ತಲೆಯಿಂದ ಕಾಲವರೆಗೆ ಗಮನಿಸಿದ. ಅದೇ ರಶ್ಮಿ! ಗಾಢ ಹಳದಿ ವರ್ಣದ ಸೆಲ್ವಾರ್ ಕಮಿಜ್ ಧರಿಸಿದ್ದಾಳೆ. ತಲೆಯಿಂದ ನೀಳವಾಗಿ ಚಾಚಿ ಹೆಗಲು ಆವರಿಸಿರುವ ರೇಷ್ಮೆಯಂತಹ ಕೇಶ. ಅದೇ ಆಗ ತೀಡಿರುವ ಹುಬ್ಬು, ತುಟಿಯ ಕೆಂಪು ವರ್ಣ ಬೆಳಗಿನ ತಂಪಿಗೆ ನಳನಳಿಸುತ್ತಿದ್ದವು. ಗುಲಾಬಿ ಪಕಳೆಯಷ್ಟೇ ನಾಜೂಕಾದ ಅವಳ ಕೆನ್ನೆಯ ತ್ವಚೆಯಲ್ಲಿ ಮಂಜಿನ ಹನಿಗಳು ನಿಂತು ಮುತ್ತಿನಂತೆ ಮಿಂಚುತ್ತಿವೆ. ವಿಶಾಲವಾದ ಕಣ್ಣುಗಳಲ್ಲಿ ಆಪ್ತಭಾವ, ಅಂತಃಕರಣ ತುಂಬಿದೆ. ಅವಳನ್ನು ಇಡಿಯಾಗಿ ವರ್ಣಿಸಲು ಪ್ರಾಯಶಃ ಶಬ್ದಗಳು ಸಾಲುವುದಿಲ್ಲ. ವರ್ಣಗಳಿಗೂ ನಿಲುಕದ ಸೌಂದರ್ಯವದು.
ಕುಮಾರ ಬೇಂದ್ರೆ ಬರೆದ ಕಥೆ ಈ ಭಾನುವಾರದ ನಿಮ್ಮ ಓದಿಗೆ

 

`ಅದ್ಭುತ ರೂಪ! ಮುಕ್ತವಾಗಿ ಹೇಳ್ತಿದ್ದೀನಿ ರಶ್ಮಿಯವ್ರೆ. ನೀವು ಬಹಳ ಸುಂದರವಾಗಿದ್ದೀರಿ. ನೀವು ಕಳಿಸಿದ ನಿಮ್ಮ ಫೋಟೋಗಳನ್ನ ನೋಡ್ತಿದ್ರೆ ಮತ್ತೆ ಮತ್ತೆ ನೋಡಬೇಕೆನಿಸುತ್ತದೆ. ನಿಮ್ಮೊಂದಿಗೆ ಫೋನಿನಲ್ಲಿ ಮಾತನಾಡಿದ ಮೇಲೆ ವಾಟ್ಸ್‍ಆ್ಯಪ್ ಪ್ರೊಫೈಲ್‍ ನಲ್ಲಿ ನಿಮ್ಮ ಫೋಟೋ ಗಮನಿಸಿದ್ದೆನಷ್ಟೇ. ನೀವು ಹೀಗಿರಬಹುದು ಎಂದು ನಾನು ಊಹಿಸಿರಲಿಲ್ಲ. ಸತ್ಯ ಹೇಳುವೆ, ನಿಮ್ಮ ಮುಖ `ಮೋನಾಲಿಸಾಳ ಮುಖಕ್ಕೆ ಹೋಲಿಕೆಯಾಗುತ್ತದೆ.

`ನೀವು ನನ್ನನ್ನ ಮೋನಾಲಿಸಾಳಿಗೆ ಹೋಲಿಸಿದ್ದು ಬಹಳ ಖುಷಿ ಕೊಟ್ಟಿತು. ನನ್ನ ಹಲವು ಗೆಳತಿಯರು ಕೂಡ ಹೀಗೇ ಹೇಳ್ತಿದ್ರು

`ಓಹ್! ನಿಮ್ಮ ಗೆಳತಿಯರು ಕೂಡ ಹೇಳ್ತಿದ್ರು ಅನ್ನಿ! ಅವ್ರು ಹೇಳಿದ್ದು ನಿಜ

`ನಿಮ್ಮ ಅಭಿಮಾನಕ್ಕೆ ಧನ್ಯವಾದ.

`ನಿಮ್ಮನ್ನ ನೋಡ್ತಿದ್ರೆನೆ ಮನಸ್ಸಿಗೆ ಒಂಥರಾ ಖುಷಿಯಾಗ್ತದೆ. ನೀವು ಅಷ್ಟೊಂದು ಸುಂದರವಾಗಿದ್ರೂ ನಿಮ್ಮಲ್ಲಿ ಸಲ್ಪವೂ ಅಂಹಕಾರವಿಲ್ಲ. ಸೌಮ್ಯವಾಗಿದ್ದೀರಿ. ಪ್ರೀತಿಯಿಂದ ಮಾತನಾಡುತ್ತೀರಿ. ಕಲಾ ಆರಾಧಕನಾದ ನನಗೆ ನಿಮ್ಮಂಥವರ ಸಖ್ಯ ಸಕಾರಾತ್ಮಕ ಶಕ್ತಿ ಇದ್ದಹಾಗೆ. ಹಾಗಾಗಿ ನಿಮ್ಮ ಪರಿಚಯಕ್ಕೆ ಕಾರಣರಾದ ದಿವಾಕರ ಅವರಿಗೆ ನಾನು ಕೃತಜ್ಞತೆ ಹೇಳಬೇಕು.

`ಅದು ನನಗೆ ಅರ್ಥ ಆಗಿದೆ. ನಿಜ ಹೇಳಬೇಕು ಅಂದ್ರೆ ನಿಮ್ಮ ಪರಿಚಯವಾಗಿದ್ದೇ ನನ್ನ ಪುಣ್ಯ. ಅದಕ್ಕಾಗಿ ದಿವಾಕರ ಅವರಿಗೆ ನಾನೂ ಕೃತಜ್ಞತೆ ಹೇಳಬೇಕು. ನೀವು ನನ್ನ ಸೌಂದರ್ಯದ ಬಗ್ಗೆ ಹೇಳಿದಿರಿ. ನನ್ನ ಪ್ರಕಾರ ದೈಹಿಕ ಸೌಂದರ್ಯ ಅನ್ನೋದು ಕ್ಷಣಿಕವಾದದ್ದು. ಇವತ್ತು ಇದ್ದು ನಾಳೆ ಹೋಗುವಂಥದು. ಆದರೆ ಮಾನಸಿಕ ಸೌಂದರ್ಯಕ್ಕೆ ಮುಪ್ಪಿಲ್ಲ. ಅದೊಂದು ಇದ್ದರೆ ಸಾಕು ಸಂತೋಷದಿಂದ ಜೀವನ ಕಳೀಬಹುದು. ಏನಂತೀರಿ?

`ಎಂಥಾ ಅದ್ಭುತವಾದ ಮಾತು! ಇದು ಸಾರ್ವಕಾಲಿಕ ಸತ್ಯ. ನನ್ನಲ್ಲಿ ಸಕಾರಾತ್ಮಕ ಭಾವಗಳು ಹುಟ್ಟೋದಕ್ಕೆ ನಿಮ್ಮ ಇಂಥ ಒಂದು ಮಾತು ಸಾಕು. ನಾನು ಬಹಳ ಭಾವುಕನಾಗ್ತಿನಿ.

`ಪ್ರಾಮಾಣಿಕರಲ್ಲಿ ಮಾತ್ರ ಭಾವುಕತೆ ಹೆಚ್ಚು ಇರ್ತದೆ ಅನ್ನೋದನ್ನ ಕೇಳಿದ್ದೆ. ನಿಮ್ಮ ಮಾತಿನಿಂದಲೇ ಅರ್ಥವಾಗ್ತದೆ ನೀವು ಬಹಳ ಪ್ರಾಮಾಣಿಕರು ಅಂತ. ಸಂಜೆ ಏಳು ಗಂಟೆ ಸಮಯ. ಸತ್ಯಪ್ರಕಾಶ, ರಶ್ಮಿ ವಾಟ್ಸ್‍ಆ್ಯಪ್‍ ನಲ್ಲಿ ಸಂದೇಶಗಳ ಮೂಲಕ ಹೀಗೆ ಮಾತನಾಡುತ್ತಲಿದ್ದರು. ಅವನ ಎಲ್ಲ ಸಂದೇಶಗಳಿಗೂ ರಶ್ಮಿ ಆತ್ಮೀಯವಾಗಿ ಸ್ಪಂದಿಸಿದಳು. ಹಾಗೆ ಅವಳೊಂದಿಗೆ ಮಾತನಾಡಿದ ಬಳಿಕ ಮನಸ್ಸಿಗೇನೋ ಉಲ್ಲಾಸ, ತನುವಲ್ಲಿ ಚೈತನ್ಯದ ಮಿಂಚು ಸುಳಿದ ಅನುಭವ ಅವನಿಗೆ!
`ಅಪೂರ್ವ ರೂಪವತಿಯಾದರೂ ರಶ್ಮಿಯಲ್ಲಿ ಅದೆಂತಹ ಸ್ಥಿತಪ್ರಜ್ಞ ಭಾವ! ತನ್ನ ಸೌಂದರ್ಯದ ಬಗ್ಗೆ ಕಿಂಚಿತ್ತೂ ಅಹಂಕಾರವಿಲ್ಲ. ಅಲ್ಲದೇ ನನ್ನಂತಹ ಅರೆಕುರೂಪಿಯಲ್ಲೂ ಮನೋಸೌಂದರ್ಯವನ್ನು ಕಾಣುವ ಅವಳ ವ್ಯಕ್ತಿತ್ವ ಎಂಥ ಕುತೂಹಲಕಾರಿ! ದೈಹಿಕ ಸೌಂದರ್ಯವನ್ನೇ ಬಂಡವಾಳ ಮಾಡಿಕೊಂಡು ಬದುಕುವ ಹೆಚ್ಚು ಸಂಖ್ಯೆಯ ಸ್ತ್ರೀಯರು ತುಂಬಿರುವ ಈ ಜಗತ್ತಿನಲ್ಲಿ ರಶ್ಮಿಯಂತಹ ಗುಣವುಳ್ಳ ಸುಂದರಿಯರೂ ಇರಬಹುದೆ!? ಎಂದಕೊಂಡ.

