ಬಾಗಿಲು ಮುಚ್ಚಿಕೊಂಡದ್ದೇ ತಡ, ಆ ರೋಗಿ ತಟಕ್ಕನೆ ಹೊದಿಕೆಯನ್ನು ದೂರ ತಳ್ಳಿ, ಹಾಸಿಗೆಯಿಂದ ಚಿಮ್ಮಿ, ಅರೆ ಹುಚ್ಚನ ಹಾಗೆ ಕೋಣೆಯ ಮಧ್ಯದಲ್ಲಿ ನಿಂತ. ಅವರೆಲ್ಲ ಹೋಗಲೆಂದು ಇಲ್ಲಿಯವರೆಗೂ ತಳಮಳಿಸುತ್ತ ಕಾಯುತ್ತಿದ್ದ. ಅವರಿಲ್ಲದಿದ್ದರೆ ಮಾಡಬೇಕಾದ ಕೆಲಸ ಸಟ್ಟನೆ ಮಾಡಬಹುದು ಅನ್ನಿಸುತ್ತಿತ್ತು. ಏನು ಕೆಲಸ? ಅದೇ ಮರೆತುಹೋಗಿತ್ತು. ‘ದೇವರೇ! ಅವರಿಗೆ ಏನೇನು ಗೊತ್ತು, ಇನ್ನೂ ಏನು ಗೊತ್ತಿಲ್ಲ ಅಷ್ಟು ತಿಳಿಯುವ ಹಾಗೆ ಮಾಡು.
ಪ್ರೊ. ಓ.ಎಲ್. ನಾಗಭೂಷಣ ಸ್ವಾಮಿ ಅನುವಾದಿಸಿದ ಫ್ಯದೊರ್ ದಾಸ್ತಯೇವ್ಸ್ಕಿ ಬರೆದ ‘ಅಪರಾಧ ಮತ್ತು ಶಿಕ್ಷೆʼ ಕಾದಂಬರಿಯ ಎರಡನೆಯ ಭಾಗದ ಮೂರನೆಯ ಅಧ್ಯಾಯ

 

ಹಾಗೆಂದು ಕಾಯಿಲೆಯ ಅವಧಿಯಲ್ಲಿ ಅವನು ಪೂರಾ ಮೂರ್ಛೆಯಲ್ಲೇ ಇದ್ದನೆಂದಲ್ಲ: ಅದು ಜ್ವರದ ಒಂದು ಸ್ಥಿತಿ, ಒಂದಷ್ಟು ಹೊತ್ತು ಸನ್ನಿ, ಒಂದಷ್ಟು ಹೊತ್ತು ಅರೆ-ಎಚ್ಚರ. ಕಾಯಿಲೆ ವಾಸಿಯಾದಮೇಲೆ ಅವನಿಗೆ ಆ ದಿನಗಳ ಬಹಳಷ್ಟು ನೆನಪು ಸ್ಪಷ್ಟವಾಗಿದ್ದವು. ತನ್ನ ಸುತ್ತ ಬಹಳ ಜನ ಸೇರಿದ್ದಾರೆ ಎಂದು ಅನ್ನಿಸಿತ್ತು ಒಂದು ಸಾರಿ. ಅವನನ್ನ ಎಲ್ಲಿಗೋ ಕರಕೊಂಡು ಹೋಗಬೇಕು ಅನ್ನುತ್ತಿದ್ದರು. ಅವನ ಬಗ್ಗೆ ಬಹಳ ಹೊತ್ತು ವಾದ, ಜಗಳ, ಮಾತು ಆಯಿತು. ಆಮೇಲೆ, ಇದ್ದಕಿದ್ದ ಹಾಗೆ, ರೂಮಿನಲ್ಲಿ ಒಬ್ಬನೇ ಆಗಿದ್ದ. ಎಲ್ಲರೂ ಹೊರಟು ಹೋಗಿದ್ದರು. ಅವನನ್ನು ಕಂಡು ಅವರಿಗೆಲ್ಲ ಭಯವಾಗಿತ್ತು. ಆಗಾಗ ಬಂದು ಬಂದು ಬಾಗಿಲನ್ನು ಒಂದಿಷ್ಟೆ ನೂಕಿ ಸಂದಿಯಿಂದ ಅವನನ್ನು ನೋಡುತ್ತಿದ್ದರು, ಹೆದರಿಸುತ್ತಿದ್ದರು, ಅವನ ಜೊತೆ ವಾದಮಾಡುತ್ತಿದ್ದರು, ನಗುತ್ತಿದ್ದರು, ರೇಗಿಸುತ್ತಿದ್ದರು. ಎಷ್ಟೋ ಸಾರಿ ನಸ್ತಾಸ್ಯ ಅವನ ಜೊತೆಗೆ ಇರುತ್ತಿದ್ದದ್ದು ನೆನಪಿತ್ತು.

ಇನ್ನೊಬ್ಬ ಯಾರೋ ಇರುತ್ತಿದ್ದ. ಚೆನ್ನಾಗಿ ಪರಿಚಯವಿದ್ದವನು ಅನ್ನಿಸುತ್ತಿತ್ತು. ಅವನು ಯಾರು ಅನ್ನುವುದು ಮಾತ್ರ ಗೊತ್ತಾಗುತ್ತಿರಲಿಲ್ಲ. ಅಯ್ಯೋ ತಿಳಿಯುತ್ತಿಲ್ಲ ಎಂದು ಬೇಸರಪಡುತ್ತಿದ್ದ, ದುಃಖಿಸುತ್ತಿದ್ದ, ಅಳುತ್ತಿದ್ದ. ‘ತಿಂಗಳಾಯಿತು ಹಾಸಿಗೆ ಹಿಡಿದು,’ ಎಂದು ಒಂದೊಂದು ಸಾರಿ ಅನ್ನಿಸುತ್ತಿತ್ತು; ಒಂದೊಂದು ಸಾರಿ ಇವತ್ತೇ ಜ್ವರ ಬಂದದ್ದು ಅನ್ನಿಸುತ್ತಿತ್ತು. ‘ಅದು’ ಮಾತ್ರ ಪೂರ್ತಿ ಮರೆತೇಹೋಗಿತ್ತು. ‘ಅದರ’ ಬದಲಾಗಿ ಏನೋ ಮರೆತಿದ್ದೇನೆ, ಮರೆಯಬಾರದಾಗಿದ್ದನ್ನು ಮರೆತಿದ್ದೇನೆ ಅನ್ನುವುದು ಮಾತ್ರ ಪ್ರತಿ ನಿಮಿಷವೂ ನೆನಪಿಗೆ ಬಂದು ಕಾಡುತ್ತಿತ್ತು. ಏನದು ಎಂದು ನೆನಪು ಮಾಡಿಕೊಳ್ಳಲು ನರಳಿದ, ಸಿಟ್ಟುಮಾಡಿಕೊಂಡ, ಭಯಪಟ್ಟ. ಎದ್ದು ಓಡಿಹೋಗಲು ನೋಡುತ್ತಿದ್ದ, ಹಾಗನ್ನಿಸಿದಾಗಲೆಲ್ಲ ಯಾರೋ ಬಲವಂತವಾಗಿ ಅವನನ್ನು ಹಿಡಿದು ನಿಲ್ಲಿಸಿ, ಅವನು ಕಸುವಿಲ್ಲದವನಾಗಿ, ಮತ್ತೆ ಎಚ್ಚರ ತಪ್ಪುತ್ತಿದ್ದ. ಕೊನೆಗೂ ಅವನಿಗೆ ಪೂರ್ತಿ ಎಚ್ಚರ ಬಂದಿತ್ತು.

ಎಚ್ಚರ ಬಂದಾಗ ಬೆಳಗಿನ ಹತ್ತು ಗಂಟೆ. ಆ ಹೊತ್ತಿನಲ್ಲಿ ಅವನ ರೂಮಿನ ಬಲ ಭಾಗದ ಗೋಡೆಯ ಮೇಲೆ ಉದ್ದವಾದ ಪಟ್ಟೆಯ ಹಾಗೆ ಬಿಸಿಲು ಬಿದ್ದಿರುತ್ತಿತ್ತು, ಬಾಗಿಲಿನ ಪಕ್ಕದ ಮೂಲೆ ಬೆಳಕಾಗಿರುತ್ತಿತ್ತು. ನಸ್ತಾಸ್ಯಾ ಅವನ ಸೋಫಾದ ಪಕ್ಕದಲ್ಲಿ ನಿಂತಿದ್ದಳು. ಜೊತೆ ಇನ್ನೊಬ್ಬ ಇದ್ದ. ಅವನ ಪರಿಚಯವೇ ಇರಲಿಲ್ಲ. ಅವನು ರಾಸ್ಕೋಲ್ನಿಕೋವ್‍ ನನ್ನೇ ಗಮನವಿಟ್ಟು ನೋಡುತ್ತಿದ್ದ. ಅವನು ಯುವಕ, ಕಪ್ತಾನ್ ತೊಟ್ಟಿದ್ದ, ಪುಟ್ಟ ಗಡ್ಡವಿತ್ತು, ನೋಡಿದರೆ ಕಂಪೆನಿಯ ಏಜೆಂಟನ ಹಾಗೆ ಕಾಣುತ್ತಿದ್ದ. ಓನರಮ್ಮ ಬಾಗಿಲನ್ನು ಅರ್ಧ ತೆಗೆದು ಇಣುಕುತ್ತಿದ್ದಳು. ರಾಸ್ಕೋಲ್ನಿಕೋವ್ ಸ್ವಲ್ಪ ತಲೆ ಎತ್ತಿದ.

‘ಯಾರಿದು?’ ಅಪರಿಚಿತನತ್ತ ತೋರುತ್ತ ನಸ್ತಾಸ್ಯಾಳನ್ನು ಕೇಳಿದ.

‘ನೋಡಿ, ಎಚ್ಚರ ಆದ!’ ಜೋರಾಗಿ ಅಂದಳು ಅವಳು.

‘ಎಚ್ಚರ ಆದ!’ ಏಜೆಂಟು ಪ್ರತಿಧ್ವನಿ ಕೊಟ್ಟ.

ಅವನಿಗೆ ಎಚ್ಚರವಾದದ್ದು ತಿಳಿದು ಓನರಮ್ಮ ತಟ್ಟನೆ ಬಾಗಿಲು ಮುಚ್ಚಿ ಮುಖ ಮರೆಸಿಕೊಂಡಳು. ಅವಳಿಗೆ ನಾಚಿಕೆ ಹೆಚ್ಚು. ಜನರ ಮಾತು, ವಿವರಣೆ ಇವನ್ನೆಲ್ಲ ಸಹಿಸಲು ಆಗುತ್ತಿರಲಿಲ್ಲ. ಅವಳಿಗೆ ಸುಮಾರು ನಲವತ್ತು ವರ್ಷ, ಮೈ ಕೈ ತುಂಬಿಕೊಂಡ ದುಂಡನೆಯ ದಪ್ಪ ಹೆಂಗಸು. ದಟ್ಟ ಹುಬ್ಬು, ಕಪ್ಪು ಕಣ್ಣು, ಧಡೂತಿ ದೇಹದ ಕಾರಣದಿಂದಲೂ ಸೋಮಾರಿತನದ ಕಾರಣದಿಂದಲೂ ಕರುಣಾಮಯಿ ಎಂಬಂತೆ ಕಾಣುತ್ತಿದ್ದಳು ಮನಸ್ಸು ಸೆಳೆಯುವ ಹಾಗಿದ್ದಳು, ಆದರೆ ಮಾತ್ರ ಅನಗತ್ಯವಾಗಿ ಸಂಕೋಚ ಪಡುತ್ತಿದ್ದಳು, ನಾಚುತ್ತಿದ್ದಳು.

‘ಯಾರು ನೀನು?’ ಅವನು ಏಜೆಂಟನನ್ನು ಕೇಳುತ್ತಲೇ ಇದ್ದ. ಆ ಹೊತ್ತಿಗೆ ಬಾಗಿಲು ದಡಾರನೆ ತೆಗೆದುಕೊಂಡು ಉದ್ದ ದೇಹದ ರಝುಮಿಖಿನ್ ಬೆನ್ನು ಒಂದಿಷ್ಟು ಬಗ್ಗಿಸಿಕೊಂಡು ಒಳಕ್ಕೆ ಬಂದ.

‘ಹಡಗಿನ ಕ್ಯಾಬಿನ್ ಥರ ಇದೆ, ನೆಟ್ಟಗೆ ನಿಂತರೆ ತಲೆಗೆ ಬಡಿಯತ್ತೆ, ಮತ್ತೆ ಇದನ್ನ ಅಪಾರ್ಟ್‍ಮೆಂಟು ಅನ್ನುತಾರೆ, ಎಚ್ಚರ ಬಂತಂತೆ ನಿನಗೆ! ಪಾಶೆನ್ಕಾ ಹೇಳಿದʼ ಎಂದು ಕೂಗಾಡಿಕೊಂಡು ಬಂದ.

‘ಈಗ ತಾನೇ ಎಚ್ಚರ ಬಂತು,’ ನಸ್ತಾಸ್ಯ ಅಂದಳು

‘ಈಗ ತಾನೇ ಎಚ್ಚರ ಬಂತು,’ ಏಜೆಂಟು ನಗುತ್ತ ಅವಳ ಮಾತಿಗೆ ಪ್ರತಿಧ್ವನಿಯಾದ.

‘ಅಂದ ಹಾಗೆ, ತಾವು ಯಾರು ಸ್ವಾಮೀ?’ ಏಜೆಂಟನತ್ತ ತಿರುಗಿ ತಟ್ಟನೆ ಕೇಳಿದ. ‘ನಾನು ವಾರ್ಝುಮಿಖಿನ್, ಎಲ್ಲರೂ ಕರೆಯುವ ಹಾಗೆ ರಝುಮಿಖಿನ್ ಅಲ್ಲ, ನಾನು ವಾರ್ಝಮಿಖಿನ್,’ ಸ್ಟೂಡೆಂಟು, ಮರ್ಯಾದಸ್ಥರ ಮಗ. ಇವನು, ನನ್ನ ಸ್ನೇಹಿತ, ನೀವು ಯಾರು?’ ಅಂದ.

‘ನಾನು ವ್ಯಾಪಾರಿ ಶೆಲೊಪಯೇವ್ ಅವರ ಆಫೀಸು ಏಜಂಟು, ಇಲ್ಲಿಗೆ ಕೆಲಸದ ಮೇಲೆ ಬಂದಿದ್ದೇನೆ.’

