ಬಹುತೇಕ ಎಲ್ಲಾ ವಸ್ತು ಸಂಗ್ರಹಾಲಯಗಳಲ್ಲಿ ಇರುವಂತೆ ಇಲ್ಲಿಯೂ ಸಹ ಕಜಾರ್ ಮಹಿಳೆಯರು ಕರಕುಶಲದಲ್ಲಿ, ಅಡುಗೆ ವಿಧಾನದಲ್ಲಿ, ಸೌಂದರ್ಯ ಕಲೆಯಲ್ಲಿ, ಕಾವ್ಯ ಕಟ್ಟುವಿಕೆಯಲ್ಲಿ ಬೆಳೆದು ಬಂದ ಬಗೆಗಳ ಬಗ್ಗೆ ಸಾಕ್ಷಿಸಹಿತ ಪ್ರದರ್ಶನ ಇತ್ತು. 1789-1925 ಈ ಕಾಲದಲ್ಲಿ ಇರಾನ್ ದೇಶವನ್ನು ಆಳಿದ ಕಜಾರ್ ಮನೆತನದ ಹೆಣ್ಣು ಮಕ್ಕಳು ಇಸ್ಲಾಮೀಯರಲ್ಲೇ ಅತ್ಯಂತ ಆಧುನಿಕ ಆಲೋಚನೆ ಇದ್ದವರು ಎಂದು ಹೆಸರಾಗಿದ್ದಾರೆ. ರಾಜಕುಮಾರಿಯರಾದ ಅಶ್ರಫ್-ಅಲ್-ಮುಲಕ್ ಹಾಗೂ ಸತ್ತೇರಹ್-ಫರ್ಮನ್ಫರ್ಮೈಯೆನ್ ಇವರುಗಳು ತಮ್ಮ ಸಮಾಜ ಸೇವೆಗೆ ಹೆಸರಾದವರು.
‘ಕಂಡಷ್ಟೂ ಪ್ರಪಂಚ’ ಪ್ರವಾಸ ಅಂಕಣದಲ್ಲಿ ಅಂಜಲಿ ರಾಮಣ್ಣ ಬರಹ  ಇಂದಿನ ಓದಿಗೆ. 

ಮೈಸೂರಿನ ಅಶೋಕಾ ರಸ್ತೆಗೆ ಹೋಗುವುದೇ ಅಲ್ಲಿನ ಅಂಗಡಿಗಳಲ್ಲಿ ನೇತು ಹಾಕಿರುವ ವಿಧವಿಧವಾದ ಸ್ಟೀಲ್ ಪಾತ್ರೆಗಳನ್ನು ನೋಡಲು. ಮುಸ್ಲೀಮರ ಪಾತ್ರೆಗಳ ಡಿಸೈನ್‌ನಿಂದ ಬಟ್ಟೆಗಳ ಕಸೂತಿಯವರೆಗೂ ಎಲ್ಲವೂ ವಿಭಿನ್ನ. ಅದರಲ್ಲೂ ರಂಜಾನ್ ಮಾರ್ಕೆಟ್‌ನಲ್ಲಿ ಮಾರಾಟವಾಗುವ ಸಾಮಾನುಗಳ ಖದರ್ರೇ ಸೂಪರು ಸಖತ್ತು!

ಈಗ ನಡೆಯುತ್ತಿರುವ ರಂಜಾನ್ ಮಾಸದಲ್ಲಿ ನೆನಪಾಗುತ್ತಿರುವುದು ಆಗ ನೋಡಿದ್ದ 200 ವರ್ಷ ಹಳೆಯ ಮಾರುಕಟ್ಟೆ. ಕಲ್ಲಿನ ಕಟ್ಟಡದ ಒಳಗೆಲ್ಲಾ ಓಣಿಓಣಿಗಳು ಅಲ್ಲಿ ಅಂಗಡಿಗಳು ಮತ್ತಲ್ಲಿ ಸಿಗದ ವಸ್ತುಗಳಿಲ್ಲ. ಊಟ, ಆಟ, ಮಾಟ, ನೋಟ ಎಲ್ಲಕ್ಕೂ ಅಲ್ಲಿ ಸದಾಕಾಲವೂ ಈದ್. ಪರ್ಷಿಯಾದಿಂದ ಬರುವ ಬಟ್ಟೆ, ಇರಾನ್‌ನಿಂದ ಇಳಿದು ರುಚಿಸುವ ರೊಟ್ಟಿ ಮತ್ತು ಮಾಂಸ, ಆಫ್ಘಾನಿಸ್ಥಾನದಿಂದ ಏರಿ ಬರುವ ಒಣಹೂವು, ಹಣ್ಣು ಮತ್ತು ಬೀಜಗಳು, ಕೈರೋದಿಂದ ಹರಿದು ನಿಲ್ಲುವ ಬದುಕಿಗೆ ಬೇಕಾಗುವ, ಅಂದಕೊಡುವ, ಐಷಾರಾಮಿ, ಆರಾಮದಾಯಿತ್ವ ಸಾಮಗ್ರಿಗಳು ಎಲ್ಲವೂ ಈ ಮಾರುಕಟ್ಟೆಯ ಬಸಿರಿನಲ್ಲಿ.

