ಮಾನವ-ಮಾನವ ಸಂಬಂಧವನ್ನು ಸ್ಥೂಲವಾಗಿ ಹೇಳುವುದಾದರೆ ‘ಮಾನವ ಸ್ಪರ್ಶ’ ಎಂದು ಹೇಳಬಹುದು. ಇದರಲ್ಲಿ ‘ಭಾವ ಸ್ಪರ್ಶ’ ಮತ್ತು ‘ಶರೀರ ಸ್ಪರ್ಶ’ ಎಂಬ ಎರಡು ಅಂಶಗಳಿವೆ. ಇವೆರಡೂ ಒಂದರೊಡನೊಂದು ಬೆಸೆದುಕೊಂಡಿರುವಂಥದು. ತಾಯಿ ಅಥವಾ ತಂದೆ ಮಗುವನ್ನು ತಬ್ಬಿಕೊಳ್ಳುವುದು ಶರೀರ ಸ್ಪರ್ಶವಾಗಿರುವಂತೆಯೇ ಭಾವಸ್ಪರ್ಶವೂ ಹೌದು. ಅದು ಸಂವಹನವೂ ಹೌದು. ಅನ್ಯ ವ್ಯಕ್ತಿಯ ಶರೀರ ಸ್ಪರ್ಶ ಮತ್ತು ಭಾವಸ್ಪರ್ಶ ಬಯಸಿ ಅನಾಹುತಕ್ಕೀಡಾಗುವ ಹದಿ ಹರೆಯದವರಲ್ಲಿ ಅನೇಕ ಮಂದಿ ತಮ್ಮ ಬಾಲ್ಯದಲ್ಲಿ ಯಾವುದೋ ಕಾರಣದಿಂದ ತಾಯಿತಂದೆಯರ ಜೀವ-ಭಾವ ಸ್ಪರ್ಶಕ್ಕೆ ದೂರವಾದವರಾಗಿರುತ್ತಾರೆ ಎನ್ನುವ ಸತ್ಯವನ್ನು ಅನೇಕ ಅಪರಾಧ ವರದಿಗಳು ಬೆಳಕಿಗೆ ತಂದಿವೆ.

‘ಭಾವ ಸ್ಪರ್ಶ’ ಮಾತಿನ ಮೂಲಕ. ಮಾತು ಎಂಬುದರಲ್ಲಿ ‘ಮಾತು’ ಅಥವಾ ‘ಕಮ್ಯೂನಿಕೇಶನ್’ ಆಗಿರುವ ಎಲ್ಲವೂ ಸೇರುತ್ತದೆ. ಕಲೆ, ಸಾಹಿತ್ಯ, ಶಿಲ್ಪ, ನೃತ್ಯ ಮುಂತಾದ್ದೆಲ್ಲವೂ ಭಾಷೆ ಅಥವಾ ಕಮ್ಯೂನಿಕೇಶನ್ ಆಗಿರುತ್ತದೆ. ಮಾನವ ಸಮಾಜದಲ್ಲಿ ‘ಭಾವ ಸ್ಪರ್ಶ’ ಮತ್ತು ‘ಶರೀರ ಸ್ಪರ್ಶ’ ಎರಡಕ್ಕೂ ಸಂಬಂಧಿಸಿದ ಒಂದು ನೈತಿಕ ಮಿತಿ ಮತ್ತು ಚೌಕಟ್ಟನ್ನು ಮನುಷ್ಯ ನಿರ್ಮಿಸಿಕೊಂಡಿದ್ದಾನೆ. ಈ ನೈತಿಕತೆಯ ಮಿತಿ ಮತ್ತು ಚೌಕಟ್ಟು ಇಲ್ಲವಾದರೆ ಮನುಷ್ಯನ ಬದುಕು ಇತರ ಮೃಗಗಳ ಬದುಕಿನ ಹಾಗೆಯೇ ಇದ್ದೀತು. ಆದ್ದರಿಂದ ‘ಜೀವನ ನೈತಿಕತೆ’ ಕೂಡ ಮನುಷ್ಯನ ಜೀವನ ಕೌಶಲದ ಅವಿಭಾಜ್ಯ ಅಂಗವಾಗಿದೆ. ಜೀವನ ನೈತಿಕತೆ ಇಲ್ಲವಾದರೆ ವೃತ್ತಿ ನೈತಿಕತೆ ಕೂಡ ಇರುವುದಿಲ್ಲ.

