ಆ ಕೈಗಳಿಗೆ ಈಗ ಎಂಟು ತುಂಬಿರಬಹುದು.. ಅವನ ಕಣ್ಣುಗಳಲ್ಲಿ ಮಾತ್ರ ಎಂಬತ್ತರ ನಿಸ್ತೇಜವಿದೆ.. ಯಾವ ಕನಸುಗಳೂ ಅಲ್ಲಿ ಅಪ್ಪಿ ತಪ್ಪಿ ಮಿಸ್ ಕಾಲ್ ಥರಾ ಇಣುಕಿದಂತೆ ಕಾಣುವದಿಲ್ಲ.  ಆಟಪಾಠಗಳ ಹಂಗು ಹರಿದು, ಪಾಪಿ ಪೇಟಕಾ ಸವಾಲಿಗೆ ಉತ್ತರ ಹುಡುಕಲು ಆ ಪುಟ್ಟ ಕೈಗಳು ಚರಕ್.. ಚರಕ್ ಎಂದು ಬೆಣಚುಕಲ್ಲಿನ ಮೇಲೆ ಕತ್ತಿ ಮಸೆಯುತ್ತಿವೆ. ಹೌದು, ನಿಜವಾಗಿಯೂ ಆ ಎಳೆಯ ಕೈಗಳು ಕತ್ತಿ ಮಸೆಯುತ್ತಿವೆ.

ಹಾಗೆ ನೊಡಿದರೆ ಆ ಕೈಗಳಿಗೆ ನೀಗದ ಕೆಲಸವದು. ಆದರೂ ನಿಭಾಯಿಸಲೇಬೇಕು. ಹಾಗೆಂದು ಹೆತ್ತವರೇ ಕರಾರು ಮಾಡಿದ್ದಾರೆ. ತ್ರಾಣವಿಲ್ಲದ ರಟ್ಟೆಗಳು ಕತ್ತಿ ಮಸೆಯುವಾಗ, ಸೋತು ಬಂದರೂ ತುಸು ಹೊತ್ತು ಝಾಡಿಸಿಕೊಳ್ಳಲೂ ಪುರುಸೊತ್ತಿರದ ಗಳಿಗೆಯದು.

ಕೆದರಿದ ಕೂದಲು, ತೊಳೆಯದ ಮುಖ, ಮಾಸಿದ ಉಡುಗೆ, ಬಟನ್ ಹರಿದ ಅಂಗಿ, ತೂತು ಬಿದ್ದ ಚಡ್ದಿ, ಬೆತ್ತಲೆ ಪಾದ, ಬಡಕಲು ಶರೀರ ಇವಿಷ್ಟು ಅಳತೆಗೆ ಸಿಗುವ ಆ ಹುಡುಗನ ಹೊರನೊಟ. ಒಳನೋಟದಲ್ಲಿ ಅಳತೆಗೆ ಸಿಗದ ನೂರೆಂಟು ನೋವು, ತಾಪತ್ರಯಗಳು ಒತ್ತರಿಸಿ ಬಂದು, ಮುಖದಲ್ಲಿ ಜೋತು ಬಿದ್ದಿವೆ. ಆ ಹುಡುಗನ ಹೆಸರು ಶಬ್ಬೀರ, ಅವನ ತಂದೆ ಅಬ್ಬಾಸ್, ಅಲ್ಲೇ ಮೀನಿನ ಮಾರುಕಟ್ಟೆಯ ಹಿಂಬದಿ ಅಕ್ರಮ ಸಕ್ರಮ ಜಾಗದಲ್ಲಿ ಒಂದು ಶೆಡ್ ಹಾಕಿ, ಠಿಕಾಣಿ ಹೂಡಿರುವ ಸಂಸಾರ. ಅಬ್ಬಾಸ್ ಗೆ ಒಟ್ಟು ಮೂರು ಜನ ಮಕ್ಕಳು. ಒಂದು ಹೆಣ್ಣು, ಎರಡು ಗಂಡು. ಶಾಲೆಯ ಮೆಟ್ಟಿಲನ್ನೇ ಹತ್ತದ ಅವನು ಸುಣ್ಣ ಬಳಿಯುವದನ್ನೇ ಕಸುಬು ಮಾಡಿಕೊಂಡು ದಿನ ದೂಡಿದವನು. ತನ್ನಂತೆಯೇ ಮಕ್ಕಳಿಗೂ ಓದು ಬರಹ ಕಲಿಸದೇ ತನ್ನ ಕೆಲಸಕ್ಕೇ ಸಾಥೀ ಮಾಡಿಕೊಂಡ. ಹಿರಿಯ ಹುಡುಗ ಸಲೀಂ ಅಪ್ಪನ ಕೆಲಸವನ್ನೇ ಅಪ್ಪಿಕೊಂಡು, ಮತ್ತೂ ಒಂದು ಹೆಜ್ಜೆ ಮುಂದೆ ಹೋಗಿ ಸುಣ್ಣದೊಂದಿಗೆ ಬಣ್ಣ, ಡಿಸ್ಟಂಪರ್ ಬಳಿಯುವದನ್ನೂ ಕಲಿತ. ಕಿರಿಯ ಮಗ ಶಬ್ಬೀರ ಮಾತ್ರ ಒಂಟೆಲುವಿನ ಹುಡುಗ. ಇಂಥಾ ಕೆಲಸ ಅವನಿಗೆ ನೀಗುವದಿಲ್ಲ ಎನ್ನುವದು ಅಬ್ಬಾಸನ ತರ್ಕ. ಹಾಗೆಂದು ಸುಮ್ಮನುಳಿದರೆ ದಿನಕ್ಕೆ ಸಿಗಬಹುದಾದ ಆ ಐವತ್ತು ರೂಪಾಯಿಯಾದರೂ ಕೊಡುವವರು ಯಾರು? ಎಂದು ಯೋಚಿಸಿ, ಅವನನ್ನು ಅಲ್ಲೇ ಹತ್ತಿರ ಇರೋ ಧಾರವಾಡದ ಮೀನು ಮಾರುಕಟ್ಟೆಯ ಕಲಾಲ್ ಸೈಪನ್ ಬಳಿ ಬಿಡಲಾಗಿತ್ತು. ಮೊದ ಮೊದಲು ಶಬ್ಬೀರಗೆ ಮೀನು ಕತ್ತರಿಸುವದು, ತೊಳೆಯುವದು ಕಷ್ಟವೆನಿಸುತ್ತಿತ್ತು. ಆದರೆ ತನದೇ ಓರಿಗೆಯ ಹುಡುಗರು ಅತ್ಯಂತ ನೀಟಾಗಿ ಮೀನು ಕತ್ತರಿಸುವದು, ತೊಳೆಯುವದನ್ನು ನೋಡಿ, ಮಾಡಿ ಅವನೂ ತಯಾರಾದ.

ಧಾರವಾಡ ಮೀನು ಮಾರುಕಟ್ಟೆಯೇನೋ ತಕ್ಕಮಟ್ಟಿಗಿದೆ, ಇಲ್ಲಿ ಬರುವ ಮೀನು ಮಾತ್ರ ಅಷ್ಟ್ಟಕ್ಕಷ್ಟೇ. ಕಾರವಾರ, ಅಂಕೋಲಾ, ಕುಮಟಾ ಮೂಲದಿಂದ ಬರೋ ಮೀನು, ಮೊದಲು ಹುಬ್ಬಳ್ಳಿಯ ಗಣೇಶ ಪೇಟೆಯ ಮಾರುಕಟ್ಟೆಯಲ್ಲಿ ಹರಾಜಾಗುತ್ತದೆ. ಆಮೇಲೆ ಧಾರವಾಡದ ಮಾರುಕಟ್ಟೆಯನ್ನು ತಲುಪುತ್ತದೆ. ರವಿವಾರವನ್ನು ಹೊರತುಪಡಿಸಿದರೆ ಮಿಕ್ಕ ದಿನಗಳಲ್ಲಿ ಇಲ್ಲಿ ದೊರೆಯುವ ಮೀನೆಂದರೆ ಬಂಗಡೆ ಬಿಟ್ಟರೆ ತೋರಿ (ಭೂತಾಯಿ), ಕೆರೆಯ ಮೀನುಗಳಾದ ಬಾಳೆ, ಕಟ್ಲಾ ಇವೂ ಸಿಗುತ್ತವೆ. ರವಿವಾರದ ದಿನ ಮಾತ್ರ ಧಾರವಾಡದ ಮೀನು ಮಾರುಕಟ್ಟೆಗೆ ಒಂದು ಬಗೆಯ ರಮಜು. ಬೆಳಿಗ್ಗೆ ಒಂಬತ್ತು ಘಂಟೆೆಯಿಂದ ತುಂಬಿಕೊಂಡರೆ ಹೊತ್ತು ಏರುತ್ತಾ ಹೋದ ಹಾಗೆ ಖಾಲಿಯಾಗುವದು. ಆ ದಿನ ಪಾಂಪ್ರೆಟ್, ಪ್ರಾನ್ಸ್, ಕಾಣೆ, ಬೆಳೆಂಜಿ ಇಂಥಾ ಟೇಸ್ಟೀ ಮೀನುಗಳೂ ಸಿಗುತ್ತವೆ. ರವಿವಾರಕ್ಕೊಮ್ಮೆ ಶಬ್ಬೀರ ಕಡಿಮೆಯೆಂದರೂ ನೂರು ರೂಪಾಯಿ ದುಡಿಯುತ್ತಾನೆ. ಆ ದಿನ ಎಷ್ಟೋ ಮನೆಗಳ, ಯಾರದೋ ಮೀನನ್ನು ತೊಳೆಯುವಲ್ಲಿ, ಸ್ವಚ್ಚ ಮಾಡುವಲ್ಲಿ ಶಬ್ಬೀರನ ಆ ಪುಟ್ಟ ಕೈಗಳು ಚಡಪಡಿಸುತ್ತಿರುತ್ತವೆ. ಇಂಥಾ ಅನೇಕ ಶಬ್ಬೀರರು ಇಲ್ಲಿದ್ದಾರೆ. ಅರ್ಧ ಕಿಲೋ ಮೀನು ಕೊಂಡವರು ಸ್ವಚ್ಚ ಮಾಡಲಿಕ್ಕೆ ಕೊಡುವದು ಐದೇ ರೂಪಾಯಿ, ಮೂರು ಕಿಲೋ ಕೊಂಡವರು ಕೂಡಾ ಕೊಡೋದು ಐದೇ ರೂಪಾಯಿ. ಕೆಲ ಬಾರಿಯಂತೂ ಗಟ್ಟಿ ಜಾತಿಯ ಮೀನುಗಳು ಶಬ್ಬೀರ ಪಾಲಿಗೆ ಬಂದರೆ ಸ್ವಚ್ಚ ಮಾಡಲು ಅರ್ಧ ಘಂಟೆಯೂ ಪುರಾಟಾಗುತ್ತಿರಲಿಲ್ಲ. ಆ ರವಿವಾರ ಹಾಗೇ ಆಯಿತು. ಒಬ್ಬ ಗಿರಾಕಿ ಕಾಂಗಳಸೇ ಅನ್ನೋ ಜಾತಿಯ ಮೀನೋಂದನ್ನು ಖರೀದಿಸಿದ, ಅದನ್ನು ಕತ್ತರಿಸಿ ಸ್ವಚ್ಚ ಮಾಡಲು ಶಬ್ಬೀರ ಕಡೆಗೆ ಕೊಡಲಾಯಿತು. ಅದರ ಮೇಲಿನ ಹಿಂಜು ತಗೆಯುವಲ್ಲಿಯೇ ಇವನಿಗೆ ಸಾಕು ಬೇಕಾಯಿತು. ಅಷ್ಟೆಲ್ಲಾ ತ್ರಾಸು ಪಟ್ಟು ಕ್ಲೀನ್ ಮಾಡಿದ ಮೇಲೆ ಅವನಿಗೆ ಸಿಕ್ಕದ್ದು ಕೇವಲ ಮೂರು ರೂಪಾಯಿ ಮಾತ್ರ. ಶಬ್ಬೀರ ಸೊಟ್ಟು ಮುಖ ಮಾಡಿ,

‘ಸರ್ ಐದು ರೂಪಾಯಿ ಕೊಡ್ರಿ’
‘ಚೋಟೀದಿ ಅದೆಂತಾ ಐದು ಕೊಡ್ತಾರ..? ಮೂರೂ ಹೆಚ್ಚಾಯಿತು’
‘ಇಲ್ಲ ಸರ್, ಎಲ್ಲರೂ ಅಷ್ಟೇ ಕೊಡೊದು’
‘ನೀನೇನು ಸ್ವಚ್ಚ ಮಾಡೀದಿ..? ಕರ್ಮ..! ಮನಿಗೋಗಿ ಮತ್ತೆ ಮಾಡಬೇಕು, ಎಲ್ಲಾ ಡಬಲ್ ಕೆಲಸ’ ಅಂತ ಆ ಆಸಾಮಿ ಕೈ ಬೀಸತಾ ನಡದೇ ಬಿಟ್ಟ. ಆಗ ಶಬ್ಬೀರ ಅವನ ಬೆನ್ನ ಹಿಂದೆಯೇ ಒಂದೆರಡು ಹೊಲಸು ಬೈಗುಳಗಳನ್ನು ಗುನಗುನಸಿ ಸುಮ್ಮನಾದ. ಶಬ್ಬೀರನ ಸುತ್ತಮುತ್ತಲೂ ಮೂರ್ನಾಲ್ಕು ಬೆಕ್ಕುಗಳು ತಮ್ಮ ಸಂಸಾರ ಸಮೇತ ಕುಳಿತುಕೊಂಡು ಅವನ ಕೈಯನ್ನೇ ದಿಟ್ಟಿಸುತ್ತಿದ್ದವು. ಅವನು ಮೀನನ್ನು ಕತ್ತರಿಸುವಾಗ ಅದರ ತಲೆ ತುಂಡಾಗಿ ಅವುಗಳ ಮುಂದೆಯೇ ಹೋಗಿ ಬಿದ್ದರೂ ಅವು ಅದೇ ಸ್ಥಿತಿಯಲ್ಲಿ ದಿಟ್ಟಿಸುತ್ತಿದ್ದವೇ ಹೊರತು ಸುತಾರಾಂ ಬಾಯಿ ಹಾಕುತ್ತಿರಲಿಲ್ಲ. ಬಹುಷ: ಅವುಗಳ ಬಾಯಿ ಕೆಟ್ಟಂತಾಗಿರಬೇಕು. ದಿನಾಲು ಒಂದೇ ಜಾತಿಯ ಮೀನು ತಿಂದೂ ತಿಂದೂ ಅವುಗಳಿಗೂ ಬೇಸರವಾಗಿರಬೇಕು. ಇಲ್ಲವೇ ಚೆಲ್ಲಾಟ ಆಡಿ ತಿನ್ನುವ ಮಜಾ ಹೀಗೆ ಕತ್ತಿಯಿಂದ ತುಂಡಾದ ತಲೆಯಲ್ಲಿ ಅವುಗಳಿಗೆ ಸಿಗಲಿಕ್ಕಿಲ್ಲ.

