“ಉಳಿಯತ್ತಡ್ಕದ ಮಾರ್ಗ ಕವಲೊಡೆವಲ್ಲಿ ದಂಡು ಪಾಳೆಯಬಿಟ್ಟಿತು. ಅಲ್ಲಿ ಮಾಯಿಲ ಕೋಟೆಯ ಹಳೆಯ ಗೋಡೆಗಳು ನೀಡಿದ್ದುವು. ಅಲ್ಲೊಂದು ಇಲ್ಲೊಂದು ಹಳೆಯ ಬುರುಜು ಇತ್ತು. ಸುತ್ತಲೂ ಕರಡು ಬೆಳೆದ ಗುಡ್ಡಗಳು. ಅಲ್ಲಲ್ಲಿ ಕುರುಚಲು ಕಾಡುಗಳು. ಈ ಎಡವಟ್ಟಾದ ಸ್ಥಳದಲ್ಲಿ ಸುಬ್ಬಯ್ಯನು ವ್ಯೂಹವನ್ನು ರಚಿಸಿ ಎಲ್ಲರಿಗೂ ಅವರವರ ಕರ್ತವ್ಯವನ್ನು ಹೇಳಿಕೊಟ್ಟನು. ಸ್ವಲ್ಪ ಹೊತ್ತಿನಲ್ಲಿ ಕರಡು ಬೆಳೆದ ಆ ಗುಡ್ಡದಲ್ಲಿ ಯಾವ ಸುಳಿವೂ ಇಲ್ಲ. ಸುದ್ದಿಯೂ ಇಲ್ಲ. ಎಲ್ಲವೂ ಇದ್ದಂತೆಯೇ ಇತ್ತು. ಮಧ್ಯಾಹ್ನದ ಬಿಸಿಲಲ್ಲಿ ಎಲ್ಲವೂ ರಣಗುಟ್ಟುತ್ತಿತ್ತು.”
ಡಾ. ಬಿ. ಜನಾರ್ದನ ಭಟ್ ಸಾದರಪಡಿಸುತ್ತಿರುವ ‘ಓಬೀರಾಯನ ಕಾಲದ ಕತೆಗಳು’ ಸರಣಿಯ ಹತ್ತನೆಯ ಕಥಾನಕ ಈ ಭಾನುವಾರದ ನಿಮ್ಮ ಓದಿಗಾಗಿ.

 

ಕೂಡಲು ಶಾನಭಾಗರ ಮನೆಯೆಂದರೆ ನಾಲ್ಕೂರಿಗೇ ಹೆಸರಾದುದು. ಕುಂಬಳೆ ಅರಸರ ಕಾಲದಲ್ಲಿ ಕುಂಬಳೆ ಅರಮನೆ, ಈಚಲಂಪಾಡಿ ಬೊಂಬ್ರಾಣ ಗುತ್ತುಗಳು, ಕೂಡಲು ಶಾನಭಾಗರು, ಕುಂಬಳೆ ನಾಯಕರು, ಇವಿಷ್ಟು ಮನೆತನದವರು ಕಲೆತರೆಂದರೆ ಕುಂಬಳೆ ಸೀಮೆಯ ಮೂರು ಸಾವಿರ ಆಳು ಸೇರಿದ ಲೆಕ್ಕ. ಸಂಗೀತ, ಚಿತ್ರ, ಯಕ್ಷಗಾನಾದಿ ಕಲೆಗಳ ಅಭಿಮಾನಿಗಳಾಗಿ ತಲಾಂತರಗಳಿಂದ ಬಾಳಿಬಂದ ತಕ್ಕಿನ ಮನೆತನವೇ ಈ ಕೂಡಲು ಶಾನಭಾಗರದು.

ಹದಿನೆಂಟನೆಯ ಶತಕದ ಸುಮಾರು ಅಂತ್ಯಕ್ಕೆ ಕೂಡಲು ಮನೆಯಲ್ಲಿ ಸುಬ್ಬಯ್ಯ ಶಾನಭಾಗನ ಕಾರುಭಾರಿನ ಕಾಲ. ಕಾಸರಗೋಡು, ಮೊಗ್ರಾಲ, ಪಾಡಿ, ಅಂಗಡಿಮೊಗರು ಎಂಬ ನಾಲ್ಕು ಮಾಗಣೆಗಳ ಶಾನುಭಾಗನವನು. ಶಾನಭೋಗಿಯ ಭರಮಿನೊಂದಿಗೆ ಮನೆತನದ ಘನತೆಯೂ ಸೇರಿ ಊರಿಗೆ ಅಂಥವನು ಎನಿಸಿದ್ದನು. ಜಾತ್ರೆ, ನೇಮ, ಅಂಕ, ಅಯನ, ಪಂಚಾಯತಿಕೆ, ಕೂಟಗಳಲ್ಲಿ ಅವನಿಗೆ ಮುಂದು ವೀಳ್ಯ. ಶಾನಭೋಗಿಯಲ್ಲಂತೂ ಅವನಿಗೆ ಸರಿಯೆನಿಸಿದವರಿಲ್ಲ. ಹನ್ನೆರಡು ಕೊಡಗಳ ತುಂಬ ಇಕ್ಕೇರಿ ಹೊನ್ನುಗಳನ್ನು ತುಂಬಿಸಿ ಪೆಗದಿಯನ್ನು ನಗರ ಸಂಸ್ಥಾನಕ್ಕೆ ‘ಇರ್ಸಾಲ್’ ಮಾಡುತ್ತಿದ್ದನಂತೆ. ಅವನ ಉರ್ಕನ್ನು ಕಂಡು ಮೆಚ್ಚಿದ ಇಕ್ಕೇರಿಯ ನಾಯಕನು ಅವನಿಗೆ ಹಲವು ಭೋಗಪಟ್ಟೆಗಳನ್ನೂ, ‘ಕೊಲ್ಲುಕೊಲೆ’ ವಿಚಾರಣೆಯ ಅಧಿಕಾರವನ್ನೂ ಕೊಟ್ಟಿದ್ದನಂತೆ. ಹೀಗೆ ಜಕ್ಕಜವ್ವನದಲ್ಲೇ ಅವನ ವರ್ಚಸ್ಸು ಹರಡಿತು. ಮನೆತನದ ಕೀರ್ತಿಯ ಕಳೆಯೇರಿತು.