ಭಾರತೀಯರಿಗೆ ಬುರ್ಖ, ಹಿಜಾಬ್ ಎಂದರೆ ಕಪ್ಪು ಬಣ್ಣದ ಮೈಭರ್ತಿ ಆವರಿಸುವ ಮನುಷ್ಯರನ್ನು ಗುಡಾಣದಂತೆ ಆಗಿಸುವ ಮುಸ್ಲೀಮ್ ಮಹಿಳೆಯರ ಬಟ್ಟೆ ಮಾತ್ರ. ಅದನ್ನೂ ಮೀರಿದರೆ ಕೋರ್ಟ್ ಮೆಟ್ಟಿಲು ಹತ್ತಿದ ವಿವಾದ ಅಷ್ಟೇ. ಆದರೆ ಈ ಮಾರ್ಕೇಟಿನಲ್ಲಿ 32 ವಿಧದ ಬುರ್ಕಾ ಡಿಸೈನ್‍ಗಳು, ಮನಸ್ಸು ಬಯಸುವ ಬಣ್ಣದಲ್ಲಿ ತಯಾರಾಗುತ್ತದೆ ಅಲ್ಲೇ, ಗ್ರಾಹಕ ನಿಂತಲ್ಲೇ. ದರ್ಜಿಗಳ ಕೈಯಲ್ಲಿ ಸೂಜಿ ಬಿಡುವಿಲ್ಲದೆ ಮೇಲುಕೆಳಗಾಗುತ್ತಿದ್ದರೆ, ಇನ್ನೊಂದಷ್ಟು ದೂರದಲ್ಲಿಯೇ ಅಕ್ಕಸಾಲಿ ಚಿನ್ನವನ್ನು ಕುಟ್ಟಿಕುಟ್ಟಿ ಅಡಿಗಳ ಗಾತ್ರದಲ್ಲಿ ಆಭರಣ ಮಾಡುತ್ತಿರುತ್ತಾನೆ. ಅದರ ಎಡಭಾಗದ ಅಂಗಡಿಯಲ್ಲಿ ಹೂವುಗಳನ್ನು ಹಿಂಡಿ ಪಾನೀಯ ತಯಾರಿಸುವವ ‘ಸಲಾಮ್ ವಾಲೇಕುಮ್’ ಎನ್ನುತ್ತಾನೆ ಎದುರು ಬದಿಯಲ್ಲಿ ಎಲ್ಲರ ಕಾಲುಗಳ ಮನಸ್ಸಿಗೆ ಬೇಕಾದಂತಹ ಚಪ್ಪಲಿಯನ್ನು ಒಂಟೆ ಚರ್ಮದಲ್ಲಿ ಮಾಡಿಕೊಡುವ ಚಮ್ಮಾರನಿಗೆ. ಅಬ್ಬಬ್ಬ ಏನಿಲ್ಲಾ ಏನಿದೆ ಎನ್ನುವ ಲೆಕ್ಕವನ್ನು ಉಳಿದು ಮತ್ತೆಲ್ಲವನ್ನೂ ಒಟ್ಟಿಗೆ ಸಾಲಿನಲ್ಲಿ ನೀಡುತ್ತದೆ ‘ಸೋಕ್ ವಾಕಿಫ್’ ಮಾರುಕಟ್ಟೆ ಕತಾರ್ ದೇಶದ ರಾಜಧಾನಿ ದೋಹಾದಲ್ಲಿ.

‘ವಾದಿ ಮುಷರಿಬ್’ ಎನ್ನುವ ಹೆಸರಿನಲ್ಲಿ ಹರಿಯುವ ನೀರಿನ ದಂಡೆಯ ಮೇಲೆ ಸರಿಸುಮಾರು 200 ವರ್ಷಗಳ ಹಿಂದೆ ಸ್ಥಾಪಿತಗೊಂಡ ಈ ಮಾರುಕಟ್ಟೆ ಮುತ್ತುಗಳ, ಒಂಟೆ, ಕುರಿಗಳ ವ್ಯಾಪಾರಕ್ಕೆ ನೆಚ್ಚಿನ ತಾಣವಾಗಿತ್ತು. ನಂತರದ ದಿನಗಳಲ್ಲಿ ಒಂದೊಂದೇ ಹೆಜ್ಜೆ ಊರುತ್ತಾ ಬ್ರಹ್ಮಾಂಡದಲ್ಲಿ ಇರುವ ಎಲ್ಲಾ ಸಾಮಾನುಗಳೂ ಇಲ್ಲಿ ಅಂಗಡಿ ಮಾಡಿಕೊಂಡವು. 2003ರಲ್ಲಿ ಬೆಂಕಿ ಅಪಘಾತ ಆದನಂತರ ಈಗ ಇದೇ ಕಟ್ಟಡಕ್ಕೆ ಹೊಂದಿಕೊಂಡಂತೆ ಆಧುನಿಕ ಮಾರುಕಟ್ಟೆ ನಿರ್ಮಾಣವಾಗಿದೆ.

