Advertisement
ಬಿಡುಗಣ್ಣಿನ ಎರಡು ಬಿಡಿನೋಟಗಳು: ಸುಕನ್ಯಾ ಕನಾರಳ್ಳಿ ಅಂಕಣ

ಬಿಡುಗಣ್ಣಿನ ಎರಡು ಬಿಡಿನೋಟಗಳು: ಸುಕನ್ಯಾ ಕನಾರಳ್ಳಿ ಅಂಕಣ

ಉತ್ಪಾದನೆ ಯಾರು ಮಾಡ್ತಾರೋ ಅವರಿಗೆ ಅದರ ಮೇಲೆ ಅಧಿಕಾರ ಇರಬೇಕು ಅಂತ ಒಪ್ಪಿಕೊಂಡಿರೋ ವ್ಯವಸ್ಥೆ ಒಳಗೇ ಇದ್ದುಕೊಂಡು ತಾನು ಹೊತ್ತು, ಹೆತ್ತು, ಬೆಳೆಸಿದ ಮಕ್ಕಳ ಅಧಿಕಾರವನ್ನ ವ್ಯವಸ್ಥೆಗೆ ಬಿಟ್ಟುಕೊಡಬೇಕಾದ ಅಸಹಾಯಕತೆಯಲ್ಲಿಯೂ ಸಹ ಹೆಣ್ಣು ಬದುಕಿ ಉಳಿತಾಳೆ. ವ್ಯವಸ್ಥೆ ತಮ್ಮ ತಮ್ಮ ಹುಚ್ಚಾಟಗಳಿಗೆ ಆ ಮಕ್ಕಳನ್ನ ಯುದ್ಧಕ್ಕೆ ಕಳುಹಿಸಿ ಅವಳ ಕಣ್ಣೆದುರೇ ಅವು ಹೊಸಕಿ ಹೋದರೂ ಸಹ ಮತ್ತೆ ಮತ್ತೆ ಯಾವುದೋ ನಂಬಿಕೆಯಲ್ಲಿ ಮಕ್ಕಳನ್ನ ಹುಟ್ಟಿಸಿ ಬೆಳೆಸುತ್ತಲೇ ಹೋಗುತ್ತಾಳಲ್ಲ? ಆ ನಂಬಿಕೆಯೇ ಸ್ತ್ರೀಚೈತನ್ಯ!
ಸುಕನ್ಯಾ ಕನಾರಳ್ಳಿ ಬರೆಯುವ “ಕಡೆಗಣ್ಣಿನ ಬಿಡಿನೋಟ” ಅಂಕಣದ ಹತ್ತೊಂಭತ್ತನೆ ಬರಹ

ಪಾಠ ಮಾಡುವ ಕೆಲಸದಿಂದ ನಿವೃತ್ತಿ ಎಂದರೆ ಬರವಣಿಗೆಯ ಬದುಕಿನ ಪ್ರಾರಂಭ ಎಂದು ನಿರ್ಧರಿಸಿದ್ದೆ. ಮಾತಾಡಿದ್ದು ಸಾಕು ಅಂತನ್ನಿಸಿತ್ತು.

ಮಹಿಳಾದಿನಕ್ಕೆ ವಿಶೇಷ ಉಪನ್ಯಾಸ ಕೊಡಿ ಎಂಬ ಕೋರಿಕೆ ಬಂದಾಗ ಯಾವ ದಾಕ್ಷಿಣ್ಯಕ್ಕೆ ಒಪ್ಪಿಕೊಂಡೆನೋ ಗೊತ್ತಿಲ್ಲ. ಎಷ್ಟು ಹೊತ್ತು ಎಂಬ ಪ್ರಶ್ನೆಗೆ ಸುಮಾರು ನಲವತ್ತೈದು ನಿಮಿಷ, ನಂತರ ಹದಿನೈದು ನಿಮಿಷಗಳ ಸಂವಾದ ಎಂದರು.

ಸರಿ ಎಂದು ಹಸ್ತಪ್ರತಿಯನ್ನು ಅವಧಿಗೆ ತಕ್ಕಷ್ಟು ಕತ್ತರಿಸಿದೆ. ಒಂದೆರಡು ಸಲ ಟೈಮ್ ಸೆಟ್ ಮಾಡಿ ಮಾತಾಡಿ ನೋಡಿಕೊಂಡೆ ಸಹ. ಒಂದು ನಿಮಿಷವೂ ಹೆಚ್ಚಾಗದ ಹಾಗೆ  ಅದು ತೆಗೆದು ಇದು ಹಾಕಿ ಏನೇನೋ ಕರಾಮತ್ತು ನಡೆಸಿದೆ.

ಹನ್ನೊಂದು ಗಂಟೆಗೆ ಅಂತ ಇದ್ದರೂ ಸಹ  ಅರೆಗಂಟೆ ತಡ ಎಂದರು. ಪ್ರಾರಂಭವಾದಾಗ ಸುಮಾರು ಒಂದಕ್ಕಿಂತ ಹೆಚ್ಚು ಗಂಟೆಯೇ ಆಗಿತ್ತು. ಪಾಪ ವಿದ್ಯಾರ್ಥಿಗಳು ಕಾಯುತ್ತಲೇ ಇದ್ದರು. ಅಧ್ಯಕ್ಷರು, ‘ಕಾರ್ಯಕ್ರಮ ಪ್ರಾರಂಭಿಸಿ, ನನ್ನ ನುಡಿ ಹೇಗೂ ಕೊನೆಗೆ ತಾನೇ’ ಎಂದಿದ್ದರೂ ಸಹ ಯಾರಿಗೊ ಗುರುಭಕ್ತಿಯ ಹಂಗಿತ್ತಂತೆ. ಸುಮಾರು ನೂರೈವತ್ತು ಮಂದಿಯ ಒಂದು ಗಂಟೆಯನ್ನು ಅದಕ್ಕಾಗಿ ಗಾಳಿಗೆ ತೂರಲಾಯಿತು.

ಎಲ್ಲವೂ ಸಾಂಗವಾಗಿಯೇ ನಡೆಯಿತು. ಅವರ ಭಾಷಣ, ಇವರ ನೃತ್ಯ, ಇನ್ನೊಬ್ಬರ ಹಾಡು, ಪರಿಚಯ ಭಾಷಣ, … ನಮಗೆ ಎಲ್ಲ ರೀತಿಯ ಮನರಂಜನೆಯೂ ಬೇಕು. ನಾವು ಮಹಾ ಶಾಸ್ತ್ರೋಕ್ತ ನೋಡಿ! ಎಲ್ಲ ಮುಗಿದು ಕಾಲವಿದ್ದರೆ ಮಾತ್ರ ‘ವಿಶೇಷ ಉಪನ್ಯಾಸ’! ನೆಪಗಳಿಗೆ ಅಷ್ಟು ಸಾಕು!

ನನ್ನ ಉಪನ್ಯಾಸ ಪ್ರಾರಂಭವಾಯಿತು. ಬೇಗ ಮುಗಿಸಿ ಎಂದು ಇಪ್ಪತ್ತು ನಿಮಿಷಕ್ಕೇ  ಚೀಟಿಯೊಂದು ಬಂದಾಗ ಬೆಚ್ಚಿಬಿದ್ದೆ. ಹೆಂಗಸೊಬ್ಬಳು ಮಹಿಳಾದಿನದ ಬಗ್ಗೆ ಮಾತಾಡುವಾಗ ಗಂಡಸೊಬ್ಬ ಚೀಟಿ ಕೊಟ್ಟು ಮೌನವಾಗಿಸುವುದು ನಿಜವಾಗಿಯೂ ಏನು ಅಂದು ಕೇಳಿಕೊಳ್ಳುವಂತಾಯಿತು. ಚೀಟಿ ಕೊಟ್ಟಿದ್ದರು ಅಷ್ಟೇ, ಮೊಟ್ಟೆ ಎಸೆದಿರಲಿಲ್ಲ ಎಂದು ಸಮಾಧಾನಪಟ್ಟುಕೊಳ್ಳಬೇಕು, ಅಷ್ಟೇ.

