ಸುಜಿಗೆ ಒಳ್ಳೆಯ ಬದುಕಿತ್ತು. ಮಧುವಿನ ಪತ್ನಿಗೂ. ಆದರೆ, ಅವಳಲ್ಲಿನ ಖಾಲಿತನವನ್ನು ತುಂಬಲು ಆಕೆ ಹೊರಟಳು. ಸುಜಿ ಆ ಅವಕಾಶವನ್ನು ಬಳಸಿ ಆಕೆಯ ನಂಬಿಕೆ, ಆತ್ಮಾಭಿಮಾನದ ಜೊತೆಗೆ ಆಟವಾಡಿಬಿಟ್ಟ. ಇವೆಲ್ಲವೂ ನಡೆದಾಗ ಮಧು ಮೂಕ ಪ್ರೇಕ್ಷನಾಗಿದ್ದ. ಆದರೆ ಪತ್ನಿಯ ಮೇಲಿನ ಆತನ ಅಸ್ಖಲಿತ ಪ್ರೇಮ, ಗೌರವಕ್ಕೆ ಧಕ್ಕೆಯಾದಾಗ ಆತ ಹಿಂಸೆಯ ದಾರಿಯ ಹಿಡಿದ. ಸರಿ ತಪ್ಪುಗಳಾಚೆ ಇಂತಹ ಅದೆಷ್ಟೋ ಕ್ರಿಮಿಗಳಿಗೆ ‘ಸಾವು ಮಲಗಿರುತ್ತೆ ನಿನ್ನ ಪಕ್ಕದಲ್ಲೇ, ಗೊತ್ತಾಗೋದು ಎದ್ದಾಗಲೇ’ ಎಂದು ಪಾಠವಾಯಿತು ಆತನ ನಡೆ.
ರಾಮ್ ಪ್ರಕಾಶ್ ರೈ ಕೆ. ಬರೆಯುವ “ಸಿನಿ ಪನೋರಮಾ” ಸರಣಿಯಲ್ಲಿ ಮಲಯಾಳಂನ ‘ಇಲಾ ವಿಳಾ ಪೂಂಚಿರಾ’ ಸಿನಿಮಾದ ವಿಶ್ಲೇಷಣೆ
ಕರ್ಮದ ಕಲ್ಲನು ಎಡವಿದ ಮನುಜನ
ಬೆರಳಿನ ಗಾಯವು ಮಾಯದು
ಕತ್ತಲನು ಮಣಿಸೋಕೆ ಹಚ್ಚಿ ಇಟ್ಟ ದೀಪ
ಊರೂರನೇ ಸುಡುತಿಹ ಜ್ವಾಲೆಯಾಯಿತೇನೋ
-ತ್ರಿಲೋಕ ತ್ರಿವಿಕ್ರಮ
ಕರ್ಮ. ಇದು ಬದುಕಿನ ಉದ್ದಗಲಕ್ಕೂ ಚಾಲ್ತಿಯಲ್ಲಿರುವ ಪದ. ಆಧ್ಯಾತ್ಮವೋ ಅಥವಾ ಲೌಕಿಕವೋ ಅದು ಉತ್ತರದ ವ್ಯಾಪ್ತಿಯ ಹೊರತಾದದ್ದು. ಒಬ್ಬ ವ್ಯಕ್ತಿ ಇನ್ನೊಬ್ಬನಿಂದ ನೋವನ್ನು ಅನುಭವಿಸಿದಾಗ ಅಥವಾ ತನ್ನ ಬದುಕಿಗೆ ಮೆತ್ತಿದ ಕಾರ್ಮೋಡ ಹಳೆಯ ತಪ್ಪಿನ ಬಾಬ್ತು ಎಂದು ಭಾವಿಸುವಾಗ, ಈ ಕರ್ಮಫಲದ ವ್ಯಾಖ್ಯಾನ ಮುನ್ನೆಲೆಗೆ ಬರುತ್ತದೆ. ‘ಮಾಡಿದ್ದುಣ್ಣೋ ಮಹಾರಾಯ’ ಎಂಬ ಗಾದೆ ಮಾತು ಇದಕ್ಕೆ ಪೂರಕ. ಇಲ್ಲಿ ನಾವು ಮಾಡುವ ತಪ್ಪುಗಳೆಂದರೆ ಸಾಕಿದ ಗಿಳಿ, ಕರ್ಮಫಲವೆಂದರೆ ಗಿಳಿಯು ಹದ್ದಾಗಿ ಕುಕ್ಕುವುದು. ಈ ಸಂಕೀರ್ಣತೆಗಳ ಹೊರತಾಗಿ, ಮನುಷ್ಯ ಮೃಗವಾದಾಗ, ಪರರ ಭಾವನೆಗಳನ್ನು ಬಳಸಿ ಬಿಸುಟುವ, ನಂಬಿಕೆಗಳ ಗೋಪುರವನ್ನು ಕ್ರೋಢೀಕರಿಸಿದ ಹೃದಯವನ್ನು ಅಮಾನುಷವಾಗಿ ಹರಿಯುವ ಪ್ರವೃತ್ತಿಯಲ್ಲಿ ತೊಡಗಿದಾಗ, ಜನಿಸುವ ಕಣ್ಣ ಹನಿಯೇ ಕಚ್ಚುವ ವಿಷ ಸರ್ಪವಾಗುತ್ತದೆ. ದಹಿಸುವ ಜ್ವಾಲೆಯಾಗುತ್ತದೆ. ಊರು ಮುಳುಗಿಸುವ ಭೀಕರ ಮಳೆಯಾಗುತ್ತದೆ. ಭುವಿಯ ಪಯಣ ಸಾಗುತ್ತಿರುವುದು ನಂಬಿಕೆಗಳ ತಳಹದಿಯ ಮೇಲೆ. ಸಾಗರವು ಸಲಿಲವನ್ನು, ಶಶಿಯು ನೇಸರನನ್ನು, ಪಯಣಿಗರು ಚಾಲಕನನ್ನು, ಭಕ್ತರು ದೇವರನ್ನು ಸಕಾರಣದೊಂದಿಗೆ ನಂಬುವಂತೆ, ಮನುಷ್ಯ ಮನುಷ್ಯನ ಮೇಲೆ ವಿಶ್ವಾಸದ ಆತ್ಮವನ್ನು ಇಟ್ಟಿರುತ್ತಾನೆ. ಆತ್ಮವನ್ನೇ ಉಸಿರುಗಟ್ಟಿಸಿ ಕೊಂದಾಗ, ಬದುಕು ತಿರುಗಿ ಬೀಳುತ್ತದೆ. ಇಂತಹ ಒಂದು ಅಮಾನವೀಯ ನಡವಳಿಕೆಯ ಪರಾಕಾಷ್ಟೆಯ ನೆಲೆಯಲ್ಲಿ, ತನ್ನ ಕ್ಷಣಿಕ ಸುಖದ ಕಾರಣಕ್ಕಾಗಿ, ಪುಟ್ಟ ಕುಟುಂಬವೊಂದರ ಅವನತಿಗೆ ಕಾರಣವಾಗುವ ಮನುಷ್ಯನೊಬ್ಬ ಕರ್ಮದ ಪ್ರಪಾತಕ್ಕೆ ಬೀಳುವ ಮನಕಲಕುವ, ಭಾವಪೂರ್ಣ ಕಥಾನಕವೇ ಶಾಹಿ ಕಬೀರ್ ನಿರ್ದೇಶನದ ‘ಇಲಾ ವಿಳಾ ಪೂಂಚಿರ’.
ಅದು ಇಲಾ ವಿಳಾ ಪೂಂಚಿರ. ಕೇರಳದ ಕೊಟ್ಟಾಯಂ ಜಿಲ್ಲೆಯಲ್ಲಿರುವ ರಮಣೀಯ ಗಿರಿ ಶಿಖರ. ಸಮುದ್ರದಿಂದ 3200ft ಎತ್ತರ. ಹೆಸರಿನ ಭಾವಾರ್ಥ ‘ಎಲೆಗಳು ಉದುರದ ಹೂವಿನ ಕೆರೆ’ ಎಂದು. ಮಹಾಭಾರತ ಕಾಲದ ಐತಿಹ್ಯವಿರುವ ಸ್ಥಳವದು. ಪಾಂಡವರು ವನವಾಸದಲ್ಲಿದ್ದಾಗ, ಈ ಪ್ರದೇಶದಲ್ಲಿ ಸಂಚರಿಸುತ್ತಿದ್ದಾಗ, ಪಾಂಚಾಲಿಯು ಜಳಕ ಮಾಡುತ್ತಿದ್ದದ್ದು ಇಲ್ಲಿನ ಕೆರೆಯಲ್ಲಿ ಎಂಬ ಕಥೆಯಿದೆ. ಪ್ರಕೃತಿಯು ತನ್ನ ಅಪರಿಮಿತ ಸೊಬಗಿನ ಖಜಾನೆಯನ್ನು ಸಂರಕ್ಷಿಸಿರುವ ಪ್ರದೇಶವದು. ಸದಾ ಕಾಲ ನರ್ತಿಸುವ ತಂಗಾಳಿ, ಹಸಿರಿನ ಕಲರವ, ಕಣ್ಣಿನ ದೂರಕ್ಕೆ ನಿಲುಕದ ನಗರದ ಇಟ್ಟಿಗೆಗಳ ರಾಶಿ, ಹೀರೋಯಿನ್ನಂತಿರುವ ಶಿಖರವನ್ನು ಮತ್ತಷ್ಟು ಸಿಂಗರಿಸುವ ವೇಗದೂತ ಮಳೆ ಹೀಗೆ ಪರಿಸರದ ಚೆಲುವಿನ ಮುನ್ನುಡಿಯದು.