ಇಲ್ಲಿದೆ ಪ್ರಪಂಚದ ಅತ್ಯಂತ ದುಬಾರಿ ಹೊಟೆಲ್‌ಗಳಲ್ಲಿ ಒಂದು ಎನಿಸಿಕೊಂಡಿರುವ ‘ಪರೀಝಾ’. ಒಳಹೊಕ್ಕೆನಾದರೂ ಸಂಪೂರ್ಣ ಮಾಂಸಾಹಾರವೇ ಇದ್ದುದ್ದರಿಂದ ನಾನು ಏನೂ ತಿನ್ನಲಿಲ್ಲ. ಅಲ್ಲಿನ ರೇಟ್ ನನಗೆ ಅರ್ಥವಾಗಲಿಲ್ಲ. ಸೌಂದರ್ಯ ಆಸ್ವಾದಿಸಿ ಹೊರಬಂದೆ.

ಹಳೆ ಮಾರುಕಟ್ಟೆಯ ಪ್ರವೇಶ ಪ್ರಾಂಗಣದಲ್ಲಿ ಪ್ರವಾಸಿಗರನ್ನು ಆಕರ್ಷಿಸಲು ವರ್ಷಕ್ಕೊಮ್ಮೆ ನಡೆಯುತ್ತೆ ಮೇಳ. ಉದ್ಯೋಗ ಬಯಸುವ ಯುವಕರಿಂದ ಆರಂಭವಾಗಿ, ಹರಕೆ ಹೊತ್ತಂತೆ ಚಾಚಿಕೊಳ್ಳುವ ನಾಲಿಗೆ ರುಚಿ ಮೊಗ್ಗುಗಳ ತಣಿಯುವಿಕೆಯವರೆಗೂ, ಎಲ್ಲಾ ಕ್ಷೇತ್ರದ ಕಲಾವಿದರ ಹಪಹಪಿಕೆ ಪ್ರದರ್ಶನದಿಂದ ಶುರುವಿಟ್ಟು, ಕೊಳ್ಳಾಟಾಸಕ್ತರ ಮನ ತಣಿದೂ ಮಿಗುವಷ್ಟು ಎಲ್ಲವೂ ಲಭ್ಯವಿರುತ್ತದೆ ಆ ಮೇಳದಲ್ಲಿ. ಅರಬ್ ಕವಿತೆಗಳ ವಾಚನ ಕವಿಗಳಿಂದ, ಕೌಶಲ್ಯ ತರಬೇತಿ, ಅರಬ್ ಭಾಷಾ ಕಲಿಕೆ, ವಿವಿಧ ವಿಷಯಗಳ ಪುಸ್ತಕ ಮಾರಾಟ ಎಲ್ಲವೂ ನಡೆಯುತ್ತದೆ ಆಗ. ಅಲ್ಲೇ ಇದೆ 1000 ಜನ ವೀಕ್ಷಕರಿಗೆ ಒಟ್ಟಿಗೆ ನಾಟಕ, ಸಿನೆಮಾ ತೋರುವ ‘ಅಲ್-ರಯ್ಯನ್’ ಸಭಾಂಗಣ. ರಾತ್ರಿಯ ಹೊತ್ತು ಪೂರ್ತಿ ಮಾರುಕಟ್ಟೆಗಾಗುವ ದೀಪಾಲಂಕಾರವನ್ನು ಪ್ರವಾಸಿಗ ತಪ್ಪದೆ ನೋಡಲೇಬೇಕು.

