ಮದುವೆಯಾಗಿ ಅವನ ಮನೆಗೆ ಹೋದವಳೇ ಲಲಿತಕ್ಕ ಮಾಡಿದ ಮೊದಲ ಕೆಲಸವೆಂದರೆ, ಒಂದು ದಿನ ಗಡದ್ದಾಗಿ ಊಟಮಾಡಿ ರಾತ್ರಿ ಇತ್ಲಾಗಿನ ಪರಿವೆಯೇ ಇಲ್ಲದವನಂತೆ ಮಲಗಿದ ತಿಮ್ಮಣ್ಣನ ಜುಟ್ಟ ಕತ್ತರಿಸಿ, ಅಲ್ಲೇ ಕುಳಿತು ಅವನ ಕೂದಲನ್ನು ಕ್ರಾಪ್ ಮಾಡಿ, ಚೆನ್ನಾಗಿ ಬಾಚಿ, ನೋಡುತ್ತ ಕುಳಿತಳು. ತಲೆಯಮೇಲೇನೋ ಹರಿದಂತಾಗಿ ಫಟಕ್ಕನೆ ಎದ್ದು ಕುಳಿತ ತಿಮ್ಮಣ್ಣನಿಗೆ ಎದುರಿಗೆ ತನ್ನ ತಲೆಯನ್ನೇ ತದೇಕಚಿತ್ತದಿಂದ ನೋಡುತ್ತ ಕುಳಿತ ಹೆಂಡತಿ, ಏನೋ ಅನುಮಾನ ಬಂದು ತಲೆಸವರಿಕೊಂಡವನಿಗೆ ಅಚ್ಚರಿ. ತನ್ನ ತಲೆ ಮೊದಲಿನಂತಿಲ್ಲ ಎಂದು ಕನ್ನಡಿ ನೋಡಿದರೆ, ಅವನ ಜುಟ್ಟು ಮಾಯವಾಗಿತ್ತು.
ಪತ್ರಕರ್ತೆ ಭಾರತಿ ಹೆಗಡೆ ಬರೆಯುವ ಸಿದ್ದಾಪುರ ಸೀಮೆಯ ಕಥೆಗಳ ಒಂಬತ್ತನೆಯ ಕಂತು.

 

ಅವತ್ತು ಬೆಳಕಿನ್ನೂ ಹರಿಯುವ ಮೊದಲೇ… ಗಡಿಯಾರ ಐದು ಗಂಟೆಗೆ ಅಲಾರಾಂ ಹೊಡೆಯುವ ಮೊದಲೇ… ಪುಟ್ಟದ್ಯಾವಕ್ಕನ ಕೋಳಿ ಕೂಗುವ ಮುನ್ನವೇ ಆಚೆ ಮನೆಯ ರಾಂ ಭಟ್ರ ಮಗಳು ಮನೆಬಿಟ್ಟು ಓಡಿ ಹೋಗಿದ್ದ ಸುದ್ದಿ ಹಾತನಕೇರಿಯ ತುಂಬ ಹರಡಿ, ಪಾರ್ಲರ್ ಲಲಿತಕ್ಕನ ಮನೆಗೆ ಬರುವಷ್ಟರಲ್ಲಿ ಕೋಳಿ ಕೂಗಿಯಾಗಿತ್ತು. ಇನ್ನೂ ಬೆಳಗಿನ ಮಸುಕು ಹರಿಯದ ಸಮಯದಲ್ಲಿ, ಚುಮುಚುಮು ಚಳಿಯಲ್ಲೇ ಎದ್ದು ಬಚ್ಚಲಿಗೆ ಬೆಂಕಿ ಹಾಕಿ ತಂಬಿಗೆ ತುಂಬ ನೀರು ಹಿಡಿದು, ದನಕರೆಯಲು ಕೊಟ್ಟಿಗೆಗೆ ಹೊರಡುವ ತಯಾರಿಯಲ್ಲಿದ್ದ ಲಲಿತಕ್ಕನ ಅತ್ತಿಗೆ ಕಲಾವತಕ್ಕನಿಗೆ ಬಾಗಿಲು ತಟ್ಟಿದ ಶಬ್ದ ಕೇಳಿ ಸ್ವಲ್ಪ ಗಾಬರಿಯೇ ಆಗಿಬಿಟ್ಟಿತು.

ಹಿಡಿದ ಚೊಂಬನ್ನೂ ಕೊಟ್ಟಿಗೆ ಸಮೀಪದ ಹಿತ್ತಲಕಡೆ ಕಟ್ಟೆಯ ಮೇಲಿಟ್ಟು ಸೀದಾ ಒಳಗೆಬಂದು ಗಂಡನನ್ನು ತಟ್ಟಿ ಎಬ್ಬಿಸಿದಳು. ‘ಹೋಯ್, ಇಲ್ನೋಡಿ, ಯಾರೋ ಬಾಗಿಲು ತಟ್ತಾ ಇದ್ದ, ಎದ್ದು ನೋಡಿ ಸ್ವಲ್ಪ…’ ಎಂದು ಕಾಲಿನಿಂದ ಮುಖದವರೆಗೂ ಹೊದ್ದುಕೊಂಡ ಗಂಡನ ಚಾದರದ ಮುಸುಕನ್ನು ಎಳೆದಳು. ಬೆಳಗಿನ ಜಾವದ ನಿದ್ದೆಯ ಮಂಪರಿನಲ್ಲಿದ್ದ ಸುಬ್ರಾಯಣ್ಣನಿಗೆ ಒಂದು ಸಲ ಏನೆಂದೇ ಗೊತ್ತಾಗದೆ, ಹೆಂಡತಿಯ ಮುಖವನ್ನೇ ಸ್ವಲ್ಪ ಹೊತ್ತು ನಿಟ್ಟಿಸಿದ ಮೇಲೆಯೇ ತಿಳಿದದ್ದು, ಅವಳೇನು ಹೇಳುತ್ತಿದ್ದಾಳೆಂದು. ಅಷ್ಟೊತ್ತಿಗಾಗಲೇ ಮೂರ್ನಾಲ್ಕು ಜನರ, ‘ಹೋಯ್, ಸುಬ್ರಾಯಣ್ಣ ಬಾಗ್ಲು ತೆಗ್ಯೂ.. ಮಾತಾಡದಿದ್ದು..’ ಎಂದು ಕೇಳಿದ ಹೊಡೆತಕ್ಕೆ ಸೀದಾ ಎದ್ದು ಹೋಗಿ ಬಾಗಿಲು ತೆಗೆದ, ಮುಖವನ್ನೂ ತೊಳೆಯದೆ.

ಇವ ಬಾಗಿಲು ತೆರೆಯುವುದನ್ನೇ ಕಾಯುತ್ತಿದ್ದವರೆಂಬಂತೆ ಮ್ಯಾಲಿನ ಮನೆ ಗಣಪತಿ ಹೆಗಡೇರ ಮಗ ರಮೇಶ, ಆಳು ಗಣಪ, ದ್ಯಾವ, ಇನ್ನೂ ನಾಲ್ಕಾರು ಜನರೊಂದಿಗೆ ಬಂದಿದ್ದವ ರಾಂ ಭಟ್ರ ತಮ್ಮ ಕೇಶವ ಭಟ್ಟ, ಬಂದವನೇ ಸುಬ್ರಾಯನ ಬಳಿ, ‘ಅಲ್ಲಾ, ಇದು ಹೀಂಗೆಲ್ಲ ಮಾಡದ ಸುಬ್ರಾಯಣ್ಣ. ನಿನ್ನ ತಂಗಿಯೇನೋ ಬೆಂಗಳೂರಿಗೆ ಹೋಗಿ ಏನೇನೋ ಕಲ್ತಗಬಂದಿಕ್ಕು. ಆದರೆ ಅದನ್ನು ಇಲ್ಲೆಲ್ಲ ಪ್ರಯೋಗ ಮಾಡದ ಹಂಗರೆ. ಈಗ ನೋಡು ಎಂತ ಅನಾಹುತಾಗೋತು ಹೇಳಿ. ಇವು ಇಪ್ಪದು ಇಪ್ಪಹಾಂಗೆ ಇರ್ತಿದ್ವಿಲ್ಯ. ನಮ್ಮನೆ ಹೆಣ್ಮಕ್ಕ ಎಂತ ನಾಕು ಜನರ ಮುಂದೆ ಕುಣಿಯದ ಬೇಕಾಯ್ದ, ಆ ನಮ್ನಿ ತಿಕ್ಕಿ ತಿಕ್ಕಿ ಅದರ ಮಕವ ಹೊಳಿಯೋ ಹಂಗೆ ಮಾಡಿ ಕಳಿಸ್ಚಲಿ. ಈಗ ನೋಡು..’ ಎಂದು ಒಂದೇ ಸಮನೆ ಬಯ್ಯತೊಡಗಿದ.

‘ಎಂತದ ಮಾರಾಯ. ಸ್ವಲ್ಪ ಅರ್ಥಾಪಹಂಗೆ ಹೇಳು ನೋಡನ..’ ಎಂದ ಸುಬ್ರಾಯಣ್ಣ.

‘ನಿನ್ನಹತ್ರ ಎಂತ ಮಾತ? ಮೊದ್ಲು ಕರಿ ನಿನ್ನ ತಂಗಿಯಾ..? ಅದ್ರಿಂದ್ಲೇ ಊರಿನ ಹೆಣ್ಮಕ್ಕ ಎಲ್ಲ ಹಾಳಾಗಿ ಹೋಗ್ತ ಇದ್ದ…’ ಎಂದು ಕೂಗಾಡಿದ ಶಬ್ದಕ್ಕೆ ಮನೆಯ ಜಗುಲಿಯ ಆಚೆ ಇರುವ ಕೋಣೆಯಲ್ಲಿ ಕಂಬಳಿ ಹೊದ್ದು ಮಲಗಿದ್ದ ಲಲಿತಕ್ಕ ‘ಎಂತದ್ರಾ ಅದು’ ಎಂದು ಹೊರಬಂದಳು.

ಅವಳು ಬಂದದ್ದೇ ತಡ, ಇವನ ಕೂಗಾಟ ಇನ್ನಷ್ಟು ಜೋರಾಯಿತು. ‘ಎಂತದ್ದೇ ಪಾರ್ಲರ್ ಲಲಿತಕ್ಕ. ನಿಂಗಂತೂ ಮದುವಿಲ್ಲೆ, ಊರಿನ ಹೆಣ್ಮಕ್ಕಳನ್ನೆಲ್ಲ ಮನೆ ಬಿಡ್ಸವು ಮಾಡಕ್ಯಂಡಿದ್ಯನೇ…’ ಎಂದು ಜೋರು ಮಾಡಲು ಹೊರಟವನನ್ನು ಅರ್ಧಕ್ಕೇ ತಡೆದು ನಿಲ್ಲಿಸಿದ ಸುಬ್ರಾಯಣ್ಣ ಸಮಾಧಾನದ ಧ್ವನಿಯಲ್ಲೇ… ‘ಕೇಶವಣ್ಣ, ಸ್ವಲ್ಪ ಸಮಾಧಾನ ಮಾಡಕ್ಯ. ಎಂತಾತು ಹೇಳಿ ಸಾವಕಾಶವಾಗಿ ಹೇಳು’ ಎಂದ. ಅಲ್ಲಿ ಬಂದವರೆಲ್ಲ ಜಗುಲಿಯ ಕಟ್ಟೆಯ ಮೇಲೆ ಕುಳಿತೇ ಒಬ್ಬೊಬ್ಬರು ಒಂದೊಂದು ಮಾತನಾಡತೊಡಗಿದರು.

