ಸಾಹಿತ್ಯವೆಂದರೆ ಬದುಕಿನ ಪ್ರತಿಬಿಂಬ ಎಂದಾದರೆ, ಸಾಹಿತ್ಯಕೃತಿಗಳಲ್ಲಿ ಬರುವ ಭಾವ, ರಸ ಲಯಗಳಲ್ಲಿಯೂ ಸಾಮ್ಯತೆಯೊಂದು ಇರಲೇಬೇಕಲ್ಲವೇ, ಈ ನಿಟ್ಟಿನಲ್ಲಿ ಯೋಚಿಸಿದಾಗ, ಗ್ರೀಕ್ ಪುರಾಣ ಕತೆ ‘ಟೆರಿಯಸ್’ ಮತ್ತು ಕನ್ನಡದ ಮದಲಿಂಗ ಕಥನ ಗೀತೆಯ ನಡುವೆ ಬಹಳ ಸಾಮ್ಯತೆಗಳಿವೆ. ಜೊತೆಗೆ ಆಸೆ, ಮೋಹ, ಕ್ರೌರ್ಯ ಮತ್ತು ಹಿಂಸೆಗಳನ್ನು ನಿರ್ವಹಿಸುವ ಬಗೆ ತಿಳಿಯದೇ ಕತೆಯು ದುರಂತ ಅಂತ್ಯಕಾಣುತ್ತದೆ. ಇವೆರಡೂ ಕತೆಗಳ ವಿಶ್ಲೇಷಣೆ ನಡೆಸುವ ಮೂಲಕ ಅವುಗಳ ನಡುವಿನ ಸಾಮ್ಯತೆಯನ್ನು ಸುಮಾವೀಣಾ ಅವರು ಗುರುತಿಸಿದ್ದಾರೆ.

ಮನುಷ್ಯನ ವರ್ತನೆ ದೇಶ ಕಾಲಗಳನ್ನು ಮೀರಿದ್ದು. ಕಾಲ ಯಾವುದೇ ಇರಲಿ ಮೂಲಭೂತ ವರ್ತನೆ ಮಾತ್ರ ಬದಲಾಗುವುದಿಲ್ಲ. ಎಷ್ಟೋ ಕತೆಗಳನ್ನು ನೋಡಿರುತ್ತೇವೆ ಕೇಳಿರುತ್ತೇವೆ. ಪೌರಾಣಿಕ, ಐತಿಹಾಸಿಕ, ಅಥವಾ ಜಾನಪದ ಕತೆಗಳಿರಬಹುದು, ಅಥವಾ ಕಾಲ್ಪನಿಕ ಕತೆಗಳಿರಬಹುದು. ಅವುಗಳಲ್ಲಿ ಬರುವ ವಿವರಣೆಗಳನ್ನು ಗಮನಿಸಿದರೆ ಒಂದಂತೂ ಸ್ಪಷ್ಟ. ಆಹಾರ-ವಿಹಾರ,ಉಡುಗೆ-ತೊಡುಗೆ ಸಂಪ್ರದಾಯ ಪದ್ಧತಿಗಳು ಬೇರೆಯಾದರೂ ಮನುಷ್ಯನ ವರ್ತನೆ ಸರಿ ಸುಮಾರು ಒಂದೇ ರೀತಿ ಆಗಿರುತ್ತದೆ.

ದೇಶಕಾಲಗಳನ್ನು ಮೀರಿಯೂ ಅಂತಹ ಸಾಮ್ಯತೆಯನ್ನು ಹಲವು ಸಾಹಿತ್ಯ ಕೃತಿಗಳಲ್ಲಿ ಗುರುತಿಸಬಹುದು. ಉದಾಹರಣೆಗೆ ಗ್ರೀಕ್ ಪುರಾಣದ ಟೆರಿಯಸ್ ಕಥನಕ್ಕೂ ನಮ್ಮ ಕರ್ನಾಟಕ ಜಾನಪದ ಕತೆ ‘ಮದಲಿಂಗನ ಕಣಿವೆ’ (ಮಾಸ್ತಿಯವರು ಮದಲಿಂಗನ ಕಣಿವೆ ಎಂಬ ಶೀರ್ಷಿಕೆಯಲ್ಲಿ ಮರು ನಿರೂಪಣೆ ಮಾಡಿದ್ದಾರೆ)ಗೂ ಸಾಮ್ಯತೆಯಿದೆ. ಹಾಗೆ ಹೊಂದಿಕೆಯಾಗುವ ಕೆಲವು ಪರಿಪ್ರೇಕ್ಷ್ಯಗಳನ್ನು ಪ್ರತ್ಯೇಕ ಕಥಾ ಸಾರಾಂಶ, ಘಟನೆಗಳು ಮತ್ತು ಪಾತ್ರಗಳನ್ನು ಆಧರಿಸಿ ತೌಲನಿಕವಾಗಿ ಅನುಸಂಧಾನ ಮಾಡುವ ಚಿಕ್ಕ ಪ್ರಯತ್ನ ಇಲ್ಲಿದೆ.

