ಭಾರತದಿಂದ ಹೊರಡುವ ಮೊದಲು ಮಾಂಸಾಹಾರ ಮಾಡುವುದಿಲ್ಲ, ವೈನ್ ಕುಡಿಯುವುದಿಲ್ಲ ಎಂದು ತಾಯಿಗೆ ಮಾತು ಕೊಟ್ಟು ಹೊರಟವರು ಗಾಂಧೀಜಿ . 20 ಬ್ಯಾರನ್ ಕೋರ್ಟ್ ರಸ್ತೆಯಲ್ಲಿ ಇನ್ನರ್ ಟೆಂಪಲ್‌ಗೆ ಭರ್ತಿ ಆಗುವಾಗ ಉಳಿದಿದ್ದ ಮನೆಯ ಮಾಲಕಿ ವಾರಕ್ಕೆ ಮೂವತ್ತು ಶಿಲ್ಲಿಂಗ್ ಬಾಡಿಗೆ ಪಡೆಯುತ್ತಿದ್ದಳು. ಆದರೆ ಸಸ್ಯಾಹಾರ ಒದಗಿಸುವುದು ಆಕೆಗೆ ಕಷ್ಟ ಆಗುತ್ತಿತ್ತು. ಊಟ ಕೆಟ್ಟದಾಗಿರುವುದು, ಹಸಿದುಕೊಂಡೇ ದಿನಕಳೆಯುತ್ತಿದ್ದುದನ್ನು ಗಾಂಧೀಜಿ ಬೇರೆ ಬೇರೆ ಸಂದರ್ಭದಲ್ಲಿ ನೆನಪಿಸಿದ್ದಿದೆ. ಬೇಯಿಸಿದ ಆಲೂಗಡ್ಡೆ, ಕ್ಯಾಬೇಜ್, ಹಸಿ ಟೊಮೇಟೊ, ಲೆಟ್ಟಿಸ್ ಎಲೆ, ಕ್ಯಾರಟ್‌ಗಳು ಅವರ ಊಟದ ಭಾಗವಾದವು.ʻನೀಲಿ ಫಲಕಗಳಲ್ಲಿ ನೆನಪಾಗಿ ನಿಂದವರುʼ ಸರಣಿಯಲ್ಲಿ ಗಾಂಧೀಜಿಯವರ ಲಂಡನ್‌ ವಾಸದ ಕುರಿತು ಬರೆದಿದ್ದಾರೆ ಯೋಗೀಂದ್ರ ಮರವಂತೆ

ಲಂಡನ್‌ನ ಪಾರ್ಲಿಮೆಂಟ್ ಚೌಕದಲ್ಲಿರುವ ಐತಿಹಾಸಿಕ ಇಂಗ್ಲಿಷ್ ಸೆಲೆಬ್ರಿಟಿಗಳ ಪ್ರತಿಮೆಗಳ ನಡುವೆ ಭಾರತೀಯನ ಒಂಭತ್ತು ಅಡಿ ಎತ್ತರದ ಕಂಚಿನ ಮೂರ್ತಿಯೂ ಅಚಲವಾಗಿ ನಿಂತಿದೆ. ಬ್ರಿಟನ್ನಿನಲ್ಲಿ ಎಂತಹ ಚಳಿ ಮಳೆ ಹಿಮ ಇಳಿಯುವ ಕಾಲವೇ ಇರಲಿ, ಸೂಟು ಬೂಟಿನ ಉಡುಗೆಯ ಗಂಭೀರ ಠೀವಿಯ ಹಲವು ಜನಪ್ರಿಯ ಬ್ರಿಟಿಷ್ ಪ್ರಸಿದ್ಧರ ಪ್ರತಿಮೆಗಳ ಮಧ್ಯೆ ಅತ್ಯಂತ ಸರಳ ಉಡುಪಿನ, ತೀರ ಸಾಮಾನ್ಯ ನಿಲುವಿನ ಏಕಾಂಗಿ ಹಸನ್ಮುಖಿ ಭಾರತೀಯನ ಪ್ರತಿಮೆ ಗಮನ ಸೆಳೆಯುತ್ತದೆ. ತೊಂಬತ್ತು ವರ್ಷಗಳ ಹಿಂದೆ, ಭಾರತವಿನ್ನೂ ಆಂಗ್ಲರ ವಸಾಹತಾಗಿದ್ದ ಕಾಲದಲ್ಲಿ ಬ್ರಿಟನ್ನಿನ ಪ್ರಧಾನಿಯಾಗಿದ್ದ ರಾಮಸೇ ಮ್ಯಾಕ್ ಡೊನಾಲ್ಡ್‌ರ ಕಚೇರಿಯ ಹೊರಗೆ ಖಾದಿ ವಸ್ತ್ರ ತೊಟ್ಟು ನಿಂತಿದ್ದ ಆ ವ್ಯಕ್ತಿಯ ಅಂದಿನ ಭಂಗಿಯಲ್ಲಿಯೇ ಈ ಲೋಹದ ವಿಗ್ರಹವಿದೆ ಎಂದು ಇತಿಹಾಸವನ್ನು ತಿಳಿದವರು ಗುರುತಿಸಬಹುದು.

ಛಾಯಾಗ್ರಾಹಕ ಮಹಾನುಭಾವನೊಬ್ಬ 1931ರಲ್ಲಿ ತೆಗೆದಿದ್ದ ಭಾವಚಿತ್ರವನ್ನು ಆಧರಿಸಿದ ಮೂರ್ತಿ ಭಾರತೀಯನ ಅಂದಿನ ನಿಲುವು ಹಾವಭಾವ ವ್ಯಕ್ತಿತ್ವಗಳನ್ನು ಇಂದಿಗೂ ಬಿಂಬಿಸುತ್ತದೆ. 2015ರಲ್ಲಿ ಬ್ರಿಟನ್ನಿನ ಸರಕಾರ ಮತ್ತು ಗಾಂಧಿ ಮೆಮೋರಿಯಲ್ ಟ್ರಸ್ಟ್ ನಂತಹ ಸಾರ್ವಜನಿಕ ಸಂಸ್ಥೆಗಳ ಸಹಯೋಗದಲ್ಲಿ, ಆರುಕೋಟಿ ರೂಪಾಯಿ ದೇಣಿಗೆ ಸಂಗ್ರಹದಿಂದ ಜೀವಪಡೆದ ಸ್ಮಾರಕ, ಮಹಾತ್ಮ ಗಾಂಧಿಯವರದು; ದಕ್ಷಿಣ ಆಫ್ರಿಕಾದಿಂದ ಮೋಹನದಾಸರು ಭಾರತಕ್ಕೆ ಮರಳಿದ ಮಾರ್ಚ್ 14ರಂದು (2015ರ) ಅನಾವರಣಗೊಳಿಸಲಾದ ಪ್ರತಿಮೆ ಈಗಲೂ ಲಂಡನ್‌ನ ಕೇಂದ್ರ ಭಾಗದಲ್ಲಿ ಸುತ್ತಾಡುವರನ್ನು ಭಾರತೀಯ ಪ್ರತಿನಿಧಿಯಾಗಿ, ಅಹಿಂಸೆ ಆದರ್ಶಗಳ ವಾದಿ ಸಂವಾದಿಯಾಗಿ ಸ್ವಾಗತಿಸಿ ಮಾತನಾಡಿಸುತ್ತದೆ.

