ಕಂಪ್ಯೂಟರ್ ಗೆ ಕನ್ನಡ ಕಲಿಸಿದವರೆಂದೇ ಪ್ರಖ್ಯಾತರಾದ ಹಿರಿಯ ವಿದ್ವಾಂಸ ಕೆ.ಪಿ.ರಾವ್ ಅವರು ‘ವರ್ಣಕ’ ಎಂಬ ಹೊಸ ಕಾದಂಬರಿಯೊಂದನ್ನು ಬರೆದಿದ್ದಾರೆ. ಈ ಬೃಹತ್ ಕಾದಂಬರಿಯಲ್ಲಿ ಭಾಷೆಯ ಸುದೀರ್ಘಯಾನವೊಂದು, ಕಾಲದ ಜೊತೆಜೊತೆಗೆ ಸಾಗಿದ ಕಥೆಯಿದೆ. ಕಥಾ ನಾಯಕ ಪ್ರೊ.ಶಂಭು ಮಹಾಜನ್ ಅವರು ನಡೆಸುವ ಭಾಷಾಜ್ಞಾನದ ಅನ್ವೇಷಣೆಯೇ ಕಾದಂಬರಿಯ ಹೂರಣ. ಅವರು ಮಂಗಳೂರು ವಿಶ್ವವಿದ್ಯಾಲಯದಲ್ಲಿ ಭಾಷಾವಿಜ್ಞಾನದ ಕುರಿತು ನೀಡುವ ಉಪನ್ಯಾಸವು ಕಾದಂಬರಿಯ ಆತ್ಮವೆಂದೇ ಹೇಳಬಹುದು. ಆ ಉಪನ್ಯಾಸದ ಪೂರ್ಣಪಾಠ ನಿಮ್ಮ ಓದಿಗಾಗಿ.

ಆತ್ಮನಿವೇದನೆಯ ಕೆಲ ಮಾತುಗಳಿಂದ ನನ್ನ ಭಾಷಣ ಪ್ರಾರಂಭಿಸುತ್ತೇನೆ.

ನನ್ನ ಸ್ವಂತದ ಕಥೆ ಹೇಳಬೇಕಾದರೆ ನಾನು ಭಾಷಾ ವಿಜ್ಞಾನಿಯಾದುದು ಮತ್ತು ಹೊರದೇಶಗಳಲ್ಲಿ ಭಾಷಾ ಸಂಶೋಧನೆ ಮಾಡಲು ಸಾಧ್ಯವಾದುದು ನಾನು ಇಲ್ಲಿ ಪಡೆದ ಇಂಗ್ಲಿಷ್ ವಿದ್ಯಾಭ್ಯಾಸದ ಫಲ. ನನ್ನ ಅಜ್ಜ ತಿರುವನಂತಪುರ, ಚಿದಂಬರಗಳಲ್ಲಿ ಸಂಸ್ಕೃತ ಕಲಿತರು, ಅವರ ಶಾಲೆಯಲ್ಲಿಯೇ ನನ್ನ ಅಪ್ಪ ಕನ್ನಡ, ಸಂಸ್ಕೃತ ಕಲಿತು ಶಾಲಾ ಶಿಕ್ಷಕರಾಗಿದ್ದರು. ಪಂಜೆ ಮಂಗೇಶರಾಯರಂತಹ ಪುಣ್ಯ ಪುರುಷರು ಇಂಗ್ಲಿಷ್ ಶಾಲೆಗಳ ಮಾದರಿಯಲ್ಲಿ ಪ್ರಾರಂಭಿಸಿದ್ದ ಕನ್ನಡ ಶಾಲೆಗಳು, ಕನ್ನಡ ಮಾಧ್ಯಮದಿಂದ ಇಂಗ್ಲಿಷ್ ಕಲಿಸುವ ಶಾಲೆಗಳಾಗಿ ಉನ್ನತಿ ಹೊಂದಿ, ನಮ್ಮಂತಹ ಮೂರನೆಯ ತಲೆಮಾರಿನವರಿಗೆ ಇಂಗ್ಲಿಷಿನ ಮೂಲಕ ಆಧುನಿಕ ವಿಶಾಲ ಜ್ಞಾನಸಾಗರಕ್ಕೆ ತೆರೆದುಕೊಳ್ಳುವ ಅವಕಾಶಗಳನ್ನು ಒದಗಿಸಿದವು.

ಮಂಗಳೂರಿನ ವಿಶ್ವವಿದ್ಯಾಲಯ ಕಾಲೇಜ್ ಎಂದು ನಾಮಕರಣಗೊಂಡ ಗವರ್ಮೆಂಟ್ ಕಾಲೇಜಿನಲ್ಲಿ ಮಾತನಾಡಲು ನನಗೆ ಬಹಳ ಸಂತೋಷವಾಗಿದೆ. ಇದನ್ನು ಸಾಧ್ಯಮಾಡಿದ ಎಲ್ಲರಿಗೂ ಧನ್ಯವಾದಗಳು. ನನ್ನ ಸಂತೋಷಕ್ಕೆ ಕಾರಣಗಳು ಹಲವು. ಎಲ್ಲಕ್ಕೂ ಹೆಚ್ಚಾಗಿ ಅರ್ಧ ಶತಮಾನದ ಮೇಲೆ ಮಂಗಳೂರಿಗೆ ಮತ್ತೊಮ್ಮೆ ಕಾಲಿಟ್ಟ ನನಗೆ ಇಲ್ಲಿ ಮಾತನಾಡಲು ಅವಕಾಶ ದೊರಕಿರುವುದು ಮೊದಲನೆಯ ಕಾರಣ. ನಾನು ಇಲ್ಲಿ ಕಲಿಯುತ್ತಿದ್ದುದು ಭಾಷಾವಾರು ಪ್ರಾಂತರಚನೆಯ ಕಾಲ. ಭಾಷೆಯ ಆಧಾರದ ಮೇಲಿನಿಂದ ಜನಗಳನ್ನು ಒಂದುಗೂಡಿಸಲಿಕ್ಕಾಗಿ ದೇಶವನ್ನು ವಿಭಜಿಸುತ್ತಿದ್ದ ಕಾಲ. ನಮ್ಮ ವಿದ್ಯಾಲಯಗಳು ತಮಿಳುರಾಜ್ಯದ ಮದರಾಸು ವಿಶ್ವವಿದ್ಯಾಲಯದ ಬಂಧನದಿಂದ ಬಿಡಿಸಿಕೊಂಡು ವಿಶಾಲ ಮೈಸೂರು ಪ್ರಾಂತದ ಮೈಸೂರು ವಿಶ್ವವಿದ್ಯಾಲಯದ ತೆಕ್ಕೆಗೆ ಬಂದಿದ್ದವು. ನಾವಿದ್ದಾಗ ಮಂಗಳೂರು ವಿಶ್ವವಿದ್ಯಾಲಯ ಇರಲಿಲ್ಲ. ನಾವು ಮದರಾಸು ಅಥವಾ ಮೈಸೂರು ವಿಶ್ವವಿದ್ಯಾಲಯದ ವಿದ್ಯಾರ್ಥಿಗಳು. ಮಂಗಳೂರಿನಲ್ಲಿ ನಮ್ಮ ಕಾಲೇಜು ವಿದ್ಯಾಭ್ಯಾಸ ಸೈಂಟ್ ಎಲೋಸಿಯಸ್ ಅಲ್ಲವಾದರೆ ಗವರ್ನಮೆಂಟ್ ಕಾಲೇಜಿನಲ್ಲೇ ಆಗಬೇಕಿತ್ತು.

ಅಂದು ನನಗೆ ನಿಜವಾದ ಭಾಷಾಶಿಕ್ಷಣದ ಒಳನೋಟಗಳು ದೊರೆತುದು ಹಂಪನಕಟ್ಟೆ ಬಸ್ ಸ್ಟಾಂಡು ಎಂಬ ವಿದ್ಯಾಲಯದಲ್ಲಿ. ಮಂಗಳೂರಿನ ಬಸ್ ಸ್ಟಾಂಡು ಎಲ್ಲಾ ಸಾರ್ವಜನಿಕ ಸ್ಥಳಗಳಂತೆ ಒಂದು ವಿಚಿತ್ರವಾದ ಬಹುಭಾಷಿಕ ಲೋಕವಾಗಿತ್ತು. ಅಲ್ಲಿಯ ನಿತ್ಯಜನಪ್ರವಾಹ ತನ್ನೊಡನೆ ವಿಚಿತ್ರವಾದ ಸಮಸ್ಯೆಗಳನ್ನೂ ಜ್ಞಾನವನ್ನೂ ದಯಪಾಲಿಸುತ್ತಿತ್ತು. ಅಲ್ಲಿಯ ಮುಖ ಪತ್ರಿಕೆ ಸಂಧ್ಯಾದೀಪ. ಅರ್ಧಾಣೆ, ಕೊನೆಗೆ ಐದು ಪೈಸೆಗೆ ಸಿಗುತ್ತಿದ್ದ ಆ ಪತ್ರಿಕೆಯ ಸಂಪಾದಕರು ಮತ್ತು ವಿತರಕರು ಮನಮೋಹನ್ ಕಾಮತ್ ಎಂಬ ಸಾಧಕರು. ವಿಶಿಷ್ಟವಾದ ಆ ಪತ್ರಿಕೆಯಲ್ಲಿ ಜರುಗುತ್ತಿದ್ದ ಶಬ್ದಸೃಷ್ಟಿ, ಭಾಷಾ ಪ್ರಯೋಗ, ವರ್ತಮಾನದ ಅನಾವರಣ ಇಂದಿಗೂ ನನಗೊಂದು ಆಶ್ಚರ್ಯ. ವಿದ್ಯಾಲಯವೊಂದು ಮಾಡುವ ಕ್ರಮದಲ್ಲಿ ಬಸ್-ಸ್ಟಾಂಡ್ ಆವರಣದಲ್ಲಿ ಸಾಮಾನ್ಯರ ಭಾಷಾ ಪ್ರಯೋಗದಲ್ಲಿ ಬದಲಾವಣೆಗಳನ್ನು ತರಲು ಪರಿಸರದ ಅಗತ್ಯಗಳ ಅಧ್ಯಯನ ಮತ್ತು ಅಗತ್ಯವಾದ ಸಂಸ್ಕರಣದಿಂದ ಸಾಧ್ಯವಿದೆ ಎಂದು ನನಗೆ ತೋರಿಸಿದುದು ಅವರ ಪತ್ರಿಕಾ ಪ್ರಕಾಶನದ ಪ್ರಯತ್ನ. ಭಾಷೆಯನ್ನು ಸುಧಾರಿಸುವುದೆಂದರೆ ಜನರಿಗೆ ತಮ್ಮ ಲೋಕ ಸುಲಭವಾಗಿ ತೆರದುಕೊಳ್ಳಲು ಬೇಕಾದ ಹೊಸ ಶಬ್ದಗಳನ್ನು ಸೃಷ್ಟಿಸುವದು ಅಥವಾ ಇತರ ಪ್ರಚಲಿತ ಭಾಷೆಗಳಿಂದ ಎರವಲು ಪಡೆಯುವುದು ಮತ್ತು ಇಂತಹ ಹೊಸದಾಗಿ ಹುಟ್ಟಿದ ಶಬ್ದಗಳು ಜನಪ್ರಿಯವಾಗುವಂತೆ ಮಾಡುವುದು. ಬಹು ಭಾಷಾ ಪ್ರದೇಶಗಳಲ್ಲಿಯಂತೂ ಇದು ಕಠಿಣ ಆದರೆ ಅಗತ್ಯವಾದ ಕ್ರಿಯೆಯಾಗಿದೆ.

ಪುರಾತನ ತಕ್ಷಶಿಲೆಯಲ್ಲಿಯಾಗಲಿ, ಗುರುಕುಲಗಳಲ್ಲಾಗಲಿ, ಗ್ರೀಸ್ ದೇಶದ ಪ್ಲೇಟೋನ ಕಾಲದ ‘ಸಂಭಾಷಣೆ’ಗಳಲ್ಲಾಗಲಿ ಅಥವಾ ವಿಶ್ವದ ಎಲ್ಲೆಡೆಯಲ್ಲೇ ಇರಲಿ ಭಾಷೆಯ ಸುಧಾರಣೆ ನಡೆಯುವುದು ಇದಕ್ಕೆ ಸಮಾನಾಂತರವಾದ ಕ್ರಮಗಳಲ್ಲೇ ಇರಬೇಕು.

ಪಾಣಿನಿಯವರು, ಪಾಣಿನಿಯವರ ಅಷ್ಟಾಧ್ಯಾಯಿ ಮತ್ತು ಸಂಸ್ಕೃತ ಭಾಷೆಗೆ ತಕ್ಷಶಿಲೆಯ ಕೊಡುಗೆ ಏನೆಂಬ ವಿಷಯದ ಕುರಿತು ಎರಡು ಮಾತು.

ತಕ್ಷಶಿಲಾ / ಟ್ಯಾಕ್ಸಿಲಾ / ತಕ್ಕಸಿಲ್ ಈಗ ಕೇವಲ ಪಾಕಿಸ್ತಾನದ ರಾವಲ್ಪಿಂಡಿ, ಇಸ್ಲಾಮಾಬಾದ್‌ಗೆ ಸಮೀಪದ ಒಂದು ಪಟ್ಟಣ, ಟಾಕ್ಸಿಲಾ ತಾಂತ್ರಿಕ ವಿಶ್ವವಿದ್ಯಾಲಯ, ರಕ್ಷಣಾ ಸಂಶೋಧನಾ ಪ್ರಯೋಗಾಲಯಗಳು, ಪಾಕಿಸ್ತಾನದ ಕ್ಷಿಪಣಿ ಸಂಶೋಧನೆ ಮತ್ತು ಅಭಿವೃದ್ಧಿ ಕೇಂದ್ರ ಎಲ್ಲವೂ ಈ ಪಟ್ಟಣದಲ್ಲಿವೆ. ಶತಮಾನಗಳ ಹಿಂದಿನ ಪ್ರಾಚೀನ ಐತಿಹಾಸಿಕ ತಾಣಗಳೂ ಇಲ್ಲಿವೆ. ವಾಯವ್ಯದಿಂದ ಆಗ್ನೇಯ, ಪೂರ್ವ, ದಕ್ಷಿಣ ದಿಕ್ಕುಗಳಿಗೆ ಹೊರಳುವ, ಈಶಾನ್ಯದ ಚೀನಾವನ್ನು ಪಶ್ಚಿಮ ಏಷ್ಯಾಕ್ಕೆ ಜೋಡಿಸುವ ರಸ್ತೆಗಳು ಇಲ್ಲಿ ಕೂಡುತ್ತಿದ್ದವು. ಬೌದ್ಧ ಮಠಗಳು ಮತ್ತು ವಸಾಹತು ಸ್ಥಳಗಳ ಪುರಾತತ್ವ ಅವಶೇಷಗಳು, ಜಗತ್ತಿನ ಮೊದಲ ‘ವಿಶ್ವವಿದ್ಯಾಲಯ’ಗಳನ್ನು ಹೊಂದಿರುವ ಹಿರಿಮೆ ಇಲ್ಲಿಯದು. ಈಗ ಪುರಾತನವಾದ ಚೀನಾವನ್ನು ಮಧ್ಯಪೂರ್ವಕ್ಕೆ ಸಂಪರ್ಕಿಸುವ, ರೇಶ್ಮೆ ರಸ್ತೆಯನ್ನು ಸೇರುವ ಹೈವೇಗೆ ಸಮಾಂತರವಾಗಿ ರಚಿಸಲಾಗುತ್ತಿರುವ ರೇಲ್ವೇ ದಾರಿ ಟಾಕ್ಸಿಲಾದಿಂದ ಹರಿಪುರಕ್ಕಾಗಿ ಸಾಗಿ ಗಿಲ್ಗಿಟ್ ಪ್ರದೇಶವನ್ನು ಹಾದು ಕುಂಜೆರಾಬ್ ಕಣಿವೆಯನ್ನು ಸೇರಿಕೊಳ್ಳುತ್ತದೆ.

ನಿಮಗೆಲ್ಲಾ ಬಹುಶಃ ತಿಳಿದಿರುವಂತೆ ‘ಸಂಸ್ಕೃತ’ ಎನ್ನುವ ಪದ ಭಾಷೆಯ ಹೆಸರಾಗಿ ಉಪಯೋಗಿಸಲ್ಪಟ್ಟುದು ಇತ್ತೀಚೆಗಷ್ಟೇ. ದೇಶ, ವಿದೇಶಗಳಲ್ಲಿ ಭಾಷಾವಿಜ್ಞಾನದ ಅಪ್ರತಿಮ ಪ್ರತೀಕ ಎಂದು ಹೆಸರಾದ ಪಾಣಿನಿಯವರ ಅಷ್ಟಾಧ್ಯಾಯಿ ವಿವರಿಸುವುದು ಶಿಷ್ಟಭಾಷೆಯೊಂದರ ಇತಿಮಿತಿಗಳನ್ನು. ಅಷ್ಟಾಧ್ಯಾಯಿಯ ನಾಲ್ಕನೆಯ ಅಧ್ಯಾಯದಲ್ಲಿ ಸಂಸ್ಕೃತ ಎಂಬ ಶಬ್ದದ ಉಲ್ಲೇಖವಿದ್ದರೂ ಅದು ಭಾಷೆಯೆಂಬ ಅರ್ಥದಲ್ಲಿ ಬಳಕೆಯಾಗಿಲ್ಲ. ಅಷ್ಟಾಧ್ಯಾಯಿ ರಚಿಸಲ್ಪಟ್ಟ ಸಂದರ್ಭ, ಅದರ ವೈಶಿಷ್ಟ್ಯಗಳು ಮುಖ್ಯವಾಗಿ ಅದರಲ್ಲಿಯ ಉದಾಹರಣೆಗಳು, ಅದರಲ್ಲಿ ಬರುವ ಹಿನ್ನೆಲೆಯ ವಿಷಯ ಸ್ವಲ್ಪ ಯೋಚಿಸೋಣ.

