ಓದು ಬರಹ ಬಲ್ಲವನಾದರೂ ಕ್ರಮ ಶಿಕ್ಷಣ ಪಡೆಯದಿದ್ದ ಫ್ಯಾರಡೆಗೆ ಆ ಪುಸ್ತಕ ಒಂದು ವರದಾನವಾಯಿತು. ರಾಸಾಯನಿಕ ಶಾಸ್ತ್ರದ ಪ್ರಥಮ ಪಾಠಗಳನ್ನು ಅವನು ಕಲಿತದ್ದು ಆ ಪುಸ್ತಕದ ಮೂಲಕವೇ. ಆ ಪುಸ್ತಕವನ್ನು ಬರೆದವಳು ಜೇನ್ ಮಾರ್ಸೆಟ್ ಎಂಬ ಲೇಖಕಿ. ವೈಜ್ಞಾನಿಕ ರಂಗದಲ್ಲಿ ತನ್ನ ಬೆಳವಣಿಗೆಗೆ ಕಾರಣೀಭೂತವಾದ ಆ ಪುಸ್ತಕ ಮತ್ತು ಆ ಲೇಖಕಿಯನ್ನು ಫ್ಯಾರಡೆ ಮರೆಯಲ್ಲಿಲ್ಲ. ವಿಜ್ಞಾನಿಯಾಗಿ ಹೆಸರು ಮಾಡಿದ ನಂತರವೂ ತನ್ನೆಷ್ಟೋ ಲೇಖನ ಮತ್ತು ಪ್ರಕಟಣೆಗಳನ್ನು ಆಕೆಗೆ ಒಮ್ಮೆ ತೋರಿಸಿಯೇ ಬೇರೆಯವರಿಗೆ ತೋರಿಸುತ್ತಿದ್ದ.
ಶೇಷಾದ್ರಿ ಗಂಜೂರು ಬರೆಯುವ ಅಂಕಣ

 

ಅಮಾವಾಸ್ಯೆಯ ರಾತ್ರಿಯ ಗಾಢಾಂಧಕಾರದಲ್ಲಿ, ಅಂತರಿಕ್ಷದ ದೂರದ ಮೂಲೆಯೊಂದರೆಲ್ಲಿಂದಲೋ ಖಗೋಳಶಾಸ್ತ್ರದ ಹವ್ಯಾಸ ಇರುವ ಪರಗ್ರಹ ವಾಸಿಯೊಬ್ಬಳು ತನ್ನ ಶಕ್ತಿಶಾಲಿ ಟೆಲೆಸ್ಕೋಪ್ ಮೂಲಕ ಭಾರತದ ಕಡೆಗೆ ದಿಟ್ಟಿಸಿ ನೋಡುತ್ತಿದ್ದಾಳೆನ್ನಿ. ಆ ಸಮಯದಲ್ಲಿ, ಆಕೆಗೆ ಏನು ಕಾಣಬಹುದು? ಅವಳು ಕಾಣುವ ದೃಶ್ಯ, ಆಕೆ ಭೂಮಿಯಿಂದ ಎಷ್ಟು ದೂರದಲ್ಲಿದ್ದಾಳೆ ಎಂಬುದರ ಮೇಲೆ ಅವಲಂಬಿತವಾಗಿರುತ್ತದೆ ಎನ್ನುವುದು ನಮಗೆಲ್ಲರಿಗೂ ತಿಳಿದ ವಿಷಯ; ಆಕೆ ಭೂಮಿಯಿಂದ ನೂರು ಜ್ಯೋತಿರ್ವರ್ಷಗಳು (light years) ದೂರವಿದ್ದರೆ, ಆಕೆಗೆ ಕಾಣುವುದು ಇಂದಿನ ದೃಶ್ಯವಲ್ಲ, ನೂರು ವರ್ಷಗಳ ಹಿಂದಿನ ದೃಶ್ಯ.

ಭೂಗ್ರಹಕ್ಕೆ ಸುಮಾರು ೪.೭ ಬಿಲಿಯನ್ ವರ್ಷಗಳ ಇತಿಹಾಸವಿದ್ದರೂ, ಆಧುನಿಕ ಮಾನವರ ಇತಿಹಾಸ ಪ್ರಾರಂಭವಾಗುವುದು ಕೇವಲ ೩೦೦ ಸಾವಿರ ವರ್ಷಗಳ ಹಿಂದೆಯಷ್ಟೇ ಎನ್ನಬಹುದು. ನಮ್ಮ ಪರಗ್ರಹವಾಸಿ ಹವ್ಯಾಸಿ ಖಗೋಳ ಶಾಸ್ತ್ರಜ್ಞೆ ಆ ಸಮಯದಿಂದಲೂ ನಮ್ಮೆಡೆಗೆ ತನ್ನ ಟೆಲೆಸ್ಕೋಪ್ ಮೂಲಕ ನೋಡುತ್ತಿದ್ದರೂ, ಆಕೆಗೆ ವಿಶೇಷವಾದದ್ದು ಏನೂ ಕಾಣುವುದಿಲ್ಲ. ರಾತ್ರಿಯ ಕಗ್ಗತ್ತಲೆಯಲ್ಲಿ, ಅಲ್ಲಲ್ಲಿ ಕಾಳ್ಗಿಚ್ಚು ಇದ್ದರೆ ಅವುಗಳ ಬೆಳಕು ಕೊಂಚ ಮಟ್ಟಿಗೆ ಕಾಣಬಹುದೇನೋ. ಉಳಿದಂತೆ ಕಾಣುವುದು ಬರೀ ಅಂಧಕಾರವೇ. ಇದರಿಂದ ಆಕೆಗೆ bore-ಹೊಡೆದು, ತನ್ನ ಟೆಲೆಸ್ಕೋಪ್ ಅನ್ನು ಇನ್ನಾವುದೋ ದಿಕ್ಕಿಗೆ ಅವಳು ಬದಲಿಸಬಹುದು. ಆದರೆ, ಸುಮಾರು ನೂರುವರ್ಷಗಳ ನಂತರ, ಆಕೆ, ಮತ್ತೊಮ್ಮೆ ತನ್ನ ಟೆಲೆಸ್ಕೋಪ್ ಅನ್ನು ನಮ್ಮೆಡೆಗೆ ತಿರುಗಿಸಿದರೆ, ಅವಳಿಗೆ ಕಾಣುವುದು ಏನು?! ದೀಪಾವಳಿ! ವಿಶ್ವದ ಮೂಲೆ-ಮೂಲೆಯಲ್ಲೂ ಜಗಮಗಿಸುವ ಎಲೆಕ್ಟ್ರಿಕ್ ದೀಪಗಳ ಬೆಳಕು!!