ಮೌಖಿಕ ಸಂವಹನಕ್ಕೆ ಇವತ್ತು ಹಿಂದೆಂದೂ ಇಲ್ಲದಷ್ಟು ಮಹತ್ವ ಬಂದಿರುವುದರಿಂದ, ಭಾಷೆಯನ್ನು ಸಮರ್ಥವಾಗಿ ಆಡುವ ಕಲೆಯನ್ನು ಗಳಿಸಿಕೊಳ್ಳುವುದು ವ್ಯಕ್ತಿಯ ಸ್ವಂತ ಜವಾಬ್ದಾರಿ. ಅದನ್ನು ತಾಯಿತಂದೆ, ಶಾಲೆ, ಪತ್ರಿಕೆ, ಪುಸ್ತಕಗಳು ಮುಂತಾದ ಮೂಲಗಳಿಂದ ಆರ್ಜಿಸಬೇಕು. ಹಾಗೆ ಮಾಡದ್ದರಿಂದ ಇವತ್ತು ಅದನ್ನು ದುಬಾರಿ ಶುಲ್ಕದ ಶೈಕ್ಷಣಿಕ ‘ಮೀಡಿಯಮ್’ ಮೂಲಕ ಅಥವಾ ಶಾಲೆಯ ಹೊರಗಡೆ ‘ಕೋರ್ಸು’ಗಳ ಮೂಲಕ ವ್ಯಕ್ತಿಗೆ ಒದಗಿಸಿಕೊಡುವುದು ಒಂದು ವಾಣಿಜ್ಯೋದ್ಯಮವಾಗಿದೆ.

ವಾಸ್ತವದಲ್ಲಿ, ಭಾಷಾಶಿಕ್ಷಣದ ಮೂಲಭೂತ ಅಂಶ ’ಓದಲು ಕಲಿಸುವುದು’. ಈಗ ನಡೆಯುತ್ತಿರುವ ಭಾಷಾಶಿಕ್ಷಣದಲ್ಲಿ ಒತ್ತು ಇರುವುದು ಓದದೆ ಮಾತಾಡಲು ಕಲಿಸುವುದಕ್ಕೆ. ‘ನನ್ನ ಮಗನಿಗೆ ಚೆನ್ನಾಗಿ ಇಂಗ್ಲಿಷ್ ಮಾತಾಡಲು ಬರಬೇಕು’ ಎನ್ನುವುದು ತಾಯಿತಂದೆಯ ತೀವ್ರವಾದ ಬಯಕೆ. ಚೆನ್ನಾಗಿ ಮಾತಾಡಲು ಶಬ್ದಸಂಪತ್ತು ಬೇಕು, ಯೋಚನೆಗಳು ಬೇಕು, ಅಪಾರ ಅಭಿವ್ಯಕ್ತಿ ಸಾಧ್ಯತೆಯಿರುವ ವಾಕ್ಯಬಂಧಗಳು, ನುಡಿಗಟ್ಟುಗಳು, ಪದಪುಂಜಗಳು ಬೇಕು. ಪುಸ್ತಕಗಳಿಲ್ಲದ ಮನೆಯಲ್ಲಿ ಅಥವಾ ಶಾಲೆಯಲ್ಲಿ ಅದು ಎಲ್ಲಿಂದ ಬಂದೀತು? ಇದನ್ನೆಲ್ಲ ಕೇವಲ ಮಾತಿನ ಮೂಲಕ ಕಲಿಸಲು ಯಾರಿಂದ ಸಾಧ್ಯ? ನಿಜದ ಬದುಕಿಗೆ ಸಂಬಂಧಿಸಿದ ಮಾತಿನ ಸ್ಪರ್ಶ ಮಗು ಮತ್ತು ತಾಯಿತಂದೆಯ ನಡುವೆ ನಿರಂತರವಾಗಿರಬೇಕಾದ್ದು. ಆದರೆ ಇವತ್ತು ಎಷ್ಟು ಮನೆಗಳಲ್ಲಿ ಅಂಥ ‘ಸಂವಹನ ಸ್ಪರ್ಶ’ ಸಂಬಂಧ ಇದೆ? ಯಾವುದಕ್ಕೂ ಸಮಯವಿಲ್ಲ ಎನ್ನುವವವರ, ಯಾವಾಗಲು ‘ಬಿಜಿ’ ಎನ್ನುವವರೇ ಹೆಚ್ಚು! ಮಗು ಮೇಲಿನ ತರಗತಿಗೆ ಹೋದಂತೆಲ್ಲ ಸ್ಪರ್ಶ ಕಡಿಮೆಯಾಗುತ್ತಾ ಹೋಗುತ್ತದೆ. ಹೆಚ್ಚಿನ ಮನೆಗಳಲ್ಲಿ ಪ್ರತಿ ದಿನ ಅದೇ ಐವತ್ತೋ ನೂರೋ ಶಬ್ದಗಳಾಚೆ ಸ್ಪರ್ಶ ಹೋಗುವುದಿಲ್ಲ. ಕೆಲವು ಕಡೆ ಮಾತೇ ಇಲ್ಲದೆ ಬದುಕು ಸಾಗುತ್ತದೆ. ಮಕ್ಕಳಿಂದ ಘಟಿಸುವ ಬಹಳ ತಪ್ಪುಗಳಿಗೆ, ಮಕ್ಕಳು ಯಾರದೋ ಸ್ಪರ್ಶ ಪ್ರಲೋಭನಕ್ಕೆ ಬಲಿಯಾಗುವುದಕ್ಕೆ ತಾಯಿತಂದೆಯರ ಸಂವಹನ ಸ್ಪರ್ಶದ ಕೊರತೆಯೇ ಕಾರಣ.

