ಮಧುಕೇಶ್ವರ ದೇವಾಲಯ ಮೂಲತಃ ವಿಷ್ಣುವಿನ ಇಪ್ಪತ್ನಾಲ್ಕು ರೂಪಗಳಲ್ಲಿ ಒಂದಾದ ಮಾಧವನ ಗುಡಿಯಂತೆ. ಕದಂಬರ ಕಾಲದಲ್ಲಿ ನಿರ್ಮಿತವಾಗಿರುವ ಗುಡಿಯು ಕಾಲಾಂತರದಲ್ಲಿ ಕಲ್ಯಾಣ ಚಾಲುಕ್ಯರಿಂದ ಸೋಂದೆಯ ಅರಸರವರೆಗಿನ ರಾಜಮನೆತನಗಳ ಆಳ್ವಿಕೆಯಲ್ಲಿ ಅನೇಕ ಸೇರ್ಪಡೆ, ಜೀರ್ಣೋದ್ಧಾರಗಳಿಗೆ ಒಳಪಟ್ಟು ಸುಸ್ಥಿತಿಯಲ್ಲಿ ಉಳಿದುಕೊಂಡು ಬಂದಿದೆ. ಗರ್ಭಗುಡಿಯಲ್ಲಿರುವ ಮಧುಕೇಶ್ವರ ಲಿಂಗವೂ ಬಲಬದಿಯ ಕೋಷ್ಠದಲ್ಲಿರುವ ಮಾಧವನ ಪ್ರಾಚೀನ ಶಿಲ್ಪವೂ ಆಕರ್ಷಕವಾಗಿವೆ. ಮಹಿಷಮರ್ದಿನಿ, ಗಣಪತಿ, ಕಾರ್ತಿಕೇಯಗುಡಿಯ ಒಳಭಾಗದಲ್ಲಿರುವ ಇತರ ಶಿಲ್ಪಗಳು. ದೇವಾಲಯದ ನವರಂಗಮಂಟಪದಲ್ಲಿ ದೊಡ್ಡ ದೊಡ್ಡ ಕಂಬಗಳಿದ್ದು ಕಂಬಗಳ ನಡುವೆ ಶಿವನ ಎದುರಾಗಿ ಕುಳಿತ ನಂದಿಯ ವಿಗ್ರಹ ಮನೋಹರವಾಗಿದೆ.
ಟಿ.ಎಸ್. ಗೋಪಾಲ್ ಬರೆಯುವ ದೇಗುಲಗಳ ಸರಣಿಯ ಇಪ್ಪತ್ತೆಂಟನೆಯ ಕಂತು

 

ಕ್ರಿ.ಶ. ಐದನೆಯ ಶತಮಾನದ ಕದಂಬರಿಂದ ಮೊದಲುಗೊಂಡು ಹದಿನೈದನೆಯ ಶತಮಾನದ ಸೋಂದೆಯ ಅರಸರವರೆಗೆ ವಿವಿಧ ರಾಜಮನೆತನಗಳ ಪೂಜೆಪುನಸ್ಕಾರಗಳಿಗೆ ಪಾತ್ರವಾಗಿ ಆಯಾ ಕಾಲದ ವಾಸ್ತುಶಿಲ್ಪವನ್ನು ಅಳವಡಿಸಿಕೊಂಡು ಸಾವಿರಾರು ವರ್ಷಗಳ ಸಂಸ್ಕೃತಿಯ ಸಂಕೇತವಾಗಿ ಉಳಿದ ಕೀರ್ತಿ ಬನವಾಸಿಯ ಮಧುಕೇಶ್ವರ ದೇವಾಲಯಕ್ಕೆ ಸಲ್ಲುತ್ತದೆ. ಉತ್ತರ ಕನ್ನಡ ಜಿಲ್ಲೆಯ ಹೆಮ್ಮೆಯ ಪ್ರತೀಕವಾಗಿ ನಿಂತ ಈ ಪ್ರಾಚೀನ ದೇಗುಲವನ್ನು ಕಂಡವರಿಗೆ ಪಂಪಕವಿಯ ಪ್ರಸಿದ್ಧ ನುಡಿಯಾದ “ಆರಂಕುಸಮಿಟ್ಟೊಡಂ ನೆನೆವುದೆನ್ನ ಮನಂ ಬನವಾಸಿದೇಶಮಂ” ಎಂಬ ಹೇಳಿಕೆಯಲ್ಲಿ ಅತಿಶಯೋಕ್ತಿಯೇನೂ ಇಲ್ಲವೆಂದು ತೋರುವುದು ಸಹಜವೇ. ಶಿರಸಿಪಟ್ಟಣಕ್ಕೆ ಸಮೀಪವಾಗಿರುವ ಈ ಊರನ್ನು ಹಾವೇರಿಯ ಕಡೆಯಿಂದಲೂ ತಲುಪಬಹುದು. ಬನವಾಸಿಯನ್ನು ಕೇಂದ್ರವಾಗಿರಿಸಿಕೊಂಡು ಸುತ್ತಲಿನ ಗಿಡ್ನಾಪುರ, ತಾಳಗುಂದ, ಕುಬಟೂರು, ಕುಪ್ಪಗದ್ದೆ, ಬಳ್ಳಿಗಾವೆ, ಬಂದಳಿಕೆ ಮೊದಲಾದ ಅನೇಕ ಪ್ರಾಚೀನಗುಡಿ-ಸ್ಮಾರಕಗಳನ್ನು ನೋಡಿ ಬರುವುದಕ್ಕೆ ಅವಕಾಶವುಂಟು.