ಹೀಗೆ ಯೋಚಿಸುತ್ತ ವಾಟ್ಸ್‍ಆ್ಯಪ್‍ ನಲ್ಲಿ ಅವಳು ಕಳುಹಿಸಿದ್ದ ಅವಳ ಫೋಟೊಗಳನ್ನು ಮತ್ತೆ ಮತ್ತೆ ನೋಡಿದ. ಅಷ್ಟಕ್ಕೆ ಸಮಾಧಾನವೆನಿಸದೇ ಫೋಟೊವನ್ನು ಪರದೆಯಲ್ಲಿ ಹಿಗ್ಗಿಸಿ ಇನ್ನೂ ಹತ್ತಿರದಿಂದ ನೋಡಿ, ಅವಳ ಕಣ್ಣುಗಳ ಆಳದಲ್ಲಿರುವ ನಿಗೂಢ ಭಾವಗಳನ್ನು ಅರಿಯಲು ಯತ್ನಿಸಿದ. ಅವಳು ತೆರೆದಿಟ್ಟ ಪುಸ್ತಕದಂತಿದ್ದರೂ ಅಲ್ಲಿ ಅರ್ಥಗರ್ಭಿತ ನಿಗೂಢ ಚಿತ್ರವೊಂದು ಗೋಚರಿಸಿತು. ಮತ್ತೆ ಮತ್ತೆ ಇಡಿಯಾಗಿ ನೋಡಿದ. ಉಳಿಯ ಪೆಟ್ಟಿಗೆ ಸಿಲುಕಿ, ಸಹನೆಯಿಂದ ಶಿಲ್ಪವಾದ ಶಿಲಾಬಾಲಿಕೆಯಂತೆ ಗೋಚರಿಸಿದಳು! `ಹೀಗೆ ನೋಡುತ್ತಿದ್ದರೆ ಅವಳು ಅಪೂರ್ವ ಸೌಂದರ್ಯ ಹರಳುಗಟ್ಟಿದ ಶಿಲ್ಪವೆನಿಸುತ್ತದೆ! ಅವಳ ಮಾತುಗಳನ್ನು ಆಲಿಸುತ್ತಿದ್ದರೆ ಸೌಂದರ್ಯವೆಂಬುದು ಮನದಲ್ಲಿಯೇ ನೆಲೆಸಿದ ಭಾವವೆನಿಸುತ್ತದೆ. ಇಂತಹ ಗುಣವಿರುವ ಸೌಂದರ್ಯದ ಸಖ್ಯವೇ ವಿಸ್ಮಯ, ಆಹ್ಲಾದನೀಯ. ಈ ಅನುಭವವನ್ನು ಅವಳಿಗೆ ಹೇಳುವುದು ಹೇಗೆ ಎಂದುಕೊಂಡ.

ಸುಮಾರು ಹೊತ್ತು ಕಳೆಯಿತು. ರಶ್ಮಿ ಎಂಬ ವಿಸ್ಮಯದ ರೂಪ, ವ್ಯಕ್ತಿತ್ವ ಕಂಡು ಮಾತನಾಡಿದ ಬಳಿಕ ತಾನೆಲ್ಲೋ ಕಳೆದಿರುವ ಭಾವ ಅವನಲ್ಲಿ. `ಅವಳ ಕುರಿತು ಹೀಗೆಲ್ಲ ಯೋಚಿಸಲಾದರೂ ತಾನು ಯೋಗ್ಯನೆ? ಕುಂಚದ ಸೃಜನಶೀಲ ಶಕ್ತಿಯೊಂದನ್ನು ಬಿಟ್ಟರೆ ಅವಳ ಮಟ್ಟಕ್ಕೆ ನಿಲ್ಲಲು ನನ್ನಲ್ಲಿ ಇನ್ಯಾವ ಅರ್ಹತೆ ಇದೆ. ಅಂತಹ ಸ್ಫುರದ್ರೂಪಿ ತರುಣಿಯನ್ನು ಮಮಕಾರದಿಂದ ನೋಡುವ ದೈಹಿಕ ಅರ್ಹತೆಯಾದರೂ ನನ್ನಲಿದೆಯೇ? ನನ್ನ ಭಾವನೆ, ಹಂಬಲಗಳು ಅರ್ಥವಾದರೆ, ಅರೆಕುರೂಪಿಯ ಹಾಗಿರುವ ನನ್ನನ್ನು ಅವಳು ಆಪ್ತನೆಂದಾದರೂ ಸ್ವೀಕರಿಸಲು ಸಾಧ್ಯವೇ? ಎಂದುಕೊಂಡ ಸತ್ಯಪ್ರಕಾಶ, ಎದ್ದು ಬಂದು ರೂಮಿನಲ್ಲಿದ್ದ ಕನ್ನಡಿಯ ಮುಂದೆ ನಿಂತು, ತನ್ನ ಮುಖವನ್ನೇ ನೋಡಿಕೊಂಡ.

ಕನ್ನಡಿಯಲ್ಲಿ ಮೂಡಿದ ತನ್ನದೇ ಬಿಂಬ ಕಂಡು ಅವನಿಗೆ ನಿರಾಶೆಯಾಯಿತು. ನೆರೆದ ಪುಕ್ಕಗಳು ಉದುರಿದ ಬಿದ್ದ ಮುದಿ ಹಕ್ಕಿಯೊಂದು ನಿಶ್ಯಕ್ತವಾಗಿರುವಂತೆ; ಚರ್ಮವೆಲ್ಲ ಸುಕ್ಕುಗಟ್ಟಿ ಅಕಾಲಕ್ಕೆ ಹರೆಯ ಕಳೆದುಕೊಂಡ ಪುರುಷನೊಬ್ಬನ ಮುಖ, ದೇಹ ಆ ಬಿಂಬದಲ್ಲಿ ಗೋಚರಿಸಿ ತನ್ನ ಬಗ್ಗೆ ತನಗೇ ನಿರಾಶೆ ಹುಟ್ಟಿತು. `ಈ ಹೊರ ದೇಹದ ರೂಪಕ್ಕೂ ಒಳಗಿನ ಭಾವಗಳಿಗೂ ಎಷ್ಟೊಂದು ವ್ಯತ್ಯಾಸವಿದೆ. ಸೌಂದರ್ಯವೆಂಬುದು ಎಲ್ಲಿದ್ದರೂ ಅದಕ್ಕೆ ಮನಸ್ಸು ಮಣಿದು ತಣಿಯುತ್ತದೆ. ಅದರ ಸಾಮಿಪ್ಯಕ್ಕೆ ಹವಣಿಸುತ್ತದೆ. ಆದರೆ, ಎಷ್ಟೇ ಹುಲುಸಾಗಿ ಬೆಳೆದಿದ್ದರೂ ಜಾಲಿ ಮರದ ಗುಣವನ್ನು ಯಾರು ತಾನೆ ಸ್ವೀಕರಿಸಲು ಸಾಧ್ಯ? ತಿಳಿ ನೀರ ಕೊಳದಲ್ಲಿ ಅರಳಿದಂತಹ ಮನಮೋಹಕ ತಾವರೆ ಅವಳು. ಮರಳ ರಾಶಿಯ ಮೇಲೆ ಕಾರಣವಿಲ್ಲದೇ ಬೆಳೆದು ನಿಂತ ಮುಳ್ಳಿನ ಮರ ನಾನು. ನನ್ನನ್ನು ಹೇಗೆ ಆಪ್ತವಾಗಿಸಿಕೊಂಡಾಳು ಅವಳು? ಸತ್ಯಪ್ರಕಾಶ ಯೋಚನೆಯ ಆಳಕ್ಕಿಳಿದ. ಇಂತಹ ಮಾನಸಿಕ ತಳಮಳ ಒಂದೆಡೆ, ರಶ್ಮಿಯ ರೂಪದ ಹಿತಾನುಭವ ಒಂದೆಡೆ ಅವನನ್ನು ಆವರಿಸಿಕೊಂಡು ಆ ರಾತ್ರಿಯೆಲ್ಲ ನಿದ್ದೆಗೇಡು ಮಾಡಿದವು.

