ಸಂತೆ ಮುಗಿದ ಮೇಲೆ ಉಳಿದು ಬಿಡುವ ನೀರವ ರಸ್ತೆಯಂತೆ ಮದುವೆ ಸಂಭ್ರಮ ಮುಗಿದ ಮೇಲೆ ಮದುವೆ ಮನೆ ಬಣಗುಟ್ಟುತ್ತಿರಬೇಕಾದರೆ ಆಕೆ ಹಾಡಿಕೊಳ್ಳುತ್ತಾ, ಆಗಾಗ ಎಲೆ ಅಡಿಕೆಯನ್ನು ಪಿಚಕ್ಕಂತ ಉಗುಳುತ್ತಾ, ಕೆಲವೊಮ್ಮೆ ಕಣ್ಣು ಕೆಂಪಗೆ ಮಾಡಿಕೊಂಡು ಯಾರ್ಯಾರಿಗೋ ಬಯ್ಯುತ್ತಾ ಸೀರೆ ಎತ್ತಿಕಟ್ಟಿ ಪಾತ್ರೆ ತಿಕ್ಕುತ್ತಿದ್ದರೆ ನನಗೆ ಯಾವುದೋ ಋಷಿ ಮುನಿಯ ಕೋಪಕ್ಕೆ ತುತ್ತಾಗಿ ಶಾಪಗ್ರಸ್ಥೆಯರಾಗಿ ಭುವಿಗಿಳಿದು ಬರುವ ದೇವಕನ್ನಿಕೆಯರು ನೆನಪಾದರು.
ಫಾತಿಮಾ ರಲಿಯಾ ಅಂಕಣ

 

ಈ ಬಿಸಿಲು ಕಾಲದ ಮಧ್ಯಾಹ್ನದ ಉರಿ ಬಿಸಿಲಿನಲ್ಲಿ, ತೊಡೆಯ ಮೇಲೆ ಲ್ಯಾಪ್ ಟಾಪ್ ಇಟ್ಟುಕೊಂಡು ಬರಹದಲ್ಲಿ ಟೈಪಿಸಲಾ ಇಲ್ಲ ನುಡಿ ಆದೀತಾ ಎನ್ನುವ ಪುಟ್ಟ ಗೊಂದಲವನ್ನಿಟ್ಟುಕೊಂಡು, ಹೊತ್ತಲ್ಲದ ಹೊತ್ತಿನಲ್ಲಿ ಒಂದು ಬಿಸಿಲು ಕೋಲು ಮುಖದ ಮೇಲೆ ಸುಮ್ಮನೆ ಹಾಯ್ದು ಹೋಗಲಿ ಎಂದು ಸುಳ್ಳೇ ಸುಳ್ಳು ನಿರೀಕ್ಷಿಸುತ್ತಾ ನಮ್ಮೂರ ಒಬ್ಬ ಚೆಂದದ ಹೆಂಗಸಿನ ಕುರಿತೂ, ಆಕೆಯ ಒಳ್ಳೆಯತನಗಳ ಕುರಿತೂ, ಕಮಟು ವಾಸನೆಯ ಜೋಳಿಗೆಯ ಕುರಿತೂ, ಆಕೆಯ ಬಾಯಿಯಿಂದ ಸದಾ ತೇಲಿಬರುವ ಯಾವುದೋ ಸಾರಾಯಿಯ ವಾಸನೆಯ ಕುರಿತೂ ಯೋಚಿಸುತ್ತಿದ್ದೇನೆ.