ನೆರೆದಿದ್ದ ಹೆಣ್ಣುಮಕ್ಕಳು ಏಕಾಗ್ರತೆಯಿಂದ ಕೇಳಿಸಿಕೊಳ್ಳುತ್ತಿದ್ದನ್ನು ಗಮನಿಸಿದ್ದೆ. ‘ಮುಗಿಸಬೇಕಾ?’ ಎಂದು ಅವರನ್ನು ಕೇಳಿ ಈತನನ್ನು ಮುಜುಗರಕ್ಕೆ ಸಿಕ್ಕಿಸಿದರೆ ಹೇಗೆ ಅಂತ ಅರೆಗಳಿಗೆ ಅನ್ನಿಸಿದ್ದೂ ನಿಜ.

ಉಪನ್ಯಾಸ ಕೊಡಿ ಎಂದು ಕೇಳಿ ನನ್ನನ್ನು ಒಪ್ಪಿಸಿದ್ದ ಮತ್ತು ಅಲ್ಲಿ ನನಗಿಂತ ಮುಂಚೆಯೇ (ಉಳಿದವರಂತೆಯೇ ಸಿದ್ಧತೆಯೇ ಇಲ್ಲದ ಒಂದು) ಭಾಷಣವನ್ನೂ ಬಿಗಿದಿದ್ದ ಸ್ನೇಹಿತೆಯ ಮೌನ ಅದಕ್ಕಿಂತ ಹೆಚ್ಚಿನ ವ್ಯಂಗ್ಯವೆನ್ನಿಸಿತ್ತು. ಸಂವಾದವನ್ನು ಅವರು ನಡೆಸಿಕೊಡುತ್ತಾರೆ ಎಂದು  ಕೈ ತೋರಿಸಿ, ಗಲಿಬಿಲಿಯಲ್ಲೇ ಮಾತನ್ನು ಮುಗಿಸಿ ಬಂದು ಕುಕ್ಕರಿಸಿದ್ದೆ.

ಇನ್ನು ಅಪ್ಪರಾಣೆ ಯಾವ ಉಪನ್ಯಾಸವೂ ಬೇಡ ಎಂದು ಶಪಥವನ್ನು ಮನಸ್ಸಿನಲ್ಲಿ ಮಾಡಿಕೊಂಡೆ. ಮೂರುದಿನದ ನಂತರ ಇನ್ನೊಂದು ಊರಿನಲ್ಲಿ ನಡೆಯಬೇಕಿದ್ದ ಸಮಾವೇಶದ ಉದ್ಘಾಟನೆ ಭಾಷಣ ಮಾಡಲು ಅದೇ ಸ್ನೇಹಿತೆ ಒಪ್ಪಿಸಿದ್ದರಲ್ಲ? ನಾನು ಬರಲಾರೆ ಎಂದು ಹೇಳಿ ಹಗುರಾದೆ.

*****

ಒಪ್ಪಿಸಿದವರು ಅಷ್ಟು ಸುಲಭದಲ್ಲಿ ಬಿಟ್ಟಾರೆ? ಭಾವನಾತ್ಮಕ ಬ್ಲಾಕ್‌ಮೇಲ್ ನಮ್ಮಲ್ಲಿ ಒಂದು ಪ್ರಬಲ ಅಸ್ತ್ರ.

ಸರಿ ಬೆಳಗಿನ ಜಾವ ಮೂರು ಗಂಟೆಗೆ ಎದ್ದು ರೈಲು ಹಿಡಿದು ಹೋಗಿ, ಜಾಥಾದಲ್ಲಿ ಭಾಗವಹಿಸಿ ಬಿಸಿಲಲ್ಲಿ ಇನ್ನಷ್ಟು ಕುಂದಿಹೋದೆ.

‘ಈ ನೆಲದ ಹೆಣ್ಣುಮಕ್ಕಳು ಮೆರವಣಿಗೆ ಹೊರಡುತ್ತಾರೆ…’ ನಿಜ. ಹೊರಡಲೇಬೇಕು. ಕುಟುಂಬ ಎಂಬ ವ್ಯವಸ್ಥೆಯೇ ಹೆಣ್ಣುಮಕ್ಕಳನ್ನು ಒಂಟಿಯಾಗಿಸುವ ಉದ್ದೇಶವುಳ್ಳದ್ದು. ಹೊರಗೆ ಹೋದ ಮೇಲೆಯೇ ಅವರಿಗೆ ಸಂಘಟಿತರಾಗುವ ಇರಾದೆ ಹುಟ್ಟಿದ್ದು.

ನಡುಮಧ್ಯಾಹ್ನದ ಧಗೆ. ಸಾವಿರಾರು ಮಂದಿಗೂ ಬಿಸ್ಕೆಟ್, ಬಾಳೆಹಣ್ಣು, ಮಜ್ಜಿಗೆ ಎಲ್ಲವೂ ಇತ್ತು. ಹೆಣ್ಣು ಇರುವ ಕಡೆ ಹೊಟ್ಟೆ ತಾಳ ಕುಟ್ಟಬೇಕೆಂದಿಲ್ಲ. ವ್ಯವಸ್ಥಿತ, ಅಚ್ಚುಕಟ್ಟು.

ಅದೂ ಇದೂ ಮುಗಿದು ಉದ್ಘಾಟನೆಯೂ ಆಯಿತು. ಸರಿ, ಉದ್ಘಾಟನಾ ಭಾಷಣ ನನ್ನದು ಎಂದು ಏಳಲು ತಯಾರಾದೆ.

ಅಷ್ಟೊತ್ತಿಗೆ ಮುಂಬೈಯಿಂದ ಬಂದಿದ್ದ ಮುಖ್ಯ ಅತಿಥಿಗಳ ಪರಿಚಯ ಎಂದದ್ದು ಕೇಳಿ ಆಶ್ಚರ್ಯವಾಯಿತು. ‘ಇಲ್ಲ, ಈಗ ನನ್ನ ಭಾಷಣ’ ಎಂದು ಹೋಗಿ ದುಂಬಾಲು ಬೀಳಬೇಕಿತ್ತೆ?

ಆ ಮುಖ್ಯ ಅತಿಥಿಗಳ ತಾತ, ಅಪ್ಪ ಎಂಥೆಂಥಾ ಘನವ್ಯಕ್ತಿಗಳು ಎಂದು ಹಾಡಿ ಹೊಗಳಿದಾಗ ಇದು ಮಹಿಳಾ ದಿನವಾ ಇಲ್ಲ ಪಿತೃಪಕ್ಷವಾ  ಎಂದು ಕೇಳಿಕೊಳ್ಳುವಂತಾಯಿತು. ಸುಮಾರು ಇಪ್ಪತ್ತು  ನಿಮಿಷದ ಸ್ತುತಿ ಮುಗಿದು ಈಗ ವೇದಿಕೆ ನಿಮ್ಮದು ಎಂದು ಮುಖ್ಯ ಅತಿಥಿಗಳಿಗೆ ಬಿಟ್ಟಾಗ ಪಕ್ಕದಲ್ಲಿದ್ದ ಒಬ್ಬ ಅತಿಥಿಗೆ ಕಾರ್ಯಕ್ರಮದ ಪಟ್ಟಿಯನ್ನು ತೋರಿಸಿ ಇದನ್ನ ನಾನು ಸರಿಯಾಗಿ ಓದಿಕೊಂಡಿದೀನಾ ಎಂದು ಕೇಳಿದೆ.

