ಭಾಷೆಯನ್ನು ಮಕ್ಕಳು ಮಾತನಾಡಲು,  ವಿಷಯಗಳನ್ನು ತಿಳಿಯಲು ಮಾತ್ರವೇ ಬಳಸುವುದಿಲ್ಲ. ಭಾಷೆಯನ್ನವರು ಓದುವುದು ಮತ್ತು ಬರೆಯುವುದರ ಮೂಲಕ ಮಾತ್ರವೇ ಕಲಿಯುವುದೂ ಇಲ್ಲ. ಅವರ ಅನುಭವಕ್ಕೆ ನಿಲುಕುವ ಪ್ರತಿಯೊಂದು ವಸ್ತುಗಳು ಮತ್ತು ದೈನಂದಿನ ಅನುಭವಗಳ ಮೂಲಕ ಭಾಷೆಯನ್ನು ಕಲಿಯುತ್ತಾ ಹೋಗುತ್ತಾರೆ. ಎಷ್ಟು ಹೊಸ ಅನುಭವಗಳಿಗೆ ತೆರೆದುಕೊಳ್ಳುವರೋ ಅಷ್ಟು ಹೆಚ್ಚು ಪದ ಸಂಪತ್ತು ಮತ್ತು ಭಾಷಾಜ್ಞಾನ ಅವರಲ್ಲಿ ವೃದ್ಧಿಯಾಗುತ್ತ ಸಾಗುತ್ತದೆ. ಲೇಖಕಿ ಸುಧಾ ಆಡುಕಳ ಭಾಷಾಜ್ಞಾನದ ಕುರಿತಾಗಿ ಬರೆದ ವಿಶ್ಲೇಷಣೆ ಇಲ್ಲಿದೆ.

ಯಾವುದೇ ಭಾಷೆಯಿರಲಿ, ಅದು ಒಂದು ಅದ್ಭುತವಾದ ಮಾಯಾಲೋಕ! ಅಕ್ಷರಗಳೆಂಬ ಕೆಲವೇ ಕೆಲವು ಸಂಕೇತಗಳೊಂದಿಗೆ ಧ್ವನಿ ಜೋಡಣೆಗೊಂಡು ಸೃಷ್ಟಿಯಾಗುವ ಭಾಷೆಯೆಂಬ ಮಾಯಾಲೋಕ ವ್ಯಕ್ತಿಯ ಒಳಹೊರಗನ್ನು ತೆರೆದಿಡಬಲ್ಲ ಅತ್ಯುತ್ತಮ ಮಾಧ್ಯಮವಾಗುವ ಪರಿಯೇ ಕೌತುಕ. ಭಾಷೆ ಕೇವಲ ಮನುಷ್ಯ ಮನುಷ್ಯರ ನಡುವಿನ ಸಂಪರ್ಕ ಮಾಧ್ಯಮವಷ್ಟೇ ಅಲ್ಲ, ನಮ್ಮ ವ್ಯಕ್ತಿತ್ವವನ್ನು ನಿರ್ಧರಿಸುವ ಭಾವತಂತು ಕೂಡಾ. ಆಗತಾನೇ ಜನಿಸಿದ ಮಗುವೂ ತನ್ನ ಅಳುವಿನ ಭಾಷೆಯಲ್ಲಿ ಸಂಭಾಷಣೆ ನಡೆಸಬಲ್ಲುದು. ಒಂದರಿಂದ ಐದನೇ ವರ್ಷದ ಮಕ್ಕಳಲ್ಲಿ ನಡೆಯುವ ಭಾಷಾಕೌಶಲದ ಬೆಳವಣಿಗೆ ಭಾಷೆಯನ್ನು ಕಲಿಸುವವರೆಲ್ಲರಿಗೂ ಮಾರ್ಗದರ್ಶಕವಾಗಿದೆ. ಈ ವಯಸ್ಸಿನ ಮಕ್ಕಳನ್ನು ಸೂಕ್ಷ್ಮವಾಗಿ ಗಮನಿಸಿದಲ್ಲಿ ಮಗುವಿನ ಭಾಷಾಕಲಿಕೆ ಯಾವ ರೀತಿ ಸಾಗುತ್ತದೆ ಎಂಬುದು ತಿಳಿಯುತ್ತದೆ. ತಾರ್ಕಿಕವಾಗಿ ಯೋಚಿಸುವ ನಮ್ಮ ಊಹೆಗಳಿಗೆ ನಿಲುಕದ ಬೇರೆ ಬೇರೆ ಆಯಾಮಗಳಲ್ಲಿ ಮಕ್ಕಳು ಭಾಷೆಯನ್ನು ಗ್ರಹಿಸುತ್ತಾರೆ ಮತ್ತು ಬಳಸುತ್ತಾರೆ. ಮಕ್ಕಳಿಗೆ ಭಾಷೆಯೊಂದು ಅತ್ಯುತ್ತಮವಾದ ಆಟಿಕೆಯೂ ಹೌದು. ಇದನ್ನು ಉಪಯೋಗಿಸಿಯೇ ಅವರು ತಮ್ಮ ಕನಸಿನ ಸೌಧಗಳನ್ನು ಕಟ್ಟುತ್ತಿರುತ್ತಾರೆ. ಅನೇಕ ಜನರನ್ನು ತಮ್ಮೊಂದಿಗೆ ಬೆಸೆದುಕೊಳ್ಳುತ್ತಿರುತ್ತಾರೆ. ಇದಕ್ಕೊಂದು ಭದ್ರವಾದ ಅಡಿಪಾಯ ಒದಗಿಸಿದಲ್ಲಿ ಅವರ ಭವಿಷ್ಯದ ವ್ಯಕ್ತಿತ್ವದಲ್ಲಿ ಸರ್ವತೋಮುಖವಾದ ಅಭಿವೃದ್ಧಿಯಾಗುತ್ತದೆ.