ಗಂಡು ಮತ್ತು ಹೆಣ್ಣು ಜೀವಗಳಲ್ಲಿರುವ ಪರಸ್ಪರ ಸ್ಪರ್ಶದ ಬಯಕೆ ನಿಸರ್ಗದಿಂಲೇ ಬಂದುದು. ಮೃಗಪಕ್ಷಿಗಳಲ್ಲಿ ಕೂಡ ಇದನ್ನು ನಾವು ಕಾಣಬಹುದು. ಆದರೆ ಮನುಷ್ಯರ ನಡುವೆ ನಡೆಯುವ ಇಂಥ ಸ್ಪರ್ಶದ ಹಿಂದೆ ಸಂಸ್ಕಾರ ಮತ್ತು ವಿವೇಕ ಇರಲೇ ಬೇಕಾಗುತ್ತದೆ. ಯಾಕೆಂದರೆ, ಇದು ಮನುಷ್ಯ ಜೀವಿಯ ವೈಯಕ್ತಿಕ ಬದುಕಿಗೂ ಸಾಮಾಜಿಕ ಆರೋಗ್ಯಕ್ಕೂ ಅಗತ್ಯ. ಮನುಷ್ಯರಲ್ಲಿ ಗಂಡು ಮತ್ತು ಹೆಣ್ಣಿನ ನಡುವಿನ ‘ಶರೀರ ಸ್ಪರ್ಶ’ ಇತರ ಪ್ರಾಣಿಗಳ ನಿಸರ್ಗಸಹಜವಾದ ‘ಮೃಗಸ್ಪರ್ಶ’ಕ್ಕಿಂತ ಭಿನ್ನವಾದುದು. ‘ಮೃಗಸ್ಪರ್ಶ’ ನಿಸರ್ಗನಿಯಮದ ಪ್ರಕಾರ ಜರಗುತ್ತದಾದ್ದರಿಂದ ಅದರಲ್ಲಿ ನೀತಿ ಅನೀತಿ ಎನ್ನುವ ಸಾಮಾಜಿಕ ವಿಚಾರ ಇರುವುದಿಲ್ಲ. ‘ನೈತಿಕತೆ ಅನೈತಿಕತೆ’ ಎನ್ನುವುದು ಕೇವಲ ಮನುಷ್ಯನ ಜೀವನಕ್ರಮಕ್ಕೆ ಸಂಬಂಧಿಸಿದ್ದು. ಹುಲಿ ಹುಲ್ಲೆಯನ್ನು ಕೊಂದು ತಿನ್ನುವುದು ಮೃಗಸಹಜ ಜೀವನದ ನೀತಿ. ಬಲಶಾಲಿ ಬಲಶಾಲಿಯಲ್ಲದವನನ್ನು ಶೋಷಿಸುವುದು, ಹಿಂಸಿಸುವುದು ಮಾನವ ಜೀವನದ ನೀತಿ ಅಲ್ಲ. ಹುಲಿ ಮತ್ತು ಹುಲ್ಲೆ ಒಂದೇ ಜಾತಿಯಲ್ಲ; ಮನುಷ್ಯರೆಲ್ಲ ಒಂದೇ ಜಾತಿ ಎನ್ನುವುದನ್ನು ಮನುಷ್ಯ ಮರೆಯುವಂತಿಲ್ಲ. ಆದರೆ ಮನುಷ್ಯ ಹುಟ್ಟಿನಿಂದಲೇ ನೀತಿವಂತ ಅಥವಾ ನೀತಿರಹಿತ ಆಗಿರುವುದಿಲ್ಲ. ಎರಡೂ ‘ಕಲಿತು’ ಬರುವಂಥದು.