ಪಟ್ಟಿ ಪ್ರತಿಯೊಬ್ಬರ ಕೈಯಲ್ಲೂ ಇತ್ತು. ಅವರು ‘ಹೌದು, ನಾನೂ ಅದನ್ನೇ ಯೋಚಿಸುತ್ತಿದ್ದೆ. ನಿಮ್ಮ ಉದ್ಘಾಟನಾ ಭಾಷಣ ಮೊದಲು ಆಗಬೇಕಿತ್ತು’ ಎಂದು ಆಯೋಜಕ ಬಳಗದಿಂದ ಒಬ್ಬರನ್ನು ಕರೆದು ತೋರಿಸಿ ಕೇಳಿದರು.

ಇನ್ನು ಅಲ್ಲಿ ಕೂರುವುದು ವ್ಯರ್ಥವೆನ್ನಿಸಿತು. ಎದ್ದು ಕೆಳಗಿಳಿದು ಹೊರಬಂದೆ.

*****

ಮೊದಲು ಗಂಡಸೊಬ್ಬ ಮಹಿಳೆಯೊಬ್ಬಳು ಮಹಿಳಾದಿನದ ಬಗ್ಗೆ ಆಡುತ್ತಿದ್ದ  ಮಾತನ್ನು ಅರ್ಧಕ್ಕೆ ಕತ್ತರಿಸಿ  ಕೊನೆಗೆ ನಡೆಯುವುದು ತನ್ನ  ಮಾತೇ ಎನ್ನುವುದನ್ನು ಸಾಬೀತುಪಡಿಸಿದ್ದ. ಮೂರು ದಿನಗಳ ನಂತರ, ಎಲ್ಲ ಕಡೆ ನನ್ನ ಹೆಸರು ಹಾಕಿಸಿ, ವೇದಿಕೆಯಲ್ಲಿ ಕೂರಿಸಿ, ಕೊನೆಗೆ  ನಾನು ಬಾಯೇ ಬಿಡದಂತೆ ನಮ್ಮವರಿಂದಲೇ ಘಟಿಸಿದ ವ್ಯಂಗ್ಯವನ್ನು  ನನ್ನ ಬಿಡುಗಣ್ಣಿಗೆ ಇನ್ನೂ ಪೂರ್ತಿಯಾಗಿ ಅರಗಿಸಿಕೊಳ್ಳಲು ಸಾಧ್ಯವಾಗಿಲ್ಲ.

ಕಾಲ, ಹಣ, ಶ್ರಮ ಮಾತ್ರ ನನ್ನದೇ ಆಗಿತ್ತು! ಹೇಳಬೇಕೆಂದಿದ್ದ ಆದರೆ ಗಂಟಲಲ್ಲೇ ಉಳಿದು ಹೋದ  ಮಾತುಗಳ ಪಠ್ಯ ಇದು:

*****

ನಮಸ್ಕಾರ. ಮಹಿಳಾ ದಿನ ಪುರುಷರ ದಿನವೂ ಹೌದು. ಇನ್ನೊಬ್ಬರ ಸ್ವಾತಂತ್ರ್ಯವನ್ನು ದಮನಿಸುವ ಮುನ್ನ ನಮ್ಮ ಸ್ವಾತಂತ್ರ್ಯ ನೆಗೆದುಬಿದ್ದಿರುತ್ತದೆ ಎನ್ನುವುದು ಹೊಳೆಯುವುದಿಲ್ಲ. ನಿನ್ನೊಳಗಿನ ಏನನ್ನೋ ಕೊಂದುಕೊಳ್ಳದೆ ಬೇರೆ ಏನನ್ನೋ ಹೊರಗೆ ಕೊಲ್ಲಲು ಸಾಧ್ಯವಿಲ್ಲ ಎಂದು ಶೇಕ್ಸಪಿಯರನ ಮ್ಯಾಕ್‌ಬೆತ್ ನಾಟಕ ಸಾರುತ್ತದೆ. ನೆರೆದಿರುವ ಎಲ್ಲ ಹೆಂಗಸರು ಮತ್ತು ಗಂಡಸರಿಗೆ ಮಹಿಳಾ-ದಿನದ ಶುಭಾಶಯಗಳನ್ನ ಹೇಳ್ತಾ ಎರಡು ಅಂಶಗಳ ಮೇಲೆ ನನ್ನ ಮಾತನ್ನ ನಿಲ್ಲಿಸೋದಕ್ಕೆ ಪ್ರಯತ್ನಿಸ್ತೀನಿ. ಒಂದು ಸ್ತ್ರೀ-ಚೈತನ್ಯ ಅಂದರೇನು? ಮತ್ತು ಇನ್ನೊಂದು, ಮಹಿಳಾ ದಿನ ಯಾಕೆ ಬೇಕು?

ಮಹಿಳಾ ದಿನ ಅಂದರೆ ಹೆಣ್ಣಿನ ಚೈತನ್ಯವನ್ನ ಸಂಭ್ರಮಿಸುವ ದಿನ. ಹೆಣ್ಣಿನ ಚೈತನ್ಯ ಅಂದರೆ ಏನು?

ಯಾರು ತನ್ನನ್ನು ನಿರ್ಬಂಧಿಸೋದಕ್ಕೆ ಒಟ್ಟಾಗಿ ಸೇರಿ ಪಿತೂರಿ ಮಾಡ್ತಾರೋ, ಅಂತವರ  ಜೊತೆಯೇ ಬದುಕನ್ನ ಒಂದೇ ಸೂರಿನಡಿ ದಿನ ನಿತ್ಯ ಕಟ್ಟುಕೊಳ್ತಾಳಲ್ಲ, ಅದರೊಳಗೆ ಬದುಕಿ ಉಳಿಯೋದಕ್ಕೆ, ಮಕ್ಕಳನ್ನ ಹುಟ್ಟಿಸಿ, ಬೆಳೆಸೋದಕ್ಕೆ ಪ್ರಯತ್ನ ಪಡ್ತಾಳಲ್ಲ, ಅದು ಸ್ತ್ರೀಚೈತನ್ಯ!

ಉತ್ಪಾದನೆ ಯಾರು ಮಾಡ್ತಾರೋ ಅವರಿಗೆ ಅದರ ಮೇಲೆ ಅಧಿಕಾರ ಇರಬೇಕು ಅಂತ ಒಪ್ಪಿಕೊಂಡಿರೋ ವ್ಯವಸ್ಥೆ ಒಳಗೇ ಇದ್ದುಕೊಂಡು ತಾನು ಹೊತ್ತು, ಹೆತ್ತು, ಬೆಳೆಸಿದ ಮಕ್ಕಳ ಅಧಿಕಾರವನ್ನ ವ್ಯವಸ್ಥೆಗೆ ಬಿಟ್ಟುಕೊಡಬೇಕಾದ ಅಸಹಾಯಕತೆಯಲ್ಲಿಯೂ ಸಹ ಹೆಣ್ಣು ಬದುಕಿ ಉಳಿತಾಳೆ. ವ್ಯವಸ್ಥೆ ತಮ್ಮ ತಮ್ಮ ಹುಚ್ಚಾಟಗಳಿಗೆ ಆ ಮಕ್ಕಳನ್ನ ಯುದ್ಧಕ್ಕೆ ಕಳುಹಿಸಿ ಅವಳ ಕಣ್ಣೆದುರೇ ಅವು ಹೊಸಕಿ ಹೋದರೂ ಸಹ ಮತ್ತೆ ಮತ್ತೆ ಯಾವುದೋ ನಂಬಿಕೆಯಲ್ಲಿ ಮಕ್ಕಳನ್ನ ಹುಟ್ಟಿಸಿ ಬೆಳೆಸುತ್ತಲೇ ಹೋಗುತ್ತಾಳಲ್ಲ? ಆ ನಂಬಿಕೆಯೇ ಸ್ತ್ರೀಚೈತನ್ಯ!

