ್ಕೆ ಬರುತ್ತದೆ.

ಚಿತ್ರದ ಭಾಷೆಯಲ್ಲೇ ಹೇಳುವುದಾದರೆ, ಕಟ್ ಮಾಡಿದರೆ ಮುಂದಿನ ದೃಶ್ಯದಲ್ಲಿ ಗುಂಪಿನ ಗಂಡಸರೆಲ್ಲಾ ವಾಲಿಬಾಲ್ ಆಡುತ್ತಿರುತ್ತಾರೆ, ಪುಟಾಣಿ ಮಗುವೊಂದು ಬಂದು ತನ್ನ ತೊದಲು ಭಾಷೆಯಲ್ಲಿ ಏನೋ ಹೇಳುತ್ತದೆ. ಮುಂದಿನ ದೃಶ್ಯದ ರೌದ್ರತೆಗೆ ಒಂದಿಷ್ಟೂ ಸಂಬಂಧವಿಲ್ಲದಂತೆ ಫ್ರೇಂನೊಳಕ್ಕೆ ನಿಧಾನವಾಗಿ ಬರುವ ಮಗು ಮತ್ತು ಅದರ ಮೃದು ಮಾತು ಸೃಷ್ಟಿಸುವ ಕಾಂಟ್ರಾಸ್ಟ್ ರಕ್ತ ಹೆಪ್ಪುಗಟ್ಟಿಸುವಂತಹದ್ದು. ಆ ಮಗುವಿನ ಮಾತುಗಳಿಗೆ ದೊಡ್ಡವರು ಗಮನ ಕೊಡುವುದಿಲ್ಲ, ಅಷ್ಟರಲ್ಲಿ ಇನ್ನು ಸ್ವಲ್ಪ ದೊಡ್ಡ ಮಗು ಬರುತ್ತದೆ, ಏನೋ ಕೂಗಿ ಹೇಳುತ್ತದೆ. ದೊಡ್ಡವರಿಗೆ ಏನೋ ಗಂಭೀರವಾದದ್ದು ಘಟಿಸಿದೆ ಎಂದು ಅರಿವಾಗಿ ಎಲ್ಲರೂ ಕೂಗುತ್ತಾ ಸಮುದ್ರದೆಡೆಗೆ ಓಡುತ್ತಾರೆ. ಈ ಚಿತ್ರದ ಇನ್ನೊಂದು ಅದ್ಭುತ ಛಾಯಾಗ್ರಹಣ ದೃಶ್ಯ ಇರುವುದು ಇಲ್ಲಿ. ಇಲ್ಲಿಯೂ ಕೈಯಲ್ಲಿ ಹಿಡಿದ ಒಂದು ಕ್ಯಾಮೆರಾ. ಮನೆಯೊಳಗಿನಿಂದ ಸಮುದ್ರಕ್ಕೆ ಓಡಿ ಬರುವ ಜನ. ಸಣ್ಣ ಸಣ್ಣ, ಧಿಡೀರ್ ಚಲನೆಯಲ್ಲಿ ಕ್ಯಾಮೆರಾ ಎಲ್ಲರ ಮುಖ, ಆಕಾಶ, ಸಮುದ್ರ, ನೀರು, ದಡ, ಕಲ್ಲು ಎಲ್ಲದರ ಮೇಲೆ ಪ್ಯಾನ್ ಆಗುತ್ತಾ ಸನ್ನಿವೇಶದ ಎದೆಬಡಿತ ಏರಿಸುತ್ತದೆ. ಆ ಕ್ವಚಿತ್ ಚಲನೆ ಒಂದು ಸನ್ನಿವೇಶಕ್ಕೆ ಆ ಮಟ್ಟದ ಉಸಿರುಗಟ್ಟಿಸುವಿಕೆ ತರಬಹುದು ಎಂದು ಅರ್ಥವಾಗಲು ಚಿತ್ರವನ್ನು ನೋಡಲೇಬೇಕು.