ನಮ್ಮೂರ ಪ್ರತಿ ಮದುವೆಯಲ್ಲೂ ಬರ ಬರ ಸೀರೆಯ ಸದ್ದು ಮಾಡುತ್ತಾ, ನಿಮಿಷಕ್ಕೊಮ್ಮೆ ಓಲೆ ಕಿವಿಯನ್ನು ಬಿಗಿಯಾಗಿ ಅಪ್ಪಿಕೊಂಡಿದೆಯಾ ಎಂದು ಪರೀಕ್ಷಿಸುತ್ತಾ ಸಂಭ್ರಮದಿಂದ ಓಡಾಡುವ ಸುಂದರಿಯೆಂದರೆ ಊರವರಿಗೆಲ್ಲಾ ವಿಶೇಷ ಆಸ್ಥೆ. ಸದಾ ಪಾಡ್ದನ ಹಾಡುವ, ಪ್ರಪಂಚದ ಪ್ರತಿ ಆಗು ಹೋಗಿಗೂ ತನ್ನದೇ ವಿಶಿಷ್ಟ ಶೈಲಿಯಲ್ಲಿ ಪ್ರತಿಕ್ರಿಯಿಸುವ, ಪ್ರತಿ ಘಟನೆಯ ಹಿಂದಿನ ಗೂಢ ಕಾರಣಗಳನ್ನು ಕಂಡುಹಿಡಿದು ಬೊಚ್ಚು ಬಾಯಿ ಅಗಲಿಸಿ ನಗುವ ಆಕೆಯ ಬಳಿ ಮಾತಿಗೆ ಕೂತರೆ ಬಹುದೊಡ್ಡ ಅನುಭವದ ಖಜಾನೆಯೇ ತೆರೆದಂತಾಗುತ್ತದೆ.

ಕರಾವಳಿಯ ಹವೆ, ಪಂಚಾಯತ್ ರಾಜಕೀಯ, ಯಾರದೋ ಮನೆಯ ಪ್ರೇಮ, ಜಾತಿ ಸಂಘರ್ಷ ಹೀಗೆ ಸುಂದರಿಗೆ ಗೊತ್ತಿಲ್ಲದ ಸಂಗತಿಗಳೇ ಇಲ್ಲ. ಯಾವ ಕಿಟಕಿಯಿಂದ ನೋಡಿದರೂ, ಯಾವ ಬಾಗಿಲಿನಿಂದ ಕಣ್ಣು ಹಾಯಿಸಿದರೂ ಆಕೆ ನಿಬ್ಬೆರಗಾಗುವ ಬೆಳಕು.

ಬೆವರು ಹನಿಗಳ ತೂಗುಯ್ಯಾಲೆಯ ಮೇಲೆ ನಾಜೂಕಿನಿಂದ ಹೆಣೆದ ಶ್ರಮದ ಬದುಕು ಆಕೆಯದು. ಪುಟ್ಟ ಪುಟ್ಟ ಹೆಜ್ಜೆಯಿಟ್ಟು ಬಾಲ್ಯದ ಎದೆಯ ಮೇಲೆ ಶಾಶ್ವತ ಗುರುತು ಮೂಡಿಸಬೇಕಾಗಿದ್ದ ಕಾಲದಲ್ಲೇ ಗಂಡನ ಮನೆ ಸೇರಿದ್ದಳು ಸುಂದರಿ. ಮಣ್ಣಿನ ಮನೆ ಮಾಡಿ, ಬೆಳಕಿಗೂ ಗಾಳಿಗೂ ಪುಟ್ಟ ಕಿಟಕಿಯಿಟ್ಟು, ಆ ಮನೆಗೊಂದು ಚಂದದ ಹೆಸರಿಟ್ಟು ಆಟ ಆಡಿಕೊಳ್ಳಬೇಕಾದ ವಯಸ್ಸಿನಲ್ಲಿ ಹಾಸಿಗೆ ಹಿಡಿದ ಅತ್ತೆಯನ್ನೂ, ಪರಮ ಕೋಪಿಷ್ಠ ಮಾವನನ್ನೂ ಬೇಜಾವಾಬ್ದಾರಿಯ ಗಂಡನನ್ನೂ ಸಂಭಾಳಿಸುವ ಹೊಣೆ ಅವಳ ಮೇಲೆ ಬಿದ್ದಿತ್ತು. ಈ ಹೊತ್ತು ಕೂತು ಮಾತಾಡಿದರೆ, ಬಾಲ್ಯ ವಿವಾಹವನ್ನು ಖಡಾಖಂಡಿತವಾಗಿ ವಿರೋಧಿಸುವ ಸುಂದರಿ ತನ್ನ ಮದುವೆಯ ವಿಷಯಕ್ಕೆ ಬಂದಾಗ ಮಾತ್ರ ಅದೊಂದು ಬದುಕಿನ ಅತಿ ಸುಂದರ ಘಳಿಗೆ ಎಂದೇ ನಂಬುತ್ತಾಳೆ, ಅಥವಾ ನಮ್ಮನ್ನು ನಂಬಿಸಲು ಪ್ರಯತ್ನಿಸುತ್ತಾಳೆ.

