”ನನಗೆ ಹೊಸ ಕಥೆಯೊಂದು ಶುರುವಾಗುವ ಮುನ್ಸೂಚನೆ ಮುದ ನೀಡಿತ್ತು. ನಾಳಿನ ಬೆಳಗು ನನಗೂ ನನ್ನ ಮಗುವಿಗೂ ಅಗೋಚರ ಸಂತುಷ್ಟಿಯ ಬದುಕನ್ನು ಕಟ್ಟಿಕೊಡುವ ಮೊದಲ ದಿನವಾಗಬೇಕೆಂಬ ಗಟ್ಟಿ ಬಯಕೆಯೊಂದು ನನ್ನ ಮೊಗದಲ್ಲಿ ನಗುವಾಗಿ ಹುಟ್ಟಿ ಶ್ರೀಧನರನ ಕಣ್ಣುಗಳಲ್ಲೂ ಮಿಂಚಿ ಮರೆಯಾಯಿತು. ಅವನು ನೆಮ್ಮದಿಯ ನಿಟ್ಟುಸಿರು ಬಿಟ್ಟು ಮೆಲ್ಲಮೆಲ್ಲನೆ ತಿರುಗಿ ನಮ್ಮನ್ನೇ ನೋಡುತ್ತಾ ಬಂದ ದಾರಿ ಹಿಡಿದ. ಏನೂ ಅರಿಯದ ಕಂದನು ಕೇಕೆ ಹಾಕುತ್ತಾ ನನ್ನ ಸೊಂಟದಲ್ಲಿ ಕೂತು ಚಪ್ಪಾಳೆ ತಟ್ಟುತ್ತಿತ್ತು”
ಸದ್ದು ಮಾಡಿ ಹ್ಯಾಂಗ ಹೇಳಲಿ?’ ಲೇಖಕಿ ಮಧುರಾಣಿ ಬರೆಯುವ ಹೆಣ್ಣೊಬ್ಬಳ ಅಂತರಂಗದ ಪುಟಗಳ ಹದಿನಾಲ್ಕನೆಯ ಕಂತು.

 

ಮೆಲ್ಲಗೆ ಮಾಗಿಯ ಚಳಿ ಮಾಗಿ ಹಿತವಾದ ಪಡುವಣ ಗಾಳಿ ಮೈಗೆ ಮುತ್ತಿಕ್ಕುತ್ತಿತ್ತು. ಮೂರ್ನಾಲ್ಕು ತಿಂಗಳ ಬಾಣಂತನ ಮೈಗೆ ಹೊಸ ಹೊಳಪು ನೀಡಿತ್ತು. ಮಂಡಿಯವರೆಗೆ ಬೆಳೆದು ನಿಂತ ದಟ್ಟ ಕಪ್ಪು ಕೂದಲು ಬಿಳಿ ಮೈಮಾಟಕ್ಕೆ ಒಮ್ಮೊಮ್ಮೆ ಮರೆಯಾಗುತ್ತಾ ಒಮ್ಮೊಮ್ಮೆ ಸ್ವಲ್ಪವೇ ತೆರೆದಿಡುತ್ತಾ ನನಗೆ ನಾನೇ ಚಂದಗಾಣುತ್ತಾ ದಿನಗಳು ಕಳೆಯುತ್ತಲೇ ಇದ್ದವು. ಚೈತ್ರವು ಅರಳಿ ಟಿಸಿಲಾದಂತೆ ಹೊಳೆದು ಹೂನಗುತ್ತಿದ್ದ ಕಂದನ ಮುಖ ನೋಡುವಾಗ ‘ನಾನು ತಾಯಾದೆನಾ’ ಎಂದು ನನಗೇ ಆಶ್ಚರ್ಯ. ಕೆಲವು ಕಾಲೇಜು ಗೆಳತಿಯರು ಬಂದು ನೋಡಿ ಹೋದರು. ಅವರಿಗೆಲ್ಲ ಈ ಪದವಿ ಏನೋ ಕುತೂಹಲದ್ದು. ಏನೇನೋ ಕೇಳಿದರು. ಸಂಸಾರದ ಅನುಭವ, ಮಗು ಹೊಟ್ಟೇಲಿದ್ದಾಗಿನ ಭಾವ, ಹೆರುವ ನೋವಿನ ಕ್ಷಣಗಳು, ಆಸ್ಪತ್ರೆಯಲ್ಲಿ ಎಲ್ಲ ಬಿಚ್ಚಿ ಒಳಕಳಿಸಿದಾಗ ಗಂಡಸು ಡಾಕ್ಟರುಗಳು ಇದ್ದ ಬಗ್ಗೆ… ಇವೆಲ್ಲಾ ಕಣ್ಣಿಗೆ ಕಟ್ಟಿದಂತೆ ವಿವರಿಸಬೇಕೆಂಬ ಆತುರದಲ್ಲಿದ್ದರು.