ವೈದಿಕ ಜನಗಳು ತಮ್ಮ ಕೃತಿಗಳ ಭಾಷೆಯಲ್ಲಿ ಹಲವು ಪ್ರಭೇದಗಳನ್ನು ಬಳಸುತ್ತಿದ್ದುದರಿಂದ ಅವರಲ್ಲಿಯೂ ಪರಸ್ಪರ ಅರ್ಥಗ್ರಹಣ ಕಷ್ಟವಾಗುತ್ತಿದ್ದಿರಬೇಕು. ಅದಕ್ಕಾಗಿ ಅಂದಿನ ಭಾಷಾವಿಜ್ಞಾನಿಗಳು ಸಮಾನಾರ್ಥಕ ಮತ್ತು ಅನೇಕಾರ್ಥಕ ಪದಗಳ ಕೋಶಗಳನ್ನು ಸೃಷ್ಟಿಸಬೇಕಾಯಿತು. ಯಾಸ್ಕ ಮಹರ್ಷಿಯವರು ಶಬ್ದ ವ್ಯುತ್ಪತ್ತಿ ಶಾಸ್ತ್ರ, ಅರ್ಥನಿಷ್ಪತ್ತಿಯ ಅಧ್ಯಯನದೊಂದಿಗೆ ಸಮಾನಾರ್ಥ ಪದಗಳ ನಿಘಂಟನ್ನು ರಚಿಸುವಲ್ಲಿ ತಮಗಿಂತಲೂ ಹಿಂದಿನ ಕಾಲದ ಹಲವು ನಿರುಕ್ತಕಾರರ ಮತ್ತು ವ್ಯಾಕರಣಕಾರರ ಹೆಸರುಗಳನ್ನು ಉಲ್ಲೇಖಿಸಿದ್ದಾರೆ. ಕಾತ್ಯಾಯನ, ಪತಂಜಲಿಯವರು ಪಾಣಿನಿಯವರು ಉಲ್ಲೇಖಿಸಿದ ಅಪಿಶಲಿ, ಸ್ಫೋಟಾಯನ ಮುಂತಾದ ಹತ್ತು ಆಚಾರ್ಯರನ್ನೂ ಅವರು ಉಲ್ಲೇಖ ಮಾಡಿರದ ಬೃಹಸ್ಪತಿ, ಭಾಗುರಿ, ಗೋತಮರಾದಿಯಾಗಿ ಹದಿನಾರು ಆಚಾರ್ಯರನ್ನೂ ಹೆಸರಿಸಿದ್ದಾರೆ. ಪಾಣಿನಿಯವರ ಭಾಷಾಶಾಸ್ತ್ರದ ನೆಲಗಟ್ಟನ್ನು ಅವರ ಪೂರ್ವಾಚಾರ್ಯರು ಒದಗಿಸಿದರು.

ಪಾಣಿನಿಯವರ ಪೂರ್ವಾಚಾರ್ಯರು ಅವರಿಗೆ ಒದಗಿಸಿದ ಭಾಷಾಶಾಸ್ತ್ರದ ನೆಲಗಟ್ಟೇನು? ಮತ್ತು ಅವರ ಕೊಡುಗೆಗಳೇನು? ಎಂಬುದನ್ನು ಸಂಕ್ಷಿಪ್ತವಾಗಿ ಅವಲೋಕಿಸೋಣ.

1) ವ್ಯಾಕರಣದ ನಿಜವಾದ ಗುರಿ ಮಾತನಾಡುವ ಭಾಷಾರಚನೆಯನ್ನು ತಿಳಿದುಕೊಳ್ಳುವುದು. ಇದು ಲಿಖಿತ ನಿರೂಪಣೆಯಿಂದ ಬೇರೆಯಾಗಿದೆ ಎಂಬ ಒಳನೋಟ.

2) ವ್ಯಂಜನ ಆದೇಶದ ಉಪಯೋಗ.

3) ಧಾತು ಮತ್ತು ಪ್ರತ್ಯಯಗಳ ಕಾರ್ಯ ವಿಶ್ಲೇಷಣೆ.

4) ಸ್ವರ ಪರ್ಯಾಯಗಳ ಗುರುತಿಸುವಿಕೆ.

5) ‘ತಾರ್ಕಿಕ’ ವರ್ಣನೆಗಿಂತ ಮಿಗಿಲಾಗಿ ಭಾಷೆಯ ‘ವಿವೇಚನಾಯುಕ್ತ ವಿವರಣೆ.

6) ದೃಷ್ಟಾಂತ ಭಾಷೆಯ ಬಳಕೆಯ ಮೂಲಕ ಸಂಕ್ಷಿಪ್ತ ಸೂತ್ರೀಕರಣದ ಸಾಧ್ಯತೆ.

ಪಾಣಿನಿಯವರು ವಾಯವ್ಯ ಪಂಜಾಬಿನ ಶಲಾತುರಾದಿಂದ ಬಂದವರು. ಅವರ ಭಾಷೆ ಉತ್ತರದ ಯಜುರ್ವೇದ ಸಂಪ್ರದಾಯವನ್ನು ಪ್ರತಿನಿಧಿಸುವ ಕಾಠಕಸಂಹಿತೆಗೆ ಹತ್ತಿರದಲ್ಲಿದೆ. (ಪೂರ್ವದ ವಾಜಸನೇಯಿ ಸಂಹಿತಾ), ದಕ್ಷಿಣದ (ತೈತ್ತಿರೀಯ ಸಂಹಿತಾ) ಮತ್ತು ಪಶ್ಚಿಮ (ಮೈತ್ರಾಯಣಿ ಸಂಹಿತಾ): ಇವುಗಳಿಗಿಂತ ಬೇರೆಯಾಗಿ ಉತ್ತರದ ಬ್ರಾಹ್ಮಣರ ವೈದಿಕ ಗದ್ಯದೊಂದಿಗೆ ಹೊಂದಿಕೊಳ್ಳುತ್ತದೆ. ಕೌಶೀತಕಿ ಬ್ರಾಹ್ಮಣದಲ್ಲಿ ಉತ್ತರದ ಭಾಷೆಯನ್ನು ಅತ್ಯುತ್ತಮವೆಂದು ಪರಿಗಣಿಸಲಾಗಿದೆ. ಆದ್ದರಿಂದ, ಜನರು ಭಾಷೆಯನ್ನು ಕಲಿಯಲು ಉತ್ತರಕ್ಕೆ ಹೋಗುತ್ತಾರೆ ಅಥವಾ ಅಲ್ಲಿಂದ ಯಾರಾದರೂ ಬಂದರೆ ಅವರಿಂದ ಕೇಳಲು ಇಷ್ಟಪಡುತ್ತಾರೆ ಎಂಬ ಹೇಳಿಕೆಗಳಿವೆ. ಇದು ಪಾಣಿನಿಯವರು ಉದ್ದೇಶಿಸುವ ಶಿಷ್ಟಭಾಷೆಗೆ ಹತ್ತಿರವಾಗಿರುವ ಸಾಧ್ಯತೆಯಿದೆ.

ಪಾಣಿನಿಯವರು ಅವರಿಗೆ ಪರಿಚಿತವಾಗಿದ್ದ ಅಂದಿನ ಮಾತನಾಡುವ ಭಾಷೆಯನ್ನು ವ್ಯಾಕರಣ ರಚನೆಯಲ್ಲಿ ಅವಲಂಬಿಸಿದ್ದಾರೆ. ವೈದಿಕ ಸಾಹಿತ್ಯದ ತುಣುಕುಗಳನ್ನು ಮಾತ್ರ ಅವರು ಉಪಯೋಗಿಸಿದ್ದಾರೆ. ಅವರು ಹಲವು ಪದಗಳನ್ನು ಮತ್ತು ಪದರೂಪಗಳನ್ನು ತಿಳಿದಿದ್ದರು ಮತ್ತು ಉದಾಹರಿಸಿದರು ಎಂಬುದು ಸಹಜ. ಪಾಣಿನಿಯವರು ಮತ್ತು ಅವರ ಸಹವರ್ತಿಗಳಾಗಿ ವ್ಯಾಕರಣ ವಿಜ್ಞಾನಕ್ಕೆ ಕೊಡುಗೆ ನೀಡಿದ ವೈಯಾಕರಣರು, ತಮ್ಮ ಮೂಲಭೂತ ಆವಿಷ್ಕಾರಗಳಿಗೆ ಅನೇಕ ಪೂರ್ವಸೂರಿಗಳು ಕೊಟ್ಟ ಜ್ಞಾನಕ್ಕೆ ಋಣಿಯಾಗಿದ್ದಾರೆ.

ಪಾಣಿನಿಯವರು ಸೂತ್ರರೂಪದಲ್ಲಿ ಪ್ರತಿಪಾದಿಸಿದ ಇತಿಮಿತಿಗಳನ್ನು ಹೊಂದಿದ ಅಧಿಕೃತ ಭಾಷೆಯ ದಾರಿ ತಿಳಿದೊಡನೆ ಆ ಭಾಷೆಯಲ್ಲಿ ವಿಪುಲವಾದ ಸಾಹಿತ್ಯ ರಚನೆ ಮೊದಲಾಯಿತು. ವಿವಿಧ ಪ್ರಾಂತಗಳ, ವಿವಿಧ ಮೂಲದ ಜನಗಳು ರಚಿಸಿದ ಕೃತಿಗಳು ಪರಸ್ಪರ ಅರ್ಥವಾಗದೆ ಹೋಗುವ ಅಪಾಯ ತಪ್ಪಿತು. ಇದೇ ಕಾಲದಲ್ಲಿ ಲಿಪಿಯ ಬಳಕೆಯೂ ಆರಂಭವಾಗಿ ಬೃಹದಾಕಾರದ ಕಥಾನಕಗಳಾದ ಇತಿಹಾಸ ಪುರಾಣಗಳನ್ನು ಕ್ರೋಢೀಕರಿಸುವ ಕೆಲಸವಾಯಿತು. ಇದೆಲ್ಲಾ ತಕ್ಷಶಿಲೆಯಲ್ಲಿ ನಡೆದ ‘ಸರಿಯಾದ’ ಭಾಷೆಯ ರಚನಾಕ್ರಮ ಮತ್ತು ಶಬ್ದಗಳ ಅರ್ಥನಿಷ್ಪತ್ತಿಯ ಅರಿವಿನಿಂದ ಸಾಧಿಸಿತು.

ಪಾಣಿನಿಯವರ ‘ಅಷ್ಟಾಧ್ಯಾಯಿ’ಯ ಪ್ರಕಾಶನದ ನಂತರ ಅದಕ್ಕೂ ಪೂರ್ವದಲ್ಲಿ ರಚಿಸಲ್ಪಟ್ಟಿದ್ದ ವ್ಯಾಕರಣಗಳೆಲ್ಲವೂ ಮೂಲೆಗುಂಪಾದವು. ಕಾತ್ಯಾಯನರ ‘ವಾರ್ತಿಕ’ ಮತ್ತು ಪತಂಜಲಿಯವರ ‘ಮಹಾಭಾಷ್ಯ’ಗಳು ಪಾಣಿನಿಯವರನ್ನು ಅರ್ಥೈಸುವುದರಲ್ಲಿ ಸಹಾಯಕವಾದವು. ಆಚಾರ್ಯಪಾಣಿನಿಯವರ ಗ್ರಂಥರಚನೆಯ ಅನಂತರದ ಕಾಲದಲ್ಲಿ ಶರ್ವವರ್ಮರ ಕಾತಂತ್ರ, ಕೌಮಾರ, ಕಲಾಪ ಎಂಬ ಹೆಸರುಗಳಿಂದ ಗುರುತಿಸಲ್ಪಟ್ಟ ಕೃತಿ ಪಾಣಿನಿಯವರಿಗೆ ಸವಾಲಾಗಿ ಸುಲಭವಾಗಿ ಸಂಸ್ಕೃತ ಕಲಿಯುವವರಿಗೆ ಕೈಪಿಡಿಯಂತೆ ಬಂದವು. ಅಧ್ಯಯನವನ್ನು ಸುಲಭಗೊಳಿಸುವ ಸುಲಭ ವ್ಯಾಕರಣದ ಪರಂಪರೆ ಇಳಿದು ಬಂತು.

ಏಳನೆಯ ಶತಮಾನದಲ್ಲಿ ಅವತರಿಸಿದ ಕವಿ ಭರ್ತೃಹರಿ ವ್ಯಾಕರಣವನ್ನು ಮತ್ತು ವೇದಾಂತವನ್ನು ಸಮೀಕರಿಸಿದರು. ಸಂಸ್ಕೃತ ವ್ಯಾಕರಣ ಮತ್ತು ಭಾಷಾ ತತ್ತ್ವಶಾಸ್ತ್ರದ ಕುರಿತಾದ ‘ವಾಕ್ಯಪದೀಯ’ ಭಾರತೀಯ ವ್ಯಾಕರಣ ಸಂಪ್ರದಾಯದ ಒಂದು ಆಧಾರ ಪಠ್ಯ, ಪದ ಮತ್ತು ವಾಕ್ಯದ ಮೇಲೆ ಹಲವಾರು ಸಿದ್ಧಾಂತಗಳನ್ನು ವಿವರಿಸುತ್ತದೆ, ಇದರಲ್ಲಿ ಸ್ಫೋಟಸಿದ್ಧಾಂತ ಉಲ್ಲೇಖನೀಯವಾದುದು. ಈ ಕೃತಿಯಲ್ಲಿ ಭರ್ತೃಹರಿ ಅವರು ವಿರೋಧಾಭಾಸಗಳ ತಾರ್ಕಿಕ ಸಮಸ್ಯೆಗಳನ್ನು ಚರ್ಚಿಸಿದರು. ಹೆಸರಿಸಲಾಗದ ಅಸಮರ್ಥತೆಯನ್ನು ಭರ್ತೃಹರಿಯವರು ವಿರೋಧಾಭಾಸವೆಂದು ಕರೆಯುತ್ತಾರೆ, ಅವರು ಸಂಸ್ಕೃತದ ಜನಪ್ರಿಯ ಕಾವ್ಯ ಕೃತಿಯಾದ ‘ಶತಕತ್ರಯ’ದ ಕರ್ತೃ. ಕಾಶ್ಮೀರದ ಶೈವ ಪಂಥಕ್ಕೂ ಭರ್ತೃಹರಿ ಮೂಲಪುರುಷರಾದರು.