ಅಷ್ಟು ಸಣ್ಣ ವಯಸ್ಸಲ್ಲಿ ಸಂಸಾರಕ್ಕೆ ಹೆಗಲು ಕೊಡಲು ನಿನಗೆ ಕಷ್ಟವಾಗಲಿಲ್ಲವೇ ಎಂದು ಕೇಳಿದರೆ “ತವರಲ್ಲೇನು ಸುಖ ಕಾಲು ಮುರಿದುಕೊಂಡು ಬಿದ್ದಿತ್ತೇ? ಮೂರು ಹೆಣ್ಣು ಮಕ್ಕಳ ನಂತರ ಯಾರಿಗೂ ಬೇಡದ ನಾಲ್ಕನೆಯ ಹೆಣ್ಣಾಗಿ ಜನಿಸಿದವಳು ನಾನು. ಅಪ್ಪ-ಅಮ್ಮನ ಅನಾದಾರ, ಅಕ್ಕಂದಿರ ಮೂದಲಿಕೆ, ತಮ್ಮನ ಉಡಾಫೆ ಇವೆಲ್ಲದರ ಮಧ್ಯೆ ಒಂದು ವಜ್ಜೆಯಂತೆ ಬೆಳೆದವಳಿಗೆ ಬೆಂಕಿಯಿಂದ ಬಾಣಲೆಗೆ ಬಿದ್ದಂತಾಗಿತ್ತು ಅಷ್ಟೆ. ಸುಡುವುದೇ ಆಗಿದ್ದರೂ ನೇರವಾಗಿ ಸುಡದು ಅನ್ನುವ ನಂಬಿಕೆ ಇತ್ತು. ಮೇಲಾಗಿ ಗಂಡನ ಮನೆಯಲ್ಲಿ ಮೂದಲಿಕೆಗಳಿಂದಂತೂ ನಾನು ಮುಕ್ತಳಾಗಿದ್ದೆ” ಎನ್ನುತ್ತಾಳೆ. ಉರಿವ ಬೆಂಕಿಗಾದರೂ ಕೈಯೊಡ್ಡಿ ಬದುಕು ಕಟ್ಟಿಕೊಳ್ಳುತ್ತೇನೆ ಅನ್ನುವಷ್ಟು ಛಲವಿರುವ ನಮ್ಮ ಸುಂದರಿಗೆ ಬೆಂಕಿ ಕಡ್ಡಿ ಕೈಯಲ್ಲಿ ಕೊಟ್ಟು ದೀಪ ಹಚ್ಚು ಎಂದರೆ ಬೆಳಕು ಸೃಜಿಸದೇ ಇರುವಳೇ?

ಇಂತಹ ಸುಂದರಿ ಒಮ್ಮೆ ಮದುವೆ ಮನೆ ಹೊಕ್ಕಳೆಂದರೆ ಸಾಕು ಸಂಭ್ರಮ ಛಿಲ್ಲನೆ ಚಿಮ್ಮುತ್ತದೆ. ಧಾರೆ, ನಿಖಾಹ್ ಹೀಗೆ ಯಾವ ಧಾರ್ಮಿಕ ವಿಧಿವಿಧಾನಗಳಿದ್ದರೂ ಆಕೆ ಯಾವ ಗೋಜಲುಗಳೂ ಇಲ್ಲದೆ ಗಲ ಗಲ ಓಡಾಡುವುದನ್ನು ನೋಡುವುದೇ ಒಂದು ಚೆಂದ. ನಡು ನಡುವೆ ಊಟ ಚೆನ್ನಾಗಿಲ್ಲವೆಂದೋ ಅಥವಾ ಆತಿಥ್ಯ ಸರಿಯಾಗಲಿಲ್ಲವೆಂದೋ ಯಾರಾದರೂ ಮೂಗುಮುರಿಯುತ್ತಿದ್ದರೆ ಅವರನ್ನು ಎಲ್ಲರೆದುರು ಯಾವ ಮುಲಾಜೂ ಇಲ್ಲದೆ ತರಾಟೆಗೆ ತೆಗೆದುಕೊಳ್ಳುತ್ತಾಳೆ. ಸುಂದರಿ ಮದುವೆ ಮನೆಯಲ್ಲಿದ್ದಾಳೆಂದರೆ ಮಧುಮಗಳ ಚಿನ್ನ, ವರನ ಡ್ರೆಸ್ಸು, ಊಟದ ಮೆನುವಿನಲ್ಲಿನ ಕೊರತೆ ಯಾವುದರ ಬಗ್ಗೆಯೂ ಸುಖಾಸುಮ್ಮನೆ ಟೀಕಿಸಲು ಜನ ಹಿಂದೆ ಮುಂದೆ ನೋಡುತ್ತಾರೆ.
ಆದರೆ ಅವಳ ವ್ಯಕ್ತಿತ್ವದ ಹೊಳಹು ಪೂರ್ತಿಯಾಗಿ ದಕ್ಕಬೇಕೆಂದರೆ ಮದುವೆಯ ರೀತಿ ರಿವಾಜುಗಳೆಲ್ಲಾ ಮುಗಿದು ಅಲ್ಲೆಲ್ಲಾ ಒಂದು ಮುಗಿಯದ ಮೌನ ವ್ಯಾಪಿಸಬೇಕು. ಆಗಾಕೆ ಇಷ್ಟಿಷ್ಟೇ ಬಿಚ್ಚಿಕೊಳ್ಳುತ್ತಾಳೆ; ಕೆಲವೊಮ್ಮೆ ಸೌಮ್ಯವಾಗಿ ಮತ್ತೂ ಕೆಲವೊಮ್ಮ ರೌದ್ರವಾಗಿ. ಮೊನ್ನೆಯೂ ಹೀಗೆಯೇ ಆಯ್ತು ನೋಡಿ.

