ಅಮೈ ಮಹಾಲಿಂಗ ನಾಯ್ಕ ಅವರು ಬಂಟ್ವಾಳದ ತಾಲೂಕಿನ ಅಡ್ಯನಡ್ಕ ಸಮೀಪದ ಅಮೈ ಎಂಬ ಊರಿನ ನಿವಾಸಿ. ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಕೃಷಿ ಜೀವನವು ಮರೆಯಾಗುತ್ತಿದೆ ಎಂಬ ಆತಂಕ ಕವಿಯುತ್ತಿರುವ ಸಂದರ್ಭದಲ್ಲಿ ಅಮೈ ಮಹಾಲಿಂಗ ನಾಯ್ಕರು ಬೋಳುಗುಡ್ಡವನ್ನು ಹಸನು ಮಾಡುವ ಕಾಯಕದಲ್ಲಿ ನಿರತರಾಗಿದ್ದರು. ಕೃಷಿ ಕಾಯಕದ ಮೂಲಕ ಸ್ವಾವಲಂಬಿ ಜೀವನ ಸಾಧ್ಯ ಎಂಬುದನ್ನು ಆಧುನಿಕ ತಲೆಮಾರಿಗೆ ತೋರಿಸಿಕೊಟ್ಟಿದ್ದಾರೆ. ಅವರು ಜೀವನದಲ್ಲಿ ಪ್ರಯತ್ನಗಳಿಗೆ ಎಂದೂ ‘ರಜಾ’ ತೆಗೆದುಕೊಂಡಿದ್ದೇ ಇಲ್ಲ. ಯಾಕೆಂದರೆ ಮಣ್ಣಿನ ವಾಸನೆಯನ್ನು, ನೀರಿನ ಜಾಡನ್ನು ಅವರು ಅರ್ಥ ಮಾಡಿಕೊಳ್ಳಬಲ್ಲವರು. ಅವರ ಬಗ್ಗೆ ಕೋಡಿಬೆಟ್ಟು ರಾಜಲಕ್ಷ್ಮಿ ಅವರ ಬರಹ ಇಲ್ಲಿದೆ.

ಕೆಲವೇ ದಶಕಗಳ ಹಿಂದಕ್ಕೆ ಚಲಿಸಿದರೆ ಜೀವನ ವಿಧಾನಗಳು, ಸಾಮಾಜಿಕ ಪರಿಸ್ಥಿತಿ ಎಷ್ಟೊಂದು ಭಿನ್ನವಾಗಿತ್ತು! ಈಗಿನ ಕಾಲಕ್ಕೆ ಹೋಲಿಸಿದರೆ ಅಂದಿನ ಆರ್ಥಿಕ ವ್ಯವಹಾರಗಳ ಶೈಲಿಯೇ ನಿಧಾನಗತಿಯಲ್ಲಿತ್ತು. ಬ್ಯಾಂಕುಗಳು ಇಷ್ಟೊಂದು ವ್ಯಾಪಕವಾಗಿ ಜನಜೀವನವನ್ನು ಪ್ರವೇಶಿಸಿರಲಿಲ್ಲ. ಅಷ್ಟೇ ಏಕೆ, ಒಂದೋ ಕೂಡಿಟ್ಟ ಹಣವನ್ನು ಠೇವಣಿ ಇಡುವುದಕ್ಕೆ, ಅಥವಾ ಸಾಲ ಪಡೆಯುವುದಕ್ಕಾಗಿ ಮಾತ್ರ ಬ್ಯಾಂಕುಗಳಿಗೆ ಹೋಗುವ ಕ್ರಮವಿತ್ತು. ಅದರಲ್ಲಿಯೂ ಬ್ಯಾಂಕಿನಿಂದ ಸಾಲ ಪಡೆಯುವುದು ಎಂದರೆ ಅದೊಂದು ಮುಜುಗರದ ವಿಷಯವಾಗಿತ್ತು. ಜವಾಬ್ದಾರಿಯಿಂದ ಜೀವನ ಮಾಡದೇ ಇರುವವರು, ಅಥವಾ ಜೀವನದಲ್ಲಿ ಯಾವುದೋ ಸಮಸ್ಯೆಯ ಸುಳಿಯಲ್ಲಿ ಸಿಕ್ಕಿಹಾಕಿಕೊಂಡವರು ಬ್ಯಾಂಕಿನಿಂದ ಸಾಲ ಪಡೆಯುತ್ತಾರೆ ಎಂಬ ಗ್ರಹಿಕೆಯಿತ್ತು. ಆಗೆಲ್ಲ ಸ್ವಯಂ ದುಡಿಮೆ ಮತ್ತು ದೈಹಿಕ ಶ್ರಮಕ್ಕೇ ಆದ್ಯತೆ. ಜೀವನ ವಿಧಾನದಲ್ಲಿ ಯಾವುದೆ ಆಡಂಬರ ಪ್ರದರ್ಶನಗಳಿಲ್ಲದೇ ಇದ್ದರೂ ಪರವಾಗಿಲ್ಲ, ಯಾವುದೇ ಸಾಲ ಮಾಡದೇ ಜೀವನ ಮಾಡುವುದೇ ಮನುಷ್ಯನ ಆದ್ಯ ಕರ್ತವ್ಯ ಎಂಬ ಗ್ರಹಿಕೆಯಿತ್ತು. ಹಾಗೆ ಬಾಳುವವರನ್ನು ಸಮಾಜವೂ ಗೌರವದಿಂದ ಕಾಣುತ್ತಿತ್ತು. ಅಂತಹುದೇ ಮೌಲ್ಯಗಳನ್ನು ನಂಬಿ ಬದುಕಿದವರು ಅಮೈ ಮಹಾಲಿಂಗ ನಾಯ್ಕ.
ಕೃಷಿ ಕೂಲಿ ಕಾರ್ಮಿಕರಾಗಿದ್ದ ಅವರು ಕಠಿಣತರವಾದ ಗುಡ್ಡದಲ್ಲಿ ಸುರಂಗಗಳನ್ನು ಕೊರೆದು ತಮ್ಮ ಭೂಮಿಗೆ ನೀರು ಹರಿದು ಬರುವಂತೆ ಏಕಾಂಗಿಯಾಗಿ ದುಡಿದವರು. ಭೂಮಿಯನ್ನು ಹಸನು ಮಾಡಿ, ಕೃಷಿ ಭೂಮಿಯನ್ನು ರೂಪಿಸಿಕೊಂಡಿರುವ ಅವರ ಸಾಧನೆಯ ಹಾದಿಯ ಬಗ್ಗೆ ಶ್ಲಾಘನೆಗಳು ವ್ಯಕ್ತವಾಗಿವೆ. ಏಕಾಂಗಿಯಾಗಿ, ಅಪಾಯಕಾರಿಯಾದ ಕೆಲಸದ ಮೂಲಕ ಜೀವಜಲವನ್ನು ತರಿಸಿ ಬೋಳು ಗುಡ್ಡೆಯನ್ನು ನಂದನವನ ಮಾಡಿದ ಪ್ರಯತ್ನಶೀಲ, ಪ್ರಗತಿಪರ ಕೃಷಿಕ ಎಂಬ ನೆಲೆಯಲ್ಲಿ ಅವರಿಗೆ ಕೇಂದ್ರ ಸರ್ಕಾರವು ಪದ್ಮ ಶ್ರೀ ಪ್ರಶಸ್ತಿಯನ್ನು ನೀಡಿ ಪುರಸ್ಕರಿಸಿದೆ. ಈ ಸಾಧನೆಯ ಪಥದಲ್ಲಿ ಅವರು ಕಂಡುಕೊಂಡ ಜೀವನ ಸತ್ಯಗಳು ಹಲವಾರು. ಮನುಷ್ಯನು ದೈಹಿಕ ಶ್ರಮದಿಂದ, ಮಾನಸಿಕ ಬಲದಿಂದ ಸಾಧನೆಯ ಹಾದಿಯನ್ನು ಹೇಗೆ ಕ್ರಮಿಸಬಹುದು ಎಂಬುದಕ್ಕೆ ಅವರ ಜೀವನಗಾಥೆಯೇ ಉದಾಹರಣೆ. ದೈಹಿಕ ಶ್ರಮವನ್ನು ಮರೆತೇ ಬಿಡುತ್ತಿರುವ ಈ ಆಧುನಿಕ ಕಾಲದಲ್ಲಿ ಅಮೈ ಮಹಾಲಿಂಗ ನಾಯ್ಕರು ಕ್ರಮಿಸಿದ ಹಾದಿ, ಮಾನವನ ಬದುಕಿನ ಅನೇಕ ಸಾಧ್ಯತೆಗಳನ್ನು ತಿಳಿಸುವ ಕತೆಯೂ ಹೌದು.

ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಕೃಷಿ ಜೀವನವು ಮರೆಯಾಗುತ್ತಿದೆ ಎಂಬ ಆತಂಕ ಕವಿಯುತ್ತಿರುವ ಸಂದರ್ಭದಲ್ಲಿ ಅಮೈ ಮಹಾಲಿಂಗ ನಾಯ್ಕರು ಬೋಳುಗುಡ್ಡವನ್ನು ಹಸನು ಮಾಡುವ ಕಾಯಕದಲ್ಲಿ ನಿರತರಾಗಿ, ಕೃಷಿಯ ಮೂಲಕ ಬದುಕನ್ನು ಹೇಗೆ ಶ್ರೀಮಂತಗೊಳಿಸಬಹುದು ಎಂಬುದನ್ನು ತೋರಿಸಿಕೊಡುತ್ತಿದ್ದಾರೆ. ಕೃಷಿ ಕಾಯಕದ ಮೂಲಕ ಸ್ವಾವಲಂಬಿ ಜೀವನ ಸಾಧ್ಯ ಎಂಬುದನ್ನು ಆಧುನಿಕ ತಲೆಮಾರಿಗೆ ತೋರಿಸಿಕೊಟ್ಟಿದ್ದಾರೆ.

ಅಮೈ ಮಹಾಲಿಂಗ ನಾಯ್ಕ ಅವರು ಬಂಟ್ವಾಳದ ತಾಲೂಕಿನ ಅಡ್ಯನಡ್ಕ ಸಮೀಪದ ಅಮೈ ಎಂಬ ಊರಿನ ನಿವಾಸಿ. ಅವರಿಗೀಗ 74 ವರ್ಷಗಳ ಆಸುಪಾಸು. ಕೃಷಿ ಕೂಲಿಕಾರ್ಮಿಕರಾಗಿ ಕೆಲಸ ಮಾಡುವ ಸಂದರ್ಭದಲ್ಲಿ ಅವರು ಭರ್ಜರಿ ಕೆಲಸ ಮಾಡುವ ಕಟ್ಟುಮಸ್ತಾದ ಆಳು. ಅಡಿಕೆ ಮರ ಏರುವುದಕ್ಕೆ, ತೆಂಗಿನ ಮರ ಏರುವುದಕ್ಕೆ, ಆರಭಾರದ ಕೆಲಸಗಳನ್ನು ನಿರ್ವಹಿಸುವುದಕ್ಕೆ ಅವರೇ ಸರಿ ಎಂಬಂತಹ ಕೆಲಸಗಾರರು. ಆದರೆ ಹೀಗೆ ಅವರಿವರ ತೋಟ ಗದ್ದೆಗಳಿಗೆ ತೆರಳಿ ಕೆಲಸ ಮಾಡುವಾಗ, ತನ್ನದೇ ಆದ ಜಮೀನೊಂದು ಇದ್ದರೆ, ಅದೇ ಜಮೀನಿನಲ್ಲಿ ತಾನು ದುಡಿದು ಉಣ್ಣಬಹುದಿತ್ತು ಎಂಬ ಕನಸೊಂದು ಎದೆಯಲ್ಲಿ ಮೊಳಕೆಯೊಡೆದಿತ್ತು. ಅದೊಂದು ಅಸಾಧ್ಯ ಕನಸು ಎಂಬ ಸಿನಿಕತನವಾಗಲೀ, ಅದನ್ನು ಸಾಧಿಸಿಯೇ ತೀರುತ್ತೇನೆ ಎಂಬ ‘ಹೀರೋ’ತನವಾಗಲೀ ಅವರ ಮನಸ್ಸಿನಲ್ಲಿ ಇರಲಿಲ್ಲ. ಆದರೆ ಆ ನಿಟ್ಟಿನಲ್ಲಿ ಅವರು ನಿರಂತರವಾಗಿ ಪ್ರಯತ್ನ ಮಾಡುತ್ತ ಸಮಚಿತ್ತದಿಂದ ದೈನಂದಿನ ದುಡಿಮೆಯನ್ನು ಮಾಡುತ್ತಿದ್ದರು. ಅವರು ಜೀವನದಲ್ಲಿ ಪ್ರಯತ್ನಗಳಿಗೆ ಎಂದೂ ‘ರಜಾ’ ತೆಗೆದುಕೊಂಡಿದ್ದೇ ಇಲ್ಲ.

ಅದು ಸುಮಾರು 1978ರ ಆಸುಪಾಸು. ಮಹಾಲಿಂಗ ನಾಯ್ಕರು ಅಮೈ ಊರಿನ ನಿವಾಸಿಯೇ ಆದ ಮಹಾಬಲ ಭಟ್ಟರ ತೋಟದಲ್ಲಿ ಕೆಲಸ ಮಾಡುತ್ತಿದ್ದರು. ತಮ್ಮ ತೋಟದಲ್ಲಿ ಕೆಲಸ ಮಾಡುವ ನಾಯ್ಕರ ಮನಸ್ಸಿನಲ್ಲಿರುವ ಕನಸನ್ನು ಭಟ್ಟರೂ ಬಲ್ಲವರು. ಹಾಗಾಗಿ ಜಮೀನು ಪಡೆಯುವುದಕ್ಕೆ ಬೇಕಾದ ವ್ಯವಸ್ಥೆಯನ್ನು ಕಲ್ಪಿಸಲು ಸಿದ್ಧರಾಗಿದ್ದರು. ಎರಡು ಎಕರೆ ಗುಡ್ಡವನ್ನು ದರ್ಖಾಸ್ತು ರೂಪದಲ್ಲಿ ಮಹಾಲಿಂಗ ನಾಯ್ಕರ ಹೆಸರಿಗೆ ಮಾಡಿಸುವಲ್ಲಿ ಯಶಸ್ವಿಯಾದರು.

ಹೀಗೆ ಜಮೀನೇನೋ ಸಿಕ್ಕಿತು, ಆದರೆ ಅದು ಕೃಷಿ ಜಮೀನಲ್ಲ, ಬೋಳುಗುಡ್ಡವಾದ್ದರಿಂದ ನೀರಿನಾಶ್ರಯದ ಕೃಷಿ ಬೆಳೆಯನ್ನು ಬೆಳೆಯುವುದು ಸಾಧ್ಯವಿಲ್ಲ ಎಂಬ ಬೇಸರವೇನೂ ಅವರ ಮನದಲ್ಲಿ ಇಣುಕಲಿಲ್ಲ. ಬದಲಾಗಿ, ಈ ಗುಡ್ಡವನ್ನೇ ಕೃಷಿ ಜಮೀನಾಗಿ ಹೇಗೆ ಪರಿವರ್ತಿಸಬಹುದು ಎಂದು ಲೆಕ್ಕಾಚಾರ ಹಾಕುತ್ತಲೇ ದಿನಕೆಲಸಗಳನ್ನು ಮಾಡುತ್ತಿದ್ದರು.

ಅವರ ಅಂತರಂಗದಲ್ಲಿದ್ದ ಸ್ವಾಭಿಮಾನ ದೊಡ್ಡದು. ಗುಡ್ಡದ ತುದಿಯನ್ನು ಸ್ವಲ್ಪ ಸಮತಟ್ಟು ಮಾಡಿದರೆ ಅಲ್ಲೊಂದು ಸ್ವಂತ ಗುಡಿಸಲು ಕಟ್ಟಿಕೊಳ್ಳಬಹುದಲ್ಲಾ ಎಂದು ಭಾವಿಸಿದ ಅವರು ಹಾರೆ ಗುದ್ದಲಿ ಹಿಡಿದುಕೊಂಡು ಸ್ವತಃ ಕೆಲಸ ಆರಂಭಿಸಿದರು. ಗುಡಿಸಲೊಂದನ್ನು ಕಟ್ಟಿಕೊಂಡ ಬಳಿಕ ಕುಟುಂಬ ಸಮೇತ ಅಲ್ಲಿ ವಾಸ ಮಾಡಲಾರಂಭಿಸಿದರು. ಆದರೆ ಗುಡ್ಡದ ಮೇಲಿನ ಮನೆಯಲ್ಲಿ ಕುಡಿಯುವ ನೀರಿಗಾಗಿ ಬೇರೆಯವರನ್ನು ಆಶ್ರಯಿಸಬೇಕಲ್ಲಾ ಎಂಬ ಮತ್ತೊಂದು ಬೇಸರ ಎದುರಾಯಿತು. ಅದೂ ನಾಲ್ಕು ಫರ್ಲಾಂಗ್ ನಷ್ಟು ದೂರಕ್ಕೆ ಬೆಟ್ಟವಿಳಿದು ಹೋದ ಮೇಲೆ ನೀರು ಸಿಗುತ್ತಿತ್ತು. ಅಲ್ಲಿಂದ ನೀರು ಹೊತ್ತು ತರುವುದು ಸುಲಭದ ಕೆಲಸವಾಗಿರಲಿಲ್ಲ. ಮನೆಯ ಕೆಲಸಗಳಿಗೆ, ಕುಡಿಯುವುದಕ್ಕೆ ಹೀಗೆ ನೀರು ಹೊತ್ತು ತರಬೇಕಾಗಿತ್ತು. ಪುಟ್ಟ ಪುಟ್ಟ ಮಕ್ಕಳಾದ್ದರಿಂದ ಜೀವನಕ್ಕೆ ನೀರಿನ ಅವಶ್ಯಕತೆ ಜಾಸ್ತಿಯಿತ್ತು. ಸರಿ, ಅಷ್ಟರಲ್ಲಿ ಹಾರೆ ಗುದ್ದಲಿಗಳು ಅವರ ಸ್ನೇಹಿತರಾಗಿಬಿಟ್ಟಿದ್ದವು. ಗುಡ್ಡದ ತುದಿಯಲ್ಲಿ ಬಾವಿ ತೋಡುವುದು ಅಸಾಧ್ಯದ ಮಾತು ಎಂದು ಅವರು ಬಲ್ಲರು. ಆದರೆ ಗುಡ್ಡದ ಅಂತರಂಗದಲ್ಲಿ ನೀರಿನ ಒರತೆಯಂತೂ ಇದ್ದೇ ಇರುತ್ತದೆ ಎಂಬುದನ್ನು ಅವರು ಬಲ್ಲರು. ಕೃಷಿ ಕಾರ್ಮಿಕರಾದ್ದರಿಂದ ಮಣ್ಣಿಗೂ ಅವರಿಗೂ ಹತ್ತಿರದ ನಂಟಲ್ಲವೇ. ಮಣ್ಣಿನ ವಾಸನೆಯನ್ನು, ನೀರಿನ ಜಾಡನ್ನು ಅವರು ಅರ್ಥ ಮಾಡಿಕೊಳ್ಳಬಲ್ಲವರು. ಅದೇ ಜ್ಞಾನವನ್ನು ಬಳಸಿಕೊಂಡು ಅವರೊಂದು ಉಪಾಯ ಮಾಡಿದರು.