ಇಂದು ಲಂಡನ್‌ನಲ್ಲಿ ವಾಸಿಸುತ್ತಿರುವವರಿಗಿಂತ ಬಹಳ ಮೊದಲೇ ಲಂಡನ್‌ಗೆ ಬಂದು ಇದ್ದು ಹೋದವರಲ್ಲಿ ಗಾಂಧಿಯೂ ಒಬ್ಬರು. 1888ರಲ್ಲಿ 19 ವರ್ಷದ ಮೋಹನದಾಸ ಕರಮಚಂದ ಗಾಂಧಿ ವಕೀಲಿಕೆ ಕಲಿಯಲು ಲಂಡನ್ನಿಗೆ ಬಂದದ್ದು. ಕ್ಲೈಡ್ ಎನ್ನುವ ಹೆಸರಿನ ಹಡಗಿನಲ್ಲಿ ಲಂಡನ್‌ನ ಎಸೆಕ್ಸ್ ಪ್ರಾಂತ್ಯದ ಟಿಲ್ ಬರಿ ಬಂದರನ್ನು ತಲುಪುವಾಗ ವಿದೇಶವಾಸಕ್ಕೆ ಬೇಕಾಗುವ ಸಾಮಾನು ಸರಂಜಾಮುಗಳ ಜೊತೆ ನಾಲ್ಕು ಶಿಫಾರಸು ಪತ್ರಗಳೂ ಇದ್ದವು. ಅವುಗಳಲ್ಲಿ ಒಂದು, ಆಗಲೇ ಲಂಡನ್‌ನಲ್ಲಿ ನೆಲೆ ಕಂಡಿದ್ದ ದಾದಾಭಾಯಿ ನವರೋಜಿಯವರನ್ನು ಉದ್ದೇಶಿಸಿದ್ದು. ಎಸೆಕ್ಸ್ ಬಂದರಿನಿಂದ ತಾವು ಉಳಿದು ಓದಬೇಕಾದ ಲಂಡನ್ ತನಕದ ಪ್ರಯಾಣ ಬ್ರಿಟನ್ನಿನಲ್ಲಿ ಅವರ ಮೊದಲ ರೈಲು ಪ್ರಯಾಣವಾಯಿತು. ಆಗಲೇ ಸುಮಾರು ಇನ್ನೂರು ಭಾರತೀಯ ವಿದ್ಯಾರ್ಥಿಗಳು ಲಂಡನ್‌ನಲ್ಲಿ ಇದ್ದರು. ಮೋಹನದಾಸರ ಲಂಡನ್‌ನ ಆರಂಭದ ದಿನಗಳಲ್ಲಿ ಸಾರ್ವಜನಿಕವಾಗಿ ಕಾಣಿಸಿಕೊಳ್ಳುತ್ತಿದ್ದ ರೀತಿ ಮತ್ತು ಧರಿಸುತ್ತಿದ್ದ ಪೋಷಾಕುಗಳ ಬಗ್ಗೆ ಹಲವು ಟಿಪ್ಪಣಿಗಳು ದೊರೆಯುತ್ತವೆ. ಮುಂಬೈಯಲ್ಲಿ ಹೊಲಿಸಿಕೊಂಡು ತಂದಿದ್ದ ಬಟ್ಟೆಗಳು ಅವರ ಕೃಶ ಶರೀರದ ಮೇಲೆ ದೊಗಲೆಯಾಗಿ ಕಾಣುತ್ತಿದ್ದವಂತೆ. ನ್ಯಾಯಾಂಗ ಶಿಕ್ಷಣ ತರಬೇತಿ ನೀಡುವ ಸಂಸ್ಥೆಗಳಲ್ಲಿ ಒಂದಾದ ಇನ್ನರ್ ಟೆಂಪಲ್ ಅಲ್ಲಿ ವಿದ್ಯಾರ್ಥಿಯಾಗಿ ಸೇರಿಕೊಂಡಾಗ, ಗಿಡ್ಡ ದೇಹ ಪ್ರಕೃತಿ ಕಂದು ಚರ್ಮದ ಭಾರತೀಯನನ್ನು ಕೆಲವರು ವಿದ್ಯಾಸಂಸ್ಥೆಗೆ ಟಪ್ಪಾಲು ಮುಟ್ಟಿಸುವ ಹುಡುಗ ಎಂದು ತಪ್ಪು ತಿಳಿದ ಸಂದರ್ಭಗಳೂ ಇದ್ದವಂತೆ.

ಲಂಡನ್ ಬದುಕಿಗೆ ಹೊಂದಿಕೆಯಾಗುವಂತಹ ಆಡಂಬರದ ವಿಕ್ಟೋರಿಯಾ ಹೋಟೆಲಲ್ಲಿ ಅವರು ಮೊದಲು ರೂಮು ಹಿಡಿದರು. ಮೂರು ವರ್ಷಗಳ ಲಂಡನ್ ವಾಸದ ಮೊದಲರ್ಧದಲ್ಲಿ ಇಂಗ್ಲಿಷ್ ವ್ಯಕ್ತಿಯಾಗಿ ಪರಿವರ್ತನೆ ಆಗುವ ಪ್ರಯತ್ನ ವಿಧವಿಧವಾಗಿ ನಡೆಯಿತು. ಇಂಗ್ಲಿಷ್‌ನಲ್ಲಿ ಮಾತನಾಡುವ ಕಲೆಯ ತರಬೇತಿ ಪಡೆಯಲಾರಂಭಿಸಿದರು. ವಯೊಲಿನ್ ಹಾಗು ಪಾಶ್ಚಾತ್ಯ ನೃತ್ಯಗಳ ತರಗತಿಗಳಿಗೆ ಸೇರಿದರು. ಭಿನ್ನ ಭಾಷೆ ಸಂಸ್ಕೃತಿಯ ನಾಡಿನಿಂದ ಬ್ರಿಟನ್ನಿಗೆ ಬಂದ ಎಲ್ಲರನ್ನು ಕಾಡುತ್ತಿದ್ದ ಗುರುತು ಅಸ್ತಿತ್ವಗಳ ಸಂಕೀರ್ಣ ಸವಾಲುಗಳೇ ಮೋಹನದಾಸರನ್ನೂ ಕಾಡುತ್ತಿದ್ದವು. ಅಂದಿನ ಫೋಟೋಗಳಲ್ಲಿ ಗಾಂಧಿ ಸೂಟು ಬೂಟಿನಲ್ಲಿಯೇ ಕಾಣಿಸುತ್ತಾರೆ. ಅಂಗಿಯ ಕುತ್ತಿಗೆಗೆ ಬಟನ್ ಇಂದ ಜೋಡಿಸುವ “ಸ್ಟಾರ್ಚ್ ಕಾಲರ್” ಅನ್ನು ಗಾಂಧೀಜಿ ಬಳಸುತ್ತಿದ್ದುದು ಆಂಗ್ಲರಿಂದ ಸ್ವೀಕೃತಿ ಪಡೆಯುವ ಸಕಲ ಯತ್ನಗಳ ಒಂದು ರೂಪಕವಾಗಿತ್ತು.