ಸಂತಾನೋತ್ಪತ್ತಿಗೆ ಕೇವಲ ಶೇಕಡಾ ಹತ್ತು ಗಂಡು ಸಂತಾನ ಸಾಕು. ಅಂದರೆ ಉಳಿದ ಶೇಕಡಾ ತೊಂಬತ್ತು ಮಂದಿ ಅಕ್ಷರಶಃ ವೇಸ್ಟ್ ಬಾಡೀಸ್. ಆದರೂ ಸಹ ಆ ವೇಸ್ಟ್ ಬಾಡಿಗಳನ್ನು ಸಹ ಸಾಕುತ್ತಾ, ಸಲಹುತ್ತಾ, ಸಹಿಸಿಕೊಳ್ಳುತ್ತಾ ಮುಂದೆ ಹೋಗೋದಕ್ಕೆ ಪ್ರಯತ್ನ ಪಡ್ತಾಳಲ್ಲ, ಅದು ಸ್ತ್ರೀಚೈತನ್ಯ!

ಹೆಣ್ಣು ಅಂದರೆ ಕೇವಲ ಒಂದು ದೇಹ, ತಾನು ಮಾಡಿದ್ದು ಎಂದು ಹೇಳಿಕೊಳ್ಳುವ ಆಸ್ತಿಗೆ ವಾರಸುದಾರರನ್ನ ಕೊಡೋ ಒಂದು ಗರ್ಭ ಅನ್ನೋ ಸತ್ಯವನ್ನ ಪ್ರೀತಿ, ಪ್ರೇಮ, ಇತ್ಯಾದಿ ವ್ಯವಸ್ಥಿತ ಸುಳ್ಳುಗಳಿಂದ ಮುಚ್ಚಿ ಹಾಕಿದರೂ ಸಹ ಅವನ್ನೆಲ್ಲ ಮುಗ್ಧತನದಿಂದ ನಂಬಿಕೊಂಡು ಭ್ರಮೆಗಳೆಲ್ಲ ಕರಗಿ ಹೋದ ಮೇಲೂ ಅಲ್ಲೇ ಉಳಿಯೋ ತಾಕತ್ತಿದೆಯಲ್ಲ, ಅವಳು ತಪಸ್ಸು ಮಾಡ್ತೀನಿ ಅಂತ ಕಾವಿ ಹಾಕಿಕೊಂಡು ಹಿಮಾಲಯಕ್ಕೆ ಓಡಿ ಹೋಗಲ್ಲ, ಅದು ಸ್ತ್ರೀಚೈತನ್ಯ!

ಕೊನೆಯದಾಗಿ ನಾನು ಹಲವು ವರ್ಷ ವಾಸವಾಗಿದ್ದ ನ್ಯೂಜಿಲ್ಯಾಂಡ್ ಅನ್ನೋ ಒಂದು ಪುಟ್ಟ ದೇಶದ ಬಗ್ಗೆ ಹೇಳೋದಕ್ಕೆ ಇಷ್ಟಪಡ್ತೀನಿ:

ಅಲ್ಲಿ ಕಣ್ಣಿಗೆ ಕುಕ್ಕುವ ಶ್ರೀಮಂತಿಕೆಯಿಲ್ಲ. ಯಾವ ಗಳಿಗೆಯಲ್ಲಾದರೂ ಭೂಕಂಪಗಳಾಗಬಹುದು, ಸುನಾಮಿಗಳು ಇಡೀ ದೇಶವನ್ನೇ ನುಂಗಿ ಹಾಕಬಹುದು. ಆದರೂ ಸಹ ಜಗತ್ತಿನಲ್ಲಿ ಜನ ಸಂತೋಷವಾಗಿರೋ ಹತ್ತು ದೇಶಗಳಲ್ಲಿ ನ್ಯೂಜಿಲ್ಯಾಂಡ್ ಯಾವಾಗಲೂ ಒಂದಾಗಿ ಇರುತ್ತೆ. ಆ ಹತ್ತರಲ್ಲಿ ನೀವು ಯಾವುದನ್ನು ತೆಗೆದುಕೊಂಡರೂ ಸಹ ಕೆಲವು ಸಾಮಾನ್ಯ ಲಕ್ಷಣಗಳು ನಮಗೆ ಕಾಣಿಸ್ತಾವೆ. ಅಲ್ಲಿ ಹೆಣ್ಣಿನ ಹಕ್ಕುಗಳಿಗೆ ಮೊದಲ ಆದ್ಯತೆ ಇರುತ್ತೆ, ಅಲ್ಲಿ ಉಚಿತವಾಗಿ ವೈದ್ಯಕೀಯ ಸಹಾಯ ಇರುತ್ತೆ, ಅಲ್ಲಿ ಪ್ರತಿಯೊಬ್ಬರಿಗೂ ವಿದ್ಯಾಭ್ಯಾಸದ ಹಕ್ಕು, ಉದ್ಯೋಗದ ಹಕ್ಕು, ಮತ್ತು ಆಯ್ಕೆಯ ಹಕ್ಕಿರುತ್ತೆ.

ಆ ದೇಶ ಚಿಕ್ಕದು ಬಿಡಿ, ನಮ್ಮ ಭಾರತ ಅತಿ ದೊಡ್ಡದು! ಪ್ರಾಕೃತಿಕ ಸಂಪತ್ತು ಮತ್ತು ಮಾನವ ಸಂಪನ್ಮೂಲಗಳಲ್ಲಿ ಸಹ ನಾವು ದೊಡ್ಡವರು ತಾನೇ? ರಾಜಕೀಯ ಇಚ್ಛಾಶಕ್ತಿ ಇಲ್ಲದಿರುವಾಗ ಎಂಥಾ ಜುಜುಬಿ ನೆಪಕ್ಕೂ ಅವಕಾಶವಿದೆ!

ಅಂದ್ರೆ ನ್ಯೂಜಿಲ್ಯಾಂಡ್  ಸ್ವರ್ಗ ಅಂತ ಹೇಳೋದು ನನ್ನ ಉದ್ದೇಶವಲ್ಲ. ಅಲ್ಲಿಯೂ ಬೇಕಾದಷ್ಟು ಸಮಸ್ಯೆಗಳಿದಾವೆ. ಆದರೆ ಏನೇ ಆದರೂ ನೋಡಿಕೊಳ್ಳೋದಕ್ಕೆ ಒಂದು ವ್ಯವಸ್ಥೆ ಇದೆ ಅನ್ನೋದು ಒಂದು ಬಹು ದೊಡ್ಡ ನೆಮ್ಮದಿ. ಆ ವ್ಯವಸ್ಥೆಯಲ್ಲಿ ಹೆಚ್ಚಿನಂಶ ನ್ಯಾಯ ಸಿಗುತ್ತೆ ಅನ್ನೋದು ದಿನನಿತ್ಯದ ಬದುಕನ್ನ ಎಷ್ಟೋ ಮಟ್ಟಿಗೆ ಸುಲಭವಾಗಿಸುತ್ತೆ ಅನ್ನೋದನ್ನ ಗಮನಿಸಬೇಕು. ಆ ದೇಶದ ಪ್ರಧಾನಿ ಒಬ್ಬ ನಲ್ವತ್ತರ ವಯಸ್ಸಿನ ಹೆಣ್ಣು ಮಗಳು. ಕೋವಿಡ್ ಮಾರಿಯನ್ನು ಅತ್ಯಂತ ಸಮರ್ಥವಾಗಿ ನಿಭಾಯಿಸಿದ ಹೆಣ್ಣುಮಗಳು.

