ನ್ಯೂಟನ್, ಪಾರ್ಲಿಮೆಂಟಿನಿಂದ ಹೊರಬಿದ್ದ ನಂತರ, ಬ್ರಿಟನ್ನಿನ ರಾಣಿ ಅವನನ್ನು ರಾಯಲ್ ಮಿಂಟ್‌ ನ ಮುಖ್ಯಸ್ಥನನ್ನಾಗಿ ನೇಮಿಸಿದಳು. ತನ್ನ ಸ್ಥಾನವನ್ನು ಗಂಭೀರವಾಗಿ ಪರಿಗಣಿಸಿದ ನ್ಯೂಟನ್, ಫೇಕ್ ಕರೆನ್ಸಿಯನ್ನು ತಡೆಗಟ್ಟಲು ಹಲವಾರು ವಿಧಾನಗಳನ್ನು ರೂಪಿಸಿದ. ಅಷ್ಟೇ ಅಲ್ಲ, ಫೇಕ್ ಕರೆನ್ಸಿಯನ್ನು ನಿರ್ಮಿಸಿ ಹಂಚುವವರನ್ನು ಹಿಡಿಯಲೆಂದು ವೇಷ ಮರೆಸಿಕೊಂಡು ಬಾರ್-ಪಬ್‌ ಗಳಿಗೆ ಹೋಗುತ್ತಿದ್ದ. ನ್ಯೂಟನ್‌ ನ ಕ್ರಮಗಳಿಂದ ಸಿಕ್ಕಿ ಬಿದ್ದವನ ಪತ್ರವೊಂದರ ದಾಖಲೆ, ಇನ್ನೂ ಇದೆ. ಕಳ್ಳ ನೋಟುಗಳನ್ನು ಸೃಷ್ಟಿಸಿ ಹಂಚಿದ್ದಕ್ಕಾಗಿ ಅವನಿಗೆ ಮರಣದಂಡನೆ ವಿಧಿಸಲಾಯಿತು. ಅವನು, ನ್ಯೂಟನ್‌ ಗೆ ಬರೆದ ಪತ್ರದಲ್ಲಿ, ತನ್ನನ್ನು ಕ್ಷಮಿಸಿ ಜೀವ ಉಳಿಸುವಂತೆ ಬೇಡುತ್ತಾನೆ. ಕಠಿಣ ಹೃದಯಿಯಾದ ನ್ಯೂಟನ್ ಅವನ ಅಳಲಿಗೆ ಓಗೊಡುವುದಿಲ್ಲ.
ಶೇಷಾದ್ರಿ ಗಂಜೂರು ಬರೆಯುವ ಅಂಕಣ

 

ನಾನು ಸಣ್ಣವನಿದ್ದಾಗ ನನಗೊಬ್ಬ ಆಪ್ತಮಿತ್ರನಿದ್ದ. ನಮ್ಮ ಪಕ್ಕದ ಮನೆಯಲ್ಲಿಯೇ ವಾಸಿಸುತ್ತಿದ್ದ ಅವನು, ಮಹಾ ಸಾಹಸಿ, ಧೈರ್ಯವಂತ ಮತ್ತು ಮಾತುಗಾರನೂ ಆಗಿದ್ದ. ಅವನಿಗೆ ಬರದಿದ್ದ ಕಲೆ ಇರಲಿಲ್ಲ. ಅವನಿಗೆ ತಿಳಿಯದ ವಿಷಯ ಇರಲಿಲ್ಲ. ನಮ್ಮೂರಿನ ಸುತ್ತಮುತ್ತ ಇದ್ದ ಬೆಟ್ಟಗಳನ್ನು ವಿವಿಧ ದಿಕ್ಕುಗಳಿಂದ ಹತ್ತಿಸುತ್ತಿದ್ದ. ನಮ್ಮೂರಿನ ರಾಜಕೀಯ ಗಣ್ಯರ, ಪೋಲೀಸ್ ಅಧಿಕಾರಿಗಳ ಸ್ನೇಹ ಸಂಪಾದಿಸಿ ಅವರ ಕತೆಗಳನ್ನು ನಮಗೆ ಬಹಳ ರಸವತ್ತಾಗಿ ವಿವರಿಸುತ್ತಿದ್ದ. ಬೆಂಗಳೂರಿನ ಸಿನೆಮಾ ಥೇಟರ್ ಒಂದರಲ್ಲಿ, ನಾನು ಒಮ್ಮೆ ಮಾತ್ರ ನೋಡಿದ್ದ “ಲಿಫ್ಟ್” ಹೇಗೆ ಕೆಲಸ ಮಾಡುತ್ತದೆಂದು ನನಗೆ ತಿಳಿಸಿಕೊಟ್ಟವನು ಅವನೇ. ಮನೆಗಳ ಹಿತ್ತಲಲ್ಲಿ ಬಿದ್ದಿರುತ್ತಿದ್ದ ಟಿನ್ ಡಬ್ಬಗಳನ್ನು ಕತ್ತರಿಸಿ, ಅದರಿಂದ ದೊರಕುವ ಲೋಹದ ಷೀಟ್‌ ಗಳನ್ನು ಬಳಸಿ ಮೂವಿ ಪ್ರೊಜೆಕ್ಟರ್ ಮಾಡುವುದನ್ನು ನನಗೆ ತೋರಿಸಿಕೊಟ್ಟವನೂ ಅವನೇ. ನಂತರ, ಆ ಪ್ರೊಜೆಕ್ಟರ್‌ ನಲ್ಲಿ ಬಳಸಲು, ಮೂವಿ ರೀಲ್‌ ಗಳ ತುಂಡುಗಳನ್ನು ಒದಗಿಸುತ್ತಿದ್ದವನೂ ಅವನೇ. ವಯಸ್ಸಿನಲ್ಲಿ ನನಗಿಂತ ಐದಾರು ವರ್ಷ ಹಿರಿಯನಾಗಿದ್ದ ಅವನು, ನನ್ನ ಬಗ್ಗೆ ಅಪಾರ ಸ್ನೇಹ, ಕರುಣೆ, ಸಹನೆಗಳನ್ನೂ ತೋರುತ್ತಿದ್ದ.

ಹೀಗಾಗಿ, ನನಗಂತೂ ಅವನು ಅಚ್ಚುಮೆಚ್ಚಾಗಿದ್ದ. ನಾನು ಯಾವಾಗಲೂ ಅವನ ಹಿಂದೆ-ಹಿಂದೆಯೇ ಓಡಾಡುತ್ತಿದ್ದೆ. ಅವನು ಹೇಳುತ್ತಿದ್ದ ಮಾತುಗಳೆಲ್ಲಾ ನನಗೆ, ಅತ್ಯಂತ ಗಹನವೂ, ಅಪ್ಪಟ ಸತ್ಯಗಳೆಂದೂ ತೋರುತ್ತಿದ್ದವು. ನಮ್ಮ ಮನೆಯ ಹಿರಿಯರು, ಮತ್ತು ಸುತ್ತ-ಮುತ್ತಲಿನ ಇತರೆ ಮಿತ್ರರು (ಅವರೂ ನನಗಿಂತ ವಯಸ್ಸಿನಲ್ಲಿ ದೊಡ್ಡವರು) ಅವನನ್ನು ನನ್ನ “ಗುರು”ವೆಂದು ಹಾಸ್ಯಮಾಡುತ್ತಿದ್ದರು. ಯಾವಾಗಲಾದರೂ ನಾನೊಬ್ಬನೆ ಕಂಡರೆ, “ನಿನ್ನ ಗುರು ಎಲ್ಲಿ?” ಎಂದು ನಗುತ್ತಾ ಕೇಳುತ್ತಿದ್ದರು. ಆದರೆ, ಅವರ ಹಾಸ್ಯಕ್ಕೆ ಅವನು ಪ್ರತಿ-ಹಾಸ್ಯ ಮಾಡಬಲ್ಲವನಾಗಿದ್ದರಿಂದ, ನಾನು ಕಂಡಂತೆ, ಅವರಾರೂ ಅವನ ಎದುರಿಗೆ ಇಂತಹ ಸಾಹಸ ಮಾಡುತ್ತಿರಲಿಲ್ಲ. ಅವನ ಬಗೆಗೆ ಅಪಾರ ಗೌರವ-ಅಭಿಮಾನಗಳಿದ್ದ ನನಗೆ, ಅವರ ಈ ಹಾಸ್ಯ ಇಷ್ಟವಾಗುತ್ತಿರಲಿಲ್ಲ.

