ಇದೊಂಥರ ವೈರುಧ್ಯ. ಚೆನ್ನಾಗಿದೆ ಆದರೂ ತಿನ್ನೋಲ್ಲ! ಯಾಕಿರಬಹುದು? ಬಹುಶಃ ಬೆಳ್ಳಗೆ ಪಾಲಿಶ್ ಮಾಡಿದ ರೇಷನ್ ಅಕ್ಕಿಯನ್ನು ತಿಂದು ತಿಂದು ಅವರಿಗೆ ರೂಡಿ ಆಗಿಬಿಟ್ಟಿದೆಯೋ ಏನೋ. ತವಡನ್ನು ತೆಗೆದು ಅದರಲ್ಲಿ ಏನೂ ಇರದಂತೆ ಮಾಡಿ ಪಾಲಿಶ್ ಮಾಡಿ ಕೊಡುವ ಅಕ್ಕಿಯೇ ಎಲ್ಲರಿಗೂ ಪ್ರಿಯ. ಶ್ರೀಮಂತರು ಅಷ್ಟೇ ಯಾಕೆ ತಿನ್ನಬೇಕು ಎಲ್ಲರೂ ತಿನ್ನೋಣ ಅಂತ ಇವರೂ ಪಾಲಿಶ್ ಅಕ್ಕಿಯ ಮೊರೆ ಹೋದರೆ? ಇದೆ ಕಾರಣಕ್ಕೆ ಶ್ರೀಮಂತರಿಗೆ ಬರುವ ಸಕ್ಕರೆ ಕಾಯಿಲೆ, ಹೃದಯ ರೋಗ ಈಗ ಎಲ್ಲರಿಗೂ ಬರುತ್ತಿದೆ. ಇದೆ ನಮ್ಮ ರಾಜಕಾರಣಿಗಳು ಹೇಳುವ ಸಮಾನತೆ ಇರಬೇಕು!
ಗುರುಪ್ರಸಾದ ಕುರ್ತಕೋಟಿ ಬರೆಯುವ “ಗ್ರಾಮ ಡ್ರಾಮಾಯಣ” ಅಂಕಣ ನಿಮ್ಮ ಓದಿಗೆ

ಚಂದ್ರಪ್ಪ ಭತ್ತವನ್ನು ಚೀಲಗಳಿಗೆ ತುಂಬಿಸಿಕೊಡಲು ಒಪ್ಪಿಕೊಂಡ. ಅವನಿಗೆ ಒಂದಿಷ್ಟು ಹೊಸ ಚೀಲಗಳನ್ನು ತಂದು ಕೊಟ್ಟೆ. ಅಂಗಳದಲ್ಲಿ tarpalin sheet ನ ಮೇಲೆ ಹರಡಿಕೊಂಡಿದ್ದ ಭತ್ತವನ್ನು, ಚಂದ್ರಪ್ಪ ತನ್ನ ಸಹಚರನೊಟ್ಟಿಗೆ ಸೇರಿ ಮೊಗೆದು ಮೊಗೆದು ತುಂಬುತ್ತಿದ್ದ. ಅವರ ಕೆಲಸ ಮಾಡುವ ವೇಗವನ್ನು ಹಾಗೂ ಕ್ಷಮತೆಯನ್ನು ನೋಡಿ ದಂಗಾದೆ. ಅವನು ನೋಡಲು ಸಣ್ಣ ಆಳು. ಅಷ್ಟೇನು ಗಟ್ಟಿ ಅಂತ ಕಾಣುತ್ತಿರಲಿಲ್ಲ. ಆದರೂ ಅವನಲ್ಲಿ ಸಿಕ್ಕಾಪಟ್ಟೆ ಕಸುವು ಇತ್ತು. ಒಂದೊಂದೇ ಚೀಲವನ್ನು ಕಟ್ಟುತ್ತಲೇ..

“ಹೆಗಡೆರು ಅಂತೂ ಭತ್ತ ಬೆಳದ್ರಿ. ಚೊಲೋ ಬಂದೈತಿ ಬಿಡ್ರಿ. ಮಾರಿ ಬಿಡ್ರಿ ಚೊಲೋ rate ಐತಿ ಈ ಭತ್ತಕ್ಕ..”

“ಇದನ್ನ ಮಾರುದಿಲ್ಲ.. ನಮಗs ಉಣ್ಣಾಕ ಬೇಕು ಚಂದ್ರಪ್ಪ…” ಅಂದೆ.