‘ದಯವಿಟ್ಟು ಕುಳಿತುಕೊಳ್ಳಿ,’ ಅನ್ನುತ್ತ ಕುರ್ಚಿ ತೋರಿಸಿದ ರಝುಮಿಖಿನ್ ತಾನು ಟೇಬಲ್ಲಿನ ಇನ್ನೊಂದು ಬದಿಯಲ್ಲಿದ್ದ ಕುರ್ಚಿಯ ಮೇಲೆ ಕುಳಿತ. ‘ನನ್ನ ಬ್ರದರ್ ಹತ್ತಿರ ಕೆಲಸ ಮೇಲೆ ಬಂದಿದ್ದೀರ. ಬಹಳ ಒಳ್ಳೆಯದು,’ ಅಂದು ರಾಸ್ಕೋಲ್ನಿಕೋವ್‍ ನತ್ತ ತಿರುಗಿ, ‘ನೀನು ನಾಲ್ಕು ದಿನದಿಂದ ಏನೂ ತಿಂದಿಲ್ಲ, ಕುಡಿದಿಲ್ಲ. ನಿಜ. ನಾವು ಚಮಚದಲ್ಲಿ ಸ್ವಲ್ಪ ಟೀ ಕುಡಿಸಿದೆವು. ನಾನು ಝೋಸ್ಸಿಮೋವ್‍ ನನ್ನ ಎರಡು ಸಾರಿ ಕರಕೊಂಡು ಬಂದಿದ್ದೆ. ಝೋಸಿಮೋವ್ ಜ್ಞಾಪಕ ಇದೆಯಾ? ಅವನು ನಿನ್ನ ಚೆನ್ನಾಗಿ ಪರೀಕ್ಷೆ ಮಾಡಿ, ‘ವಿಶೇಷ ಏನಿಲ್ಲ, ಇದೆಲ್ಲ ಮಾಮೂಲು, ನೀನು ಏನೋ ತಲೆಗೆ ಹಚ್ಚಿಕೊಂಡಿದೀಯ ಅಷ್ಟೆ. ನರ್ವಸ್ ನಾನ್ಸೆನ್ಸ್ ಅಥವಾ ಪೇಶೆಂಟ್ ಹೊಟ್ಟೆಗೆ ಏನೂ ಬಿದ್ದಿಲ್ಲ, ಅದಕ್ಕೇ ಕಾಯಿಲೆ, ಹೆದರಬೇಕಾಗಿಲ್ಲ, ಸರಿ ಹೋಗತ್ತೆ,’ ಅಂದ. ಝಾಸ್ಸಿಮೋವ್ ಈಗ ಒಳ್ಳೆಯ ಡಾಕ್ಟರು ಗೊತ್ತಾ!’ ಎಂದು ಹೇಳಿ ಏಜೆಂಟನ ಕಡೆಗೆ ತಿರುಗಿ, ‘ನಿಮ್ಮನ್ನ ಬಹಳ ಹೊತ್ತು ಕಾಯಿಸಲ್ಲ ನಾವು. ಕೆಲಸ ಏನು, ದಯವಿಟ್ಟು ಹೇಳತೀರಾ? ನೋಡು, ರೋದ್ಯಾ, ಇವರ ಆಫೀಸಿನಿಂದ ಎರಡನೆಯ ಸಾರಿ ಜನರನ್ನ ಕಳಿಸುತ್ತಾ ಇರುವುದು. ಮೊದಲು ಬಂದಿದ್ದವರು ಇವರಲ್ಲ, ಬೇರೆ ಯಾರೋ ಬಂದಿದ್ದರು, ಅವರ ಜೊತೆ ಮಾತಾಡಿದೆ. ನೋಡಿ, ಇವರೇ, ಹೋದ ಸಲ ಬಂದಿದ್ದವರು ಯಾರು?’

‘ಎರಡು ದಿನದ ಹಿಂದೆ ಅಂದುಕೊಂಡರೆ… ಸರಿ ಸಾರ್. ಬಂದಿದ್ದವರು ಅಲೆಕ್ಸಿ ಸೆಮ್ಯೊನೊವಿಚ್. ಅವರೂ ನಮ್ಮ ಆಫೀಸಿನಲ್ಲೇ ಇದಾರೆ, ಸಾರ್’.

‘ಅವರು ನಿಮಗಿಂತ ಬುದ್ದಿವಂತರು, ಹೌದಾ?

‘ಹೌದು, ಸಾರ್. ಅವರು ಮಿಲಿಟರಿಯಲ್ಲಿದ್ದವರು.’

‘ಅದ್ಭುತ. ಮುಂದಕ್ಕೆ ಹೇಳಿ.’

‘ಈಗ ನೋಡಿ ಸಾರ್, ನಿಮ್ಮ ತಾಯಿಯವರ ಕೋರಿಕೆಯ ಮೇರೆಗೆ ಅಫಾನಸೆ ಇವಾನೊವಿಚ್ ವಖ್ರುಶಿನ್ ಅವರ ಮೂಲಕ ನಮ್ಮ ಆಫೀಸಿಗೆ ಒಂದು ಆರ್ಡರು ಬಂದಿದೆ. ನೀವು ಅವರ ಹೆಸರು ಕೇಳಿದ್ದೀರಿ ಅಲ್ಲವಾ ಸಾರ್?’ ಏಜೆಂಟನು ನೇರವಾಗಿ ರಾಸ್ಕೋಲ್ನಿಕೋವ್‍ ಗೆ ಹೇಳುತ್ತಿದ್ದ. ‘ನೀವು ಅರ್ಥಮಾಡಿಕೊಳ್ಳುವ ಸ್ಥಿತಿಯಲ್ಲಿದ್ದರೆ ನಾನು ನಿಮಗೆ ಈ ಮೊದಲು ಕೊಟ್ಟ ಹಾಗೇ ಮೂವತ್ತೈದು ರೂಬಲ್ ಕೊಡಬೇಕು, ಸಾರ್. ಯಾಕೆಂದರೆ. ನಿಮ್ಮ ತಾಯಿಯವರ ಕೋರಿಕೆಯ ಮೇರೆಗೆ ಅಂತ ನೋಟೀಸನ್ನು ಅಫಾನಸೆ ಇವಾನೊವಿಚ್ ಅವರು ಸೆಮ್ಯೋನ್ ಸೆಮ್ಯೋನ್ ಸೆಮ್ಯೋನೊವಿಚ್ ಅವರಿಗೆ ನೀಡಿದ್ದಾರೆ. ನಿಮಗೆ ವಕ್ರೂಶಿನ್ ಪರಿಚಯ ಇದೆಯೇ, ಸಾರ್?’

‘ಹ್ಞೂಂ… ಜ್ಞಾಪಕ ಇದೆ… ವಖ್ರೂಶಿನ್…’ ರಾಸ್ಕೋಲ್ನಿಕೋವ್ ವಿಷಾದದ ದನಿಯಲ್ಲಿ ಅಂದ.

‘ಕೇಳಿದಿರಾ? ಅವನಿಗೆ ವ್ಯಾಪಾರಿ ವಖ್ರೂಶಿನ್ ಪರಿಚಯ ಇದೆ!’ ರಝುಮಿಖಿನ್ ಉದ್ಗಾರ ತೆಗೆದ. ‘ಅವನ ಬುದ್ಧಿ ಈಗ ತಿಳಿಯಾಗಿದೆ! ಹಾಗೆ ನೋಡಿದರೆ, ನೀವೂ ಬುದ್ಧಿವಂತರೇ ಸಾರ್. ಬುದ್ಧಿವಂತರ ಮಾತು ಕೇಳುವುದಕ್ಕೆ ಯಾವಾಗಲೂ ಖುಷಿಯಾಗತ್ತೆ.’

‘ಅವರೇ ಸಾರ್, ವಖ್ರೂಶಿನ್ ಅಫಾನ್ಸೆ ಇವಾನೊವಿಚ್ ನಿಮ್ಮ ತಾಯಿಯವರ ಕೋರಿಕೆಯ ಮೇರೆಗೆ, ನಿಮ್ಮ ತಾಯಿಯವರು ಆಗಲೇ ಒಂದು ಸಾರಿ ಇಂಥ ಕೋರಿಕೆ ಮಂಡಿಸಿದ್ದರು, ಮತ್ತೆ ಹಿಂದಿನಂತೆ ಈಗಲೂ ವಖ್ಯೂಶಿನ್ ಅವರು ನಿಮಗೆ ಮೂವತ್ತೈದು ರೂಬಲ್ ಕೊಡಬೇಕೆಂದು ಸೆಮ್ಯೋನ್ ಸೆಮ್ಯೊನೊವಿಚ್ ಅವರಿಗೆ ಪತ್ರ ಕಳಿಸಿದರು, ಮುಂದಿನ ಉತ್ತಮ ದಿನಗಳ ನಿರೀಕ್ಷೆಯಲ್ಲಿ ನಿಮಗೆ ಈ ಹಣ ನೀಡಬೇಕೆಂದು ತಿಳಿಸಿದ್ದಾರೆ.’

‘ನೀವು ಹೇಳಿದ ‘ಮುಂದಿನ ಉತ್ತಮ ದಿನಗಳು’ ಅನ್ನುವ ಮಾತು ಕೇಳುವುದಕ್ಕೆ ಬಹಳ ಹಿತವಾಗಿತ್ತು. ‘ನಿಮ್ಮ ತಾಯಿ’ ಅನ್ನುವ ಮಾತೂ ಅಷ್ಟೇ. ನಿಮಗೇನನ್ನಿಸುತ್ತದೆ? ಇವನು ಪೂರಾ ಸ್ವಸ್ಥನಾಗಿದ್ದಾನೋ, ಇಲ್ಲವೋ? ಏನನ್ನುತ್ತೀರಿ ನೀವು?’

‘ಅದನ್ನ ತಗೊಂಡು ನನಗೇನೂ ಆಗಬೇಕಾಗಿಲ್ಲ, ಸಾರ್. ಇವರದೊಂದು ಸಹಿ ಮಾಡಿದರೆ ಸಾಕು.

‘ಸಹಿ ತಾನೇ, ಗೀಚಿಕೊಡುತ್ತಾನೆ ಬಿಡಿ. ಸಹಿ ತೆಗೆದುಕೊಳ್ಳುವುದಕ್ಕೆ ಪುಸ್ತಕ, ಅಂಥದೇನಾದರೂ ತಂದಿದ್ದೀರಾ?’

‘ಇಗೊಳ್ಳಿ, ಸಾರ್. ಇಲ್ಲೇ ಇದೆ ಪುಸ್ತಕ.’

‘ಇಲ್ಲಿ ಕೊಡಿ ಅದನ್ನ. ರೋದ್ಯಾ, ಏಳು, ಕೂತುಕೋ. ನಿನ್ನ ಹಿಡಿದುಕೊಳ್ಳತೇನೆ. ರಾಸ್ಕೋಲ್ನಿಕೋವ್ ಅಂತ ಸೈನು ಗೀಚಿಕೊಡು. ಅಣ್ಣಾ ಪೆನ್ನು ತಗೋ, ಕರಡಿಗೆ ಹಲಸಿನ ಹಣ್ಣು ಬೇಕಾಗಿರುವುದಕ್ಕಿಂತ ಅರ್ಜೆಂಟಾಗಿ ನಮಗೀಗ ದುಡ್ಡು ಬೇಕಾಗಿದೆ.’

‘ಬೇಕಾಗಿಲ್ಲ,’ ಅನ್ನುತ್ತ ರಾಸ್ಕೋಲ್ನಿಕೋವ್ ಪೆನ್ನನ್ನು ದೂರ ತಳ್ಳಿದ.

‘ಏನು ಬೇಕಾಗಿಲ್ಲ?’

‘ನಾನು ಸೈನು ಹಾಕಲ್ಲ.’

‘ಅಯ್ಯೋ, ದೆವ್ವಾ. ಸೈನು ನಮಗೆ ಬೇಕೇ ಬೇಕು.’
‘ನನಗೆ ಬೇಕಾಗಿಲ್ಲ… ದುಡ್ಡು ಬೇಡ…’

‘ನಿನಗೆ ದುಡ್ಡು ಬೇಡಾ!… ಅಣ್ಣಾ ಅದು ಸುಳ್ಳು. ಬೇಕಾದರೆ ನಾನೇ ಸಾಕ್ಷಿ ಹಾಕತೇನೆ! ಚಿಂತೆ ಬೇಡ… ಅವನ ಬುದ್ದಿ ಎಲ್ಲೋ ಹುಲ್ಲು ಮೇಯತಾ ಇದೆ ಅಷ್ಟೆ… ಅವನು ಎಚ್ಚರವಾಗಿದ್ದಾಗ ಒಂದೊಂದು ಸಾರಿ ಹೀಗಾಗತ್ತೆ… ನೀವು ಬುದ್ಧಿವಂತರು, ನೀವು ಅವನಿಗೆ ದಾರಿ ತೋರಿಸಬಹುದು. ಅಂದರೆ, ಅವನ ಕೈ ಹಿಡಿದು ಸೈನು ಮಾಡಿಸಬಹುದು, ಸೈನು ಹಾಕತಾನೆ…’

‘ಇವರು ಹುಷಾರಾದ ಮೇಲೆ ಬೇಕಾದರೆ ಇನ್ನೊಂದು ಸಾರಿ ಬರತೇನೆ.’

‘ಇನ್ನೊಂದು ಸಾರಿ ನಿಮಗೆ ಯಾಕೆ ತೊಂದರೆ… ನೀವು ಬುದ್ಧಿವಂತರು… ನೋಡು, ರೋದ್ಯಾ, ಮನೆಗೆ ಬಂದವರನ್ನ ಕಾಯಿಸಬಾರದು ನೋಡು, ಅವರು ಕಾಯುತ್ತಾ ಇದಾರೆ…’ ಅನ್ನುತ್ತಾ ಅವನು ರಾಸ್ಕೋಲ್ನಿಕೋವ್‍ ನ ಕೈ ಹಿಡಿದು ಸಹಿ ಹಾಕಿಸುವುದಕ್ಕೆ ಮುಂದಾದ.

‘ನಾನೇ ಮಾಡತೀನಿ; ಅನ್ನುತ್ತ ರಾಸ್ಕೋಲ್ನಿಕೋವ್ ಪುಸ್ತಕದಲ್ಲಿ ಸಹಿ ಮಾಡಿದ.

ಏಜೆಂಟು ದುಡ್ಡನ್ನು ಅಲ್ಲಿಟ್ಟು ಹೊರಟು ಹೋದ.

ʼಭೇಷ್! ಅಣ್ಣಾ ಈಗ ಹೊಟ್ಟೆಗೆ ಏನಾದರೂ ತಗೊಳ್ಳುತ್ತೀಯಾ?’

‘ಹ್ಞೂಂ,’ ಅಂದ ರಾಸ್ಕೋಲ್ನಿಕೋವ್.

‘ಸೂಪ್ ಇದೆಯಾ?’

‘ಇದೆ, ನಿನ್ನೆಯದು,’ ಅಂದಳು ನಸ್ತಾಸ್ಯಾ. ಅಷ್ಟು ಹೊತ್ತೂ ಅವಳು ಅಲ್ಲೇ ನಿಂತಿದ್ದಳು.

‘ಆಲೂ ಮತ್ತೆ ಅನ್ನದ ಜೊತೆಗೆ?;

‘ಹ್ಞೂಂ, ಆಲೂ ಮತ್ತೆ ಅನ್ನದ ಜೊತೆಗೆ.’

‘ಏನು ಅಡುಗೆ ಮಾಡಿರತೀಯ ಗೊತ್ತಿದೆ. ಸೂಪ್ ಜೊತೆಗೆ ಸ್ವಲ್ಪ ಟೀ ತಗೊಂಡು ಬಾ.’

‘ಸರಿ.’

