ಪ್ರೀತಿ ಅನ್ನುವ ಅನುಭೂತಿ ನನ್ನನ್ನು ಮೊಟ್ಟ ಮೊದಲಿಗೆ ತಟ್ಟಿದ್ದು ಯಾವಾಗ ಅಂತ ನೆನೆದಾಗಲೆಲ್ಲ, ನನ್ನ ಕಣ್ಮುಂದೆ ಬರುವುದು ನನ್ನ ಶಿಶುವಿಹಾರದ ಅಜ್ಜಿಯ ರೂಪ. ನಾನು ಕಲಿಯುತ್ತಿದ್ದ ಶಿಶುವಿಹಾರದಲ್ಲಿ ಆಯಾ ಕೆಲಸ ಮಾಡುತ್ತಿದ್ದ ಮೂವರಲ್ಲಿ ಒಬ್ಬಾಕೆ ಈ ಅಜ್ಜಿ. ಆ ಶಿಶುವಿಹಾರಕ್ಕೆ ಬರುತ್ತಿದ್ದ ಐದು ವರ್ಷವೂ ತುಂಬದ ಹಸುಳೆಗಳನ್ನೆಲ್ಲ ಅವರವರ ಮನೆಯಿಂದ ಶಾಲೆಯವರೆಗೂ ಕರೆದುಕೊಂಡು ಬರುವುದು, ಮತ್ತೆ ಶಾಲೆ ಮುಗಿದ ಬಳಿಕ ಮನೆ ಮುಟ್ಟಿಸುವುದು ಈ ಆಯಾಗಳ ಕೆಲಸದ ಭಾಗವಾಗಿತ್ತು. ನನ್ನ ಮನೆಯ ದಿಕ್ಕಿನಲ್ಲಿಯೇ ಈ ಅಜ್ಜಿಯ ಮನೆಯೂ ಇದ್ದಿದ್ದು, ಅದೇ ಕಾರಣಕ್ಕೆ ನಾನು ಅವಳ ಗುಂಪಿನಲ್ಲಿದ್ದಿದ್ದು ಆಕಸ್ಮಿಕವೋ ಇಲ್ಲ ಅದು ಯಾವುದೋ ದಿವ್ಯ ಸಂಚೊಂದರ ಭಾಗವೋ ನನಗೀಗಲೂ ಸೋಜಿಗ.

ನನಗಿಂತ ಎರಡು ವರ್ಷಕ್ಕೆ ದೊಡ್ಡವನಾದ ನನ್ನ ಅಣ್ಣ, ಅವನ ವಯಸ್ಸಿನ ಮಕ್ಕಳೊಂದಿಗೆ ಪ್ರತಿದಿನವೂ ಈ ಅಜ್ಜಿಯ ಕೈ ಹಿಡಿದು ಶಿಶುವಿಹಾರಕ್ಕೆ ಹೊರಟು ನಿಂತಾಗಲೆಲ್ಲ, ’ನಾನೂ ಅಜ್ಜಿ ಜೊತೆ ಹೋಗ್ತೀನಿ’ ಎಂದು ನಾನು ಹಟ ಹಿಡಿಯುತ್ತಿದ್ದ ದಿನಗಳ ನೆನಪು ಒಂದಿಷ್ಟೂ ಮಾಸದೆ ಉಳಿದಿರುವುದಾದರೂ ಹೇಗೆ ಎನ್ನುವುದೇ ನನಗೆ ಅಚ್ಚರಿ. ಹೀಗೆ ಹಠ ಹಿಡಿದು ನಾನು ಅತ್ತೇ ಬಿಡುವ ಹಾಗೆ ಮುಸುಮುಸು ಮಾಡಿದಾಗೆಲ್ಲ, ನನ್ನನ್ನು ಎತ್ತಿ ಸೊಂಟದ ಮೇಲೆ ಕೂರಿಸಿಕೊಂಡು, ’ಅಯ್ಯೋ ಇವತ್ತು ಬೇಡ ಮಗಾ, ಇನ್ನೊಂದಿನ ಕರ್ಕೊಂಡೋಗ್ತೀನಿ ನಿನ್ನ’ ಅಂತ  ಮುದ್ದಿಸಿ, ರಮಿಸಿ, ಕರೆದುಕೊಂಡು ಹೋಗದ್ದಕ್ಕೆ ನೂರು ಕಾರಣ ಕೊಟ್ಟು…. ಈ ಅಜ್ಜಿ, ಹೀಗೆ ನನ್ನನ್ನೆತ್ತಿಕೊಂಡು ಮುದ್ದಿಸಲಿ ಎಂದೇ ನಾನು ಇಲ್ಲದ ಅಳು ಬರಿಸಿಕೊಂಡು ಅತ್ತಿದ್ದು, ಮುಂದೆ ಪ್ರೈಮರಿ ಸ್ಕೂಲಿನಲ್ಲಿ ’ಪಾಪ ಪಟ್ಟು ಹಿಡಿದ ಹಠವು ಸಾರ್ಥವಾಯಿತು’ ಎಂದು ರಾಜರತ್ನಂ ಪದ್ಯ ಓದುತ್ತಿರುವಾಗ ಥಟ್ಟಂತ ಅರ್ಥವಾಗಿತ್ತು! ಅಂತೂ ನಾನೂ ’ಶಿಶುವಿಹಾರಕ್ಕೆ ಹೋಗುವಷ್ಟು ದೊಡ್ಡವಳಾದ’ ದಿನ, ಸ್ಲೇಟು ಬಳಪ ಇದ್ದ ಹೆಗಲ ಚೀಲವನ್ನ ಮತ್ತೆ ಮತ್ತೆ ಹೆಗಲ ಮೇಲೆ ಎಳೆದುಕೊಳ್ಳುತ್ತಾ ನಮ್ಮ ವಠಾರದ ಗೇಟಿನಲ್ಲಿ ಯಾವ ಕ್ಷಣದಲ್ಲಾದರೂ ಪ್ರತ್ಯಕ್ಷವಾಗಬಹುದಾಗಿದ್ದ ಆ ದೇವತೆಯನ್ನ ಕಾಯುತ್ತಾ ನಿಂತ ಘಳಿಗೆಯೂ ನನಗೆ ನೆನ್ನೆ ನಡೆದದ್ದೇ ಅನ್ನಿಸುವ ಹಾಗಿದೆ! ತನ್ನ ಮುಂದಿದ್ದ ಐದಾರು ಮಕ್ಕಳಲ್ಲದೆ, ನಡುವಿನಲ್ಲೊಂದು, ಕೈಯಲ್ಲೊಂದು ಮಗುವನ್ನು ಹಿಡಿದು ಗೇಟು ದಾಟಿ ಬಂದ ಈ ಅಜ್ಜಿ ಮಕ್ಕಳನ್ನೆಲ್ಲ ಅಲ್ಲೊಂದು ಕಡೆ ನೆರಳಲ್ಲಿ ನಿಲ್ಲಿಸಿ, ಸೊಂಟದಲ್ಲಿದ್ದ ಮಗುವನ್ನೂ ಮುದ್ದಿಸಿ ಕೆಳಗಿಳಿಸಿ, ನನ್ನನ್ನು ಸೊಂಟಕ್ಕೇರಿಸಿಕೊಂಡು ’ಅಯ್ಯೋ ಶಿಶ್ವಾರಕ್ಕೋಗೋಕೆ ರೆಡಿಯಾಗಿ ನಿಂತ್ಕಂಡ್‍ಬಿಟ್ಯಾ’ ಅಂತ ನೆಟಿಗೆ ಮುರಿದು ಸಂಭ್ರಮಿಸಿದ್ದಳು. ಆ ಸಂಭ್ರಮ ಆವತ್ತು ಈ ಅಜ್ಜಿಯ ಜೊತೆಗೆ ಬಂದ ಎಲ್ಲ ಮಕ್ಕಳದ್ದೂ ಆಗಿತ್ತು. ಅಂದಿನಿಂದ ಶುರುವಾದ ಈ ಯಾತ್ರೆ ಮುಂದೆ ಒಂದು ವರ್ಷದವರೆಗೂ ಹಾಗೇ ಮುಂದುವರೆಯಿತು.