ಬ್ರಿಟನ್ನಿನಲ್ಲಿ ಅಭ್ಯಾಸವಾದ ಆಂಗ್ಲ ಪೋಷಾಕು ಮುಂದೆ ಅವರ ದಕ್ಷಿಣ ಆಫ್ರಿಕಾ ವಾಸದಲ್ಲಿ ತುಸು ಮಟ್ಟಿಗೆ ಬ್ರಿಟಿಷರ ಜನಾಂಗೀಯ ನಿಂದನೆಗಳಿಂದ ಅವರನ್ನು ತಪ್ಪಿಸಿರಬಹುದು. ಲಂಡನ್‌ಗೆ ಭಾರತದಿಂದ ಬಂದಿಳಿದ ಹಲವು ಯುವಕರಂತೆ ಗಾಂಧೀಜಿಗೂ ಬಹಳ ಬೇಗ ಲಂಡನ್‌ನ ದುಬಾರಿ ಜೀವನ ವೆಚ್ಚದ ಬಿಸಿ ತಟ್ಟಿತ್ತು. ಹೊಸತಾಗಿ ಬಂದಾಗ ಅಂಟಿಸಿಕೊಂಡಿದ್ದ ಹಲವು ಅಭ್ಯಾಸಗಳನ್ನು ವೆಚ್ಚದ ಕಾರಣಕ್ಕೆ ಬಿಡಬೇಕಾಯಿತು. ತಾಯಿ ಮತ್ತು ತಾಯ್ನಾಡನ್ನು ಬಹಳ ನೆನಪಿಸುತ್ತ ತಮ್ಮ ಹತ್ತೊಂಭತ್ತನೆಯ ಹುಟ್ಟುಹಬ್ಬದ ದಿನ ಆಗಷ್ಟೇ ಬದಲಿಸಿದ್ದ ಲಂಡನ್‌ನ ರೂಮಿನಿಂದ “ನನ್ನ ಹೊಸ ರೂಮಿನಲ್ಲೂ ಹಿತ ಎನಿಸುತ್ತಿಲ್ಲ. ಯಾವುದೂ ನನಗೆ ಸಾಂತ್ವನ ನೀಡುತ್ತಿಲ್ಲ. ಎಲ್ಲವೂ ವಿಚಿತ್ರ – ಜನರು, ಅವರ ರೀತಿನೀತಿಗಳು, ಮನೆಗಳು. ಇಂಗ್ಲಿಷ್ ರಿವಾಜುಗಳ ಮಟ್ಟಿಗೆ ಪೂರ್ತಿ ಹೊಸಬ, ನಿರಂತರವಾಗಿ ನನ್ನನ್ನು ನಾನು ನೋಡಿಕೊಳ್ಳಬೇಕಾಗಿತ್ತು. ಮತ್ತೆ ಈ ಸಸ್ಯಾಹಾರ ಎನ್ನುವುದು ಇನ್ನೊಂದು ಅನಾನುಕೂಲಕರ ವಿಚಾರ. ನಾನು ತಿನ್ನಬಹುದಾದ ಆಹಾರ ಕೂಡ ರುಚಿಹೀನ ಸಪ್ಪೆ ಎನಿಸುತ್ತದೆ. ಇಂಗ್ಲೆಂಡ್ ವಾಸವನ್ನು ಅನ್ನು ತಾಳಿಕೊಳ್ಳುವುದು ಸುಲಭ ಇಲ್ಲ, ವಾಪಸು ಭಾರತಕ್ಕೆ ಹೋಗುವ ಬಗ್ಗೆ ಯೋಚಿಸುವುದೂ ಕಷ್ಟ” ಎಂದು ತಮ್ಮೊಳಗಿನ ಸಂದಿಗ್ಧತೆಯನ್ನು ಬರೆದಿದ್ದರು.

ಲಂಡನ್‌ನ ರಿಚ್ಮಂಡ್ ಪ್ರದೇಶದ ಮೊದಮೊದಲ ದಿನಗಳು ಪ್ರಮುಖವಾಗಿ ಮೂರು ಪತ್ರಿಕೆಗಳನ್ನು ಓದುತ್ತ ಕಳೆದವು. ಒಂದಕ್ಕೊಂದು ತುಸು ವಿರುದ್ಧ ಮನೋಧರ್ಮದ ಡೈಲಿ ಟೆಲಿಗ್ರಾಫ್, ಡೈಲಿ ನ್ಯೂಸ್‌ಗಳು ಮತ್ತೆ ಎಲ್ಲ ವಿಚಾರಧಾರೆಗಳ ಮಿಶ್ರಣವಾದ ಪಾಲ್ ಮಾಲ್ ಗಝೆಟ್. ಇಪ್ಪತ್ತರ ಆಸುಪಾಸಿನ ಯುವಕ ಲಂಡನ್‌ನಲ್ಲಿ ಕಳೆದ ಮೂರು ವರ್ಷಗಳು ರಾಜಕೀಯ ಮತ್ತು ಆಧ್ಯಾತ್ಮಿಕವಾಗಿ ಬೆಳೆಸಿ ಪೋಷಿಸಿದ ಕಾಲ. ಆ ಕಾಲದಲ್ಲಿ ಲಂಡನ್‌ನಲ್ಲಿ ಸಕ್ರಿಯವಾಗಿದ್ದ, ಭಾರತಕ್ಕೆ ಹೆಚ್ಚಿನ ಸ್ವಾಯತ್ತೆ ಮತ್ತು ಹಕ್ಕು ಒದಗಿಸಲು ಆಗ್ರಹಿಸುತ್ತಿದ್ದ ಕೆಲವು ಸಂಘಟನೆಗಳ ಪ್ರಭಾವದಲ್ಲಿ ಸಹಜವಾಗಿ ಬಿದ್ದರು. ಲಂಡನ್ನಿನ ನೌಕರರ ಸಂಘಟನೆ ಮತ್ತು ದೇಶದ ಆರ್ಥಿಕ ಯೋಜನೆಗಳನ್ನು ಹತ್ತಿರದಿಂದ ಗಮನಿಸುವುದರ ಜೊತೆಗೆ ಮೋಹನದಾಸರು ಮುಖ್ಯವಾಗಿ ಮೂರು ಗುಂಪುಗಳ ಜೊತೆ ಗುರುತಿಸಿಕೊಂಡಿದ್ದರು. ಮೊದಲನೆಯದು, ಲಂಡನ್ ಇಂಡಿಯನ್ ಸೊಸೈಟಿ, ಭಾರತೀಯ ವಿದ್ಯಾರ್ಥಿಗಳೇ ಕೂಡಿದ್ದ ಸಂಸ್ಥೆಯಲ್ಲಿ ರಾಜಕೀಯ ಅಹವಾಲುಗಳನ್ನು ಹೇಳಿಕೊಳ್ಳಬಹುದಿತ್ತು. ಎರಡನೆಯದು, ನ್ಯಾಷನಲ್ ಇಂಡಿಯನ್ ಸೊಸೈಟಿ, ಭಾರತೀಯ ಹೆಣ್ಣು ಮಕ್ಕಳ ಶಿಕ್ಷಣದ ಕುರಿತು ಯೋಚಿಸುತ್ತಿದ್ದ ಸಂಸ್ಥೆ. ಮೂರನೆಯದು ಥಿಯೊಸೊಫಿಕಲ್ ಸೊಸೈಟಿ, ಹಿಂದೂ ಹಾಗು ಬೌದ್ಧ ವಿಚಾರಧಾರೆಯ ಹಲವರು ಸೇರಿ ಹೊಸ ಸಿದ್ಧಾಂತವನ್ನು ಹುಟ್ಟುಹಾಕಿದ್ದ ಸಂಸ್ಥೆ.

