“ನಾನು ನಾಯಿಯನ್ನು ಸಾಕುವುದೇ ಕಷ್ಟವೆಂದರೆ, ಕುದುರೆ ಸಾಕುವ ಇಲ್ಲಿನ ಶ್ರೀಮಂತ ವರ್ಗ ತಮ್ಮ ಪ್ರವಾಸಕ್ಕೆ ಕುದುರೆಗಳು ಓಡಾಡುವ ತಾಣಗಳನ್ನೇ ಆರಿಸಿಕೊಂಡು ತಮ್ಮ ಕುದುರೆಗಳನ್ನು ಕೂಡ ತಮ್ಮೊಡನೆ ವಿಮಾನದಲ್ಲಿ ಕರೆದೊಯ್ಯುತ್ತಾರೆ. ಇತ್ತೀಚೆಗೆ ಖಾಯಿಲೆ ಹಿಡಿದ ಕುದುರೆಯೊಂದು ತಟ್ಟನೆ ಕುಸಿದು, ಪಕ್ಕದಲ್ಲೇ ನಿಂತಿದ್ದ ತನ್ನ ಒಡೆಯನ ಕಾಲಿನ ಮೇಲೆ ಬಿದ್ದಿತ್ತು. ಸುಮಾರು ಐನೂರು ಕೆಜಿ ತೂಕದ ಈ ಪ್ರಾಣಿಯ ಭಾರಕ್ಕೆ ಈತನ ಕಾಲು ಕಟ್ಟಿಗೆಯಂತೆ ಮುರಿದು, ಮೂರು ತಿಂಗಳ ರಜೆ ಪಡೆದಿದ್ದ. ಅದೇ ಕುಂಟುಕಾಲಿನಲ್ಲಿ ನನ್ನ ಬಳಿ ಬಂದು ತನ್ನ ಹಲ್ಲಿನ ಚಿಕಿತ್ಸೆಯನ್ನು ಪಡೆದ ಈತನಿಗೆ ತನ್ನ ಕುದುರೆ ಈಗ ಸುಧಾರಿಸಿಕೊಂಡಿದೆ ಎಂಬುದೇ ಸಂತಸದ ಸುದ್ದಿಯಂತೆ!”
ಡಾ.ಪ್ರೇಮಲತ ಬರೆಯುವ ಬ್ರಿಟನ್ ಬದುಕಿನ ಕಥನ.
ಬ್ರಿಟಿಷರ ಸಮಾಜ ಇವತ್ತಿಗೂ ಸಾಂಪ್ರದಾಯಿಕ ಸಾಮಾಜಿಕ ಚೌಕಟ್ಟನ್ನು ಗೌರವಿಸುವ ದೇಶ. ಇಲ್ಲಿ ಜನರು ಮನುಷ್ಯ ಸಂಬಂಧಗಳನ್ನು ಪ್ರೀತಿಸುತ್ತಾರೆ. ತಾತ, ಅಜ್ಜಿ , ಚಿಕ್ಕಪ್ಪ, ದೊಡ್ಡಮ್ಮ ಅಂತೆಲ್ಲ ಬಹಳಷ್ಟು ಸಮಯವನ್ನು ಅವರೊಡನೆ ಕಳೆಯುತ್ತಾರೆ. ಒಂದೇ ಮನೆಯಲ್ಲಿ ಬದುಕುವ ಒಪ್ಪಂದಗಳು ಜಗತ್ತಿನ ಎಲ್ಲೆಡೆ ಕಡಿಮೆಯಾಗುತ್ತಿವೆ. ಬ್ರಿಟಿಷ್ ಸಮಾಜದಲ್ಲಿ ಕೂಡ ಇದು ನೂರಾರು ವರ್ಷಗಳಿಂದಲೇ ಆರಂಭವಾದ ವಿಚಾರ. ಪದವಿ ಮುಗಿಸಿ ದುಡಿಯುತ್ತಿದ್ದರೂ ಪೋಷಕರೊಡನೆ ಇರುವ ಜನರನ್ನು ಸಮಾಜ ‘ಯಾಕೆ?’ ಎಂಬ ಅಚ್ಚರಿಯ ಕಣ್ಣಲ್ಲಿ ನೋಡುತ್ತದೆ. ಸ್ವತಃ ಪೋಷಕರು ಮಕ್ಕಳು ದುಡಿಯಲು ಬಂದು ಬೇರೆಯಾದರೆ ತಾವು ನಿರುಮ್ಮಳವಾಗಿರಬೇಕೆಂದು ಬಯಸುತ್ತಾರೆ. ಒಂದೇ ಮನೆಯಲ್ಲಿ ಇರುವ ವಾಡಿಕೆ ಇಲ್ಲವಾದರೂ ಭಾವನಾತ್ಮಕ ಸಂಬಂಧಗಳು ಆಳವಾಗಿಯೇ ಇವೆ.
ಮಕ್ಕಳು ಮೊದಲ ಬಾರಿ ಮನೆ ತೆಗೆದುಕೊಳ್ಳಲು ಇವತ್ತಿಗೂ 40% ತಂದೆ ತಾಯಿಯರು ಹಣ ಸಹಾಯ ಮಾಡುತ್ತಾರೆ ಎಂಬುದು ಸಮೀಕ್ಷೆಗಳಿಂದ ರುಜುವಾತಾಗಿದೆ. ಮಕ್ಕಳು ಆಸ್ಟ್ರೇಲಿಯಾದಲ್ಲೇ ಇರಲಿ, ಅಮೇರಿಕಾದಲ್ಲೇ ಇರಲಿ ಅವರನ್ನು ಭೇಟಿಮಾಡುತ್ತಾರೆ. ತಮ್ಮ ಮೊಮ್ಮಕ್ಕಳೊಡನೆ ಆಡಲು ಬಯಸುತ್ತಾರೆ. ವಯಸ್ಸಾದ ತಂದೆ ತಾಯಿಯರ ಮನೆಯ ಸುತ್ತಮುತ್ತಲೇ ಮನೆ ಮಾಡಿಕೊಂಡಿರಲು ಮಕ್ಕಳು ಹೆಣಗುತ್ತಾರೆ. ಅವರಿಗೆ ಸಾಧ್ಯವಿಲ್ಲದಿದ್ದಲ್ಲಿ ಪೋಷಕರೇ ಮಕ್ಕಳ ಊರುಗಳಿಗೆ ಹೋಗಿ ಮನೆ ಮಾಡುತ್ತಾರೆ. ದುಡಿಮೆಯೇ ಪ್ರಧಾನವಾಗಿರುವ ಜಪಾನ್, ಅಮೇರಿಕಾ ದೇಶಗಳಲ್ಲಿ ದುಡಿಯುವ ಕಾಲಕ್ಕೆ ಮಿತಿಯಿಲ್ಲ. ಆದರೆ ಇಲ್ಲಿ ‘ಕೌಟುಂಬಿಕ ಸಮಯ’ (ಫ್ಯಾಮಿಲಿ ಟೈಮ್) ಹಣ, ದುಡಿಮೆಯನ್ನು ಮೀರಿದ ಉನ್ನತ ವಿಚಾರ.
