“ಕೆಲವೊಮ್ಮೆ ಸಣ್ಣಪುಟ್ಟ ಕಿರಿಕಿರಿಗಳೇ ಬದುಕಿನ ದೊಡ್ಡ ಸಮಸ್ಯೆಯಂತೆ ಎದುರು ನಿಲ್ಲುತ್ತವೆ. ಈ ಗಂಡ, ಮಗು, ಸಂಸಾರ, ದುಡಿಮೆ, ಸಂಪಾದನೆ, ಕೊಂಕು ಮಾತು, ಅನಾರೋಗ್ಯ ಎಲ್ಲದರಿಂದ ಬಹಳ ದೂರ ಹೋಗಿ, ನಾನೊಬ್ಬಳೇ ಪ್ರಶಾಂತವಾಗಿ ಕೆಲಕಾಲ ಕಳೆಯಬೇಕನ್ನಿಸುತ್ತೆ. ಆದರೆ ಎಲ್ಲಿ ಹೋಗುವುದು? ಹೀಗೆ ವಾಸ್ತವ ಹಿಂಸೆಯೆನಿಸಿದಾಗೆಲ್ಲ, ಬೇಸರದಲ್ಲೇ ಕತ್ತಲಕೋಣೆಯಲ್ಲಿ ಉಳಿಯುವುದರ ಬದಲು, ಮನೆತುಂಬ ಬೆಳಕಾಗುವಂತೆ ಝಗಮಗಿಸಿ, ಸ್ನಾನ ಮಾಡಿ, ನಾನು ಹೊಸದಾಗಿ ಕೊಂಡ ಬಟ್ಟೆ ತೊಟ್ಟು, ನನಗೇ ಹೆಮ್ಮೆಯಾಗುವಷ್ಟು ಚೆಂದಕ್ಕೆ ಅಲಂಕರಿಸಿಕೊಂಡು ಅರ್ಧಗಂಟೆ ಕನ್ನಡಿಯ ಮುಂದೆ ನಗುಮುಖದಲ್ಲಿ ಕೂತಿರುತ್ತೇನೆ.”
ಎಸ್. ನಾಗಶ್ರೀ ಅಜಯ್‌ ಬರೆಯುವ ಲೋಕ ಏಕಾಂತ ಅಂಕಣದಲ್ಲಿ ಹೊಸ ಬರಹ

ಈಗ ಕೆಲವು ದಿನಗಳ ಹಿಂದೆ ಪರಿಚಯದ ಹುಡುಗಿಯೊಬ್ಬಳು ಸಿಕ್ಕಿದ್ದಳು. ಅಪರೂಪಕ್ಕೆ ಮಾತಿಗೆ ಸಿಕ್ಕರೂ, ಕೆಲವೇ ಕ್ಷಣಗಳಲ್ಲಿ ಮಾತಿನ ಜಾಡು ಪರಿಚಿತ ತಿರುವುಗಳಲ್ಲಿ ಸರಾಗ ಹರಿದು, ಅಂತರಂಗದ ಕನವರಿಕೆ, ಕನಲುವಿಕೆಗಳ ಕಡೆಗೆ ಹೊರಳುವುದು ನಮ್ಮಿಬ್ಬರಿಗೆ ಹೊಸತಲ್ಲ. ಮದುವೆಯಾದ ವರ್ಷದೊಳಗೇ ಪುಟ್ಟ ಕಂದನ ತಾಯಿಯಾದ ಹುಡುಗಿ ಆಕೆ. ಸದಾ ಓಡಾಟದಲ್ಲಿರಬೇಕಾದ ವೃತ್ತಿಯ ಗಂಡ. ಮನೆಯಲ್ಲಿ ಒಬ್ಬಳೇ ಸಣ್ಣ ಮಗುವನ್ನು ಸಂಭಾಳಿಸಬೇಕಾದ ಅನಿವಾರ್ಯತೆ. ತಾಯಿಮನೆ ಹತ್ತಿರವಿದ್ದರೂ ಸದಾಕಾಲ ಅಲ್ಲಿಗೆ ಹೋದರೇನು ಚೆಂದ ಎನ್ನುವ ಮನೋಭಾವ. ಮಾತಿನ ಮಧ್ಯೆ ಆಕೆ, “ಕೆಲವೊಮ್ಮೆ ಸಣ್ಣಪುಟ್ಟ ಕಿರಿಕಿರಿಗಳೇ ಬದುಕಿನ ದೊಡ್ಡ ಸಮಸ್ಯೆಯಂತೆ ಎದುರು ನಿಲ್ಲುತ್ತವೆ. ಈ ಗಂಡ, ಮಗು, ಸಂಸಾರ, ದುಡಿಮೆ, ಸಂಪಾದನೆ, ಕೊಂಕು