******

ಎರಡು ದಿನಗಳು ಕಳೆದಿದ್ದವು. ಆ ಹೊತ್ತು ಸಂಜೆಯ ತಂಗಾಳಿ ಬೀಸುತ್ತಿತ್ತು. ರಶ್ಮಿಯ ರೂಪ-ಸೌಂದರ್ಯದೊಂದಿಗೆ ಮಾನಸಿಕ ಜಗತ್ತಿನಲ್ಲಿ ಕಳೆದು ಹೋಗಿದ್ದ ಸತ್ಯಪ್ರಕಾಶ ಮನೆಯ ಟೆರೇಸ್‍ ನಲ್ಲಿ ಏಕಾಂಗಿಯಾಗಿ ಕುಳಿತಿದ್ದ. ಅಲ್ಲಿಂದ ಕಾಣುತ್ತಿದ್ದ ನಗರದ ಕಟ್ಟಡಗಳು, ಹತ್ತಿರದ ಕೆರೆ, ಮನೆ ಸುತ್ತ ಆವರಿಸಿಕೊಂಡ ಹಸಿರು ಪರಿಸರ ಮನಸ್ಸು ತುಂಬುವಂತಿತ್ತು. ಅವನ್ನೆಲ್ಲ ಕಣ್ಣಿಗೆ ತುಂಬಿಕೊಳ್ಳುವಂತೆ ನೋಡುತ್ತಿದ್ದ ಅವನ ಮನಸ್ಸು ಗಾಳಕ್ಕೆ ಸಿಲುಕಿದ ಮೀನಿನಂತೆ ಮತ್ತೆ ಮತ್ತೆ ಅಲ್ಲೇ ಗಿರಕಿ ಹಾಕುತ್ತಲಿತ್ತು.

`ಈ ಸೃಷ್ಟಿಯಲ್ಲಿ ನಿಜವಾದ ಸೌಂದರ್ಯ ಎಂದು ಯಾವುದಕ್ಕೆ ಹೇಳಬೇಕು? ರೂಪದ ಪ್ರಭಾವಕ್ಕೆ ಸಿಲುಕಿ ಹೊಯ್ದಾಡುವ ಈ ಮನಸ್ಥಿತಿಗೆ ಏನೆನ್ನಬೇಕು? ಆಕರ್ಷಣೆ, ಮಮಕಾರ, ವ್ಯಾಮೋಹ, ಹಂಬಲದ ಪರಿಣಾಮ ಎನ್ನಬಹುದೆ? ಅಷ್ಟಕ್ಕೂ ಸೃಷ್ಟಿಯ ಯಾವ ವಿಷಯಾಸಕ್ತಿಗೂ ಇಷ್ಟೊಂದು ಜೋತು ಬೀಳದ ಮನಸ್ಸು ಸ್ತ್ರೀ ರೂಪಕ್ಕೆ, ಅದರ ಒಡನಾಡಕ್ಕೆ ಅಂಟಿಕೊಳ್ಳುವ ಪರಿ ಏನಿದು? ಮನೋ ವಿಜ್ಞಾನಿ ಫ್ರಾಯ್ಡ್ ಕಾಮದ ಕುರಿತು ಹೇಳಿರುವಂತೆ ಈ ಎಲ್ಲ ಭಾವಗಳ ಹಿಂದೆ `ಕಾಮದ ಅಭಿಪ್ಸೆ ಇದ್ದಿರಬಹುದೇ? ಇಲ್ಲ, ಇರಲಿಕ್ಕಿಲ್ಲ. ಇರಲೂ ಬಹುದು. ಕಾರಣವಿಲ್ಲದೇ ಅರಳಿ ಗಂಧ-ಮಕರಂದ ಸೂಸುವ ಹೂವುಗಳು ಮತ್ತು ಅದನ್ನು ಹೀರಿ ಅನುಭವಿಸುವ ಕೀಟಗಳ ಬಯಕೆಯ ಸೃಷ್ಟಿ ಸಹಜ ಪ್ರಕ್ರಿಯೆಯನ್ನು ಯಾವ ನಾಗರಿಕ ಚೌಕಟ್ಟಿನಲ್ಲಿ ಬಂಧಿಸಿಡಲು ಸಾಧ್ಯ? ಮನುಷ್ಯ ಮೂಲದಲ್ಲಿ ಒಂದು ಪ್ರಾಣಿ. ನಾಗರಿಕ ಜಗತ್ತಿನಲ್ಲಿ ಅವನು ಎಷ್ಟೇ ವಿಕಾಸವಾಗಿದ್ದರೂ, ದೇಹದಲ್ಲಿ ನಿಸರ್ಗ ರೂಪಿಸಿದ ಮೂಲಗುಣ ಕಳೆದು ಹೋಗಲು ಸಾಧ್ಯವೆ? ಅದಕ್ಕಾಗಿಯೇ, ಸೌಂದರ್ಯ ಮತ್ತು ರೂಪವೆಂಬುದು ಮಿಥ್ಯೆಯಲ್ಲ. ಸೌಂದರ್ಯ ಸತ್ಯದ ಸ್ಥಾಯಿ ಭಾವ. ಕಾಮನೆಗಳ ವ್ಯುತ್ಪತ್ತಿಯ ಮೂಲವೇ ರೂಪ. ಇದೆಲ್ಲ ಸೃಷ್ಟಿಯೇ ರೂಪಿಸಿದ ಸಹಜ ಸತ್ಯ. ಮನುಷ್ಯ ಇದನ್ನು ಎಷ್ಟೆಲ್ಲ ನಾರಿಕತೆಯ ಮುಖವಾಡಗಳಲ್ಲಿ ಮುಚ್ಚಿಟ್ಟುಕೊಳ್ಳಲು ಸಾಧ್ಯ? ನಾನು ಇಂತಹ ಎಲ್ಲ ಚೌಕಟ್ಟುಗಳನ್ನು ಮೀರಿ ಯೋಚಿಸುತ್ತಿರುವ ಪರಿಣಾಮವಿದು.

ವರ್ಣಗಳಲ್ಲಿ ನಾನು ಸೃಷ್ಟಿಸುವ ಕಲಾಕೃತಿ ಎಂತಹದೇ ಆಗಿದ್ದರೂ ಅದು ಕೃತ್ರಿಮವಾದದ್ದು. ಆದರೆ ರಶ್ಮಿಯ ರೂಪ ಮತ್ತು ಸೌಂದರ್ಯ ಸೃಷ್ಟಿಯೇ ರೂಪಿಸಿದ ವಿಸ್ಮಯ! ಅದಕ್ಕಿಂತ ಮಿಗಿಲಾದ ಕಲಾಕೃತಿ ಇರಲು ಸಾಧ್ಯವೇ? ಅವಳ ರೂಪ ಕೆತ್ತಲು ಯಾವ ಉಳಿಗೂ ಇಲ್ಲ ಶಕ್ತಿ. ಅವಳ ಸೌಂದರ್ಯ ಮರುಸೃಷ್ಟಿಸಲು ಯಾವ ಕುಂಚ-ವರ್ಣಕ್ಕೂ ಇಲ್ಲ ಸಾಮರ್ಥ್ಯ. ಕಲಾವಿದನೊಬ್ಬ ಸೃಷ್ಟಿಯ ಅಪೂರ್ವ ಕಲಾಕೃತಿ ಕಂಡು ಹೀಗೆ ಕಳೆದುಹೋಗುವ ಪರಿ ಅಸಹಜವೇನೂ ಅಲ್ಲ. ಇದು ಭಾವ ವಿರೇಚನ ಸ್ಥಿತಿ! ಒಳಗಿರುವುದನ್ನೆಲ್ಲ ಹೊರಕ್ಕೆ ನೂಕಿ, ಅಲ್ಲಿ ಹೊಸದೊಂದು ಅರ್ಥ ದರ್ಶನ ನೆಲೆಗೊಳಿಸುವ ಪರಿ! ಸತ್ಯಪ್ರಕಾಶ ಹೀಗೆ ತರ್ಕಕ್ಕಿಳಿದು ತನ್ನ ಮಾನಸಿಕ ಸ್ಥಿತಿಯನ್ನು ಸಮರ್ಥಿಸಿಕೊಳ್ಳಲು ಯತ್ನಿಸಿದ.

`ತಾನೊಂದು ಸುಂದರ ಹೆಣ್ಣಾಗಿದ್ದರೆ ತನ್ನಂಥವನೇ ಒಬ್ಬ ಕುರೂಪಿಯನ್ನು ಆಪ್ತವಾಗಿಸಿಕೊಳ್ಳುತ್ತಿದ್ದೆನೆ? ಹಾಗೊಂದು ವೇಳೆ ಸ್ವೀಕರಿಸಿದ್ದರೆ ಅವನ ಹಂಬಲಗಳಿಗೆ ತನ್ನನ್ನು ಒಪ್ಪಿಸುತ್ತಿದ್ದೆನೆ? ಅಥವಾ ಆ ಕುರೂಪದ ಅಭಿಲಾಷೆಗಳು ಸಹ್ಯವಾಗುತ್ತಿದ್ದವೆ ಎಂದೂ ಯೋಚಿಸಿದ. ಯಾಕೋ ಕುಳಿತ ಜಾಗ ಕದಲಿದಂತಾಗಿ, ಆ ಸಂಜೆ ವಿಲಕ್ಷಣವಾದದ್ದು ಎನಿಸಿತು. ತಾನಿನ್ನು ಒಳ ಜಗತ್ತಿನಿಂದ ಹೊರ ಬಂದು ಬಹಿರ್ಮುಖಿ ಆಗಬೇಕು ಎಂದು ನಿರ್ಧರಿಸಿ, ಎದ್ದು ಅತ್ತಿತ್ತ ನಾಲ್ಕು ಹೆಜ್ಜೆ ಹಾಕಿದ. ಸೂರ್ಯ ಒಂದಂಚಿಗೆ ಇಳಿಯುತ್ತ ಇನ್ನೂ ಮರದ ಕೊಂಬೆಗಳಲ್ಲಿ ಗೋಚರಿಸುತ್ತಲಿದ್ದ. ಬಳಿಕ ಮತ್ತೆ ಒಂದೆಡೆ ಕುಳಿತ ಅವನು ಮೊಬೈಲ್ ತಗೆದು, ರಶ್ಮಿಗಾಗಿ ವಾಟ್ಸ್‍ಆ್ಯಪ್‍ ನಲ್ಲಿ ಒಂದು ಸಂದೇಶ ಬರೆದ.