ನಾವು ಇಲ್ಲಿಗೆ ಹೊಸದಾಗಿ ಬಂದಾಗ ಯಾವುದೋ ಅಂಗಡಿಗೆ ಹೋಗಿದ್ದೆವು. ಅದೇನು ಸೂಪರ್ ಮಾರ್ಕೆಟ್ ರೀತಿಯ ದೊಡ್ಡ ಜಾಗವಲ್ಲ. ಸ್ವಂತ ಉದ್ಯಮವನ್ನು ನಡೆಸುತ್ತಿದ್ದ ವ್ಯಕ್ತಿಯೋರ್ವನದು. ಬೆಳಿಗ್ಗೆ ಒಂಭತ್ತರಿಂದ ಸಾಯಂಕಾಲ ಐದರವರೆಗೆ ತೆರೆದಿರುವ ಈ ಅಂಗಡಿಗೆ ನಾವು ಹೋದಾಗ ಬಾಗಿಲು ಮುಚ್ಚುವ ಸಮಯವಾಗಿತ್ತು. ವಸ್ತುಗಳನ್ನು ಕೈಲಿ ಹಿಡಿದು ಕೌಂಟರಿನ ಬಳಿ ತೆಗೆದುಕೊಂಡು ಹೋದರೂ ಆತ ನಾಳೆ ಬನ್ನಿರೆಂದು ಹೇಳಿ ಅಂಗಡಿಯನ್ನು ಮುಚ್ಚಿ ತನ್ನ ಕರ್ತವ್ಯ ಪಾಲಿಸಿದ. ದುಡ್ಡು ಬರುತ್ತದೆಂದರೂ ಐದು ನಿಮಿಷ ಹೆಚ್ಚು ಕೆಲಸ ಮಾಡಲು ತಯಾರಿರಲಿಲ್ಲ ಅವ. ಬ್ರಿಟಿಷ್ ಸಮಾಜ ಕುಟುಂಬದೊಡನೆ ಕಳೆಯುವ ಕಾಲವನ್ನು ಅತ್ಯಂತ ಕಾಳಜಿಯಿಂದ ರಕ್ಷಿಸಿಕೊಂಡು ಬಂದಿದೆ.
ಮನುಷ್ಯರೊಂದಿಗಿನ ಬಾಂಧವ್ಯದ ಮಾತು ಹಾಗಿರಲಿ, ಇವರು ತಮ್ಮ ಪ್ರೀತಿಯ ಪ್ರಾಣಿಗಳೊಂದಿಗಿನ ಸಂಬಂಧವನ್ನೂ ಬಹಳ ಗಹನವಾಗಿ ತೆಗೆದುಕೊಳ್ಳುತ್ತಾರೆ. ಬ್ರಿಟಿಷರು ಪ್ರಾಣಿ ಪ್ರಿಯರು. ಅದರಲ್ಲೂ ಬೆಕ್ಕು , ನಾಯಿ, ಆಮೆ, ಮೀನು, ಜೆರ್ಬಿಲ್ ಗಳು, ಗಿನಿ ಪಿಗ್ ಗಳು, ಮೊಲಗಳು ಹೀಗೆ ನಾನಾ ಪ್ರಾಣಿಗಳನ್ನು ಇವರು ಮನೆಗಳಲ್ಲಿ ಸಾಕಿಕೊಳ್ಳುತ್ತಾರೆ. ಇವುಗಳ ಆರೋಗ್ಯಕ್ಕೂ ಇನ್ಶೂರೆನ್ಸ್ ಇರಲೇಬೇಕು. ವೈದ್ಯರ ಬಳಿ ದಾಖಲಾಗಿರಬೇಕು. ಇಂತಹ ಸಾಕು ಪ್ರಾಣಿಗಳಿಗಾಗಿ ಅಪಾರ ಸಮಯವನ್ನೂ, ಹಣವನ್ನೂ ಖರ್ಚುಮಾಡುತ್ತಾರೆ ಅವರು. ಅವುಗಳಿಗಾಗಿಯೇ ಮನೆಯಲ್ಲಿ ವಿಶೇಷ ಸವಲತ್ತುಗಳನ್ನು ನಿರ್ಮಿಸುತ್ತಾರೆ. ತಮ್ಮ ಕಾರುಗಳನ್ನು ಮಾರ್ಪಡಿಸಿ ಅವುಗಳನ್ನು ತಮ್ಮ ಜೊತೆಯೇ ಎಲ್ಲೆಡೆ ಕರೆದೊಯ್ಯುತ್ತಾರೆ. ಚಳಿಗಾಲದಲ್ಲಿ ಅವುಗಳಿಗಾಗಿ ವಿಶೇಷ ಬಟ್ಟೆಗಳನ್ನು ತೊಡಿಸಿ ಚಳಿಯಿಂದ ರಕ್ಷಿಸುತ್ತಾರೆ. ತಮ್ಮ ಗಾರ್ಡನ್ನುಗಳಲ್ಲಿ ಲಕ್ಷಾಂತರ ರೂಪಾಯಿಯ ಪ್ರಮಾಣದಲ್ಲಿ ಹಣ ಖರ್ಚುಮಾಡಿ ಆ ಪ್ರಾಣಿಗಳಿಗಾಗಿಯೇ ಸಣ್ಣ ಸಣ್ಣ ಮನೆಗಳನ್ನು ನಿರ್ಮಿಸುತ್ತಾರೆ. ಪ್ರತಿ ಪ್ರಾಣಿ ಪ್ರಭೇದಗಳಿಗೆ ವಿಶೇಷವಾಗಿ ಸಿಗುವ ಆಹಾರವನ್ನು ಕೊಂಡುತಂದು ತಿನ್ನಿಸುತ್ತಾರೆ. ಅವುಗಳಿಗಾಗಿಯೇ ಹಲವು ಸ್ಪಾಗಳು/ಬ್ಯೂಟಿ ಪಾರ್ಲರುಗಳೂ ಇಲ್ಲಿವೆ. ಪ್ರಾಣಿಗಳಿಗಾಗಿಯೇ ಹಲವಾರು ಆಟಿಕೆಗಳು ಸಹ ಇಲ್ಲಿ ದೊರೆಯುತ್ತವೆ.
ಬೆಳಿಗ್ಗೆ ಒಂಭತ್ತರಿಂದ ಸಾಯಂಕಾಲ ಐದರವರೆಗೆ ತೆರೆದಿರುವ ಈ ಅಂಗಡಿಗೆ ನಾವು ಹೋದಾಗ ಬಾಗಿಲು ಮುಚ್ಚುವ ಸಮಯವಾಗಿತ್ತು. ವಸ್ತುಗಳನ್ನು ಕೈಲಿ ಹಿಡಿದು ಕೌಂಟರಿನ ಬಳಿ ತೆಗೆದುಕೊಂಡು ಹೋದರೂ ಆತ ನಾಳೆ ಬನ್ನಿರೆಂದು ಹೇಳಿ ಅಂಗಡಿಯನ್ನು ಮುಚ್ಚಿ ತನ್ನ ಕರ್ತವ್ಯ ಪಾಲಿಸಿದ.