ಬೌದ್ಧ ಮತ್ತು ಕೆಲವು ಜೈನ ಪಂಡಿತರು ಸಂಸ್ಕೃತ ಕಲಿಕೆಯಲ್ಲಿ ಆಸಕ್ತಿ ಹೊಂದಿದರು ಅಥವಾ ಅವರಿಗೆ ಅದು ಅಗತ್ಯವಾಯಿತು. ಅಂದಿನ ದಿನಗಳಲ್ಲಿ ನಾಲ್ಕು ವರ್ಣಗಳಿಗೆ, ಸ್ತ್ರೀಯರಿಗೆ, ಯೋಧರಿಗೆ, ಇತರ ಕುಶಲ ಕರ್ಮಿಗಳಿಗೆ ಬೇರೆ ಬೇರೆಯಾದ ವಿದ್ಯಾಪ್ರಾಪ್ತಿಯ ಕ್ರಮಗಳಿದ್ದವು. ಪ್ರತಿಯೊಂದು ನಿರ್ದಿಷ್ಟ ಕೌಶಲಕ್ಕೂ ಸ್ವನಿರ್ಮಿತ ಘಟಕಗಳಿದ್ದು ಅವು ಯಾವುದೇ ಅತಿಕ್ರಮಣವನ್ನು ಸಹಿಸುತ್ತಿರಲಿಲ್ಲ. ಏಕಲವ್ಯನ ಕಥೆಯ ಪರಿಚಯವಿದ್ದವರಿಗೆ ಕ್ಷತ್ರಿಯರಲ್ಲದವರಿಗೆ ಬಿಲ್ವಿದ್ಯೆಯನ್ನು ಪ್ರಾಪ್ತಿಸಿಕೊಳ್ಳುವುದು ಎಷ್ಟು ಕಷ್ಟವಾಗಿತ್ತು ಎಂಬುದು ತಿಳಿದಿರಬಹುದು. ಕೌಟಿಲ್ಯನ ‘ಅರ್ಥಶಾಸ್ತ್ರ’ದ ಪ್ರಕಾರ ಬ್ರಾಹ್ಮಣರಿಗೆ ಮಾತಿಗಾದರೂ ಎಲ್ಲ ರೀತಿಯ ವಿದ್ಯೆಗಳನ್ನು ಪಡೆಯುವ ಅವಕಾಶವಿತ್ತು, ಕ್ಷತ್ರಿಯ, ವೈಶ್ಯ, ಶೂದ್ರರಿಗೆ ಕ್ರಮಾನುಗತವಾಗಿ ವಿದ್ಯಾಪ್ರಾಪ್ತಿಯ ಅವಕಾಶಗಳು ಕಡಿಮೆಯಾಗುತ್ತಿದ್ದವು. ಆದರೆ ಅಂತಹವರು ಆಸಕ್ತಿವಹಿಸಿ ಪರಿಣತರಾದ ಉದಾಹರಣೆಗಳು ಬೇಕಾದಷ್ಟಿವೆ. ಭಾಷಾವಿಜ್ಞಾನ, ನಕ್ಷತ್ರವಿಜ್ಞಾನ ಹೊರತು ಲೇಖನ, ನಾಟಕ ಅಥವಾ ಕಲಾಪ್ರದರ್ಶನ, ಲೋಹ ವಿಜ್ಞಾನ, ಭೂವಿಜ್ಞಾನದಂತಹ ಸಂಶೋಧನೆಗಳು ಕೂಡ ಬ್ರಹ್ಮಜ್ಞಾನದ ವ್ಯಾಪ್ತಿಯ ಹೊರಗಿದ್ದವು. ಬ್ರಾಹ್ಮಣರಲ್ಲದ ಇತರ ಕುಶಲ ಕರ್ಮಿಗಳು ಅವರವರದೇ ವ್ಯವಹಾರ ಸಂಘಗಳನ್ನು ಸ್ಥಾಪಿಸಿದ್ದರೆಂದೂ, ಅಂದಿನ ಕಾಲದ ಅಧ್ಯಯನ ಮಾಡಿರುವ ವಿಚಾರವಾದಿಗಳು ಜಾತಿಪದ್ಧತಿ ಅಥವಾ ‘ಕಾಸ್ಟ್ ಸಿಸ್ಟಮ್’ಗೆ ಇದೇ ಕಾರಣವಾಗಿರಬಹುದೆಂದೂ ಹೇಳಿದ್ದಾರೆ. ಬ್ರಾಹ್ಮಣರು ಅಲಿಖಿತ ಅಕ್ಷರಜ್ಞಾನ ಮತ್ತು ಭಾಷಾಜ್ಞಾನವನ್ನು ದೂರವಿಡಲಿಲ್ಲವಾದರೂ ಲಿಪಿಜ್ಞಾನವನ್ನು ಹಮ್ಮಿಕೊಳ್ಳಲಿಲ್ಲ. ಇಂದಿನವರೆಗೂ ಕೂಡ ಅಕ್ಷರಜ್ಞಾನದ ಅಗತ್ಯವನ್ನು ಅವರು ಕಾಣಲಿಲ್ಲ. ವೇದಾದಿ ಎಲ್ಲ ಗ್ರಂಥಗಳನ್ನು ಕಂಠಪಾಠ ಮಾಡಬೇಕು. ಒಂದು ಗ್ರಂಥವನ್ನು ತಿಳಿಯುವುದೆಂದರೆ ಅದು ನಾಲಿಗೆಯ ತುದಿಯಲ್ಲಿದ್ದು, ಬೇಕೆಂದಾಗ ಉದ್ಧರಿಸಲು ಬರಬೇಕು ಎಂಬ ನಂಬಿಕೆ ಬ್ರಾಹ್ಮಣ ವಿದ್ಯಾರ್ಥಿಗಳದು. ಗುರುಮುಖೇನ ವೇದಗಳ ಅಧ್ಯಯನದಿಂದ ಪಠ್ಯದ ಉಚ್ಛಾರಣೆಗಳನ್ನು ಸರಿಯಾಗಿ ಮಾಡಬಹುದು ಇದನ್ನು ಲೇಖನದಿಂದ ಕಲಿಯುವುದು ಅಸಾಧ್ಯವೆಂದು ಅವರ ನಂಬಿಕೆ. ಅದುದರಿಂದ ಆ ಕಾಲದ ಶಿಕ್ಷಣಪದ್ಧತಿಯಲ್ಲಿ ಲೇಖನದ ಉಲ್ಲೇಖವೇ ಹೆಚ್ಚಾಗಿ ಇರಲಿಲ್ಲ. ಅವೈದಿಕರು ತಮ್ಮ ಪಾಲಿ, ಅರ್ಧಮಾಗಧಿ, ಪ್ರಾಕೃತ ಗದ್ಯಕೃತಿಗಳನ್ನು ಮತ್ತು ಧಾರ್ಮಿಕ ಲೇಖನಗಳನ್ನು ಲಿಪಿರೂಪದಲ್ಲಿ ಬರೆದಿಡುತ್ತಿದ್ದರು. ಆದರೆ ವಾಕ್ಯಾರ್ಥಗಳಲ್ಲಿ ಮತ್ತು ವಾದಗಳ ಸಂದರ್ಭದಲ್ಲಿ ಅವುಗಳ ಉಪಯೋಗ ಕಷ್ಟವಾಗುತ್ತಿತ್ತು. ಇದಕ್ಕಾಗಿ ಅಶ್ವಘೋಷನಂತಹ ಬೌದ್ಧ ಸಾಹಿತಿಗಳು ಬುದ್ಧಚರಿತವನ್ನು ಸಂಸ್ಕೃತದಲ್ಲಿ ಬರೆದರು. ಸಂಸ್ಕೃತದಲ್ಲಿ ಕೃತಿರಚನೆಗೆ ಅನುಕೂಲ ಹೊಂದುವ ಹಾಗೆಯೇ ಭಾಷಾ ಪಾರಂಗತರಾಗಲು ವ್ಯಾಕರಣದ ಅಧ್ಯಯನ ಅಗತ್ಯವಾಗಿತ್ತು. ಪಾಣಿನಿಯರ ಅಷ್ಟಾಧ್ಯಾಯಿ, ಅದಕ್ಕೆ ಸಂಬಂಧಿಸಿದ ಕಾತ್ಯಾಯನರ ವಾರ್ತಿಕಗಳು, ಕೊನೆಗೆ ಪತಂಜಲಿಯವರ ಮಹಾಸಾಗರಕ್ಕೆ ಸಮನಾದ ಮಹಾಭಾಷ್ಯ ಇವನ್ನು ದಾಟುವ ಕಷ್ಟವನ್ನು ನಿವಾರಿಸಲು ಹರಿಗೋಲುಗಳ ರಚನೆಯಾಗಬೇಕಾಗಿತ್ತು. ಇದನ್ನು ಕೆಲವು ವೈದಿಕರು, ಜೈನ ಮತ್ತು ಬೌದ್ಧ ಯತಿಗಳು ಸಾಧಿಸಿದರು.

ಇಂದಿಗೆ ಸುಮಾರು ಇಪ್ಪತ್ತೈದು ಶತಮಾನಗಳಿಗೆ ಹಿಂದೆ ರಚಿಸಲ್ಪಟ್ಟ ಪಾಣಿನಿಯವರ ಅಷ್ಟಾಧ್ಯಾಯಿಯಂತಹ ವಿಶಿಷ್ಟವಾದ ಗ್ರಂಥವನ್ನು ರಚಿಸಿದ ಕರ್ತೃವಿನ ಬುದ್ಧಿಮತ್ತೆ ಅಸಾಧಾರಣವಾದುದು. ಈ ಗ್ರಂಥದ ಪರಿಚಯ ಹದಿನೇಳು ಹದಿನೆಂಟನೆಯ ಶತಮಾನದಲ್ಲಿ ಯುರೋಪಿಯನರಿಗೆ ನೇರವಾಗಿ ಆಗಿರಬಹುದು. ಆ ಕಾಲಕ್ಕೆ ಗ್ರೀಕ್, ಲ್ಯಾಟಿನ್ (ಬಹುಶಃ ಅರೇಬಿಕ್ ಮುಂತಾದ ಪೂರ್ವದ ಭಾಷೆಗಳ ಸಹಿತ) ಮೊದಲಾದ ಭಾಷೆಗಳನ್ನು ಹೊಂದಿದ ಯುರೋಪಿಯನ್ ಭಾಷಾಶಾಸ್ತ್ರವು ಉನ್ನತ ಮಟ್ಟಕ್ಕೆ ಮುಟ್ಟಿತ್ತು. ಯುರೋಪಿಗೆ ಪಾಣಿನಿಯವರ ನೇರ ಪರಿಚಯವಾಗುವ ಕಾಲದಲ್ಲಿ ಅವರಲ್ಲಿ ಭಾಷಾಶಾಸ್ತ್ರ ಸಾಕಷ್ಟು ಮುನ್ನಡೆ ಸಾಧಿಸಿತ್ತು. ಯುರೋಪಿಯನ್ ದೇಶಗಳಿಗೆ ಅಷ್ಟಾಧ್ಯಾಯಿಯಿಂದ ಹೊಸತಾಗಿ ಕಲಿಯುವುದೇನೂ ಇರಲಿಲ್ಲ.

ಪಾಣಿನಿಯವರು ಭಾಷೆಗೆ ತೊಡಿಸಿದ ಇತಿಮಿತಿಗಳೇ ಆ ಮೇಲಿನ ಭಾರತದ ಭಾಷಾ ಶಾಸ್ತ್ರಜ್ಞರಿಗೆ ಪರಿಮಿತಿಗಳಾಗಿ ಪರಿಣಮಿಸಿದವು. ‘ಅಪಾಣಿನೀಯ’ ಎಂಬ ಬೇಲಿ ಕಟ್ಟಿ ಅದರಾಚೆಗಿನದು ನಿಷಿದ್ಧವೆಂಬ ಕಟ್ಟಳೆ ಬಂತು. ಇದು ಪಾಣಿನಿಯವರ ತಕ್ಷಶಿಲೆಯಿಂದ ಎರಡು ಸಹಸ್ರಮಾನಗಳ ಬಳಿಕ ಬಂದ ಕೇರಳದ ನಾರಾಯಣ ಭಟ್ಟತಿರಿಯವರವರೆಗೂ ನಡೆದು ಬಂತು.

ವಿದೇಶೀಯರಿಗೆ ಇಲ್ಲಿನ ಭಾಷೆಗಳನ್ನು ಕಲಿಯುವ ಅಗತ್ಯವೇನು?

ಪಶ್ಚಿಮದೇಶಗಳಿಂದ ಬಂದ ಅಲೆಕ್ಸಾಂಡರನಿಂದ ಮೊದಲಾಗಿ ರಾಜ್ಯವಿಸ್ತರಣೆಯ ನೆಪದಲ್ಲಿ ದಾಳಿ ನಡೆಸಿದವರು ಸಂಪತ್ತು ಮತ್ತು ಧನದಾಶೆಯ ದಾಳಿಕೋರರು ಅಥವಾ ಧನದಾಶೆಯೊಂದೇ ಕಾರಣವಾದ ಲೂಟಿಕೋರರು. ಹತ್ತನೇ ಶತಮಾನದಲ್ಲಿ ಲೂಟಿಕೋರರ ಸಂಗಾತಿಯಾಗಿ ಬಂದು ಸೇರಿ ಭಾರತದಲ್ಲಿದ್ದು ಭಾಷೆ, ಸಾಹಿತ್ಯ ಸಂಸ್ಕೃತಿಗಳನ್ನು ನಿಷ್ಪಕ್ಷಪಾತಿಯಾಗಿ ತಾಳ್ಮೆಯಿಂದ ಕಲಿತು ಅನುವಾದ ಮಾಡಬಲ್ಲ ಭಾಷಾಪ್ರೇಮಿಯಾಗಿದ್ದ ಅಲ್-ಬಿರೂನಿಯವರು ಇದಕ್ಕೆ ಮೊದಲ ಅಪವಾದ. ಲೂಟಿಕೋರರಿಗಿಂತ ಬೇರೆ ರೀತಿಯವರು ಭಾರತಕ್ಕೆ ಈಶಾನ್ಯ ದಿಕ್ಕಿನಿಂದ ಬಂದ ಚೀನಾ ಪ್ರವಾಸಿಗಳಂತಹವರು ಭಾರತದ ಜ್ಞಾನ ಭಂಡಾರವನ್ನು ಮತ್ತು ಸಾಂಸ್ಕೃತಿಕ ಸಂಪತ್ತನ್ನು ಅರಿಯಲು ಬಂದವರು. ಲೂಟಿಕೋರರಿಗೆ ಬರಿಯ ಸಂಪತ್ತಿನ ಆಸೆಯಿತ್ತಲ್ಲದೆ ಸಾಂಸ್ಕೃತಿಕ, ಸಾಹಿತ್ಯಿಕ ಭಂಡಾರದ ಅರಿವೂ ಇರಲಿಲ್ಲ, ಉಪಯೋಗವೂ ಇರಲಿಲ್ಲ, ಹೊರ ದೇಶದಲ್ಲಿ ನೆಲೆಸುವ ಅಪೇಕ್ಷೆಯೂ ಅವರಿಗಿರಲಿಲ್ಲ. ಅವರ ಗುರಿ ಹೊತ್ತೊಯ್ಯಬಹುದಾದ ಚರ ಸಂಪತ್ತಿನ ಮೇಲಷ್ಟೇ ಇತ್ತು.

ವ್ಯಾಪಾರಿ ಜನಗಳು ಇನ್ನೊಂದು ರೀತಿಯವರು-ಅವರು ದಾಳಿಕೋರರು ಮತ್ತು ಲೂಟಿಕೋರರಿಗಿಂತ ಬೇರೆಯಾದ ದಾರಿ ಹಿಡಿಯಬೇಕಾಯಿತು. ವೈಶ್ಯರು ಅವರ ವ್ಯವಹಾರಕ್ಕೆ ಅಗತ್ಯವಾದ ಸಮಾನ ಭಾಷೆ ಸಂವಹನಗಳತ್ತ ಗಮನ ಹರಿಸಿದರು. ಹದಿನಾರನೆಯ ಶತಮಾನ ಮೊದಲ್ಗೊಂಡು ಬಂದವರಲ್ಲಿ ಬ್ರಿಟಿಷರು, ಫ್ರೆಂಚರು, ಡಚ್ಚರು, ಪೋರ್ಚುಗೀಸರು ಇದ್ದರು, ಈ ವಿದ್ಯಮಾನ ಹೆಚ್ಚಾಗಿ ನಡೆದುದು ಸಮುದ್ರ ಕರಾವಳಿಗಳಲ್ಲಿ. ಭೂಖಂಡದ ಒಳಗಿನ ಭಾಗಗಳಿಗೆ ಇದು ತಲಪಿದರೂ ಬಹಳ ನಿಧಾನವಾಗಿಯೇ ತಲಪಿತು. ಬ್ರಿಟಿಷರು ಮತ್ತು ಇತರ ಯುರೋಪಿನ್ನರು ಕಲಕತ್ತೆಯಲ್ಲಿ ಬಂದಿಳಿದಾಗ ಸ್ಥಾನೀಯ ಭಾಷೆಗಳಲ್ಲಿ ಆಸಕ್ತಿವಹಿಸಿ ಕೆಲಸ ಮಾಡಿದರು. ಇದು ಏಶಿಯಾಟಿಕ್ ಸೊಸಾಯಿಟಿ ಮತ್ತು ಶ್ರೀರಾಂಪುರ್ ಪ್ರೆಸ್ ಎಂದು ಕರೆಯಲ್ಪಟ್ಟ ಕಲ್ಕತ್ತಾದ ಮುದ್ರಣಾಲಯದ ಮೂಲಕ ಪ್ರಚಾರಕ್ಕೆ ಬಂತು. ಆ ಕಾಲದ ಕಲ್ಕತ್ತೆಯ ವಿಲ್ಲಿಯಂ ಜೋನ್ಸ್ ಮತ್ತು ವಿಲ್ಸನ್, ಜಾತಿ ಧರ್ಮಗಳ ವಿಷಯದಲ್ಲಿ ತಟಸ್ಥರಾಗಿದ್ದು ಭಾಷೆಗೆ ಸಂಬಂಧಿಸಿದ ಕೆಲಸಗಳನ್ನು ಮಾಡಿದರು. ಇವರಿಬ್ಬರದು ಪೂರ್ತಿಯಾಗಿ ಭಾಷಾಪ್ರೀತಿ ಮತ್ತು ಅನ್ಯಭಾಷಾಗೌರವ.

ಕಲ್ಕತ್ತಾ ತಲಪಿದ ಧಾರ್ಮಿಕ ಯೂರೋಪಿಯನ್ನರಿಗೆ ಸ್ವಧರ್ಮದ ಮೇಲೆ ಅಭಿಮಾನವಿದ್ದುದು ಸಹಜ. ‘ಮಾನವನ ಆತ್ಮೋದ್ಧಾರವಾಗಬೇಕಾದರೆ ಅದು ತಮ್ಮ ಧರ್ಮದಿಂದಲೇ ಆಗಬೇಕು, ಇತರರು ನಂಬಿಕೊಂಡು ಬಂದಿರುವ ಧರ್ಮಗಳಿಂದ ಅದು ಸಾಧ್ಯವಿಲ್ಲ, ಅವರಿಗೆ ಸರಿದಾರಿಯನ್ನು ತೋರಿಸಲು ಸಹಾಯಬೇಕು’ ಎಂದು ಅವರು ಎಣಿಸಿದ್ದರು. ಕೆಲವರಾದರೂ ಇಲ್ಲಿರುವ ಧರ್ಮಗ್ರಂಥಗಳನ್ನು ಅಧ್ಯಯನಮಾಡಿ ಅವುಗಳು ಸ್ಥಳೀಯರಿಗೆ ಯಾಕೆ ಅಷ್ಟು ಮುಖ್ಯವಾಗಿವೆ, ಅವು ಏನು ಹೇಳುತ್ತವೆ ಯಾಕೆ ಜನಗಳ ಮನಸ್ಸಿಗೆ ಮುಟ್ಟಿವೆ ಎಂಬುದನ್ನು ತಿಳಿದುಕೊಳ್ಳುವ ಪ್ರಯತ್ನವನ್ನು ಮಾಡುವ ಮೊದಲ ಹೆಜ್ಜೆಯಾಗಿ ಇಂಡಿಯಾದ ಭಾಷೆ, ಧಾರ್ಮಿಕ ಮತ್ತು ಲೌಕಿಕ ಸಾಹಿತ್ಯವನ್ನು ಅಭ್ಯಸಿಸುವ ಪ್ರಯತ್ನ ಮಾಡಿದರು. ಅದಕ್ಕಾಗಿ ಇಲ್ಲಿಯ ಲಿಖಿತಸಾಹಿತ್ಯವನ್ನು ಸಂಗ್ರಹಿಸಿದರು. ಇದನ್ನು ಅವರು ವ್ಯವಹಾರವಾಗಿ ನೋಡಿದರು.

