ಅಕ್ಷರಶಃ ದೀಪವಾರಿದ ಮೇಲಿ ನಿಂಕ ದೀಪದ ಮಲ್ಲಿಯಾದಳು ಶಕುಂತಲೆ. ಅಷ್ಟು ದುರ್ಬಲವೇ ನಮ್ಮ ಪ್ರೇಮ? ಯಾವುದೋ ವಸ್ತುವಿನ ಅವಶ್ಯಕತೆ ಅನಿವಾರ್ಯ ಆಗುವಷ್ಚು? ದಿಕ್ಕುತಪ್ಪಿದಳು, ಏಕಾಂಗಿಯಾದಳು.ಶಕುಂತಲೆಗೆ ದುಷ್ಯಂತನ ಪರಿಚಯವಿತ್ತು.ಸಂಧಿಸಿದ ಕೂಡಲೇ ತನ್ನ ಗುರುತು ಹಿಡಿಯುವನೆಂಬ ಅಪಾರ ಆತ್ಮವಿಶ್ವಾಸವೂ ಇತ್ತು. ಅದಕ್ಕಾಗಿಯೇ, ಅವಳಿಗೆ ದುಷ್ಯಂತ ಗುರುತಿಗಾಗಿಯೇ ಕೊಟ್ಟಿದ್ದ ಉಂಗುರವನ್ನು ಅವಳು ಅಷ್ಟೊಂದು ಮಹತ್ವದ್ದಾಗಿ ಪರಿಗಣಿಸಲೇ ಇಲ್ಲ. ಆ ಅಜಾಗರೂಕತೆಯಿಂದಲೇ ಅವಳು ಉಂಗುರವನ್ನು ಕಳೆದುಕೊಂಡಳು.
ರವೀಂದ್ರ ನಾಯಕ್ ಸಣ್ಣಕ್ಕಿಬೆಟ್ಟು ಅಂಕಣ “ಇನ್ನೊಂದು ಬದಿ”ಯ ಆರನೆಯ ಬರಹ
ನನಗೆ ಪುರಾಣದ ಪಾತ್ರಗಳು ಮೊದಲು ಪರಿಚಯವಾದದ್ದೇ ರಾಜಕುಮಾರ್ ಸಿನಿಮಾಗಳ ಮೂಲಕ. ರಾಜ್ ಸಿನಿಮಾಗಳ ಹುಚ್ಚು ಅಭಿಮಾನಿಯಾಗಿದ್ದ ನಾನು ಅವರ ಪೌರಾಣಿಕ ಕತೆಯ ಸಿನಿಮಾಗಳನ್ನು ಬಹುತೇಕ ಎರಡೆರಡು ಸಲ ನೋಡಿದ್ದೇನೆ. ಅದರಲ್ಲೂ ಬಬ್ರುವಾಹನ, ಭಕ್ತ ಪ್ರಹ್ಲಾದ, ಮಯೂರ,ಸತ್ಯಹರಿಶ್ಚಂದ್ರದಂತಹ ಸಿನಿಮಾಗಳು ನನ್ನ ಮನಸ್ಸಿನಲ್ಲಿ ಉಂಟುಮಾಡಿದ ಬೆರಗು, ರೋಮಾಂಚನ ಇನ್ನೂ ಮಾಸದೆ ಹಸಿರುಹಸಿರಾಗಿವೆ. ಈಗಲೂ ಟಿ.ವಿಯಲ್ಲಿ ಬಂದರೆ ಅದೇ ಬೆರಗಿನಿಂದ ನೋಡುತ್ತೇನೆ.