ಲೋಕಕಂಟಕರಾಗಿದ್ದ ಮಧು ಹಾಗೂ ಕೈಟಭರೆಂಬ ರಾಕ್ಷಸರನ್ನು ವಿಷ್ಣು ಶಿವನ ಆದೇಶದಂತೆ ಸಂಹರಿಸಿದನಂತೆ. ಅಪ್ರತಿಮ ಶಿವಭಕ್ತರಾಗಿದ್ದ ಮಧುಕೈಟಭರ ಹೆಸರು ಚಿರಸ್ಥಾಯಿಯಾಗಿರುವಂತೆ ಶಿವ ಅವರ ಹೆಸರಿನಲ್ಲಿ ಬನವಾಸಿಯಲ್ಲಿ ಮಧುಕೇಶ್ವರನಾಗಿಯೂ ಸನಿಹದ ಕುಬಟೂರಿನಲ್ಲಿ ಕೈಟಭೇಶ್ವರನಾಗಿಯೂ ನೆಲೆಸಿದನಂತೆ.

ಮಧುಕೇಶ್ವರ ದೇವಾಲಯ ಮೂಲತಃ ವಿಷ್ಣುವಿನ ಇಪ್ಪತ್ನಾಲ್ಕು ರೂಪಗಳಲ್ಲಿ ಒಂದಾದ ಮಾಧವನ ಗುಡಿಯಂತೆ. ಕದಂಬರ ಕಾಲದಲ್ಲಿ ನಿರ್ಮಿತವಾಗಿರುವ ಈ ಗುಡಿಯು ಕಾಲಾಂತರದಲ್ಲಿ ಕಲ್ಯಾಣ ಚಾಲುಕ್ಯರಿಂದ ಸೋಂದೆಯ ಅರಸರವರೆಗಿನ ರಾಜಮನೆತನಗಳ ಆಳ್ವಿಕೆಯಲ್ಲಿ ಅನೇಕ ಸೇರ್ಪಡೆ, ಜೀರ್ಣೋದ್ಧಾರಗಳಿಗೆ ಒಳಪಟ್ಟು ಸುಸ್ಥಿತಿಯಲ್ಲಿ ಉಳಿದುಕೊಂಡು ಬಂದಿದೆ. ಗರ್ಭಗುಡಿಯಲ್ಲಿರುವ ಮಧುಕೇಶ್ವರ ಲಿಂಗವೂ ಬಲಬದಿಯ ಕೋಷ್ಠದಲ್ಲಿರುವ ಮಾಧವನ ಪ್ರಾಚೀನ ಶಿಲ್ಪವೂ ಆಕರ್ಷಕವಾಗಿವೆ. ಮಹಿಷಮರ್ದಿನಿ, ಗಣಪತಿ, ಕಾರ್ತಿಕೇಯ- ಗುಡಿಯ ಒಳಭಾಗದಲ್ಲಿರುವ ಇತರ ಶಿಲ್ಪಗಳು.

