ಈ ದೇಶದ ಯಾವ ಮನೆಯಲ್ಲೂ ಪೂರ್ಣ ಪ್ರಮಾಣದಲ್ಲಿ ಪ್ರತಿದಿನ ಮನೆ ಅಡುಗೆ ತಯಾರಾಗುವುದಿಲ್ಲ. ಮೊದಲ ಮತ್ತು ಎರಡನೇ ಮಹಾಯುದ್ಧಗಳ ಕಾಲದಿಂದಲೇ ಹೆಂಗಸರು ಹೊರಗೆ ಕೆಲಸ ಮಾಡಬೇಕಾದ ಅವಶ್ಯಕತೆ ಬಿದ್ದ ಕಾರಣ ಅಡಿಗೆ ಮನೆಯಲ್ಲಿ ದುಡಿಯುವ ಕೆಲಸ ನಿಲ್ಲುತ್ತ ಬಂತು. ಕೈಗಾರೀಕರಣದ ನಂತರವಂತೂ ಕೊಂಡು ತಿನ್ನುವ ಸಿದ್ಧ ಆಹಾರದ ಫಾಸ್ಟ್ ಫುಡ್ ರೆಸ್ಟುರಾಂಟ್ ಗಳು ಅಣಬೆಯಂತೆ ಅಹೋರಾತ್ರಿ ಬೆಳೆದವು.ಇಂಗ್ಲೆಂಡಿನಂಥ ದೇಶಗಳಲ್ಲಿ ಈಗಿನ ತಲೆಮಾರಿನವರಿಗೆ ಬೆಳಗೆದ್ದರೆ ಸೀರಿಯಲ್, ಮಧ್ಯಾನ್ಹ ಅಂಗಡಿಯಲ್ಲಿ ಕೊಳ್ಳುವ ಸ್ಯಾಂಡ್ವಿಚ್, ರಾತ್ರಿಯಾದರೆ ಅದಾಗಲೇ ಅರೆ ಬರೆ ಬೆಂದಿರುವ/ ತಯಾರಿರುವ ಅಡುಗೆಗಳನ್ನು ಒಂದಿಷ್ಟು ಬಿಸಿ ಮಾಡಿಕೊಂಡು ತಿನ್ನುವ ದಿನನಿತ್ಯದ ಆಭ್ಯಾಸಗಳಿವೆ.
ಡಾ.ಪ್ರೇಮಲತ ಬರೆಯುವ ಬ್ರಿಟನ್ ಬದುಕಿನ ಕಥನ.

 

ನಾನಾಗ ಬೆಂಗಳೂರಿನಲ್ಲಿ ಓದುತ್ತಿದ್ದ ಸಮಯ. ವಿದ್ಯಾರ್ಥಿಯಾಗಿ ನನ್ನ ಬಳಿ ಇರುತ್ತಿದ್ದ ಹಣ ಬಹಳ ಕಡಿಮೆ. ಕಾಲೇಜಿನ ಫೀಸು, ಹಾಸ್ಟೆಲಿನ ಖರ್ಚು, ರಜೆಯಲ್ಲಿ ಮನೆಗೆ ಹೋಗಿ ಬರುವ ಖರ್ಚು, ಪುಸ್ತಕ ಇವುಗಳಿಗೆ ಬೇಕಾದಂತೆ ಮಾತ್ರ ಹಣವಿರುತ್ತಿತ್ತು. ಆದರೆ ನಾನು ಆಗಾಗ ಪತ್ರಿಕೆಗಳಿಗೆ ಬರೆಯುತ್ತಿದ್ದ ಕಾರಣ ಯಾವತ್ತೋ ಒಂದು ದಿನ ಗೌರವ ಧನದ ಚೆಕ್ಕುಗಳು ಬರುತ್ತಿದ್ದವು. ಬೆರಳೆಣಿಕೆಯ ಬಾರಿ ದೂರದರ್ಶನದಿಂದ ದೊಡ್ಡ ಮೊತ್ತದ ಚೆಕ್ಕುಗಳೂ ಬಂದುಬಿಟ್ಟಿರುತ್ತಿದ್ದವು. ಜೊತೆಗೆ ಪಠ್ಯ ಪುಸ್ತಕಗಳನ್ನೇ ಕೊಳ್ಳುವ ಬದಲು ಲೈಬ್ರರಿಯಿಂದ ಎರವಲು ಪಡೆದು ಅದನ್ನ ಝೆರಾಕ್ಸ್ ಮಾಡಿ ಕೂಡ ಹಣವುಳಿಸುವುದಿತ್ತು. ಇಂತದ್ದಕ್ಕೆಲ್ಲ ಮನೆಗೆ ಲೆಕ್ಕ ಕೊಡಬೇಕಾಗಿರಲಿಲ್ಲ. ಇಂತಹ ಹಣವನ್ನು ಚಾರಣ, ಸಮರಕಲೆ, ಅವುಗಳ ಓಡಾಟಗಳಿಗಾಗಿ ಮತ್ತಿತರ ಹಲವು ಹವ್ಯಾಸಗಳಿಗೆ ಬಳಸುತ್ತಿದ್ದೆ.

ಅಂತಿಮ ವರ್ಷದಲ್ಲಿ ಸಹಾಯಕ ವೈದ್ಯಳಾದ ಕೂಡಲೇ ಮೊಟ್ಟ ಮೊದಲ ಬಾರಿಗೆ ತಿಂಗಳು, ತಿಂಗಳು ವೇತನ ಸಿಗಹತ್ತಿತು. ಹಾಗಾಗಿ ಕಾಲೇಜಿನ ಕ್ಯಾಂಟೀನಿನಲ್ಲಿ ಸಿಗುತ್ತಿದ್ದ ಒಂಭತ್ತು ರೂಪಾಯಿ ಮಸಾಲೆದೋಸೆ ಬಿಟ್ಟು ಅವಾಗಾವಾಗ ನನ್ನ ಚಾರಣದ ಸ್ನೇಹಿತರೊಡಗೂಡಿ ಹೋಟೆಲಿಗೆ ಹೋಗುವುದೂ ಇತ್ತು. ಅದರಲ್ಲೂ ಎಂ. ಜಿ. ರೋಡು, ಬ್ರಿಗೇಡು ರೋಡುಗಳಲ್ಲಿನ ವಿದೇಶೀ ಆಹಾರದ ಹೋಟೆಲುಗಳಿಗೆ ಹೋಗುವುದು ಪ್ರೆಸ್ಟೀಜಿನ ವಿಚಾರವಾಗಿತ್ತು. ಹಾಗೊಮ್ಮೆ ಎಂ. ಜಿ ರಸ್ತೆಯ ಬ್ರಿಟನ್ನಿನ ರೆಷ್ಟುರಾಂಟ್ ‘ಫಿಶ್ ಅಂಡ್ ಚಿಪ್ಸ್’ ಗೆ ಹೋಗಿದ್ದೆ.

(ಫಿಶ್ ಅಂಡ್ ಚಿಪ್ಸ್ ಟೇಕ್ ಅವೇ)

ಸಣ್ಣ ಟೇಬಲ್ಲುಗಳು, ಕಿಣಿ ಕಿಣಿಯೆನ್ನುವ ನಾನಾ ಪಿಂಗಾಣಿ ಪಾತ್ರೆಗಳು, ಕೆಂಪು, ಬಿಳಿ ಚೌಕಳಿಯ ಟೇಬಲ್ಲು ಹೊದಿಕೆ ಇದೆಲ್ಲ ನೋಡಿ ‘ಅಯ್ಯೋ… ಇದೇನು ಮಹಾ ಚೆನ್ನಾಗಿಲ್ಲವಲ್ಲ’ ಎಂದುಕೊಳ್ಳುತ್ತಿರುವಾಗಲೇ ಮೆನ್ಯು ಕೈಗೆ ಬಂತು. ಸಸ್ಯಹಾರಿಯಾದ ನನಗೆ ಹೆಚ್ಚಿನ ಆಯ್ಕೆಗಳೇನು ಇರಲಿಲ್ಲ. ಹಾಗಾಗಿ ಮಸಾಲೆಯಿಲ್ಲದ ‘ವೆಜ್ ಕಟ್ಲೆಟ್’ ಮತ್ತು ‘ಚಿಪ್ಸ್’ ತಿಂದು ಏನೋ ಹೊಸ ಅನುಭವ ಗಳಿಸಿದ ಬಿಮ್ಮಿನಲ್ಲಿ ಹಿಂತಿರುಗಿದ್ದೆ. ವಿಪರ್ಯಾಸವೆಂದರೆ ಬ್ರಿಟನ್ನಿಗೆ ಬಂದ ನಂತರ ಬೀದಿ ಬೀದಿಯಲ್ಲಿ ಇದೇ ರೀತಿಯ ‘ಫಿಶ್ ಅಂಡ್ ಚಿಪ್ಸ್’ ಅಂಗಡಿಗಳು ಕಾಲು ಕಾಲಿಗೇ ತೊಡರಿದರೂ ಮತ್ತೆ ಒಂದೇ ಒಂದು ಬಾರಿಯೂ ಆ ಕಡೆ ಸುಳಿದಿಲ್ಲ!