ಕಾಲಗತಿಯಲ್ಲಿ ಅರಸುತನವು ಅದಲು ಬದಲಾಯಿತು. ಇಕ್ಕೇರಿ ನಾಯಕರು ಅಳಿದು, ಹೈದರ್ ಟಿಪ್ಪು ಸುಲ್ತಾನರು ಬಿದ್ದು, ತುಳುನಾಡು ಕುಂಪಣಿಯವರ ವಶವಾಯಿತು. ಸರಕಾರವಿನ್ನೂ ನೆಲೆಗೊಂಡಿರಲಿಲ್ಲ. ತುಂಡರಸರು ಅಲ್ಲಲ್ಲಿ ದಂಗೆಯೆಬ್ಬಿಸುತ್ತಿದ್ದರು. ಪುಂಡರು ಕೊಳ್ಳೆಯಿಟ್ಟು ಸೂರೆ ಮಾಡುತ್ತಿದ್ದರು. ಕೊಡಗಿನಿಂದ ‘ಕಲ್ಯಾಣಪ್ಪನ ಕಾಟಕಾಯಿ’ ಆಗಾಗ ಇಳಿದುಬಂದು ಹಾವಳಿಮಾಡುತ್ತಿತ್ತು. ಅದೇ ಸಮಯಕ್ಕೆ ಕಂಬಳೆಕಡೆಯ ಸುಬ್ರಾಯನೆಂಬವನು (ಚಿರಂಜೀವಿ ಸುಬ್ರಾಯ ಎಂಬುದು ರೂಢಿಯ ಹೆಸರು.) ಕೆಲವು ಪುಂಡರನ್ನು ಕಟ್ಟಿಕೊಂಡು, ಅಲ್ಲಲ್ಲಿ ಪುಂಡೆಬ್ಬಿಸುತ್ತ ಕಲ್ಯಾಣಪ್ಪನನ್ನು ಕೂಡಿಕೊಂಡನು. ಕಲ್ಯಾಣಪ್ಪನು ಅವನನ್ನು ಕಂಬಳೆ ಸೀಮೆಯ ಕಡೆಗೆ ಕಳುಹಿಸಿಕೊಟ್ಟನು. ಕಲ್ಯಾಣಪ್ಪನ ಬೆಂಬಲದಿಂದ ಕೊಂಬು ಬಂದಂತಾದ ಸುಬ್ರಾಯನು ಪುಂಡರ ಪಡೆಯನ್ನು ಕೂಡಿಕೊಂಡು, ಸೂರೆ ಸುಲಿಗೆ ಮಾಡುತ್ತ, ಮನೆ ಮಾರುಗಳನ್ನು ಸುಟ್ಟು, ಹಡಲಿಟ್ಟು ಕೊಳ್ಳಿಭೂತದಂತೆ ಊರೂರು ತಿರುಗುತ್ತಿದ್ದನು.

ಸುಬ್ರಾಯನ ದಂಡು ಕಾಸರಗೋಡಿಗೆ ಬರುತ್ತದೆಂಬ ಸುದ್ದಿ ಕಾಡ್ಗಿಚ್ಚಿನಂತೆ ಹರಡಿತು. ಮನೆಮನೆಯಲ್ಲಿ – ಚಿರಂಜೀವಿ ಸುಬ್ರಾಯನ ದಂಡು ಬಂತಯ್ಯೋ ದಂಡು ಎಂಬ ಗೋಳೆದ್ದಿತು. ಧನವಂತರು ನಗನಾಣ್ಯಗಳನ್ನು ಬಚ್ಚಿಟ್ಟು, ಜೀವವನ್ನು ಕೈಯಲ್ಲಿ ಹಿಡಿದುಕೊಂಡು ಕಾದು ಕುಳಿತರು. ಹೆಂಗಸರು ಮಕ್ಕಳು ಮುಂಡಿಕೆಯ ಕಾಡುಗಳಲ್ಲಿ ಅವಿತುಕೊಂಡರು. ಕಾಡು ಹತ್ತಿರವಾಗಿದ್ದ ಮುದುಕರು ಈ ಗಡಿಬಿಡಿಯಲ್ಲಿ ಹೊರಡಬೇಕಾಯಿತಲ್ಲ ಎಂದು ಕಳವಳಿಸುತ್ತಿದ್ದರು. ಎದೆಗಾರರು ಕೆಲವರು ಗುಂಪುಗುಂಪಾಗಿ ಸೇರಿ ಕತ್ತಿ ದೊಣ್ಣೆ ಕೊಡಲಿಗಳನ್ನು ಹಿಡಿದುಕೊಂಡು ಅಲೆಯುತ್ತಿದ್ದರು. ಮನೆಮಾರಿನ ಹಂಗಿಲ್ಲದ ಉಂಡಾಡಿಗಳು! ಹತ್ತರ ಸಾವು ಮದುವೆಗೆ ಸಮಾನವೆಂಬ ಭಾವನೆಯಿಂದ ತಮಾಷೆ ನೋಡುವ ಆತುರದಲ್ಲಿದ್ದರು.

ಊರಿಗೆ ಬಂದ ಮಾರಿಯನ್ನು ಹೇಗೆ ನಿವಾರಿಸುವುದೆಂದು ಯೋಚಿಸುತ್ತ ಸುಬ್ಬಯ್ಯ ಶಾನಭಾಗನು ತೂಗುಮಂಚದ ಮೇಲೆ ಕುಳಿತಿದ್ದನು. ಮಂಚವು ಕಿಂರಿ ಕಿಂರೀ ಎಂದು ತೂಗಾಡುತ್ತಿತ್ತು. ಅದರೊಡನೆ ಅವನ ಮನಸ್ಸೂ ಯೋಚನೆಗೆ ಸಿಲುಕಿ ಹಿಂದಕ್ಕೂ ಮುಂದಕ್ಕೂ ಓಲಾಡುತ್ತಿತ್ತು. ಸುಬ್ಬಯ್ಯನಿಗೀಗ ಇಳಿವಯಸ್ಸು. ಎಣ್ಣೆ ಕಪ್ಪಿನ ಗುಂಡಗಿನ ದೇಹವು ತುಂಬಿ ಹೊಳೆಯುತ್ತಿತ್ತು. ಉಟ್ಟ ಸರಪಳಿ ಅಂಚಿನ ಧೋತ್ರ, ತೊಟ್ಟ ಚಿನ್ನದ ನೇವಳ, ಹೆಗಲ ಮೇಲಿನ ಪಾವುಡ ಒಯಿನಾಗಿ ಒಪ್ಪುತ್ತಿತ್ತು. ಮುಖದಲ್ಲಿ ಗಾಂಭೀರ್ಯವು ಎದ್ದು ಕಾಣುತ್ತಿತ್ತು.
ತೂಗುತ್ತಿದ್ದ ಮಂಚವನ್ನು ನಿಲ್ಲಿಸಿ, ಕೆಳಗಿಳಿದು, ತಲೆಗೊಂದು ಪಟ್ಟೆ ಸೆಲ್ಲೆಯನ್ನು ಸುತ್ತಿಕೊಂಡು, ಗೋಡೆಗೆ ಒರಗಿಸಿದ್ದ ಬೆಳ್ಳಿಕಟ್ಟಿನ ನಾಗಬೆತ್ತವನ್ನು ಹಿಡಿದುಕೊಂಡು, ಹೊರಗಿಳಿದು ಬಯಲಿನತ್ತ ನಡೆದನು. ಸುಗ್ಗಿಬೆಳೆ ತುಂಬಿ ನಳಿನಳಿಸುತ್ತಿದ್ದ ಆ ಬಯಲು ಪ್ರಕೃತಿದೇವಿಯುಟ್ಟ ಹಸುರ ಸೀರೆಯಂತೆ ಶೋಭಿಸುತ್ತಿತ್ತು. ಮಾರುದ್ದ ಏರಿದ್ದ ನೇಸರ ಜಳಕ್ಕೆ ಕಿರುಕಾಲುವೆಗಳಲ್ಲಿ ಹರಿಯುತ್ತಿದ್ದ ನೀರು ಬೆಳ್ಳಿಯ ಜರಿಯಂತೆ ಮಿರುಗುತ್ತಿತ್ತು. ಧನಿಯ ತಲೆಯನ್ನು ಕಾಣುತ್ತಲೆ ಗದ್ದೆಯಲ್ಲಿದ್ದ ಆಳು ಒಕ್ಕಲುಗಳೆಲ್ಲ ಹಿಡಿದ ಕೆಲಸವನ್ನು ಅಲ್ಲಲ್ಲೇ ಬಿಟ್ಟು ಓಡಿಬಂದು ಕೈಮುಗಿದರು. ಸುಬ್ಬಯ್ಯನು ಅವರಲ್ಲಿ ಹಿರಿಯನೊಬ್ಬನನ್ನು ಕರೆದು ಸಲುಗೆಯಿಂದ ಮಾತೆತ್ತಿದನು.