ಗಹನವಾದ ಆಶ್ಚರ್ಯ, ಅರ್ಥವಿರದ ಮೊಂಡು ಭಯದಲ್ಲಿ ರಾಸ್ಕೋಲ್ನಿಕೋವ್ ಎಲ್ಲವನ್ನೂ ನೋಡುತ್ತಿದ್ದ. ಏನೂ ಮಾತಾಡಬಾರದು, ಮುಂದೇನಾಗುತ್ತದೋ ನೋಡಬೇಕು ಎಂದು ತೀರ್ಮಾನ ಮಾಡಿಕೊಂಡ. ‘ಸನ್ನಿ ಏನೂ ಹಿಡಿದ ಹಾಗಿಲ್ಲ ನನಗೆ. ಎಲ್ಲಾನೂ ನಿಜ ಅನ್ನಿಸತಾ ಇದೆ…’ ಅಂದುಕೊಂಡ.

ಎರಡು ನಿಮಿಷದಲ್ಲಿ ನಸ್ತಾಸ್ಯಾ ಸೂಪ್ ತಂದಳು. ಇಗೋ ಟೀ ತಂದೆ, ಒಂದು ನಿಮಿಷ ಅಂದಳು. ಸೂಪ್ ಜೊತೆಗೆ ಎರಡು ಚಮಚ, ಎರಡು ತಟ್ಟೆ ಬಂದಿದ್ದವು. ಬೀಫ್‍ ಗೆ ಹಾಕಿಕೊಳ್ಳುವುದಕ್ಕೆ ಉಪ್ಪು, ಕಾಳುಮೆಣಸಿನ ಪುಡಿ, ಸಾಸುವೆ ಇತ್ಯಾದಿಗಳೆಲ್ಲ ಇದ್ದವು. ರಾಸ್ಕೋಲ್ನಿಕೋವ್‍ ನ ರೂಮಿನಲ್ಲಿ ಇಷ್ಟು ಅಚ್ಚುಕಟ್ಟಾಗಿ, ಇಷ್ಟು ವ್ಯವಸ್ಥಿತವಾಗಿ ಊಟ ಬಡಿಸಿ ಯಾವುದೋ ಕಾಲವಾಗಿತ್ತು. ಟೇಬಲ್ಲಿನ ಮೇಲೆ ಹಾಸಿದ ಬಟ್ಟೆ ಸ್ವಚ್ಛವಾಗಿತ್ತು.

‘ಓನರಮ್ಮನ್ನ ಕೇಳಿ ಸ್ವಲ್ಪ ಬಿಯರ್ ತಂದರೆ ಚೆನ್ನಾಗಿರತ್ತೆ, ನಸ್ತಾಸ್ಯಾ’.

‘ಇವನ ಜಾಣತನ ನೋಡು,’ ನಸ್ತಾಸ್ಯಾ ಗೊಣಗಿಕೊಳ್ಳುತ್ತ ಬಿಯರ್ ತರಲು ಹೋದಳು.

ರಾಸ್ಕೋಲ್ನಿಕೋವ್ ಮೈ ಬಿಗಿ ಹಿಡಿದುಕೊಂಡು ಸುತ್ತಲೂ ಕಣ್ಣಾಡಿಸುತ್ತಿದ್ದ. ರಝುಮಿಖಿನ್ ಅವನ ಪಕ್ಕದಲ್ಲಿ ಸೋಫಾದ ಮೇಲೆ ಅಸಡ್ಡಾಳ ಕರಡಿಯ ಹಾಗೆ ಕೂತಿದ್ದ. ನೆಟ್ಟಗೆ ಕೂರುವುದಕ್ಕೆ ರಾಸ್ಕೋಲ್ನಿಕೋವ್‍ ಗೆ ಶಕ್ತಿ ಇತ್ತು. ಆದರೂ ರಝುಮಿಖಿನ್ ಎಡಗೈಯನ್ನು ಚಾಚಿ, ಗೆಳೆಯನ ತಲೆಯನ್ನು ತೋಳಿಗೆ ಆನಿಸಿಕೊಂಡು, ಬಲಗೈಯಲ್ಲಿದ್ದ ಚಮಚದಿಂದ ಸೂಪ್ ತೆಗೆದುಕೊಂಡು, ನಾಲಗೆ ಸುಡದಿರಲೆಂದು ಒಮ್ಮೆ ಅದನ್ನು ಉಫ್ ಎಂದು ಊದಿ ಬಾಯಿಗೆ ಇಡುತ್ತಿದ್ದ. ಸೂಪ್ ಮಾತ್ರ ಉಗುರು ಬೆಚ್ಚಗಿತ್ತು ಅಷ್ಟೇ. ರಾಸ್ಕೋಲ್ನಿಕೋವ್ ಒಂದು, ಎರಡು, ಮೂರು ಚಮಚ ಸೂಪ್ ಗಬಗಬನೆ ನುಂಗಿದ. ರಝುಮಿಖಿನ್ ತಿನ್ನಿಸುವುದನ್ನು ತಟ್ಟನೆ ನಿಲ್ಲಿಸಿ ‘ಇನ್ನೇನು ತಗೊಳ್ಳುವುದಿದ್ದರೂ ಝೋಸಿಮೋವ್‍ ನನ್ನು ಕೇಳಬೇಕು,’ ಅಂದ.

ನಸ್ತಾಸ್ಯಾ ಎರಡು ಬಿಯರ್ ಬಾಟಲು ಹಿಡಿದು ಬಂದಳು.

‘ಟೀ ಬೇಕಾ ನಿಮಗೆ?’

‘ನನಗೆ ಬೇಕು.’

‘ಟೀ ತಗೊಂಡು ಬಾ, ನಸ್ತಾಸ್ಯಾ. ಯಾಕೆಂದರೆ ಟೀ ಕುಡಿಯುವುದಕ್ಕೆ ಡಾಕ್ಟರನ್ನ ಕೇಳಬೇಕಾಗಿಲ್ಲ ಅನ್ನಿಸತ್ತೆ. ಅಲ್ಲಿಯವರೆಗೆ ಬಿಯರ್ ಕುಡೀತೇನೆ.’ ಹೋಗಿ ಕುರ್ಚಿಯ ಮೇಲೆ ಕೂತ, ಸೂಪು, ಬಿಯರು ತನ್ನತ್ತ ಎಳೆದುಕೊಂಡ, ಮೂರು ದಿನದಿಂದ ಹೊಟ್ಟೆಗೆ ಏನೂ ಇಲ್ಲವೇನೋ ಅನ್ನುವ ಹಾಗೆ ತಿನ್ನುವುದಕ್ಕೆ ಶುರು ಮಾಡಿದ.

‘ಬ್ರದರ್ ರೋದ್ಯಾ, ಈಗ ನನಗೆ ದಿನವೂ ಇಂಥ ಊಟ ಸಿಗತ್ತೆ,’ ಬಾಯಲ್ಲಿ ತುರುಕಿಕೊಂಡಿದ್ದ ಬೀಫ್ ಎಷ್ಟು ಅವಕಾಶಕೊಟ್ಟಿತೋ ಅಷ್ಟು ಗೊಣಗು ದನಿಯಲ್ಲಿ ಹೇಳಿದ. ‘ಎಲ್ಲಾನೂ ನಿಮ್ಮ ಓನರಮ್ಮ ಪಾಶೆಂಕಾ ಇದಾಳಲ್ಲಾ ಅವಳ ಕೃಪೆ. ಅವಳಿಗೆ ನನ್ನ ಮೇಲೆ ಬಹಳ ಗೌರವ ಇದೆ. ಊಟ ಕೊಡಿ ಅಂತ ನಾನೇನು ಕೇಳಲ್ಲ, ಕೊಟ್ಟರೆ ಬೇಡ ಅಂತಲೂ ಅನ್ನಲ್ಲ. ಇಗೋ, ನಸ್ತಾಸ್ಯ ಟೀ ತಂದಳು. ಎಷ್ಟು ಚುರುಕು ಇವಳು! ಸ್ವಲ್ಪ ಬಿಯರ್ ತಗೊಳ್ಳುತೀಯಾ ನಸ್ತಾಸ್ಯ?’

‘ದೆಯ್ಯ ಹಿಡಿಯಲಿ ನಿನ್ನಾ!’

‘ಹಾಗಾದರೆ ಸ್ವಲ್ಪ ಟೀ?’

‘ಟೀನ ಯಾವತ್ತೂ ಬೇಡ ಅನ್ನಲ್ಲ.’

‘ಬಗ್ಗಿಸಿಕೋ ಸ್ವಲ್ಪ. ಬೇಡ, ತಾಳು. ನಾನೇ ನಿನಗೆ ಟೀ ಹಾಕಿ ಕೊಡತೇನೆ. ಇಲ್ಲಿ ಟೇಬಲ್ ಮುಂದೆ ಕೂತುಕೋ.’

ಟೇಬಲ್ಲು ಸರಿಯಾಗಿ ಅಣಿಮಾಡಿ ಅವಳಿಗಾಗಿ ಟೀ ಬಗ್ಗಿಸಿ, ತನಗೂ ಬಗ್ಗಿಸಿಕೊಂಡು, ತನ್ನ ತಟ್ಟೆ ಅಲ್ಲೇ ಬಿಟ್ಟು, ಸೀದ ಹೋಗಿ ಮತ್ತೆ ಸೋಫಾ ಮೇಲೆ ಕೂತ. ಮೊದಲಿನ ಹಾಗೆ ಎಡಗೈಯನ್ನು ಕಾಯಿಲೆ ಮನುಷ್ಯನ ತಲೆಯ ಹಿಂದೆ ಆಸರೆಯಾಗಿ ಕೊಟ್ಟು. ಅವನನ್ನು ಎಬ್ಬಿಸಿ, ಚಮಚದಲ್ಲಿ ಟೀ ಕುಡಿಸುವುದಕ್ಕೆ ಶುರು ಮಾಡಿದ. ಮತ್ತೆ, ಮೊದಲಿನ ಹಾಗೇ ಒಂದೊಂದು ಚಮಚ ಟೀಯನ್ನೂ ಮತ್ತೆ ಮತ್ತೆ ಊದಿ, ಹೀಗೆ ಊದಿದರೆ ಮಾತ್ರ ಅವನ ಕಾಯಿಲೆ ವಾಸಿಯಾಗುತ್ತದೋ ಅನ್ನುವಂಥ ಉತ್ಸಾಹದಲ್ಲಿ ಊದಿ, ಟೀ ಕುಡಿಸಿದ. ರಾಸ್ಕೋಲ್ನಿಕೋವ್ ವಿರೋಧ ತೋರದೆ ಸುಮ್ಮನಿದ್ದ. ಬೇರೆಯವರ ಸಹಾಯವಿಲ್ಲದೆ ತಾನೇ ಏಳುವಷ್ಟು, ಎದ್ದು ಸೋಫಾಮೇಲೆ ಕೂರುವಷ್ಟು, ಚಮಚ ಮಾತ್ರವಲ್ಲ ಚಹಾ ಕಪ್ ಕೂಡ ಹಿಡಿಯುವಷ್ಟು ಶಕ್ತಿ ಕೂಡಿದೆ ಎಂದು ಅವನಿಗನ್ನಿಸುತ್ತಿತ್ತು. ಸದ್ಯಕ್ಕೆ ತನ್ನ ಶಕ್ತಿಯನ್ನು ಅಡಗಿಸಿಟ್ಟುಕೊಳ್ಳುವುದು, ಅಗತ್ಯಬಿದ್ದರೆ ದುರ್ಬಲನ ಹಾಗೆ ನಟಿಸುವುದು, ತಾನಿನ್ನೂ ಚೇತರಿಸಿಕೊಂಡಿಲ್ಲ ಅನ್ನುವ ಹಾಗೆ ಇದ್ದುಕೊಂಡು ಅಲ್ಲಿ ನಡೆಯುತ್ತಿರುವುದನ್ನೆಲ್ಲ ನೋಡುವುದು ಕೇಳುವುದು ಒಳ್ಳೆಯದೆಂದು ಅವನಿಗೆ ತೋರಿತ್ತು.

ಅದು ವಿಚಿತ್ರವಾದ, ಪ್ರಾಣಿಗಳಿಗೆ ಬಲುಮಟ್ಟಿಗೆ ಸಹಜವಾದ ತಂತ್ರ. ಆದರೂ ಮನಸ್ಸಿನಲ್ಲಿ ಹುಟ್ಟುತ್ತಿದ್ದ ಅಸಹ್ಯವನ್ನು ತಡೆದುಕೊಳ್ಳಲಾಗಲಿಲ್ಲ. ಹತ್ತಾರು ಚಮಚ ಟೀ ಹೀರಿದ. ತಟಕ್ಕನೆ ತಲೆ ಬಿಡಿಸಿಕೊಂಡ, ಸಿಡುಕುತ್ತಾ ಚಮಚವನ್ನು ದೂರ ತಳ್ಳಿದ, ದಿಂಬಿನ ಮೇಲೆ ತಲೆ ಇಟ್ಟ. ತಲೆಯ ಕೆಳಗೆ ನಿಜವಾದ ದಿಂಬುಗಳಿರುವುದು. ದಿಂಬುಗಳಿಗೆ ಸ್ವಚ್ಛವಾದ ಚೀಲ ಹಾಕಿರುವುದು ತಿಳಿಯಿತು.

‘ಓನರಮ್ಮ ಪಾಶೆನ್ಕಾ ನಮಗೆ ಇವತ್ತು ಒಂದಿಷ್ಟು ರಾಸ್ಪ್ ಬೆರಿ ಕಳಿಸಬೇಕು. ಇವನಿಗೆ ಹಣ್ಣಿನ ರಸ ಕುಡಿಬಹುದು,’ ಅಂದ ರಝುಮಿಖಿನ್. ಅವನು ಮತ್ತೆ ಕುರ್ಚಿ ಎತ್ತಿಕೊಂಡು ಹೋಗಿ ಮೇಜಿನ ಮುಂದೆ ಕೂತು ಸೂಪ್ ಹೀರುತ್ತ, ಬಿಯರ್ ಕುಡಿಯುತ್ತ ಇದ್ದ.

‘ರಾಸ್ಪ್ಬೆರಿ ಎಲ್ಲಿಂದ ತರಬೇಕು ಅವಳು?’ ಹಲ್ಲಲ್ಲಿ ಸಕ್ಕರೆಯ ಕ್ಯೂಬು ಕಚ್ಚಿಕೊಂಡು ಅಂಗೈಯ ಮೇಲಿಟ್ಟುಕೊಂಡಿದ್ದ ಸಾಸರಿನಲ್ಲಿದ್ದ ಟೀಯನ್ನು ಹೀರುತ್ತಾ ನಸ್ತಾಸ್ಯಾ ಕೇಳಿದಳು.