ಇನ್ನು ಇವರ ಅತಿ ದೊಡ್ಡ ಹಬ್ಬ ಕ್ರಿಸ್ಮಸ್ ಬಂದರೆ, ಮಕ್ಕಳ ಜೊತೆ ಅವಕ್ಕೂ ಶೃಂಗಾರ ಮಾಡುತ್ತಾರೆ. ಮಕ್ಕಳಿಗೆ, ಸಂಬಂಧಿಕರಿಗೆ ಉಡುಗೊರೆ ನೀಡುವಂತೆ ಅವುಗಳಿಗೂ ಉಡುಗೊರೆ ನೀಡಿ ಆನಂದಿಸುತ್ತಾರೆ. ಪ್ರಪಂಚದಾದ್ಯಂತ ಈಗ ಪ್ರಾಣಿಗಳ ಬಟ್ಟೆಯ, ಆಟಿಕೆಗಳ, ಉಡುಗೊರೆಗಳ ದೊಡ್ಡ ದಂಧೆಯೇ ಶುರುವಾಗಿರುವುದು ಇಂತಹ ಜನರಿರುವುದರಿಂದಲೇ. ಸಾಮಾಜಿಕ ತಾಣಗಳು ಬಂದ ಮೇಲಂತೂ ಇಂತಹ ಪ್ರಾಣಿ ಪ್ರಿಯರ ನೆಟ್ವರ್ಕುಗಳು ಇವರ ಪ್ರಾಣಿಪ್ರಿಯತೆಯನ್ನು ತಾರಕಕ್ಕೇರಿಸಿದೆ.
ಅದೇನೇ ಇದ್ದರೂ, ಬ್ರಿಟಿಷರು ನಾಯಿಗಳನ್ನು ಕ್ಯಾನ್ಸರ್, ಮಧುಮೇಹ ರೋಗ, ಪಾರ್ಕಿನ್ಸನ್ ರೋಗ ಇತ್ಯಾದಿಯನ್ನು ವೈದ್ಯರಿಗಿಂತಲೂ ಮೊದಲೇ ಕಂಡುಹಿಡಿಯುವುದರಲ್ಲಿ ಪಳಗಿಸಿದ್ದಾರೆ. ಇದೀಗ ಇಂತಹ ವಿಶೇಷ ನಾಯಿಗಳು ತಮ್ಮ ದೈವದತ್ತ ಕೊಡುಗೆಗಳನ್ನು ಮನುಷ್ಯನ ಒಳಿತಿಗೆ ಬಳಸುವ ಕಾರ್ಯದಲ್ಲಿ ತೊಡಗಿಕೊಂಡು ಸಾಕುವವರಿಗೆ ದುಡಿಯುತ್ತಲೂ ಇವೆ. ನಾಯಿಯ ತಲೆಯೊಂದನ್ನು ಸವರಿದಾಗ ನಮ್ಮ ದೇಹದ ರಕ್ತದೊತ್ತಡ , ಮಾನಸಿಕ ಒತ್ತಡಗಳು ಇಳಿಯುತ್ತದೆ ಎಂದು ಕಂಡುಕೊಂಡ ಸರ್ಕಾರ ವಿಶೇಷ ತರಬೇತಿಯಿರುವ ನಾಯಿಗಳು ಆಸ್ಪತ್ರೆಗೆ ನಿಗದಿತವಾಗಿ ಭೇಟಿಕೊಟ್ಟು ರೋಗಿಗಳು ಬೇಗ ಗುಣಮುಖರಾಗಲು ನೆರವಾಗಲು ಸಹಾಯ ಕಲ್ಪಿಸಿದೆ. ಅದರಲ್ಲೂ ಮಕ್ಕಳ ಆಸ್ಪತ್ರೆಯಲ್ಲಿ ಇಂತಹ ಬಹಳಷ್ಟು ನಾಯಿಗಳು ಕೆಲಸಕ್ಕಿವೆ. ಅದೇ ರೀತಿ ಪ್ರತಿ ಏರ್ಪೋರ್ಟಿನಲ್ಲಿ, ಪೋಲಿಸರ ಜೊತೆ ತರಬೇತಾದ ನಾಯಿಗಳನ್ನು ನಾವು ಸರ್ವೇ ಸಾಮಾನ್ಯವಾಗಿ ನೋಡುತ್ತಿರುತ್ತೇವೆ. ಗೈಡ್ ಡಾಗ್ ಗಳಿಗೂ ಇಲ್ಲಿ ಕೊರತೆಯಿಲ್ಲ.
ದಿನಂಪ್ರತಿ ಬೆಳಗ್ಗೆ ಮತ್ತು ಸಂಜೆಗಳಲ್ಲಿ ಸಾಕು ಪ್ರಾಣಿಗಳನ್ನು ನಡೆದಾಡಲು, ಓಡಲು ಕರೆದುಕೊಂಡು ಹೋಗುತ್ತಾರೆ, ಜೊತೆಗೆ ಅವುಗಳ ಎಲ್ಲ ಚಾಕರಿಗಳನ್ನು ಮೈ ಬಗ್ಗಿಸಿ ಮಾಡುತ್ತಾರೆ. ಕುದುರೆ, ಕುರಿ, ಹಸು ಇತ್ಯಾದಿ ದೊಡ್ಡ ಪ್ರಾಣಿಗಳನ್ನು ಹೊಂದಿರುವವರಿಗೆ ಸಾಮಾನ್ಯವಾಗಿ ಅವುಗಳಿಗಾಗಿಯೇ ಎನ್ನುವ ವಿಶಾಲ ಜಾಗಗಳಿರುತ್ತವೆ. ಅವುಗಳ ಮಲ-ಮೂತ್ರ ವಿಸರ್ಜನೆಗಳು ಸಾಮಾನ್ಯವಾಗಿ ಅಲ್ಲಿಯೇ ನಡೆಯುತ್ತವೆ. ಬೆಕ್ಕುಗಳು ತಮ್ಮ ಗೌಪ್ಯವನ್ನು ಹೇಗೋ ಕಾಪಾಡಿಕೊಳ್ಳುತ್ತವೆ. ಆದರೆ, ಇಂತಹ ಸ್ವಚ್ಛದೇಶದಲ್ಲಿ ಯಾವುದೋ ಕಂಬ, ಇನ್ಯಾವುದೋ ಬಯಲುಗಳನ್ನು ಮಾತ್ರ ಹುಡುಕುವ ನಾಯಿಗಳ ಪಾಡೇನು?