“ಏನು ಓಬಣ್ಣಾ! ಸುಬ್ರಾಯನ ದಂಡು ಬರುತ್ತದಂತಲ್ಲಾ ! ಭಾರಿ ದಂಡಂತೆ!”
“ಹೌದು ಒಡ್ಯಾ! ಭಾರೀ ದಂಡಂತೆ! ಊರೆಲ್ಲ ಸುಟ್ಟುಸೂರೆ ಮಾಡ್ತಾ ಬರ್ತೇತಂತೆ ದಂಡೂ.”
“ಅಯ್ಯೋ! ಹಾಗಾದರೆ ನಾವೇನು ಮಾಡುವ?”
“ನಮಗೇನು ಭಯ ಒಡ್ಯಾ? ಹುಲೀನ ಕೆಣಕೋರಿದ್ದಾರಾ? ಬಾಳೊ ಮಕ್ಕಳು ಕೆಣಕಕಿಲ್ಲ. ಸಾಯೊ ಮಕ್ಕಳು ಕೆಣಕಾವು. ಸತ್ತಾವು.”
“ಅವರನ್ನು ಹುಲಿ ಹಿಡಿಯಲಿ ಅಂತ ನಾವು ಸ್ವಸ್ಥ ಮುಂಡಿಕೆ ಕಾಡಿನಲ್ಲಿ ಅವಿತುಕೊಂಡರಾಯಿತು, ಅಲ್ಲವೋ?”
“ಮುಂಡಿಕೆ ಕಾಡು ಬಳೆ ತೊಟ್ಟ ಹೆಂಗಸರಿಗೆ. ಮೀಸೆ ಹೊತ್ತ ಗಂಡಸರಿಗೆ ಈ ರಟ್ಟೆಗಳು ಬುದ್ದೀ.”
“ಅಂದರೆ ಹೊಡೆದಾಟಕ್ಕೆ ನಿಲ್ತಿಯಾ? ಹುಂ!”
“ನಿಲ್ದೆ ಬಿಟ್ಟೇನೇ? ಈ ದೊಕ್ಕೆ ಒಂದಿದ್ರೆ ನಿಂತೇನು ಒಡ್ಯಾ.”
“ಪೆಟ್ಟು ಗಿಟ್ಟು ಬಿದ್ರೆ?”
“ಪೆಟ್ಟು ಬೀಳ್ಳಿ. ಪ್ರಾಣವೇ ಹೋಗ್ಲಿ. ಆ ಪುಂಡನನ್ನು ಹೆಡೆಮುರಿ ಕಟ್ಟಿ ಒಡೆಯರ ಕಾಲಮೇಲೆ ಉರುಳಿಸೇನು.”
“ನಿಜವೆ! ಹಾಗಾದರೆ ಬಾ ನೋಡುವ,” ಎನ್ನುತ್ತ ತುಂಟ ನಗೆಯೊಂದನ್ನು ಬೀರಿಸುತ್ತ ಸೇರಿದ್ದ ರೈತರನ್ನೊಮ್ಮೆ ನೋಡಿದನು. “ಚಿರಂಜೀವಿಯಂತೆ! ದಂಡಂತೆ! ಸುಲಿಗೆಯಂತೆ! ಸೆಗಣಿಗೆ ಸಾವಿರದ ಈ ಹುಳಗಳ ದಂಡನ್ನು ಒರಸಿಬಿಡೋಣ! ಬನ್ನಿ!” ಎಂದು ಸುಬ್ಬಯ್ಯನು ಬೆತ್ತವನ್ನು ತಿರುವುತ್ತ ಬಿರುಸಾಗಿ ಸಾಗಿದನು. ಆಗ ಬಯಲಲ್ಲಿ ಗೆಯ್ಮೆಯಾಳುಗಳ ಪರಿಸೆಯೇ ಕೂಡಿತ್ತು. ಕಬ್ಬಿಣದ ಎರಕದಂಥ ಮೈಕಟ್ಟಿನ ಮೂಲಿ ಹೊಲೆಯರು; ಹರವಾದ ಎದೆ, ಹದನಾದ ಕೈಕಾಲುಗಳ ಧಾಂಡಿಗರಾದ ಒಕ್ಕಲುಗಳು; ತಿಂದು ಸೊಕ್ಕಿದ ಊರ ಹೊಂತಗಾರರು; ಎಲ್ಲರೂ ಸುಬ್ಬಯ್ಯನ ಮುಂದಾಳುತನದಿಂದ ಹುರುಪುಗೊಂಡರು. ಎಲ್ಲರ ನರನಾಡಿಗಳಲ್ಲಿ ನೆತ್ತರು ಒತ್ತರದಿಂದ ಹರಿಯಿತು. ಮೈಯುಬ್ಬಿತು. ಆವೇಶ ತುಂಬಿತು. ಎಲ್ಲರೂ ಇರುವೆ ದಂಡಿನಂತೆ ಸಾಲುಕಟ್ಟಿ ಸುಬ್ಬಯ್ಯನನ್ನು ಹಿಂಬಾಲಿಸಿದರು. ಕಟ್ಟಾಳುಗಳ ಆ ದಂಡನ್ನೂ, ಆ ದಂಡಿನ ದಳವಾಯಿ ಸುಬ್ಬಯ್ಯನನ್ನೂ ಕಂಡು ಜನರೆಲ್ಲ ಬೆರಗಾದರು. ಎಲ್ಲರಲ್ಲೂ ಎಲ್ಲಿಲ್ಲದ ಧೈರ್ಯ ತುಂಬಿತು.