ಎಲೆಕ್ಟ್ರಿಕ್ ದೀಪಗಳು ನಮ್ಮ ರಾತ್ರಿಗಳನ್ನು ಬದಲಿಸಿರುವಷ್ಟು ಇನ್ನಾವ ತಂತ್ರಜ್ಞಾನವೂ ಬದಲಿಸಿಲ್ಲ. ಎಲೆಕ್ಟ್ರಿಕ್ ದೀಪಗಳ ಮುಂಚೆಯೇ ರೈಲುಗಳು ಬಂದಿರಬಹುದು, ಪ್ರಿಂಟಿಂಗ್ ಪ್ರೆಸ್ ಬಂದಿರಬಹುದು, ಮೆಕ್ಯಾನಿಕಲ್ ಗಡಿಯಾರಗಳು ಸಾಮಾನ್ಯವಾಗಿರಬಹುದು, ಅವಕ್ಕೂ ಮುನ್ನವೇ ತೈಲದ, ಮೇಣದ ದೀಪಗಳು ಸೃಷ್ಟಿಯಾಗಿರಬಹುದು, ಕೊನೆಗೆ ಗ್ಯಾಸ್ ಲೈಟ್‌ ಗಳೂ “ಸಾಮಾನ್ಯ”ವಾಗಿರಬಹುದು. ಆದರೆ, ಇವೆಲ್ಲಾ ನಮ್ಮ ಹವ್ಯಾಸಿ ಖಗೋಳಶಾಸ್ತ್ರಜ್ಞೆಯ ಕಣ್ಣಿಗೆ ಕಾಣುವುದು ಕಷ್ಟ.

(ಅಂತರಿಕ್ಷದಿಂದ ಬೆಂಗಳೂರಿನ ರಾತ್ರಿಯ ನೋಟ)

ಎಲೆಕ್ಟ್ರಿಕ್ ದೀಪಗಳ ಯಶಸ್ಸಿಗೆ, ಥಾಮಸ್ ಎಡಿಸನ್ ಕಾರಣಕರ್ತನೆನ್ನುವುದು ನಿಜವಿರಬಹುದಾದರೂ, ಆ ದೀಪಗಳು ಜಗಮಗಿಸಲು ಬೇಕಿರುವ ಎಲೆಕ್ಟ್ರಿಸಿಟಿ ತಂತ್ರಜ್ಞಾನದ ಬೆಳವಣಿಗೆಗೆ ಮಹಾ ವಿಜ್ಞಾನಿ ಮೈಕೇಲ್ ಫ್ಯಾರಡೇಗಿಂತ ಹೆಚ್ಚಿಗೆ ಕೊಡುಗೆ ನೀಡಿದವರು ಬೇರಾರೂ ಇಲ್ಲ. ಇಂದು, ಎಲೆಕ್ಟ್ರಿಸಿಟಿ ಆಧುನಿಕ ಬದುಕಿನ ಜೀವಜಲವೇ ಆಗಿ ಹೋಗಿದೆ; ಎಲೆಕ್ಟ್ರಿಕ್ ದೀಪಗಳು ಕೇವಲ, ಅದರ ಒಂದು ರೂಪವಷ್ಟೇ.

ಆದರೆ, ಎಲೆಕ್ಟ್ರಿಸಿಟಿಯ ಇತಿಹಾಸ – ಅದೆಷ್ಟೇ ಕುತೂಹಲಕಾರಿಯಾಗಿದ್ದರೂ — ನಮ್ಮ ಚರ್ಚೆಯ ವಿಷಯವಲ್ಲ. ಎಲ್ಲರನ್ನೂ-ಎಲ್ಲವನ್ನೂ ತನ್ನೊಳಗೆ ಲೀನಗೊಳಿಸುವ ಕಾಲನೂ ಸಹ ಬಗ್ಗುತ್ತಾನೆಂಬುದನ್ನು ಐನ್‌ಸ್ಟೈನ್ ತೋರಿಸಿಕೊಡುವಲ್ಲಿ ಮೈಕೇಲ್ ಫ್ಯಾರಡೇಯ ಪಾತ್ರವನ್ನು ಅರಿಯುವುದು ನಮ್ಮ ಗುರಿ.

******

ಮೈಕೇಲ್ ಫ್ಯಾರಡೇ ಹುಟ್ಟಿದ್ದು ೧೭೯೧ರ ಇಂಗ್ಲೆಂಡಿನಲ್ಲಿ. ಅವನಪ್ಪ, ಕಮ್ಮಾರನೊಬ್ಬನ ಸಹಾಯಕನಾಗಿ ಕೆಲಸ ಮಾಡುತ್ತಿದ್ದವನು. ತನ್ನ ತಂದೆ-ತಾಯಿಯರ ನಾಲ್ಕು ಮಕ್ಕಳಲ್ಲಿ, ಮೈಕೇಲ್ ಮೂರನೆಯವನು. ಅವನು ಬಾಲ್ಯದಲ್ಲಿ ಕೊಂಚ ಮಟ್ಟಿನ ಓದು ಬರಹ ಕಲಿತನಾದರೂ, ಅಂತಹ ಕ್ರಮ ಶಿಕ್ಷಣ ಪಡೆಯಲಿಲ್ಲ. ಬಡತನದಿಂದಾಗಿ, ಅವನಿಗೆ ಹದಿನಾಲ್ಕು ವರ್ಷ ವಯಸ್ಸಿದ್ದಾಗಲೇ ಅವನು ಪ್ರಿಂಟಿಂಗ್ ಪ್ರೆಸ್ ಒಂದರಲ್ಲಿ ಕೆಲಸಕ್ಕೆ ಸೇರಬೇಕಾಯಿತು.

