Advertisement
ಬಾಪುವಿನ ನೆರಳಲ್ಲಿ ಬೆಳಕು ಕಾಣಿಸುವ ‘ನಮ್ಮೊಳಗೊಬ್ಬ ಗಾಂಧಿ’ಯ ಸತ್ಯಾನ್ವೇಷಣೆ: ಡಾ.ರಾಜೇಂದ್ರಕುಮಾರ್ ಕೆ ಮುದ್ನಾಳ್

ಬಾಪುವಿನ ನೆರಳಲ್ಲಿ ಬೆಳಕು ಕಾಣಿಸುವ ‘ನಮ್ಮೊಳಗೊಬ್ಬ ಗಾಂಧಿ’ಯ ಸತ್ಯಾನ್ವೇಷಣೆ: ಡಾ.ರಾಜೇಂದ್ರಕುಮಾರ್ ಕೆ ಮುದ್ನಾಳ್

ಮಹಿಳೆಯರ ಬದುಕು  ಸ್ವಾವಲಂಬಿಯಾಗಿರಬೇಕೆಂದು ಶಕ್ತಿದಾಯಕವಾಗಿ ಇರಬೇಕೆಂದು ಗಾಂಧಿ ಬಯಸಿದ್ದರು ಎಂಬುದನ್ನು ಮೂಕಮ್ಮ ಮತ್ತು ರಮಾ ಪಾತ್ರದ ಮೂಲಕ ನಾಟಕಕಾರರು ಕಟ್ಟಿಕೊಡಲು ಪ್ರಯತ್ನಿಸಿದ್ದಾರೆ. ರಮಾ ವಿಧವೆಯಾಗಿದ್ದರು ಮತ್ತೊಬ್ಬನನ್ನು ಪ್ರೀತಿಸಿ ಮರು ಮದುವೆ ಮಾಡಿಕೊಳ್ಳುವ ಉತ್ಸಾಹವನ್ನು ತೋರಿಸಿದ್ದು ಕೂಡ ಗಾಂಧಿ ವಿಚಾರಧಾರೆಗಳಿಗೆ ಮನಸೋತು. ರಮಾ ಮತ್ತು ರಹಿಮರ ಪ್ರೇಮ ಭಾವೈಕ್ಯತೆಯ ಪ್ರತೀಕವಾಗಿ  ಹೊರಹೊಮ್ಮಿದೆ. ರಹಿಮನ ಸೈಕಲ್ ಕೂಡ ಚರಕವಾಗಿ ಪರಿವರ್ತನೆಯಾಗಿದ್ದು ಸ್ವಾತಂತ್ರ್ಯ ಚಳವಳಿಯ ಪ್ರಕ್ರಿಯೆಯನ್ನು ಸೂಚಿಸುತಿತ್ತು.
‘ನಮ್ಮೊಳಗೊಬ್ಬ ಗಾಂಧಿ’ ನಾಟಕದ ಕುರಿತು ಡಾ. ರಾಜೇಂದ್ರಕುಮಾರ್‌ ಕೆ. ಮುದ್ನಾಳ್‌ ಬರಹ

ಗಾಂಧಿ ಚಿಂತನೆಗಳು ಇಂದು ಏಕೀಕೃತವಾಗದೆ ಕೇಂದ್ರೀಕರಣವಾಗದೆ, ವಿಕೇಂದ್ರೀಕೃತವಾಗದೆ ಚದುರಿ ಹೋಗಿವೆ. ಈ ಚದುರಿದ ಚಿಂತನೆಗಳು ಆಶ್ರಯವಿಲ್ಲದೆ ಅನಾಥವಾಗಿವೆ. ಅನಾಥ ಚಿಂತನೆಗಳಿಗೆ ಪ್ರತಿಯೊಬ್ಬರೂ  ಪೂರ್ವಗ್ರಹ ಪೀಡಿತರಾಗಿ ಸಾಮಾಜಿಕ ಜಾಲತಾಣಗಳಲ್ಲಿ ಗುಂಡು ಹಾರಿಸುತ್ತಿದ್ದಾರೆ. ಗಾಂಧಿ ತತ್ವಗಳು ಯುವಕರನ್ನು ಮುಟ್ಟುತ್ತಿಲ್ಲ, ತಟ್ಟುತ್ತಿಲ್ಲ ಎಂಬ  ನಿಟ್ಟಿನಲ್ಲಿ ನಾಟಕವು ‘ತಟ್ಟು ಚಪ್ಪಾಳೆಪುಟ್ಟ ಮಗು, ಬಾಪುಗಿಂದು  ಜನ್ಮದಿನ ‘ ಎಂದು ಬೋಳುವಾರ್‌ರ  ಕವಿತೆಯ ಮೂಲಕ ಪುಟ್ಟ ಮಗು ರಂಗದ ಮೇಲೆ ಹೆಜ್ಜೆ ಹಾಕುತ್ತಾ, ಅಜ್ಜನೊಂದಿಗೆ ಗಾಂಧಿಯ ವಿಚಾರಗಳನ್ನು ತಿಳಿದುಕೊಳ್ಳುವುದರೊಂದಿಗೆ ನಾಟಕ ಆರಂಭವಾಗುವುದು. ಹಿಂದಿನ ತಲೆಮಾರಿನವರೊಂದಿಗೆ ಇಂದಿನ ತಲೆಮಾರಿನವರು ಗಾಂಧಿಯನ್ನು ಹೇಗೆ ಅರ್ಥೈಸಿಕೊಳ್ಳಬೇಕೆಂಬುವುದನ್ನು ಅಜ್ಜ- ಮೊಮ್ಮಗನ  ಸಂವಾದ ಹಾಗೂ ಚರಕದ ಸಂಕೇತದೊಂದಿಗೆ ಗಾಂಧೀ ಚಳವಳಿಯ ಪ್ರಭಾವ ರಂಗಕ್ಕೆ ತೋರಣ ಕಟ್ಟಿತು. ಅಜ್ಜ ಹಳೆ ಮನುಷ್ಯನಾದ್ರೂ ನೋಡುವ ದೃಷ್ಟಿ ಹೊಸದಾಗಿತ್ತು. ಚರಕ ಮೊದಲು, ಗಾಂಧಿ ನಂತರ ಎಂಬ ಅಂಶಗಳು ಗಾಂಧಿ ತತ್ವದೊಂದಿಗೆ ಅಜ್ಜ ಮೊಮ್ಮಗನ ಸಂಭಾಷಣೆ ಮೆಚ್ಚುವಂಥದ್ದು. ಗಾಂಧಿ ಚಿಂತನೆಯನ್ನು ಯುವಕರಿಗೆ ಹೇಳಿಕೊಡಬೇಕೆಂಬ ಆಶಾಭಾವನೆಯು ಎದ್ದು ಕಾಣುತ್ತಿತ್ತು. ಅದು ಚರಕ ಎಂಬ ಸ್ವಾವಲಂಬಿ  ವಸ್ತುವಿನ ಮೂಲಕ ಎಂಬುದು ವಿಶೇಷ.