ಎದ್ದು ಬಿದ್ದು ಹುಡುಕಾಡಿದ ನಂತರ ನೀರುಕುಡಿದು ಪ್ರಜ್ಞೆ ತಪ್ಪಿದ್ದ ಮಗು ಸಿಗುತ್ತದೆ. ಹೇಗೋ ನೀರು ಹೊರತೆಗೆದ ಮೇಲೆ ಮಗು ಉಸಿರಾಡುತ್ತದೆ, ಎಚ್ಚರಾಗುತ್ತದೆ. ಸುತ್ತುವರಿದವರ ಜೊತೆಯಲ್ಲಿ ನಾವೂ ಕಟ್ಟಿಟ್ಟುಕೊಂಡಿದ್ದ ಉಸಿರನ್ನು ಬಿಡುತ್ತೇವೆ. ‘ಅಬ್ಬಾ’ ಎಂದು ನಿರಾಳವಾಗುವುದರಲ್ಲಿ ಅವರಿಗೆ ಎಲಿ ಕಾಣುತ್ತಿಲ್ಲ ಎನ್ನುವುದು ಗಮನಕ್ಕೆ ಬರುತ್ತದೆ. ಎಲ್ಲಾ ಒತ್ತಡ ಮತ್ತೆ ಅವರ ಹೆಗಲ ಮೇಲೆ ಕೂರುತ್ತದೆ. ಮತ್ತೆ ಹುಡುಕಾಟ ಶುರು, ಉಹೂ ಎಲಿ ಸಿಗುವುದಿಲ್ಲ. ಚಿತ್ರ ಇನ್ನೊಂದು ಮಗ್ಗುಲು ತಿರುಗುತ್ತದೆ. ನಿಸರ್ಗದ ಸಹಜ ದುರಂತಕ್ಕಿಂತ ದೊಡ್ಡದು ಎಂದರೆ ಅದುವರೆವಿಗೂ ಅತ್ಯಂತ ಸುಶಿಕ್ಷಿತರು, ಸಮಾಜದ ಮೇಲ್ವರ್ಗಕ್ಕೆ ಸೇರಿದವರು ಎಂದುಕೊಳ್ಳುತ್ತಿದ್ದ ಈ ಗುಂಪಿನ ಒಳಗಿನ ನೈತಿಕ ದಿವಾಳಿತನ, ಹೇಡಿತನ, ಸಾಮಾಜಿಕ ಅಂತಸ್ತಿನ ಮುಖವಾಡದ ಹಿಂದಿನ ಪಿತೃಪ್ರಧಾನ ಆಲೋಚನಾ ಧಾಟಿ, ತೀರಾ ಕುತ್ತಿಗೆಗೆ ಬರುತ್ತದೆ ಎಂದಾಗ ಸತ್ತಿದ್ದಾಳೆ ಎನ್ನುವುದನ್ನೂ ಗಮನಿಸದೆ ಒಬ್ಬಳ ಮರ್ಯಾದೆಯನ್ನು ಬಲಿಕೊಟ್ಟಾದರೂ ತಾವು ಪಾರಾಗಬೇಕು ಎನ್ನುವ ಕುತ್ಸಿತತೆ ಎಲ್ಲವೂ ಒಂದೊಂದಾಗಿ ಪೊರೆ ಕಳಚಿದಂತೆ ಕಳಚಿಕೊಂಡು ಹೊರಬರುತ್ತದೆ.

