ನಮ್ಮ ಆಟ ಒಂದು ಕಡೆಗಾದರೆ ರಾಸುಗಳ ಆಟ ಇನ್ನೊಂದು ಮೋಜಾಗಿರುತ್ತಿತ್ತು. ಒಂದೇ ಮನೆಯ ರಾಸುಗಳು ಹೊತ್ತಾಟ ಮಾಡುತ್ತಿರಲಿಲ್ಲ. ಆದರೆ ಇಲ್ಲಿ ಅನೇಕ ಮನೆಯ ಗಂಟಿಗಳು ಸೇರುತ್ತಿದ್ದುದರಿಂದ ತಮ್ಮ ಅಸ್ತಿತ್ವ ಸ್ಥಾಪನೆಗಾಗಿ ಕಾದಾಟ ಸದಾ ನಡೆಯುತ್ತಿತ್ತು. ದನಗಳೆಲ್ಲ ಸಾಮಾನ್ಯವಾಗಿ ಈ ಉಸಾಬರಿಗೆ ಹೋಗುತ್ತಿದ್ದುದು ಕಡಿಮೆ. ಸೊಕ್ಕಿ ಬೆಳೆದ ಗೂಳಿಗಳು ಗದ್ದೆಗಿಳಿಯುತ್ತಿದ್ದಂತೆ ಗುಟುರು ಹಾಕಿ ಎದುರಾಳಿಗಳನ್ನು ಕಾದಾಟಕ್ಕೆ ಕರೆಯುತ್ತಿದ್ದವು… ತಾವು ಕಂಡ ಗೋವುಗಳ ಲೋಕವನ್ನು ಅನಾವರಣಗೊಳಿಸಿದ್ದಾರೆ ಸುಧಾ ಆಡುಕಳ.

 

ಇದ್ದಕ್ಕಿದ್ದಂತೆ ಮನೆಯೆದುರಿನ ರಸ್ತೆಯಲ್ಲಿ ಎಲ್ಲಿಂದಲೋ ಬಂದ ದನಗಳೆರಡು ಪ್ರತ್ಯಕ್ಷವಾಗಿ ನೀರಸವಾದ ಬೆಳಗಿಗೆ ನೆನಪಿನ ನವಿಲುಗರಿಯನ್ನು ಸೋಕಿಸಿಬಿಟ್ಟವು. ಅಕಾಲದ ಮಳೆಗೆ ಚಿಗುರಿದ್ದ ಹಸಿರಿಗೆ ಬಾಯಿಟ್ಟು ಕರಕರ ಶಬ್ದ ಮಾಡುತ್ತಾ ಮೇಯತೊಡಗಿದಾಗ ಹುಲ್ಲಿನ ನಡುವಲ್ಲಿ ಸಿಲುಕಿದ್ದ ನನ್ನ ಅಮೂಲ್ಯ ಹೂಗಿಡಗಳು ಹಾಳಾಗುತ್ತಿದ್ದರೂ ದನಗಳನ್ನು ಓಡಿಸಬೇಕು ಅನಿಸಲಿಲ್ಲ. ಅವೂ ನಮ್ಮ ಹಂಗಿಲ್ಲದೇ ಒಂದಿಷ್ಟು ಹಸಿಹುಲ್ಲು ತಿಂದು ಬಂದ ದಾರಿಯಲ್ಲೇ ತಿರುಗಿಹೋದವು. ನನ್ನ ಮನಸ್ಸು ಮಾತ್ರ ಬಾಲ್ಯಕಾಲದ ಬೃಂದಾವನಕ್ಕೆ ಜಾರಿಹೋಯಿತು.

ಕಣ್ಣು ಹಾಯಿಸಿದುದ್ದಕ್ಕೂ ಹರಡಿರುವ ಹಸಿರು ಬಯಲು. ಅದರ ತುಂಬೆಲ್ಲಾ ಮೇಯುತ್ತಿರುವ ನಮ್ಮೆಲ್ಲರ ಮನೆಯ ದನಕರುಗಳು. ಅವುಗಳನ್ನೆಲ್ಲ ಸೇರಿಸಿ ನಾವು ‘ಗಂಟಿ’ ಎಂದು ಕರೆಯುತ್ತಿದ್ದೆವು. ಅವು ಗದ್ದೆಗೆ ಅಂಟಿಕೊಂಡೇ ಇರುವ ತೋಟಗಳಿಗೆ ನುಗ್ಗದಂತೆ ಕಾಯುವ ನಾವು. ಇದು ಪ್ರತಿ ಬೇಸಿಗೆ ರಜೆಯಲ್ಲೂ ನನ್ನೂರಿನಲ್ಲಿ ಕಂಡುಬರುತ್ತಿದ್ದ ದೃಶ್ಯ. ಮಳೆಗಾಲದ ತಯಾರಿಯೆಂದರೆ ಗ್ರಾಮೀಣ ಪ್ರದೇಶದವರಿಗೆ ಮಾಡಿ ಮುಗಿಸಲಾಗದಷ್ಟು ಕೆಲಸ. ಇಡಿಯ ಮಳೆಗಾಲಕ್ಕೆ ಸಾಕಾಗುವಷ್ಟು ಕಟ್ಟಿಗೆ ದಾಸ್ತಾನು ಮಾಡಿಕೊಳ್ಳಬೇಕು. ಮನೆಯ ಮಾಡಿಗೆ ಹೊಸಹುಲ್ಲು ಹೊದೆಸಿ ಮಳೆನೀರು ಸೋರದಂತೆ ಮಾಡಬೇಕು. ಜಮೀನಿನ ಸುತ್ತಲಿನ ನೀರು ಹರಿದುಹೋಗುವಂತೆ ನಾಲೆ ಬಿಡಿಸಿಕೊಡಬೇಕು. ಒಣಗುತ್ತಿರುವ ತೋಟಕ್ಕೆ ನಿತ್ಯವೂ ನೀರುಣಿಸಬೇಕು.

ದೂರದ ಪೇಟೆಯಿಂದ ಅಡುಗೆಗೆ ಬೇಕಾಗುವ ಸಾಮಾನುಗಳನ್ನು ತಂದು ಬಿಸಿಲಿಗೆ ಹಾಕಿ ಒಣಗಿಸಿ ಶೇಖರಿಸಬೇಕು. ಹಪ್ಪಳ, ಸಂಡಿಗೆ, ಸಂಬಾರ ಮೆಣಸು, ಹುಳಿಸೊಪ್ಪು ಎಂದೆಲ್ಲಾ ಥರಾವರಿ ಆಹಾರ ಸಾಮಗ್ರಿಗಳನ್ನು ಮಾಡಿ ಸಂಗ್ರಹಿಸಬೇಕು. ಇವೆಲ್ಲದರ ನಡುವೆ ಕೊಟ್ಟಿಗೆಯಲ್ಲಿ ತುಂಬಿರುವ ಗಂಟಿಗಳನ್ನು ಮೇಯಿಸುವ ಕೆಲಸವೂ ಆಗಬೇಕು. ಅದಕ್ಕಾಗಿಯೇ ಮನೆಯ ಮಕ್ಕಳಿಗೆ ರಜೆ ಸಿಕ್ಕೊಡನೆ ಅವರಿಗೆ ಗಂಟಿಕಾಯುವ ಕೆಲಸವನ್ನು ವಹಿಸುತ್ತಿದ್ದರು. ಗದ್ದೆಯಲ್ಲಿ ಪೈರು ಇರುವಾಗ ಗಂಟಿಯನ್ನು ಕಾಡಿನಲ್ಲಿ ಮೇಯಿಸುವುದು ವಾಡಿಕೆ. ಭತ್ತದ ಕೊಯಿಲು ಮುಗಿಯಿತೆಂದರೆ ಗದ್ದೆಗೆ ಬಿಡುವುದು ಕ್ರಮ. ಗದ್ದೆಯಲ್ಲಿ ಅವುಗಳನ್ನು ಮೇಯಿಸುವುದು ಸುಲಭವಾದ್ದರಿಂದ ಆ ಹೊಣೆಯನ್ನು ಮಕ್ಕಳಿಗೆ ವಹಿಸಲಾಗುತ್ತಿತ್ತು.