ಕೆಲವು ವರುಷಗಳ  ಹಿಂದೆ ವಿಶ್ವಸಂಸ್ಥೆಯಲ್ಲಿ ಪ್ರಧಾನ ಭಾಷಣ ಮಾಡಬೇಕಾದಾಗ ಆಗ ತಾನೇ ಹುಟ್ಟಿದ್ದ ತನ್ನ ಮಗುವನ್ನೂ ಕೈಯಲ್ಲಿ ಹಿಡಿದೇ ಭಾಷಣ ಮಾಡಿದಳು. ಅವಳು ಹೇಳಿದ ಒಂದು ಅಂಶವಂತೂ ತುಂಬ ಪ್ರಸ್ತುತ ಅನ್ನಿಸಿತ್ತು: ಜಗತ್ತಿನಲ್ಲಿ ಅಧಿಕಾರ ತಾಯಂದಿರ ಕೈಯಲ್ಲಿದ್ದಿದ್ದರೆ ಇಷ್ಟೊಂದು ಯುದ್ಧ, ಹಿಂಸೆ, ಸಾವು ನೋವುಗಳು ಇರುತ್ತಿರಲಿಲ್ಲ. ಅಷ್ಟೇ ಅಲ್ಲ, ಎಂತ ಬಡತನದಲ್ಲೂ ಮನೆಯಲ್ಲಿ ಅನ್ನ ಕಾಣಿಸುವ ಜವಾಬ್ದಾರಿಯುಳ್ಳ ಹೆಂಗಸು ಸಂಪತ್ತನ್ನು ಅನವಶ್ಯಕವಾಗಿ ಸೂರೆಯಾಗಲು ಬಿಟ್ಟು ಈಗ ಜಗತ್ತನ್ನ ಆವರಿಸಿಕೊಳ್ಳುತ್ತಿರೋ ಆರ್ಥಿಕ ಹಿಂಜರಿತಕ್ಕೆ ಕಾರಣಳಾಗುತ್ತಿರಲಿಲ್ಲ.

Out of Africa ಅನ್ನೋ ಒಂದು ಸುಪ್ರಸಿದ್ಧ ಕಾದಂಬರಿ ಮತ್ತು ಚಲನಚಿತ್ರದಲ್ಲಿ ಒಂದು ತುಂಬ ಮಹತ್ವದ ಮಾತು ಬರುತ್ತೆ. ಅದರ ನಾಯಕಿ ಹೇಳ್ತಾಳೆ: ಹೆಂಗಸು ಯುದ್ಧಕ್ಕೆ ಹೋಗಬೇಕಾಗಿಯೇ ಇಲ್ಲ. ಯಾಕೆಂದ್ರೆ ದಿನನಿತ್ಯದ ಬದುಕಲ್ಲಿ ಹೊಡೆದಾಡಿಕೊಂಡು ಬದುಕಿ ಉಳಿಯೋದೇ ಒಂದು ದೊಡ್ಡ ವಿಷಯ. ಹಾಗೇನೆ, ಅವಳಿಗೆ ಜೈಲುವಾಸ ಸಹ ಬೇಕಾಗಿಲ್ಲ. ಯಾಕೆಂದ್ರೆ ಮನೆನೆ ಅವಳಿಗೆ ಜೈಲಾಗಿರುವ ಹಾಗೆ ವ್ಯವಸ್ಥೆ ನೋಡಿಕೊಳ್ಳುತ್ತೆ.

ಇರಲಿ, ಮಹಿಳಾ ದಿನ ಯಾಕೆ ಬೇಕು ಅಂತ ಕೆಲವು ಕಾರಣಗಳನ್ನ ಪಟ್ಟಿ ಮಾಡಬಹುದು: ಜಗತ್ತಿನ ಸುಮಾರು ಅರವತ್ತರಷ್ಟು ಕೆಲಸಗಳನ್ನ ನಿಭಾಯಿಸಿಯೂ ಕೇವಲ ಶೇಕಡಾ ಒಂದರಷ್ಟು ಸಂಪತ್ತನ್ನ ಹೊಂದಿರುವ  ಹೆಣ್ಣನ್ನ ನೆನಪಿಸಿಕೊಳ್ಳೋದಕ್ಕೆ ಈ ಮಹಿಳಾ ದಿನ!

ಎರಡನೆಯದಾಗಿ,  ಅರ್ಹತೆಯನ್ನು ಹೊಂದಿದ್ದರೂ ಸಹ ಕಾಣಿಸದಂತೆ ತೆರೆಯ ಮರೆಯಲ್ಲಿ ಕರ್ಮ ಅವಳದ್ದು. ಶಿಕ್ಷಣದಲ್ಲಿ ಹೆಣ್ಣು ಯಾವಾಗಲೂ ಮುಂದೆ ಇರ್ತಾಳೆ, ನೀವು ಯಾವ ಫಲಿತಾಂಶವನ್ನ ತೆಗೆದುಕೊಂಡ್ರೂ ಸರಿ, ಹೆಣ್ಮಕ್ಕಳೇ ಮುಂದು ಅನ್ನೋದನ್ನ ಸುದ್ದಿಯಲ್ಲಿ ದಶಕಗಳಿಂದ ನೋಡ್ತಾನೆ ಇದೀರಿ, ಆದರೆ ನಮ್ಮ ಪಾರ್ಲಿಮೆಂಟಿನಲ್ಲಿ, ಉನ್ನತ ಹುದ್ದೆಗಳಲ್ಲಿ, ಎಷ್ಟು ಮಂದಿ ಇರ್ತಾರೆ? ಆ ಬುದ್ಧಿವಂತ ಹೆಣ್ಣುಮಕ್ಕಳೆಲ್ಲ ಎಲ್ಲಿ ಮಾಯ ಆಗ್ತಾರೆ? ಇತ್ಯಾದಿ ಪ್ರಶ್ನೆಗಳನ್ನ ಕೇಳಿಕೊಳ್ಳೋದಕ್ಕೆ ಈ ಮಹಿಳಾ ದಿನ!

ಮೂರನೆಯದಾಗಿ, ಶತಶತಮಾನಗಳಿಂದ, ಅಂದ್ರೆ 1830-40 ರ ದಶಕಗಳ ತನಕವೂ ತುಳಿಸಿಕೊಂಡು ಕುಟುಂಬ ಅನ್ನೋ ವ್ಯವಸ್ಥೆಯೊಳಗೆ ಮಾಯವಾಗಿದ್ದೂ, ಸುಮಾರು ಇನ್ನೂರು ವರ್ಷಗಳ ಹಿಂದೆ ಸಿಡಿದು ನಿಂತಳಲ್ಲ, ಅದನ್ನ ನೆನಪಿಸಿಕೊಳ್ಳೋದಕ್ಕೆ ಈ ಮಹಿಳಾದಿನ!