ನಾಯಿಗಳನ್ನು ನಮ್ಮ ತರಹದ ದೇಶಗಳಂತೆ ಮುಕ್ತವಾಗಿ ರಸ್ತೆಯಲ್ಲಿ ಬಿಟ್ಟು ಅವು ಎಲ್ಲ ಮುಗಿಸಿದ ನಂತರ ಮರಳಿ ಮನೆಯೊಳಗೆ ಬಿಟ್ಟುಕೊಳ್ಳುವ ಯಾವುದೇ ಸಾಧ್ಯತೆಗಳಿಲ್ಲ ಇಲ್ಲಿ. ನಾಯಿಗಳ ಜೊತೆ ವಾಕಿಂಗ್ ಮಾಡುವ ಈ ಜನರ ಜೇಬಿನಲ್ಲಿ ಪ್ಲಾಸ್ಟಿಕ್ ಚೀಲಗಳಿರುತ್ತವೆ. ನಾಯಿಗಳು ಕಕ್ಕ ಮಾಡಿದ ನಂತರ ಇವರು ಅಸಹ್ಯವಿಲ್ಲದೆ ಈ ಪ್ಲಾಸ್ಟಿಕ್ ಚೀಲಗಳನ್ನು ಕೈಗೇರಿಸಿಕೊಂಡು ನಾಯಿಗಳ ಮಲವನ್ನು ಎತ್ತಿ ಅದೇ ಚೀಲದಲ್ಲಿ ಗಂಟು ಕಟ್ಟಿ ಕಸದ ಬುಟ್ಟಿಯಲ್ಲಿ ಹಾಕುತ್ತಾರೆ. ಅಕಸ್ಮಾತ್ ಅದಕ್ಕೆಲ್ಲ ಅಸಹ್ಯ ಪಟ್ಟುಕೊಂಡು ಮಲವನ್ನು ಎತ್ತದೆ, ಸಿಕ್ಕಿಹಾಕಿಕೊಂಡರೆ ನೂರಾರು ಪೌಂಡುಗಳ ದಂಡ ತೆರಬೇಕು! ಹಾಗಾಗಿ ನಿಜವಾಗಿ ನಾಯಿಗಳ ಮೇಲೆ ಪ್ರೇಮವಿಲ್ಲದವರು ನಾಯಿಗಳನ್ನು ಸಾಕಲು ಸಾಧ್ಯವಿಲ್ಲ. ಹಾಗಿದ್ದೂ ಬಹಳಷ್ಟು ಮಂದಿ ನಾಯಿಗಳನ್ನು ಸಾಕುತ್ತಾರೆ. ಅವುಗಳ ಮಲವನ್ನು ಅವುಗಳ ಜೀವಿತವಿಡೀ ಬಳಿದು ಹಾಕಿ, ಮಕ್ಕಳಿಗಿಂತಲೂ ಹೆಚ್ಚಾಗಿ ನೋಡಿಕೊಳ್ಳುತ್ತಾರೆ. ಸಾವಿರಾರು ಪೌಂಡುಗಳನ್ನು ಖರ್ಚು ಮಾಡಿ ಅವುಗಳ ಖಾಯಿಲೆಗಳನ್ನು ನೀಗುತ್ತಾರೆ. ಬಡವರ ನಾಯಿಗಳಿಗೆ ಖಾಯಿಲೆ ಬಂದು ಹಣ ಸಾಕಾಗದಿದ್ದರೆ ದೇಣಿಗೆ ಎತ್ತುತ್ತಾರೆ. ಇತ್ತೀಚೆಗೆ ರಸ್ತೆಯಲ್ಲಿ ನಡೆಯುತ್ತಿದ್ದಾಗ ಮಹಿಳೆಯೋರ್ವಳು ಇಡೀ ರಸ್ತೆಯೆಲ್ಲ ದುರ್ವಾಸನೆ ಬರುವಂತೆ, ನೀರು ನೀರಾಗಿ ಮಾಡಿದ್ದ ಶ್ವಾನ ಮಲವನ್ನು ಬಾಚಲು ಬಹಳೇ ಪರದಾಡಿದ್ದಳು!
ಚಿಕ್ಕವಳಿದ್ದಾಗ ನಮ್ಮ ಮನೆಯಲ್ಲಿ ನಾಯಿಯನ್ನು ಸಾಕಿದ್ದ ಅನುಭವವಿದೆ. ಆರು ತಿಂಗಳ ವಯಸ್ಸಿನಲ್ಲಿ ಲಕ್ವ ಹೊಡೆದು ಹಿಂದಿನ ಕಾಲುಗಳನ್ನು ಕಳೆದುಕೊಂಡ ‘ಟಾಮಿ’ ಎನ್ನುವ ನಾಯಿಯನ್ನು 12 ವರ್ಷಗಳ ಕಾಲ ಸಾಕಿ ಅದರ ಸೇವೆಯನ್ನು ಮಾಡಿದ ಅನುಭವವಿದೆ. ಅದರ ವಾಂತಿ-ಭೇದಿಯನ್ನು ಕೊನೆಗಾಲದಲ್ಲಿ ನನ್ನ ಅಮ್ಮ ಎತ್ತಿ, ಸಾಕಿ ಕಾಪಾಡಿದ್ದನ್ನು ನೋಡಿರುವ ನನ್ನನ್ನೂ ಕೂಡ ನಾಯಿಗಳು ಬದುಕಿರುವ ಹತ್ತಾರು ವರ್ಷಗಳ ಕಾಲ ಪ್ರತಿದಿನ, ಆ ನಾಯಿಯ ಮಲವನ್ನು ಬಾಚಿ ಹಾಕುವ ಬ್ರಿಟನ್ನರ ಈ ಪ್ರಾಣಿಪ್ರಿಯತೆ ಮೂಕಳನ್ನಾಗಿ ಮಾಡಿದೆ.
ಬ್ರಿಟಿಷರ ಮತ್ತು ನಾಯಿಗಳ ಸಂಬಂಧದ ಬಗ್ಗೆ ಬಹುಷಃ ಒಂದು ಪುಸ್ತಕವನ್ನೇ ಬರೆಯಬಹುದೇನೋ? ಆದರೆ, ಯಾವುದೇ ಸಾಕಿದ ನಾಯಿ ಯಾರನ್ನಾದರೂ ಕಚ್ಚಿ ಘಾಸಿಮಾಡಿದರೆ, ಪ್ರಾಣತೆಗೆದರೆ ಅದನ್ನು ಸರ್ಕಾರ ಗುಂಡಿಟ್ಟು ಕೊಂದುಬಿಡುತ್ತದೆ. ಹೀಗಾಗಿ ದಾರಿಗಳಲ್ಲಿ ನಾವು ನೋಡುವ ಬಹುತೇಕ ನಾಯಿಗಳು ಸಾಧು ಸ್ವಭಾವದವೇ ಆಗಿರುತ್ತವೆ. ನಾವು ನಾಲ್ವರು ಮಕ್ಕಳು. ನಮಗೋರ್ವ ಪ್ರಾಣಿಪ್ರಿಯೆ ತಾಯಿಯಿದ್ದ ಕಾರಣ ನಾನು ಚಿಕ್ಕವಳಿದ್ದಾಗ ಎರಡು ನಾಯಿಗಳನ್ನು ಮನೆಯಲ್ಲಿ ಸಾಕಿ ಸಲಹಿದ ಅನುಭವ ದೊರೆಯಿತು. ಬ್ರಿಟನ್ನಿನಲ್ಲಿ ಬೆಳೆಯುತ್ತಿರುವ ನನ್ನ ಮಕ್ಕಳು ತಮಗೂ ನಾಯಿಮರಿ ಬೇಕೆಂದು ಕೇಳಿಕೇಳಿ ಸಾಕಾಗಿದ್ದಾರೆ. ಅವರಿಗೆ ನಾಯಿಮರಿಯೊಂದನ್ನು ಕೊಡಿಸುವ ನನ್ನ ಆಶೆ ಈ ಪರದೇಶದಲ್ಲಿ ನೆರವೇರಿಲ್ಲ.