ಸಂತೆ ಮುಗಿದ ಮೇಲೆ ಉಳಿದು ಬಿಡುವ ನೀರವ ರಸ್ತೆಯಂತೆ ಮದುವೆ ಸಂಭ್ರಮ ಮುಗಿದ ಮೇಲೆ ಮದುವೆ ಮನೆ ಬಣಗುಟ್ಟುತ್ತಿರಬೇಕಾದರೆ ಆಕೆ ಹಾಡಿಕೊಳ್ಳುತ್ತಾ, ಆಗಾಗ ಎಲೆ ಅಡಿಕೆಯನ್ನು ಪಿಚಕ್ಕಂತ ಉಗುಳುತ್ತಾ, ಕೆಲವೊಮ್ಮೆ ಕಣ್ಣು ಕೆಂಪಗೆ ಮಾಡಿಕೊಂಡು ಯಾರ್ಯಾರಿಗೋ ಬಯ್ಯುತ್ತಾ ಸೀರೆ ಎತ್ತಿಕಟ್ಟಿ ಪಾತ್ರೆ ತಿಕ್ಕುತ್ತಿದ್ದರೆ ನನಗೆ ಯಾವುದೋ ಋಷಿ ಮುನಿಯ ಕೋಪಕ್ಕೆ ತುತ್ತಾಗಿ ಶಾಪಗ್ರಸ್ಥೆಯರಾಗಿ ಭುವಿಗಿಳಿದು ಬರುವ ದೇವಕನ್ನಿಕೆಯರು ನೆನಪಾದರು. ಹಣೆಯ ಮೇಲೆ ಸುಮ್ಮನೆ ಹೊಳೆವ ಬೆವರ ಹನಿಗಳು, ಅತ್ತಿಂದಿತ್ತ ಹಾರಾಡುವ ಗುಂಗುರು ಕೂದಲು, ಹಿಂದೊಮ್ಮೆ ಕನಸುಗಳ ದೊಡ್ಡ ಗಣಿಯೇ ಆಗಿದ್ದಿರಬಹುದಾದ ಕಡು ಕಪ್ಪು ಕಣ್ಣುಗಳು, ಮೂಗು, ಅದರ ತುದಿಯಲ್ಲಿ ಫಳ ಫಳ ಮಿಂಚುವ ನತ್ತು, ಆಕೆಯ ಪಾಡ್ದನಕ್ಕೆ ಸರಿಯಾಗಿ ಕಿಣಿ ಕಿಣಿ ಸದ್ದು ಮಾಡುವ ಹಸಿರು ಗಾಜಿನ ಬಳೆಗಳು… ಸ್ವರ್ಗ ಅನಾಮತ್ತಾಗಿ ಮನೆಯ ಅಂಗಳದಲ್ಲಿ ಹರಡಿಕೊಂಡಿತ್ತು. ನಾನು ಪಡಬಾರದ ಪಾಡು ಪಟ್ಟುಕೊಂಡು ಉಟ್ಟಿದ್ದ ಸೀರೆ ಬಿಚ್ಚಿ ಒಂದು ಚೂಡಿದಾರ್ ಏರಿಸಿಕೊಂಡು ಆಕೆಗೆ ಸಹಾಯ ಮಾಡುವ ನೆಪದಲ್ಲಿ ಅದಕ್ಕಿಂತಲೂ ಹೆಚ್ಚಾಗಿ ಅವಳಿಂದ ಸಾವಿರದ ಕಥೆ ಕೇಳುವ ಹುಕಿಯಲ್ಲಿ ಅವಳೇ ಸೃಷ್ಟಿಸಿದ ಸ್ವರ್ಗದ ಬಾಗಿಲನ್ನು ನಾಜೂಕಾಗಿ ಬಡಿದೆ.