(ಇಲ್ಲಸ್ಟ್ರೇಷನ್ ಕಲೆ: ರೂಪಶ್ರೀ ಕಲ್ಲಿಗನೂರ್)

ಉಳಿಯತ್ತಡ್ಕದ ಮಾರ್ಗ ಕವಲೊಡೆವಲ್ಲಿ ದಂಡು ಪಾಳೆಯಬಿಟ್ಟಿತು. ಅಲ್ಲಿ ಮಾಯಿಲ ಕೋಟೆಯ ಹಳೆಯ ಗೋಡೆಗಳು ನೀಡಿದ್ದುವು. ಅಲ್ಲೊಂದು ಇಲ್ಲೊಂದು ಹಳೆಯ ಬುರುಜು ಇತ್ತು. ಸುತ್ತಲೂ ಕರಡು ಬೆಳೆದ ಗುಡ್ಡಗಳು. ಅಲ್ಲಲ್ಲಿ ಕುರುಚಲು ಕಾಡುಗಳು. ಈ ಎಡವಟ್ಟಾದ ಸ್ಥಳದಲ್ಲಿ ಸುಬ್ಬಯ್ಯನು ವ್ಯೂಹವನ್ನು ರಚಿಸಿ ಎಲ್ಲರಿಗೂ ಅವರವರ ಕರ್ತವ್ಯವನ್ನು ಹೇಳಿಕೊಟ್ಟನು. ಸ್ವಲ್ಪ ಹೊತ್ತಿನಲ್ಲಿ ಕರಡು ಬೆಳೆದ ಆ ಗುಡ್ಡದಲ್ಲಿ ಯಾವ ಸುಳಿವೂ ಇಲ್ಲ. ಸುದ್ದಿಯೂ ಇಲ್ಲ. ಎಲ್ಲವೂ ಇದ್ದಂತೆಯೇ ಇತ್ತು. ಮಧ್ಯಾಹ್ನದ ಬಿಸಿಲಲ್ಲಿ ಎಲ್ಲವೂ ರಣಗುಟ್ಟುತ್ತಿತ್ತು.
ಚಿರಂಜೀವಿ ಸುಬ್ರಾಯನ ಪಡೆಯು ಅದೇ ದಾರಿಯಾಗಿ ಬರುತ್ತಿದ್ದಿತು. ಸುಬ್ರಾಯನೇ ಪಡೆವಳ. ಕರ್ರಗಿನ ಗಿಡ್ಡಾಳು; ಕೊಬ್ಬಿದ ಅವಯವಗಳು. ಕರಾಳ ಮುಖ. ದಟ್ಟಿಚಲ್ಲಣ ಬಿಗಿದು, ಬಿಳಿಯ ನಿಲುವಂಗಿಯನ್ನು ತೊಟ್ಟು ಜರಿಯ ಕೆಂಪು ಮುಂಡಾಸನ್ನು ಕಟ್ಟಿದ್ದನು. ದಡ್ಡು ಕಟ್ಟಿದ ಕೈಯಲ್ಲಿ ಮದ್ದು ತುಂಬಿದ ಕೋವಿಯಿತ್ತು. ಅವನ ಹಿಂದೆ ಇನ್ನೂರು ಜನ. ಮುಂದೆ ಮುನ್ನೂರು ಜನ. ಎಲ್ಲರ ಕೈಯಲ್ಲೂ ಕತ್ತಿ ಕೊಡಲಿ ಸೋಟೆಗಳು. ಕೆಲವರ ಕೈಯಲ್ಲಿ ಕೋವಿಗಳು. ಅಬ್ಬರಿಸುತ್ತ, ಕೇಕೆ ಹಾಕುತ್ತ ನೆಲವನ್ನು ನಡುಗಿಸುತ್ತ, ಸಿಕ್ಕಿದ್ದನ್ನು ಹಾಳುಕೆಡಹುತ್ತ ಸುಬ್ಬಯ್ಯನ ಪಾಳೆಯವನ್ನು ಸಮೀಪಿಸಿದರು.

ತೂಗುತ್ತಿದ್ದ ಮಂಚವನ್ನು ನಿಲ್ಲಿಸಿ, ಕೆಳಗಿಳಿದು, ತಲೆಗೊಂದು ಪಟ್ಟೆ ಸೆಲ್ಲೆಯನ್ನು ಸುತ್ತಿಕೊಂಡು, ಗೋಡೆಗೆ ಒರಗಿಸಿದ್ದ ಬೆಳ್ಳಿಕಟ್ಟಿನ ನಾಗಬೆತ್ತವನ್ನು ಹಿಡಿದುಕೊಂಡು, ಹೊರಗಿಳಿದು ಬಯಲಿನತ್ತ ನಡೆದನು. ಸುಗ್ಗಿಬೆಳೆ ತುಂಬಿ ನಳಿನಳಿಸುತ್ತಿದ್ದ ಆ ಬಯಲು ಪ್ರಕೃತಿದೇವಿಯುಟ್ಟ ಹಸುರ ಸೀರೆಯಂತೆ ಶೋಭಿಸುತ್ತಿತ್ತು.

ಸಂಕೇತದ ಅದಿರನ್ನು ದಾಟುತ್ತಲೇ ಸುಬ್ಬಯ್ಯನ ಪಾಳೆಯಲ್ಲಿ ಒಮ್ಮೆಲೆ ಢಂ ಢಂ ಎಂದು ಫಿರಂಗಿಗಳು ಸಿಡಿದವು. ಸಿಡಿಲಂಥ ಶಬ್ದ. ಮೋಡದಂಥ ಹೊಗೆ. ಆ ಮಬ್ಬಿನಲ್ಲಿ ನಾಲ್ಕು ದಿಕ್ಕುಗಳಿಂದ ಕಟ್ಟಾಳುಗಳು ಇಟ್ಟಣಿಸಿ, ಒತ್ತಿ, ಮುತ್ತಿ ಪುಂಡರ ದಂಡನ್ನು ಸದೆಬಡೆಯ ಹತ್ತಿದರು. ಸುಬ್ಬಯ್ಯನ ಪಡೆಯಲ್ಲಿ ಒಂದೇ ಸವನೆ ಫಿರಂಗಿಗಳು ಸಿಡಿಯುತ್ತಿದ್ದುವು. ಸುಬ್ರಾಯನು ಇವು ಕುಂಪಣಿಯವರ ತೋಫುಗಳೋ ಎಂದು ಅಳುಕಿದನು. ಅವನ ಆಳುಗಳೂ ಕೈಕಾಲು ಕೆಟ್ಟರು. ಫಿರಂಗಿಗಳು ಬೆಂಕಿ ಕಾರುತ್ತ ಮಹಾ ಶಬ್ದವನ್ನು ಹೊರಡಿಸುತ್ತಿದ್ದುವು. ಆ ಮಹಾ ಶಬ್ದಕ್ಕೆ ಪುಂಡರ ಎದೆ ಧಸಕ್ಕೆಂದಿತು. ಫಿರಂಗಿ! ಅಯ್ಯೋ ಫಿರಂಗಿ! ಎಂದು ಓಡಹತ್ತಿದರು. ಯಮನ ಕೋರೆಗಳಲ್ಲಿ ಸಿಲುಕಿ ಓಡುವುದೆಲ್ಲಿಗೆ!