ನನ್ನ ಈ “ಗುರು”, ಒಮ್ಮೆ ರೋಲರ್-ಸ್ಕೇಟ್‌ ಗಳನ್ನು ಬೆಂಗಳೂರಿನಿಂದ ಕೊಂಡುಕೊಂಡು ಬಂದ. ಪ್ರತಿನಿತ್ಯ ಬೆಳಗ್ಗೆ ಅದರ ಅಭ್ಯಾಸ ಪ್ರಾರಂಭವಾಯಿತು. ತನ್ನೆಲ್ಲಾ ಕಾರ್ಯ ಚಟುವಟಿಕೆಗಳಲ್ಲೆಲ್ಲಾ ನನ್ನನ್ನೂ ಸೇರಿಸಿಕೊಳ್ಳುತ್ತಿದ್ದ ಅವನು, ಈ ಸ್ಕೇಟಿಂಗ್ ವಿದ್ಯೆಯ ಕಲಿಕೆಯಲ್ಲೂ ನನ್ನನ್ನು ಸೇರಿಸಿಕೊಂಡ. ನಂತರದಲ್ಲಿ, ಸುತ್ತ ಮುತ್ತಲಿನ ಇತರೆ ಮಿತ್ರರೂ ಅದಕ್ಕೆ ಸೇರಿಕೊಂಡರು. ಅವರಲ್ಲಿ, ನನ್ನದೇ ವಯಸ್ಸಿನ ಇನ್ನೊಬ್ಬ ಹುಡುಗನೂ ಇದ್ದ. ನನ್ನ “ಗುರು”ವಿಗೆ, ಕೆಲವೊಂದು ಕಾರಣಗಳಿಂದ ಅವನ ಬಗೆಗೆ ಅಷ್ಟಕ್ಕಷ್ಟೇ ಅಭಿಪ್ರಾಯವಿತ್ತು. ಆದರೂ, ಅವನೆಂದೂ ಆ ಹುಡುಗನನ್ನು ನಮ್ಮ ಗುಂಪಿನಿಂದ ಹೊರ ಹಾಕುತ್ತಿರಲಿಲ್ಲ.

ಆ ಕಾಲದಲ್ಲಿ ಸ್ಕೇಟಿಂಗ್ ಮಾಡಲು ನಮ್ಮೂರಿನ ರಸ್ತೆಗಳು ಸರಿ ಇರಲಿಲ್ಲವಾದ್ದರಿಂದ, ನಾವು ಬೆಳಗ್ಗೆಯೇ ಎದ್ದು ನಮ್ಮೂರಿನ ಪಾಲಿಟೆಕ್ನಿಕ್‌ ಗೆ ಹೋಗುತ್ತಿದ್ದೆವು. ಅದರ ಅಂಗಳವು “[“ ಆಕಾರದಲ್ಲಿದ್ದು ವಿಶಾಲವೂ, ಉದ್ದಕ್ಕೂ ಇತ್ತು. ಎಲ್ಲಕ್ಕಿಂತ ಮುಖ್ಯವಾಗಿ, ಅದರ ನೆಲ ಸಮತಟ್ಟಾಗಿಯೂ, ನುಣುಪಾಗಿಯೂ ಇತ್ತು. ಆ ಅಂಗಳದ ಸುತ್ತ, ಎತ್ತರದ ನೀಲಗಿರಿ ಮರಗಳಿರುತ್ತಿದ್ದವು.

ನಾವು ಅಭ್ಯಾಸ ಪ್ರಾರಂಭಿಸಿದ ಕೆಲ ದಿನಗಳಲ್ಲಿಯೇ, ಒಂದು ವಿಷಯ ಖಚಿತವಾಯಿತು: ಸ್ಕೇಟಿಂಗ್ ವಿದ್ಯೆಯ ಕಲಿಕೆಯಲ್ಲಿ, ನನ್ನ ಗುರುವಿಗೆ ಒಂದಿಷ್ಟೂ ನೈಪುಣ್ಯತೆ ಇರಲಿಲ್ಲ. ಒಂದೆರಡು ಅಡಿ ಮುಂದೆ ಹೋದರೂ ಸಾಕು, ಅವನು ಮುಗ್ಗರಿಸಿ ಬೀಳುತ್ತಿದ್ದ. ಆದರೆ, ನನ್ನ ಇನ್ನೊಬ್ಬ ಮಿತ್ರ ಅದರಲ್ಲಿ ಬಹು ಬೇಗನೆ ನೈಪುಣ್ಯತೆ ಪಡೆದುಕೊಂಡ. ಇದು, ನನ್ನ ಗುರುವಿಗೆ ಇಷ್ಟವಾಗುತ್ತಿರಲಿಲ್ಲ. ಅವನು, ತಾನು ಪ್ರತಿ ಸಲಿ ಬಿದ್ದಾಗಲೂ, ನೀಲಗಿರಿ ಮರದಿಂದ ಬಿದ್ದಿರುತ್ತಿದ್ದ ಸಣ್ಣ ಬುಗುರಿಗಳಂತಹ ಕಾಯಿಗಳನ್ನು ಕೈಯಲ್ಲಿ ಹಿಡಿದು, “ಥೂ. ಹಾಳಾದ್ದು. ಇದರಿಂದಲೇ ನಾನು ಬಿದ್ದದ್ದು” ಎನ್ನುತ್ತಿದ್ದ. ಪ್ರತಿದಿನ ಅವನು ಮತ್ತೆ-ಮತ್ತೆ ಬೀಳುವುದೂ, ಮತ್ತು ನೀಲಗಿರಿಯ ಬುಗುರಿಗಳನ್ನು ಶಪಿಸುವುದೂ ಸಾಮಾನ್ಯವಾಯಿತು ಮತ್ತು ಅದು ನಮ್ಮ ಗುಂಪಿನಲ್ಲಿ ಹಾಸ್ಯದ ವಸ್ತುವಾಯಿತು. ಆದರೆ, ರೋಲರ್-ಸ್ಕೇಟ್‌ ಗಳು ಅವನದಾದ್ದರಿಂದ, ಮತ್ತು ಅವನು ಮಾತುಗಾರಿಕೆಯಲ್ಲಿ ಎದೆಗಾರನಾಗಿದ್ದರಿಂದ ಯಾರೂ ಅವನ ಮುಂದೆ ಹಾಸ್ಯ ಮಾಡುತ್ತಿರಲಿಲ್ಲ. ಬದಲಿಗೆ, ಅವನ ಹಿಂದೆ, ಇಲ್ಲದ ಸಣ್ಣದೊಂದು ಬುಗುರಿಗೆ ಮತ್ತೆ-ಮತ್ತೆ ಬೀಳುವಂತಹವನನ್ನು ಗುರುವಾಗಿ ಸ್ವೀಕರಿಸಿಕೊಂಡಿದ್ದ ನನ್ನನ್ನು ಎಲ್ಲರೂ ತಮಾಷೆ ಮಾಡುತ್ತಿದ್ದರು.