‘ಅಂಗಡಿಯಿಂದ! ರಾಸ್ಪ್ಬೆರಿ ಇನ್ನೆಲ್ಲಿ ಸಿಗತ್ತೆ ಹೇಳು. ನೋಡು ರೋದ್ಯಾ, ನೀನಿಲ್ಲದೆ ಇರುವಾಗ ಇಲ್ಲಿ ದೊಡ್ಡ ಕಥೆ ನಡೆದಿದೆ. ಅವತ್ತು ನಿಮ್ಮ ಮನೆ ಎಲ್ಲಿದೆ ಅಂತ ಕೂಡ ನನಗೆ ಹೇಳದೆ ನಮ್ಮ ಮನೆಯಿಂದ ತಲೆತಿರುಕನ ಹಾಗೆ ಹೊರಟು ಹೋದೆಯಲ್ಲಾ… ನನ್ನ ತಲೆ ಕೆಟ್ಟು ಹೋಯಿತು. ನಿನ್ನ ಪತ್ತೆ ಮಾಡಿ ಶಿಕ್ಷೆಕೊಡಬೇಕು ಅಂತ ತೀರ್ಮಾನ ಮಾಡಿದೆ. ಅವತ್ತೇ ಹೊರಟು ನಡೆದೂ ನಡೆದು ಸುತ್ತೀ ಸುತ್ತೀ ಸಿಕ್ಕ ಸಿಕ್ಕವರನ್ನೆಲ್ಲ ಕೇಳಿದೆ! ನಿನ್ನ ಈ ಅಡ್ರೆಸ್ಸು ಮರೆತು ಹೋಗಿದ್ದೆ ಅಂತಲ್ಲ, ಗೊತ್ತೇ ಇರಲಿಲ್ಲ ಅನ್ನು! ನೀನು ಮೊದಲಿದ್ದ ಖರ್ಲಮೋವ್ ಮನೆ ಐದು ಮೂಲೆ ಸರ್ಕಲಿನಲ್ಲಿದೆ ಅಂತ ಗೊತ್ತಿತ್ತು. ಅಲ್ಲಿ ಹೋಗಿ ಆ ಮನೆ ಹುಡುಕಿದೆ. ಕೊನೆಗೆ ಅದು ಖರ್ಲಮೋವ್ ಮನೆಯಲ್ಲ ಬುಚ್ ಮನೆ ಅನ್ನುವುದು ಗೊತ್ತಾಯಿತು. ಹೆಸರುಗಳು ಕೈ ಕೊಡುತ್ತವೆ ನೋಡು! ಸಿಟ್ಟು ಬಂತು. ನಾಳೆ ಅಡ್ರೆಸ್ ಬ್ಯೂರೋಗೆ ಹೋಗಿ ಕೇಳತೇನೆ ಅಂದುಕೊಂಡೆ. ಅವರು ಎರಡೇ ನಿಮಿಷದಲ್ಲಿ ನಿನ್ನ ಅಡ್ರೆಸು ಹೇಳಿದರು. ಅವರು ನಿನ್ನ ಹೆಸರು ದಾಖಲೆ ಮಾಡಿಟ್ಟುಕೊಂಡಿದಾರೆ.’

‘ನನ್ನ ಹೆಸರು! ದಾಖಲೆ?’

‘ಸುಮ್ಮನೆ ಆ ದೊಡ್ಡ ಕಥೆಯೆಲ್ಲಾ ಯಾಕೆ. ಕೊನೆಗೆ ಇಲ್ಲಿಗೆ ಬಂದೆ. ಬಂದ ತಕ್ಷಣ ನಿನ್ನ ವ್ಯವಹಾರ ಎಲ್ಲಾನೂ ತಿಳಿಯಿತು. ಬ್ರದರ್ ನಿನ್ನ ವ್ಯವಹಾರ ಎಲ್ಲಾ, ಪೂರಾ ಗೊತ್ತಿದೆ. ಎಷ್ಟು ಕಷ್ಟಪಟ್ಟೆ ಅಂತ ಈ ಹುಡುಗಿ ನಸ್ತಾಸ್ಯಾಗೆ ಗೊತ್ತು. ಪೋಲೀಸು ಮುಖ್ಯಸ್ಥ ನಿಕೊದಿಮ್ ಫೋಮಿಚ್ ಪರಿಚಯ ಮಾಡಿಕೊಂಡೆ, ಅವರು ಲೆಫ್ಟಿನೆಂಟ್ ಇಲ್ಯಾ ಪೆಟ್ರೊವಿಚ್‍ ನನ್ನು ತೋರಿಸಿದರು. ಅವರು ಗುಮಾಸ್ತ ಝಮ್ಯತೋವ್ ಅಲೆಕ್ಸಾಂಡರ್ ಹತ್ತಿರ ಕಳಿಸಿದರು. ಅಲ್ಲಿಂದ ಹೊರಟು ಈ ಅಪಾರ್ಟ್ಮೆಂಟಿನ ವಾಚ್‍ಮ್ಯಾನ್‍ ನ ಮಾತಾಡಿಸಿದೆ. ಕೊನೆಗೆ ನಿಮ್ಮ ಮನೆಯ ಓನರಮ್ಮ ಓನರಮ್ಮ ಪಾಶೆನ್ಕಾ ಪರಿಚಯ ಆಯಿತು. ಈ ಹುಡುಗಿ ನಸ್ತಾಸ್ಯಾಗೆ ಎಲ್ಲಾ ಗೊತ್ತು…’

‘ಹ್ಞೂಂ, ಬೆಲ್ಲದಂಥ ಮಾತಾಡಿ ಅವಳನ್ನ ಬುಟ್ಟಿಗೆ ಹಾಕಿಕೊಂಡ!’ ತುಂಟತನದಲ್ಲಿ ಹಲ್ಲು ಕಿರಿಯುತ್ತ ನಸ್ತಾಸ್ಯಾ ಗೊಣಗಿದಳು.

‘ಅದನ್ನ ಟೀಗೆ ಹಾಕಿಕೋ, ನಸ್ತಾಸ್ಯಾ ನಿಕಿಫೊರೋನಾ.’

‘ಹೋಗೋಲೋ ನಾಯೀ!’ ಅನ್ನುತ್ತ ಜೋರಾಗಿ ನಕ್ಕಳು. ನಗು ನಿಂತ ಮೇಲೆ, ‘ನಾನು ನಿಕಿಫೊರೋವ್ನಾ ಅಲ್ಲ, ಪೆಟ್ರೋವ್ನಾ,’ ಅಂದಳು.

‘ಬಹಳ ಸಂತೋಷ, ಮೇಡಂ.

‘ಸರೀ ಬ್ರದರ್, ಇಲ್ಲಿರುವವರಿಗೆಲ್ಲ ಕರೆಂಟು ಕೊಟ್ಟು ಅವರ ತಲೆಯಲ್ಲಿ ತುಂಬಿರುವ ಜೇಡರಬಲೆ ಗುಡಿಸಿಹಾಕಬೇಕು, ಕರೆಂಟು ಕೊಟ್ಟು ಎಲ್ಲಾರನ್ನೂ ಬ್ಲಾಸ್ಟ್ ಮಾಡಬೇಕು ಅಂದುಕೊಂಡಿದ್ದೆ. ಓನರಮ್ಮ ಪಾಶೆನ್ಕ ತಡೆದಳು. ಅವಳು ಅಷ್ಟು… ಅಷ್ಟು ಮನಸ್ಸನ್ನ ಗೆಲ್ಲುವಂಥವಳು ಅಂದುಕೊಂಡಿರಲಿಲ್ಲ… ನಿನಗೇನು ಅನ್ನಿಸತ್ತೆ, ಬ್ರದರ್?’

ರಾಸ್ಕೋಲ್ನಿಕೋವ್ ಸುಮ್ಮನಿದ್ದ. ಗೆಳೆಯನ ಮುಖವನ್ನು ದೃಷ್ಟಿ ಕದಲಿಸದೆ ದಿಟ್ಟಿಸುತ್ತಲೇ ಇದ್ದ. ಕಣ್ಣಲ್ಲಿ ಕಳವಳ ತುಂಬಿಕೊಂಡು ದಿಟ್ಟಿಸುತ್ತಲೇ ಇದ್ದ. ಅವನ ಮೌನದಿಂದ ಒಂದಿಷ್ಟೂ ಕಸಿವಿಸಿಪಡದೆ, ತನಗೆ ಅವನಿತ್ತ ಉತ್ತರ ಸಮಂಜಸವಾಗಿತ್ತು ಅನ್ನುವ ಹಾಗೆ, ‘ಹೌದು, ಹೌದು. ಎಲ್ಲಾ ಥರದಲ್ಲೂ ಒಳ್ಳೆ ಹೆಂಗಸು ಅವಳು,’ ಅಂದ ರಝುಮಿಖಿನ್.

ಗಹನವಾದ ಆಶ್ಚರ್ಯ, ಅರ್ಥವಿರದ ಮೊಂಡು ಭಯದಲ್ಲಿ ರಾಸ್ಕೋಲ್ನಿಕೋವ್ ಎಲ್ಲವನ್ನೂ ನೋಡುತ್ತಿದ್ದ. ಏನೂ ಮಾತಾಡಬಾರದು, ಮುಂದೇನಾಗುತ್ತದೋ ನೋಡಬೇಕು ಎಂದು ತೀರ್ಮಾನ ಮಾಡಿಕೊಂಡ. ‘ಸನ್ನಿ ಏನೂ ಹಿಡಿದ ಹಾಗಿಲ್ಲ ನನಗೆ. ಎಲ್ಲಾನೂ ನಿಜ ಅನ್ನಿಸತಾ ಇದೆ…’ ಅಂದುಕೊಂಡ.

‘ಅಯ್ಯೋ ಮೃಗವೇ!’ ಮತ್ತೆ ಅಂದಳು ನಸ್ತಾಸ್ಯಾ. ಅವರಿಬ್ಬರ ಮಾತುಕತೆಯಿಂದ ಅವಳಿಗೆ ಹೇಳಲಾಗದಷ್ಟು ಖುಷಿಯಾದದ್ದು ತಿಳಿಯುತ್ತಿತ್ತು.

‘ಓನರಮ್ಮನ ಜೊತೆಯಲ್ಲಿ ಹೇಗೆ ವ್ಯವಹಾರ ಮಾಡಬೇಕು ಅನ್ನುವುದು ನಿನಗೆ ಗೊತ್ತೇ ಆಗಲಿಲ್ಲ ಬ್ರದರ್. ಅವಳ ಜೊತೆ ನೀನು ನಡಕೊಂಡ ರೀತಿ ಸರಿ ಇಲ್ಲ. ಅವಳ ಸ್ವಭಾವ ಹೀಗೆ ಅಂತ ಹೇಳುವುದಕ್ಕೆ ಆಗುವುದೇ ಇಲ್ಲ! ಅವಳ ಸ್ವಭಾವ ಹಾಗಿರಲಿ… ಈಗ ನೋಡು, ನಿನಗೆ ಕಳಿಸುವ ಊಟ ನಿಲ್ಲಿಸುವುದಕ್ಕೆ ಅವಳಿಗೆಷ್ಟು ಧೈರ್ಯ? ಮತ್ತೇ ಆ ಪ್ರಾಮಿಸರಿ ನೋಟು? ಅಲ್ಲಾ, ಹಿಂದೆ ಮುಂದೆ ನೋಡದೆ ಪ್ರಾಮಿಸರಿಗೆ ರುಜು ಹಾಕುತ್ತೀಯಲ್ಲ ನೀನು! ಅವಳ ಮಗಳು ನಟಾಲಿಯ ಯೆಗರೋವ್ನಾ ಬದುಕಿದ್ದಾಗ ಅವಳನ್ನ ಮದುವೆ ಆಗತೇನೆ ಅಂದಿದ್ದು… ನನಗೆ ಎಲ್ಲಾ ಗೊತ್ತು! ಬಹಳ ಸೂಕ್ಷ್ಮವಾದ ವಿಷಯ ಪ್ರಸ್ತಾಪ ಮಾಡತಿದೇನೆ, ಕತ್ತೆ ನಾನು. ಸಾರಿ. ಅಂದ ಹಾಗೆ ಓನರಮ್ಮ ಪಾಶೆನ್ಕಾ ಮೇಲೆ ಕಾಣುವಷ್ಟು ದಡ್ಡಿ ಅಲ್ಲ, ಏನನ್ನತೀಯ ಬ್ರದರ್?’

ರಾಸ್ಕೋಲ್ನಿಕೋವ್ ಎಲ್ಲೋ ನೋಡುತ್ತ, ಹಲ್ಲು ಕಚ್ಚಿಕೊಂಡು, ‘ಹ್ಞೂಂ,’ ಅಂದ. ಹೀಗೇ ಮಾತು ಮುಂದುವರೆದರೆ ತನಗೆ ಲಾಭ ಅನ್ನುವುದು ಅವನಿಗೆ ಗೊತ್ತಾಗಿತ್ತು.

ರಾಸ್ಕೋಲ್ನಿಕೋವ್ ಉತ್ತರ ಕೊಟ್ಟ ಅನ್ನುವುದರಿಂದಲೇ ಖುಷಿಯಾಗಿದ್ದ ರಝುಮಿಖಿನ್, ‘ನಿಜ ಅಲ್ಲವಾ? ಅವಳು ಪೆದ್ದಿ ಅಲ್ಲ, ಹಾಗಂತ ಜಾಣೆನೂ ಅಲ್ಲ. ಅವಳನ್ನ ಹೀಗೆ ಅಂತ ಹೇಳಕ್ಕೇ ಅಗಲ್ಲ, ಅಲ್ಲವಾ! ನನಗೆ ಸರಿಯಾಗಿ ಗೊತ್ತಿಲ್ಲ ಬ್ರದರ್, ಅಂದರೂ, ಅವಳಿಗೆ ನಲವತ್ತು ಆಗಿರಬೇಕು… ಮುವತ್ತಾರು ಅನ್ನತಾಳೆ, ಹೌದು ಅನಿಸತ್ತೆ. ಅಲ್ಲಾ, ಫಿಲಾಸಫಿ ದೃಷ್ಟಿಯಲ್ಲಿ ಹೇಳತೇನೆ, ಅವಳಿಗೂ ನನಗೂ ಇರುವುದು ಆದರ್ಶಮಯವಾದ ಸಂಬಂಧ. ಆದರೂ ಈ ಸಂಬಂಧ ಎಷ್ಟು ಗೋಜಲು ಅಂದರೆ ಆಲ್ಜೀಬ್ರಾ ಇದರ ಮುಂದೆ ಏನೂ ಅಲ್ಲ! ವಿಷಯ ಅದಲ್ಲ. ನೀನು ಈಗ ಸ್ಟೂಡೆಂಟಲ್ಲ, ನಿನ್ನ ಪಾಠದ ಮನೆಗಳು ತಪ್ಪಿ ಹೋಗಿವೆ, ನಿನ್ನ ಬಟ್ಟೆ ಬರೆ ನೆಟ್ಟಗಿಲ್ಲ, ಮಗಳು ಸತ್ತಮೇಲೆ ನಿನ್ನನ್ನ ಭಾವೀ ಅಳಿಯನ ಹಾಗೆ ನೋಡುವುದರಲ್ಲಿ ಅರ್ಥ ಇಲ್ಲ ಅಂತ ಓನರಮ್ಮನಿಗೆ ಅನ್ನಿಸಿದೆ. ಇನ್ನು ನೀನೋ ಮೂಲೆಯಲ್ಲಿ ಮುದುರಿ ಕೂತಿರತಿದ್ದೆ, ಮೊದಲಿನಹಾಗೆ ವ್ಯವಹಾರ ನೋಡಿಕೊಳ್ಳತಾ ಇರಲಿಲ್ಲ- ನಿನ್ನ ಅಪಾರ್ಟ್‍ಮೆಂಟಿನಿಂದ ಹೊರಕ್ಕೆ ದಬ್ಬಬೇಕು ಅನ್ನುವ ಐಡಿಯ ಅವಳಿಗೆ ಬಂದಿದೆ. ಬಹಳ ದಿನದಿಂದ ಈ ವಿಚಾರ ಅವಳ ಮನಸ್ಸಿನಲ್ಲಿತ್ತು. ಹಾಗೆ ಮಾಡಿದ್ದರೆ ಪ್ರಾಮಿಸರಿ ನೋಟು ಕೈಬಿಟ್ಟು ಹೋಗುತ್ತಿತ್ತು. ಅಲ್ಲದೆ, ಸದ್ಯದಲ್ಲೇ ನಿಮ್ಮ ತಾಯಿ ದುಡ್ಡು ಕಳಿಸುತ್ತಾರೆ ಅಂತ ನೀನೂ ಹೇಳುತ್ತಿದ್ದೆ….’