ದನ ಮೇಯಿಸುವ ಗದ್ದೆಯೆಂದರೆ ಅದೊಂದು ಅದ್ಭುತವಾದ ಜಗತ್ತು. ಅಲ್ಲಿ ಊರಿನ ಎಲ್ಲರ ಮನೆಯ ಮಕ್ಕಳೂ ಒಟ್ಟು ಸೇರುತ್ತಿದ್ದರು. ಒಮ್ಮೆ ದನಗಳನ್ನು ಗದ್ದೆಗೆ ಇಳಿಸಿದ ಮೇಲೆ ಅವು ತಮ್ಮಷ್ಟಕ್ಕೇ ಮೇಯುತ್ತಿರುತ್ತವೆ. ಗದ್ದೆಯಂಚಿನಲ್ಲಿರುವ ಹೊಳೆಯ ನೀರನ್ನು ಬಾಯಾರಿದಾಗ ಕುಡಿಯುತ್ತವೆ. ಹಾಗಾಗಿ ಅಲ್ಲೊಂದು ಮಕ್ಕಳ ಶಿಬಿರ ತಂತಾನೇ ತೆರೆದುಕೊಳ್ಳುತ್ತಿತ್ತು. ಮೊದಲೆರಡು ದಿನಗಳಲ್ಲಿ ಎಲ್ಲರೂ ತಂಪಾಗಿ ಕುಳಿತುಕೊಳ್ಳಲು ಒಂದು ಪುಟ್ಟ ಮನೆ ತಯಾರಾಗುತ್ತಿತ್ತು. ಅಲ್ಲೇ ಹತ್ತಿರದಲ್ಲಿರುವ ಮರಗಳ ಗೆಲ್ಲುಗಳನ್ನು ಕಡಿದು, ಸುತ್ತ ಚೌಕಾಕಾರದಲ್ಲಿ ನಾಲ್ಕು ಕಂಬಗಳನ್ನು ಹುಗಿದು ಅದರ ಮೇಲೆ ಸಪೂರದ ಗೆಲ್ಲುಗಳನ್ನು ಕಟ್ಟಿ, ಮೇಲಿನಿಂದ ಒಣಗಿದ ಅಡಿಕೆ ಮರದ ಸೋಗೆಯನ್ನು ಹೊದೆಸಿದರೆ ನಮ್ಮ ಮನೆ ಸಿದ್ಧವಾದಂತೆ.

ಬಿಸಿಲಿನ ತಾಪಕ್ಕೆ ಸಾಕಾದಾಗಲೆಲ್ಲ ಅದರಡಿಯಲ್ಲಿ ಬಂದು ಕುಳಿತುಕೊಳ್ಳುತ್ತಿದ್ದೆವು. ನಂತರ ಆಟದ ಸಿದ್ಧತೆ. ಸಾಮಾನ್ಯವಾಗಿ ಆಡುವ ಆಟವೆಂದರೆ ಚಿನ್ನಿದಾಂಡು. ಗದ್ದೆಯ ನಡುವಲ್ಲಿ ಒಂದು ಕುಳಿಯನು ತೋಡಿಕೊಂಡು ಅದರ ಮೇಲೆ ಚಿನ್ನಿಯನ್ನಿಟ್ಟು ದಾಂಡಿನಿಂದ ಅದನ್ನು ಹಾರಿಸುವುದು. ಎದುರಿನವರು ಅದನ್ನು ಹಿಡಿದರೆ ಚಿಮ್ಮಿದವನು ಆಟದಿಂದ ಹೊರಗೆ. ಇಲ್ಲವೆಂದರೆ ಅದನ್ನು ಮತ್ತೆ ಕುಣಿಯೊಳಗೆ ಹಾಕಬೇಕು. ಆಗಲೂ ಅದು ಕುಣಿಯೊಳಗೆ ಬೀಳದಿದ್ದರೆ ಚಿನ್ನಿಯನ್ನು ದಾಂಡಿನಿಂದ ಚಿಮ್ಮಿ ಹೊಡೆಯುವುದು. ಅದು ಎಲ್ಲಿ ಹೋಗಿ ಬೀಳುವುದೋ ಅಲ್ಲಿಯವರೆಗೆ ದಾಂಡಿನಿಂದ ಅಳತೆ ಮಾಡುವುದು. ಅಳೆಯಲೂ ಒಂದು ಕ್ರಮವಿತ್ತು. ಸಂಖ್ಯೆಯನ್ನು ಎಣಿಸುತ್ತಾ ಅಳೆಯುವುದಲ್ಲ. ಅದಕ್ಕೆಂದೇ ಅಳತೆಯ ಮಾನಗಳಿದ್ದವು. ಗಡಿಬಿಡಿ, ಎಡಗಾಲು, ಮೂರುಮುಷ್ಟಿ, ನಾಬೆಳ್ಳು, ಕೈತೋಳು, ಕಣ್ಣುಬ್ಬು, ಹೇಳಿಗ. ಅಲ್ಲಿಗೆ ಏಳು ಕೋಲುಗಳಾದವು. ಒಂದು ಹಂಡಿಯೆಂದು ಲೆಕ್ಕ. ಕೆಲವೊಮ್ಮೆ ಚಿನ್ನಿ ಚಿಮ್ಮುವಾಗ ಯಾರಯಾರದೋ ಹಣೆಗೆ ಬಡಿದು ಅವರ ಮುಖದ ಮೇಲೂ ಗುಮ್ಮಟಗಳೇಳುವುದಿತ್ತು.

ತುಡುಗು ಪ್ರಾಯದ ಹುಡುಗರು ಲೆಕ್ಕ ತಪ್ಪಿತೆಂದು ದಾಂಡಿನಲ್ಲೇ ಹೊಡೆದಾಡುವುದೂ ಇತ್ತು. ಕೆಲವೊಮ್ಮೆ ಸಣ್ಣ ಗದ್ದೆಯಲ್ಲಿ ಕುಂಟಾಟ, ಕಬಡ್ಡಿ ಆಡುತ್ತಿದ್ದೆವು. ಕೆಲವೊಮ್ಮೆ ಆಟದಲ್ಲಿ ಮೈಮರೆತು ದನಗಳು ತೋಟಕ್ಕೆ ನುಗ್ಗಿ ಮಾಲೀಕರಿಂದ ಬೈಸಿಕೊಳ್ಳುವುದಿತ್ತು.

ನಮ್ಮ ಆಟ ಒಂದು ಕಡೆಗಾದರೆ ರಾಸುಗಳ ಆಟ ಇನ್ನೊಂದು ಮೋಜಾಗಿರುತ್ತಿತ್ತು. ಒಂದೇ ಮನೆಯ ರಾಸುಗಳು ಹೊತ್ತಾಟ ಮಾಡುತ್ತಿರಲಿಲ್ಲ. ಆದರೆ ಇಲ್ಲಿ ಅನೇಕ ಮನೆಯ ಗಂಟಿಗಳು ಸೇರುತ್ತಿದುದರಿಂದ ತಮ್ಮ ಅಸ್ತಿತ್ವ ಸ್ಥಾಪನೆಗಾಗಿ ಕಾದಾಟ ಸದಾ ನಡೆಯುತ್ತಿತ್ತು. ದನಗಳೆಲ್ಲ ಸಾಮಾನ್ಯವಾಗಿ ಈ ಉಸಾಬರಿಗೆ ಹೋಗುತ್ತಿದ್ದುದು ಕಡಿಮೆ. ಸೊಕ್ಕಿ ಬೆಳೆದ ಗೂಳಿಗಳು ಗದ್ದೆಗಿಳಿಯುತ್ತಿದ್ದಂತೆ ಗುಟುರು ಹಾಕಿ ಎದುರಾಳಿಗಳನ್ನು ಕಾದಾಟಕ್ಕೆ ಕರೆಯುತ್ತಿದ್ದವು. ಕಾಲಿನ ಗೊರಸಿನಿಂದ ನೆಲವನ್ನು ಕೆರೆಯುತ್ತಾ ತಮ್ಮ ಸಾಮರ್ಥ್ಯವನ್ನು ತೋರಿಸುತ್ತಿದ್ದವು. ತಲೆಗೆ ತಲೆ ಕೊಟ್ಟು ದೂಡಿಕೊಳ್ಳುತ್ತಾ, ಇಡಿಯ ಗದ್ದೆಯನ್ನು ಕೆಂಪಾಗಿಸುತ್ತಿದ್ದವು.