ಮುಂಬೈಯಲ್ಲಿ ಹೊಲಿಸಿಕೊಂಡು ತಂದಿದ್ದ ಬಟ್ಟೆಗಳು ಅವರ ಕೃಶ ಶರೀರದ ಮೇಲೆ ದೊಗಲೆಯಾಗಿ ಕಾಣುತ್ತಿದ್ದವಂತೆ. ನ್ಯಾಯಾಂಗ ಶಿಕ್ಷಣ ತರಬೇತಿ ನೀಡುವ ಸಂಸ್ಥೆಗಳಲ್ಲಿ ಒಂದಾದ ಇನ್ನರ್ ಟೆಂಪಲ್ ಅಲ್ಲಿ ವಿದ್ಯಾರ್ಥಿಯಾಗಿ ಸೇರಿಕೊಂಡಾಗ, ಗಿಡ್ಡ ದೇಹ ಪ್ರಕೃತಿ ಕಂದು ಚರ್ಮದ ಭಾರತೀಯನನ್ನು ಕೆಲವರು ವಿದ್ಯಾಸಂಸ್ಥೆಗೆ ಟಪ್ಪಾಲು ಮುಟ್ಟಿಸುವ ಹುಡುಗ ಎಂದು ತಪ್ಪು ತಿಳಿದ ಸಂದರ್ಭಗಳೂ ಇದ್ದವಂತೆ.

ಮೋಹನದಾಸರು ದಾದಾಭಾಯಿ ನವರೋಜಿಯವರನ್ನು ಕೊನೆಗೂ ಭೇಟಿಯಾದದ್ದು ಲಂಡನ್ ಇಂಡಿಯನ್ ಸೊಸೈಟಿಯಲ್ಲಿ. ೧೮೬೫ರಲ್ಲಿ ಶುರು ಆದ ಸಂಸ್ಥೆಯ ಸ್ಥಾಪಕರಲ್ಲಿ ನವರೋಜಿಯವರೂ ಒಬ್ಬರು. ಇಂತಹ ಸಂಘಟನೆಗಳು ಹಾಗು ಸದಸ್ಯರ ಒಡನಾಟದಲ್ಲಿ ಗಾಂಧೀಜಿಯವರ ಅವರ ಇಂಗ್ಲಿಷ್ ಬಹಳ ಸುಧಾರಿಸಿತು. ವಿಕ್ಟೋರಿಯನ್ ನಾಣ್ನುಡಿಗಳು ಅವರ ಸಂಭಾಷಣೆಯಲ್ಲಿ ಸೇರಿಕೊಳ್ಳಲಾರಂಭಿಸಿದವು. ಸಮಕಾಲೀನ ಕ್ರಿಮಿನಲ್ ಕೇಸುಗಳನ್ನು ಪತ್ರಿಕೆಗಳಲ್ಲಿ ಸೂಕ್ಷ್ಮವಾಗಿ ಗಮನಿಸುತ್ತಿದ್ದರು, ಪೇಪರ್ ಕಟಿಂಗ್‌ಗಳನ್ನು ಇಟ್ಟುಕೊಳ್ಳುತ್ತಿದ್ದರು. ಲಂಡನ್‌ನ ಬಡವರು ವಾಸಿಸುತ್ತಿದ್ದ ಪ್ರದೇಶದಲ್ಲಿ ನಡೆದ ಸರಣಿ ಕೊಲೆಗಳ ತನಿಖಾ ವರದಿ – “ವೈಟ್ ಚಾಪೆಲ್ ಮರ್ಡೆರ್ಸ್ ಬೈ ಜಾಕ್ ದಿ ರಿಪ್ಪರ್” ನ ದಾಖಲೆಗಳು ಗಾಂಧೀಜಿಯೊಡನೆ ಭಾರತಕ್ಕೂ ಮರಳಿದ್ದವು. 1888-91ರ ನಡುವೆ ನಡೆದ ಆದರೆ ಎಂದೂ ಬಗೆಹರಿಯದ ಲಂಡನ್‌ನ ಹನ್ನೊಂದು ಮಹಿಳೆಯರ ಕೊಲೆಗಳ ಸರಣಿ, ನಿರ್ಲಕ್ಷಿತ ಅಪರಾಧ ಪ್ರದೇಶವಾದ ವೈಟ್ ಚಾಪೆಲ್ ಮತ್ತು ಅಲ್ಲಿನ ಜನರ ದಾರಿದ್ಯ್ರದ ಬಗೆಗೆ ಗಮನ ಸೆಳೆದಿತ್ತು.