ಪ್ರಾಥಮಿಕ ಶಾಲಾ ಶಿಕ್ಷಕರ ತರಬೇತಿ ಕಾರ್ಯಕ್ರಮದಲ್ಲಿ ಭಾಗವಹಿಸಿದಾಗ ನನಗೆ ಭಾಷೆಯ ಪ್ರಾರಂಭಿಕ ಕಲಿಕೆಯ ಬಗ್ಗೆ ಮಾಹಿತಿಗಳು, ಶಿಕ್ಷಕರು ಎದುರಿಸಬೇಕಾದ ತೊಡರುಗಳು, ನಿವಾರಣೋಪಾಯಗಳ ಬಗ್ಗೆ ಅನೇಕ ವಿವರಗಳನ್ನು ತಿಳಿಯಲು ಸಾಧ್ಯವಾಯಿತು. ಶಿಕ್ಷಕಿಯಾಗಿರುವುದರಿಂದ ಮಕ್ಕಳ ನಿರಂತರ ಸಂಪರ್ಕದಲ್ಲಿ ಭಾಷಾಕಲಿಕೆಯು ಅವರ ವ್ಯಕ್ತಿತ್ವದ ಮೇಲೆ ಬೀರುವ ಪರಿಣಾಮಗಳ ಬಗ್ಗೆ ತಿಳಿಯಲು ಸದಾ ಅವಕಾಶವಿದೆ. ನನ್ನದೇ ಮಕ್ಕಳು, ನಮ್ಮ ಮನೆಯ ಮಕ್ಕಳು ಚಿಕ್ಕವರಿರುವಾಗ ಕಥೆ ಹೇಳುವ ನನ್ನನ್ನೇ ಸುತ್ತುವರೆಯುತ್ತಿದ್ದುದರಿಂದ ಮಕ್ಕಳ ವರ್ತನೆಗಳನ್ನು ತೀರ ಹತ್ತಿರದಿಂದ ಗಮನಿಸಲು ಸಾಧ್ಯವಾಯಿತು. ಎಲ್ಲಕ್ಕಿಂತ ಹೆಚ್ಚಾಗಿ ಭಾಷಾಕಲಿಕೆಯಲ್ಲಿರಬೇಕಾದ ಸೂಕ್ಷ್ಮತೆ ಮತ್ತು ಋಷಿಸದೃಶ ಧ್ಯಾನಾವಸ್ಥೆಗಳ ಬಗ್ಗೆ ನನ್ನಲ್ಲಿ ಅರಿವು ಮೂಡಿಸಿದವರು ಮಂಗಳೂರಿನ ಸೈಂಟ್ ಆನ್ಸ್ ಕಾಲೇಜಿನ ಡಾ|ಪದ್ಮಾವತಿಯವರು. ಪ್ರಾಥಮಿಕ ಶಾಲಾ ಇಂಗ್ಲಿಷ್ ತರಬೇತಿ ಸಾಹಿತ್ಯ ತಯಾರಿಯಲ್ಲಿ ಅವರೊಂದಿಗೆ ಕಳೆದ ಒಂದು ತಿಂಗಳು ನನ್ನ ಜೀವನದ ಸುವರ್ಣ ಕ್ಷಣಗಳು. ಭಾಷಾ ಪಾಠವೆಂದರೆ ಪುಸ್ತಕದಲ್ಲಿರುವುದನ್ನು ಒದರಿ, ಕೊನೆಯಲ್ಲಿರುವ ಪ್ರಶ್ನೆಗಳಿಗೆ ಸಿದ್ಧ ಉತ್ತರ ನೀಡಿ, ಬೆತ್ತ ಹಿಡಿದು ವ್ಯಾಕಣಾಂಶ ಬೋಧಿಸುವುದಲ್ಲ. ಪ್ರತಿಮಗುವಿನ ಮನಸ್ಸಿನ ಎಳೆಯನ್ನು ಹಿಡಿದು ಭಾಷೆಯ ಹಿಂದಿನ ನವಿರಾದ ಭಾವನೆಯನ್ನು ಆ ಮಗುವಿನ ಮನಸ್ಸಲ್ಲಿ ಚಿತ್ರಿಸುವುದು ಎಂಬ ಅವರ ಮಾತು ಭಾಷಾಬೋಧನೆಯ ಹೊಸದೊಂದು ಆಯಾಮವನ್ನು ನನಗೆ ಪರಿಚಯಿಸಿತು. ಅದಕ್ಕೆ ಉದಾಹರಣೆಯೆಂಬಂತೆ ಅವರು ನಮಗೆ ವಿಶೇಷಣಗಳ ಬಗ್ಗೆ ಒಂದು ಪಾಠವನ್ನು ಮಾಡಿದರು. ಅದಕ್ಕೆ ಅವರು ಆರಿಸಿಕೊಂಡ ವಿಷಯ ‘ಮಾವಿನ ಹಣ್ಣಿನ ರಸಾಯನವನ್ನು ತಯಾರಿಸುವುದು’ ಪಾಠ ಮುಗಿದಾಗ ನಮ್ಮೆಲ್ಲರ ಬಾಯಲ್ಲಿ ನೀರೂರಿತ್ತು. ಅದರೊಂದಿಗೆ ‘ಸಿಹಿಯಾದ’, ‘ಚೆನ್ನಾಗಿ ಕಳಿತ’, ‘ಸವಿಯಾದ’, ‘ರಸಭರಿತ’, ‘ದೊಡ್ಡದಾದ’ ಹೀಗೆ ಹತ್ತಾರು ವಿಶೇಷಣಗಳ ಪಟ್ಟಿಯೂ ಸಿದ್ಧವಾಗಿತ್ತು. ಅವರು ಪ್ರತಿಬಾರಿ ಚರ್ಚೆ ಆರಂಭಿಸುವಾಗಲೂ ಹೇಳುತ್ತಿದ್ದರು, “ನೀವೆಲ್ಲರೂ ಮಾತಾಡಬೇಕು, ನಾನು ಕೇಳುತ್ತೇನೆ.” ಹಾಗೆಯೇ ನಡೆದುಕೊಳ್ಳುತ್ತಿದ್ದರು ಕೂಡ. ಎಂಥದೇ ವಿರೋಧ ಅಭಿಪ್ರಾಯಗಳಿರಲಿ, ಅದನ್ನು ನಿರಾಕರಿಸದೇ ನಯವಾಗಿ ತಿದ್ದ ಬೇಕಾದ ಮಾದರಿಗೆ ಮಾರ್ಪಡಿಸುವ ಅವರ ಕೌಶಲ ನನ್ನಲ್ಲಿ ಒಂದು ರೀತಿಯ ಬೆರಗನ್ನು ಮೂಡಿಸುತ್ತಿತ್ತು.

ನಂತರದ ದಿನಗಳಲ್ಲಿ ಶಿಕ್ಷಣ ಮತ್ತು ಭಾಷಾಕಲಿಕೆಯ ಬಗ್ಗೆ ಅನೇಕ ಪುಸ್ತಕಗಳನ್ನು ಓದಿದರೂ ನನ್ನ ಮೇಲೆ ತುಂಬಾ ಪರಿಣಾಮ ಬೀರಿದ ಪುಸ್ತಕ ಕೃಷ್ಣಕುಮಾರ ಅವರ ‘ಮಗುವಿನ ಭಾಷೆ ಮತ್ತು ಶಿಕ್ಷಕರು’ ಭಾಷಾಶಿಕ್ಷಕರಿಗೆ ಅದೊಂದು ಉತ್ತಮ ಪ್ರವೇಶಿಕೆಯಾಗಬಲ್ಲುದು. ನನ್ನ ಅನೇಕ ಅನುಭವಗಳನ್ನು ಕ್ರೋಡೀಕರಿಸಲು ಮತ್ತು ಮಕ್ಕಳ ವರ್ತನೆಗಳನ್ನು ಇನ್ನೂ ಸೂಕ್ಷ್ಮವಾಗಿ ಗಮನಿಸಲು ಅದುವೇ ಪ್ರೇರಣೆಯಾಯಿತು. ಮೂಲತಃ ವಿಜ್ಞಾನ ವಿಷಯವನ್ನು ಅಧ್ಯಯನ ಮಾಡಿ, ಗಣಿತವನ್ನು ಬೋಧಿಸುತ್ತಿರುವ ನನಗೆ ಭಾಷೆ ಮತ್ತು ಗಣಿತ ಬೇರೆ ಬೇರೆ ಎಂದು ಅನಿಸಿಯೇ ಇಲ್ಲ. ಭಾಷೆಯ ಸರಿಯಾದ ಗ್ರಹಿಕೆಯಿದ್ದಲ್ಲಿ ಗಣಿತವೇ ಏನು, ಎಲ್ಲ ವಿಷಯಗಳ ಕಲಿಕೆಯೂ ಸುಲಲಿತ. ಇಂದಿನ ಅನೇಕ ವಿದ್ಯಾರ್ಥಿಗಳು ಕಲಿಕೆಯಲ್ಲಿ ಹಿಂದುಳಿಯಲು ಯಾಂತ್ರಿಕವಾದ, ಚೇತೋಹಾರಿಯಲ್ಲದ ಭಾಷಾಕಲಿಕೆಯೇ ಕಾರಣವೆಂಬುದು ಅಪ್ರಿಯವಾದರೂ ಸತ್ಯ. ಯಾವುದೇ ವಿಷಯವನ್ನು ಅರಿಯಬೇಕಾದರೂ ಭಾಷೆಯೇ ಸಂಪರ್ಕ ಮಾಧ್ಯಮ ಎಂಬುದನ್ನು ಮರೆಯಲಾಗದು.