ಆಗಿದ್ದಿಷ್ಟೇ. ಹಾತನಕೇರಿಯಿಂದ ಒಂದೆರೆಡು ಮೈಲಿ ದೂರದಲ್ಲಿರುವ ಕಾನಸೂರಿನಲ್ಲಿ ಲಲಿತಕ್ಕ ಬ್ಯೂಟಿಪಾರ್ಲರ್ ತೆಗೆದು ದಣೀ ಒಂದುವರ್ಷವಾಗಿತ್ತು. ಕಾನಸೂರಿನ ಸುತ್ತಮುತ್ತ ಸಾಕಷ್ಟು ಹಳ್ಳಿಗಳಿದ್ದವು. ಅಲ್ಲಿನ ಹೆಣ್ಣುಮಕ್ಕಳೆಲ್ಲ ಹೈಸ್ಕೂಲು- ಕಾಲೇಜಿಗೆ ಹೋಗುವುದಕ್ಕಿಂತ ಹೆಚ್ಚಾಗಿ ಬರುತ್ತಿದ್ದುದು ಈ ಪಾರ್ಲರ್‍ ಗೇ. ಈಗ 20 ವರ್ಷಗಳ ಹಿಂದಿನ ಮಾತಿದು. ಆಗ ಈಗಿನಷ್ಟು ಬ್ಯೂಟಿ ಪಾರ್ಲರ್‍ ಗಳ ಹಾವಳಿ ಇರಲಿಲ್ಲ. ಎಲ್ಲರ ಮುಖವೂ ಸಹಜ ಬಣ್ಣ, ಸಹಜವಾಗಿಯೇ ದಪ್ಪದಪ್ಪ ಇರುವ ಹುಬ್ಬುಗಳಿಂದ ಕೂಡಿದ್ದವು. ಅಂಥ ಹೊತ್ತಲ್ಲಿ ಸುಬ್ರಾಯಣ್ಣನ ತಂಗಿ ಲಲಿತಕ್ಕ ತಾನು ಕಾನಸೂರಿನಲ್ಲೊಂದು ಬ್ಯೂಟಿ ಪಾರ್ಲರ್ ತೆರೆಯುತ್ತೇನೆಂದು ಹೇಳಿದ್ದಲ್ಲದೆ ಒಂದು ಶುಭ ಮುಹೂರ್ತದಲ್ಲಿ ತೆರೆದು ಪ್ರಾಯೋಗಿಕವಾಗಿ ಅಕ್ಕಪಕ್ಕದ ಮನೆಯ ಹೆಂಗಸರಿಗೆಲ್ಲ ಉಚಿತವಾಗಿ ಹುಬ್ಬು ಕೆತ್ತಿ ಕಳಿಸಿದಳು. ಅವತ್ತೆಲ್ಲ ಆ ಹೆಂಗಸರು ಕನ್ನಡಿಯನ್ನು ನೋಡಿದ್ದೂ ನೋಡಿದ್ದೇ. ತಮ್ಮ ಮುಖ ಹೀಗೆಲ್ಲ ಕಾಣಿಸುತ್ತದೆ ಎಂದೇ ಅವರಿಗೆ ಗೊತ್ತಿರಲಿಲ್ಲ. ಅವರವರ ಗಂಡಂದಿರಿಗೂ ಅರೆ, ತಮ್ಮ ಹೆಂಡತಿ ಪರವಾಗಿಲ್ಲ, ಚೆಂದವೇ ಇದ್ದಾಳೆಂದು ಅನಿಸಿಯೂ ಬಿಟ್ಟಿತ್ತು. ಸ್ವತಃ ಸುಬ್ರಾಯಣ್ಣನ ಹೆಂಡತಿ ಕಲಾವತಕ್ಕನಿಗೂ ಹುಬ್ಬು ಕೆತ್ತಿ ಬಿಟ್ಟಿದ್ದಳು ಲಲಿತಾ. ತಂಗಿಯ ಯಾವ ಕೆಲಸಕ್ಕೂ ಅಡ್ಡಿ ಮಾಡಿದವನಲ್ಲ ಸುಬ್ರಾಯಣ್ಣ. ಅದಕ್ಕೂ ಒಂದು ಕಾರಣವಿತ್ತು.

ತೀರ ಶ್ರೀಮಂತರೂ ಅಲ್ಲ, ಬಡವರೂ ಅಲ್ಲದ ಒಂದು ಎಕರೆ ಅಡಕೆ ತೋಟ, ಸ್ವಲ್ಪ ಗದ್ದೆಯನ್ನೇ ಸಾಗುವಳಿ ಮಾಡಿಕೊಂಡು ಬರುತ್ತಿದ್ದ ಸುಬ್ರಾಯಣ್ಣನಿಗಿದ್ದ ಏಕೈಕ ತಂಗಿ ಲಲಿತಾ ಇನ್ನೂ ಮದುವೆಯಾಗದೇ ಹಾಗೇ ಮನೆಯಲ್ಲಿ ಕೂತಿದ್ದಳು. ವಯಸ್ಸು ಅಷ್ಟೊತ್ತಿಗಾಗಲೇ 30 ದಾಟಿಬಿಟ್ಟಿತ್ತು. ನೋಡಲು ಸ್ವಲ್ಪವೂ ಚೆಂದವಿಲ್ಲದ ಲಲಿತಾ ಕಾನ್ಸೂರು ಹೈಸ್ಕೂಲಲ್ಲಿ ಒಂಬತ್ತನೇ ತರಗತಿಯಲ್ಲೇ ನಾಕು ಸಲ ಫೇಲಾಗಿ ಇನ್ನು ಓದುವುದು ಸಾಕೆಂದು ಮನೆಯಲ್ಲೇ ಕುಳಿತಿದ್ದಳು.

ಅವಳೂ ಅವಳ ಸೋದರ ಮಾವನ ಮಗಳು ಮಂಗಳಾ ಇಬ್ಬರೂ ಜೀವದ ಗೆಳತಿಯರು. ಇಬ್ಬರೂ ನೋಡಲು ಚೆಂದವಿರಲಿಲ್ಲ. ಲಲಿತಾ ಸಣ್ಣಗೆ ಉದ್ದಕಿದ್ದು, ಹಲ್ಲುಬ್ಬಿಯಾಗಿ ಎಣ್ಣೆಕಪ್ಪು ಬಣ್ಣದಲ್ಲಿದ್ದರೆ, ಮಂಗಳಾ ದಪ್ಪಗೆ ಕುಳ್ಳಿಯಾಗಿ, ಇವಳದ್ದೇ ಬಣ್ಣದಲ್ಲಿದ್ದಳು. ಇಬ್ಬರೂ ಎಷ್ಟು ಗೆಳತಿಯರಾಗಿದ್ದರೆಂದರೆ ಎಲ್ಲಿಗೇ ಹೋಗುವುದಿದ್ದರೂ ಒಟ್ಟಿಗೇ ಹೋಗುತ್ತಿದ್ದರು. ಇಂಥ ಈ ಇಬ್ಬರಿಗೂ ಎರಡು ಹುಚ್ಚಿತ್ತು. ಒಂದು ಸಿನಿಮಾ ನೋಡುವುದು, ಇನ್ನೊಂದು ಫ್ಯಾಶನ್ ಮಾಡುವುದು. ಸಿದ್ದಾಪುರಕ್ಕೆ ಅಥವಾ ಶಿರಸಿಗೆ ಯಾವುದೇ ಸಿನಿಮಾ ಬಂದರೂ ಮೊದಲು ಹೋಗಿ ನೋಡಿ ಬರುತ್ತಿದ್ದರು. ಅನಂತನಾಗ್ ಇವರ ನೆಚ್ಚಿನ ನಾಯಕ. ತಾವು ಮದುವೆಯಾಗುವ ಹುಡುಗ ಅನಂತ್‍ ನಾಗ್ ಥರವೇ ಇರಬೇಕೆಂದು ಕನಸೂ ಕಂಡವರು. ಇಬ್ಬರೂ ಅನಂತ್‍ ನಾಗ್ ಫೋಟೋವನ್ನು ತಮ್ಮ ಹಾಸಿಗೆಯ ದಿಂಬಿನ ಅಡಿಯಲ್ಲಿಟ್ಟುಕೊಂಡು ಪ್ರತಿದಿವಸ ರಾತ್ರಿ ಅವನ ಫೋಟೋ ನೋಡಿಯೇ ಮಲಗುತ್ತಿದ್ದರು. ಅಂಥಾ ಹುಚ್ಚಿತ್ತು ಅವರಿಗೆ.

ಒಂದುಸಲ ಹೀಗೆ ಸಿನಿಮಾ ನೋಡಲು ಶಿರಸಿಯ ದೇವಿಕೆರೆಯ ಮೇಲೆ ನಡೆದು ಹೋಗುತ್ತಿದ್ದಾಗ, ಹಿಂದುಗಡೆಯಿಂದ ಯಾರೋ ಪೋಕರಿಗಳು ಇವರನ್ನು ಚುಡಾಯಿಸಿಬಿಟ್ಟರು. ಇವರು ಸಿನಿಮಾಕ್ಕೆ ತಡವಾಗುತ್ತದೆಂದು ಬೇಗಬೇಗ ಹೆಜ್ಜೆ ಹಾಕುವವರು ಹೆಜ್ಜೆಗಳನ್ನು ನಿಧಾನ ಮಾಡಿದರು. ಅದುವರೆಗೆ ಯಾರೂ ಅವರನ್ನು ಚುಡಾಯಿಸದೇ ಇದ್ದ ಕಾರಣ, ಸಿನಿಮಾಗಳಲ್ಲಿ ಹೀರೋಯಿನ್‍ ನನ್ನು ಚುಡಾಯಿಸಿದ್ದು ನೋಡಿದ ಇವರಿಗೆ, ತಮ್ಮನ್ನೂ ಹೀಗೆಲ್ಲ ಚುಡಾಯಿಸುತ್ತಾರಲ್ಲ ಎಂದು ಜೀವಮಾನದ ಪರಮ ಸಂತೋಷವನ್ನು ಅನುಭವಿಸಿದರು. ಹಾಗಾಗಿ ‘ಸಿನಿಮಾ ಇಲ್ದೇ ಇದ್ರೆ ಬಿಡೇ, ನಿಧಾನಕ್ಕೆ ಹೋಪನ’ ಎಂದು ತಮ್ಮತಮ್ಮೊಳಗೇ ಹೇಳಿಕೊಂಡು ಮುಸಿಮುಸಿ ನಗುತ್ತಾ ನಿಧಾನಕ್ಕೆ ಹೆಜ್ಜೆ ಹಾಕಿದರು. ಆದರೆ ಅವರು ಹಾಗೆ ನಿಧಾನ ಮಾಡಿದ್ದೇ ತಪ್ಪಾಯಿತು. ಚುಡಾಯಿಸುವ ಹುಡುಗರು ಸ್ವಲ್ಪ ಮುಂದೆ ಬಂದು ಅವರ ಮುಖ ನೋಡಿದ ಮೇಲೆ ಸುಯ್ಯೆಂದು ಸೈಕಲ್ ಏರಿ ಓಡಿಹೋದರು. ಇತ್ತ ಪೆಚ್ಚು ಮೋರೆ ಹಾಕಿದರೂ ಇಬ್ಬರಿಗೂ ಇಷ್ಟಾದರೂ ತಮ್ಮನ್ನು ಚುಡಾಯಿಸಿದರಲ್ಲ ಎಂದು ಖುಷಿಯಾಗಿ, ಅವತ್ತೆಲ್ಲ ಮನೆಯಲ್ಲಿ ಸಿನಿಮಾ ಕಥೆಗಿಂತ ಚುಡಾಯಿಸಿದ ಕತೆಯೇ ಹೇಳಿ ಹೇಳಿ ಖುಷಿ ಅನುಭವಿಸಿದ್ದರು.