ಕಾಸರಗೋಡು, ವಿಟ್ಲ ಭಾಗದಲ್ಲಿ ಗುಡ್ಡದಿಂದ ಹರಿದು ಬರುವ ನೀರಿನ ಝರಿಯನ್ನು ಬಳಸಿ ಕೃಷಿ ಮಾಡುತ್ತಿದ್ದ, ಮನೆನಿರ್ವಹಣೆಗೆ ನೀರು ಪಡೆಯುತ್ತಿದ್ದ ಅನೇಕ ಉದಾಹರಣೆಗಳನ್ನು ಅವರು ಬಲ್ಲವರು. ಹಾಗಾದರೆ ಸುರಂಗ ಕೊರೆದು, ನೀರಿನ ಒರತೆಯನ್ನು ಪತ್ತೆ ಮಾಡಿ, ಅದರ ಮೂಲಕವೇ ತಮ್ಮ ಜಮೀನಿನ ಕಡೆಗೆ ನೀರು ಹರಿಸಿದರೆ ಹೇಗೆ ಎಂಬ ಯೋಚನೆ ಅವರಿಗೆ ಬಂತು. ಆದರೆ ಈ ಆಲೋಚನೆಗಳನ್ನು ಯಾರಲ್ಲಿ ಹೇಳಿಕೊಂಡರೂ ಅದು ಕಾರ್ಯಸಾಧು ಎಂದು ಯಾರೂ ಒಪ್ಪುತ್ತಿರಲಿಲ್ಲ. ಜಲತಜ್ಞರಿಗೂ ಅದೊಂದು ಕಾರ್ಯಗತಗೊಳಿಸಬಹುದಾದ ಯೋಚನೆ ಎಂದು ಕಾಣುವುದು ಸಾಧ್ಯವಿರಲಿಲ್ಲ. ಯಾಕೆಂದರೆ ಸುರಂಗದೊಳಗಿನಿಂದ ನೀರು ಹರಿದು ಬರುತ್ತದೆ ಎಂಬ ಯಾವ ಖಾತರಿಯೂ ಅಲ್ಲಿರಲಿಲ್ಲ. ಆದರೆ ನಾಯ್ಕರು ಈ ಬಗ್ಗೆ ಕಣಿ ಕೇಳುತ್ತ ಕುಳಿತುಕೊಳ್ಳುವ ಜಾಯಮಾನದವರಾಗಿರಲಿಲ್ಲ. ಪ್ರತೀದಿನ ಮಧ್ಯಾಹ್ನದವರಗೆ ಕೃಷಿ ಕೂಲಿಗಾಗಿ ಇತರ ತೋಟಗಳಲ್ಲಿ ಕೆಲಸ ಮಾಡಲು ತೆರಳುತ್ತಿದ್ದರು. ಅಡಿಕೆ, ತೆಂಗಿನ ಕೊಯ್ಲು ಕೆಲಸ ಸಾಮಾನ್ಯವಾಗಿ ಅರ್ಧದಿನದವರೆಗೆ ಇರುತ್ತಿತ್ತು. ಮಧ್ಯಾಹ್ನ ಊಟದ ಬಳಿಕ ಮತ್ತೆ ಸುರಂಗ ತೋಡುವ ಕೆಲಸ ಶುರು ಮಾಡುತ್ತಿದ್ದರು.

ಸುರಂಗ ಮುಂದುವರೆದಂತೆ ಅಲ್ಲಿ ಕೆಲಸ ಮುಂದುವರೆಸಲು ಬೇಕಾದಷ್ಟು ಬೆಳಕು ಇರುವುದಿಲ್ಲ. ಒಂದು ಚಿಮಣಿ ದೀಪವನ್ನು ಹಿಡಿದುಕೊಂಡು ಹೋಗಿ ಒಬ್ಬರೇ ಮಣ್ಣು ಅಗೆಯುತ್ತಿದ್ದರು. ಮಣ್ಣನ್ನು ಅಗೆದು, ಅದನ್ನು ಬುಟ್ಟಿಯೊಳಗೆ ತುಂಬಿಸಿ, ಆ ಬುಟ್ಟಿಯನ್ನು ಮೊಣಕಾಲಿನ ಮೇಲೇರಿಸಿಕೊಂಡು, ಹಾಗೆಯೇ ತಲೆಗೇರಿಸಿಕೊಂಡು ಅದನ್ನು ದೂರಕ್ಕೆ ಕೊಂಡೊಯ್ದು ಹಾಕುತ್ತಿದ್ದರು. ಅಷ್ಟೂ ಕೆಲಸಗಳು ಏಕಾಂಗಿಯಾಗಿ ಸಾಗುತ್ತಿದ್ದವು. ‘ತಡರಾತ್ರಿಯವರೆಗೆ ಹೀಗೆ ಕೆಲಸ ಮಾಡಬೇಡಿ’ ಎಂದು ಮನೆಯವರು ಹೇಳಿದರೂ ಕೇಳದೇ ದುಡಿಯುತ್ತಿದ್ದರು. ರಾತ್ರಿ ಬೇಗನೇ ಕೆಲಸ ಮುಗಿಸಿದರೆ, ಮುಂಜಾನೆದ್ದು ಮತ್ತೆ ಕೆಲಸ ಶುರು ಮಾಡಿಬಿಡುತ್ತಿದ್ದರು. ಒಂದಷ್ಟು ಹೊತ್ತು ಕೆಲಸ ಮಾಡಿ, ಮತ್ತೆ ದೈನಂದಿನ ಕೆಲಸಕ್ಕೆ ಹೋಗುತ್ತಿದ್ದರು. ಕನಿಷ್ಠ ಆರು ಗಂಟೆ ಕೆಲಸ ಮಾಡುವುದನ್ನು ತಮಗೆ ತಾವೇ ಕಡ್ಡಾಯಗೊಳಿಸಿಕೊಂಡಿದ್ದರು ನಾಯ್ಕರು. ಅದು ಅಕ್ಷರಶಃ ಜೀವ ಜಲದ ಹುಡುಕಾಟ ಎಂದರೆ ಸರಿಯೇನೋ.