ಬ್ರಿಟನ್ನಿನಲ್ಲಿ ಸುಮಾರು 10.500 ‘ಫಿಶ್ ಅಂಡ್ ಚಿಪ್ಸ್’ ರೆಷ್ಟುರಾಂಟ್ ಗಳಿದ್ದು ವರ್ಷಕ್ಕೆ 1.2 ಬಿಲಿಯನ್ ಪೌಂಡುಗಳ ವಹಿವಾಟು ನಡೆಸುತ್ತಿವೆ. ಆದರೆ ಮಸಾಲೆಯಿಲ್ಲದ ಬ್ರಿಟನ್ನಿನ ರೆಷ್ಟುರಾಂಟುಗಳಿಗೆ ಹೋಗಲು ನಾಲಗೆ ಹರತಾಳ ಹೂಡುತ್ತದೆ. ಅದಕ್ಕೇ ನನ್ನದೊಂದು ಕವನದಲ್ಲಿ “ಮನೆ, ಬಟ್ಟೆ, ಕಾರೆಲ್ಲವಾದ್ರು ವಿದೇಶ, ಮುನಿಯುತ್ತೆ ಮನಸು,ಇಲ್ದಿದ್ರೆ ಮನೆಯೂಟ” ಎಂದು ಬರೆದದ್ದೂ ಉಂಟು.

ಇಲ್ಲಿಗೆ ಬಂದ ನಂತರ ಬ್ರಿಟಿಷರ ದೈನಂದಿನ ಊಟ, ಸಾಂಪ್ರದಾಯಿಕ ಆಹಾರಗಳು ನಾನು ತಿಳಿದಿದ್ದ ‘ಫಿಶ್ ಅಂಡ್ ಚಿಪ್ಸ್’ ಗಿಂತ ಬಹಳ ವಿಶಾಲವಾದ್ದು ಎಂಬುದರ ಅರಿವಾಯ್ತು. ಬ್ರಿಟಿಷರ ಸಾಂಪ್ರದಾಯಿಕ ಊಟಗಳೆಲ್ಲ ಶಾಖಾಹಾರಿ. ಆದರೆ ಮಾಂಸ ತಿನ್ನುವ ಭಾರತೀಯ ಮಿತ್ರರು ಕೂಡ ಮಸಾಲೆಯಿಲ್ಲದೆ ಇವರು ತಿನ್ನುವ ರೀತಿಯ ಹಸಿ ಮಾಂಸವನ್ನು ತಿನ್ನುವುದಿಲ್ಲ. ಜೊತೆಗೆ ಆರೋಗ್ಯ ವರ್ಧನೆಗಾಗಿ ಆಹಾರವನ್ನು ಅರೆ-ಬರೆ ಮಾತ್ರ ಬೇಯಿಸಿ ಆಹಾರದಲ್ಲಿನ ಪೋಷಕಾಂಶಗಳು ನಷ್ಟವಾಗದಂತೆ ಇವರು ನೋಡಿಕೊಳ್ಳುತ್ತಾರೆ. ಆದರೆ ಬ್ರಿಟಿಷರ ಈ ರೀತಿಯ ಅರೆಬೆಂದ ತರಕಾರಿ, ಮೊಟ್ಟೆ, ಮಾಂಸವನ್ನು ಯೂರೋಪಿನವರೂ ಸೇರಿದಂತೆ ಯಾರೂ ಇಷ್ಟಪಡುವುದಿಲ್ಲ. ಸಸ್ಯಹಾರಿಗಳಿಗೆ ಬ್ರಿಟಿಷ್ ಆಹಾರ ಪದ್ಧತಿಯಲ್ಲಿ ಹೆಚ್ಚಿನ ಆಯ್ಕೆಗಳಿಲ್ಲ. ಹಾಗಾಗಿ ಇಲ್ಲಿಗೆ ಬಂದ ನಂತರ ಭಾರತೀಯ ಹೋಟೆಲುಗಳನ್ನು ಹುಡುಕಿ ಹೋಗುವುದೇ ಜಾಸ್ತಿ!

ಸಸ್ಯಹಾರಿಯಾದ ನನಗೆ ಹೆಚ್ಚಿನ ಆಯ್ಕೆಗಳೇನು ಇರಲಿಲ್ಲ. ಹಾಗಾಗಿ ಮಸಾಲೆಯಿಲ್ಲದ ‘ವೆಜ್ ಕಟ್ಲೆಟ್’ ಮತ್ತು ‘ಚಿಪ್ಸ್’ ತಿಂದು ಏನೋ ಹೊಸ ಅನುಭವ ಗಳಿಸಿದ ಬಿಮ್ಮಿನಲ್ಲಿ ಹಿಂತಿರುಗಿದ್ದೆ. ವಿಪರ್ಯಾಸವೆಂದರೆ ಬ್ರಿಟನ್ನಿಗೆ ಬಂದ ನಂತರ ಬೀದಿ ಬೀದಿಯಲ್ಲಿ ಇದೇ ರೀತಿಯ ‘ಫಿಶ್ ಅಂಡ್ ಚಿಪ್ಸ್’ ಅಂಗಡಿಗಳು ಕಾಲು ಕಾಲಿಗೇ ತೊಡರಿದರೂ ಮತ್ತೆ ಒಂದೇ ಒಂದು ಬಾರಿಯೂ ಆ ಕಡೆ ಸುಳಿದಿಲ್ಲ!

(ಗ್ರೇವಿ ಮತ್ತು ದನದ ಮಾಂಸ)

ವಿಪರ್ಯಾಸ ಎಂದರೆ ಭಾರತೀಯ ಹೋಟೆಲುಗಳಿಗೆ ಹೋದರೆ, ಅಲ್ಲಿಯೂ ಅರೆ ಬರೆ ನಿರಾಶೆ ‘ಕಟ್ಟಿಟ್ಟ ಬುತ್ತಿ’, ಯಾಕೆಂದರೆ ಇಲ್ಲಿಯ ಭಾರತೀಯ ಆಹಾರಗಳು ಇಂಗ್ಲೀಷರಿಗಾಗಿ ಹೊಸ ಅವತಾರಗಳನ್ನು ಎತ್ತಿರುತ್ತವೆ! ಬ್ರಿಟಿಷರು ಮನೆಯಲ್ಲಿ ಏನನ್ನೇ ತಿನ್ನಲಿ, ಅವರು ಇಷ್ಟ ಪಡುವ ಮೊದಲ ವಿದೇಶಿ ಆಹಾರ ಎಂದರೆ ಅದು ಭಾರತೀಯ ಆಹಾರ. ಈ ಕಾರಣ ಭಾರತೀಯ ಹೋಟೆಲುಗಳಲ್ಲಿ ಭರ್ಜರಿ ವ್ಯಾಪಾರ ಮಾಡುವವರು ಇಂಗ್ಲೀಷರು. ಹಾಗಾಗಿ ಅವರ ಜಿಹ್ವೆಗೆ ಹೊಂದುವಂತೆ ಎಲ್ಲ ಮಸಾಲೆ ಪದಾರ್ಥಗಳನ್ನು ಕಡಿಮೆ ಮಾಡಿರುವ ಈ ವಿದೇಶಿಕೃತ ಭಾರತೀಯ ಊಟ ನಮಗೆ ರುಚಿಸುವುದಿಲ್ಲ. ಜೊತೆಗೆ ಸಸ್ಯಾಹಾರಕ್ಕೆ ಭರ್ಜರಿ ಕೊರತೆ. ಅದರಲ್ಲೂ ದಕ್ಷಿಣ ಭಾರತದ ಊಟ ಬೇಕೆಂದರೆ ದಕ್ಷಿಣ ಭಾರತೀಯರು ಹೆಚ್ಚಿರುವ ಕೆಲವೇ ಕೆಲವು ನಗರ ಅಥವಾ ಪ್ರದೇಶಗಳನ್ನು ಹುಡುಕಿಕೊಂಡು ಹೋಗಬೇಕು.