`ಪೇಂಟಿಂಗ್ ಮಾಡುವುದಕ್ಕಾಗಿ ನನ್ನ ಸೂಚನೆ ಮೇರೆಗೆ ದಿವಾಕರ ಅವರು ನಿಮ್ಮ ಪರಿಚಯ ಮಾಡಿಸಿದರು. ಹಾಗೆ ಅಪೂರ್ವ ರೂಪವೊಂದನ್ನು ಕ್ಯಾನ್ವಾಸ್ ಮೇಲೆ ಹಿಡಿದಿಡಲು ಹೊರಟಿದ್ದ ನನ್ನ ಅಂತರಂಗದಲ್ಲಿ ಅರ್ಥವಾಗದ ಒಂದು ಚಿತ್ರವನ್ನೋ, ಕಾವ್ಯವನ್ನೋ ನೀವು ಬರೆದುಬಿಟ್ಟಿದ್ದೀರಿ. ಅದನ್ನು ಅರಿಯುವುದಕ್ಕಾಗಿ ನಾನು ಹಗಲು-ರಾತ್ರಿ ಪರಿತಪಿಸುತ್ತಿರುವೆ. ಸೌಂದರ್ಯ ಮತ್ತು ಸತ್ಯದ ತರ್ಕದಲ್ಲಿ ನನ್ನ ಬಣ್ಣದ ಕಲಾಕೃತಿ ಅರ್ಥ ಕಳೆದುಕೊಂಡಿದೆ. `ಸೌಂದರ್ಯವೇ ಈ ಸೃಷ್ಟಿಯ ಅಂತಿಮ ಸತ್ಯ ಎಂಬ ಅರಿವಿನ ದರ್ಶನವಾಗಿದೆ. ಇಂತಹ ಸೌಂದರ್ಯ ಹೊತ್ತ ನೀವು ನನ್ನನ್ನು ಆಪ್ತರೆಂದು ಸ್ವೀಕರಿಸುವುದರಲ್ಲೇ ವಿಚಿತ್ರವಾದ ಸುಖವಿದೆ. ಈ ದರ್ಶನವೇ ನೀವು ನನ್ನ ಅಂತರಂಗದಲ್ಲಿ ಬರೆದ ಚಿತ್ರ-ಕಾವ್ಯದ ಅರ್ಥವಿರಬಹುದು. ಅದಕ್ಕಾಗಿ ನಾನು ನಿಮಗೆ ಎಂದೆಂದಿದೂ ಋಣಿ. ಶೀಘ್ರದಲ್ಲಿ ನಿಮ್ಮ ದರ್ಶನ ಭಾಗ್ಯ ದೊರೆಯಲಿ ಎಂದು ಆಶಿಸುವೆ ಹೀಗೆ ಬರೆದು ಅವಳಿಗೆ ಕಳುಹಿಸಿದ.

ಅದಕ್ಕೆ ರಶ್ಮಿ ಸ್ವಲ್ಪ ಹೊತ್ತಿನಲ್ಲೇ ಪ್ರತಿಕ್ರಿಯಿಸಿದಳು. `ಸೌಂದರ್ಯದ ಅರ್ಥವನ್ನು ತಾತ್ವಿಕ ನೆಲೆಯಲ್ಲಿ ಅನ್ವೇಷಿಸುವ ನಿಮ್ಮ ಚಿಂತನೆ ಗಮನಿಸಿದರೆ ಆಶ್ಚರ್ಯವೆನಿಸುತ್ತದೆ. ದೈಹಿಕ ಸೌಂದರ್ಯ ಎಂಬುದು ನೋಟಕ್ಕೆ ಹಿತ, ಮನಸ್ಸಿಗೆ ಆನಂದ ನೀಡುವ ಒಂದು ರೂಪ. ಅದು ತಾರುಣ್ಯ ಕಳೆದ ಮೇಲೆ ಅಳಿದು ಹೋಗುವ ಅರ್ಹತೆ ಎಂದಷ್ಟೇ ನಾನು ಅರಿತಿದ್ದ ಸತ್ಯ. ಸರಳ ಸಹಜ ಬದುಕು, ಗರ್ವವಿಲ್ಲದ ನಡೆ ನುಡಿ, ಮತ್ತು ಅಂತಃಕರಣವುಳ್ಳ ಗುಣಗಳು ಮಾನಸಿಕ ಸೌಂದರ್ಯ ಎಂದು ನಾನು ಕಂಡುಕೊಂಡಿದ್ದ ಇನ್ನೊಂದು ಸತ್ಯ. ಸೌಂದರ್ಯ ಕುರಿತು ನೀವು ಚಿಂತಿಸುವ ಪರಿ ನಾನೆಂದೂ ಊಹಿಸಿರದ ಮಟ್ಟಕ್ಕೆ ಆಳವಾದದ್ದು! ನನ್ನ ದೃಷ್ಟಿಯಲ್ಲಿ ನೀವು ಚಿತ್ರಕಲಾವಿದರು ಮಾತ್ರವಲ್ಲ. ತಾತ್ವಿಕ ಚಿಂತಕರೂ ಕೂಡ ಹೌದು. ಅದಕ್ಕೂ ಹೆಜ್ಜಾಗಿ ಬಹು ಪ್ರತಿಭಾನ್ವಿತರು. ನನಗೂ ಕೂಡ ಶೀಘ್ರದಲ್ಲಿ ನಿಮ್ಮನ್ನು ಮುಖಾಮುಖಿಯಾಗುವ ಅವಕಾಶ ಕಲ್ಪಿಸಿ ಎಂದು ಸಂದೇಶದಲ್ಲಿ ಬರೆದಿದ್ದಳು.

`ಬಹಳ ದೊಡ್ಡ ಮಾತು ರಶ್ಮಿಯವ್ರೆ. ನಾನು ಅದಕ್ಕೆ ಅರ್ಹನೊ ಇಲ್ಲವೊ ಗೊತ್ತಿಲ್ಲ. ನಿಮ್ಮ ಅಭಿಮಾನಕ್ಕೆ ನಾನು ಋಣಿ. ನಿಮ್ಮ ಇಂತಹ ಮಾತುಗಳು ನನ್ನ ಸೃಜನಶೀಲ ಗುಣಕ್ಕೆ ಪ್ರೇರಣೆಯಾಗಬಲ್ಲವು. ಶೀಘ್ರದಲ್ಲಿ ಸಂಧಿಸೋಣ ಎಂದು ಪ್ರತಿಕ್ರಿಯಿಸಿ. ಅವಳು ಮುಗುಳ್ನಗುವಿನ ಸಂಕೇತ ಕಳುಹಿಸಿದಳು.