(ಮೈಕೇಲ್ ಫ್ಯಾರಡೇ)

ಅವನು ಪ್ರಿಂಟಿಂಗ್ ಪ್ರೆಸ್ ಅನ್ನೇ ಏಕೆ ಸೇರಿದ? ಬದಲಿಗೆ, ತನ್ನ ತಂದೆಯಂತೆ ಕಮ್ಮಾರನ ಸಹಾಯಕನಾಗಿ ದುಡಿಯಲಾರಂಭಿಸಲಿಲ್ಲವೇಕೆ? ಇದು, ಫ್ಯಾರಡೆ ಉದ್ದೇಶ ಪೂರ್ವಕವಾಗಿ ತೆಗೆದುಕೊಂಡ ನಿರ್ಧಾರವೇ?

ಈ ಪ್ರಶ್ನೆಗಳಿಗೆ ಉತ್ತರ ಏನೇ ಇರಲಿ, ಮೈಕೇಲ್ ಫ್ಯಾರಡೇ ತನಗೆ ದೊರೆತ ಈ ಕೆಲಸವನ್ನು ಹೇಗೆ ಉಪಯೋಗಿಸಿಕೊಂಡ ಎನ್ನುವುದು ಮಹತ್ವದ ವಿಷಯ. ಪ್ರೆಸ್‌ ನಲ್ಲಿ ತನ್ನ ಕೆಲಸದ ಜೊತೆಗೆ, ಪ್ರಿಂಟ್‌ ಗೆ ಬರುತ್ತಿದ್ದ ಪುಸ್ತಕಗಳನ್ನು ಅವನು ಓದಲಾರಂಭಿಸಿದ. ಐಸಾಕ್ ವ್ಯಾಟ್ಸ್ ಎಂಬ ಲೇಖಕ ಬರೆದಿದ್ದ “The Improvement of the Mind” ಎನ್ನುವ ಪುಸ್ತಕವೊಂದು ಆ ವೇಳೆಗೆ ಪ್ರಿಂಟಿಗಾಗಿ ಪ್ರೆಸ್‌ ಗೆ ಬಂದಿತ್ತು. ಫ್ಯಾರಡೆ ಅದನ್ನು ಓದಿದ. ಅದರಲ್ಲಿದ್ದ ವಿಷಯಗಳು ಅವನ ಮೇಲೆ ಪರಿಣಾಮ ಬೀರಿದವು. ನಮ್ಮ ಆಲೋಚನೆಗಳನ್ನು ಉತ್ತಮಗೊಳಿಸಿಕೊಳ್ಳಲು ವ್ಯಾಟ್ಸ್ ಸೂಚಿಸಿದ್ದ ಕ್ರಮಗಳನ್ನು, ಫ್ಯಾರಡೆ ತನ್ನ ಜೀವನದಲ್ಲಿ ಅಳವಡಿಸಿಕೊಂಡ.

ವಿಜ್ಞಾನದ ವಿಷಯದಲ್ಲಿ, ಅವನಿಗೆ ಆಸಕ್ತಿ ಬೆಳೆಯಲಾರಂಭಿಸಿತು. ಅದೇ ಸಮಯಕ್ಕೆ, ಇನ್ನೊಂದು ಪುಸ್ತಕ ಪ್ರಿಂಟಿಗಾಗಿ ಪ್ರೆಸ್‌ ಗೆ ಬಂತು. ಅದರ ಹೆಸರು, “Conversations on Chemistry, Intended More Especially for the Female Sex”. ಕೆಮಿಸ್ಟ್ರಿ ವಿಷಯದ ಕುರಿತು, ಮಹಿಳೆಯರಿಗೆ ತಿಳುವಳಿಕೆ ನೀಡಲು ಬರೆದಿದ್ದಂತಹ ಪುಸ್ತಕವದು. ಆ ಕಾಲದಲ್ಲಿ, “ವಿಜ್ಞಾನ” ಎನ್ನುವುದು ಸ್ತ್ರೀಯರು ಓದುವ ವಿಷಯವಾಗಿರಲಿಲ್ಲ. ಹೀಗಾಗಿ, ಅವರು ವಿದ್ಯಾವಂತರಾಗಿದ್ದರೂ, ಅವರಿಗೆ ವಿಜ್ಞಾನದ ಕುರಿತು ಅಷ್ಟೊಂದು ತಿಳುವಳಿಕೆ ಇರುತ್ತಿರಲಿಲ್ಲ.

ಓದು ಬರಹ ಬಲ್ಲವನಾದರೂ ಕ್ರಮ ಶಿಕ್ಷಣ ಪಡೆಯದಿದ್ದ ಫ್ಯಾರಡೆಗೆ ಆ ಪುಸ್ತಕ ಒಂದು ವರದಾನವಾಯಿತು. ರಾಸಾಯನಿಕ ಶಾಸ್ತ್ರದ ಪ್ರಥಮ ಪಾಠಗಳನ್ನು ಅವನು ಕಲಿತದ್ದು ಆ ಪುಸ್ತಕದ ಮೂಲಕವೇ. ಆ ಪುಸ್ತಕವನ್ನು ಬರೆದವಳು ಜೇನ್ ಮಾರ್ಸೆಟ್ ಎಂಬ ಲೇಖಕಿ.