ಅವನು ಗಹಗಹಿಸಿ ನಕ್ಕ. “ಇದು ಉಣ್ಣಾಕ ಚೊಲೋ ಆಗುದಿಲ್ಲ ಬಿಡ್ರಿ.. ನಮ್ಮ ಹಳ್ಳಿಯೊಳಗನ ಯಾರೂ ತಿನ್ನಂಗಿಲ್ಲ ಇದನ್ನ…” ಅಂದ.

ಇದು ನಮ್ಮ ದುರಂತ. ಸ್ಥಳೀಯವಾಗಿ ಸದೃಢವಾಗಿ ವಿಶೇಷ ಆರೈಕೆಯನ್ನೂ ಬಯಸದೆ ಹುಲುಸಾಗಿ ಬೆಳೆಯುವ ಈ ಭತ್ತವನ್ನು ಅಲ್ಲಿಯವರೆ ತಿನ್ನೋದಿಲ್ಲ. ನನಗದು ಮೊದಲೇ ತಿಳಿದಿತ್ತು. ಆದರೆ ಇವರೆಲ್ಲ ಯಾಕೆ ತಿನ್ನೋದಿಲ್ಲ ಎಂಬ ಕುತೂಹಲ ಇತ್ತು. ನಾನು ಮತ್ತು ನಾಗಣ್ಣ ಅಂತೂ ಇದನ್ನು ಅನ್ನ ಮಾಡಿಕೊಂಡು ತಿನ್ನುವ ಕನಸು ಕಾಣುತ್ತಿದ್ದೆವು. ಸಧ್ಯಕ್ಕೆ ಅವನ ಜೊತೆ ವಾದಿಸುವುದರಲ್ಲಿ ನನಗೆ ಆಸಕ್ತಿ ಇರಲಿಲ್ಲ. ಅಳಿದುಳಿದ ಭತ್ತವನ್ನು ಸಂರಕ್ಷಿಸಿ ಇಡುವ ಗುರುತರ ಜವಾಬ್ದಾರಿ ನಮ್ಮ ಮೇಲೆ ಇತ್ತು. ಇದನ್ನು ತಿನ್ನುವ ಋಣ ಇದ್ದರೆ ನೋಡೋಣ ಅಂತ ಅನಿಸಿತ್ತು ಆಗ.

“ಜಲ್ದಿ ಜಲ್ದಿ ತುಂಬ್ರಿ, ಮಳಿ ಬರು ಹಂಗ ಐತಿ…” ಅಂತ ಗಡಿಬಿಡಿ ಮಾಡಿದೆ. ಅಷ್ಟೊತ್ತಿಗೆ ಒಂದು ಟ್ರಾಕ್ಟರ್‌ಗೆ ಹೊಲದಲ್ಲಿದ್ದ ಹುಲ್ಲಿನ ಪೆಂಡಿಗಳನ್ನು ಹೇರಿಕೊಂಡು ಬರುವ ವ್ಯವಸ್ಥೆ ಮಾಡಿದ್ದೆ. ಅಲ್ಲಿಗೆ ಒಂದು ಟ್ರಾಕ್ಟರ್ ಹಾಗೂ ಒಂದಿಷ್ಟು ಆಳುಗಳು ಹೋಗಿದ್ದರು. ಭತ್ತ ತುಂಬಿಸಲು ನಾವು ರಾಮಚಂದ್ರ ಮಾವನ ಅಂಗಳದಲ್ಲಿ ಇದ್ದೆವು.

ಇಂತಹ ಕೆಲಸಗಳನ್ನು ಮಾಡುವಾಗ ಒಬ್ಬರೇ ಇದ್ದರೆ ತುಂಬಾ ಕಷ್ಟ. ಜೊತೆಗೆ ನಾಗಣ್ಣ ಇದ್ದಿದ್ದು ತುಂಬಾ ಅನುಕೂಲ ಆಯ್ತು. ಇಬ್ಬರೂ ಸೇರಿ ಅಡ್ಡಾಡಿ ಇಷ್ಟೆಲ್ಲ ಮಾಡುವಷ್ಟರಲ್ಲಿ ಸಾಕಾಗಿ ಹೋಗಿತ್ತು. ಅಂತಹ ಓಡಾಟದಲ್ಲಿಯೆ ಒಂದು ಬಗೆಯ ಸ್ಪೂರ್ತಿ ಇತ್ತು. ನಾವಂದುಕೊಂಡಂತೆಯೆ ಇಪ್ಪತ್ತೈದು ಚೀಲ ಭತ್ತ ಬಂದಿತ್ತು. ಮೊದಲ ಸಲ ಎಂಬ ಕಾರಣಕ್ಕೆ ನಮಗೆ ಅದೊಂದು ದೊಡ್ಡ ಗೆಲುವು. ಅದಕ್ಕಿಂತ ಹೆಚ್ಚಾಗಿ ಭತ್ತ ಬೆಳೆಯುವ ಅಗಾಧ ಅನುಭವವನ್ನು ಅದು ನೀಡಿತ್ತು.