ನಮ್ಮ ದೃಷ್ಟಿಕೋನವನ್ನು ಸಂಕುಚಿತಗೊಳಿಸುವ ಮೂಢ ನಂಬಿಕೆಗಳು

ಎಲ್ಲಾ ವಿಜ್ಞಾನದ ವಿಷಯಗಳಲ್ಲಿರುವಂತೆ ಭಾಷಾವಿಜ್ಞಾನದ ವಿಷಯದಲ್ಲಿಯೂ ಕೆಲವು ಮೂಢನಂಬಿಕೆಗಳೂ ಅಪನಂಬಿಕೆಗಳೂ ಇವೆ. ತಥ್ಯದರ್ಶನಕ್ಕೆ ಇರುವ ಮೊದಲ ಅಡ್ಡಗೋಡೆ ಈ ಕುರುಡುನಂಬಿಕೆಗಳು. ಅವುಗಳಿಂದಲೇ ನಮ್ಮ ಮಾತನ್ನು ಪ್ರಾರಂಭಿಸೋಣ. ನಾವು ಚಿಕ್ಕವರಿದ್ದಾಗ ಯುರೋಪ್ ದೇಶಗಳ ಬಿಳಿ ಜನರು ಅಂದರೆ ನಮ್ಮನ್ನು ಆಳುತ್ತಿದ್ದ ಬ್ರಿಟಿಷರ ಬಗ್ಗೆ ನಮ್ಮ ಹಳ್ಳಿಯ ಜನರಲ್ಲಿ ಕೆಲವು ಮೂಢನಂಬಿಕೆಗಳು ಇದ್ದವು. ನಮ್ಮ ಹಳ್ಳಿಯ ಸರ್ವಜ್ಞ-ವಿದ್ಯಾರಣ್ಯರ ಮಾತಿನಂತೆ ಬ್ರಿಟಿಷ್ ಜನರೆಂದರೆ ಅವರು ಶ್ರೀರಾಮನ ಜೊತೆಯಲ್ಲಿದ್ದ ಕಪಿಗಳ ಪೀಳಿಗೆಯಂತೆ, ಅವರಿಗೆಲ್ಲ ಬಾಲವಿದೆ, ಅದನ್ನು ಮುಚ್ಚಿಕೊಳ್ಳುವುದಕ್ಕಾಗಿ ಅವರು ಫುಲ್ ಪ್ಯಾಂಟ್ ಧರಿಸುತ್ತಾರೆ ಇತ್ಯಾದಿ.

ಇನ್ನೊಂದು ಮೂಢನಂಬಿಕೆ ಹಳ್ಳಿಯಲ್ಲಿ ಮಾತ್ರವಲ್ಲ ದಿಲ್ಲಿಯವರೆಗೂ, ಅಂದು ಮಾತ್ರವಲ್ಲ ಇಂದಿಗೂ ಹಬ್ಬಿರುವುದನ್ನು ಕಂಡೆ. ಇದರಲ್ಲಿ ಆಧುನಿಕರೂ, ವಿಚಾರವಾದಿಗಳೂ, ಪಂಡಿತರೂ ಸೇರಿದ್ದಾರೆ. ಇದು ಅಪನಂಬಿಕೆಯ ಫಲವೋ, ಮೂಢನಂಬಿಕೆಯ ಪರಿಣಾಮವೋ, ಸ್ವಪ್ರತಿಷ್ಠೆಯನ್ನು ಬೆಳೆಸಿಕೊಳ್ಳುವ ಹುಚ್ಚು ಪ್ರಯತ್ನವೋ ಗೊತ್ತಿಲ್ಲ. ‘ಬ್ರಿಟಿಷರು ಮತ್ತು ಇತರ ಯೂರೋಪಿಯನ್ನರು ಭಾರತವನ್ನು ಬಿಟ್ಟು ಹೋಗುವ ಹಿಂದೆ+ಮುಂದೆ ಇಲ್ಲಿಂದ ನಮ್ಮ ಪೂರ್ವಿಕರ ಅಪಾರವಾದ ಜ್ಞಾನಭಂಡಾರವನ್ನು ಕದ್ದು ಅಥವಾ ಬಲಾತ್ಕಾರದಿಂದ ವಶಪಡಿಸಿಕೊಂಡು ಅಥವಾ ದುಡ್ಡಿನಾಸೆ ತೋರಿಸಿ ಮೋಸದಿಂದ ಕೊಂಡುಕೊಂಡು ಅಲ್ಲಿಗೆ ಸಾಗಿಸಿದರಂತೆ. ಅವರು ಸ್ವರ್ಣಭಂಡಾರವನ್ನು ಸಾಗಿಸುವುದರೊಂದಿಗೆ ಎಲ್ಲಾ ರೀತಿಯ ಯಂತ್ರ, ಮಂತ್ರ, ತಂತ್ರಜ್ಞಾನಗಳನ್ನು ಒಳಗೊಂಡ ಇಲ್ಲಿಯ ಗ್ರಂಥಗಳನ್ನೂ ಸಾಗಿಸಿದರು. ಅದರಿಂದ ದೊರಕಿದ ಅದ್ಭುತವಾದ ಜ್ಞಾನದಿಂದಲೇ ಅವರು ನಾವು ಇಂದು ಆಧುನಿಕ ಎಂದು ಹೇಳಬಹುದಾದ ವೈದ್ಯವಿದ್ಯೆ ಮತ್ತು ವೈಜ್ಞಾನಿಕ ಸಂಶೋಧನೆಗಳನ್ನು ಮಾಡುವುದು ಸಾಧ್ಯವಾಯಿತು. ಅಣುಬಾಂಬು, ಬಾಹ್ಯಾಕಾಶಯಾನ, ಖಗೋಲವಿಜ್ಞಾನ, ವಿಮಾನ, ಗಣಿತ ಇವೆಲ್ಲಾ ಇಲ್ಲಿ ವೇದಕಾಲದಿಂದಲೇ ನಮ್ಮಲ್ಲಿತ್ತು, ಅವುಗಳನ್ನು ಅಲ್ಲಿಯ ವಿಜ್ಞಾನಿಗಳು ಮುಂದುವರಿಸಿ ನಮ್ಮನ್ನು ಹಿಂದಿಕ್ಕಿದರು. ಅವರು ಇಲ್ಲಿಂದ ಕೊಂಡುಹೋದ ಲಿಖಿತ ಜ್ಞಾನವೇ ಅವರ ಪ್ರಗತಿಯ ಆಧಾರ. ಭಾಷಾವಿಜ್ಞಾನ ವ್ಯಾಕರಣ ಇತ್ಯಾದಿಗಳಲ್ಲಿ ಕೂಡಾ ಭಾರತ ದೇಶ ಮಾಡಿದ್ದ ಅದ್ಭುತ ಸಾಧನೆಯನ್ನು ಅವರು ಅಲ್ಲಗಳೆಯುತ್ತಾರೆ. ಇತ್ತೀಚೆಗಷ್ಟೇ ಯೋಗ, ವೇದ ಮುಂತಾದವುಗಳು ಪೂರ್ವದೇಶಗಳಿಂದ ಬಂದಿರುವುದಾಗಿ ಒಪ್ಪಿಕೊಳ್ಳುತ್ತಿದ್ದಾರೆ,’ ಇತ್ಯಾದಿ.

ಯಾಸ್ಕ ಮಹರ್ಷಿಯವರು ಶಬ್ದ ವ್ಯುತ್ಪತ್ತಿ ಶಾಸ್ತ್ರ, ಅರ್ಥನಿಷ್ಪತ್ತಿಯ ಅಧ್ಯಯನದೊಂದಿಗೆ ಸಮಾನಾರ್ಥ ಪದಗಳ ನಿಘಂಟನ್ನು ರಚಿಸುವಲ್ಲಿ ತಮಗಿಂತಲೂ ಹಿಂದಿನ ಕಾಲದ ಹಲವು ನಿರುಕ್ತಕಾರರ ಮತ್ತು ವ್ಯಾಕರಣಕಾರರ ಹೆಸರುಗಳನ್ನು ಉಲ್ಲೇಖಿಸಿದ್ದಾರೆ.

ಯಾವ ಯುರೋಪಿಯನ್ನರೂ ಮೌಖಿಕ ಜ್ಞಾನಭಂಡಾರಗಳನ್ನು ಇಲ್ಲಿಂದ ಒಯ್ಯಲಿಲ್ಲ. ಅದು ಸಾಧ್ಯವೂ ಇಲ್ಲ. ಇಲ್ಲಿ ನಡೆದುದೆಲ್ಲಾ ಅಕ್ಷರವ್ಯಾಪಾರ ಅಥವಾ ಜ್ಞಾನವಿಕ್ರಯ. ನಡೆದುದೆಲ್ಲಾ ಪಂಡಿತರಿಗೆ, ಮೌಲವಿಗಳಿಗೆ, ಇತರ ಧರ್ಮದ ಅಧಿಕಾರಿಗಳಿಗೆ, ಧರ್ಮಜ್ಞರಿಗೆ ‘ಕ್ಯಾಶ್ ಪೇಮೆಂಟ್’ ನಗದು ಪಾವತಿಯ ಮೂಲಕ. ಮುಖ್ಯವಾಗಿ ಕಾಶಿ, ಕಾಶ್ಮೀರ, ಕಲ್ಕತ್ತಾ, ಉತ್ತರದಲ್ಲಿ ಮೇರಠ್ ಹರಿದ್ವಾರದ ಸುತ್ತಮುತ್ತಲಿನ ಪಂಡಿತರಿಗೆ ಸ್ವರ್ಣದಾನ ಮಾಡಿ ಗ್ರಂಥಗಳನ್ನು ಖರೀದಿಸಿದರು. ದಿಲ್ಲಿಯಲ್ಲಿ ಕೆಲವು ಪಂಡಿತರು ದುಡ್ಡಿನಾಸೆಗಾಗಿ ಧರ್ಮ ಪರಿವರ್ತನೆ ಮಾಡಿಕೊಂಡರು. ಕೆಲವರು ಆಳುವ ಅರಸರನ್ನು ಮೆಚ್ಚಿಸುವುದಕ್ಕಾಗಿ ತಮ್ಮಲ್ಲಿದ್ದ ಪುರಾತನ ಕಾಗದ ಪತ್ರಗಳನ್ನು ಕೊಟ್ಟರು. ಹೀಗೆ ಧರ್ಮ ಪರಿವರ್ತನೆ ಅಥವಾ ಧರ್ಮಾಂತರ ಮಾಡಿದುದು ದುಡ್ಡಿಗಾಗಿ. ಇಂತಹ ಕೆಲಸವನ್ನು ಮಾಡಿದರೆ ತಪ್ಪು ಯಾರದು ನೀವೇ ಹೇಳಿ. ಇದರೊಟ್ಟಿಗೆ ಜರಗಿದ ಇನ್ನೊಂದು ಆಸೆಬುರುಕತನದ ಕಥೆಯನ್ನು ಹೇಳಬೇಕು. ಎಷ್ಟೋ ಜನ ದೇಶೀಪಂಡಿತರು ಡುಪ್ಲಿಕೇಟ್ ಅಥವಾ ನಕಲಿಗ್ರಂಥಗಳನ್ನು ತಯಾರಿಸಿ ಅವುಗಳು ಪುರಾತನ ಮೂಲದವೆಂದು ನಂಬಿಸಿ ಮೋಸಗೊಳಿಸಿದ ಉದಾಹರಣೆಗಳು ಬೇಕಾದಷ್ಟಿವೆ. ಇಂತಹ ಒಂದು ತಮಾಷೆಯ ಸಂದರ್ಭದಲ್ಲಿ ಸೃಷ್ಟಿಸಿದ ಮತ್ಸ್ಯಪುರಾಣದಲ್ಲಿ ಬ್ರಿಟಿಷ್ ಅಧಿಕಾರಿ ವಾರನ್ ಹೇಸ್ಟಿಂಗ್ಸನನ್ನು ವಿಷ್ಣುವಿನ ಅವತಾರವೆಂದು ಹೆಸರಿಸಲಾಗಿತ್ತೆಂದು ಕೇಳಿದ್ದೇನೆ. ಎಷ್ಟೋ ಮಂದಿ ಧರ್ಮಜ್ಞರು ತಮ್ಮ ವಶದಲ್ಲಿದ್ದ ಪುರಾತನ ಮೂರ್ತಿಗಳನ್ನು ಆಭರಣಗಳನ್ನು ದುಡ್ಡಿಗೆ ಮಾರಿಕೊಂಡರೆಂದು ತಿಳಿದುಬಂದಿದೆ. ಈ ರೀತಿಯ ದಾನ, ವಿಕ್ರಯ ಭಾರತ ದೇಶದ ಅವನತಿಯ ಲಕ್ಷಣವಾಗಿ ಕಂಡರೂ ಇನ್ನೊಂದು ರೀತಿಯಲ್ಲಿ ನೋಡಿದರೆ ಆ ವಸ್ತುಗಳು ಅಯೋಗ್ಯರ ಕೈಯಲ್ಲಿ ಅನುಪಯೋಗಿಯಾಗಿ ಉಳಿಯುವ ಬದಲು ಕೆಲವಾದರೂ ಯೋಗ್ಯರ ಕೈಸೇರಿ ಅದರಿಂದಾಗಿ ಇಂಡಿಯಾ ವಿಶ್ವಕ್ಕೆ ತನ್ನನ್ನು ತೆರೆದುಕೊಂಡುದು ಅದ್ಭುತವೆನಿಸುತ್ತದೆ.

ಬ್ರಿಟಿಷರ ಸಾಮ್ರಾಜ್ಯ ಭಾರತದಲ್ಲಿ ನೆಲೆಯೂರಿ ಅಧಿಕಾರ ಗ್ರಹಣ ಮಾಡುವುದರ ಜೊತೆಗೆ ದೇಶೀ ಶಿಕ್ಷಣಪದ್ಧತಿಗೆ ಹೋಲಿಸಿದರೆ ಐರೋಪ್ಯ ಶಿಕ್ಷಣ ಹೆಚ್ಚು ಕ್ರಮಬದ್ಧವಾಗಿದ್ದುದರಿಂದ ಮತ್ತು ಯುರೋಪಿಯನ್ನರು ಜಾತಿ ಧರ್ಮಗಳನ್ನು ಗೌರವಿಸುತ್ತಿದ್ದರೂ ದೈನಂದಿನದ ಲೌಕಿಕ ವ್ಯವಹಾರದಲ್ಲಿ ಸಮಾನತೆಯನ್ನು ಅನುಸರಿಸುತ್ತಿದ್ದುದರಿಂದ, ಅವರ ಶಾಲೆಗಳು ಉಚಿತವಾಗಿ ಇದ್ದುದರಿಂದ ಎಲ್ಲರೂ ಐರೋಪ್ಯರ ಇಂಗ್ಲಿಷ್ ಶಾಲೆಗಳಿಂದ ಆಕರ್ಷಿತರಾದರು. ಧರ್ಮಸಂಬಂಧದಲ್ಲಿ ತಟಸ್ಥರಾಗಿದ್ದುದರಿಂದ, ಮಾತಿಗಿಂತ ಬರೆಹಕ್ಕೆ ಹೆಚ್ಚು ಒತ್ತು ಕೊಟ್ಟುದರಿಂದ, ಸರಕಾರಿ ನೌಕರಿಗಳಿಗೆ ಸೇರಿಕೊಳ್ಳುವುದು ಅನುಕೂಲವಾಗಿದ್ದುದರಿಂದ, ಇಂಗ್ಲಿಷ್ ಬಲ್ಲವರಿಗೆ ಸರಕಾರದ ಉನ್ನತ ಅಧಿಕಾರಿಗಳೊಡನೆ ವ್ವವಹರಿಸುವ ಪ್ರಭಾವವಿದ್ದುದರಿಂದ ಜನರಲ್ಲಿ ಇಂಗ್ಲಿಷ್ ಶಾಲೆಗಳ ಮೇಲೆ ಪ್ರೀತಿ ಆದರಗಳು ಹುಟ್ಟಿ ಬಂದವು.