******

ಅಂದು ರಾತ್ರಿ ಎಂಟು ಗಂಟೆ ಸಮಯ. ಸೌಂದರ್ಯ ಜಿಜ್ಞಾಸೆ ಇನ್ನೂ ಸತ್ಯಪ್ರಕಾಶನ ಬೆನ್ನು ಬಿಟ್ಟಿರಲಿಲ್ಲ. `ವಿಕಾರ ಮುಖದ ಅಂತರಂಗದಲ್ಲೂ ಅವಳಿಗೆ ಸೌಂದರ್ಯ ಗೋಚರಿಸುತ್ತದೆ. ಹಾಗಾದರೆ ಅವಳು ನನ್ನ ಅಂತರಂಗ ಪ್ರವೇಶಿಸಿ, ಮಾನಸಿಕ ಗತಿ-ಸ್ಥಿತಿಯನ್ನೂ ಅರಿತಿದ್ದಾಳೆ. ಹಾಗಾಗಿ ನನ್ನನ್ನು ಆಪ್ತವಾಗಿಸಿಕೊಳ್ಳಲು ನನ್ನ ದೇಹ, ಮುಖಚಹರೆಯ ವಿಷಯ ಅವಳಿಗೆ ಮುಖ್ಯವೇ ಅಲ್ಲ. ಬೆಳಕು ಚೆಲ್ಲಲು ಸುಟ್ಟುಕೊಳ್ಳುವ ಬತ್ತಿಗಿಂತ, ಅದರ ಒಡಲಿನ ತೈಲವೇ ಮುಖ್ಯ ಎಂಬುದು ಅವಳ ನಂಬಿಕೆ. ಹೌದು. ಸೌಂದರ್ಯದ ಅಸ್ತಿತ್ವವೆಂದರೆ ಬೆಳಕಿನ ಅನುಭವದಂತೆಯೆ! ಹಾಗಾದರೆ ಕಾಮವನ್ನು ಕತ್ತಲಿಗೆ ಹೋಲಿಸಬೇಕೆ? ಕತ್ತಲೇ ಇಲ್ಲದಿದ್ದರೆ ಬೆಳಕಿನ ದರ್ಶನವಾಗುವುದಾರೂ ಹೇಗೆ!? ಅದಕ್ಕಾಗಿಯೇ ಕತ್ತಲೆ ಎಂಬುದು ನಕಾರಾತ್ಮಕವಾದದ್ದಲ್ಲ. ಸೃಷ್ಟಿಗೆ ಅದರ ಅಗತ್ಯವೂ ಇದೆ. ಅದಕ್ಕಾಗಿಯೇ ಭೂಮಿಯ ಮೇಲೆ ಸೃಷ್ಟಿ ಅರ್ಧ ಕಾಲ ಕತ್ತಲೆ, ಅರ್ಧ ಕಾಲ ಬೆಳಕನ್ನು ತನ್ನಲ್ಲಿ ಲಯಗೊಳಿಸಿಕೊಂಡಿದೆ. ಸತ್ಯ! ಕಾಮವೆಂಬುದು ಕತ್ತಲೆಯೇ ಆದರೂ, ಬೆಳಕಿನ ದರ್ಶನ- ಅನುಭವಕ್ಕೆ ಅದರ ಅಗತ್ಯವಿದೆ. ಹಾಗಾದರೆ ಸೌಂದರ್ಯವೆಂಬ ಬೆಳಕಿನ ಸುತ್ತ ಕಾಮವೆಂಬ ಕತ್ತಲೆ ಆವರಿಸಿಕೊಂಡಿದೆ. ಇವೆರಡರ ಮುಖಾಮುಖಿಯೇ ಮಿಲನದ ಅನುಸಂಧಾನ. ಇದರ ಅರ್ಥ-ಆನಂದವನ್ನು ಭೋಗದ ಉತ್ತಂಗ ಸ್ಥಿತಿಯಲ್ಲಿ ಮಾತ್ರ ಅನುಭವಿಸಿ, ಅರಿಯಲು ಸಾಧ್ಯ! ಇದನ್ನೆಲ್ಲ ಅವಳಿಗೆ ವಾಖ್ಯಾನಿಸಿ ಹೇಳುವುದಾದರೂ ಹೇಗೆ? ಎಂದುಕೊಂಡು ಅವನು ಇನ್ನೂ ಆಳಕ್ಕಿಳಿದ.

ಆ ಹೊತ್ತು ಅವನಿಗೆ ಮತ್ತಿನ್ನೇನೊ ಹೊಳೆಯಿತು. ತನ್ನ ಆ ಕೊಠಡಿಯಲ್ಲಿ ಈಜಲ್ ಮೇಲಿದ್ದ ಖಾಲಿ ಕ್ಯಾನ್‍ವಾಸ್ ಬಳಿ ಕನ್ನಡಿಯೊಂದನ್ನು ಇಟ್ಟುಕೊಂಡು ತನ್ನದೇ ಮುಖ ನೋಡಿಕೊಂಡ. `ತಾನು ಸ್ವಲ್ಪ ವಿಕಾರವಾಗಿದ್ದೇನೆ ಎನಿಸಿತು. `ಹಾಗಾದರೆ ಅವಳು ಶೋಧಿಸಿದ ನನ್ನೊಳಗಿನ ಸೌಂದರ್ಯವನ್ನು ಈ ಕನ್ನಡಿಯಲ್ಲೋ ಅಥವಾ ಈ ಕ್ಯಾನ್ವಾಸ್ ಮೇಲೊ ತರುವುದಾದರೂ ಹೇಗೆ ಎಂದು ಯೋಚಿಸಿದ. ಆ ದಿಶೆಯಲ್ಲಿ ಪ್ರಯತ್ನಿಸಬೇಕೆಂದು, ಕನ್ನಡಿಯಲ್ಲಿ ಕಾಣುವ ತನ್ನದೇ ಬಿಂಬವನ್ನು ನೋಡುತ್ತ, ಕ್ಯಾನ್ವಾಸ್ ಮೇಲೆ ರೇಖೆಗಳನ್ನು ಎಳೆಯತೊಡಗಿದ. ಅವನ ಅಂತರಂಗದಲ್ಲಿ ರಶ್ಮಿ ತುಂಬಿದ ಅರ್ಥ-ಆನಂದದ ಅನುಭೂತಿ, ಆ ರೇಖೆಗಳಲ್ಲಿ ಮೇಳೈಸಿಕೊಂಡು ಆ ರೇಖೆಗಳು ಅವನ ಮುಖಭಾವಕ್ಕೆ ರಮ್ಯ ಭಾವ ತುಂಬಿದವು.

ಅವನು ಹಾಗೆ ಮುಂದುವರಿದಂತೆ, ತಾನು ಬಿಡಿಸುತ್ತಿರುವುದು ತನ್ನ ಮುಖವನ್ನೋ ಅಥವಾ ರಶ್ಮಿಯ ಮುಖವನ್ನೋ ಎಂಬ ಸಣ್ಣದೊಂದು ಗೊಂದಲ ಸುಳಿಯಿತು. ಚಿತ್ತ ಏಕಾಗ್ರಗೊಳಿಸಿ ಕನ್ನಡಿಯ ಬಿಂಬದಲ್ಲಿ ಕೇಂದ್ರೀಕರಿಸಿ ರೇಖೆಗಳನ್ನು ಪೂರ್ಣಗೊಳಿಸಿದ. ಸ್ವಲ್ಪ ಹೊತ್ತಿನಲ್ಲೇ ಅವನ ಮುಖದ ಪೂರ್ಣ ರೇಖಾಚಿತ್ರ ರೂಪುಗೊಂಡಿತು. ಆಶ್ವರ್ಯವೆಂದರೆ ತಾನೆಂದೂ ಕಂಡಿರದಿದ್ದ ತನ್ನದೇ ರಮ್ಯವಾದ ಮುಖವೊಂದು ಅಲ್ಲಿ ರೂಪಗೊಂಡಿತ್ತು! ಅದನ್ನು ನೋಡುತ್ತ ಅವನು ಮಂದಹಾಸ ಬೀರಿದ. `ಬಿಂಬವೆಂಬುದು ಭ್ರಮೆ. ಬಿಂಬಗಳನ್ನು ನೀ ನಂಬದಿರು. ಆಕೃತಿಯಲ್ಲಿ ಎಷ್ಟು ಸೌಂದರ್ಯವಿರುತ್ತದೊ ತಿಳಿಯದು. ನೋಡುವ ನೋಟದಲ್ಲೂ ಸೌಂದರ್ಯವಿರುತ್ತದೆ. ಆ ನೋಟದಿಂದಲೇ ಸೌಂದರ್ಯದ ಅನುಭೂತಿಯಾಗುವುದು. ಅವಳ ನೋಟದಲ್ಲಿನ ಸೌಂದರ್ಯ ನನ್ನ ಅಂತರಂಗವನ್ನು ಶೃಂಗರಿಸಿದೆ. ಹಾಗಾಗಿ ನಾನೀಗ ಕುರೂಪಿಯಲ್ಲ ಸತ್ಯಪ್ರಕಾಶ ಬಹಳ ಹೊತ್ತು ಚಿಂತನೆಯ ಆಳಕ್ಕಿಳಿದು ತಲಸ್ಪರ್ಷಿಸಿದ.

ಯಾಕೋ ಕುಳಿತ ಜಾಗ ಕದಲಿದಂತಾಗಿ, ಆ ಸಂಜೆ ವಿಲಕ್ಷಣವಾದದ್ದು ಎನಿಸಿತು. ತಾನಿನ್ನು ಒಳ ಜಗತ್ತಿನಿಂದ ಹೊರ ಬಂದು ಬಹಿರ್ಮುಖಿ ಆಗಬೇಕು ಎಂದು ನಿರ್ಧರಿಸಿ, ಎದ್ದು ಅತ್ತಿತ್ತ ನಾಲ್ಕು ಹೆಜ್ಜೆ ಹಾಕಿದ. ಸೂರ್ಯ ಒಂದಂಚಿಗೆ ಇಳಿಯುತ್ತ ಇನ್ನೂ ಮರದ ಕೊಂಬೆಗಳಲ್ಲಿ ಗೋಚರಿಸುತ್ತಲಿದ್ದ.

ಅದೇ ರಾತ್ರಿ ಸತ್ಯಪ್ರಕಾಶ ಮಲಗಿದ ಸ್ವಲ್ಪ ಹೊತ್ತಿನಲ್ಲೇ ಬೆಳಗಾಗಿದೆ! ರಾತ್ರಿಯನ್ನೆಲ್ಲಾ ರೈಲು ಪ್ರಯಾಣದಲ್ಲಿ ಕಳೆದು ಅವನು ತನ್ನೂರಿನಿಂದ ದೂರದ ಯಾವುದೋ ಊರಿಗೆ ಬಂದಿದ್ದಾನೆ. ಹಸಿರು ತುಂಬಿದ ಪರಿಸರವದು. ಅಲ್ಲಿಗೆ ಬಂದಿರುವ ಅವನಿಗೆ ಏನೋ ಒಂಥರಾ ಸೌಖ್ಯ, ಸಂತೋಷವೆನಿಸುತ್ತಿದೆ.