ಪ್ರತಿ ಸಾರಿ ಬಿದ್ದಾಗಲೂ, ಅವನಿಗೆ ಬುಗುರಿ ಸಿಗುತ್ತಿದ್ದುದು ನನಗೂ ಸಂದೇಹವನ್ನುಂಟುಮಾಡಲು ಪ್ರಾರಂಭಿಸಿತು. ಸ್ಕೇಟಿಂಗ್ ಅಭ್ಯಾಸಕ್ಕೆ ಮುನ್ನ ಅವನು ಈ ಬುಗುರಿಗಳನ್ನು ಸಂಗ್ರಹಿಸಿ ತನ್ನ ಜೇಬಿನಲ್ಲಿಟ್ಟುಕೊಳ್ಳುತ್ತಿರಬಹುದೇ ಎಂಬ ಸಂಶಯ ಮೂಡಿತು.

ನನ್ನ ಗುರುವನ್ನು ಈ ರೀತಿ ಮತ್ತೆ-ಮತ್ತೆ ಬೀಳಿಸುತ್ತಿದ್ದ ಭೂಮಿಯ ಗುರುತ್ವಾಕರ್ಷಣೆಯಿಂದಾಗಿ, ಗುರುವಿನ ಬಗೆಗೆ ನನ್ನೊಳಗಿದ್ದ ಆಕರ್ಷಣೆ ಕ್ಷೀಣಿಸತೊಡಗಿತು. ಕೆಲ ದಿನಗಳಲ್ಲೇ, ಉಳಿದ ಮಿತ್ರರೊಡನೆ, ನಾನೂ ಸಹ ಅವನ ಬಗೆಗೆ ಅವನ ಹಿಂದೆ ಹಾಸ್ಯ ಮಾಡಲು ತೊಡಗಿದೆ.

ಚೆನ್ನಾಗಿ ಸ್ಕೇಟ್ ಮಾಡುತ್ತಿದ್ದ ನನ್ನ ಮಿತ್ರನನ್ನು ನಮ್ಮ ಗುಂಪಿನಿಂದ ಹೊರ ಹಾಕುವ ವಿಷಯವನ್ನು, ನನ್ನ ಗುರು ನನ್ನೊಡನೆ ಚರ್ಚಿಸಿದಾಗ, ನಾನೂ ನನ್ನ ಗುರುವಿನ ಕಕ್ಷೆಯಿಂದ ಹೊರಬಂದೆ.

******

ಗುರುತ್ವಾಕರ್ಷಣೆಯ ವಿಚಾರ ಹೊಸದೇನೂ ಅಲ್ಲ. ಅದು ದೇಶ-ಕಾಲಗಳನ್ನು ಮೀರಿದೆ. ಎರಡೂವರೆ ಸಾವಿರ ವರ್ಷಗಳ ಹಿಂದೆಯೇ, ಗ್ರೀಕ್ ತತ್ವಶಾಸ್ತ್ರಜ್ಞ ಅರಿಸ್ಟಾಟಲ್ ಅದರ ಬಗೆಗೆ ಮಾತನಾಡಿದ್ದಾನೆ. ಏಳನೆಯ ಶತಮಾನದಲ್ಲಿ, ನಮ್ಮವನೇ ಆದ ಬ್ರಹ್ಮಗುಪ್ತ ಅದರ ಕುರಿತು ಚರ್ಚಿಸಿದ್ದಾನೆ. ಹನ್ನೊಂದನೆ ಶತಮಾನದಲ್ಲಿ ಪರ್ಷಿಯಾದ ಇಬ್ನ್ ಸಿನಾ ಇದರ ಕುರಿತು ತನ್ನ ಅನಿಸಿಕೆಗಳನ್ನು ಮಂಡಿಸಿದ್ದಾನೆ. ನಂತರದ ಶತಮಾನಗಳಲ್ಲಿ, ಗೆಲಿಲಿಯೋ, ಕೆಪ್ಲರ್‌ ಗಳಂತಹ ಯೂರೋಪಿಯನ್ ಮಹಾಮಹಿಮರು, ಎಂತಹ ಗುರುವನ್ನೂ ಭೂಮಿಗಿಳಿಸುವ ಈ ಗುರುತ್ವಾಕರ್ಷಣೆಯ ಕುರಿತು ತಮ್ಮ ಅಭಿಪ್ರಾಯಗಳನ್ನು ವ್ಯಕ್ತಪಡಿಸಿದ್ದಾರೆ.

ಆದರೆ, ಗುರುತ್ವಾಕರ್ಷಣೆಯ ವಿಚಾರ ಬಂದಾಗಲೆಲ್ಲಾ ನಮ್ಮ ಮನಸ್ಸಿಗೆ ಮೊಟ್ಟಮೊದಲಿಗೆ ಬರುವ ಹೆಸರು: ಐಸಾಕ್ ನ್ಯೂಟನ್. ಉಳಿದವರು ಅದರ ಕುರಿತು ಎಷ್ಟೇ ಚರ್ಚೆ ಮಾಡಿರಲಿ, ಗುರುತ್ವಾಕರ್ಷಣೆಯನ್ನು ತನ್ನ ಗಣಿತದ ಮೂಲಕ ಮೊಟ್ಟ ಮೊದಲಿಗೆ ಕಟ್ಟಿಹಾಕಿದವನು ನ್ಯೂಟನ್.

ನ್ಯೂಟನ್ ಹುಟ್ಟಿದ್ದು ಹದಿನೇಳನೆಯ ಶತಮಾನದ ಇಂಗ್ಲೆಂಡಿನಲ್ಲಿ. ಅವನು ಹುಟ್ಟುವ ಮೊದಲೇ, ಅವನ ತಂದೆ ತೀರಿಹೋಗಿದ್ದ. ನ್ಯೂಟನ್ ಮೂರು ವರ್ಷದವನಿದ್ದಾಗ, ಅವನ ತಾಯಿ ಹತ್ತಿರದ ಹಳ್ಳಿಯೊಂದರ ಪಾದರಿಯನ್ನು ಮದುವೆಯಾದಳು. ಆ ಪಾದರಿಗೆ ಬೇಕಿದ್ದದ್ದು ಮಡದಿ ಮಾತ್ರ ಅವಳಿಗೆ ಆಗಾಗಲೇ ಇದ್ದ ಮಗುವಲ್ಲ. ಹೀಗಾಗಿ, ನ್ಯೂಟನ್‌ ನ ಅಮ್ಮ ಅವನನ್ನು ತನ್ನ ತಾಯಿಗೆ ಒಪ್ಪಿಸಿ ತನ್ನ ಹೊಸ ಪತಿಯೊಂದಿಗೆ ಹೊರ ನಡೆದಳು. ಇದು, ನ್ಯೂಟನ್‌ ನ ಮನಸಿನ ಮೇಲೆ ಎಷ್ಟರ ಮಟ್ಟಿಗೆ ಪರಿಣಾಮ ಬೀರಿತು ಎನ್ನುವುದು ಬಹು ಚರ್ಚಿತ ಪ್ರಶ್ನೆ. ಅವನು ಜೀವನವಿಡೀ ಮದುವೆಯಾಗದೆಯೇ ಉಳಿದದ್ದಕ್ಕೆ, ಇದೂ ಕಾರಣವಿರಬಹುದೇ?! (ತನ್ನ ಅನಿಸಿಕೆಗಳನ್ನೆಲ್ಲಾ ಬರೆದಿಡುವ ಅಭ್ಯಾಸ ಹೊಂದಿದ್ದ ನ್ಯೂಟನ್, ತನ್ನ ಬಾಲ್ಯಕಾಲದ ಪಾಪಗಳ ಪಟ್ಟಿಯಲ್ಲಿ, ತನ್ನ ಮಲ ತಂದೆ ಮತ್ತು ತಾಯಿಯನ್ನು “ಸುಟ್ಟು ಹಾಕುವ ಆಲೋಚನೆ” ಬಂದಿದ್ದರ ಕುರಿತು ಬರೆದುಕೊಂಡಿದ್ದಾನೆ)

ನ್ಯೂಟನ್‌ ಹದಿಹರೆಯದಲ್ಲಿದ್ದಾಗ, ಅವನ ಮಲತಂದೆ ಸಾವನ್ನಪ್ಪಿದ. ತಾಯಿ ವಾಪಸಾದಳು. ಕುಟುಂಬದ ಹೊಣೆಯ ಭಾರ ನ್ಯೂಟನ್‌ ನ ಮೇಲೆ ಹೊರಿಸಿ, ಅವನನ್ನು ಶಾಲೆಯಿಂದ ಬಿಡಿಸಲಾಯಿತು. ಆದರೆ, ಅವನಿಗೆ ರೈತಾಪಿ ಕೆಲಸ ಸರಿ ಹೊಂದಲಿಲ್ಲ. ಜೊತೆಗೆ, ನ್ಯೂಟನ್‌ ನ ಶಾಲೆಯ ಮುಖ್ಯೋಪಾಧ್ಯಾಯ ನ್ಯೂಟನ್‌ ನ ತಾಯಿಯೊಂದಿಗೆ ಮಾತನಾಡಿ ಶಾಲೆಗೆ ವಾಪಸು ಸೇರಿಸಿಕೊಂಡ.

ಹತ್ತೊಂಬತ್ತನೆಯ ವಯಸ್ಸಿನಲ್ಲಿ, ತನ್ನ ಸೋದರಮಾವನ ಪ್ರಭಾವ ಬಳಸಿ ನ್ಯೂಟನ್ ಕೇಂಬ್ರಿಜ್ ವಿಶ್ವವಿದ್ಯಾಲಯವನ್ನು ಸೇರಿಕೊಂಡ. ವಿದ್ಯಾಭ್ಯಾಸ, ಅದರಲ್ಲೂ ಗಣಿತದ ಬಗೆಗೆ ಅಪಾರ ಆಸಕ್ತಿ ಗಳಿಸಿಕೊಂಡಿದ್ದ ಅವನ ವಿದ್ಯಾರ್ಥಿ ಜೀವನದ ಒಂದು ಮಜಲನ್ನು ಅವನು ಕೇಂಬ್ರಿಜ್ ಸೇರಿದ ಆರಂಭದಲ್ಲಿಯೇ ಬರೆದ ಪತ್ರವೊಂದರ ಮೂಲಕ ಕಾಣಬಹುದು. (ನ್ಯೂಟನ್ ತನ್ನ ಜೀವನವಿಡೀ ಲೆಕ್ಕವಿಲ್ಲದಷ್ಟು ಪತ್ರ ವ್ಯವಹಾರ ಮಾಡಿದ. ಕೇಂಬ್ರಿಜ್ ವಿಶ್ವವಿದ್ಯಾಲಯ ಅವನ ಪತ್ರಗಳನ್ನು ಮೂರು ಸಾವಿರ ಪುಟಗಳ ಹಲವು ಸಂಪುಟಗಳ ಗ್ರಂಥಮಾಲೆಯ ರೂಪದಲ್ಲಿ ಬಿಡುಗಡೆ ಮಾಡಿದೆ.)

೧೬೬೧ರಲ್ಲಿ – ಅವನು ಕೇಂಬ್ರಿಜ್ ಸೇರಿದ ವರ್ಷ – ನ್ಯೂಟನ್‌ ನ ಮಿತ್ರನೊಬ್ಬ ಪಾನಮತ್ತನಾಗುತ್ತಾನೆ. ಆ ವಿಷಯ ನ್ಯೂಟನ್ನನಿಗೆ ಗೊತ್ತಾಗುತ್ತದೆ. ನ್ಯೂಟನ್, ಅವನಿಗೊಂದು ಪತ್ರ ಬರೆಯುತ್ತಾನೆ: “ನನ್ನ ಕಳಕಳಿಯ ಬೇಡಿಕೆ. ಪಾನಮತ್ತನಾಗಿದ್ದಕ್ಕೆ ಮೊದಲು ಪಶ್ಚಾತ್ತಾಪ ತೋರು…. ದೇವರ ದಯೆಯಿಂದ ನೀನು ಸರಿ ಹೋದಲ್ಲಿ, ಸತ್ಯವಂತನಾಗು ಮತ್ತು ಮದ್ಯಪಾನದಿಂದ ದೂರವಾದ ಬದುಕನ್ನು ಬಾಳಲು ಶ್ರದ್ಧೆವಹಿಸು” ಹತ್ತೊಂಬತ್ತು ವಯಸ್ಸಿನ ಕಾಲೇಜು ಹುಡುಗ ತನ್ನ ಮಿತ್ರನೊಬ್ಬನಿಗೆ ಬರೆದ ಪತ್ರವಿದು!

ನ್ಯೂಟನ್‌ ನ ಅಧ್ಯಯನಶೀಲತೆ ಮತ್ತು ಪ್ರತಿಭೆ ಅವನ ಪ್ರೊಫೆಸರ್‌ ಗಳಿಗೆ ಗೊತ್ತಾಗುತ್ತದೆ. ಅವನಿಗೆ, ಕೇಂಬ್ರಿಜ್ ವಿಶ್ವವಿದ್ಯಾಲಯದ ಸ್ಕಾಲರ್‌ಷಿಪ್ ದೊರೆಯುತ್ತದೆ. ಮುಂದೆ, ಅವನ ಪ್ರೊಫೆಸರ್ ಒಬ್ಬರು ನಿವೃತ್ತರಾದಾಗ, ಆ ಪದವಿಯೂ ಅವನಿಗೆ ದೊರಕುತ್ತದೆ. ಆದರೆ, ಐತಿಹಾಸಿಕ ಮೂಲಗಳ ಪ್ರಕಾರ, ನ್ಯೂಟನ್ ಒಬ್ಬ ಅತ್ಯಂತ ಕೆಟ್ಟ ಶಿಕ್ಷಕ. ಕೇವಲ ತನ್ನ ಅಧ್ಯಯನದಲ್ಲಷ್ಟೇ ಆಸಕ್ತಿ ಹೊಂದಿದ್ದ ಅವನಿಗೆ, ತನ್ನ ವಿದ್ಯಾರ್ಥಿಗಳಿಗೆ ಕಲಿಕೆ ನೀಡುವಲ್ಲಿ ಎಳ್ಳಷ್ಟೂ ಕಾಳಜಿ ಇರಲಿಲ್ಲ. ಕೆಲವರ ಪ್ರಕಾರ, “ಮೂರ್ಖರೊಡನೆ ಒಡನಾಟ”ದಿಂದ ತಪ್ಪಿಸಿಕೊಳ್ಳಲು ಅವನು ತನ್ನ ಬರಹಗಳನ್ನು ಬೇಕೆಂದೇ ಸಂಕೀರ್ಣಗೊಳಿಸುತ್ತಿದ್ದನಂತೆ.