ಅಲ್ಲೊಂದು ಪೋಲಿಸು ಔಟ್ ಪೋಸ್ಟ್. ಅಲ್ಲಿ ಹಳೆಯ ಕಬ್ಬಿಣದ ರೈಲು ಡಬ್ಬಿಯನ್ನು ಸ್ಟೇಷನ್ ಮತ್ತು ಮನೆಯಾಗಿ ಪರಿವರ್ತಿಸಲಾಗಿದೆ. ಸುತ್ತ ವ್ಯಾಯಾಮ ಮಾಡುತ್ತಿರುವ ಗಾಳಿ ಯಂತ್ರ, ಸಂಪರ್ಕ ಕಲ್ಪಿಸುವ ಆಗಸಮುಖಿ ಗೋಪುರಗಳಿವೆ. ಹತ್ತಿರದಲ್ಲಿ ಕಟ್ಟಿದ ಗೂಡಿನಲ್ಲಿ ಶ್ವಾನಗಳು ವಾಸಿಸುತ್ತಿವೆ. ಇಲ್ಲಿ ಇಬ್ಬರು ಪೋಲಿಸರು. ಅವನು ಮಧು. ಇನ್ನೊಬ್ಬ ವೆಂಕಾಯಂ. ಮಧು ಪಟ್ಟಣಕ್ಕೆ ಹೋಗಿ ಜೀಪಿನಲ್ಲಿ ಸಾಮಗ್ರಿಗಳೆಲ್ಲವನ್ನೂ ತಂದಿದ್ದಾನೆ. ವೆಂಕಾಯಂ ಮರುದಿನ ಮುಗಿಯುವ ತನ್ನ ಕೆಲಸದ ಪಾಳಿಯ ಯೋಚನೆಯಲ್ಲಿ ಕೆಲಸ ಮಾಡುತ್ತಿದ್ದಾನೆ. ಇಬ್ಬರಿಗೂ ಒಂದು ಥರದ ನಿರ್ವಾತದ ಭಾವ ಅಲ್ಲಿನ ಕೆಲಸವೆಂದರೆ. ಅಲ್ಲಿರುವುದು ಕೇವಲ ಇಬ್ಬರು ವ್ಯಕ್ತಿಗಳು ಮತ್ತು ಪ್ರಕೃತಿ ಮಾತ್ರ. ಉಳಿದೆಲ್ಲವೂ ಮೌನ ಧ್ಯಾನಿ ವಸ್ತುಗಳು. ಹೀಗೆ ಒಂದು ದಿನ ತುಕ್ಕು ಹಿಡಿಸಿದ ಅವರ ಕಣ್ಣುಗಳಿಗೆ ಹೊಸ ಕುಟುಂಬವೊಂದು ಕಾಣುತ್ತದೆ. ಅಮ್ಮ ಮತ್ತು ಮಕ್ಕಳು ತಮ್ಮ ತಂದೆ ಹಿಂದೊಂದು ಕಾಲದಲ್ಲಿ ಇಲ್ಲಿ ಕೆಲಸ ಮಾಡಿದ್ದರು, ಆ ನೆನಪಿನ ನೆಪದಲ್ಲಿ ಇಲ್ಲಿಗೆ ಬಂದೆವು ಎಂದು ಬಂದಿರುತ್ತಾರೆ. ಕೆಲ ಸಮಯದ ನಂತರ ಗುಡುಗಿನ ಅಬ್ಬರ ಆರಂಭವಾಗುತ್ತದೆ. ಮಿಂಚಿನ ಆಘಾತವ ತಪ್ಪಿಸಲು ಅವರೆಲ್ಲರನ್ನೂ ತಮ್ಮ ಮನೆಯ ಒಳಗೆ ಸುರಕ್ಷಿತವಾಗಿರಲು ತಿಳಿಸುತ್ತಾನೆ ಮಧು. ಆದರೆ ಮಗನೊಬ್ಬ ಹೊರಗೆ ಉಳಿದು ಗುಡುಗಿಗೆ ಆಹಾರವಾಗುತ್ತಾನೆ. ನೆತ್ತರು ಚೆಲ್ಲಿದ ದೇಹ ಪ್ರಕೃತಿಯ ರೌದ್ರಕ್ಕೆ ಆಹುತಿಯಾಗುತ್ತದೆ.