ಎರಡೂ ಕೃತಿಗಳ ಸಾರಾಂಶವನ್ನು ಪರಿಗಣಿಸುವುದಾದರೆ, ಮೊದಲಿಗೆ ಗ್ರೀಕ್ ಪುರಾಣದಲ್ಲಿರುವ ಟೆರಿಯಸ್ ಕತೆಯ ಓದು ಬಹಳ ಕಾಡುವಂತಹುದು. ‘ಟೆರಿಯಸ್’ ಎಂದರೆ ಅದು ಕತೆಯ ಶೀರ್ಷಿಕೆಯೂ ಹೌದು. ಕಥಾನಾಯಕನ ಹೆಸರೂ ಹೌದು. ಇಡೀ ಕತೆ ಸಾಗುವುದು ಟೆರಿಯಸ್, ಪ್ರೊಕ್ನೆ, ಫಿಲೊಮೆಲಾ ಎಂಬ ಮೂರು ಪಾತ್ರಗಳ ನಡುವೆ. ಕಥಾನಾಯಕ ಟೆರಿಯಸ್ ಅಥೆನ್ಸಿನ ರಾಜಕುಮಾರಿ ಪ್ರೊಕ್ನೆಯನ್ನು ಮದುವೆಯಾಗಿದ್ದರೂ, ಹೆಂಡತಿಯ ತಂಗಿ ಫಿಲೋಮೆಲಾಳನ್ನು ಬಯಸುತ್ತಾನೆ. ಅಥೆನ್ಸಿನ ರಾಜ ಪಾಂಡಿಯನ್ ಮನೆಗೆ ಅಂದರೆ ಮಾವನ ಮನೆಗೆ ಹೋಗಿ, ‘ನಿಮ್ಮ ಮೊದಲ ಮಗಳು ಅಂದರೆ ನನ್ನ ಹೆಂಡತಿ ತೀರಿ ಹೋದಳು. ಎರಡನೇ ಮಗಳನ್ನು ಪತ್ನಿಯಾಗಿ ಸ್ವೀಕರಿಸಲು ಕರೆದುಕೊಂಡು ಹೋಗುತ್ತೇನೆ’ ಎಂದು ಹೇಳಿ ಫಿಲೋಮೆಲಾಳನ್ನು ಹಡಗಿನ ಮೂಲಕ ಕರೆದುಕೊಂಡು ಬರುತ್ತಾನೆ. ಅಲ್ಲಿಯವರೆಗೂ ಸದ್ವರ್ತನೆಯಿಂದ ಇದ್ದ ಟೆರಿಯಸ್, ಪ್ರಯಾಣದ ಸಂದರ್ಭದಲ್ಲಿ ಫಿಲೋಮೆಲಾ ಜೊತೆಗಿದ್ದ ರಕ್ಷಣಾ ಸಿಬ್ಬಂದಿಯನ್ನು ಸಮುದ್ರಕ್ಕೆ ದೂಡಿಬಿಡುತ್ತಾನೆ.  ಹಡಗು ಇಳಿದ ಬಳಿಕ ಇನ್ನಷ್ಟು ದುಷ್ಟ ವರ್ತನೆಯನ್ನು ತೋರಿಸುತ್ತಾನೆ. ಆಕೆಯ ಮೇಲೆ ಅತ್ಯಾಚಾರಗೈದು ಅವನದ್ದೇ ಆದ ತೋಟದ ಮನೆಯಲ್ಲಿ ಆಕೆಯನ್ನು ಬಂಧಿಸಿಟ್ಟು, ಆ ವಿಷಯವನ್ನು ಯಾರಿಗೂ ಬಾಯಿ ಬಿಡದಂತೆ ಬೆದರಿಸುತ್ತಾನೆ. ಅತ್ಯಂತ ಕ್ರೂರಿಯಾಗಿ ವರ್ತಿಸಿ ಆಕೆಯ ನಾಲಗೆ ಕತ್ತರಿಸುತ್ತಾನೆ.

ಆದರೆ ಫಿಲೋಮೆಲಾಳು ತನ್ನ ಕತೆ ಹೇಳುವ  ಒಂದು ವಸ್ತ್ರವನ್ನು ನೇಯ್ದು ಆ ಮೂಲಕ ತನ್ನ ಸಹೋದರಿಗೆ ವಿಷಯವನ್ನು ತಿಳಿಸುತ್ತಾಳೆ. ನೇಯ್ಗೆಯ ಮೂಲಕ ಸಂಕೇತಗಳನ್ನು ಹೆಣೆದು ಸಂದೇಶವನ್ನು ಅಕ್ಕನಿಗೆ ರವಾನಿಸುತ್ತಾಳೆ.