ಬ್ರಿಟನ್ನಿನ ಜನಪ್ರಿಯ ಆಹಾರ ಫಿಶ್ ಅಂಡ್ ಚಿಪ್ಸ್, ಸಂಡೇ ರೋಶ್ಟ್, ಸ್ಟೀಕ್ ಅಂಡ್ ಪೈ, ಬ್ಯಾಂಗರ್ಸ್ ಅಂಡ್ ಮ್ಯಾಷ್, ಕ್ರೀಂ ಟೀ ಮತ್ತು ಶೆಫರ್ಡ್ಸ್ ಪೈ. ಅವರು ತಿನ್ನುವ ಮುಖ್ಯ ತರಕಾರಿ ಆಲೂಗಡ್ಡೆ, ಕೋಸು, ಹುರುಳೀಕಾಯಿ ಮತ್ತು ಕ್ಯಾರಟ್. ಇದರ ಜೊತೆ ತಮ್ಮದೇ ಕೆಲವು ಭೂ ಭಾಗಗಳ ಹಲವು ಆಹಾರಗಳನ್ನು ಅವೇ ಹೆಸರಿನಲ್ಲಿ ಹಾಗೇ ಉಳಿಸಿಕೊಂಡಿದ್ದಾರೆ. ಕಾರ್ನಿಶ್ ಪಾಸ್ಟೀಸ್, ಯಾರ್ಕ್ಸೈರ್ ಪುಡ್ಡಿಂಗ್, ಕಂಬರ್ಲ್ಯಾಂಡ್ ಸಾಸೇಜ್, ಅರ್ಬ್ರೋತ್ ಸ್ಮೊಕೀ ಮತ್ತು ವೆಲ್ಶ್ ಕೇಕ್ ಗಳು ಅಂತಹ ಕೆಲವು ಉದಾಹರಣೆಗಳು.

ಹಾಗಾಗಿ ಮೊದಲೆಲ್ಲ ಬಂದ ಕಟ್ಟ ಸಂಪ್ರದಾಯಸ್ಥ ಸಸ್ಯಹಾರೀ ಭಾರತೀಯರು ಹೊರಗೆ ಹೋಗಿ ತಿನ್ನಬೇಕಾದ ಸಂದರ್ಭಗಳಲ್ಲಿ ಬರೀ ಒಂದೆರಡು ಬೇಯಿಸಿದ ಆಲೂಗಡ್ಡೆ ಮತ್ತು ಕೋಸನ್ನು ತಿಂದು ಬಂದದ್ದೂ ಉಂಟು. ಭಾರತೀಯರು ಹೆಚ್ಚುಹೆಚ್ಚು ಇಲ್ಲಿಗೆ ಬಂದ ನಂತರ ಬ್ರಿಟಿಷರ ಸಮಾವೇಶಗಳಲ್ಲಿ ಭಾರತೀಯ ಸಮೋಸ, ನಾನ್ ಬ್ರೆಡ್, ಅನ್ನ, ಈರುಳ್ಳಿ ಬೋಂಡ ಮತ್ತು ಯೂರೋಪಿನ ಪಾಸ್ಟ, ರಾವಿಯೋಲಿ ಇತ್ಯಾದಿ ಹಲವು ಆಯ್ಕೆಗಳು ಸಿಗುತ್ತಿವೆ.

ಬ್ರಿಟಿಷರು ಯೂರೋಪು, ಭಾರತ, ಚೈನಾ, ಸ್ಪೇನ್ ಮತ್ತಿತರ ಹಲವು ಹತ್ತು ದೇಶಗಳ ಅಡುಗೆಗಳನ್ನೆಲ್ಲ ತಮ್ಮದನ್ನಾಗಿಸಿಕೊಂಡು ತಮ್ಮ ನಾಲಿಗೆಗನುಣವಾಗಿ ಅವುಗಳ ರುಚಿಯನ್ನು ಹೊಂದಿಸಿಕೊಂಡಿದ್ದಾರೆ. 1971 ರಲ್ಲೇ ನಮ್ಮ ದೇಶದ ‘ಚಿಕನ್ ಟಿಕ್ಕ ಮಸಾಲೆ’ ಯನ್ನು ಬ್ರಿಟನ್ನಿನ ನಿಜವಾದ ನ್ಯಾಷನಲ್ ಫುಡ್ ಎಂದು ಮತ ಚಲಾಯಿಸಿ ಅದನ್ನು ಬ್ರಿಟಿಷರ ಆಹಾರವನ್ನಾಗಿ ಸ್ವೀಕರಿಸಿಬಿಟ್ಟಿದ್ದಾರೆ. ಅಂತೆಯೇ ನಾವು ಇವರು ವೆಜ್ ಕಟ್ಲೆಟ್ ಗಳನ್ನು ಮನೆಯಲ್ಲಿ ತಯಾರಿಸುವಾಗ ಚಟ್ನಿಪುಡಿ, ಉಪ್ಪಿನಕಾಯಿ, ಮೆಣಸಿನಕಾಯಿ ಸೇರಿಸಿ ನಮ್ಮದಾಗಿಸಿಕೊಂಡಿದ್ದೇವೆ!

(ಇಂಗ್ಲಿಷರ ಸಾಂಪ್ರದಾಯಿಕ ಬೆಳಗಿನ ಉಪಹಾರ)

ಭಾರತೀಯರಿಗೂ ಬ್ರಿಟಿಷರು ಹಲವು ಆಹಾರವನ್ನು ಕೊಡುಗೆಯಾಗಿ ನೀಡಿದ್ದಾರೆ. ಇವತ್ತು ನಾವು ತಿನ್ನುತ್ತಿರುವ ಸ್ಯಾಂಡ್ವಿಚ್ ಎನ್ನುವ ಆಹಾರ ಶ್ರಿಮಂತ ಬ್ರಿಟಿಷ್ ಅಧಿಕಾರಿ ಜಾನ್ ಮೊಂಟಾಗು ಎನ್ನುವ ಹವ್ಯಾಸೀ ಜೂಜುಕೋರನೋರ್ವನ ಹೆಸರು ಎಂದು ನಿಮಗೆ ಗೊತ್ತೇ?! 1718 ರಿಂದ 1792 ವರೆಗೆ ಬದುಕಿದ್ದ ಇವನು ಸ್ಯಾಂಡ್ವಿಚ್ ಪ್ರದೇಶದ ಅರ್ಲ್ ಆಗಿದ್ದವನು. ಈತನಿಗೆ ಜೂಜೆಂದರೆ ಭಾರೀ ವ್ಯಾಮೋಹವಂತೆ. ಒಮ್ಮೆ ಆಡಲು ಕುಳಿತನೆಂದರೆ ಊಟಕ್ಕೂ ಏಳದಿದ್ದ ಆಸಾಮಿ. ಹಾಗಾಗಿ ಆಟವಾಡುತ್ತಲೇ ಮಾಂಸವನ್ನು ತಿನ್ನುತ್ತಿದ್ದ ಅವನು ಕೈ ಅಂಟದಿರಲಿ ಅಂತ ಮಾಂಸವನ್ನು ಬ್ರೆಡ್ಡಿನ ತುಣುಕುಗಳ ಮಧ್ಯೆ ಇಟ್ಟು ಕೊಡಲು ಕೇಳುತ್ತಿದ್ದನಂತೆ. ಈಗ ಅದೇ ‘ಅರ್ಲ್ ಆಫ್ ಸ್ಯಾಂಡ್ವಿಚ್’ ನಮ್ಮೆಲ್ಲರ ಕೈ-ಬಾಯಿಗೆ ಆಹಾರವಾಗಿದ್ದಾನೆ. ನಾವು ಭಾರತದಲ್ಲಿದ್ದಾಗ ‘ಪೈ ಚಾರ್ಟ್’ ಗಳ ಬಗ್ಗೆ ಓದುತ್ತಿದ್ದೆವು. ಆದರೆ ‘ಪೈ’ ಅಂದರೆ ಏನು ಎಂದು ತಿಳಿದಿರಲಿಲ್ಲ. ‘ಕಡುಬು’ ಎಂದುಕೊಂಡರೆ ಗಣೇಶನ ಮುಂದಿನ ಮೋದಕಗಳ ಆಕಾರ ಕಣ್ಣಿಗೆ ಕಟ್ಟುತ್ತಿತ್ತು. ಬ್ರಿಟಿಷರ ‘ಪೈ’ ಗುಂಡಗಿನ ತಟ್ಟೆಯಾಕಾರದ ಆಹಾರ ಎಂದು ಕ್ರಮೇಣ ತಿಳಿಯಿತು.