ನಾಮಕಾವಸ್ಥೆಗೆ ಮಗು ನೋಡಿ ಮುದ್ದಾಡಿದರು. ನಾನು ಏನು ಬೇಕಾದರೂ ಹೇಳಬಹುದಿತ್ತು, ಆದರೆ ಸಂಸಾರದ ಅನುಭವಕ್ಕೆ ಬೇರೆ ಬಣ್ಣ ಬಳಿಯಬೇಕಿತ್ತು. ನಿಜದ ಬಣ್ಣ ಯಾರೊಟ್ಟಿಗೂ ಬಯಲಾಗಕೂಡದೆಂದು ನನಗೆ ನಾನೇ ಒಪ್ಪಂದ ಮಾಡಿಕೊಂಡಿದ್ದೆ. ಅದಕ್ಕೊಂದು ಕಾರಣವೂ ಇತ್ತು. ದುಃಖವೋ ಸಂಕಟವೋ ಹಲ್ಲು ಕಚ್ಚಿ ನುಂಗಿಬಿಟ್ಟರೆ ಮನಸಿನ ಧೀಃಶಕ್ತಿ ಹೆಚ್ಚಿಬಿಡುವುದು ಅನ್ನೋ ನಂಬಿಕೆ. ಹಾಗೇ ಹೇಳಿಕೊಳ್ತಾ ಹೋದರೆ ನಿರ್ಧಾರಗಳು ಧೃಡವಾಗಲ್ಲ ಅನ್ನಿಸಿತ್ತು. ಕಲ್ಲಿನಂತಹ ನಿರ್ಧಾರಗಳನ್ನು ತೆಗೆದುಕೊಳ್ಳುವ ಕಾಲ ಹತ್ತಿರಿತ್ತಲ್ಲಾ… ಹಾಗಾಗಿ ಮನಸು ಬೇರೆಯದೇ ಇದ್ದರೂ ಸುಮ್ಮನೆ ಎಲ್ಲರೊಟ್ಟಿಗೆ ಮಾಮೂಲೀ ದೇಶಾವರಿ ಇದ್ದುಬಿಟ್ಟಿದ್ದೆ. ನೋಡಲು ಬಂದವರೆಲ್ಲಾ ಹೊರಟುಹೋದರು. ಆದರೆ ಅಪ್ಪ ಬರಲಿಲ್ಲ.

ಅಂದು ನಾನು ಶ್ರೀಧರ ಹಿತ್ತಿಲ ಜಗುಲಿಯ ಬಳಿ ಹಾಕಿದ್ದ ಬಸಳೆ ಬಳ್ಳಿಯ ಪಕ್ಕ ಕೂತು ಮಾತಾಡುತ್ತಿದ್ದೆವು. ಅವನಿಗೀಗ ಒಂದು ಪಾರ್ಟ್ ಟೈಮ್ ಕೆಲಸವಿತ್ತು. ಮನೆಯಲ್ಲಿ ನಾನಿದ್ದದ್ದು ಅವನಿಗೆ ಉಸಿರಾಡಲು ತಾವು ಕೊಟ್ಟಂತಿತ್ತು. ಇತ್ತೀಚೆಗೆ ಅಮ್ಮನೊಟ್ಟಿಗೆ ಜಗಳ ಹೆಚ್ಚೇ ಕಾಯುತ್ತಿದ್ದ. ನಾನು ಇಬ್ಬರನ್ನೂ ಬೈದು ಸುಮ್ಮನಾಗಿಸುತ್ತಿದ್ದೆ. ಅದಕ್ಕೂ ಮೀರಿ ಗಲಾಟೆ ಮಾಡಿದರೆ ತೊಟ್ಟಿಲ ಮಗು ಜೋರು ಅಳುತ್ತಿತ್ತು. ಆಗ ಇಬ್ಬರೂ ಸದ್ದಿಲ್ಲದೇ ತೆಪ್ಪಗಾಗುವರು. ನಾನು ಸೋಲುವ ಕ್ಷಣಗಳಲ್ಲಿ ನನ್ನ ಮಗಳ ಗೆಲುವು ಕಂಡು ಒಳಗೊಳಗೇ ಹೆಮ್ಮೆಯಾಗುತ್ತಿತ್ತು. ಇವನಂತೂ ಮಗುವಿನ ಹೆಸರು ಹೇಳಿದರೆ ತಲೆ ಕೊಡಲೂ ತಯಾರಿದ್ದ. ಸೋದರಮಾವನೆಂದರೆ ದೊಡ್ಡ ಶ್ರೀಕೃಷ್ಣನ ಪಾತ್ರವೇ ತನ್ನದೆಂಬಂತೆ ಪ್ರಪಂಚವನ್ನೇ ತಲೆ ಮೇಲೆ ಹೊತ್ತವನಂತೆ ಮಗುವಿನ ಎಲ್ಲ ಬೇಕು ಬೇಡಗಳನ್ನು ಮೈಮೇಲೆಳೆದುಕೊಂಡು ನಿಭಾಯಿಸುತ್ತಿದ್ದ. ಅಮ್ಮನು ಮಗು ಸಾಕುವುದರಲ್ಲಿ ಎಷ್ಟು ಕಳೆದುಹೋಗಿದ್ದಳೆಂದರೆ ಉಳಿದೆಲ್ಲವೂ ಅವಳಿಗೆ ತೃಣಸಮಾನವಾಗಿ ತೋರುತ್ತಿದ್ದವು. ಮೂರು ನಾಲ್ಕು ತಿಂಗಳಿಗೇ ಹಾಸಿಗೆಯಲ್ಲಿ ಒಂದ ಮಾಡಲು ಬಿಡದೇ ಅದು ಕಾಲು ಬಡಿಯುವುದನ್ನೇ ನೋಡಿಕೊಂಡಿದ್ದು ಬಚ್ಚಲ ಮುಂದೆ ಮಾಡಿಸುವಳು. ಮಂಚ ಹಿಡಿದು ಕಕ್ಕ ಮಾಡುವ ಭಂಗಿ ಕಲಿಸಿ ‘ನೋಡಿ.. ನಮ್ಮ ಕೂಸು ಹಾಸಿಗೇಲಿ ಹೇಸಿಗೆ ಮಾಡುವುದಿಲ್ಲ.’ ಎಂದು ಬಂದವರಿಗೆಲ್ಲಾ ಪ್ರದರ್ಶಿಸುವಳು. ಡೈಪರ್ ಹಾಕದೇ ಬೆಳೆಸಬೇಕೆಂಬ ಸ್ವಯಂ ನಿರ್ಧಾರವನ್ನು ಕಟ್ಟುನಿಟ್ಟು ಪಾಲಿಸುವಳು. ಅಮ್ಮನ ಇಂಥಾ ಅತಿರೇಕವನ್ನು ನೋಡಿ ನಾವು ಒಳಗೇ ನಗುವೆವು. ಬೊಚ್ಚು ಬಾಯಿಯ ಪುಟ್ಟ ಬೆರಳುಗಳ ಬಟ್ಟಲುಗಂಗಳ ಮಗು ಎಲ್ಲರಿಗೂ ತನ್ನ ಸೊಗೆಯ ನಗು ಹಂಚುತ್ತಾ ಜೀವನದಿಯಾಗಿ ಪುಳುಪುಳು ಎಲ್ಲೆಂದರಲ್ಲಿ ಓಡಾಡುತ್ತಿತ್ತು…