ತಮಾಷೆಯೆಂದರೆ ಇದು ಬಸ್ ಸ್ಟ್ಯಾಂಡಿನಲ್ಲಿ ನಡೆಯುವ ಜನರ ಜಗಳದಂತೆ ಇನ್ನೂ ಅನೇಕ ರಾಸುಗಳನ್ನು ಒಳಗೊಂಡು ಎರಡು ಪಂಗಡಗಳನ್ನೇ ಉಂಟುಮಾಡುತ್ತಿತ್ತು. ಆಗೆಲ್ಲ ನಾವು ದೂರದಿಂದಲೇ ಅವುಗಳ ಕಾದಾಟ ನೋಡುತ್ತ ಯಾವುದು ಗೆಲ್ಲುವುದೆಂದು ಬಾಜಿ ಕಟ್ಟಿ ಸಂಭ್ರಮಿಸುತ್ತಿದ್ದೆವು. ಕೆಲವೊಮ್ಮೆ ಕಾದಾಟ ಮಾರಣಾಂತಿಕ ಹಂತಕ್ಕೆ ಹೋದಾಗ ಧೈರ್ಯವುಳ್ಳ ಹುಡುಗರು ಕೋಲು ಹಿಡಿದು ಹೋಗಿ ಬಿಡಿಸುತ್ತಿದ್ದರು. ಸೋತ ರಾಸನ್ನು ಗೆದ್ದ ಗೂಳಿಗಳು ಅದೆಷ್ಟೋ ದೂರದವರೆಗೆ ಓಡಿಸುತ್ತಿದ್ದವು.

ಈ ಸಮಯದಲ್ಲಿ ಊರಿನ ಎಲ್ಲ ರಾಸುಗಳೂ ಒಟ್ಟುಸೇರುವ ಸಮಯವಾದ್ದರಿಂದ ಅದು ಅವುಗಳ ಬ್ರೀಡಿಂಗ್ ಸೀಸನ್ ಕೂಡ ಆಗಿರುತ್ತಿತ್ತು. ಬೆದೆಗೆ ಬಂದ ದನದ ಹಿಂದೆ ರಾಶಿ ಗೂಳಿಗಳು ತಿರುಗುವುದು, ಒಬ್ಬರನ್ನೊಬ್ಬರು ದೂಡಿಕೊಳ್ಳುತ್ತಾ ದನದ ಮೇಲೇರಲು ಪೈಪೋಟಿ ನಡೆಸುವುದು, ಶಕ್ತಿಶಾಲಿಯಾದ ಗೂಳಿ ಅದರಲ್ಲಿ ಯಶಸ್ವಿಯಾಗುವುದು ಇವೆಲ್ಲವೂ ನಮ್ಮ ಕಣ್ಮುಂದೆಯೇ ನಡೆದು ಒಂದು ಬಗೆಯ ಲೈಂಗಿಕ ಶಿಕ್ಷಣವೂ ಅಲ್ಲಿ ನಡೆಯುತ್ತಿತ್ತು. ದನಗಳೆಂದರೆ ಪೂಜ್ಯಭಾವನೆಯಿದ್ದುದಕ್ಕೋ ಅಥವಾ ಮೊಬೈಲ್‌ಗಳೆಲ್ಲ ಇಲ್ಲದ ಆ ಕಾಲದಲ್ಲಿ ಪೋರ್ನ್‌ ವೀಡಿಯೋಗಳ ಪರಿಚಯವಿರದಿದ್ದರಿಂದಲೋ ಇಂಥವುಗಳನ್ನೆಲ್ಲ ಅಶ್ಲೀಲವೆಂದು ಪರಿಗಣಿಸುತ್ತಿರಲಿಲ್ಲ. ಬೆದೆಗೆ ಬಂದ ದನವನ್ನು ಓಡಿಸುವ ಗೂಳಿಗಳನ್ನು ತಡೆದು ಅಪಾಯ ತಂದುಕೊಳ್ಳಬಾರದೆಂಬುದನ್ನು ಮಾತ್ರ ಮನೆಯವರು ಎಲ್ಲರಿಗೂ ಹೇಳಿ ಕಳಿಸುತ್ತಿದ್ದರು. ಅದರೊಂದಿಗೆ ಕಿಶೋರ ಪ್ರಾಯದ ಎಲ್ಲ ಮಕ್ಕಳೂ ಅಲ್ಲಿ ಕಲೆಯುತ್ತಿದ್ದುದರಿಂದ ಏನೇನೋ ಭ್ರಮಾಪ್ರಪಂಚದ ಸುದ್ದಿಗಳನ್ನೆಲ್ಲ ಗುಟ್ಟಾಗಿ ಹೇಳಿಕೊಳ್ಳುತ್ತಿದ್ದೆವು. ಕೆಲವೊಮ್ಮೆ ಮುಟ್ಟಾದ ಹುಡುಗಿಯರೂ ಬರುತ್ತಿದ್ದುದರಿಂದ ಸಹಜವಾಗಿಯೇ ಮುಟ್ಟು, ಹುಟ್ಟು, ಗುಟ್ಟುಗಳನ್ನೆಲ್ಲಾ ಮಾತನಾಡುತ್ತಿದ್ದೆವು.

ಹೊಳೆಯಂಚಿನಲ್ಲಿ ಬೆಳೆಯುತ್ತಿದ್ದ ಪೇರಲೆ ಮರದಿಂದ ಹಣ್ಣು ಕೊಯ್ದು ತಿನ್ನುವುದು, ಹಣ್ಣುಗಳು ಮುಗಿದರೆ ನಂತರ ಕಾಯಿಯನ್ನೇ ತಿನ್ನುವುದು, ಮಾವಿನ ಹಣ್ಣು ಬೀಳುವುದನ್ನು ಕಾಯುವುದು, ಓಡಿಹೋಗಿ ಹೆಕ್ಕಿ ಎಲ್ಲರೂ ಪಾಲು ಕೇಳುವ ಮೊದಲೇ ಕಚ್ಚಿ ಹಣ್ಣನ್ನು ನಮ್ಮದಾಗಿಸಿಕೊಳ್ಳುವುದು, ಸ್ಕರ್ಟಿನಲ್ಲಿಟ್ಟು ಕಚ್ಚಿ ಕಾಗೆ ಎಂಜಲು ಮಾಡಿ ಹಂಚಿಕೊಳ್ಳುವುದು ಹೀಗೆ ಥರಾವರಿ ಘಟನೆಗಳು ನಡೆಯುತ್ತಿದ್ದವು. ದೊಡ್ಡವರಿಂದ ದೂರವಾದ ಇಡಿಯ ಬಯಲು ಮಕ್ಕಳಿಂದಲೇ ತುಂಬಿ ಒಂದು ಸುಂದರ ಬೃಂದಾವನ ಅಲ್ಲಿ ಸೃಷ್ಟಿಯಾಗುತ್ತಿತ್ತು.

ಆಟಗಳೆಲ್ಲ ಬೇಸರವಾಗುವಾಗ ಎಲ್ಲರೂ ಸೇರಿ ಹಾಡುತ್ತಿದ್ದೆವು, ಎರಡು ತಂಡ ಮಾಡಿಕೊಂಡು ಒಗಟು, ಗಾದೆಗಳ ಆಟ ಆಡುತ್ತಿದ್ದೆವು. ಹುಡುಗಿಯರೆಲ್ಲ ಐದು ಕಲ್ಲುಗಳಿಂದ ಆಡುವ ‘ಗುಡ್ನ’ ಎನ್ನುವ ಆಟ ಆಡುತ್ತಿದ್ದೆವು. ನೆಲದಲ್ಲಿ ಗೆರೆಯನ್ನು ಹಾಕಿ ‘ಜಿಬಲಿ’ ಆಡುತ್ತಿದೆವು. ಹದಿನಾಲ್ಕು ಮನೆ ಬರೆದು ಕಲ್ಲುಗಳನ್ನಿಟ್ಟು ‘ಚೆನ್ನೆಮಣೆ’ ಆಡುವುದೂ ಇತ್ತು. ತುಂಬಾ ಜನ ಆಡಬಹುದಾದ ನಿಂತಲ್ಲಿ ಮುಟ್ತೀಯೋ? ಕೂತಲ್ಲೋ? ಎಂಬ ಆಟವಂತೂ ಬಹಳ ಗಮ್ಮತ್ತಾಗಿರುತ್ತಿತ್ತು.