ಮುಂದೆ ಭೇಟಿಯ ನೆಪದಲ್ಲಿ ಹಿರಿಯ ಅಧಿಕಾರಿ ಆಗಮಿಸುತ್ತಾನೆ. ಆತನ ಪತ್ನಿ ತನ್ನ ಹಳೆಯ ಚಾಲಕನೊಂದಿಗೆ ಓಡಿ ಹೋಗಿರುತ್ತಾಳೆ. ಮಗುವಿನ ಪಾಲನೆಯ ಕುರಿತಾಗಿ ತಲೆ ಕೆಡಿಸಿಕೊಂಡು ದೂರವಾಣಿಯಲ್ಲಿ ಮಾತನಾಡುತ್ತಿರುತ್ತಾನೆ. ಮಧು ಈ ವಿಚಾರಗಳನ್ನು ಗಮನಿಸುತ್ತಾನೆ. ಮುಂದೆ ಕೆಲಸದ ಪಾಳಿ ಬದಲಾಗಿ ಬರುವವನೇ ಸುಜಿ. ಹೆಚ್ಚು ಮಾತು ಮತ್ತು ಅತಿರಂಜಿತ ಸ್ವಭಾವದ ವ್ಯಕ್ತಿ. ಬಂದವನೇ ಸುರಪಾನವ ತೆರೆದು, ಕಾರ್ಡ್ಗಳ ಕರತಲಾಮಲಕವನ್ನು ಆರಂಭಿಸುತ್ತಾನೆ. ಮುಂದೆ ವಾಕಿ ಟಾಕಿಯಲ್ಲಿ ಕೊಟ್ಟಾಯಂ ಜಿಲ್ಲೆಯ ಅನೇಕ ಪ್ರದೇಶಗಳಲ್ಲಿ ಮಾನವ ದೇಹದ ಭಾಗಗಳು ಸಿಕ್ಕಿರುವ ಮಾಹಿತಿ ಬಿತ್ತರವಾಗುತ್ತದೆ. ಅದೂ ಒಂದೊಂದು ಭಾಗಗಳು ಒಂದೊಂದು ಪ್ರದೇಶದಲ್ಲಿ. ಇತ್ತ ಗಾಳಿಯ ಹೊಡೆತಕ್ಕೆ ಪ್ರಜ್ಞೆ ತಪ್ಪಿದ, ಸಿಗ್ನಲ್ ಗೋಪುರದ ಕಾಲಿಗೆ ಶಕ್ತಿ ನೀಡಲು ಮಣ್ಣು ಅಗೆಯುತ್ತಿರುವಾಗ, ದೇಹದ ಭಾಗವೊಂದು ಗೋಚರವಾಗುತ್ತದೆ ಸುಜಿಗೆ. ಗಾಬರಿ ಬೀಳುವ ಆತ, ಇದನ್ನು ತಿಳಿಸಬೇಕೆಂದು ಏಳುವ ಪ್ರಯತ್ನ ಮಾಡಿದಾಗ, ಹಿಂದೆ ಮಧು ರಿವಲ್ವಾರ್ ಹಿಡಿದು, ನಳಿಗೆಯನ್ನು ಅವನತ್ತ ನೆಟ್ಟಿರುತ್ತಾನೆ. ಬೆವೆತು ಹೋಗುವ ಸುಧಿ, ಮಾತು ಹರಿಸದೆ ಮಣ್ಣನ್ನು ಮತ್ತೆ ಸ್ವಸ್ಥಾನಕ್ಕೆ ಮರಳಿಸಿ ವಾಪಾಸಾಗುತ್ತಾನೆ. ಈ ವಿಚಾರವನ್ನು ಮೇಲಧಿಕಾರಿಗಳಿಗೆ ಜರೂರು ತಿಳಿಸಲು ಅದೆಷ್ಟು ಉಪಾಯ ಹೂಡಿದರೂ, ಮಧು ಅವೆಲ್ಲವನ್ನು ವಿಫಲಗೊಳಿಸುತ್ತಾನೆ, ಸಂಪರ್ಕದ ಎಲ್ಲಾ ಹಾದಿಗಳನ್ನು ಕಡಿತಗೊಳಿಸುವ ಮುಖಾಂತರ.
ಮುಂದೆ ಊಟ ಮಾಡುವಂತೆ ಮಧು ಸುಜಿಯನ್ನು ಕರೆಯುತ್ತಾನೆ. ನೀನ್ಯಾಕೆ ಈ ಕೊಲೆ ಮಾಡಿದೆ ಎಂದು ಸುಜಿ ಮಧುವಿಗೆ ಕೇಳುತ್ತಾನೆ. ಆಗ ಮಧುವಿನ ಕಥೆಯು ಬಿಚ್ಚಿಕೊಳ್ಳುತ್ತದೆ. ಮದುವೆಯಾದ ನಂತರ ತನ್ನ ಪತ್ನಿಯೊಂದಿಗೆ ಸಂಸಾರ ಮಾಡಲು ಮಧುವಿಗೆ ಸೂಕ್ಷ್ಮ ಸಮಸ್ಯೆಯೊಂದರಿಂದ ಅಸಾಧ್ಯವಾಗುತ್ತದೆ. ಅದೇ ಕಾರಣವೋ ಏನೋ, ಪತ್ನಿ ಇನ್ನೊಂದು ಸಂಬಂಧದಲ್ಲಿ ತೊಡಗುತ್ತಾಳೆ. ತನ್ನ ಸಮಸ್ಯೆಯ ಅರಿವಿದ್ದುದರಿಂದ, ಈ ಕೆಲಸ ಅವನಿಗೇನೋ ಮೋಸವೆಂದು ಅನ್ನಿಸದೇ ಗೊತ್ತಿದ್ದೂ ಗೊತ್ತಿಲ್ಲದಂತೆ ಬದುಕುತ್ತಿರುತ್ತಾನೆ. ಒಂದು ದಿನ ಕೆಲಸ ಮುಗಿಸಿ ಮನೆಗೆ ಬರುವಾಗ, ಮಧುವಿನ ಪತ್ನಿ ‘ನಾನು ಮೂರು ತಿಂಗಳ ಗರ್ಭಿಣಿ, ನಾನು