ಅಮ್ಮ ಆರು ತಿಂಗಳಿಗೇ ಹಾಲು ಬಿಡಿಸಿಬಿಡಬೇಕೆಂದು ಹಟ ಹಿಡಿದಳು. ಯಾಕೆಂದು ಕೇಳಿದರೆ ‘ನಿನಗೆ ಬರೋ ಹಾಲು ಮಗುವಿಗೆ ಸಾಕಾಗ್ತ ಇಲ್ಲ. ಅದು ಬೆಳದುದೆ ಜಾಸ್ತಿ ಹಾಲು ಬೇಕು. ನಿನ್ನ ಹಾಲಿನ ಬದಲು ಇನ್ನೂ ಎರಡು ಮಿಳಲೆ ಜಾಸ್ತಿ ಹಸುವಿನ ಹಾಲೇ ಕುಡಿಸ್ಯೇನು. ನೀನೂ ಹಾಲು ಬಿಡಿಸಿ ಆರಾಮವಾಗಿರು.’ ಅಂದುಬಿಟ್ಟಳು. ಅಲ್ಲಿಗೆ ನನಗೂ ಕಂದನಿಗೂ ಇದ್ದ ಕರುಳ ಬಂಧ ಒಂದು ಹಂತಕ್ಕೆ ಮುಗಿದೇ ಹೋಯಿತು. ಅಲ್ಲಿಂದ ಒಂದು ವಾರಕ್ಕೆ ತೊಟ್ಟಿಲು ತೂಗುವ ವಿನಃ ಆ ಮಗುವಿಗೂ ನನಗೂ ಯಾವುದೇ ಆತ್ಮಾನುಬಂಧಗಳು ಉಳಿಯಲಿಲ್ಲ. ಅಮ್ಮ ಮೆಲ್ಲನೆ ಕಟ್ಟು ಅನ್ನ ಮಿದ್ದ ಊಟಕ್ಕೆ ಮಗುವನ್ನು ಹೊಂದಿಸಿ ಹಸುವಿನ ಹಾಲಲ್ಲಿ ಕಾಲ ಹಾಕುವುದನ್ನು ಅಭ್ಯಾಸ ಮಾಡಿಸಿದ್ದಳು. ನಾನು ದಾರಿ ಕಾಯುವ ಇರಾದೆ ಕೈಬಿಟ್ಟು ಶ್ರೀಧರನಿಗೆ ‘ಅವನು ಬರುತ್ತಾನಾ ಇಲ್ಲವಾ ಕೊನೇ ಮಾತು ಕೇಳಿಬಿಡು. ಇನ್ನು ಕಾಯಕ್ಕಾಗಲ್ಲ. ನಿಂಗೂ ಭಾರ ಆಗಲ್ಲ.’ ಅಂದೆ. ‘ಅಯ್ಯೋ ಸುಮ್ನಿರೇ.. ನೀನು ನಿನ್ ಮಗು ತಿನ್ನೋ ಎರಡು ತುತ್ತು ನಂಗೆ ಭಾರ ಆಗೋದಾದ್ರೆ ನನ್ನ ಗಂಡ್ಸು, ಮನೆಮಗ ಅಂತಾರಾ..’ ಅಂದು ಸುಮ್ಮನಾದರೂ ಆ ಬಕ್ಕತಲೆಯವನನ್ನು ಮತ್ತೆ ಕರೆಯಬೇಕೆಂಬ ಇಚ್ಛೆಯನ್ನು ಅವನು ತೋರಿಸಲೇ ಇಲ್ಲ. ಅಮ್ಮನಿಗೆ ಅಳಿಯನ ನೆನಪು ಬರುವುದು. ಮಾತಿನಲ್ಲಿ ಅವನ ವಿಷಯ ತೂರುವುದು. ತಕ್ಷಣ ನನ್ನ ಕ್ರೋಧಕ್ಕೆ ಹೆದರಿ ಆ ಮಾತನ್ನು ಹಾಗೇ ಸಮಾಧಿ ಮಾಡುವಳು. ಯಾವುದರ ಪರಿವೆಯಿಲ್ಲದ ಕೂಸು ಆಗಲೇ ತೆವಳುತ್ತಾ ಇಡೀ ಮನೆಯನ್ನು ಸುತ್ತಾಡಿ ನಮ್ಮೆಲ್ಲರ ಮೊಗ ನೋಡಿ ನಗುವಷ್ಟು ದೊಡ್ಡದಾಗಿತ್ತು.