ಲಂಡನ್ ದಿನಗಳಲ್ಲಿ ರಾಜಕೀಯ ಹಾಗು ಆಧ್ಯಾತ್ಮಿಕ ಚಿಂತನೆಗಳು ಬಲವಾಗುವುದರ ಜೊತೆಗೆ ಸಸ್ಯಾಹಾರ ಪದ್ಧತಿಯ ಬಗೆಗಿನ ಯೋಚನೆಗಳೂ ಬಲವಾದವು. ಗಾಂಧೀಜಿಯವರ ಆಂಗ್ಲ ಪೋಷಾಕುಗಳ ಅಧ್ಯಾಯದಂತೆಯೇ ಸಸ್ಯಾಹಾರ ಪದ್ಧತಿಯನ್ನು ಪಾಲಿಸುವ ಸಂಕಷ್ಟಗಳ ಬಗೆಗೂ ವಿವರಗಳು ಲಭ್ಯ ಇವೆ. ಭಾರತದಿಂದ ಹೊರಡುವ ಮೊದಲು ಮಾಂಸಾಹಾರ ಮಾಡುವುದಿಲ್ಲ, ವೈನ್ ಕುಡಿಯುವುದಿಲ್ಲ ಎಂದು ತಾಯಿಗೆ ಮಾತು ಕೊಟ್ಟು ಹೊರಟವರು ಅವರು. 20 ಬ್ಯಾರನ್ ಕೋರ್ಟ್ ರಸ್ತೆಯಲ್ಲಿ ಇನ್ನರ್ ಟೆಂಪಲ್‌ಗೆ ಭರ್ತಿ ಆಗುವಾಗ ಉಳಿದಿದ್ದ ಮನೆಯ ಮಾಲಕಿ ವಾರಕ್ಕೆ ಮೂವತ್ತು ಶಿಲ್ಲಿಂಗ್ (ಒಂದೂವರೆ ಪೌಂಡ್) ಬಾಡಿಗೆ ಪಡೆಯುತ್ತಿದ್ದಳು. ಆದರೆ ಸಸ್ಯಾಹಾರ ಒದಗಿಸುವುದು ಆಕೆಗೆ ಕಷ್ಟ ಆಗುತ್ತಿತ್ತು. ಊಟ ಕೆಟ್ಟದಾಗಿರುವುದು, ಹಸಿದುಕೊಂಡೇ ದಿನಕಳೆಯುತ್ತಿದ್ದುದನ್ನು ಗಾಂಧೀಜಿ ಬೇರೆ ಬೇರೆ ಸಂದರ್ಭದಲ್ಲಿ ನೆನಪಿಸಿದ್ದಿದೆ. ಬೇಯಿಸಿದ ಆಲೂಗಡ್ಡೆ, ಕ್ಯಾಬೇಜ್, ಹಸಿ ಟೊಮೇಟೊ, ಲೆಟ್ಟಿಸ್ ಎಲೆ, ಕ್ಯಾರಟ್‌ಗಳು ಅವರ ಊಟದ ಭಾಗವಾದವು. ಬಹುತೇಕ ಆಂಗ್ಲರ ಸಹಜ ಆಹಾರವಾಗಿದ್ದ ಮಾಂಸಾಹಾರಿ ಪದ್ಧತಿಯೇ ಸಾಮಾನ್ಯವಾಗಿದ್ದ ಕಾರಣ ತಾನು ಕೊಟ್ಟ ಮಾತನ್ನು ಪಾಲಿಸುವುದು ಸುಲಭ ಆಗಿರಲಿಲ್ಲ. ಸಸ್ಯಾಹಾರಿ ಸಮಾಜದ ಸಂಪರ್ಕಕ್ಕೆ ಬಂದ ಮೇಲೆ ನಗರದಲ್ಲಿರುವ ಸಸ್ಯಾಹಾರಿ ಹೋಟೆಲುಗಳು ಇರುವುದು ತಿಳಿಯಿತು. ಸಸ್ಯಹಾರವನ್ನು ಆಂದೋಲನ ಎನ್ನುವಂತೆ ಬರೆದು, ಪ್ರಚಾರ ಮಾಡಿದರು.

ಲಂಡನ್‌ಗೆ ಬಂದು ಮೂರು ವರ್ಷಗಳ ನಂತರ ಗಾಂಧೀಜಿ ನ್ಯಾಯಾಂಗ ಪದವೀಧರರಾಗಿ ಭಾರತಕ್ಕೆ ಮರಳಿದರು. ನಂತರದ ನಾಲ್ಕು ಯಾನಗಳನ್ನು ಸೇರಿಸಿ ಒಟ್ಟು ಐದು ಭೇಟಿಗಳಲ್ಲಿ, ಶಿಕ್ಷಣ ಪಡೆದ ಮೊದಲ ಲಂಡನ್ ವಾಸವೇ ಅವರನ್ನು ರೂಪಿಸುವಲ್ಲಿ ಅತ್ಯಂತ ಮಹತ್ವದ್ದು ಎಂದು ಕೆಲವು ಆಂಗ್ಲ ಇತಿಹಾಸಕಾರರು ವಾದಿಸುತ್ತಾರೆ. ಗಾಂಧೀಜಿ “ರಾಷ್ಟ್ರೀಯ ನಾಯಕ” ಮತ್ತು “ಮಹಾತ್ಮ” ಎನಿಸುವುದರಲ್ಲಿ ತಮ್ಮ ಪಾಲನ್ನು ಕೇಳುತ್ತಾರೆ. ಮೊದಲ ಬಾರಿ ಗಾಂಧೀಜಿ ಲಂಡನ್‌ಗೆ ಮರಳಿದ್ದು 1906ರಲ್ಲಿ, ದಕ್ಷಿಣ ಆಫ್ರಿಕಾದಲ್ಲಿ ಆಗಲೇ ದಕ್ಷಿಣ ಏಷ್ಯಾದವರ ನಾಯಕನಾಗಿ ಬೆಳೆದ ನಂತರ. ಲಾರ್ಡ್ ಎಲ್ಜಿನ್‌ರನ್ನು ಭೇಟಿಯಾಗಿ ಭಾರತೀಯರನ್ನು ಸರಿಯಾಗಿ ನೋಡಿಕೊಳ್ಳುವಂತೆ ಒತ್ತಾಯಿಸಿದರು. ಮೇಲ್ನೋಟಕ್ಕೆ ತನ್ನ ಭೇಟಿ ಫಲದಾಯಕ ಎಂದು ಅನಿಸಿದ್ದರೂ ಭಾರತಕ್ಕೆ ಮರಳಿದ ಮೇಲೆ ಬ್ರಿಟಿಷರ ವರ್ತನೆ ಏನೂ ಬದಲಾಗದಿರುವುದು ನೋಡಿ ಅವರಿಗೆ ತೀವ್ರ ನಿರಾಶೆಯಾಗಿತ್ತು.