ಎಲಿಯ ಫೋನ್ ಪರಿಶೀಲಿಸಿದಾಗ ಅವಳಿಗೆ ಒಂದು ನಂಬರ್ ನಿಂದ ಫೋನ್ ಬಂದಿರುವುದು ಗೊತ್ತಾಗಿ, ಅಲ್ಲಿ ಪ್ರಯತ್ನಿಸಿದಾಗ ಆ ವ್ಯಕ್ತಿ ತಾನು ಎಲಿಯ ಸಹೋದರ ಎಂದು ಹೇಳುತ್ತಾನೆ, ಕೂಡಲೇ ಅಲ್ಲಿಗೆ ಬರುತ್ತೇನೆ ಎಂದು ಹೇಳುತ್ತಾನೆ. ಅವನನ್ನು ಕರೆದುಕೊಂಡು ಬರಲು ಅಹಮದ್ ಹೊರಟಾಗ ಅವನ ಜೊತೆಗೆ ಹೋಗುವ ಸಫೀದೆ ಮೊದಲ ಬಾರಿಗೆ ಸತ್ಯ ಹೇಳುತ್ತಾಳೆ, ಅಥವಾ ಸತ್ಯ ಹೇಳುತ್ತಿದ್ದೇನೆ ಎಂದು ಹೇಳುತ್ತಾಳೆ. ಏಕೆಂದರೆ ಅವಳ ಎಲ್ಲಾ ಸತ್ಯಗಳಿಗೂ ಇರುವ ಆಯಸ್ಸು, ಯಾರಾದರೂ ಅಥವಾ ಏನಾದರೂ ಅದರ ಮುಖವಾಡವನ್ನು ಕಳಚುವವರೆವಿಗೂ ಮಾತ್ರ. ನಿಧಾನವಾಗಿ ಒಂದೊಂದೇ ವಿಷಯ ಹೊರಗೆ ಬರುತ್ತವೆ. ಬರುತ್ತಿರುವಾತ ಎಲಿಯ ಸಹೋದರ ಅಲ್ಲ, ವಿವಾಹ ನಿಶ್ಚಯವಾಗಿದ್ದ ವರ ಎಂದು ಗೊತ್ತಾಗುತ್ತದೆ. ಹಾಗಾದರೆ ಎಲಿಯನ್ನು ಅಹಮದ್ ನಿಗೆ ಏಕೆ ಪರಿಚಯಿಸಿದೆ ಎಂದಾಗ ಅವರಿಬ್ಬರ ನಿಶ್ಚಿತಾರ್ಥ ಮುರಿದಿತ್ತು ಎಂದು ಹೇಳುತ್ತಾಳೆ. ಹಾಗಾದರೆ ಅವನು ಮತ್ತೆ ಅವಳಿಗೆ ಏಕೆ ಫೋನ್ ಮಾಡುತ್ತಿದ್ದ ಎಂದರೆ, ಅವಳು ನಿಶ್ಚಿತಾರ್ಥ ಮುರಿದುಕೊಂಡಿದ್ದಳು, ಆದರೆ ಅವನಿಗೆ ಅವಳು ಬೇಕಿತ್ತು, ಅವಳ ಹಿಂದೆ ಬಿದ್ದಿದ್ದ ಎನ್ನುತ್ತಾಳೆ. ಅವಳು ಬರಲು ಒಪ್ಪಿರಲಿಲ್ಲ, ಆದರೆ ನಾನೇ ಅವಳಿಗೆ ತಿಳಿಯದಂತೆ ಅವಳ ಫೋಟೋ ಅಹಮದ್ ಗೆ ಕಳಿಸಿ, ಅವನು ಇಷ್ಟ ಪಟ್ಟಿದ್ದರಿಂದ ಅವಳನ್ನು ಬಲವಂತವಾಗಿ ಒಪ್ಪಿಸಿ ಕರೆತಂದೆ ಎನ್ನುತ್ತಾಳೆ. ಸುಳ್ಳಿಗೂ ಸತ್ಯಕ್ಕೂ ನಡುವಿನ ರೇಖೆ ಈಗ ಪದೇಪದೇ ಜಾಗ ಬದಲಿಸುತ್ತಿರುತ್ತದೆ.