ಪ್ರವಾಸಿಗಳು ತಂದ ಮತ್ತು ಹಬ್ಬಿಸಿ ಬೆಳೆಸಿದ ಭಾಷೆ

ಈ ವಿಷಯ ಎತ್ತಿದುದಕ್ಕೆ ಒಂದು ವಿಶೇಷ ಕಾರಣವಿದೆ. ಯಾವುದೇ ವ್ಯಾಪಾರ, ವ್ಯವಹಾರ ಅಥವಾ ಧರ್ಮಪ್ರಚಾರ ನಡೆಯಬೇಕಾಗಿದ್ದರೂ ಸಂವಹನದ ಅಗತ್ಯವಿದೆ. ಕೊಳ್ಳುವವನು ಮತ್ತು ಮಾರುವವನು, ಹೇಳುವವನು ಮತ್ತು ಕೇಳುವವನು ಇಬ್ಬರೂ ತಮ್ಮ ನೆಲೆಯಲ್ಲಿ ಸಂವಹನ ಮಾಡಿಕೊಳ್ಳದಿದ್ದರೆ ಯಾವ ವ್ಯವಹಾರವೂ ಸಾಧ್ಯವಾಗುವುದಿಲ್ಲ. ದಂಡಯಾತ್ರೆಯ ಭಾಷೆ ಸರಸ ಸಾಮ ದಾನಗಳಿಂದಾಚೆಗಿರುವ ದಂಡದ ಭಾಷೆ, ಆದರೆ ಧರ್ಮಯಾತ್ರೆಗೆ ಮನುಷ್ಯಭಾಷೆಯೇ ಬೇಕು. ಅಶೋಕ ತನ್ನ ಧರ್ಮಶಾಸನಗಳನ್ನು ಬರೆಸಲು ಸಾರ್ಥಗಳ ದಾರಿಬದಿಯನ್ನೇ ಆರಿಸಿದ. ಲಿಖಿತ ಚರಿತ್ರೆಗಳಂತೆ ವಿಶ್ವ ವಿಜಯಿ ಅಲೆಗ್ಸಾಂಡರ್ ಬಂದುಹೋದ ಕೆಲದಿನಗಳಲ್ಲಿ ಸೆಲ್ಯೂಕಸನ ರಾಯಭಾರಿಯಾಗಿ ಭಾರತಕ್ಕೆ ಬಂದವನು ಮೆಗಸ್ತನೀಸ್. ದಂಡಯಾತ್ರೆ ಮಾಡದೆ ರಾಯಭಾರದಿಂದ ಭಾರತದೊಳಕ್ಕೆ ಬಂದವರಲ್ಲಿ ಅವನು ಮೊದಲ ಕೆಲ ಜನಗಳಲ್ಲೊಬ್ಬ. ಅವನು ಮತ್ತು ಅವನ ಕರಣಿಕ ಆರಿಯಾನರ ಪ್ರಕಾರ ಭಾರತದಲ್ಲಿ ಅವರು ಕಂಡ ಅತಿ ದೊಡ್ಡ ನ್ಯೂನತೆ ಬರಹವಿಲ್ಲದಿರುವುದು. ಅವರು ಬರೆದಿಟ್ಟಿರುವ ಚರಿತ್ರೆಯಲ್ಲಿ ಅವರು ಕಂಠಪಾಠವಾಗಿರುವ ಸಾಹಿತ್ಯ ಅಥವಾ ಇತರ ಜ್ಞಾನಶಾಖೆಗಳ ವಿಷಯ ಹೆಚ್ಚಾಗಿ ಹೇಳುವುದಿಲ್ಲ. ಅವರಿಗೆ ಭಾರತದ ಜ್ಞಾನವೆಲ್ಲವೂ ರಾಜ್ಯದ ವ್ಯವಹಾರಗಳು, ರಾಜಾಜ್ಞೆಗಳು ಕೂಡಾ ಮೌಖಿಕವಾಗಿ ಇವೆ, ಅಕ್ಷರರೂಪದಲ್ಲಿ ಇಲ್ಲ ಎಂಬುದಷ್ಟೇ ಒಂದು ಆಶ್ಚರ್ಯವಾಗಿತ್ತು. ಭಾರತದ ರಿವಾಜಿನಲ್ಲಿ ಶಾಶ್ವತವಾದ ಬರಹಕ್ಕೆ ಕಡಿಮೆ ಬೆಲೆ ಕೊಟ್ಟು, ಅಶಾಶ್ವತ ಮಾತಿಗೆ ಹೆಚ್ಚಿನ ಮನ್ನಣೆ ಕೊಡುವುದರ ಹಿಂದಿನ ತರ್ಕಬದ್ಧತೆ ಗ್ರೀಕರಿಗೆ ಸರಿ ಕಾಣಲಿಲ್ಲ. ಮೆಗಸ್ತನೀಸನ ಅನಂತರ ಭಾರತಕ್ಕೆ ಬಂದ ಪ್ರಮುಖರಲ್ಲಿ ಚೀನಾ ದೇಶದಿಂದ ಬಂದ ಇಬ್ಬರು ಉತ್ಸಾಹಿ ಪ್ರವಾಸಿಗರು. ಅದರಲ್ಲೂ ಪಾಹಿಯಾನ್ ಗಾಂಧಾರದ ಮಾರ್ಗವಾಗಿ ಬಂದವನು ಬುದ್ಧನ ಹೆಜ್ಜೆಗಳನ್ನು ಅರಿಯುವ ಆಸೆಯಿಂದ ಪೇಶಾವರದ ವರೆಗೂ ಹೋಗಿ ತಕ್ಷಶಿಲೆಯ ಮೂಲಕ ಹಾದು ಪಾಣಿನಿಯವರು ಬರೆದಿರುವ ವ್ಯಾಕರಣ ಗ್ರಂಥ ಮತ್ತು ಅದಕ್ಕೆ ಜನಗಳು ಕೊಡುತ್ತಿದ್ದ ಸಮ್ಮಾನದ ವಿಷಯ ಬರೆದಿದ್ದಾರೆ. ಆ ನಂತರ ಬಂದ ಹ್ಯೂಯೆನ್ ಸಾಂಗ್ ಹೆಚ್ಚಾಗಿ ಭಾರತೀಯ ಭಾಷೆಗಳಲ್ಲಿ ಮತ್ತು ನಾಲಂದದಲ್ಲಿ ಬುದ್ಧ ಮಾರ್ಗದ ಸಾಹಿತ್ಯದ ವಿವೇಚನೆಯನ್ನು ಮಾಡಿದ್ದಾರೆ.

ಮೊದಲ ತೌಲನಿಕ ಭಾಷಾಶಾಸ್ತ್ರಜ್ಞ ಅಲ್+ಬಿರೂನೀ

ಇನ್ನೊಬ್ಬ ಪಶ್ಚಿಮದ ಪ್ರವಾಸಿ ಅಲ್+ಬಿರೂನಿ ಭಾರತಕ್ಕೆ ಒಳಹೊಕ್ಕುದು ಲೂಟಿಕೋರ ಘಜನಿ ಮಹಮೂದನ ಜ್ಯೋತಿಷಿ ಮತ್ತು ಮಂತ್ರಿಯಾಗಿ. ಭಾರತದಲ್ಲಿ ಹದಿಮೂರು ವರ್ಷಗಳಷ್ಟು ದೀರ್ಘಕಾಲ ನೆಲಸಿ ಇಲ್ಲಿಯ ಭಾಷೆಗಳನ್ನು ಮುಖ್ಯವಾಗಿ ಅತಿ ಕಷ್ಟವಾದರೂ ಸಂಸ್ಕೃತವನ್ನೂ ಇಲ್ಲಿಯ ವಿಜ್ಞಾನವನ್ನು ಕಲಿತು ತಮಗೆ ತಿಳಿದಿರುವುದಕ್ಕೆ ಹೋಲಿಸಿ ತಮ್ಮ ಅಮೂಲ್ಯವಾದ ಅನುಭವಗಳನ್ನು ಬರೆದಿದ್ದಾರೆ. ಭಾರತ ಬಿಟ್ಟು ಹೋದಾಗ ತಾವು ನೋಡಿ ಕಲಿತು ಅರ್ಥಮಾಡಿಕೊಂಡಿದ್ದ ಅದ್ಭುತ ಗ್ರಂಥಗಳ ಭಾಷಾಂತರಗಳನ್ನೂ ರೂಪಾಂತರಗಳನ್ನೂ ಯೂರೋಪಿನಾಚೆಗೆ ಗ್ರೀಸ್ ದೇಶದವರೆಗೂ ಮುಟ್ಟುವ ಹಾಗೆ ಮಾಡಿದರು. ಭಾರತದಿಂದ ಗುಲಾಮರನ್ನು ಒಯ್ದು ಮಾರುತ್ತಿದ್ದ ಕ್ರಿಸ್ತಶಕ ಒಂದು ಸಾವಿರದ ಅಂದಿನ ಅಂಧಕಾರದ ಕಾಲದಲ್ಲಿ ಜ್ಞಾನಸಂಪತ್ತನ್ನು ಹಂಚಿಕೊಂಡವರು ಅಲ್+ಬಿರೂನಿ ಒಬ್ಬರೇ ಇರಬಹುದು.

ಅಲ್+ಬಿರೂನಿಯವರಿಗೆ ಉಪಲಬ್ಧವಿದ್ದ ಮುಖ್ಯ ಗ್ರಂಥಗಳು ವರಾಹಮಿಹಿರನ ನಾಲ್ಕು ಕೃತಿಗಳು. ಅವರು ತಮ್ಮ ಹುಟ್ಟೂರಿಗೆ ಹಿಂದಿರುಗಿ ಹೋದಮೇಲೆ ಆರ್ಯಭಟ ವ್ಯಾಕರಣ ಮತ್ತು ಲಘು ಜಾತಕಗಳನ್ನು ಪರ್ಷಿಯನ್ ಭಾಷೆಗೆ ತಮ್ಮ ಟಿಪ್ಪಣಿಗಳೊಡನೆ ಅನುವಾದಿಸಿ ಪ್ರಕಾಶ ಪಡಿಸಿದರು. ಭಾರತದಲ್ಲಿ ಅವರು ಬಹಳ ಶ್ರಮ ವಹಿಸಿ ಕಲಿತ ಸಂಸ್ಕೃತ ಭಾಷೆಯ ಮೇಲಿನ ಪ್ರಭುತ್ವದಿಂದ ಇದು ಸಾಧ್ಯವಾಯಿತು. ಸಂಸ್ಕೃತವನ್ನು ಕಲಿಯುವ ಪ್ರಯತ್ನದಲ್ಲಿ ಅವರ ಕೆಲವು ಅನಿಸಿಕೆಗಳು ಕುತೂಹಲಕಾರಿಯಾದವು. ಅವರು ಕೊಟ್ಟ ಕಾರಣ ಒಮ್ಮೆಗೆ ವಿಚಿತ್ರವೆಂದು ಅನಿಸಿದರೂ ಒಂದು ರೀತಿಯಲ್ಲಿ ಬಹಳ ಸತ್ಯ ಎನಿಸುತ್ತದೆ. ಅವರ ಕೆಲವು ಹೇಳಿಕೆಗಳು; “ಭಾರತದ ಶಿಷ್ಟ ಜನಗಳು ತಾವು ಮಾತನಾಡುವಾಗ ಭಾಷೆಯಲ್ಲಿ ಓರಣವನ್ನು ಇಷ್ಟಪಡುತ್ತಾರೆ. ಆದುದರಿಂದ ಹೇಳಬೇಕಾದುದನ್ನೆಲ್ಲಾ ಕಾವ್ಯರೂಪದಲ್ಲಿ ಸಮಾನ ರೂಪದ ಪಂಕ್ತಿಗಳಲ್ಲಿ ಪಾದಗಳೊಳಗೆ ಯತಿ ಪ್ರಾಸಗಳಿಂದ ನಿಯಮಿತ ಗತಿಯಲ್ಲಿ ಉಸುರಲಾಗುವಂತೆ ತಮ್ಮ ಕೃತಿಗಳನ್ನು ರಚಿಸುತ್ತಾರೆ. ಕಂಠಪಾಠ ಅಧ್ಯಯನದ ಮುಖ್ಯವಾದ ಅಂಗವೆಂದು ಭಾವಿಸಲಾಗುತ್ತಿದ್ದ ಆ ಕಾಲದಲ್ಲಿ ಗ್ರಂಥಗಳು ಕಾವ್ಯರೂಪದಲ್ಲಿ ಛಂದೋಬದ್ಧವಾಗಿ ಇರುವುದರಿಂದ ಇದಕ್ಕೆ ಅನುಕೂಲವಾಗುತ್ತಿತ್ತು. ತಮ್ಮ ಗ್ರಂಥಗಳನ್ನು ವೃತ್ತಗಳಲ್ಲಿ ರಚಿಸುವಾಗ ಕಠಿಣವಾದ ಛಂದೋನಿಯಮಗಳ ಪಾಲನೆ, ಯತಿಸ್ಥಾನಗಳು ಮತ್ತು ಪಾದಸಮತ್ವಗಳನ್ನು ಅನುಸರಿಸಲೇ ಬೇಕಾಗುತ್ತಿತ್ತು. ಇದರಿಂದಾಗಿ ಕೃತಿಗಳನ್ನು ರಚಿಸುವುದು ಅಷ್ಟು ಸುಲಭವಾಗಿರಲಿಲ್ಲ. ಅಲ್+ಬಿರೂನಿ ಕಂಡಂತೆ ಒಂದೇ ವಸ್ತುವಿಗೆ ಅಥವಾ ವಿಷಯಕ್ಕೆ ಒಂದು ನಿರ್ದಿಷ್ಟ ಹೆಸರಿನ ಬದಲಾಗಿ ವಿವಿಧ ಅಕ್ಷರ ಯೋಜನೆಯ, ಬೇರೆಬೇರೆ ಉದ್ದಗಳ ಶಬ್ದಗಳು ಬೇಕಾಗುತ್ತವೆ. ಇಂತಹ ಶಬ್ದಗಳ ಮಧ್ಯದ ಸೂಕ್ಷ್ಮ ಅರ್ಥ ವ್ಯತ್ಯಾಸಗಳು ನಿಖರವಾದ ಅರ್ಥವನ್ನು ಕೊಡುವುದರಲ್ಲಿ ಸೋಲುತ್ತವೆ. ಅಲ್ಲದೆ ವಾಕ್ಯ ಅಥವಾ ಶಬ್ದದ ಅರ್ಥವನ್ನು ವ್ಯಾಖ್ಯಾನಕಾರನು ತನಗೆ ಬೇಕಾದಂತೆ ಬದಲಿಸಲು ಸಾಧ್ಯವಾಗುತ್ತದೆ. ಹೀಗೆ ಸಂಸ್ಕೃತದಲ್ಲಿದ್ದ ಶಾಸ್ತ್ರಗಳ ಶ್ಲೋಕ ಅಥವಾ ಮಂತ್ರಗಳನ್ನು ಬೇರೆ ಬೇರೆ ರೀತಿಯಲ್ಲಿ ತಮಗೆ ಅನುಕೂಲವಾಗುವಂತೆ ಮಾಡುತ್ತಿದ್ದರು. ಎರಡನೆಯದಾಗಿ ವಿಷಯವನ್ನು ವೃತ್ತಗಳಿಗೆ ಹೊಂದಿಸುವ ಕಾಲದಲ್ಲಿ ಕೆಲವು ಅರ್ಥವಿಲ್ಲದ ಶಬ್ದಗಳನ್ನು ಸೇರಿಸಿ ಕೊಳ್ಳಬೇಕಾಗುತ್ತದೆ. ಇದರಿಂದಾಗಿ ಲೇಖಕನ ಮೂಲ ಆಶಯ ನಾಶವಾಗುವ ಸಾಧ್ಯತೆಗಳಿವೆ. ಅಂದರೆ ಗದ್ಯದಲ್ಲಿರುವಷ್ಟು ನಿಖರತೆ ಮತ್ತು ಸ್ಪಷ್ಟತೆ ಪದ್ಯದಲ್ಲಿ ಇರಲು ಸಾಧ್ಯವಿಲ್ಲ. ಇದಕ್ಕಾಗಿಯೇ ಆಡಳಿತ ಭಾಷೆಯಾಗಿ ಪರ್ಷಿಯನ್ ಸಂಸ್ಕೃತಕ್ಕಿಂತ ಹೆಚ್ಚು ಸಮಂಜಸವೆಂದು ಹೇಳಲಾಯಿತು.