ತಪ್ಪು ಮಾಡಿದೆʼ ಎಂದು ಬರೆದು ಆತ್ಮಹತ್ಯೆ ಮಾಡಿಕೊಂಡಿರುತ್ತಾಳೆ. ಈ ವಿಚಾರಗಳು ಹೊರಗೆ ಬಂದರೆ ಅವಳ ಗೌರವಕ್ಕೆ ಧಕ್ಕೆಯಾಗುತ್ತದೆ ಎಂದು ಮಧು ಅವಳ ಶವವನ್ನು ಬಹು ಭಾಗಗಳಾಗಿ ಕತ್ತರಿಸಿ ಹಲವು ಪ್ರದೇಶಗಳಲ್ಲಿ ಬಿಸುಟಿರುತ್ತಾನೆ. ಹಾಗಾದರೆ ಅವಳ ಸಾವಿಗೆ ಕಾರಣ ಯಾರು ಎಂದು ಮಧು ಕೆಂಪಗಾದಾಗ, ಸುಜಿ ನಡುಗುತ್ತಾನೆ. ಮಾತ್ರವಲ್ಲ, ಆ ವ್ಯಕ್ತಿ ನೀನು ತಿನ್ನುತ್ತಿರುವ ಮಾಂಸದ ಸೃಷ್ಟಿಕರ್ತ ಎಂದು ಆರ್ಭಟಿಸುತ್ತಾನೆ. ಮಧು ತನ್ನ ಪತ್ನಿಯ ಗರ್ಭದ ಮಾಂಸವನ್ನೇ ಸುಜಿಗೆ ಅಡುಗೆ ಮಾಡಿ ನೀಡಿರುತ್ತಾನೆ. ಅವನ ಕಣ್ಣುಗಳಲ್ಲಿ ತನ್ನ ಅಪರಾಧ ಬಯಲಿಗೆ ಬಂದ ಭಯವು ನರ್ತಿಸುತ್ತಿರುತ್ತದೆ. ತನ್ನನ್ನು ಕ್ಷಮಿಸು ಎಂದು ಗೋಗರೆಯುತ್ತಾನೆ. ಆಗ ಸಿಡಿಲು ಮಿಂಚು ಆರ್ಭಟ ಆರಂಭವಾಗುತ್ತದೆ.
ಮಧು ಅವನನ್ನು ಗೋಪುರಕ್ಕೆ ಕಟ್ಟಿಡುತ್ತಾನೆ. ಬಂದ ಘೋರ ಅಬ್ಬರವೊಂದು ಅವನ ಜೀವವ ಆಪೋಶನ ತೆಗೆದುಕೊಳ್ಳುತ್ತದೆ. ಇತ್ತ ಆ ದೇಹದ ಭಾಗಗಳ ತನಿಖೆ ನಡೆದು, ಅದು ಮಧುವಿನ ಪತ್ನಿಯದ್ದೆಂದು ರುಜುವಾಗುತ್ತದೆ. ಹಾಗೂ ಸುಜಿಯ ಕಾರಣದಿಂದ ಗರ್ಭ ಧರಿಸಿರುವ ಮಧುವಿನ ಪತ್ನಿಯಲ್ಲಿ ಆತ, ಆಕೆ ತನ್ನ ಮದುವೆಗೆ ಅಡ್ಡಿಯಾಗಬಹುದೆಂದು ಆ ಮಗುವಿನ ಉಸಿರನ್ನು ನಿಲ್ಲಿಸಲು ಹೇಳಿರುತ್ತಾನೆ. ಆದರೆ ಆತನ ಕ್ಷಣಿಕ ಮೋಜಿಗೆ ಆಕೆ ಬಲಿಯಾಗುತ್ತಾಳೆ. ಮುಂದೆ ಇದೆಲ್ಲವ ತಿಳಿದ ಮತ್ತದೇ ಹಿರಿಯ ಅಧಿಕಾರಿ ಪೂಂಚಿರಕ್ಕೆ ಸುಜಿಯನ್ನು ವಶಪಡಿಸಲು ಬರುತ್ತಾರೆ. ಅಷ್ಟರಲ್ಲಾಗಲೇ ಸುಧಿ ಶವವಾಗಿರುತ್ತಾನೆ. ಮಹಜರು ಮಾಡುತ್ತಾರೆ. ಕೊನೆಯಲ್ಲಿ ತನ್ನ ಪಾಳಿ ಮುಗಿಸಿ ಮನೆಗೆ ಹೊರಟ ಮಧುವಿನ ಅಂಗಿಯ ಒಂದು ಭಾಗ ಹರಿದಿರುವುದು ಹಿರಿಯ ಅಧಿಕಾರಿಗೆ ಕಾಣಿಸುತ್ತದೆ. ಆ ಚೂರು ಸುಜಿ ಸತ್ತ ಜಾಗದ ಬೇಲಿಯ ಮೇಲೆ ತಗುಲಿ ಹಾಕಿಕೊಂಡಿರುತ್ತದೆ. ಆಗ ಅಧಿಕಾರಿಗೆ ಇದು ಮಧುವಿನ ನೋವಿಗೆ ತೀರಿಸಿಕೊಂಡ ಸೇಡು ಎಂದು ತಿಳಿದು ಬರುತ್ತದೆ. ಆದರೆ ತನ್ನ ಪತ್ನಿಯ ನೆಲೆಯಲ್ಲಿ ಆ ಹಿರಿಯ ಅಧಿಕಾರಿ ಅನುಭವಿಸಿದ ನೋವು ಮನದಲ್ಲಿ ಆರದ ಗಾಯವಾಗಿ ಕುಳಿತಿದ್ದುದರಿಂದ, ಆತ ಯಾವ ಕ್ರಮದ ಗೋಜಿಗೂ ಹೋಗದೆ, ಮಿಂಚಿನ ಹೊಡೆತಕ್ಕೆ ಸಿಲುಕಿ ಸಾವು ಎಂದು ಪ್ರಾಥಮಿಕ ವರದಿ ಬರೆಯುತ್ತಾನೆ. ಕಥೆ ಅಂತ್ಯ ಕಾಣುತ್ತದೆ.