‘ನಮ್ಮೊಳಗೊಬ್ಬ ಗಾಂಧಿ’ ಪ್ರಯೋಗ ವಿದೇಶಿ ವಸ್ತ್ರದ ಬಹಿಷ್ಕಾರ, ಜಾತಿ ಅಸ್ಪೃಶ್ಯತೆಯ ಸಂಘರ್ಷದ ಮಾತುಗಳು, ಕರ ಪ್ರಸಂಗಗಳು, ದಂಡಿ ಸತ್ಯಾಗ್ರಹದ ಅನುರಣನ, ಉಪವಾಸ ಸತ್ಯಾಗ್ರಹ, ಮಹಿಳೆಯ ಅಂತರಂಗದ ಅಸ್ಮಿತೆಯ ಹೋರಾಟ ಕಂಡುಕೊಂಡಿದ್ದು, ಶಿಕ್ಷಣ ಇಂದು ಏನಾಗಿದೆ, ಅಸಹಕಾರ ಚಳವಳಿಯ ವಿವಿಧ ಆಯಾಮಗಳನ್ನು ಪ್ರಚಲಿತ ವಿದ್ಯಮಾನಗಳೊಂದಿಗೆ ಸ್ಪಂದಿಸುವ ರಂಗ ಶೈಲಿಯಲ್ಲಿ ಗಾಂಧಿ ಚಳವಳಿ ಅವಶ್ಯಕತೆ ಇದೆ ಎಂಬ ಸಂದೇಶ ನಾಟಕದ್ದು.