ಆರು ತಿಂಗಳು ಕಳೆದು ಮಧ್ಯಾಹ್ನವೊಂದು ಮನಸು ಬಹಳ ವಿಕ್ಷಿಪ್ತವಾಗಿತ್ತು. ಏನಾದರೊಂದು ಆಗಿಯೇ ತೀರಿಬಿಡಬೇಕೆಂಬ ಛಲವೂ ದಿನೇ ದಿನೇ ಬೆಳೆಯುತ್ತಿತ್ತು. ಒಂದು ಬೆಳಗು ಮಗುವನ್ನು ಎತ್ತಿಕೊಂಡು ಅಮ್ಮನೂ ನಾನೂ ಶ್ರೀಧರನೂ ಚಾಮುಂಡಮ್ಮನ ಗುಡಿಗೆ ಹೋಗಿ ಪೂಜೆ ಮಾಡಿಸಿಕೊಂಡು ಬಂದೆವು. ಮನಸಿಗೆ ಅಂದು ವಿದ್ಯುಕ್ತವಾಗಿ ನಾನು ತವರಿಂದ ಹೊರಡುವ ಸಮಯ ಬಂತು ಎಂಬಂತೆ ಕಂಡಿತು. ಆದರೆ ಯಾರೊಟ್ಟಿಗೂ ಹೇಳಿಕೊಳ್ಳಲಿಲ್ಲ. ಅಂದು ಸಂಜೆ ಎಲ್ಲರೂ ಒಟ್ಟಿಗೇ ಮಾತಾಡುತ್ತಾ ಕುಳಿತಾಗ ‘ಏನಾದರಾಗಲಿ, ನನ್ನ ತೊಟ್ಟಿಲು ಸಮೇತ ಆ ಮನೆಗೆ ಬಿಟ್ಟು ಬಾ ಶ್ರೀಧರ.’ ಅಂದುಬಿಟ್ಟೆ. ಅಚಾನಕದ ಮಾತಿಗೆ ಕ್ಷಣಕಾಲ ಸ್ಮಶಾನ ಮೌನ ಆವರಿಸಿತು. ಅಷ್ಟು ಹೊತ್ತೂ ಮಗುವಿನ ಬಗೆಗೆ ನಾನಾ ಮಾತುಗಳನ್ನಾಡುತ್ತಾ ಗರುವಿಸುತ್ತಿದ್ದ ಅಮ್ಮ ಅವಾಕ್ಕಾದಳು. ಯಾರೂ ಏನೂ ಹೇಳಲಿಲ್ಲ. ನಾನೇ ಮುಂದುವರೆಸಿದೆ. ‘ಅವರ್ಯಾರೂ ಬರದಿದ್ದರೇನು ಕಣೋ… ಅದು ನನ್ನ ಮನೆ ಅಲ್ವಾ.. ಮಗುವಿಗೂ ಅದರಪ್ಪನ ಮನೆ. ಅವರಿಗೆ ವಿವೇಚನೆಯಿಲ್ಲ ಅಂದರೆ ನಮಗೆ ಬೇಡವಾ. ಸುಮ್ಮನೆ ಒಂದು ಒಳ್ಳೇ ದಿನ ನೋಡಿ ಕಳಿಸಿಕೊಡಿ. ಮಿಕ್ಕಿದ್ದು ನಾನು ನಿಭಾಯಿಸುತ್ತೇನೆ.’ ಅಂದೆ. ಎಲ್ಲದಕ್ಕೂ ಸಿದ್ಧಳಿದ್ದೇ ಮಾತಾಡಿದ್ದೆ.