ಹುಲ್ಲಿನ ಪೆಂಡಿಗಳು ಹಾಗೂ ಭತ್ತದ ಚೀಲವನ್ನು ಒಂದೇ ಗಾಡಿಯಲ್ಲಿ ಹೊಂದಿಸುವುದು ಕಷ್ಟವಾಯ್ತು. ಹೀಗಾಗಿ ಮತ್ತೊಂದು ಟ್ರಾಕ್ಟರ್‌ಗೆ ಬರಲು ಹೇಳಿದೆ. ಅಷ್ಟರಲ್ಲಿ ಹುಲ್ಲಿನ ಪೆಂಡಿಯನ್ನು ಹೊತ್ತಿದ್ದ ಒಂದು ಟ್ರಾಕ್ಟರ್ ಅನ್ನು ಶಂಭುಲಿಂಗ ಮಾವನ ಮನೆಗೆ ಕಳಿಸಿದೆ. ಚಂದ್ರಪ್ಪ ಮತ್ತಿತರ ಒಂದಿಬ್ಬರು ಆಳುಗಳು ಇನ್ನೊಂದು ಟ್ರಾಕ್ಟರ್‌ಗೆ ಭತ್ತದ ಚೀಲಗಳನ್ನು ತುಂಬಿದರು. ಒಂದು ಚೀಲ ಭತ್ತ ಅಂದರೆ ಸರಿ ಸುಮಾರು 60 ಕೆಜಿ ಇರುತ್ತದೆ. ಆ ಚೀಲವನ್ನು. ಚಂದ್ರಪ್ಪ ಹಾಗೂ ತಂಡ ಲೀಲಾಜಾಲವಾಗಿ ಬೆನ್ನ ಮೇಲೆ ಹೊತ್ತು ಟ್ರಾಕ್ಟರ್‌ಗೆ ಹಾಕುತ್ತಿದ್ದ ದೃಶ್ಯ ನೋಡಿ ಬೆರಗಾದೆ. ಅದನ್ನು ಬರಿ ನಮ್ಮ ಕೈಯಲ್ಲಿ ಅಲುಗಾಡಿಸುವುದೆ ಅಸಾಧ್ಯ, ಅಂಥದರಲ್ಲಿ ನಾಗಣ್ಣ ತಾನೂ ಅದನ್ನು ಬೆನ್ನ ಮೇಲೆ ಹೊತ್ತುಕೊಳ್ಳುತ್ತೇನೆ ಎಂಬ ಹುಂಬ ಧೈರ್ಯವನ್ನು ನನ್ನೆದುರು ಪ್ರದರ್ಶಿಸಿದರು. ಅವರಿಗೆ ಭಾರಿ ಉತ್ಸಾಹ!

ಇಷ್ಟೆಲ್ಲ ಮಾಡುವುದರ ಒಳಗೆ ನಮ್ಮ ಪುಣ್ಯಕ್ಕೆ ಮಳೆ ಇನ್ನೂ ಬಂದಿರಲಿಲ್ಲ. ಟ್ರಾಕ್ಟರ್ ಮೇಲೆ ಜೋಡಿಸಿದ್ದ ಭತ್ತದ ಚೀಲಗಳ ಮೇಲೆ tarpalin ಹೊದಿಸಿದೆವು. ನಾಗಣ್ಣ ಅವರನ್ನು ಕೂಡಿಸಿಕೊಂಡು ನನ್ನ ಸ್ಕೂಟರ್‌ನಲ್ಲಿ ಮುಂದೆ ಹೊರಟೆ. ನಮ್ಮ ಹಿಂದೆ ನಿಧಾನಕ್ಕೆ ಟ್ರಾಕ್ಟರ್ ಬರುತ್ತಿತ್ತು. ನಾವು ಶಂಭುಲಿಂಗ ಮಾವನ ಮನೆ ತಲುಪಿದಾಗ ಹುಲ್ಲು ಹೊತ್ತಿದ್ದ ಮೊದಲ ಟ್ರಾಕ್ಟರ್ ಆಗಲೇ ಬಂದಿತ್ತು. ಚಂದ್ರಪ್ಪ ಹಾಗೂ ತಂಡ ಅವುಗಳನ್ನು ಕೆಳಗೆ ಒಂದೊಂದಾಗಿ ಇಳಿಸುತ್ತಿದ್ದರು.