ವೈಜ್ಞಾನಿಕ ರಂಗದಲ್ಲಿ ತನ್ನ ಬೆಳವಣಿಗೆಗೆ ಕಾರಣೀಭೂತವಾದ ಆ ಪುಸ್ತಕ ಮತ್ತು ಆ ಲೇಖಕಿಯನ್ನು ಫ್ಯಾರಡೆ ಮರೆಯಲ್ಲಿಲ್ಲ. ವಿಜ್ಞಾನಿಯಾಗಿ ಹೆಸರು ಮಾಡಿದ ನಂತರವೂ ತನ್ನೆಷ್ಟೋ ಲೇಖನ ಮತ್ತು ಪ್ರಕಟಣೆಗಳನ್ನು ಆಕೆಗೆ ಒಮ್ಮೆ ತೋರಿಸಿಯೇ ಬೇರೆಯವರಿಗೆ ತೋರಿಸುತ್ತಿದ್ದ.

(ವಿಜ್ಞಾನ, ಅರ್ಥಶಾಸ್ತ್ರದಂತಹ ವಿಚಾರಗಳನ್ನು ಮಹಿಳೆಯರಿಗೆ ತಲುಪಿಸಲು ಅತ್ಯಂತ ಶ್ರಮ ಪಟ್ಟವಳು ಜೇನ್ ಮಾರ್ಸೆಟ್. ಕಷ್ಟವೆನ್ನಿಸಬಹುದಾದ ವಿಷಯಗಳನ್ನು, ತನ್ನ ನಿರೂಪಣಾ ತಂತ್ರ ಮತ್ತು ಪುಸ್ತಕದಲ್ಲಿದ್ದ ಚಿತ್ರಗಳ ಸಹಾಯದಿಂದ ಸುಲಭಗೊಳಿಸಿದ ಆಕೆಯ ಪುಸ್ತಕಗಳು ಆ ಕಾಲದಲ್ಲಿ ಅತ್ಯಂತ ಜನಪ್ರಿಯವಾಗಿದ್ದವು. ಆ ಜನಪ್ರಿಯತೆಯ ತುತ್ತತುದಿಯಲ್ಲಿ ಅವು ಯೂರೋಪಿನ ಹಲವಾರು ಭಾಷೆಗಳಿಗೆ ಅನುವಾದವೂ ಆದವು. ಅಮೆರಿಕದಲ್ಲಿ, ಬಾಲಕಿಯರಿಗೆ ವಿಜ್ಞಾನ ಶಿಕ್ಷಣ ನೀಡಲಾರಂಭಿಸಿದಾಗ, ಅವಳ ಪುಸ್ತಕಗಳನ್ನೇ ಪಠ್ಯಪುಸ್ತಕಗಳಾಗಿ ಬಳಸಲಾಯಿತು. ಆದರೆ ಎಷ್ಟೋ ವರ್ಷಗಳ ಕಾಲ ಆಕೆ ಬರೆದ ಪುಸ್ತಕಗಳ ಮೇಲೆ ಲೇಖಕಿಯ ಹೆಸರೇ ಇರುತ್ತಿರಲಿಲ್ಲ. ಪೈರಸಿ, ಕೃತಿ ಚೌರ್ಯಗಳಿಂದಾಗಿ ಅವಳಿಗೆ ತಲುಪಬೇಕಾದ ಹಣ ಮತ್ತು ಖ್ಯಾತಿ ಸಹ ಸಿಗಲಿಲ್ಲ.)

(ಜೇನ್ ಮಾರ್ಸೆಟ್)

ಫ್ಯಾರಡೆಯನ್ನು ಅಷ್ಟೊಂದು ಪ್ರೇರಿಸಿದ “Conversations on Chemistry”, ಕೆಮಿಸ್ಟ್ರಿ ಪುಸ್ತಕವಾದರೂ, ನಾಟಕದಂತಿದೆ. ಅದರಲ್ಲಿ, ಮೂವರು ಪಾತ್ರಧಾರಿಗಳು; ಒಬ್ಬ ಶಿಕ್ಷಕಿ ಮತ್ತು ಈರ್ವ ಬಾಲಕಿಯರು. ಆ ಬಾಲಕಿಯರಲ್ಲಿ ಒಬ್ಬಳು ಕೊಂಚ “ತರಲೆ” ಸಹ. ಆ ಮೂವರ ನಡುವಿನ ಡೈಲಾಗ್‌ ಗಳ ಮೂಲಕ, ಕೆಮಿಸ್ಟ್ರಿಯ ಪ್ರಥಮ ಪಾಠಗಳ ನಿರೂಪಣೆಯಾಗುತ್ತದೆ. ಈ ನಿರೂಪಣಾ ಶೈಲಿ ಕುತೂಹಲಕಾರಿಯಾದರೂ ಹೊಸತೇನೂ ಅಲ್ಲ)

******

ವಿಜ್ಞಾನವೂ ಸೇರಿದಂತೆ, ಮಹತ್ವದ ವಿಷಯಗಳನ್ನು ಕೆಲವೊಂದು ವರ್ಗಕ್ಕೆ ಮಾತ್ರ ಕಲಿಸುವುದು ಭಾರತೀಯರಾದ ನಮಗೆ ಹೊಸದೇನೂ ಅಲ್ಲ. ಆದರೆ, ಇಂತಹ ತಾರತಮ್ಯಗಳು ವಿಶ್ವದ ಎಲ್ಲ ರಾಷ್ಟ್ರಗಳಲ್ಲಿ ಶತ-ಶತಮಾನಗಳಿಂದ ನಡೆಯುತ್ತಲೇ ಬಂದಿವೆ. ಇಂತಹ ತಾರತಮ್ಯಗಳಿಗೆ ಲಿಂಗ ಮತ್ತು ಆರ್ಥಿಕ ಸ್ಥಿತಿಗತಿಗಳೇ ಮೂಲವಾದರೂ ಭಾರತದಲ್ಲಿ ಅದಕ್ಕೆ ಜಾತೀಯತೆಯೂ ಸೇರಿಕೊಂಡಿದೆ.