ಕರಾವಳಿಯ ಹವೆ, ಪಂಚಾಯತ್ ರಾಜಕೀಯ, ಯಾರದೋ ಮನೆಯ ಪ್ರೇಮ, ಜಾತಿ ಸಂಘರ್ಷ ಹೀಗೆ ಸುಂದರಿಗೆ ಗೊತ್ತಿಲ್ಲದ ಸಂಗತಿಗಳೇ ಇಲ್ಲ. ಯಾವ ಕಿಟಕಿಯಿಂದ ನೋಡಿದರೂ, ಯಾವ ಬಾಗಿಲಿನಿಂದ ಕಣ್ಣು ಹಾಯಿಸಿದರೂ ಆಕೆ ನಿಬ್ಬೆರಗಾಗುವ ಬೆಳಕು.

ಆಕೆ “ಬಾ” ಎಂದು ಕರೆದು ಒಂದು ಸಣ್ಣ ಪ್ಲಾಸ್ಟಿಕ್ ಮಣೆಯನ್ನು ನನ್ನತ್ತ ತಳ್ಳುತ್ತಲೇ ಯಾವುದೋ ಅಗ್ಗದ ಸರಾಯಿ ವಾಸನೆ ತೇಲಿಬಂತು. ವಾಕರಿಕೆ ಬಂದಂತಾಗಿ “ದೊಡ್ಡಾ ಕುಡಿದು ಬಂದಿದ್ದೀರಾ?” ಎಂದು ಕೇಳಿದೆ. ಅಷ್ಟಕ್ಕೇ ಕಣ್ಣು ಕೆಂಪಗೆ ಮಾಡಿಕೊಂಡು “ಹುಂ ಕುಡಿದಿದ್ದೇನೆ” ಎಂದಳು.
“ಯಾಕೆ ಕುಡಿಯುತ್ತೀರಿ? ಅದು ಆರೋಗ್ಯಕ್ಕೆ ಒಳ್ಳೆಯದಲ್ಲ”

“ಹೋ ಹೌದಾ? ನಂಗೆ ಗೊತ್ತೇ ಇರ್ಲಿಲ್ಲ. ಇಲ್ಲಿ ಬಾ ಈ ಪಾತ್ರೆ ಸ್ವಲ್ಪ ಎತ್ತಿ ಕೊಡು” ಎಂದು ದೊಡ್ಡ ಕಡಾಯಿಯತ್ತ ಕೈ ತೋರಿದಳು. ನಾನು ಆ ಎಂದು ಬಾಯಿ ತೆರೆಯುತ್ತಿದ್ದಂತೆ “ಆಗಲ್ಲ ತಾನೇ? ನೀನು ಕುಡಿಯುವುದಿಲ್ಲ, ನನ್ನ ಅರ್ಧದಷ್ಟು ವಯಸ್ಸೂ ನಿಂಗಾಗಿಲ್ಲ, ಕಡಾಯಿಯನ್ನು ಎತ್ತಲಾಗದಷ್ಟು ತುಂಬು ಆರೋಗ್ಯವಂತೆ ನೀನು” ಎಂದು ವ್ಯಂಗ್ಯವಾಗಿ ನಕ್ಕಳು. ಆಕೆಯ ವ್ಯಂಗ್ಯಕ್ಕೆ ಉತ್ತರಿಸುವ ಸಾಹಸಕ್ಕೆ ಇಳಿದರೆ ಮತ್ತಷ್ಟು ಜನ್ಮ ಜಾಲಾಡಿಬಿಡುತ್ತಾಳೆ ಅನ್ನುವುದು ಮೊದಲೇ ಅನುಭವಕ್ಕೆ ಬಂದಿದ್ದರಿಂದಾಗಿ ಏನೊಂದೂ ಮಾತಾಡದೆ ಸುಮ್ಮನಾದೆ.