ಮನೆಯಿಂದ ಶುರುವಾಗಿ ಶಿಶುವಿಹಾರ ತಲುಪುವವರೆಗಿನ ಈ ಯಾತ್ರೆಯ ನಡುವೆ ಎರಡೋ ಮೂರೋ ಮಂಟಪೋತ್ಸವಗಳೂ ಇರುತ್ತಿದ್ದವು. ಗೋಪಾಲಿ ಅಂಗಡಿಯ ಮುಂದೆ, ನಂತರ ಇನ್ಯಾರದೋ ಮನೆಯ ಜಗಲಿಯ ಮೇಲೆ ಹೀಗೆ ಎಲ್ಲಿ ನೆರಳು ಉಂಟೋ ಅಲ್ಲಿ ಮಕ್ಕಳನ್ನ ಕೂರಿಸಿ, ಅಕ್ಕಪಕ್ಕದ ಅಂಗಡಿಯವರ್ಯಾರಿಗೋ ಮಕ್ಕಳ ಮೇಲೊಂದು ಕಣ್ಣಿಡಲು ಹೇಳಿ, ಆ ಬೀದಿಯಲ್ಲಿದ್ದ ಮಕ್ಕಳ ಮನೆಗೆ ಹೋಗಿ ಅವರನ್ನ ಕರೆದುಕೊಂಡು ಬಂದು ಕಾಯುತ್ತಿದ್ದ ಗುಂಪಿಗೆ ಸೇರಿಸಿ ಮತ್ತೆ ಮುಂದಿನ ನಿಲ್ದಾಣಕ್ಕೆ ನಡೆಸುತ್ತಿದ್ದಳು. ಪ್ರತಿಸಲವೂ ಸರದಿಯ ಮೇಲೆ ಅವಳ ನಡುವಲ್ಲೊಂದು, ಕೈಯಲ್ಲೊಂದು ಮಗು. ಅರಚುವ, ಕಿರಚುವ, ಅಳುವ, ಅಟ್ಟಹಾಸ ಮಾಡುವ, ನಿಲ್ಲದೆ ಎಲ್ಲೆಂದರಲ್ಲಿ ಓಡುವ ಈ ಕುರಿಮಂದೆಯನ್ನ ಒಂದಿಷ್ಟೂ ಬೇಸರ ತೋರಿಸದೆ, ಬೈಯ್ಯದೆ, ಹೆದರಿಸದೆ ಆಕೆ ಅಷ್ಟು ಮಮತೆಯಿಂದ ಪ್ರತಿದಿನವೂ ಸಂಭಾಳಿಸುತ್ತಿದ್ದ ಬಗೆ ಸಾಮಾನ್ಯದ್ದಲ್ಲ. ಮಠದ ಬೀದಿ, ನಂತರದ ಅಗ್ರಹಾರ, ಅದರ ಒಂದು ತುದಿಯಲ್ಲೇ ಇದ್ದ ತೋಟದ ಸಾಲು, ಅದರ ಕೊನೆಯಲ್ಲಿದ್ದ ಒಂದಿಷ್ಟು ಸಾಬರ ಮನೆಗಳು.. ಇಷ್ಟೆಲ್ಲ ಕಡೆಯಿಂದ ಬರುತ್ತಿದ್ದ, ಒಂದೇ ಭಾಷೆಯನ್ನೇ ಬೇರೆ ಬೇರೆ ರೀತಿಯಲ್ಲಿ ಆಡುತ್ತಿದ್ದ ಬಡವರ, ಮಧ್ಯಮ ವರ್ಗದ, ಇನ್ನೊಂಚೂರು ಅನುಕೂಲವಂತರ ಮನೆಗಳ ಮಕ್ಕಳು ನಮ್ಮ ಗುಂಪಲ್ಲಿದ್ದರು. (ಉಳ್ಳವರ ಮಕ್ಕಳಿಗೆ, ಬಡವರ ಮಕ್ಕಳಿಗೆ, ಎರಡಕ್ಕೂ ನಡುವಿನವರಿಗೆ ಅಂತೆಲ್ಲ ಬೇರೆಬೇರೆ ಶಾಲೆಗಳು ಆಗಿನ್ನೂ ಕಣ್ತೆರೆಯುತ್ತಿದ್ದ ಕಾಲ ಅದು.) ನಮ್ಮ ಶಿಶುವಿಹಾರದಲ್ಲಿ ಚಂದಕ್ಕೆ ಜಡೆಹೆಣೆದು, ಬಣ್ಣಬಣ್ಣದ ರಿಬ್ಬನ್ ಕಟ್ಟಿಕೊಂಡು, ಮುದ್ದಾದ ಚಪ್ಪಲಿ ಧರಿಸಿ ಬರುವ ಮಕ್ಕಳ ಜೊತೆ ಜೊತೆಗೇ ತಲೆಗೆ ಎಣ್ಣೆ ಕಾಣದ, ಮೂಗಲ್ಲಿ ಸಿಂಬಳ ಸುರಿಸಿಕೊಳ್ಳುತ್ತಲೇ ಮಣ್ಣು, ಧೂಳು ಮೆತ್ತಿಕೊಂಡು ಬರಿಗಾಲಲ್ಲಿ ಬರುವ ಮಕ್ಕಳೂ ಇದ್ದರು. ಬಹುತೇಕ ಉಳಿದ ಎಲ್ಲ ದೊಡ್ಡವರ ಹಾಗಲ್ಲದೆ, ಈ ಎಲ್ಲ ಮಕ್ಕಳ ಮೇಲೂ ಒಂದಿಷ್ಟೂ ಭೇದವಿಲ್ಲದೆ ಸದಾ ಜಿನುಗುವ ಚಿಲುಮೆಯಂಥಾ ಪ್ರೀತಿಯನ್ನು ಹರಿಸುತ್ತಿದ್ದ ಈ ಅಜ್ಜಿಯ ಸನ್ನಿಧಿಯಲ್ಲೇ ನಾನು ಪ್ರೀತಿಯ ಮೊದಲ ಪಾಠಗಳನ್ನು ಕಲಿತದ್ದು.