ಅಮ್ಮ ಏನೋ ಹೇಳಲು ಬಾಯಿತೆರೆದಳು. ಶ್ರೀಧರ ಬಿಗಿಯಾಗಿ ಅವಳ ಕೈಹಿಡಿದು ಸನ್ನೆ ಮಾಡಿದ್ದು ಕಂಡು ಸಮಾಧಾನವಾಯಿತು. ಆಗ ನನಗೆ ಯಾರ ಮಾತೂ ಸಲಹೆಯೂ ಬೇಕಿರಲಿಲ್ಲ, ವಿಶೇಷತಃ ಅಮ್ಮನದ್ದು. ಸ್ವಲ್ಪ ಹೊತ್ತು ಸುಮ್ಮನಿದ್ದು ಶ್ರೀಧರನೇ ‘ಏನೀಗ..?’ ಅಂದ. ‘ಅಷ್ಟೇ.. ಹೊರಡ್ತೀನಿ. ಆದದ್ದಾಗ್ಲಿ. ಭಯ ಅಂಜಿಕೆ ಎಲ್ಲಾ ಏನಿಲ್ಲ. ಯಾವತ್ತಾದ್ರೂ ಏನಾದ್ರೂ ಒಂದು ನಡೀಲೇಬೇಕಲ್ಲ. ಎಷ್ಟು ದಿನ ಕೂತು ಕಾಲ ಹಾಕೋದು. ಸರಿಯಲ್ಲ ಇದು.’ ಹೇಳಿದೆ. ‘ಸರಿ. ಮಾವನ್ನ ಪಂಚಾಂಗ ನೋಡೋಕೆ ಹೇಳ್ತೀನಿ. ನಾನು ಮಾವ ಬಂದು ಬಿಟ್ಟು ಬರ್ತೀವಿ. ನೀನು ಮಾನಸಿಕವಾಗಿ ರೆಡಿಯಾಗು. ಏನಾಗುತ್ತೋ ನೋಡೇಬಿಡುವ.’ ಅಂದವನ ಕಣ್ಣಲ್ಲಿ ರಣೋದ್ದೀಪನ ಕಾಣುತ್ತಿತ್ತು. ಒಳ್ಳೆಯದೇ ಮಾಡಿದೆ ಅನ್ನಿಸಿ ಮನಸಿಗೆ ನೆಮ್ಮದಿಯಾಯಿತು. ಮುಂದೆ ನಡೆಯಬಹುದಾದ ಎಲ್ಲವೂ ಒಳಗಣ್ಣಿಗೆ ಗೋಚರಿಸುತ್ತಿದ್ದವು.

ಇತ್ತೀಚೆಗೆ ಅಮ್ಮನೊಟ್ಟಿಗೆ ಜಗಳ ಹೆಚ್ಚೇ ಕಾಯುತ್ತಿದ್ದ. ನಾನು ಇಬ್ಬರನ್ನೂ ಬೈದು ಸುಮ್ಮನಾಗಿಸುತ್ತಿದ್ದೆ. ಅದಕ್ಕೂ ಮೀರಿ ಗಲಾಟೆ ಮಾಡಿದರೆ ತೊಟ್ಟಿಲ ಮಗು ಜೋರು ಅಳುತ್ತಿತ್ತು. ಆಗ ಇಬ್ಬರೂ ಸದ್ದಿಲ್ಲದೇ ತೆಪ್ಪಗಾಗುವರು. ನಾನು ಸೋಲುವ ಕ್ಷಣಗಳಲ್ಲಿ ನನ್ನ ಮಗಳ ಗೆಲುವು ಕಂಡು ಒಳಗೊಳಗೇ ಹೆಮ್ಮೆಯಾಗುತ್ತಿತ್ತು. ಇವನಂತೂ ಮಗುವಿನ ಹೆಸರು ಹೇಳಿದರೆ ತಲೆ ಕೊಡಲೂ ತಯಾರಿದ್ದ.