`ರಶ್ಮಿ ಈ ಹೊತ್ತಿಗಾಗಲೇ ಬರುತ್ತೇನೆಂದು ಹೇಳಿದವಳು ಬರಬೇಕಿತ್ತಲ್ಲ ಎಂದು ಅವಳಿಗಾಗಿ ಕಾಯ್ದ. ಅದೇ ವೇಳೆಗೆ ಹಿಂಬದಿಯಿಂದ ಯಾರೋ ಹೆಗಲಮೇಲೆ ಕೈ ಇಟ್ಟ ಅನುಭವ! ಹೊರಳಿ ನೋಡಿದರೆ ಸಾಕ್ಷಾತ್ ರಶ್ಮಿ ಪ್ರತ್ಯಕ್ಷವಾಗಿದ್ದಾಳೆ. ಕೆಲವು ಕ್ಷಣ ಅವನಿಗೆ ನಂಬಲಾಗಲಿಲ್ಲ. ಆದರೂ ಅದು ಸತ್ಯವೆನಿಸಿತು. ಹೆಗಲ ಮೇಲೆ ಇಟ್ಟ ಅವಳ ಕೈಯ ಮೃದು ಸ್ಪರ್ಷಕ್ಕೆ ತನುವಲ್ಲಿ ಶಕ್ತಿ ಸಂಚಾರವಾದಂತಾಯಿತು! ತಲೆಯಿಂದ ಕಾಲವರೆಗೆ ಗಮನಿಸಿದ. ಅದೇ ರಶ್ಮಿ! ಗಾಢ ಹಳದಿ ವರ್ಣದ ಸೆಲ್ವಾರ್ ಕಮಿಜ್ ಧರಿಸಿದ್ದಾಳೆ. ತಲೆಯಿಂದ ನೀಳವಾಗಿ ಚಾಚಿ ಹೆಗಲು ಆವರಿಸಿರುವ ರೇಷ್ಮೆಯಂತಹ ಕೇಶ. ಅದೇ ಆಗ ತೀಡಿರುವ ಹುಬ್ಬು, ತುಟಿಯ ಕೆಂಪು ವರ್ಣ ಬೆಳಗಿನ ತಂಪಿಗೆ ನಳನಳಿಸುತ್ತಿದ್ದವು. ಗುಲಾಬಿ ಪಕಳೆಯಷ್ಟೇ ನಾಜೂಕಾದ ಅವಳ ಕೆನ್ನೆಯ ತ್ವಚೆಯಲ್ಲಿ ಮಂಜಿನ ಹನಿಗಳು ನಿಂತು ಮುತ್ತಿನಂತೆ ಮಿಂಚುತ್ತಿವೆ. ವಿಶಾಲವಾದ ಕಣ್ಣುಗಳಲ್ಲಿ ಆಪ್ತಭಾವ, ಅಂತಃಕರಣ ತುಂಬಿದೆ. ಅವಳನ್ನು ಇಡಿಯಾಗಿ ವರ್ಣಿಸಲು ಪ್ರಾಯಶಃ ಶಬ್ದಗಳು ಸಾಲುವುದಿಲ್ಲ. ವರ್ಣಗಳಿಗೂ ನಿಲುಕದ ಸೌಂದರ್ಯವದು. ಮಾತು, ಬಣ್ಣಗಳನ್ನು ಮೀರಿದ ಆ ಸೌಂದರ್ಯವನ್ನು ಕಾವ್ಯದಂತೆ ಮೌನದಲ್ಲೇ ಆಸ್ವಾದಿಸಬೇಕು!

`ಹೇ, ರಶ್ಮಿ ಅವ್ರೆ. ಬಂದ್ಬಿಟ್ರಾ?ʼ ಎಂದು ಅವನು ಬೆರಗು ವ್ಯಕ್ತಪಡಿಸಿದ.

`ಹ್ಞೂಂʼ ಎನ್ನುವಂತೆ ಅವಳು ಕಣ್ಣಲ್ಲೇ ಉತ್ತರಿಸಿದಳು.

`ಸ್ವಲ್ಪ ಲೇಟಾಯ್ತು. ಬೇಜಾರಿಲ್ಲ ತಾನೆʼ ಎಂದಳು ಮಧುರ ಕಂಠದಿಂದ.

`ಬೇಜಾರು ಎಂಥದ್ದು ಬಿಡಿ. ನಿಮ್ಮ ಭೇಟಿಗಾಗಿ ಕಾಯೋ ಕುತೂಹಲ ಇದೆಯಲ್ಲ ಅದರ ಮಜಾನೇ ಬೇರೆ! ಹಾಗೆ ಕಾಯ್ಕೊಂಡಿರೋವಾಗ ಎದುರಿಗೆ ನೀವು ಪ್ರತ್ಯಕ್ಷ ಆದಾಗ ಸಿಗೊ ಥ್ರಿಲ್ ಎಂಥಾ ಅದ್ಭುತ!ʼ ಎಂದ ಮುಗುಳ್ನಕ್ಕು.

`ನಿಮಗೆ ಈ ವಯಸ್ಸಿಗೆ ಹರೆಯ ಮರುಕಳಿಸಿದೆ ಅಂತ ಅನಿಸ್ತಿದೆ. ಅದರ ಪರಿಣಾಮ ಇದೆಲ್ಲಾʼ ಎಂದು ನಕ್ಕಳು.

`ಇರಬಹುದು. ಆದ್ರೆ ಹರೆಯಕ್ಕೆ ವಯಸ್ಸಿನ ಗಡಿ ಅನ್ನೋದಿಲ್ಲ. ಮೊದಲನೇ ಸಾರಿ ಹೂವು ಕಾಯಿಯಾಗಿ, ಕಾಯಿ ಹಣ್ಣಾಗೊ ಆನಂದನೇ ಬೇರೆ. ಅದರ ನಂತರ ಮತ್ತೆ ಮತ್ತೆ ಹೂವು ಕಾಯಾಗಿ, ಕಾಯಿ ಹಣ್ಣಾಗೊ ಪರಿಯ ಆನಂದನೇ ಬೇರೆ. ಆದ್ರೆ ಈ ಹರೆಯಕ್ಕೆ ಹೊಸ ಚೈತನ್ಯ ಬಂದಿರೋದಕ್ಕೆ ನೀವೇ ಕಾರಣ ಅಂತ ಬೇರೆ ನಾನು ಹೇಳಬೇಕಾಗಿಲ್ಲ.

`ನೀವು ಯಾಕೊ ನನ್ನ ಭಾಳ ಹೊಗಳ್ತಿದ್ದೀರಿ ಅನಿಸ್ತಿದೆ. ನೀವು ಹೀಗೆ ಹೇಳ್ತಿದ್ರೆ ನನಗೆ ಮುಜುಗರ ಆಗತ್ತೆ. ಜಗತ್ತಿನ ಯಾರಲ್ಲೂ ಇಲ್ಲದ ಅಂದ-ಛೆಂದ ನನ್ನಲ್ಲೇ ಇದೇ ಅನ್ನೋ ಹಾಗೆ ಮಾತಾಡ್ತಿರ ನೀವು.

`ಹೌದು ಮತ್ತೆ. ಅದಕ್ಕೆ ಅಲ್ವಾ ನಿಮಗೆ `ಮೋನಾಲಿಸಾʼ ಅಂದಿದ್ದು. ಜಗತ್ತಿನಲ್ಲಿ ವಿಶಿಷ್ಟವಾದ ನಗು-ಸೌಂದರ್ಯ ಅಂತ ಹೊಂದಿರೋಳು ಅವಳೊಬ್ಬಳೇ. ಕೆಲವು ಅರ್ಹತೆಗಳು ಕೆಲವರಲ್ಲಿ ಮಾತ್ರ ಇರತವೆ. ಜಗತ್ತಿನಲ್ಲಿ ಎಂತೆಂಥ ಸುಂದರವಾದ ಸ್ಮಾರಕಗಳೆಲ್ಲಾ ಇವೆ. ಆದ್ರೆ ಇರೋದೊಂದೇ ತಾಜ್‍ಮಹಲ್. ಬೇರೆ ಯಾವ ಅದ್ಭುತ ಕಟ್ಟಡಗಳಿಗೆ ಏನೇ ಅರ್ಹತೆಗಳಿದ್ರೂ ಅದು ತಾಜ್‍ಮಹಲ್ ಆಗೋದಕ್ಕೆ ಸಾಧ್ಯನೆ ಇಲ್ಲಾ. ಅಲ್ವಾ?