ಗಂಡನ ದುಷ್ಟತನದ ಅರಿವು ಪ್ರೊಕ್ನೆಗೆ ತಿಳಿದರೂ ಏನೂ ತಿಳಿಯದವಳಂತೆ ಇದ್ದು ತಂಗಿಯನ್ನು ಯಾವಾಗ ಬಿಡುಗಡೆ ಮಾಡಬಹುದು ಎಂಬ ಕನವರಿಕೆಯಲ್ಲಿ ಇದ್ದುಬಿಡುತ್ತಾಳೆ. ಅಷ್ಟರಲ್ಲಿ ಅವರ ಪದ್ಧತಿಯಂತೆ ಮಹಿಳೆಯರೇ ಆಚರಿಸುವ ಒಂದು ಹಬ್ಬ ಬರುತ್ತದೆ. ಈ ಸಂದರ್ಭವನ್ನು ಬಳಸಿಕೊಂಡು, ಪ್ರೊಕ್ನೆಯು ದೇವರು ಮೈ ಮೇಲೆ ಬಂದಂತೆ ನಟಿಸಿ ತೋಟದ ಮನೆಗೆ ನುಗ್ಗಿ ಅಲ್ಲಿ ಬಂಧಿಯಾಗಿದ್ದ ತನ್ನ ತಂಗಿಯನ್ನು ಬಿಡಿಸುತ್ತಾಳೆ.  ಅವಳಿಗೂ ಎಲೆಗಳ ಉಡುಗೆಯನ್ನು ಹಾಕಿಸಿ ಹೇಗೋ ಪಾರು ಮಾಡಿ ಅರಮನೆಗೆ ಕರೆದುಕೊಂಡು ಬರುತ್ತಾಳೆ.

ಫಿಲೋಮೆಲಾಳು ತನ್ನ ಕತೆ ಹೇಳುವ  ಒಂದು ವಸ್ತ್ರವನ್ನು ನೇಯ್ದು ಆ ಮೂಲಕ ತನ್ನ ಸಹೋದರಿಗೆ ವಿಷಯವನ್ನು ತಿಳಿಸುತ್ತಾಳೆ. ನೇಯ್ಗೆಯ ಮೂಲಕ ಸಂಕೇತಗಳನ್ನು ಹೆಣೆದು ಸಂದೇಶವನ್ನು ಅಕ್ಕನಿಗೆ ರವಾನಿಸುತ್ತಾಳೆ.

ನಂತರದಲ್ಲಿ ಅಕ್ಕತಂಗಿಯರು ಟೆರಿಯಸ್ ನ ವಿರುದ್ಧ ಸೇಡು ತಿರಿಸಿಕೊಳ್ಳಲು ನಿರ್ಧರಿಸಿ ಸಮಯಸಾಧಿಸಿ ಟೆರಿಯಸ್ ಗೆ ಭರ್ಜರಿ ಭೋಜನ ಮಾಡಿಸುತ್ತಾರೆ. ಭೋಜನಾನಂತರ ಟೆರಿಯಸ್ ತನ್ನ ಮಗನ ಕುರಿತು ವಿಚಾರಿಸಿದಾಗ, ಪ್ರೊಕ್ನೆ, ‘ಅವನು ನಿನ್ನ ಹೊಟ್ಟೆಯೊಳಗೆ ಸಮಾಧಿಯಾಗಿದ್ದಾನೆ’ ಎಂದು ಆಕ್ರೋಶದಿಂದ ಹೇಳುತ್ತಾಳೆ. ಮಗನ ಹತ್ಯೆಯಾಗಿದೆ ಎಂದು ತಿಳಿಯುತ್ತಲೇ ಟೆರಿಯಸ್ ಕೂಡ ಹೆಂಡತಿಯ ಮೇಲೆ ಆಕ್ರಮಣ ಮಾಡುಲು ಕೈಎತ್ತುತ್ತಾನೆ. ಅಷ್ಟರಲ್ಲಿ ಅವನ ಮೃತ ಮಗನ ತಲೆಯನ್ನು ಹಿಡಿದು ಆಯುಧದ ಜೊತೆಗೆ ಫಿಲೊಮೆಲಾ ಬರುತ್ತಾಳೆ. ಪ್ರೊಕ್ನೆಯೂ ಆಯುಧಹಿಡಿದು ಪ್ರತಿಆಕ್ರಮಣಕ್ಕೆ ಮುಂದಾಗುತ್ತಾಳೆ. ಆ ಸಂದರ್ಭದಲ್ಲಿ ಟೆರಿಯಸ್ ದೈತ್ಯ ಪಕ್ಷಿಯಾಗಿ ಪರಿವರ್ತನೆಯಾಗುತ್ತಾನೆ. ಪ್ರೊಕ್ನೆ ಸ್ವಾಲೋ ಪಕ್ಷಿಯಾಗಿ, ಫಿಲೊಮೆಲಾ ನೈಟಿಂಗೇಲ್ ಪಕ್ಷಿಯಾಗಿ ಪರಿವರ್ತನೆಯಾಗುತ್ತಾಳೆ. ಟೆರಿಯಸ್ ಪಕ್ಷಿರೂಪಿಯಾಗಿ ಅಕ್ಕತಂಗಿಯರನ್ನು ಸಂಹಾರ ಮಾಡಲು  ಹುಡುಕುತ್ತಾ ಅಲೆದಾಡುತ್ತಾನೆ. ಫಿಲೊಮೆಲಾ ನೈಟಿಂಗೇಲ್ ಹಕ್ಕಿಯಾಗಿ ಇಂದಿಗೂ ಯೂರೋಪಿನ ಕಾವ್ಯ ಜಗತ್ತಿನ ಮುಖ್ಯ ವಸ್ತು.