ನಾಟಕದಲ್ಲಿ ಮಹಿಳಾ ಪಾತ್ರಗಳು ತಮ್ಮ ಜೀವನದಲ್ಲಿ ಅನುಭವಿಸಿದ ನೋವುಗಳನ್ನು ಮರೆತು, ಸ್ವಾತಂತ್ರ್ಯ ಚಳವಳಿಯಲ್ಲಿ ಭಾಗವಹಿಸಿದ್ದರು. ಅವರ ಮೂಲಭೂತ ಹಕ್ಕು ಎಂಬಂತೆ ಹೋರಾಟಕ್ಕೆ ಧುಮುಕಿದ್ದರು. ತಮ್ಮಲ್ಲಿರುವ ಒಡವೆ ವಸ್ತ್ರಗಳನ್ನು, ವಿಶೇಷ ಉಡುಗೊರೆಗಳನ್ನು ಗಾಂಧೀಜಿಗೆ ನೀಡಿದ ಉದಾಹರಣೆಗಳು ಚರಿತ್ರೆಯಾಗಿವೆ. ಮೂಕಮ್ಮ ಎಂಬ ಮಹಿಳೆ ಕರ ನಿರಾಕರಣೆಯ ಕುರಿತು ಶಾನುಭೋಗರೊಂದಿಗೆ ವಾಗ್ವಾದವೇ ನಡೆಸುತ್ತಾಳೆ. ಬ್ರಿಟಿಷರು ದವಸ ಧಾನ್ಯಗಳ ಮೇಲೆ, ನೀರಿನ ಮೇಲೆ, ಉಪ್ಪಿನ ಮೇಲೆ, ಬೆಣ್ಣೆಯ ಮೇಲೆ, ಮೊಸರಿನ ಮೇಲೆ, ಆಹಾರ ಪದಾರ್ಥಗಳ ಮೇಲಿನ ಕರದ ವಿರುದ್ಧ ಹಳ್ಳಿಯ ಜನ ಪ್ರತಿಭಟನೆ ಮಾಡುತ್ತಾರೆ. ಸದ್ಯದ ಪರಿಸ್ಥಿತಿ ಕೂಡ ಇದಕ್ಕೆ ಹೊರತಲ್ಲ. ಇಲ್ಲ ಸಲ್ಲದ ತೆರಿಗೆಗಳನ್ನು ಕೇಂದ್ರ ಮತ್ತು ರಾಜ್ಯ ಸರ್ಕಾರಗಳು ಜನರ ಮೇಲೆ ಹೇರುತ್ತಿವೆ ಎಂಬುದಕ್ಕೆ ನಾಟಕ ಪ್ರತಿರೋಧ ತೋರಿತು. ಬಾಯಲ್ಲಿ ಗಾಂಧೀ ಜಪ, ಮಾಡುವ ಕೆಲಸಗಳೆಲ್ಲ ಜನ ವಿರೋಧಿ ನೀತಿಗಳು. ಆಧುನಿಕ ಸರಕಾರಗಳು ಬ್ರಿಟಿಷರ ವಸಾಹಾತುಶಾಹಿಯ ಆಡಳಿತದಿಂದ ಹೊರಬಂದಿಲ್ಲ ಎಂಬುದನ್ನು ನಾಟಕ ಸೂಚಿಸುತ್ತಿತ್ತು. ‘ಹಿಂಸೆ ಬಲಹೀನರ ಅಸ್ತ್ರವಾದರೆ, ಅಹಿಂಸೆ ಬಲಿಷ್ಠರ ಅಸ್ತ್ರ’ ಎಂಬ ಮಾತನ್ನು ಮೂಕಮ್ಮ ಮೂಲಕ ಪ್ರಯೋಗಿಸುವುದರ ಮೂಲಕ ನಾಟಕ ಮಹಿಳಾ ಸ್ವಾತಂತ್ರ್ಯದ ವ್ಯಾಪ್ತಿಯನ್ನು ಹೇಳುತ್ತಿತ್ತು. ಅದು ಪುರುಷ ಅಹಂಕಾರದಿಂದ ಬಿಡುಗಡೆಯ ಸ್ವಾತಂತ್ರ್ಯಬೇಕೆಂಬ ಮಹಿಳಾಪರ ಧ್ವನಿ ಮಡುಗಟ್ಟಿತ್ತು. ಪ್ರತಿಯೊಬ್ಬನ ಗಂಡಿನಲ್ಲಿಯೂ ಕೂಡ ಒಬ್ಬ ಹೆಣ್ಣು ಇರುತ್ತಾಳೆ. ನಮ್ಮಲ್ಲಿನ ಹೆಣ್ತನಕ್ಕೆ ಮುಖಾಮುಖಿ ಆದರೆ ಮಾತ್ರ ಮಹಿಳೆಯ ವೇದನೆಗಳಿಗೆ ಸ್ಪಂದಿಸಲು ಸಾಧ್ಯವೆಂಬ ಅರಿವು ಗಾಂಧೀಯದಾಗಿತ್ತು. ಗಾಂಧೀಯಾಗುವುದೆಂದರೆ ತಪಸ್ಸು ಎಂದು ನಾಟಕ ಮನವರಿಕೆ ಮಾಡತೊಡಗಿತ್ತು.

ಗಾಂಧೀ ಏಕಮುಖದ ವ್ಯಕ್ತಿತ್ವದವರಲ್ಲ, ಅವರದು ಬಹುರೂಪಿಯ ವ್ಯಕ್ತಿತ್ವ. ಜಾಡಮಾಲಿಯಾಗಿ, ಭಂಗಿಯಾಗಿ, ಕ್ಷೌರಿಕನಾಗಿ, ಚಮ್ಮಾರನಾಗಿ, ಪತ್ರಕರ್ತನಾಗಿ, ವಕೀಲನಾಗಿ ಹೀಗೆ ತಳ ಸಮುದಾಯದ ಕಸುಬಿನ ಎಲ್ಲಾ ಕೆಲಸ ಕಾರ್ಯಗಳನ್ನು ಮಾಡಿದ ಜಗತ್ತಿನ ಏಕೈಕ ವ್ಯಕ್ತಿ ಗಾಂಧಿ. ತನ್ನನ್ನು ತಾನು ಪ್ರಯೋಗಕ್ಕೆ ಒಳಪಡಿಸಿಕೊಂಡ ಜಗತ್ತಿನ ಅಹಿಂಸಾವಾದಿ ಗಾಂಧಿ. ಓದುವುದರಿಂದ ದೊಡ್ಡತನ ಬರುವುದಿಲ್ಲ ಪ್ರತಿಯೊಂದು ಕೆಲಸವನ್ನು ಮನಸ್ಸಿಟ್ಟು ಮಾಡುವುದರಲ್ಲಿ ದೊಡ್ಡತನ ಇದೆ. ಬದುಕೇ ವಿಶ್ವವಿದ್ಯಾಲಯ. ನಮ್ಮ ಕಸಕ್ಕೆ ನಾವೇ ಜಾಡ ಮಾಲಿಗಳಾಗಬೇಕು ಎಂಬ ಗಾಂಧಿ ತತ್ವಕ್ಕೆ ಮನಸೋಲದೆ, ನಮ್ಮ ಅಹಂಕಾರಕ್ಕೆ ಮುಕ್ತಿ ಇಲ್ಲ. ಪ್ರತಿಯೊಂದು ಕುಲ ಕಸುಬುಗಳಲ್ಲಿ   ನೈತಿಕತೆ ಇದೆ. ಅದನ್ನು ಕಾಣಬೇಕೆಂಬುದೇ ಗಾಂಧಿಯ ವಿಚಾರ. ಈ ಹಿನ್ನೆಲೆಯಲ್ಲಿ ಗಾಂಧಿಯವರು ಶಿಕ್ಷಣ ಹೊರಗಿನ ವಿಚಾರವಾಗದೆ ಒಳಗಿನ ವಿಚಾರವಾಗಿ ಸ್ವಾವಲಂಬಿ ಬದುಕನ್ನು ಕಲಿಸಬೇಕೆಂಬುದನ್ನು ತಿಳಿಸುತ್ತಾರೆ.  ‘ಅಕ್ಷರ ಶಾಲೆಯಿಂದ ಸಿಗುವುದು, ಅರಿವು ಬದುಕಿನಿಂದ ಸಿಗುತ್ತದೆ’ ಎಂಬ ನಾಟಕಕಾರರ ಮಾತು ಪ್ರಸ್ತುತ ವರ್ತಮಾನದ ಶೈಕ್ಷಣಿಕ ಸ್ಥಿತಿಗತಿಗೆ ಹೇಳಿದಂತಿದೆ.