ದೇವಾಲಯದ ನವರಂಗಮಂಟಪದಲ್ಲಿ ದೊಡ್ಡ ದೊಡ್ಡ ಕಂಬಗಳಿದ್ದು ಕಂಬಗಳ ನಡುವೆ ಶಿವನ ಎದುರಾಗಿ ಕುಳಿತ ನಂದಿಯ ವಿಗ್ರಹ ಮನೋಹರವಾಗಿದೆ. ವಿಶಾಲವಾದ ಪ್ರಾಂಗಣದಲ್ಲಿ ಸುತ್ತ ಅನೇಕ ಚಿಕ್ಕಚಿಕ್ಕ ಗುಡಿಗಳಿದ್ದು ವಿವಿಧ ದಿಕ್ಪಾಲಕರು, ಗಣಪತಿ, ಸೂರ್ಯ ಮೊದಲಾದ ದೇವತೆಗಳ ಮೂರ್ತಿಗಳನ್ನು ಸ್ಥಾಪಿಸಲಾಗಿದೆ. ಎಡಭಾಗದ ಚಿಕ್ಕ ಗುಡಿಯಲ್ಲಿ ಇರುವ ಚಿಂತಾಮಣಿ ನರಸಿಂಹ ಶಿಲ್ಪವು ಪ್ರಾಚೀನತೆಯೇ ಅಲ್ಲದೆ, ನರಸಿಂಹಶಿಲ್ಪದ ಇತಿಹಾಸದ ಅಧ್ಯಯನದ ದೃಷ್ಟಿಯಿಂದಲೂ ಗಮನಾರ್ಹವಾದುದು.

ಮಧುಕೇಶ್ವರ ದೇವಾಲಯದ ಕಟ್ಟಡದಷ್ಟು ಅದರ ಶಿಖರ ಪ್ರಾಚೀನವಾದುದಲ್ಲ. ಗಾರೆಯಲ್ಲಿ ನಿರ್ಮಿತವಾದ ಈ ಶಿಖರದ ಮೇಲಿನ ವೃಷಭಾರೂಢ ಶಿವಪಾರ್ವತಿಯ ವಿಗ್ರಹಗಳೂ, ನಂದಿ, ಆನೆ, ಶಾರ್ದೂಲ, ನಾಗಬಂಧ ಮೊದಲಾದವೂ ವಿಶೇಷರೂಪಗಳೇ. ದೇವಾಲಯದ ಹೊರಬಾಗಿಲಲ್ಲಿ ಎರಡೂ ಬದಿಗಿರುವ ಸುಂದರವಾದ ಗಜಶಿಲ್ಪಗಳು ನಿಮ್ಮನ್ನು ಸ್ವಾಗತಿಸುತ್ತವೆ. ಮುಖ್ಯದ್ವಾರದೊಳಗೆ ಕಾಲಿರಿಸುತ್ತಿರುವಂತೆಯೇ ಕಾಣುವ ದೊಡ್ಡ ಧ್ವಜಸ್ತಂಭವೂ ಗಮನಸೆಳೆಯುತ್ತದೆ. ದೇಗುಲದ ಹೊರಗೋಡೆಗಳ ಮೇಲಿನ ಕೆಲವು ಉಬ್ಬುಶಿಲ್ಪಗಳೂ, ಸುತ್ತ ಇಳಿಜಾರಾಗಿ ಚಾಚಿಕೊಂಡ ಮುಖಮಂಟಪದ ಛಾವಣಿಯೂ, ತಿರುಗಣಿಯ ಕೆತ್ತನೆಯ ಕಂಬಗಳೂ ದೇಗುಲದ ಹಲವಾರು ವೈಶಿಷ್ಟ್ಯಗಳಲ್ಲಿ ಸೇರಿವೆ.