ಸುಂದರಿ ಇರುವುದೇ ಹಾಗೆ. ಮಾತಾಡುವ ಮೂಡ್ ಇದ್ದಾಗ ಚಿನಕುರುಳಿಯಂತೆ ಹರಟುವ ಆಕೆ ಕೆಲವೊಮ್ಮೆ ಮೌನ ಹೊದ್ದು ಕುಳಿತು ಬಿಟ್ಟರೆ ತಾನು ಆರಾಧಿಸುವ ಶಿವನೇ ಬಂದು ಅವಳೆದುರು ಚಕ್ಕಳಮಕ್ಕಳ ಹಾಕಿ ಕೂತು ಮಾತಿಗೆಳೆದರೂ ಅವಳು ಜುಳು ಜುಳು ಹರಿವ ಮಾತಾಗಲಾರಳು. ಅವಳ ಮೌನದಲ್ಲಿ ಏನೇನಿದೆಯೋ ಅವಳಿಗಷ್ಟೇ ಗೊತ್ತು. ಕುಡಿದೂ ಕುಡಿದೂ ಸತ್ತೇ ಹೋದ ಗಂಡ, ಓದು ಬಾರದ ಇವಳಿಂದ ಹೆಬ್ಬೆಟ್ಟು ಹಾಕಿಸಿ ಪೂರ್ತಿ ಆಸ್ತಿ ದಕ್ಕಿಸಿಕೊಂಡ ಗಂಡನ ಅಣ್ಣ, ಶಾಶ್ವತವಾಗಿ ಮುಚ್ಚಿದ ತವರಿನ ಬಾಗಿಲು ಅದೆಲ್ಲಕ್ಕಿಂತಲೂ ಹೆಚ್ಚಾಗಿ ಒಂದು ಪುಟ್ಟ ಮಗುವನ್ನು ಇವಳ ಮಡಿಲಿಗೆ ಹಾಕಿ ಓಡಿ ಹೋದ ಸೊಸೆ, ಆ ಕೊರಗಲ್ಲೇ ಆತ್ಮಹತ್ಯೆ ಮಾಡಿಕೊಂಡ ಮಗ… ಅದೆಷ್ಟು ಸಂಗತಿಗಳು ಆ ಮೌನದಲ್ಲಿ ಮಗ್ಗುಲು ಬದಲಾಯಿಸುತ್ತಿರುತ್ತದೋ? ಹಾಗೆ ಮೌನಗೌರಿಯಾದಾಗೆಲ್ಲಾ ಮತ್ತಷ್ಟು ಕುಡಿಯುವ, ಕುಡಿದರೂ ಒಂದು ಹಿಡಿ ಹೆಚ್ಚು ಮಾತಾಡದ ಅವಳೊಂದು ಬಿಡಿಸಲಾಗದ ಒಗಟು.

ಶಿವನನ್ನು ನಂಬುವಷ್ಟೇ ಗಾಢವಾಗಿ ಊರಿನ ಮಸೀದಿಯನ್ನೂ ನಂಬುವ ಆಕೆ ಅಲ್ಲಿನ ಗುರುಗಳು ‘ಕುಡೀಬೇಡ’ ಎಂದಾಗ ಮಾತ್ರ ಕೆಂಡಾಮಂಡಲವಾಗುತ್ತಾಳೆ. ಜಗದ ಎಲ್ಲ ದೇವರುಗಳಿಗೂ, ದರ್ಗಾಗಳಿಗೂ, ಸತ್ತ ಗಂಡನಿಗೂ, ಅವನಿಗೆ ತನ್ನನ್ನು ಮದುವೆ ಮಾಡಿಕೊಟ್ಟ ಅಪ್ಪನಿಗೂ, ಹೆಂಡತಿಯನ್ನು ಬಾಳಿಸಲಾರದ ತನ್ನ ಮಗನಿಗೂ, ಓಡಿ ಹೋದ ಸೊಸೆಗೂ, ಓಡಿಸಿಕೊಂಡ ಹೋದ ‘ಘಟ್ಟದಾಯೆ’ ಮರ್ಲ ಸಾಬಿಗೂ, ಅವಳು ಬಿಟ್ಟು ಹೋದ ಮಗುವಿಗೂ ವಾಚಾಮಗೋಚರ ಬಯ್ಯುತ್ತಾಳೆ. ಅವಳ ಒಡಲ ಕಿಚ್ಚು ತಣಿದ ಮೇಲೆ, ಅಥವಾ ತಾನಾಗಿಯೇ ತಣಿಸಿದ ಮೇಲೆ ಅವಳು ಶಾಂತಮೂರ್ತಿ, ಕರುಣಾಮಯಿ ಅಮ್ಮ; ಮಗುವಿಗೂ, ಜಗತ್ತಿಗೂ.