ಇಂಥ ಈ ಇಬ್ಬರಿಗೂ ಮದುವೆ ಆಗುವುದು ತುಂಬ ತಡವಾಯಿತು. ಬಂದ ಗಂಡುಗಳೆಲ್ಲ ನೋಡಿ ಹೋದರೇ ಹೊರತು ಯಾರೊಬ್ಬರೂ ಒಪ್ಪಲಿಲ್ಲ. ಆಗೆಲ್ಲ ನೋಡಲು ಚೆಂದ ಇದ್ದವರಿಗೇ ಮದುವೆಯಾಗುವುದು ಕಷ್ಟವಿತ್ತು, ಇಂಥ ಇವರಿಗೆ ಗಂಡು ಸಿಗುತ್ತಾನೆಯೇ?
ಇಷ್ಟೆಲ್ಲ ಇರುವ ಈ ಇಬ್ಬರೂ ಸಿಕ್ಕಾಪಟ್ಟೆ ಫ್ಯಾಷನ್ ಪ್ರಿಯರು. ಕೂದಲನ್ನು ಎರಡೂ ಬದಿಗೆ ಕತ್ತರಿಸಿ, ಕಿವಿಯ ಹತ್ತಿರ ದೊಡ್ಡದಾಗಿ ಇಳಿಬಿಟ್ಟು, ನಡೆದರೆ ಕೆನ್ನೆಗೆ ಬಡಿಯಬೇಕು, ಹಾಗಿರುತ್ತಿತ್ತು. ಹುಬ್ಬು ಕೆತ್ತಿಕೊಂಡು, ಕಿವಿಗೆ ಬಳೆಯಂತಹ ದೊಡ್ಡದಾದ ರಿಂಗ್‍ ಅನ್ನು ಹಾಕಿಕೊಂಡು, ಸಡಿಲವಾದ ಜಡೆ ಹೆಣೆದುಕೊಂಡು ಆಗಲೇ ಅವರು ಸ್ಟೈಲ್ ಆಗಿರುತ್ತಿದ್ದರು. ಈ ಹೆಣ್ಣುಹುಡುಗಿಯರಿಬ್ಬರೂ ಎಷ್ಟು ಫ್ಯಾಷನ್ ಮಾಡ್ತ, ಎಂದು ಹೇಳಿ ಆಡಿಕೊಂಡರೂ ಯಾರಿಗೂ ಕೇರ್ ಮಾಡುತ್ತಿರಲಿಲ್ಲ ಅವರಿಬ್ಬರು.

ಒಂದುಸಲ ಲಲಿತಕ್ಕ ಸೋದರಮಾವನ ಮನೆಯಲ್ಲೇ ಇರುವಾಗ, ಒಬ್ಬ ಹುಡುಗ ನೋಡಲು ಬರುತ್ತಾನೆಂಬ ಸುದ್ದಿ ಸಿಕ್ಕಿತು. ದೊಡ್ಡ ಹೆಗಡೇರ ಮಗನಂತೆ, ದೊಡ್ಡ ಸಂಬಂಧ ಎಂದೆಲ್ಲ ಮೊದಲೇ ಹೇಳಿದ್ದರಿಂದ ಈ ಸಲ ಬಂದವ ಎಂಗಡ್ಡಿಲ್ಲೆ, ಆನೇ ಮೊದಲು ಚಾ ತಗಂಡು ಹೋಗ್ತಿ’ ಎಂದು ಹೇಳಿಕೊಂಡ ಲಲಿತಕ್ಕ ಮತ್ತು ಮಂಗಳ ಇಬ್ಬರನ್ನೂ ಸಂಬಾಳಿಸುವುದೇ ಮನೆಯವರಿಗೆ ಕಷ್ಟವಾಗಿಬಿಟ್ಟಿತು. ಕಡೆಗೆ ಸುಬ್ರಾಯಣ್ಣನೇ, ‘ತಂಗ್ಯಕ್ಳಾ. ಮೊದ್ಲು, ಒಬ್ರು ಹೋಗಿ ಚಾ ಕೊಟ್ಟಿಕ್ಕೆ ಬನ್ನಿ. ಸ್ವಲ್ಪ ಹೊತ್ತಾದ ಮೇಲೆ ಮತ್ತೊಬ್ಬರು ತಿಂಡಿ ತಟ್ಟೆ ಇಟ್ಟು ಬನ್ನಿ.. ಕಡೆಗೆ ನೋಡುವಾ..’ ಎಂದು ಒಂದು ಒಮ್ಮತಕ್ಕೆ ಬಂದು ಇಬ್ಬರನ್ನೂ ಒಪ್ಪಿಸಿದ.

ಅವತ್ತು ಇಬ್ಬರೂ ಇನ್ನೂ ಹೆಚ್ಚಗಿನ ಫ್ಯಾಷನ್ ಮಾಡಿಕೊಂಡರು, ಮುಖಕ್ಕೆ ಪೌಡರ್ ಒಂದೆರೆಡು ಕೋಟ್ ಜಾಸ್ತಿಯೇ ಬಳಿದುಕೊಂಡರು. ಚೆಂದನೆಯ ನೈಲಾನ್ ಸೀರೆ ಉಟ್ಟು, ಸಡಿಲ ಜಡೆ ಹೆಣೆದುಕೊಂಡು ಕಿವಿಯ ಪಕ್ಕದಲ್ಲೊಂದು ದೊಡ್ಡದಾದ ಗುಲಾಬಿ ಹೂವನ್ನು ಸಿಕ್ಕಿಸಿಕೊಂಡು ತಾವು ನೋಡಿದ ಸಿನಿಮಾಗಳ ನಾಯಕಿಯರಂತೆಯೇ ಇದ್ದೇವೆಂದು ಭ್ರಮಿಸಿ, ನಾಜೂಕಾಗಿ ಚಹಾ ಲೋಟವನ್ನು ಹಿಡಿದು ಮೊದಲು ನಡೆದವಳು ಲಲಿತಾ. ಜಗುಲಿಯ ಮೇಲೆ ಕುಳಿತವರೆಲ್ಲರಿಗೂ ಚಹಾ ಕೊಟ್ಟು ಅಲ್ಲೇ ಗೋಡೆಗೊರಗಿನಿಂತು ವಾರೆಗಣ್ಣಲ್ಲಿ ವರನನ್ನು ನೋಡಿದವಳೇ ಪಟಕ್ಕನೆ ಒಳ ನಡೆದವಳು, ‘ಮಂಗಳೀ.. ಎಂಗಂತೂ ಬ್ಯಾಡ.. ನೀ ಬೇಕಾರೆ ಮಾಡಕ್ಯ’ ಎಂದುಬಿಟ್ಟಳು. ಇವರೇ ಇಷ್ಟು ಕೆಟ್ಟದಾಗಿದ್ದಾರೆ ನೋಡಲು ಎಂದರೆ ಆ ವರಮಹಾಶಯ ಇನ್ನೂ ಕೆಟ್ಟದಾಗಿದ್ದ ನೋಡಲು. ಕಪ್ಪಗಿರುವುದಷ್ಟೇ ಅಲ್ಲ, ಹಲ್ಲು ಮುಂದಿದ್ದು, ಅವು ಎಲ್ಲೆಲ್ಲಿವೆ ಎಂದು ಲೆಕ್ಕ ಕೂಡ ಮಾಡಲಾಗದಷ್ಟು ಒಂದರ ಮೇಲೊಂದಿದ್ದು, ವಿಕಾರವಾಗಿ ಕಾಣುತ್ತಿದ್ದ ಅವನನ್ನು ನೋಡಿ, ಮಂಗಳಿಯೂ ಒಳಗಬಂದವಳೇ ‘ಎಂಗೂ ಬ್ಯಾಡ’ ಎಂದು ಹೇಳಿಬಿಟ್ಟಳು. ಅವರೆಲ್ಲ ಹೋದಮೇಲೆ, ಸುಬ್ರಾಯಣ್ಣ ಒಳಬಂದವನೇ, ‘ಅಲ್ಲಾ ಹೆಣ್ಣುಡ್ರಾ.. ಆಗ ನೋಡಿದ್ರೆ ಎಂಗಕ್ಕು, ಆ ಮೊದ್ಲು ಹೋಗ್ತಿ ಎಂದು ಜಗಳ ಮಾಡಿದವರು ಈಗ ನೋಡಿದ್ರೆ ಎಂಗ ಬ್ಯಾಡ, ತಂಗ ಬ್ಯಾಡ ಹೇಳತ್ರನೇ…’ ಎಂದ ಕವಳ ಹಾಕಿದ ಕೆಂಪನೆಯ ಹಲ್ಲು ಕಿರಿದು.

ಸ್ವಲ್ಪನಾದ್ರೂ ಚೊಲೋ ಇಪ್ಪದು ಬ್ಯಾಡ್ದನಾ, ಅವನ ಹಲ್ಲು ನೋಡಿದ್ರೆ ಹೆದ್ರಿಕ್ಯಾಗ್ತು ಎಂದು ಒಬ್ಬಳು ಹೇಳಿದರೆ, ತಲೆಮೇಲೊಂದೇ ಒಂದು ಕೂದ್ಲೂ ಇಲ್ಲೆ ಅವಂಗೆ ಎಂದು ತನ್ನ ಮೋಟು ಜಡೆಯನ್ನು ಸವರಿಕೊಂಡಳು ಮಂಗಳಿ.

ಅವಳು ಬಂದದ್ದೇ ತಡ, ಇವನ ಕೂಗಾಟ ಇನ್ನಷ್ಟು ಜೋರಾಯಿತು. ‘ಎಂತದ್ದೇ ಪಾರ್ಲರ್ ಲಲಿತಕ್ಕ. ನಿಂಗಂತೂ ಮದುವಿಲ್ಲೆ, ಊರಿನ ಹೆಣ್ಮಕ್ಕಳನ್ನೆಲ್ಲ ಮನೆ ಬಿಡ್ಸವು ಮಾಡಕ್ಯಂಡಿದ್ಯನೇ…’ ಎಂದು ಜೋರು ಮಾಡಲು ಹೊರಟವನನ್ನು ಅರ್ಧಕ್ಕೇ ತಡೆದು ನಿಲ್ಲಿಸಿದ ಸುಬ್ರಾಯಣ್ಣ ಸಮಾಧಾನದ ಧ್ವನಿಯಲ್ಲೇ… ‘ಕೇಶವಣ್ಣ, ಸ್ವಲ್ಪ ಸಮಾಧಾನ ಮಾಡಕ್ಯ. ಎಂತಾತು ಹೇಳಿ ಸಾವಕಾಶವಾಗಿ ಹೇಳು’ ಎಂದ.