ಪ್ರತಿದಿನ ಅವನು ಮತ್ತೆ-ಮತ್ತೆ ಬೀಳುವುದೂ, ಮತ್ತು ನೀಲಗಿರಿಯ ಬುಗುರಿಗಳನ್ನು ಶಪಿಸುವುದೂ ಸಾಮಾನ್ಯವಾಯಿತು ಮತ್ತು ಅದು ನಮ್ಮ ಗುಂಪಿನಲ್ಲಿ ಹಾಸ್ಯದ ವಸ್ತುವಾಯಿತು. ಆದರೆ, ರೋಲರ್-ಸ್ಕೇಟ್‌ ಗಳು ಅವನದಾದ್ದರಿಂದ, ಮತ್ತು ಅವನು ಮಾತುಗಾರಿಕೆಯಲ್ಲಿ ಎದೆಗಾರನಾಗಿದ್ದರಿಂದ ಯಾರೂ ಅವನ ಮುಂದೆ ಹಾಸ್ಯ ಮಾಡುತ್ತಿರಲಿಲ್ಲ.

ಹಗಲು ರಾತ್ರಿ ಎನ್ನದೆ, ವಿವಿಧ ವಿಷಯಗಳ ಕುರಿತು ಅಧ್ಯಯನ ಮಾಡಿ ಅವನ್ನೆಲ್ಲ ವಿವರವಾಗಿ ಬರೆದಿಟ್ಟುಕೊಳ್ಳುತ್ತಿದ್ದ ನ್ಯೂಟನ್ ಅವುಗಳನ್ನು ಪ್ರಕಟಿಸುವ ಗೋಜಿಗೆ ಮಾತ್ರ ಹೋಗುತ್ತಿರಲಿಲ್ಲ. ತನ್ನ ಪತ್ರವೊಂದರಲ್ಲಿ ಅವನು ಬರೆದುಕೊಂಡಿರುವಂತೆ, ಅಧ್ಯಯನವನ್ನು ಪ್ರಕಟಿಸಿದರೆ ಆ ವಿಷಯದ ಕುರಿತು ಇತರರೊಂದಿಗೆ ಚರ್ಚಿಸಬೇಕಾಗುತ್ತದೆ, ಇತರರೊಂದಿಗಿನ ಈ ವ್ಯವಹಾರದಲ್ಲಿ ಅವನಿಗೆ ಒಂದಿಷ್ಟೂ ಆಸಕ್ತಿಯೇ ಇಲ್ಲ.

ತನ್ನ ಅಧ್ಯಯನ ಮತ್ತು ಸಂಶೋಧನೆಗಳನ್ನು ಕುರಿತು ಪ್ರಕಟಿಸಲು ಆಸಕ್ತಿ ಅವನಿಗೆ ಇಲ್ಲದಿದ್ದರೂ, ಅವುಗಳಲ್ಲಿ ತಾನೇ ಮೊದಲಿಗನೆಂಬುದನ್ನು ತೋರಬೇಕೆಂಬ ಹಂಬಲ ಮಾತ್ರ ಅವನಿಗೆ ಇದ್ದೇ ಇತ್ತು. ಮಹಾನ್ ಗಣಿತಜ್ಞ ಮತ್ತು ತತ್ವಶಾಸ್ತ್ರಜ್ಞ, ಜರ್ಮನಿಯ ಗಾಟ್‌ಫ್ರೀಡ್ ಲೈಬ್ನೆಜ಼್ ನ್ಯೂಟನ್‌ ನ ಸಮಕಾಲೀನ. ಅವರಿಬ್ಬರೂ ಸಮಕಾಲೀನರಷ್ಟೇ ಅಲ್ಲದೆ, ಸಮ ಆಸಕ್ತಿಗಳನ್ನೂ ಹೊಂದಿದ್ದವರು. ಹೀಗಾಗಿ, ತಮ್ಮ ಆಲೋಚನೆಗಳನ್ನೂ ಒಬ್ಬರಿಗೊಬ್ಬರು ಹಂಚಿಕೊಂಡವರು. ಆದರೆ, ಲೈಬ್ನೆಜ಼್, ನ್ಯೂಟನ್‌ ತರಹದ ವ್ಯಕ್ತಿತ್ವದವನಾಗಿರಲಿಲ್ಲ. ಅವನಿಗೆ ಹಲವಾರು ಮಿತ್ರರು. ಅವರೊಡನೆ ತನ್ನ ಅಧ್ಯಯನಗಳನ್ನು ಅವನು ಮುಕ್ತವಾಗಿಯೇ ಹಂಚಿಕೊಳ್ಳುತ್ತಿದ್ದ. ಹಾಗೆಯೇ, ಅವುಗಳನ್ನು ಪ್ರಕಟಿಸುವಲ್ಲಿ ಅವನಿಗೆ ಹಿಂಜರಿಕೆ ಇರಲಿಲ್ಲ.

(ಗಾಟ್‌ಫ್ರೀಡ್ ಲೈಬ್ನೆಜ಼್)

ಲೈಬ್ನೆಜ಼್ ೧೬೮೪ರಲ್ಲಿ ಗಣಿತದ ಹೊಚ್ಚ ಹೊಸದೊಂದು ಪದ್ಧತಿಯನ್ನು ಕಂಡು ಹಿಡಿದು ಅದನ್ನು ಪ್ರಕಟಿಸಿದ. ಅದುವೇ “ಕ್ಯಾಲ್ಕುಲಸ್”. ಅದಕ್ಕೆ ಆ ಹೆಸರನ್ನಿತ್ತವನೂ ಅವನೇ. ಇದು, ಲೈಬ್ನೆಜ಼್‌ ಗೆ ಯೂರೋಪಿನಲ್ಲಿ ಅಪಾರ ಕೀರ್ತಿಯನ್ನೂ ತಂದಿತು. ಆದರೆ, ಇದು, ನ್ಯೂಟನ್ ಮತ್ತು ಲೈಬ್ನೆಜ಼್‌ ನಡುವೆ ಜೀವನಾದ್ಯಂತ ಶತೃತ್ವಕ್ಕೆ ಕಾರಣವೂ ಆಯಿತು. ಇಬ್ಬರೂ, ತಾವೇ, ಅದನ್ನು ಮೊಟ್ಟ ಮೊದಲು ಕಂಡು ಹಿಡಿದಿದ್ದಾಗಿ ಒಬ್ಬರಿಗೊಬ್ಬರು ಪತ್ರಗಳನ್ನು ಬರೆದುಕೊಂಡರು; ಒಬ್ಬರು ಇನ್ನೊಬ್ಬರನ್ನು “ಕಳ್ಳ”ನೆಂದು ಆರೋಪಿಸಿದರು. ಗಣಿತದ ಇತಿಹಾಸಕಾರರ ಪ್ರಕಾರ, “ಕ್ಯಾಲ್ಕುಲಸ್” ವಿಚಾರದಲ್ಲಿ, ಇಬ್ಬರಲ್ಲಿ ಯಾರೂ ಕಳ್ಳರಲ್ಲ. ಇಬ್ಬರೂ ತಾವೇ ಸ್ವತಃ ಕಂಡುಕೊಂಡಂತಹ ವಿಧಾನವದು. ಆದರೆ, ನ್ಯೂಟನ್, ಲೈಬ್ನೆಜ಼್‌ ಗೆ ಕೆಲ ವರ್ಷ ಮುಂಚೆಯೇ ಅದನ್ನು ಕಂಡುಕೊಂಡಿದ್ದ. ಅದಕ್ಕೆ ಅವನು ನೀಡಿದ್ದ ಹೆಸರು “ಮೆಥಡ್ ಆಫ್ ಫ್ಲಕ್ಷನ್ಸ್” ಆದರೆ, ಅವನು ಅದನ್ನು ಪ್ರಕಟಿಸುವುದರಲ್ಲಿ ಹಿಂದೆ ಬಿದ್ದಿದ್ದ.