ಕಥೆಯ ಪ್ರಮುಖ ಅಂಶವೇ ಒಬ್ಬರ ಬದುಕು ಎಂದಿಗೂ ಇನ್ನೊಬ್ಬರ ಮಂಜೂರು ಪತ್ರವಲ್ಲ ಎಂಬುದು. ಇಲ್ಲಿ Use and Throw ಮಾಡಿ ಮನಸ್ಸುಗಳ ಮುರಿಯುವುದು ಅಂತ್ಯಂತ ಅಮಾನುಷ ಕೃತ್ಯವೆಂಬುದು ಕೂಡ. ಸುಜಿಗೆ ಒಳ್ಳೆಯ ಬದುಕಿತ್ತು. ಮಧುವಿನ ಪತ್ನಿಗೂ. ಆದರೆ, ಅವಳಲ್ಲಿನ ಖಾಲಿತನವನ್ನು ತುಂಬಲು ಆಕೆ ಹೊರಟಳು. ಸುಜಿ ಆ ಅವಕಾಶವನ್ನು ಬಳಸಿ ಆಕೆಯ ನಂಬಿಕೆ, ಆತ್ಮಾಭಿಮಾನದ ಜೊತೆಗೆ ಆಟವಾಡಿಬಿಟ್ಟ. ಇವೆಲ್ಲವೂ ನಡೆದಾಗ ಮಧು ಮೂಕ ಪ್ರೇಕ್ಷನಾಗಿದ್ದ. ಆದರೆ ಪತ್ನಿಯ ಮೇಲಿನ ಆತನ ಅಸ್ಖಲಿತ ಪ್ರೇಮ, ಗೌರವಕ್ಕೆ ಧಕ್ಕೆಯಾದಾಗ ಆತ ಹಿಂಸೆಯ ದಾರಿಯ ಹಿಡಿದ. ಸರಿ ತಪ್ಪುಗಳಾಚೆ ಇಂತಹ ಅದೆಷ್ಟೋ ಕ್ರಿಮಿಗಳಿಗೆ ‘ಸಾವು ಮಲಗಿರುತ್ತೆ ನಿನ್ನ ಪಕ್ಕದಲ್ಲೇ, ಗೊತ್ತಾಗೋದು ಎದ್ದಾಗಲೇ’ ಎಂದು ಪಾಠವಾಯಿತು ಆತನ ನಡೆ. ಕರ್ಮವೆಂಬುದು ಮರಳಿ ಬರುವ ಮಳೆಗಾಲದ ಮಳೆಯೆಂದು ತಿರು ತಿರುಗಿ ಸಾಬೀತಾಯಿತು.