ನಮಗೆ ಕಲಿಸುತ್ತಿದ್ದ ಟೀಚರ್, ಯಾವಾಗಲೂ ಕೊಂಚ ಮ್ಲಾನವದನರಾಗೇ ಇರುತ್ತಿದ್ದಿದ್ದು ನೆನಪಿದೆ. ಇದ್ದ ಇನ್ನಿಬ್ಬರು ಆಯಾಗಳಲ್ಲಿ ರಾಜಮ್ಮನೆಂಬುವಾಕೆ ಸಾಕ್ಷಾತ್ ಭದ್ರಕಾಳಿಯ ಅಪರಾವತಾರದಂತಿದ್ದಳು. ಅವಳು ಕರೆದುಕೊಂಡು ಬರುತ್ತಿದ್ದ ಮಕ್ಕಳೆಲ್ಲ ಥರಥರ ನಡುಗುತ್ತಾ, ಜೋರಾಗಿ ಅಳಲಿಕ್ಕೂ ಹೆದರಿ ಕುಯ್ಗುಡುತ್ತಾ ಮೂಗೊರೆಸಿಕೊಳ್ಳುತ್ತಾ, ಶಾಲೆ ಮುಗಿದು ಮನೆಗೆ ಹೊರಡುವ ಗಳಿಗೆಗೇ ಕಾಯುತ್ತಾ ಕುಳಿತಿರುತ್ತಿದ್ದರು. ಜಯಮ್ಮನೆಂಬುವ ಹೆಸರಿನ ಇನ್ನೊಬ್ಬಾಕೆ ಆಲಸ್ಯದ ಪ್ರತಿರೂಪ. ಆಕೆಯ ಸುಪರ್ದಿಯಲ್ಲಿದ್ದ ಮಕ್ಕಳು ಅತ್ತರೂ, ನಕ್ಕರೂ, ಊಟ ಮಾಡಿದರೂ ಬಿಟ್ಟರೂ, ಚಡ್ಡಿಯಲ್ಲೇ ಉಚ್ಚೆ ಹೊಯ್ದುಕೊಂಡು ಅವಳೆದುರು ಬಂದು ನಿಂತರೂ ಅದೊಂದು ದಿವ್ಯನಿರ್ಲಕ್ಷದಲ್ಲೇ ಕಡೆಗಣ್ಣಲ್ಲಿ ನೋಡಿ ಸುಮ್ಮನಾಗುತ್ತಿದ್ದವಳು ಆಕೆ. ಮಧ್ಯಾಹ್ನಕ್ಕೆ ಮುಂಚೆಯೇ ಬರುತ್ತಿದ್ದ ಉಪಹಾರದ ವೇಳೆಗೆ ಮಕ್ಕಳಿಗೆಲ್ಲ ಅವರವರ ಡಬ್ಬಿ ತೆಗೆದುಕೊಟ್ಟು, ಉಣಿಸಿ, ಕೈತೊಳೆಸಿ, ಮಧ್ಯಾಹ್ನದ ಒಂದು ಸಣ್ಣ ನಿದ್ದೆಗೆ ಮಲಗಿಸಿ, ಈ ಮೂರೂ ಮಂದಿಯೂ ತಮ್ಮ ತಮ್ಮ ಸೀರೆಯ ನಡುವಿಗೆ ಸಿಕ್ಕಿಸಿಕೊಂಡಿದ್ದ ಎಲೆ‌ಅಡಿಕೆಯ ಪುಟಾಣಿ ಚೀಲವನ್ನು ತೆಗೆದು, ಮಾತಿಗೆ ಶುರುವಿಡುತ್ತಿದ್ದರು. ಕೋಣೆಯ ನಡುವಿನಲ್ಲಿ ಕುರ್ಚಿಯಲ್ಲಿ ಕುಳಿತು ಓದುತ್ತಲೋ, ಬರೆಯುತ್ತಲೋ ಇರುತ್ತಿದ್ದ ನಮ್ಮ ಟೀಚರ್ ಕಿವಿಗೆ ಬೀಳದಂತೆ, ಮಲಗಿರುವ ಮಕ್ಕಳು ಏಳದಂತೆ ಆದಷ್ಟೂ ಧ್ವನಿ ತಗ್ಗಿಸಿ, ಆ ಕೋಣೆಗೆ ಅಂಟಿಕೊಂಡಂತೇ ಇದ್ದ ಜಗಲಿಯ ಮೇಲೆ ಎಲೆ‌ಅಡಿಕೆ ಮೆಲ್ಲುತ್ತಾ ಈ ಮೂವರು ಆಯಾಗಳೂ ಹರಟುತ್ತಿದ್ದ ವೇಳೆಯಲ್ಲೂ ಸಾಮಾನ್ಯವಾಗಿ ಈ ಅಜ್ಜಿಯ ತೊಡೆಯ ಮೇಲೆ ಒಂದೋ ಎರಡೋ ಮಕ್ಕಳು ಒರಗಿಕೊಂಡಿರುತ್ತಿದ್ದವು.  ಈ ವೇಳೆಯಲ್ಲಿ ನಿದ್ದೆ ಬರದೆ, ರೇಜಿಗೆ ಮಾಡುವ ಮಕ್ಕಳು ಯಾರ ಸುಪರ್ದಿಯವಾಗಿದ್ದರೂ ’ಇಲ್ಬಾ ರಾಜಾ, ನನ್ ತಾವ’ ಎಂದು ತನ್ನ ಕೈಯೆರಡೂ ಅಗಲಿಸಿ ಹಿಡಿದು ಕರೆದು, ಆ ಮಗುವನ್ನ ಮಡಿಲಲ್ಲಿ ಮಲಗಿಸಿ ಚಕ್ಕು ತಟ್ಟುತ್ತಿದ್ದಿದ್ದು ಈ ಅಜ್ಜಿಯೇ. ರಾಜಮ್ಮನೇನಾದರೂ ಅಗಲಕ್ಕೆ ಕಣ್ಣು ಬಿಟ್ಟು ಹೆದರಿಸುವ ಮುಂಚೆಯೇ ’ನೀನು ಸುಮ್ಗಿರು, ಅದು ಪಾಪ ನಿದ್ದೆಗಣ್ಣಲ್ಲಿ ಎದ್ದು ಬಂದೈತೆ, ನಿಂಗೆ ಯಾವಾಗ್ಲೂ ಒಂದೇಯ ತೆಗಿ’ ಅಂದು ತೆಪ್ಪಗಾಗಿಸುತ್ತಿದ್ದ ಅಜ್ಜಿ ನಮಗೆಲ್ಲ ಶಕ್ತಿ ಸ್ವರೂಪಿಣಿಯ ಹಾಗೆ ಕಾಣಿಸುತ್ತಿದ್ದಳು.

ಮುಕ್ಕಾಗದ ಇಂಥಾ ಪ್ರೀತಿ ನನ್ನ ಬಾಳಿನಲ್ಲಿ ಬೇರೆ ಬೇರೆ ರೂಪ ಧರಿಸಿ ಮತ್ತೆ ಮತ್ತೆ ಎದುರಾದಾಗಲೆಲ್ಲ ನನಗೆ ಥಟ್ ಎಂದು ಅದನ್ನು ಗುರುತಿಸಲು ಸಾಧ್ಯವಾಗಿದ್ದು, ಪ್ರೀತಿಯಿಲ್ಲದ ಕಡೆ ಅದನ್ನು ಒಪ್ಪಿಕೊಳ್ಳದೆ ನಿರಾಕರಿಸುವ ಧೈರ್ಯ ತಾನೇ ತಾನಾಗಿ ಬಂದಿದ್ದೂ ಹೀಗೆ ಈ ಅನುಭೂತಿಯಲ್ಲಿ ನಾನು ಹಾದು ಬಂದಿದ್ದಕ್ಕೇ ಎನ್ನುವುದು ನನ್ನ ನಂಬಿಕೆ. ಗಂಡು ಮಗುವಿಗಾದರೆ ಇಷ್ಟು ಪ್ರೀತಿ, ಹೆಣ್ಣಾದರೆ ಇಷ್ಟು; ಬೆಳ್ಳಗಿದ್ದರೆ ಇಷ್ಟು, ಕಪ್ಪಗಿದ್ದರೆ ಇಷ್ಟು; ಬುದ್ಧಿವಂತರಿಗೆ ಇಷ್ಟು,  ದಡ್ಡರಾದರೆ ಇಷ್ಟು; ಚಂದಕ್ಕಿದ್ದರೆ ಇಷ್ಟು, ಇಲ್ಲದಿದ್ದರೆ ಇಷ್ಟು… ಅಂತೆಲ್ಲ ದೊಡ್ಡವರೆನಿಸಿಕೊಂಡ ಸಾಕಷ್ಟು ಜನ ಅಳತೆ ಮಾಡುತ್ತಾ ಕಳೆದುಕೊಳ್ಳುತ್ತಾ ಕುಳಿತಿದ್ದಾಗ ಈ ಅಜ್ಜಿಯಂಥಾ ಹಲವರು ಯಾವ ಅಳತೆಗೂ ಸಿಕ್ಕದ ಪ್ರೀತಿಯನ್ನ ನನ್ನ ಹೃದಯಕ್ಕೆ ತುಂಬುತ್ತಾ ತಾವೂ ತುಂಬಿಸಿಕೊಳ್ಳುತ್ತಾ ಇದ್ದ ಪರಿಯನ್ನ ನೆನೆದರೆ ಮನಸ್ಸು ತುಂಬಿ ಬರುತ್ತದೆ. ಇಂಥಾ ಪ್ರೀತಿಯಲ್ಲಿ ಹಾದು ಬಂದವರು, ಅದನ್ನ ಗುರುತಿಸಿದವರು, ಜೀವಕ್ಕೆ ಎರವಾಗುವಂತಹ ಕೆಲಸ ಬಹುಷಃ ಯಾವತ್ತೂ ಮಾಡಲಾರರೇನೋ.

ಅಮೆರಿಕದಲ್ಲಿ ವ್ಯಾಲೆಂಟೈನ್ ಡೇ ಎನ್ನುವುದು ’ಪ್ರೇಮಿಗಳ ದಿನ’ ವಲ್ಲ, ’ಪ್ರೇಮದ ದಿನ’. ಇವತ್ತು ಇಲ್ಲಿ ಶಾಲೆಗಳಲ್ಲಿ ಮಕ್ಕಳು ತಮ್ಮ ಟೀಚಗಳಿಗೆ, ಸ್ನೇಹಿತರಿಗೆ, ಮನೆಯಲ್ಲಿ ಅಪ್ಪ, ಅಮ್ಮ, ಅಜ್ಜಿ, ತಾತ, ಪ್ರೀತಿಪಾತ್ರರಾದವರೆಲ್ಲರಿಗೆ ಕಾರ್ಡೋ, ಉಡುಗೊರೆಯೋ, ಮುತ್ತೋ, ಒಂದು ಬೆಚ್ಚನೆ ಅಪ್ಪುಗೆಯೋ ಕೊಟ್ಟು ’ಹ್ಯಾಪಿ ವ್ಯಾಲೆಂಟೈನ್ಸ್ ಡೇ’ ಅಂತಲೋ ’ಐ ಲವ್ ಯೂ’ ಅಂತಲೋ ಹೇಳುತ್ತಾರೆ. ದೊಡ್ಡವರೂ ಸಣ್ಣವರಿಗೆ ಹೀಗೇ ಡಿಟೋ. ಹೀಗೆ ಹೇಳುತ್ತಲೇ ಬೆಳೆದು ದೊಡ್ಡವರಾದ ಹುಡುಗ ಹುಡುಗಿಯರೂ, ಪ್ರೇಮಿಗಳೂ, ಮದುವೆಯಾದವರೂ, ಆಗದವರೂ ವ್ಯಾಲಂಟೈನ್ಸ್ ದಿನವನ್ನು ಹೀಗೆ ಪ್ರೀತಿಪಾತ್ರರ ಜೊತೆಗೆ ಖುಷಿಯಿಂದ ಆಚರಿಸುತ್ತಾರೆ, ಅವರಿಗದು ಇಷ್ಟವಿದ್ದರೆ. ಈ ಕ್ಯಾಪಿಟಲಿಸ್ಟ್ ದೇಶದಲ್ಲಿ ಈ ತರಹದ ವಿಶೇಷ ದಿನಗಳಿಗಂತಲೇ ಮಾರಾಟವಾಗುವ ಸರಕು, ದೊಡ್ಡ ದೊಡ್ಡ ಸೇಲ್‍ಗಳೂ ಅದರ ಹಿಂದಿನ ಚಿತ್ರವಿಚಿತ್ರ ಸಂಚುಗಳೂ ಏನೇ ಇದ್ದರೂ, ಇದನ್ನು ಕೊಳ್ಳಲೇಬಾರದೆಂದೋ ಕೊಳ್ಳಲೇಬೇಕೆಂದೋ ಹೆದರಿಸಿ ಬೆದರಿಸುವ ಪುಂಡಾಟಗಳು ಸಧ್ಯಕ್ಕಂತೂ ಇಲ್ಲ. ಈ ವ್ಯಾಲಂಟೈನ್ ಡೇ ಭಾರತದಲ್ಲಿ ಕೇವಲ ’ಪ್ರೇಮಿಗಳ ದಿನ’ವಾಗಿದ್ದು ಹೇಗೆ? ಹೋಗಲಿ ಪ್ರೇಮಿಗಳಾದರೂ ಹೀಗೆ ಪ್ರೀತಿಯನ್ನ ಆಚರಿಸುವ ಸಂಭ್ರಮವೊಂದನ್ನ ಮನಸಾರೆ ಅನುಭವಿಸಲಿ ಎನ್ನದೆ ಅದಕ್ಕೆ ಇಲ್ಲಸಲ್ಲದ್ದೆಲ್ಲ ಆರೋಪಿಸುತ್ತಾ, ಪ್ರೀತಿ ಎನ್ನುವುದು ಒಂದು ಪೆಡಂಭೂತವೋ ಎನ್ನುವ ಹಾಗೆ ಹೆದರಿಕೊಳ್ಳುತ್ತಾ ಹೆದರಿಸುವ ಮನಸ್ಸುಗಳಲ್ಲಿ ಏನಿದೆ? ಪಶ್ಚಿಮದಿಂದ ಬಂದ  ತಂತ್ರಜ್ಞಾನದಿಂದ ಹಿಡಿದು ತರಕಾರಿಯವರೆಗೆ, ನ್ಯೂಕ್ಲಿಯರ್ ಸೈನ್ಸ್‌ನಿಂದ ಹಿಡಿದು ಪೆಪ್ಸಿ-ಕೋಕ್‌ವರೆಗೆ  ನಮಗೆ ಬೇಕಾದ್ದು, ಬೇಡದ್ದು ಎಲ್ಲವನ್ನೂ ನಮ್ಮದಾಗಿಸಿಕೊಂಡಿರುವಾಗ ಈ ಪ್ರೀತಿಯ ಹೆಸರಿನ ದಿನವೊಂದು ಆಚರಿಸಿಬಿಟ್ಟರೆ, ನಮ್ಮ ಸಂಸ್ಕೃತಿ ಕೆಟ್ಟುಹೋಗಿಬಿಡಬಹುದಾ? ಹಾಗೆ ಕೆಡಲಿಕ್ಕೆ ಸಂಸ್ಕೃತಿ ಎನ್ನುವುದು  ನಿಂತ ನೀರ?  ಈಗ ಪ್ರೀತಿಯ ದಿನ ಆಚರಿಸಬಾರದೆನ್ನುತ್ತಿರುವವರು, ನಾಳೆ ಇಂತಿಂಥಾ ತರಕಾರಿಗಳು ಪಶ್ಚಿಮದಿಂದ ಬಂದ ಕಾರಣಕ್ಕೆ ಅವನ್ನು ತಿನ್ನುವುದು ನಿಲ್ಲಿಸಬೇಕು ಎನ್ನಬಹುದಾ? ಹೆಂಗಸರೊಬ್ಬರೇ ಸಂಸ್ಕೃತಿ ರಕ್ಷಕರಾಗಬೇಕಿಲ್ಲ, ಗಂಡಸರೂ ಸಹ ಇನ್ನು ಮುಂದೆ ಪಂಚೆ ಧರಿಸಿ, ಜುಟ್ಟು ಬಿಟ್ಟು ಹಿಂದಿನ ಹಾಗೇ ಹೂ ಮುಡಿಯಬೇಕು ಎಂದುಬಿಟ್ಟರೆ ಏನು ಗತಿ!