“ಹೆಗಡೆರ ಈ ಹುಲ್ಲನ್ನ ದನ ಕೊಬ್ಬರಿ ತಿಂದಂಗ ತಿಂತಾವು ನೋಡ್ರಿ. ಅಷ್ಟು ರುಚಿ ಇದು” ಅಂದ…

“ದನ ಹುಲ್ಲು ತಿಂತಾವು, ನೀವ್ಯಾಕೆ ಅದರ ಹುಲ್ಲಿನ ಅಕ್ಕಿ ತಿನ್ನೋದಿಲ್ಲಾ?”

“ಅಕ್ಕಿನೂ ಭಾರಿ ರುಚಿ ಇರತೈತಿ ರಿ. ಸಣ್ಣವ ಇದ್ದಾಗ ನಾವೆಲ್ಲ ಇದನ್ನ ತಿಂತಿದ್ವಿ. ಈಗೆಲ್ಲಾ ತಿನ್ನುದಿಲ್ಲ ಅಷ್ಟ” ಅಂದ..

ಇದೊಂಥರ ವೈರುಧ್ಯ. ಚೆನ್ನಾಗಿದೆ ಆದರೂ ತಿನ್ನೋಲ್ಲ! ಯಾಕಿರಬಹುದು? ಬಹುಶಃ ಬೆಳ್ಳಗೆ ಪಾಲಿಶ್ ಮಾಡಿದ ರೇಷನ್ ಅಕ್ಕಿಯನ್ನು ತಿಂದು ತಿಂದು ಅವರಿಗೆ ರೂಡಿ ಆಗಿಬಿಟ್ಟಿದೆಯೋ ಏನೋ. ತವಡನ್ನು ತೆಗೆದು ಅದರಲ್ಲಿ ಏನೂ ಇರದಂತೆ ಮಾಡಿ ಪಾಲಿಶ್ ಮಾಡಿ ಕೊಡುವ ಅಕ್ಕಿಯೇ ಎಲ್ಲರಿಗೂ ಪ್ರಿಯ. ಶ್ರೀಮಂತರು ಅಷ್ಟೇ ಯಾಕೆ ತಿನ್ನಬೇಕು ಎಲ್ಲರೂ ತಿನ್ನೋಣ ಅಂತ ಇವರೂ ಪಾಲಿಶ್ ಅಕ್ಕಿಯ ಮೊರೆ ಹೋದರೆ? ಇದೆ ಕಾರಣಕ್ಕೆ ಶ್ರೀಮಂತರಿಗೆ ಬರುವ ಸಕ್ಕರೆ ಕಾಯಿಲೆ, ಹೃದಯ ರೋಗ ಈಗ ಎಲ್ಲರಿಗೂ ಬರುತ್ತಿದೆ. ಇದೆ ನಮ್ಮ ರಾಜಕಾರಣಿಗಳು ಹೇಳುವ ಸಮಾನತೆ ಇರಬೇಕು!

ಒಂದು ಚೀಲ ಭತ್ತ ಅಂದರೆ ಸರಿ ಸುಮಾರು 60 ಕೆಜಿ ಇರುತ್ತದೆ. ಆ ಚೀಲವನ್ನು. ಚಂದ್ರಪ್ಪ ಹಾಗೂ ತಂಡ ಲೀಲಾಜಾಲವಾಗಿ ಬೆನ್ನ ಮೇಲೆ ಹೊತ್ತು ಟ್ರಾಕ್ಟರ್‌ಗೆ ಹಾಕುತ್ತಿದ್ದ ದೃಶ್ಯ ನೋಡಿ ಬೆರಗಾದೆ. ಅದನ್ನು ಬರಿ ನಮ್ಮ ಕೈಯಲ್ಲಿ ಅಲುಗಾಡಿಸುವುದೆ ಅಸಾಧ್ಯ, ಅಂಥದರಲ್ಲಿ ನಾಗಣ್ಣ ತಾನೂ ಅದನ್ನು ಬೆನ್ನ ಮೇಲೆ ಹೊತ್ತುಕೊಳ್ಳುತ್ತೇನೆ ಎಂಬ ಹುಂಬ ಧೈರ್ಯವನ್ನು ನನ್ನೆದುರು ಪ್ರದರ್ಶಿಸಿದರು.