ಇಬ್ಬರು ಸೇರಿ ಅವ್ವವ್ವ ಅಪ್ಪ ಎಂದು ನಾಲ್ಕು ಕೈಗಳನ್ನು ಪರಸ್ಪರ ಜೋಡಿಸಿಕೊಂಡು ತೆಪ್ಪದ ಥರಾ ಮಾಡಿಕೊಂಡು ಅದರಲ್ಲಿ ಸಣ್ಣ ಮಕ್ಕಳನ್ನು ಕೂರಿಸಿಕೊಂಡು ‘ಗಣಪತಿ ಬಪ್ಪ ಮೋರಯಾ’ ಎಂದು ಕೂಗುತ್ತ ಸುಮಾರು ದೂರ ಕರೆದುಕೊಂಡು ಹೋಗಿ ಅವರನ್ನು ಇಳಿಸುತ್ತಿದ್ದೆವು. ಕೈಕೈ ಹಿಡಿದು ಬಲೆಯಂತೆ ಮಾಡಿಕೊಂಡು ಉಳಿದವರನ್ನೆಲ್ಲಾ ಮೀನುಗಳಾಗಿಸಿ, ಮೀನು ಹಿಡಿಯುವ ಆಟ ಆಡುತ್ತಿದ್ದೆವು. ದೊಡ್ಡವರು ಚಿಕ್ಕ ಮಕ್ಕಳನ್ನು ಉಪ್ಪಿನಮೂಟೆ ಹೊತ್ತು ತಿರುಗುವುದು, ಕೈ, ಕೈ ಜೋಡಿಸಿ ಗಿರಗಿರನೆ ಸುತ್ತುವುದು… ಒಂದೇ ಎರಡೇ… ಥರಾವರಿ ಆಟಗಳು ಬಯಲಿನಲ್ಲಿ ತೆರೆದುಕೊಳ್ಳುತ್ತಿದ್ದವು.

ಮೇ ತಿಂಗಳ ಬಿಸಿಲ ಬೇಗೆಯನ್ನು ತಡೆಯಲಾರದೇ ಕೆಲವೊಮ್ಮೆ ಹುಡುಗರು ಅಲ್ಲಿಯೇ ಹರಿಯುವ ಹೊಳೆಯಲ್ಲಿ ಈಜುತ್ತಿದ್ದರು. ಹುಡುಗಿಯರೆಲ್ಲಾ ದಡದಲ್ಲಿ ಕುಳಿತು ನೋಡುತ್ತಿದ್ದೆವು. ಚೂಪಾದ ಕಲ್ಲನ್ನು ಹೊಳೆಯ ನೀರಿನ ಮೈಲ್ಮೈ ಮೇಲೆ ಎಸೆದು ಅದು ಚಿಮ್ಮುವುದನ್ನು ನೋಡಿ ಖುಶಿಪಡುತ್ತಿದ್ದೆವು. ಹೆಚ್ಚು ಸಲ ಚಿಮ್ಮಿಸಿದವರು ಗೆದ್ದರೆಂದು ಲೆಕ್ಕ. ಇವೆಲ್ಲವೂ ಬೇಸರವಾದಾಗ ಹೊಸ ಆಟಗಳನ್ನು ಕಂಡುಕೊಳ್ಳುತ್ತಿದ್ದೆವು.

(ಚಿತ್ರ: ಪ್ರವರ ಕೊಟ್ಟೂರು)

ತಮಾಷೆಯೆಂದರೆ ಇದು ಬಸ್ ಸ್ಟ್ಯಾಂಡಿನಲ್ಲಿ ನಡೆಯುವ ಜನರ ಜಗಳದಂತೆ ಇನ್ನೂ ಅನೇಕ ರಾಸುಗಳನ್ನು ಒಳಗೊಂಡು ಎರಡು ಪಂಗಡಗಳನ್ನೇ ಉಂಟುಮಾಡುತ್ತಿತ್ತು. ಆಗೆಲ್ಲ ನಾವು ದೂರದಿಂದಲೇ ಅವುಗಳ ಕಾದಾಟ ನೋಡುತ್ತ ಯಾವುದು ಗೆಲ್ಲುವುದೆಂದು ಬಾಜಿ ಕಟ್ಟಿ ಸಂಭ್ರಮಿಸುತ್ತಿದ್ದೆವು.

ದನಗಳ ಮೈಮೇಲಿನ ಉಣ್ಣೆಯನ್ನು ತಿನ್ನಲು ಬರುವ ಥರಥರದ ಹಕ್ಕಿಗಳು, ಗದ್ದೆಯ ಬದುವಿನ ಬಿಲದಲ್ಲಿರುವ ಅನೇಕ ಬಗೆಯ ಹಾವುಗಳು, ಆಗಾಗ ನಮ್ಮನ್ನು ಕಚ್ಚಿ ನೋಯಿಸುತ್ತಿದ್ದ ಚೇಳುಗಳು, ಕಟ್ಟಿರುವೆಗಳು, ಜೇನ್ನೊಣಗಳು, ಕಣಜಗಳು, ಅನೇಕ ಬಗೆಯ ಹುಳಗಳು ಎಲ್ಲವೂ ನಮ್ಮ ಸಂಗಾತಿಗಳಾಗಿದ್ದರು. ಗದ್ದೆಯ ಬದುವಿನಲ್ಲಿರುವ ಹಸಿರು ಎಲೆಗಳನ್ನು ಕೊಯ್ದು ನಮ್ಮ ಕುಟೀರದ ನೆಲಕ್ಕೆ ಹಾಸಿ ಕೆಲವೊಮ್ಮೆ ಮಲಗುತ್ತಿದ್ದೆವು. ಅನೇಕ ಬಗೆಯ ಕಪ್ಪೆಗಳು ಅದೇ ಮನೆಯಡಿಯಲ್ಲಿ ಬಂದು ಸೇರಿಕೊಳ್ಳುತ್ತಿದ್ದವು. ತಮಗೆ ಅತಿ ಸಲುಗೆಯಿರುವ ಗೂಳಿಗಳ ಮೇಲೆ ಕುಳಿತು ಕೆಲವು ಹುಡುಗರು ಸವಾರಿ ಮಾಡುವುದೂ ಇತ್ತು.

ಭತ್ತದ ಪೈರನ್ನು ಕೊಯ್ದು ಬುಡದಲ್ಲಿ ಉಳಿಸುವ ಭಾಗಕ್ಕೆ ‘ಕುಳಿ’ ಎಂದು ಕರೆಯುತ್ತಿದ್ದರು. ಅದರಿಂದ ಗಟ್ಟಿಯಾದ ಕಾಂಡದ ಭಾಗವನ್ನು ಕತ್ತರಿಸಿ ತೆಗೆದು ಸಣ್ಣ ರಂಧ್ರವನ್ನು ಮಾಡಿ ಪೀಪಿ ಮಾಡುತ್ತಿದ್ದೆವು. ಅದರಿಂದ ಬಹಳ ಮಧುರವಾದ ಸ್ವರ ಹೊರಡುತ್ತಿತ್ತು. ಆದರೆ ಅದನ್ನು ಮನೆಯೊಳಗೆ ಊದುವಂತಿರಲಿಲ್ಲ. ಮನೆಯಲ್ಲಿ ಪೀಪಿ ಊದಿದರೆ ಹಾವು ಬರುತ್ತದೆಯೆಂಬ ನಂಬುಗೆಯಿದ್ದುದರಿಂದ ಹಿರಿಯರು ಗದರುತ್ತಿದ್ದರು. ಹಾವಿಗೆ ಕಿವಿಯಿಲ್ಲವೆಂದು ನಾವು ಓದಿದ ವಿಜ್ಞಾನವನ್ನು ಹೇಳಿದರೆ ಅವರು ಅದಕ್ಕೆ ಕ್ಯಾರೇ ಎನ್ನುತ್ತಿರಲಿಲ್ಲ. ಆದರೆ ಈ ಭತ್ತದ ಕುಳಿಗಳ ನಡುವೆ ಚಪ್ಪಲಿಯಿಲ್ಲದೇ ಓಡಾಡಿ ನಮ್ಮ ಬೆರಳುಗಳ ಸಂಧಿಯೆಲ್ಲ ಕೊರೆದುಹೋಡಿ ‘ಕಡಬೆಟ್ಟು’ ಎಂದು ಕರೆಯಲ್ಪಡುವ ಹುಣ್ಣಾಗುತ್ತಿತ್ತು. ರಾತ್ರಿಯಾದೊಡನೆ ತುಂಬಾ ನೋಯುವ ಅದನ್ನು ಹೋಗಲಾಡಿಸಲು ಅವ್ವಂದಿರು ಕಂಬಳಿಯ ದಾರವನ್ನು ತೆಗೆದು ಎಣ್ಣೆಯಲ್ಲಿ ಅದ್ದಿ, ದೀಪದ ಸುತ್ತ ಅದನ್ನು ಹಿಡಿದು ಕಾಯಿಸಿ ಬಿಸಿಮಾಡಿ ಬೆರಳಿನ ಸುತ್ತಲೂ ಕಟ್ಟುತ್ತಿದ್ದರು. ಮಾರನೇ ದಿನ ಗಾಯ ಮಂಗಮಾಯವಾಗುತ್ತಿತ್ತು.