ಈ ಕತೆಯನ್ನು ಅರಗಿಸಿಕೊಳ್ಳುತ್ತಿರುವಾಗ ಸಹಜವಾಗಿ ನೆನಪಿಗೆ ಬರುವುದು ಮದಲಿಂಗ ಕಣಿವೆ ಎಂಬ ಕಥನಗೀತೆ. ಇದೂ ಕೂಡ ಅಕ್ಕ ತಂಗಿಯರ ಕತೆಯಾಗಿದೆ. ಈ ಕತೆಯಲ್ಲಿ, ಒಂದು ಕುಟುಂಬದಲ್ಲಿ ಅಕ್ಕ -ತಂಗಿ ತಾಯಿ ವಾಸವಿರುತ್ತಾರೆ. ಮದಲಿಂಗ ಅಕ್ಕನನ್ನು ಮದುವೆಯಾಗುತ್ತಾನೆ. ಹೆಂಡತಿಯನ್ನು ತನ್ನ ಮನೆತುಂಬಿಸಲು ಕರೆದುಕೊಂಡು ಹೋಗುವಾಗ ನಾದಿನಿಯೂ ಜೊತೆಗೆ ಹೊರಡುತ್ತಾಳೆ. ಅವರ ಪ್ರಯಾಣ ಚಿಕ್ಕನಾಯಕನ ಹಳ್ಳಿಯಿಂದ ತುಮಕೂರಿನಕಡೆಗೆ ಸಾಗುತ್ತಿರುತ್ತದೆ. ಅಲ್ಲಿ ಎದುರಾಗುವುದೇ ಒಂದು ಕಣಿವೆ. ಇಡೀ ದುರಂತ ಕಥಾನಕ ಘಟಿಸುವುದೇ ಆ ಜಾಗದಲ್ಲಿ. ಕಣಿವೆಯಲ್ಲಿ ದುರಂತವು ಘಟಿಸುವುದರಿಂದ ಈ ಕಾವ್ಯಕ್ಕೆ ‘ಮದಲಿಂಗನ ಕಣಿವೆ’ ಎಂಬ ಹೆಸರು ಬಂದಿದೆ. ಮದಲಿಂಗ ಎಂಬುದು ಅವನದೇ ಹೆಸರೋ ಅಥವಾ ಅನ್ವರ್ಥವಾಗಿ ಅವನಿಗೆ ಇಟ್ಟ ಹೆಸರೋ ಎಂಬುದು ಮುಖ್ಯವಲ್ಲ. ಆದರೆ ಮದುವಣಿಗನೊಬ್ಬನ ದುರಂತ ಕಥೆ ಇದು ಎನ್ನಬಹುದು.

ಚಿಕ್ಕನಾಯಕನಹಳ್ಳಿಯನು
ಬಿಟ್ಟು ತುಮಕೂರ ಕಡೆ ಬರುವ ದಾರಿ ಅದೊಂದು
ಕಣಿವೆಯಲಿ ಬರುತಿಹುದು ಅದನು ಮದಲಿಂಗನ ಕಣಿವೆಯೆನ್ನುವರು
ಮದಲಿಂಗ ಎನ್ನುವುದು ಇಟ್ಟ ಹೆಸರೋ ಇಲ್ಲ
ಮದುವಣಿಗೆನ್ನುವುದು ಮದಲಿಂಗನಾಯಿತೋ
ನಾನರಿಯೆ…. ಮದಲಿಂಗ ಮದುವೆಯಾದನು

-ಎಂದು ಮಾಸ್ತಿಯವರು ತಮ್ಮ ಕಥನಗೀತೆಯಲ್ಲಿ ಹೇಳುತ್ತಾರೆ. ಮದಲಿಂಗ ಈ ಪದಕ್ಕೆ ಮದುಮಣಿಗ, ಮದುಮಗ, ವರ, ಮದುವಳಿಗ, ಮದುವೆಯ ಹುಡುಗ, ಮದನಿಂಗ ಎಂಬರ್ಥವಿದೆ. (ಮದಲಿಂಗ ಶಾಸ್ತ್ರ ಎಂಬುದು ವರಪೂಜೆಯ ಒಂದು ಭಾಗವೂ ಹೌದು.) ಪ್ರಯಾಣದಲ್ಲಿ ಭಾವನೊಂದಿಗೆ ನಾದಿನಿ ಮಾತನಾಡುವಾಗ,’ ನನಗೆ ಅಕ್ಕನನ್ನು ಬಿಟ್ಟಿರಲು ಕಷ್ಟ’ ಎಂದು ಹೇಳುತ್ತಾಳೆ.

ಅವರ ಪ್ರಯಾಣ ಚಿಕ್ಕನಾಯಕನ ಹಳ್ಳಿಯಿಂದ ತುಮಕೂರಿನ ಕಡೆಗೆ ಸಾಗುತ್ತಿರುತ್ತದೆ. ಅಲ್ಲಿ ಎದುರಾಗುವುದೇ ಒಂದು ಕಣಿವೆ. ಆ ಕಣಿವೆಯಲ್ಲಿ ದುರಂತವು ಘಟಿಸುವುದರಿಂದ ಈ ಕಾವ್ಯಕ್ಕೆ ‘ಮದಲಿಂಗನ ಕಣಿವೆ’ ಎಂಬ ಹೆಸರು ಬಂದಿದೆ.