ನಾವು ಮಾತ್ರ ನಮ್ಮ ಭತ್ತವನ್ನು ಪಾಲಿಶ್ ಮಾಡದೆ ತಿನ್ನೋಣ ಅಂತ ನಾನು ನಾಗಣ್ಣ ನಿರ್ಧರಿಸಿದ್ದೆವು. ಆದರೆ ಅದಕ್ಕೆ ಇನ್ನೂ ತುಂಬಾ ಸಮಯ ಇತ್ತು. ಭತ್ತ ಇನ್ನೂ ಒಣಗಬೇಕಿತ್ತು. ಒಣಗಿದ್ದು ಹೇಗೆ ಗೊತ್ತಾಗುತ್ತದೆ ಎಂದರೆ ಒಂದು ಭತ್ತವನ್ನು ಹಲ್ಲುಗಳ ನಡುವೆ ಇಟ್ಟು ಕಡಿದಾಗ ಕಟ್ ಅಂತ ಶಬ್ಧ ಬರಬೇಕಂತೆ. ಅದೂ ಅಲ್ಲದೆ ತುಂಬಾ ಹೊಸದಾದ ಭತ್ತದ ಅಕ್ಕಿಯ ಅನ್ನ ಮಾಡಿದರೆ ಮುದ್ದೆ ಮುದ್ದೆ ಆಗುತ್ತದೆ. ಏನೇ ಆಗಲಿ ನಾವು ಕಾಯಲು ಸಿದ್ಧರಿದ್ದೆವು.

ಹುಲ್ಲಿನ ಪೆಂಡಿಗಳನ್ನು ಇಳಿಸಿ ಅವರಿಗೆಲ್ಲ ದುಡ್ಡು ಕೊಟ್ಟರೂ ಇನ್ನೂ ನಮ್ಮ ಭತ್ತದ ಚೀಲ ಹೊತ್ತ ಟ್ರಾಕ್ಟರ್ ಬರಲೇ ಇಲ್ಲ. ಆಗಲೇ ರಾತ್ರಿ 8 ಗಂಟೆ. ನಮಗೆ ಸ್ವಲ್ಪ ಚಿಂತೆ ಶುರುವಾಯ್ತು. ಇಷ್ಟು ತಡ ಆಗುವ ಸಾಧ್ಯತೆ ಇರಲಿಲ್ಲ. ಅಷ್ಟೊತ್ತಿಗೆ ಮಳೆಯೂ ಶುರು ಆಗಿದ್ದು ನಮ್ಮ ಚಿಂತೆಯನ್ನು ಮತ್ತಷ್ಟು ಹೆಚ್ಚಿಸಿತು. ಕೈಗೆ ಬಂದ ಭತ್ತ ಬಾಯಿಗೆ ಬರುವುದೋ ಇಲ್ಲೋ ಎಂಬ ಕಳವಳ ಶುರು ಆಯ್ತು.

ನಾಗಣ್ಣ, ಒಂದು ಸಲ ಹೋಗಿ ನೋಡ್ಕೊಂಡ್ ಬರೋಣ ಬನ್ನಿ ಅಂತ ಸ್ಕೂಟರ್ ಶುರು ಮಾಡಿದೆ. ಮಳೆಯಲ್ಲಿ ಅರಿವೆಗಳು ನೆನೆಯುತ್ತಿರುವ ಪರಿವೆ ಇಲ್ಲದೆ ವಾಪಸ್ಸು ದಾಸನಕೊಪ್ಪದ ದಾರಿಯಲ್ಲಿ ಹೊರಟೆವು…