ಈ ದೇಶದಲ್ಲಿ ಚಾಕೋಲೇಟ್ ಜನಪ್ರಿಯ ಸಿಹಿ ತಿಂಡಿ. ಚಾಕೊಲೇಟ್ ಗೆ 350 ಬಿ.ಸಿ. ಯಿಂದಲೂ ಚರಿತ್ರೆಯಿದ್ದು ಇದು ಮೆಸೋ ಅಮೆರಿಕಾದಿಂದ ಉಗಮವಾದದ್ದಾದರೂ ನಾವು ತಿನ್ನುವ ಆಧುನಿಕ ‘ಚಾಕೋಲೇಟು ಬಾರ್’ ಗಳು ಮೊಟ್ಟಮೊದಲ ಬಾರಿಗೆ ಉತ್ಪಾದನೆಯಾದದ್ದು ಇಂಗ್ಲೆಂಡಿನ ಬ್ರಿಸ್ಟಲ್ ನಗರದಲ್ಲಿ. 1720 ರಲ್ಲಿ ಜೋಸೆಫ್ ಫ್ರೈ ಎಂಬಾತನಿಂದ. ಇವನ ಉದ್ಯಮವನ್ನು ಕೊಂಡುಕೊಂಡಿದ್ದು ನಾವೆಲ್ಲ ತಿನ್ನುವ ‘ಕ್ಯಾಡ್ಬರಿ’ ಎಂಬಾತ. 1824 ರಿಂದ 2010 ರವರೆಗೆ ಈತ ಮತ್ತು ಈತನ ವಂಶಜರು ನಡೆಸಿದ ಈ ಉದ್ಯಮ ಭಾರತಕ್ಕೂ ಸೇರಿದಂತೆ ಈಗ ಐವತ್ತು ದೇಶಗಳಿಗೆ ಹಬ್ಬಿದೆ. 2010 ರಲ್ಲಿ ಇದನ್ನು ಅಮೆರಿಕಾದ ಮಾಂಡಿಲೆಝ್ ಕಂಪನಿ ಖರೀದಿಸಿತಿದಾದರೂ ಜನಪ್ರಿಯ ‘ಕ್ಯಾಡ್ಬರಿ’ಯ ಹೆಸರು ಹಾಗೇ ಉಳಿದಿದೆ. ನಾನಾ ದೇಶದ ಆಹಾರವನ್ನು ತಮ್ಮದಾಗಿಸಿಕೊಂಡರೂ, ಬ್ರಿಟಿಷರು ನಮ್ಮಂತೆ ಪ್ರತಿದಿನ ಅಡುಗೆ ಮಾಡುವುದಿಲ್ಲ. ಬ್ರಿಟನ್ನಿನಲ್ಲಿ ಮನೆಗಳಲ್ಲಿ ಅಡುಗೆ ಮಾಡುವುದು ನಿಂತುಹೋಗಿ ತಲೆಮಾರುಗಳು ಸಂದಿವೆ.

“ನಾನು ನಮ್ಮಮ್ಮ ಅಡಿಗೆ ಮಾಡಿದ್ದನ್ನು ನೋಡಿಯೇ ಇಲ್ಲ…..” ಎಂದು ಹೇಳುವ ತಲೆಮಾರುಗಳು ಈಗ ಬ್ರಿಟನ್ನಿನಲ್ಲಿ ಇವೆ. ಈ ದೇಶದ ಯಾವ ಮನೆಯಲ್ಲೂ ಪೂರ್ಣ ಪ್ರಮಾಣದಲ್ಲಿ ಪ್ರತಿದಿನ ಮನೆ ಅಡುಗೆ ತಯಾರಾಗುವುದಿಲ್ಲ. ಮೊದಲ ಮತ್ತು ಎರಡನೇ ಮಹಾಯುದ್ಧಗಳ ಕಾಲದಿಂದಲೇ ಹೆಂಗಸರು ಹೊರಗೆ ಕೆಲಸ ಮಾಡಬೇಕಾದ ಅವಶ್ಯಕತೆ ಬಿದ್ದ ಕಾರಣ ಅಡಿಗೆ ಮನೆಯಲ್ಲಿ ದುಡಿಯುವ ಕೆಲಸ ನಿಲ್ಲುತ್ತ ಬಂತು. ಕೈಗಾರೀಕರಣದ ನಂತರವಂತೂ ಕೊಂಡು ತಿನ್ನುವ ಸಿದ್ಧ ಆಹಾರದ ಫಾಸ್ಟ್ ಫುಡ್ ರೆಸ್ಟುರಾಂಟ್ ಗಳು ಅಣಬೆಯಂತೆ ಅಹೋರಾತ್ರಿ ಬೆಳೆದವು.ಇಂಗ್ಲೆಂಡಿನಂಥ ದೇಶಗಳಲ್ಲಿ ಈಗಿನ ತಲೆಮಾರಿನವರಿಗೆ ಬೆಳಗೆದ್ದರೆ ಸೀರಿಯಲ್, ಮಧ್ಯಾನ್ಹ ಅಂಗಡಿಯಲ್ಲಿ ಕೊಳ್ಳುವ ಸ್ಯಾಂಡ್ವಿಚ್, ರಾತ್ರಿಯಾದರೆ ಅದಾಗಲೇ ಅರೆ ಬರೆ ಬೆಂದಿರುವ/ ತಯಾರಿರುವ ಅಡುಗೆಗಳನ್ನು ಒಂದಿಷ್ಟು ಬಿಸಿ ಮಾಡಿಕೊಂಡು ತಿನ್ನುವ ದಿನನಿತ್ಯದ ಆಭ್ಯಾಸಗಳಿವೆ. ಇವರ ಅಡುಗೆಮನೆಗಳು ಯಾವಾಗಲೂ ಅಚ್ಚುಕಟ್ಟಾಗಿರುತ್ತವೆ. ಎಲ್ಲ ಪರಿಕರಗಳಿದ್ದೂ ಅವು ಬಳಕೆಯಾಗುವುದು ಎಂದೋ ಒಂದು ದಿನ. ಆದರೆ ಸುಸಜ್ಜಿತ ಅಡುಗೆಮನೆಗಳು ಅಲಂಕಾರದಾಯಕವಾಗಿ ಮಾತ್ರ ಕೆಲಸ ಮಾಡುತ್ತಿವೆ. ಅಲ್ಲಿಟ್ಟಿರುವ ಹೂಗಳು ಕೂಡ ಅಡುಗೆಯ ಶಾಖಕ್ಕೆ ತುತ್ತಾಗದೆ ನಳನಳಿಸುತ್ತಿರುತ್ತವೆ. ಅಂತೆಯೇ ಜನರು ಕೂಡ!