ರಾಜೀವ ಸ್ಟೇಟ್ ಬ್ಯಾಂಕ್ ನೌಕರ. ಅವನು ಮೊದಲಿನಿಂದಲೂ ಮೀನು ತಿನ್ನುವವನಲ್ಲ. ಮೀನು ತಿನ್ನುವವಳನ್ನು ಮದುವೆಯಾದಂದಿನಿಂದಲೂ ಅದನ್ನು ಕಲಿತವನು. ಬಾಗಲಕೋಟೆಯಿಂದ ಧಾರವಾಡಕ್ಕೆ ವರ್ಗವಾಗಿ ಬಂದ ಮೇಲಂತೂ ಸ್ವತ: ಖುದ್ದಾಗಿ ಮೀನು ಮಾರುಕಟ್ಟೆಗೆ ಹೋಗಿ ಬರುತ್ತಿದ್ದ. ತನ್ನದೇ ಜೊತೆಗೆ ಕೆಲಸ ಮಾಡುವ ಕಮಲಾಕರ ದೇಸಾಯಿ ಗಂತೂ ದಿನಾಲೂ ಮೀನು ಬೇಕೇ ಬೇಕು. ಮಂಗಳೂರು ಮೂಲದ ದೇಸಾಯಿ, ರಾಜೀವನಿಗೆ ತರಾವರಿ ಮೀನುಗಳನ್ನು ಪರಿಚಯ ಮಾಡಿಕೊಟ್ಟಿದ್ದ. ಇಂಗ್ಲಿಷ್ ದಿನಪತ್ರಿಕೆಯೊಂದರಲ್ಲಿ ಮೀನು ಸೇವನೆಯ ಲಾಭಗಳ ಬಗೆಗೆ ಒಂದು ಲೇಖನ ಪ್ರಕಟವಾಗಿತ್ತು. ಅದನ್ನು ದೇಸಾಯಿ ಮ್ಯಾನೇಜರ್ ಆದಿಯಾಗಿ ಬ್ಯಾಂಕಿನ ಜೀಪ್ ಡ್ರೈವರ್ ವರೆಗೂ ಎಲ್ಲರೆದುರು ಓದಿ ಹೇಳಿ, ತಾನು ಆ ಕಾರಣಕ್ಕಾಗಿಯೇ ದಿನಾಲು ಮೀನು ತಿನ್ನುವದು ಎಂದು ಬೀಗಿದ್ದ. ಮೊದಲೇ ಅವನು ಚುರುಕು ದೇಸಾಯಿ, ಬೆರಕೀ ದೇಸಾಯಿ ಎಂದು ಹೆಸರು ಪಡೆದವನು. ಈ ಲೇಖನವನ್ನು ಎಲ್ಲರಿಗೂ ತೋರಿಸಿದ ನಂತರ ‘ಅದು ಎಷ್ಟೇ ಆಗಲಿ ಮೀನು ತಿಂದ ತಲಿ’ ಅಂತ ಇಡೀ ಬ್ರ್ಯಾಂಚಲ್ಲಿ ಮಾತನಾಡಲಿಕ್ಕೆ ಶುರು ಮಾಡಿದ್ದರು.

ಈ ದೇಸಾಯಿ ದೇವರು, ದಿಂಡರು ಆಚರಣೆಗಳ ಬಗ್ಗೆ ಅಷ್ಟಕ್ಕಷ್ಟೇ. ಹಾಗಾಗಿಯೇ ಶ್ರಾವಣ ಮಾಸದಲ್ಲಿಯೂ ಇವನು ಮೀನು ತಿನ್ನುವದನ್ನು ಬಿಡುತ್ತಿರಲಿಲ್ಲ. ರಾಜೀವನ ಹತ್ತಿರ ಬಂದು ‘ಒಂದು ಮಾತು ಹೇಳಲಾ..?’ ಎಂದು ಕಿವಿಯ ಹತ್ತಿರ ಹೋಗುತ್ತಿದ್ದ.