ಹೀಗೆ ತಾವು ನೋಡಲು ಚೆಂದ ಇಲ್ಲದಿದ್ದರೇನಂತೆ, ಮದುವೆಯಾಗುವ ಹುಡುಗ ಮಾತ್ರ ನೋಡಲು ಸಾಧಾರಣವಾದರೂ ಇರಬೇಕು, ತಾವು ನೋಡಿದ ಸಿನಿಮಾ ನಾಯಕರಂತೆ, ಅನಂತನಾಗ್, ರಾಜ್‍ ಕುಮಾರ್ ಥರ ಇಲ್ದಿದ್ದರೂ… ಸೈಡ್ ಪಾರ್ಟು ಮಾಡ್ತಾರಲ್ಲ, ಅವರ ಹಾಗಾದ್ರೂ ಇರಬ್ಯಾಡ್ದಾ? ಎಂದು ಒಬ್ಬರಿಗೊಬ್ಬರು ಕೇಳಿಕೊಳ್ಳುತ್ತಿದ್ದರು.

ನಿಂಗ ಹ್ಯಾಂಗಿದ್ದಿ ಎಂದು ಕನ್ನಡಿಲಿ ಮುಖ ನೋಡಕ್ಯಂಡಿದ್ರನೇ ಎಂದು ಕೇಳಿದವರಿಗೆಲ್ಲ ಸೊಟ್ಟಮೂತಿ ಮಾಡಿಕೊಂಡ ಇಬ್ಬರಿಗೂ ಕಾಡುವ ಪ್ರಶ್ನೆಯೇನೆಂದರೆ ನೋಡಲು ಸ್ವಲ್ಪವೂ ಚೆಂದವಿಲ್ಲದ ಈ ಗಂಡಸರಿಗೆ ಚೆಂದನೆಯ ಹೆಂಡತಿ ಸಿಗುತ್ತಾರಾದರೆ ತಮಗೇಕೆ ಸಿಗಬಾರದೆಂಬುದು. ಲಲಿತಕ್ಕನ ಊರು ಹಾತನಕೇರಿಯ ಆಚೆಕೇರಿಯ ಸುರೇಶ ನೋಡಲು ಸ್ವಲ್ಪವೂ ಚೆಂದವಿರಲಿಲ್ಲ. ಅವನಿಗೂ ಇವಳಿಗೂ ಗಂಟು ಹಾಕಿ ತಮಾಷೆ ಮಾಡುತ್ತಿದ್ದರು, ಆ ಮಂಜನೇ ನಿನ್ನ ಗಂಡ ಎಂದೆಲ್ಲ ಆಡಿಕೊಳ್ಳುವಾಗ, ಇಶ್ಶೀಶೀ.. ಅವನನ್ನ ಯಾರು ಮದುವೆಯಾಕ್ಯತ್ತ, ನೋಡಿದ್ರೆ ಸಾಕು, ಕಪಿ ಥರ ಇದ್ದ’ ಎಂದು ಬೈಯುತ್ತಿದ್ದಳು. ಆದರೆ ಅವನ ಮದುವೆ ದಿನ ಮಂಟಪದಲ್ಲಿ ನೋಡುತ್ತಾಳೆ ಅವನ ಹೆಂಡತಿ ಸ್ಫುರದ್ರೂಪಿ. ಚೆಂದುಳ್ಳಿ ಚೆಲುವೆ. ಅಷ್ಟಾವಕ್ರನಹಾಗಿರುವ ಅವನಿಗೆ ಇಂಥ ಚೆಂದನೆಯ ಹೆಂಡತಿಯೇ, ಲಲಿತಾಳ ಬಾಗಿದ ಹುಬ್ಬು ಮೇಲಕ್ಕೇರಿದವು. ಮನೆಗೆ ಬಂದವಳೇ ಕನ್ನಡಿಯ ಮುಂದೆ ನಿಂತು ಅವನಷ್ಟೇನೂ ತಾನು ಕುರೂಪ ಇಲ್ಲ. ಸಾಧಾರಣವಾಗಿಯೇ ಇದ್ದೇನೆ. ಅನಂತನಾಗ್ ತರದವನು ಸಿಗದಿದ್ದರೂ ಸುಮಾರಿಗಿರುವ ಗಂಡಾದರೂ ಸಿಕ್ಕಾನು ಎಂದು ಲೆಕ್ಕ ಹಾಕಿದಳು.
ಆದರೆ ಆ ರೀತಿ ಆಗಲಿಲ್ಲ. ಗಂಡು ಹೇಗಿದ್ದರೇನು, ಹೆಣ್ಣುಕೊಡಲು ಅಪ್ಪ-ಅಮ್ಮಂದಿರು ತಯಾರಿದ್ದರು. ಆದರೆ ಹೆಣ್ಣಿಗೆ ಗಂಡು ಸಿಗುವುದು ಅಷ್ಟು ಸುಲಭವಿರಲಿಲ್ಲ. ಆದರೆ ಅವರ ಕನಸುಗಳಿಗ್ಯಾವ ಕುರೂಪವೂ ಇರಲಿಲ್ಲವಲ್ಲ.

ಹೀಗೆ ಅವರಿಬ್ಬರನ್ನೂ ನೋಡಲು ಬಂದವರೂ ಒಪ್ಪಲಿಲ್ಲ. ಕೆಲವರನ್ನು ಇವರೇ ಒಪ್ಪಲಿಲ್ಲ. ಒಟ್ಟಿನಲ್ಲಿ ಅವರಿಗೆ ಮದುವೆ ಆಗದೇ ಬರೋಬ್ಬರಿ 32 ವರ್ಷಗಳೂ ದಾಟಿ ಹೋದವು. ಇನ್ನು ಹೀಗೇ ಕೂತರಾಗುವುದಿಲ್ಲವೆಂದು ಮಂಗಳಾ ಶಿರಸಿಗೆ ಹೋಗಿ ಹೊಲಿಗೆ ಕಲಿತು ಮನೆಯಲ್ಲೊಂದು ಹೊಲಿಗೆ ಮಷಿನ್ ಇಟ್ಟುಕೊಂಡು ಅವರಿವರ ಮನೆಯ ಬಟ್ಟೆಹೊಲಿದು ಸ್ವಲ್ಪ ದುಡ್ಡು ಸಂಪಾದಿಸತೊಡಗಿದಳು. ಇತ್ತ ಲಲಿತಕ್ಕ ಬೆಂಗಳೂರಿನಲ್ಲಿ ನೌಕರಿಯಲ್ಲಿದ್ದ ತಮ್ಮನ ಮನೆಯಲ್ಲಿ ಉಳಿದುಕೊಂಡು ಬ್ಯೂಟಿ ಪಾರ್ಲರ್ ಕೋರ್ಸ್ ಮಾಡಿಕೊಂಡು ಊರಿಗೆ ಬಂದು ಬ್ಯೂಟಿಪಾರ್ಲರ್‍ ನ ಮಹಿಮೆಯನ್ನೆಲ್ಲ ಊರಿನ ಹೆಣ್ಣುಮಕ್ಕಳ ಮುಂದೆ ಹಾಡಿಹೊಗಳಿದಳು. ನೋಡಲು ಚೆಂದವಿಲ್ಲದ ಲಲಿತಕ್ಕ ಕೂಡ, ಹುಬ್ಬು ಕೆತ್ತಿಕೊಂಡು, ಫೇಷಿಯಲ್ ಮಾಡಿಸಿಕೊಂಡು, ಕೂದಲನ್ನು ತುದಿಯಲ್ಲಿ ಇಂಗ್ಲಿಷಿನ ‘ಯು’ ಆಕಾರದಲ್ಲಿ ಕತ್ತರಿಸಿಕೊಂಡು ಸ್ಟೈಲಾಗಿ ಬಂದಿದ್ದು ನೋಡಿ ಎಲ್ಲ ನಂಗೂ ಐಬ್ರೋ ಮಾಡು ಎಂದು ದುಂಬಾಲು ಬಿದ್ದವರೇ. ಮೊದಮೊದಲು ಮನೆಯಲ್ಲೇ ಮಾಡಿ, ಊರಿನ ಹೆಣ್ಣುಮಕ್ಕಳಿಗೆಲ್ಲ ಐಬ್ರೋ ಮಾಡಿದಳು. ಊರಲ್ಲಿ ನಡೆದ ಮದುವೆ ಮನೆಗೆ ಬರುವ ಊರಿನ ಹೆಣ್ಣುಮಕ್ಕಳೆಲ್ಲ ಹುಬ್ಬು ಕೆತ್ತಿಕೊಂಡು, ಸ್ಟೈಲಾಗಿರುವುದನ್ನು ನೋಡಿ ಮನೆಯ ಹೆಂಗಸರೆಲ್ಲ, ‘ನೋಡಿದ್ರೆ ಸಾಕು, ಹುಬ್ಬು ಕೆತ್ತಿಕೊಂಡು ವಿಕಾರ ಕಾಣ್ತರಿ, ಮುಖ ನೋಡಲಾಗ್ತಿಲ್ಲೆ..’ ಎಂದು ಹೇಳಿದ ಹೆಂಗಸರಿಗೂ ಒಳಗೊಳಗೇ ಪರವಾಗಿಲ್ಲ, ತಮ್ಮ ಹೆಣ್ಣುಮಕ್ಕಳು ಚೆಂದವೇ ಕಾಣಿಸುತ್ತಾರೆ ಎಂದೆನಿಸತೊಡಗಿತು.