ಅಷ್ಟೊತ್ತಿಗೆ ಧೋಧೋ ಮಳೆ ಶುರುವಾಗಿತ್ತು. ಅದರಲ್ಲೇ ಗಾಡಿ ಓಡಿಸಿಕೊಂಡು ಇಬ್ಬರೂ ತೊಯ್ಯಿಸಿಕೊಂಡೆ ಹೊರಟಿದ್ದೆವು. ನಮ್ಮ ಅವತ್ತಿನ ಪಯಣ ಒಂತರಹ ಪ್ರವಾಹದ ವಿರುದ್ಧದ ಈಜಿನಂತೆಯೆ ಇತ್ತು. ಎಲ್ಲರೂ ಬೆಂಗಳೂರಿನಲ್ಲಿ ಬೆಚ್ಚಗೆ ಇರುವಾಗ ನಾವು ಇಲ್ಲೊಂದು ಬೇರೆಯೇ ಓಟದಲ್ಲಿ ಇದ್ದೆವು. ಕಷ್ಟ ಅನಿಸುತ್ತಿತ್ತು, ಆದರೂ ಇಷ್ಟದ ಪಯಣವೇ ಆಗಿತ್ತು! ಹಾಗೆಯೇ ಅರ್ಧ ದಾರಿ ಮುಟ್ಟಿದ್ದೇವೇನೋ, ಅಲ್ಲಿ ನಮ್ಮ ಟ್ರಾಕ್ಟರ್ ನಿಂತಿದ್ದು ಕಂಡಿತು. ಹೋದ ಜೀವ ಬಂದಂತಾಯಿತು.

“ಏನಾತ ರಿ” ಅಂತ ವಿಚಾರಿಸಿದಾಗ, ಅದರ engine off ಆಗಿದ್ದು ಗೊತ್ತಾಯ್ತು. ಇಂಧನ ಹೋಗುವ ಕೊಳವೆಯಲ್ಲಿ ಏನೋ ಸಿಕ್ಕಿಕೊಂಡು ಟ್ರಾಕ್ಟರ್ ಶುರು ಆಗುತ್ತಲೇ ಇರಲಿಲ್ಲ. ಅಲ್ಲೊಂದು ಮೂರು ಜನ ತಮಗೆ ತಿಳಿದ ಎಲ್ಲ ಪ್ರಯತ್ನಗಳನ್ನೂ ಮಾಡುತ್ತಿದ್ದರು. ಅದರಿಂದ ಏನೂ ಫಲಿತಾಂಶ ಬರುತ್ತಿರಲಿಲ್ಲ. ಅವರ ಬಳಿ ಕೆಲವು ಸಲಕರಣೆಗಳು ಕೂಡ ಇರಲಿಲ್ಲ. ನಾವು ಮತ್ತೆ ವಾಪಸ್ಸು ಹೋಗಿ ಒಬ್ಬ mechanic ಕರೆದುಕೊಂಡು ಬಂದು ಅಂತೂ ಹತ್ತು ಗಂಟೆಗೆ ಅದನ್ನು ಶುರು ಮಾಡಿಸಿ ಹೊರಡಿಸಿಕೊಂಡು ಮತ್ತೆ ಶಂಭುಲಿಂಗ ಮಾವನ ಮನೆಗೆ ತಲುಪಿ ಚೀಲಗಳನ್ನು ಒಂದು ಕಡೆ ಇರಿಸಿ tractor ಬಾಡಿಗೆ, ಆಳುಗಳಿಗೆ ಕೊಡಬೇಕಾಗಿದ್ದನ್ನು ಕೊಟ್ಟು ಅವರನ್ನು ವಾಪಸ್ಸು ಕಳಿಸಿದಾಗ ಮಧ್ಯ ರಾತ್ರಿ ಹನ್ನೆರಡು ಗಂಟೆ!

ನೀವು ಏನೇ ಹೇಳಿ ಲಕ್ಷಗಟ್ಟಲೆ ಸಂಬಳ ತೆಗೆದುಕೊಂಡು ರಾತ್ರಿಯೆಲ್ಲಾ ನಿದ್ದೆಗೆಟ್ಟು ಬೇರೆಯವರಿಗೆ ದುಡಿಯುವಾಗಿನ ಅಸಮಾಧಾನ ಈಗ ಇರಲಿಲ್ಲ. ಈ ಭತ್ತವನ್ನು ಸಂಗ್ರಹಿಸಿ ಅದನ್ನು ಇನ್ನೂ ಎಷ್ಟೋ ದಿನಗಳು ಕಾಯ್ದು ಅಕ್ಕಿ ಮಾಡಿಸಿ ತಿನ್ನುವ ಕನಸಿನಲ್ಲಿ ಒಂದು ಸುಖವಿತ್ತಲ್ಲ, ಅದನ್ನು ವರ್ಣಿಸಲು ಸಾಧ್ಯವಿಲ್ಲ!