ನಾವಿಬ್ಬರು ಕೆಲಸಕ್ಕೆ ಹೋಗಿ, ಮಕ್ಕಳು ಶಾಲೆಗೆ ಹೋದರೆ ಈ ನಾಯಿಗಳನ್ನು ನೋಡಿಕೊಳ್ಳುವವರಿರುವುದಿಲ್ಲ. ಜೊತೆಗೆ, ಅವುಗಳ ಮಲವನ್ನು ಪ್ರತಿದಿನ ಎತ್ತುವ, ಇನ್ಶೂರೆನ್ಸ್ ಕಟ್ಟುವ, ಭಾರತಕ್ಕೆ ಪ್ರತಿ ವರ್ಷ ತಿಂಗಳ ಕಾಲ ಬಂದರೆ ಅವುಗಳನ್ನು ಎಲ್ಲಿ ಬಿಟ್ಟು ಹೋಗುವುದೆಂಬ ದ್ವಂದ್ವದಿಂದ ಇದು ನೆರವೇರದ ಆಸೆಯಾಗಿಯೇ ಉಳಿದಿದೆ. ಇಲ್ಲಿಯ ಜನರು ಪ್ರವಾಸಕ್ಕೆ ಹೋದಾಗ ಅವರ ಸಾಕುಪ್ರಾಣಿಗಳನ್ನು ನೋಡಿಕೊಳ್ಳುವ ವ್ಯವಸ್ಥೆಯೂ ಇಲ್ಲಿದೆ. ಆದರೆ ಎರಡನೇ ಬಾರಿ ಲಕ್ವ ಹೊಡೆದು ಟಾಮಿಯನ್ನು ದಯಾಮರಣಕ್ಕೆ ಗುರಿಮಾಡಿದ ದಿನಗಳ ನೆನಪು ಮತ್ತು ಒಮ್ಮೆ ಈ ಪ್ರಾಣಿಗಳೊಡನೆ ಭಾವಾನಾತ್ಮಕ ಸಂಬಂಧ ಬೆಳೆದ ನಂತರ ಅವುಗಳನ್ನು ಯಾರದೋ ಸುಪರ್ದಿಗೆ ಒಪ್ಪಿಸಿ ಓಡಾಡಲು ಮನ ನಿರಾಕರಿಸುತ್ತದೆ. ಆದರೂ ಒಮ್ಮೆ ನನ್ನ ರೋಗಿಯೊಬ್ಬಳು ತನ್ನ ನಾಯಿ 6 ಮರಿಗಳನ್ನು ಹಾಕಿದೆಯೆಂದು ಹೇಳಿದಳು. ಅವುಗಳನ್ನು ತಾಯಿಯಿಂದ ಆರು ವಾರಗಳ ಕಾಲ ಬೇರ್ಪಡಿಸುವುದಿಲ್ಲ. ಹಾಗಾಗಿ ಅಲ್ಲಿಯವರೆಗೆ ಕಾದು, ಅವಳಿದ್ದ ಹಳ್ಳಿಗೆ ಹೋಗಿ ನಾಯಿ ಮರಿಯೊಂದನ್ನು ಒಂದು ದಿನದ ಮಟ್ಟಿಗೆ ಕಡ ತಂದು ಮಕ್ಕಳಿಗೆ ನಾಯಿಯ ಪರಿಚಯ ಮಾಡಿಸಿದ್ದೆ. ಮನೆಯಲ್ಲಿ ಈ ನಾಯಿಮರಿಯ ಓಡಾಟದಿಂದ ಉದ್ರೇಕಗೊಂಡ ನನ್ನ ಮಗಳ ಮೊಟ್ಟ ಮೊದಲ ಪದ ಕೂಡ ಈ ನಾಯಿಯ ಹೆಸರೇ ಹೊರತು ಅಮ್ಮನೆಂಬ ಪದವಲ್ಲ.
ನಾನು ನಾಯಿಯನ್ನು ಸಾಕುವುದೇ ಕಷ್ಟವೆಂದರೆ, ಕುದುರೆ ಸಾಕುವ ಇಲ್ಲಿನ ಶ್ರೀಮಂತ ವರ್ಗ ತಮ್ಮ ಪ್ರವಾಸಕ್ಕೆ ಕುದುರೆಗಳು ಓಡಾಡುವ ತಾಣಗಳನ್ನೇ ಆರಿಸಿಕೊಂಡು ತಮ್ಮ ಕುದುರೆಗಳನ್ನು ಕೂಡ ತಮ್ಮೊಡನೆ ವಿಮಾನದಲ್ಲಿ ಕರೆದೊಯ್ಯುತ್ತಾರೆ. ಇತ್ತೀಚೆಗೆ ಖಾಯಿಲೆ ಹಿಡಿದ ಕುದುರೆಯೊಂದು ತಟ್ಟನೆ ಕುಸಿದು, ಪಕ್ಕದಲ್ಲೇ ನಿಂತಿದ್ದ ತನ್ನ ಒಡೆಯನ ಕಾಲಿನ ಮೇಲೆ ಬಿದ್ದಿತ್ತು. ಸುಮಾರು ಐನೂರು ಕೆಜಿ ತೂಕದ ಈ ಪ್ರಾಣಿಯ ಭಾರಕ್ಕೆ ಈತನ ಕಾಲು ಕಟ್ಟಿಗೆಯಂತೆ ಮುರಿದು, ಮೂರು ತಿಂಗಳ ರಜೆ ಪಡೆದಿದ್ದ. ಅದೇ ಕುಂಟುಕಾಲಿನಲ್ಲಿ ನನ್ನ ಬಳಿ ಬಂದು ತನ್ನ ಹಲ್ಲಿನ ಚಿಕಿತ್ಸೆಯನ್ನು ಪಡೆದ ಈತನಿಗೆ ತನ್ನ ಕುದುರೆ ಈಗ ಸುಧಾರಿಸಿಕೊಂಡಿದೆ ಎಂಬುದೇ ಸಂತಸದ ಸುದ್ದಿಯಂತೆ! ಇನ್ನೊಬ್ಬ ಸಿರಿವಂತೆಯ ಮಗಳ ಮದುವೆಗೆ ಅವಳ ಎರಡೂ ಕುದುರೆಗಳು ಬಂದಿದ್ದವಂತೆ. ಜೊತೆಗೆ ಆಕೆಯ ಅಜ್ಜಿ ಆಕೆಗೆ ಮತ್ತೊಂದು ಕುದುರೆಯನ್ನು ಬಳುವಳಿಯಾಗಿ ನೀಡಿದಳೆಂದು ಅವಳು ಹೆಮ್ಮೆಯಿಂದ ಹೇಳುವಾಗ ಅದೇ ಅವಳ ಮದುವೆಯ ‘ಹೈ ಲೈಟ್’ ಎನ್ನುವುದರಲ್ಲಿ ನನಗೆ ಸಂಶಯ ಎನ್ನಿಸಲಿಲ್ಲ.