ಓ, ಈ ಹೆಂಗಸರ ಹೋರಾಟ ಎಲ್ಲ ಅಮೆರಿಕಾದಲ್ಲಿ ಹುಟ್ಟಿ ಯುರೋಪಿಗೆ ಹಬ್ಬಿ ಕೊನೆಗೆ 1975ರಲ್ಲಿ ವಿಶ್ವಸಂಸ್ಥೆಯಲ್ಲಿ ಮಾನ್ಯತೆಯನ್ನು ಪಡೆದುಕೊಳ್ತು. ನಮ್ಮ ಸನಾತನ ಭಾರತೀಯ ಸಂಸ್ಕೃತಿಗೆ ಸಂಬಂಧಿಸಿದ್ದಲ್ಲ ಅಂತ ಹಾದಿ ತಪ್ಪಿಸುವವರಿಗೆ ಎರಡು ಚಾರಿತ್ರಿಕ ಘಟನೆಗಳನ್ನ  ನೆನಪಿಸಬೇಕಾಗಿದೆ:

1918ರಲ್ಲಿ ಭಾರತದ ಅಹಮದಾಬಾದಿನಲ್ಲಿ ಮಹಿಳಾ ಗಿರಣಿ ಕಾರ್ಮಿಕರ ಪ್ರತಿಭಟನೆ ನಡೀತು. ಅತ್ಯಂತ ಕೆಳಮಟ್ಟದ ವೇತನ ಪಡೀತಿದ್ದ ಹೆಂಗಸರು ಅನಸೂಯ ಸಾರಾಭಾಯಿ ಅವರ ನಾಯಕತ್ವದಲ್ಲಿ ಪ್ರತಿಭಟನೆಯನ್ನ ನಡೆಸಿದ್ರು. ಅದಕ್ಕೆ ಮಹಾತ್ಮ ಗಾಂಧೀಜಿಯವರ ಬೆಂಬಲ ಸಹ ಇತ್ತು.

ಹಾಗೇನೆ, 1920ರಲ್ಲಿ ಮೊಟ್ಟ ಮೊದಲ ಬಾರಿಗೆ ದಕ್ಷಿಣ ಭಾರತದಲ್ಲಿ ಮಧುರೈ ಗಿರಣಿ ಮಹಿಳೆಯರ ಮುಷ್ಕರ. ಹೆಂಗಸರನ್ನ ಅತ್ಯಂತ ಕೀಳುಮಟ್ಟದಲ್ಲಿ ನಡೆಸಿಕೊಳ್ಳುತ್ತಿದ್ದರ ವಿರುದ್ಧ, ಕಿರುಕುಳದ ವಿರುದ್ಧ, ಮತ್ತು ಸಂಘವನ್ನ ಕಟ್ಟಬಾರದು ಎಂದು ತಡೆ ಒಡ್ಡುತ್ತಿದ್ದುದರ ವಿರುದ್ಧ.

ಹೆಣ್ಣು ಇತಿಹಾಸದಲ್ಲಿ ತನ್ನ ಪ್ರತಿಯೊಂದು ಹಕ್ಕನ್ನೂ  ಹೋರಾಟ ಮಾಡಿಯೇ ಪಡೆದುಕೊಂಡಳು ಅನ್ನೋ ಸತ್ಯವನ್ನ ನೆನಪಿಸಿಕೊಳ್ಳೋದಕ್ಕೆ ನಮಗೆ ಮಹಿಳಾ ದಿನ ಬೇಕು. ಅಂದ್ರೆ ನಮ್ಮ ಹಕ್ಕುಗಳು, ಅದೆಷ್ಟು ಕಡಿಮೆ ಪ್ರಮಾಣದಲ್ಲಿ ನಮಗೆ ದಕ್ಕಿದರೂ ಸಹ ಅದು ಹೆಣ್ಣುಮಕ್ಕಳ ಪ್ರಚಂಡ ಹೋರಾಟದಿಂದಲೇ ಬಂದಿದ್ದೆ ಹೊರತು ಯಾರ ಭಿಕ್ಷೆನೂ ಅಲ್ಲ ಅಂತ ಮತ್ತೆ ಮತ್ತೆ ನೆನಪಿಸಿಕೊಳ್ಳಬೇಕಾದ ದಿನ.

ಅಂತಾರಾಷ್ಟ್ರೀಯ ನೆಲೆಯಲ್ಲಿ ಮತ್ತು ಭಾರತದ ನೆಲೆಯಲ್ಲಿ ಹೋರಾಟ ನಡೆಸಿದ್ರಲ್ಲ, ಆ ಮೊದಲಗಿತ್ತಿಯರನ್ನ ವಿನಯದಿಂದ, ಕೃತಜ್ಞತೆಯಿಂದ ನೆನಪಿಸಿಕೊಳ್ಳೋದಕ್ಕೆ ನಮಗೆ ಬೇಕು ಈ ಮಹಿಳಾ ದಿನ!

ನಾಲ್ಕನೆಯದಾಗಿ, ಕೆಲವು ಸತ್ಯಗಳನ್ನ ಮತ್ತೆ ಮತ್ತೆ ನಮ್ಮ ಪ್ರಜ್ಞೆಗೆ ತಂದುಕೊಳ್ಳೋದಕ್ಕೆ ನಮಗೆ ಮಹಿಳಾ ದಿನ ಬೇಕು.  ಹೆಣ್ಣಿನ ಹಕ್ಕುಗಳು ಸಹ ಮಾನವ ಹಕ್ಕುಗಳೇ, ಅದು ವಿದ್ಯಾಭ್ಯಾಸದ ಹಕ್ಕು, ಉದ್ಯೋಗದ ಹಕ್ಕು, ಸಮಾನ ವೇತನದ ಹಕ್ಕು, ಆತ್ಮಗೌರವದಿಂದ ಬದುಕುವ ಹಕ್ಕು, ಎಲ್ಲಕ್ಕಿಂತ ಹೆಚ್ಚಾಗಿ ತನ್ನ ಬದುಕನ್ನ ತಾನೇ ನಿರ್ಧರಿಸಿಕೊಳ್ಳೋ ಹಕ್ಕು, ಇದೆಲ್ಲ ಒಂದು ರಾಷ್ಟ್ರದ ಪ್ರಜೆಗಳ ಮೂಲಭೂತ ಹಕ್ಕುಗಳು. ಹೆಣ್ಣು ನಿಮ್ಮ ಆಸ್ತಿಗೆ ವಾರಸುದಾರರನ್ನ ಹುಟ್ಟಿಸುವ ಕೇವಲ ಗರ್ಭ ಅಲ್ಲ, ಅವಳೊಬ್ಬ ಪ್ರಜೆ,  ಅಂತ ಸಾರಿ ಸಾರಿ ವ್ಯವಸ್ಥೆಗೆ ನೆನಪಿಸಬೇಕಲ್ಲ, ಅದಕ್ಕೆ ಈ ಮಹಿಳಾ ದಿನ!

ಐದನೆಯದಾಗಿ, ಕೌಟುಂಬಿಕ ಹಿಂಸೆ ಯುದ್ಧ ಹಿಂಸೆಗಿಂತ ಘೋರ ಅಂತ ಸಮಾಜಶಾಸ್ತ್ರಜ್ಞರು ಹೇಳ್ತಾನೆ ಇದಾರೆ. ಮನೆಯೊಳಗೆ ನಡೆಯುವ ಹಿಂಸೆ ರಾಜಕೀಯದ ಒಂದು ಭಾಗವೇ. Personal is political ಅಂತ ದಶಕಗಳಿಂದ ಹೋರಾಟ ಮಾಡ್ತಿದೀವಲ್ಲ, ಅದನ್ನ ಮತ್ತೆ ಇನ್ನೊಂದು ಸಲ ವ್ಯವಸ್ಥೆಗೆ ನೆನಪು ಮಾಡಿಕೊಡೋದಕ್ಕೆ ನಮಗೆ ಬೇಕು ಈ ಮಹಿಳಾ ದಿನ!