ಭಾಷೆಯನ್ನು ಮಕ್ಕಳು ಮಾತನಾಡಲು, ತಮ್ಮ ಅವಶ್ಯಕತೆಗಳನ್ನು ಈಡೇರಿಸಿಕೊಳ್ಳಲು ಮತ್ತು ವಿಷಯಗಳನ್ನು ತಿಳಿಯಲು ಮಾತ್ರವೇ ಬಳಸುವುದಿಲ್ಲ. ಭಾಷೆಯನ್ನವರು ಓದುವುದು ಮತ್ತು ಬರೆಯುವುದರ ಮೂಲಕ ಮಾತ್ರವೇ ಕಲಿಯುವುದೂ ಇಲ್ಲ. ಅವರ ಅನುಭವಕ್ಕೆ ನಿಲುಕುವ ಪ್ರತಿಯೊಂದು ವಸ್ತುಗಳು ಮತ್ತು ದೈನಂದಿನ ಅನುಭವಗಳ ಮೂಲಕ ಭಾಷೆಯನ್ನು ಕಲಿಯುತ್ತಾ ಹೋಗುತ್ತಾರೆ. ಎಷ್ಟು ಹೊಸ ಅನುಭವಗಳಿಗೆ ತೆರೆದುಕೊಳ್ಳುವರೋ ಅಷ್ಟು ಹೆಚ್ಚು ಪದ ಸಂಪತ್ತು ಮತ್ತು ಭಾಷಾಜ್ಞಾನ ಅವರಲ್ಲಿ ವೃದ್ಧಿಯಾಗುತ್ತ ಸಾಗುತ್ತದೆ. ಭಾಷೆಯನ್ನು ಕೇವಲ ಆದೇಶಗಳಿಗಾಗಿ ಮತ್ತು ಪ್ರಶ್ನೋತ್ತರಗಳಿಗಾಗಿ ಮಾತ್ರವೇ ಬಳಸುವ ವಾತಾವರಣದಲ್ಲಿ ಬೆಳೆದ ಮಗುವು ಅದನ್ನು ಆ ಕೆಲಸಗಳಿಗೆ ಮಾತ್ರವೇ ಬಳಸಬಲ್ಲುದು. ಆದ್ದರಿಂದ ಭಾಷೆಯೆಂಬುದು ವ್ಯಕ್ತಿತ್ವದ ನಿರ್ಮಾಣದ ಒಂದು ಪ್ರಮುಖ ಅಂಶವೂ ಹೌದು. ಆದರೆ ಮಕ್ಕಳನ್ನು ವಿಭಿನ್ನವಾದ ಅನುಭವಗಳಿಗೆ ತೆರೆದುಕೊಳ್ಳುವಂತೆ ಮಾಡುವಲ್ಲಿ ಮನೆಯಾಗಲೀ, ಶಾಲೆಗಳಾಗಲೀ ಆಸಕ್ತಿವಹಿಸುವುದು ಬಹಳ ಕಡಿಮೆ. ಶಾಲೆಗೆ ಬರುವ ಮಗುವೊಂದು ಹರಿಯುವ ನೀರಿನಲ್ಲಿ ಆಟವಾಡುವ, ಬೀಸುವ ಗಾಳಿಗೆ ತರಗೆಲೆಗಳು ಹಾರಾಡುವುದನ್ನು ನೋಡುವ, ಆಗಸದಲ್ಲಿ ಓಡುವ ಮೋಡಗಳ ಬಗ್ಗೆ ಕಥೆ ಕಟ್ಟುವುದನ್ನೆಲ್ಲ ಮನೆಯಲ್ಲಿಯೇ ಕಲಿತಿರುತ್ತದೆಯೆಂದು ಶಿಕ್ಷಕರು ಭಾವಿಸಿದರೆ, ಮಗುವಿನ ಕಲಿಕೆಯ ಎಲ್ಲ ಜವಾಬ್ದಾರಿಯನ್ನು ಶಿಕ್ಷಕರು ನಿಭಾಯಿಸುವರೆಂದು ಪಾಲಕರು ಭಾವಿಸುತ್ತಾರೆ. ಮಕ್ಕಳ ಚಟುವಟಿಕೆಗಳನ್ನು ಸೂಕ್ಷ್ಮವಾಗಿ ಅವಲೋಕಿಸಿದರೆ ಭಾಷೆಯ ಕಾರ್ಯಗಳನ್ನು ಅರ್ಥಮಾಡಿಕೊಳ್ಳಲು ಸಾಧ್ಯ.

ನಾವು ಒಂದರಿಂದ ಎರಡು ವರ್ಷದೊಳಗಿನ ಮಕ್ಕಳನ್ನು ಗಮನಿಸಿದರೆ ಯಾವುದೇ ಆಟವಾಡುತ್ತಿರುವಾಗಲೂ ಅದು ಸ್ವಗತವೆಂಬಂತೆ ಮಾತನಾಡುತ್ತಿರುವುದನ್ನು ನೋಡಬಹುದು. ಇಲ್ಲಿ ಮಾತುಗಳು ಆಟದ ಬಗೆಗಿನ ಅದರ ಆಸಕ್ತಿಯನ್ನು ಹೆಚ್ಚಿಸುತ್ತವೆ. ಈ ಕಾಮೆಂಟರಿಗಳು ಮಗುವಿನಿಂದ ಮಗುವಿಗೆ ಭಿನ್ನವಾಗಿರುತ್ತವೆ. ಒಂದೇ ಬಗೆಯಲ್ಲಿ ಮಾತನಾಡುವ ಮಕ್ಕಳು ಹೆಚ್ಚು ಹೊತ್ತು ಜೊತೆಯಾಗಿ ಮಾತನಾಡಬಲ್ಲರು. ಚಿಕ್ಕ ಮಕ್ಕಳು ತಮ್ಮ ಆಟದ ಸಂಗಾತಿಯನ್ನು ಆಯ್ಕೆಮಾಡಿಕೊಳ್ಳುವ ವಿಧಾನವಿದು. ಆಟದ ನಡುವೆ ಮಗುವಿನ ಸ್ವಗತವನ್ನು ತುಂಡರಿಸಿ ನೋಡಿ, ಅಸಹನೆಯಿಂದ ಮಗು ಆಡುವುದನ್ನು ನಿಲ್ಲಿಸುತ್ತದೆ. ಅಂದರೆ ಅದು ಹೆಣೆಯುತ್ತಿದ್ದ ಆಟದ ಕಥೆ ಅರ್ಧಕ್ಕೆ ನಿಂತು ಯೋಚನಾಲಹರಿ ಮುರಿದು ಬೀಳುತ್ತದೆ. ಇವೆಲ್ಲವೂ ಕಲ್ಲು, ಮಣ್ಣು, ಆಟಿಗೆಗಳು, ವಸ್ತುಗಳನ್ನು ಬಳಸಿ ಮಗು ಆಡುವಾಗಿನ ಮಾತುಗಳು. ಎಲ್ಲವನ್ನೂ ಖುಲ್ಲಂಖುಲ್ಲಾ ದೃಶ್ಯಗಳ ಮೂಲಕ ತೆರೆದಿಡುವ ಆನ್‌ಲೈನ್ ಆಟಗಳು ಮಕ್ಕಳ ಭಾಷಾಕಲಿಕೆಗೆ ಒಂದಿನಿತೂ ಪೂರಕವಲ್ಲ. ಪ್ರತಿಕ್ಷಣವೂ ಬೆರಗು ಹುಟ್ಟಿಸುವ ಈ ಆಟಗಳು ಮಗುವಿನ ಸ್ವಗತಗಳನ್ನು ಬಯಸುವುದೂ ಇಲ್ಲ. ಹಾಗಾಗಿ ಇಂತಹ ಮಕ್ಕಳ ಭಾಷಾಕಲಿಕೆ ಸಹಜವಾಗಿಯೇ ಕುಂಠಿತವಾಗುತ್ತದೆ.