ಸಂದು, ಪೊದೆ, ಮಳೆಗಳಲ್ಲಿ ಅವಿತಿದ್ದ ಸುಬ್ಬಯ್ಯ ಶಾನುಭಾಗನ ಕೆಚ್ಚಾಳುಗಳು ಸರಕ್ಕನೆ ಹಾರಿ ಹಾರಿ, ಬಂದು, ತಾಗಿ ತಳ್ತು, ಇರಿದು ಹಲವರನ್ನು ಕೊಂದೊರಗಿಸಿದರು. ಹಲವರನ್ನು ಕಳವಳಿಸಿ ಕೆಡಹಿದರು. ಹಲವರನ್ನು ಬಳಲಿಸಿ ದೆಸೆಗೆಡಿಸಿದರು. ಅದೇ ಅವಸರದಲ್ಲಿ ಸುಬ್ಬಯ್ಯನು ಬಳಸಿ ಬರುವ ಪುಂಡರನ್ನು ಹೊಡೆದು ಕೆಡಹುತ್ತ ಸುಬ್ರಾಯನ ಮೇಲೆ ಎರಗಿದನು. ಸುಬ್ರಾಯನು ಕೋವಿಯನ್ನು ಹಾರಿಸಿದನು. ಇಟ್ಟ ಗುರಿ ಸುಬ್ಬಯ್ಯನ ತಲೆಯನ್ನು ಒಡೆಯುತ್ತಿತ್ತು. ಪುಣ್ಯವಶದಿಂದ ರವಷ್ಟು ತಪ್ಪಿ ಚಿಲ್ಲೆಯು ಸುಬ್ಬಯ್ಯನ ಮುಂಡಾಸನ್ನು ಕೊರೆದುಕೊಂಡು ಹಾರಿತು. ‘ಬದುಕಿದೆ ಹಾ!’ ಎನ್ನುತ್ತ ಸುಬ್ಬಯ್ಯನು ಆವೇಶಭರದಿಂದ ದೊಣ್ಣೆ ಬೀಸತೊಡಗಿದನು. ಸುಬ್ರಾಯನು ಕೋವಿಗೆ ಮದ್ದು ತುಂಬಿಸಲು ಎಡೆದೊರೆಯದೆ ಬರಿಯ ಕೋವಿಯನ್ನೇ ಕೊತ್ತಳಿಗೆಯಂತೆ ಬೀಸುತ್ತಿದ್ದನು. ಎಡೆ ನೋಡುತ್ತಿದ್ದ ಸುಬ್ಬಯ್ಯನ ದಂಡಾಳುಗಳು ಥಟ್ಟನೆ ಬಂದೆರಗಿ, ಪುಂಡ ಸುಬ್ರಾಯನನ್ನು ಹೊಡೆದು, ಹಣ್ಣುಮಾಡಿ, ಅವನ ಬಿಂಕವನ್ನು ಇಳಿಸಿ, ಹೆಡೆಮುರಿ ಕಟ್ಟಿ ಸುಬ್ಬಯ್ಯ ಶಾನಭಾಗನ ಕಾಲಮೇಲೆ ಕೆಡವಿದರು. ನನ್ನ ಮಾತು ಹೇಂಗೆ ಒಡ್ಯಾ ಎಂದು ಗುಂಪಿನೊಳಗಿಂದ ಓಬಯ್ಯನು ಸ್ವರ ಎಳೆದನು. ‘ನಿನ್ನ ಮಾತಿಗೆ ಒಡೆಯರ ತಲೆ ಸಂಚಕಾರ ಎಂದಮೇಲೆ ನಿನ್ನ ಮಾತು ಹೇಗೆಂದು ಹೇಳಬೇಕೆ ಓಬಣ್ಣಾ?’ ಎಂದು ಸುಬ್ಬಯ್ಯನು ನಕ್ಕನು.

ಹೊಡೆದಾಟವೆಲ್ಲ ತಣ್ಣಗಾಯಿತು. ಬಳಿಕ ಸುಬ್ರಾಯನನ್ನು ಜಪ್ತಿ ಮಾಡಿ ನೋಡುವಾಗ ಅವನ ಉಡಿದಾರದಲ್ಲಿ ಗೇಣುದ್ದದ ಚಿನ್ನದ ತಾಯಿತವಿದ್ದಿತಂತೆ. ಆ ಯಂತ್ರಬಲದಿಂದಲೆ ಅವನು ಇಷ್ಟೆಲ್ಲ ಪುಂಡಾಟಿಕೆಯನ್ನು ನಡೆಸಲು ಸಾಧ್ಯವಾಯಿತಂತೆ. ಪುಂಡುಗಾರರು ಕೊಳ್ಳೆಹೊಡೆದು ತಂದಿದ್ದ ನಗನಾಣ್ಯಗಳನ್ನು ಸುಬ್ಬಯ್ಯನು ತನ್ನ ದಂಡಾಳುಗಳಿಗೂ ಬಡಬಗ್ಗರಿಗೂ ಹಂಚಿದನು. ಆ ಮೇಲೆ ಸುಬ್ರಾಯನನ್ನು ಹೆಡೆಮುರಿ ಕಟ್ಟಿದ ಕಟ್ಟುಗಳನ್ನು ಬಿಚ್ಚಿಸಿ, ಬುದ್ದಿಹೇಳಿ ಬಿಟ್ಟುಬಿಟ್ಟನು.

ಸುಬ್ರಾಯನು ಸುಬ್ಬಯ್ಯನಿಗೆ ಕೈಮುಗಿದು ಹೋಗಲು ಎದ್ದನು. ಎದ್ದು ಕೆಂಡಕಾರುತ್ತಿದ್ದ ಫಿರಂಗಿ ಸಾಲನ್ನೊಮ್ಮೆ ನೋಡಿದನು. ಕೋಟೆಗೋಡೆಗಳ ಮರೆಯಲ್ಲಿ, ಸುಬ್ಬಯ್ಯನು ಮುಳಿಹುಲ್ಲಿನ ಹೊರೆಗಳನ್ನು ಸಾಲಾಗಿ ಇರಿಸಿ, ಬೆಂಕಿಕೊಡಿಸಿದ್ದನು. ಅದರ ಹಿಂದೆ ಒಂದೇ ಸವನೆ ಕದನೆ ಮದ್ದನ್ನು ಸುಡಿಸಿ ಪುಂಡುಗಾರರನ್ನು ಭ್ರಮೆಗೊಳಿಸಿದ್ದನು. ಇದನ್ನು ಕಂಡು ಸುಬ್ರಾಯನು ನಾಚಿಕೆಯಿಂದ ನೆಲಕ್ಕಿಳಿದು ಹೋದನು.