ಆದರೆ ಫ಼ರ್ಹಾದಿ ಕಟ್ಟಕಡೆಯವರೆಗೂ ಗಾಳಿಪಟವನ್ನು ತೋರಿಸುವುದೇ ಇಲ್ಲ. ಫ್ರೇಂ ನ ಎಡಕ್ಕೆ, ಬಲಕ್ಕೆ, ಒಮ್ಮೊಮ್ಮೆ ಹೊರಕ್ಕೆ ಎಲಿಯ ಮುಖ ಚಲಿಸುತ್ತಲೇ ಇರುತ್ತದೆ. ಗಾಳಿಪಟದ ಹಾರಾಟ ಅವಳ ಮುಖದಲ್ಲೇ ನಮಗೆ ಕಾಣಿಸುತ್ತಿರುತ್ತದೆ. ಮಾಜಿದಿ ಇಲ್ಲಿ ಎಲಿಯ ಚಲನೆಯ ಮೂಲಕ ಅವಳ ಬದುಕು ಮತ್ತು ಗಾಳಿಪಟ ಎರಡನ್ನೂ ಕಟ್ಟಿಕೊಟ್ಟುಬಿಡುತ್ತಾನೆ.

ಫೋನ್ ಮಾಡಿದಾತ ಬರುತ್ತಾನೆ. ಅವನೆದುರಲ್ಲಿ ಮಕ್ಕಳು ಯಾರಾದರೂ ಏನಾದರೂ ಮಾತನಾಡಿಯಾರು ಎಂದು ಮಕ್ಕಳಿಗೂ ಈ ‘ವಿದ್ಯಾವಂತ’ರಿಂದ ಸುಳ್ಳಿನ ಪಾಠ ಆಗುತ್ತದೆ. ಇಷ್ಟೆಲ್ಲಾ ಆಗುವಾಗಲೂ ಇನ್ನೂ ಎಲಿಯ ದೇಹ ಸಮುದ್ರದಲ್ಲಿ ಸಿಕ್ಕಿಲ್ಲ. ಅವಳು ನಿಜಕ್ಕೂ ನೀರಿನಲ್ಲಿ ಮುಳುಗಿದಳೆ, ಅಥವಾ ತನ್ನ ಪಾಡಿಗೆ ತಾನು ಎದ್ದು ಹೊರಟು ಬಿಟ್ಟಳೆ ಎನ್ನುವುದು ಅವರಿಗೆ ಸ್ಪಷ್ಟವಾಗಿಲ್ಲ. ಅವರು ಈ ಹೊಯ್ದಾಟದಲ್ಲಿರುವಾಗಲೇ ಆ ವಸತಿಗೃಹದ ಹೆಂಗಸು ಬಂದು ಆ ಬಂದಿದ್ದ ವ್ಯಕ್ತಿಗೆ ಅಹಮದ್ ಮತ್ತು ಎಲಿ ದಂಪತಿಗಳು ಎಂದು ಹೇಳಿಬಿಡುತ್ತಾಳೆ. ಅಲ್ಲೊಂದು, ಇಲ್ಲೊಂದು, ನಿರಪಾಯಕಾರಿ ಎಂದುಕೊಂಡು ಎಸೆದಿದ್ದ ಸುಳ್ಳುಗಳೆಲ್ಲಾ ಈಗ ಒಂದಾಗಿ, ಇವರ ಊಹೆಗೂ ನಿಲುಕದಂತೆ ಬಂದು ಇವರ ಮುಖಕ್ಕೆ ಅಪ್ಪಳಿಸಿದಂತಾಗುತ್ತದೆ. ಇವರ ಧರ್ಮಸಂಕಟ ಈಗ ಇನ್ನೂ ಆಳಕ್ಕಿಳಿಯುತ್ತದೆ. ಊರಿನವರ ದೃಷ್ಟಿಯಲ್ಲಿ ಸತ್ತವಳು ಅಹಮದ್ ನ ಹೆಂಡತಿ. ಆದರೆ ಅವಳಿಗೆ ನಿಶ್ಚಯವಾಗಿದ್ದ ಹುಡುಗ ಈಗ ಬಂದಿದ್ದಾನೆ, ಅವನು ಇವರನ್ನು ಆ ಬಗ್ಗೆ ಕೇಳಿದರೆ ಏನು ಹೇಳಬೇಕು?