 

‘ಮದುವೆಯಾದ ಮೇಲೆ ನೀನೂ ಗಂಡನ ಮನೆಗೆ ಹೋಗಬೇಕು’ ಎಂದು ತಾಯಿ ಎಚ್ಚರಿಸುತ್ತಾಳೆ. ಹಾಗೆ ಕುಶಲೋಪರಿ ಮುಂದುವರೆಸುವಾಗ, ‘ ಮದುವೆಗೆ ಮೊದಲು ಎಲ್ಲಾ ಹೆಣ್ಣು ಮಕ್ಕಳು ಹೀಗೆ ಮಾತನಾಡುವುದು.ನಂತರ ಯಾರಾದರೂ ಸೂಕ್ತ ವರ ಬಂದರೆ ಯಾರ ಬಗ್ಗೆಯೂ ಯೋಚಿಸದೆ ಹಿಂದು-ಮುಂದು ನೋಡದೆ ಮದುವೆ ಮಾಡಿಕೊಂಡು ಹೋಗುತ್ತಾರೆ’ ಎಂದು ಭಾವ ಕಿಚಾಯಿಸುತ್ತಾನೆ. ಅಕ್ಕನ ಮದುವೆಯಾಗಿ ಮೂರೇ ದಿನಕ್ಕೆ ಭಾವ ಇಷ್ಟು ಸಲುಗೆಯ ಮಾತನಾಡುತ್ತಾನೆ ಎಂದು ನಾದಿನಿಯು ಭಾವಿಸುತ್ತಿರುವಾಗಲೆ, ‘ನಿನಗೆ ಅಕ್ಕನನ್ನು ಬಿಟ್ಟಿರಲು ಸಾಧ್ಯವಾಗದಿದ್ದರೆ ನಾನೇ ಕರೆದುಕೊಂಡು ಹೋಗುವೆ. ನೀವಿಬ್ಬರೂ ಒಟ್ಟಿಗೆ ಇರಬಹುದು’ ಎನ್ನುತ್ತಾನೆ.

ಪರಿಸ್ಥಿತಿ ಕೈ ಮೀರುತ್ತಿದೆ ಎಂಬ ಸುಳಿವು ಅತ್ತೆಗೆ ಗೊತ್ತಾಗುತ್ತದೆ. ಆದರೆ ತಮಾಷೆಯಾಗಿಯೇ ನಿಭಾಯಿಸಲು ಯತ್ನಿಸುತ್ತ, ಅಳಿಯನಿಗೆ, ‘ಚಿಕ್ಕ ಮಗಳನ್ನೂ ಮದುವೆಯಾಗಬೇಕೆಂದರೆ ನನ್ನ ಷರತ್ತನ್ನು ಪಾಲಿಸಬೇಕು’ ಎಂದು ನುಡಿಯುತ್ತಾಳೆ. ‘ಚಿಕ್ಕನಾಯಕನಹಳ್ಳಿಯ ಕಡಿದಾದ ಬೆಟ್ಟವನ್ನು ಹಿಂದು ಮುಂದಾಗಿ ಹತ್ತುವುದು’ ಆಕೆ ವಿಧಿಸಿದ ಷರತ್ತು. ‘ಈ ಕಡಿದಾದ ಬೆಟ್ಟವನ್ನು ಹಿಂದು ಮುಂದಾಗಿ ಹತ್ತಿ ಇಳಿಯುವೆ, ಆದರೆ ಹಾಗೆ ಇಳಿಯುವಾಗ ನಾದಿನಿ ನನಗೆ ನೀರು ಕೊಡಬೇಕು ಎಂದು ಹೇಳುವ ಮದಲಿಂಗ, ಅತ್ತೆ ವಿಧಿಸಿದ ಷರತ್ತನ್ನು ಒಪ್ಪಿಕೊಳ್ಳುತ್ತಾನೆ. ಈ ಷರತ್ತಿಗೆ ಎಲ್ಲರೂ ಒಪ್ಪುತ್ತಾರೆ.

ಮದಲಿಂಗ ನಾದಿನಿಯ ಮೇಲಿನ ಆಸೆಯಿಂದ ಭರಭರನೆ ಹಿಮ್ಮುಖವಾಗಿ ಬೆಟ್ಟ ಹತ್ತಲು ಪ್ರಾರಂಭಿಸುತ್ತಾನೆ. ಕೆಳಗೆ ಇರುವ ತಾಯಿ ಮಕ್ಕಳಿಗೆ ಆ ದೃಶ್ಯವನ್ನು ನೋಡಿಯೇ ಮರುಕವುಂಟಾಗುತ್ತದೆ. ಮೂವರು ಬೇಗ ಬೇಗ ಬೆಟ್ಟದ ಇನ್ನೊಂದು ತುದಿಗೆ ಹೋಗುತ್ತಾರೆ. ಭಾವನೂ ಇಳಿಯುತ್ತಾನೆ. ಹಾಕಿದ ಷರತ್ತನ್ನು ನೆರವೇರಿಸಿಕೊಳ್ಳುತ್ತಿದ್ದೇನೆ ಎನ್ನುವ ಉತ್ಸಾಹದಲ್ಲಿ, ಬೆಟ್ಟವೇರಿ ಇಳಿದು ಸುಸ್ತಾಗಿದ್ದ ಭಾವನಿಗೆ ನಾದಿನಿಯು ಚೆಂಬಲ್ಲಿ ನೀರು ಹಾಕಲು ಮುಂದಾಗುತ್ತಾಳೆ. ಆದರೆ ಆತುರದಿಂದ ಚೆಂಬು ಆಕೆಯ ಕೈಯಿಂದ ಜಾರಿ ನೀರೆಲ್ಲಾ ಚೆಲ್ಲಿ ಹೋಗುತ್ತದೆ. ಮದಲಿಂಗನಿಗೆ ತುಂಬಾ ಸುಸ್ತಾಗಿರುತ್ತದೆ, ಗಂಟಲು ಒಣಗಿರುತ್ತದೆ. ಆದರೆ ಕುಡಿಯಲು ನೀರಿಲ್ಲದೆ ಅವನು ಸಾಯುತ್ತಾನೆ. ಹೀಗೆ ಮದಲಿಂಗ ಅಲ್ಲಿ ಅಸು ನೀಗಿದ್ದರಿಂದ, ಆ ಪ್ರದೇಶಕ್ಕೆ ‘ಮದಲಿಂಗನ ಕಣಿವೆ’ ಎಂಬ ಹೆಸರು ಬಂದಿದೆ.