‘ನಿಜವಾಗಿಯೂ ಮೀನು, ಕೋಳಿ ತಿನ್ನುವವರಾಗಿದ್ರೆ ಈ ಶ್ರಾವಣದಲ್ಲಿಯೇ ತಿನಬೇಕು ಯಾಕೆಂದರೆ ಬಹಳ ಜನ ಆಗ ತಿನ್ನುವದಿಲ್ಲ ಕಡಿಮೆ ದರ ಹೆಚ್ಚಿನ ಗುಣಮಟ್ಟ’ ಎಂದು ಮುಸು ಮುಸು ನಗುತ್ತಿದ್ದ. ಆಗ ರಾಜೀವನಿಗೂ ಈ ದೇಸಾಯಿ ನಿಜವಾಗಿಯೂ ತುಂಬಾ ಚಾಲಾಕಿ ಮನುಷ್ಯ ಎನಿಸಿತ್ತು. ರಾಜೀವ್ ಧಾರವಾಡಕ್ಕೆ ಬಂದ ಹೊಸತರಲ್ಲಿ ಮೀನು ಮಾರುಕಟ್ಟೆಗೆ ಹೆಜ್ಜೆ ಊರಿದ್ದೇ ಈ ದೇಸಾಯಿ ಜೊತೆಯಾಗಿ. ಇವನು ಮಾರುಕಟ್ಟೆ ಗೆ ಎಂಟ್ರಿ ಕೊಟ್ಟಿದ್ದೇ ಮೀನು ಮಾರುವವರು ಇವನ ಹೆಸರಿಡಿದು
‘ಆವೋ ದೇಸಾಯಿ ಮಾಮಾ.. ಅಚ್ಚಾ ಸುರಮಾ ಹೈ ದೇಖೋ’
‘ಆಯಿಯೇ ಶೇಠ್, ಕಾರವಾರಕಾ ಬಂಗಡೆ ಹೈ ದೇಕೋ’
‘ಓ ಸಾಬ್ ಫéಸ್ಟ್ ಕ್ಲಾಸ್ ಬೆಳಂಜಿ ಹೈ ದೇಕೋ’ ಅಂತ ಕೂಗವರು. ಇವನೋ ‘ಏಕ ಮಿನಿಟ್’ ಅಂತಾ ಮುಂದೆ ಹೋಗವನು. ಇಡೀ ಮೀನು ಮಾರುಕಟ್ಟೆ ಇವನಿಗೆ ಪರಿಚಯವಿದೆಯಲ್ಲ..! ಅಂತ ರಾಜೀವಗೆ ಅಚ್ಚರಿಯಾಗಿತ್ತು. ದೇಸಾಯಿ ತಾನು ದಿನಾಲು ಖರೀದಿ ಮಾಡುವ ಜಾಗಕ್ಕೆ ಇವನನ್ನು ಕರೆದು
‘ಮೀನು ಫ್ರೆಶ್ ಇದೆಯೋ ಇಲ್ಲವೋ ಅಂತ ಹ್ಯಾಂಗ ತಿಳಿಯೂದು..?’
‘ನನಗೆ ಗೊತ್ತಿಲ್ಲ’
‘ಇಲ್ನೊಡು’ ಎಂದು ಒಂದು ಬಂಗಡೆ ಮೀನನ್ನು ಕೈಗೆತ್ತಿಕೊಂಡು ಅದರ ಕಿವಿಯನ್ನು ತೆರೆದು ತೋರಿಸಿ
‘ಹೀಗೆ ಕೆಂಪು ಬಣ್ಣ ಇರಬೇಕು. ಬಿಳಿ ಇಲ್ಲವೇ ಬೂದು ಬಣ್ಣ ಇದ್ದರೆ ಸರಿ ಇಲ್ಲ ಅಂತ ಅರ್ಥ’ ಹಾಗೆ ಅವನು ಹೇಳಿದ ದಿನದಿಂದ ರಾಜೀವ ಮೀನು ಖರೀದಿ ಮಾಡುವಾಗ ಕಿವಿ ತಪಾಷಣೆ ಮಾಡದೇ ಇರುತ್ತಿರಲಿಲ್ಲ. ರಾಜೀವನ ಹೆಂಡತಿ ಸುಮಾಗೆ ಇವನು ಮೀನಿನ ಮಾರುಕಟ್ಟೆಗೆ ಹೋಗುವದು, ಒಳ್ಳೆಯ ಮೀನನ್ನೇ ತರುವದನ್ನು ಗಮನಿಸಿ ‘ನೀವು ಮುಂಚಿನಿಂದಲೂ ಮೀನು ತಿಂತಿದ್ರಿ ಅಂತ ಕಾಣುತ್ತದೆ ಇಲ್ಲಾಂದ್ರೆ ಹೀಗೆ..’ ಅನ್ನುವದರೊಳಗೆ ‘ನೋಡು ಅದೆಲ್ಲಾ ಬ್ಯಾಡ, ಚುಲೋ ಇದೆಯೋ ಇಲ್ಲವೋ ಅಷ್ಟು ಸಾಕು’ ಅಂತಿದ್ದ.