ನಾನು, ಮಗು ಹಾಗೂ ಅದಕ್ಕಾಗಿಯೇ ಮಾಡಿಸಿದ್ದ ಕುಸುರಿ ತೊಟ್ಟಿಲು ಅಂಗಳದಲ್ಲಿ ಬಂದಿಳಿದೆವು. ಮಾವನೂ ಶ್ರೀಧರನೂ ಕಾರಿನಿಂದ ಸಾಮಾನೆಲ್ಲ ಇಳಿಸಿದರು. ಮನೆ ಬಾಗಿಲು ತೆರೆದಿತ್ತು. ತಮ್ಮ ಒಳಗೆ ಹೋದವನೇ ‘ಭಾವಾ.. ಇದೀರಾ..? ಇಲ್ನೋಡೀ ಯಾರು ಬಂದಿದಾರೆ..’ ಅಂದು ಒಳನಡೆದ. ಇಡೀ ಮನೆ ಸಿಗರೇಟಿನ ಕಮಟು ವಾಸನೆಯಿಂದ ತುಂಬಿ ಹೋಗಿತ್ತು. ಮಾವ ಅವನ ಹಿಂದೆಯೇ ಒಳನಡೆದ. ಇಬ್ಬರ ಮುಖವೂ ಪೆಚ್ಚಾಗಿತ್ತು. ಅದುವರೆಗೂ ನಾನು ಏನೂ ಹೇಳದೇ ಬಚ್ಚಿಟ್ಟುಕೊಂಡಿದ್ದ ಕಹಿಯೆಲ್ಲ ಕ್ಷಣಮಾತ್ರದಲ್ಲಿ ಇಬ್ಬರಿಗೂ ತಿಳಿದುಹೋಗಿತ್ತು. ನಾನು ಎಳ್ಳಷ್ಟೂ ಅಳುಕದೇ ಮಗುವನ್ನೂ ಎತ್ತಿಕೊಂಡು ಸರಾಗ ನಡೆದು ರೂಮಿಗೆ ಹೋಗಿ ಭುಜದಲ್ಲಿ ನೇತಾಡುತ್ತಿದ್ದ ಬ್ಯಾಗನ್ನು ಇಳಿಸಿ ಮಗುವನ್ನು ತಮ್ಮನ ಕೈಗಿತ್ತು ಅಡುಗೆಮನೆಗೆ ನಡೆದೆ. ಅವರಿಬ್ಬರೂ ಏನೂ ಅರ್ಥವಾಗದೇ ಸುಮ್ಮನೆ ನೋಡುತ್ತಾ ನಿಂತರು. ಮನೆಯೊಡೆಯನೆಂಬ ವ್ಯಕ್ತಿಗೆ ನಡೆಯುತ್ತಿರೋದು ಏನೆಂದು ತಿಳಿಯದೇ ಕಕ್ಕಾಬಿಕ್ಕಿಯಾಗಿ ನಿಂತಿತ್ತು. ಮಾವನೂ ತಮ್ಮನೂ ದಂಗುಬಡಿದವರಂತೆ ನಿಂತೇ ಇದ್ದರು. ನಾನೇ ಮುಂದಾಗಿ ‘ ಅರೇ ಇದೇನು.. ಹೀಗೆ ನಿಂತೇ ಇರೋದು ನೀವು..!? ಕೂತ್ಕೋಳ್ರೋ.. ಕಾಫಿ ಆಗುತ್ತಾ ನೋಡ್ತೀನಿ ಇರಿ.’ ಎಂದೆ. ಶ್ರೀಧರನಿಗೆ ಪರಿಸ್ಥಿತಿಯ ಮುನ್ಸೂಚನೆ ಇತ್ತಾದರೂ ಇದು ಅವನು ಎಣಿಸಿದ್ದಕ್ಕೂ ಭಿನ್ನವಾಗಿದ್ದು ಅವನು ಏನೂ ಮಾತಾಡದೇ ಮಗುವಿನ ಬೆನ್ನು ಸವರುತ್ತಾ ನನ್ನನ್ನೇ ನೋಡುತ್ತಿದ್ದ. ‘ಅದ್ಯಾಕೋ ಹಾಗೆ ನೋಡ್ತೀ.. ಪಾಪೂನ ಎತ್ಕೊಂಡು ಹೋಗಿ ಒಂದು ಲೀಟರ್ ಹಾಲು ತಗೊಂಬಾ.. ಕಾಫಿ ಮಾಡೋಣ ಎಲ್ರಿಗೂ..’ ಅಂದವಳೇ ಮಾವನ ಕಡೆ ತಿರುಗಿ ‘ಮಾವಾ.. ನೀವಿಬ್ರೂ ಮಾತಾಡ್ತಾ ಇರಿ. ಸ್ವಲ್ಪ ಬಂದೆ.’ ಎಂದು ಮತ್ತೆ ಒಳನಡೆದೆ.