ದುರಂತ ಕತೆ ಇಲ್ಲಿಗೇ ನಿಲ್ಲುವುದಿಲ್ಲ.

ತಂಗಿಯ ಕೈಯಿಂದ ನೀರು ಚೆಲ್ಲಿ ಹೋದ ಮೇಲೆ, ಗಂಡನಿಗಾಗಿ ನೀರು ತರ ಅತ್ತ ಹೋದ ಹೆಂಡತಿ ಗಂಡ ಸತ್ತ ಸದ್ದು ಕೇಳಿಸಿ, ಅಲ್ಲಿಯೇ ಇದ್ದ ಮಡುವಿಗೆ ಬಿದ್ದು ಸಾಯುತ್ತಾಳೆ. ಇದು ‘ಮದನಮಡು’ವಾಗಿದೆ. ನಾದಿನಿ ಕೂಡ ಸಾಯುತ್ತಾಳೆ. ಆ ಸ್ಥಳವೇ  ‘ಜಾಣೆಹಾರ್’ ಆಗಿದೆ. ಅಳಿಯ ಮತ್ತಿಬ್ಬರು ಹೆಣ್ಣು ಮಕ್ಕಳು ಬಿದ್ದು ಸತ್ತಿದ್ದರಿಂದ, ಆ ದುಃಖ ಸಹಿಸಲಾಗದೇ ಅತ್ತೆಯು ಅಲ್ಲೆ ಅಡ್ಡಾಡಿ ಸಾಯುತ್ತಾಳೆ. ಅತ್ತೆ ಸತ್ತ ಜಾಗ ‘ಹತ್ಯಾಳೂ’ ಆಗಿದೆ. ಆಕೆ ಸಮಾಧಿಯಾದ ಜಾಗವನ್ನು ‘ಅಜ್ಜಿಗುಡ್ಡೆ’ ಎಂದು ಕರೆಯುತ್ತಾರೆ. ಮಾಸ್ತಿಯವರು ಈ ದುರಂತವನ್ನು ತಮ್ಮ ಕಥನಗೀತೆಯಲ್ಲಿ:

ಮದಲಿಂಗ ಅವಳು ಬಹ ಮುನ್ನವೇ ಮಡಿದನಾ ಕಲ್ಲಿನಲಿ
ಇನ್ನಾದುದನು ಹೇಳಲೇಕೆ? ಬೆಳೆಯುವ ಪೈರು
ಭಾದ್ರಪದದೊಳೆ ಸುಟ್ಟು ಹೋಯಿತು

-ಎಂದು ವಿಷಾದೊಂದಿಗೆ ಮುಕ್ತಾಯಗೊಳಿಸುತ್ತಾರೆ.

ಮದಲಿಂಗನ ಈ ಕತೆಗೂ, ಗ್ರೀಕ್ ನ ಟೆರಿಯಸ್ ಕತೆಗೂ ಸಾಮ್ಯತೆಗಳು ಅನೇಕ ಇವೆ.
ಗ್ರೀಕ್ ಕಥನ ಕಾವ್ಯದಲ್ಲಿ, ಟೆರಿಯಸ್ ಕುತಂತ್ರದಿಂದ ನಾದಿನಿಯನ್ನು ಮದುವೆಯಾಗ ಬಯಸುತ್ತಾನೆ. ಅವನು ನಾದಿನಿಯ ತಂದೆಯ ಬಳಿ ನೇರವಾಗಿ ಹೋಗಿ ಅವನ ಅನುಮತಿಯನ್ನು ಪಡೆದು ನಾದಿನಿಯನ್ನು ಕರೆತರುತ್ತಾನೆ. ಆದರೆ ಬಳಿಕ, ಅತ್ಯಾಚಾರ ಮಾಡಿ ಬಂಧಿಸಿಟ್ಟು ಹೆಂಡತಿಗೆ ವಿಚಾರ ತಿಳಿಸದೇ, ಅಕ್ಕತಂಗಿಯರು ಪರಸ್ಪರ ಭೇಟಿಯಾಗದಂತೆ ಪಿತೂರಿ ಮಾಡುತ್ತಾನೆ. ಆದರೆ ‘ಮದಲಿಂಗನ ಕಣಿವೆ’ಯಲ್ಲಿ ನಾಯಕ ಮದಲಿಂಗ ಮದುವೆಯ ಸಂದರ್ಭದಲ್ಲಿಯೇ ನಾದಿನಿಯ ಮೇಲೆ ಮನಸ್ಸಾಗಿರುವ ವಿಷಯ ಬಹಿರಂಗಪಡಿಸುತ್ತಾನೆ. ತಾನು ಇಬ್ಬರನ್ನೂ ಸಾಕಬಲ್ಲೆ, ಹಾಗೂ ಅಷ್ಟು ಪರಾಕ್ರಮಿ ಎಂದು ಸಾಧಿಸಿ ತೋರಿಸುವ ಉದ್ದೇಶದಿಂದ ಷರತ್ತನ್ನು ಒಪ್ಪಿಕೊಂಡು ದುರ್ಮರಣ ಹೊಂದುತ್ತಾನೆ.