ಬಬ್ರುವಾಹನ ಚಿತ್ರದ, “ಯಾರು ತಿಳಿಯರು ನಿನ್ನ ಭುಜಬಲದ ಪರಾಕ್ರಮ…”, ಮಯೂರದ “ಈ ಮಣಿಕಿರೀಟ ನಿನಗೆ ಬೇಡವೆ? ಈ ರತ್ನ ಸಿಂಹಾಸನ ನಿನಗೆ ಬೇಡವೇ? ಈ ಸಾಮ್ರಾಜ್ಯ ನಿನಗೆ ಬೇಡವೇ? ಎಂದು ಅಕ್ಕರೆಯಿಂದ ಕೇಳುತ್ತಿದ್ದವಳು ನೀನೇ ಅಮ್ಮಾ?….. ಹೊಂಚು ಹಾಕಿ ಸಂಚು ಮಾಡಿ ವಂಚನೆಯಿಂದ ನಮ್ಮ ರಾಜ್ಯವನ್ನು ಕಬಳಿಸಿ ಮೆರೆಯುತ್ತಿರುವ ಶಿವಸ್ಕಂಧವರ್ಮಾ!!!…” ಅಂತಹ ಸಂಭಾಷಣೆಗಳಲ್ಲಿ ನನಗೆ ರಾಜ್ಕುಮಾರ್ ಕಾಣಿಸೋದೇ ಇಲ್ಲ. ಬದಲಾಗಿ ಯುದ್ಧರಂಗದಲ್ಲಿ ಕಲಿ ಅರ್ಜುನನ ಎದುರು ಕೆಚ್ಚೆದೆಯಿಂದ ನಿಂತ ಬಬ್ರುವಾಹನ, ಅಮ್ಮನ ಸಮಾಧಿಯೆದುರು ಕಂಬನಿಗರೆಯುತ್ತಲೇ ಪಲ್ಲವರನ್ನು ಕನ್ನಡ ನಾಡಿನಿಂದ ಹೊರಹಾಕುವ ಪ್ರತಿಜ್ಞೆಯನ್ನು ಮಾಡುವ ವೀರ ಕನ್ನಡಿಗ ಮಯೂರನೇ ಕಾಣುತ್ತಾನೆ. ಅದು ರಾಜ್ ಅಭಿನಯದ ಗತ್ತು ಗೈರತ್ತು ಸೌಂದರ್ಯ. ಆ ಮೂಲಕ ಪುರಾಣ ಇತಿಹಾಸಗಳನ್ನು ಹೊಸ ನೋಟದಿಂದ ಕಾಣುವ ಅರಿಯುವ ಬೆರಗಿನ ಕಿಂಡಿಯೊಂದು ತೆರೆದಂತಾಯಿತು.
ನಾನು ಅತಿಯಾಗಿ ಮೆಚ್ಚಿದ ಮತ್ತೊಂದು ಸಿನಿಮಾ ಕವಿರತ್ನ ಕಾಳಿದಾಸ. ಸುಕೋಮಲೆಯಾದ ಶಕುಂತಲೆ, “ಅ…ಆ್ಹ…. ಅನಸೂಯೆ… ಪ್ರಿಯಂವದೆ ಕಟ್ಟಿದ ಈ ವಲ್ಕಲ ಬಹಳ ಬಿಗಿಯಾಗಿ ನನ್ನ ಎದೆ ನೋಯುತ್ತಿದೆ, ಸ್ವಲ್ಪ ಸಡಿಲಗೊಳಿಸು….” ಎಂದು ಗೋಗರೆವಾಗ ಸಖಿ ಪ್ರಿಯವಂದೆ, “ಹ್ಮ್….