ಅವನು ಬಾಲ್ಯದಲ್ಲಿ ಕೊಂಚ ಮಟ್ಟಿನ ಓದು ಬರಹ ಕಲಿತನಾದರೂ, ಅಂತಹ ಕ್ರಮ ಶಿಕ್ಷಣ ಪಡೆಯಲಿಲ್ಲ. ಬಡತನದಿಂದಾಗಿ, ಅವನಿಗೆ ಹದಿನಾಲ್ಕು ವರ್ಷ ವಯಸ್ಸಿದ್ದಾಗಲೇ ಅವನು ಪ್ರಿಂಟಿಂಗ್ ಪ್ರೆಸ್ ಒಂದರಲ್ಲಿ ಕೆಲಸಕ್ಕೆ ಸೇರಬೇಕಾಯಿತು.

ಆದರೆ, ಇಂತಹ ಇತಿಹಾಸದ ನಡುವೆಯೇ, ಹದಿನೇಳನೆಯ ಶತಮಾನದ ಮಧ್ಯಭಾಗದಲ್ಲಿ ರಾಯಲ್ ಇನ್ಸ್ಟಿಟ್ಯೂಟ್ ನಂತಹ ಸಂಸ್ಥೆಯೊಂದು ಇಂಗ್ಲೆಂಡಿನಲ್ಲಿ ಪ್ರಾರಂಭವಾಗಿದ್ದು ಕುತೂಹಲದ ವಿಷಯ. ಅದನ್ನು ಪ್ರಾರಂಭಿಸಿದವರು ಅಂದಿನ ಸಮಾಜದಲ್ಲಿ ಹಣ ಮತ್ತು ಖ್ಯಾತಿ ಪಡೆದಿದ್ದಂತಹ ವಿಜ್ಞಾನಿಗಳು, ಗಣಿತಜ್ಞರು, ತತ್ವಶಾಸ್ತ್ರಜ್ಞರು. ಅದರ ಅಧ್ಯಕ್ಷ ಸ್ಥಾನವನ್ನು ನ್ಯೂಟನ್‌ ನಂತಹ ಮಹಾನ್ ವಿಜ್ಞಾನಿಗಳು ಅಲಂಕರಿಸಿದ್ದಾರೆ. (ಭಾರತೀಯ ಸಂಜಾತ ನೊಬೆಲ್ ಪ್ರಶಸ್ತಿ ವಿಜೇತ ವೆಂಕಿ ರಾಮಕೃಷ್ಣನ್ ಕಳೆದ ತಿಂಗಳಷ್ಟೇ ತಮ್ಮ ಅವಧಿಯನ್ನು ನಿರ್ವಹಿಸಿ ಅಧ್ಯಕ್ಷ ಪದವಿಯನ್ನು ಇನ್ನೊಬ್ಬರಿಗೆ ಒಪ್ಪಿಸಿದರು.)

ಈ ರಾಯಲ್ ಇನ್ಸ್ಟಿಟ್ಯೂಟ್ ತನ್ನ ಪ್ರಾರಂಭದಿಂದಲೂ, ವಿಜ್ಞಾನವನ್ನು ಜನ ಸಾಮಾನ್ಯರಿಗೆ ತಲುಪಿಸುವ ಗುರಿ ಹೊಂದಿದೆ. ಹೀಗಾಗಿ, ಸಾರ್ವಜನಿಕರಿಗೆಂದೇ ವೈಜ್ಞಾನಿಕ ಉಪನ್ಯಾಸಗಳನ್ನು ಮತ್ತು ಪ್ರದರ್ಶನಗಳನ್ನು ಏರ್ಪಡಿಸುವ ಪರಿಪಾಠ ಅದಕ್ಕೆ ಮೊದಲಿನಿಂದಲೂ ಇದೆ. ಇಂತಹ ಉಪನ್ಯಾಸಗಳನ್ನು ಖ್ಯಾತಿವೆತ್ತ ವಿಜ್ಞಾನಿಗಳೂ ನೀಡುತ್ತಾರೆ.

ಮೈಕೇಲ್ ಫ್ಯಾರಡೆ ಪ್ರಿಂಟಿಂಗ್ ಪ್ರೆಸ್ ಸೇರಿ ಕೆಮಿಸ್ಟ್ರಿಯ ಬಗೆಗೆ ಅಭಿರುಚಿ ಬೆಳೆಸಿಕೊಂಡ ವೇಳೆಗೆ, ರಾಯಲ್ ಸೊಸೈಟಿಗೆ ಸುಮಾರು ನೂರೈವತ್ತು ವರ್ಷವಾಗಿತ್ತು. ಆದರೆ ಈ ಸೊಸೈಟಿ ನಡೆಸಿಕೊಡುತ್ತಿದ್ದ ಉಪನ್ಯಾಸ ಮತ್ತು ಪ್ರದರ್ಶನಗಳು ನಿಂತಿರಲಿಲ್ಲ. ಕೆಮಿಸ್ಟ್ರಿಯ ಕುರಿತು ಉಪನ್ಯಾಸಗಳನ್ನು ನೀಡುತ್ತಿದ್ದವನು ಹಂಫ್ರಿ ಡೇವಿ ಎಂಬ ರಾಸಾಯನಿಕಶಾಸ್ತ್ರಜ್ಞ. (ಹಂಫ್ರಿ ಡೇವಿ ಸಾಮಾನ್ಯನೇನಲ್ಲ. ಎಲೆಕ್ಟ್ರೋ ಕೆಮಿಸ್ಟ್ರಿಯಲ್ಲಿ ದೊಡ್ಡ ಹೆಸರು ಮಾಡಿದವನು. ಎಡಿಸನ್ ತನ್ನ ವಿದ್ಯುತ್ ದೀಪವನ್ನು ಸೃಷ್ಟಿಸುವ ಎಷ್ಟೋ ದಶಕಗಳ ಮುನ್ನವೇ ಇನ್ನೂ ಹೆಚ್ಚಿನ ಬೆಳಕು ನೀಡುವ ಎಲೆಕ್ಟ್ರಿಕ್ ಆರ್ಕ್ ಲೈಟ್ ಸೃಜಿಸಿದವನು. ಪ್ರಪ್ರಥಮ ಬಾರಿಗೆ ಪೊಟ್ಯಾಸಿಯಂ ಧಾತುವನ್ನು ಬೇರ್ಪಡಿಸಿದವನು. ಮುಂದೆ ರಾಯಲ್ ಸೊಸೈಟಿಯ ಅಧ್ಯಕ್ಷನೂ ಆದವನು.)