ಆದರೆ ನಾವು ಕರೆದ ಕೂಡಲೇ ಗಂಗೆ ಬರಬೇಕಲ್ಲವೇ.. ವರ್ಷವಿಡೀ ದುಡಿಯುತ್ತಾ, ಬರೋಬ್ಬರಿ 100 ಅಡಿ ಉದ್ದದ ಉದ್ದದ ಸುರಂಗ ಕೊರೆದರೂ ನೀರು ಹರಿದು ಬರಲಿಲ್ಲ. ಎಲ್ಲಿಯೂ ಒರತೆ ಜಿನುಗಲಿಲ್ಲ. ಮಳೆಗಾಲದಲ್ಲಿ ಸುರಂಗ ಕೊರೆಯುವ ಕೆಲಸ ಮಾಡುವುದು ಸಾಧ್ಯವಿರಲಿಲ್ಲ. ಸುರಂಗದ ಕೆಲಸ ಮುಂದುವರೆದಂತೆ ಅದು ಮೇಲ್ಭಾಗದಿಂದ ಜರಿದು ಬೀಳುವ ಸಂಭವ ಜಾಸ್ತಿಯಿದ್ದುದರಿಂದ ಕೆಲಸದ ಗತಿಯು ನಿಧಾನವಾಗಿರಬೇಕು. ಎಚ್ಚರಿಕೆಯಿಂದ ಮಣ್ಣು ಅಗೆಯಬೇಕು. ಆದರೆ ನೀರು ಹರಿಸಬೇಕು ಎಂಬ ಒಂದು ಧ್ಯೇಯದ ಹೊರತಾಗಿ ಮಹಾಲಿಂಗ ನಾಯ್ಕರ ಮನದಲ್ಲಿ ಬೇರೆ ಯಾವುದೇ ಚಿಂತೆ ಇರಲಿಲ್ಲ. ಹಾಗಾಗಿ ಮೊದಲನೆಯ ಸುರಂಗವನ್ನು ಕೈ ಬಿಟ್ಟು ಎರಡನೆಯ ಸುರಂಗದ ಕೆಲಸವನ್ನು ಶುರು ಮಾಡಿದರು. ಮೊದಲೊಂದು ಬಾವಿ ತೋಡಿದ ಬಳಿಕ ಬಾವಿ ತಳದಿಂದ ಸುರಂಗದ ಕೆಲಸವನ್ನು ಮುಂದುವರೆಸಿದರು. ಸುಮಾರು ಎಪ್ಪತ್ತು ಅಡಿಯಷ್ಟು ಮುಂದುವರೆದಾಗ ತೇವವಾದ ಮಣ್ಣು ಸಿಕ್ಕಿತು. ಅಲ್ಲಿಯೇ ಮತ್ತಷ್ಟು ಆಳಕ್ಕೆ ಮಣ್ಣು ಅಗೆದರೂ ನೀರು ಸಿಗುವ ಲಕ್ಷಣವೇ ಕಾಣಿಸಲಿಲ್ಲ. ಮತ್ತೇನು ಮಾಡುವುದು, ಆ ಸುರಂಗದ ಪ್ರಯತ್ನವನ್ನೂ ಕೈ ಬಿಟ್ಟರು. ಹೀಗೆ ಪ್ರಯತ್ನಗಳನ್ನು ಕೈ ಬಿಡುವ ಹೊತ್ತಿಗೆ ಅವರನ್ನು ಎಲ್ಲರೂ ದೂರುವವರೇ ಆಗಿದ್ದರು. ಎರಡನೆಯ ಪ್ರಯತ್ನವನ್ನು ಕೈ ಬಿಟ್ಟಾಗ ಊರಿನ ಜನತೆ ನೇರವಾಗಿ ಅಣಕಿಸಲು ಶುರು ಮಾಡಿದರು. ‘ಆಗದ ಹೋಗದ ಕೆಲಸವನ್ನು ಮಾಡುತ್ತಿದ್ದೀರಿ’ ಎಂಬರ್ಥದ ಮಾತುಗಳನ್ನು ಹೇಳಿದರು. ಆದರೆ ಮಹಾಲಿಂಗ ನಾಯ್ಕರ ಮನಸ್ಸು ನೀರಿನ ಝರಿಯನ್ನು ಪತ್ತೆ ಮಾಡಿಯೇ ತೀರುತ್ತೇನೆ ಎಂದು ಹಠತೊಟ್ಟು ಕುಳಿತಿತ್ತು.

ಬೋಳುಗುಡ್ಡವಾದ್ದರಿಂದ ನೀರಿನಾಶ್ರಯದ ಕೃಷಿ ಬೆಳೆಯನ್ನು ಬೆಳೆಯುವುದು ಸಾಧ್ಯವಿಲ್ಲ ಎಂಬ ಬೇಸರವೇನೂ ಅವರ ಮನದಲ್ಲಿ ಇಣುಕಲಿಲ್ಲ. ಬದಲಾಗಿ, ಈ ಗುಡ್ಡವನ್ನೇ ಕೃಷಿ ಜಮೀನಾಗಿ ಹೇಗೆ ಪರಿವರ್ತಿಸಬಹುದು ಎಂದು ಲೆಕ್ಕಾಚಾರ ಹಾಕುತ್ತಲೇ ದಿನಕೆಲಸಗಳನ್ನು ಮಾಡುತ್ತಿದ್ದರು.

ಹೀಗೆ ಒಂದಾದ ಮೇಲೊಂದರಂತೆ ಮಹಾಲಿಂಗ ನಾಯ್ಕರು ಆರು ಸುರಂಗಗಳನ್ನು ಕೊರೆದಿದ್ದಾರೆ ಎಂದರೆ ನೀವು ನಂಬುತ್ತೀರಾ? ಆದರೆ ಐದನೇ ಸುರಂಗ ಅವರ ಬದುಕಿಗೆ ತಂಪು ನೀಡಿತು. ಇಷ್ಟರವರೆಗೆ ಸುರಂಗ ಕೊರೆದ ಜಾಗಗಳಿಗಿಂತಲೂ ಎತ್ತರದ ಜಾಗದಲ್ಲಿ ಅವರು ಐದನೇ ಸುರಂಗ ಕೊರೆಯಲು ನಿರ್ಧರಿಸಿದ್ದರು. ಸುಮಾರು 60 ಅಡಿಯಷ್ಟು ಮುಂದಕ್ಕೆ ಸುರಂಗ ಕೊರೆಯುವಷ್ಟರಲ್ಲಿ ನೀರಿನ ಒರತೆಯು ಸುರಂಗದ ಮೇಲ್ಭಾಗದಲ್ಲಿ ಜಿನುಗುತ್ತಿರುವುದು ಕಾಣಿಸಿತು. ಮಣ್ಣು ಸಡಿಲವಾದ್ದರಿಂದ ಆಳೆತ್ತರದ ಸುರಂಗ ಕೊರೆದರೆ ಅಪಾಯವಾಗುವ ಸಂಭವವಿತ್ತು. ಹಾಗಾಗಿ ಕುಳಿತೇ ಸುರಂಗವನ್ನು ಅಗೆಯುತ್ತ ಕೆಲಸ ಮುಂದುವರೆಸಿದರು.