“ಹುಲ್ಲುಕಡ್ಡಿಯು ಅಂದು ರಾಮಬಾಣವಾಗಿ ಕಾಕಾಸುರನ ಕಣ್ಣನ್ನು ಕುರುಡುಮಾಡಿತು. ಅದೇ ಮುಳಿಹಲ್ಲು ಫಿರಂಗಿಯಾಗಿ ಇಂದು ಚಿರಂಜೀವಿಯನ್ನು ಸುಟ್ಟಿತು. ಕೂಡಲ ಮೇಳವು ಒಳ್ಳೇ ಆಟ ಆಡಿತಯ್ಯ ಇವತ್ತು! ನನ್ನ ಬಣ್ಣದ ವೇಷವನ್ನು ಕಿತ್ತೊಗೆದು ಮುಖಕ್ಕೆ ಮಸಿ ಹಚ್ಚಿಬಿಟ್ಟಿತು. “ಚಿರಂಜೀವಿ ಕಾಳಗ” ದ ಪ್ರಸಂಗವೆಲ್ಲ ಮುಗಿಯಿತು. ಇನ್ನು ಪೆಟ್ಟಿಗೆ ಕಟ್ಟುವುದೊಂದೇ ಉಳಿಯಿತು. ಅಯ್ಯೋ!” ಎಂದು ತಲೆ ತಗ್ಗಿಸಿಕೊಂಡು ಬಡಗುದಾರಿಯನ್ನು ಹಿಡಿದನು. ಅಳಿದುಳಿದ ಅವನ ಮಂದಿಯು ದಾರಿಯಲ್ಲಿ ಅವನನ್ನು ಸೇರಿಕೊಂಡರು.
ಕೆಲವು ದಿನಗಳ ಮೇಲೆ ಸುಬ್ಬಯ್ಯ ಶಾನಭಾಗನು ಸುಬ್ರಾಯನ ದಂಡಿನ ವಿಷಯ ಕಲೆಕ್ಟರರಿಗೆ ಫಿರ್ಯಾದು ಬರೆದುಕೊಂಡನು. ಕ್ರಮದಂತೆ ತನಿಖೆ ನಡೆಯಲು ಸುಬ್ಬಯ್ಯನು ಸುಬ್ರಾಯನ ಪುಂಡಾಟಿಕೆಯ ವಿಷಯ ಕೂಲಂಕುಷ ವರದಿಯನ್ನು ಕೊಟ್ಟನು. ತನ್ನ ಮಾಗಣೆಯಲ್ಲಿ ಪುಂಡನ್ನಡಗಿಸುವುದಕ್ಕೆ ತಾನು ಮಾಡಿದ ಪ್ರಯತ್ನಗಳನ್ನೆಲ್ಲ ಬಿನ್ನವಿಸಿಕೊಂಡು, ಚಿಲ್ಲು ತಾಗಿ ತೂತಾದ ತನ್ನ ಮುಂಡಾಸನ್ನು ಹಾಜರುಪಡಿಸಿ ರುಜುವಾತು ಕೊಟ್ಟನು. ಕಲೆಕ್ಟರನು ಬೆರಗಾಗಿ ಅವನ ಸಾಹಸವನ್ನು ಶ್ಲಾಘಿಸಿದನು. ಸರಕಾರಕ್ಕೆ ಬರೆದು ಒಂದು ಸೇರು ಚಿನ್ನದ ಎರಡು ಬಳೆಗಳನ್ನೂ, ಸರಕಾರದ ಮುದ್ರೆಯುಳ್ಳ ಒಂದು ಖಡ್ಗವನ್ನೂ ತರಿಸಿ ಬಹುಮಾನವಾಗಿ ಕೊಟ್ಟನು. ಆ ಬಿರುದಿನ ಬಳೆಗಳೂ ಶೌರ್ಯದ ಕುರುಹಾದ ಆ ಖಡ್ಗವೂ ಕೂಡಲು ಶಾನಭಾಗರ ಮನೆಯಲ್ಲಿ ಈಗಲೂ ಇವೆ.