‘ಹೇಳಬಾರದಾಗಿತ್ತು. ಏನು ಮಾಡುವುದಕ್ಕಾಗತ್ತೆ… ನಮ್ಮಮ್ಮ ಭಿಕ್ಷೆ ಎತ್ತುವ ಮಟ್ಟಕ್ಕೆ ಬಂದಿದಾಳೆ. ಓನರಮ್ಮ ನನ್ನನ್ನ ಮನೆಯಲ್ಲೇ ಇಟ್ಟುಕೊಳ್ಳಲಿ, ಊಟ ಹಾಕಲಿ ಅಂತ ಸುಳ್ಳು ಹೇಳಿದೆ,’ ರಾಸ್ಕೋಲ್ನಿಕೋವ್ ಗಟ್ಟಿ ದನಿಯಲ್ಲಿ ಸ್ಪಷ್ಟವಾಗಿ ಹೇಳಿದ.

‘ಅದೇನೋ ಸರೀನೇ. ತೊಂದರೆ ಏನಪ್ಪ ಅಂದರೆ ಆ ಹೊತ್ತಿಗೆ ಕೋರ್ಟ್ ಕೌನ್ಸಿಲರು ಚೆಬರೋವ್ ಎಂಟ್ರಿ ತಗೊಂಡ. ಅವನು ಪಕ್ಕಾ ವ್ಯವಹಾರಸ್ಥ. ಅವನಿಲ್ಲದಿದ್ದರೆ ಓನರಮ್ಮ ಪಾಶೆನ್ಕಾಳ ತಲೆ ಓಡುವುದೇ ಇಲ್ಲ. ಅವಳಿಗೆ ಸಂಕೋಚ ಜಾಸ್ತಿ. ವ್ಯವಹಾರಸ್ಥನಿಗೆ ಎಂಥ ಸಂಕೋಚ? ಈ ಪ್ರಾಮಿಸರಿಯನ್ನು ಹಾಜರು ಮಾಡಿ ದುಡ್ಡು ಕೇಳುವುದಕ್ಕೆ ಅವಕಾಶ ಇದೆಯೇ ಅಂತ ಕೇಳಿದ. ಇದೆ ಅಂದಳು. ‘ಹೇಗೆ?’ ಅಂತ ಕೇಳಿದ. ‘ರೋದ್ಯಾನ ಅಮ್ಮನಿಗೆ ಪಿಂಚಣಿ ನೂರಿಪ್ಪತ್ತೈದು ರೂಬಲ್ ಬರತ್ತೆ, ಅವಳೋ ತನ್ನ ಹೊಟ್ಟೆಗೆ ಇರದಿದ್ದರೂ ಮಗ ಚೆನ್ನಾಗಿರಲಿ ಅನ್ನುವವಳು, ಮತ್ತೆ ಅವನ ತಂಗಿ ತನ್ನನ್ನೆ ಗುಲಾಮಳಾಗಿ ಮಾರಿಕೊಂಡು ಅಣ್ಣನಿಗೆ ಸಹಾಯ ಮಾಡತಾಳೆ,’ ಅಂದಳು. ಅಲ್ಲಿಂದ ಅವನು ಶುರುವಿಟ್ಟುಕೊಂಡ… ಅಯ್ಯೋ! ಯಾಕೆ ಭಯ ಬೀಳತೀಯ ಬ್ರದರ್? ನಿನ್ನ ಎಲ್ಲಾ ಗುಟ್ಟು ನನಗೆ ಈಗ ಗೊತ್ತಾಗಿದೆ. ನೀನು ನಿನ್ನ ಮನಸ್ಸಿನಲ್ಲಿರುವುದನ್ನೆಲ್ಲ ಪಾಶೆನ್ಕಾಗೆ ಹೇಳಿದೆ, ಆಗಿನ್ನೂ ಅವಳು ನಿನ್ನನ್ನ ಮನೆ ಅಳಿಯ ಅಂತಲೇ ಅಂದುಕೊಂಡಿದ್ದಳು. ಅದೇ ಪಾಯಿಂಟು… ಸೂಕ್ಷ್ಮ ಮನಸ್ಸಿನ ಪ್ರಾಮಾಣಿಕ ಮನುಷ್ಯ ಮನಸ್ಸಲ್ಲಿರುವುದೆಲ್ಲ ಹೇಳಿಕೊಳ್ಳುತ್ತಾನೆ, ವ್ಯವಹಾರಸ್ಥ ಅದನ್ನ ಕೇಳಿಸಿಕೊಂಡು ಪ್ರಾಮಾಣಿಕನನ್ನ ತಿಂದು ಹಾಕುತ್ತಾನೆ. ಚೆಬರೋವ್ ಹತ್ತಿರ ಅವಳು ಇಸಕೊಂಡಿದ್ದ ದುಡ್ಡಿಗೆ ವಜಾ ಆಗಲಿ ಅಂತ ನೀನು ಅವಳಿಗೆ ಯಾವತ್ತೋ ಕೊಟ್ಟ ಪ್ರಾಮಿಸರಿಯನ್ನು ಅವನಿಗೆ ಚೆಬರೋವ್‍ ಗೆ ಕೊಟ್ಟಳು, ಅವನಿಗೇನು ನಾಚಿಕೆಯಾ, ಸಂಕೋಚವಾ? ‘ದುಡ್ಡು ವಸೂಲು ಮಾಡಿಕೊಡಿ,’ ಅಂತ ಪೋಲೀಸಿನವರಿಗೆ ದೂರು ಕೊಟ್ಟ. ಹೋಗಿ ಅವನನ್ನು ದಬಾಯಿಸಬೇಕು ಅಂದುಕೊಂಡೆ. ಆದರೇ, ಏನಪ್ಪಾ ಅಂದರೆ, ಅಷ್ಟು ಹೊತ್ತಿಗೆ ನನಗೂ ಓನರಮ್ಮ ಪಾಶೆನ್ಕಾಗೂ ಸ್ನೇಹ ಕುದುರುತ್ತಿತ್ತು. ಹಾಗಾಗಿ ಪ್ರಾಮಿಸರಿ ವ್ಯವಹಾರದ ಬೇರನ್ನೇ ಕತ್ತರಿಸಬೇಕು, ಅಂದರೆ ನಾನು ನಿನ್ನ ಜಾಮೀನುದಾನಾಗಿ ಸಾಲ ತೀರಿಸಬೇಕು ಅಂದುಕೊಂಡೆ.

ಕೇಳಿಸಿತಾ, ನಿನಗೆ ಜಾಮೀನು ಕೊಟ್ಟೆ. ಚೆಬರೋವ್‍ ಗೆ ಹೇಳಿಕಳುಹಿಸಿದೆವು, ರೂಬಲ್ ನೋಟುಗಳನ್ನ ಅವನ ಬಾಯಿಗೆ ತುರುಕಿದೆವು, ಪ್ರಾಮಿಸರಿ ಪತ್ರ ವಾಪಸು ಪಡೆದವು, ಆಫೀಸುಗಳಲ್ಲಿ ಮಾಡುವ ಹಾಗೆ ಅದನ್ನ ಸ್ವಲ್ಪ ಹರಿದೆವು. ಇಗೋ ಅದನ್ನ ನಿನಗೆ ಉಡುಗೊರೆ ಕೊಡುತ್ತಿದ್ದೇನೆ,’ ಅನ್ನುತ್ತ ರಝುಮಿಖಿನ್ ಪ್ರಾಮಿಸರಿ ನೋಟನ್ನು ಅವನೆದುರಿಗೆ ಇಟ್ಟ. ರಾಸ್ಕೋಲ್ನಿಕೋವ್ ಅದನ್ನು ನೋಡಿದ ಒಂದೂ ಮಾತಾಡದೆ ಗೋಡೆಯ ಕಡೆಗೆ ಮುಖ ತಿರುಗಿಸಿಕೊಂಡ. ರಝುಮಿಖಿನ್ ಕೂಡ ಅಳುಕಿ ಮುಖ ಹಿಂಡಿದ.

ಒಂದು ಕ್ಷಣ ತಡೆದು, ‘ಬ್ರದರ್ ನಾನು ಮತ್ತೆ ಪೆದ್ದನಾದೆ. ಸುಮ್ಮನೆ ಬಡಬಡ ಮಾತಾಡಿ ನಿನ್ನ ಮನಸ್ಸು ಹಗುರ ಮಾಡುವುದಕ್ಕೆ ಹೋಗಿ ನಿನ್ನ ಮನಸ್ಸನ್ನು ನೋಯಿಸಿಬಿಟ್ಟೆ, ಸಾರೀ ಬ್ರದರ್!’ ಅಂದ.

ಒಂದು ಕ್ಷಣ ತಡೆದು, ಗೋಡೆಯಿಂದ ಮುಖ ತಿರುಗಿಸದೆ, ‘ನನಗೆ ಸನ್ನಿ ಹಿಡಿದಿತ್ತು ಅನ್ನುವುದು ನಿನಗೆ ಗೊತ್ತಿರಲಿಲ್ಲವಾ?’ ರಾಸ್ಕೋಲ್ನಿಕೋವ್ ಕೇಳಿದ.

‘ಅದು ಮೊದಲು ಗೊತ್ತಾಗಿದ್ದು ನನಗೇನೇ. ನೀನು ಏನೇನೋ ಬಡಬಡಿಸುತ್ತಿರುವಾಗ ಹೋಗಿ ಝೊಮ್ಯತೋವ್‍ ನ ಕರೆದುಕೊಂಡು ಬಂದೆ.

‘ಝೊಮ್ಯತೋವ್?… ಪೋಲೀಸ್‍ ಸ್ಟೇಶನ್ ಗುಮಾಸ್ತ?… ಯಾಕೆ?’ ರಾಸ್ಕೋಲ್ನಿಕೋವ್ ತಟ್ಟನೆ ತಿರುಗಿ ರಝುಮಿಖಿನ್‍ ನನ್ನೇ ದಿಟ್ಟಿಸಿದ.

‘ಅದರಲ್ಲಿ ತಪ್ಪೇನಿದೆ… ಯಾಕೆ ಮುಖ ಹಾಗೆ ಮಾಡತೀಯ? ನಿನ್ನ ಮುಖತಃ ಭೇಟಿ ಆಗಬೇಕು ಅಂತ ಆಸೆಪಟ್ಟ. ಯಾಕೆ ಅಂದರೆ… ನಿನ್ನ ಬಗ್ಗೆ ಅಷ್ಟೊಂದು ಮಾತಾಡಿದ್ದೆವು. ಅವನಲ್ಲದೆ ನಿನ್ನ ವಿಚಾರ ನನಗೆ ಯಾರು ಹೇಳುತ್ತಿದ್ದರು? ಒಳ್ಳೆಯ ಮನಷ್ಯ. ಒಂದು ಥರಾ ಅದ್ಭುತ ಅವನು. ಈಗ ನಾವು ಸ್ನೇಹಿತರು. ಹೆಚ್ಚುಕಡಮೆ ದಿನವೂ ಭೇಟಿ ಆಗತೇವೆ. ನಾನೀಗ ನಿಮ್ಮ ಏರಿಯಾಕ್ಕೇ ಬಂದಿದೇನೆ, ಯಾಕೆ, ನಿನಗೆ ಗೊತ್ತಿಲ್ಲವಾ? ಇನ್ನೂ ನಿನ್ನೆ ಮೊನ್ನೆ ಬಂದೆ ಅಷ್ಟೆ. ಅವನೂ ನಾನೂ ಲವೀಝಾ ಮನೆಗೆ ಹೊಗಿದ್ದೆವು, ಎರಡು ಸಾರಿ. ಅವಳ ಜ್ಞಾಪಕ ಇದೆಯಾ ನಿನಗೆ? ಲವೀಜಾ, ಲವೀಜಾ ಇವನೋವ್ನಾ?’

‘ಸನ್ನಿ ಹಿಡಿದಿದ್ದಾಗ ಏನಾದರೂ ಬಡಬಡಿಸಿದೆನಾ?’

‘ಹ್ಞೂಂ ಮತ್ತೆ! ನಿಮ್ಮ ಮನಸ್ಸು ಸರಿ ಇರಲಿಲ್ಲ,’

‘ಏನು ಮಾತಾಡಿದೆ ನಾನು?’

‘ನೋಡು ಇವನನ್ನಾ! ಏನು ಮಾತಾಡಿದನಂತೆ? ಜನ ಏನು ಬಡಬಡಿಸತಾರೆ ಗೊತ್ತಲ್ಲ… ಸರಿ ಬ್ರದರ್, ಈಗ ಸುಮ್ಮನೆ ಸಮಯ ದಂಡ ಮಾಡುವುದು ಬೇಡ. ಕೆಲಸ ಶುರುಮಾಡಣ!’

ಎದ್ದು ಹೋಗಿ ಟೀ ಕಪ್ ಎತ್ತಿಕೊಂಡ.

‘ಏನು ಮಾತಾಡಿದೆ, ನಾನು?’