(ಜಾತ್ರೆಯ ಪೋರ್ಕ್ ಸ್ಟಾಲ್)

ಇದನ್ನೇ ಅನುಕರಿಸಿ ಕೆಲವು ಭಾರತೀಯ ಮನೆಗಳು ತಮ್ಮ ಸುಸಜ್ಜಿತ ದೊಡ್ಡ ಅಡುಗೆ ಮನೆಗಳನ್ನು ಪ್ರದರ್ಶನಕ್ಕೆ ಉಳಿಸಿಕೊಂಡು, ವಾಸನೆ ಬರುವಂತ ಭಾರತೀಯ ಖಾದ್ಯಗಳನ್ನು ಕಷ್ಟಪಟ್ಟು ಸಣ್ಣದಾದ ಓಣಿಯಂತ ಯುಟಿಲಿಟಿ ಕೋಣೆಯಲ್ಲಿ ನಿಂತು ತಯಾರಿಸುತ್ತಾರೆ! ಆಗೆಲ್ಲ, ಇಷ್ಟೆಲ್ಲ ದುಡ್ಡುಕೊಟ್ಟು ಕೊಳ್ಳುವ ಅಡುಗೆಮನೆಗಳ ಉಪಯೋಗ ಅನಿವಾಸೀ ಭಾರತಿಯರಿಗೆ ಇಷ್ಟೇಯೇ ಅನ್ನಿಸಿ ಮನಸ್ಸಿಗೆ ಪಿಚ್ಚೆನ್ನಿಸಿದೆ.

ಯುಗಾದಿಗೆ ಒಬ್ಬಟ್ಟು, ದೀಪಾವಳಿಗೆ ಕಜ್ಜಾಯ, ಗಣೇಶನ ಹಬ್ಬಕ್ಕೆ ಕಡುಬು ಎಂದು ಒಂದೊಂದು ಹಬ್ಬಕ್ಕೂ ವಿಷೇಶ ಸಿಹಿ ತಿನಿಸುಗಳನ್ನು ಮಾಡಿಕೊಂಡು ತಿನ್ನುವ ನಮ್ಮ ದೇಶದ ಸಂಪ್ರದಾಯಗಳು ಒಂದುಕಡೆಯಿದ್ದರೆ, ವರ್ಷಕ್ಕೆ ಒಂದೇ ಒಂದು ದೊಡ್ಡ ಹಬ್ಬವಾದ ಕ್ರಿಸ್ಮಸ್ ನಲ್ಲಿ ಕೂಡ ಬಹುತೇಕ ಬ್ರಿಟಿಷರು ಹಬ್ಬದ ಎಲ್ಲ ಅಡುಗೆಗಳನ್ನು ಅಂಗಡಿಯಿಂದಲೇ ಕೊಂಡುತಂದು ಓವನ್ನಿನಲ್ಲಿ, ಮೈಕ್ರೋ ಓವನ್ನಿನಲ್ಲಿ ಬಿಸಿಮಾಡಿಕೊಂಡು, ಚೆಂದವಾಗಿ ಊಟದ ಟೇಬಲ್ಲುಗಳನ್ನು ಅಲಂಕರಿಸಿ, ತಾವೂ ಅಲಂಕರಿಸಿಕೊಂಡು ಆನಂದಿಸಿ, ಮುಗಿಸಿಬಿಡುತ್ತಾರೆ. ಹಬ್ಬಕ್ಕಾಗಿ ಬೇಕಾಗುವ ಸಿಹಿಯನ್ನು, ಮಾಂಸವನ್ನು ಪೈಪೋಟಿಯ ಮೇಲೆ ತಯಾರಿಸಿ, ಸೂಪರ್ ಮಾರುಕಟ್ಟೆಗಳು ಒದಗಿಸುತ್ತವೆ. ಹಬ್ಬದ ಸಮಯದಲ್ಲಿ ಆಹಾರದ ಮಾರಾಟದ ಉದ್ಯಮಗಳು ಬಿಲ್ಲಿಯನ್ನುಗಟ್ಟಲೆ ವಹಿವಾಟನ್ನು ನಡೆಸುತ್ತವೆ. ಇಡೀ ಯೂರೋಪಿನಲ್ಲಿ ತಯಾರಾಗುವ ಸಿದ್ಧ ಊಟಗಳ ಅರ್ಧ ಭಾಗವನ್ನು ಇಂಗ್ಲೆಂಡ್ ಒಂದೇ ತಿನ್ನುತ್ತಿದೆ!

(ಇಂಡಿಯನ್ ಟೇಕ್ ಅವೇ)

2016 ರಲ್ಲಿ ಮೈಕ್ರೋವೇವಿನಲ್ಲಿ ಬಿಸಿ ಮಾಡಿಕೊಂಡು ತಿನ್ನಬಹುದಾದ ಸಿದ್ಧ ಆಹಾರದ ಮೇಲೆ ಈ ಜನರು 3 ಬಿಲಿಯನ್ ಪೌಂಡುಗಳನ್ನು ಖರ್ಚುಮಾಡಿದ್ದಾರೆ. ಅಂದರೆ ಪ್ರತಿದಿನ 9 ಮಿಲಿಯನ್ ಪೌಂಡುಗಳನ್ನು ಜನರು ವ್ಯಯಿಸಿದ್ದಾರೆ. ಫ್ರಾನ್ಸ್ ಗಿಂತ ಇಂಗ್ಲಿಷರು ಸಿದ್ಧ ಆಹಾರಗಳ ಮೇಲೆ ಎರಡು ಬಾರಿ ಹೆಚ್ಚಿಗೆ ಹಣ ಹೂಡುತ್ತಿದ್ದಾರೆ. ಸ್ಪೇನ್ ದೇಶಕ್ಕಿಂತ ಆರು ಪಟ್ಟು ಹೆಚ್ಚು ಸಿದ್ಧ ಆಹಾರದ ಮೇಲೆ ಅವಲಂಬಿತರಾಗಿದ್ದಾರೆ. ಇದು ವರ್ಷದಿಂದ ವರ್ಷಕ್ಕೆ ಹೆಚ್ಚುತ್ತಲೇ ಇದೆ.

2015 ಕ್ಕೆ ಹೋಲಿಸಿದರೆ 2016 ರಲ್ಲಿ ಮತ್ತೂ ಒಂದು ಲಕ್ಷಕ್ಕೂ ಹೆಚ್ಚಿನ ಮನೆಗಳು ಇಂತಹ ಆಹಾರಕ್ಕೆ ಮಣಿದವು. 37 ಮಿಲಿಯನ್ನು ವಹಿವಾಟು ಇದರಿಂದ ಹೆಚ್ಚಿತು. ಈ ಇಂಗ್ಲಿಷರ ಮನಸ್ಥಿತಿ ಈಗಾಗಲೇ ಎರಡೆರಡು ತಲೆಮಾರುಗಳಿಂದ ಸಿದ್ಧ ಆಹಾರಗಳ ಕಡೆ ವಾಲಿದೆ. ಈ ಹಿಂದೆ ಫ್ರೀಜರಿನಲ್ಲಿ ಇಟ್ಟಂತ ಅತಿ ತಣ್ಣಗಿನ ಆಹಾರಗಳನ್ನು ಮನೆಯ ವಾತಾವರಣಕ್ಕೆ ತಂದು ನಂತರ ತಿನ್ನುವ ಸಹನೆಯಾದರೂ ಇತ್ತು. ಆದರೆ ಕಳೆದ ವರ್ಷದ ಅಂಕಿ ಅಂಶಗಳ ಪ್ರಕಾರ ಈಗ ಜನರಲ್ಲಿ ಆ ರೀತಿಯ ಸಹನೆಯೂ ಉಳಿದಿಲ್ಲ. ಹಾಗಾಗಿ ಫ್ರೀಜರಿನಲ್ಲಿ ಇಡುತ್ತಿದ್ದ ತಣ್ಣನೆಯ ಆಹಾರದ ವಹಿವಾಟು 25 ಮಿಲಿಯನ್ನುಗಳಷ್ಟು ಕಡಿಮೆಯಾಯ್ತು. ಆದರೆ ಫ್ರಿಜ್ಜಿನಿಂದ ತೆಗೆದು ಒಂದೆರಡು ನಿಮಿಷಗಳಲ್ಲಿ ಬಿಸಿ ಮಾಡಿ ತಿನ್ನುವಂತ ಅತಿ ಸುಲಭದ, ತತ್ ಕ್ಷಣದ ಅಡುಗೆಯ ವಹಿವಾಟು 62 ಮಿಲಿಯನ್ನು ಪೌಂಡುಗಳಷ್ಟು ಜಾಸ್ತಿಯಾಯ್ತು. ಕಾಲಕ್ಕೆ ವೇಗ ಬಂದಿಲ್ಲ ಎಂದರೆ ಇಲ್ಲಿ ನಂಬದಿರುವವರಾದರೂ ಯಾರು?