ಒಂದಿಡೀ ದಿನ ಸಮಯ ಬೇಕು ಈ ಮಾರುಕಟ್ಟೆಯನ್ನು ಕಣ್ತುಂಬಿಕೊಳ್ಳಲು. ಶಾಪ್ಪಿಂಗ್ ವಿಷಯಕ್ಕೆ ಬಂದಾಗ ನಾನು ಅತೀ ಜಿಪುಣಿ. ಮಾರುಕಟ್ಟೆ ತೆರೆಯುವ ಸಮಯಕ್ಕೆ ಮೊದಲೇ ಬಾಗಿಲ ಬಳಿ ಇದ್ದು, ಸೂರ್ಯ ಮುಳುಗಿದ ನಂತರ ಹೊರ ಬಂದೆ. ಎಲ್ಲಾ ಅಂಗಡಿಯಲ್ಲೂ ನಿಂತು, ಕೂತು, ಮಾತಿಗಿಳಿದು, ಚೌಕಾಶಿಗೇರಿದರೂ ಕೊಂಡುಕೊಂಡಿದ್ದು ಮಾತ್ರ ಒಣಗಿಸಿದ ಅಫ್ಘಾನಿ ಗುಲಾಬಿ ಮೊಗ್ಗುಗಳು. ಫ್ರಿಡ್ಜ್‌ನಲ್ಲಿ ಎರಡು ವರ್ಷಗಳಾದರೂ ಇಟ್ಟುಕೊಳ್ಳಬಹುದು ಎಂದ ಅಂಗಡಿಯವನು. ಬೇಸಿಗೆಯಲ್ಲಿ ಸ್ನಾನದ ನೀರಿಗೆ ಹಾಕಿಕೊಳ್ಳಬಹುದು ಎಂದವನವನಾದರೂ ನಾನು ಮಾತ್ರ ಬಿಸಿನೀರಿಗೆ ಹಾಕೊಂಡು ಚಹಾ ಸೇವನೆ ಮಾಡಿ ಮುಗಿಸಿದೆ. ದೇಶ-ವಿದೇಶಗಳ ಪ್ರವಾಸಿ ಮಾರುಕಟ್ಟೆಗಳಲ್ಲಿ ಇರುವಂತೆ ಇಲ್ಲಿ ಷೋರ್-ಶರಾಬಾ ಇಲ್ಲ, ಝಗಮಗ ದೀಪಗಳಿಲ್ಲ. ವ್ಯಾಪಾರಿಗಳು ತಲೆಹರಟೆ ಮಾಡುವುದಿಲ್ಲ. ಎಷ್ಟು ಬೇಕೋ ಅಷ್ಟೇ ಮಾತು ಅವರುಗಳದ್ದು, ಆದರೆ ಒರಟರಲ್ಲ. ಸಾಮಾನುಗಳ ಬೆಲೆ ಬಹಳವೇ ಕಡಿಮೆ ಎನ್ನಿಸಿದರೂ ಚೌಕಾಶಿಗೆ ಬಗ್ಗುತ್ತಾರೆ ಹೆಚ್ಚು ರಗಳೆ ಇಲ್ಲದೆ. ನಿಜವೆಂದರೆ ಅವರ ಬಳಿ ಚೌಕಾಶಿ ಮಾಡಬೇಕು ಎನ್ನಿಸುವುದೇ ಇಲ್ಲ ಇಲ್ಲಿ. ಒಂದು ರೀತಿಯ ನಂಬಿಕೆ ಹುಟ್ಟಿಸುತ್ತದೆ ಇಲ್ಲಿನ ದರ ಪಟ್ಟಿ.

ದೋಹಾದ ಈಗಿನ ರಸ್ತೆಗಳು ಅಗಲವಾಗಿ ಅತ್ಯಂತ ಆಧುನಿಕ ನೋಟವನ್ನು ನೀಡುತ್ತವೆ. ಕತಾರ್ ಸಮೂಹದಲ್ಲಿ ಆರ್ಥಿಕ ಮತ್ತು ರಾಜಕೀಯ ಕೇಂದ್ರವಾಗಿ ಗುರುತಿಸಿಕೊಂಡಿರುವ ಊರು ಹುಟ್ಟುಕೊಂಡಿದ್ದು ‘ಅಲ್-ತಾನಿ’ ಮನೆತನಕ್ಕೆ ಸೇರಿದ್ದ ಇರಾನಿ ರಾಜರು ಇಲ್ಲಿಗೆ ವಲಸೆ ಬಂದಾಗ, 1825ರಲ್ಲಿ. ಸಮುದ್ರ ದಡದ ಅಂಚಿಗೆ ಕಟ್ಟಿರುವ ಇಲ್ಲಿನ ರಸ್ತೆ, ಕಟ್ಟಡಗಳನ್ನು ನೋಡುವಾಗ “ದೋಣಿಯೊಳಗೆ ನೀನು ಕರೆಯ ಮೇಲೆ ಈ ಮನದ ಕರೆಯು ನಿನಗೆ ಕೇಳದೇನು…” ಎಂದು ಉಯ್ಯಾಲೆ ಸಿನೆಮಾದ ಕಲ್ಪನಾಳಂತೆ ಹಾಡಾಗುತ್ತದೆ ಮನ. ಏನೇ ಹೇಳಿ, ಈ ಜಗತ್ತು ನೀಡುವ ಎಲ್ಲಾ ಸವಲತ್ತುಗಳನ್ನು ಖುದ್ದು ಅನುಭವಿಸಲು ಕನಿಷ್ಠ ಇನ್ನೂ 98 ಜನುಮಗಳು ಬೇಕೇನೋ! ತುಂಬಾ ಚೆನ್ನಾಗಿರುವ ದೋಹಾ ಊರಿನ ಸಿರಿವಂತ ಅರಬರು ತಮ್ಮ ಸ್ವಂತಕ್ಕೆ ಬಹಳವೇ ವೈಭವದ ಶೈಲಿ ಅನುಸರಿಸುತ್ತಾರೆ ಆದರೆ ಶ್ರೀಮಂತಿಕೆಯ ದರ್ಪವಿಲ್ಲ, ತೋರ್ಪಡಿಕೆ ಇಲ್ಲ.

ಈ ಮಾರ್ಕೇಟಿನಲ್ಲಿ 32 ವಿಧದ ಬುರ್ಕಾ ಡಿಸೈನ್‍ಗಳು, ಮನಸ್ಸು ಬಯಸುವ ಬಣ್ಣದಲ್ಲಿ ತಯಾರಾಗುತ್ತದೆ ಅಲ್ಲೇ, ಗ್ರಾಹಕ ನಿಂತಲ್ಲೇ. ದರ್ಜಿಗಳ ಕೈಯಲ್ಲಿ ಸೂಜಿ ಬಿಡುವಿಲ್ಲದೆ ಮೇಲುಕೆಳಗಾಗುತ್ತಿದ್ದರೆ, ಇನ್ನೊಂದಷ್ಟು ದೂರದಲ್ಲಿಯೇ ಅಕ್ಕಸಾಲಿ ಚಿನ್ನವನ್ನು ಕುಟ್ಟಿಕುಟ್ಟಿ ಅಡಿಗಳ ಗಾತ್ರದಲ್ಲಿ ಆಭರಣ ಮಾಡುತ್ತಿರುತ್ತಾನೆ.