‘ಬಿಡಲ್ಲ ನೀನು! ಏನಾದರೂ ಗುಟ್ಟು ಬಚ್ಚಿಟ್ಟುಕೊಂಡಿದೀಯಾ, ಹೇಗೆ? ಚಿಂತೆ ಮಾಡಬೇಡ. ಕೌಂಟೆಸ್ ಬಗ್ಗೆ ನೀನೇನೂ ಹೇಳಲಿಲ್ಲ. ಯಾವುದೋ ನಾಯಿ, ಕಿವಿಯ ರಿಂಗು, ಸರಗಳು, ಮತ್ತೆ ಕ್ರೆಸ್ಟೋವ್ಸ್ಕಿ ದ್ವೀಪ, ಯಾವನೋ ವಾಚ್‍ಮ್ಯಾನು, ಆಮೇಲೆ ನಿಕೊದಿಮ್ ಫೋಮಿಚ್, ಮತ್ತೆ ಪೋಲೀಸು ಮುಖ್ಯಸ್ಥನ ಸಹಾಯಕ ಇಲ್ಯಾ ಪೆಟ್ರೊವಿಚ್-ಅವನ ಬಗ್ಗೆ ಅಂತೂ ತುಂಬ ಮಾತಾಡಿದೆ, ಆಮೇಲೆ ಏನಪ್ಪಾ ಅಂದರೆ ನಿನ್ನ ಕಾಲುಚೀಲದ ಬಗ್ಗೆ ನಿನಗೆ ಯಾಕೋ ಬಹಳಾನೇ ಇಂಟರೆಸ್ಟ್ ಇತ್ತು! ‘ಕಾಲುಚೀಲ ಕೊಡೀ ಕೊಡೀ,’ ಅಂತ ಗೋಗರೆಯುತ್ತಾ ಇದ್ದೆ. ಝಮ್ಯೊತೋವ್ ಸ್ವತಃ ಹೋಗಿ ಮನೆಯ ಮೂಲೆ ಮೂಲೆಯಲ್ಲೂ ನಿನ್ನ ಕಾಲುಚೀಲ ಹುಡುಕಿದ. ಸೆಂಟು ಹಾಕಿಕೊಂಡ ಕೈಯಲ್ಲಿ, ಉಂಗುರಗಳನ್ನು ತೊಟ್ಟ ಕೈಯಲ್ಲಿ ಆ ಕೊಳಕು ಕಾಲುಚೀಲ ಎತ್ತಿ ನಿನ್ನ ಕೈಗೆ ಕೊಟ್ಟ. ಆಗ ನಿನಗೆ ಸಮಾಧಾನ ಆಯಿತು ನೋಡು, ಕಾಲುಚೀಲಾನ ಹಗಲೂ ರಾತ್ರಿ ಭದ್ರವಾಗಿ ಹಿಡಕೊಂಡೇ ಇರತಿದ್ದೆ. ಅವು ಈಗ ಇಲ್ಲೇ ಎಲ್ಲೋ ನಿನ್ನ ಹೊದಿಕೆ ಕೆಳಗೆ ಬಿದ್ದಿರಬೇಕು. ಆಮೇಲೆ ನಿನ್ನ ಪ್ಯಾಂಟಿನ ಹಕರಲು ಚುಂಗು ಕೊಡಿ ಅಂತ ಅಳುತ್ತಾ ಬೇಡಿಕೊಂಡೆ! ಕೊಡೋಣ ಅಂತ ಹುಡುಕಿದೆವು. ನೀನು ಏನು ಕೇಳತಾ ಇದೀಯ ಅದೇ ತಿಳಿಯಲಿಲ್ಲ… ಸರಿ ಸಾರ್… ಈಗ ವ್ಯವಹಾರಕ್ಕೆ ಬರೋಣ. ಈಗ ನಮ್ಮ ಹತ್ತಿರ ಮೂವತ್ತೈದು ರೂಬಲ್ ಇವೆ. ಅದರಲ್ಲಿ ಹತ್ತು ಈಗ ತಗೊಳತಾ ಇದೇನೆ. ಇನ್ನೊಂದೆರಡು ಗಂಟೆಯಲ್ಲಿ ಬಂದು ಲೆಕ್ಕ ಒಪ್ಪಿಸತೇನೆ. ಮತ್ತೆ, ನಸ್ತಾಸ್ಯಾ, ನಾನು ಬರುವವರೆಗೂ ಅವಾಗವಾಗ ಬಂದು ಇವನನ್ನ ನೋಡತಾ ಇರು. ಟೀನೋ, ನೀರೋ ಏನು ಕೇಳತಾನೋ ಕೊಡು… ನಮಗೆ ಏನೇನು ಬೇಕು ಅದನ್ನ ಪಾಶೆನ್ಕಾಗೆ ನಾನೇ ಹೇಳತೇನೆ. ಗುಡ್ ಬೈ!

‘ಪಾಕಡಾ ನನ್ಮಗ! ಓನರಮ್ಮನ್ನ ಪಾಶೆನ್ಕಾ ಅಂತ ಮನೆಯವರ ಹಾಗೆ ಮುದ್ದು ಹೆಸರಲ್ಲಿ ಕರೀತಾನೆ!’ ಅವನು ಬೆನ್ನು ತಿರುಗಿಸಿದ ತಕ್ಷಣ ನಸ್ತಾಸ್ಯಾ ಅಂದಳು. ಆಮೇಲೆ ಬಾಗಿಲು ತೆರೆದು ಅವನ ಓನರಮ್ಮನ ಮಾತು ಕದ್ದು ಕೇಳಿಸಿಕೊಂಡಳು. ಕುತೂಹಲ ತಾಳಲಾರದೆ ಮೆಟ್ಟಿಲಿಳಿದು ಓಡಿ ಹೋದಳು. ಆ ಹುಡುಗಿ ನಸ್ತಾಸ್ಯಾ ರಝುಮಿಖಿನ್‍ ಗೆ ಪೂರಾ ಮರುಳಾಗಿದ್ದಾಳೆ ಅನ್ನುವುದು ಗೊತ್ತಾಗುತ್ತಿತ್ತು.

ಬಾಗಿಲು ಮುಚ್ಚಿಕೊಂಡದ್ದೇ ತಡ, ಆ ರೋಗಿ ತಟಕ್ಕನೆ ಹೊದಿಕೆಯನ್ನು ದೂರ ತಳ್ಳಿ, ಹಾಸಿಗೆಯಿಂದ ಚಿಮ್ಮಿ, ಅರೆ ಹುಚ್ಚನ ಹಾಗೆ ಕೋಣೆಯ ಮಧ್ಯದಲ್ಲಿ ನಿಂತ. ಅವರೆಲ್ಲ ಹೋಗಲೆಂದು ಇಲ್ಲಿಯವರೆಗೂ ತಳಮಳಿಸುತ್ತ ಕಾಯುತ್ತಿದ್ದ. ಅವರಿಲ್ಲದಿದ್ದರೆ ಮಾಡಬೇಕಾದ ಕೆಲಸ ಸಟ್ಟನೆ ಮಾಡಬಹುದು ಅನ್ನಿಸುತ್ತಿತ್ತು. ಏನು ಕೆಲಸ? ಅದೇ ಮರೆತುಹೋಗಿತ್ತು. ‘ದೇವರೇ! ಅವರಿಗೆ ಏನೇನು ಗೊತ್ತು, ಇನ್ನೂ ಏನು ಗೊತ್ತಿಲ್ಲ ಅಷ್ಟು ತಿಳಿಯುವ ಹಾಗೆ ಮಾಡು. ಅವರಿಗೆ ಆಗಲೇ ಗೊತ್ತಾಗಿದ್ದರೂ ಸುಮ್ಮನೆ ನನ್ನ ಕೆಣಕಿ ಆಟ ಆಟಿಸುತ್ತಿದ್ದರೇನು ಗತಿ? ಆಮೇಲೆ ಬಂದು ನಮಗೆಲ್ಲ ಯಾವಾಗಲೋ ತಿಳಿದಿತ್ತು, ಸುಮ್ಮನೆ ನಿನ್ನ ಆಡಿಸುವುದಕ್ಕೆ ಹೀಗೆ… ಅಂದರೇನು ಗತಿ? ಏನು ಮಾಡಲಿ ಈಗ? ಮರೆತುಹೋಗಿದೆ, ಎಲ್ಲಾ ಮರೆತು ಹೋಗಿದೆ, ಸ್ವಲ್ಪ ಹೊತ್ತಿಗೆ ಮುಂಚೆ ನೆನಪಿತ್ತು, ಈಗ ಮರೆತಿದೆ… ದೇವರೇ!’

ರೂಮಿನ ಮಧ್ಯ ನಿಂತು, ನೋಯುತ್ತ, ಆಶ್ಚರ್ಯಪಡುತ್ತ ಸುತ್ತಲೂ ನೋಡಿದ. ಬಾಗಿಲ ಹತ್ತಿರ ಹೋದ. ಬಾಗಿಲು ತೆಗೆದ. ಕೇಳಿಸಿಕೊಂಡ. ಉಹ್ಞೂಂ, ಅದಲ್ಲ ಅನ್ನುತ್ತ ಜ್ಞಾಪಿಸಿಕೊಂಡ. ವಾಲ್ ಪೇಪರು ಹರಿದಿದ್ದ ಮೂಲೆಗೆ ಹೋಗಿ ಅಲ್ಲಿ ತೂತಿನಲ್ಲಿ ಕೈ ಹಾಕಿ ತಡಕಿ ನೋಡಿದ. ಒಲೆಯ ಹತ್ತಿರ ಹೋದ. ಬೂದಿ ಕೆದಕಿ ನೋಡಿದ. ಅವನ ಪ್ಯಾಂಟಿನ ಹರುಕಲು ಚುಂಗು, ಪ್ಯಾಂಟಿನ ಜೇಬಿನ ಹರಕು ಬಟ್ಟೆಯ ತುಂಡು, ಅಲ್ಲೇ ಇದ್ದವು—ಈಗ ತಾನೇ ಎಸೆದಿದ್ದು ಅನ್ನುವ ಹಾಗೆ. ಅಂದರೆ ಯಾರೂ ಅಲ್ಲಿ ಹೋಗಿ ನೋಡಿಲ್ಲ! ರಝುಮಿಖಿನ್ ಹೇಳುತ್ತಿದ್ದ ಕಾಲುಚೀಲ ಜ್ಞಾಪಕಕ್ಕೆ ಬಂದಿತು. ಅಗೋ, ಸೋಫಾದ ಮೇಲೆ, ಹೊದಿಕೆಯ ಕೆಳಗೆ ಬಿದ್ದಿದೆ. ಎಷ್ಟು ಕೊಳಕಾಗಿ, ಚಿಂದಿಯಾಗುವ ಹಾಗಿತ್ತು ಅಂದರೆ ಝಮ್ಯತೋವ್ ಖಂಡಿತ ಏನನ್ನೂ ಗಮನಿಸಿರುವುದಿಲ್ಲ.

‘ಥೂ, ಝಮ್ಯತೋವ್!… ಆಫೀಸು!… ನನ್ನ ಯಾಕೆ ಆಫೀಸಿಗೆ ಕರೆಯುತ್ತಾ ಇದಾರೆ? ಸಮನ್ಸ್ ಎಲ್ಲಿ ಹೋಯಿತು? ಥೂ,.. ಕನ್ಫ್ಯೂಶನ್ನು. ನನಗೆ ಸಮನ್ಸ್ ಕೊಟ್ಟಿದ್ದು, ಅದೆಲ್ಲಾ ಆಗಲೇ ಮುಗಿದು ಹೋದ ಕಥೆ. ಆವಾಗಲೂ ಕಾಲುಚೀಲ ಪರೀಕ್ಷೆಮಾಡಿ ನೋಡಿದ್ದೆ. ಈಗ…? ಕಾಯಿಲೆ. ಝಮ್ಯತೋವ್ ಯಾಕೆ ಇಲ್ಲಿಗೆ ಬಂದ? ರಝುಮಿಖಿನ್ ಯಾಕೆ ಅವನನ್ನ ಕರೆದುಕೊಂಡು ಬಂದ?’ ಸಣ್ಣ ದನಿಯಲ್ಲಿ ಗೊಣಗುತ್ತಿದ್ದ ರಾಸ್ಕೋಲ್ನಿಕೋವ್, ಸೋಫಾದ ಮೇಲೆ ಮತ್ತೆ ಕೂತಿದ್ದ. ‘ಇದು ಸನ್ನಿಯೋ, ನಿಜವೋ?… ಹ್ಞಾ, ಜ್ಞಾಪಕ ಬಂತು. ಓಡಿ ಹೋಗಬೇಕು, ಬೇಗ ಓಡಬೇಕು! ಓಡಬೇಕು, ಓಡಬೇಕು! ಓಡಲೇ ಬೇಕು!… ಹೌದು… ಎಲ್ಲಿಗೇ? ನನ್ನ ಬಟ್ಟೆಗಳೆಲ್ಲಿ? ಬೂಟು ಇಲ್ಲ! ಬೂಟು ತಗೊಂಡು ಹೋಗಿ ಬಚ್ಚಿಟ್ಟಿದಾರೆ ಅವರು! ಗೊತ್ತಾಯಿತು! ಮಂಚ ಇಲ್ಲೇ ಇದೆ—ಅವರಿಗೆ ಸಿಕ್ಕಿಲ್ಲ! ಇಗೋ ಟೇಬಲ್ಲಿನ ಮೇಲೆ ದುಡ್ಡಿದೆ, ದೇವರು ದೊಡ್ಡವನು! ಪ್ರಾಮಿಸರಿ ನೋಟು ಇಲ್ಲಿದೆ… ದುಡ್ಡು ಎತ್ತಿಕೊಂಡು ಹೊರಡತೇನೆ…! ಬೇರೆ ಮನೆ ಮಾಡಿಕೊಳ್ಳತೇನೆ, ಆಗ ಅವರ ಕೈಗೆ ಸಿಗಲ್ಲ ನಾನು! ಅಡ್ರೆಸ್ ಬ್ಯೂರೋ ಇದೆಯಲ್ಲಾ? ನನ್ನ ಪತ್ತೆ ಹಚ್ಚತಾರೆ ಅವರು! ರಝುಮಿಖಿನ್ ಪತ್ತೆ ಮಾಡತಾನೆ. ಪೂರಾ ಓಡಿಹೋಗುವುದೇ ವಾಸಿ… ದೂರ ಹೋಗಬೇಕು… ಅಮೆರಿಕಾಕ್ಕೆ. ಹೋಗಿ ನನ್ನ ಹುಡುಕುವವರ ಮುಖಕ್ಕೆ ಉಗೀಬೇಕು! ಪ್ರಾಮಿಸರಿ ನೋಟು ಎತ್ತಿಕೊಂಡು ಹೋಗಬೇಕು. ಅಲ್ಲಿ ಉಪಯೋಗಕ್ಕೆ ಬರತ್ತೆ. ಇನ್ನೇನು ತಗೋಬೇಕು? ನನಗೆ ಕಾಯಿಲೆ ಅಂದುಕೊಂಡಿದಾರೆ! ನಾನು ನಡೀತೇನೆ, ಅವರಿಗೆ ಗೊತ್ತಿಲ್ಲ, ಹ್ಹೆ, ಹ್ಹೆ, ಹ್ಹೆ! ಅವರ ಕಣ್ಣು ನೋಡಿದರೇ ಗೊತ್ತಾಗತ್ತೆ ನನಗೆ- ಅವರಿಗೆ ಎಲ್ಲಾ ತಿಳಿದಿದೆ! ನಾನು ಮೆಟ್ಟಿಳಿದು ಕೆಳಗೆ ಹೋದರೆ ಸಾಕು! ಬಾಗಿಲಲ್ಲಿ ಅವರು ಪೋಲೀಸರನ್ನ ಕಾವಲು ನಿಲ್ಲಿಸಿದ್ದರೆ? ಏನಿದು? ಟೀ? ಆಹಾ, ಬಿಯರ್ ಕೂಡ ಇದೆ, ಅರ್ಧ ಬಾಟಲಿ. ಕೋಲ್ಡ್!