ಜನರಿಗೆ ಅಡುಗೆ ಮಾಡುವುದಿರಲಿ, ಅದನ್ನು ಬಿಸಿ ಮಾಡಲು ಹೆಚ್ಚುಕಾಲ ತಗೊಂಡರೆ ಅದಕ್ಕೂ ಈಗ ಸಹನೆ ಮುರಿಯುತ್ತಿದೆ. ಇನ್ನು ಮನೆ ಅಡುಗೆಯ ರುಚಿಗೇನಾಗಿದೆ ಎನ್ನುವುದು ಇನ್ನೂ ಕುತೂಹಲಕಾರಿ. ಇವತ್ತು ಇಂಗ್ಲೆಂಡಿನಲ್ಲಿ ಇಂಗ್ಲಿಷರ ರುಚಿಗೆ ಹೊಂದುವಂತೆ ಮಾಡುವ ಭಾರತದ ಅಡುಗೆಗಳಿಗೆ ಶೇ 18 ರಷ್ಟು ಬೇಡಿಕೆಯಿದ್ದು ಅದು ಮಂಚೂಣಿಯಲ್ಲಿದೆ, ಚೈನಾಕ್ಕೆ 13%, ಇಟಲಿಯ ಅಡುಗೆಗಳಿಗೆ ಮತ್ತು ಇಂಗ್ಲಿಷರ ಅಡುಗೆಗಳಿಗೆ ಶೇ 10%, ಬರ್ಗರ್ ಮುಂತಾದ ಫಾಸ್ಟ್ ಆಹಾರಗಳಿಗೆ 4% ಬೇಡಿಕೆಯಿದೆ. ಇನ್ನಿತರ ಎಲ್ಲ ಬಗೆಯ ಏಶಿಯನ್ ಆಹಾರಗಳಿಗೆ ಒಟ್ಟಾರೆ 44% ಜನಪ್ರಿಯತೆಯಿದೆ. ಇನ್ನೊಂದರ್ಥದಲ್ಲಿ ಅಡುಗೆಮನೆಗಳ ರುಚಿ ಕಳೆದಂತೆ ದೇಶ ವಿದೇಶಿ ಆಹಾರಗಳು ಅವರಿಗೆ ಪ್ರಿಯವಾಗಿ ಬಿಟ್ಟಿವೆ. ಈ ಸಿದ್ಧ ಆಹಾರಗಳ ಬೇಡಿಕೆ ಕಳೆದ ವರ್ಷ 44% ಹೆಚ್ಚಾಯಿತು. ಬ್ರಿಟನ್ನೇ ಅಲ್ಲದೆ ಇನ್ನಿತರ ಯೂರೋಪಿಯನ್ ದೇಶಗಳಲ್ಲಿ ಬೇಡಿಕೆ 29% ಹೆಚ್ಚಾಯ್ತು. ಈ ಬೇಡಿಕೆಗಳು ಪ್ರತಿ ವರ್ಷ ಹೆಚ್ಚುತ್ತಲೇ ಇವೆ.

(ಫಿಶ್ ಅಂಡ್ ಚಿಪ್ಸ್)

ಪ್ರತಿನಿತ್ಯದ ಪ್ರತಿ ಊಟವನ್ನೂ ಕೊಂಡುತಿನ್ನುವ ಜನರಿಗೆ ಬೇರೆ ಬೇರೆ ಬಗೆಯ ಆಹಾರದ ಸರಬರಾಜನ್ನು ಮಾಡಲು ಪೈಪೋಟಿ ನಡೆಸುವ ಉದ್ಯಮಗಳು ಇಲ್ಲಿ ಹಗಲಿರುಳು ಶ್ರಮಿಸುತ್ತವೆ. ಪ್ರತಿ ಬಾರಿ ಕ್ರಿಸ್ಮಸ್ ಬಂದಾಗಲೂ ತಮ್ಮ ತಮ್ಮ ಔತಣದ ಅಡಿಗೆಗಳು ಆಕರ್ಷಕವಾಗಿ, ಭಿನ್ನವಾಗಿ ಕಾಣಲು ಉಪಾಯಗಳನ್ನು ಹುಡುಕುತ್ತಾರೆ. ಅದಕ್ಕಾಗಿ ತಂಡಗಳನ್ನು ನೇಮಿಸಿಕೊಂಡು, ರಿಸರ್ಚ್ ಗಳನ್ನು ಮಾಡಿ, ಆಯಾ ಆಹಾರಗಳಿಗೆ, ಪಾನೀಯಗಳಿಗೆ ಹೊಂದುವಂತ ಸಾಮಗ್ರಿಗಳನ್ನು ದೇಶ ವಿದೇಶಗಳಲ್ಲಿ ಹುಡುಕಿ ಆರಿಸುತ್ತಾರೆ. ಗ್ರಾಹಕರಿಗೆ ಬೇಜಾರು ಮಾಡದಂತೆ, ಅವರ ಗಮನ ಸೆಳೆಯುವಂತೆ ಅದರ ಪ್ಯಾಕೇಜಿಂಗ್ ಗೆ ಶ್ರಮಿಸುತ್ತಾರೆ, ಜಾಹೀರಾತುಗಳನ್ನು ನೀಡುತ್ತಾರೆ.

ಬಡವರಿರಲಿ, ಶ್ರೀಮಂತರಿರಲಿ ಅವರವರಿಗೆ ಎಟುಕುವಂತೆ ಎಲ್ಲ ವರ್ಗದ ಜನರಿಗೆ ಇವುಗಳ ಬೆಲೆಯನ್ನಿರಿಸಿ ಮಾರಾಟ ಮಾಡುತ್ತಾರೆ. ಉದಾಹರಣೆಗೆ ಪುಡ್ಡಿಂಗ್ ಎನ್ನುವ ಅವರ ಹಬ್ಬದ ವಿಶೇಷ ತಿನಿಸಿಗೆ ಬಳಸುವ ಸಾಮಗ್ರಿಯನ್ನು ಅನುಸರಿಸಿ ಬೆಲೆಯನ್ನು ನಿಗದಿಮಾಡುತ್ತಾರೆ. ಹಾಗಾಗಿ ಯಾರೂ ಮನೆಯಲ್ಲಿ ಅಡುಗೆ ಮಾಡುವ ತಕರಾರಿಗೆ ಹೋಗದಂತೆ ಎಚ್ಚರಿಕೆ ವಹಿಸಿ ತಮ್ಮ ಉದ್ಯಮಗಳನ್ನು ಕಾಪಾಡಿಕೊಂಡಿದ್ದಾರೆ. ಇನ್ನೂ ಖಚಿತವಾಗಿ ಆಗುತ್ತಿರುವುದೆಂದರೆ, ಡಿಸೆಂಬರಿನಲ್ಲಿ ಬರುವ ಹಬ್ಬಕ್ಕೆ ಸೆಪ್ಟಂಬರಿನಿಂದಲೇ ಹೋಟೆಲುಗಳಲ್ಲಿ ಜನರು ಊಟಕ್ಕಾಗಿ, ಪಾರ್ಟಿಗಳಿಗಾಗಿ ಜಾಗಗಳನ್ನು ಕಾದಿರಿಸುತ್ತಾರೆ. ಬರೀ ಸ್ನೇಹಿತರು ಮಾತ್ರವೇ ಅಲ್ಲದೆ, ಕುಟುಂಬಗಳು ಸಾಲಂಕೃತವಾಗಿ ಹೋಟೆಲ್ಲುಗಳಿಗೆ ಹೋಗಿ ಊಟ ಮುಗಿಸಿ ಬರುತ್ತಾರೆ. ಹಬ್ಬದ ದಿನವೂ ಹೋಟೆಲ್ಲುಗಳು ಭರ್ತಿಯಾಗಿ ನಡೆಯುತ್ತವೆ!