ದೇಸಾಯಿ ಯಾವಾಗಲೂ ಅದೇ ಅಂಗಡಿಯಲ್ಲಿಯೇ ಮೀನನ್ನು ಖರೀದಿಸುತ್ತಿದ್ದ. ಮಿಕ್ಕವರ ಬಳಿ ಅವನಿಗಿಂತಲೂ ಬಹಳಷ್ಟು ಪ್ರಕಾರದ ಮೀನುಗಳು ಇರುತ್ತಿದ್ದವಾದರೂ ಅಲ್ಲಿ ಖರೀದಿಸುತ್ತಿರಲಿಲ್ಲ. ಅದಕ್ಕೆ ಏನು ಕಾರಣವಿರಬಹುದೆಂದು ಮೊದಮೊದಲು ರಾಜೀವನಿಗೆ ಹೊಳೆಯಲಿಲ್ಲ. ಆಮೇಲೆ ಗೊತ್ತಾಯಿತು. ಅವನು ಈ ದೇಸಾಯಿಯ ಕೊಂಕಣಿ ಭಾಷೆಯನ್ನೇ ಮಾತನಾಡುವದು, ಅದಕ್ಕಿಂತಲೂ ಮುಖ್ಯವಾಗಿ ಅವನದೇ ಪ್ರಾದೇಶಿಕತೆಯವನು. ಹಾಗಾಗಿಯೇ ತೂಕದ ಮೇಲೆ ಒಂದು ಮೀನು ಯಾವಾಗಲೂ ಇವನ ಜೋಳಿಗೆಗೆ ಹೆಚ್ಚಿಗೆ ಬೀಳುತ್ತಿತ್ತು. ಅವನ ಬಳಿ ಒಂದೊಮ್ಮೆ ಬಿಲ್ಕುಲ್ ಮೀನು ಇಲ್ಲವೆಂದಾಗ ಮಾತ್ರ ಬೇರೆಯವರ ಬಳಿ ಇವನು ಮೀನು ಕೊಳ್ಳುತ್ತಿದ್ದ. ಶಬ್ಬೀರನಿಗೆ ಈ ದೇಸಾಯಿಯನ್ನು ಕಂಡರೆ ಆಗುತ್ತಿರಲಿಲ್ಲ. ಇವನ ಮೀನು ಏನಾದರೂ ಕಟ್ ಮಾಡಬೇಕಾಗಿ ಬಂದಾಗ ಬಹುತೇಕ ಹುಡುಗರು ‘ನಾ ಒಲ್ಲೆ ತಾ ಒಲ್ಲೆ’ ಅಂತ ಇವನ ಚೀಲವನ್ನು ಎತ್ತಿ ಇಡುತ್ತಿದ್ದರು. ‘ಎ ಹುಡುಗರೆ, ಐದು ರೂಪಾಯಿ ಕೊಡ್ತೀನಿ ಸ್ವಚ್ಚ ಮಾಡ್ರೋ’ ಅಂತ ಹೇಳಿ ಮುಗಿದಾದ ನಂತರ ಮತ್ತೆ ಈತ ಕೊಡೊದು ಮೂರೇ ರೂಪಾಯಿ.

‘ಎ ಝೂಟ್ ಭೋಲತಾ ಹೈ’ ಅಂತ ಶಬ್ಬೀರ ಬಾಕಿ ಹುಡುಗರಿಗೆ ಇಷಾರೆ ಮಾಡುತ್ತಿದ್ದ. ರಾಜೀವ ಇವನ ಸಂಗಡಾನೇ ಬರೋದನ್ನು ನೋಡಿದ ಆ ಹುಡುಗರು ‘ಸಾಬ್ ಕಟ್ ಮಾಡಲಿಕ್ಕ ಐದು ರೂಪಾಯಿ ನೋಡ್ರಿ’ ಅಂತ ಕಂಡೀಶನ್ ಹಾಕುತ್ತಿದ್ದರು. ರಾಜೀವ ನಗುತ್ತ ಐದು ರೂಪಾಯಿ ಮುಂಗಡವಾಗಿಯೇ ಕೊಟ್ಟಿರುತ್ತಿದ್ದ.

***

ಒಂದು ಕಾಲದಲ್ಲಿ ಮೀನಿನ ವಾಸನೆಗೆ ‘ತಲೆ ದಿಮ್ ಅಂತೈತಿ’ ಅನ್ನೋ ರಾಜೀವಗೆ ಈಗ ಮೀನು ಇಲ್ಲದೇ ನಡೆಯೋದಿಲ್ಲ. ಅವತ್ತು ಯಾವದೋ ಒಂದು ಅಮವಾಸ್ಯೆ ಬೆಳ್ಳಂಬೆಳಿಗ್ಗೆ ದೇಸಾಯಿ ಅವನಿಗೆ ಪೋನ್ ಮಾಡಿ ‘ಮೀನು ಬೇಕಂದರೆ ಇವತ್ತು ಸಸ್ತಾ ಸಿಗ್ತದೆ’ ಅಂದ. ರಾಜೀವ ಹೆಂಡತಿಯ ಮುಂದೆ ವಿಷಯ ಹೇಳಿದ ‘ಇವತ್ತು ಹೇಳೀಕೇಳಿ ಅಮವಾಸ್ಯೆ ಇವತ್ತು ಬೇಡ’ ಅಂದಳು. ಅದನ್ನೇ ರಾಜೀವ ದೆಸಾಯಿಗೆ ಹೇಳಿದ.