ಎದೆಯನ್ನು ಉಬ್ಬಿಸುತ್ತಿರುವ ನಿನ್ನ ಯೌವನವನ್ನು ನಿಂದಿಸು, ನನ್ನನ್ನಲ್ಲ” ಎಂದು ಶಕುಂತಲೆಯ ತುಂಬಿದ ಯೌವನವನ್ನು ನೋಡುವಾಗ, ದುಂಬಿಯೊಂದು ಮಕರಂದವನ್ನು ಹೀರಲು ಶಕುಂತಲೆಯ ಅಧರವನ್ನು ಮುತ್ತಿಕ್ಕುವ ದೃಶ್ಯ ಕಂಡು ದುಷ್ಯಂತ, “ಆಹಾ… ಆ ಚಂದುಟಿಯನ್ನು ಚುಂಬಿಸುತ್ತಿರುವ ದುಂಬಿಯೇ… ನೀನೇ ಭಾಗ್ಯಶಾಲಿ” ಎಂದು ಉಧ್ಗರಿಸುತ್ತಾನೆ… ಈ ದೃಶ್ಯಗಳನ್ನು ಕಂಡಾಗ ಜಯಪ್ರದಳ ಮೋಹಕ ಚೆಲುವಿಗೆ ಮತ್ತು ಕಾಳಿದಾಸನ ರಸಿಕತೆಗೆ ಅವನ ಅದ್ಭುತ ಸಂಭಾಷಣಾ ಚತುರತೆಗೆ ನಿಜಕ್ಕೂ ಕ್ಲೀನ್ ಬೋಲ್ಡ್ ಆಗಿದ್ದೆ. ಈ ಸಿನಿಮಾ ಕಾಳಿದಾಸನನ್ನು ಶಾಕುಂತಲೆಯನ್ನು ಓದುವಂತೆ ಮಾಡಿತ್ತು. ಮೊದಲು ಕುರಿ ಕಾಯುವ ಪೆದ್ದನಾಗಿ, ನಂತರ ಕಾಳಿ ಕೃಪಕಟಾಕ್ಷದಿಂದ ಕಾಳಿದಾಸನಾಗಿ, ದುಷ್ಯಂತನಾಗಿ, ಪ್ರೇಮಿಯಾಗಿ, ವಿರಹಿಯಾಗಿ, ವಿರಾಗಿಯಾಗಿ ರಾಜ್ಕುಮಾರ್ ಅಭಿನಯ ಮನೋಜ್ಞ.
ಪುರಾಣದ ಕೆಲವು ಪಾತ್ರಗಳು ನನ್ನನ್ನು ಈವರೆಗಿನ ಬದುಕಿನುದ್ದಕ್ಕೂ ಕಾಡುತ್ತಲೇ ಬಂದಿವೆ. ಅದರಲ್ಲೂ ಮುಖ್ಯವಾಗಿ ಸ್ತ್ರೀ ಪಾತ್ರಗಳು. ಅಂಬೆ, ಊರ್ಮಿಳಾ, ಅಹಲ್ಯೆ, ದ್ರೌಪದಿ, ಮಾಧವಿ ಮತ್ತು ಈ ಶಕುಂತಲ. ಎಲ್ಲರೂ ಬಹುತೇಕ ತಮ್ಮದಲ್ಲದ ತಪ್ಪಿಗೆ ಬದುಕಿನುದ್ದಕ್ಕೂ ಬೆಂದವರೇ. ಉಳಿದವರ ಬಗ್ಗೆ ಇನ್ನೊಮ್ಮೆ ಅಂತಹ ಸಂದರ್ಭ ಬಂದಾಗ ಬರೆಯುತ್ತೇನೆಂದು ಹೇಳುತ್ತಾ ಈ ಲೇಖನವನ್ನು ಶಕುಂತಲೆಗೆ ಸೀಮಿತಗೊಳಿಸುತ್ತೇನೆ.