ಇಡೀ ಮನೆ ನಾಲ್ಕು ದಿನ ಕಳೆದರೂ ಶುಚಿಗೊಳದ ಸ್ಥಿತಿಯಲ್ಲಿತ್ತು. ಸೀರೆಯ ನೆರಿಗೆ ಸೊಂಟಕ್ಕೆ ಸಿಕ್ಕಿಸಿ ನರಕದಂಥಾ ಅಡುಗೆಮನೆ ಒಪ್ಪವಾಗಿಸಲು ನಿಂತೆ. ಅಂಗಡಿಗೆ ಹೋಗಿ ಬಂದ ಶ್ರೀಧರ ಸೀದಾ ಅಡಿಗೆಮನೆಗೆ ಬಂದು ಹನಿಯಾಡುವ ಕಣ್ಣುಗಳಿಂದ ನನ್ನನ್ನೇ ನೋಡುತ್ತಿದ್ದ. ಬ್ಯಾಗಿನಿಂದ ಹಾಲಿನ ಬಾಟಲಿ ತೆಗೆದು ಮಗುವಿಗೆ ಕುಡಿಸಲು ಹೇಳಿದರೂ ನನ್ನನ್ನೇ ದಿಟ್ಟಿಸುತ್ತಾ ಹತ್ತಿರ ಬಂದು ‘ಇಲ್ಲಿ ಇರಲೇಬೇಕೇನೇ ಮಗೂ ನೀನೂ..? ನಾನು ಏನು ತಪ್ಪು ಮಾಡಿದ್ದೆ ಅಂತ ನಮ್ಮನೇನ ಹಾಗೆ ಬಿಟ್ಟು ಈ ನರಕಕ್ಕೆ ಬಂದೆ ನೀನು?’ ಅಂದವನಿಗೆ ಅಡುಗೆ ಕಟ್ಟೆಯ ಕೆಳಗೆ ಚೆಲ್ಲಾಪಿಲ್ಲಿ ಬಿದ್ದಿದ್ದ ಹೆಂಡದ ಬಾಟಲಿಗಳು ಕಾಣದಂತೆ ಅಡ್ಡ ನಿಂತೆ. ಅವನು ಮಗುವನ್ನು ಗಟ್ಟಿ ತಬ್ಬಿಹಿಡಿದು ಜೋರಾಗಿ ಅಳಲು ಶುರುವಿಟ್ಟ. ಅವನ ಈ ಪರಿಗೆ ಬೆದರಿದ ಮಗುವು ತಾನೂ ಚೀರಿ ಅಳಲು ಮೊದಲಿಟ್ಟಿತು. ಅಳುವ ಮಕ್ಕಳಿಬ್ಬರನ್ನೂ ಸಮಾಧಾನಿಸಲು ಹರಸಾಹಸ ಪಡಬೇಕಾಯಿತು. ಮೊದಲಾದರೆ ಇಬ್ಬರನ್ನೂ ತಬ್ಬಿ ನಾನೂ ಅಳಲು ಶುರು ಮಾಡುತ್ತಿದ್ದೆ. ಆದರೆ ಈಗ ಮನಸಲ್ಲಿ ಏನೋ ಒಂದು ತೀರ್ಮಾನ ಭದ್ರವಾಗಿ ಬೇರೂರಿದ್ದು ಅದು ನನ್ನ ಕಣ್ಣಲ್ಲಿ ತೇವವನ್ನೂ ಹರಿಯಗೊಡಲಿಲ್ಲ.

‘ನನ್ನ ನೀನು ಇಷ್ಟೇನಾ ಅರ್ಥ ಮಾಡ್ಕೊಂಡಿರೋದು ಶ್ರೀಧರಾ..? ಎಲ್ಲಾ ಸೋತರೆ ನೀನೇ ತಾನೇ ದಿಕ್ಕು ನನಗೆ? ಈಗ ಸುಮ್ಮನಾಗು ಮಾರಾಯ.. ಎಲ್ಲ ಸರಿ ಹೋಗುತ್ತೆ..’ ಎಂದು ಪರಿಪರಿಯಾಗಿ ಬೇಡಿ ಸಮಾಧಾನಿಸಿ ಎರಡು ಲೋಟ ಕಾಫಿಯೊಂದಿಗೆ ಹೊರಬಂದಾಗ ನಾನು ಬೇಡದ ಅತಿಥಿಯಾಗಿ ಬಂದ ಮನೆಯ ಎಲ್ಲ ಚಹರೆಗಳೂ ಸ್ವಷ್ಟವಾಗಿದ್ದವು. ಸ್ವಲ್ಪ ಹೊತ್ತು ನಿಂತು ಎಲ್ಲ ವ್ಯವಸ್ಥೆ ಮಾಡಿದ ಮಾವ ನನ್ನ ಎರಡೂ ಕೈ ಹಿಡಿದು ಮುದ್ದಾಡಿ ಆ ಕೈಯೊಳಗೊಂದಿಷ್ಟು ನೋಟಿನ ಹಾಳೆಗಳನ್ನು ತುರುಕಿ ಹೊರನಡೆದು ಕಾರು ಹತ್ತಿದ. ಶ್ರೀಧರ ಎಷ್ಟು ಹೇಳಿದರೂ ಕೇಳದೇ ಎರಡು ದಿನದ ಮಟ್ಟಿಗೆ ನನ್ನೊಂದಿಗೇ ಉಳಿಯುವೆನೆಂದ. ಎಲ್ಲವನ್ನೂ ಸೂಕ್ಷ್ಮವಾಗಿ ಗಮನಿಸುತ್ತಿದ್ದ ಮನೆಯ ‘ಯಜಮಾನರು’ ಚಕಾರವೆತ್ತದೇ ಸುಮ್ಮನಿದ್ದರು. ಈ ಮೌನ ಮುಂಬರುವ ದಿನಗಳ ಮಹಾಕದನದ ಮೊದಲ ನೀರವತೆಯೆಂದು ಪೃಚ್ಛಾಪೃಚ್ಛವಾಗಿ ತೋರುತ್ತಿತ್ತು. ಪ್ರಳಯದ ಮೊದಲಿನ ಮೃತ್ಯುಭಯಂಕರ ಮೌನವೊಂದು ನಾನು, ಅವನು ಹಾಗೂ ಶ್ರೀಧರನ ನಡುವೆ ಏರ್ಪಟ್ಟಿತು.