‘ಆಯ್ತು ತರಕಾರಿಯಾದರೂ ತಗೊಳುವಂತೆ ಬಾ ನನ್ನ ಸಂಗಡ’ ಅಂದ.
‘ಸರಿ ಬರ್ತೇನೆ’ ಎಂದು ರಾಜೀವ್ ಮನೆಯಲ್ಲಿ ತರಕಾರಿಯಾದರೂ ತರ್ತೇನೆ ಅಂತ ಹೊರಟ. ಮೊದಲು ಮೀನು ಮಾರುಕಟ್ಟೆಗೆ ಹೋದರು. ಅಲ್ಲಿ ನೊಡಿದರೆ ಅವತ್ತು ಬಿಲ್ಕುಲ್ ಮೀನು ಇರಲಿಲ್ಲ. ಇದ್ದದ್ದು ಒಬ್ಬನ ಹತ್ತಿರ ಮಾತ್ರ. ಅದು ಕೇವಲ ಎರಡೇ ಜಾತಿಯ ಮೀನು. ಬಂಗಡೆ ಬಿಟ್ಟರೆ ಸ್ವಲ್ಪ ಬೆಳಂಜಿ. ಹೀಗಾಗಿ ಆತ ರೇಟೂ ಸಿಕ್ಕಾ ಪಟ್ಟೆ ಹೇಳುತ್ತಿದ್ದ. ಇದ್ದುದರಲ್ಲಿಯೇ ಬೆಳಂಜಿ ಚೆನ್ನಾಗಿದೆ ಆದರೆ ಎರಡು ನೂರು ರೂಪಾಯಿ ಅಂತಾ ಇದ್ದ. ದೇಸಾಯಿ ಗೆ ಇರೋ ಐದಾರು ಜನರಲ್ಲಿ ಯಾರಾದರೂ ತಗೊಂಡೇ ತಗೋತಾರೆ ಅನ್ನೋ ಗ್ಯಾರಂಟೀ ಇತ್ತು. ಹಾಗೆ ಒಂದೊಮ್ಮೆ ಆದರೆ ತನಗೆ ಮೀನು ಸಿಗೋದಿಲ್ಲ ಅನ್ನೂದು ಅವನಿಗೆ ಖಾತ್ರಿ ಆಯ್ತು. ರಾಜೀವ ನನ್ನು ಹತ್ತಿರ ಕರೆದು ಕಿವಿಯಲ್ಲಿ ಏನೋ ಹೇಳಿದ. ರಾಜೀವ ತುಸು ದೂರದಲ್ಲಿ ನಿಂತ. ದೇಸಾಯಿ ಮೆಲ್ಲಗೆ ಮೀನು ಮಾರುವವನ ಬಳಿ ಬಂದು,

‘ಹ್ಯಾಂಗ ಮಾಡಿಯೋ ಬೆಳಂಜಿ ರೇಟು..?’ ಅಲ್ಲೇ ಬಾಜೂ ಇದ್ದ ಇನ್ನೊಬ್ಬ ಗಿರಾಕಿ
‘ಎರಡು ನೂರು ಹೇಳ್ತಾನ’
‘ಅವನೇನು ಐದುನೂರೂ ಹೇಳ್ತಾನ, ತಗೋಳವರು ಬೇಕಲ್ಲ.. ಕೊಡೂದು ಹೇಳು’
‘ಇವತ್ತ ಮೀನೇ ಇಲ್ಲ, ಇರೋದೇ ಅಷ್ಟು’ ಅಂದ. ದೇಸಾಯಿ ಒಂದೆರಡು ಬೆಳಂಜಿ ಮೀನನ್ನು ಎತ್ತಿ ಮೂಗಿಗೆ ಹಿಡಿದು ಮುಖ ಕಿವುಚುತ್ತಾ
‘ಓಹೋ ಇದರ ಕಥೆ ಮುಗಿಲಿಕ್ಕ ಬಂದೈತಿ, ನೀ ಪುಗ್ಸಟ್ಟೆ ಕೊಟ್ಟರೂ ಬ್ಯಾಡ’ ಅಂತ ನಡದ. ನಂತರ ರಾಜೀವ ಬಂದು ಬೆಳೆಂಜಿಯನ್ನು ಕೈಯಲ್ಲಿ ಹಿಡಿದು ಹಿಚುಕಿದಂತೆ ಮಾಡಿ,
‘ಇದೇನು ಮಾರಾಯಾ..? ಮೀನು ಮುಗ್ಗಾಗಲಿಕ್ಕೆ ಬಂದೈತಲ್ಲ..!’ ಅಂದ. ಆ ಮೀನು ಮಾರುವವನು
‘ಬ್ಯಾಡಾಂದ್ರ ಬಿಡ್ರಿ, ನಾ ಏನು ಫéೋರ್ಸ್ ಮಾಡಾಕತ್ತಿಲ್ಲ’ ಅನ್ನುತ್ತಿರುವಂತೆಯೇ ಅಲ್ಲಿದ್ದ ಐದಾರು ಗಿರಾಕಿಗಳು ಬಿಟ್ಟು ಬರ ಬರ ನಡೆದರು. ಇದನ್ನೇ ಕಾಯುತ್ತಿದ್ದ ದೇಸಾಯಿ
‘ನೋಡು, ಒಂದು ರೇಟ್ ಮಾಡಿ ಕೊಡು’ ಅಂದ.