ಇದು ನಿಧಾನಗತಿಯ(slow burner) ಕ್ರೈಮ್ ಥ್ರಿಲ್ಲರ್ ಜಾನರಿಗೆ ಸೇರಿದ ಕಥೆ. ಕನ್ನಡದ ಕವಲುದಾರಿ ಚಿತ್ರದ ಜಾತಿಗೆ ಸೇರುವಂಥದ್ದು. ಇಲ್ಲಿ ರೋಚಕತೆಗಿಂತಲೂ ಒಂದು ಹಿಡಿ ಹೆಚ್ಚು ತೂಕ ಭಾವುಕತೆಗೆ. ಪ್ರತಿ ದೃಶ್ಯಗಳು ಆಂಗಿಕ ಅಭಿನಯ, ಪ್ರಕೃತಿಯ ಮಾತು, ಮೌನದ ಸಂಭಾಷಣೆಗಳೆಲ್ಲವನ್ನೂ ಹಿಡಿದಿಟ್ಟುಕೊಳ್ಳುವ ಪರಿ ಎಲ್ಲವೂ ಈ ಮಾದರಿಗೆ ಉದಾಹರಣೆ. ಇಲ್ಲಿ ಕೆಲವೊಂದು ದೃಶ್ಯಗಳಿವೆ. ಸಾಕಿದ ನಾಯಿಯು ಸಾಯುವಾಗ ಬರೀ ಬೀಸು ಗಾಳಿಯ ಹಿನ್ನೆಲೆ, ಸಿಡಿಲಿಗೆ ಸಿಲುಕಿ ಸತ್ತ ನಂತರ ಉಂಟಾಗುವ ಸಹಜ ಭಾವನೆಗಳ ಅಕಾರಣ ಮುಂದುವರಿಕೆಯಿಲ್ಲದೇ ಇರುವುದು, ರಿವಲ್ವಾರ್ ಗುರಿಯಿಟ್ಟಾಗ, ಅಂತ್ಯದಲ್ಲಿ ಮಧು ಮರಳಿ ತನ್ನ ನಿಲ್ದಾಣದತ್ತ ತೆರಳುವಾಗ, ವಾಕಿ ಟಾಕಿ ಗುರುಗುಟ್ಟುವಾಗ ಮೂಡುವ ಮೌನ ಆಡುವ ಮಾತು ಇವೆಲ್ಲವೂ ಕಥಾನಕಕ್ಕೆ ನೀಡಿದ ಸಿಹಿಯಾದ ಲೇಪನ. ಸೀರೆಗೆ ನೀಡಿದ ಅಂಚಿನ ವಿನ್ಯಾಸ. ಚಿತ್ರದ ಕಥೆಯು ಕಣ್ಣಿನೊಳಗೆ ಕುಳಿತು ಮನವ ಸೆಳೆಯಲು ಕಾರಣ ಇಲಾ ವಿಳಾ ಪೂಂಚಿರದ ಚೆಲುವಿನ ವರಸೆಯನ್ನು ಅಪಹರಿಸಿದ ಛಾಯಾಗ್ರಾಹಕ ‘ಮನೇಶ್ ಮಾಧವನ್’ ಮತ್ತು ಪ್ರಕೃತಿಯ ರಾಗಾಲಾಪಗಳನ್ನು ಸಂಕಲಿಸಿದ ‘ಅನಿಲ್ ಜಾನ್ಸನ್’. ಇವೆಲ್ಲವುಗಳೊಂದಿಗೆ ಇಂತಹ ಸೂಕ್ಷ್ಮ ಸಂವೇದಿ ಕಥೆಯೊಂದು, Anti Feminine ಎಂಬ ಅಪಸವ್ಯಗಳಿಗೆ ಗುರಿಯಾಗುವ ಸಂಭವದ ಛಾಯೆಯಿದ್ದರೂ ಅವೆಲ್ಲವನ್ನೂ ಮೀರಿ, ಅಂತರಂಗ ಶುದ್ಧಿಯ ಕುರಿತು ಮಾತನಾಡುವ, ಜೀವವೆಂಬ ಬೆಳೆಯ ಬೆಲೆಯನ್ನು ಒತ್ತಿ ಹೇಳುವ, ತತ್ವಗಳ ಅವಶ್ಯಕತೆಯ ಅರುಹುವ ಈ ನಿಧೀಶ್ ಮತ್ತು ಶಾಜಿ ಬರೆದ ಕಥೆಯನ್ನು ಪರದೆಯ ಮೇಲೆ ಹೃದಯ ಅರೆಕ್ಷಣ ಅರಿವಳಿಕೆ ಪಡೆಯುವಂತೆ ವಿಷದೀಕರಿಸಿದ್ದಾರೆ ಶಾಹಿ ಕಬೀರ್.