ನಾಟಕದ ಮುಖ್ಯ ವಿಶೇಷ ಇಲ್ಲಿನ ಗಾಂಧಿ, ತೆರೆಮರೆಯ ಗಾಂಧಿಯಾಗಿದ್ದಾನೆ ಹೊರತು ರಂಗದ ಮೇಲೆ ಗಾಂಧಿಯ ಭೌತಿಕ ಚಲನೆ ಇಲ್ಲ. ಗಾಂಧಿ ಚಳವಳಿಯಿಂದ ಪ್ರಭಾವಿತರಾದ  ಜನರು ಗಾಂಧಿ ಕರೆಕೊಟ್ಟ ಹಲವು ವಿಚಾರಧಾರೆಗಳನ್ನು ಪಾಲಿಸುತ್ತಿದ್ದಾರೆ. ಗಾಂಧಿಯೇ ಅವರಿಗೆ ಸ್ಪೂರ್ತಿ. ಗಾಂಧಿಯು ನಮ್ಮೂರಿಗೆ ಬರುವರೆಂಬ ಆಶಯದಲ್ಲಿದ್ದರು. ಸ್ವಾತಂತ್ರ್ಯ ಚಳವಳಿಗೆ ಬೆಂಬಲ ನೀಡಿದ್ದರು. ಗಾಂಧಿ ಪ್ರೇಕ್ಷಕರಿಗೆ ದರ್ಶನವಾಗುವುದೇ ಇಲ್ಲ. ರಂಗದ ಮೇಲೆ ‘ಬೋಲೋ ಭಾರತ್ ಮಾತಾ ಕಿ ಜೈ’ ಎಂದಾಗ ಪ್ರೇಕ್ಷಕರು ಕೂಡ ಪಾತ್ರಗಳೊಂದಿಗೆ ಜೈಕಾರ ಹಾಕಿದ್ದು ವಿಶೇಷವಾಗಿತ್ತು. ಗಾಂಧಿ ನಮ್ಮೊಳಗೆ ಇಳಿದಿದ್ದರು ಎಂಬುದಕ್ಕೆ  ಪ್ರೇಕ್ಷಕರ ಚಪ್ಪಾಳೆ, ಘೋಷಣೆ ಸಾಕ್ಷಿಯಾಗಿತ್ತು.

ಪು.ತಿ.ನ.ಅವರ ‘ಮೇಲೊಂದು ಗರುಡ ಹಾರುತಿಹುದು, ಕೆಳಗದರ ನೆರಳು ಓಡುತಿಹುದು ಅದಕೋ ಅದರಿಚ್ಚೆ ಹಾದಿ, ಇದಕೋ ಹರಿದತ್ತ ಬೀದಿ’ ಕವಿತೆಯು ಬ್ರಿಟಿಷರ  ಆಡಳಿತ ವೈಖರಿಗೆ ಹಾಗೂ ಸ್ವಾತಂತ್ರ್ಯ ಚಳವಳಿಯ ಮಹತ್ವವನ್ನು ತಿಳಿಸುವ ಸಾಲುಗಳಿವು. ಇಂದಿನ-ಹಿಂದಿನ ಭಾರತವು ಕೂಡ ಬಂಡವಾಳ ಶಾಹಿಗಳ ಹತೋಟಿಯಲ್ಲಿದೆ. ಅವರು ಹೇಳಿದಂತೆ ಸರ್ಕಾರಗಳು ನಡೆಯುತ್ತಿವೆ ಎಂಬ ಅನುಮಾನ ಜನಸಾಮಾನ್ಯರಲ್ಲಿದೆ. ಹೆಸರಿಗಷ್ಟೇ ಪ್ರಜಾಪ್ರಭುತ್ವ ಅದರ ಉಸಿರಿರುವುದು ಹಣವಂತ ರಾಜಕಾರಣಿಗಳಲ್ಲಿ, ಕೈಗಾರಿಕೋದ್ಯಮಗಳಲ್ಲಿ, ಬಂಡವಾಳ ಶಾಹಿಗಳಲ್ಲಿ ಎಂದು ನಾಟಕ ಸೂಚ್ಯವಾಗಿ  ಹೇಳುತ್ತಿತ್ತು.