ಡಾ. ಬಿ. ಜನಾರ್ದನ ಭಟ್ ಟಿಪ್ಪಣಿ
ಕಲ್ಯಾಣಪ್ಪನ ಕ್ರಾಂತಿಯ ಕಾಲದಲ್ಲಿ ಉದ್ಭವವಾಗಿದ್ದ ಅರಾಜಕತೆಯ ದುರುಪಯೋಗ ಮಾಡಿಕೊಂಡ ದರೋಡೆಗಾರರು ಊರೂರುಗಳಲ್ಲಿ ಭಯೋತ್ಪಾದನೆ ನಡೆಸುತ್ತಿದ್ದುದಕ್ಕೆ ಸಾಕ್ಷಿ ಸಿರಿಬಾಗಿಲು ವೆಂಕಪ್ಪಯ್ಯ ಮತ್ತು ಬೇಕಲ ರಾಮನಾಯಕರ ಐತಿಹ್ಯ ಕಥೆಗಳಲ್ಲಿವೆ. ಒಂದೇ ಐತಿಹಾಸಿಕ ಘಟನೆಯನ್ನು ಇಬ್ಬರು ಐತಿಹ್ಯಕಾರರು ಹೇಗೆ ವಿಭಿನ್ನವಾಗಿ ನಿರೂಪಿಸಿದ್ದಾರೆ ಎನ್ನುವುದು ಕುತೂಹಲಕರವಾಗಿದೆ. ಮುಖ್ಯ ವಿಷಯ ಮತ್ತು ಆಶಯಗಳಲ್ಲಿ ವ್ಯತ್ಯಾಸ ಇಲ್ಲದಿದ್ದರೂ ತಮ್ಮ ಬರಹದಲ್ಲಿ ಬೇಕಲ ರಾಮ ನಾಯಕರು ಇದೇ ಘಟನೆಯನ್ನು ಪುಳ್ಕೂರು ಬಾಚನ ಉಲ್ಲೇಖವಿಲ್ಲದೆ ವರ್ಣಿಸಿದ್ದಾರೆ. ಬಾಚನು ಈ ಕಾಳಗದಲ್ಲಿ ಪ್ರಮುಖ ಪಾತ್ರ ವಹಿಸಿದ್ದವನೆಂಬುದನ್ನು ಸಿರಿಬಾಗಿಲು ವೆಂಕಪ್ಪಯ್ಯನವರು ಕೂಡ್ಲು ಶಾನುಭೋಗರ ಮನೆಯಲ್ಲಿ ಸಿಕ್ಕಿದ ದಾಖಲೆಗಳ ಆಧಾರದಿಂದಲೇ ಹೇಳಿರುವುದರಿಂದ ಅವರು ನೀಡಿರುವ ಮಾಹಿತಿ ಸರಿಯಾಗಿದೆ. ಚಿರಂಜೀವಿ ಸುಬ್ರಾಯ ಪುಂಡರ ನಾಯಕ ಎಂದು ರಾಮ ನಾಯಕರು ಹೇಳಿದರೆ ಸಿರಿಬಾಗಿಲು ವೆಂಕಪ್ಪಯ್ಯನವರು ಬೀರಣ್ಣ ಬಂಟನೇ ಆ ಪುಂಡ ಎಂದು ಹೇಳುತ್ತಾರೆ. ಬೇಕಲ ರಾಮನಾಯಕರು ಕೂಡಾ ಪುಂಡನ ಸೊಂಟದಲ್ಲಿದ್ದ ತಾಯಿತವನ್ನು ಉಲ್ಲೇಖಿಸಿದ್ದಾರೆ.
ಕನ್ನಡದ ಮಹತ್ವದ ಐತಿಹ್ಯಕಾರರಾದ ಬೇಕಲ ರಾಮ ನಾಯಕರು ಕಲ್ಯಾಣಪ್ಪನ ಕ್ರಾಂತಿಯ ಸಂದರ್ಭಕ್ಕೆ ಸಂಬಂಧಪಟ್ಟ ಎರಡು ಕತೆಗಳನ್ನು ನಿರೂಪಿಸಿದ್ದಾರೆ. ಅವುಗಳೆಂದರೆ ‘ಕೂಡಲು ಸುಬ್ಬಯ್ಯ ಶಾನಭಾಗ’ ಮತ್ತು ಮತ್ತು ‘ಕರಣಿಕ ದೇವಪ್ಪಯ್ಯ’. (ಈ ಎರಡು ಐತಿಹ್ಯ ಕತೆಗಳನ್ನು ಕೂಡ ಡಿ. ಕೆ. ಚೌಟರು ಅಲ್ಪಸ್ವಲ್ಪ ಬದಲಾವಣೆಗಳೊಂದಿಗೆ ತಮ್ಮ ಕಾದಂಬರಿಯಲ್ಲಿ ಬಳಸಿಕೊಂಡಿದ್ದಾರೆ). ಬೇಕಲ ರಾಮ ನಾಯಕರು ‘ಕೂಡಲು ಸುಬ್ಬಯ್ಯ ಶಾನಭಾಗ’ ಕತೆಯಲ್ಲಿ ಕಾಸರಗೋಡು ಸೀಮೆಯ ಕೂಡ್ಲು ಸುಬ್ಬಯ್ಯ ಶಾನುಭೋಗರೆಂಬವರು ಒಬ್ಬ ಪುಂಡ ಚಿರಂಜೀವಿ ಸುಬ್ರಾಯ ಎಂಬವನನ್ನು ಸೋಲಿಸಿದ ಕತೆಯನ್ನು ನಿರೂಪಿಸಿದ್ದಾರೆ. ಅವರು ಸ್ಪಷ್ಟವಾಗಿ ಬ್ರಿಟಿಷರು ಸ್ಥಳೀಯ ಸಹಕಾರಿ ನಾಯಕರ ಮೂಲಕ ಪುಂಡರನ್ನು ಸದೆಬಡಿದು ನೆಮ್ಮದಿಯ ಆಡಳಿತವನ್ನು ನೀಡಿದವರೆಂಬ ಅಭಿಪ್ರಾಯವನ್ನು ಈ ಕತೆಯ ಮೂಲಕ ವ್ಯಕ್ತಪಡಿಸಿದ್ದಾರೆ.
ಈ ಕತೆಯಲ್ಲಿ ಬೇಕಲ ರಾಮ ನಾಯಕರು ಆಗಿನ ಕಾಲದ ಪರಿಸ್ಥಿತಿಯನ್ನು ನೇರವಾಗಿ ದಾಖಲಿಸಿದ್ದಾರೆ : “ಇಕ್ಕೇರಿ ನಾಯಕರು ಅಳಿದು ಹೈದರ್ ಟಿಪ್ಪು ಸುಲ್ತಾನರು ನಾಶವಾಗಿ ತುಳುನಾಡಿನಲ್ಲಿ ಕುಂಪಣಿಯವರು ಕಾಲೂರುತ್ತಿದ್ದರು. ಸರಕಾರವಿನ್ನೂ ನೆಲೆಗೊಂಡಿರಲಿಲ್ಲ. ತುಂಡರಸರು ಅಲ್ಲಲ್ಲಿ ದಂಗೆಯೆಬ್ಬಿಸುತ್ತಿದ್ದರು. ಪುಂಡರು ಕೊಳ್ಳಿಯಿಟ್ಟು ಸೂರೆ ಮಾಡುತ್ತಿದ್ದರು. ಕೊಡಗಿನಿಂದ ಕಲ್ಯಾಣಪ್ಪನ ಕಾಟಕಾಯಿ ಆಗಾಗ ಬಂದು ಹಾವಳಿ ಮಾಡುತ್ತಿತ್ತು. ಅದೇ ಸಮಯಕ್ಕೆ ಕುಂಬಳೆ ಕಡೆಯ ಸುಬ್ರಾಯನೆಂಬವನು (ಚಿರಂಜೀವಿ ಸುಬ್ರಾಯನೆಂಬ ಹೆಸರೂ ವಾಡಿಕೆಯಲ್ಲಿದೆ) ….. ಸೂರೆ ಸುಲಿಗೆ ಮಾಡುತ್ತಾ ಮನೆ ಮಾರುಗಳನ್ನು ಸುಟ್ಟು ಹಡಲಿಟ್ಟು ಕೊಳ್ಳಿಭೂತದಂತೆ ಊರೂರು ತಿರುಗುತ್ತಿದ್ದನು.”