ಮಾತು, ಅನಾರೋಗ್ಯ ಎಲ್ಲದರಿಂದ ಬಹಳ ದೂರ ಹೋಗಿ, ನಾನೊಬ್ಬಳೇ ಪ್ರಶಾಂತವಾಗಿ ಕೆಲಕಾಲ ಕಳೆಯಬೇಕನ್ನಿಸುತ್ತೆ. ಆದರೆ ಎಲ್ಲಿ ಹೋಗುವುದು? ಹೀಗೆ ವಾಸ್ತವ ಹಿಂಸೆಯೆನಿಸಿದಾಗೆಲ್ಲ, ಬೇಸರದಲ್ಲೇ ಕತ್ತಲಕೋಣೆಯಲ್ಲಿ ಉಳಿಯುವುದರ ಬದಲು, ಮನೆತುಂಬ ಬೆಳಕಾಗುವಂತೆ ಝಗಮಗಿಸಿ, ಸ್ನಾನ ಮಾಡಿ, ನಾನು ಹೊಸದಾಗಿ ಕೊಂಡ ಬಟ್ಟೆ ತೊಟ್ಟು, ನನಗೇ ಹೆಮ್ಮೆಯಾಗುವಷ್ಟು ಚೆಂದಕ್ಕೆ ಅಲಂಕರಿಸಿಕೊಂಡು ಅರ್ಧಗಂಟೆ ಕನ್ನಡಿಯ ಮುಂದೆ ನಗುಮುಖದಲ್ಲಿ ಕೂತಿರುತ್ತೇನೆ. ಎಷ್ಟು ಚೆಂದಿದೆಯೇ ಹುಡುಗಿ? ಎಷ್ಟು ಸೊಗಸಾದ ನಗು, ಎಂಥಾ ಬೆಳಕು ಕಂಗಳು ಅಂತ ನನಗೆ ನಾನೇ ಮೆಚ್ಚಿ, ದೃಷ್ಟಿ ತೆಗೆಯುತ್ತೇನೆ. ಬೇಸರವೆನ್ನುವುದು ವ್ಯಾಪ್ತಿಪ್ರದೇಶದ ಹೊರಗೆ ಹೋಗಿ ಎಷ್ಟೋ ಕಾಲವಾಗಿಬಿಟ್ಟಿರತ್ತೆ ಗೊತ್ತಾ ” ಎಂದು ಹೇಳಿ ಸುಂದರವಾಗಿ ನಕ್ಕಳು. ಆಮೇಲಿನ ಮಾತು ಮನಸ್ಸಿನಲ್ಲೇ ಬೆಳೆಯುತ್ತಾ, ಮುದ್ದಾದ ಉಪಾಯವಾಗಿ ನಿಂತಿತ್ತು.

ಮದುವೆಯಾಗಿ, ಒಂದು ಮಗುವನ್ನು ಹೆತ್ತ ಹುಡುಗಿಯರನ್ನು ‘ಆಂಟಿ’ ಎಂದು ಕರೆದು, ಅವರಿನ್ನು ಹುಡುಗಾಟದ, ಸರಳ ಸಂತೋಷದ ಪ್ರಪಂಚಕ್ಕೆ ಸೇರಿದವರಲ್ಲ ಎಂಬಂತೆ ನಡೆಸಿಕೊಳ್ಳುವ ಸಂದರ್ಭಗಳೇ ಹೆಚ್ಚು. ಮದುವೆಯಾದಾಕ್ಷಣ, ಮಗುವಿನ ತಾಯಿಯಾದಾಕ್ಷಣ ಮುಗ್ಧತೆ, ತುಂಟತನ, ತನ್ನ ಕುರಿತಾದ ಕಾಳಜಿ, ಹೆಮ್ಮೆಯನ್ನೇ ಮರೆತು ಪ್ರಬುದ್ಧ, ನಿರಾಡಂಬರ, ತ್ಯಾಗಮಯಿಯ ಪಾತ್ರವಹಿಸಬೇಕೆನ್ನುವ ನಿರೀಕ್ಷೆಗಳು ಒತ್ತಟ್ಟಿಗಿರಲಿ. ನಾವೇ ಸುತ್ತಲಿನವರ ಮೆಚ್ಚುಗೆ, ಒಪ್ಪಿಗೆ, ಪ್ರಮಾಣಪತ್ರಕ್ಕಾಗಿ ನಮ್ಮದಲ್ಲದ ‘ಪಾತ್ರ’ದೊಳಗೆ ಇಳಿದು ನಟಿಸತೊಡಗುತ್ತೇವೆ.