ಬಾಟಲಿ ಗಬಕ್ಕನೆ ಎತ್ತಿಕೊಂಡ. ಅದರಲ್ಲಿ ಇನ್ನೂ ಒಂದು ಗ್ಲಾಸಿನಷ್ಟು ಬಿಯರ್ ಇತ್ತು. ಎದೆಯೊಳಗೆ ಉರಿಯುತ್ತಿರುವ ಬೆಂಕಿಯನ್ನು ಆರಿಸುವವನ ಹಾಗೆ ಒಂದೇ ಗುಟುಕಿಗೆ ತಣ್ಣನೆ ಬಿಯರ್ ಕುಡಿದ. ಒಂದು ನಿಮಿಷ ಕೂಡ ಕಳೆದಿರಲಿಲ್ಲ. ಬಿಯರ್ ತಲೆಗೆ ಏರಿತ್ತು, ಮೈ ಹಗುವಾಯಿತು ಅನ್ನಿಸಿತು, ಬೆನ್ನುಹುರಿಯುದ್ದಕ್ಕೂ ಖುಷಿಕೊಡುವಂಥ ಚಳಿತಂಪು. ಅಂಗಾತ ಮಲಗಿ ಹೊದಿಕೆ ಮೇಲೆಳೆದುಕೊಂಡ. ಯೋಚನೆಗಳು—ಮೊದಲು ಜ್ವರದಲ್ಲಿ ಬರುವಂಥ ಯೋಚನೆ, ಆಮೇಲೆ ಅಸಂಬದ್ಧವಾಗಿ, ಇನ್ನೂ ಮತ್ತೂ ಗೊಂದಲ, ಗೋಜು. ಕ್ರಮೇಣ ಹಗುರವಾದ ನಿದ್ದೆ… ಲಘುವಾದದಂಥ ಭಾವ ಅವನ್ನನ್ನು ಆವರಿಸಿತು. ಖುಷಿಯಾಗಿ ದಿಂಬಿನ ಮೇಲೆ ತಲೆ ಇಟ್ಟ. ಅವನ ಹರುಕಲು ಓವರ್ ಕೋಟಿನ ಬದಲು ಈಗ ಅಲ್ಲಿದ್ದ ಮೆತ್ತನೆ ಹೊದಿಕೆಯನ್ನು ಭದ್ರವಾಗಿ ಮೈಗೆಲ್ಲ ಹೊದ್ದುಕೊಂಡ. ಸ್ವಸ್ಥಗೊಳಿಸುವಂಥ ಗಾಢವಾದ ನಿದ್ರೆಯಲ್ಲಿ ಅದ್ದಿಹೋದ.

ರೂಮಿಗೆ ಯಾರೋ ಬಂದ ಸದ್ದು ಕೇಳಿ ಎಚ್ಚರವಾದ. ಕಣ್ಣು ತೆರೆದ. ರಝುಮಿಖಿನ್‍ ನನ್ನು ನೋಡಿದ. ಅವನು ದಢಾರನೆ ಬಾಗಿಲು ತೆರೆದು, ಹೊಸ್ತಿಲ ಮೇಲೆ ನಿಂತು, ಒಳಕ್ಕೆ ಹೋಗಲೋ ಬೇಡವೋ ಎಂದು ಯೋಚನೆ ಮಾಡುತ್ತಿದ್ದ. ರಾಸ್ಕೋಲ್ನಿಕೋವ್ ಎದ್ದು ಕೂತ. ಏನೋ ನೆನಪು ಮಾಡಿಕೊಳ್ಳಲು ಪ್ರಯತ್ನಪಡುತ್ತಿರುವವನ ಹಾಗೆ ಅವನನ್ನು ನೋಡಿದ.

‘ಮಲಗಿಲ್ಲವಲ್ಲ ನೀನು, ಇಗೋ ಬಂದೆ! ನಸ್ತಾಸ್ಯಾ, ಆ ಬಂಡಲ್ ಮೇಲೆ ತಗೊಂಡು ಬಾ!’ ಅಂದ. ‘ಒಂದೇ ನಿಮಿಷ, ನಿನಗೆ ಲೆಕ್ಕ ಕೊಡತೇನೆ…’

‘ಎಷ್ಟು ಗಂಟೆಯಾಯಿತು?’ ರಾಸ್ಕೋಲ್ನಿಕೋವ್ ಅಂಜಿದವನ ಹಾಗೆ ಸುತ್ತಲೂ ನೋಡಿದ.

‘ಚೆನ್ನಾಗಿ ನಿದ್ದೆ ಮಾಡಿದೀಯ, ಬ್ರದರ್. ಈಗ ಸಾಯಂಕಾಲ ಆಗಿದೆ. ಏನಿಲ್ಲ ಅಂದರೂ ಆರು ಗಂಟೆ ನಿದ್ರೆ ಮಾಡಿದೀಯ!…

‘ದೇವರೇ! ಏನಾಗಿದೆ ನನಗೆ!…’

‘ಯಾಕೆ? ನಿದ್ರೆ ಮಾಡಿದರೆ ಒಳ್ಳೆಯದೇ ಆಯಿತು! ಏನು ಬಹಳ ಅರ್ಜೆಂಟಾದ ಕೆಲಸ ಇದೆಯಾ? ಯಾರಾದರೂ ಹುಡುಗಿಯನ್ನ ನೋಡಬೇಕೇ, ಹೇಗೆ? ಸಮಯ ಪೂರಾ ನಮ್ಮದೇ. ಆಗಲೇ ಮೂರು ಗಂಟೆ ಹೊತ್ತು ಕಾದಿದ್ದೇನೆ, ಎರಡು ಸಾರಿ ಬಂದು ನೋಡಿದೆ, ನೀನು ನಿದ್ದೆ ಹೊಡೆಯುತ್ತಲೇ ಇದ್ದೆ. ಝೋಸ್ಸಿಮೋವ್ ಮನೆಗೆ ಎರಡು ಸಾರಿ ಹೋಗಿದ್ದೆ. ಮನೆಯಲ್ಲಿ ಯಾರೂ ಇರಲಿಲ್ಲ! ಚಿಂತೆ ಬೇಡ, ಬರತಾನೆ… ನನ್ನದೇ ಒಂದೆರಡು ಚಿಕ್ಕಪುಟ್ಟ ಕೆಲಸ ಇದ್ದವು. ಇವತ್ತಿನ್ನೂ ಮನೆ ಬದಲಾಯಿಸಿದೆ. ನಮ್ಮ ಚಿಕ್ಕಪ್ಪನ ಜೊತೆ ಬಂದೆ…. ಮತ್ತೆ, ಸರಿ, ದೆವ್ವ ಹಿಡಿಯಲಿ, ವ್ಯವಹಾರ ಮುಗಿಸಬೇಕು ಈಗ!… ಆ ಬಂಡಲು ಕೊಡು, ನಸ್ತಾಸ್ಯ. ಇಗೋ… ಈಗ ಹೇಗಿದೀಯ, ಬ್ರದರ್?’

‘ಚೆನ್ನಾಗಿದೇನೆ. ಜ್ವರ ಇಲ್ಲ… ಇಲ್ಲಿ ಕೇಳು ರಝುಮಿಖಿನ್… ನೀನು ಯಾವಾಗ ಇಲ್ಲಿಗೆ ಬಂದೆ?’
‘ಮೂರು ಗಂಟೆ ಹೊತ್ತಾಯಿತು, ಹೇಳಿದೆನಲ್ಲ.’

‘ಅಲ್ಲ, ಅದಕ್ಕೂ ಮೊದಲು?’

‘ಮೊದಲು ಅಂದರೆ, ಯಾವಾಗ?

‘ನೀನು ಇಲ್ಲಿಗೆ ಬಂದು ಎಷ್ಟು ಹೊತ್ತಾಯಿತು?’

‘ಅದನ್ನ ಆಗಲೇ ಹೇಳಿದೆನಲ್ಲಾ, ನೆನಪಿಲ್ಲವಾ?’

ರಾಸ್ಕೋಲ್ನಿಕೋವ್ ಯೋಚನೆಯಲ್ಲಿ ಮುಳುಗಿದ. ಆವತ್ತಿನ ಬೆಳಿಗ್ಗೆ ನಡೆದದ್ದೆಲ್ಲ ಈಗ ಅವನಿಗೆ ಕನಸು ಅನ್ನಿಸುತ್ತಿತ್ತು. ನೆನಪಾಗಲಿಲ್ಲ. ಪ್ರಶ್ನೆ ಕೇಳುವ ಹಾಗೆ ರಝುಮಿಖಿನ್‍ ನನ್ನು ನೋಡಿದ.

‘ಹ್ಞೂಂ, ಮರೆತು ಹೋಗಿದಾನೆ! ನೀನಿನ್ನೂ ಪೂರಾ ಸುಧಾರಿಸಿಕೊಂಡಿಲ್ಲ ಅಂತ ಬೆಳಿಗ್ಗೇನೇ ಅನ್ನಿಸಿತ್ತು… ಈಗ ನಿದ್ದೆಮಾಡಿದೆಯಲ್ಲಾ, ಒಳ್ಳೆಯದಾಯಿತು. ಎಷ್ಟೋ ಕಳೆ ಬಂದಿದೆ ಮುಖದಲ್ಲಿ, ಈಗ ವ್ಯವಹಾರದ ಮಾತು, ಇಗೋ ನೋಡಿಲ್ಲಿ,’ ಅನ್ನುತ್ತ ರಝುಮಿಖಿನ್ ಪಾರ್ಸೆಲ್ ಬಿಚ್ಚುವುದಕ್ಕೆ ಶುರುಮಾಡಿದ.

‘ನಿಜವಾಗಲೂ ಬ್ರದರ್, ಈ ಕೆಲಸ ನನಗೆ ಬಹಲಾ ಇಷ್ಟ. ನಾವೀಗ ನಿನ್ನನ್ನ ಮನುಷ್ಯ ಪ್ರಾಣಿ ಹಾಗೆ ಕಾಣುವ ಥರಾ ಮಾಡಬೇಕು. ತಲೆಯಿಂದ ಶುರುಮಾಡೋಣವಾ? ಈ ಕ್ಯಾಪು ನೋಡು,’ ಅನ್ನುತ್ತ ಚೆನ್ನಾಗಿದ್ದ, ಆದರೂ ಮಾಮೂಲಿಯಾದ ಅಗ್ಗದ ಕ್ಯಾಪು ಪಾರ್ಸೆಲ್ಲಿನಿಂದ ತೆಗೆದು ತೋರಿಸಿದ.

‘ಎಲ್ಲೀ, ನಿನ್ನ ತಲೆಗೆ ಸರಿಯಾಗಿ ಕೂರುತ್ತಾ ನೋಡಣ,’ ಅಂದ.

ರಾಸ್ಕೋಲ್ನಿಕೋವ್ ರೇಗಿ, ಅವನ ಕೈ ದೂರ ತಳ್ಳುತ್ತಾ ‘ಆಮೇಲೆ, ಆಮೇಲೆ!’ ಅಂದ.

‘ಇಲ್ಲಾ ಬ್ರದರ್, ಬೇಡ ಅನ್ನಬೇಡ. ಆಮೇಲೆ ಅಂದರೆ ಆಗಲ್ಲ. ರಾತ್ರಿಯೆಲ್ಲಾ ನನಗೆ ನಿದ್ದೆ ಬರಲ್ಲ. ನಿನ್ನ ಅಳತೆ ಗೊತ್ತಿಲ್ಲದೆ ಎಲ್ಲಾನೂ ಅಂದಾಜಿನ ಮೇಲೆ ತಂದಿದೇನೆ,’ ಅನ್ನುತ್ತ ರಾಸ್ಕೋಲ್ನಿಕೋವ್ ತಲೆಗೆ ಕ್ಯಾಪ್ ಇಟ್ಟು, ‘ಆಹಾ! ಕರೆಕ್ಟಾಗಿದೆ ಬ್ರದರ್. ನೋಡು ಬ್ರದರ್, ಗಂಡಸರ ಡ್ರೆಸ್ಸಿನಲ್ಲಿ ತಲೆಯ ಕ್ಯಾಪು ಬಹಳ ಮುಖ್ಯ. ನನ್ನ ಸ್ನೇಹಿತ ಒಬ್ಬನಿದಾನೆ, ಅವನು ಎಲ್ಲಾದರೂ ಪಬ್ಲಿಕ್ಕಿನಲ್ಲಿ ಹೋದಾಗ, ಎಲ್ಲರೂ ತಲೆಗೆ ಹ್ಯಾಟು, ಕ್ಯಾಪು ಹಾಕಿಕೊಂಡಿರುವುದು ನೋಡಿದರೆ ತಕ್ಷಣ ತನ್ನ ತಲೆಗೆ ಹಾಕಿಕೊಂಡಿರುವ ಮುರುಕು ಮುಚ್ಚಳದಂಥ ಕ್ಯಾಪು ತೆಗೆದುಬಿಡತಾನೆ. ಗುಬ್ಬಚ್ಚಿ ಗೂಡಿನಂಥ ಹರಕಲು ಹ್ಯಾಟು ಹಾಕಿಕೊಂಡಿದೇನಲ್ಲ ಅಂತ ನಾಚಿಕೆಗೆ ಹಾಗೆ ಮಾಡತಾನೆ. ಇಗೋ ನಸ್ತಾಸ್ಯಾ, ಇಲ್ಲಿ ಎರಡು ಹ್ಯಾಟು ಇವೆ. ಇದು ಇವನದು ಪಾಮರ್ಸ್ಟನ್ ಹ್ಯಾಟು, ಚಿಂದಿ ಎದ್ದುಹೋಗಿದೆ. ಇಗೋ ಇದು, ಬಂಗಾರದ ವಡವೆ ಥರ ಇರುವ ಹ್ಯಾಟು. ರೋದ್ಯಾ ಎಷ್ಟು ಕೊಟ್ಟಿರಬಹುದು ಇದಕ್ಕೆ ನಾನು? ನೀನು ಹೇಳತೀಯಾ ನಸ್ತಾಸ್ಯಾ, ಎಷ್ಟಾಗಿರಬಹುದು ಇದಕ್ಕೆ?’

‘ಒಂದು ಅಂದಾಜಿನಲ್ಲಿ ಹೇಳಬೇಕು ಅಂದರೆ, ಇಪ್ಪತ್ತು ಕೊಪೆಕ್?’