ಮಕ್ಕಳು ಭಾಷೆಯನ್ನು ಯಾವುದಕ್ಕೆಲ್ಲ ಬಳಸುತ್ತಾರೆ? ಮತ್ತು ಭಾಷೆಯು ಅವರಲ್ಲಿ ಏನೆಲ್ಲ ಪರಿಣಾಮಗಳನ್ನು ಉಂಟುಮಾಡಬಲ್ಲುದೆಂಬುದನ್ನು ಕೆಲವು ಉದಾಹರಣೆಗಳ ಮೂಲಕ ನೋಡೋಣ.

ಭಾಷೆಯ ಸರಿಯಾದ ಗ್ರಹಿಕೆಯಿದ್ದಲ್ಲಿ ಗಣಿತವೇ ಏನು, ಎಲ್ಲ ವಿಷಯಗಳ ಕಲಿಕೆಯೂ ಸುಲಲಿತ. ಇಂದಿನ ಅನೇಕ ವಿದ್ಯಾರ್ಥಿಗಳು ಕಲಿಕೆಯಲ್ಲಿ ಹಿಂದುಳಿಯಲು ಯಾಂತ್ರಿಕವಾದ, ಚೇತೋಹಾರಿಯಲ್ಲದ ಭಾಷಾಕಲಿಕೆಯೇ ಕಾರಣವೆಂಬುದು ಅಪ್ರಿಯವಾದರೂ ಸತ್ಯ. ಯಾವುದೇ ವಿಷಯವನ್ನು ಅರಿಯಬೇಕಾದರೂ ಭಾಷೆಯೇ ಸಂಪರ್ಕ ಮಾಧ್ಯಮ ಎಂಬುದನ್ನು ಮರೆಯಲಾಗದು.

ರಶ್ಮಿ ನಾಲ್ಕು ವರ್ಷದ ಬಾಲಕಿ. ಹುಟ್ಟಿದ್ದು ಕರ್ನಾಟಕದಲ್ಲಿ, ಬೆಳೆದದ್ದು ಮಹಾರಾಷ್ಟ್ರದಲ್ಲಿ. ಮನೆಮಾತು ಕನ್ನಡ. ಶಾಲಾಮಾಧ್ಯಮ ಇಂಗ್ಲಿಷ್. ಶಾಲೆಯಲ್ಲಿ ಮಕ್ಕಳೊಂದಿಗೆ ಮಾತನಾಡುವುದು ಹಿಂದಿಯಲ್ಲಿ. ನೆರೆಮನೆಯ ಮಕ್ಕಳೊಂದಿಗೆ ಮರಾಠಿಯಲ್ಲಿ ಸಂಭಾಷಣೆ. ಹೀಗೆ ನಾಲ್ಕು ಭಾಷೆಗಳನ್ನು ಮಾತನಾಡುವ ನಾಲ್ಕು ವರ್ಷದ ಹುಡುಗಿ ಎಂದಿಗೂ ಒಂದು ಭಾಷೆಯನ್ನು ಇನ್ನೊಂದರೊಂದಿಗೆ ಬೆರೆಸುತ್ತಿರಲಿಲ್ಲ. ಪರಿಸರದ ಪ್ರಭಾವದಿಂದ ಮಕ್ಕಳು ಅನೇಕ ಭಾಷೆಗಳನ್ನು ಒಟ್ಟಿಗೆ ಕಲಿಯಬಲ್ಲರು ಎಂಬುದಕ್ಕೆ ಇದೊಂದು ನಿದರ್ಶನವಾಗಿದೆ.

ಐದು ವರ್ಷದ ಪ್ರೀತಂ ಕಥೆ ಹೇಳುವ ಸ್ಪರ್ಧೆಗೆ ಕಥೆಯೊಂದನ್ನು ಹೇಳಿಕೊಡುವಂತೆ ಕೇಳಿದ. ಅಮ್ಮ ಚಿತ್ರಕಥೆಗಳಿರುವ ಪುಸ್ತಕ ತೆರೆದು ‘ನರಿಯ ಜಾಣತನ’ ಕಥೆಯನ್ನು ಹೇಳಿ ಬಾಯಿಪಾಠ ಕಲಿ ಎಂದಳು. ಕಥೆ ಮುಗಿಯುತ್ತಿದ್ದಂತೆ ಪುಟ ಮುಚ್ಚಿ ನಿರಾಸೆಯಿಂದ ಕುಳಿತ. ಏನಾಯ್ತೆಂದು ವಿಚಾರಿಸಿದಾಗ ಹೇಳಿದ, “ಅಮ್ಮಾ, ನನಗೆ ಆ ಕಾಗೆ ತುಂಬಾ ಪಾಪ ಅನಿಸಿತು. ನರಿ ಕಾಗೆಗೆ ಮೋಸ ಮಾಡ್ತು. ನಂಗೆ ಇಂಥ ಕಥೆ ಬೇಡ. ನನ್ನ ಗೆಳೆಯ ಜಶನ್ ಕೂಡಾ ನಂಗೆ ತುಂಬಾ ಸಲ ಹೀಗೆ ಮೋಸ ಮಾಡ್ತಾನೆ. ನರಿ ಕಂಡ್ರೆ ನಂಗೆ ಜಶನ್ ನೆನಪಾಗ್ತಾನೆ. ಬೇರೆ ಕಥೆ ಹೇಳು” ಎಂದ. ಜೊತೆಗೆ ಆ ಪುಟವನ್ನು ಯಾವಾಗಲೂ ತೆರೆಯಬಾರದೆಂದು ಕಟ್ಟಪ್ಪಣೆ ಮಾಡಿದ. ಘಟನೆಗಳ ನಡುವಿನ ಸಂಬಂಧಗಳನ್ನು ಭಾಷೆಯ ಮೂಲಕ ಮಗುವು ಕಂಡುಕೊಳ್ಳುವ ವಿಧಾನವಿದು.

ಚಿನ್ನು ಬಸ್‌ನಲ್ಲಿ ಪ್ರಯಾಣಿಸಿದ್ದೇ ಅಪರೂಪ. ಎಲ್ಲಿಗೆ ಹೋಗುವುದಾದರೂ ಕಾರು, ಸ್ಕೂಟರ್‌ನಲ್ಲಿಯೇ ಹೋಗುವುದರಿಂದ ಅವನಿಗೆ ಬಸ್ ಪ್ರಯಾಣ ಹೊಸದು. ಶಾಲೆಗೆ ಹೋಗಲು ಪ್ರಾರಂಭಿಸಿದಾಗ ಅವನೊಬ್ಬನೇ ಶಾಲಾಬಸ್‌ನಲ್ಲಿ ಹೋಗಬೇಕಾಗಿ ಬಂದದ್ದು ಅವನಲ್ಲಿ ತೀರಾ ಗಾಬರಿಯನ್ನು ಹುಟ್ಟಿಸಿತ್ತು. ಒಂದೆರಡು ದಿನಗಳಲ್ಲಿ ಅವನು ಹಠಮಾಡಿ ಬಸ್‌ನ ಆಟಿಗೆಗಳನ್ನು ತರಿಸಿಕೊಂಡ. ದಿನಾಲೂ ಬೇಸರ ಬರುವಷ್ಟು ಸಲ ಬಸ್ ಬಿಡುವ ಆಟ ಆಡುತ್ತಿದ್ದ. ಅವನು ಬಸ್‌ನಲ್ಲಿ ಪ್ರಯಾಣಿಸುವಾಗ ನಡೆಯುವ ಸಂಭಾಷಣೆಗಳೆಲ್ಲವನ್ನೂ ಒಬ್ಬನೇ ಪುನರಾವರ್ತಿಸುತ್ತಿದ್ದ. ಮೂರು ನಾಲ್ಕು ವಾರಗಳ ಕಾಲ ಬಸ್ಸಿನ ಆಟ ಬಿಟ್ಟರೆ ಬೇರೆ ಇರಲೇ ಇಲ್ಲ. ಬಸ್ ಪ್ರಯಾಣದ ಆತಂಕ ಮರೆಯಾಗುವವರೆಗೂ ಅದೇ ಆಟ. ಊಟ, ತಿಂಡಿಗೆ ಕರೆದರೂ, “ಅಮ್ಮಾ, ಇನ್ನು ಇಬ್ಬರೇ ಮಕ್ಕಳು ಬಸ್‌ನಲ್ಲಿದ್ದಾರೆ. ಮನೆಗೆ ಬಿಟ್ಟು ಬರ್ತೇನೆ. ಅವರಮ್ಮನೂ ಕಾಯ್ತಾರಲ್ವಾ?” ಎಂದು ಅವೆಲ್ಲವೂ ನಿಜವೆಂಬಂತೆ ನುಡಿಯುತ್ತಿದ್ದ. ಹೀಗೆ ತಮಗೆ ಅಪರಿಚಿತವಾದ ಸನ್ನಿವೇಶಗಳನ್ನು ಪರಿಚಿತವಾಗಿಸಿಕೊಳ್ಳಲು ಮಕ್ಕಳು ಭಾಷೆಯನ್ನೇ ಮಾಧ್ಯಮವನ್ನಾಗಿ ಮಾಡಿಕೊಳ್ಳುತ್ತಾರೆ.