ಈ ಊರನ್ನು ಜಗತ್ತಿನ ಅತ್ಯುತ್ತಮ ವೈದ್ಯಕೀಯ, ಕ್ರೀಡೆ ಮತ್ತು ವಿದ್ಯಾಭ್ಯಾಸದ ಕೇಂದ್ರವನ್ನಾಗಿ ಮಾಡಬೇಕು ಎನ್ನುವ ಗುರಿಯನ್ನು ಹೊಂದಿದೆ ಆಡಳಿತ. 2022ರ ಫಿಫ ವರ್ಲ್ಡ್ ಕಪ್ ಅನ್ನು ಪ್ರಾಯೋಜಿಸುತ್ತಿರುವ ದೋಹಾ, ಏಶಿಯನ್ ಗೇಮ್ಸ್‌ನಂತಹ ಹಲವಾರು ಪ್ರತಿಷ್ಠಿತ ಕ್ರೀಡಾ ಕೂಟಗಳಿಗೆ ಈಗಾಗಲೇ ಆತಿಥ್ಯ ನೀಡಿದೆ. ವೈದ್ಯಕೀಯ ಸಮ್ಮೇಳನಗಳನ್ನೂ ನಡೆಸಿದೆ. ಇಲ್ಲಿದೆ ಖಲೀಫ ಇಂಟರ್ನ್ಯಾಷನಲ್ ಸ್ಟೇಡಿಯಮ್, ಕತಾರ್ ಕಲ್ಚರಲ್ ವಿಲೇಜ್, ಪ್ಲಾನೆಟೆರಿಯಮ್, ಅಂಚೆಚೀಟಿಗಳ ಸಂಗ್ರಹಾಲಯ ಎಲ್ಲವೂ. ದೋಹಾ ಚಲನಚಿತ್ರ ಸಂಸ್ಥೆಗೆ ಇನ್ನೂ ಬಾಲ್ಯಾವಸ್ಥೆ. ದೋಹಾ ನ್ಯೂಸ್ ಏಜೆನ್ಸಿಯ ಜೊತೆಗೆ, ನಂಬಿಕೆಗೆ ಅರ್ಹವೆಂದು ಹೆಸರು ಮಾಡಿರುವ ‘ಅಲ್-ಝಜೀರಾ’ ನ್ಯೂಸ್ ಚ್ಯಾನಲ್‌ನ ಮುಖ್ಯ ಕಚೇರಿ ಕೂಡ ಇರುವುದು ದೋಹಾದಲ್ಲಿ.

‘ಸೌಕ್-ವಾಕಿಫ್’ ಮಾರ್ಕೇಟ್ ಸುತ್ತಿಸುತ್ತಿ ಸುಸ್ತಾಗುವ ಮೊದಲೇ ಒಂದೆರಡು ನಿಮಿಷ ಕುಳಿತುಕೊಳ್ಳೋಣ ಎಂದುಕೊಂಡು ಅಲ್ಲಿಯೇ ಇದ್ದ ಒಂದು ಚಿನ್ನಾಭರಣ ಮಳಿಗೆ ಹೊಕ್ಕೆ. ಇಡೀ ಮಾರುಕಟ್ಟೆಯಲ್ಲಿ ಕ್ಯಾಷಿಯರ್, ಸೇಲ್ಸ್, ಸಹಾಯ, ಪರಿಚಾರಿಕೆ ಯಾವುದರಲ್ಲೂ ಹೆಂಗಸರು ಕೆಲಸ ಮಾಡುತ್ತಿರುವುದು ಕಣ್ಣಿಗೆ ಬೀಳಲಿಲ್ಲ ಯಾಕೆಂದರೆ ಅಲ್ಲಿ ಹೆಂಗಸರು ಇಲ್ಲವೇ ಇಲ್ಲ. ಆದರೆ ಈ ಚಿನ್ನದ ಅಂಗಡಿಯಲ್ಲಿ ಶ್ವೇತ ಸುಂದರಿ ಒಬ್ಬಾಕೆ ಪಿಂಕ್ ಬಣ್ಣದ ನಿಲುವಂಗಿ ತೊಟ್ಟು ಒಮ್ಮೆಗೆ ಕಾಣದಂತಹ ಜಾಗದಲ್ಲಿ ಒಳಭಾಗಕ್ಕೆ ಮುಖ ಮಾಡಿ ಕುಳಿತಿದ್ದಳು. ಇಬ್ಬರ ಭಾಷೆಯೂ ಪರಸ್ಪರ ಅರ್ಥವಾಗದ್ದು. ನಗುವಿತ್ತಲ್ಲ ಸಂವಹನ ಅಸ್ತ್ರವಾಗಿ. ಅಲ್ಲೇ ಇದ್ದ ಒಂದು ಗಜಗಾತ್ರದ ನೆಕ್ಲೇಸ್ ಅನ್ನು ತೋರುತ್ತಾ ಕನ್ನಡದಲ್ಲಿಯೇ “ಅಲ್ಲಮ್ಮ ತಾಯಿ, ಇದನ್ನು ಕೊರಳ ಹಾರ ಅಂತೀರಲ್ಲ ಆದರೆ ಒಬ್ಬರದ್ದಲ್ಲ ನಾಲ್ಕು ಜನರ ಕೊರಳಿಗೆ ಒಟ್ಟಿಗೆ ಹಾಕಬೇಕಾದ ಹಾರ ಎಂದು ಚೀಟಿ ಬರೆದು ಹಾಕಬೇಕಿತ್ತು” ಎಂದೆ. ಇಬ್ಬರೂ ಜೋರಾಗಿ ನಕ್ಕೆವು ಎನ್ನುವುದಷ್ಟೇ. ಕೆಲವು ಸಮಯದ ನಂತರ ಓರ್ವ ಗಂಡಸು ಬಂದರು. ಆಕೆ ಅಲ್ಲಿಂದ ಹೊರಟಳು, ನಾ ಕೂಡ. ಈಚೆ ಬರುತ್ತಿರುವಾಗ ಟೇಬಲ್ ಮೇಲೆ ಒಂದು ಪ್ಯಾಂಪ್ಲೆಟ್ ಕಂಡಿತು. ಅದರ ಮೇಲೆ “Qajar women – Images of Women 19th Century Iran” ಅಂತಿತ್ತು. ಸರಿ ಮತ್ತೆ ಮೂಲ ಹುಡುಕದೆ ಬಿಡುವೆನೆ?! ಹೊರಟೆ ಮ್ಯೂಸಿಯಮ್ ಆಫ್ ಇಸ್ಲಾಮಿಕ್ ಆರ್ಟ್ ಕಡೆಗೆ.