ನ್ಯೂಟನ್‌ ನ ಮಹಾನ್ ಕೃತಿ “ಪ್ರಿಂಕಿಪಿಯಾ ಮ್ಯಾಥಮಾಟಿಕ” ೧೬೮೭ರಲ್ಲಿ ಪ್ರಕಟವಾಯಿತು. ಆ ವೇಳೆಗಾಗಲೇ, ತನ್ನ ಪತ್ರ ವ್ಯವಹಾರಗಳ ಮೂಲಕ, ಯೂರೋಪಿನ ಹಲವಾರು ವಿಜ್ಞಾನಿಗಳಿಗೆ ಅವನ ಪರಿಚಯವಾಗಿತ್ತು. ಗುರುತ್ವಾಕರ್ಷಣೆಯನ್ನು ತನ್ನ ಗಣಿತದ ಮೂಲಕ ಕಟ್ಟಿ ಹಾಕಿ, ಸೇಬು-ಭೂಮಿಯ ಸಂಬಂಧದಿಂದ ಹಿಡಿದು ಸೌರ ಮಂಡಲದ ಗ್ರಹಗತಿಯನ್ನೇ ಕರಾರುವಕ್ಕಾಗಿ ಲೆಕ್ಕ ಹಾಕುವ ವಿಧಾನವನ್ನು ಒದಗಿಸಿಕೊಟ್ಟ ನ್ಯೂಟನ್‌ ನ “ಪ್ರಿಂಕಿಪಿಯಾ” ಮಾನವನ ಬುದ್ಧಿಶಕ್ತಿಯ ಉತ್ತುಂಗದ ಪ್ರತೀಕಗಳಲ್ಲಿ ಒಂದು. ಹಲವಾರು ವಿಜ್ಞಾನಿಗಳು ಹೇಳುವಂತೆ, ಇನ್ನೊಬ್ಬ ಇಂಗ್ಲಿಷ್ ವಿಜ್ಞಾನಿ ಚಾರ್ಲ್ಸ್ ಡಾರ್ವಿನ್‌ ನ “ಆನ್ ದ ಆರಿಜಿನ್ ಆಫ್ ಸ್ಪಿಷೀಸ್” ಮತ್ತು ನ್ಯೂಟನ್‌ ನ “ಪ್ರಿಂಕಿಪಿಯಾ” ಇವೆರಡೂ ಮಾನವ ಇತಿಹಾಸದಲ್ಲಿಯೇ ಅತ್ಯಂತ ಕ್ರಾಂತಿಕಾರಿ ವೈಜ್ಞಾನಿಕ ಕೃತಿಗಳು.

ಪ್ರಿಂಕಿಪಿಯಾದ ಪ್ರಕಟಣೆಯ ಬಳಿಕ, ನ್ಯೂಟನ್ ಅಪಾರ ಕೀರ್ತಿ ಗಳಿಸಿದ. ಚುನಾವಣೆಯಲ್ಲಿ ನಿಂತು ಪಾರ್ಲಿಮೆಂಟ್ ಸದಸ್ಯನೂ ಆದ. ಅವನು, ಪಾರ್ಲಿಮೆಂಟ್ ಸದಸ್ಯನಾಗಿದ್ದಾಗ, ಅವನು ಅಲ್ಲಿ ಭಾಷಣ ಮಾಡಿದ ದಾಖಲೆಗಳು ಅಷ್ಟಾಗಿ ಇಲ್ಲ. ಒಂದು ಕತೆಯ ಪ್ರಕಾರ, ಅವನು ಭಾಷಣ ಮಾಡಲು ಒಮ್ಮೆ ಪಾರ್ಲಿಮೆಂಟ್ ಹಾಲ್‌ ನಲ್ಲಿ ಎದ್ದುನಿಂತನಂತೆ. ಎಂದೂ ಮಾತನಾಡದ ಮಹಾನ್ ವಿಜ್ಞಾನಿ ಏನು ಹೇಳುತ್ತಾನೋ ಕೇಳಲೆಂದು ಇಡೀ ಸದನವೇ ಸ್ತಬ್ಧವಾಯಿತಂತೆ. ಆ ಕತೆಯ ಪ್ರಕಾರ, ನ್ಯೂಟನ್ ಹೇಳಿದ್ದು ಇಷ್ಟೇ: “ಮಾನನೀಯ ಸ್ಪೀಕರ್, ಛಳಿಗಾಳಿ ಹೊಡೆಯುತ್ತಿದೆ. ದಯವಿಟ್ಟು ಕಿಟಕಿಗಳನ್ನು ಮುಚ್ಚುವಂತೆ ಅಣತಿ ನೀಡಿ”. ಈ ಕತೆಯ ಸತ್ಯಾಸತ್ಯತೆ ಏನೇ ಇರಲಿ, ಮುಂದಿನ ಚುನಾವಣೆಯಲ್ಲಿ ಅವನು ಸೋತದ್ದಂತೂ ನಿಜ.

ನ್ಯೂಟನ್, ಪಾರ್ಲಿಮೆಂಟಿನಿಂದ ಹೊರಬಿದ್ದ ನಂತರ, ಬ್ರಿಟನ್ನಿನ ರಾಣಿ ಅವನನ್ನು ರಾಯಲ್ ಮಿಂಟ್‌ ನ ಮುಖ್ಯಸ್ಥನನ್ನಾಗಿ ನೇಮಿಸಿದಳು. ತನ್ನ ಸ್ಥಾನವನ್ನು ಗಂಭೀರವಾಗಿ ಪರಿಗಣಿಸಿದ ನ್ಯೂಟನ್, ಫೇಕ್ ಕರೆನ್ಸಿಯನ್ನು ತಡೆಗಟ್ಟಲು ಹಲವಾರು ವಿಧಾನಗಳನ್ನು ರೂಪಿಸಿದ. ಅಷ್ಟೇ ಅಲ್ಲ, ಫೇಕ್ ಕರೆನ್ಸಿಯನ್ನು ನಿರ್ಮಿಸಿ ಹಂಚುವವರನ್ನು ಹಿಡಿಯಲೆಂದು ವೇಷ ಮರೆಸಿಕೊಂಡು ಬಾರ್-ಪಬ್‌ ಗಳಿಗೆ ಹೋಗುತ್ತಿದ್ದ. ನ್ಯೂಟನ್‌ ನ ಕ್ರಮಗಳಿಂದ ಸಿಕ್ಕಿ ಬಿದ್ದವನ ಪತ್ರವೊಂದರ ದಾಖಲೆ, ಇನ್ನೂ ಇದೆ. ಕಳ್ಳ ನೋಟುಗಳನ್ನು ಸೃಷ್ಟಿಸಿ ಹಂಚಿದ್ದಕ್ಕಾಗಿ ಅವನಿಗೆ ಮರಣದಂಡನೆ ವಿಧಿಸಲಾಯಿತು. ಅವನು, ನ್ಯೂಟನ್‌ ಗೆ ಬರೆದ ಪತ್ರದಲ್ಲಿ, ತನ್ನನ್ನು ಕ್ಷಮಿಸಿ ಜೀವ ಉಳಿಸುವಂತೆ ಬೇಡುತ್ತಾನೆ. ಕಠಿಣ ಹೃದಯಿಯಾದ ನ್ಯೂಟನ್ ಅವನ ಅಳಲಿಗೆ ಓಗೊಡುವುದಿಲ್ಲ.

******

(ಯೋಹಾನ್ ಬೆರ್ನೌಲಿ)

ಅವನು ಮಿಂಟ್ ಮುಖ್ಯಸ್ಥನಾಗಿದ್ದ ಸಮಯದಲ್ಲಿಯೇ, ಯೂರೋಪಿನ ಮಹಾನ್ ವಿಜ್ಞಾನಿಗಳಲ್ಲಿ ಒಬ್ಬನಾಗಿದ್ದ ಯೋಹಾನ್ ಬೆರ್ನೌಲಿ ಜಗತ್ತಿನ ಗಣಿತಜ್ಞರಿಗೆ, ಗಣಿತದ ಒಂದು ಸವಾಲನ್ನು ಹಾಕಿದ. ಮತ್ತು ತಮ್ಮ ಉತ್ತರವನ್ನು ಕಳುಹಿಸಲು ಆರು ತಿಂಗಳು ಸಮಯವನ್ನೂ ನೀಡಿದ. ಅದನ್ನು, ಉತ್ತರಿಸಲು ಕ್ಯಾಲ್ಕುಲಸ್‌ ನ ಜ್ಞಾನ ಬೇಕಿತ್ತು. ಆರು ತಿಂಗಳ ನಂತರ, ಒಂದೇ ಒಂದು ಉತ್ತರವೂ ಬರಲಿಲ್ಲ. ಬೆರ್ನೌಲಿ, ನ್ಯೂಟನ್‌ ನ ಬದ್ಧಶತೃವಾಗಿದ್ದ ಲೈಬ್ನೆಜ಼್‌ ನ ಆಪ್ತನಾಗಿದ್ದ. ಕೊಟ್ಟ ಸಮಯದ ನಂತರವೂ, ಒಂದೂ ಉತ್ತರ ಬರದಿದ್ದರಿಂದ, ಸಮಯವನ್ನು ಮತ್ತಷ್ಟು ವಿಸ್ತರಿಸುವಂತೆ ಲೈಬ್ನೆಜ಼್ ಸಲಹೆ ನೀಡಿದ. ಆ ಸಲಹೆಯಂತೆ, ಉತ್ತರ ನೀಡಲು ಸಮಯವನ್ನು ಮತ್ತಷ್ಟು ವಿಸ್ತರಿಸಲಾಯಿತು.

ಮಿಂಟ್ ಕೆಲಸದಲ್ಲಿ ನಿರತನಾಗಿದ್ದ ನ್ಯೂಟನ್‌ ಗೆ ಈ ಸವಾಲು ಕೊನೆಗೂ ತಲುಪಿತು. ಅವನು, ಅದನ್ನು ಒಂದೇ ದಿನದಲ್ಲಿ ಬಿಡಿಸಿ, ತನ್ನ ಉತ್ತರವನ್ನು ಕಳುಹಿಸಿದ. ಬೆರ್ನೌಲಿ ಮತ್ತು ಲೈಬ್ನೆಜ಼್‌ ರ ಸ್ನೇಹದ ಬಗೆಗೆ ಅರಿವಿದ್ದ ನ್ಯೂಟನ್, ಬೆರ್ನೌಲಿಯ ಈ ಸವಾಲಿನ ಹಿಂದೆ ಏನೋ ಸಂಚಿರಬೇಕೆಂದೇ ಭಾವಿಸಿ ತನ್ನ ಉತ್ತರವನ್ನು ಅನಾಮಧೇಯನಾಗಿ ಕಳುಹಿಸಿದ್ದ.

ಆದರೆ, ಉತ್ತರ ನೋಡಿದ ತಕ್ಷಣವೇ, ಬೆರ್ನೌಲಿ, ಅದನ್ನು ಕಳುಹಿಸಿದವರು ಯಾರಿರಬಹುದೆಂದು ಸರಿಯಾಗಿ ಊಹಿಸಿದ. ಅವನು, ಲೈಬ್ನೆಜ಼್‌ ನ ಆಪ್ತನಾದರೂ, ನ್ಯೂಟನ್‌ ನನ್ನು ಹೊಗಳಿ, “ಸಿಂಹವನ್ನು ಗುರುತಿಸಲು ಅದರ ಪಂಜವಷ್ಟೇ ಸಾಕು” ಎಂದು ಬರೆದು ಕಳುಹಿಸಿದ.

ಇದು ನ್ಯೂಟನ್‌ ನನ್ನು ಕೆರಳಿಸಿತು. ಅವನ ಉತ್ತರ: “ವಿದೇಶಿಯರು ನನ್ನ ಬಗೆಗೆ ತಮಾಷೆ ಮಾಡುವುದು ನನಗೆ ಇಷ್ಟವಾಗುವುದಿಲ್ಲ”

(ನಮ್ಮ ಈ ಕಿರು ಕಥಾ ಪ್ರಸಂಗದ ನಾಯಕ ಬೆರ್ನೌಲಿಗೂ ಒಬ್ಬ ಶತೃವಿದ್ದ. ಅವನು, ಬೆರ್ನೌಲಿಯ ಸಹೋದರನೇ ಆಗಿದ್ದ ಜೇಕಬ್ ಬೆರ್ನೌಲಿ. ಅವನೂ ಸಹ, ಬೆರ್ನೌಲಿಯ ಸವಾಲಿಗೆ ಸರಿಯಾದ ಉತ್ತರವನ್ನೇ ನೀಡಿದ್ದ. “ಸಹೋದರರ ಸವಾಲ್” ಎಂದರೆ ಇದೇ ಇರಬಹುದೇನೋ.. ಅಥವಾ ಕ್ಯಾಲ್ಕುಲಸ್ ಕಲಿಯುವುದಕ್ಕೂ ಕಾಲ್ಕೆರೆದು ಕದನಕ್ಕಿಳಿಯುವುದಕ್ಕೂ ನಂಟಿರಬಹುದು)

******

ನ್ಯೂಟನ್ ಕುರಿತು ಬರೆಯಲು ಎಷ್ಟೋ ವಿಷಯಗಳಿವೆ. ವಿಜ್ಞಾನದ ಇತಿಹಾಸದಲ್ಲಿ ಅವನಷ್ಟು ಬಹುಮುಖ ಪ್ರತಿಭೆಯುಳ್ಳವರು ಯಾರೂ ಇಲ್ಲ. ಅದೂ ಅಲ್ಲದೆ, ಅವನ ಜೀವನದ ಹಲವಾರು ಮಹತ್ವದ ವಿಷಯಗಳು ಅವನ ಪತ್ರ ವ್ಯವಹಾರಗಳ ಮೂಲಕ ದಾಖಲಾಗಿವೆ. ವಿಜ್ಞಾನದ ಇತಿಹಾಸದ ಬಗೆಗೆ ಕುತೂಹಲ ಉಳ್ಳವರಿಗೆ, ಅವನ ಪತ್ರಗಳಲ್ಲಿ ಲೆಕ್ಕವಿಲ್ಲದಷ್ಟು ಆಸಕ್ತಿಕರ ಸಂಗತಿಗಳು ದೊರಕುತ್ತವೆ.