ಪ್ರಾರಂಭದ ದಿನಗಳಲ್ಲಿ ಶಾಲೆಗೆ ಹೋಗುವುದು ಯಾವ ಮಕ್ಕಳಿಗೆ ತಾನೆ ಇಷ್ಟ. ಪುಟ್ಟಿಯೂ ಇದಕ್ಕೆ ಹೊರತಾಗಿರಲಿಲ್ಲ. ಶಾಲಾ ಬಸ್‌ನಿಂದ ಇಳಿದು ಕುಣಿಯುತ್ತಾ ಹೆಜ್ಜೆ ಹಾಕುತ್ತಿದ್ದ ಅವಳ ಕೆನ್ನೆ ಹಿಂಡಿ, “ಏನು ಪುಟ್ಟಿ, ನಿಮ್ಮ ಬಸ್ ಅಷ್ಟೊಂದು ಕಪ್ಪು ಹೊಗೆ ಬಿಡುತ್ತಾ ಬರುತ್ತದಲ್ಲವಾ?” ಎಂದೆ. ಅದಕ್ಕೆ ಅವಳು ತನ್ನ ಬಸ್ ಹೋದ ದಾರಿಯನ್ನೇ ನೋಡುತ್ತಾ ಕಥೆ ಹೇಳತೊಡಗಿದಳು. “ಆಂಟಿ, ಅದು ಹೊಗೆ ಯಾಕೆ ಬರತ್ತೆ ಅಂದರೆ ಮಕ್ಕಳೆಲ್ಲಾ ಬೆಳಿಗ್ಗೆ ಬೇಗ ಎದ್ದು, ತಿಂಡಿ ತಿಂದು, ಯುನಿಫಾರಂ ಹಾಕಿ, ಅಮ್ಮನಿಗೆ ಟಾಟಾ ಮಾಡಿ ಶಾಲೆಗೆ ಹೊರಡ್ತಾರಲ್ವಾ? ಆಗ ಅವರಿಗೆಲ್ಲ ಬೇಜಾರಾಗತ್ತೆ. ಹೀಗೆ ಬೇಜಾರಾಗಿ ಬಸ್‌ನಲ್ಲಿ ಕುಳಿತಾಗ ಅವರ ಬೇಜಾರೆಲ್ಲ ಆ ಪೈಪಿನಲ್ಲಿ ಹೊಗೆಯಾಗಿ ಬರತ್ತೆ. ಬೇರೆ ಬಸ್ಸಿನಲ್ಲಿ ಮಕ್ಕಳೆಲ್ಲ ಅಜ್ಜನ ಮನೆಗೆ ಹೋಗ್ತಾರಲ್ಲ, ಆಗ ಖುಶಿ ಖುಶಿಯಾಗಿ ಹೋಗ್ತಾರೆ. ಹಾಗಾಗಿ ಆ ಬಸ್ಸಿನಲ್ಲಿ ಕಪ್ಪು ಹೊಗೆ ಇರಲ್ಲ. ನೋಡಿ ಬೇಕಾದ್ರೆ” ಎಂದು ನನಗೆ ರಸ್ತೆಯ ಇತರ ಬಸ್‌ಗಳನ್ನು ತೋರಿಸಿದಳು. ರಿಪೇರಿಯಾಗದ ಶಾಲೆಯ ಬಸ್‌ನಿಂದ ಹೊಗೆ ಬರುತ್ತಿರುವುದಕ್ಕೆ ಅವಳು ಅವಳದೇ ಆದ ಕಾರಣಗಳನ್ನು ಕಲ್ಪನೆಯ ಮೂಲಕ ಕಂಡುಕೊಂಡಿದ್ದಳು ಮತ್ತು ಭಾಷೆ ಅವಳ ಅಭಿವ್ಯಕ್ತಿಗೆ ಮಾಧ್ಯಮವಾಗಿ ಒದಗಿತ್ತು.

ಒಳ್ಳೆಯ ಓದುಗರೆಲ್ಲ ನಿರರ್ಗಳವಾಗಿ ಓದಲು ಶಕ್ತರಿರುವರೆಂದೇ ನಾನು ಭಾವಿಸಿದ್ದೆ. ಪಾಠ ಓದಿಸಲು ನಿಲ್ಲಿಸಿದಾಗಲೆಲ್ಲ ತೊದಲುತ್ತಾ ಓದುವ ಗಿರೀಶ ಓದಿನಲ್ಲಿ ಹಿಂದುಳಿದವನ ಸಾಲಿಗೆ ಸೇರಿಬಿಟ್ಟಿದ್ದ. ಎಷ್ಟು ತಿದ್ದಿದರೂ ಸರಳ ಪಠ್ಯವನ್ನು ಸರಿಯಾಗಿ ಓದಲು ಬಾರದ ಅವನು ಇನ್ನೆಲ್ಲ ವಿಷಯಗಳನ್ನು ಕಲಿತಂತೆಯೇ ಎಂಬುದು ನನ್ನ ತೀರ್ಮಾನವಾಗಿತ್ತು. ಆದರೆ ಓದಿನಲ್ಲಿ ಅಪಾರವಾದ ಆಸಕ್ತಿಯಿದ್ದ ಆತ ಗ್ರಂಥಾಲಯದ ಅನೇಕ ಪುಸ್ತಕಗಳನ್ನು ಎರವಲು ಪಡೆದು ಓದತೊಡಗಿದ್ದ. ಪೂರ್ಣಚಂದ್ರ ತೇಜಸ್ವಿಯವರ ಅನೇಕ ಪುಸ್ತಕಗಳನ್ನು ಓದಿ ಸ್ನೇಹಿತರಿಗೆ ಅದರ ಕಥೆಯನ್ನೂ ಹೇಳುತ್ತಿದ್ದ. ಅಮೇಜಾನ್ ನದಿಯೊಂದರ ಬಗ್ಗೆ ತಾಸುಗಟ್ಟಲೆ ಮಾತನಾಡತೊಡಗಿದ. ಇತಿಹಾಸಕ್ಕೆ ಸಂಬಂಧಿಸಿದ ಪುಸ್ತಕಗಳನ್ನು ಆಯ್ದು ಓದತೊಡಗಿದ. ಈಗಲೂ ನಾಲ್ಕು ವಾಕ್ಯವನ್ನು ದೊಡ್ಡದಾಗಿ ಓದೆಂದರೆ ಎರಡನೆಯ ತರಗತಿಯ ಮಗುವಿನಂತೆ ತೊದಲುತ್ತಾನೆ. ನಿಜವಾದ ಓದುವಿಕೆಗೆ ಶುದ್ಧ ಬಾಯ್ದೆರೆ ಓದು ಅವಶ್ಯವಿಲ್ಲ ಎಂಬುದು ನಾನವನಿಂದ ಕಲಿತ ಪಾಠವಾಗಿದೆ.