ಸತ್ಯಪ್ರಕಾಶ ಹೀಗೆಂದಾಗ, ಭಾವುಕಳಾದ ರಶ್ಮಿ ಅವನ ಕೈ ಹಿಡಿದು ಅದುಮಿ `ನೀವು ನನ್ನ ಎಷ್ಟೊಂದು ಇಷ್ಟ ಪಡ್ತಿದ್ದೀರಿ ಅಂತ ನನಗೆ ಅರ್ಥ ಆಗಿದೆ. ನಿಮ್ಮ ಪ್ರೀತಿ ಎಷ್ಟು ನಿಷ್ಕಲ್ಮಷವಾದದ್ದು ಅನ್ನೋದು ಕೂಡ ತಿಳಿದಿದೆ. ಈ ನಿಮ್ಮ ನಿರ್ಮಲವಾದ ಪ್ರೀತಿಯನ್ನ ಕೂಡ ಯಾವ ಸಂಪತ್ತಿಗೂ ಹೋಲಿಕೆ ಮಾಡೋದಕ್ಕಾಗಲ್ಲ ಎಂದು ಅವಳು ಕಣ್ಣು ಮುಚ್ಚಿ ಅವನ ಕೈಯನ್ನು ತನ್ನ ಕೆನ್ನೆಯಮೇಲಿಟ್ಟುಕೊಂಡಳು. ಕುಸುಮ ದಳದಂತೆ ಮೃದುವಾದ ಅವಳ ಕೆನ್ನೆಯ ಸ್ಪರ್ಷಕ್ಕೆ ಅವನು ನಲುಗಿದ. ಅಲ್ಲಿಯತನಕ ಅವಳು ಸಲುಗೆ ನೀಡಿದ ಬಳಿಕ, ಆ ಇಡೀ ರೂಪರಾಶಿಯನ್ನು ತನ್ನ ಬಾಹುಗಳಲ್ಲಿ ಬಾಚಿ ತಬ್ಬಿಕೊಳ್ಳುವ ತವಕ ಮೂಡಿತು. ಕೈ ಕಾಲುಗಳೆಲ್ಲ ಥರಗುಟ್ಟಿ ಮೈಯಲ್ಲಿ ಜ್ವರ ಏರಿದ ಅನುಭವ!

ಇನ್ನೇನು ಅವಳನ್ನು ಸೆಳೆದು ತಬ್ಬಿಕೊಳ್ಳಬೇಕೆನ್ನುವಷ್ಟರಲ್ಲಿ ಎಚ್ಚರವಾಗಬೇಕೆ!? ಕಣ್ಣು ಬಿಟ್ಟರೆ ಇನ್ನೂ ರಾತ್ರಿಯೇ ಮುಗಿದಿಲ್ಲ. ಸತ್ಯಪ್ರಕಾಶ ಇನ್ನೂ ಹಾಸಿಗೆಯಲ್ಲಿ ಮಲಗಿದ್ದ. `ಛೆ ಅದು ಕನಸೆ!? ಎಂದುಕೊಂಡು ಮುಗುಳ್ನಕ್ಕ. ಗೋಡೆ ಗಡಿಯಾರ ನೋಡಿದರೆ ನಸುಕಿನ ನಾಲ್ಕು ಗಂಟೆಯಾಗುತ್ತಲಿತ್ತು. ಹೊರಳಿ ಮಲಗಿದ.

******

ಕೆಲವು ದಿನಗಳು ಕಳೆದಿದ್ದವು. ಸತ್ಯಪ್ರಕಾಶ, ರಶ್ಮಿ ಅವರ ಭೇಟಿಗೆ ದಿನ ನಿಗದಿಯಾಗಿತ್ತು. ಅವನು ತನ್ನೂರಿನಿಂದ ಬೆಂಗಳೂರಿಗೆ ಆಗಮಿಸಿದ್ದ. ಅವಳೂ ಕೂಡ ತನ್ನೂರಿನಿಂದ ಬೆಂಗಳೂರಿಗೆ ಬರುವುದಾಗಿ ತಿಳಿಸಿದ್ದಳು. ಮೊದಲೇ ನಿಗದಿಯಾಗಿರುವಂತೆ ಅವನು ರೆಸಾರ್ಟ್‍ ವೊಂದರಲ್ಲಿ ತಂಗಿದ್ದ. ಹೇಳಿದ ಸಮಯಕ್ಕೆ ಸರಿಯಾಗಿ ಸಂಜೆ ಐದರ ಹೊತ್ತಿಗೆ ರಶ್ಮಿ ಸರಳ ಉಡುಪಿನಲ್ಲಿ ಅಲ್ಲಿಗೆ ಬಂದು ಹಾಜರಾಗಿದ್ದಳು. ಮುಖಕ್ಕೆ ಹೆಚ್ಚೇನೂ ಕೃತಕ ಬಣ್ಣಗಳನ್ನೂ ಲೇಪಿಸಿಕೊಳ್ಳದೇ ಸೌಮ್ಯವಾಗಿದ್ದಳು. ಮಾತಿನಲ್ಲಿ ಸಲುಗೆ ಇದ್ದರೂ ವರ್ತನೆಯಲ್ಲಿ ಅರಿವಿನ ಗಾಂಭಿರ್ಯವಿತ್ತು. ಫೋಟೊಗಳು ಮತ್ತು ಕನಸಿನಲ್ಲಿ ಕಂಡಿದ್ದ ರಶ್ಮಿಗೂ ವಾಸ್ತವದ ಈ ರಶ್ಮಿಗೂ ಏನು ವ್ಯತ್ಯಾಸವೆಂಬುದು ಅವನಿಗೆ ಸರಿಯಾಗಿ ಅರಿವಾಯಿತು. `ಕನಸುಗಳಿಗೆ ರೆಕ್ಕೆಗಳಿರುತ್ತವೆ. ವಾಸ್ತವಕ್ಕೆ ಕೈಗಳಿರುತ್ತವೆ. ಎರಡರ ನಡುವಿನ ಅಂತರ ಇದೇ ಎಂದುಕೊಂಡ.

ಜೂಸ್ ಕುಡಿಯುತ್ತಲೇ ಇಬ್ಬರ ನಡುವೆ ಔಪಚಾರಿಕ ಮಾತುಗಳಾದವು. ಅವಳು ತನ್ನ ಮನೆ ಪರಿಸರ, ಆಸಕ್ತಿ, ಹಿನ್ನೆಲೆ ಕುರಿತು ಮಾತನಾಡಿದಳು. ಅವನು ತನ್ನ ಅಭಿರುಚಿ, ಆಸಕ್ತಿಗಳ ಬಗ್ಗೆ ತಿಳಿಸಿದ. ಕಡೆಗೆ ಅವನು ವಿಷಯಕ್ಕೆ ಬಂದು, ಅವಳು ಹೇಳಿದ ಮಾತೊಂದನ್ನು ನೆನಪಿಸಿ ಚರ್ಚೆಗೆ ತಂದ.
`ದೈಹಿಕ ಸೌಂದರ್ಯ ಅನ್ನೋದು ಕ್ಷಣಿಕ. ಇವತ್ತು ಇದ್ದು ನಾಳೆ ಹೋಗುಂಥದ್ದು. ಮಾನಸಿಕ ಸೌಂದರ್ಯಕ್ಕೆ ಮುಪ್ಪಿಲ್ಲ. ಅದೊಂದು ಇದ್ರೆ ಬದುಕುನ್ನ ಆನಂದಿಂದ ಕಳಿಬಹುದು ಅಂತ ನಿಮ್ಮ ಅಭಿಪ್ರಾಯ ಹೇಳಿದ್ರಿ. ಅದರ ಬಗ್ಗೆ ನಾನು ಭಾಳ ಯೋಚನೆ ಮಾಡಿದೆ. ಸ್ವತಃ ಸ್ಪುರದ್ರೂಪಿಯಾಗಿದ್ರೂ ದೇಹದ ಆಕರ್ಷಣೆಯನ್ನ ಮೀರಿ ಮಾನಸಿಕ ಸೌಂದರ್ಯವನ್ನ ಬಯಸೋ ನಿಮ್ಮ ತರಹದ ತರುಣಿಯರು ಇವತ್ತಿನ ಜಗತ್ತಿನಲ್ಲಿ ಎಷ್ಟು ಜನ ಇರತಾರೆ ಅಂತ ಆಶ್ವರ್ಯವಾಯ್ತು ನನಗೆ. ದೈಹಿಕ ಸೌಂದರ್ಯದ ಜೊತೆಗೆ ಮಾನಸಿಕ ಪಕ್ವತೆಯನ್ನ ಬಯಸೋ ನನಗೆ ನೀವು ಬಹಳ ಆಪ್ತವಾದ್ರಿ. ಯಾಕಂದ್ರೆ ಈ ಎಲ್ಲಾ ಅರ್ಹತೆ ನಿಮ್ಮಲ್ಲಿವೆ. ನಿಮಗೇನು ಅನ್ನಿಸ್ತದೆ? ಎಂದು ಕುತೂಹಲದಿಂದ ಹೇಳಿದ.