ಆವರಣದ ಎಡಭಾಗದಲ್ಲಿರುವ ಶಿಲಾಮಂಟಪವನ್ನು ನೀವು ಮರೆಯದೆ ನೋಡಲೇಬೇಕು. ನಮ್ಮ ನಾಡಿನ ಅತ್ಯುತ್ಕೃಷ್ಟ ಶಿಲ್ಪಕಲಾ ಪ್ರೌಢಿಮೆಗೆ ಸಾಕ್ಷಿಯಾಗಿ ನೀವು ಈ ಮಂಟಪವನ್ನು ಉದಾಹರಿಸಲೇಬೇಕು. ಸೋಂದೆಯ ನಾಯಕ ಅರಸರು ನಿರ್ಮಿಸಿದ ಈ ಶಿಲಾಮಂಟಪ ಸಂಪೂರ್ಣವಾಗಿ ಕುಸುರಿಕೆತ್ತನೆಯಿಂದ ಅಲಂಕೃತವಾಗಿದೆ. ನಾಲ್ಕು ಮೂಲೆಗಳಲ್ಲಿನ ಕಂಬಗಳ ವಿನ್ಯಾಸ ಏಕರೀತಿಯಿದೆ. ಕಂಬದ ನಡುಭಾಗದಲ್ಲಿ ನಾಲ್ಕು ದಿಕ್ಕಿಗೆ ಮುಖಮಾಡಿರುವ ಆನೆಗಳೂ ಅವುಗಳ ಮೇಲೇರಿ ನಿಂತ ಶಾರ್ದೂಲಗಳೂ ಮನಸೆಳೆಯುತ್ತವೆ. ಮಂಟಪದ ಒಳಛಾವಣಿಯ ವಿನ್ಯಾಸವೂ ಸೊಗಸಾಗಿದೆ. ಇವೆಲ್ಲಕ್ಕಿಂತ ಮಿಗಿಲಾಗಿರುವುದು ದೇಗುಲದ ಬಲಭಾಗದ ಗೋಡೆಯ ಮೇಲಿನ ನಾಗಶಿಲ್ಪ.

(ಚಿತ್ರಗಳು: ಟಿ.ಎಸ್. ಗೋಪಾಲ್)

ಕ್ರಿ.ಶ. ಎರಡನೆಯ ಶತಮಾನದ್ದೆಂದು ಗುರುತಿಸಲಾಗಿರುವ ಈ ನಾಗಶಿಲ್ಪ ಐದುಹೆಡೆಗಳನ್ನುಳ್ಳ ನಾಗವನ್ನು ಕೆತ್ತಿರುವ ಒಂದು ಫಲಕವಾಗಿದ್ದು, ಇದರ ಸುತ್ತಲೂ ಬ್ರಾಹ್ಮೀಲಿಪಿಯಲ್ಲಿ ಬರೆಯಲಾಗಿರುವ ಪ್ರಾಕೃತಭಾಷೆಯ ಶಾಸನವಿದೆ. ಸಾತಕರ್ಣಿ ಎಂಬ ಅರಸನ ಪುತ್ರಿ ನಾಗಶ್ರೀ ಎಂಬಾಕೆಯು ಈ ನಾಗಶಿಲ್ಪದೊಡನೆ ಒಂದು ಕೆರೆಯನ್ನೂ ವಿಹಾರವನ್ನೂ ನಿರ್ಮಿಸಿದಳೆಂಬ ವಿವರಣೆಯಿದೆ. ಇದು ಬನವಾಸಿಯ ಇತಿಹಾಸವನ್ನು ಇನ್ನಷ್ಟು ಪೂರ್ವಕಾಲಕ್ಕೆ ಒಯ್ದು ವಿಸ್ಮಯಮೂಡಿಸುತ್ತದೆ. ನಾಟಕನೆಂಬ ಶಿಲ್ಪಿ ಈ ಶಾಸನವನ್ನು ಕೆತ್ತಿದನೆಂಬ ಉಲ್ಲೇಖವೂ ಇದೆಯಂತೆ.

ಬನವಾಸಿಯೂ ಈ ಕೇಂದ್ರದ ಸುತ್ತಲಿನ ಊರುಹಳ್ಳಿಗಳ ಗುಡಿಸ್ಮಾರಕಗಳೂ ಕರ್ನಾಟಕದ ಪ್ರಾಚೀನ ಪರಂಪರೆಯ ಅಭಿಮಾನದ ಕುರುಹುಗಳಾಗಿರುವುದರಲ್ಲಿ ಸಂದೇಹವೇ ಇಲ್ಲ.