ಒಂಭತ್ತನೆಯ ತರಗತಿಯ ವಿದ್ಯಾರ್ಥಿಗಳಿಗೆ ‘ಅವ್ವ’ ಪಾಠವನ್ನು ಮಾಡಬೇಕಿತ್ತು. ಗೀತಾ ನಾಗಭೂಷಣ್‌ರವರ ಈ ಕಥೆ ಅನೇಕ ಕನ್ನಡ ಪಂಡಿತರ ಕಣ್ಣನ್ನು ಕೆಂಪಾಗಿಸಿತ್ತು. ಅದರಲ್ಲಿ ಬರುವ “ಅವಳ ಸೆರಗು ಜಾರಿತ್ತು” ಎಂಬರ್ಥದ ವಾಕ್ಯವನ್ನು ಒಂಭತ್ತನೇ ತರಗತಿಯ ವಿದ್ಯಾರ್ಥಿಗಳಿಗೆ ಏನೆಂದು ವಿವರಿಸುವುದು ಎಂಬುದೇ ಅನೇಕರ ಅಳುಕಾಗಿತ್ತು. ತರಗತಿಯಲ್ಲಿ ಕಥೆಯ ಓಘವನ್ನು ತುಂಡು ಮಾಡುವುದೇಕೆಂದು ಇಡೀ ಕಥೆಯನ್ನು ಒಮ್ಮೆಲೇ ಓದಿದೆ. ಓದುತ್ತಾ, ಓದುತ್ತಾ ನನಗ್ಯಾಕೋ ನಮ್ಮೂರಿನ ಅನೇಕ ತಾಯಂದಿರ ಚಿತ್ರಾ ಕಣ್ಮುಂದೆ ಬಂದು ಕಣ್ಣಂಚಿನಲ್ಲಿ ನೀರು ಜಿನುಗಿತು, ಸಹಜವಾಗಿಯೇ ಧ್ವನಿಯೂ ಕೊಂಚ ನಡುಗಿತ್ತು. ಇದೆಲ್ಲಾ ಮಕ್ಕಳಿಗೆ ಕಾಣಬಾರದೆಂಬಂತೆ ಪುಸ್ತಕವನ್ನು ಮುಖಕ್ಕೆ ಅಡ್ಡವಾಗಿಟ್ಟು ಓದುತ್ತಲೇ ಹೋದೆ. ಕಥೆ ಮುಗಿಯುವಾಗ ತರಗತಿಯಲ್ಲಿ ನೀರವ ಮೌನ! ಅನೇಕ ವಿದ್ಯಾರ್ಥಿಗಳ ಕಣ್ಣಂಚಿನಲ್ಲಿ ನೀರು! ಮತ್ತೆ ಏನನ್ನೂ ವಿವರಿಸಬೇಕು ಅನಿಸಲಿಲ್ಲ. ಮಕ್ಕಳು ಪಠ್ಯವನ್ನು ಇಡಿಯಾಗಿ ಅರ್ಥೈಸಿಕೊಳ್ಳುವ ಬಗೆಯಿದು.

ಮಂಜುನಾಥ ಒಂಭತ್ತನೇ ತರಗತಿಯ ಸಮಸ್ಯಾತ್ಮಕ ಮಗು. ಸಮಸ್ಯಾತ್ಮಕ ಯಾಕೆಂದರೆ ಕಲಿಕೆಯಲ್ಲಿ ಪರವಾಗಿಲ್ಲ ಎನಿಸುವ ಈತ ಮಹಾ ಹಿಂಸಾವಾದಿ. ಸಹಪಾಠಿಗಳಿಗೆ ಏನಾದರೂ ಕಾಟ ಕೊಡದೇ ಅವನ ಶಾಲಾದಿನ ಮುಗಿಯುತ್ತಿರಲಿಲ್ಲ. ತರಗತಿಯ ಶಿಕ್ಷಕಿಯಾದ ನನಗೆ ದಿನಕ್ಕೊಂದು ದೂರುಗಳ ಸರಮಾಲೆ! ಹೊಡೆದರೆ, ಬೈದರೆ ಮಾತಿಲ್ಲ, ಕಥೆಯಿಲ್ಲ. ಬರೀ ಮೌನ! ಮರುದಿನ ಮತ್ತೊಂದು ಪ್ರಕರಣ. ಒಂದು ದಿನ ಶಾಲಾ ಅವಧಿಯ ನಂತರ ನಿಲ್ಲುವಂತೆ ಹೇಳಿದೆ. ಅವನು ಹೇಳಿದಂತೆ ನಿಂತಿದ್ದೇ ನನ್ನ ಅದೃಷ್ಟ! “ಯಾಕೆ ಹೀಗೆ?” ಅವನ ಕಣ್ಣುಗಳನ್ನೇ ದಿಟ್ಟಿಸಿ ನೋಡಿದೆ. ಕಣ್ಣಿನಲ್ಲೊಂದು ತಣ್ಣನೆಯ ಕ್ರೌರ್ಯ ಅಡಗಿ ಕುಳಿತಿತ್ತು. “ಚಿಕ್ಕವನಿರುವಾಗ ಮನೆಯಲ್ಲಿ ಯಾರಾದರೂ ತುಂಬಾ ಹೊಡೀತಿದ್ರಾ?” ಎಂದು ಕೇಳಿದೆ. ಹೌದೆಂಬಂತೆ ತಲೆಯಾಡಿಸಿದ. “ಯಾರು?” ಎಂದೆ. “ಅಮ್ಮ” ಎಂದ ತಣ್ಣಗೆ. “ಯಾಕೆ?” ಎಂದೆ. “ಗೊತ್ತಿಲ್ಲ” ಎಂದ ಅಮಾಯಕನಂತೆ. “ಸರಿ, ನಾಳೆ ನನಗೊಂದು ಪತ್ರವನ್ನು ಬರೆದುಕೊಡು. ಅದರಲ್ಲಿ ನಿನ್ನ ಬಾಲ್ಯದಲ್ಲಿ ಯಾವಾಗೆಲ್ಲ ಅಮ್ಮ ಹೊಡೆಯುತ್ತಿದ್ದರು ಎಂಬುದನ್ನು ನೆನಪಿಸಿಕೊಂಡು ಬರೆ. ಹೆದರಬೇಡ, ಪತ್ರವನ್ನು ನಾನು ಮಾತ್ರವೇ ಓದುವೆ” ಎಂದೆ. ಮರುದಿನ ಬರುವಾಗ ಚಿಂದಿಯಂತಹ ಕಾಗದದಲ್ಲಿ ಚಿತ್ರವೊಂದನ್ನು ಮಾಡಿ ತಂದಿದ್ದ. ಒಂದು ಭೂತದಂತಹ ಹೆಣ್ಣು ಕೈಯಲ್ಲಿ ಖಡ್ಗ ಹಿಡಿದು ನಿಂತಿದ್ದಳು. ಇನ್ನೊಂದು ಕೈಯಲ್ಲಿ ಸಣ್ಣ ಮಗುವಿನ ಜುಟ್ಟು ಹಿಡಿದಿದ್ದಳು. ಮಗುವಿನ ಮುಖದ ತುಂಬೆಲ್ಲಾ ಭಯದ ಛಾಯೆಯಿತ್ತು. ಮಗುವಿನ ಕುತ್ತಿಗೆಯ ಸುತ್ತ ಮಾತ್ರವೇ ಕೆಂಪು ಶಾಯಿಯಿಂದ ಗುರುತು ಮಾಡಿದ್ದ. ಆ ಚಿತ್ರ ಅವನ ಬಾಲ್ಯಕ್ಕೆ ಹಿಡಿದ ಕನ್ನಡಿಯಾಗಿತ್ತು. ಅಮ್ಮನನ್ನು ಕರೆದು ವಿಚಾರಿಸಿದೆ. ಅವನು ಸಣ್ಣವನಿರುವಾಗ ಓರಗಿತ್ತಿಯ ಮೇಲಿನ ಸಿಟ್ಟಿಗೆ ಇವನನ್ನು ಹಿಡಿದು ಬಡಿಯುತ್ತಿದ್ದೆ ಎಂದರು. ಇಂದಿಗೂ ಬಾರುಕೋಲಿನಿಂದ ಬಾರಿಸಿದರೂ ತಿರುಗಿ ಒಂದು ಮಾತು ಹೇಳದಷ್ಟು ಸೌಮ್ಯ ನನ್ನ ಮಗ ಎಂದು ಗುಣಗಾನ ಮಾಡಿದರು. ಮನಸ್ಸಿನೊಳಗೆ ಅದುಮಿಟ್ಟ ಕ್ರೌರ್ಯವೆಲ್ಲವೂ ತರಗತಿಯಲ್ಲಿ ಹೊರಬರುತ್ತಿತ್ತು. ಬೈಗಳವನ್ನು ಬಿಟ್ಟು ಬೇರೆಯ ವಿಷಯಕ್ಕೆ ಭಾಷೆಯನ್ನು ಬಳಸುವುದನ್ನೇ ಕಂಡರಿಯದ ಮಗು ಅದನ್ನೇ ತನ್ನ ರೂಢಿಯಾಗಿಸಿಕೊಂಡಿತ್ತು. ಮುಂದೆ ಇಂಥದ್ದೇ ಅನೇಕ ಚಿತ್ರಗಳನ್ನು ಅವನು ನನಗಾಗಿ ಬಿಡಿಸಿ ತಂದಿದ್ದ. ಆದರೆ ಇವೆಲ್ಲದರ ನಡುವೆಯೇ ಶಾಲೆಯ ಟೆಲಿಫೋನ್ ತಂತಿಯನ್ನು ಕತ್ತರಿಸಿ ಶಿಕ್ಷೆಯ ಭಯದಿಂದ ಶಾಲೆಯನ್ನು ತೊರೆದಿದ್ದ. ಉತ್ತಮ ಮಿಮಿಕ್ರಿ ಪಟುವಾಗಿದ್ದ ಅವನೊಳಗೆ ಭಾಷೆಯ ಮೃದುತನ ಇನ್ನೊಂದಿಷ್ಟು ಇಳಿದಿದ್ದರೆ ಉತ್ತಮ ವ್ಯಕ್ತಿಯಾಗುತ್ತಿದ್ದ.