ಗಂಡು ಹೆಣ್ಣಿನ ನಡುವಣ ಸಂಬಂಧಕ್ಕೆ ಸಂಬಂಧಿಸಿದಂತೆ ನೈತಿಕತೆ ಮತ್ತು ಅನೈತಿಕತೆಯನ್ನು ‘ಭಾವ ಸ್ಪರ್ಶ’ ಮತ್ತು ‘ಶರೀರ ಸ್ಪರ್ಶ’ದ ನೆಲೆಯಲ್ಲಿ ವಿಶ್ಲೇಷಿಸುವುದಾದರೆ, ಎರಡರಲ್ಲಿಯೂ ಲೈಂಗಿಕ ಅಂಶ ಸೇರಿಕೊಂಡಿದೆ ಎನ್ನಬಹುದು. ಅವೆರಡನ್ನು ‘ಇಮೋಶನಲ್’ ಮತ್ತು ‘ಸೆಕ್ಷುವಲ್’ ಎಂದು ಪ್ರತ್ಯೇಕಿಸುವ ಗೋಡೆ ಏರಿಸಿದಾಗ, ಶರೀರ ಸಮಾಗಮಕಲೆಯ ಪ್ರತ್ಯೇಕ ಟೆಕ್ಸ್ಟುಗಳು ಮತ್ತು ಭಾವವಿಕಾಸ ಕಲೆಯ ಪ್ರತ್ಯೇಕ ಟೆಕ್ಸ್ಟುಗಳು ಬೇಕಾದಾವು. ಬದುಕುವುದು ಹೇಗೆ ಎನ್ನುವ ಮತ್ತೊಂದು ಟೆಕ್ಸ್ಟು ಕೂಡ ಬೇಕಾದೀತು!

‘ಭಾವ ಸ್ಪರ್ಶ’ ಮತ್ತು ‘ಶರೀರ ಸ್ಪರ್ಶ’ ಯಾವ ಬಗೆಯಲ್ಲಿ ಜೀವನ ಕೌಶಲವಾಗಬೇಕು ಎನ್ನುವುದನ್ನು ಗಣಿತ ಮತ್ತು ವಿಜ್ಞಾನ ವಿಷಯಗಳು ಹೇಳಿಕೊಡಲಾರವು. ಮಗುವಿನ ಪಾಲಕರಲ್ಲಿ ಶೇಕಡ ತೊಂಬತ್ತು ಮಂದಿಯಿಂದಲೂ ಇದು ಸಾಧ್ಯವಿಲ್ಲ. ಲೈಂಗಿಕ ಶಿಕ್ಷಣ, ಲೈಂಗಿಕ ಆರೋಗ್ಯ ಜ್ಞಾನ ಇತ್ಯಾದಿಗಳನ್ನು ಶಿಕ್ಷಕರು, ತಾಯಿತಂದೆ ಕೊಡಲು ‘ಪ್ರಯತ್ನ’ ಮಾಡುವ ಬದಲು ಅದನ್ನು ಶಾಲೆಯಲ್ಲಿ ನುರಿತ ಡಾಕ್ಟರುಗಳು ಮತ್ತು ನರ್ಸುಗಳ ಮೂಲಕ ಕೊಡಿಸಬಹುದು.