ಬಹುಕಾಲ ಒಣ ಮಣ್ಣನ್ನು ಅಗೆದು ದಣಿದಿದ್ದ ನಾಯ್ಕರಿಗೆ ನೀರಿನ ಪಸೆ ಕಂಡು ಹೆಚ್ಚು ಶಕ್ತಿ ಬಂದಂತಾಗಿತ್ತು. ಅಣಕು, ಹಂಗಿಸುವಿಕೆಯ ಮಾತುಗಳಿಗೆ ಈ ಮಣ್ಣಿನ ಪಸೆಯಲ್ಲಿ ಉತ್ತರವಿದೆ ಎಂದು ಅವರ ಮನಸ್ಸಿನಲ್ಲಿ ಅನಿಸಲು ಶುರುವಾಯಿತು. ಅತ್ಯಂತ ಸೂಕ್ಷ್ಮವಾಗಿ ಸುರಂಗ ಕೊರೆಯುತ್ತ ಅವರು ಸಾಗಿದರು. ಐದನೇ ಸುರಂಗವು ನೀರಿನ ಒರತೆಯನ್ನು ಚಿಮ್ಮಿಸಿತು. ಒಟ್ಟು 300ಕ್ಕೂ ಹೆಚ್ಚು ಅಡಿ ಉದ್ದದ ಸುರಂಗ ಇದಾಗಿತ್ತು. ಈ ನೀರಿನ ಮೂಲವು ಅವರ ಬದುಕಿನ ಇನ್ನಷ್ಟು ಕನಸುಗಳಿಗೆ ಜೀವಜಲವಾಗಿತ್ತು.

ನೀರು ಸಿಕ್ಕಿದ ಖುಷಿಯಲ್ಲಿ ತೋಟ ನಿರ್ಮಾಣದ ಕೆಲಸವನ್ನು ನಾಯ್ಕರು ಭರದಿಂದ ಕೈಗೆತ್ತಿಕೊಂಡರು. ಗುಡ್ಡವನ್ನು ಸಮತಟ್ಟು ಮಾಡಿ ಭತ್ತ, ಅಡಿಕೆ, ತೆಂಗು, ಬಾಳೆ ಕೃಷಿ ಕೈಗೊಂಡರು. ಮಕ್ಕಳು ತುಸು ದೊಡ್ಡವರಾಗಿದ್ದರಿಂದ ಅಪ್ಪನ ಕೆಲಸದಲ್ಲಿ ಕೈ ಜೋಡಿಸಿದರು. ಮಡದಿ ಮತ್ತು ಮಕ್ಕಳಾದ ರಘುನಾಥ, ಶಾರದೆ ಮತ್ತು ಬಾಲಕೃಷ್ಣ ಎಲ್ಲರೂ ಒಟ್ಟು ಸೇರಿ ತೋಟ ಮಾಡಲು ಸಜ್ಜಾದರು. ಗುಡ್ಡದ ಮೇಲ್ಭಾಗದಿಂದ ಐದು ಹಂತಗಳನ್ನು ಅಗೆಯುತ್ತಾ ನೆಲ ಸಮತಟ್ಟು ಮಾಡಿದರು. ನಾಲ್ಕು ಹಂತಗಳಲ್ಲಿ ಸಮತಟ್ಟು ಜಾಗಗಳಲ್ಲಿ ಕಂಗಿನ ಗಿಡ ನೆಟ್ಟರು. ಸಮತಟ್ಟು ಮಾಡಿದ ಜಾಗದ ಅಂಚುಗಳಿಗೆ ಕಟ್ಟೆಗಳನ್ನು ಕಟ್ಟಿದರು. ಪ್ರತಿದಿನವೂ ಕೂಲಿಗಾಗಿ ಗುಡ್ಡವಿಳಿದು ಹೋಗುವ ನಾಯ್ಕರು ಬರುವಾಗ ಬರಿಗೈಲಿ ಬರುತ್ತಿರಲಿಲ್ಲ. ತಲೆಯ ಮೇಲೊಂದು ಕಲ್ಲು ಹೊತ್ತುಕೊಂಡೇ ಗುಡ್ಡವೇರುತ್ತಿದ್ದರು. ದಿನಕ್ಕೆರಡು ಬಾರಿ ಗುಡ್ಡವಿಳಿದು ಹತ್ತುವ ಪ್ರಮೇಯ ಎದುರಾಗುತ್ತಿತ್ತು. ಹಾಗಾಗಿ ಒಂದು ತಿಂಗಳಲ್ಲಿ ಸರಾಸರಿ ಅರುವತ್ತು ಕಲ್ಲುಗಳು ಶೇಖರಣೆಯಾಗುತ್ತಿದ್ದವು. ಅವುಗಳನ್ನೆಲ್ಲ ಸೇರಿಸಿ ಒಪ್ಪಗೊಳಿಸಿ ದಂಡೆಯಾಗಿ ಕಟ್ಟುತ್ತಿದ್ದರು.

ಹೀಗೆ ಮಾಡಿದ ಹಂತಗಳ ಪೈಕಿ, ಒಂದು ಹಂತದಲ್ಲಿ ತೆಂಗಿನ ಗಿಡವನ್ನು ನೆಟ್ಟರು. ಗುಡ್ಡದ ಮೇಲ್ಭಾಗದಲ್ಲಿ ಕೊರೆದ ಸುರಂಗದಲ್ಲಿ ನೀರು ಸಿಕ್ಕಿದ್ದರಿಂದ ಮಹಾಲಿಂಗ ನಾಯ್ಕರಿಗೆ ಅನುಕೂಲವೇ ಆಗಿತ್ತು. ಯಾವುದೇ ಪಂಪುಸೆಟ್ ನ ಸಹಾಯವಿಲ್ಲದೇ ಅವರು ಗುರುತ್ವಾಕರ್ಷಣ ಶಕ್ತಿಯ ಮೂಲಕ ನೀರನ್ನು ಕೆಳಕ್ಕೆ ಹರಿಸುತ್ತಾ ಬರಬಹುದಾಗಿತ್ತು. ಮೇಲಿನ ಸುರಂಗದಿಂದ ಹರಿದು ಬರುತ್ತಿದ್ದ ನೀರನ್ನು ಒಂದು ಟಾಂಕಿ ನಿರ್ಮಿಸಿ ಅಲ್ಲಿಯೆ ತುಂಬಿಟ್ಟುಕೊಳ್ಳುವ ವ್ಯವಸ್ಥೆ ಮಾಡಿದರು. ಈ ಯಶಸ್ಸು ಅವರ ಜೀವನದಲ್ಲಿ ಅನೇಕ ಸಾಧ್ಯತೆಗಳನ್ನು ತೆರೆದು ತೋರಿಸಿತ್ತು. ಆಧುನಿಕವಾದ ತಂತ್ರಜ್ಞಾನವನ್ನು ಜೋಡಿಸಿಕೊಳ್ಳುವ ಧೈರ್ಯ ಅವರಲ್ಲಿ ಮೂಡಿತು. ತುಂತುರು ನೀರಾವರಿಯನ್ನು ಅಳವಡಿಸಿಕೊಂಡು ತೋಟಕ್ಕೆ ಬೇಕಾದ ನೀರಿನ ಸೌಕರ್ಯಗಳನ್ನು ಮಾಡಿಕೊಂಡರು. ಮೇಲಿನಿಂದ ಕೆಳಕ್ಕೆ ಹರಿದು ಬರುವ ನೀರನ್ನು ಮತ್ತೆ ಹಿಡಿದಿಟ್ಟುಕೊಳ್ಳಲು ಬೇಕಾದ ಟಾಂಕಿ, ಕಟ್ಟೆಗಳನ್ನು ಕೂಡ ಮಾಡಿಕೊಂಡರು. ಒಟ್ಟಿನಲ್ಲಿ ಸುಸ್ಥಿರ ಜೀವನ ಶೈಲಿಯು ಅವರದಾಗಿತ್ತು.