ಆರನೆಯದಾಗಿ, ಮಹಿಳಾ ದಿನ ಅನ್ನೋದು ದುಡಿಯಲು ಹೊರಗೆ ಹೋದ ಹೆಂಗಸರಿಂದ ಪ್ರಾರಂಭ ಆಗಿರಬಹುದು. ಆದರೆ ಮನೆಯೊಳಗೆ ಇರ್ತಾರಲ್ಲ ಅವರ ಬದುಕುಗಳು ಸಹ ಘೋರವಾಗಿರ್ತಾವೆ ಎನ್ನುವುದನ್ನ ನೆನಪಿಸಿಕೊಳ್ಳೋದಕ್ಕೆ ನಮಗೆ ಈ ಮಹಿಳಾ ದಿನ ಬೇಕು. ಆ ಮನೆಯೊಳಗಿನ ಕೊನೆಯೇ ಇಲ್ಲದ ದುಡಿತಕ್ಕೆ ವೇತನವೇ ಇಲ್ಲದ ಹಾಗೆ ವ್ಯವಸ್ಥೆ ಪಿತೂರಿ ಮಾಡಿದೆ ಅನ್ನೋ ಅಂಶವನ್ನ ಒತ್ತಿ ಹೇಳಿದವರು ನೊಬೆಲ್ ಪ್ರಶಸ್ತಿ ವಿಜೇತ ಅರ್ಥಶಾಸ್ತ್ರಜ್ಞ ಅಮಾರ್ತ್ಯ ಸೇನ್. ಯಾಕೆ, ಹೇಗೆ, ಏನು ಅನ್ನೋ ಪ್ರಶ್ನೆಗಳನ್ನ ಕೇಳಿಕೊಳ್ಳೋದಕ್ಕೆ ನಮಗೆ ಈ ಮಹಿಳಾ ದಿನ ಬೇಕು. ಒಂದು ಕಡೆ ವೇತನವೇ ಇಲ್ಲದ ಕೆಲಸ, ಇನ್ನೊಂದು ಕಡೆ ತಾರತಮ್ಯದ ಫಲವಾಗಿ ಕಡಿಮೆ ವೇತನ, ಮತ್ತು ಇನ್ನೊಂದು ಕಡೆ ಹೆಣ್ಣು ಬಳಸುವ ವಸ್ತುಗಳಿಗೆ ಹೆಚ್ಚು ತೆರಿಗೆ ತೆರಬೇಕಾದ ಪಿಂಕ್ ಟ್ಯಾಕ್ಸ್ ಅನ್ನೋ ಪೀಡೆ.

ಏಳನೆಯದಾಗಿ, ಸಾರ್ವಜನಿಕ ಬದುಕಿನಲ್ಲಿ ಹೆಣ್ಣು ಎಲ್ಲಿದಾಳೆ ಅಂತ ಕೇಳಿಕೊಳ್ಳೋದಕ್ಕೆ ನಮಗೆ ಮಹಿಳಾ ದಿನ ಬೇಕು.

ಇತಿಹಾಸದಲ್ಲಂತೂ ಹೆಣ್ಣು ಹೆಚ್ಚಿನಂಶ ಇರೋದೇ ಇಲ್ಲ. ಅದಕ್ಕೇ ಹಿಸ್ಟರಿಯನ್ನ his story ಅಂತ ಗುರುತಿಸ್ತಾರೆ. ಇತಿಹಾಸ ಅವನ ಕಥೆಯೇ ಹೊರತು ಅವಳದಲ್ಲ.

ನಮ್ಮ ಬದುಕುಗಳನ್ನ ನಿರ್ಧರಿಸೋ ರಾಜಕೀಯದಲ್ಲಿ, ಉದಾಹರಣೆಗೆ  ನಮ್ಮ ಪಾರ್ಲಿಮೆಂಟಿನಲ್ಲಿ ಹೆಂಗಸರು ಎಷ್ಟು ಮಂದಿ ಇದಾರೆ ಅಂತ ಬೆರಳಲ್ಲಿ ಎಣಿಸಬಹುದು. ರಾಜಕೀಯದಲ್ಲಿ ಹೆಣ್ಣಿಗೆ ಶೇಕಡಾ ಮೂವತ್ಮೂರು ಮೀಸಲಾತಿಯ ಕಾಯಿದೆಯ ಪ್ರಶ್ನೆ ಬಂದಾಗೆಲ್ಲಾ ಎಲ್ಲಾ ಪಾರ್ಟಿಗಳು ಒಟ್ಟಾಗಿ ಅದು ಹೇಗಾದರೂ ಕಾರ್ಯರೂಪಕ್ಕೆ ಬರದಿರುವ ಹಾಗೆ ನೋಡಿಕೊಳ್ಳಲಾಗುತ್ತೆ. ಒಬ್ರಿಗೊಬ್ರು ಭುಜದ ಮೇಲೆ ಕೈ ಹಾಕಿಕೊಂಡು ಏನೇ ಆದ್ರೂ ಈ ಹೆಂಗಸರಿಗೆ ಅಧಿಕಾರ ಕೊಡಬಾರದು ಕಣ್ರೀ ಅಂತ ಹೇಳ್ತಾ ಕಾಫಿ ಕುಡಿಯೋದಕ್ಕೆ ಹೋಗ್ತಾರೆ. ಸಾಹಿತ್ಯದ ದಿಗ್ಗಜರೆಲ್ಲಾ ಹೆಚ್ಚಿನಂಶ ಗಂಡಸರೇ. ಅಲ್ಲೋ ಇಲ್ಲೋ ಒಂದೊಂದು ಹೆಣ್ಣು ಮುಖ ಕಾಣಿಸಬಹುದು. ವಿಜ್ಞಾನವಂತೂ ಪುರುಷಸಿಂಹರ ಮೀಸಲು ವಲಯ. ವ್ಯವಹಾರದಲ್ಲಿ ಕೋಟ್ಯಾಧಿಪತಿಗಳೆಲ್ಲಾ ಗಂಡಸರೇ.

ಇನ್ನು ಧರ್ಮ ಯಾವತ್ತೂ ಹೆಣ್ಣಿನ ಪರವಾಗಿಲ್ಲ. ಎರಡೂವರೆ ಸಾವಿರ ವರ್ಷಗಳ ಹಿಂದಿನ ಬೌದ್ಧಧರ್ಮ ಮತ್ತು ಜೈನಧರ್ಮಗಳು ಸ್ವಲ್ಪ ಮಟ್ಟಿಗಾದರೂ ಹೆಣ್ಣಿಗೆ ಒಳಗೆ ಬರೋದಕ್ಕೆ ಅವಕಾಶ ಮಾಡಿಕೊಟ್ಟಿದ್ದವು. ಹನ್ನೆರಡನೆಯ ಶತಮಾನದಲ್ಲಿ ಬಸವಣ್ಣನ ಅನುಭವ ಮಂಟಪ ಅದಕ್ಕೆ ಆಸ್ಪದ ಮಾಡಿಕೊಟ್ಟಿತ್ತು. ಇಪ್ಪತ್ತನೆಯ ಶತಮಾನದ ಭಾರತದಲ್ಲಿ ಹೆಣ್ಣಿನ ಹಕ್ಕುಗಳ ಬಗ್ಗೆ ಮಾತಾಡೋವಾಗ ನಾವು ಮರೆಯಬಾರದ ಹೆಸರು ಬಾಬಾ ಸಾಹೇಬ್ ಅಂಬೇಡ್ಕರ್. ಅವರು ರೂಪಿಸಿದ ಸಂವಿಧಾನದಲ್ಲಿ  ಬರುವ ಮಾನವಹಕ್ಕುಗಳು ಹೆಣ್ಣಿನ ಹಕ್ಕುಗಳನ್ನ ಸಹ ಒಳಗೊಂಡಿವೆ. ಬಸವಣ್ಣ ಮತ್ತು ಬಾಬಾಸಾಹೇಬ್ ಅಂಬೇಡ್ಕರ್  ನಾವು ಹೆಣ್ಣುಮಕ್ಕಳು ಮರೆಯಬಾರದ ಹೆಸರುಗಳು.