ಅವಳು ಇನ್ನೊಬ್ಬನಿಗೆ ನಿಶ್ಚಯವಾಗಿದ್ದ ಹೆಣ್ಣು ಎಂದು ಗೊತ್ತಿದ್ದರೂ ಇಲ್ಲೊಬ್ಬನಿಗೆ ಜೊತೆಯಾಗಲೆಂದು ಕರೆತಂದೆವು ಎಂದರೆ ಸಂಪ್ರದಾಯಬದ್ಧ ಇರಾನ್ ಸಮಾಜದಲ್ಲಿ ಅದು ಘೋರ ಪಾಪ. ಅದರ ಹೊಣೆಯನ್ನು ಎಲ್ಲರೂ ಹೊರಬೇಕು. ಅದರಿಂದ ತಪ್ಪಿಸಿಕೊಳ್ಳಲು ಅವರಿಗೆ ಇರುವ ಒಂದೇ ದಾರಿ, ಎಲಿಗೆ ನಿಶ್ಚಿತಾರ್ಥ ಆಗಿದ್ದಿದ್ದು ನಮಗೆ ಗೊತ್ತಿರಲಿಲ್ಲ, ಅವಳೇ ನಮ್ಮ ಜೊತೆ ಬಂದಳು ಎಂದು ಹೇಳುವುದು. ಎಲ್ಲರೂ ಅದಕ್ಕೆ ತಯಾರಾಗುತ್ತಾರೆ. ಮೊದಮೊದಲು ಸಫೀದೆ ಅದಕ್ಕೆ ಪ್ರತಿರೋಧ ಒಡ್ಡುತ್ತಾಳಾದರೂ ತೀರಾ ಕುತ್ತಿಗೆಗೆ ಬಂದಾಗ ಅವಳು ಆಯ್ದುಕೊಳ್ಳುವುದು ಸಹ ಸುಲಭವಾಗಿ ಬಚಾವ್ ಆಗುವ ಹಾದಿಯನ್ನೇ. ಆದರೆ ಅವಳು ಆ ಹಾದಿಯನ್ನು ಆಯ್ದುಕೊಳ್ಳುವುದಕ್ಕೂ ಮೊದಲು ಅವಳು ಎದುರಿಸುವ ನೈತಿಕ ಸವಾಲು, ಅವಳ ಒದ್ದಾಟ, ಅವಳ ಮನಸ್ಸಿನ ಘರ್ಷಣೆ… ಫ಼ರ್ಹಾದಿ ಎಲ್ಲೂ ಸುಲಭದ ಆಯ್ಕೆಯನ್ನು ಕೈಗೆತ್ತಿಕೊಳ್ಳುವುದಿಲ್ಲ. ವ್ಯಕ್ತಿ ವ್ಯಕ್ತಿಗಳ ನಡುವಿನ ಸಂಘರ್ಷ, ವ್ಯಕ್ತಿ ಮತ್ತು ಪರಿಸ್ಥಿತಿಯ ನಡುವಿನ ಸಂಘರ್ಷ, ವ್ಯಕ್ತಿ ಮತ್ತು ಮೌಲ್ಯಗಳ ನಡುವಿನ ಸಂಘರ್ಷ ಎಲ್ಲವನ್ನೂ ಅದರ ಎಲ್ಲಾ ಸಂಕೀರ್ಣತೆಯೊಂದಿಗೇ ನಮ್ಮೆದುರಿಗಿಡುತ್ತಾನೆ.