ನಾಟಕದಲ್ಲಿ ಬಯಲಾಟದ ದೃಶ್ಯವು ಹಾಸ್ಯದೊಂದಿಗೆ ಆವಿಷ್ಕಾರವು ಇತ್ತು. ಗಾಂಧಿ ಪಾತ್ರ ಮಾಡುವವರು ಸತ್ಯಾನ್ವೇಷಣೆಗೆ ಒಳಪಡುತ್ತಿದ್ದರು, ಆತ್ಮ ಸಾಕ್ಷಾತ್ಕಾರಕ್ಕೆ ತಮ್ಮನ್ನು ತಿದ್ದಿಕೊಳ್ಳುತ್ತಿದ್ದರು. ಪ್ರಾಯಶ್ಚಿತ್ತಕ್ಕೊಳಪಡುತ್ತಿದ್ದರು. ಇಂದು ಗಾಂಧಿಯ ಮಾತುಗಳನ್ನಾಡುವವರು ತಮ್ಮನ್ನು ತಾವು ಸ್ವ ವಿಮರ್ಶೆ ಮಾಡಿಕೊಳ್ಳಲು ಸಿದ್ಧರಿಲ್ಲ ಎಂಬುವುದೇ ನಾಟಕದ ಔಚಿತ್ಯ. ಗಾಂಧಿ ಜಯಂತಿಯಂದು ಮಾತ್ರ ನಮಗೆ ಗಾಂಧಿ ನೆನಪಾಗುತ್ತಾರೆ. ಉಳಿದ ದಿನಗಳು ನೆನಪಾಗುವುದೇ ಇಲ್ಲ. ಗಾಂಧಿ ಜನ್ಮದಿನ ಪ್ರಯುಕ್ತ ಮದ್ಯ ಮಾರಾಟ ನಿಷೇಧ. ಆದರೆ ಮರುದಿನ ಅದರ ಮಾರಾಟ ಜೋರಾಗಿರುತ್ತದೆ. ಇದು ನಾವು ಗಾಂಧಿಗೆ ಕೊಡುವ ಗೌರವವೇ?

ಶೌಚಾಲಯವನ್ನು ಮಹಿಳೆಯರು ಮಾತ್ರ ಸ್ವಚ್ಛಗೊಳಿಸುವುದಲ್ಲ, ಪುರುಷರೂ ಸ್ವಚ್ಛಗೊಳಿಸುವುದಕ್ಕೆ ಮುಂದಾಗಬೇಕೆಂಬುದಕ್ಕೆ ಗಾಂಧಿ ಕರೆ ನೀಡಿದ್ದರು ಎಂದು ಪುರುಷ ಪಾತ್ರಧಾರಿಗಳು ಕುಟುಂಬದೊಳಗಿನ ಶೌಚಾಲಯವನ್ನು ಸ್ವಚ್ಛಗೊಳಿಸುವುದಕ್ಕೆ ಮುಂದಾದರು. ಸ್ವಚ್ಛತೆ ಗೊತ್ತಿಲ್ಲದಿದ್ದರೆ ಸ್ವಚ್ಛತೆ ಹೇಗೆ ಮಾಡುಬೇಕೆಂದು ಕಲಿಯಬೇಕೆಂದು ಗಾಂಧೀಜಿ ಕರೆ ಕೊಟ್ಟಿದ್ದರು. ಗಾಂಧೀಜಿ ತಮ್ಮ ಆತ್ಮಕಥೆಯಲ್ಲಿ ಈ ಥರದ ಹಲವು ಪ್ರಯೋಗಗಳನ್ನು ಮಾಡಿದ್ದೇನೆಂದು ಸ್ವತಃ ಹೇಳಿಕೊಳ್ಳುತ್ತಾರೆ.

ಮಹಿಳೆಯರ ಬದುಕು  ಸ್ವಾವಲಂಬಿಯಾಗಿರಬೇಕೆಂದು ಶಕ್ತಿದಾಯಕವಾಗಿ ಇರಬೇಕೆಂದು ಗಾಂಧಿ ಬಯಸಿದ್ದರು ಎಂಬುದನ್ನು ಮೂಕಮ್ಮ ಮತ್ತು ರಮಾ ಪಾತ್ರದ ಮೂಲಕ ನಾಟಕಕಾರರು ಕಟ್ಟಿಕೊಡಲು ಪ್ರಯತ್ನಿಸಿದ್ದಾರೆ. ರಮಾ ವಿಧವೆಯಾಗಿದ್ದರು ಮತ್ತೊಬ್ಬನನ್ನು ಪ್ರೀತಿಸಿ ಮರು ಮದುವೆ ಮಾಡಿಕೊಳ್ಳುವ ಉತ್ಸಾಹವನ್ನು ತೋರಿಸಿದ್ದು ಕೂಡ ಗಾಂಧಿ ವಿಚಾರಧಾರೆಗಳಿಗೆ ಮನಸೋತು. ರಮಾ ಮತ್ತು ರಹಿಮರ ಪ್ರೇಮ ಭಾವೈಕ್ಯತೆಯ ಪ್ರತೀಕವಾಗಿ  ಹೊರಹೊಮ್ಮಿದೆ. ರಹಿಮನ ಸೈಕಲ್ ಕೂಡ ಚರಕವಾಗಿ ಪರಿವರ್ತನೆಯಾಗಿದ್ದು ಸ್ವಾತಂತ್ರ್ಯ ಚಳವಳಿಯ ಪ್ರಕ್ರಿಯೆಯನ್ನು ಸೂಚಿಸುತಿತ್ತು.