ನಮ್ಮ ಕಾಲುಗಳ ಕಥೆ ಹೀಗಾದರೆ ಗೊರಸುಗಳಲ್ಲಿ ಕೆಸರು ಸಿಕ್ಕಿ ದನಗಳ ಕಾಲುಗಳಿಗೆ ‘ಕಾಲೊಡೆ’ ಎಂಬ ಭಯಂಕರ ರೋಗ ಬರುತ್ತಿತ್ತು. ಅದು ರೋಗಾಣುವಿನಿಂದ ಬರುವುದೆಂದು ದನದ ಡಾಕ್ಟರ್ ಹೇಳುತ್ತಿದ್ದರೂ ಯಾರೂ ಅವರು ಹೇಳುವ ಸ್ವಚ್ಛತೆಯ ನಿಯಮಗಳನ್ನು ಪಾಲಿಸುತ್ತಿರಲಿಲ್ಲ. ಕುಂಟುಹಾಕುತ್ತಾ ಓಡಾಡುವ ಈ ರಾಸುಗಳ ಕಾಲಿನ ಸಂದುಗಳನ್ನು ಉಪ್ಪುನೀರಿನಲ್ಲಿ ತೊಳೆಯುತ್ತಿದ್ದರು. ಆಗ ಬಿಳಿಯ ಹುಳಗಳು ಕಾಲಿನಿಂದ ಗೊಂಚಲು, ಗೊಂಚಲಾಗಿ ಉದುರುತ್ತಿದ್ದವು. ಕೆಟ್ಟ ವಾಸನೆಯೂ ಇರುತ್ತಿತ್ತು. ನಂತರ ಅದಕ್ಕೆ ಬೆಳ್ಳುಳ್ಳಿಯನ್ನು ಕುದಿಸಿದ ಎಣ್ಣೆಯನ್ನು ಹಚ್ಚಿ ಬಟ್ಟೆ ಕಟ್ಟುತ್ತಿದ್ದರು. ಹೀಗೆ ಪ್ರತಿದಿನವೂ ‘ಡ್ರೆಸ್ಸಿಂಗ್’ ನಡೆಯುತ್ತಿತ್ತು. ಹೀಗಾಗಿ ಬೆಳ್ಳುಳ್ಳಿಯ ವಾಸನೆಯೊಂದಿಗೆ ಆ ಹುಳಗಳ ವಾಸನೆಯೂ ನೆನಪಾಗುವುದರಿಂದ ಅಪ್ಪ ಬೆಳ್ಳುಳ್ಳಿಯ ಒಗ್ಗರಣೆಯ ಪದಾರ್ಥವನ್ನೇ ತಿನ್ನುತ್ತಿರಲಿಲ್ಲ.

ಇದರೊಂದಿಗೆ ಗದ್ದೆಯಲ್ಲಿ ನಿಂತ ಕೊಳಚೆ ನೀರನ್ನು ಕುಡಿದು ಗಂಟಿಗಳಿಗೆ ಗಂಟಲುಮಾರಿ ರೋಗವೂ ಬರುತ್ತಿತ್ತು. ಅದನ್ನು ಆಡುಭಾಷೆಯಲ್ಲಿ ‘ಕೆಪ್ಪೆಯಾಗುವುದು’ ಎನ್ನುತ್ತಿದ್ದರು. ಅದಕ್ಕೂ ಮನೆಯ ಔಷಧ ಮಾಡುತ್ತಿದ್ದರು. ತೋಟದಲ್ಲಿ ಬೆಳೆದ ಚೂರುಮೆಣಸನ್ನು ಉಪ್ಪಿನೊಂದಿಗೆ ಅರೆದು ಕಂಚಿಕಾಯಿ (ಲಿಂಬೆಯಂತೆ ಹುಳಿಕಹಿ ರುಚಿಯುಳ್ಳ ದೊಡ್ಡ ಗಾತ್ರದ ಕಾಯಿ)ಯಲ್ಲಿ ತುಂಬಿ ಅದನ್ನು ನಾಲಿಗೆಯ ಮೇಲಿಟ್ಟು ದಾರಹಾಕಿ ಅದರ ಕುತ್ತಿಗೆಗೆ ಕಟ್ಟುತ್ತಿದ್ದರು. ಇದರಿಂದಾಗಿ ಅದಕ್ಕೆ ಎಷ್ಟೇ ಖಾರವಾದರೂ ಅದನ್ನು ಉಗಿಯಲು ಆಗುತ್ತಿರಲಿಲ್ಲ. ನಾಲಿಗೆಯಿಂದ ಅದರ ಕಫವೆಲ್ಲ ಎಂಜಲಿನೊಂದಿಗೆ ಸುರಿಯುತ್ತಲೇ ಹೋಗುತ್ತಿತ್ತು. ಮಾರನೇ ದಿನ ಅದು ಹುಷಾರಾಗಿ ಹುಲ್ಲು ಮೇಯತೊಡಗುತ್ತಿತ್ತು. ಕೆಲವೊಮ್ಮೆ ಇದ್ಯಾವುದಕ್ಕೂ ಸ್ಪಂದಿಸದೇ ರಾಸುಗಳು ಸಾವನ್ನಪ್ಪುವುದೂ ಇತ್ತು. ಅಂತಹ ರಾಸುಗಳನ್ನು ಎತ್ತಿಕೊಂಡು ಹೋಗಿ ತಮ್ಮದೇ ಜಾಗದಲ್ಲಿ ಹುಗಿದು ಮೇಲೊಂದು ಗಿಡ ನೆಡುತ್ತಿದ್ದರು. ಆ ದಿನವೆಲ್ಲ ನಾವು ಮನೆಯ ಸದಸ್ಯರನ್ನು ಕಳಕೊಂಡಂತೆ ಅಳುತ್ತಿದ್ದೆವು.

ಇವೆಲ್ಲದರ ನಡುವೆ ತುಡುಗು ರಾಸುಗಳನ್ನು ಹದಕ್ಕೆ ತರುವ ಅನೇಕ ಕ್ರಮಗಳೂ ಹಳ್ಳಿಯಲ್ಲಿ ಜಾರಿಯಲ್ಲಿದ್ದವು. ಎಷ್ಟು ಹೇಳಿದರೂ ಪದೇ, ಪದೇ ಬೇಲಿ ಹಾರಿ ಬೇರೆಯವರ ಮನೆಯ ಬೆಳೆತಿನ್ನುವ ರಾಸುಗಳ ಕುತ್ತಿಗೆಗೆ ಮರದ ಕುಂಟೆಗಳನ್ನು ಕಟ್ಟುತ್ತಿದ್ದರು. ಕಂಡಕಂಡವರ ಮೇಲೆ ಏರಿಬರುವ ಗೂಳಿಗಳ ಸೊಕ್ಕಡಗಿಸಿಲು ಮೂಗಿನಲ್ಲಿ ದಾರ ತೂರಿಸಿ ಮೂಗುದಾರ ಹಾಕುತ್ತಿದ್ದರು. ಕೆಲವೊಮ್ಮೆ ಚಂದಕ್ಕೆಂದು, ಮತ್ತೆ ಕೆಲವೊಮ್ಮೆ ಕೆಟ್ಟ ದೃಷ್ಟಿ ತಾಗದಿರಲೆಂದು ಅವುಗಳ ಕುತ್ತಿಗೆಗೆ ಚಂದದ ಮಣಿಸರವನ್ನೂ ಹಾಕುವುದಿತ್ತು. ಕಾಡಿನಲ್ಲಿ ಮೇಯುವಾಗ ಅವುಗಳ ಜಾಡನ್ನು ಕಂಡುಹಿಡಿಯಲು ಎಲ್ಲ ರಾಸುಗಳ ಕುತ್ತಿಗೆಯಲ್ಲೂ ಒಂದು ಗಂಟೆಯನ್ನು ಕಟ್ಟುತ್ತಿದ್ದರು. ಗಂಟೆಗಳ ಸದ್ದಿನಿಂದಲೇ ಅವುಗಳ ಗುರುತನ್ನು ಕೂಡ ತಿಳಿಯುವ ಸೂಕ್ಷ್ಮತೆ ದನಗಾಹಿಗಳಿಗೆ ಇರುತ್ತಿತ್ತು. ದೊಡ್ಡ ಎತ್ತುಗಳ ಕೋಡಿನ ತುದಿಯಲ್ಲಿ ಕೆಲವೊಮ್ಮೆ ಚಂದದ ಗುಚ್ಚವನ್ನು ಕಟ್ಟಿ ಇನ್ನೂ ಚಂದ ಕಾಣುವಂತೆ ಮಾಡಲಾಗುತ್ತಿತ್ತು.