ಈಜಿಪ್ಟ್‌ನ ಖೈರೋದಲ್ಲಿ ಇರುವ 9ನೆಯ ಶತಮಾನದ ಮಸೀದಿ ‘ಅಹಮದ್-ಇಬ್ನ್-ತುಲುನ್’ ಇದರ ಕಟ್ಟಡ ಕಲೆಯಿಂದ ಪ್ರೇರೇಪಣೆಗೊಂಡ ಕಲಾವಿದ IM Pei ಮ್ಯೂಸಿಯಮ್ ಆಫ್ ಇಸ್ಲಾಮಿಕ್ ಆರ್ಟ್ ಕಟ್ಟಡದ ಡಿಸೈನ್‌ನ ಕರ್ತೃ. ಎರಡು ದಡಗಳ ನಡುವೆ ಇರುವ ಸಮುದ್ರದ ನೀರಿನ ಮೇಲೆ ತೂಗುವಂತೆ 7 ಅಂತಸ್ತಿನ ಕಟ್ಟಡ. ಎರಡು ಅಂತಸ್ತುಗಳಲ್ಲಿ ವಿದ್ಯಾರ್ಥಿಗಳಿಗೆ ಹೆಚ್ಚಿನ ವಿದ್ಯಾಭ್ಯಾಸಕ್ಕಾಗಿ ತರಬೇತಿಗಳನ್ನು ನೀಡಿದರೆ ಉಳಿದ ಐದು ಅಂತಸ್ತುಗಳಲ್ಲಿ ಮೊಹಮದೀಯರ ಸಂಸ್ಕೃತಿ, ವ್ಯಾಪಾರ, ಧರ್ಮ, ಕಲೆ, ಕೌಶಲ್ಯ, ಧಿರಿಸು, ಆಹಾರ, ಸಮುದ್ರ ಪ್ರಾಣಿಗಳು ಇವುಗಳ  ಸಂಗ್ರಹಾಲಯ ಇದೆ.

ಊಹಿಸಿದಂತೇ ನನ್ನನ್ನು ಆಕರ್ಷಿಸಿದ್ದು ಮಾತ್ರ “Qajar women – Images of Women 19th Century Iran” ಎನ್ನುವ ಫಲಕ ಹೊತ್ತು ನಿಂತಿದ್ದ ಕೋಣೆ. ಬಹುತೇಕ ಎಲ್ಲಾ ವಸ್ತು ಸಂಗ್ರಹಾಲಯಗಳಲ್ಲಿ ಇರುವಂತೆ ಇಲ್ಲಿಯೂ ಸಹ ಕಜಾರ್ ಮಹಿಳೆಯರು ಕರಕುಶಲದಲ್ಲಿ, ಅಡುಗೆ ವಿಧಾನದಲ್ಲಿ, ಸೌಂದರ್ಯ ಕಲೆಯಲ್ಲಿ, ಕಾವ್ಯ ಕಟ್ಟುವಿಕೆಯಲ್ಲಿ ಬೆಳೆದು ಬಂದ ಬಗೆಗಳ ಬಗ್ಗೆ ಸಾಕ್ಷಿಸಹಿತ ಪ್ರದರ್ಶನ ಇತ್ತು. 1789-1925 ಈ ಕಾಲದಲ್ಲಿ ಇರಾನ್ ದೇಶವನ್ನು ಆಳಿದ ಕಜಾರ್ ಮನೆತನದ ಹೆಣ್ಣು ಮಕ್ಕಳು ಇಸ್ಲಾಮೀಯರಲ್ಲೇ ಅತ್ಯಂತ ಆಧುನಿಕ ಆಲೋಚನೆ ಇದ್ದವರು ಎಂದು ಹೆಸರಾಗಿದ್ದಾರೆ. ರಾಜಕುಮಾರಿಯರಾದ ಅಶ್ರಫ್-ಅಲ್-ಮುಲಕ್ ಹಾಗೂ ಸತ್ತೇರಹ್-ಫರ್ಮನ್ಫರ್ಮೈಯೆನ್ ಇವರುಗಳು ತಮ್ಮ ಸಮಾಜ ಸೇವೆಗೆ ಹೆಸರಾದವರು.