ಮೂಲದಲ್ಲಿ ಓದಲು ಸಂಸ್ಕೃತ ತೊಡಕಾದರೂ ಕನ್ನಡದಲ್ಲಿಯೂ ಸೊಗಸಾದ ಅನುವಾದಗಳು ಬಂದಿವೆ. ಕಾಳಿದಾಸನನ್ನು ಕೃತಕೃತ್ಯನನ್ನಾಗಿ ಮಾಡಿದ ಕಾವ್ಯ ಇದು. ಕಾಳಿದಾಸನಿಗೆ ಬದುಕು ಧನ್ಯವಾಯಿತು ಅನ್ನುವ ಭಾವನೆ ಮೂಡಿಸಿದ ಕೃತಿ. ಹಾಗಾಗಿ ಮತ್ತೆ ಅವನು ಕೃತಿ ರಚನೆಯಲ್ಲಿ ತೊಡಗಲಿಲ್ಲ ಅನ್ನುವುದು ವಿಮರ್ಶಕರ ಅಭಿಪ್ರಾಯ. ಅದೇನೇ ಇರಲಿ. ಅಭಿಜ್ಞಾನ ಶಾಕುಂತಲ ಕಾಳಿದಾಸನ ಅದ್ಭುತ ಸೃಷ್ಠಿ ಅನ್ನುವುದು ಅದನ್ನು ಓದಿ ಅನುಭವಿಸಿದ ಎಲ್ಲರ ಅಭಿಪ್ರಾಯ. ಮಹಾಭಾರತದ ಒಂದು ಉಪಕತೆಯನ್ನು ಹಾಗೆಯೇ ನಾಟಕಕ್ಕೆ ದುಡಿಸಿಕೊಂಡಿದ್ದರೆ ಇದು ಒಂದು ಸಾಧಾರಣ ನಾಟಕವಾಗಿರುತ್ತಿತ್ತು. ಆದರೆ ಅದರಲ್ಲಿ ಕಾಳಿದಾಸ ತಂದ ಉಂಗುರದ ಪ್ರಕರಣ ಈ ನಾಟಕವನ್ನು ಬೇರೊಂದು ಸ್ತರಕ್ಕೆ ತಲುಪಿಸಿದೆ. ಇಡೀ ನಾಟಕದ ಕುರಿತಾಗಿ ಬರೆಯುವ ಉದ್ದೇಶ ನನ್ನದಲ್ಲದ ಕಾರಣ ಈಗ ತಲೆಯಲ್ಲಿ ಓಡುತ್ತಿರುವ ವಿಷಯಕ್ಕೆ ಬರುತ್ತೇನೆ. ಈ ಗುರುತಿನ ಉಂಗುರ ಎರಡು ಬೇರೆ ಬೇರೆ ಪ್ರಕರಣಗಳಲ್ಲಿ ಒಂದೇ ರೀತಿಯ ಮಹತ್ವದ ಪಾತ್ರ ವಹಿಸಿಯೂ ಫಲಿತಾಂಶ ಹೇಗೆ ಭಿನ್ನವಾಯಿತು ಅನ್ನುವುದು ನನ್ನನ್ನು ಸದಾ ಕಾಡುತ್ತದೆ.

ಶಕುಂತಲೆ ದುಷ್ಯಂತರ ಗಾಂಧರ್ವ ವಿವಾಹ, ಉಂಗುರ, ದೂರ್ವಾಸರ ಶಾಪ, ದುಷ್ಯಂತನ ನಿರಾಕರಣೆ, ತನ್ನ ಪ್ರಿಯತಮನಿಂದ ತಿರಸ್ಕೃತಳಾದ ಶಕುಂತಲೆಯ ವಿರಹ… ಇವುಗಳ ಸುತ್ತ ಗಿರಕಿಹೊಡೆಯುತ್ತದೆ ಈ ಕತೆ. ದೂರ್ವಾಸರ ಶಾಪದಿಂದಾಗಿ ದುಷ್ಯಂತ ಶಕುಂತಲೆಯೊಂದಿಗಿನ ಪ್ರಕರಣವನ್ನೇ ಮರೆಯುತ್ತಾನೆ. ಇನ್ನು ಕಾದು ಪ್ರಯೋಜನವಿಲ್ಲವೆಂದು ಕಣ್ವ ಮಹರ್ಷಿ ತನ್ನ ಶಿಷ್ಯಂದಿರ ಜೊತೆಯಲ್ಲಿ ದುಷ್ಯಂತನ ಅರಮನೆಗೆ ಕಳುಹಿಸುತ್ತಾನೆ ಶಕುಂತಲೆಯನ್ನು. ಆದರೆ ರಾಜ ಸಭೆಯಲ್ಲಿ ನೀನಾರೆಂದು ಗೊತ್ತೇ ಇಲ್ಲ ಅಂತ ದುಷ್ಯಂತನಿಂದ ತಿರಸ್ಕೃತಳಾದಾಗ ಬೆರಳಿಗೆ ತೊಡಿಸಿದ ಉಂಗುರಕ್ಕಾಗಿ ತಡಕಾಡುತ್ತಾಳೆ. ಆದರೆ ಅಲ್ಲೂ ವಿಧಿ ಅವಳನ್ನು ವಂಚಿಸುತ್ತದೆ… ಉಂಗುರವಿಲ್ಲದ ಬೋಳು ಬೆರಳನ್ನು ಕಂಡು ಪೆಚ್ಚಾಗಿ ನಿಂತಾಗ ನೆರೆದ ಮಂದಿಯ ವ್ಯಂಗ್ಯ ನೋಟಗಳನ್ನು ಎದುರಿಸಲಾಗದೇ ಅಪಾರ ಅವಮಾನದಿಂದ ಕುಸಿಯುತ್ತಾಳೆ. ಆ ಒಂದು ಕ್ಷಣದ ತೀವ್ರತೆ ಇಡೀ ಪ್ರಕರಣವನ್ನು ಶಕುಂತಲೆ ಕಣ್ಣಿನಿಂದ ಕಾಣುವಂತೆ ಪ್ರೇರೇಪಿಸುತ್ತದೆ. ಇನ್ನು ಈ ಬದುಕು ಸಾಕು ಅನ್ನಿಸಿದ ಕ್ಷಣ ಅದು. ಭೂಮಿ ಈಗಲೇ ಬಾಯ್ಬಿರಿದು ತನ್ನ ಮಡಿಲಿಗೆ ತೆಗೆದುಕೊಳ್ಳಬಾರದೇ ಅಂತ ಅನ್ನಿಸಿದ ಕ್ಷಣ. ದ್ರೌಪದಿಗೆ ರಾಜಸಭೆಯಲ್ಲಿ ಎದುರಾದ ಕ್ಷಣ, ಅಂಬೆಗೆ ಸಾಲ್ವನ ನಿರಾಕರಣೆಯಲ್ಲಿ ಎದುರಾದ ಕ್ಷಣ, ಮಾಧವಿಗೆ ವಿಶ್ವಾಮಿತ್ರರ ಮಾತಿನಲ್ಲಿ ಎದುರಾದ ಕ್ಷಣ. ಈ ತೀವ್ರತೆಯನ್ನು ಪದಗಳಲ್ಲಿ ಹಿಡಿದಿಡುವುದು ಬಹಳ ಕಷ್ಟದ ಕೆಲಸ. ಜಿ.ಎಸ್.ಎಸ್. ಈ ಸನ್ನಿವೇಶವನ್ನು ತಮ್ಮ ಒಂದು ಕವನದಲ್ಲಿ ಅಮೋಘವಾಗಿ ಕಟ್ಟಿಕೊಡುತ್ತಾರೆ…
“ಉಂಗುರದ ಬೆರಳನು ಸವರಿ ಬೆಚ್ಚಿದಳಬಲೆ;
ಇದ್ದ ಸೇತುವೆ ಮುರಿದು ದಾರಿಯಿಲ್ಲ.
ಭೋರ್ಗರೆವ ಹೊನಲನೀಸುವುದೆ ನೆನಪಿನ ದೋಣಿ?
ಕೊಂಕು ನಗೆಗಳ ಮೊಳಗು ಸುತ್ತ ಮುತ್ತ.