ಆದರೆ, ಒಂದು ಕಡೆ ಮಾತ್ರ ಹೆಂಗಸರು ಹೆಚ್ಚಿನ ಸಂಖ್ಯೆಯಲ್ಲಿ ಇರ್ತಾರೆ. ಅದು  ಹುಚ್ಚಾಸ್ಪತ್ರೆಗಳಲ್ಲಿ. ಇದಕ್ಕೆ ಸಂಬಂಧಪಟ್ಟ ಹಾಗೆ ಹದಿನೇಳನೆಯ ಶತಮಾನದಿಂದ ಜಗತ್ತಿನ ಎಲ್ಲ ಕಡೆ ಅಧ್ಯಯನಗಳು ನಡೆದಿವೆ. ಇವತ್ತಿಗೂ ನೀವು ಯಾವುದೇ ಮೆಂಟಲ್ ಕ್ಲಿನಿಕ್ ಅಥವಾ ಹುಚ್ಚಾಸ್ಪತ್ರೆಗೆ ಹೋಗಿ ನೋಡಿ, ಅಲ್ಲಿ ಹೆಂಗಸರು ಹೆಚ್ಚಿನ ಸಂಖ್ಯೆಯಲ್ಲಿ ಇರ್ತಾರೆ.

ಹುಚ್ಚು ಎನ್ನುವುದು ದೇಹದಿಂದ ಬಂದಿದ್ದು, ಹೆಂಗಸಿನ ಮುಟ್ಟು, ಗರ್ಭ ಹೊರುವುದು ಇತ್ಯಾದಿಗಳಿಂದ ಬಂದಿದ್ದು ಅನ್ನೋ ವಿತಂಡ ವಾದವನ್ನ ಗಂಡಸರು ಹೂಡಿದ್ದಿದೆ. ಅದು ಸುಳ್ಳು ಅಂತ ಸಹ ವೈದ್ಯಕೀಯ ವಿಜ್ಞಾನ ಸಾಧಿಸಿ ತೋರಿಸಿದೆ. ಅದು ಮನಸ್ಸಿಗೆ ಸಂಬಂಧಪಟ್ಟಿದ್ದು, ಸಮಾಜದಿಂದ ಬಂದಿದ್ದು. ಮೈಮೇಲೆ ದೇವರು ಬರೋದು ಸಹ ಅದರ ಇನ್ನೊಂದು ರೂಪ. ಅದು ಹೆಂಗಸರಲ್ಲಿ ಹೆಚ್ಚು ಅಂತ ಅಧ್ಯಯನಗಳು ಹೇಳ್ತಾವೆ. ಹತಾಶೆಯಿಂದ ಕುಸಿದ ಮನಸ್ಸು ಆ ದಾರಿಯನ್ನ ಕಂಡುಕೊಳ್ಳುತ್ತೆ. ಈ ಸತ್ಯವನ್ನ ಗುರುತಿಸಿ ಪ್ರಶ್ನೆಗಳನ್ನ ಕೇಳೋದಕ್ಕೆ ನಮಗೆ ಮಹಿಳಾ ದಿನ ಬೇಕು.

About The Author

ಸುಕನ್ಯಾ ಕನಾರಳ್ಳಿ

ನಿವೃತ್ತ ಇಂಗ್ಲಿಷ್ ಪ್ರಾಧ್ಯಾಪಕಿ, ಲೇಖಕಿ, ಮತ್ತು ಭಾಷಾಂತರಕಾರ್ತಿ. ವೈದೇಹಿ (An Afternoon with Shakuntala and Other Stories) ಮತ್ತು ಅಗ್ರಹಾರ ಕೃಷ್ಣಮೂರ್ತಿಯವರ ಕೃತಿಗಳು (Love and Water Flow Together) [(ಕುವೆಂಪು ಭಾಷಾಭಾರತಿ ಪ್ರಶಸ್ತಿ  (2023) ಮತ್ತು ಕರ್ನಾಟಕ ಸಾಹಿತ್ಯ ಅಕಾಡೆಮಿಅನುವಾದಿತ ಪುಸ್ತಕ ಪ್ರಶಸ್ತಿ (2023)] ಇಂಗ್ಲೀಷಿಗೆ ಅನುವಾದಿಸಲ್ಪಟ್ಟ ಕೃತಿಗಳು.  ‘ಹೇಳುತೇನೆ ಕೇಳು: ಮಹಿಳೆಯರ ಆತ್ಮಕಥೆಗಳು’; ‘ಕಥೆ ಹೇಳುವೆ’; ‘ಬರ್ತಿಯಾ?… ಎಷ್ಟು?…: ಭಾರತೀಯ ಸೂಳೆಲೋಕದಕಥೆಗಳು’; ನಯನತಾರ ಸೆಹಗಲ್ ಅವರ ‘ಚಿಟ್ಟೆಗಳ ಪಾಡು’ ಇತ್ಯಾದಿ ಅವರ ಕನ್ನಡ ಭಾಷಾಂತರ ಕೃತಿಗಳು. ಮೌಲಾನಾ ಜಲಾಲುದ್ದೀನ್ ರೂಮಿಯ ಕಾವ್ಯದ ಭಾಷಾಂತರ ಕೃತಿ ‘ದಿವ್ಯದಲ್ಲಿ ಹಿಸ್ಸೆಯಿಲ್ಲ: ಕಡುಪ್ರೇಮಿಯ ಎದೆಯ ಹಾಡು ಇತ್ತೀಚೆಗೆ ಬಿಡುಗಡೆಯಾದ ಕೃತಿ. 'ಕನ್ನಡ-ಕಾಸರವಳ್ಳಿಯವರ ಸಿನಿಮಾಗಳಲ್ಲಿ ರಾಷ್ಟ್ರ ಮತ್ತು ಹೆಣ್ಣು' ಎರಡು ಪುಸ್ತಕಗಳಾಗಿ ಸದ್ಯದಲ್ಲೇ ಬೆಳಕು ಕಾಣಲಿದೆ. 

Leave a comment

Your email address will not be published. Required fields are marked *

ಕುಳಿತಲ್ಲೇ ಬರೆದು ನಮಗೆ ಸಲ್ಲಿಸಿ

ನಿಮ್ಮ ಅಪ್ರಕಟಿತ ಬರಹಗಳನ್ನು ಯುನಿಕೋಡ್ ನಲ್ಲಿ ಇಲ್ಲಿಗೆ ಕಳುಹಿಸಿ

editor@kendasampige.com

ನಮ್ಮ ಫೇಸ್ ಬುಕ್

ನಮ್ಮ ಬರಹಗಾರರು

ಕೆಂಡಸಂಪಿಗೆಯ ಬರಹಗಾರರ ಪುಟಗಳಿಗೆ

ಇಲ್ಲಿ ಕ್ಲಿಕ್ ಮಾಡಿ

ಪುಸ್ತಕ ಸಂಪಿಗೆ

ಬರಹ ಭಂಡಾರ