ಸಹಜ ಸ್ವಭಾವಕ್ಕೆ ವ್ಯತಿರಿಕ್ತವಾದ ಯಾವ ಭಾವವೂ ಹಿತವೆನಿಸಲು ಸಾಧ್ಯವಿಲ್ಲ. ಬಹಳ ಕಡೆ ಅರ್ಥವಿಲ್ಲದ ಅನಗತ್ಯ ತ್ಯಾಗ, ಹೊಂದಾಣಿಕೆಗಳ ಇರುಸುಮುರಿಸಿನಿಂದ ಸುಂದರ ಬಾಂಧವ್ಯವೊಂದು ನಲುಗುತ್ತಿರುತ್ತದೆ. ಮತ್ತು ಈ ಯಾವ ವಿಚಾರಗಳೂ ಒಮ್ಮೆಗೇ ಆಗುವ ಜ್ಞಾನೋದಯವಲ್ಲ. ನಿಧಾನಕ್ಕೆ ಸನ್ನಿವೇಶಗಳಿಗೆ ತೆರೆದುಕೊಳ್ಳುತ್ತಾ, ನಿಭಾಯಿಸುತ್ತಾ, ನೋಯುತ್ತಾ, ನಲಿಯುತ್ತಾ ಕಾಲಾಂತರದಲ್ಲಿ ಕಸಿಯಾಗಿ ಹೂವರಳುವ ಜಾದೂ. ಕಸಿಯಾಗಿ ಹೂಬಿಟ್ಟು, ಹಣ್ಣು ಕಚ್ಚುವ ಸಮಯದಲ್ಲಿ ಬೆಂಬಲ ಸಿಕ್ಕರೆ ಚೆಂದ. ಸಿಗದ ಪಕ್ಷದಲ್ಲಿ ನಮಗೆ ನಾವೇ ಆಸರೆಯಾಗಿ ನಿಲ್ಲಲೇಬೇಕು.

“ಅವಳಿಗೇನು? ಅಪ್ಪ ಅಮ್ಮನ ಮನೆಯಲ್ಲಿ ಬಹಳ ಮುದ್ದಾಗಿ ಸಾಕಿದ್ರು. ಇಲ್ಲಿ ಗಂಡನಿಗೆ ಕೈ ತುಂಬ ಸಂಪಾದನೆ. ಬೆಂಗಳೂರಲ್ಲಿ ಸ್ವಂತ ಮನೆ‌. ಮನೆಗೆಲಸಕ್ಕೆ ಆಳು. ತಿಂದ ಅನ್ನ ಅರಗೋದು ಹೇಗೆ? ಉಟ್ಟು, ತೊಟ್ಟು ಮೆರೆಯೋದು. ನಾವೆಲ್ಲ ಕಂಡ ಕಷ್ಟದ ಒಂದು ಮುಷ್ಟಿ ಇವರಿಗೆ ಬಂದಿದ್ರೂ ಸಾಕಿತ್ತು. ಬುದ್ಧಿ ಕಲಿತಿರೋರು.” ಎಂದು ತಮ್ಮವರೇ ಕರುಬಿ, ಕೊಂಕು ನುಡಿಯುವಾಗ ಮನಸ್ಸು ಕಹಿಯಾಗುತ್ತದೆ. ಬದುಕು ಹೊರಗೆ ಕಂಡಷ್ಟು ಸರಳವೂ ಅಲ್ಲ. ನೊಂದ ಮನಸ್ಸಿಗೆ ಕಾಣುವಷ್ಟು ಸಂಕೀರ್ಣವೂ ಅಲ್ಲ. ಪ್ರತಿಯೊಬ್ಬರಿಗೂ ಕೊಂಕು ಮಾತುಗಳಿಗೆ ಉತ್ತರಿಸುವ ಸಮಯ, ಮನಸ್ಸು, ವ್ಯವಧಾನ, ನಿಷ್ಠುರತೆ ಮೈಗೂಡಿರುವುದಿಲ್ಲವಲ್ಲ. ಆಗಲೇ ನಮ್ಮ ಸಹಜ ಸ್ವಭಾವಕ್ಕೆ ಭಿನ್ನವಾಗಿ ವರ್ತಿಸುವ, ಕಾಣಿಸಿಕೊಳ್ಳುವ ಪರಿಪಾಠ ಮೊದಲಾಗುತ್ತದೆ. ನಮ್ಮ ಪುಟ್ಟ ಪ್ರಪಂಚಕ್ಕೆ ಯಾವ ವಿಧದಲ್ಲೂ ಸಂಬಂಧಿಸದ, ಒಂದು ದಿನಕ್ಕೂ ಕಷ್ಟಗಳಿಗೆ ಹೆಗಲಾಗದ, ಸಂತೋಷವನ್ನು ಸಂಭ್ರಮಿಸದ ಸಣ್ಣಬುದ್ಧಿಯ ಜನರ ಅದೃಶ್ಯ ತಂತ್ರಗಳಿಗೆ ಸಿಕ್ಕ ಮಿಕವಾಗಿರುತ್ತೇವೆ. ಯಾರನ್ನೋ ಮೆಚ್ಚಿಸಲು ನಮಗಿಷ್ಟದ ಸಿಹಿಯನ್ನು ಒಂದು ತುಂಡು ಬಾಯಿಗಿಡದೆ, ಹೊಟ್ಟೆ ಕಾದಕಾವಲಿಯಾಗಿದ್ದರೂ ತೊಟ್ಟು ನೀರು ಕುಡಿಯದೆ, ಕೊಳ್ಳುವ ಆಸೆ-ಶಕ್ತಿ ಇದ್ದರೂ ಉಳಿಸಿ ‘ತ್ಯಾಗ’ ಮಾಡುತ್ತಾ, ಸ್ವಂತ ಸುಖವನ್ನು ಕಡೆಗಣಿಸಿಯಾದರೂ ಅವರಿಂದ ಮೆಚ್ಚುಗೆ ಗಳಿಸಿಯೇ ಸಿದ್ಧವೆಂದು ಪಂದ್ಯಕ್ಕೆ ಅಣಿಯಾಗಿರುತ್ತೇವೆ. ಈ ಮಧ್ಯೆ ಕಳೆದು ಹೋಗುವ ಕಾಲ, ವಯಸ್ಸು, ಆರೋಗ್ಯ, ನೆಮ್ಮದಿ, ಸಂಬಂಧಗಳು ಅರಿವಿಗೆ ಬರುವಷ್ಟರಲ್ಲಿ, ಬಹಳ ದೂರ ಕ್ರಮಿಸಿಯಾಗಿರುತ್ತದೆ.

ಆದರೆ ನಮ್ಮ ಒಳ್ಳೆಯತನ, ವ್ಯಕ್ತಿತ್ವದ ಮಹತ್ತು, ಸಾಧನೆ, ಸಂತೃಪ್ತಿಗಳು ಇತರರಿಂದ ವಿಚಕ್ಷಣೆಗೊಳಪಟ್ಟು, ಪ್ರಮಾಣಪತ್ರ ಪಡೆಯಬೇಕಿಲ್ಲ. ಹಾಗೆ ಅವರಲ್ಲಿ ಋಜುವಾತು ಮಾಡಿಯೇ ನಾವು ಸಂತೋಷಪಡಬೇಕಿಲ್ಲ. ಗೆದ್ದಾಗ ಸಂಭ್ರಮಿಸಿದಂತೆಯೇ, ಸೋತಾಗ ಸಾಂತ್ವನಕ್ಕಾಗಿ ಅತ್ತಿತ್ತ ನೋಡುವ ಬದಲು, ನಮ್ಮೊಳಗೆ ಹುಡುಕಬಹುದೆನ್ನಿಸುತ್ತೆ. ಹೊರಗಿನಿಂದ ಸಿಗುವ ಬೆಂಬಲಕ್ಕಿಂತ, ಒಳಗಿನಿಂದ ಮೂಡುವ ಸಮಾಧಾನ ಹೆಚ್ಚುಕಾಲ ನಿಲ್ಲಬಹುದು. ಇದೇ ಕಾರಣಕ್ಕೆ ಪರಿಚಿತ ಹುಡುಗಿಯ ಪುಟ್ಟ ಪ್ರಯತ್ನ ಚೆಂದದ ಉಪಾಯವಾಗಿ ತೋರಿತು. ಅಷ್ಟಕ್ಕೂ, ನಮ್ಮನ್ನು ನಾವು ಪ್ರೀತಿಸಲು, ಮೆಚ್ಚಲು, ಕಾಳಜಿಯಿಂದ ಕಾಣಲು, ಲೋಕದ ಅಪ್ಪಣೆ ಬೇಕೆ? ಸಂತೋಷಪರ ವ್ಯಕ್ತಿಗಳು ಸುತ್ತಲೂ ಹಬ್ಬಿಸುವ ಸಕಾರಾತ್ಮಕ ಪರಿಣಾಮದ ಮುಂದೆ ಅಪ್ಪಣೆಗಳಿಗೆ ಜಾಗವಿದೆಯೆ?