ಇಷ್ಟೆಲ್ಲ ಪ್ರಾಣಿ ಪ್ರೀತಿಯಿದ್ದು ಕೂಡ ಕೆಲವು ಬ್ರಿಟನ್ನರು ಶತಮಾನಗಳಿಂದ ಬೇಟೆಯ ಶೋಕಿಯನ್ನು ಹೊಂದಿದ್ದಾರೆ. ‘ರುದ್ರಪ್ರಯಾಗದ ನರಭಕ್ಷಕ’ ದಂತ ಹಲವಾರು ಪುಸ್ತಕಗಳನ್ನು ಓದಿರುವ ನನಗೆ ಬ್ರಿಟಿಷರು ಭಾರತದ ವನ್ಯ ಜೀವಿಗಳನ್ನು ಅದರಲ್ಲೂ ಹುಲಿ, ಸಿಂಹ, ಚಿರತೆ , ಆನೆಗಳನ್ನು ಭೇಟಿಯಾಡಿದ ಅವುಗಳ ಸಂಖ್ಯೆಯನ್ನೇ ಕಡಿಮೆ ಮಾಡಿದರೆಂಬ ಬೇಜಾರಿದೆ. ಹಾಗೆಯೇ ಅಂದಿನ ನಮ್ಮ ಜನ ಕೆಲವು ಉಪದ್ರವಕಾರೀ ಪ್ರಾಣಿಗಳನ್ನು ಕೊಲ್ಲಲು ಬ್ರಿಟಿಷರ ಕೋವಿಗಳಿಗಾಗಿ ಸಹಾಯ ಯಾಚಿಸುತ್ತಿದ್ದುದೂ ನಿಜವೆಂದು ತಿಳಿದಿದೆ.
ಈ ದೇಶದಲ್ಲಿ ವನ್ಯಜೀವಿ ಸಂಪತ್ತು ಎನ್ನುವುದು ಬಹಳ ಕಡಿಮೆ. ಯಾವುದೇ ಅಪಾಯಕಾರಿ ಪ್ರಾಣಿಗಳನ್ನು ಬಿಡದೆ ನುಣ್ಣಗೆ ಬೇಟೆಯಾಡಿಬಿಟ್ಟಿದ್ದಾರೆ. ತೋಳಗಳನ್ನು ಇಲ್ಲವನ್ನಾಗಿಸಿದ್ದಾರೆ. ಇಲ್ಲಿ ಸಿಗುವ ನಾಯಿಗಿಂತ ಸಣ್ಣದಾದ ನರಿಗಳನ್ನು ಬೇಟೆಯಾಡಲು ಇತ್ತೀಚೆಗೆ ಪರವಾನಗಿ ಕೊಡಬೇಕೆಂದು ಇವರು ಸರಕಾರವನ್ನು ಒತ್ತಾಯಿಸುತ್ತಿದ್ದಾರೆ. ಈ ಬೇಟೆಪ್ರಿಯ ಬ್ರಿಟಿಷರಿಗೆ ‘ಬೇಟೆ’ಯೆನ್ನುವುದು ಒಂದು ಸಂಪ್ರದಾಯ, ಹಲವು ತಲೆಮಾರುಗಳಿಂದ ನಡೆಸಿಕೊಂಡು ಬಂದ ಕಲೆ ಎರಡೂ ಹೌದು. ಬೇಟೆಯಲ್ಲಿ ಇವರು ನಾಯಿಗಳನ್ನು ಕೂಡ ಬಳಸುತ್ತಾರೆ. ನಾಯಿಗಳನ್ನು ಛೂ ಬಿಟ್ಟು ನರಿಗಳನ್ನು ಕೊಲ್ಲುವ ಈ ಅಮಾನುಷ ಬೇಟೆಗೆ ಪರವಾನಗಿ ಕೊಡಬೇಡವೆಂದು ಪ್ರಾಣಿದಯಾ ಸಂಗದವರು ತಡೆಯೊಡ್ಡಿದ್ದಾರೆ. ಇವರಿಬ್ಬರ ನಡುವಿನ ತಿಕ್ಕಾಟ ಹಲವು ವರ್ಷಗಳಿಂದ ನಡೆಯುತ್ತಿದೆ.
ಬ್ರಿಟಿಷರ ಮತ್ತು ನಾಯಿಗಳ ಸಂಬಂಧದ ಬಗ್ಗೆ ಬಹುಷಃ ಒಂದು ಪುಸ್ತಕವನ್ನೇ ಬರೆಯಬಹುದೇನೋ? ಆದರೆ, ಯಾವುದೇ ಸಾಕಿದ ನಾಯಿ ಯಾರನ್ನಾದರೂ ಕಚ್ಚಿ ಘಾಸಿಮಾಡಿದರೆ, ಪ್ರಾಣತೆಗೆದರೆ ಅದನ್ನು ಸರ್ಕಾರ ಗುಂಡಿಟ್ಟು ಕೊಂದುಬಿಡುತ್ತದೆ.