ಆದರೆ ಚಿತ್ರಕ್ಕೆ ನಿಜಕ್ಕೂ ಎಣಿಸದ ಆಯಾಮ ದೊರಕುವುದು ಆ ನಿಶ್ಚಯವಾಗಿರುವ ವ್ಯಕ್ತಿಯನ್ನು ಫ಼ರ್ಹಾದಿ ಕಟ್ಟಿಕೊಡುವ ರೀತಿಯಿಂದ. ಅವನು ಕೆಟ್ಟವನು ಎನ್ನಲು ನಮಗೆ ಯಾವುದೇ ಪುರಾವೆಗಳು ಸಿಗುವುದಿಲ್ಲ. ನಿಜಕ್ಕೂ ಎಲಿ ಮತ್ತು ಅವನ ನಡುವೆ ಸಮಸ್ಯೆ ಇತ್ತೆ? ಇದ್ದರೆ ಅದರ ಸ್ವರೂಪ ಏನು? ಅವರಿಬ್ಬರೂ ನಿಜಕ್ಕೂ ಬೇರೆಯಾಗಲು ನಿರ್ಧರಿಸಿದ್ದರೆ? ಉಹೂ, ಫ಼ರ್ಹಾದಿ ಯಾವುದಕ್ಕೂ ಉತ್ತರ ಕೊಟ್ಟು ನಮ್ಮೆದುರಲ್ಲಿ ಸರಳ ಪರಿಹಾರಗಳನ್ನು ಇಡುವುದಿಲ್ಲ. ಎಲಿ ಕಾಣುತ್ತಿಲ್ಲ ಎಂದಾಗ ಆ ಬಂದವನು ಅನುಭವಿಸುವ ಸಂಕಟ, ಅಹಮದ್ ನನ್ನು ಕಂಡು ಅವನ ಅನುಮಾನ, ಕೋಪ, ವಿಹ್ವಲತೆ ಕಂಡರೆ ಎಲ್ಲವೂ ಸಫೀದೆ ಹೇಳುವಷ್ಟು ಸರಳವಾಗಿಲ್ಲ ಎಂದು ನಮಗೇ ಅನ್ನಿಸಲು ಶುರುವಾಗುತ್ತದೆ. ಕಡೆಯಲ್ಲಿ ಅವನು ಸಫೀದೆಗೆ ಕೇಳುವುದು ಒಂದೆ ಪ್ರಶ್ನೆ, ‘ಹೀಗೆ ನೀನೇನೋ ಅವಳನ್ನು ವಾರಾಂತ್ಯಕ್ಕೆ ಇಲ್ಲಿಗೆ ಕರೆದೆ ಸರಿ, ಆದರೆ ಅವಳು ನಿರಾಕರಿಸಲಿಲ್ಲವೆ? ಬರುವುದಿಲ್ಲ ಎನ್ನಲಿಲ್ಲವೆ? ನನ್ನ ಬಗ್ಗೆ ಏನೂ ಹೇಳಲಿಲ್ಲವೆ?’, ಸಫೀದೆಯ ಉತ್ತರಕ್ಕಾಗಿ ಅವನು ಹೃದಯವನ್ನೇ ಕಣ್ಣುಗಳಲ್ಲಿ ತುಂಬಿಕೊಂಡು ನಿಂತು ಕಾಯುತ್ತಿರುತ್ತಾನೆ. ಎಲ್ಲರ ಒತ್ತಡಕ್ಕೆ ಒಳಗಾಗಿಯೋ, ಅಥವಾ ತಾನು ಪಾರಾಗಬೇಕೆನ್ನುವ ಕಾರಣದಿಂದಲೋ ಸಫೀದೆ ‘ಉಹೂ ಅವಳೇನೂ ಹೇಳಲಿಲ್ಲ’ ಎಂದು ಬಿಡುತ್ತಾಳೆ. ನಮ್ಮ ಕಣ್ಣೆದುರಲ್ಲೇ ಅವನು ಚೂರಾಗಿ ಹೋಗುತ್ತಾನೆ. ಅವನ ಜೊತೆಯಲ್ಲಿ ಸಫೀದೆ ಎನ್ನುವವಳ ಅಂತರಾತ್ಮವೂ…