ಮೇಲಿನ ಹಂತದಲ್ಲಿ ಭತ್ತದ ಕೃಷಿಯನ್ನು ಮಹಾಲಿಂಗ ನಾಯ್ಕರು ಮಕ್ಕಳ ಸಹಾಯದಿಂದಲೇ ಮಾಡಿದರು. ಯಾಕೆಂದರೆ ಗದ್ದೆ ಉಳುಮೆಗೆ ಟಿಲ್ಲರ್ ನ್ನು ಗುಡ್ಡದ ಮೇಲಕ್ಕೆ ತರುವುದಾಗಲೀ, ಕೋಣಗಳನ್ನು ಕಟ್ಟುವುದಾಗಲೀ ಸಾಧ್ಯವಾಗಿರಲಿಲ್ಲ. ಗುಡ್ಡದ ತುದಿಗೆ ಇವನ್ನೆಲ್ಲ ಕರೆತರುವುದು, ನಿಭಾಯಿಸುವುದು ಸುಲಭಸಾಧ್ಯವೂ ಅಲ್ಲತಾನೆ. ಹಾಗಾಗಿ ನಾಯ್ಕರು ಮಣ್ಣನ್ನು ಹಾರೆಯಲ್ಲಿ ಹದವಾಗಿ ಅಗೆದು ಹಾಕಿದರೆ, ಮಕ್ಕಳು ಕಾಲಿನಲ್ಲಿಯೇ ತುಳಿದು ಮಣ್ಣನ್ನು ಸಡಿಲ ಮಾಡಿ ಬೀಜ ಬಿತ್ತನೆಗೆ ಅನುಕೂಲ ಮಾಡಿಕೊಡುತ್ತಿದ್ದರು.

ಅವರ ತೋಟದಲ್ಲಿ 300 ಅಡಿಕೆ, 75 ತೆಂಗು, 200 ಬಾಳೆಗಿಡಗಳಿವೆ. ಹಟ್ಟಿಗೊಬ್ಬರ, ಕಾಂಪೋಸ್ಟ್ ಹೊರತು ಬೇರೆ ಯಾವುದೇ ಗೊಬ್ಬರ ಬಳಕೆಯ ಬಗ್ಗೆ ಮಾಹಾಲಿಂಗ ನಾಯ್ಕರಿಗೆ ಗೊತ್ತಿಲ್ಲ. ಜಮೀನಿನಲ್ಲಿ ಇಂಗುಗುಂಡಿಗಳನ್ನು ಮಾಡಿಕೊಂಡು ಗುಡ್ಡದ ಮೇಲೆ ಬೀಳುವ ಮಳೆ ನೀರನ್ನು ಸಾಧ್ಯವಾದಷ್ಟು ಮಟ್ಟಿಗೆ ನಿಧಾನವಾಗಿ ಚಲಿಸುವಂತೆ ಮಾಡುತ್ತಿದ್ದಾರೆ.

ಕೆಲವು ವರ್ಷಗಳ ಹಿಂದೆ 2 ಬೋರ್ವೆಲ್ ತೆಗೆಸಿದ್ದಾರೆ. ಮೊದಲ ಬೋರ್ವೆಲ್ 400 ಅಡಿ ಸಾಗಿದ್ದರೂ ನೀರು ದೊರೆಯಲಿಲ್ಲ. 2ನೇ ಬೋರ್‌ನಲ್ಲಿ 370 ಅಡಿ ತಲುಪುವ ಹೊತ್ತಿಗೆ 1 ಇಂಚು ನೀರು ಸಿಕ್ಕಿದೆ. ಇದೀಗ ಬೋರ್‌ವೆಲ್‌ಗೆ ಪಂಪ್ಸೆಟ್ ಅಳವಡಿಸಿದ್ದಾರೆ. ಐದನೆಯ ಸುರಂಗದ ಬಳಿಕ ಮತ್ತೆರಡು ಸುರಂಗಗಳನ್ನು ಅವರು ಕೊರೆದಿದ್ದು, ನೀರಿನ ಹೊಂದಾಣಿಕೆ ಮಾಡಿಕೊಂಡಿದ್ದಾರೆ. ಇಂಗುಗುಂಡಿಗಳು ಬೋರ್ ವೆಲ್ ಗೆ ಬೇಕಾದ ನೀರು ಮರುಪೂರಣ ಮಾಡುತ್ತದೆ.

ಈ ಎಲ್ಲ ಕತೆಗಳ ನಡುವೆ ಮಹಾಲಿಂಗ ನಾಯ್ಕರ ಬದುಕಿನಲ್ಲಿ ಏರುಪೇರುಗಳಿರಲಿಲ್ಲವೇ ಎಂದರೆ, ಇದ್ದವು. ಇಷ್ಟೆಲ್ಲ ಸಾಧನೆಯ ನಡುವೆ ಅವರು, ಇತರ ತೋಟಗಳಿಗೆ ತೆರಳಿ ಕೊಯ್ಲಿ ನ ಕೆಲಸ ಮುಂದುವರೆಸಿದ್ದರು. ಅವರ ಶ್ರಮವನ್ನು ಮನೋಬಲವನ್ನು ಪರೀಕ್ಷಿಸುವ ದೃಷ್ಟಿಯಿಂದಲೇ ಕಷ್ಟಗಳು ಎದುರಾದವೆನೋ.