ಕೆಲವು ಜನರು ನರಿಗಳನ್ನು ಸಾಕಿ, ಮರಿಗಳನ್ನು ಮಾಡಿಸಿಕೊಂಡು ಅವನ್ನು ಕಾನೂನಿಗೆ ವಿರುದ್ಧವಾಗಿ ಬೇಟೆಯ ಮಿಕಗಳಂತೆ ಉಪಯೋಗಿಸಿದ ಕರಾಳ ಘಟನೆಗಳು ಕೂಡ ಇಲ್ಲಿ ನಡೆದವು. ಈ ಬೇಟೆಗಾರರ ಸಣ್ಣ ಸಮುದಾಯವನ್ನು ಹೊರತುಪಡಿಸಿ ಜನಸಾಮಾನ್ಯರು ಮಾತ್ರ ತಮ್ಮ ಸಾಕು ಪ್ರಾಣಿಗಳ ಮೇಲಿನ ಪ್ರೇಮವನ್ನು ಮೆರೆವ ಘಟನೆಗಳು ಇಲ್ಲಿ ಹಲವಾರು. ನಾಯಿಗಳಿಗೆ ಮನುಷ್ಯರನ್ನು ಕಚ್ಚದಂತೆ ಮರಿಗಳಿಂದಲೇ ತರಬೇತಿ ನೀಡುವುದರ ಜೊತೆಗೆ ಇವುಗಳು ಬೊಗಳದಂತೆ ಕೂಡ ತರಬೇತಿ ನೀಡುತ್ತಾರೆ. ಇಲ್ಲಿಯ ನಾಯಿಯ ಪ್ರಭೇದಗಳು ನೂರಾರು. ಕೆಲವು ನಾಯಿಗಳು ಭಾರೀ ವ್ಯಗ್ರ ಸ್ವಭಾವದವು. ತೀರಾ ಕ್ರೂರ ಸ್ವಭಾವದ ನಾಯಿಗಳನ್ನು ಸಾಕಲು ಸರಕಾರ ಅನುಮತಿಯನ್ನು ನೀಡುವುದಿಲ್ಲ. ಜೊತೆಗೆ ಯಾವುದೇ ಸಾಕಿದ ನಾಯಿಗಳು ಅಪ್ಪಿ ತಪ್ಪಿ ಯಾರನ್ನಾದರೂ ಕಚ್ಚಿಬಿಟ್ಟರೆ, ಸರಕಾರ ಅವುಗಳನ್ನು ಗುಂಡಿಟ್ಟು ಕೊಂದುಬಿಡುವ ಕಾರಣ ಬ್ರಿಟಿಷ್ ದೇಶದ ರಸ್ತೆಗಳಲ್ಲಿ ಮನಸ್ಸಿಗೆ ಇಚ್ಛೆ ಬಂದಂತೆ ಅಲೆದಾಡುವ, ವರ್ತಿಸುವ ಪ್ರಾಣಿಗಳು ಕಾಣಸಿಗುವುದಿಲ್ಲ.
ಹೀಗಿದ್ದೂ ಕೆಲವು ಜನರು ಹಲವುಬಾರಿ ತಾವು ಸಾಕಿದ ಪ್ರಾಣಿಗಳನ್ನು ರಸ್ತೆಗಳಲ್ಲಿ ಬಿಟ್ಟು ಕೈ ತೊಳೆದುಕೊಂಡುಬಿಡುತ್ತಾರೆ. ಇಂತಹ ನಾಯಿಗಳನ್ನು ಸಾಕಿ ಅವುಗಳಿಗೆ ಮತ್ತೊಂದು ಮನೆಯನ್ನು ಹುಡುಕಿಕೊಡಲು ಸರ್ಕಾರ ಮತ್ತು ಧರ್ಮಾರ್ಥ ಸಂಸ್ಥೆಗಳು ಕೆಲಸ ಮಾಡುತ್ತವೆ. ನಮ್ಮಲ್ಲಿನ ಕೆಲವು ಭಿಕ್ಷುಕರಂತೆಯೇ ಇಲ್ಲಿ ಕೂಡ ಕೆಲವು ನಿರಾಶ್ರಿತರು ಒಂಟಿತನವನ್ನು ನೀಗಿಕೊಳ್ಳಲು ನಾಯಿಗಳನ್ನು ಸಾಕಿಕೊಳ್ಳುತ್ತಾರೆ. ಇಂತಹ ನಾಯಿಗಳ ಆರೋಗ್ಯವನ್ನು ಕೆಲವು ಪ್ರಾಣಿಗಳ ವೈದ್ಯರು ಧರ್ಮಾರ್ಥ ನೋಡಿಕೊಳ್ಳುತ್ತ ಮಾನವೀಯತೆಯನ್ನು ಮೆರೆಯುತ್ತಾರೆ.
ನನಗೆ ತಿಳಿದಿರುವ ಪ್ರಾಣಿಪ್ರಿಯ ದಾದಿಯೊಬ್ಬಳು ಮೂರು ನಾಯಿ, ನಾಲ್ಕು ಬೆಕ್ಕು, ಹದಿಮೂರು ಆಮೆಗಳು ಮತ್ತು 52 ಮೀನುಗಳನ್ನು ಸಾಕಿಕೊಂಡಿದ್ದಾಳೆ. ಅವಳಿಗಿರುವುದು ಒಬ್ಬನೇ ಮಗನಾದರೂ ಅವಳ ಎಲ್ಲ ಮಾತು-ಕತೆಗಳು ಈ ಸಾಕು ಪ್ರಾಣಿಗಳ ಬಗ್ಗೆಯೇ ಆಗಿರುತ್ತದೆ. ನಮ್ಮಂತೆ ಮನೆಯಲ್ಲಿ ಮಾಡಿದ್ದನ್ನು ಬ್ರಿಟಿಷರು ತಮ್ಮ ಸಾಕು ಪ್ರಾಣಿಗಳಿಗೆ ತಿನ್ನಿಸುವುದಿಲ್ಲ. ಅವುಗಳಿಗಾಗಿಯೇ ಬರುವ ಸಿದ್ಧ ಆಹಾರಕ್ಕಾಗಿ ಇವರು ಖರ್ಚುಮಾಡುವ ಹಣವೂ ಅಪಾರ. ಅದಕ್ಕಾಗಿಯೇ ದುಡಿಯಲು ಬರುತ್ತಾಳೆ ಎಂದರೂ ತಪ್ಪಾಗಲಾರದು. ಇನ್ನು ಇವುಗಳನ್ನು ನೋಡಿಕೊಳ್ಳಲು ಮಾಡುವ ಕೆಲಸಗಳಿಗಂತೂ ಮಿತಿಯೇ ಇಲ್ಲ.
ಪ್ರೀತಿಯ ಬೆಕ್ಕೊಂದಕ್ಕೆ ಶಸ್ತ್ರ ಚಿಕಿತ್ಸೆ ಮಾಡಿಸಲು ಲಕ್ಷಾಂತರ ಹಣ ಖರ್ಚುಮಾಡುತ್ತಾರೆ. ಇತ್ತೀಚೆಗೆ ಇಂತಹ ಪ್ರಾಣಿಪ್ರಿಯರಿಗೆ ಮಾರಿ ಹಣ ಮಾಡಿಕೊಳ್ಳಬೇಕೆಂದು ಸಾವಿರಾರು ಕುದುರೆಗಳನ್ನು ಬ್ರೀಡ್ ಮಾಡಿದ ಜನರು ಒಂದೆಡೆಯಾದರೆ, ವಾಣಿಜ್ಯ ಕುಸಿತದ ಕಾರಣ ಸಾಕಲಾಗದೆ ತಮ್ಮ ಕುದುರೆಗಳನ್ನು ತೊರೆದ ಜನರು ಹಲವು ಸಾವಿರ ಜನರಾದ ಕಾರಣ, ಕುದುರೆಗಳು ಬಿಟ್ಟಿಯಾಗಿ ಸಿಗುವಂತಾದ ಪರಿಸ್ಥಿತಿ ಸೃಷ್ಟಿಯಾಯಿತು. ಹೀಗಿದ್ದೂ ಬ್ರಿಟಿಷರು ಕುದುರೆಗಳ ಮಾಂಸ ತಿನ್ನುವುದಿಲ್ಲ. ಈ ಹಿಂದೆ ಯೂರೋಪಿನಿಂದ ಬರುತ್ತಿದ್ದ ಮಾಂಸದಲ್ಲಿ ಹಲವರು ಕುದುರೆ ಮಾಂಸ ಬೆರೆಸಿದ್ದನ್ನು ವಿರೋಧಿಸಿ ಟನ್ನುಗಟ್ಟಲೆ ಮಾಂಸವನ್ನು ಸೂಪರ್ ಮಾರ್ಕೆಟ್ಟುಗಳಿಂದ ಹಿಂತೆಗೆಯಲಾಯಿತು. ಮಿಲಿಯನ್ನುಗಟ್ಟಲೆ ಖರ್ಚು ಮಾಡಿ ಈ ಸಪ್ಲೈ ಚೈನಿನಲ್ಲಿ ಯಾರು ಅಪರಾಧ ಮಾಡಿದರೋ ಅವರನ್ನು ಹಿಡಿದು ಶಿಕ್ಷಿಸಲಾಯಿತು. ಕೆಲವೊಮ್ಮೆ ಸಾಮಾನ್ಯರೂ ಪ್ರಾಣಿಗಳ ಕುರಿತಾಗಿ ಅತಿರೇಕವಾಗಿ ವರ್ತಿಸುವುದನ್ನು ಕಂಡಿದ್ದೇವೆ.