ಅಲ್+ಬಿರೂನಿ ಭಾರತ ದೇಶದ ಭಾಷಾ ಇತಿಹಾಸದಲ್ಲಿಯ ಮೊದಲ ಪರದೇಶದ ಭಾಷಾಶಾಸ್ತ್ರಜ್ಞ. ಭಾರತಕ್ಕೆ ಬರುವ ಮೊದಲೇ ಅವರಿಗೆ ಕ್ರಿ.ಶ. ಎಂಟನೇ ಶತಮಾನದಲ್ಲಿ ಇರಾನ್‌ನಲ್ಲಿ ಜನಿಸಿ ಅಲ್+ಬಸ್ರಾ ಇರಾಕ್‌ನಲ್ಲಿ ಶಿಕ್ಷಣ ಪಡೆದ ನಂತರ ಬಸ್ರಾನ್ ಸ್ಕೂಲ್ ಆಫ್ ಅರೇಬಿಕ್ ಸ್ಥಾಪಿಸಿದ ವ್ಯಾಕರಣದ ಅತ್ಯಂತ ಪ್ರಭಾವಶಾಲಿ ವ್ಯಕ್ತಿಯಾದ ಅರಬ್ ಭಾಷಾಶಾಸ್ತ್ರಜ್ಞ ಸಿಬವೈಹಿಯ ಅರೇಬಿಕ್ ಗ್ರಂಥ ಅಲ್+ಕಿತಾಬ್ ವ್ಯಾಕರಣದ ಪರಿಚಯ ಇದ್ದೇ ಇತ್ತು. ಭಾರತದಲ್ಲಿ ಬಂದು ಅಧ್ಯಯನ ಮಾಡಿದ ಗ್ರಂಥ ಪಾಣಿನಿಯವರ ಹದಿನೈದು ಶತಮಾನ ಪೂರ್ವದ ಅಷ್ಟಾಧ್ಯಾಯಿ. ಈ ಭಾಷಾ ನಿಧಿಯ ಪರಿಚಯ ಸಿಬವೈಹಿಯವರಿಗೆ ಇತ್ತೋ ಇಲ್ಲವೋ ಸಮಸ್ಯಾತ್ಮಕ ಪ್ರಶ್ನೆ. ಆದರೆ ಸಂಸ್ಕೃತ ಮತ್ತು ಅರಾಬಿಕ್ ವ್ಯಾಕರಣದ ನಿಜವಾದ ನೆಲೆಗಟ್ಟುಗಳಾದ ಈ ಎರಡೂ ಪುಸ್ತಕಗಳ ಅಧ್ಯಯನ ಅಲ್+ಬಿರೂನಿಯವರಿಗೆ ಸಿದ್ಧಿಸಿತು. ಆಧುನಿಕ ಭಾಷಾಶಾಸ್ತ್ರಜ್ಞರ ಮೇಲೆ ಸಕಾರಾತ್ಮಕ ಪ್ರಭಾವ ಬೀರುತ್ತಿರುವ ಫೋನೆಟಿಕ್ಸ್, ಮಾರ್ಫಾಲಜಿ, ಸಿಂಟ್ಯಾಕ್ಸ್, ಸೆಮ್ಯಾಂಟಿಕ್ಸ್ ಮತ್ತು ಲೆಕ್ಸಿಕೋಗ್ರಫಿಯಲ್ಲಿ ಎರಡೂ ಗ್ರಂಥಗಳ ನಿಕಟ ಹೋಲಿಕೆಯನ್ನು ಗಮನಿಸಬಹುದು.

ಭಾರತದ ವಾಯುವ್ಯ ಭಾಗದಲ್ಲಿ ಬೆಳಕು ಕಂಡು ಮಗಧದಲ್ಲಷ್ಟೇ ಪ್ರಚಲಿತವಿದ್ದ ಸಂಸ್ಕೃತಭಾಷೆ ದಕ್ಷಿಣ ಕನ್ಯಾಕುಮಾರಿಯವರೆಗೂ ಹಿಂದೆಯೇ ತಲುಪಿತ್ತು. ಕ್ರಿಸ್ತ ಶಕ ಹತ್ತರ ಅನಂತರ ವ್ಯಾಪಾರ-ವ್ಯವಹಾರಗಳಲ್ಲಿ ಭೂ ಮಾರ್ಗಗಳ ಪ್ರಭಾವ ಕಡಿಮೆಯಾಗಿ ಜಲಮಾರ್ಗಗಳ ಪಾತ್ರ ಹೆಚ್ಚಾಯಿತು. ಸಂಸ್ಕೃತಭಾಷೆಯನ್ನು ಶಿಕ್ಷಣದವರೆಗೂ ವಿಸ್ತರಿಸಿ ವೈದಿಕಜನಗಳು ಸಂಸ್ಕೃತದ ವ್ಯಾಕರಣದ ವೈಶಿಷ್ಟ್ಯಗಳನ್ನು ದೇಶಭಾಷೆಗಳೊಂದಿಗೆ ಸಮನ್ವಯಿಸಿ ಹೊಸ ಭಾಷೆಗಳನ್ನೂ ಸ್ಥಾನೀಯ ಭಾಷೆಗಳನ್ನೂ ಸೃಷ್ಟಿಸುವುದರಲ್ಲಿ ಮುಖ್ಯಪಾತ್ರ ವಹಿಸಿದರು. ಅಶೋಕನ ಕಾಲದಲ್ಲಿ ಕಾಲಿಟ್ಟಿದ್ದ ಲೇಖನ ಪ್ರಪಂಚದ ಲಿಖಿತ ಭಾಷೆ ಈಗ ದಕ್ಷಿಣದ ಕನ್ಯಾಕುಮಾರಿಯವರೆಗೂ ತನ್ನ ವ್ಯಾಪ್ತಿಯನ್ನು ಸ್ಥಳೀಕರಣದೊಂದಿಗೆ ಅಂದರೆ ಲೋಕಲೈಸೇಶನ್ ಸಹಿತ ಪಸರಿಸಿತು. ಇದರಿಂದಾಗಿ ಪಶ್ಚಿಮದಿಂದ ಬಂದ ಭಾಷೆಗಳನ್ನು ಹೊರತುಪಡಿಸಿ ಬ್ರಹ್ಮದೇಶವನ್ನು ಸೇರಿಸಿಕೊಂಡು ದಕ್ಷಿಣ ಏಷ್ಯಾದ ಮುಖ್ಯ ವಾಹಿನಿಯಲ್ಲಿ ಸಮಾನವಾದ ಲಿಪಿಶಾಸ್ತ್ರ ಮತ್ತು ಸಮಾನವಾದ ವ್ಯಾಕರಣವನ್ನು ಬಳಸಲು ಉಪಯೋಗಿಸಿದರು. ಕ್ರಿಸ್ತಶಕ ಹದಿನಾರು ಬಂದರೂ ವೈದಿಕರ ಧೋರಣೆಯಲ್ಲಿ ಹೆಚ್ಚಿನ ಬದಲಾವಣೆಗಳಾಗಲಿಲ್ಲ. ಹೆಚ್ಚಿನ ಆಡಳಿತ ಸೂತ್ರಗಳು ಪರ್ಷಿಯನ್ ಭಾಷೆಯನ್ನು ಬಲ್ಲ ಆಗಂತುಕರ ಕೈಯಲ್ಲಿದ್ದುದರಿಂದ ದೇಶಭಾಷೆಗಳ ಬಳಕೆಗೆ ಹಿನ್ನಡೆಯಾಗಿರುವುದು ಇದರ ಒಂದು ಪರಿಣಾಮವಾಗಿರಬಹುದು.

ದಕ್ಷಿಣ ಏಶಿಯಾ ಮತ್ತು ಭಾರತದ ಭಾಷೆ ಪರ್ಷಿಯನ್!

ಯೂರೋಪಿಯನ್ನರ ದೃಷ್ಟಿಯಲ್ಲಿ ಅವರು ಇಲ್ಲಿ ನೆಲೆಯೂರುವವರೆಗೂ ದಕ್ಷಿಣ ಏಶಿಯಾದ ಭಾಷೆ ಪರ್ಷಿಯನ್ ಎಂದಿತ್ತು. ಸಂಸ್ಕ್ಕೃತವೆಂಬ ಹೆಸರನ್ನೇ ಅವರು ಕೇಳಿದ್ದರೋ ಇಲ್ಲವೋ. ಕಲ್ಕತ್ತಾದಲ್ಲಿ ವಾರನ್ ಹೇಸ್ಟಿಂಗ್ಸ್ ಗವರ್ನರ್ ಜನರಲ್ ಆಗಿದ್ದ ಕಾಲದಲ್ಲಿ ನ್ಯಾಯವಾದಿಯಾಗಿ ಬಂದ ವಿಲಿಯಂ ಜೋನ್ಸ್ ಅವರ ಕೊಡುಗೆಗಳು ಅತಿ ಮುಖ್ಯವಾದವು. ವಿಲಿಯಂ ಜೋನ್ಸರು ಹದಿನೆಂಟನೆಯ ಶತಮಾನದ ಕೊನೆಯ ಭಾಗದಲ್ಲಿ ಈಸ್ಟ್ ಇಂಡಿಯಾ ಕಂಪನಿಯ ನೌಕರಿಯಲ್ಲಿ ಕಲಕತ್ತೆಗೆ ಬಂದರು. ಮುಘಲರು ತೆರಿಗೆ ಸಂಗ್ರಹದ ಕೆಲಸವನ್ನು ಗುತ್ತಿಗೆಯಾಧಾರದಲ್ಲಿ ಈಸ್ಟ್ ಇಂಡಿಯಾ ಕಂಪನಿಗೆ ಕೊಟ್ಟುದರಿಂದ ಕಂಪನಿ ತಮ್ಮದೇ ಸೈನ್ಯವನ್ನು ಹೊಂದಬೇಕಾಯಿತು. ಜೋನ್ಸರಿಗೆ ನ್ಯಾಯ ನಿರ್ಣಯಕ್ಕೆ ಅತ್ಯಗತ್ಯವಾಗಿದ್ದ ಸಂಸ್ಕೃತದ ಧರ್ಮ ಅಥವಾ ಕಾನೂನುಗಳ ಗ್ರಂಥಗಳಲ್ಲಿ ಹೆಚ್ಚಿನ ಆಸಕ್ತಿಯಿತ್ತು. ಜೋನ್ಸ್ ಅವರಂತಹ ಕೆಲ ಮತಿವಂತರು ಸಂಸ್ಕೃತ ಮತ್ತು ಇತರ ಮಧ್ಯ ಏಶ್ಯಾದ ಮತ್ತು ಯೂರೋಪಿನ ಕೆಲವು ಭಾಗಗಲ್ಲಿ ಪ್ರಚಲಿತವಿದ್ದ ಭಾಷೆಗಳ ಶಬ್ದಗಳ ಸ್ವರಸಾಮ್ಯವನ್ನು ಗುರುತಿಸಿ ಅವೆಲ್ಲಾ ಒಂದೇ ಮೂಲದಿಂದ ಹುಟ್ಟಿರಬೇಕು ಎಂಬ ಯೋಚನೆಗಳನ್ನು ಮುಂದಿಟ್ಟರು. ಸ್ವತಃ ಕವಿಯಾದ ಅವರು ತಮ್ಮ ಬಿಡುವಿಲ್ಲದ ನ್ಯಾಯದಾನದ ಕೆಲಸ ಮತ್ತು ತಮ್ಮ ಹೆಂಡತಿಯ ಅನಾರೋಗ್ಯದ ಮಧ್ಯದಲ್ಲೂ ಏಶಿಯಾಟಿಕ್ ಸೊಸಾಯಟಿ ಎಂಬ ಸಂಸ್ಥೆಯನ್ನು ಕಟ್ಟಿ ಅದರಿಂದ ಪುರಾತನ ಭಾರತ ಮತ್ತು ಅದರ ಸಾಹಿತ್ಯ ಸಿರಿಯ ವ್ಯಾಸಂಗವನ್ನು ಕ್ರಮಬದ್ಧವಾಗಿ ಮಾಡಿದರು. ‘ಶಾಕುಂತಲ’ವನ್ನು ತಾವೇ ಇಂಗ್ಲಿಷಿಗೆ ಭಾಷಾಂತರಿಸಿ ಯುರೊಪಿಯನ್ನರಿಗೆ ಸಂಸ್ಕೃತದ ಪರಂಪರೆಯ ಪರಿಚಯ ಮಾಡಿಸಿದರು. ಅವರ ಇಂಗ್ಲಿಷ್ ಕಾವ್ಯದ ರೂಪಾಂತರ ಜರ್ಮನ್ ಭಾಷೆಯಲ್ಲಿ ಬಂದು ಅಂದಿನ ಜರ್ಮನ್ ಕವಿಗಳ ಮತ್ತು ಭಾಷಾವಿದರ ಗಮನಸೆಳೆಯಿತು. ಸಂಸ್ಕೃತವನ್ನು ಸರಾಗವಾಗಿ ಮಾತನಾಡಬಲ್ಲ ಅವರು ಮನುಸ್ಮೃತಿಯನ್ನು ತನ್ನ ನ್ಯಾಯದಾನದ ಕೆಲಸ ಅಲ್ಲಲ್ಲಿಯ ಧರ್ಮಕ್ಕನುಗುಣವಾಗಿರಬೇಕೆಂಬ ಉನ್ನತ ಸದಭಿಲಾಷೆಯಿಂದ ಮಾಡಿದರು. ತಮ್ಮ ಭಾಷಣಗಳಲ್ಲಿ ಮೊದಲ ಸಲ ಪ್ರೊಟೋ ಇಂಡೋ ಯುರೋಪಿಯನ್ ಎಂಬ ಮೂಲ ಮಾತೃಭಾಷೆಯನ್ನು ಹೆಸರಿಸಿ ಭಾಷಾಶಾಸ್ತ್ರದಲ್ಲಿ ಹೊಸ ಅಧ್ಯಾಯವನ್ನು ಬರೆದರು. ಭಾರತದಲ್ಲಿ ಭಾರತಕ್ಕೆ ಸಂಬಂಧಿಸಿದ ಸಂಶೋಧನೆಗಳು ಆಗಬೇಕು ಎನ್ನುವ ಅವರ ಆಶಯ ಹೆಚ್ಚುಕಡಿಮೆ ಪೂರ್ಣವಾಯಿತು. ನಿಜವಾದ ಅರ್ಥದಲ್ಲಿ ಅವರು ಅದ್ವಿತೀಯ ಭಾಷಾವಿಜ್ಞಾನಿ. ಪ್ರಾಯೋಗಿಕ ಭಾಷಾಶಾಸ್ತ್ರಜ್ಞನಾಗಿ ಇಂಗ್ಲಿಷ್, ಫ್ರೆಂಚ್, ಗ್ರೀಕ್, ಲ್ಯಾಟಿನ್, ಪರ್ಷಿಯನ್ ಕೊನೆಗೆ ಸಂಸ್ಕೃತ ಭಾಷೆಗಳಲ್ಲಿ ಪಾರಂಗತ, ಬಹುಶ್ರುತ ವಿದ್ವಾಂಸ ಮತ್ತು ಇಲ್ಲಿಯ ಸಂಸ್ಕೃತಿ ಮತ್ತು ಸಾಹಿತ್ಯವನ್ನು ಪಶ್ಚಿಮಕ್ಕೆ ಪರಿಚಯಿಸುವ ಕಾರ್ಯವಿಧಾನವನ್ನು ಸೂಚಿಸಿದವರಲ್ಲಿ ವಿಲಿಯಂ ಜೋನ್ಸ್ ಅಗ್ರಗಣ್ಯರು.

ಭಾರತದಲ್ಲಿಯ ಅವರ ಕೊನೆಯ ದಿನಗಳಲ್ಲಿ ವಿಲಿಯಂ ಜೋನ್ಸ್ ಮಹಾಶಯರ ಸಹವರ್ತಿಯಾಗಿದ್ದವರು ಕೋಲ್-ಬ್ರೂಕ್. ಅವರು ಸಂಸ್ಕೃತವನ್ನು ಕಲಿಯುವ ಪ್ರಯತ್ನ ಮಾಡುತ್ತಿದ್ದಾಗ ಜೋನ್ಸ್ ಎಂದೆಂದಿಗೂ ಸತ್ಯವಾಗಬಹುದಾದ ಕಿವಿಮಾತು ಹೇಳಿದ್ದರಂತೆ. ಸಂಸ್ಕೃತ ವ್ಯಾಕರಣದ ಶಿಕ್ಷಕ ಪಂಡಿತರು ಏನೇ ಹೇಳುತ್ತಿರಲಿ, ‘ಸಾರಸ್ವತ ಪ್ರಕ್ರಿಯಾ’ ಅಥವಾ ‘ಮುಗ್ಧಬೋಧ’ದಂತಹ ಗ್ರಂಥಗಳಿಂದ ಸಂಸ್ಕೃತಕ್ಕೆ ಪ್ರವೇಶ ಸುಲಭ ಅಂದಿದ್ದರಂತೆ. ಹದಿನೆಂಟನೆಯ ಶತಮಾನದ ಕೊನೆಯ ವರ್ಷಗಳಲ್ಲಿ ಭಾರತದಲ್ಲಿ ಬಂದಿಳಿದ ಒಬ್ಬ ರಷ್ಯನ್ ಅಲೆಮಾರಿ ಪ್ರವಾಸಿ ಹೊರೇಶಿಮ್ ಲೆಬೆದೇವ್,-ಚೆಲ್ಲೋ ವಾದಕ ಸಂಗೀತಗಾರನಾಗಿದ್ದ, ಮದರಾಸಿನಲ್ಲಿ ಬಂದಿಳಿದಾಗ ಅಲ್ಲಿಯ ಸಂಗೀತಗಾರರಿಗೆ ಯೂರೋಪಿನ ವಯೋಲಿನ್ನಿನ ಪರಿಚಯ ಮಾಡಿಸಿದನಂತೆ. ಅವನು ಮೊದಲ ಭಾರತೀಯ ಭಾಷೆಯ ವ್ಯಾಕರಣವನ್ನು ಇಂಗ್ಲಿಷಿನಲ್ಲಿ ಬರೆದು ಮುದ್ರಿಸಿದವನು. ಕಲಕತ್ತಾದಲ್ಲಿದ್ದಾಗ ವೇದಪಠನದಲ್ಲಿಯ ಸಂಗೀತವನ್ನು ಮೆಚ್ಚಿ ವೇದಗಳೆಂಬ ಗ್ರಂಥಗಳ ಪರಿಚಯವನ್ನು ಮುಂದೆ ವೇದ ವಿದ್ವಾಂಸರಾಗಿ ಹೆಸರು ಮಾಡಿದ ಫ್ರಾಂಜ್ ಮತ್ತು ಆಗಸ್ಟ್ ಬೊಪ್ಪ್ ಮೊದಲಾದ ಯುರೋಪಿಯನ್ನರಿಗೆ ಮಾಡಿಸಿ ಯುರೋಪಿಯನರನ್ನು ವೇದಗಳಿಗೂ ಶಾಸ್ತ್ರ ಗ್ರಂಥಗಳಿಗೂ ಪರಿಚಯಿಸಿದವನು.