‘ಅಯ್ಯೋ ಪೆದ್ದಿ!’ ಅವಮಾನವಾಯಿತು ಅನ್ನುವ ಹಾಗೆ ಚೀರಿದ. ‘ನಿನಗೆ ಕೂಡ ಅದಕ್ಕಿಂತ ಜಾಸ್ತಿನೇ ಬೆಲೆ ಇದೆ.. ಇದಕ್ಕೆ ಎಂಬತ್ತು ಕೊಪೆಕ್! ಅದೂ ಈ ಕ್ಯಾಪು ಸೆಕೆಂಡ್ ಹ್ಯಾಂಡು ಅಂತ. ಒಂದು ಕಂಡೀಶನ್ ಇದೆ. ಈ ವರ್ಷವೆಲ್ಲ ಇದನ್ನು ಹಾಕಿಕೊಂಡು ಸವೆಸಿದರೆ ಮುಂದಿನ ವರ್ಷ ಇನ್ನೊಂದು ಹ್ಯಾಟು ಬಿಟ್ಟಿಯಾಗಿ ಕೊಡುತ್ತಾರಂತೆ, ದೇವರೇ! ಸಾರ್, ಈ ಯುನೈಟೆಡ್ ಪ್ಯಾಂಟ್ಸ್ ಆಫ್ ಅಮೆರಿಕ ನೋಡಿ. ನಾವು ಸ್ಕೂಲಲ್ಲಿದ್ದಾಗ ಇದನ್ನ ಹಾಗೇ ಕರೆಯುತ್ತಿದ್ದೆವು,’ ಅನ್ನುತ್ತ ಅವನು ಗ್ರೇ ಕಲರಿನ ಪ್ಯಾಂಟನ್ನು ರಾಸ್ಕೋಲ್ನನಿಕೋವ್‍ ಗೆ ತೋರಿಸಿದ. ಬೇಸಗೆಯಲ್ಲಿ ತೊಡಬಹುದಾದಂಥ ತೆಳ್ಳನೆ ವುಲನ್ ಪ್ಯಾಂಟು. ‘ಒಂದೂ ತೂತಿಲ್ಲ, ಒಂದೂ ಕಲೆ ಇಲ್ಲ. ತೊಟ್ಟು ಹಳೆಯದಾಗಿದೆ, ಆದರೂ ಪರವಾಗಿಲ್ಲ, ನಡೆಯುತ್ತದೆ. ಇದಕ್ಕೆ ಹೊಂದುವ, ಅದೇ ಕಲರಿನ ವೇಸ್ಟ್ ಕೋಟು ಇದೆ, ಇವತ್ತಿನ ಫ್ಯಾಶನ್ನಿಗೆ ತಕ್ಕ ಹಾಗೆ. ನಿಜ ಹೇಳಬೇಕು ಅಂದರೆ ಸೆಕೆಂಡ್ ಹ್ಯಾಂಡೇ ವಾಸಿ, ಮೃದುವಾಗಿರತ್ತೆ, ಮೆತ್ತಗಿರತ್ತೆ… ನೋಡು ರೋದ್ಯಾ, ನನ್ನ ಕೇಳಿದರೆ ಕೆಲಸ ಹುಡುಕಿಕೊಳ್ಳುವುದಕ್ಕೆ ಇದು ಸಾಕು ಅನ್ನಿಸತ್ತೆ. ಈ ಬೇಸಗೆ ಕಾಲಕ್ಕೂ ತಕ್ಕ ಹಾಗಿದೆ. ಜನವರಿ ತಿಂಗಳಲ್ಲಿ ಹಸಿ ಸೊಪ್ಪು ಕೇಳಬಾರದು. ಆಗ ಮಾತ್ರ ನಿನ್ನ ಜೇಬಿನಲ್ಲಿ ದುಡ್ಡು ಉಳಿಯತ್ತೆ. ಈ ಖರೀದಿ ವಿಷಯವೂ ಅಷ್ಟೇ. ಈಗ ಬೇಸಗೆ ಕಾಲ. ಅದಕ್ಕೇ ಬೇಸಗೆ ಡ್ರೆಸ್ಸು ತಂದೆ. ಇನ್ನು ಮೂರು ತಿಂಗಳಿಗೆ ಹೇಗಿದ್ದರೂ ಬೆಚ್ಚಗಿರುವ ಬಟ್ಟೆ ಖರೀದಿ ಮಾಡಬೇಕು, ಇವನ್ನ ಬಿಸಾಕಬೇಕು…. ಅಷ್ಟು ಹೊತ್ತಿಗೆ ಇವು ಹರಿದೂ ಹೋಗಿರತವೆ. ಬೆಲೆ ಅಂದಾಜು ಮಾಡು ನೋಡಣ. ಎಷ್ಟು ಅಂತೀಯಾ? ಎರಡು ರೂಬಲ್ ಇಪ್ಪತ್ತೈದು ಕೊಪೆಕ್! ಮತ್ತೆ ಅದೇ ಕಂಡೀಶನ್ನು, ಇವನ್ನ ನೀನು ತೊಟ್ಟು ಸವೆಸಿದರೆ ಮುಂದಿನ ವರ್ಷ ಇನ್ನೊಂದು ಜೊತೆ ಬಿಟ್ಟಿ ಸಿಗತ್ತೆ!

ಫೆದ್ಯೇವ್ ಅಂಗಡಿಯದು ಅದೇ ಶರತ್ತು, ಒಂದು ಸಾರಿ ದುಡ್ಡು ಕೊಟ್ಟು ಖರೀದಿ ಮಾಡಿದರೆ ಸಾಕು, ನಿಜ್ಜ. ಜೀವನ ಪೂರ್ತಿ ಬಟ್ಟೆ ಸಿಗತಾನೇ ಇರತ್ತೆ. ಆದರೆ ಒಂದು ಸಾರಿ ಹೋದವರು ಮತ್ತೆ ಅಲ್ಲಿಗೆ ಹೋಗೋದೇ ಇಲ್ಲ. ಈಗ ಸಾರ್, ಬೂಟು ನೋಡಿ. ಇಷ್ಟವಾಯಿತಾ? ಇವೂ ಬಳಸಿರುವ ಶೂಗಳೇ. ಆದರೂ ಇನ್ನೆರಡು ತಿಂಗಳು ಧಾರಾಳವಾಗಿ ಬಳಸಬಹುದು. ಯಾಕೆ ಅಂದರೆ ಇದು ಫಾರಿನ್ ಮಾಲು. ಬ್ರಿಟಿಶ್ ಎಂಬೆಸಿಯ ಯಾವನೋ ಸೆಕ್ರೆಟರಿ ಇವನ್ನು ಚೋರ್ ಬಜಾರಿನಲ್ಲಿ ಹೋದ ವಾರ ಮಾರಿದನಂತೆ. ಅವನಿಗೆ ತಕ್ಷಣಕ್ಕೆ ಹಣ ಬೇಕಾಗಿತ್ತಂತೆ. ಈ ಶೂಗಳನ್ನ ಒಂದು ವಾರ ಹಾಕಿದ್ದನಂತೆ, ಅಷ್ಟೇ. ಬೆಲೆ—ಒಂದು ರೂಬಲ್ ಐವತ್ತು ಕೊಪೆಕ್. ಲಕ್ಕಿ, ಅಲ್ಲವಾ?’

‘ಸೈಜು ಸರಿಹೋಗಲ್ಲ ಅಂತ ಇರಬಹುದು!’ ಅಂದಳು ನಸ್ತಾಸ್ಯಾ.

‘ಸೈಜು ಸರಿ ಇರಲ್ಲವಾ? ನೋಡು,’ ಅನ್ನುತ್ತ ತನ್ನ ಜೇಬಿನಿಂದ ರಾಸ್ಕೋಲ್ನಿಕೋವ್‍ ನ ಹಳೆಯ, ಹರಕಲಾದ, ತೂತು ಬಿದ್ದ, ಮಣ್ಣು ಮೆತ್ತಿದ ಶೂ ತೆಗೆದು ತೋರಿಸುತ್ತ, ‘ಅಳತೆ ಇಟ್ಟುಕೊಂಡು ರೆಡಿಯಾಗಿ ಹೋಗಿದ್ದೆ, ಗೊತ್ತಾ? ಈ ದೆವ್ವದ ಶೂ ಇಟ್ಟುಕೊಂಡು ಸರಿಯಾದ ಅಳತೆಯದು ಹುಡುಕಿ ಕೊಟ್ಟರು, ಮನಸ್ಸಿಟ್ಟು, ಮನಸಿನ ತುಂಬ ಪ್ರೀತಿ ಇಟ್ಟುಕೊಂಡು ಇಡೀ ವ್ಯವಹಾರ ಮಾಡಿದೇನೆ. ಅಂಗಿಗಳ ಮಟ್ಟಿಗೆ ಓನರಮ್ಮನ ಹತ್ತಿರ ಚೌಕಾಸಿ ಮಾಡಿದೆ. ಮೂರು ಅಂಗಿ ಇವೆ, ಈಗಿನ ಫ್ಯಾಶನ್ನಿನದು. ಅಲ್ಲಿಗೆ, ಸಾರ್, ಕ್ಯಾಪಿಗೆ ಎಂಬತ್ತು ಕೊಪೆಕ್, ಮಿಕ್ಕ ಡ್ರೆಸ್ಸಿಗೆ ಎರಡು ರೂಬಲ್ ಇಪ್ಪತ್ತೈದು ಕೊಪೆಕ್, ಒಟ್ಟು ಮೂರು ರೂಬಲ್ ಐದು ಕೊಪೆಕ್. ಜೊತೆಗೆ ಶೂಗಳಿಗೆ ಒಂದು ರೂಬಲ್ ಐವತ್ತು ಕೊಪೆಕ್. ಯಾಕೆ ಅಂದರೆ ಅವು ಅಷ್ಟು ಚೆನ್ನಾಗಿದ್ದವು. ಅಲ್ಲಿಗೆ ನಾಲ್ಕು ರೂಬಲ್ ಐವತ್ತೈದು ಕೊಪೆಕ್. ಐದು ಕೊಪೆಕ್ ಮಿಕ್ಕ ಲಿನನ್‍ ಗೆ. ಅದನ್ನ ಹೋಲ್ ಸೇಲಿನಲ್ಲಿ ತಂದೆ. ಕರೆಕ್ಟಾಗಿ ಎಲ್ಲಾ ಸೇರಿ ಒಂಬತ್ತು ರೂಬಲ್ ಐವತ್ತೈದು ಕೊಪಕ್ ಖರ್ಚಾಯಿತು. ಉಳಿದ ಚಿಲ್ಲರೆ ನಲವತ್ತೈದು ಕೊಪೆಕ್. ಇಗೋ ಇಲ್ಲಿದೆ, ಎಲ್ಲ ಐದೈದು ಕೊಪೆಕ್ ನಾಣ್ಯ. ತಗೊಳ್ಳಿ ಸಾರ್.

ಈಗ ನಿನಗೆ ಬೇಕಾದ ಹೊಸ ಬಟ್ಟೆಯೆಲ್ಲ ಅಣಿಮಾಡಿದ್ದೇವೆ. ನನ್ನ ಕೇಳಿದರೆ ನಿನ್ನ ಕೋಟು ಇನ್ನೂ ಬಾಳಿಕೆ ಬರತ್ತೆ, ಅಷ್ಟೇ ಅಲ್ಲ ಅದನ್ನ ತೊಟ್ಟರೆ ಘನವಂತರ ಹಾಕೂ ಕಾಣುತ್ತೀಯ: ಚಾರ್ಮ್ಸ್ ಅಂಗಡಿಯಲ್ಲಿ ಬಟ್ಟೆ ತಗೊಂಡರೆ ಆಗುವ ಲಾಭ ಇದು! ಕಾಲುಚೀಲ ಇತ್ಯಾದಿಯೆಲ್ಲ ನಿನಗೆ ಬಿಟ್ಟದ್ದು. ನಮ್ಮ ಹತ್ತಿರ ಇನ್ನೂ ಇಪ್ಪತ್ತೈದು ರೂಬಲ್ ಇವೆ. ಪಾಶೆನ್ಕಾ, ಬಾಡಿಗೆ ಇಂಥದರ ಬಗ್ಗೆ ತಲೆ ಕೆಡಿಸಿಕೊಳ್ಳಬೇಡ. ಹೇಳತೇನೆ ಕೇಳು, ನಿನಗೆ ಎಷ್ಟು ಬೇಕಾದರೂ ಸಾಲ ಸಿಗತ್ತೆ. ಈಗ ಬ್ರದರ್, ನಿನ್ನ ಅಂಗಿ ಬದಲಾಯಿಸತೇವೆ. ಅದೊಂದು ಮಾತ್ರ ನಿನ್ನ ಮೈಗೆ ಕಾಯಿಲೆ ತರ ಮೆತ್ತಿಕೊಂಡಿದೆ….’

‘ಬಿಡಿ ನನ್ನ! ನನಗೆ ಇಷ್ಟ ಇಲ್ಲ!’ ಇಷ್ಟು ಹೊತ್ತೂ ಬಟ್ಟೆ ಖರೀದಿಯ ಬಗ್ಗೆ ರಝುಮಿಖಿನ್‍ ನ ಹುಡುಗಾಟದಂಥ ಹರಟೆಯನ್ನು ಅಸಹ್ಯಪಡುತ್ತ ಕೇಳಿಸಿಕೊಂಡಿದ್ದ ರಾಸ್ಕೋಲ್ನಿಕೋವ್ ಅವನ ಕೈಯನ್ನು ದೂರ ತಳ್ಳಿದ.

‘ಸಾಧ್ಯವೇ ಇಲ್ಲ, ಬ್ರದರ್. ನಾನೇನು ಸುಮ್ಮಸುಮ್ಮನೆ ನಡೆದು ನನ್ನ ಶೂ ಸವೆಸಿಕೊಂಡೆನಾ?’ ರಝುಮಿಖಿನ್ ಬಲವಂತ ಮಾಡಿದ. ‘ನಸ್ತಾಸ್ಯ, ನಾಚಿಕೆಪಡಬೇಡ, ನನಗೆ ಸಹಾಯಮಾಡು,’ ಅನ್ನುತ್ತ ರಾಸ್ಕೋಲ್ನಿಕೋವ್ ಎಷ್ಟೇ ವಿರೋಧಮಾಡಿದರೂ ಬಿಡದೆ ಅವನ ಅಂಗಿಯನ್ನು ಬದಲಾಯಿಸಿದ. ರಾಸ್ಕೋಲ್ನಿಕೋವ್ ದಿಂಬಿನ ಮೇಲೆ ತಲೆ ಇಟ್ಟ, ಎರಡು ನಿಮಿಷ ಏನೂ ಮಾತಾಡಲಿಲ್ಲ.

‘ಇನ್ನೂ ಒಂದಷ್ಟು ಹೊತ್ತು ನನ್ನ ಪಾಡಿಗೆ ನನ್ನ ಬಿಡಲ್ಲ ಇವರು!’ ಅಂದುಕೊಂಡ ರಾಸ್ಕೋಲ್ನಿಕೋವ್, ಕೊನೆಗೆ ಗೋಡೆಯನ್ನೇ ದಿಟ್ಟಿಸುತ್ತಾ ‘ಇದಕ್ಕೆಲ್ಲ ಯಾವ ದುಡ್ಡು ಕೊಟ್ಟೆ?’ ಅಂತ ಕೇಳಿದ.

‘ಯಾವ ದುಡ್ಡು? ಚೆನ್ನಾಗಿದೆ! ಇವತ್ತು ಬೆಳಗ್ಗೆ ವಖ್ರೂಶಿನ್ ಕಡೆಯಿಂದ ಏಜೆಂಟು ಬಂದ, ನಿಮ್ಮ ತಾಯಿ ಕಳಿಸಿದ್ದು, ಅದೂ ಮರೆತು ಹೋಯಿತಾ?’

ಬಹಳ ಹೊತ್ತು ಯೋಚನೆ ಮಾಡಿ ‘ಹ್ಞೂಂ, ಜ್ಞಾಪಕ ಬಂತು ಈಗ…’ ಅಂದ ರಾಸ್ಕೋಲ್ನಿಕೋವ್. ರಝುಮಿಖಿನ್ ಚಿಂತಿತನಾಗಿ, ಹುಬ್ಬು ಗಂಟಿಕ್ಕಿಕೊಂಡು ಅವನನ್ನೇ ಬಹಳ ಹೊತ್ತು ದಿಟ್ಟಿಸುತ್ತಿದ್ದ.

ಬಾಗಿಲು ತೆರೆದುಕೊಂಡಿತು. ಎತ್ತರವಾದ, ಸ್ಥೂಲಕಾಯನಾದ ಒಬ್ಬಾತ ಒಳಕ್ಕೆ ಬಂದ. ಅವನನ್ನ ಎಲ್ಲೋ ಕಂಡಿದ್ದೇನೆ ಅನಿಸಿತು ರಾಸ್ಕೋಲ್ನಿಕೋವ್‍ ಗೆ.

‘ಝೋಸ್ಸಿಮೋವ್! ಕೊನೆಗೂ ಬಂದೆಯಲ್ಲಾ!’ ರಝುಮಿಖಿನ್ ಖುಷಿಯಲ್ಲಿ ಚೀರಿದ.