ಕ್ಷೌರಿಕನು ತಾನು ಮಾಡುವ ಕೆಲಸದ ಮಹತ್ವವನ್ನು ತನ್ನ ವಂಶವನ್ನು ಸ್ವಪ್ರತಿಷ್ಠೆ ಗೊಳಪಡಿಸಿಕೊಳ್ಳುತ್ತಿದ್ದ. ಆದರೂ ನಮ್ಮನ್ನು ಕೀಳು ಮಟ್ಟದಲ್ಲಿ ಕಾಣುತ್ತಾರೆ ಎಂದು ಹೇಳುತ್ತಿದ್ದ. ತಾನೆ ಸ್ವತಃ ಇನ್ನೊಂದು ಜಾತಿಯ ಕೀಳು ವ್ಯಕ್ತಿಗೆ  ಕೂದಲು ಕತ್ತರಿಸುವುದಿಲ್ಲ ಎಂದು ಅಸಹ್ಯಪಟ್ಟುಕೊಂಡ. ಅಸಗ, ಕಮ್ಮಾರ, ಕುಂಬಾರ, ಮಡಿವಾಳ, ಹಡಪದ ಇತ್ಯಾದಿ ಶೂದ್ರ, ದಲಿತ ಜಾತಿಗಳು ತಾವೇ ಶ್ರೇಷ್ಠವೆಂದು ಜಂಬ ಕೊಚ್ಚಿಕೊಳ್ಳುತ್ತವೆ. ಸ್ವಜಾತಿ ವ್ಯಾಮೋಹ ಹೆಚ್ಚಾಗಿದೆ. ಜಾತ್ಯಾತೀತ ರಾಷ್ಟ್ರದ ಪರಿಕಲ್ಪನೆ ಈ ಕೆಳ ಜಾತಿಗಳಿಗೆ ಬರುವುದೇ ಇಲ್ಲವೆಂದು  ನದಿಯ ದಡದ ದೃಶ್ಯ ಚಾಟಿ ಏಟು ಬೀಸಿತ್ತು. ಬಸವಣ್ಣನವರ ‘ನೀರ ಕಂಡಲ್ಲಿ ಮುಳುಗುವರಯ್ಯ’ ಎಂಬ ವಚನಕ್ಕೆ ವಿರುದ್ಧವಾಗಿ ‘ಜಾತಿ ಕಂಡಲ್ಲಿ ಮುಳುಗುವರಯ್ಯ’ ಎಂದು ಹೇಳಬೇಕಾದ ಪರಿಸ್ಥಿತಿ ಇಂದು ನಿರ್ಮಾಣವಾಗಿದೆ. ವಿದ್ಯಾವಂತರಾದರೆ ಅನಿಷ್ಠಗಳು ಕಡಿಮೆಯಾಗುತ್ತವೆ, ಜಾತಿ ಪದ್ಧತಿ ನಿರ್ನಾಮವಾಗುವುದೆಂಬ ಆಲೋಚನೆ ಇತ್ತು. ಆದರೆ ಜಾತಿಯಲ್ಲಿ ಶ್ರೇಣೀಕರಣ   ಹೆಚ್ಚಾಗುತ್ತಿದೆ. ನಾವೆಲ್ಲ ನೊಂದವರೆಂಬ ಪರಿಕಲ್ಪನೆ ಬಂದಾಗ  ಗಾಂಧಿ, ಅಂಬೇಡ್ಕರರ, ಸಮಾಜ ಸುಧಾರಕರ  ಜಾತಿ ವಿನಾಶ ಚಳವಳಿಗೆ ಬೆಲೆ ಬರುವುದು.