ಆದರೆ ಊರಿನ ಗಂಡಸರಿಗೆ ಮಾತ್ರ ‘ಎಂತ ಫ್ಯಾಷನ್ ಮಾಡತ್ರೆ. ಆ ಲಲಿತಕ್ಕಂಗೊಂದು ಹ್ವಾರ್ಯ (ಕೆಲಸ) ಇಲ್ಲೆ. ನಿಂಗಕ್ಕಿಗೂ ಕೆಲ್ಸಿಲ್ಯ..’ ಎಂದು ಜೋರು ಮಾಡುತ್ತಿದ್ದರು. ಮೊದಮೊದಲು ಇದು ಒಂದೆರೆಡು ದಿನ ತಾನೆ ಎಂದು ಸುಮ್ಮನೂ ಇದ್ದರು. ಆದರೆ ಹುಡುಗಿಯರಷ್ಟೇ ಅಲ್ಲ, ಆಗಷ್ಟೇ ಮದುವೆಯಾದ ಮನೆಯ ಹೆಂಗಸರೂ ಅವಳ ಹತ್ತಿರ ಹೋಗಿ ಹುಬ್ಬು ಕೆತ್ತಿಸಿಕೊಂಡು ಬಂದು ಕನ್ನಡಿ ಮುಂದೆ ನಿಂತುಕೊಂಡು ಪೆನ್ಸಿಲ್‍ ನಲ್ಲಿ ತಿದ್ದಿತೀಡಿಕೊಳ್ಳುತ್ತಿದ್ದರು. ಇದರಿಂದ ಬೆಳಗಿನ ಮನೆವಾರ್ತೆಗಳನ್ನೆಲ್ಲ ಮುಗಿಸಿದ ಮೇಲೆ ತೋಟಕ್ಕೋ, ಗದ್ದೆಗೋ ಹೋಗಿ ಕಳೆ ತೆಗೆಯುವುದೋ, ಹೊಂಬಾಳೆಯೋ, ಹಾಳೆಬಾಗವನ್ನೋ, ಗೋಟಡಿಕೆಯನ್ನೋ ಹೆಕ್ಕುವಂಥ ಸಣ್ಣಪುಟ್ಟ ಕೆಲಸ ಮಾಡಿ ಬರುತ್ತಿದ್ದ ಹೆಣ್ಣುಮಕ್ಕಳು, ಹೆಂಗಸರೆಲ್ಲ ಕನ್ನಡಿಯ ಮುಂದೆ ನಿಂತು ಹುಬ್ಬು ತೀಡಿ, ಪೌಡರ್ ಹಚ್ಚಿಕೊಂಡು, ಸೀರೆಯನ್ನೂ ಲಂಗ ಕಾಣದಂತೆ ನೆಲಕ್ಕೆ ತಾಗುವಂತೆ ಉಟ್ಟುಕೊಳ್ಳುತ್ತಿದ್ದುದನ್ನು ನೋಡಿದರೆ, ಪರವಾಗಿಲ್ಲ, ತಮ್ಮ ಹೆಂಡತಿಯರೂ ಚೆಂದ ಇದ್ದಾರೆ ಎಂದೆನಿಸಿದರೂ ಯಾಕೋ ಇದು ಸ್ವಲ್ಪ ಅತಿರೇಕ ಅನಿಸುತ್ತಿತ್ತು ಅವರಿಗೆ. ಹೀಗೆಲ್ಲ ಪರ ವಿರೋಧಗಳ ನಡುವೆಯೇ ಲಲಿತಕ್ಕನ ಬ್ಯೂಟಿ ತಜ್ಞತೆಯ ಖ್ಯಾತಿ ಹೆಚ್ಚಿ, ಇನ್ನು ಮನೆಯಲ್ಲೇ ನಡೆಸಲು ಸಾಧ್ಯವಿಲ್ಲವೆಂದು ಕಾನಸೂರಿನಲ್ಲೊಂದು ಪುಟ್ಟ ಕೋಣೆ ಬಾಡಿಗೆ ಪಡೆದು, ಅಲ್ಲಿ ಪಾರ್ಲರ್ ನಡೆಸತೊಡಗಿ, ಅವಳ ಹೆಸರು ಈಗ ಪಾರ್ಲರ್ ಲಲಿತಕ್ಕ ಎಂದಾಗಿಬಿಟ್ಟಿತು.

ಇಂಥ ಸಮಯದಲ್ಲೇ ರಾಂ ಭಟ್ರ ಮಗಳು ಎಣ್ಣೆಗಪ್ಪಿನ ಸಾಧಾರಣ ರೂಪಿನ ಜಾನಕಿಗೂ ಮದುವೆಯಾಗದೇ ಸಾಕಷ್ಟು ವರ್ಷಗಳ ಸಂದು ಹೋಗಿದ್ದವು. ಬಂದ ಗಂಡುಗಳೆಲ್ಲ ನೋಡಿ, ಉಪ್ಪಿಟ್ಟು ಕೇಸರಿ ಬಾತು ತಿಂದು ಹೋಗಿ, ಕಡೆಗೆ ನಿರಾಕರಿಸಿಬಿಡುತ್ತಿದ್ದರು. ಇವಳಿಗೊಂದು ಮದುವೆನೇ ಇಲ್ಯೇನ ಎಂದು ರಾಂ ಭಟ್ರು ಗಂಡ ಹೆಂಡತಿ ಇಬ್ಬರೂ ಒಟ್ಟಿಗೇ ನಿಟ್ಟುಸಿರು ಬಿಡುತ್ತಿರುವ ಹೊತ್ತಿಗೇ ಜಾನಕಿಯೂ ಲಲಿತಕ್ಕನ ಪಾರ್ಲರ್‍ ಗೆ ಬಂದಳು. ಅಲ್ಲಿಂದ ಹೊರಬಂದಮೇಲೆ, ಹೆದ್ದಾರಿಯಂತಿದ್ದ ಅವಳ ಹುಬ್ಬು ಕಾಮನ ಬಿಲ್ಲಿನಂತೆ ಬಾಗಿ ನಿಂತವು. ದಪ್ಪಗೆ ಬಿಗಿಯಾಗಿ ಹೆಣೆದುಕೊಳ್ಳುತ್ತಿದ್ದ ಅವಳ ಜಡೆ ಸಡಿಲವಾಗಿ, ಕಿವಿಯ ಪಕ್ಕದಲ್ಲೊಂದು ಕುಳ್ಳ ( ಸುರಳಿ ಕೂದಲು)ಬಂದು ಕುಳಿತಿತ್ತು. ಫೇಷಿಯಲ್ ಮಾಡಿಸಿದ್ದ ಕಾರಣ ಅವಳ ಮುಖಕ್ಕೆ ಒಂದು ಕಾಂತಿತಂದುಕೊಟ್ಟಿತ್ತು. ಇಷ್ಟೆಲ್ಲ ಆದ ಅವಳೀಗ ನೋಡಲು ಸುಂದರಿಯಂತೆಯೇ ಕಂಡು, ಹಸಲರ ಪೈಕಿಯ ಮಂಜನ ಕಣ್ಣಿಗೆ ಬೀಳುವುದೇನೂ ತಡವಾಗಲಿಲ್ಲ. ಆಗಲೇ ಕಾಲೇಜು ಮುಗಿಸಿ ನೌಕರಿ ತಲಾಶೆಯಲ್ಲಿದ್ದ ಮಂಜನ ಮೇಲೆ ಜಾನಕಿಗೂ ಆಕರ್ಷಣೆ ಉಂಟಾಗಿ, ಪ್ರತಿದಿವಸ ಮಾತನಾಡುತ್ತ ಹತ್ತಿರವಾದರು. ಅಷ್ಟೊತ್ತಿಗಾಗಲೇ ಊರಿನ ಹೆಣ್ಣುಮಕ್ಕಳನ್ನೆಲ್ಲ ಹಾಳು ಮಾಡ್ತೆ ನೀನು, ಪಾರ್ಲರ್ ನಿಲ್ಲಿಸು ಎಂದೆಲ್ಲ ಲಲಿತಕ್ಕನಿಗೆ ಬೆದರಿಸಿದ್ದರು. ಈ ಯಾವ ಬೆದರಿಕೆಯೂ ಬಗ್ಗದ ಅವಳು ಪಾರ್ಲರ್‍ ಅನ್ನು ನಡೆಸಿಕೊಂಡು ಬಂದಿರುವುದಕ್ಕೆ ಊರಿನ ಹೆಣ್ಣುಮಕ್ಕಳ ಬೆಂಬಲವೇ ಆಗಿತ್ತು. ಇಂಥ ಸಮಯದಲ್ಲೇ ಜಾನಕಿ ಮತ್ತು ಮಂಜ ಇಬ್ಬರೂ ನಾಪತ್ತೆಯಾಗಿರುವುದಕ್ಕೆ ಲಲಿತಕ್ಕನೇ ಕಾರಣ ಎಂದು ಊರಿನ ಕೆಲವು ಗಂಡಸರೂ ರಾಂಭಟ್ಟರ ತಮ್ಮ ಕೇಶವನೂ ಸೇರಿಕೊಂಡು ಜಗಳವಾಡಿ, ಪಾರ್ಲರ್ ನಿಲ್ಲಿಸಬೇಕೆಂದು ಹೇಳಲು ಅಲ್ಲಿಗೆ ಬಂದಿದ್ದರು.

‘ನೋಡು ಕೇಶವಣ್ಣ, ಅದಕ್ಕೂ ಎಂಗೂ ಸಂಬಂಧಿಲ್ಲೆ. ಆನು ಪಾರ್ಲರ್ ನಡೆಸ್ತಿ ಅಷ್ಟೇಯ. ಆ ಏನು ಅದಕ್ಕೆ ಹೇಳಿಕೊಟ್ಟಿದ್ನಿಲ್ಲೆ ಹೀಂಗೆಲ್ಲ ಮಾಡು ಹೇಳಿ’ ಎಂದು ಲಲಿತಕ್ಕನೂ ಜೋರು ಧ್ವನಿಯಲ್ಲೇ ಹೇಳಿದಳು. ‘ಅವಕ್ಕೆಲ್ಲ ಅಷ್ಟೆಲ್ಲ ಧೈರ್ಯ ಎಲ್ಲಿಂದ ಬಂತು. ನಿನ್ನ ಪಾರ್ಲರ್‍ ನಿಂದ ತಾನೇ. ನಮ್ಮೂರಲ್ಲಿ ಯಾರೊಬ್ಬ ಹೆಣ್ಣುಡ್ರಿಗೂ ಊರಿನ ಗಂಡಸರ ಹತ್ರ ಮಾತಾಡಲೇ ಧೈರ್ಯ ಇತ್ತಿಲ್ಲೆ. ಈಗಿದೆಲ್ಲ ಎಲ್ಲಿಂದ ಬಂತು…’ ಎಂದು ಲಾ ಪಾಯಿಂಟು ಒಗೆದ.

ಕೇಶವಣ್ಣ, ಅದಕ್ಕೂ ಇದಕ್ಕೂ ಸಂಬಂಧಿಲ್ಯಾ ಎಂದು ಸಮಾಧಾನಿಸಲು ಬಂದ ಸುಬ್ರಾಯಣ್ಣನನ್ನು ಮಧ್ಯಯೇ ತಡೆದು, ‘ಸುಮ್ಮಂಗ ಕೂತ್ಕ ಸುಬ್ರಾಯಣ್ಣ ನೀನು, ನಿನ್ನ ತಂಗಿಗೆ ಮದುವೆಯಾಯ್ದಿಲ್ಲೆ ಹೇಳಿ ಊರಲ್ಲಿಪ್ಪ ಯಾರಿಗೂ ಮದುವೆನೇ ಆಪ್ದು ಬ್ಯಾಡ ಹೇಳಿ ಇಬ್ರೂ ಸೇರ್ಕಂಡು ಕಿತಾಪತಿ ಮಾಡ್ತಿದ್ರಾ’ ಎಂದು ಜೋರು ಮಾಡಿದ. ಹೀಗೆ ಬೆಳಗ್ಗೆ ಬೆಳಗ್ಗೆನೇ ಎಲ್ಲರೂ ಜಗಳವಾಡಿ, ಯಾವುದೂ ಬಗೆಹರಿಯದೇ ಕಡೆಗೆ ಸುಬ್ರಾಯಣ್ಣನ ಹೆಂಡತಿ ಚಹಾ ತಂದುಕೊಟ್ಟಿದ್ದನ್ನು ಎಲ್ಲರೂ ಕುಡಿದು ಪಂಚೆ ಕುಡುಗಿ ಮನೆ ಹಾದಿ ಹಿಡಿದರು.