ಮನೆಯೆಲ್ಲಾ ಶುಚಿಯಾಯಿತು. ನಾನು ಇಲ್ಲದ ಮನೆಯೊಳಗೆ ಏನೇನೆಲ್ಲಾ ನಡೆದಿರಬಹುದೆಂಬ ಸ್ಪಷ್ಟ ಚಿತ್ರಣ ಸಿಗುವಷ್ಟು ರೂಬರೂಬ್ ಸಾಕ್ಷಿಗಳು ಒಂದರ ಹಿಂದೊಂದು ಎಡೆಬಿಡದೇ ದೊರೆತವು. ಹೆಂಡದ ಬಾಟಲಿಗಳು, ಸಿಗರೇಟು ಕೊರೆಗಳು, ಮಂಚದ ಕೆಳಗೊಂದು ಕಾಂಡೋಮ್ ಕವರು… ಸಾಕಾಗಿತ್ತು ಇವೆಲ್ಲಾ ನನ್ನ ಮನಸು ಮುರಿದು ಸಾವಿರ ಚೂರಾಗಲು… ಶ್ರೀಧರನಿಗೆ ಕಾಣದೇ ಮುಚ್ಚಿಡಲು ಏನೇ ಕಷ್ಟಪಟ್ಟರೂ ಬರೀ ಕಣ್ಣ ಭಾವಗಳ ಬಣ್ಣಗಳಿಂದ ಅವನು ಎಲ್ಲವನ್ನೂ ಅರಿತುಬಿಡುವನು. ಎರಡು ದಿನ ಕಳೆದು ಮಗುವಿಗೆ ನನಗೆ ಬೇಕಾದ ವ್ಯವಸ್ಥೆ ಎಲ್ಲಾ ಅವನೇ ನಿಂತು ಮಾಡಿ ಹೊರಟ. ಅವನು ಭಾರವಾಗಿದ್ದ. ಗೊತ್ತಿದ್ದೂ ಏನೂ ಹೇಳದೇ ನಗುನಗುತ್ತಾ ಬೀಳ್ಕೊಟ್ಟೆ. ಸ್ವಲ್ಪವೂ ನೋವಿರದ ನನ್ನ ಈ ನಡವಳಿಕೆ ಅವನಿಗೆ ವಿಚಿತ್ರವೆನಿಸಿರಬಹುದು. ಇನ್ನೇನು ಹೊಟನೆನ್ನುವಾಗ ‘ನಾನು ಏನಾದರೂ ಎಮರ್ಜೆನ್ಸಿ ಅಂದರೆ ನೀನು ತಕ್ಷಣ ಓಡಿಬರಬೇಕು, ತಿಳೀತಾ.. ನಿಂಗೊಬ್ಬನಿಗೆ ಬಿಟ್ಟು ಇಲ್ಲಿನ ವಿಚಾರಗಳು ಬೇರೇವ್ರಿಗೆ ತಿಳೀಬಾರದು. ಮರ್ಯಾದೆ ಪ್ರಶ್ನೆ..!’ ಎಂದು ಕಣ್ಣು ಮಿಟುಕಿಸಿದೆ. ಇದು ಅಮ್ಮನ ಮಾತಿನ ಗೇಲಿ ಎಂದರಿತವನ ಮುಖದ ಮೇಲೆ ಮಂದಹಾಸ ಮೂಡಿತು.

ನನಗೆ ಹೊಸ ಕಥೆಯೊಂದು ಶುರುವಾಗುವ ಮುನ್ಸೂಚನೆ ಮುದ ನೀಡಿತ್ತು. ನಾಳಿನ ಬೆಳಗು ನನಗೂ ನನ್ನ ಮಗುವಿಗೂ ಅಗೋಚರ ಸಂತುಷ್ಟಿಯ ಬದುಕನ್ನು ಕಟ್ಟಿಕೊಡುವ ಮೊದಲ ದಿನವಾಗಬೇಕೆಂಬ ಗಟ್ಟಿ ಬಯಕೆಯೊಂದು ನನ್ನ ಮೊಗದಲ್ಲಿ ನಗುವಾಗಿ ಹುಟ್ಟಿ ಶ್ರೀಧನರನ ಕಣ್ಣುಗಳಲ್ಲೂ ಮಿಂಚಿ ಮರೆಯಾಯಿತು. ಅವನು ನೆಮ್ಮದಿಯ ನಿಟ್ಟುಸಿರು ಬಿಟ್ಟು ಮೆಲ್ಲಮೆಲ್ಲನೆ ತಿರುಗಿ ನಮ್ಮನ್ನೇ ನೋಡುತ್ತಾ ಬಂದ ದಾರಿ ಹಿಡಿದ. ಏನೂ ಅರಿಯದ ಕಂದನು ಕೇಕೆ ಹಾಕುತ್ತಾ ನನ್ನ ಸೊಂಟದಲ್ಲಿ ಕೂತು ಚಪ್ಪಾಳೆ ತಟ್ಟುತ್ತಿತ್ತು. ನಾನು ಮನದಲ್ಲೇ ತಾಯಿ ಚಾಮುಂಡಿಗೆ ‘ನೀನು ನನ್ನೊಟ್ಟಿಗೆ ನೆಲೆಸು ಅಮ್ಮಾ… ಇನ್ನು ನನಗೆ ನೀನು ಬೇಕೇ ಬೇಕು..’ ಎಂದು ಅರುಹುತ್ತಲೇ ಇದ್ದೆ.

 

(ಮುಂದುವರಿಯುವುದು)