1909ರಲ್ಲಿ ಇನ್ನೊಮ್ಮೆ ಲಂಡನ್‌ಗೆ ಬಂದರು, ಈ ಸಲ ಇಡೀ ಬ್ರಿಟಿಷ್ ವಸಾಹತಿನಲ್ಲಿ ಭಾರತೀಯ ವಿದ್ಯಾವಂತರನ್ನು ಜೋಡಿಸುವ ಉದ್ದೇಶ ಹೊತ್ತು. ಇಂಗ್ಲೆಂಡ್‌ನಲ್ಲಿರುವ ಸ್ನೇಹಿತರನ್ನು ಭೇಟಿಯಾದರು. ಕೇಂಬ್ರಿಜ್ ವಿಶ್ವವಿದ್ಯಾಲಯದ ಭಾರತೀಯ ವಿದ್ಯಾರ್ಥಿಗಳ ಸಭೆಯಲ್ಲಿ ಮಾತನಾಡಿದರು. ಈ ಭೇಟಿಯ ಮಹತ್ವಪೂರ್ಣ ದಾಖಲೆ ಎಂದರೆ ಲಂಡನ್ ಇಂದ ದಕ್ಷಿಣ ಆಫ್ರಿಕಾಕ್ಕೆ ಹಡಗು ಪ್ರಯಾಣದಲ್ಲಿ ಸಾಗುವಾಗ “ಹಿಂದ್ ಸ್ವರಾಜ್” ಅನ್ನು ಇಂಗ್ಲಿಷ್ ಅಲ್ಲಿ ಬರೆಯಲು ಆರಂಭಿಸಿದ್ದು. ಆ ಪುಸ್ತಕವೇ ಇಂದು ನಾವು ತಿಳಿದ ಗಾಂಧಿಯ ಆರಂಭಿಕ ಕಾಲದಲ್ಲಿ ಸಮ್ಮನ್ನು ಸುತ್ತಾಡಿಸುತ್ತದೆ. ಆಂಗ್ಲ ಸಂಸ್ಕೃತಿಯ ಮೋಹಕ್ಕೆ ಮೊದಲು ಒಳಗಾಗಿದ್ದರೂ ವಸಾಹತಿನ ಯಂತ್ರದ ಬಗೆಗಿನ ನಿರಾಸೆಯನ್ನು ಪುಸ್ತಕದಲ್ಲಿ ತೋಡಿಕೊಂಡಿದ್ದಾರೆ. ಅಹಿಂಸಾ ವಿರೋಧವನ್ನು, ಭಾರತದ ರಾಜಕೀಯದ ಬಗೆಗಿನ ತಮ್ಮ ಒಳನೋಟವನ್ನು ಹಂಚಿಕೊಂಡಿದ್ದಾರೆ. ಬ್ರಿಟಿಷ್ ಪತ್ರಿಕೆಗಳು ಇಡೀ ಮತದಾರ ಸಮುದಾಯದ ಮನಸ್ಸನ್ನು ಹೇಗೆ ಕಲುಷಿತಗೊಳಿಸಿತ್ತು, ಬ್ರಿಟಿಷ್ ಸಂಸತ್ತು ಭಾರತವನ್ನು ಸೂರೆಗೈದು ಉಚಿತವಾಗಿ ಪಡೆಯುತ್ತಿದ್ದ ಸೇವೆ ಸೌಕರ್ಯ ಆಸ್ತಿಗಳನ್ನು ಅನುಭವಿಸುವ ಆಲಸಿ ವ್ಯವಸ್ಥೆಯಾಗಿತ್ತು ಎಂದು ಬರೆದಿದ್ದಾರೆ. 1914ರಲ್ಲಿ, ಮೊದಲ ಮಹಾಯುದ್ಧ ಆರಂಭವಾಗಿ ಎರಡು ದಿನಗಳಲ್ಲಿ ಗಾಂಧಿ ಮತ್ತೆ ಲಂಡನ್‌ನಲ್ಲಿದ್ದರು. ಆ ಸಮಯಕ್ಕೆ ಅವರು ವಕೀಲರಾಗಿ ಚಳವಳಿಗಾರರಾಗಿ ಗುರುತಿಸಿಕೊಂಡಾಗಿತ್ತು. ಆ ಭೇಟಿಯಲ್ಲಿ ಭಾರತೀಯ ಸ್ವಯಂ ಸೇವಕರ ತುರ್ತು ಸೇವಾ ಪಡೆಯನ್ನು ಬ್ರಿಟನ್ನಿನ ದಕ್ಷಿಣ ತೀರದಲ್ಲಿ ಸ್ಥಾಪಿಸಲು ಸಹಾಯ ಮಾಡಿದರು. ಸೇವಾಪಡೆಯ ಆರೋಗ್ಯ ಸೇವಕರು ಬ್ರಿಟಿಷರ ಸೈನ್ಯದಲ್ಲಿದ್ದ ಹತ್ತು ಲಕ್ಷ ಭಾರತೀಯ ಸೈನಿಕರಲ್ಲಿ ಗಾಯಾಳುಗಳಾದವರ ಶುಶ್ರೂಷೆ ಮಾಡುತ್ತಿದ್ದರು.