(4Th earl of sandwitch, John montagu)

ಈಗಾಗಲೇ ಒಂದೆರಡು ಇಂತಹ ತಲೆಮಾರುಗಳು ಬಂದು ಹೋಗಿರುವ ಕಾರಣ ಅವರಿಗೆ ಅಡುಗೆ ಮಾಡುವ ತಂದೆ ತಾಯಿಯರ ಪರಿಚಯವಿಲ್ಲ. ಅಡುಗೆಯ ಕಲೆಯನ್ನು ಕಲಿಸಲು ಶಿಕ್ಷಕರ ಹೊರತು ಬೇರೆಯ ದಾರಿಯಿಲ್ಲವಾಗಿದೆ. ಆದರೆ ಊಟದ ಉದ್ಯಮಗಳು ಬೆಳೆದಂತೆಲ್ಲ ಕೆಲಸ ಗಳಿಕೆಗಾಗಿ ಅಡುಗೆ ಕಲಿಸುವ ಶಾಲೆಗಳು ಹೆಚ್ಚುತ್ತಿವೆ. ಆದರೆ ಮನೆಗಳಲ್ಲಿ ಮುಂದಿನ ಪೀಳಿಗೆಗಳು ಹಿಂದಕ್ಕೆ ಹೆಜ್ಜೆ ಹಾಕುವುದು ದೂರದ ಮಾತು. ಇದು ಕಾಲ ತಂದ ಬದಲಾವಣೆಯಾದರೂ, ಉದ್ಯಮಗಳ ಭಾರೀ ವಿಜಯ ಅಂತಲೇ ಹೇಳಬಹುದು. ಹಾಗಾಗಿಯೇ ಇವತ್ತು ಅಂಗಡಿಗಳು ಮಾಯವಾಗಿ ಸೂಪರ್ ಮಾರುಕಟ್ಟೆಗಳು ಹೆಚ್ಚಾಗಿ ವಹಿವಾಟು ನಡೆಸುತ್ತಿರುವುದು. ಸಿದ್ಧ ಆಹಾರಗಳು, ಅರೆಬರೆ ತಯಾರಾದ ಆಹಾರಗಳು, ಮತ್ತು ರೆಡಿಯಾಗಿ ದೊರೆಯುವ ಆಹಾರಗಳನ್ನು ತೆಗೆದುಬಿಟ್ಟರೆ ಇವುಗಳು ‘ಸೂಪರ್’ ಪದವನ್ನು ಕಳೆದುಕೊಂಡು ಬರೀ ಮಾರುಕಟ್ಟೆಗಳಾಗುವುದು ಸುಳ್ಳಲ್ಲ.

ಡಿಸೆಂಬರಿನಲ್ಲಿ ಬರುವ ಹಬ್ಬಕ್ಕೆ ಸೆಪ್ಟಂಬರಿನಿಂದಲೇ ಹೋಟೆಲುಗಳಲ್ಲಿ ಜನರು ಊಟಕ್ಕಾಗಿ, ಪಾರ್ಟಿಗಳಿಗಾಗಿ ಜಾಗಗಳನ್ನು ಕಾದಿರಿಸುತ್ತಾರೆ. ಬರೀ ಸ್ನೇಹಿತರು ಮಾತ್ರವೇ ಅಲ್ಲದೆ, ಕುಟುಂಬಗಳು ಸಾಲಂಕೃತವಾಗಿ ಹೋಟೆಲ್ಲುಗಳಿಗೆ ಹೋಗಿ ಊಟ ಮುಗಿಸಿ ಬರುತ್ತಾರೆ. ಹಬ್ಬದ ದಿನವೂ ಹೋಟೆಲ್ಲುಗಳು ಭರ್ತಿಯಾಗಿ ನಡೆಯುತ್ತವೆ!

ಇವರಲ್ಲಿ ಬೆರಳೆಣಿಕೆಯ ಕೆಲವರು ಮಾತ್ರ ಈಗಲೂ ಬೇಕಿಂಗ್ ಮಾಡುವ ಹುಮ್ಮಸ್ಸಿನವರು. ಬೇಕಿಂಗ್ ಮತ್ತು ಕುಕಿಂಗ್ ಗಳ ಬಗ್ಗೆ ದೂರದರ್ಶನದಲ್ಲಿ ಹಲವು ಜನಪ್ರಿಯ ಕಾರ್ಯಕ್ರಮಗಳು ಬರುತ್ತವೆ. ಮಿಕ್ಕವರು ಇವನ್ನು ನೋಡುವುದು ಮನರಂಜನೆಗಾಗಿ. ಹಾಗಂತ ಎಲ್ಲವೂ ಕಹಿಯೇನಲ್ಲ. ಆಹಾರದ ಔದ್ಯಮೀಕರಣದಿಂದಲೂ ಹಲವು ಲಾಭಗಳಿವೆ. ಒಂದಾನೊಂದು ಕಾಲದಲ್ಲಿ ಚಾಕಲೇಟಿನಂತ ಸಿಹಿ ಪದಾರ್ಥ ಈ ದೇಶದಲ್ಲಿ ಕೂಡ ಕೇವಲ ಶ್ರೀಮಂತರ ಸ್ವತ್ತಾಗಿತ್ತು. ಬೆಲೆ ಗಗನ ಮುಟ್ಟುತ್ತಿತ್ತು. ಕೈಗಾರಿಕಾ ಕ್ರಾಂತಿಯಾದ ನಂತರ ಎಲ್ಲ ಉತ್ಪಾದನೆಗಳೂ ಔದ್ಯಮಿಕ ಮಟ್ಟ ತಲುಪಿದವು. ಬೆಲೆಗಳು ಕುಸಿದವು. ಸಣ್ಣ ವ್ಯಾಪಾರಿಗಳು ತಮ್ಮ ಅಂಗಡಿಗಳಿಗೆ ಬೀಗ ಹಾಕಿ ನಷ್ಟ ಅನುಭವಿಸಿದರು. ಆದರೆ ಬಡವನಿಗೂ ಚಾಕಲೇಟಿನಂತಹ ಸಿಹಿ ದೊರಕುವುದು ಸಾಧ್ಯವಾಯಿತು. ಸಾವಿರಾರು ಮಂದಿಗೆ ಕೆಲಸಗಳು ದೊರೆತವು (ಇದನ್ನೆಲ್ಲ ನೆನಸಿಕೊಳ್ಳುವ ಹಲವರನ್ನು ನನ್ನ ವೃತ್ತಿಯಲ್ಲಿ ನಾನು ಭೇಟಿಯಾಗುತ್ತಿರುತ್ತೇನೆ. ಆದರೆ ಇದಕ್ಕೇ ನಮ್ಮ ಹಲ್ಲುಗಳೆಲ್ಲ ಹುಳುಕಾಗಿ ಬಿದ್ದು ಹೋದವು. ಆದರೆ ಚಾಕಲೇಟು ಸಿಗದ ನಮ್ಮ ಪೂರ್ವಜರ ಹಲ್ಲುಗಳು ಗಟ್ಟಿಯಾಗಿದ್ದವು ಎನ್ನುವುದು ಇವರ ಸಮರ್ಥನೆ !) ಇತರೆ ಸಾಂಸ್ಕೃತಿಕ ಲಾಭ-ನಷ್ಟಗಳ ಲೆಕ್ಕಾಚಾರ ಗೌಣವಾಯಿತು. ಕಾಲ ಚಕ್ರವನ್ನು ನಿಲ್ಲಿಸುವುದು ಸಾಧ್ಯವಿಲ್ಲ. ಈ ಸಿದ್ಧ ಆಹಾರಗಳ ಭರಾಟೆ ಕೂಡ ಅಂಥದ್ದೇ ಎನ್ನಬಹುದೇನೋ? ಈ ಬದಲಾವಣೆಗಳು ಜಾಗತಿಕ ಮಟ್ಟದವು. ಇದೇ ಕಾರಣಕ್ಕೆ ಇವತ್ತು ಭಾರತಕ್ಕೆ ಬಂದರೆ ಹೋಟೆಲುಗಳಿಗೆ ಕರೆವವರೇ ಹೆಚ್ಚು ಮಂದಿ!