‘ಈ ಕತೆ ನಡೆದುದು ಸತ್ಯ, ಪಾಡಿ ಸುಬ್ಬಯ್ಯನೆಂಬ ಶಾನುಭೋಗನು 1837ರ ಕಲ್ಯಾಣಪ್ಪನ ಕಾಟಕಾಯಿಯ ಸಂದರ್ಭದಲ್ಲಿ ಬೀರಣ್ಣ ಬಂಟನನ್ನು ಹಿಡಿದುಕೊಟ್ಟುದಕ್ಕಾಗಿ ಬ್ರಿಟಿಷ್ ಸರಕಾರ 1838 ರಲ್ಲಿ ಈ ಬಳೆಗಳನ್ನು ನೀಡಿದ್ದಾಗಿದೆ, ಅದನ್ನು ತಾನು ಕಂಡಿದ್ದೇನೆ’ ಎಂದು ಉಪ್ಪಂಗಳ ರಾಮ ಭಟ್ಟರು ಹೇಳುತ್ತಾರೆ (‘ಬೇಕಲ ರಾಮ ನಾಯಕ’: ಸಂ. ಶಿವರಾಮ ಕಾಸರಗೋಡು. 1992, ಇದರಲ್ಲಿರುವ ಲೇಖನ ‘ಐತಿಹ್ಯದ ಬೇಕಲ ರಾಮ ನಾಯಕರು ಇತಿಹಾಸದ ಮೂಲ ಕಾಯಕರು’.) ಆದರೆ ಕತೆಯಲ್ಲಿ ನಾಯಕರು ಸ್ಪಷ್ಟವಾಗಿ ಚಿರಂಜೀವಿ ಸುಬ್ರಾಯ ಎಂದು ಹೇಳುತ್ತಾರಲ್ಲದೆ, ಶಾನುಭೋಗರು ಅವನಿಗೆ ಎಚ್ಚರಿಕೆ ಹೇಳಿ ಬಿಟ್ಟರೆಂದಿದೆ. ಉಪ್ಪಂಗಳ ರಾಮ ಭಟ್ಟರು ‘ಬೀರಣ್ಣ ಬಂಟನನ್ನು ಹಿಡಿದುಕೊಟ್ಟದ್ದಕ್ಕಾಗಿ’ ಎಂಬ ಮಾಹಿತಿ ನೀಡಿದ್ದಾರೆ.
ಅಲ್ಲಿಂದ ಬಿಡುಗಡೆಯಾಗಿ ಉತ್ತರ ದಿಕ್ಕಿಗೆ ಹೋಗಿ, ಬಹುಶಃ ಬ್ರಿಟಿಷರಿಗೆ ಸಿಕ್ಕಿಬಿದ್ದ ಬೀರಣ್ಣ ಬಂಟನಿಗೆ ಮುಂದೆ ಕಂಪೆನಿ ಸರಕಾರ ‘ಮರಣಾಂತ’ ಶಿಕ್ಷೆ ವಿಧಿಸುತ್ತದೆ ( ಈ ಬಗ್ಗೆ ಬ್ರಿಟಿಷರ ಲಿಖಿತ ದಾಖಲೆಗಳು ಲಭ್ಯವಿವೆ). ಪ್ರಭಾಕರ ನೀರ್ಮಾರ್ಗ ತಮ್ಮ ‘ಮಂಗಳೂರ ಕ್ರಾಂತಿ’ ಕಾದಂಬರಿಯಲ್ಲಿ ಬೀರಣ್ಣ ಬಂಟನನ್ನು ಉದಾತ್ತ ನಾಯಕರಲ್ಲಿ ಒಬ್ಬನನ್ನಾಗಿ ಮಾಡಿದ್ದಾರೆ. ಅಲ್ಲದೆ ಆ ಕಾದಂಬರಿಯಲ್ಲಿ ಅವನಿಗೆ ಗಲ್ಲು ಶಿಕ್ಷೆ ಆಗುತ್ತದೆ. ಅಂತೂ ಬೀರಣ್ಣ ಬಂಟ ಎನ್ನುವವನು ಐತಿಹಾಸಿಕ ವ್ಯಕ್ತಿಯೆನ್ನುವುದಕ್ಕೆ ಸಂಶಯವೇನೂ ಇಲ್ಲ. ಹಾಗೆಯೇ ಕೂಡಲು ಶಾನುಭೋಗರು ಇಂತಹ ಹೋರಾಟವೊಂದನ್ನು ನಡೆಸಿ ಪುಂಡನೊಬ್ಬನನ್ನು ಸೋಲಿಸಿದುದು ಐತಿಹಾಸಿಕ ಘಟನೆಯೇ ಆಗಿದೆ.
ಟಿಪ್ಪುವಿನ ಮರಣಾನಂತರ ಉಂಟಾದ ಅರಾಜಕ ಪರಿಸ್ಥಿಯಲ್ಲಿ ಮತ್ತು ಕಲ್ಯಾಣಸ್ವಾಮಿಯ ಹೋರಾಟದ ಕಾಲದ ಅರಾಜಕತೆಯಲ್ಲಿ ಹಲವಾರು ತುಂಡರಸರು ಮತ್ತು ಯೋಧ ವೃತ್ತಿಯ ಸಾಹಸಿಗಳು ಮತ್ತು ಕೇವಲ ಪುಂಡರು ಜನರನ್ನು ಬೆದರಿಸಿ ತಮಗೆ ಹಣ ಕೊಡಬೇಕೆಂದು ಒತ್ತಾಯಿಸುತ್ತಿದ್ದುದಕ್ಕೆ ಸಾಕಷ್ಟು ಉಲ್ಲೇಖಗಳು ಸಾಕ್ಷ್ಯ ನುಡಿಯುತ್ತವೆ. ಆದರೆ ಆ ಬಗ್ಗೆ ಸ್ವಾತಂತ್ರ್ಯಾನಂತರ ಬರೆಯುವಾಗ ಈ ಜನರನ್ನೆಲ್ಲ ವೀರರೆಂದೋ ಸ್ವಾತಂತ್ರ್ಯ ಹೋರಾಟಗಾರರೆಂದೋ ಬಿಂಬಿಸುವುದು ಕಂಡುಬರುತ್ತದೆ. ಐವತ್ತು ಜನರ ಗುಂಪು ಕಟ್ಟಿಕೊಂಡು ಊರಿಂದ ಊರಿಗೆ ಅಲೆದಾಡುವವರು, ಇಪ್ಪತ್ತು ಜನರನ್ನು ಕಟ್ಟಿಕೊಂಡು ಬ್ರಿಟಿಷ್ ಸೈನಿಕರಿಂದ ಕೊಲ್ಲಲ್ಪಡುವವರು ನಿಜವಾಗಿಯೂ ರಾಷ್ಟ್ರೀಯತೆಯ ಪರಿಕಲ್ಪನೆಯುಳ್ಳ ಸ್ವಾತಂತ್ರ್ಯ ಹೋರಾಟಗಾರರೆಂದು ಹೇಳುವುದು ಕಷ್ಟ.
ಕೆಲವೊಮ್ಮೆ ಎಲ್ಲರನ್ನೂ ಸಾರಾಸಗಟಾಗಿ ದೋಚುವವರನ್ನು ಕೆಟ್ಟವರೆಂದೂ, ಶ್ರೀಮಂತರನ್ನು ಮಾತ್ರ ದೋಚುವವರನ್ನು ಧರ್ಮಾತ್ಮರೆಂದೂ ಪರಿಗಣಿಸುವ ವಾಡಿಕೆಯಿದೆ. (ಇದನ್ನು ಎಂ. ಎನ್. ಕಾಮತರ ‘ಬೊಗ್ಗು ಮಹಾಶಯ’ ಕತೆಯಲ್ಲಿಯೂ, ಮುಳಿಯ ತಿಮ್ಮಪ್ಪಯ್ಯನವರು ಸಿಡಿಲುಮರಿಯ ಬಗ್ಗೆ ಹೇಳಿರುವ ಮೇಲೆ ಉಲ್ಲೇಖಿಸಿರುವ ಮಾತುಗಳಲ್ಲಿಯೂ ತಿಳಿಯಬಹುದು).