ವಿರಾಮದ ಅವಧಿಯೇನಾದರೂ ತರಗತಿಯಲ್ಲಿ ಸಿಕ್ಕರೆ ಮನಸ್ಸಿಗೆ ಬಂದ ಚಿತ್ರಗಳನ್ನು ಬಿಡಿಸುವಂತೆ ಹೇಳುವುದು ಕ್ರಮ. ಸಾಧಾರಣವಾಗಿ ಮಕ್ಕಳು ತಾವು ಅದಾಗಲೇ ಕಲಿತಿದ್ದ ಸಿದ್ಧ ಮಾದರಿಯ ಚಿತ್ರಗಳನ್ನು ಬಿಡಿಸುತ್ತಾರೆ. ಅವರಿಗೆ ಅನಿಸಿದ ಹಾಗೆ ಗೆರೆಗಳನ್ನು ಎಳೆಯುವಂತೆ ಮಾಡುವುದು ಸ್ವಲ್ಪ ಕಠಿಣ ಕೆಲಸವೆ, ಆದರೆ ಅಸಾಧ್ಯವೇನೂ ಅಲ್ಲ. ಹಾಗೆ ಬಿಡಿಸಿದ ಚಿತ್ರಗಳು ಅನೇಕ ಸಲ ಅವರ ಮನಸ್ಸಿಗೆ ಹಿಡಿದ ಕನ್ನಡಿಯಾಗಿರುತ್ತವೆ. ಕೆಲವು ಮಕ್ಕಳಿಗೆ ಭಾಷೆಯು ಅಭಿವ್ಯಕ್ತಿಯ ಮಾಧ್ಯಮವಾದರೆ, ಇನ್ನು ಕೆಲವರು ಚಿತ್ರದ ಮೂಲಕ ಸಶಕ್ತವಾಗಿ ಭಾವನೆಗಳನ್ನು ವ್ಯಕ್ತಪಡಿಸುತ್ತಾರೆ. ಎಲ್ಲಾ ವಿಷಯಗಳಲ್ಲಿ ಸದಾ ಅನುತ್ತೀರ್ಣಗೊಳ್ಳುತ್ತಿದ್ದ ವಿದ್ಯಾರ್ಥನಿಯೊಬ್ಬಳು ಬಿರುಕುಬಿಟ್ಟ ನೆಲವನ್ನು ಚಿತ್ರಿಸಿದರೆ, ಸದಾ ಹೊಸ ಪ್ರಯೋಗದಲ್ಲಿ ಮುಳುಗಿರುವ ಹುಡುಗನೊಬ್ಬ ಹಕ್ಕಿಯ ಚಿತ್ರಕ್ಕೆ ಮನುಷ್ಯನ ಮುಖ ಬಿಡಿಸಿ ಸ್ವಚ್ಛಂದವಾಗಿ ಹಾರಲು ಬಿಟ್ಟಿದ್ದ. ಇವೆಲ್ಲ ಅಭಿವ್ಯಕ್ತಿಗಳಿಗೆ ಅವಕಾಶ ದೊರೆತಾಗ ಮಾತ್ರವೇ ಮಕ್ಕಳು ಭಾಷೆಯ ಬಹುಮುಖೀ ಆಯಾಮಗಳನ್ನು ತಮ್ಮದಾಗಿಸಿಕೊಳ್ಳಲು ಸಾಧ್ಯ.