ಸುತ್ತ ಕಣೆ ಹೂಡಿರಲು, ದಿಕ್ಕು ತಪ್ಪಿದ ಜಿಂಕೆ;
ದೇಗುಲದ ಮೂಲೆಯಲಿ ದೀಪವಾರಿದ ಮೇಲೆ
ನಿಂತ ದೀಪದ ಮಲ್ಲಿ!…”
ಅಕ್ಷರಶಃ ದೀಪವಾರಿದ ಮೇಲಿ ನಿಂಕ ದೀಪದ ಮಲ್ಲಿಯಾದಳು ಶಕುಂತಲೆ. ಅಷ್ಟು ದುರ್ಬಲವೇ ನಮ್ಮ ಪ್ರೇಮ? ಯಾವುದೋ ವಸ್ತುವಿನ ಅವಶ್ಯಕತೆ ಅನಿವಾರ್ಯ ಆಗುವಷ್ಚು? ದಿಕ್ಕುತಪ್ಪಿದಳು, ಏಕಾಂಗಿಯಾದಳು.ಶಕುಂತಲೆಗೆ ದುಷ್ಯಂತನ ಪರಿಚಯವಿತ್ತು.ಸಂಧಿಸಿದ ಕೂಡಲೇ ತನ್ನ ಗುರುತು ಹಿಡಿಯುವನೆಂಬ ಅಪಾರ ಆತ್ಮವಿಶ್ವಾಸವೂ ಇತ್ತು. ಅದಕ್ಕಾಗಿಯೇ, ಅವಳಿಗೆ ದುಷ್ಯಂತ ಗುರುತಿಗಾಗಿಯೇ ಕೊಟ್ಟಿದ್ದ ಉಂಗುರವನ್ನು ಅವಳು ಅಷ್ಟೊಂದು ಮಹತ್ವದ್ದಾಗಿ ಪರಿಗಣಿಸಲೇ ಇಲ್ಲ. ಆ ಅಜಾಗರೂಕತೆಯಿಂದಲೇ ಅವಳು ಉಂಗುರವನ್ನು ಕಳೆದುಕೊಂಡಳು.
ಈ ಉಂಗುರದ ವಿಷಯ ಬಂದಾಗ ನನ್ನ ಮನಸ್ಸು ತ್ರೇತಾಯುಗಕ್ಕೆ ಜಿಗಿಯುತ್ತಿದೆ. ಅಲ್ಲಿ ಹನುಮಂತ ಲಂಕೆಗೆ ಹಾರಲು ತಯಾರಾಗಿ ನಿಂತಿದ್ದಾನೆ. ಸೀತೆಯನ್ನು ಕಂಡಾಗ ತಾನು ರಾಮದೂತನೆಂಬ ಸಾಕ್ಷಿಗೆ, ಸೀತೆಗೆ ತೋರಿಸಲು ರಾಮ ಕೊಟ್ಟ ಉಂಗುರವನ್ನು ಪಡೆದುಕೊಂಡಿದ್ದಾನೆ. ನಂತರ ಲಂಕೆಗೆ ಹಾರಿ ಸೀತೆಯನ್ನು ಕಂಡು ಉಂಗುರ ತೋರಿಸಿ…. ಅರೆ ಎಷ್ಟು ಸಲೀಸು… ಉಂಗುರ ಕಂಡು ಸೀತೆಗೆ ರಾಮದೂತನೆಂದು ನಂಬಿಕೆ ಹುಟ್ಟಿ….. ಸುಖಾಂತ್ಯ!!! ಅರೆ ಶಕುಂತಲೆಯ ವಿಷಯದಲ್ಲಿ ಆಗದಿದ್ದುದು ಇಲ್ಲಿ ಯಾಕಾಯ್ತು? ಅದಕ್ಕೂ ಇದಕ್ಕೂ ಏನಾದರೂ ಕನೆಕ್ಷನ್ ಇದೆಯಾ?