ಮೊಹತರ್ಮ-ಎಸ್ಕಂದರಿ ಎನ್ನುವ ರಾಜಕುಮಾರಿ ಬಾಲ್ಯದಲ್ಲಿಯೇ ಬೆನ್ನುಮೂಳೆಯ ಖಾಯಿಲೆಯಿಂದ ಶಸ್ತ್ರ ಚಿಕಿತ್ಸೆಗೆ ಒಳಗಾಗಿಯೂ ಮುಸ್ಲೀಮ್ ಮಹಿಳೆಯರ ವಿದ್ಯಾಭ್ಯಾಸಕ್ಕೆ ಹೋರಾಡಿದಳು.  ಬುರ್ಖಾ ವಿರುದ್ಧವೂ ಹೋರಾಟ ಮಾಡಿದವಳು. ಇದರ ಬಗ್ಗೆ ಯಾವುದೇ ಮಚ್ಚುಮರೆ ಇಲ್ಲದೆ ವಿವರಣೆಗಳು ಮ್ಯೂಸಿಯಮ್‌ನಲ್ಲಿ ಇವೆ. ತನ್ನ 29ನೇ ವಯಸ್ಸಿನ ಯೌವ್ವನದಲ್ಲೇ ತೀರಿಕೊಂಡ ರಾಜಕುಮಾರಿ ಅಷ್ಟರಲ್ಲಾಗಲೇ ಮುಸ್ಲೀಮ್ ಮಹಿಳೆಯರಿಗಾಗಿ ವಯಸ್ಕರ ಶಿಕ್ಷಣ ನೀಡಲು ಮತ್ತು ಅವರುಗಳಲ್ಲಿ ಆಧುನಿಕ ಮನೋಭಾವ ಬಿತ್ತುವ ಉದ್ದೇಶದಿಂದಲೇ ‘ಪೇಟ್ರಿಯಾಟಿಕ್ ವಿಮೆನ್’ಸ್ ಅಸೋಸಿಯೇಷನ್’ ಅನ್ನು ಆರಂಭಿಸಿದ್ದಳು. ‘ವಿಮೆನ್’ಸ್ ವಿಸ್ಡಮ್’ ಎನ್ನುವ ಪತ್ರಿಕೆಯನ್ನು ಹೊರತರುತ್ತಿದ್ದಳು. ಇಷ್ಟೆಲ್ಲಾ ಕ್ರಾಂತಿಗಳನ್ನು ಕ್ರಿಯೆಯಾಗಿಸಲು ಆಕೆ ಕಲ್ಲು ತೂರಾಟ ನುಂಗಿದ್ದಳು. ತನ್ನ ಮೇಲೆ ಬೆಂಕಿ ಎರೆಚಾಟವನ್ನೂ ಸಹಿಸಿದ್ದಳು. ಊರೆಲ್ಲಾ ಸುತ್ತಿ ಭಾಷಣ ಮಾಡುತ್ತಾ ಮಹಿಳೆಯರಲ್ಲಿ ಜಾಗೃತಿ ಮೂಡಿಸುತ್ತಿದ್ದ ಸಿದ್ದಾರ್ಥನಂತೆ ಇದ್ದ ರಾಜಕುಮಾರಿ ಹರಿದ ಬಟ್ಟೆಯಲ್ಲಿ ಇರುವ ಬುದ್ಧಳಾಗಿ ಬೆಳೆದಳು. ಅದೆಷ್ಟೋ ಮಹಿಳೆಯರು ಬುರ್ಕಾದಿಂದಾಚೆಗೆ ಜಗತ್ತು ಕಂಡರು, ಅಕ್ಷರ ಕಲಿತರು, ಬೆಳಕು ಕಂಡರು ಬದಲಾದರು, ಬದಲು ಮಾಡಿದರು ಮೊಹತರ್ಮ-ಎಸ್ಕಂದರಿಯಿಂದಾಗಿ. ಆದರೆ ಬದಲಾಗದೆ ಉಳಿದವರು ಮಾತ್ರ ಪುರುಷರು ಅಂದು ಮತ್ತು ಇಂದು. ಈಗ ನಾನು ಆ ರಾಜಕುಮಾರಿಯ ಫೋಟೊ ಪೇಂಟಿಂಗ್ ನೋಡುತ್ತಾ ಹೊರಗಿನ ಸದ್ದಿಗೆ ಮೌನವಾಗಿದ್ದೆ. ಇಂದಿನ ಅರಬ್ ಮಹಿಳೆಯರ ಉನ್ನತಿಯಲ್ಲಿ ಇವಳದ್ದು ದೊಡ್ಡ ಬಿಂಬ. ನಾವೆಲ್ಲಾ ಪ್ರತಿಬಿಂಬ ಮಾತ್ರ ಎಂದು ಸಣ್ಣ ನಿಶ್ವಾಸದಿಂದ ಎಡಕ್ಕೆ ತಿರುಗಿದರೆ ಕಂಡ ಒಂದು ವಿಷಯ ಹಂಚಿಕೊಳ್ಳದಿದ್ದರೆ ನನಗೆ ಈದ್ ಆಗದು.