‘ಚುಲೋ ಇಲ್ಲ ಅಂತೀರಿ ಮತ್ಯಾಕ ತಗೋತೀರಿ..?’
‘ಊಟಕ್ಕಲ್ಲ ಮಾರಾಯಾ.. ಮನ್ಯಾಗ ಒಂದೆರಡು ಬೆಕ್ಕು ಅದಾವ, ಅವುಗಳಿಗೆ ಬೇಕೇ ಬೇಕು’ ಮಕ್ಕಳನ್ನೇ ಇವನು ಬೆಕ್ಕು ಅಂದದ್ದನ್ನು ಕೇಳಿ ರಾಜೀವ ಮುಖಾ ತಿರುಗಿಸಿ ನಗುತ್ತಿದ್ದ.
‘ಲಾಸ್ಟ್ ನೂರೈವತ್ತು ನೋಡ್ರಿ ಬೇಕಂದರ ತಗೊರಿ, ಬ್ಯಾಡಂದ್ರ ಬಿಡ್ರಿ’ ಅಂತ ಕಡ್ಡಿ ಮುರಿದ ಹಾಗೆ ಹೇಳಿದ್ದೇ ದೇಸಾಯಿ ಮತ್ತೆ ಯಾರಾದರೂ ಗಿರಾಕಿ ಬಂದಾರು..? ಅಂತ ಆ ಬದಿ ಈ ಬದಿ ನೋಡಿದ್ದೇ..

‘ಆಯ್ತಪಾ ಅರ್ಧ ಕಿಲೋ ಕೊಡು’
‘ಒಂದು ಕಿಲೋನರೇ ತಗೋರಿ’
‘ಬೆಕ್ಕಿಗಿ ಅಂತ ಹೇಳಲಿಲ್ಲಾ..?’
ಕ್ಲೀನ್ ಮಾಡಬೇಕು ಅಂತ ಹೇಳಿದ್ದೇ ಅಲ್ಲೇ ಬಾಜೂ ಕುಳಿತ ಹುಡುಗ ಶಬ್ಬೀರ ಮೆಲ್ಲಗೆ ಎದ್ದು ಪುಸಂಗನೇ ಮಾಯವಾಗಿಬಿಟ್ಟಿದ್ದ. ದೇಸಾಯಿ ಅತ್ತಿತ್ತ ಕಣ್ಣಾಡಿಸಿದ. ಕ್ಲೀನ್ ಮಾಡುವ ಬೇರೆ ಯಾವ ಹುಡುಗರೂ ಅಲ್ಲಿರಲಿಲ್ಲ. ಅದೇ ಮೀನನ್ನು ಇನ್ನೊಬ್ಬ ಗಿರಾಕಿಗೆ ಆತ ಎರಡು ನೂರು ರೂಪಾಯಿಯಂಗೆ ಮಾರಿದ್ದ. ಆ ಗಿರಾಕಿ ದುಡ್ಡು ಕೊಟ್ಟಾದ ಮೇಲೆ
‘ನೀವು ಹ್ಯಾಂಗ ತಗೊಂಡರಿ..?’ ಅಂತ ಕೇಳಿದಾಗ ದೇಸಾಯಿ ನೂರಾ ಐವತ್ತು ರೂಪಾಯಿ ಅಂತ ಹೇಳಿ ಅಲ್ಲಿಂದ ಪುಸಂಗನೇ ಕಾಲು ಕೀಳಿದ್ದ. ಆ ಗಿರಾಕಿ ‘ಒಬ್ಬರಿಗೊಂದು ಇನ್ನೊಬ್ಬರಿಗೊಂದು ಮಾಡೂದಾದ್ರ ಮೀನೇ ಬ್ಯಾಡ’ ಅಂತ ತಕರಾರು ತಗದ. ಅಲ್ಲ್ಲಿ ಜೋರು ಜೋರಾಗಿ ಬಾಯಿ ಮಾಡುವ ಸದ್ದು ಕೇಳುತ್ತಿತ್ತು. ದೇಸಾಯಿಯ ಬೈಕ್ ಕಿಕ್ ನಲ್ಲಿ ಆ ಅವಾಜ್ ಕಳೆದುಹೋಯಿತು.