ಜೇನ್ ಮಾರ್ಸೆಟ್‌ ಳ ಪುಸ್ತಕದಿಂದ ಪ್ರೇರಿತನಾಗಿದ್ದ ಫ್ಯಾರಡೆ, ಹಂಫ್ರಿ ಡೇವಿ ನೀಡುತ್ತಿದ್ದ ಕೆಮಿಸ್ಟ್ರಿ ಉಪನ್ಯಾಸಗಳನ್ನು ಚಾಚೂ ತಪ್ಪದೆ ಕೇಳುತ್ತಿದ್ದನಲ್ಲದೇ ಆ ಉಪನ್ಯಾಸಗಳ ನೋಟ್ಸ್ ಸಹ ತೆಗೆದುಕೊಳ್ಳುತ್ತಿದ್ದ. ಅವನು, ಆ ನೋಟ್ಸ್‌ ಗಳನ್ನು ತಾನು ಕೆಲಸ ಮಾಡುತ್ತಿದ್ದ ಪ್ರಿಂಟಿಂಗ್ ಪ್ರೆಸ್‌ ನಲ್ಲಿ ಮುದ್ರಿಸಿ, ಅದಕ್ಕೊಂದು ಸುಂದರ ಬೈಂಡ್ ಹಾಕಿ, ಸುಮಾರು ಮುನ್ನೂರು ಪುಟಗಳ ಪುಸ್ತಕವೊಂದನ್ನು ಸಿದ್ಧ ಮಾಡಿದ.

ಆ ವೇಳೆಗೆ, ಫ್ಯಾರಡೆಗೆ ಸುಮಾರು ಇಪ್ಪತ್ತರ ವಯಸ್ಸು. ಅವನು, ತಾನು ಸಿದ್ಧ ಮಾಡಿದ ಪುಸ್ತಕವನ್ನು ಹಂಫ್ರಿ ಡೇವಿಗೆ ನೀಡಿದ. ಡೇವಿ ಅದನ್ನು ಆದರ, ಕೃತಜ್ಞತೆಗಳಿಂದ ಸ್ವೀಕರಿಸಿದ.

(ಹಂಫ್ರಿ ಡೇವಿ)

ಇದೇ ಸಂದರ್ಭದಲ್ಲಿ, ಡೇವಿ ತನ್ನ ಲ್ಯಾಬರೇಟರಿಯಲ್ಲಿ ಸ್ಫೋಟಕ ವಸ್ತುವೊಂದರ ಜೊತೆಗೆ ಪ್ರಯೋಗ ನಡೆಸುತ್ತಿದ್ದಾಗ , ಅದು ಸಿಡಿದು, ಅವನ ದೃಷ್ಟಿ ಶಕ್ತಿ ಕ್ಷೀಣಿಸಿತು. ಲ್ಯಾಬರೇಟರಿಯಲ್ಲಿ ಕೆಲಸ ಮಾಡಲು, ಅವನಿಗೆ ಸಹಾಯಕನೊಬ್ಬನ ಅವಶ್ಯಕತೆ ಉಂಟಾಯಿತು. ಡೇವಿ, ಆ ಕೆಲಸವನ್ನು ಫ್ಯಾರಡೆಗೆ ನೀಡಿದ.