ಕಡೆಗೆ ಜಾನಕಿ, ಮಂಜ ಏನಾದರೋ ಯಾರಿಗೂ ಗೊತ್ತಿಲ್ಲ. ಅಲ್ಲಿ ನೋಡಿದ್ವಿ ಇಬ್ರನ್ನೂ , ಇಲ್ಲಿ ನೋಡಿದ್ವಿ, ಬೆಂಗಳೂರು ಬಸ್ ಹತ್ತಿದ್ರು, ಹುಬ್ಬಳ್ಳಿ ಬಸ್ ಹತ್ತಿದ್ರು ಹೀಗೆಲ್ಲ ಒಬ್ಬೊಬ್ಬರು ಒಂದೊಂದು ರೀತಿ ಮಾತನಾಡಿಕೊಂಡು ಕಡೆಗೆ ಅದೂ ಬೇಜಾರಾಗಿ ಎಲ್ಲರೂ ಸುಮ್ಮನಾದರು. ಲಲಿತಕ್ಕನ ಪಾರ್ಲರ್ ಮಾತ್ರ ನಿರಾತಂಕವಾಗಿಯೇ ನಡೆಯುತ್ತಿತ್ತು. ಹಾಗೆಯೇ ಅವಳ ವಯಸ್ಸೂ ಏರುತ್ತ 35ನ್ನೂ ದಾಟಿಬಿಟ್ಟಿತ್ತು. ಇವಳಿಂದ ಮುಖ ತಿಕ್ಕಿಸಿ, ಬೆಳ್ಳಗೆ ಮಾಡಿಸಿಕೊಂಡ ಬೇರೆ ಹೆಣ್ಣುಮಕ್ಕಳ ಮದುವೆ ನಡೆದುಹೋಯಿತು. ಇವಳು ಮಾತ್ರ ಹೀಗೇ ಕುಳಿತಳು.

ಹೀಗೆ ಇರುವಾಗಲೇ ಅಂತೂ ಒಬ್ಬ ಗಂಡು ಲಲಿತಕ್ಕನಿಗೂ, ಅತ್ತ ಮಂಗಳಿಗೂ ಒಬ್ಬ ಗಂಡು ಸಿಕ್ಕಿದರು. ಶಿರಸಿ ತಾಲೂಕಿನ ಹಳ್ಳಿಯೊಂದರ ಜಮೀನದಾರ ಮನೆತನದ ಹುಡುಗ, ಅವನಿಗೂ ವಯಸ್ಸು 38 ಆಗಿಬಿಟ್ಟಿತ್ತು, ಅವ ಲಲಿತಾಳನ್ನು ನೋಡಲು ಬಂದರೆ, ಆ ಕಡೆ ಯಲ್ಲಾಪುರದ ಸಮೀಪದ ಹಳ್ಳಿಯೊಂದರ ಹುಡುಗ ಮಂಗಳನನ್ನು ನೋಡಿ ಒಪ್ಪಿಕೊಂಡುಬಿಟ್ಟ.

ನೋಡಲು ಚೆಂದವಿಲ್ಲದ ಲಲಿತಕ್ಕ ಕೂಡ, ಹುಬ್ಬು ಕೆತ್ತಿಕೊಂಡು, ಫೇಷಿಯಲ್ ಮಾಡಿಸಿಕೊಂಡು, ಕೂದಲನ್ನು ತುದಿಯಲ್ಲಿ ಇಂಗ್ಲಿಷಿನ ‘ಯು’ ಆಕಾರದಲ್ಲಿ ಕತ್ತರಿಸಿಕೊಂಡು ಸ್ಟೈಲಾಗಿ ಬಂದಿದ್ದು ನೋಡಿ ಎಲ್ಲ ನಂಗೂ ಐಬ್ರೋ ಮಾಡು ಎಂದು ದುಂಬಾಲು ಬಿದ್ದವರೇ.ಊರಲ್ಲಿ ನಡೆದ ಮದುವೆ ಮನೆಗೆ ಬರುವ ಊರಿನ ಹೆಣ್ಣುಮಕ್ಕಳೆಲ್ಲ ಹುಬ್ಬು ಕೆತ್ತಿಕೊಂಡು, ಸ್ಟೈಲಾಗಿರುವುದನ್ನು ನೋಡಿ ಮನೆಯ ಹೆಂಗಸರೆಲ್ಲ, ‘ನೋಡಿದ್ರೆ ಸಾಕು, ಹುಬ್ಬು ಕೆತ್ತಿಕೊಂಡು ವಿಕಾರ ಕಾಣ್ತರಿ, ಮುಖ ನೋಡಲಾಗ್ತಿಲ್ಲೆ..’ ಎಂದು ಹೇಳಿದ ಹೆಂಗಸರಿಗೂ ಒಳಗೊಳಗೇ ಪರವಾಗಿಲ್ಲ, ತಮ್ಮ ಹೆಣ್ಣುಮಕ್ಕಳು ಚೆಂದವೇ ಕಾಣಿಸುತ್ತಾರೆ ಎಂದೆನಿಸತೊಡಗಿತು.

ಈಗ ಇಬ್ಬರಿಗೂ ಒಂದು ಪೀಕಲಾಟಕ್ಕೆ ಬಂತು. ಇವರಿಗೆ ಬಂದ ಗಂಡುಗಳಿಬ್ಬರೂ ನೋಡಲೇನೋ ಇವರಿಗಿಂತ ಪರವಾಗಿಲ್ಲ ಎಂಬಂತೆಯೇ ಇದ್ದರು. ಜೊತೆಗೆ ಈಗಾಗಲೇ ಇವರಿಗೂ ವಯಸ್ಸು 35 ದಾಟಿದ್ದರಿಂದ, ಎಂಥವನಾದರೂ ಸರಿಯೇ, ಎಂಬ ಮನಸ್ಥಿತಿಗೆ ಬಂದುಮುಟ್ಟಿದ್ದರು. ಆದರೆ ಲಲಿತಕ್ಕನನ್ನು ನೋಡಲು ಬಂದವ ಪಂಚೆ ಉಟ್ಟುಕೊಳ್ಳುತ್ತಿದ್ದ, ಜೊತೆಗೆ ಜುಟ್ಟನ್ನೂ ಬಿಟ್ಟಿದ್ದ. ತನಗೆ ‘ಪ್ಯಾಂಟ್ ಹಾಕುವವನೇ ಬೇಕು, ಇವ ಪ್ಯಾಂಟು ಹಾಕುವುದಿಲ್ಲ’ ಎಂದು ಅಳತೊಡಗಿದಳು ಲಲಿತಾ. ‘ಹೇ.. ಸುಮ್ಮಂಗಿರೆ. ಅವಂಗೆ ಮೊದಲಿನಿಂದಲೂ ರೂಢಿ ಇಲ್ಯಪ. ನೀ ಮದುವೆಯಾಗಿ ಹೋದಮೇಲೆ ಪ್ಯಾಂಟು ಹಾಕದನ್ನು ಕಲಿಸು’ ಎಂದ ಸುಬ್ರಾಯಣ್ಣ. ಒಟ್ಟಿನಲ್ಲಿ ಅವನಿಗೆ ತಂಗಿ ಮದುವೆ ಆದರೆ ಸಾಕಿತ್ತು. ಅಂತೂ ಇಂತೂ ಅವಳನ್ನು ಸಮಾಧಾನ ಮಾಡಿ ಮದುವೆಗೆ ಒಪ್ಪಿಸಿದರು
ಇತ್ತ ಮಂಗಳನ ಗಂಡ ಪ್ಯಾಂಟೇನೋ ಹಾಕಿಕೊಳ್ಳೂತ್ತಿದ್ದ. ಆದರೆ ತಲೆಮೇಲೆ ಒಂದೂ ಕೂದಲಿರಲಿಲ್ಲ. ‘ಮಂಗಳಿ ನಿನ್ನ ಗಂಡ ಪ್ಯಾಂಟಾದ್ರೂ ಹಾಕ್ಯತ್ನಲೆ, ಎನ್ನ ಗಂಡ ಪಂಜೆ ಉಟಗತ್ತ’ ಎಂದು ಬೇಸರದಿಂದ ಲಲಿತಾ ನುಡಿದರೆ, ‘ನಿನ್ನ ಗಂಡಂಗೆ ತಲೆಯ ಮೇಲೆ ಕೂದಲಾದ್ರೂ ಇದ್ದು, ಎನ್ನ ಗಂಡನ ತಲೆ ಕೋಳಿಮೊಟ್ಟೆಯಲೇ…’ ಎಂದು ಅಲವತ್ತುಕೊಂಡಳು ಮಂಗಳಾ. ‘ಬೇಕಾದ್ದಾಗಲಿ, ಮದುವೆಯಾದಮೇಲೆ ಅವನ ಜುಟ್ಟು ಕತ್ತರಸವನೇಯ.., ಪ್ಯಾಂಟೂ ಹಾಕಿಸ್ತಿ ಅವಂಗೆ’ ಎಂದು ಲಲಿತಾ ಹೇಳಿದರೆ, ‘ನಿನ್ನ ಸಮಸ್ಯೆಗೆ ಪರಿಹಾರನಾದ್ರೂ ಇದ್ದು ಲಲ್ಲಿ, ಎನ್ನ ಗಂಡನ ತಲೆ ಮೇಲೆ ಕೂದಲು ಹ್ಯಾಂಗೆ ತರಸ್ಲೇ ಆನು..’ ಎಂದು ಪರಿಹಾರವೇ ಇಲ್ಲದ ಸಮಸ್ಯೆ ತನ್ನದು ಎಂಬಂತೆ ದುಃಖಪೂರಿತ ಧ್ವನಿಯಲ್ಲಿ ಹೇಳಿದಳು ಮಂಗಳಾ. ಹೀಗೆ ಒಬ್ಬರಿಗೊಬ್ಬರು ಸಾಂತ್ವನ ಹೇಳಿಕೊಂಡು ತಮ್ಮತಮ್ಮೊಳಗೇ ಸಮಾಧಾನಮಾಡಿಕೊಂಡು ಅಂತೂ ಇಬ್ಬರದ್ದೂ ಮದುವೆಯಾಯಿತು.

ಮದುವೆಯಾಗಿ ಅವನ ಮನೆಗೆ ಹೋದವಳೇ ಲಲಿತಕ್ಕ ಮಾಡಿದ ಮೊದಲ ಕೆಲಸವೆಂದರೆ, ಒಂದು ದಿನ ಗಡದ್ದಾಗಿ ಊಟಮಾಡಿ ರಾತ್ರಿ ಇತ್ಲಾಗಿನ ಪರಿವೆಯೇ ಇಲ್ಲದವನಂತೆ ಮಲಗಿದ ತಿಮ್ಮಣ್ಣನ ಜುಟ್ಟ ಕತ್ತರಿಸಿ, ಅಲ್ಲೇ ಕುಳಿತು ಅವನ ಕೂದಲನ್ನು ಕ್ರಾಪ್ ಮಾಡಿ, ಚೆನ್ನಾಗಿ ಬಾಚಿ, ನೋಡುತ್ತ ಕುಳಿತಳು. ತಲೆಯಮೇಲೇನೋ ಹರಿದಂತಾಗಿ ಫಟಕ್ಕನೆ ಎದ್ದು ಕುಳಿತ ತಿಮ್ಮಣ್ಣನಿಗೆ ಎದುರಿಗೆ ತನ್ನ ತಲೆಯನ್ನೇ ತದೇಕಚಿತ್ತದಿಂದ ನೋಡುತ್ತ ಕುಳಿತ ಹೆಂಡತಿ, ಏನೋ ಅನುಮಾನ ಬಂದು ತಲೆಸವರಿಕೊಂಡವನಿಗೆ ಅಚ್ಚರಿ. ತನ್ನ ತಲೆ ಮೊದಲಿನಂತಿಲ್ಲ ಎಂದು ಕನ್ನಡಿ ನೋಡಿದರೆ, ಅವನ ಜುಟ್ಟು ಮಾಯವಾಗಿತ್ತು. ಇದೆಂತದ್ದೆ ನಿಂದು ಎಂದು ತಲೆ ಸವರುತ್ತ ಕೇಳಿದ. ‘ಇವತ್ತು, ಜುಟ್ಟ ಮಾತ್ರ ತೆಗದ್ದಿ, ನಾಳೆಯಿಂದ ನೀವು ಪ್ಯಾಂಟ್ ಹಾಕ್ಯಳವು, ಇಲ್ದಿದ್ದರೆ ಪಂಜೆ ಬಿಚ್ಹಾಕ್ಬಿಡ್ತಿ’ ಎಂದಳು ಕಠೋರವಾಗಿ. ‘ನೀ ಎಂತ ಬೇಕಾದ್ರು ಮಾಡಕ್ಯ, ಆ ಪ್ಯಾಂಟ್ ಹಾಕವಲ್ಲ’ ಎಂದು ಮೆಲ್ಲಗೆಯಾದರೂ ಗಟ್ಟಿಯಾಗಿ ಹೇಳಿ, ಮುಖದವರೆಗೂ ಮುಸುಕೆಳೆದು ಮಲಗಿ ಬಿಟ್ಟ ತಿಮ್ಮಣ್ಣ.