ಲೈಂಗಿಕವಾಗಿ ‘ಎಲ್ಲವನ್ನೂ’ ತಿಳಿದುಕೊಂಡಿರುವ ಎಲ್ಲರೂ ಭಾವಸ್ಪರ್ಶ ಮತ್ತು ಶರೀರಸ್ಪರ್ಶದ ವಿಚಾರದಲ್ಲಿ ನೀತಿವಂತರಾಗಿರುತ್ತಾರೆ ಎಂದು ನಂಬಲಿಕ್ಕಾಗುವುದಿಲ್ಲ. ಸಮಾಜದಲ್ಲಿ ಶೈಕ್ಷಣಿಕ, ಔದ್ಯೋಗಿಕ ಮತ್ತು ಮಾನವ ಸಂಬಂಧದ ಇತರ ಕ್ರಿಯಾಕ್ಷೇತ್ರಗಳಲ್ಲಿ ಅಶ್ಲೀಲವಾದ ಭಾಷೆಯ ಬಳಕೆ ಮತ್ತು ಅನೀತಿಯುತವಾದ ‘ಮುಟ್ಟುವಿಕೆ’ಯ ಪ್ರಕರಣಗಳು ಅಪರೂಪದ್ದೇನಲ್ಲ. ಭಾವ ಸಮಾಗಮ ಮತ್ತು ಶರೀರ ಸಮಾಗಮದ ಸೂಕ್ಷ್ಮಗಳನ್ನೆಲ್ಲ ಯಾರೂ ಹೇಳಿಕೊಡಲಾರರು. ಅದನ್ನು ವ್ಯಕ್ತಿ ತಾನೇ ತಿಳಿದುಕೊಳ್ಳಬೇಕಾಗುತ್ತದೆ. ಅದನ್ನು ಒಂದೇ ದಿನದಲ್ಲಿ ಅಥವಾ ಒಂದೆರಡು ವಾರಗಳಲ್ಲಿ ಹೇಳಿಕೊಡಬೇಕಾದ ಅಗತ್ಯವೂ ಇಲ್ಲ. ನಿಧಾನವಾಗಿ ಅರಿತುಕೊಳ್ಳಲು ಅವಕಾಶ ನಿರ್ಮಿಸಿದರೆ ಸಾಕು. ಈ ಅವಕಾಶ ವ್ಯಕ್ತಿಗಳಿಗಿಂತ ಆತ್ಮೀಯವಾಗಿ, ಮುಜುಗರದಿಂದ ಮುಕ್ತವಾದ ಅಕ್ಷರಗಳಿಂದ, ಶಿಲ್ಪದಿಂದ, ಕಲಾವಿದನ ಕುಂಚದಲ್ಲಿ ರೂಪುಗೊಂಡ ಚಿತ್ರದಿಂದ ಸಿಗುತ್ತದೆ.

‘ಭಾವ ಸ್ಪರ್ಶ’ವನ್ನು ಕಲಿಸಲಿಕ್ಕಾಗಿಯೇ ಇರುವುದು ಕತೆ, ಕವಿತೆ, ಪ್ರಬಂಧ ಮುಂತಾದವುಗಳು. ಅದಕ್ಕಾಗಿಯೇ ಇರುವುದು ಭಾಷಾಪಾಠ. ಓದುತ್ತಾ ಓದುತ್ತಾ ವ್ಯಕ್ತಿಗೆ ಈ ಕೌಶಲ ತಾನಾಗಿ ಕರಗತವಾಗುತ್ತದೆ. ‘ಭಾವಸ್ಪರ್ಶ ಕೌಶಲ ಕಲಿಕೆ’ಯ ಪಠ್ಯದಲ್ಲಿ ‘ಶರೀರ ಸ್ಪರ್ಶ’ದ ರೀತಿ ನೀತಿಯ ‘ಪಠ್ಯ’ ಅಂತರ್ಗತವಾಗಿದೆ. ಒಂದನ್ನು ಹೇಗೆ ಕಲಿಸಬೇಕೋ ಹಾಗೆ ಕಲಿಸಲು ಶಿಕ್ಷಕ ಸಮರ್ಥನಾಗಿರಬೇಕು. ಹಾಗೆ ಕಲಿತರೆ, ‘ಶರೀರ ಸ್ಪರ್ಶ’ ಕೌಶಲವನ್ನು ವ್ಯಕ್ತಿ ತಾನೇ ಕಲಿತುಕೊಳ್ಳುತ್ತಾನೆ. ಶಿಕ್ಷಣದಲ್ಲಿ ಇವತ್ತಿನ ಬಹಳ ಮುಖ್ಯವಾದ ಅಗತ್ಯ ಭಾಷಾ ಬೋಧನೆಯ ಶ್ರೇಷ್ಠವಾದ ಪಠ್ಯಗಳು. ಇದು ನೀತಿ ಇದು ಅನೀತಿ, ಇದು ಧರ್ಮ ಇದು ಅಧರ್ಮ ಎಂದು ಉದ್ಘೋಷಿಸುವ ಪಠ್ಯಗಳಲ್ಲ. ವಿವಿಧ ಸಾಮಾಜಿಕ ಕೋಮುಗಳ ನಂಬಿಕೆಗಳಂತೆ ಅಥವಾ ವಿವಿಧ ‘ಸಾಹಿತ್ಯ ಕೋಮು’ಗಳ ಫಿಲಾಸಫಿಯಂತೆ ತಯಾರಾಗುವ ಪಠ್ಯಗಳು ಕೂಡ ಅಲ್ಲ. ಬೇಕಾಗಿರುವುದು ಒಳ್ಳೆಯ ಇಮೋಶನಲ್ ಕೊಂಟೆಂಟ್ ಮತ್ತು ಅಷ್ಟೇ ಒಳ್ಳೆಯ ಮೋರಲ್ ಕೊಂಟೆಂಟ್ ಇರುವ ಪಠ್ಯಗಳು.