2002ರಲ್ಲಿ ಅವರೊಂದು ದಿನ ಮರದಿಂದ ತೆಂಗಿನ ಕಾಯಿ ತೆಗೆಯುತ್ತಿದ್ದಾಗ ಅಕಸ್ಮಿಕವಾಗಿ ಕಾಲುಜಾರಿ ಬಿದ್ದುಬಿಟ್ಟರು. ತೆಂಗಿನ ಮರದಿಂದ ಬಿದ್ದಾಗ ಸೊಂಟಕ್ಕೆ ಬಲವಾದ ಪೆಟ್ಟು ಬಿದ್ದು ಎರಡು ತಿಂಗಳ ಕಾಲ ಮಂಗಳೂರಿನ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯಬೇಕಾಗಿ ಬಂತು. ಉಳಿತಾಯದ ಹಣವೆಲ್ಲ ಖರ್ಚಾಯಿತು ಎಂಬುದು ಒಂದು ನೋವಾದರೆ, ಮುಂಚಿನಷ್ಟು ಭರದಿಂದ ಮಣ್ಣು ಅಗೆಯುವ ಕೆಲಸಗಳನ್ನು ನಿರ್ವಹಿಸಲು ಸಾಧ್ಯವಾಗದು ಎನ್ನುವುದು ಮತ್ತೊಂದು ಬೇಸರ. ಈ ಘಟನೆಯಲ್ಲಿ ಚೇತರಿಸಿಕೊಂಡ ಮೇಲೆ ಅವರು ಇತರ ತೋಟಗಳಿಗೆ ದುಡಿಮೆಗಾಗಿ ತೆರಳುವುದನ್ನು ನಿಲ್ಲಿಸಿದರು. ತಮ್ಮ ತೋಟ, ಗದ್ದೆಯನ್ನು ಇನ್ನಷ್ಟು ಹಸನು ಮಾಡುವ ಕಾಯಕದಲ್ಲಿ ತೊಡಗಿಕೊಂಡರು.

ಆದರೆ ನಾಯ್ಕರ ಅಂತರಂಗದಲ್ಲಿದ್ದ ಶಕ್ತಿಯು ಅವರನ್ನು ಮತ್ತೆ ಮೇಲೆದ್ದು ನಿಲ್ಲುವಂತೆ ಮಾಡಿತು. ತಮ್ಮ ಜಮೀನಿನಲ್ಲಿ ಇಂಗು ಗುಂಡಿಗಳನ್ನು ತೋಡಿದ್ದಲ್ಲದೆ, ಪಕ್ಕದಲ್ಲೇ ಇದ್ದ ಸರ್ಕಾರಿ ಜಾಗದಲ್ಲಿ ಅಲ್ಲಲ್ಲಿ ಇಂಗುಗುಂಡಿಗಳನ್ನು ತೋಡಿದರು. ತಾವು ತೋಡಿ ವ್ಯರ್ಥವಾಗಿದ್ದ ಸುರಂಗಗಳಲ್ಲಿ ಮಳೆನೀರು ಸೇರಿ ನಿಧಾನವಾಗಿ ಹರಿದು ಹೋಗುವಂತೆ ಮಾಡಿದರು. ಬಾವಿ ತೋಡಿ, ನೀರು ಮತ್ತಷ್ಟು ಜಮೆಯಾಗುವಂತೆ ಮಾಡಿದರು. ಹಾಗೆ ನೋಡಿದರೆ ನಾಯ್ಕರು ಸ್ನಾನದ ನೀರು, ಪಾತ್ರೆ ತೊಳೆದ ನೀರನ್ನೂ ವ್ಯರ್ಥ ಮಾಡುವುದಿಲ್ಲ. ಅದನ್ನೆಲ್ಲ ಸಂಗ್ರಹಿಸಿ ತೋಟಗಳಿಗೆ ಹರಿಸುವ ವ್ಯವಸ್ಥೆ ಮಾಡಿಕೊಂಡಿದ್ದಾರೆ.

ಹೀಗೆ ಗುಡ್ಡಮೇಲಿನ ಬೋಳು ಗುಡಿಸಲು ಈಗ ಸಕಲ ಸೌಕರ್ಯಗಳಿರುವ ಒಂದು ಸುಂದರ ಮನೆಯಾಗಿ ಬದಲಾಗಿದೆ. 2001ರಲ್ಲಿ ಅವರು ಮನೆಯನ್ನು ನವೀಕರಣಗೋಳಿಸಿ ತಕ್ಕಮಟ್ಟಿಗೆ ವಿಸ್ತರಿಸಿ ಸುಂದರಗೊಳಿಸಿದ್ದಾರೆ. ಮನೆಯವರೆಗೆ ಸರಿಯಾದ ರಸ್ತೆ, ದೂರವಾಣಿ ವ್ಯವಸ್ಥೆ, ಫ್ಯಾನು, ಫೋನು, ಟೀವಿಗಳನ್ನು ಅಳವಡಿಸಿಕೊಂಡಿದ್ದಾರೆ.

ಅವರ ಸಾಧನೆಯನ್ನು ಅರಸಿ ಪ್ರಶಸ್ತಿಗಳು ಬಂದಿವೆ. ವಾರಣಾಶಿ ವರ್ಷದ ಕೃಷಿಕ ಪ್ರಶಸ್ತಿ, ಮಂಗಳೂರು ಪ್ರೆಸ್ ಕ್ಲಬ್ ಪ್ರಶಸ್ತಿ ಸೇರಿದಂತೆ ಅನೇಕ ಕಡೆ ಗೌರವಗಳು ಸಂದಿವೆ. 2022ರಲ್ಲಿ ಕೇಂದ್ರ ಸರ್ಕಾರವು ಪದ್ಮಶ್ರೀ ಪ್ರಶಸ್ತಿ ಘೋಷಿಸಿದ್ದು ಮಹಾಲಿಂಗ ನಾಯ್ಕರ ಸಾಧನೆ ಇನ್ನಷ್ಟು ಜನರ ಗಮನಕ್ಕೆ ಬರುವಂತಾಯಿತು. ಅಲ್ಲದೆ ಸಾಧನೆಯ ಹಾದಿಗೆ ಖಂಡಿತವಾಗಿಯೂ ಗೌರವ ಸಲ್ಲುವುದು ಎಂಬ ವಿಶ್ವಾಸ ಮೂಡಿತು. ಮಕ್ಕಳು ಮೊಮ್ಮಕ್ಕಳೊಂದಿಗೆ ತುಂಬು ಜೀವನ ನಡೆಸುತ್ತಿರುವ ಮಹಾಲಿಂಗ ನಾಯ್ಕರ ಏಕಾಂಗಿ ಈ ಭಗೀರಥ ಪ್ರಯತ್ನದ ಕುರಿತು ದೂರದರ್ಶನ ತನ್ನ ವಾಟರ್ ವಾರಿಯರ್ ಧಾರಾವಾಹಿಯಲ್ಲಿ ವ್ಯಕ್ತಿಚಿತ್ರವನ್ನು ಪ್ರಸಾರ ಮಾಡಿದೆ.