ಇಷ್ಟೆಲ್ಲಾ ಆಗುವುದರಲ್ಲಿ ಯಾವುದೋ ದೇಹ ಸಿಕ್ಕಿದೆ ಎನ್ನುವ ವರ್ತಮಾನ ಬರುತ್ತದೆ. ಅದು ಎಲಿಯ ದೇಹ, ಆಕೆ ಮತ್ತೊಮ್ಮೆ, ಈ ಸಲ ಸಂಪೂರ್ಣವಾಗಿ ಸತ್ತಿದ್ದಾಳೆ, ಅವಳ ದೇಹ ಮತ್ತು ಆತ್ಮ ಎರಡೂ ಕೊನೆಯಾಗಿದೆ. ಚಿತ್ರ ಮುಗಿದಾಗ ‘ಯಾರ ಲೀಲೆಗೋ ಯಾರೋ ಏನೋ ಗುರಿ ಇರದೆ ಬಿಟ್ಟ ಬಾಣ’ದಂತೆ, ಮನೆಯ ಮುಂದೆ ನಿಂತಿದ್ದ ಕಾರಿನ ಚಕ್ರಗಳು ಸಮುದ್ರ ದಂಡೆಯ ಮೇಲಿನ ಉಸುಕಿನಲ್ಲಿ ಹೂತು ಹೋಗಿವೆ. ಎಲ್ಲರೂ ಅದನ್ನು ಹೊರ ತೆಗೆಯಲು ಪ್ರಯತ್ನಿಸಿದರೂ, ಸುಳ್ಳೆಂಬ ಉಸುಕು ಅದನ್ನು ಇನ್ನೂ ಇನ್ನೂ ತನ್ನೊಳಗೆ ಎಳೆದುಕೊಳ್ಳುತ್ತಲೇ ಇದೆ.

ಒಂದು ಸಿನಿಮಾ ಹೇಗಿರಬೇಕು ಎಂದು ಮಾತನಾಡುತ್ತಾ ಫ಼ರ್ಹಾದಿ ಒಂದೆಡೆ, ‘ಒಂದು ಚಿತ್ರ ಅದನ್ನು ವೀಕ್ಷಿಸುವವರು ತಮ್ಮನ್ನು ತಾವೇ ಪರಿಶೀಲಿಸಿಕೊಳ್ಳಲು ಅನುವಾಗುವ ತಾವೊಂದನ್ನು ಕಟ್ಟಿಕೊಡಬೇಕು. ಅದು ಅವರನ್ನು ಕೇವಲ ‘ಗ್ರಾಹಕ’ರಾಗುವುದರಿಂದ ತಪ್ಪಿಸಿ, ಸ್ವತಂತ್ರ್ಯ ಚಿಂತಕರನ್ನಾಗಿ ಮಾಡಲು ಪ್ರಯತ್ನಿಸಬೇಕು’ ಎಂದು ಹೇಳುತ್ತಾನೆ. ಈ ಚಿತ್ರದ ಮಟ್ಟಿಗಂತೂ ಅದು ಸಂಪೂರ್ಣ ಸತ್ಯ. ಫ಼ರ್ಹಾದಿ ಇಲ್ಲಿ ಯಾವುದನ್ನೂ ಇದಂಇತ್ಥಂ ಎಂದು ಹೇಳುವುದಿಲ್ಲ. ಈ ಚಿತ್ರದ ಕನ್ನಡಿಯ ಮೇಲ್ಮೈನಲ್ಲಿ ಎಲ್ಲೋ ಒಂದೆಡೆ ನಿಮಗೆ ನಿಮ್ಮ ಅಥವಾ ನಿಮ್ಮವರ ಪ್ರತಿಬಿಂಬ ಕಾಣಸಿಗಬಹುದು. ಅದಕ್ಕೆ ನಿರ್ದೇಶಕನಷ್ಟೇ ನೀವೂ ಪ್ರಯತ್ನಿಸಬೇಕು. ಸಿನಿಮಾ ಎನ್ನುವ ಮ್ಯಾಜಿಕ್ ಸಿದ್ಧಿಸಬೇಕಾದರೆ ನೋಡುವವರು ಸೀಟ್ ಬಿಟ್ಟು ಅರ್ಧದಾರಿಗೆ ನಡೆದು, ನಿರ್ದೇಶಕನನ್ನು ಮುಟ್ಟಬೇಕಾಗುತ್ತದೆ. ಹಾಗೆ ನಡೆಯಬಲ್ಲವರಿಗೆ ನಡೆದಷ್ಟೂ ಈ ಸಿನಿಮಾ.