ಮದಲಿಂಗನ ಹೆಂಡತಿ ಇಲ್ಲಿ ಅಸಾಹಯಕಳಾದರೆ, ಪ್ರೊಕ್ನೆ ಅಕ್ಕನಾಗಿ, ತಂಗಿಗೆ ಆದ ಅನ್ಯಾಯದ ವಿರುದ್ಧ ಪ್ರತಿಭಟಿಸುತ್ತಾಳೆ. ಸಕ್ರಿಯವಾಗಿರುವ ಚುರುಕುಮತಿ ಹೆಂಗಸಿನ ಪಾತ್ರವಾಗಿ ಬಿಂಬಿಸಲ್ಪಟ್ಟಿದೆ.  ಟೆರಿಯಸ್ ಕತೆಯಲ್ಲಿ ನಾದಿನಿ ಫಿಲೊಮೆಲಾ ಅನ್ಯಾಯವನ್ನು ಸಂಕೇತವುಳ್ಳ ವಸ್ತ್ರನೇಯುವ ಮೂಲಕ ಭಾವನ ಕ್ರೌರ್ಯವನ್ನು ಅಕ್ಕನಿಗೆ ಅರ್ಥಮಾಡಿಸುತ್ತಾಳೆ. ಆದರೆ ಮದಲಿಂಗನ ನಾದಿನಿ ಭಾವನ ಮೇಲೆ ಮೋಹಗೊಳ್ಳುವ ಹುಡುಗಿಯಾಗಿದ್ದಾಳೆ. ಸಂದರ್ಭವನ್ನು ಗ್ರಹಿಸಲು ವಿಫಲಗೊಳ್ಳುವ ಪಾತ್ರವಾಗಿದ್ದಾಳೆ.

ಟೆರಿಯಸ್ ಕತೆಯಲ್ಲಿ ಅವನ ಹೆಂಡತಿಯ ತಂದೆ ಪಾಂಡೆಯನ್ ಗೆ ಪಿತೂರಿಗಳ  ಬಗ್ಗೆ ಏನೂ ತಿಳಿದಿರುವುದಿಲ್ಲ. ಅಳಿಯನನ್ನು ನಂಬಿ ಎರಡನೇ ಮಗಳು ಫಿಲೊಮೆಲಾಳನ್ನು ಕಳುಹಿಸಿಕೊಡುತ್ತಾನೆ. ಆದರೆ ಮದಲಿಂಗನ ಅತ್ತೆಗೆ ಎಲ್ಲ ವಿಚಾರಗಳೂ ತಿಳಿದಿರುತ್ತವೆ. ಆಕೆ ತನ್ನ ಮಗಳ ಸಂಸಾರ ಕಾಪಾಡುವ, ಚಿಕ್ಕ ಮಗಳ ಹುಡುಗಾಟಿಕೆಯನ್ನು ನಿಭಾಯಿಸುವ ಜವಾಬ್ದಾರಿಯುತ ಹೆಂಗಸು. ಅಸಾಧ್ಯ ಪಂಥವನ್ನಿರಿಸಿ, ಹೇಗಾದರೂ ಪರಿಸ್ಥಿತಿ ಸುರಳೀತ ಮಾಡುವ ಉದ್ದೇಶ ಅವಳಿಗೆ ಇದ್ದಿರಬಹುದು. ಅಳಿಯನ ಆಸೆಯನ್ನು ನೇರವಾಗಿ ನಿರಾಕರಿಸಿದರೆ ಇವನಿಂದ ಮತ್ತೆ ಸಮಸ್ಯೆ ಎದುರಾಗಬಹುದು ಎಂಬ ಲೆಕ್ಕಾಚಾರದಿಂದ ಅವಳು ಪಂಥವನ್ನು ಒಡ್ಡುತ್ತಾಳೆ. ಅವನು ಪಂಥ ಸ್ವೀಕರಿಸಿದಾಗ, ಬಿಸಿಲಿನ ಝಳಕ್ಕೆ ಹೆದರಿ ಹಿಂದು ಮುಂದಾಗಿ ಬೆಟ್ಟಹತ್ತುವ ಅಳಿಯನನ್ನು ಮರಳಿ  ಕರೆಯುವ ಪ್ರಯತ್ನ ಮಾಡುತ್ತಾಳೆ, ಆದರೆ ಅದರಿಂದ ಪ್ರಯೋಜನವಾಗುವುದಿಲ್ಲ. ದುರಂತವು ಗ್ರೀಕ್ ಹಿನ್ನೆಲೆಯಲ್ಲಿ ಕ್ರೂರತೆಯ ಕಡೆಗೆ ಹೊರಳಿ ಅವರು ಸ್ವಾಲೋ, ನೈಟಿಂಗೇಲ್ ಪಕ್ಷಿರೂಪಿಗಳಾದರೆ, ಮದಲಿಂಗನ ಕಣಿವೆಯ ಕಥನ ಗೀತೆಯು ದುರಂತ ಸಾವುಗಳ ಮೂಲಕ ಆತ್ಮಹತ್ಯೆಯ ಮೂಲಕ ಕೊನೆಗೊಂಡು ವಿಷಾದ ಛಾಯೆ ಕವಿಯುವಂತಿದೆ.  ಆ ನಾಲ್ಕೂ ಜನರು ಬಿದ್ದ ಸ್ಥಳಗಳು ಮದಲಿಂಗನ ಕಣಿವೆ, ಮದನಮಡು, ಜಾಣೆಹಾರ್, ಹತ್ಯಾಳ್ ,ಅಜ್ಜಿಗುಡ್ಡೆ ಎಂಬ ಹೆಸರುಗಳಾಗಿ ಉಳಿದುಕೊಂಡವು.