ಎಲ್ಲಾ ಮುಗಿದ ಮೇಲೆ ಮಾವ ಊಟಾ ಮಾಡಿಕೊಂಡು ಇಲ್ಲೇ ಮಲಗಿ ಅಂತ ಒತ್ತಾಯ ಮಾಡತೊಡಗಿದರು. ಅವರಿಗೆ ಈಗಾಗಲೇ ಕೊಟ್ಟ ಕಷ್ಟವೇ ಬೆಟ್ಟದಷ್ಟು ಇತ್ತು. ಇನ್ನೂ ಎಷ್ಟು ದಿನ ನಿಮ್ಮನ್ನು ಗೋಳು ಹೊಯ್ದುಕೊಳ್ಳೋದು ಮಾವ ಅಂತ ಕೇಳಿದೆ..

ಅವರು ಆಗ ಹೇಳಿದ ಮಾತು ಅದ್ಭುತವಾಗಿತ್ತು.

“ಗುರುಪ್ರಸಾದ್, ನಾನು ಹಿಂದೆ ಹಿಂಗೆ ಕಷ್ಟ ಪಡೋವಾಗ ನನಗೂ ಒಬ್ರು ಸಿಕ್ಕಾಪಟ್ಟೆ ಸಹಾಯ ಮಾಡಿದ್ದ. ಅದರಿಂದ ನಾನು ಮೇಲೆ ಬಂದೆ. ಅವ್ರಿಗೆ ನಾನು ಸಹಾಯ ಮಾಡಲೇ ಅವಕಾಶ ಸಿಗಲೇ ಇಲ್ಲೇ. ಅದಕ್ಕೆ ನಾನು ನಿಮಗೆ ಮಾಡ್ತಾ ಇದ್ದಿ. ನೀವು ಇನ್ನೊಬ್ಬರಿಗೆ ಮಾಡವು. ಇದು ಹೀಗೆ ಮುಂದು ವರೀತು ಅಲ್ದಾ? ಬಾ ಈಗ ಊಟಾ ಮಾಡು” ಅಂತ ಪ್ರೀತಿಯಿಂದ ಗದರಿಸಿ ಒಳಗೆ ಕರೆದೊಯ್ದರು.

ನಿಜ ಅಲ್ಲವೇ? ನಾವು ಯಾರಿಗೋ ಸಹಾಯ ಮಾಡಿದರೆ ನಮಗೆ ಇನ್ನೊಬ್ಬರ ಮೂಲಕ ಅದು ತಿರುಗಿ ಬಂದೆ ಬರುತ್ತದೆ. ನಾವು ಮಾಡಿದವರೇ ನಮಗೆ ಸಹಾಯ ಮಾಡಬೇಕು ಎಂಬ ಅಪೇಕ್ಷೆಯನ್ನೇ ಇಟ್ಟುಕೊಳ್ಳಬಾರದು. ದೇವರು ಯಾರದೋ ರೂಪದಲ್ಲಿ ಬಂದು ನಮಗೊಂದು ಸಹಾಯ ಮಾಡಿ ಬಿಡುತ್ತಾನೆ. ಅದು ಜೀವನದಲ್ಲಿ ಎಷ್ಟೋ ಸಲ ನಮಗೆ ಅನುಭವ ಆಗಿರುತ್ತದೆ, ಆದರೆ ನಾವು ಗ್ರಹಿಸಿರುವುದಿಲ್ಲ ಅಷ್ಟೇ! ದಣಿದು ಊಟಾ ಮಾಡಿದಾಗ ಅದರ ರುಚಿಯೇ ಬೇರೆ. ಊಟ ಆದ ಮೇಲೆ ವಾಪಸ್ಸು ದಾಸನಕೊಪ್ಪಕ್ಕೇ ಹೊರಟೆವು. ಬೆಳಿಗ್ಗೆ ಮತ್ತೆ ಇಲ್ಲಿಗೆ ಬಂದು ಭತ್ತವನ್ನು ಒಣಗಿಸಬೇಕಿತ್ತು. ಬಿಸಿಲು ನಾಳೆಯಾದರೂ ಕಂಡೀತು ಎಂಬ ಆಸೆ ಇತ್ತು.

(ಮುಂದುವರಿಯುವುದು…)