ಕೊನೆಯ ಬಾರಿ, 1931ರಲ್ಲಿ ಲಂಡನ್‌ಗೆ ಭೇಟಿ ನೀಡಿದರು. ಆ ಕಾಲಕ್ಕೆ ಅಸಹಕಾರ ಚಳವಳಿ, ಅಹಿಂಸೆಯ ಮೂಲಕ ಪ್ರತಿರೋಧ ಒಡ್ಡುವ ಚಳವಳಿಯ ನೇತಾರರಾಗಿ ರಾಷ್ಟ್ರೀಯ ನಾಯಕರಾಗಿದ್ದರು. ಆ ಭೇಟಿ, ಭಾರತದ ಬಗೆಗಿನ ವಿಷಯಗಳನ್ನು ಚರ್ಚಿಸುವ ಎರಡನೆಯ ದುಂಡು ಮೇಜಿನ ಸಭೆಯ ಕಾರಣಕ್ಕೆ ಆಗಿತ್ತು. ಅದಕ್ಕಿಂತ ಮೊದಲಿನ ವರ್ಷ ಉಪ್ಪಿನ ಸತ್ಯಾಗ್ರಹದಲ್ಲಿ ಬಂಧಿತರಾಗಿ ಸೆರೆಮನೆಯಲ್ಲಿದ್ದುದರಿಂದ ಸಭೆಯಲ್ಲಿ ಗಾಂಧಿ ಭಾಗವಹಿಸಿರಲಿಲ್ಲ. ಬ್ರಿಟನ್ನಿನ ಪ್ರತಿ ಭೇಟಿ ವಾಸದಲ್ಲೂ ಗಾಂಧೀಜಿ ಬದಲಾಗಿದ್ದರು ಬೆಳೆದಿದ್ದರು. ಗಾಂಧೀಜಿಯ ಚಿಂತನೆಗಳನ್ನು ತಿಳಿದ ಬರಹಗಳನ್ನು ಓದಿದ ಬ್ರಿಟನ್ನಿನ ದುಡಿಯುವ ವರ್ಗ ಅವರು ಹೋದಲ್ಲೆಲ್ಲ ಮುತ್ತಿಗೆ ಹಾಕುತ್ತಿತ್ತು, ತಮ್ಮ ನಾಯಕನೆಂದೇ ತಿಳಿಯುತ್ತಿತ್ತು. ಕೆಲವು ಸಂಸತ್ ಸದಸ್ಯರೂ ಗಾಂಧೀಜಿಯ ಚಿಂತನೆಗಳನ್ನು ಆದರಿಸುತ್ತಿದ್ದರು. ಆ ಕಾಲಕ್ಕೆ ಪ್ರಧಾನಿ ಅಲ್ಲದಿದ್ದರೂ ಪ್ರಭಾವಿ ರಾಜಕೀಯ ಪ್ರತಿನಿಧಿಯಾಗಿದ್ದ ವಿನ್ಸ್ಟನ್ ಚರ್ಚಿಲ್ “ಅರೆನಗ್ನ ಫಕೀರ” ಎಂದು ಖಾದಿ ಧಾರಿ ಗಾಂಧೀಜಿಯನ್ನು ಅಪಹಾಸ್ಯ ಮಾಡಿದ್ದಿದೆ. ಬ್ರಿಟನ್ನಿನ ಮಹಾರಾಜರನ್ನು ಬಕಿಂಗ್ ಹ್ಯಾಮ್ ಅರಮನೆಯಲ್ಲಿ ಸಂದರ್ಶಿಸುವಾಗಲೂ ಎಂದಿನ ಮಿತವಾದ ಖಾದಿ ತೊಟ್ಟು ಹೋದದ್ದರ ಸಮರ್ಪಕತೆ ಔಚಿತ್ಯವನ್ನು ಆಂಗ್ಲ ಪತ್ರಿಕಾ ವರದಿಗಾರರು ಪ್ರಶ್ನಿಸಿದಾಗ, “ಮಹಾರಾಜರು ಹೇಗೂ ಇಬ್ಬರಿಗಾಗುವಷ್ಟು ಬಟ್ಟೆ ತೊಟ್ಟಿದ್ದರಲ್ಲ” ಎಂದೂ ತಮಾಷೆಯಲ್ಲಿ ಉತ್ತರಿಸಿದರು. ಎರಡನೆಯ ದುಂಡುಮೇಜಿನ ಸಭೆಯಲ್ಲಿ ಮಾಡಿದ ಆಗ್ರಹಗಳು, ಆ ಸಂದರ್ಭದ ಭೇಟಿಗಳು ಸ್ವಾತಂತ್ಯ್ರವನ್ನೇನೂ ತಂದುಕೊಡಲಿಲ್ಲ. ಗಾಂಧೀಜಿ ಸಭೆ ಮುಗಿಸಿ ಭಾರತಕ್ಕೆ ಮರಳಿದರು, ಚಳವಳಿ ಮುಂದುವರಿಸಿದರು.

ಗಾಂಧೀಜಿಯ ಕೊನೆಯ ಬ್ರಿಟನ್ ಭೇಟಿಯ ತೊಂಬತ್ತೊಂದು ವರ್ಷಗಳ ನಂತರ ಅವಲೋಕಿಸಿದರೆ ಬ್ರಿಟನ್ನಿನ ಬೇರೆ ಬೇರೆ ಊರುಗಳಲ್ಲಿ ಸ್ಥಳೀಯ ಭಾರತೀಯರ ಪ್ರಯತ್ನದಿಂದ ಗಾಂಧೀಜಿಯ ಸ್ಮಾರಕಗಳು ಕಾಣಿಸುತ್ತವೆ; ಗಾಂಧಿ ಮತ್ತೆ ಮತ್ತೆ ಭೇಟಿ ನೀಡಿದ, ಮೊದಲ ಭೇಟಿಯಲ್ಲಿ ಆಂಗ್ಲ ಪೋಷಾಕನ್ನು ಧರಿಸಿ, ಕೊನೆಯ ಭೇಟಿಯಲ್ಲಿ ತುಂಡು ಖಾದಿಯಲ್ಲಿ ಬಂದಿಳಿದ ಲಂಡನ್‌ನಲ್ಲಿ ಎರಡು ಗಾಂಧಿ ಪ್ರತಿಮೆಗಳಿವೆ. 1968ರಲ್ಲಿ ಪ್ರಧಾನ ಮಂತ್ರಿ ಹೆರಾಲ್ಡ್ ವಿಲ್ಸನ್ ಅನಾವರಣಗೊಳಿಸಿದ ಮೊದಲ ಸ್ಮಾರಕ ಬಹುತೇಕರಿಗೆ ಪರಿಚಿತವಲ್ಲ. ಆ ಸಾಮಾನ್ಯ ಪ್ರತಿಮೆ, ಇತರ ಅಹಿಂಸಾ ಚಳವಳಿಗಾರರ ಪ್ರತಿಮೆಗಳ ನೆರೆಹೊರೆಯಲ್ಲಿ ಟವಿಸ್ಟಾಕ್ ಗಾರ್ಡನ್‌ನಲ್ಲಿ ನಿಂತಿದೆ. ಎರಡನೆಯದು 2015ರಲ್ಲಿ ಅಂದಿನ ಬ್ರಿಟಿಷ್ ಪ್ರಧಾನಿ ಡೇವಿಡ್ ಕ್ಯಾಮರೂನರು ಹಾಗು ಭಾರತದ ಪ್ರಧಾನಿ ನರೇಂದ್ರ ಮೋದಿಯವರು ಜೊತೆಯಾಗಿ ಪಾರ್ಲಿಮೆಂಟ್ ಚೌಕದಲ್ಲಿ ಉದ್ಘಾಟಿಸಿದ್ದು.