ಹಂಫ್ರಿ ಡೇವಿಯ ಸಹಾಯಕನಾಗಿ ಕೆಲಸಕ್ಕೆ ಸೇರಿದ ಮೇಲೆ, ಫ್ಯಾರಡೆ, ಡೇವಿಯ ಪ್ರಯೋಗಗಳ ಜೊತೆಗೆ ತನ್ನದೇ ಆದ ಹಲವು ಪ್ರಯೋಗಗಳನ್ನೂ ಮಾಡಲಾರಂಭಿಸಿದ. ಇದಕ್ಕೆ ಡೇವಿಯ ಉತ್ತೇಜನವೂ ಇತ್ತು. ಆದರೆ, ಡೇವಿಯ ಹೆಂಡತಿ ಫ್ಯಾರಡೆಯನ್ನು, ಪ್ರಯೋಗಾಲಯದ ಸಹಾಯಕನಂತೆ ಪರಿಗಣಿಸುತ್ತಿರಲಿಲ್ಲ. ಬದಲಿಗೆ, ಅವನನ್ನು ಡೇವಿಯ ಸೇವಕನೆಂಬಂತೆ ನೋಡುತ್ತಿದ್ದಳು. ಫ್ಯಾರಡೆ ಡೇವಿಯ ಸಹಾಯಕನಾಗಿ ಕೆಲಸಕ್ಕೆ ಸೇರಿದ ಕೆಲ ಸಮಯದ ಮೇಲೆ, ಡೇವಿ ತನ್ನ ಪತ್ನಿಯೊಡನೆ ಯೂರೋಪ್ ಪ್ರವಾಸ ಕೈಗೊಂಡ. ಆ ಪ್ರವಾಸದಲ್ಲಿ ಯೂರೋಪಿನ ಹಲವಾರು ವಿಜ್ಞಾನಿಗಳನ್ನು ಭೇಟಿ ಮಾಡುವ ಕಾರ್ಯಕ್ರಮವೂ ಇತ್ತು. ಫ್ಯಾರಡೆಯನ್ನೂ ಆ ಪ್ರವಾಸಕ್ಕೆ ಕರೆದೊಯ್ಯಲಾಯಿತು. ಫ್ಯಾರಡೆ ಮುಂದೆ ಸ್ವತಃ ಹೇಳಿಕೊಂಡಂತೆ, ಆ ಪ್ರವಾಸದಲ್ಲಿ ಡೇವಿಯ ಪತ್ನಿಯಿಂದಾಗಿ ಫ್ಯಾರಡೆ ಹಲವಾರು ಅವಮಾನ-ಅಗೌರವಗಳನ್ನು ಎದುರಿಸಬೇಕಾಯಿತು. ಕೆಲಸ ಬಿಟ್ಟು ಬಿಡುವ ಆಲೋಚನೆಯೂ ಅವನಿಗೆ ಬಂದಿತು. ಆದರೆ, ವಿಜ್ಞಾನದ ಬಗೆಗಿನ ಅವನ ಪ್ರೇಮ ಹೆಚ್ಚಾಗಿತ್ತು. ವೈಜ್ಞಾನಿಕ ಪ್ರಯೋಗಗಳು, ವಿಜ್ಞಾನಿಗಳ ಜೊತೆಗಿನ ಒಡನಾಟವನ್ನು ಕೇವಲ ಆತ್ಮ ಪ್ರತಿಷ್ಠೆಗಾಗಿ ಬಿಟ್ಟುಕೊಡಲು ಅವನ ಮನಸ್ಸು ಸಿದ್ಧವಿರಲಿಲ್ಲ.

ಮುಂದಿನ ವರ್ಷಗಳಲ್ಲಿ ಫ್ಯಾರಡೆ, ಕೆಮಿಸ್ಟ್ರಿ ಮತ್ತು ಎಲೆಕ್ಟ್ರೊ-ಮ್ಯಾಗ್ನೆಟಿಸಂ ವಿಷಯಗಳಲ್ಲಿ ಅತ್ಯಂತ ಮಹತ್ವದ ಸಂಶೋಧನೆಗಳನ್ನು ಮಾಡಿದ. ಇಂದೂ ಸಹ ಲ್ಯಾಬರೇಟರಿಗಳಲ್ಲಿ ಉಪಯೋಗಿಸುವ ಬನ್ಸನ್ ಬರ್ನರ್‌ ನ ಪ್ರಪ್ರಥಮ ಸೃಷ್ಟಿಕರ್ತ ಇವನೇ. ಆರ್ಗಾನಿಕ್ ಕೆಮಿಸ್ಟ್ರಿಯ ಪ್ರಥಮ ಪಾಠಗಳಲ್ಲಿ ಬರುವ ಬೆನ್ಜ಼ೀನ್ ಅನ್ನು ಬೇರ್ಪಡಿಸಿದವನೂ ಇವನೇ. ಎಲೆಕ್ಟ್ರಾನಿಕ್ಸ್ ಮತ್ತು ಎಲೆಕ್ಟ್ರೊ ಕೆಮಿಸ್ಟ್ರಿಗಳಲ್ಲಿ ಬಳಸುವ ಸಾಮಾನ್ಯ ಪದಗಳಾದ ಕ್ಯಾಥೋಡ್, ಆನೋಡ್, ಐಯಾನ್ ಇತ್ಯಾದಿಗಳ ಹಿಂದೆಯೂ ಇವನ ಕೊಡುಗೆ ಇದೆ. ಎಲೆಕ್ಟ್ರೋ ಮ್ಯಾಗ್ನೆಟಿಸಂ ವಿಷಯದಲ್ಲಂತೂ ಇವನ ಕೊಡುಗೆಯನ್ನು ಬಣ್ಣಿಸಲು ಪುಸ್ತಕಗಳೇ ಬೇಕು. ಇಂದಿನ ಎಲೆಕ್ಟ್ರಿಕ್ ಜೆನರೇಟರ್‌ ಗಳಿಂದ ಹಿಡಿದು, ಮೋಟಾರ್, ಟ್ರಾನ್ಸ್‌ಫಾರ್ಮರ್, ರೇಡಿಯೋ, ಟಿ.ವಿ. ಹೀಗೆ ಯಾವುದೇ ತಂತ್ರಜ್ಞಾನವಿರಲಿ ಅವು ಫ್ಯಾರಡೆಯ ಸಂಶೋಧನೆಗಳ ಮೇಲೆಯೇ ನಿಂತಿವೆ. ನಾವು ಯಾವುದನ್ನು ಇಂದು ಆಧುನಿಕ ಎಂದೆನ್ನುತ್ತೇವೋ ಅದರ ಬುನಾದಿಯನ್ನು ಹಾಕಿದವನು ಮೈಕೇಲ್ ಫ್ಯಾರಡೆ.