ಇನ್ನು ಮಧುವಾಗಿ ಸೌಬಿನ್ ಶಹೀರ್ ಸಹಜ ಸುಂದರ ನಟನೆ. ಅವರೊಬ್ಬ Great Versatile Actor ಎಂದು ಮರಳಿ ಸಾಬೀತು ಪಡಿಸಿದ್ದಾರೆ ಈ ಚಿತ್ರದ ಮೂಲಕ. ಅಂಬಿಳಿಯ ವಿಶೇಷ ಚೇತನ, ಮಿಯಾಂವ್ನ ಸಾಮಾನ್ಯ ವ್ಯಕ್ತಿ, ಉದ್ಯಮಿ, ಮಂಜುಮ್ಮೆಲ್ ಬಾಯ್ಸ್, ರೋಮಾಂಚನಮ್ನ ಯುವಕ ಹೀಗೆ ಯಾವುದೇ ಪಾತ್ರವಿರಲಿ, ಯಾವ ಹಿಂಜರಿಕೆಯೂ ಇಲ್ಲದ ಪರ್ಫೆಕ್ಟ್ ಎನಿಸುವ ನಟನೆ ಅವರದು. ಇಲ್ಲಿ ಸುಧಿ ಕೊಪ್ಪ ಕೂಡ ಸುಧಿಯಾಗಿ ಅದ್ಭುತ ಸಾಥ್ ನೀಡಿದ್ದಾರೆ. ಖ್ಯಾತ ನಿರ್ದೇಶಕ ರಾಜಮೌಳಿ ಒಂದು ಮಾತು ಹೇಳಿದ್ದರು ‘ಮಲಯಾಳಂ ನ ಸಣ್ಣ ಪುಟ್ಟ ನಟರು ಕೂಡ ಉತ್ತಮ ಅಭಿನಯಗಾರರು’ ಎಂದು. ಅಂತೆಯೇ ಇಲ್ಲಿ ಕೆಲವೇ ನಿಮಿಷದ ಶಾಟ್ಗಳಲ್ಲಿ ಬರುವ ಪೊಲೀಸ್ ಅಧಿಕಾರಿಗಳು ನೈಜ ಪೊಲೀಸರೇನೋ ಎನ್ನುವಂತೆಯೇ ತಮ್ಮ ಪಾತ್ರಗಳನ್ನು ಅಭಿವ್ಯಕ್ತಿಗೊಳಿಸಿದ್ದಾರೆ. ಹೀಗೆ, ನಂಬಿಕೆಗೆ ಆಘಾತವಾದಾಗ, ಪ್ರೀತಿಗೆ ಮಿಂಚು ಬಡಿದಾಗ ಅಲ್ಲೊಂದು ಸುನಾಮಿಯೂ, ಜ್ವಾಲಾಮುಖಿಯೂ ಕರ್ಮದ ರೂಪದಲ್ಲಿ ಏಳುತ್ತದೆ. ಸೇಡು, ವಿಧಿಯ ಮುಖವಾಡದಲ್ಲಿ ತನಗಾದ ಅನ್ಯಾಯಕ್ಕೆ ಪರಿಹಾರವ ಕಂಡುಕೊಳ್ಳುತ್ತದೆ ಎಂದು ಸಾದೃಶ್ಯಗೊಳಿಸುವ ಚಿತ್ರವೇ ‘ಇಲಾ ವಿಳಾ ಪೂಂಚಿರ’.

ಮುಗಿಸುವ ಮುನ್ನ:
ಒಡೆದ ಗಾಜಿನ ಚೂರುಗಳನ್ನಾದರೂ ಜೊತೆಗೂಡಿಸಬಹುದು, ಆದರೆ ಹರಿದ ಮನಸ್ಸುಗಳನ್ನಲ್ಲ. ಹಲವು ಬದುಕುಗಳು ಅಸಂಖ್ಯ ಸಮಸ್ಯೆಯ ಸಾಗರದಲ್ಲಿ ತೇಲು ತ್ತಿರುತ್ತವೆ. ಅವುಗಳ ಸಹಾಯದ ನೆಪದಲ್ಲಿ ಬರುವ ಹಡಗು, ನಾವೆಗಳು ಕೊನೆಯ ಭರವಸೆಯಂತೆ ಕಾಣುತ್ತದೆ. ಅದೇ ನಂಬಿಕೆಯಲ್ಲಿ ಅವುಗಳನ್ನು ಏರಿದಾಗ, ಅವುಗಳು ಅತೀ ಆಳದ ಮಧ್ಯ ಸಾಗರದಲ್ಲಿ ತೆಗೆದುಕೊಂಡು ಹೋಗಿ ಹಾಕಿದರೆ ಹೇಗಿರಬಹುದು ಬದುಕಿನ ಪರಿಸ್ಥಿತಿ? ಆದ್ದರಿಂದ ವಿಶ್ವಾಸವೆಂಬ ಗೋಡೆಗೆ ಮೊಳೆ ಬೀಳದಿರಲಿ, ಕಣ್ಣುಗಳ ಪರಿಪೂರ್ಣ ಭೇಟಿಯು ಹೆಚ್ಚಾಗಿ ಅಪನಂಬಿಕೆಗಳು ಖಾಲಿಯಾಗಲಿ. ಹೀಗೆಲ್ಲ ಆದರೆ ಬದುಕು ಬೆಳಗುವುದು ಖಚಿತ….

ರಾಮ್ ಪ್ರಕಾಶ್ ರೈ ದಕ್ಷಿಣ ಕನ್ನಡ ಜಿಲ್ಲೆ, ಕಡಬ ತಾಲೂಕು, ಕಲ್ಲುಗುಡ್ಡೆ ನಿವಾಸಿ. ಪ್ರಸ್ತುತ ಬೆಂಗಳೂರಿನ ಖಾಸಗಿ ಕಂಪನಿಯಲ್ಲಿ ಪ್ರಾಡಕ್ಟ್ ಡಿಸೈನ್ ಇಂಜಿನಿಯರ್ ಆಗಿ ಕಾರ್ಯ ನಿರ್ವಹಣೆ ಹವ್ಯಾಸಿ ಬರಹಗಾರ. ಕಥೆ, ಲೇಖನಗಳೆಂದರೆ ಅಚ್ಚುಮೆಚ್ಚು. ಯಕ್ಷಗಾನ ಭಾಗವತಿಕೆ, ಮದ್ದಳೆ ವಾದನ, ಒರಿಗಾಮಿ ಇತರ ಹವ್ಯಾಸಗಳು….