ಈಗೀಗ ತುಸು ಇಳಿದುಹೋಗಿರುವಂತೆ ಕಾಣುವ ಸುಂದರಿ, ಮಗಳನ್ನು ಮದುವೆ ಮಾಡಿಕೊಟ್ಟು ಒಂದೆರಡು ತಿಂಗಳುಗಳು ಕಳೆದ ಬಳಿಕ ಅವಳನ್ನು ನೋಡಲೆಂದು ಅವಳ ಮನೆಗೆ ಹೋಗಿದ್ದಳಂತೆ. ಅವಳದೇ ತದ್ರೂಪಿಯಂತಿರುವ ಮಗಳು ಮನೆಯ ಹೊರಗೆ ಕೊಟ್ಟಿಗೆಯಲ್ಲಿ ಕೂತಿರುವುದನ್ನು ನೋಡಿ ಕರುಳು ಚುರುಕ್ಕೆಂದು ಮತ್ತಷ್ಟು ವಿಚಾರಿಸಿದಾಗ ಆ ಮನೆಯಲ್ಲಿ ಮುಟ್ಟಾದ ಹೆಣ್ಣುಮಕ್ಕಳು ಮುಟ್ಟಿಸಿಕೊಳ್ಳುವಂತಿಲ್ಲ ಎನ್ನುವುದು ತಿಳಿದು ಬಂತು. ಮೊದಲು ಸಾವಧಾನದಿಂದ ಆಮೇಲೆ ಸ್ವಲ್ಪ ಏರಿದ ಧ್ವನಿಯಲ್ಲಿ ತಿಳಿ ಹೇಳಲು ಪ್ರಯತ್ನಿಸಿದಳಂತೆ. ಅವಳ ಎಲ್ಲ ಪ್ರಯತ್ನಗಳು ನಿಷ್ಫಲವಾದಾಗ ಮಾತ್ರ ಚಾಮುಂಡಿ ಅವತಾರ ತಾಳಿದ ಸುಂದರಿ, ಹೆಣ್ಣುಮಕ್ಕಳಿಗೆ ಗೌರವಿಲ್ಲವದ ಕಡೆ, ಪ್ರಕೃತಿ ಸಹಜ ಪ್ರಕ್ರಿಯೆಯ ಬಗ್ಗೆ ನಕಾರಾತ್ಮಕ ನಿಲುವುಗಳು ಇರುವ ಕಡೆ ನನ್ನ ಮಗಳು ಇರುವುದು ಸರಿಯಲ್ಲ ಎಂದು ಅವಳನ್ನು ಆ ಕ್ಷಣವೇ ಅಲ್ಲಿಂದ ಕರೆದುಕೊಂಡು ಬಂದಿದ್ದಳಂತೆ. ಅದಾಗಿ ಕೆಲದಿನಗಳ ನಂತರ ಎಲ್ಲ ಸರಿ ಹೋಗಿ ಮಗಳು ಮತ್ತೆ ಗಂಡನ ಮನೆ ಸೇರಿದಳು. ಆದರೆ ಈಗಲೂ ಸುಂದರಿ, ಋತುಸ್ರಾವ, ಆ ದಿನಗಳ ಹೊಟ್ಟೆನೋವು, ಸಂಕಟಗಳ ಬಗ್ಗೆ ಮಾತಾಡುವಾಗೆಲ್ಲಾ ಮಗಳು ಕೊಟ್ಟಿಗೆಯಲ್ಲಿದ್ದುದು, ಅವಳಿಗೆ ಅಂತಲೇ ಪ್ರತ್ಯೇಕ ತಟ್ಟೆ, ಲೋಟ ಎತ್ತಿಟ್ಟದ್ದು ಎಲ್ಲ ನೆನಪಿಸಿ ಕಣ್ಣು ತುಂಬಿಕೊಳ್ಳುತ್ತಾಳೆ. ಆದರೆ ನನಗೆ ಆಕೆ ಹಾಗೆ ಮಾತಾಡುವಾಗೆಲ್ಲಾ, ಅನೀತಿಯನ್ನು ವಿರೋಧಿಸುವ ಗಟ್ಟಿ ನಿಲುವಿನ ಸುಂದರಿಯಂತಹವರ ಮುಂದೆ ಜಗತ್ತಿನ ತಥಾಕಥಿತ ಸ್ತ್ರೀವಾದವನ್ನು ನಿವಾಳಿಸಿ ಎಸೆಯಬೇಕು ಅನಿಸುತ್ತದೆ.