ಮಾರನೇ ದಿನ ಎಲ್ಲರೂ ತಿಮ್ಮಣ್ಣನನ್ನು ನೋಡಿ, ‘ಎಂತದೋ ತಿಮ್ಮಣ್ಣ ನಿನ್ನ ಹೆಣ್ತಿ ಬರುಬರ್ತಿದ್ಹಾಂಗೇ ಜುಟ್ಟನ್ನು ಕಿತ್ಗಂಡುಬಿಟ್ಲಲ್ಲೋ’ ಎಂದು ಮುಸಿಮುಸಿ ನಗೆಯಾಡಿದರೂ, ತಿಮ್ಮಣ್ಣ ತಲೆ ಸವರಿಕೊಂಡು ನಗುತ್ತಿದ್ದ. ಅವನಿಗೂ ಈ ಜುಟ್ಟುಗಿಂತ ಕ್ರಾಪ್‍ ಥರ ಇದ್ದ ಈ ತಲೆಯೇ ಚೆಂದ ಎನಿಸಿರಬೇಕು.

ಆದರೆ ಲಲಿತಕ್ಕ ಅದೆಷ್ಟೇ ಹರಸಾಹಸ ಪಟ್ಟರೂ ಗಂಡನಿಗೆ ಪ್ಯಾಂಟ್ ಮಾತ್ರ ಹಾಕಲು ಸಾಧ್ಯವಾಗಲೇ ಇಲ್ಲ. ಅದೇನೋ ಅವನಿಗೆ ಪ್ಯಾಂಟ್ ಹಾಕಿದರೆ ತನಗೆ ಸರಾಗವಾಗಿ ನಡೆಯಲೇ ಬರುವುದಿಲ್ಲವೆಂಬ ಹೆದರಿಕೆ. ತಮ್ಮಂದಿರೆಲ್ಲ ಪ್ಯಾಂಟ್‍ ಹಾಕಿದರೂ, ಚಿಕ್ಕಂದಿನಿಂದಲೂ ಪಂಚೆಯೇ ಉಟ್ಟು ಅಭ್ಯಾಸವಿದ್ದ ತಿಮ್ಮಣ್ಣನಿಗೆ ಪ್ಯಾಂಟ್ ಎಂದರೆ ವಿಚಿತ್ರ ಭಯ. ಆತಂಕ. ಅವ ಪ್ಯಾಂಟು ಹಾಕುವುದಿಲ್ಲವೆಂದು ತಿಳಿದು ಅತ್ತೂ ಅತ್ತೂ ಇಟ್ಟಳು ಲಲಿತಾ, ಕನ್ನಡಿಯ ಮುಂದೆ ನಿಂತು ಕಿವಿಯ ಪಕ್ಕ ಇಳಿಬಿದ್ದು, ಕೆನ್ನೆಗೆ ಬಡಿಯುತ್ತಿದ್ದ ಸುರಳಿಯಾಕಾರದ ಕೂದಲು, ಕಿವಿಯಲ್ಲಿ ನೇತಾಡುತ್ತಿದ್ದ ದೊಡ್ಡದಾದ ರಿಂಗು, ಸಡಿಲ ಜಡೆ, ಕಾಮನ ಬಿಲ್ಲಿನಂತೆ ಬಾಗಿದ ಹುಬ್ಬು ಎಲ್ಲವೂ ಅವಳನ್ನು ಅಣಕಿಸಿದಂತಾಯಿತು. ಹಿಂದೆಯೇ ಪ್ಯಾಂಟ್‍ ಹಾಕಿಕೊಂಡು ನಾಯಕಿಯರ ಜೊತೆ ನಿಧಾನಕ್ಕೆ ಹಾರುತ್ತ ಹಾಡಿಕೊಂಡು ಹೋಗುವ ಅನಂತ್‍ ನಾಗನೂ ನೆನಪಾಗಿ ಸಿಟ್ಟಿನಿಂದ ತನ್ನ ಉಬ್ಬು ಹಲ್ಲುಗಳಿಂದ ಬಲವಾಗಿ ತುಟಿಕಚ್ಚಿದಳು.

ಇಂಥ ಲಲಿತಕ್ಕ ಅವಳ ಊರಿನಲ್ಲೂ ಪಾರ್ಲರ್ ತೆರೆಯುವಂಥ ದಿನ ಬಂತು. ಅಷ್ಟೊತ್ತಿಗೆ ಅವಳು ಬ್ಯೂಟಿಷಿಯನ್ ಎಂದು ಅವಳ ಹುಬ್ಬು, ಹೇರ್ಸ್ಟೈ ಲ್ ನೋಡಿದ ಊರಿನ ಹೆಣ್ಣುಮಕ್ಕಳೆಲ್ಲ ತಮಗೂ ಹಾಗೇ ಮಾಡಿಕೊಡೆಂದು ಅವಳ ಮನೆಗೆ ಬರತೊಡಗಿದರು. ಮನೆಯಲ್ಲೇ ಒಂದು ಸಣ್ಣ ಕೋಣೆಯಲ್ಲೇ ಅವರಿಗೆಲ್ಲ ಐಬ್ರೋಸ್, ಫೇಷಿಯಲ್ ಮಾಡತೊಡಗಿದಳು. ಶಿರಸಿಯಲ್ಲೂ ಒಂದೋ ಎರಡೋ ಬ್ಯೂಟಿ ಪಾರ್ಲರ್ ಇರುವ ಕಾರಣಕ್ಕೆ ಅಷ್ಟುದೂರ ಹೋಗುವವರ್ಯಾರೆಂದು ಲಲಿತಕ್ಕನ ಬಳಿಯೇ ಮಾಡಿಸತೊಡಗಿ, ಲಲಿತಕ್ಕನ ಮನೆ ಎಂಬುದು ಪಾರ್ಲರ್ ಥರವೇ ಆಗಿ, ಅವಳ ಅತ್ತೆ, ಭಾವಂದಿರಿಗೆಲ್ಲ ಸ್ವಲ್ಪ ಮುಜುಗರ ಆಗತೊಡಗಿತು.

ಹೀಗಿರುವಾಗಲೇ ಊರಿನ ತುದಿಮನೆಯ ಕಿರಣ ಆಗಷ್ಟೇ ಕಾಲೇಜು ಮೆಟ್ಟಿಲು ಹತ್ತಿದವನಿಗೆ ಲಲಿತಕ್ಕನ ಬ್ಯೂಟಿಪಾರ್ಲರ್ ಕುರಿತು ಕುತೂಹಲವಾಗಿ ಅವಳ ಮನೆಗೆ ಒಂದು ದಿನ ಹೋದ. ‘ಲಲಿತಕ್ಕ.. ನೀ ಬರೀ ಹೆಣ್ಣುಡ್ರ ಮುಖ ಮಾತ್ರ ಚೆಂದ ಮಾಡತ್ಯಲೇ.. ಎಂಗಕ್ಕೂ ಸ್ವಲ್ಪ ಟಿಪ್ಸ್ ಕೊಡು ನೋಡ’ ಎಂದ. ‘ಅಯ್ಯ. ಗಂಡಸ್ರಿಗೆಲ್ಲ ಎಂತ ಚೆಂದ ಮಾಡದು ತಗಳಾ. ಚೆಂದ-ಪಿಂದ ಎಲ್ಲ ಹೆಣ್ಣುಡ್ರಿಗೇಯಲ್ಲ. ನಿಂಗ ಹ್ಯಾಂಗ್ ಇದ್ರೂ ನಡೀತಲ.. ಕೇಳರ್ಯಾರ ನಿಂಗ್ಳನ್ನ’ ಎಂದು ಕಾಲೆಳೆದಳು ಲಲಿತಕ್ಕ.

‘ಏ.. ಇಲ್ಯೆ ಮಾರಾಗಿತ್ತಿ.. ಈಗೀಗ ಹೆಣ್ಣುಡ್ರೂ ಚೆಂದ ನೋಡ್ತ… ಸುಮಾರಾಗಿಪ್ಪರನ್ನು ಒಪ್ಪುತ್ವಿಲ್ಲೆ. ಎಂಗೂ ಫೇಷಿಯಲ್ ಮಾಡು’ ಎಂದು ಪಟ್ಟು ಹಿಡಿದು ಕೂತ.

(ಇಲ್ಲಸ್ಟ್ರೇಷನ್ ಕಲೆ: ರೂಪಶ್ರೀ ಕಲ್ಲಿಗನೂರ್)

ಸರಿ ಎಂದು ಅವನ ಮೀಸೆ ಟ್ರಿಮ್ ಮಾಡಿ, ಹುಬ್ಬು ಟ್ರಿಮ್ ಮಾಡಿ, ಫೇಷಿಯಲ್ಲೂ ಮಾಡಿ ಕಳಿಸಿದಳು. ಹೀಗೆ 15 ದಿವಸಕ್ಕೊಮ್ಮೆ ಬರುವ ಕಿರಣ್, ಅವನ ನಾಲ್ಕಾರು ದೊಸ್ತ್ರು ಎಲ್ಲ ಸೇರಿ ಲಲಿತಕ್ಕನ ಮನೆಯಲ್ಲಿ ಗಂಡು-ಹೆಣ್ಣುಮಕ್ಕಳೆಲ್ಲರ ಜಂಗುಳಿ ಜಾಸ್ತಿಯಾಗಿ, ಲಲಿತಕ್ಕನಿಗೆ ಮನೆಕೆಲಸ ಮಾಡಲೂ ಪುರುಸೊತ್ತಿಲ್ಲದಂತಾಯಿತು. ಆದರೆ ಸೊಸೆ ಬಾಯಿಗೆ ಹೆದರಿ ಅತ್ತೆ, ಭಾವಂದಿರು ಸುಮ್ಮನಾದರೂ ತಿಮ್ಮಣ್ಣನಿಗೆ ಕಿರಣ ಮತ್ತು ಅವನ ದೋಸ್ತರು ಬರುವುದ್ಯಾಕೋ ಇರಿಸುಮುರಿಸಾಯಿತು.