…. ನನಗನ್ನಿಸುತ್ತದೆ ಹೌದು, ಖಂಡಿತವಾಗಿಯೂ ಇದೆ! ಯೋಚಿಸಿ… ಇಲ್ಲಿ ಹನುಮಂತನಿಗೆ ಸೀತೆಯ ಪರಿಚಯವೇ ಇಲ್ಲ. ಈ ಮೊದಲು ಎಲ್ಲೂ ನೋಡಿಲ್ಲ. ತಾನು ಸೀತಾಮಾತೆಯನ್ನು ಸಂಧಿಸಿದಾಗ ಅವಳಿಗೆ ಖಂಡಿತವಾಗಿಯೂ ತನ್ನ ಗುರುತು ಸಿಕ್ಕಲ್ಲ ಅನ್ನುವುದು ಹನುಮಂತನಿಗೆ ಗೊತ್ತು. ಅದಕ್ಕಾಗಿಯೇ ರಾಮ ಕೊಟ್ಟ ಗುರುತಿನ ಉಂಗುರಕ್ಕೆ ಬಹಳ ಮಹತ್ವ ಕೊಟ್ಟು, ಸಾವಿರ ಸಾವಿರ ಯೋಜನಾ ದೂರವನ್ನು ಕ್ರಮಿಸಿ ಬಂದಿದ್ದರೂ ಉಂಗುರವನ್ನು ಬಹಳ ಜೋಪಾನವಾಗಿ ತನ್ನ ಬಳಿ ಇಟ್ಟುಕೊಂಡಿದ್ದ. ಉಂಗುರ ಕಳೆದು ಹೋಗಿದ್ದರೆ ತಾನು ಅಷ್ಟು ಕಷ್ಟಪಟ್ಟು ಹಾರಿದ್ದು ವ್ಯರ್ಥ ಅನ್ನುವ ಸ್ಪಷ್ಟ ಕಲ್ಪನೆ ಹನುಮನಿಗಿತ್ತು… ಆದರೆ ಕೇವಲ ಒಂದು ನದಿ ದಾಟುವಾಗ ಶಕುಂತಲೆ ಉಂಗುರವನ್ನು ಕಳೆದುಕೊಳ್ಳಲು ಮುಖ್ಯ ಕಾರಣ ಅವಳು ಆ “ಗುರುತಿನ ಉಂಗುರ” ಕ್ಕೆ ಮಹತ್ವ ಕೊಡದೇ ದುಷ್ಯಂತನ ಪ್ರೇಮವನ್ನು ನಂಬಿದ್ದು! (ವಿಷಯದ ಮಹತ್ವಕ್ಕಾಗಿ ದೂರ್ವಾಸರ ಶಾಪವನ್ನು ಕಡೆಗಣಿಸಲಾಗಿದೆ!).

ಇನ್ನೊಂದು ಆಯಾಮದಲ್ಲಿ ಈ ಎಲ್ಲಾ ವಿಷಯಗಳು ನನ್ನನ್ನು ಕಾಡುವುದುಂಟು. ಪೌರಾಣಿಕ ಪಾತ್ರಗಳಿಂದ ಬಿಡಿಸಿಕೊಂಡು ನಮ್ಮ ನಿತ್ಯದ ಬದುಕಿಗೆ ಬರೋಣ. ನಮ್ಮ ಬದುಕಿನ ಭಾಗವೇ ಆದಂತಹ ಹೆಂಡತಿ-ಮಕ್ಕಳು, ಅಪ್ಪ-ಅಮ್ಮ, ಅಣ್ಣ-ತಮ್ಮ, ಅಕ್ಕ-ತಂಗಿಯರ ಜೊತೆಗೆ ನಮ್ಮದು ಯಾವತ್ತೂ ಸಿಡುಕು ಮುಖ, ಲೆಕ್ಕಾಚಾರದ ಮಾತುಗಳು. ಅವರೊಂದಿಗೆ Taken for granted ಅನ್ನುವ ತರಹದ ವರ್ತನೆ ನಮ್ಮದು. ಅವರಿಗೆ ಯಾವುದೇ ಸ್ಪೆಷಲ್ ಉಂಗುರದ ಗುರುತುಗಳು, ನಗೆಯ ಗುರುತುಗಳ ಅಗತ್ಯ ಇಲ್ಲವೆಂದೇ ಭಾವಿಸುತ್ತೇವೆ ಮತ್ತು ಹಾಗೆಯೇ ನಡೆಯುತ್ತೇವೆ. ಯಾಕೆಂದರೆ ಅವರು ಹೇಗಿದ್ದರೂ ನಮ್ಮವರೇ ಅನ್ನುವ ಉದಾಸೀನ ಭಾವ. ದುಷ್ಯಂತನ ಜೊತೆಯ ಶಕುಂತಲೆಯ ಮನಸ್ಥಿತಿಯಂತೆ. ಅದೇ ಊರ ಮೂಲೆ ಮನೆಯ ಅಪರೂಪದಲ್ಲಿ ಅಪರೂಪಕ್ಕೆ ಮನೆಗೆ ಬರುವ ಅತಿಥಿಯೊಂದಿಗೋ ನಾವು ಉದಾರ ನಗೆಯ ವ್ಯಾಪಾರಿಗಳು! ಅವರೊಂದಿಗೆ ಅದೇನು ಕುಶಲ ಮಾತುಕತೆ… ಯೋಗ ಕ್ಷೇಮ ವಿಚಾರಣೆ, ಅಬ್ಬಬ್ಬಾ!!!… ಅವರನ್ನು ಯಾವತ್ತೂ Taken for granted ರೀತಿ ನೋಡುವುದೇ ಇಲ್ಲ. ಅವರೊಂದಿಗೆ ಎಲ್ಲವೂ ಸಲೀಸು. ಅಲ್ಲಿ ನಮಗೆ ಗುರುತುಗಳನ್ನು ಉಳಿಸಿಕೊಳ್ಳುವ ಅನಿವಾರ್ಯತೆ ಇರುತ್ತದೆ. ಹನುಮಂತ ಸೀತೆಯ ಭೇಟಿಯಂತೆ! ಈ ಧಾವಂತದ ಬದುಕಿನಲ್ಲಿ ಇದನ್ನೆಲ್ಲಾ ಯೋಚಿಸಲು ಅವಕಾಶವೇ ಇಲ್ಲದಿದ್ದಾಗ ಇನ್ನು ಬದಲಾಗಬೇಕು ಅನ್ನುವುದೊಂದು ಕನಸು. ಆದರೂ ಗುರುತುಗಳನ್ನು ಉಳಿಸಿಕೊಳ್ಳಬೇಕಾದ ಅನಿವಾರ್ಯತೆ ಎಲ್ಲಾ ಸಂಬಂಧಗಳಲ್ಲೂ ಇದ್ದೇ ಇರುತ್ತದೆ. ಬಿ.ಆರ್.ಎಲ್ ಹೇಳಿದಂತೆ,
ನನ್ನ ನಿನ್ನ ಪ್ರೀತಿ
ಅಪ್ಪಟ ಚಿನ್ನವಾದರೇನು?
ಕೊಡದಿದ್ದರೆ ಮೆರುಗು
ಮಾಸುವುದು ಅದೂನೂ.
ಹಾಗಾಗಿ ನಮ್ಮ ನಡುವಿನ ನಗೆಯ ಆಪ್ತತೆಯ ಗುರುತುಗಳನ್ನು ಸದಾ ಕಾಲ ಉಳಿಸಿಕೊಳ್ಳೋಣ. ಸಂಬಂಧಗಳಿಗೆ ಆಗಾಗ ಮೆರುಗು ಕೊಡುತ್ತಾ ಅವುಗಳ ತಾಜಾತನ ಕಳೆದುಕೊಳ್ಳದಂತೆ ಹಸಿರಾಗಿಟ್ಟುಕೊಳ್ಳೋಣ.

ರವೀಂದ್ರ ನಾಯಕ್ ಸಣ್ಣಕ್ಕಿಬೆಟ್ಟು ಮೂಲತಃ ಉಡುಪಿಯವರು. ಈಗ ಮಂಗಳೂರು ವಾಸಿ ಮುಸುಕು ತೆರೆದು, ತೂಗುದೀಪ, ಇರುವುದೆಲ್ಲವ ಬಿಟ್ಟು ಇವರ ಪ್ರಕಟಿತ ಕವನ ಸಂಕಲನಗಳು. ಪ್ರೇಮದ ಶರಧಿಗೆ, ಆಕಾಶಬುಟ್ಟಿ, ಒಲವ ಶ್ರಾವಣ ಇವರ ಭಾವಗೀತೆ ಸಿ ಡಿ ಗಳು