ಕೆಲವು ವರ್ಷಗಳ ಹಿಂದೆ ಲಂಡನ್‌ನಲ್ಲಿ ಚೂರಿ ಇರಿತದಿಂದ ಸಾವಿಗೀಡಾದವರ ನೆನಪಿಗೆ ಬ್ರಿಟನ್ನಿನ ಪ್ರಧಾನಿಗಳ ಮನೆಯೆದುರಿನ ರಸ್ತೆಯಲ್ಲಿ ಸಾರ್ವಜನಿಕ ಮೆರವಣಿಗೆ ನಡೆಯುತ್ತಿತ್ತು. ಸಭೆಯ ಉದ್ದೇಶಗಳಲ್ಲಿ ಚಾಕು ಹಿಡಿದು ಅಪರಾಧ ಮಾಡುವವರ ವಿರುದ್ಧದ ಪ್ರತಿಭಟನೆಯೂ ಸೇರಿತ್ತು. ಈಗಿನ ಲಂಡನ್ ಸಂಸ್ಕೃತಿಯ ಭಾಗವೇ ಆಗಿಹೋಗಿರುವಂತೆ ತೋರುವ ಚೂರಿ ಇರಿತದ ಪ್ರಕರಣಗಳು, ಆಗಾಗ ಮುನ್ನೆಲೆಗೆ ಬರುವುದು, ಅಪರಾಧಿಗಳು ಎಷ್ಟು ದಿನವಾದರೂ ಸಿಗದೇ ಇರುವಾಗ ಕೆಲವು ಸಂಘಟನೆಗಳು ಆಯಕಟ್ಟಿನ ಜಾಗದಲ್ಲಿ ಪ್ರತಿಭಟನೆ ಮಾಡಿ ಸರಕಾರದ ಸಮಾಜದ ಗಮನ ಸೆಳೆಯುವುದು ನಡೆಯುತ್ತದೆ. ಅಂದಿನ ಶಾಂತಿಯುತ ಪ್ರತಿಭಟನಾ ಮೆರವಣಿಗೆಯಲ್ಲಿ ಕೆಲವರ ಕೈಯಲ್ಲಿದ್ದ ಬಾವುಟ, ಬ್ಯಾನರ್‌ಗಳ ಮೂಲೆಯಲ್ಲಿ ಒಬ್ಬ ವ್ಯಕ್ತಿಯ ಫೋಟೋ ಅಚ್ಚಾಗಿತ್ತು. ಆ ಸಮಯಕ್ಕೆ ಲಂಡನ್ ವಾಸಿಯೂ ಅಲ್ಲದ, ಬ್ರಿಟಿಷ್ ಪ್ರಜೆಯೂ ಅಲ್ಲದ, ಇರಿತದ ಪ್ರಕರಣದಲ್ಲಿ ಮಡಿದವರ ಅಥವಾ ಅಪರಾಧ ಮಾಡಿದವರ ಜೊತೆ ಯಾವುದೇ ನೇರ ಸಂಬಂಧ ಇಲ್ಲದ ವ್ಯಕ್ತಿಯ ಭಾವಚಿತ್ರ ಅಂದಿನ ಮೆರವಣಿಗೆಯಲ್ಲಿ ತಾನೂ ಮೌನವಾಗಿ ಹೆಜ್ಜೆ ಹಾಕುತ್ತಿತ್ತು. ಶಾಂತಿಯುತ ಅಂತಃಶಕ್ತಿಯಾಗಿ ಭಾಗವಹಿಸುತ್ತಿತ್ತು. ಅದು ಶಾಂತಿ ಮತ್ತು ಅಹಿಂಸೆಯ ಶಾಶ್ವತ ಪ್ರತೀಕವಾದ ಗಾಂಧೀಜಿಯ ಭಾವಚಿತ್ರ. ಸರಿಯಾದ ಕಾರಣಗಳಿಗೆ ಅಲ್ಲದಿದ್ದರೆ ತಪ್ಪು ಮಾಹಿತಿಯಿಂದ ಗಾಂಧೀಜಿಯನ್ನು ವಿಮರ್ಶಿಸುವ ಟೀಕಿಸುವ ಸಮುದಾಯಗಳು ಸಂದರ್ಭಗಳು ಮೋಹನದಾಸನಿಂದ ಮಹಾತ್ಮನಾಗುವ ತನಕದ ಅವಧಿಯಲ್ಲಿ, ಈಗ, ಮತ್ತೆ ಮುಂದೆಯೂ ಎಂದೆಂದೂ ಇರುತ್ತವಾದರೂ, ಊರು ದೇಶ ಗಡಿ ಜನಾಂಗ ಎಲ್ಲ ಬಗೆಯ ವಿಂಗಡಣೆಗಳನ್ನು ಮಿತಿಗಳನ್ನು ದಾಟಿ, ಶಾಂತಿ ಮತ್ತು ಅಹಿಂಸೆಯ ಜಾಗತಿಕ ಸಂಕೇತವಾಗಿ ಗಾಂಧೀಜಿ ಉಳಿಯುವುದು ಮಾತ್ರ ಎಲ್ಲ ವಿಮರ್ಶೆ ಪ್ರಶ್ನೆಗಳನ್ನು ಮೀರಿದ ವಾಸ್ತವ.

ಗಾಂಧೀಜಿ ಕೊಲೆಯಾದ ಆರು ವರ್ಷಗಳ ನಂತರ, 1931ರಲ್ಲಿ ಉಳಿದಿದ್ದ ಲಂಡನ್ ವಾಸ್ತವ್ಯದಲ್ಲಿ ನೀಲಿ ಫಲಕವನ್ನು ನೆಡಲಾಗಿತ್ತು. ಇನ್ನೊಂದು ನೆನಪಿನ ನೀಲಿ ಫಲಕವನ್ನು, ವಕೀಲಿ ಓದುತ್ತಿದ್ದಾಗ ಎಳೆಯ ಮೋಹನದಾಸ ವಾಸಿಸಿದ ಬ್ಯಾರನ್ ಕೋರ್ಟ್ ರಸ್ತೆಯ 20ನೆಯ ನಂಬರದ ಮನೆಯ ಗೋಡೆಯ ಮೇಲೆ 1983ರಲ್ಲಿ ನೆಡಲಾಯಿತು. ನೀಲಿ ಫಲಕದ ಮೇಲೆ, ಸಂಬಂಧಿತ ವ್ಯಕ್ತಿ ಯಾವ ವಿಷಯಕ್ಕೆ ಗುರುತಿಸಲ್ಪಟ್ಟವರು ಅಥವಾ ಹೆಸರಾದವರು ಎಂದು ಬರೆಯುವುದು ವಾಡಿಕೆ, ಕವಿ, ಹೋರಾಟಗಾರ, ಚಿಂತಕ, ವಿದ್ವಾಂಸ, ದಾರ್ಶನಿಕ, ರಾಜಕಾರಣಿ ಇತ್ಯಾದಿ. ಆದರೆ ಗಾಂಧೀಜಿಯ ವ್ಯಕ್ತಿತ್ವವನ್ನು ಉರುಟು ನೀಲಿ ಫಲಕದ ಸಣ್ಣ ಮಿತಿಯಲ್ಲಿ ಹಿಡಿದಿಡುವ ಶಬ್ದ ಜೋಡಣೆಗಳು ಸಿಗದ, ಇರದ ಕಾರಣ, “ಮಹಾತ್ಮಾ ಗಾಂಧಿ ನ್ಯಾಯಾಂಗದ ವಿದ್ಯಾರ್ಥಿಯಾಗಿ ಇಲ್ಲಿದ್ದರು” ಎಂದಷ್ಟೇ ಬರೆಯಲಾಗಿದೆ ಎಂದು ನೀಲಿ ಫಲಕಗಳ ಉಸ್ತುವಾರಿ ಸಂಸ್ಥೆ ಹೇಳಿಕೊಳ್ಳುತ್ತದೆ.