ಪಾಶ್ಚಿಮಾತ್ಯ ದೇಶವಾದ ಸ್ವೀಡನ್ನಿನಲ್ಲಿ ನಡೆದ ಒಂದು ಘಟನೆಯನ್ನು ಇಲ್ಲಿ ಹೇಳಲೇಬೇಕು. ಒಬ್ಬಾತ ತನ್ನ ಕಾರನ್ನು ಒಂದು ಕತ್ತೆಯಿದ್ದ ಷೆಡ್ದಿನ ಮುಂದೆ ನಿಲ್ಲಿಸಿದ್ದನಂತೆ. ಹಿಂತಿರುಗಿ ಬರುವ ವೇಳೆಗೆ ಕತ್ತೆ ಇವನ ಕಾರನ್ನು ತನ್ನ ಹಲ್ಲುಗಳಿಂದ ಕಡಿದು, ಮೈಯನ್ನು ತುರಸಿಕೊಂಡು ಬಣ್ಣವನ್ನು ಕೆಡಿಸಿತ್ತಂತೆ. ಇನ್ನೇನು ಮಾಡಿತ್ತೋ ಗೊತ್ತಿಲ್ಲ ಈತ ಕತ್ತೆಯ ಮೇಲೆ ಕೋರ್ಟಿಗೆ ಕೇಸು ಹಾಕಿದನಂತೆ. ಬಿ.ಬಿ.ಸಿ. ಸಂದರ್ಶಕ ಈತನನ್ನು “ಯಾಕೆ ಕೇಸು ಹಾಕಿದೆ? ನಿನ್ನ ಕಾರಿಗೆ ಇನ್ಷೂರೆನ್ಸ್ ಇರಲಿಲ್ಲವೇ?” ಎಂದು ಕೇಳಿದರೆ ಈತನ ಉತ್ತರ ಏನು ಗೊತ್ತೆ?
“ನನ್ನ ಕಾರಿಗೆ ಇನ್ಷೂರೆನ್ಸ್ ಇದೆ, ಆದರೆ ಕತ್ತೆಗೂ ಇನ್ಷೂರೆನ್ಸ್ ಇದೆ, ಆದ್ದರಿಂದ ಕತ್ತೆಯ ಮೇಲೆ ಕೇಸು ಹಾಕಿದ್ದೇನೆ” ಎಂದು! ಕೊನೆಗೆ ಕೋರ್ಟಿನ ತೀರ್ಪಿನ ಪ್ರಕಾರ ಕತ್ತೆ ಈತನಿಗೆ ಸುಮಾರು ಐನೂರು ಪೌಂಡುಗಳಷ್ಟು ದಂಡದ ಹಣ ನೀಡಿದ ಮೇಲೆ ಈತ ತನ್ನ ಕಾರಿನ ರಿಪೇರಿ ಮಾಡಿಸಿಕೊಂಡ ಕಥೆಯಿದು.
ಇದನ್ನು ಕೇಳಿದಾಗ ನನಗನಿಸಿದ್ದು ಸದ್ಯ ನಮ್ಮ ಮನೆಯ ಗೋಡೆಯನ್ನೆಲ್ಲ ಕೆರೆದು, ಅದರ ಮೇಲೆಲ್ಲ ಚಿತ್ರಗಳನ್ನು ಬರೆದು ತಾನು ಹುಟ್ಟಾ ಆರ್ಟಿಸ್ಟ್ ಎಂದು ಪದೇ , ಪದೇ ರುಜುವಾತು ಪಡಿಸಿದ್ದ ನನ್ನ ಮಗಳ ಕೈಗೆ ಈ ಕಾರು ಸಿಗಲಿಲ್ಲವಲ್ಲ ಎಂದು. ಯಾಕೆಂದರೆ ನನ್ನ ಮಕ್ಕಳಿಗೆ ನಾನಿನ್ನೂ ಇನ್ಷೂರೆನ್ಸ್ ಮಾಡಿಸಿಲ್ಲ !
(ಮುಂದುವರೆಯುವುದು)
ಡಾ. ಪ್ರೇಮಲತಾ ಲೇಖಕಿ ಮೂಲತಃ ತುಮಕೂರಿನವರು, ಕಳೆದ ೨೧ ವರ್ಷಗಳಿಂದ ಇಂಗ್ಲೆಂಡಿನಲ್ಲಿ ನೆಲೆಸಿದ್ದಾರೆ. ವೃತ್ತಿಯಲ್ಲಿ ದಂತವೈದ್ಯೆ. ಹವ್ಯಾಸಿ ಬರಹಗಾರ್ತಿ. ‘ಐದು ಬೆರಳುಗಳುʼ, ‘ತಿರುವುಗಳುʼ, ‘ನಂಬಿಕೆಯೆಂಬ ಗಾಳಿಕೊಡೆʼ ಇವರ ಪ್ರಕಟಿತ ಕಥಾಸಂಕಲನಗಳು. ‘ಕೋವಿಡ್ ಡೈರಿʼ ಎಂಬ ಅಂಕಣ ಬರಹಗಳ ಪುಸ್ತಕ ಮತ್ತು ‘ಬಾಯೆಂಬ ಬ್ರಮ್ಹಾಂಡʼ ಇವರ ಇತರೆ ಪುಸ್ತಕಗಳು. ‘ಐದು ಬೆರಳುಗಳುʼ ಕಥಾ ಸಂಕಲನಕ್ಕೆ ಡಾ.ಹೆಚ್. ಗಿರಿಜಮ್ಮ ಪ್ರಶಸ್ತಿ ದೊರಕಿದೆ.