ಅವನ ಮಾತು ಕೇಳಿದ ರಶ್ಮಿ ಮುಗುಳ್ನಕ್ಕು, ಮೊಬೈಲ್‍ ನಲ್ಲಿ ಅವನು ತನಗೆ ಬರೆದು ಕಳಿಸಿದ್ದ ಸಾಲುಗಳನ್ನು ತೆಗೆದು ಓದಿದಳು. `ಅಪೂರ್ವ ರೂಪವನ್ನು ಕ್ಯಾನ್ವಾಸ್ ಮೇಲೆ ಹಿಡಿದಿಡಲು ಹೊರಟಿದ್ದ ನನ್ನ ಅಂತರಂಗದಲ್ಲಿ ಅರ್ಥವಾಗದ ಒಂದು ಚಿತ್ರವನ್ನೋ, ಕಾವ್ಯವನ್ನೋ ನೀವು ಬರೆದುಬಿಟ್ಟೀದ್ದೀರಿ. ಅದನ್ನು ಅರಿಯುವುದಕ್ಕಾಗಿ ನಾನು ಹಗಲು-ರಾತ್ರಿ ಪರಿತಪಿಸುತ್ತಿರುವೆ… `ಸೌಂದರ್ಯವೇ ಸೃಷ್ಟಿಯ ಅಂತಿಮ ಸತ್ಯ ಎಂಬ ಅರಿವಿನ ದರ್ಶನವಾಗಿದೆ. ಇಂತಹ ಸೌಂದರ್ಯ ಹೊತ್ತ ನೀವು ನನ್ನ ಆಪ್ತರೆಂದುಕೊಳ್ಳುವುದರಲ್ಲೇ ಸುಖವಿದೆ….. ಸೌಂದರ್ಯದ ಸತ್ಯವನ್ನರಸಿ ನೀವು ಮಾಡಿದ ಈ ತರ್ಕ ಎಂಥ ಅದ್ಭುತ! ಸತ್ಯಪ್ರಕಾಶ ಅವ್ರೆ ನಾನು ನಿಮ್ಮ ತರ್ಕವನ್ನ ಒಪ್ಪತಿನಿ. ಆದ್ರೆ ನೀವು ಹೇಳೊದಕ್ಕೆ ಹೊರಟಿರೋ ಸೌಂದರ್ಯ ಹೆಣ್ಣಿಗೆ ಮಾತ್ರ ಸೀಮಿತವಾದದ್ದಲ್ಲ. ಈ ಸೃಷ್ಟಿಯ ಸೌಂದರ್ಯ ತತ್ವವನ್ನೂ ಒಳಗೊಂಡಿರವಂಥದ್ದು. ಹೆಣ್ಣಿನ ಆಕರ್ಷಣೆಗೆ ಬಿದ್ದು ನೀವು ಪ್ರೀತಿ ಅನ್ನೋ ಮಮಕಾರದಲ್ಲಿ ಸಿಲುಕಿದ್ದೀರಿ. ನನ್ನ ಪ್ರಕಾರ ಮನುಷ್ಯನ ದೈಹಿಕ ನಡೆಯೇ ಬೇರೆ, ಮಾನಸಿಕ ನಡೆಯೇ ಬೇರೆ. ಅದಕ್ಕಾಗಿಯೇ ರೂಪ ಬೇರೆ, ಸೌಂದರ್ಯ ಬೇರೆ ಅಂತ ನಾನು ನಂಬತಿನಿ. ಹೆಣ್ಣಿನಲ್ಲಿ ಭೋಗ ಸುಖದ ಮಾರ್ಗ ಇರುವ ಕಾರಣನೇ ಈ ನಿಮ್ಮ ಎಲ್ಲ ತರ್ಕ, ತಾತ್ವಿಕ ಚಿಂತನೆಯ ಮೂಲ ಅಷ್ಟೆ. ರೂಪ ಅನ್ನೋದು ಹೆಣ್ಣಿನ ಆ ಅರ್ಹತೆಯ ಒಂದು ಬಹಿರಂಗ ಮುಖ. ಆದ್ರೆ, ಸೌಂದರ್ಯ ಅನ್ನೋದು ಸೃಷ್ಟಿ ಸತ್ಯದ ಮೂಲ ಗುಣ. ಸೃಷ್ಟಿಯ ಸತ್ಯಕ್ಕೆ ಪ್ರೀತಿ, ಮಮಕಾರಗಳ ಹಂಗಿಲ್ಲ. ಅದು ಅಖಂಡ ಸೌಂದರ್ಯ. ಹಾಗಾಗಿ ನಿಸರ್ಗಕ್ಕೆ ಸುರೂಪ ಎಷ್ಟು ಮುಖ್ಯನೊ ಕುರೂಪನೂ ಅಷ್ಟೇ ಮುಖ್ಯ. ಸೃಷ್ಟಿಯ ಇಂತಹ ಅಖಂಡ ಸೌಂದರ್ಯ ಪ್ರಜ್ಞೆಯ ಅರಿವಾದ ಮೇಲೂ ರೂಪದ ಆಕರ್ಷಣೆಗೆ ಸಿಲುಕಿ ಭೋಗವನ್ನ ಬಯಸೋದು ಮನುಷ್ಯ ಸಹಜ ಗುಣ. ಅದಕ್ಕಾಗಿಯೇ ಮನೋ ವಿಜ್ಞಾನಿ ಫ್ರಾಯ್ಡ್ `ಕಾಮ ಮನುಷ್ಯನ ಮೂಲ ಸ್ವಭಾವ ಅಂತ ಹೇಳಿರೋದು. ಇಷ್ಟು ನಾನು ತಿಳಕೊಂಡಿರುವ ವಿಚಾರ. ನೀವು ಈ ವಿಚಾರವನ್ನ ಕೆದಕಿದ್ರಿ ಅಂತ ಹೇಳಿದೆ.

ರಶ್ಮಿಯ ದೀರ್ಘ ಮಾತುಗಳನ್ನು ಗಂಭೀರವಾಗಿ ಆಲಿಸಿದ ಸತ್ಯಪ್ರಕಾಶ ಅವಳ ವೈಚಾರಿಕ ವಿಸ್ತಾರ ಅರಿತು ಮೂಕವಿಸ್ಮಿತನಾದ. ಅವಳ ಮಾತುಗಳಿಗೆ ಅವನು ಪ್ರತಿಕ್ರಿಯಿಸಲೇಬೇಕಾಗಿತ್ತು.
`ಅಂದ್ರೆ!? ರೂಪ-ಸೌಂದರ್ಯದ ಆಕರ್ಷಣೆಗೆ ಸಿಲುಕಿದವರಿಗೆ ಮನಸ್ಸು, ದೇಹಗಳ ಮಿಲನವೇ ಬಿಡುಗಡೆಯ ಮಾರ್ಗ ಅಂದ್ಹಾಗಾಯ್ತು.. ಅಲ್ವಾ?ʼ ಎಂದ.

`ಹೌದು. ಮನಸ್ಸುಗಳು ಬೆತ್ತಲಾದ ಮೇಲೆ ದೇಹಗಳು ಬೆತ್ತಲಾಗೋದರಲ್ಲಿ ಯಾವ ಅಪರಾಧನೂ ಇಲ್ಲ. ಬೆತ್ತಲಾದ ಎರಡು ಮನಸ್ಸು-ದೇಹಗಳ ಮಿಲನದ ಉತ್ತಂಗದ ಸ್ಥಿತಿಯಲ್ಲೇ ಆತ್ಮ ಸಾಕ್ಷಾತ್ಕಾರದ ಮಾರ್ಗ ಇರುವುದು. ಅರಿವು-ಜ್ಞಾನದ ಆನಂದ, ಆಧ್ಯಾತ್ಮ ಕೂಡ ಇದನ್ನ ಹೊರತಾಗಿಲ್ಲ ಅಂತ ನಾನು ಹೇಳ್ತಿನಿ. ಆದ್ರೆ ಸ್ವೀಕಾರ, ತಿರಸ್ಕಾರ ಇವೆರಡರ ಇಚ್ಛಾಶಕ್ತಿಯನ್ನ ನಮ್ಮ ಹಿಡಿತದಲ್ಲಿ ಇಟ್ಟುಕೊಳ್ಳೋದೇ ನಿಜವಾದ ಸಾಧನೆ ಎಂದಳು.

ರಶ್ಮಿಯ ಮಾತು ಕೇಳಿ ಬೆರಗಾದ ಸತ್ಯಪ್ರಕಾಶ ಎದ್ದು ನಿಂತು ಅವಳಿಗೆ ಕೈ ಜೋಡಿಸಿ- `ರಶ್ಮಿಯವ್ರೆ ಈ ನಾಗರಿಕ ಸಮಾಜದಲ್ಲಿ ಮನುಷ್ಯರು ತಮಗೆ ತಾವೇ ಹಾಕ್ಕೊಂಡಿರೊ ಎಲ್ಲ ಗಡಿ ಪಹರೆಗಳನ್ನ ಮೀರಿ ನಿಂತ ವ್ಯಕ್ತಿತ್ವ ನಿಮ್ಮದು. ನಿಮ್ಮನ್ನ ಕೇವಲ ರೂಪದಿಂದ ಅಳಿಯಲು ಹೊರಟಿದ್ದ ನಾನು ಅಪೂರ್ಣ ಅನ್ನೋದು ಈಗ ನನಗೆ ಅರಿವಾಯ್ತು ಎಂದು ವಿನಯದಿಂದ ಹೇಳಿದ.

`ನಿಮ್ಮ ದಾರಿ ಕೂಡ ಸರಿಯಾಗಿಯೇ ಇದೆ. ನಿಮ್ಮಲ್ಲಿರೋ ಆ ದೃಢ ಆಕಾಂಕ್ಷೆಯನ್ನ ಕಂಡು ನಾನೂ ಬೆರಗಾಗಿದ್ದೀನಿʼ ಎಂದು ರಶ್ಮಿ ಅರ್ಥಗರ್ಭಿತ ಭಾವದಲ್ಲಿ ಮುಗುಳ್ನಕ್ಕು ಹೇಳಿದಳು. ಅವಳ ಆ ನಗುವಲ್ಲೇ ಕಳೆದುಹೋದ ಸತ್ಯಪ್ರಕಾಶ ಮೌನಿಯಾದ. ಆ ಹೊತ್ತು ಅವಳ ಕಣ್ಣುಗಳಲ್ಲಿದ್ದ ಆಹ್ವಾನದ ಸನ್ನೆ ಅವನಿಗೆ ಅರ್ಥವಾಗಿ, ಅದು ವಿಚಿತ್ರ ಒಗಟಾಗಿ ಕಾಡಿತು.