ಭಾರತದ ಆರ್ಥಿಕ ಬೆಳವಣಿಗೆ ಹಲವಾರು ವರ್ಷಗಳಿಂದ ಏರುಮುಖವಾಗಿದೆ. ಹೀಗೇ ಬೆಳೆದರೆ 2025 ರ ವೇಳೆಗೆ ಪ್ರಪಂಚದ 5 ನೇ ಅತಿದೊಡ್ಡ ವಾಣಿಜ್ಯದೇಶವಾಗುತ್ತದೆ ಎನ್ನುವ ಅಂದಾಜಿದೆ. ಹಳೆಯ ತಲೆಮಾರಿನ ಜನರು ಅಡುಗೆ ಮನೆಯ ಆಹಾರ ತಿಂದೇ ಬೆಳೆದವರು. ಆದರೆ ಭಾರತದ ಇಂದಿನ ಜನಸಂಖ್ಯೆಯಲ್ಲಿ ಶೇ.50 ಜನರು ಮೂವತ್ತು ವರ್ಷಕ್ಕಿಂತ ಕಡಿಮೆ ವಯಸ್ಸಿನವರು. ಇವರ ಸಂಖ್ಯೆ 440 ಮಿಲಿಯನ್ನುಗಳನ್ನೂ ಮೀರಿದೆ. ಬೆಳೆಯುತ್ತಲೇ ಇದೆ. ಇವರಲ್ಲಿ 390 ಮಿಲಿಯನ್ ಜನರು 2000 ನೇ ಇಸವಿಯ ನಂತರ ಹುಟ್ಟಿದವರು. ಇವರಲ್ಲಿ 81% ಮಂದಿ ಹೋಟೆಲುಗಳಲ್ಲಿ ತಿನ್ನಲು ಬಯಸುತ್ತಾರೆ. 19% ಮನೆಗೇ ಊಟ ತರಿಸಿಕೊಂಡು ತಿನ್ನುವ ಇರಾದೆ ಇರುವವರು.

(ಯಾರ್ಕ್ಸೈರ್ ಪುಡ್ಡಿಂಗ್ ಮತ್ತು ಸಾಸೇಜ್)

ಭಾರತೀಯರ ಗಳಿಕೆಯ ದೊಡ್ಡ ಭಾಗ ಆಹಾರ ಮತ್ತು ದಿನಸಿಗಳ ಮೇಲೆ ಖರ್ಚಾಗುತ್ತದೆ. ಇದೇನು ಉತ್ಪ್ರೇಕ್ಷೆಯಲ್ಲ. ಯಾಕೆಂದರೆ ಭಾರತೀಯರು ಊಟಕ್ಕೆ ಖರ್ಚು ಮಾಡುವುದು ಬೇರೆ ದೇಶಗಳಿಗಿಂತ ಅತಿ ಹೆಚ್ಚು ಎನ್ನಬಹುದು. ಒಬ್ಬ ಭಾರತೀಯನ ದುಡಿಮೆಯ ಅಂದಾಜು 31% ಭಾಗ ಊಟಗಳ ಮೇಲೆ ಖರ್ಚಾಗುತ್ತದೆ. ಚೈನೀಯರು 25%, ಬ್ರೆಝಿಲ್ ನವರು 17% ಮತ್ತು ಅಮೆರಿಕನ್ನರು 9% ಮಾತ್ರ ಊಟಕ್ಕೆ ಸಂಬಂಧಪಟ್ಟಂತೆ ಖರ್ಚುಮಾಡುವುದು. ಇದಕ್ಕೆ ನಮ್ಮ ಬದುಕಿನ ಶೈಲಿಯೂ ಕಾರಣವಿರಬಹುದು. ಮೂರೂ ಹೊತ್ತು ದೊಡ್ಡ ಊಟಗಳನ್ನು ಮಾಡುವುದು, ಊಟಕ್ಕೆ ಅತಿ ಪ್ರಾಮುಖ್ಯತೆ ಕೊಡುವುದು, ಊಟದ ಸುತ್ತಲೇ ಎಲ್ಲ ಕಾರ್ಯಕ್ರಮಗಳನ್ನು ಮಾಡುವುದು ಎಲ್ಲವೂ ಕಾರಣವಿರಬಹುದು. ಇನ್ನು ನಮ್ಮ ದೇಶಗಳು ಪರದೇಶಗಳಂತೆ ಹೋಟೆಲುಗಳ, ಸಿದ್ಧ ಆಹಾರದ ಮೇಲೆ ಅವಲಂಬಿತವಾಗಿಲ್ಲ ಎನ್ನುವ ಕಾಲವೂ ಮುಗಿಯುತ್ತ ಬಂದಿದೆ.

ಸಿದ್ಧ ಆಹಾರದ ಉದ್ಯಮಗಳು ಈಗಾಗಲೇ ಭಾರತವನ್ನು ತಮ್ಮ ಕರ್ಮಕ್ಷೇತ್ರ ಮಾಡಿಕೊಂಡು ಈಗಾಗಲೇ ಕೆಲಕಾಲ ಕಳೆದಿವೆ. ತಮ್ಮ ವಹಿವಾಟನ್ನು ಮುಂದಿನ ವರ್ಷಗಳಲ್ಲಿ ಇನ್ನೂ ಹೆಚ್ಚು ಮಾಡಲು ಎಲ್ಲವೂ ಸಿದ್ಧವಾಗಿವೆ.  ಭಾರತದ ಸಿದ್ಧ ಆಹಾರದ ಉದ್ಯಮಗಳ ಒಟ್ಟು ಮೊತ್ತ ಇಡೀ ಪ್ರಪಂಚದಲ್ಲಿ ಈಗಾಗಲೇ ಆರನೆಯ ಸ್ಥಾನದಲ್ಲಿದೆ. ಸದ್ಯಕ್ಕೆ 70% ವಹಿವಾಟು ಚಿಲ್ಲರೆ ವ್ಯಾಪಾರಿಗಳಿಂದ ಉತ್ಪನ್ನವಾಗುತ್ತಿದೆ. ಮುಂದೊಂದು ದಿನ ಕೈಗಾರೀಕರಣ ಉಚ್ರಾಯ ಸ್ಥಿತಿ ಮುಟ್ಟಿ ದೊಡ್ಡ ಹೆಸರುಗಳು ಕೇಳಿಬರಬಹುದು.

ಭಾರತದಲ್ಲಿ ಪೂರ್ತಿ ಸರ್ವೀಸು ಕೊಡುವ ರೆಷ್ಟುರೆಂಟುಗಳ ಉದ್ಯಮ 56.6% ನಷ್ಟಿದೆ. ಇದರ ಹಿಂದೆ ಫಾಸ್ಟ್ ಫುಡ್ ಉದ್ಯಮ 16.3%, ದಾರಿಬದಿಯ ಆಹಾರ ಮಳಿಗೆಗಳು 14.6% ಇದ್ದರೆ, ಕೆಫೆ ಮತ್ತು ಬಾರ್ ಗಳು 12.5% ರಷ್ಟು ಉದ್ಯಮವನ್ನು ಹೊಂದಿವೆ. ಈ ಅಂಕಿ ಸಂಖ್ಯೆಗಳು ಎಂದಿಗಿಂತಲೂ ಅತ್ಯಧಿಕವಾಗಿರುವುದು ಭಾರತದ ಹೊಸ ಮಿಡಿತವನ್ನು ಡಣಾಡಾಳಾಗಿ ಹೇಳುತ್ತವೆ. ತಲೆಮಾರುಗಳ ವ್ಯತ್ಯಾಸ, ಹೆಚ್ಚಾಗುತ್ತಿರುವ ಕಿರಿ ವಯಸ್ಸಿನವರ ಸಂಖ್ಯೆ, ಹೆಂಗಸರು ಅತ್ಯಧಿಕ ಸಂಖ್ಯೆಯಲ್ಲಿ ದುಡಿಮೆಯ ರಂಗಕ್ಕಿಳಿದಿರುವುದು, ಸಮಯದ ಒತ್ತಡ ಜೊತೆಗೆ ಇನ್ನಿಲ್ಲದಂತೆ ಬೆಳೆಯುತ್ತಿರುವ ಸಿದ್ಧ ಆಹಾರದ ಉದ್ಯಮ ಒಂದು ದಿನ ಅಡುಗೆ ಮನೆಯನ್ನು ಅಲಂಕಾರಿಕ ಜಾಗವನ್ನಾಗಿ ಮಾಡುವ ಕಾಲ ದೂರವಿಲ್ಲ ಅನಿಸುತ್ತದೆ.
ಆ ಲೆಕ್ಕಕ್ಕೆ ವಿದೇಶಿ-ಸ್ವದೇಶೀ ‘ನಗರ ’ ಗಳ ಅಂತರ ಕಡಿಮೆಯಾಗುತ್ತಿದೆ ಅಂತ ಭಾರತಕ್ಕೆ ಬಂದಾಗಲೆಲ್ಲ ಅನ್ನಿಸುತ್ತದೆ.