ಅವನು, ನಮಗೆ ಮಹಾನ್ ವಿಜ್ಞಾನಿ ಎಂದೇ ಪರಿಚಿತನಾಗಿದ್ದರೂ, ಅವನ ಆಸಕ್ತಿ, ವಿಜ್ಞಾನ-ಗಣಿತಗಳಿಗಿಂತ, ಕ್ರಿಸ್ತ ಧರ್ಮ ಮತ್ತು ಆಲ್ಕೆಮಿಗಳ ಕಡೆಗೇ ಇದ್ದವು (ಈ “ಆಲ್ಕೆಮಿ” ಎನ್ನುವುದು ಸೀಸದಂತಹ ಸಾಮಾನ್ಯ ವಸ್ತುವನ್ನು ಚಿನ್ನ-ಬೆಳ್ಳಿಯಂತಹ ಅಮೂಲ್ಯ ಲೋಹಗಳನ್ನಾಗಿ ಪರಿವರ್ತಿಸಲು ಮಾಡುತ್ತಿದ್ದ ವ್ಯರ್ಥ ಪ್ರಯತ್ನಗಳು. ಈ ಪ್ರಯತ್ನಗಳು, ಅವೈಜ್ಞಾನಿಕವೂ ಮತ್ತು ವ್ಯರ್ಥವೇ ಆದರೂ, ಇಂತಹ ಪ್ರಯತ್ನಗಳಿಂದ ರಾಸಾಯನಿಕ ಶಾಸ್ತ್ರದಲ್ಲಿ ಮಹತ್ತರ ಬೆಳವಣಿಗೆಗಳೂ ಆದವು)

ವಿಜ್ಞಾನಕ್ಕಿಂತ ಹೆಚ್ಚು, ಕ್ರಿಸ್ತ ಧರ್ಮ ಮತ್ತು ಆಲ್ಕೆಮಿಯ ಬಗೆಗೆ ನ್ಯೂಟನ್ ಬರೆದಿದ್ದಾನೆ. (ಆಲ್ಕೆಮಿಯ ಬಗೆಗೆ ಬರೆದಿದ್ದ ಬರಹಗಳನ್ನು, ಅವನು ತನ್ನ ಜೀವನದ ಕೊನೆಯ ವೇಳೆಗೆ ಸುಟ್ಟುಹಾಕಿದ. ಹಲವಾರು ವಿಜ್ಞಾನಿಗಳು ಊಹಿಸುವಂತೆ, ಆ ಬರಹಗಳಲ್ಲಿ ಕೆಮಿಸ್ಟ್ರಿಯ ಎಷ್ಟೋ ಮಹತ್ವದ ವಿಷಯಗಳು ಬೆಂಕಿಗೆ ಆಹುತಿಯಾಗಿರಬಹುದು) ಆಲ್ಕೆಮಿಯ ತನ್ನ ಪ್ರಯೋಗಗಳಿಗೆ, ಅವನು, ಪಾದರಸವೂ ಸೇರಿ ಹಲವಾರು ಅಪಾಯಕಾರಿ ರಾಸಾಯನಿಕಗಳನ್ನು ಉಪಯೋಗಿಸುತ್ತಿದ್ದ. ಅಷ್ಟೇ ಅಲ್ಲ, ಅವುಗಳ ಶುದ್ಧತೆಯನ್ನು ಪರೀಕ್ಷಿಸಲು, ಅವುಗಳ ರುಚಿಯನ್ನೂ ನೋಡುತ್ತಿದ್ದ!

(ತನ್ನ ಸಹಜ ಕೂದಲಿನಲ್ಲಿ ನ್ಯೂಟನ್)

ಎಂಬತ್ತು ನಾಲ್ಕು ವರ್ಷಗಳ ಕಾಲ ಬದುಕಿದ ನ್ಯೂಟನ್, ಅವಿವಾಹಿತನಾಗಿಯೇ ತನ್ನ ಜೀವನ ಕಳೆದ. ಅವನ ಸಮಕಾಲೀನನಾದ ಖ್ಯಾತ ತತ್ವಶಾಸ್ತ್ರಜ್ಞ ಜಾನ್ ಲಾಕ್, ಒಮ್ಮೆ ಅನಾರೋಗ್ಯ ಪೀಡಿತನಾಗಿದ್ದಾಗ, ಅವನು ಸಾಯಲೆಂದು ನ್ಯೂಟನ್ ಆಶಿಸುತ್ತಾನೆ. ಅನಂತರ ಪಶ್ಚಾತ್ತಾಪಪಟ್ಟು ಲಾಕ್‌ ಗೆ ಪತ್ರವೊಂದನ್ನೂ ಬರೆಯುತ್ತಾನೆ. ಅವನ ಕೋಪಕ್ಕೆ ಕಾರಣ, ನ್ಯೂಟನ್ ಹೇಳುವಂತೆ “embroil me with women”! ಇಂತಹ ಅರ್ಥರಹಿತ ಮುಂಗೋಪ ಪಾದರಸ ಸೇವನೆಯ ಮಹತ್ವವೋ ಎನೋ?!

ವೈಜ್ಞಾನಿಕ ಪ್ರಪಂಚದ “ರಾಕ್ ಸ್ಟಾರ್” ಒಬ್ಬನಿದ್ದರೆ, ಅದು ಐಸಾಕ್ ನ್ಯೂಟನ್ನೇ ಎನ್ನಬಹುದು. ಪಕ್ಕದಲ್ಲಿ ಕಾಣುವ, “ರಾಕ್ ಸ್ಟಾರ್”‌ನಂತೆ ಕಾಣುವ ಅವನ ಚಿತ್ರ, “Newton in His Own Hair” ಎಂದು ಪ್ರಸಿದ್ಧವಾದ ಚಿತ್ರ. ಅವನ ಬಹುಪಾಲು ಚಿತ್ರಗಳಲ್ಲಿ ಅವನು ‘ವಿಗ್’ ಧರಿಸಿರುತ್ತಾನೆ. ಅಂದಹಾಗೆ, ತನ್ನ ಪ್ರಯೋಗಗಳಲ್ಲಿ, ಕೂದಲಿಗೆ ಬಳಿಯಲು ಉತ್ತಮ ಮಟ್ಟದ ಬಣ್ಣದ ಕುರಿತೂ ಅವನು ಆಸಕ್ತಿ ತೋರುತ್ತಾನೆ. ಆದರೆ, ಈ ಚಿತ್ರದಲ್ಲಿ ಅಂತಹ ಬಣ್ಣದ ಉಪಯೋಗ ಮಾಡಿದಂತಿಲ್ಲ.

ನ್ಯೂಟನ್ ಇಷ್ಟೆಲ್ಲಾ ಸೇರಿದಂತೆ, ಇನ್ನೆಷ್ಟೋ ಮಾಡಿದನೆನ್ನುವುದೇನೋ ಸರಿ. ಆದರೆ, ನಮ್ಮ ಗುರಿ ಕಾಲ ಬಗ್ಗುವುದನ್ನು ತಿಳಿಯುವ ವಿಷಯವಲ್ಲವೇ?!

(ಮುಂದುವರೆಯುವುದು)