ಬರೆವಣಿಗೆಯನ್ನು ಒಪ್ಪದ ಮೌಖಿಕ ಪರಂಪರೆಗೂ ಅದರದೇ ಹಲವು ಅನುಕೂಲ, ಸೌಕರ್ಯ ಮತ್ತು ವೈಶಿಷ್ಟ್ಯಗಳಿವೆ. ಉದಾಹರಣೆಗಾಗಿ ಚಿಕ್ಕಂದಿನಿಂದಲೇ ವಿದ್ಯಾರ್ಥಿಗಳು ಕಂಠ ಪಾಠಕ್ಕೆ ಒತ್ತು ಕೊಡುವುದರಿಂದ ಯಾವುದೇ ಕೃತಿಯನ್ನು ತಿಳಿದರೆ ಅದರ ಪ್ರತಿ ಶಬ್ದವೂ ಒಪ್ಪವಾಗಿ ಬೇಕಾದಾಗ ನನೆಪಿಗೆ ಬರುತ್ತಿತ್ತು; ಓದಿ ಪುಟ ತಿರುಗಿಸುವ ಅಗತ್ಯವಿರುತ್ತಿರಲಿಲ್ಲ. ಸಾಮೂಹಿಕವಾಗಿ ಪಾಠ ಒಪ್ಪಿಸುತ್ತಿದ್ದುದರಿಂದ ಉಚ್ಚಾರದ ಸ್ಪಷ್ಟತೆ ಮತ್ತು ನಿರೂಪಣೆಯ ಸರಿಯಾದ ಗತಿ ತಾನಾಗಿಯೇ ಬರುತ್ತಿತ್ತು; ತಪ್ಪಿದ್ದರೆ ತಿದ್ದಿಕೊಳ್ಳುವ ಅವಕಾಶವಿತ್ತು. ಎಲ್ಲಕ್ಕೂ ಮಿಗಿಲಾಗಿ ಅಮರಕೋಶದಂತಹ ಗ್ರಂಥವನ್ನು ಕಂಠಪಾಠ ಮಾಡುತ್ತಿದ್ದುದರಿಂದ ಸಮಾನಾರ್ಥ ಪದಗಳ ಸಂಪತ್ತು ವಿದ್ಯಾರ್ಥಿಗಳಿಗೆ ದೊರಕುತ್ತಿತ್ತು. ಇದರಿಂದಾಗಿ ಯಾವುದನ್ನಾದರೂ ವಿವರಿಸುವುದಕ್ಕೆ, ಗ್ರಂಥ ಅಥವಾ ಕಾವ್ಯ ರಚನೆಗೆ ಅನುಕೂಲಕರವಾದ ವೇದಿಕೆ ದೊರಕುತ್ತಿತ್ತು. ಇವೆಲ್ಲವನ್ನು ಅರಿತಿದ್ದ ಯುರೋಪಿನ ವಿದ್ವಾಂಸರು ಎಂದಿಗೂ ಮೌಖಿಕ ಪರಂಪರೆಯನ್ನು ಕೀಳಾಗಿ ಕಾಣಲಿಲ್ಲ.

ಗ್ರಂಥಗಳ ಸಂಗ್ರಹಕಾರರು ಹಸ್ತಪ್ರತಿ ಸಂಗ್ರಹಕ್ಕಾಗಿ ನಡೆಸಿದ ಹುಡುಕಾಟದಲ್ಲಿ ಹಸ್ತಪ್ರತಿಗಳ ರಕ್ಷಣೆಗಾಗಿ ಉಪಯೋಗಿಸುತ್ತಿದ್ದ ಆರ್ಸೆನಿಕ್ ಮುಂತಾದ ವಿಷವಸ್ತುಗಳು, ದುರ್ಗಮ ಪ್ರದೇಶಗಳಲ್ಲಿನ ರೋಗಗಳು ಮತ್ತು ಎಲ್ಲಕ್ಕಿಂತ ಕೆಟ್ಟದಾದ, ವಿನಾಶಕಾರಿ, ಅಸಹನೀಯ ಅನುಮಾನವನ್ನು ಎದುರಿಸಬೇಕಾಗಿತ್ತು. ಇದನ್ನು ಎದುರಿಸಲು ಗ್ರಂಥಗಳ ಯಜಮಾನರ ಧನದಾಶೆಯೊಂದೇ ಸಾಕಾಗುತ್ತಿರಲಿಲ್ಲ. ಕ್ರಿಸ್ಟೋಫರ್ ಮಿಂಕೋವಸ್ಕಿ ತನ್ನ ಪ್ರಬಂಧ ಒಂದರಲ್ಲಿ ಅದು ಹೇಗೆ ಬಂತು ಎಂಬುದರ ಬಗ್ಗೆ ವಿಶಾಲವಾಗಿ ವ್ಯಾಖ್ಯಾನಿಸಿದ್ದಾರೆ. ಲಿಖಿತ ಗ್ರಂಥಗಳು ಅರಿಯದವರ ಕೈಸೇರಿದರೆ ಅಪಾರ್ಥಗಳಿಗೆ ಕಾರಣವಾಗಬಹುದೆಂಬ ಅಂಜಿಕೆ ಒಂದಾದರೆ, ತಮ್ಮ ಜ್ಞಾನವೆಲ್ಲಾ ತಮ್ಮ ಅನಂತರ ಅಯೋಗ್ಯರಾದವರ ಪಾಲಾಗಬಹುದೆಂಬ ಹೆದರಿಕೆ ಇನ್ನೊಂದು. ಇದರಿಂದಾಗಿ ಹಲವು ಪಂಡಿತರು ತಮ್ಮ ಅಂತ್ಯದ ಅನಂತರ ತಾವು ಸಂಪಾದನೆ ಮಾಡಿದ ಗ್ರಂಥಗಳನ್ನೆಲ್ಲಾ ಜಲಸಮಾಧಿ ಮಾಡಬೇಕೆಂದು ಆಶಿಸುತ್ತಿದ್ದರು. ಇಂತಹ ಧೋರಣೆಯಿಂದಾಗಿ ಬಹಳಷ್ಟು ಜ್ಞಾನ ಸಂಪತ್ತು ನಷ್ಟವಾಯಿತು. ಇದನ್ನೆಲ್ಲಾ ಸಹಿಸಿಯೂ ಯೂರೋಪಿನ ಸಂಗ್ರಾಹಕರು ಒಳ್ಳೆಯ ಕೆಲಸವನ್ನೇ ಮಾಡಿದರು. ಆಕ್ಸ್‌ಫರ್ಡ್‌ ವಿಶ್ವವಿದ್ಯಾಲಯದ ಪ್ರಕಟಣೆ, ನನ್ನ ಮಿತ್ರ ಮೈಕಲ್ ಫ್ರಾಂಕ್ಲಿನ್ ಬರೆದ “ಓರಿಯಂಟಲಿಸ್ಟ್‌ ವಿಲ್ಲಿಯಂ ಜೋನ್ಸ್‌” ಪುಸ್ತಕದಲ್ಲಿ ಇದಕ್ಕೆ ಸಂಬಂಧಿಸಿದ ಎಲ್ಲಾ ವಿವರಗಳು ಇವೆ.

ಆಧುನಿಕ ಕಾಲದಲ್ಲಿ ಭಾಷೆಗಳು

ಭಟ್ಟೋಜಿ ದೀಕ್ಷಿತರ ಪಾರಂಪರಿಕ ಶಾಸ್ತ್ರ ಗ್ರಂಥ ಸಿದ್ಧಾಂತ ಕೌಮುದಿ ಮತ್ತು ಕೇರಳದಲ್ಲಿಯ ನಾರಾಯಣ ಭಟ್ಟತಿರಿಯವರ ಗ್ರಂಥಗಳ ಅನಂತರ ದಕ್ಷಿಣ ಏಶ್ಯಾದಲ್ಲಿ ಸಂಶೋಧನೆಗಳು ಮತ್ತು ಪ್ರಯೋಗಗಳು ಮುಗಿದೇ ಹೋದವು ಅನ್ನಬೇಕು. ಏನೇ ಇದ್ದರೂ ಅದು ಐರೋಪ್ಯ ಭಾಷಾಶಾಸ್ತ್ರದ ಅನುಕರಣೆಯಾಯಿತು. ಎಲ್ಲಾ ವ್ಯಾಕರಣ ಗ್ರಂಥಗಳು ಯುರೋಪಿಯನ್ನರು ನಮಗೆ ಬಳುವಳಿಯಾಗಿ ನೀಡಿದ ಐರೋಪ್ಯ ವ್ಯಾಕರಣದ ಭಾರತೀಯ ಭಾಷಾ ಅನುಕರಣೆಗಳಾಗಿ ಉಳಿದವು. ಸುಧಾರಣೆಗಳನ್ನು ಮಾಡಿದರೆ ಅದು ಐರೋಪ್ಯ ಮಾದರಿಯ ನಕಲಾಗಿತ್ತು. ಇದಕ್ಕೆ ಒಂದು ಕಾರಣ ಭಾರತದ ಎಲ್ಲಾ ಭಾಷೆಗಳ ಮೇಲೆ ಸಮಾನ ಪ್ರೀತಿಯನ್ನು ಹೊಂದಿ, ಕಲಿಯುವ ಆಸೆಯಾಗಲಿ ಅಗತ್ಯವಾಗಲಿ ಹೊರಗಿನವರಿಗಿದ್ದಷ್ಟು ಇಲ್ಲಿಯ ಜನರಿಗೆ ಇರಲಿಲ್ಲ. ಭಾರತದ ತುಂಬ ಹರಡಿದ್ದ ದೇಶ ಭಾಷೆಗಳ ಮೇಲೆ ಸಂಸ್ಕೃತ ತಿಳಿದಿದ್ದ ಪಂಡಿತರ ಅನಾದರವೂ ಇದಕ್ಕೆ ಒಂದು ಕಾರಣವಾಗಿರಬಹುದು. ದೇಶ ಭಾಷೆಗಳು ತಮ್ಮಷ್ಟಕ್ಕೆ ತಾವು ಸ್ವತಂತ್ರವಾದ ವ್ಯಾಕರಣ ಅಥವಾ ಶಬ್ದ ಪ್ರಯೋಗದ ಪ್ರಯತ್ನಗಳನ್ನು ಮಾಡಲಿಲ್ಲ. ಸಂಸ್ಕೃತದ ಮತ್ತು ಪಾಣಿನಿಯವರ ಅಷ್ಟಾಧ್ಯಾಯಿಯನ್ನು ಪೂರ್ಣವಾಗಿ ಅನುಕರಿಸಿಯೇ ಅವು ತಮ್ಮನ್ನು ಬೆಳೆಸಿಕೊಳ್ಳಬೇಕಾಯಿತು. ಅಷ್ಟಾಧ್ಯಾಯಿಯಲ್ಲಿ ಉಪಯೋಗಿಸಿದ ಅಂದಿನ ಕಾಲದ ಮಾತಿನ ಭಾಷೆಯಲ್ಲಿ ಉಪಯೋಗದಲ್ಲಿದ್ದ ಕೆಲವಷ್ಟೇ ಸ್ವರಗಳು ಮತ್ತು ವ್ಯಂಜನಗಳು ಅಷ್ಟಾಧ್ಯಾಯಿಯ ಮಿತಿಯೂ ಹೌದು. ಯಾಕೆಂದರೆ ಅಷ್ಟಾಧ್ಯಾಯಿಯಲ್ಲಿರುವಷ್ಟೇ ಸ್ವರಗಳಿಂದ ಮತ್ತು ವ್ಯಂಜನಗಳಿಂದ ಎಲ್ಲಾ ಭಾರತೀಯ ಭಾಷೆಗಳನ್ನು ಪಡೆಯುವುದು ಅಥವಾ ಉಚ್ಚರಿಸುವುದು ಅಸಾಧ್ಯ ಎಂಬುದು ಇಂದು ಎಲ್ಲರಿಗೂ ತಿಳಿದ ವಿಷಯ. ಪರ್ಷಿಯನ್ ಮೂಲದ ಭಾಷೆಗಳು ಈ ವಿಷಯದಲ್ಲಿ ಹೆಚ್ಚು ತಲೆ ಕೆಡಿಸಿಕೊಳ್ಳಲಿಲ್ಲ ಆದರೆ ದಕ್ಷಿಣದ ಭಾಷೆಗಳಿಗೆ ಅಗತ್ಯವಾದ ಳ ಕಾರದ ವೈವಿಧ್ಯಗಳು ನ ಕಾರದ ವೈವಿಧ್ಯ ಇವುಗಳನ್ನು ವ್ಯಾಕರಣ ಪಠ್ಯದಲ್ಲಿ ಹೇಗೆ ಸೇರಿಸಿಕೊಳ್ಳಬೇಕು ಎಂಬುದು ಯಾರಿಗೂ ತಿಳಿಯಲಿಲ್ಲ. ಹಲವು ಪ್ರಾಂತೀಯ ಭಾಷೆಗಳಲ್ಲಿ ಉಪಯೋಗಿಸಲು ಬೇಕಾದ ಎ ಒ ಮತ್ತು ಇತರ ಸ್ವರಗಳ ಸಂವೃತ ಮತ್ತು ವಿವೃತ ಪ್ರಭೇದಗಳನ್ನು ಹೇಗೆ ಬರೆಯಬೇಕು ಹೇಗೆ ಉಚ್ಚರಿಸಬೇಕು ಎಂಬ ವಿಷಯದಲ್ಲಿ ಸಾಕಷ್ಟು ಸಮಸ್ಯೆಗಳು ಇಂದಿಗೂ ಪರಿಹಾರ ಕಾಯುತ್ತಿವೆ. ಆದರೂ ಅಂದು ಪ್ರಾದೇಶಿಕ ಭಾಷೆಗಳ ಕೆಲವು ವಿದ್ವಾಂಸರು ಸೂತ್ರಗಳಲ್ಲಿ ಹೇಳದೆಬಿಟ್ಟ ಅಪಾಣಿನೀಯ ಅಕ್ಷರಗಳನ್ನು ಉಪಯೋಗಿಸಿ, ನಿಯಮಗಳನ್ನು ಕಳೆದು, ಅಷ್ಟಾಧ್ಯಾಯಿಗೆ ಹೊಸ ಕೊಂಬೆಗಳನ್ನು ಸೇರಿಸಿ, ಅನಗತ್ಯ ಕೊಂಬೆಗಳನ್ನು ನಿವಾರಿಸಿ, ಭಾಷಾ ವೃಕ್ಷವನ್ನು ಇನ್ನಷ್ಟು ವಿಸ್ತರಿಸಿದವು.

ಹೊರದೇಶಗಳಲ್ಲಿ ಭಾಷಾ ವಿಜ್ಞಾನ

ಭಾಷಾವಿಜ್ಞಾನ ಇಂದು ಹೊರದೇಶಗಳಲ್ಲಿ ಬಹಳಷ್ಟು ಬೆಳೆದಿದೆ. ಇಂದು ದಕ್ಷಿಣ ಏಷಿಯಾದಲ್ಲಿ ಕೆಲಸ ಮಾಡುತ್ತಿರುವ ಜನಗಳ ಹತ್ತಾರು ಪಟ್ಟಾದರೂ ಜನಗಳು ಹೊರದೇಶದಲ್ಲಿ ಭಾಷೆಯ ಮೇಲೆ ಕೆಲಸ ಮಾಡುತ್ತಿದ್ದಾರೆ. ಪಾಣಿನಿಯವರ ಅಧ್ಯಯನ ಮಾಡುತ್ತಿರುವವರ ಸಂಖ್ಯೆ ಖಂಡಿತವಾಗಿ ಹೊರದೇಶಗಳಲ್ಲಿ ಹೆಚ್ಚು. ಅಷ್ಟು ವಿಸ್ತೃತ ಮತ್ತು ಸ್ಪಷ್ಟವಾದ ಅಧ್ಯಯನಗಳು ಭಾರತದಲ್ಲಿ ನಡೆದೇ ಇಲ್ಲ. ಭಾಷಾ ವಿಜ್ಞಾನದಲ್ಲಿ ಹೊಸ ಶಾಖೆಗಳು, ಯೋಚನಾಕ್ರಮಗಳು ಹುಟ್ಟುತ್ತಿವೆ. ಭಾಷಾತತ್ವಜ್ಞಾನವೆಂಬ ಪ್ರಕಾರವಂತೂ “ಭಾಷಾ ವ್ಯವಸ್ಥೆಯು ಧ್ವನಿಯ ವ್ಯತ್ಯಾಸಗಳ ಸರಣಿಯಾಗಿದ್ದು, ಕಲ್ಪನೆಗಳ ವ್ಯತ್ಯಾಸಗಳ ಸರಣಿಯನ್ನು ಸಂಯೋಜಿಸುತ್ತದೆ.” ಎನ್ನುವ ಫರ್ಡಿನ್ಯಾಂಡ್ ಡಿ ಸಾಸುರೆ, “ಆದರ್ಶ ಹೇಳುಗ-ಕೇಳುಗರಿಂದ ವಾಕ್ಯವನ್ನು ಹೇಗೆ ಅರ್ಥೈಸಿಕೊಳ್ಳಲಾಗಿದೆ ಎಂಬುದನ್ನು ಸೂಚಿಸುವ ರಚನಾತ್ಮಕ ವಿವರಣೆಯನ್ನು ವ್ಯಾಕರಣವು, ಅನಂತ ಶ್ರೇಣಿಯ ವಾಕ್ಯಗಳಿಗೆ ಸಂಪೂರ್ಣವಾಗಿ ವಿನಿಯೋಗಿಸಬೇಕು.” ಎನ್ನುವ ನೋಮ್ ಚಾಮ್‌ಸ್ಕಿ, “ಪ್ರತಿಯೊಂದು ಪ್ರವಚನ ಅಥವಾ ಕಾವ್ಯಾತ್ಮಕ ಭಾಷಣದ ವಾಕ್ಯವೂ ಸಾದೃಶ್ಯದ ವಸ್ತುಗಳನ್ನು ಹುಟ್ಟಿಸುವ ನಿಯಮಗಳ ವ್ಯವಸ್ಥೆಯನ್ನು ಹೊಂದಿದೆ, ಅದಕ್ಕನುಗುಣವಾಗಿ ಪ್ರಯೋಗ ವಿಧಾನದ ರೂಪರೇಖೆಯನ್ನು ಹೊಂದಿರುತ್ತದೆ.” ಎನ್ನುವ ಡೆರಿಡಾ, ಭಾಷಾ ಸಂಶೋಧನೆಗೆ ಹೊಸ ದಿಕ್ಕುಗಳನ್ನು ಒದಗಿಸಿದ್ದಾರೆ. ಇವು ನಾನು ಹೇಳದೇ ಉಳಿದ ಅಭಿನವ ಗುಪ್ತರ ಮಾತುಗಳನ್ನು ಹಿಂದಿಕ್ಕಿವೆ.