ಈಗ್ಗೆ ಮೂರು ದಿನಗಳ ಹಿಂದೆ ಇಂಥದ್ದೇ ಬಿಸಿಲಿನಲ್ಲಿ ಕೂತು ಸುಂದರಿಯ ಬಗ್ಗೆ, ಅವಳ ಬದುಕಿನ ಬಗ್ಗೆ ಯೋಚಿಸುತ್ತಿರಬೇಕಾದರೆ ಕರೆ ಮಾಡಿದ್ದ ಅಮ್ಮ, ಸುಂದರಿ ಕಾಲು ಮುರಿದುಕೊಂಡು ನಗರದ ಆಸ್ಪತ್ರೆ ಸೇರಿದ್ದಾಳೆ ಅಂದಿದ್ದರು. ನಿನ್ನೆ ಅವಳನ್ನು ನೋಡಿಕೊಂಡು ಬರಲೆಂದು ಹೋಗಿದ್ದೆ. ಪಕ್ಕದ ಕ್ಯಾಂಟೀನ್ ನಿಂದ ಮುಸಂಬಿ ಜ್ಯೂಸ್ ತರಿಸಿ ಗ್ಲಾಸಿಗೆ ಬಗ್ಗಿಸುತ್ತಿರಬೇಕಾದರೆ ಆಕೆ, ಕ್ಷೀಣವಾಗಿ “ಇದಕ್ಕಿಂತಲೂ ಪ್ಯಾಕೆಟ್ ಜ್ಯೂಸೇ ನನಗಿಷ್ಟ” ಎಂದಳು. ನಾನು ಹುಸಿಕೋಪದಿಂದ ಮತ್ತು ಹೆಚ್ಚೇ ಪ್ರೀತಿಯಿಂದ “ದೊಡ್ಡಾ” ಎಂದು ಕರೆದೆ. ಅವಳ ಕಡು ಕಪ್ಪುಕಣ್ಣುಗಳು ಸುಮ್ಮನೆ ಹೊಳೆದವು, ನಾನು ಗ್ಲಾಸ್ ಅವಳ ತುಟಿಗಿಟ್ಟೆ. ಒಂದೊಂದು ಗುಟುಕು ಕುಡಿಯುವಾಗಲೂ ಅವಳ ಅಂಗೈ ನನ್ನನ್ನು ಮತ್ತಷ್ಟು ಬಿಗಿಯಾಗಿ ಸುತ್ತಿಕೊಳ್ಳುತ್ತಿತ್ತು. ಕುಡಿದರೆ ಬೇಗ ಸಾಯುತ್ತಾರೆ ಎಂಬುವುದು ನಿಜವೇ ಆಗಿದ್ದರೆ ಕುಡಿದೇ ಸಾಯುತ್ತೇನೆ ಎಂದು ತೀರ್ಮಾನಿಸಿಕೊಂಡ ಅವಳು ಮತ್ತು ಕುಡಿತ ಹರಾಮಾಗಿರುವ ನಾನು… ಪ್ರಪಂಚ ನಮ್ಮಿಬ್ಬರ ಸಂಬಂಧಕ್ಕೆ ಏನು ಹೆಸರಿಡುತ್ತೋ ಗೊತ್ತಿಲ್ಲ, ನಾನು ಮಾತ್ರ ದಿನೇ ದಿನೇ ಅವಳ ಮಡಿಲಲ್ಲಿ ಮತ್ತಷ್ಟು ಮಗುವಾಗುತ್ತಿದ್ದೇನೆ.