ಪಶ್ಚಿಮದಿಂದಲೇ ಬಂದ ಕ್ರಾಫು ತಲೆಯ, ಪ್ಯಾಂಟು, ಶರ್ಟು ಧರಿಸಿದ್ದ ಶ್ರೀರಾಮಸೇನೆಯ ಹುಡುಗರು, ಪಬ್ಬಿನಲ್ಲಿದ್ದ ಹುಡುಗಿಯರ ಮೇಲೆ ಸಂಸ್ಕೃತಿ ರಕ್ಷಣೆಯ ಹೆಸರಿನಲ್ಲಿ ಕೈಮಾಡಿದ ವಿಪರೀತಕ್ಕೂ, ಈಗ ಅದೇ ಸೇನೆಯು ಯೋಜಿಸಿದ್ದ ವ್ಯಾಲಂಟೈನ್ ಡೇ ದಿನದ ’ರಾಕಿ ಅಥವಾ ತಾಳಿ’ ಎಂಬ ಭಯಂಕರ ತಮಾಶೆಗೂ ಇರುವ ಸಂಬಂಧ ನೋಡಿದರೆ ಎಲ್ಲ ಸ್ಪಷ್ಟವಾಗಲೇಬೇಕಾಗಿದೆ. ಈ ಕಪಿಸೈನ್ಯಕ್ಕೂ, ಅದರ ನಾಯಕರಿಗೂ, ಪ್ರೀತಿಯೊಂದು ಬದುಕಿಗೆ ಕಟ್ಟಿಕೊಡುವ ಭದ್ರತೆ, ಜೀವವೊಂದು ಪ್ರೀತಿಯಲ್ಲಿ ಅರಳಿಕೊಳ್ಳುವ ಪರಿ ಎರಡರ ಪರಿಚಯವೂ ಇಲ್ಲದಿರಬಹುದು. ಮಮತೆ, ವಾತ್ಸಲ್ಯ, ಸ್ನೇಹ, ಪ್ರೇಮ, ಕಾಮ ಎಂದೆಲ್ಲ ಹಲವು ಹೆಸರಿನಲ್ಲಿ, ಹಲವು ರೂಪದಲ್ಲಿ ತಮ್ಮ ಬದುಕಲ್ಲೂ ಒಂದಲ್ಲಾ ಒಮ್ಮೆ ಕಾಣಿಸಿಕೊಂಡಿರಬಹುದಾದ  ಪ್ರೀತಿಯನ್ನ ಇವರ್ಯಾರೂ ಗುರುತೇ ಹಿಡಿಯದೆ ಉಳಿದಿರಬಹುದು. ಹಾಗೆ ಗುರುತು ಹಿಡಿಯುವ ಶಕ್ತಿ ಇಲ್ಲದಕ್ಕೇ, ಕೆಟ್ಟುಹೋಗುವ ಹೆದರಿಕೆಯೂ, ಹೆದರಿಸುವ ಹುಂಬತನವೂ ಇವರದ್ದು ಎನ್ನುವ ಅನುಮಾನ ನನ್ನದು. ಈ ಹುಂಬರು ನಮ್ಮನ್ನೇನು ಮಾಡ್ತಾರೆ ಎಂದು ಅಂದುಕೊಳ್ಳುತ್ತಾ, ಹೆಲ್ಪ್‌ಲೈನ್‌ನ ನಂಬರ್‌ಗಳನ್ನೂ ನೆನಪಿನಲ್ಲಿಟ್ಟುಕೊಳ್ಳುತ್ತಾ ನಮ್ಮ ಪ್ರೇಮಿಗಳೆಲ್ಲಾ ಕೈಕೈಹಿಡಿದು ವ್ಯಾಲೆಂಟೈನ್ಸ್ ದಿನಕ್ಕೆ ಸಿದ್ಧರಾಗಿರುವ ಸುದ್ದಿ ಕೇಳಿ ಖುಶಿಯಾಗುತ್ತಿದೆ. ಅವರ ಪ್ರೀತಿ ಅವರನ್ನ ಯಾವಾಗಲೂ ಕಾಪಾಡಲಿ ಅಂದುಕೊಳ್ಳುತ್ತಾ, ಈ ವ್ಯಾಲಂಟೈನ್ ದಿನಕ್ಕೆ ನಾನು ’ಹ್ಯಾಪಿ ವ್ಯಾಲೆಂಟೈನ್ಸ್’ ಹೇಳಲು, ’ಐ ಲವ್ ಯೂ’ ಹೇಳಲೂ  ನನಗೆ ಎಷ್ಟೆಲ್ಲ ಪ್ರೀತಿಪಾತ್ರರಿದ್ದಾರಲ್ಲ ಅನ್ನಿಸಿ ಖುಶಿಯಾಗುತ್ತಿದ್ದೇನೆ. ಕಡಲಿನಷ್ಟು ಆಳ, ಅಗಲ, ವೈಭವ, ವಿಸ್ತಾರದ ಈ ಪ್ರೀತಿ ಸಣ್ಣ ತೊರೆಯಾಗಿ  ನನ್ನ ಬದುಕಲ್ಲಿ ಬಂದ ಪರಿಯನ್ನೂ, ಅದನ್ನು ತೋರಿಸಿ ಕೊಟ್ಟ ನನ್ನ ಶಿಶುವಿಹಾರದ ಅಜ್ಜಿಯನ್ನೂ ನೆನಪಿಸಿಕೊಳ್ಳುತ್ತಿದ್ದೇನೆ.