ಒಂದು ಮಾತಂತೂ ನನಗೆ ಸ್ಪಷ್ಟವಾಗಿದೆ. ಯುರೋಪಿಯನ್ನರು ಬಂದು ತಮ್ಮ ಆಸಕ್ತಿಯನ್ನು ತೋರಿಸದಿದ್ದರೆ, ಭಾರತೀಯರು ರಾಜಕೀಯ, ಧಾರ್ಮಿಕ ಧುರೀಣರು ಮತ್ತು ಸಾಹಿತಿಗಳಿಗಷ್ಟೇ ಉಪಯುಕ್ತವಾಗಿದ್ದ ‘ರಾಜ’ಭಾಷೆಗೆ ಪರ್ಯಾಯವಾಗಿ ಮೌಖಿಕ ಭಾಷೆಗಳನ್ನು ಸ್ವೀಕರಾರ್ಹವೆಂದು ಒಪ್ಪದಿರುತ್ತಿದ್ದರೆ, ವಿದ್ಯಾಭ್ಯಾಸ ಸಾರ್ವತ್ರಿಕವಾಗಿ ಇರದೇ ಹೋಗುತ್ತಿದ್ದರೆ ಎಷ್ಟೋ ಭಾಷೆಗಳು ಯಾರ ಗಮನಕ್ಕೂ ಬಾರದೆ ನಾಯಿಕೊಡೆಗಳಂತೆ ಹುಟ್ಟುತ್ತಿದ್ದವು, ಹಾಗೆಯೇ ಸಾಯುತ್ತಿದ್ದವು.

ಆಕಾಶಗಂಗೆ ಬಹಳ ವಿಶಾಲ+ವಿಸ್ತಾರವಾಗಿದ್ದು ದೃಗ್ಗೋಚರವಾಗಿದ್ದರೂ ಸಂಕೀರ್ಣವಾದುದು, ನಿಗೂಢವಾದುದು ಮತ್ತು ಅನೂಹ್ಯವಾದುದು, ಹಾಗೆಯೇ ಭಾಷೆಯೆಂಬುದೊಂದು ನಿತ್ಯನೂತನ ಮಹಾನದಿ.

ಇಂದಿಗೆ ಇಷ್ಟು ಸಾಕು. ನಿಮಗೆಲ್ಲಾ ಧನ್ಯವಾದಗಳು.

ರಾಘವೇಂದ್ರರಾಯರು ವಂದನಾರ್ಪಣೆಯ ಭಾಷಣ ಮಾಡುವುದಕ್ಕೆ ಮೈಕ್ರೋಫೋನಿನ ಬಳಿ ಬಂದರು.

ಎಲ್ಲರಿಗೂ ನಮಸ್ಕಾರ. ನನಗೆ ಇಂದು ಬಹಳ ಸಂತೋಷದ ಕೆಲಸ ಮಾಡುವ ಅವಕಾಶ ದೊರಕಿದೆ. ಆದರೆ ಎಲ್ಲಿಂದ ಹೇಗೆ ಪ್ರಾರಂಭಿಸಬೇಕು ತಿಳಿಯುತ್ತಿಲ್ಲ.

ಪ್ರೊ. ಶಂಭು ಮಹಾಜನರು ಇಷ್ಟು ದೂರ ಬಂದು ನಮಗೆ ದೊರಕಿದುದು ಒಂದು ಆಶ್ಚರ್ಯ. ಅದು ಸಾಧ್ಯವಾಗಲು ಕಾರಣ ಯಾವುದೇ ಇರಲಿ ಅದು ನಮಗೆ ಅನ್ಯತಾ ಅಲಭ್ಯ ಅಸೀಮ ಸಂತೋಷವನ್ನು ಕೊಟ್ಟಿತೆಂಬುದರಲ್ಲಿ ಎರಡು ಮಾತಿಲ್ಲ. ತಮ್ಮ ಜನ್ಮ ಸ್ಥಳ, ಕಲಿಕೆಯ ಶಾಲೆ, ಆಡಿದ ಬಯಲು, ಪೊರೆದ ಬಂಧುಗಳು ಇವುಗಳ ನೆನಪು ಎಲ್ಲರಿಗೂ ಮುಗಿಯದ ಆಕರ್ಷಣೆ. ಅದು ಎಂದಿಗೂ ಕಳೆದು ಹೋಗುವುದಿಲ್ಲ. ನಮ್ಮ ಮೈಮನಗಳಲ್ಲಿ ಅಂತರ್ಗತವಾಗಿ ಎಂದಿಗೂ ಇರುತ್ತದೆ. ಇಲ್ಲವಾದರೆ ಶಂಭು ಮಹಾಜನರು ಇಷ್ಟು ದಿನದ ಮೇಲೆ ಇಲ್ಲಿ ಬರುವ ಅಗತ್ಯವಿರಲಿಲ್ಲ. ಇಂದಿನ ಅವರ ಭಾಷಣದ ವಿಷಯ ನಾನು ಹೇಳುವುದು ಬಹಳ ಕಷ್ಟ. ಅವರಷ್ಟು ಎತ್ತರಕ್ಕೆ ಏರುವುದಾಗಲಿ ಅಥವಾ ಅವರಷ್ಟು ಆಳವಾಗಿ ಮುಳುಗುವುದಾಗಲಿ ಭಾಷಾಧ್ಯಯನ ವಿಷಯದಲ್ಲಿ ನಮಗೆ ಯಾರಿಗೂ ಸಾಧ್ಯವಿಲ್ಲ. ಭಾಷಣದ ಕೊನೆಗೆ ಅವರು ಹೇಳಿದ ವಾಕ್ಯದಿಂದಲೇ ಮಾತು ಪ್ರಾರಂಭಿಸುತ್ತೇನೆ. ಆಕಾಶಗಂಗೆ ಕೈಯೆತ್ತಿದರೆ ನಮಗೆ ಸಿಗುವ ಒಂದು ನಿರಂತರ ಗುರುತು ನಮ್ಮ ಒಂದು ಜೀವಮಾನದಲ್ಲಿ ಅದರಲ್ಲಿ ಬದಲಾವಣೆಗಳು ಕಾಣಿಸುವುದಿಲ್ಲ ಆದರೆ ನಮ್ಮಲ್ಲಿ ಆಗುತ್ತಿರುವ ಎಲ್ಲಾ ಬದಲಾವಣೆಗಳಿಗೆ, ಸೂರ್ಯಚಂದ್ರರ ಏಳು ಮುಳುಗುಗಳಿಗೆ, ಉಲ್ಕಾಪಾತಗಳಿಗೆ, ಅದು ಚಲನಶೀಲ ಸಾಕ್ಷಿಯಾಗಿ ಇರುತ್ತದೆ. ನಮಗೆ ಕಾಣಿಸುತ್ತದೆ, ನಮ್ಮ ಅರಿವಿನೊಳಗಿರುತ್ತದೆ. ಭಾಷೆ ಹಾಗಲ್ಲ ಅವರು ಹೇಳಿದ ಹಾಗೆ ಆಕಾಶಗಂಗೆಯ ಹಾಗೆ ಅನೂಹ್ಯವಾಗಿ ಅಪರಿಮಿತವಾಗಿದ್ದು ನಮ್ಮ ಅಳವಿನೊಳಗಿರುತ್ತದೆ. ಇಷ್ಟು ಹೊತ್ತು ಮಾತನಾಡಿದ ಮಹಾಜನರ ಭಾಷಣ ನಮಗೆ ಕೇಳಿದಾಗ ನಾವು ಮಾತನಾಡುತ್ತಿರುವುದು ಅವರಿಗೆ ಕೇಳುವಾಗ ಕಾಲಪ್ರವಾಹದಲ್ಲಿ ನಾವು ಅರಿವಿಲ್ಲದೆ ಒಂದೇ ಕಡೆಯಲ್ಲಿ ಸಮಭಾವದಲ್ಲಿದ್ದೇವೆ ಎಂಬುದೇ ಅದಕ್ಕೆ ಕಾರಣ. ಯಾಕೆಂದರೆ ಭಾಷೆ ಎನ್ನುವುದಕ್ಕೆ ಹೇಳುವವರು ಬೇಕು, ಕೇಳುವವರು ಬೇಕು, ರಚಯಿತರು ಬೇಕು, ನೋಡುಗರು ಬೇಕು. ಮಹಾಜನರ ಇಂದಿನ ಭಾಷಣದಿಂದ ಬೇರೆಯವರಿಗೆ ಏನು ಉಪಕಾರವಾಗಿದೆಯೋ ನನಗೆ ಗೊತ್ತಿಲ್ಲ, ಆದರೆ ನನಗಂತೂ ಇಂದು ರಾತ್ರಿ ಖಂಡಿತ ನಿದ್ದೆ ಬರುವುದಿಲ್ಲ ಅವರು ಮುಗಿಸಿದಲ್ಲಿಂದ ಅದೇ ಭಾಷೆಯ ಪ್ರವಾಹದಲ್ಲಿ ನನ್ನ ಹರಿಗೋಲನ್ನು ಇರಿಸಿಕೊಂಡು ಆನಂದಿಸುತ್ತೇನೆ.

ಕಥೆಯಾಗಿ ಹೇಳಬೇಕಾದರೆ,

ಅಜ್ಜನೆಟ್ಟ ಆಲದ ಮರದ ಬುಡದ ನೆರಳಿನಲ್ಲಿ ಕುಳಿತವನಲ್ಲಿ “ಅಯ್ಯಾ, ಈ ಆಲದ ಮರದಲ್ಲಿ ವಿಶೇಷ ಏನೆಂದು ಹೇಳಬಹುದೇ” ಎಂದು ವಿಚಾರಿಸಿದೆ. ಅವನು ತಲೆ ಎತ್ತಿ ನೋಡಿ “ಇದು ಮರ, ನೆಲದ ಕೆಳಗೆ ಬೇರುಗಳಿರಬಹುದು, ಕಾಂಡ ನನಗಿಂತಲೂ ದಪ್ಪವಾಗಿದೆ, ಅಲ್ಲಲ್ಲಿ ಗಾಯಗಳಾಗಿವೆ, ಮೇಲೆ ನೂರಾರು ಕೊಂಬೆಗಳಿರಬಹುದು, ಸಾವಿರಾರು ಎಲೆಗಳಿರಬಹುದು, ಇಲ್ಲಿಂದ ಏನೂ ಕಾಣಿಸುತ್ತಿಲ್ಲ” ಎಂದ. ಅವನನ್ನು ಒಂದಿಷ್ಟು ದೂರ ಕರೆದೊಯ್ಯ ಬಯಸಿದೆ. “ಬೇಡ ಈ ನೆರಳನ್ನು ದಾಟುವುದನ್ನು ಲೋಕ ಒಪ್ಪುವುದಿಲ್ಲ, ನನಗೆ ಅಂಜಿಕೆಯಾಗುತ್ತದೆ” ಎಂದು ಹಿಂಜರಿದ. ಒತ್ತಾಯದಿಂದ ಕೈಹಿಡಿದು ಅವನನ್ನು ಹೊರಗೊಯ್ದೆ. “ಈಗ ಈ ಮರ ಹೇಗೆ ಕಾಣಿಸುತ್ತಿದೆ ಎಂದು ವಿವರಿಸಬಹುದೇ” ಎಂದೆ. “ಈ ಮರ ತನ್ನ ನೂರು ಕೈಗಳನ್ನು ಆಕಾಶದೆತ್ತರಕ್ಕೆ ಚಾಚಿದೆ. ಅಗಣಿತ ಸಂಖ್ಯೆಯ ಎಲೆಗಳು ಹಸುರಾಗಿ, ಅಲ್ಲಲ್ಲಿ ನಸುಗೆಂಪಾಗಿ ಚಿತ್ರ ಬರೆದಿವೆ. ಬೀಸುವ ಗಾಳಿಗೆ ತೊನೆದು ತೂಗುತ್ತವೆ. ನೂರಾರು ಹಕ್ಕಿಗಳು ತಮಗೆ ಬೇಕಾದಾಗ ಬಂದು ತಂಗುತ್ತವೆ, ತಮ್ಮ ಸಂಸಾರವನ್ನು ಹೂಡಿವೆ, ಇಂತಹ ಮರಗಳು ನೀಲ ಗಗನದ ಕೆಳಗೆ ಹಲವಿವೆ.” ಮುಂತಾಗಿ ಇನ್ನೂ ಏನೇನೋ ಹೊಸದನ್ನು ಹೇಳುತ್ತಾ ಮಾತೇ ನಿಲ್ಲಿಸಲಿಲ್ಲ. ಇಲ್ಲಿಯ ಭಾಷಾತಜ್ಞರ ಅವಸ್ಥೆಯೂ ಹಾಗೆಯೇ ಆಯಿತು. ಯುರೋಪಿಯನ್ನರು ಮತ್ತು ಪಶ್ಚಿಮದ ವಿಶ್ವ ಗುರುತಿಸಿದೊಡನೆ ಅವರು ತಮ್ಮನ್ನು ತಾವೇ ಅವಲೋಕಿಸಿಕೊಂಡು “ಇದು ನಮ್ಮದೇ ಏನು, ಗೊತ್ತೇ ಇರಲಿಲ್ಲ” ಎಂದು ಪ್ರಶ್ನಿಸಿಕೊಳ್ಳತೊಡಗಿದರು. ಯುರೋಪಿನ ಜನಗಳು ಮೆಚ್ಚಿಕೊಂಡೊಡನೆ ಭಾರತವೂ ಕೂಡ ಎಚ್ಚೆತ್ತು ವ್ಯಾಕರಣ ಭಾಷಾಶಾಸ್ತ್ರದಲ್ಲಿ ತನ್ನ ಪುರಾತನರ ಕೊಡುಗೆಗಳು ಏನು ಎಂಬುದನ್ನು ಮನವರಿಕೆ ಮಾಡಿಕೊಳ್ಳಲು ಪ್ರಯತ್ನಿಸಿತು.

ಇಂದಿಗೂ ಪಾಣಿನೀಯ ಭಾಷಾಶಾಸ್ತ್ರದಲ್ಲಿ ಹೆಚ್ಚು ಕೆಲಸ ಮಾಡಿದವರು ಮತ್ತು ಮಾಡುತ್ತಿರುವವರು ಒಂದೋ ಹೊರದೇಶದವರು ಅಥವಾ ದಕ್ಷಿಣ ಏಷ್ಯಾದ ದೇಶಗಳಿಂದ ಹೋಗಿ ಹೊರದೇಶಗಳಲ್ಲಿರುವವರು.

ಇಂತಹ ಅದ್ಭುತ ಅನುಭವವನ್ನು ನಮ್ಮದಾಗಿಸಿ ನಮ್ಮನ್ನು ಚಿಂತನೆಗೆ ಹಚ್ಚಿದ ಶಂಭುಮಹಾಜನರಿಗೆ ಧನ್ಯವಾದಗಳು.

ಇಲ್ಲಿ ಸೇರಿ ನೀವೆಲ್ಲಾ ಇಂದಿನ ಸಂಜೆಯನ್ನು ಉಪಯುಕ್ತವಾಗಿ ಕಳೆದಿದ್ದೀರಿ ಎಂದು ಭಾವಿಸಿದ್ದೇವೆ. ನಿಮಗೆಲ್ಲರಿಗೂ ವಂದನೆಗಳು.

(ಕೃತಿ: ವರ್ಣಕ (ಕಾದಂಬರಿ) , ಲೇಖಕರು:ಕೆ.ಪಿ. ರಾವ್ , ಪ್ರಕಾಶಕರು: ಅಂಕಿತ  ಪ್ರಕಾಶನ, ಬೆಲೆ: 450/-)