ಅವನು, ಹಂಫ್ರಿ ಡೇವಿಯ ಸಹಾಯಕನಾಗಿ ಕೆಲಸಕ್ಕೆ ಸೇರಿದ ಸುಮಾರು ಇಪ್ಪತ್ತು ವರ್ಷಗಳ ನಂತರ, ಮೈಕೇಲ್ ಫ್ಯಾರಡೆಗೆ ವಿಶ್ವದ ಅತ್ಯಂತ ಪ್ರತಿಷ್ಠಿತ ವಿಶ್ವವಿದ್ಯಾಲಯಗಳಲ್ಲಿ ಒಂದಾದ ಆಕ್ಸ್‌ಫರ್ಡ್ ಯೂನಿವರ್ಸಿಟಿಯಿಂದ ಗೌರವ ಡಾಕ್ಟರೇಟ್ ಸಿಕ್ಕಿತು. ದೇಶ-ವಿದೇಶಗಳ ಪ್ರತಿಷ್ಠಿತ ಸಂಘ-ಸಂಸ್ಥೆಗಳಿಂದ ಅವನಿಗೆ ವಿವಿಧ ಗೌರವಗಳು ಸಿಕ್ಕಿದವು. ಬ್ರಿಟಿಷ್ ಸರ್ಕಾರ ಅವನಿಗೆ ನೈಟ್‌ಹುಡ್ ಸಹ ನೀಡಿತು, ಆದರೆ, ಅವನು ಅದನ್ನು ಸ್ವೀಕರಿಸಲು ಒಪ್ಪಿಕೊಳ್ಳಲಿಲ್ಲ; “ನನಗೆ ಸರ್ ಮೈಕೇಲ್ ಹೆಸರು ಬೇಡ. ಮಿಸ್ಟರ್ ಫ್ಯಾರಡೆ ಅಷ್ಟೇ ಸಾಕು” ಎಂದ. ಕ್ರಿಮಿಯನ್ ಯುದ್ಧದ ಸಂದರ್ಭದಲ್ಲಿ, ಬ್ರಿಟಿಷ್ ಸರ್ಕಾರ ಅವನಿಗೆ ಕೆಮಿಕಲ್ ಶಸ್ತ್ರಾಸ್ತ್ರವನ್ನು ನಿರ್ಮಿಸಲು ಸಲಹೆ ನೀಡುವಂತೆ ಆದೇಶ ನೀಡಿತು. ಆದರೆ, ಅದನ್ನೂ ಅವನು ತಿರಸ್ಕರಿಸಿದ.

ಹಂಫ್ರಿ ಡೇವಿಯಂತೆಯೇ, ಮೈಕೇಲ್ ಫ್ಯಾರಡೇ ಸಹ ಜನ ಸಾಮಾನ್ಯರಿಗಾಗಿ ಕೆಮಿಸ್ಟ್ರಿ ಉಪನ್ಯಾಸ ಮತ್ತು ಪ್ರದರ್ಶನಗಳನ್ನು ನೀಡುತ್ತಿದ್ದ. ಅವನು ಕ್ರಿಸ್‌ಮಸ್ ಸಂದರ್ಭದಲ್ಲಿ ನೀಡುತ್ತಿದ್ದ ಉಪನ್ಯಾಸಗಳಂತೂ ಅತ್ಯಂತ ಜನಪ್ರಿಯವಾಗಿದ್ದವು. ಸುಮಾರು ಇಪ್ಪತ್ತು ವರ್ಷಗಳ ಕಾಲ ಅವನು ಈ ಕ್ರಿಸ್‌ಮಸ್ ಉಪನ್ಯಾಸಗಳನ್ನು ಜನಸಾಮಾನ್ಯರಿಗಾಗಿ, ಮಕ್ಕಳಿಗಾಗಿ ನೀಡಿದ.

ಮೈಕೇಲ್ ಫ್ಯಾರಡೆ, ತನ್ನ ಎಪ್ಪತ್ತೈದನೆಯ ವಯಸ್ಸಿನಲ್ಲಿ, ೧೮೬೭ರಲ್ಲಿ ಕಾಲವಾದ. ಅವನು ಸಾಯುವ ಕೆಲ ಸಮಯದ ಮುನ್ನ, ಒಂದು ಕೋರಿಕೆಯನ್ನಿಟ್ಟಿದ್ದ: ಅವನ ದೇಹವನ್ನು ಬ್ರಿಟಿಷ್ ಗಣ್ಯರ ಸ್ಮಶಾನವಾದ ವೆಸ್ಟ್‌ಮಿನ್ಸ್‌ಟರ್ ಅಬೆಯಲ್ಲಿ ಹೂಳದಂತೆ. ಅವನ ಕೋರಿಕೆಯನ್ನು ಮಾನ್ಯ ಮಾಡಲಾಯಿತು. ಇಂದು ವೆಸ್ಟ್‌ಮಿನ್ಸ್‌ಟರ್ ಅಬೆಯಲ್ಲಿ, ನ್ಯೂಟನ್‌ ನ ಸಮಾಧಿಯ ಪಕ್ಕದಲ್ಲಿಯೇ ಮೈಕೇಲ್ ಫ್ಯಾರಡೆಯ ಹೆಸರಿದೆಯಾದರೂ, ಅಲ್ಲಿ ಅವನ ಸಮಾಧಿ ಇಲ್ಲ.

******

ಮೈಕೇಲ್ ಫ್ಯಾರಡೆಯ ಜೀವನ ಅತ್ಯಂತ ಸ್ಫೂರ್ತಿಕಾರಕವಾದರೂ, ನಾವು ಹುಡುಕುತ್ತಿರುವುದು ಕಾಲ ಬಗ್ಗುವ ವಿಷಯವಲ್ಲವೇ? ಐನ್‌ಸ್ಟೈನ್ ಇಟ್ಟುಕೊಂಡಿದ್ದ ಮೂರು ವಿಜ್ಞಾನಿಗಳ ಚಿತ್ರಪಟಗಳಲ್ಲಿ ಫ್ಯಾರಡೆಯದೂ ಒಂದು ಇದ್ದದ್ದು ಏಕೆ?


ಈ ಪ್ರಶ್ನೆಗಳಿಗೆ ಉತ್ತರಿಸಲು ನಾವು ಮತ್ತಷ್ಟು ಕಾಲ ಹಿಂದಕ್ಕೆ ಹೋಗಬೇಕು. ಐಸಾಕ್ ನ್ಯೂಟನ್‌ ನನ್ನು ಭೇಟಿ ಮಾಡಬೇಕು.

(ಮುಂದುವರೆಯುವುದು)