ನಮ್ಮನ್ನೆಲ್ಲ ತುಂಬಾ ಕಾಡುತ್ತಿದ್ದ ಒಂದು ದೃಶ್ಯವೆಂದರೆ ಪ್ರಾಯಕ್ಕೆ ಬಂದ ಗೂಳಿಗಳನ್ನು ನಿರ್ವೀರ್ಯರನ್ನಾಗಿ ಮಾಡುವ ಕ್ರಿಯೆಯಾಗಿತ್ತು. ಮನೆಯಲ್ಲಿರುವ ಗೂಳಿಗಳಿಗೆ ನಾಲ್ಕು ದವಡೆ ಹಲ್ಲು ಬೆಳೆಯಿತೆಂದರೆ ಅದು ಗದ್ದೆ ಊಳಲು ಶಕ್ತವಾಯಿತೆಂದು ಅರ್ಥ. ಅದರ ಬೀಜವನ್ನು ಹುಡಿಗೊಳಿಸಿ ನಿರ್ವೀರ್ಯವನ್ನಾಗಿಸದಿದ್ದರೆ ಅದು ಬೆದೆ ಬಂದ ಹಸುಗಳ ಹಿಂದೆ ತಿರುಗುತ್ತ, ಕಂಡವರನ್ನೆಲ್ಲ ಇರಿಯುತ್ತ ಊರ ಬಸವನಾಗಿ ತಿರುಗುವುದೆಂದು ಎಲ್ಲ ಕೃಷಿಕರು ತಮ್ಮ ಮನೆಯ ಗೂಳಿಗಳ ಬೀಜವನ್ನು ಪುಡಿಗೊಳಿಸಿ ಅದನ್ನು ಎತ್ತಾಗಿಸುತ್ತಿದ್ದರು. ಈ ಪ್ರಕ್ರಿಯೆ ತೀರ ಹಿಂಸೆಯಿಂದ ಕೂಡಿರುತ್ತಿತ್ತು. ಇದನ್ನು ಹೆಣ್ಣುಮಕ್ಕಳು ನೋಡಬಾರದೆಂಬ ಕಟ್ಟಳೆಯಿತ್ತಾದರೂ ನಾವು ಕಿಟಕಿಯಿಂದ ಕದ್ದು ನೋಡುತ್ತಿದ್ದೆವು.

ಮೊದಲಿಗೆ ನಾಲ್ಕು ಜನರು ಗೂಳಿಯ ಕಾಲುಗಳನ್ನು ಬಿಗಿಯಾಗಿ ಕಟ್ಟಿ ಮಲಗಿಸುತ್ತಿದ್ದರು. ನೆಲಕ್ಕೆ ಅದನ್ನು ಒತ್ತಿ ಹಿಡಿದುಕೊಳ್ಳುತ್ತಿದ್ದರು. ಬೀಜ ಒಡೆಯುವ ಪರಿಣತರು ಇಕ್ಕಳದಂತಹ ಬಲಿಷ್ಠ ಸಾಧನದ ನಡುವೆ ಗೂಳಿಯ ವೃಷಣವನ್ನಿಟ್ಟು ಒತ್ತಿ ಅದನ್ನು ಪುಡಿಗೊಳಿಸುತ್ತಿದ್ದರು. ನಂತರ ಕೆಂಡದ ಮೇಲೆ ಕಾದ ಕಬ್ಬಿಣದ ಸಲಾಕೆಯಿಂದ ಕುಂಡೆಯ ಮೇಲೆ ಬರೆಹಾಕುತ್ತಿದ್ದರು. ಅಲ್ಲಿಗೆ ಗೂಳಿ ಎತ್ತಾಗಿ ಬದಲಾಗುತ್ತಿತ್ತು. ನಂತರ ಒಂದು ವಾರ ಅದರ ವೃಷಣ ಬೀಗಿ ಬಾತುಕೊಂಡು ಮತ್ತೆ ಚಿಕ್ಕ ಗಾತ್ರದ ಉಂಡೆಯಾಗಿ ಬದಲಾಗುತ್ತಿತ್ತು. ಆ ವಾರವಿಡೀ ಅದನ್ನು ಮನೆಯಲ್ಲೇ ಕಟ್ಟಿಹಾಕಿ ಹುರುಳಿ, ಹಸಿಹುಲ್ಲು ಮುಂತಾದ ಪೌಷ್ಠಿಕ ಆಹಾರ ನೀಡುತ್ತಿದ್ದರು.

ಕುಂಡೆಯ ಮೇಲೆ ಬರೆ ಹಾಕುವುದರಿಂದ ಎತ್ತಿನ ಹಿಂಭಾಗ ಅಗಲವಾಗಿ ಬಲಿಷ್ಠವಾಗುವುದು ಎಂದು ಹಿರಿಯರು ಹೇಳುತ್ತಿದ್ದರು. ಇದನ್ನೆಲ್ಲ ತೀವ್ರವಾಗಿ ವಿರೋಧಿಸುತ್ತಿದ್ದ ನಾವು ಗಂಡುಕರು ಹುಟ್ಟಿದಾಗಿನಿಂದ ಇದಕ್ಕೆ ಹಾಗೆಲ್ಲ ಮಾಡಬಾರದು ಎಂದು ಹಿರಿಯರಿಗೆ ಹೇಳುತ್ತಲೇ ಇರುತ್ತಿದ್ದೆವು. ನಮ್ಮ ಮಾತಿಗೆ ಆಯಿತೆಂದು ತಲೆದೂಗುತ್ತಿದ್ದ ಹಿರಿಯರು ಒಂದಿನ ನಮಗೆ ಹೇಳದೇ, ಕೇಳದೇ ಇದನ್ನೆಲ್ಲ ಮಾಡಿ ಮುಗಿಸಿಬಿಡುತ್ತಿದ್ದರು. ಹಾಗಾಗಿ ನಾವೆಲ್ಲರೂ ಗಂಟಿಯಾಗಿ ಹುಟ್ಟುವುದಾದರೆ ಗಂಡಾಗಿ ಹುಟ್ಟಲೇಬಾರದು ಎಂದು ಮಾತನಾಡಿಕೊಳ್ಳುತ್ತಿದ್ದೆವು.

ದನವೊಂದು ಕರುಹಾಕುವುದೆಂದರೆ ನಮಗೆ ಹಬ್ಬದ ವಾತಾವರಣ ಸೃಷ್ಟಿಯಾಗುತ್ತಿತ್ತು. ಹುಟ್ಟುವ ಕರುವಿಗೆ ಏನು ಹೆಸರಿಡುವುದೆಂದು ಆಗಲೇ ಯೋಚಿಸಲು ಶುರುಮಾಡುತ್ತಿದ್ದೆವು. ಕರು ಹುಟ್ಟುವ ವಾರದ ಆಧಾರದಿಂದ ಸಾಮಾನ್ಯವಾಗಿ ಅದರ ಹೆಸರು ನಿಗದಿಯಾಗುತ್ತಿತ್ತು. ಸೋಮ/ಮಿ, ಮಂಗಳ/ಲಿ, ಬುದುವಂತ/ತಿ, ಶುಕ್ರ/ಕ್ರಿ, ಸಣಿಯಾರ/ ಸಣ್ಣಿ… ಹೀಗೆ. ಇಲ್ಲವಾದಲ್ಲಿ ಅವುಗಳ ಬಣ್ಣದ ಮೇಲೆ ಹೆಸರಿಡುತ್ತಿದ್ದೆವು. ಬೆಳ್ಳಿ, ಕೆಂದಿ, ಕರಿಯ ಹೀಗೆ. ಅದು ಕರುಹಾಕುವುದನ್ನು ವಾರವೊಂದರ ಮೊದಲೇ ನಿರ್ಣಯಿಸುವ ಹಿರಿಯರು ಅದನ್ನು ಮನೆಯಲ್ಲೇ ಕಟ್ಟಿಹಾಕಿ ಪೋಷಿಸುತ್ತಿದ್ದರು. ದನಮೇಯಸಲು ಹೋದ ನಾವು ಮನೆಗೆ ಬಂದಾಗ ಮೊದಲು ನೋಡುವುದು ಕರು ಹುಟ್ಟಿದೆಯೇ? ಎಂಬುದನ್ನಾಗಿತ್ತು. ಅಮ್ಮಂದಿರಂತೂ ರಾತ್ರಿಯೆಲ್ಲ ಎರಡು, ಮೂರು ಬಾರಿ ಕೊಟ್ಟಿಗೆಗೆ ಹೋಗಿ ಕರುಹಾಕಿದೆಯೇ ಎಂದು ನೋಡಿಬರುತ್ತಿದ್ದರು. ಹಾಕಿದರೆ ತಕ್ಷಣ ಕರುವಿನ ಗೊರಸಿನ ತುದಿಯನ್ನು ಕತ್ತರಿಸಿ ತೆಗೆಯಬೇಕು ಮತ್ತು ಅದರ ಮೇಲೆ ಅಕ್ಕಿಯ ತೌಡನ್ನು ಉದುರಿಸಿ ದನ ಅದನ್ನು ನೆಕ್ಕುವಂತೆ ಮಾಡುತ್ತಿದ್ದರು. ಕರು ಒಂದರ್ಧ ಗಂಟೆಯಲ್ಲಿ ಎದ್ದುನಿಲ್ಲುತ್ತಿತ್ತು. ದನದ ಮಾಸಲು ಬೀಳುವುದನ್ನು ತೆಗೆಯಲು ಅಲ್ಲೇ ಕುಳಿತು ಕಾಯುತ್ತಿದ್ದರು.

ಮಾಸಲನ್ನು ದನ ತಿಂದರೆ ತೀವ್ರ ನಂಜಾಗುತ್ತದೆ ಮತ್ತು ಹಾಲು ಬತ್ತಿಹೋಗುತ್ತದೆ ಎಂಬ ನಂಬಿಕೆಯಿತ್ತು. ಸಸ್ಯಾಹಾರಿಯಾದ ದನಗಳು ಅದು ಯಾಕೋ ಈ ಮಾಸಲು ಬಿದ್ದೊಡನೆ ಗಬಕ್ಕನೆ ತಿಂದುಬಿಡುತ್ತಿದ್ದವು. ಮಾಸಲು ಬಿದ್ದೊಡನೆ ದನ ಮತ್ತು ಕರುವನ್ನು ಬಿಸಿಯಾದ ನೀರಿನಲ್ಲಿ ಮೀಸುತ್ತಿದ್ದರು. ಅದರ ಬಿಸಿಗೆ ದನದ ಕೆಚ್ಚಲಿನಲ್ಲಿ ಹಾಲು ಉಕ್ಕೇರುತ್ತಿತ್ತು. ನಂತರ ಅವುಗಳ ಮೈಯ್ಯನ್ನು ಅರಿವೆಯಿಂದ ಒರೆಸಿ, ಕರುವಿಗೆ ಹಾಲುಣಿಸುತ್ತಿದ್ದರು. ದನ ಸರಿಯಾಗಿ ಹಾಲುಣಿಸಿತೆಂದರೆ ಅಲ್ಲಿಗೆ ಇಡಿಯ ಕರಾವು ಸುಲಲಿತವೆಂದು ಅರ್ಥ. ಕೆಲವೊಮ್ಮೆ ದನಗಳು ಕರುವಿಗೆ ಹಾಲುಣಿಸಲು ಒಪ್ಪುತ್ತಲೇ ಇರಲಿಲ್ಲ, ಇನ್ನೂ ಕೆಲವು ದನಗಳು ಕರುವಿಗೆ ಕುಡಿಸುತ್ತಿದ್ದವಾದರೂ ಮನುಷ್ಯರಿಗೆ ಕರೆಯಲು ಕೊಡುತ್ತಿರಲಿಲ್ಲ. ಆಗ ಅವುಗಳೆದುರು ಹಿಂಡಿಯನ್ನೋ, ತಿಂಡಿಯನ್ನೋ ಇಟ್ಟು ಮೈಮರೆಯುವಂತೆ ಮಾಡಿ ಹಾಲು ಕರೆಯುತ್ತಿದ್ದರು. ಅದಕ್ಕೂ ಬಗ್ಗದಿದ್ದರೆ ಎದುರು ದೊಡ್ಡ ದೊಣ್ಣೆಯನ್ನಿಡುವುದು, ಕಾಲನ್ನು ಕಂಬಕ್ಕೆ ಕಟ್ಟಿಹಾಕಿ ಕರೆಯುವುದು ಹೀಗೆಲ್ಲ ನಡೆಯುತ್ತಿತ್ತು.

ಮನೆಗೆ ಬೇಕಾದಷ್ಟೇ ಹಾಲನ್ನು ಕರೆದು ಉಳಿದೆಲ್ಲವನ್ನೂ ಕರುವಿಗೆಂದು ಬಿಡುತ್ತಿದ್ದರು. ಹಾಲು ಕುಡಿದಾದ ಮೇಲೆ ಕರುಗಳು ಚಂಗನೆ ಜಿಗಿದು ಓಡುವ ದೃಶ್ಯ ನಮ್ಮೆಲ್ಲರಲ್ಲೂ ರೋಮಾಂಚನ ಉಂಟುಮಾಡುತ್ತಿತ್ತು. ನಾವೂ ಅದರ ಹಿಂದೆ ಕುಣಿಯುತ್ತ ಖುಶಿಪಡುತ್ತಿದ್ದೆವು. ಕರುವಿನ ಕಿವಿಗೆ ಗಾಳಿ ಹೋಗುವುದರಿಂದ ಅದು ಹಾಗೆ ಜಿಗಿಯುತ್ತದೆಯೆಂದು ಅಮ್ಮ ಹೇಳುತ್ತಿದ್ದರು ಮತ್ತು ಯಾರಾದರೂ ಕಾರಣವಿಲ್ಲದೇ ಕುಣಿಯುತ್ತಿದ್ದರೆ ‘ಕಿವಿಯಲ್ಲಿ ಗಾಳಿ ಹೊಕ್ಕಿದೆಯಾ?’ ಎಂದು ಬೈಯ್ಯುತ್ತಿದ್ದರು.

ಕೆಲವೊಮ್ಮೆ ಕರುಗಳು ಹೊಟ್ಟೆಯಲ್ಲಿ ಜಂತುಹುಳಗಳು ತುಂಬಿ ಸಾಯುವುದಿತ್ತು. ಚಾಕಣ್ಣು, ಹಾಗಲಕಾಯಿ ರಸ ಕುಡಿಸುತ್ತಿದ್ದರಾದರೂ ಕರುಗಳು ಉಳಿಯುತ್ತಿರಲಿಲ್ಲ. ಆಗೆಲ್ಲ ದನಗಳು ದಿನವೆಲ್ಲ ಕರುಗಳಿಗಾಗಿ ಕೂಗುತ್ತಿದ್ದವು. ಅವುಗಳನ್ನು ಮುದ್ದುಮಾಡಿ ಮಾತು ಕೇಳಿಸಿ, ಹಾಲುಕರೆಯುತ್ತಿದ್ದರು. ಹೆರಿಗೆಯಲ್ಲಿ ಅಚಾನಕ್ಕಾಗಿ ದನವೇ ಸತ್ತರಂತೂ ಮನೆಯವರೆಲ್ಲರೂ ದುಃಖಿಸುತ್ತಿದ್ದರು. ಅದರ ಕರುವನ್ನು ಮನೆಯ ಒಂದು ಮೂಲೆಯಲ್ಲಿಯೇ ಮಲಗಿಸಿಕೊಂಡು ಬಾಟಲಿಯಲ್ಲಿ ಹಾಲುತುಂಬಿ ಮನೆಯ ಮಕ್ಕಳಿಗೆ ಕುಡಿಸಿದಂತೆ ಕುಡಿಸುತ್ತಿದ್ದರು. ಆದರೂ ಕರುಗಳು ಉಳಿಯುವುದು ಬಹಳ ಕಡಿಮೆಯಿತ್ತು.