ದಿನೇಶ ಒಂಭತ್ತನೇ ತರಗತಿಯಲ್ಲಿ ಎರಡು ಸಲ ಅನುತ್ತೀರ್ಣನಾಗಿದ್ದ. ತಮಿಳು ಕಾಲೊನಿಯಿಂದ ನಮ್ಮ ಶಾಲೆಗೆ ಬರುತ್ತಿದ್ದ ಅವನಿಗೆ ಕನ್ನಡವೇ ಚೆನ್ನಾಗಿ ಬರುತ್ತಿರಲಿಲ್ಲ. ಮುಂದೆ ತಿಳಿಸಿರುವ ಘಟನೆಯೊಂದು ನಡೆಯದಿದ್ದರೆ ಅವನು ನನ್ನ ಮನಸ್ಸಿನಲ್ಲಿ ಶತ ದಡ್ಡನ ಸಾಲಿನಲ್ಲಿ ಸೇರ್ಪಡೆಗೊಳ್ಳುತ್ತಿದ್ದನೇನೊ? ಶಾಲಾ ವಾರ್ಷಿಕೋತ್ಸವಕ್ಕಾಗಿ ಕೈಬರೆಹದ ಪತ್ರಿಕೆಯೊಂದನ್ನು ತಯಾರಿಸಬೇಕೆಂಬ ತರಾತುರಿಯಲ್ಲಿದ್ದೆವು. ಕೇವಲ ಒಂದು ವಾರದಲ್ಲಿ ಪತ್ರಿಕೆ ತಯಾರಾಗಬೇಕಾದ್ದರಿಂದ ಬರೆಯುವ, ಚಿತ್ರ ಬಿಡಿಸುವ ಕೆಲವೇ ವಿದ್ಯಾರ್ಥಿಗಳನ್ನು ಆರಿಸಿ ಕೆಲಸ ಮಾಡುತ್ತಿದ್ದೆವು. ಪತ್ರಿಕೆಯಲ್ಲಿ ಬರುವ ಕಥೆ, ಕವನ ಲೇಖನಗಳಿಗೆಲ್ಲ ಅಲ್ಲಲ್ಲಿ ರೇಖಾಚಿತ್ರಗಳಿರಬೇಕೆಂಬುದು ನಮ್ಮ ಕನಸಾಗಿತ್ತು. ಪ್ರಕೃತಿ, ಗಣೇಶ ಮತ್ತು ರಂಗೋಲಿ ಬಿಡಿಸಿ ಬಣ್ಣ ಮೆತ್ತುವ ನಮ್ಮ ಮಿನಿ ಕಲಾವಿದರ್ಯಾರಿಗೂ ನಮ್ಮ ಕಲ್ಪನೆಯ ಚಿತ್ರವನ್ನು ಬಿಡಿಸಲಾಗುತ್ತಿರಲಿಲ್ಲ. ನಾವೆಲ್ಲಾ ಇದೇ ವಿಷಯವನ್ನು ಚರ್ಚಿಸುತ್ತಿರುವಾಗ ಕಿಟಕಿಯಾಚೆ ನಿಂತಿದ್ದ ದಿನೇಶ, “ನಾನು ಚಿತ್ರ ಬಿಡಿಸಲಾ ಮೇಡಂ?” ಎಂದು ಕೇಳಿದ. ಬಹುಶಃ ಪಾಠ ತಪ್ಪಿಸಲು ಈ ಪಾಪಿ ಹೂಡಿರುವ ಉಪಾಯವಿದಿರಬೇಕೆಂದು ನಾವೆಲ್ಲಾ ಅಂದುಕೊಂಡರೂ ಒಂದು ಕೈ ನೋಡುವ ಎಂಬ ಆಸೆಯಿಂದ ಅವನನ್ನು ಒಳಕರೆದೆವು. ಅಲ್ಲಿಗೆ ಒಬ್ಬ ಅದ್ಭುತ ಕಲಾವಿದ ನಮಗೆ ದೊರೆತಿದ್ದ! ಚಿತ್ರಕಲೆಯಲ್ಲಿ ಒಂದೂ ಬಹುಮಾನ ಗಳಿಸಿರದ ದಿನೇಶ ನಾಲ್ಕು ದಿನಗಳಲ್ಲಿ ನಮ್ಮ ಕಲ್ಪನೆಯ ನೂರಾರು ರೇಖಾಚಿತ್ರಗಳನ್ನು ಬರಿಯ ಪೆನ್ಸಿಲ್ಲಿನಿಂದ ಚಿತ್ರಿಸಿದ್ದ. ಕೊನೆಯ ದಿನ ಮುಜುಗರದಿಂದಲೇ “ಮೇಡಂ, ನನ್ನದೂ ಒಂದು ಕವನವಿದೆ. ಹಾಕ್ತೀರಾ?” ಎಂದು ಒಂದು ಚಂದದ ಹಾಳೆಯನ್ನು ಕೊಟ್ಟು ಓಡಿಹೋಗಿದ್ದ.

ನನಗೆ ಶಾಲೆಯೆಂದರೆ ತುಂಬಾ ಪ್ರೀತಿ
ಶಾಲೆಗೆ ನಾನೆಂದರೆ ಯಾಕೋ ಕೋಪ
ಶಾಲೆಯೆಂದರೆ ನನಗೆ ಇಷ್ಟ
ಪರೀಕ್ಷೆ ಯಾಕೆ ಅಷ್ಟು ಕಷ್ಟ?
ಎಂಬ ಸಾಮಾನ್ಯ ಕವನದೊಂದಿಗೆ ಅದರ ಜೊತೆಯಲ್ಲಿರುವ ಚಿತ್ರ ನಮ್ಮ ಮನ ಕಲುಕಿತ್ತು. ಶಾಲಾಬ್ಯಾಗ್‌ನ್ನು ಹೆಗಲಿಗೇರಿಸಿಕೊಂಡ ಹುಡುಗನೊಬ್ಬ ಶಾಲೆಗೆ ಬೆನ್ನುಹಾಕಿ ನಡೆಯುತ್ತಿದ್ದ. ಮುಖವೇ ಕಾಣದ ಹುಡುಗನ ನಡಿಗೆಯನ್ನು ಅವನು ಹೇಗೆ ಚಿತ್ರಿಸಿದ್ದನೆಂದರೆ ಯಾರಾದರೂ ಅವನ ಮುಖದ ಬೇಸರವನ್ನು ಓದಬಹುದಿತ್ತು! ಇದನ್ನೇ ಎಲ್ಲರಿಗೂ ವಿವರಿಸಿ, ಅವನಿಗೆ ವಿಶೇಷ ಗಮನ ನೀಡುವ ಕರಾರಿನೊಂದಿಗೆ ಅವನನ್ನು ತೇರ್ಗಡೆಗೊಳಿಸಬೇಕು ಎಂದುಕೊಂಡಿದ್ದೆವು. ಆದರೆ ಫಲಿತಾಂಶದ ಬಗ್ಗೆ ಭರವಸೆಯಿಲ್ಲದ ಆತ ಕೆಲಸ ಹುಡುಕಿ ತಮಿಳುನಾಡಿಗೆ ಹೊರಟುಹೋಗಿದ್ದ. ಇಂದಿಗೂ ಚಿತ್ರದ ಮೂಲಕ ದಿನೇಶ ಬರೆದ ಅವನ ಭಾಷೆ ನನ್ನ ಮನಸ್ಸಿನಲ್ಲಿದೆ.

ಮೇಲ್ನೋಟಕ್ಕೆ ಸಾಮಾನ್ಯವೆನಿಸಬಹುದಾದ ಈ ಎಲ್ಲ ಘಟನೆಗಳು ತೆರೆದಿಡುವ ಭಾಷೆಯ ಕಲಿಕೆಯ ಆಯಾಮಗಳು ನಿಜಕ್ಕೂ ನಮ್ಮೆಲ್ಲರನ್ನು ಯೋಚನೆಗೆ ಹಚ್ಚುವಂಥವು. ಯಾವ ಮಾಧ್ಯಮದಲ್ಲಿ ಓದಿದರೆ ಅವಕಾಶಗಳ ಬಾಗಿಲುಗಳು ತೆರೆದುಕೊಳ್ಳುತ್ತವೆ? ಯಾವ ವಿಷಯಗಳನ್ನು ಆಯ್ಕೆ ಮಾಡಿ ಓದಿದರೆ ಹೆಚ್ಚು ಸಂಪಾದನೆ ಮಾಡಬಹುದು? ಎಂಬೆಲ್ಲ ಲೆಕ್ಕಾಚಾರಗಳ ನೆಲೆಯಲ್ಲಿ ಸಾಗುತ್ತಿರುವ ಶೈಕ್ಷಣಿಕ ವ್ಯವಸ್ಥೆಯಲ್ಲಿ ಬದುಕಿನ ಬಹು ಆಯಾಮವನ್ನು ಸ್ಪರ್ಶಿಸುವ ಮತ್ತು ಆ ಮೂಲಕವಾಗಿ ಯಾವುದೇ ಕಲಿಕೆಯನ್ನು ಅರ್ಥಪೂರ್ಣವಾಗಿಸುವ ಭಾಷೆಯ ಪರಿಣಾಮಕಾರಿ ಕಲಿಕೆಯ ಬಗ್ಗೆ ಪೋಷಕರು, ಶಿಕ್ಷಕರು ಗಂಭೀರವಾಗಿ ಆಲೋಚಿಸಬೇಕಿದೆ ಅನಿಸುತ್ತಿದೆ.