ಕಜಾರ್ ಮಹಿಳೆಯರಲ್ಲಿ ಸೌಂದರ್ಯ ಪ್ರಜ್ಞೆ ಬೆಳೆದು ಬಂದ ಬಗೆ ಅಲ್ಲಿತ್ತು. ದುಂಡು ಮುಖ, ಡುಮ್ಮುಡುಮ್ಮು ಮೈಯಿ ಮತ್ತು ಎರಡು ಎನ್ನುವ ಬೇಧವಿಲ್ಲದೆ ಒಂದಾಗಿ ಹೋಗಿದ್ದ ಹುಬ್ಬು ಹಾಗು ಮೀಸೆ ಇವುಗಳು ಸುಂದರ ಎನಿಸಿಕೊಳ್ಳಲು ಮಹಿಳೆಗೆ ಇರಬೇಕಾದ ಮೇಲ್ಮೈ ಲಕ್ಷಣಗಳು ಆಗಿದ್ದವು. ಹೌದು, ಸರಿಯಾಗಿಯೇ ಓದಿದ್ದೆ! ಒಂದ್ಹುಬ್ಬು ಮತ್ತು ಮೀಸೆ ಇವು ಮಹಿಳೆಯರಿಗೆ ಇರಲೇ ಬೇಕಿತ್ತು. ಹಾಗಿಲ್ಲದೆ ಇದ್ದವರು ಕಪ್ಪು ಬಣ್ಣದಿಂದ ಎರಡು ಹುಬ್ಬುಗಳನ್ನು ಒಂದು ಮಾಡಿಕೊಂಡು ಮೀಸೆ ಬರೆದುಕೊಳ್ಳುತ್ತಿದ್ದರಂತೆ. ಛೇ, ಇದೇ ಮಾಪನ ಯಾಕೆ ಮುಂದುವರೆಯಲಿಲ್ಲ? ಹಾಗೇ ಇದ್ದಿದ್ದರೆ ವಾರವಾರವೂ ಹೋಗಿ ಹುಬ್ಬು ಕತ್ತರಿಸಿ ಮಾಟ ಮಾಡಿಸಿಕೊಳ್ಳುವ ಒಂದು ಕೆಲಸವಾದರೂ ತಪ್ಪಿ ಆ ಸಮಯವನ್ನೂ ಸೇರಿಸಿಕೊಂಡು ಮತ್ತಷ್ಟು ಊರುಗಳನ್ನು ನೋಡಬಹುದಿತ್ತು ಎಂದು ಕೊರಗಿತು ಒಳಗು. ಹಿಂದೆಯೇ, ಕಜಾರ್ ಹೆಂಗಸರು ಪೆಡಿಕ್ಯೂರ್ ಮಾಡಿಸಿಕೊಳ್ಳುತ್ತಿದ್ದರೇನು ಎನ್ನುವ ಮಾಹಿತಿ ಹುಡುಕಿ ಹೋದೆ. ಅದರ ಬಗ್ಗೆ ಏನೂ ಸಿಗಲಿಲ್ಲ. “ಪರವಾಗಿಲ್ಲ ಬಿಡೆ, ಹೇಗೂ ಕಾಲುಚೀಲ ಇದೆಯಲ್ಲ” ಎಂದುಕೊಂಡು ಅಲ್ಲಿಂದ ಹೊರಬಿದ್ದೆ. ಆದರೆ ಪೌರುಷದ ಸಂಕೇತ ಎಂದು ಬಿಂಬಿತವಾಗಿರುವ ಮೀಸೆ ನನಗಿಲ್ಲವಲ್ಲ ಏನು ಮಾಡುವುದು ಎನ್ನುವ ಯೋಚನೆಯ ರೋಝಾ (ರಂಜಾನ್ ತಿಂಗಳ ಉಪವಾಸ) ಇಡುತ್ತೇನೆ, ಮುಂದಿನ ಪ್ರವಾಸಗಳಲ್ಲಿ ಅದಕ್ಕೆ ಉತ್ತರಗಳ ಈದ್ ಆಗಲಿ ಎಂದು ಆಶಿಸುತ್ತೇನೆ.