ನೀತಿ ಎನ್ನುವುದು ಬೇರೆಯೇ ಆದ ‘ಮೋರಲ್ ಸಯನ್ಸ್’ ಎಂಬ ಒಂದು ಪಠ್ಯವಾಗಬೇಕಾದ ಅಗತ್ಯ ಇಲ್ಲ. ಶೈಕ್ಷಣಿಕವಾಗಿ ಪರಿಶೀಲಿಸಿ ನೋಡಿದರೆ, ಮೋರಲ್ ಸಯನ್ಸ್ ಒಂದು ವಂಚಕ ಪಠ್ಯ. ಮೊರಾಲಿಟಿ ಅಥವಾ ನೀತಿ ಸಯನ್ಸ್ ಎನಿಸುವುದು ಹೇಗೆ? ಅದನ್ನು ಪ್ರತ್ಯೇಕ ಅಧ್ಯಯನ ಎಂದು ಪರಿಗಣಿಸಬೇಕಾದ ಅಗತ್ಯ ಇರುವಾಗ ‘ಶಾಸ್ತ್ರ’ ಎನ್ನಬಹುದೇ ವಿನಾ ‘ವಿಜ್ಞಾನ’ ಎನ್ನುವುದು ಶುದ್ಧ ಮೋಸ. ಮೊರಾಲಿಟಿ ವ್ಯಕ್ತಿಯ ಒಳಗೆ ಅವನ ಬದುಕಿನ ಕ್ರಿಯೆಯ ಜೊತೆಗೆ ಬೆಳೆಯುವಂಥದು. ಕಂಡು, ಕೇಳಿ, ಚಿಂತಿಸಿ, ಪರಾಮರ್ಶಿಸಿ, ಬುದ್ಧ ಕಲಿತಂತೆ, ‘ಚಿಂತನೆ ಮತ್ತು ಧ್ಯಾನ’ದಿಂದ ಕಲಿಯಬೇಕಾದ್ದು. ಅದು ಬದುಕು ಎಂಬ ಪಠ್ಯದ, ಬದುಕುವ ಕಲೆ-ಕಲಿಕೆಯ ಅವಿಭಾಜ್ಯ ಅಂಗ.

‘ಜೀವನ ಕೌಶಲ’ದ ಹೆಸರಿನಲ್ಲಿ ಲೈಂಗಿಕ ಶಿಕ್ಷಣ ಇವತ್ತು ಶಿಕ್ಷಕ ಶಿಕ್ಷಕರಿಗೆ ಒಂದು ತಲೆನೋವಿನ ವಿಚಾರ. ಜೀವನ ಕೌಶಲ ಎನ್ನುವುದರಲ್ಲಿ ಲೈಂಗಿಕ ಶಿಕ್ಷಣ ಬಹಳ ಮುಖ್ಯವಾದುದು ಎಂದನಿಸಿರುವುದು ಯಾಕೆ? ಅದನ್ನು ‘ಕಲಿಸುವುದು’ ಕಷ್ಟ ಎಂದು ಹೆಚ್ಚಿನ ಶಿಕ್ಷಕರ ಪ್ರಾಮಾಣಿಕವಾದ ಅಭಿಪ್ರಾಯ. ಪರಿಣಾಮಕಾರಿಯಾಗಿ ಮಾತನಾಡುವುದರಿಂದ ತೊಡಗಿ ಪರಿಶುದ್ಧವಾಗಿ ಪ್ರೀತಿ-ಪ್ರೇಮ ಮಾಡುವ ವರೆಗೆ ಕಲಿಯಬೇಕಾದ್ದೆಲ್ಲವನ್ನೂ ‘ಜೀವನ ಕೌಶಲ’ ಎಂದು ಕರೆಯಬಹುದಾದರೆ, ಅದರಲ್ಲಿ ಕೇವಲ ಲೈಂಗಿಕ ಶಿಕ್ಷಣಕ್ಕೆ ಯಾಕಿಷ್ಟೊಂದು ಒತ್ತು? ಮಕ್ಕಳು ಕಲಿಯಬೇಕಾದ ಬೇರೆ ವಿಷಯಗಳು ಕೂಡ ಅಷ್ಟೇ ಮುಖ್ಯ ಅಲ್ಲವೆ? ಈಗ ತಾಯಿತಂದೆಯರ ದೃಷ್ಟಿಯಲ್ಲಿ ಎಲ್ಲಕ್ಕಿಂತ ಮುಖ್ಯ ಅತಿ ಹೆಚ್ಚು ಸಂಬಳ ನೀಡುವ ಯಾವ ನೌಕರಿ ಇದೆಯೋ ಅದನ್ನು ಪಡೆಯಲು ಯಾವ ವಿಷಯವನ್ನು ಕಲಿಯಬೇಕೋ ಆ ವಿಷಯವನ್ನು ‘ಅತ್ತಿತ್ತ ನೋಡದಂತೆ ಕುರುಡನ ಮಾಡು ತಂದೆ’ ಎಂಬಂತೆ ಅದೊಂದನ್ನು ಮಾತ್ರ ಕಲಿಯುವುದು. ಇತರೆಲ್ಲ ವಿಷಯಗಳಲ್ಲಿ ಪರಿಪೂರ್ಣ ಅಜ್ಞಾನ. ಅದೇನೂ ಅಪಾಯಕಾರಿಯಲ್ಲ; ತಿಂಗಳಿಗೆ ಐವತ್ತು ಸಾವಿರ ಪ್ಲಸ್ ಸಂಬಳವಿದ್ದರೆ ಬೇರೇನೂ ತಿಳಿದಿರಬೇಕಾದ್ದಿಲ್ಲ. ಅಜ್ಞಾನದಲ್ಲಿಯೇ ಆರಾಮವಾಗಿ ಬದುಕಬಹುದು ಎನ್ನುವ ನಂಬಿಕೆ!

ನಿಸರ್ಗದ ಬಗ್ಗೆ, ಪರಿಸರದ ಬಗ್ಗೆ, ನಮ್ಮ ಇವತ್ತಿನ ಜೀವನದ ಬಗ್ಗೆ ಏನೇನೂ ಗೊತ್ತಿಲ್ಲದ ಮಕ್ಕಳ ಸಂಖ್ಯೆ ಬಹಳ ದೊಡ್ಡದಿದೆ. ಮನೆಯಲ್ಲಿರುವ ಹೊತ್ತಿನಲ್ಲಿ ಒಬ್ಬ ಬಾಲಕನ ದಿನ ಹೇಗೆ ಹೋಗುತ್ತದೆ ನೋಡಿ. ಕಂಪ್ಯೂಟರಿನಲ್ಲಿ ಅದೇನೇನೋ ಮೌನದಾಟ. ಟೀವಿ ಮುಂದೆ ರಿಮೋಟ್ ತೆರೆದುಕೊಡುವ ಗೇಮ್‌ಗಳು. ಬಹುತೇಕ ನಿರಂತರ ಪರೀಕ್ಷೆಯದೇ ನೆರಳಿನಲ್ಲಿ ಕಲಿಕೆ. ಹೋಮ್ ವರ್ಕ್ ಶನಿಕಾಟ. ಪ್ರತಿ ಸಲವೂ ತೊಂಬತ್ತು ಪರ್ಸೆಂಟಿಗಿಂತ ಹೆಚ್ಚು ಪಡೆಯಬೇಕೆಂಬ ಸತತ ಮಾನಸಿಕ ಎಚ್ಚರ. ಕೆಲವು ತಾಯಂದಿರು ಗಂಡು ಮಕ್ಕಳಿಗೆ ಅವರು ಉಂಡ ಬಟ್ಟಲು ತೊಳೆಯಲು, ಅವರ ಬಟ್ಟೆ ತೊಳೆಯಲು, ನೆಲ ಗುಡಿಸಲು ಬಿಡುವುದಿಲ್ಲ. ಅವೆಲ್ಲ ಹುಡುಗಿಯರು ಮಾಡುವ ಕೆಲಸಗಳು ಎಂದು ನಂಬುವ ತಾಯಂದಿರು ಈಗಲೂ ಇದ್ದಾರೆ! ವಾಸ್ತವದಲ್ಲಿ, ಹುಡುಗರು ಮಾಡುವ ಕೆಲಸಗಳೇ ಇಲ್ಲ! ಈಗೀಗ ಹುಡುಗಿಯರು ಮಾಡುವ ಕೆಲಸಗಳು ಕೂಡ ಇಲ್ಲ! ಅವರ ಎಲ್ಲಾ ಕೆಲಸಗಳನ್ನು ತಾಯಿಯೇ ಮಾಡುತ್ತಾಳೆ. ಅವರಿಗೆ ಕಿತ್ತುಹೋದ ಅಂಗಿ ಗುಂಡಿಯನ್ನು ಹೊಲಿದುಕೊಳ್ಳಲು ಗೊತ್ತಿದ್ದರೆ ಅದೇ ದೊಡ್ಡ ಸಾಧನೆ! ಅವರಿಗೆ ಯಾವುದಕ್ಕೂ ವೇಳೆ ಕೂಡ ಇಲ್ಲ. ಯಾಕೆಂದರೆ ಅವರು ಇಂಜಿನಿಯರಾಗಲು ಸದಾ ಅಧ್ಯಯನದಲ್ಲಿ ಇರಬೇಕು! ಮನೆಯಲ್ಲಿ ಕೆಲಸದಾಳಿದ್ದರಂತೂ ಮಕ್ಕಳು ಪರಪುಟ್ಟ ಜೀವಿಗಾಳಾಗಿಬಿಡುತ್ತಾರೆ!