ದನ ಕರುಹಾಕಿದಾಗ ಅದರ ಗಿಣ್ಣದ ಹಾಲಿಗೆ ಬೆಲ್ಲ, ತೆಂಗಿನತುರಿ ಸೇರಿಸಿ ಗಿಣ್ಣವೆಂಬ ಸಿಹಿತಿಂಡಿ ತಯಾರಿಸುತ್ತಿದ್ದರು. ಸುತ್ತಮುತ್ತಲ ಎಲ್ಲರ ಮನೆಗೂ ಹಂಚುತ್ತಿದ್ದರು. ಹನ್ನೊಂದನೇ ದಿನ ಅದರ ಹಾಲನ್ನು ಊರ ದೇವಿಗೆ ನೈವೇದ್ಯ ಮಾಡಿ ಮತ್ತೆ ಬಳಸಲು ಪ್ರಾರಂಭಿಸುತ್ತಿದ್ದರು. ಕರುಗಳು ಹುಲ್ಲನ್ನು ತಿನ್ನುವವರೆಗೂ ಅದಕ್ಕೆ ದಿನಕ್ಕೆ ಮೂರು ಸಲ ಮೊಲೆಯೂಡಲು ಬಿಡುತ್ತಿದ್ದರು. ಸಾಮಾನ್ಯವಾಗಿ ಊರ ದನಗಳು ಎರಡು ವರ್ಷಕ್ಕೆ ಒಂದು ಕರು ಹಾಕುತ್ತವೆ. ಹಾಗಾಗಿ ಕೊಟ್ಟಿಗೆ ಬೇಗ ತುಂಬುವುದರಿಂದ ಕೆಲವೊಂದನ್ನು ಮಾರುವುದು ಅನಿವಾರ್ಯವಾಗುತ್ತಿತ್ತು. ಆಗೆಲ್ಲ ದನ ಮತ್ತು ಕರುಗಳನ್ನು ಕಳಿಸಿಕೊಡುವಾಗ ಮನೆಯ ಮಗಳನ್ನು ಗಂಡನ ಮನೆಗೆ ಕಳಿಸುವ ದೃಶ್ಯವೇ ಸೃಷ್ಟಿಯಾಗುತ್ತಿತ್ತು. ಕೊಡುವ ಮಾತುಕತೆಯಾಗುವ ಮೊದಲೇ ಬೆಲೆಗಿಂತ ಹೆಚ್ಚಾಗಿ ಅವರು ದನಕರುಗಳನ್ನು ಸರಿಯಾಗಿ ನೋಡಿಕೊಳ್ಳುವವರೋ ಅಲ್ಲವೋ ಎಂಬುದನ್ನು ಹೆಚ್ಚು ವಿಚಾರಿಸುತ್ತಿದ್ದರು. ಕಳಿಸುವ ಮೊದಲು ಆ ದನಕ್ಕೆ ಇಷ್ಟವಾದ ತಿಂಡಿಯನ್ನೆಲ್ಲ ಕೊಟ್ಟು ಹೊಟ್ಟೆ ತುಂಬಿಸುತ್ತಿದ್ದರು. ಪರಿಚಿತ ಜಾಗದಿಂದ ಹೋಗಲು ನಿರಾಕರಿಸುವ ದನಗಳನ್ನು ‘ಹೋಗು, ಮಗಾ’ ಎಂದು ಕಣ್ಣೀರಿಡುತ್ತಲೇ ಕಳಿಸುತ್ತಿದ್ದರು. ಎಲ್ಲಿಯಾದರೂ ದನಕೊಟ್ಟ ಊರಿಗೆ ಹೋದರೆ ಮರೆಯದೇ ತಾವು ಕೊಟ್ಟ ದನವನ್ನು ನೋಡಿ, ಮಾತಾಡಿಸಿ ಬರುತ್ತಿದ್ದರು.

ದನಮೇಯಿಸಲು ಹಗಲಿಡೀ ತಿರುಗಿ, ಸುಸ್ತಾಗಿ ಮನೆಗೆ ಬರುವ ನಾವು ಕೆಲವೊಮ್ಮೆ ರಾತ್ರಿ ನಿದ್ದೆಯಲ್ಲಿ ಎದ್ದು ಕೂಗುವುದಿತ್ತು. ಆಗೆಲ್ಲ ಕೆಟ್ಟ ಕನಸು ಬಿತ್ತೆಂದು ಹೇಳುತ್ತಿದ್ದೆವು. ಅದಕ್ಕೆ ಪರಿಹಾರವೆಂದರೆ ಬಿದ್ದ ಕನಸನ್ನು ಬೆಳಿಗ್ಗೆಯೆದ್ದು ದನಗಳ ಕಿವಿಯಲ್ಲಿ ಹೇಳಿಬರುವುದಾಗಿತ್ತು. ಅವುಗಳ ಕಿವಿಯಲ್ಲಿ ಮಾತನಾಡಿದಾಗ ಕಿವಿಯೊಳಗೆ ಗಾಳಿ ಹೋದಂತಾಗಿ ಅವು ಕತ್ತನ್ನು ಅಲ್ಲಾಡಿಸುತ್ತಿದ್ದವು. ಹೇಳಿದ್ದೆಲ್ಲ ಅದಕ್ಕೆ ಅರ್ಥವಾಯಿತೆಂದು ನಾವು ಹಿಗ್ಗುತ್ತಿದ್ದೆವು. ಬಾಲ್ಯದ ನೆನಪುಗಳೊಂದಿಗೆ ಈ ಗಂಟಿಗಳ ನೆನಪುಗಳೂ ಅವಿನಾಭಾವ ಸಂಬಂಧವಾಗಿ ಬೆಸೆದುಕೊಂಡಿವೆ. ದಿನವೂ ತಮ್ಮನ್ನು ಆರೈಕೆ ಮಾಡುವವರು ‘ಬೇ ಇಕಾ…’ ಎಂದು ಕೂಗಿದರೆ ಸಾಕು, ಅದೆಷ್ಟು ದೂರದಲ್ಲಿದ್ದರೂ ಓಡಿಬರುವ ಅವುಗಳ ಪ್ರೀತಿಗೆ ಬೆಲೆಕಟ್ಟಲಾಗದು. ಈಗಿನ ಹೈಬ್ರಿಡ್ ತಳಿಗಳಂತೆ ಕಟ್ಟಿ ಸಾಕಬೇಕಾದ ದನಗಳು ಅವಾಗಿರಲಿಲ್ಲ. ಕಾಡು, ಬಯಲು, ಬೇಣಗಳಲ್ಲಿ ಮೇಯ್ದು ಬಂದು ಹಾಲು, ಹೈನಗಳನ್ನು ನೀಡುವ ಊರ ದನಗಳವಾದ್ದರಿಂದ ಜಂಗಮ ಬದುಕಿನ ಅನುಭವಗಳನ್ನು ಅವುಗಳಿಂದ ಪಡೆಯಲು ಸಾಧ್ಯವಾಗುತ್ತಿತ್ತು.

ದಿನದ ಮೇವನ್ನು ಮುಗಿಸಿಕೊಂಡು ಸಂಜೆಯವೇಳೆಗೆ ಗುಂಪು, ಗುಂಪಾಗಿ ತಮ್ಮ ಹಟ್ಟಿಗಳೆಡೆಗೆ ಬರುವಾಗ ಏಳುವ ಗೋಧೂಳಿ, ಅವು ಮನೆಗೆ ಬರುತ್ತಿವೆಯೆಂಬುದನ್ನು ಸೂಚಿಸಲು ದನಗಾಹಿಗಳು ಕೂಗುವ ಬೈರೋ… ಬೈರೋ…. ಎಂಬ ಸದ್ದು, ಕೊಟ್ಟಿಗೆಯಲ್ಲಿ ಹುಲ್ಲುತಿನ್ನುವಾಗ ಕೇಳಿಬರುವ ಅವುಗಳ ಕೊರಳ ಗಂಟೆಗಳ ನಿನಾದ, ರಾತ್ರಿಯಲ್ಲಿ ತಿಂದ ಆಹಾರವನ್ನು ಪುನಃ ಮೆಲುಕಾಡಿಸುವಾಗ ಬರುವ ಹಲ್ಲುಗಳ ಮಸೆತದ ಕಿರುಸದ್ದು, ಕರುಗಳನ್ನು ಕಂಡಾಗಲೆಲ್ಲ ವಾತ್ಸಲ್ಯದಿಂದ ದನಗಳು ಹೊರಡಿಸುವ ಹೂಂಕಾರ…. ಓಹ್! ಎರಡು ದನಗಳು ಮನೆಯೆದುರು ಬಂದು ಎಷ್ಟೊಂದು ನೆನಪುಗಳನ್ನು ಮೆಲುಕು ಹಾಕಿಸಿದವು!

(ಕಲಾಕೃತಿ: ಡಾ. ಕೃಷ್ಣ ಗಿಳಿಯಾರ್)