ಟೆರಿಯಸ್ನ ಕತೆಯಲ್ಲಿ ಮಗ ಆಹುತಿಯಾಗುತ್ತಾನೆ. ಪಾಂಡೆಯನ್ ಸ್ಥಿತಿ ಏನಾಯಿತು ಎಂಬುದು ತಿಳಿಯುವುದಿಲ್ಲ. ಮಗನನ್ನೇ ಕೊಂದು ಅಡುಗೆ ಮಾಡುವ, ನಾದಿನಿಯ ನಾಲಗೆಯನ್ನೆ ಕತ್ತರಿಸುವ ಕ್ರೌರ್ಯ ಹಿಂಸೆಗಳು ತುಂಬಾ ಬೇಸರ ತರಿಸುತ್ತವೆ. ತ್ರಿಕೋನ ಪ್ರೇಮ ಕತೆಗಳೆರಡೂ ನಾಯಕರ ಹೆಸರಿನಲ್ಲೇ ಪ್ರಾರಂಭವಾಗಿ ದುರಂತದಲ್ಲೆ ಅಂತ್ಯ ಕಾಣುತ್ತವೆ. ಟೆರಿಯಸ್ನ ಕತೆಯಲ್ಲಿ ಅಕ್ಕ ತಂಗಿಯರು ನಾಯಕನ ವಿರುದ್ಧ ದ್ವೇಷ ಹೊಂದಿದ್ದರೆ ಮದಲಿಂಗನ ಕಣಿವೆಯಲ್ಲಿ ಅಕ್ಕ ತಂಗಿಯರಿಗೆ ಭಾವನ ಮೇಲೆ ಪ್ರೀತಿ ಇರುತ್ತದೆ.

ಗ್ರೀಕ್ನ ಪೌರಾಣಿಕ ಕತೆಯೊಂದು ನಮ್ಮ ಜಾನಪದ ಕತೆಗೆ ಹೋಲಿಕೆಯಾಗಿದೆ ಎನ್ನುವುದು ಮನುಷ್ಯರ ಭಾವನಲೋಕದಲ್ಲಿ ಎಷ್ಟೊಂದು ಸಾಮ್ಯತೆಗಳಿವೆ ಎಂಬುದನ್ನು ಗುರುತಿಸುವಂತೆ ಮಾಡುತ್ತದೆ. ಎರಡೂ ಕತೆಗಳಲ್ಲೂ ದುರಂತ ಕತೆ ನಡೆಯುವುದು ಗಂಡು ಮಕ್ಕಳಿಲ್ಲದ ಮನೆಗಳಲ್ಲೇ. ಟೆರಿಯಸ್ನ ಕತೆಯಲ್ಲಿ ಪ್ರತಿಭಟನೆಯ ಧ್ವನಿ ಇದ್ದರೆ, ಮದಲಿಂಗನ ಕಣಿವೆಯಲ್ಲಿ ಅನುಸರಣಿಕೆಯು  ಕಂಡುಬರುತ್ತದೆ.

ದರಾಚೆಗೂ ಇಂದಿಗೂ ನಮ್ಮ ಸಮಾಜ ವ್ಯವಸ್ಥೆಯಲ್ಲಿ ಈ ರೀತಿಯ ಘಟನೆಗಳು ನಡೆಯುತ್ತಲೇ ಇವೆ. ಇಂತಹ ಕಥನ ಕಾವ್ಯಗಳಲ್ಲಿ ಬೋಧನಾ ಗುಣವೂ ಪರೋಕ್ಷವಾಗಿ ಇವೆ ಎಂಬುದನ್ನು ಕಾಣಬಹುದು.