ಒಂದೆರೆಡು ಸಲ ಅದನ್ನು ಹೆಂಡತಿಯ ಬಳಿ ತೋಡಿಕೊಂಡೂ ಬಿಟ್ಟ. ‘ನೋಡು ಲಲ್ಲಿ, ಹೆಣ್ಣುಮಕ್ಕಳೇನೋ ಬತ್ತ ಸರಿ. ಆದ್ರೆ ಈ ಗಂಡುಡ್ರೆಲ್ಲ ಬಪ್ಪದು ಅಷ್ಟು ಸರಿ ಕಾಣ್ತಿಲ್ಲೆ ನೋಡು. ಹೆಣ್ಣುಡ್ರೂ, ಗಂಡುಡ್ರೂ ಇಬ್ರೂ ಸೇರಕ್ಯಂಬುದು, ಕಡಿಗೆ ಎಂತಾದ್ರೂ ಎಡವಟ್ಟಾಪ್ದು, ಇದೆಲ್ಲ ನಮಗೆಂತಕ್ಕೆ ಬೇಕು. ಸುಮ್ನೆ ಶಿರಸಿ ಪ್ಯಾಟೇಲಿ ಬೇಕಾದಷ್ಟು ಚೌರದಂಗಡಿ ಇದ್ದು ಅಲ್ಲಿಗೇ ಹೋಗ್ಲಿ ಅವು. ಇಲ್ಲಿಗೆ ಬಪ್ಪದು ಬ್ಯಾಡ’ ಎಂದುಬಿಟ್ಟ. ಅಷ್ಟೆಲ್ಲ ಜೋರಾಗಿ ಮಾತನಾಡದ ತಿಮ್ಮಣ್ಣ ಕೂಡ ಅವತ್ತು ಧ್ವನಿ ಏರಿಸಿ ಮಾತನಾಡಿದ್ದು ಲಲಿತಕ್ಕನಿಗೆ ಸಿಟ್ಟು ಬರುವ ಬದಲು ಒಳಗೊಳಗೇ ಖುಷಿಯಾಯಿತು. ಅಲ್ಲಿಗೆ ಗಂಡನಿಗೆ ತಾನು ಬೇರೆ ಗಂಡುಹುಡುಗ್ರಹತ್ರ ಮಾತನಾಡೋದು ಸೈರಿಸಲಾಗ್ತಾ ಇಲ್ಲ ಎಂಬುದನ್ನು ಅರಿತು, ಈಗ ಮತ್ತೆ ತನ್ನ ಪಾಯಿಂಟು ಇಟ್ಟಳು. ‘ಆನು ಹೇಳಿದ್ದು ನಿಂಗ ಕೇಳತ್ರಿಲ್ಲೆ ಎಂದಮೇಲೆ ನಿಂಗ ಹೇಳಿದ್ದು ಆ ಎಂತಕ್ಕೆ ಕೇಳವು…’ ಎಂದು ಬೇಕೆಂದೇ ಜೋರು ಧ್ವನಿಯಲ್ಲಿ ಹೇಳಿ ಒಳನಡೆದಳು. ಅವಳೇನು ಹೇಳುತ್ತಾಳೆಂದು ತಿಮ್ಮಣ್ಣನಿಗೂ ಅರಿವಾಗಿ ಅವನೂ ಒಂದೂ ಮಾತನಾಡದೆ ತೋಟದ ಕಡೆಗೆ ನಡೆದ. ಅಂದಿನಿಂದ ಅವಳು ಬೇಕೆಂತಲೇ ಕಿರಣ, ಸುಭಾಶ್, ಮುಂತಾದ ಹುಡುಗರನ್ನು, ಮನೆಯಲ್ಲೇ ಕೂರಿಸಿಕೊಂಡು ಹೆಚ್ಚು ಹೊತ್ತು ಹರಟೆಹೊಡೆಯುವುದು ಹೆಚ್ಚಾಯಿತು. ಇತ್ತ ತಿಮ್ಮಣ್ಣನಿಗೂ ಇವೆಲ್ಲ ಸರಿಬರುತ್ತಿರಲಿಲ್ಲ. ಅದಕ್ಕೆ ಸರಿಯಾಗಿ ಊರಿನ ಮುಖಂಡರು, ಮನೆಯಲ್ಲಿ ಅಮ್ಮ ಎಲ್ಲರೂ ‘ತಿಮ್ಮಣ್ಣ ಎಂತಕ್ಕೋ ಇದೆಲ್ಲ ಸರಿಹೋಗ್ತಿಲ್ಯಾ. ನಿನ್ನ ಹೆಣ್ತಿಗೆ ಸ್ವಲ್ಪ ಬುದ್ಧಿ ಹೇಳು’ ಎಂದು ಒಂದೇ ಸಮನೆ ಹೇಳತೊಡಗಿದರು. ತಿಮ್ಮಣ್ಣನಿಗೂ ಏನು ಮಾಡಬೇಕೆಂದೇ ಹೊಳೆಯಲಿಲ್ಲ. ಮಾತು ಕೇಳದ ಹೆಂಡತಿಯನ್ನು ಎದುರು ಹಾಕಿಕೊಳ್ಳಲು ಅವನಿಂದಾಗುತ್ತಿರಲಿಲ್ಲ. ಇದೊಂದು ವಿಷಯ ಬಿಟ್ಟರೆ ಮಿಕ್ಕೆಲ್ಲ ವಿಷಯದಲ್ಲೂ ಲಲಿತಕ್ಕ ಅವನಿಗೆ ತಕ್ಕವಳೇ ಆಗಿದ್ದಳು. ಮನೆಯಲ್ಲಿ ಬ್ಯೂಟಿಪಾರ್ಲರ್ ನಡೆಸಿದರೂ ಮನೆಗೆಲಸಗಳನ್ನ ಯಾವುದೂ ತಪ್ಪಿಸದೆ, ಎಲ್ಲರಿಗೂ ಹೇಗೆ ಬೇಕೋ ಹಾಗೆಯೇ ಮಾಡಿಹಾಕುತ್ತಿದ್ದಳು. ತುಂಬ ತಡವಾಗಿ ಮದುವೆಯಾಗಿದ್ದ ಕಾರಣಕ್ಕೋ ಏನೋ.. ತಿಮ್ಮಣ್ಣನಿಗೂ ಹೆಂಡತಿ ಎಂದರೆ ವ್ಯಾಮೋಹವಿತ್ತು. ಆದರೆ ಈಗ ಈ ಇಕ್ಕಟ್ಟಿನಿಂದ ಪಾರಾಗುವ ಬಗೆ ಅವನಿಗೂ ತಿಳಿಯಲಿಲ್ಲ. ಅಷ್ಟೊತ್ತಿಗಾಗಲೇ ತಮ್ಮಂದಿರ ಪ್ಯಾಂಟನ್ನು ಹಾಕಿ ರೂಮಲ್ಲೇ ಅತ್ತಿಂದಿತ್ತ, ಇತ್ತಿಂದತ್ತ ನಡೆದಾಡಿ ಪ್ರಾಕ್ಟೀಸು ಮಾಡತೊಡಗಿದ್ದ ಕೂಡ.

ಅವತ್ತೊಂದಿನ ತಿಮ್ಮಣ್ಣ ಬೆಳಗ್ಗೆಯೇ ಶಿರಸಿ ಪ್ಯಾಟಿಗೆ ಹೋಗಿದ್ದ ಸಂತೆಗೆ. ಪ್ರತಿ ಮಂಗಳವಾರದ ಸಂತೆಗೆ ಮನೆಯಲ್ಲಿ ಬೆಳೆದ ವೀಳ್ಯದೆಲೆಯನ್ನು ಮಾರಾಟಮಾಡುತ್ತಾನೆ. ಎಲೆಯನ್ನು ಮಾರಾಟಮಾಡಿ, ಸಂತೆ ತಿರುಗಾಡಿ ಒಂದಷ್ಟು ತರಕಾರಿ, ಏನಾದರೂ ತಿಂಡಿ ಕಟ್ಟಿಸಿಕೊಂಡು ಸಂಜೆ 6 ಗಂಟೆ ಗಾಡಿಗೆ (ಬಸ್ಸು) ಬಂದು ಮನೆ ಸೇರಿಕೊಳ್ಳುತ್ತಿದ್ದ. ಅವತ್ತೂ ಹಾಗೆಯೇ ಹೋದವನು ಸಂಜೆ ಬರುವ ವೇಳೆಗೆ ಲಲಿತಕ್ಕನ ಪಾರ್ಲರ್ ಕೆಲಸ ಇನ್ನೂ ಮುಗಿದಿರಲಿಲ್ಲ. ಊರಲ್ಲಿ ಹುಡುಗಿಯೊಬ್ಬಳಿಗೆ ಮದುವೆ ನಿಕ್ಕಿಯಾಗಿ, ಅವಳಿಗೂ ಅವಳ ಗೆಳತಿಯರಿಗೂ ವಿಶೇಷವಾದ ಫೇಷಿಯಲ್, ಹೇರ್‍ ಕಟ್, ಐಬ್ರೋ ಎಲ್ಲ ಮಾಡಿ ಮುಗಿಸೋ ಹೊತ್ತಿಗೆ ರಾತ್ರಿ 8 ಗಂಟೆಯಾಗಿಹೋಯಿತು.


ಎಲ್ಲ ಮುಗಿಸಿ ಹೊರಬಂದು, ಕೈಕಾಲು ತೊಳೆದು ಕೋಣೆಗೆ ಹೋದಳು ಡ್ರೆಸ್ ಬದಲಾಯಿಸಲು. ಸೀರೆ ಬದಲಾಯಿಸಿ ಬೇರೆ ಸೀರೆಉಟ್ಟು ದೇವರಮುಂದೆ ಸ್ವಲ್ಪ ಹೊತ್ತು ಕುಳಿತು ಶ್ಲೋಕ, ಭಜನೆ ಮಾಡಿ, ರಾತ್ರಿಯ ಊಟಕ್ಕೆ ಸಿದ್ಧತೆ ಮಾಡುವುದು ಅವಳ ಕೆಲಸವಾಗಿತ್ತು. ಹಾಗೆಯೇ ಮಾಡಲು ಕೋಣೆಗೆ ಹೋದರೆ ಕೋಣೆಯ ಕಪಾಟಿನ ಪಕ್ಕದ ಮೂಲೆಯಲ್ಲೊಂದು ಕವರ್ ಕಣ್ಣಿಗೆ ಬಿತ್ತು. ಏನೆಂದು ಬಿಡಿಸಿ ನೋಡಿದರೆ ಅದರಲ್ಲಿ ಎರಡು ಪ್ಯಾಂಟ್ಗುಳಿದ್ದವು. ಅದನ್ನು ನೋಡಿದ ಲಲಿತಕ್ಕನ ಮುಖದಲ್ಲಿ ಕಿರುನಗೆ ಹಾದುಹೋಗಿ ಅದೇ ನಗೆಯಲ್ಲೇ ಹೊರಬಂದರೆ ತರಕಾರಿ ಚೀಲವನ್ನು ಬಿಡಿಸುತ್ತ ವಾರೆಗಣ್ಣಲ್ಲೇ ತನ್ನೆಡೆಗೆ ನೋಡಿ ನಕ್ಕ ತಿಮ್ಮಣ್ಣನ ಮುಖ ಕಂಡ ಲಲಿತಕ್ಕನಿಗೆ ನಗು ತಡೆಯಲಾಗಲಿಲ್ಲ. ಅವಳ ನಗು ಹೆಬ್ಬಾಗಿಲಲ್ಲಿ ಕೂತ ಅತ್ತೆ, ಭಾವಂದಿರಿಗೂ ಕೇಳಿಸಿತು.