ಸ್ವಾತಂತ್ರ್ಯ ಸಿಕ್ಕ ಮೇಲೆ ಆಡಳಿತ ನಡೆಸುವುದು ಹೇಗೆ ನಮ್ಮನ್ನು ಯಾರು ಆಳಬೇಕು ಇತ್ಯಾದಿ ಪ್ರಶ್ನೆಗಳು ಚಳವಳಿಗಾರರಲ್ಲಿ ಮನೆ ಮಾತಾಗಿತ್ತು, ಹೊಣೆಗೇಡಿಗಳ ‘ಕೈ’ಗೆ ಅಧಿಕಾರ ಹೋಗಬಾರದೆಂದು ಅವರ ಆಲೋಚನೆಯಾಗಿತ್ತು. ಭಾರತಕ್ಕೆ ಸ್ವಾತಂತ್ರ್ಯ ಬಂದಾಗ ಗಾಂಧಿ ನೌಖಾಲಿಯಲ್ಲಿದ್ದರು. ತಮ್ಮೂರಿಗೂ ಗಾಂಧಿ ಬರುವರು ಎಂಬ ನಿರೀಕ್ಷೆಯಲ್ಲಿರುವಾಗ ಎಲ್ಲರೂ ಗಾಂಧಿಗೆ ಉಡುಗೊರೆ ಕೊಡಲು ಸಿದ್ಧರಾಗಿದ್ದರು. ಅಷ್ಟರಲ್ಲಿ ಆಕಾಶವಾಣಿ ‘ಗಾಂಧೀಜಿಯವರು ಬಿರ್ಲಾ ಮಂದಿರದಲ್ಲಿ ಪ್ರಾರ್ಥನೆ ಮುಗಿಸಿಕೊಂಡು ಬರುವಾಗ ಗುಂಡೇಟಿಗೆ ಬಲಿಯಾದರು’ ಎಂಬ ವಾಣಿಯಿಂದ ಗಾಂಧಿಧಾರಿ ಅಜ್ಜನ ಹೃದಯ ನಿಶಬ್ದವಾಗಿತ್ತು.

ಡಿ.ಎಸ್. ಚೌಗಲೆ ರಚಿಸಿದ ‘ನಮ್ಮೊಳಗೊಬ್ಬ ಗಾಂಧಿ’ ನಾಟಕಕ್ಕೆ ಚಿದಂಬರರಾವ್ ಜಂಬೆಯವರ ನಿರ್ದೇಶನವಿದೆ. ಶಿವಮೊಗ್ಗ ರಂಗಾಯಣದ ರೆಪೆರ್ಟರಿ ಕಲಾವಿದರು ರಂಗಾಯಣ ಕಲಬುರ್ಗಿಯಲ್ಲಿ ಅಭಿನಯಿಸಿದರು. ಕೆಲವೊಂದು ಪಾತ್ರಗಳು ಗಟ್ಟಿಯಾಗಿ ಮಾತನಾಡಿದರು ಇನ್ನು ಉಳಿದ ಪಾತ್ರಗಳಿಗೆ ರಂಗದ ಶಾಖ ತಟ್ಟಿರಲಿಲ್ಲವೆನಿಸುತ್ತದೆ. ನಾಟಕಕ್ಕೆ ನಟರ ಶಕ್ತಿ ಮುಖ್ಯ. ಅದು ಸ್ವಲ್ಪ ಸೊರಗಿದೆನಿಸುತ್ತದೆ. ಜಂಬೆಯವರ ನಿರ್ದೇಶನದಲ್ಲಿ ನಟರು ಮತ್ತಷ್ಟು ಪಳಗುವ ಅವಶ್ಯಕತೆ ಇದೆ. ಮಹಿಳಾ ಪಾತ್ರಗಳು ಮತ್ತಷ್ಟು ಗಟ್ಟಿ ದನಿಯಲ್ಲಿ ಮಾತನಾಡುವ ಸಾಧ್ಯತೆಗಳಿದ್ದವು. ನಾಟಕ ಹೆಚ್ಚಾಗಿ ಮಹಿಳಾಪರ ಧ್ವನಿಯನ್ನು ಸೂಚಿಸುತ್ತಿತ್ತು. ನಟರ ಕಸರತ್ತು ನಾಟಕಕ್ಕೆ ಅವಶ್ಯವಿದೆ. ನಾಟಕದಲ್ಲಿನ ಕೆಲವು ಘೋಷಣೆಗಳು, ವಾಕ್ಯಗಳು ಗಾದೆ ಮಾತಿನಂತೆ ನೋಡುಗರನ್ನು ತಟ್ಟುತ್ತವೆ ಹೊರತು ಮುಟ್ಟುವುದಿಲ್ಲ. ಈ ಮುಟ್ಟುವ ಪ್ರಕ್ರಿಯೆಯಲ್ಲಿ ನಾಟಕಕಾರರು ಇನ್ನಷ್ಟು ಸರಳೀಕರಣಗೊಳಿಸಿಕೊಳ್ಳ ಬೇಕಾಗಿತ್ತು. ನಾಟಕದ ವಿನ್ಯಾಸಕ್ಕೆ ಹೊಸ ಆಯಾಮಗಳ ಕೊರತೆ ಎದ್ದು ಕಾಣುತ್ತಿತ್ತು. ಅದು ನಿರ್ದೇಶಕ ಮತ್ತು ನಾಟಕದ ಮಿತಿಯು ಕೂಡ ಆಗಿರಬಹುದು. ಸಂಗೀತ ಗಾಂಧಿಯ ಮಾತುಗಳಂತೆ ಮನಸ್ಸಿಗೆ ಮುದ ನೀಡುತ್ತಿತ್ತು. ಬೆಳಕಿನ ವಿನ್ಯಾಸ ತೃಪ್ತಿ ಕರವಾಗಿತ್ತು. ಬೆಳಕಿನಲ್ಲಿ ಇನ್ನೂ ಸ್ವಲ್ಪ ಕ್ರಿಯಾಶೀಲತೆಯ  ಅವಶ್ಯಕತೆ ಇತ್ತು.

ಕೊನೆಯದಾಗಿ, ‘ಕೊಳಕು ಜನ ಕೆಡುಕು ಮಾಡುತ್ತಾರಂತ ಗಿಡ ಮರವಾಗುವುದನ್ನ ನಿಲ್ಲಿಸುತ್ತಾ’ ಎಂದು ಮೂಕಮ್ಮ ಶಾನುಭೋಗರಿಗೆ ಪ್ರತಿರೋಧ ತೋರುತ್ತಾಳೆ.  ಅದೇ ರೀತಿ ಇಂದಿನ ಜನರು ಗಾಂಧಿಯ ಕುರಿತ ಇಲ್ಲಸಲ್ಲದ ಅವಮಾನಕಾರಿ ಹೇಳಿಕೆಗಳನ್ನು ಹಾಗೂ ಗಾಂಧಿಯ ವಿಚಾರಧಾರೆಗಳನ್ನು ಅಪ್ರಸ್ತುತ ಸನ್ನಿವೇಶಗಳಿಗೆ  ಬಳಸಿಕೊಳ್ಳುವ ಆಡಳಿತ ವ್ಯವಸ್ಥೆಗೆ ಗಾಂಧಿ ಬಲಿಯಾಗುತ್ತಿರುವುದು ವಿಷಾದನೀಯ. ಗಾಂಧಿಯನ್ನು ಅರಿಯದೆ ನಾವು ಗಾಂಧೀಯ ವಿರೋಧಿಗಳಾಗುತ್ತಿದ್ದೇವೆ. ಗಾಂಧೀಯ ತತ್ತ್ವ ತೂತು ಬಿದ್ದ ಮಡಿಕೆಯಾಗಿದೆ. ಗಾಂಧಿ ಯುವ ಸಮುದಾಯಕ್ಕೆ ಮುಟ್ಟುವುದಾದರೂ ಹೇಗೆ ಎಂಬ ಹಲವು ಪ್ರಶ್ನೆಗಳು ನಾಟಕ ನಿರೂಪಿಸುತ್ತದೆ.

About The Author

ಡಾ. ರಾಜೇಂದ್ರಕುಮಾರ್ ಕೆ ಮುದ್ನಾಳ್

ಡಾ. ರಾಜೇಂದ್ರಕುಮಾರ್ ಕೆ ಮುದ್ನಾಳ್ ಮೂಲತಃ ಯಾದಗಿರಿ ಜಿಲ್ಲೆಯ ಮುದ್ನಾಳ ಗ್ರಾಮದವರು. ಸದ್ಯ ಇವರು ಪದವೀಧರ ಪ್ರಾಥಮಿಕ ಶಾಲಾ ಶಿಕ್ಷಕರಾಗಿ ಎಂಟು ವರ್ಷಗಳಿಂದ ಯಾದಗಿರಿಯಲ್ಲಿ ಸೇವೆ ಸಲ್ಲಿಸುತ್ತಿದ್ದಾರೆ. ಬೆಳಗಾವಿ ರಾಣಿ ಚನ್ನಮ್ಮ ವಿಶ್ವವಿದ್ಯಾಲಯದಿಂದ ಚಂದ್ರಕಾಂತ ಕೂಸನೂರ : ಬಹುಶೀಸ್ತೀಯ ಅಧ್ಯಯನ ( ಕಥನಕ್ರಮ,ನಾಟಕ ಮತ್ತು ಚಿತ್ರಕಲೆಗಳನ್ನು ಅನುಲಕ್ಷಿಸಿ )ವಿಷಯದಡಿ ಸಂಶೋಧನಾ ಪ್ರಬಂಧ ಮಂಡಿಸಿ 2023ರಲ್ಲಿ ಪಿಎಚ್.ಡಿ ಪದವಿ ಪಡೆದಿರುವರು. ನಾಟಕಗಳ ಕುರಿತಾದ ರಂಗ ಪ್ರಯೋಗಗಳ ವಿಮರ್ಶಾ ಬರಹಗಳು ಪುಸ್ತಕ ರೂಪದಲ್ಲಿ ಪ್ರಕಟಣೆಗೆ ಸಿದ್ಧವಾಗಿದೆ.

Leave a comment

Your email address will not be published. Required fields are marked *

ಕುಳಿತಲ್ಲೇ ಬರೆದು ನಮಗೆ ಸಲ್ಲಿಸಿ

ನಿಮ್ಮ ಅಪ್ರಕಟಿತ ಬರಹಗಳನ್ನು ಯುನಿಕೋಡ್ ನಲ್ಲಿ ಇಲ್ಲಿಗೆ ಕಳುಹಿಸಿ

editor@kendasampige.com

ನಮ್ಮ ಫೇಸ್ ಬುಕ್

ನಮ್ಮ ಬರಹಗಾರರು

ಕೆಂಡಸಂಪಿಗೆಯ ಬರಹಗಾರರ ಪುಟಗಳಿಗೆ

ಇಲ್ಲಿ ಕ್ಲಿಕ್ ಮಾಡಿ

ಪುಸ್ತಕ ಸಂಪಿಗೆ

ಬರಹ ಭಂಡಾರ