ಜೀವನ್ಮುಖಿಯಾದ ಎಲ್ಲಾ ಕತೆಗಳು, ಹಾಡುಗಳು, ಪ್ರಬಂಧಗಳು ಮತ್ತು ಇತರ ಬರೆಹಗಳ ಒಡಲಲ್ಲಿ ‘ನೀತಿ’ ಎನ್ನುವುದು ಇದ್ದೇ ಇರುತ್ತದೆ. ಉತ್ತಮ ಕತೆ ಅಥವಾ ಕವಿತೆ ಎಂದರೆ ನೀತಿಪಾಠವಲ್ಲ; ಅದರಲ್ಲಿ ನೀತಿ ಅಥವಾ ಸಂದೇಶ ಇರಬೇಕೆಂದಿಲ್ಲ. ಉತ್ತಮ ಬರಹದ ಓದಿನಿಂದ ನೀತಿ ಅನೀತಿಯ ವ್ಯತ್ಯಾಸವನ್ನು ಅರಿತುಕೊಳ್ಳುವ ವಿಮರ್ಶಕ ಗುಣ, ವಿಶ್ಲೇಷಣಾ ಶಕ್ತಿ ವ್ಯಕ್ತಿಗೆ ಲಭಿಸುತ್ತದೆ. ಇವತ್ತು ಬಹುಪಾಲು ಪೋಷಕರು ಕತೆಗಳನ್ನು, ಹಾಡುಗಳನ್ನು ಬಹಳ ಲಘುವಾಗಿ ಪರಿಗಣಿಸುತ್ತಾರೆ. ಅಂಥ ಓದಿನಿಂದ ಮಕ್ಕಳನ್ನು ದೂರ ಇರಿಸುತ್ತಾರೆ. ಅದರಲ್ಲಿ ಕಲಿಯುವಂಥದು, ಬುದ್ಧಿಮತ್ತೆಗೆ ಬೇಕಾಗುವಂಥದು ಏನೂ ಇಲ್ಲ ಎನ್ನುವುದು ಅವರ ಭಾವನೆ. ಆದರೆ ವ್ಯಕ್ತಿತ್ವ ನಿರ್ಮಾಣ ಕೇವಲ ಗಣಿತ, ವಿಜ್ಞಾನ ಮತ್ತು ಇಂಜಿನಿಯರಿಂಗಿನಿಂದ ಆಗುವುದಿಲ್ಲ. ಕೇವಲ ಶಾಲಾ ಪಠ್ಯಗಳಿಂದಲೂ ಆಗುವುದಿಲ್ಲ. ವ್ಯಕ್ತಿತ್ವ ನಿರ್ಮಾಣಕ್ಕೆ ಹೊರಜಗತ್ತಿನ ಸ್ಪರ್ಶ ಬೇಕೇ ಬೇಕು. ಅಂಥ ಸ್ಪರ್ಶಕ್ಕೆ ಓದು ಅತ್ಯಂತ ಶ್ರೇಷ್ಠವಾದ ಮಾಧ್ಯಮ. ಅದು ಪ್ರಪಂಚವನ್ನು ಹೇಗೆ ಸ್ಪರ್ಶಿಸಬೇಕು ಎನ್ನುವುದನ್ನು ಕಲಿಸುತ್ತದೆ. ಪುಸ್ತಕ ಎಂದರೆ, ಮನುಷ್ಯ ಪ್ರಪಂಚದಲ್ಲಿ ಮನುಷ್ಯನಿಗೆ ಬೇಕಾದ್ದು ಏನೇನಿದೆಯೋ ಅದನ್ನೆಲ್ಲ ಸಂಗ್ರಹಿಸಿ ಇರಿಸಿದ ಅಮೂಲ್ಯ ಸಾಂಸ್ಕೃತಿಕ ದಾಖಲೆ.