ಪ್ರಕೃತಿ-ಪುರುಷರ ಪ್ರತೀಕವಾದ ಶಕ್ತಿ-ಶಿವರೂಪಿ ದೇವತೆಗಳನ್ನು ಪ್ರಾಚೀನ ಕಾಲದಿಂದಲೂ ಶಿಲಾರೂಪದಲ್ಲಿ ಗುರುತಿಸಿಕೊಂಡು ಆ ದೇವದೇವಿಯರ ಆರಾಧನೆಯನ್ನು ರೂಢಿಯಲ್ಲಿ ಆಚರಿಸುತ್ತ ಬರಲಾಗಿದೆ. ಶಿವನು ಆಲಯಗಳಲ್ಲಿ ಲಿಂಗರೂಪಿಯಾಗಿಯೇ ಗೋಚರಿಸಿದರೆ, ದೇವಿಯ ಶಿಲಾರೂಪವನ್ನು ಲೋಹಮುಖ, ಪುಷ್ಪಾದಿ ಅಲಂಕಾರಗಳಿಂದ ಸಿಂಗರಿಸಲಾಗಿರುತ್ತದೆ. ಭುವನಗಿರಿಯಲ್ಲೂ ಭುವನೇಶ್ವರಿಯರೂಪವು ವ್ಯಕ್ತವಾಗಿರುವುದು ಹೀಗೆಯೇ. ದೇವಿಯಿರುವಗರ್ಭಗುಡಿಯಲ್ಲದೆ, ಬಲಬದಿಯ ಶಿವಲಿಂಗದ ಗುಡಿ, ನಂದಿ, ಕಕ್ಷಾಸನ, ಸೋಪಾನ ಮುಂತಾದವು ಪುರಾತನವಾದಗುಡಿಯ ಭಾಗಗಳಾಗಿ ಉಳಿದುಕೊಂಡಿವೆ. ಒಳಗುಡಿಯತ್ತ ಮೊಗಮಾಡಿ ನಿಂತ ಸಿಂಹದ ಪುರಾತನಶಿಲ್ಪ ಚಿಕ್ಕದಾದರೂ ಬಹು ಆಕರ್ಷಕವಾಗಿದೆ. 
ಟಿ.ಎಸ್ ಗೋಪಾಲ್ ಬರೆಯುವ ದೇಗುಲಗಳ ಸರಣಿಯ ಹದಿನೇಳನೆಯ ಕಂತು

 

“ಬಾಳ್ ಕನ್ನಡತಾಯ್ ಆಳ್ ಕನ್ನಡತಾಯ್.. ಕನ್ನಡಿಗರೊಡತಿ ಓ ರಾಜೇಶ್ವರೀ” ಎಂದು ಬಿ.ಎಂ.ಶ್ರೀ.ಯವರು ಕಳೆದ ಶತಮಾನದ ಪ್ರಾರಂಭದಲ್ಲಿ ಹಾಡಿ ಹರಸಿದ ಕನ್ನಡತಾಯಿಯಾರು ಎಂಬ ಪ್ರಶ್ನೆಗೆ ಉತ್ತರಿಸುವುದು ಕಷ್ಟವೇ. ಕರ್ನಾಟಕಮಾತೆ, ಕನ್ನಡದ ಕುಲದೇವಿ ಮೊದಲಾದ ಹೆಸರುಗಳಿಂದ ಕೀರ್ತಿತಳಾದ ಕನ್ನಡತಾಯಿಯನ್ನು ಮೈಸೂರು ಒಡೆಯರ ಕುಲದೇವತೆ ಚಾಮುಂಡೇಶ್ವರಿಯೊಡನೆ ಸಮೀಕರಿಸುವುದೂ ಇದೆ. ಹೇಗೂ ಇರಲಿ, ಶಕ್ತಿಸ್ವರೂಪಿಣಿಯಾದ ದೇವಿಯ ರೂಪವನ್ನೇ ಕನ್ನಡ ನಾಡಿನ ಅಧಿದೇವತೆಯೆಂದು ಪಾರಂಪರಿಕವಾಗಿ ಕೀರ್ತಿಸುತ್ತ ಬಂದಿರುವುದಂತೂ ನಿಜ. ನಾಡದೇವತೆಯ ಈ ರೂಪವನ್ನು ಭುವನೇಶ್ವರಿ ಎಂದು ಹೆಸರಿಸಲಾಗಿದೆ.


ನಾಡಿನೆಲ್ಲೆಡೆ ದೇವಾನುದೇವತೆಗಳು ವಿವಿಧ ಗುಡಿಗೋಪುರಗಳೆಡೆಯಲ್ಲಿ ಪ್ರತಿಷ್ಠಾಪಿತರಾಗಿ ಭಕ್ತಾದಿಗಳನ್ನು ಅನುಗ್ರಹಿಸುತ್ತಿರುವಾಗ ಸಮಸ್ತ ಕನ್ನಡಿಗರ ಕುಲದೇವತೆಯೆಂದು ಕೀರ್ತಿತಳಾದ ಭುವನೇಶ್ವರಿಯ ನೆಲೆ ಯಾವುದುಎಂದು ಬಹುಜನರು ಯೋಚಿಸಿದಂತಿಲ್ಲ. ಸ್ಥಳೀಯ ಗ್ರಾಮದೇವತೆಗಳಿಂದ ಮೊದಲುಗೊಂಡು ಚಾಮುಂಡೇಶ್ವರಿಯವರೆಗೆ ಶಕ್ತಿದೇವತೆಯ ವಿವಿಧ ಅವತಾರಗಳು ಎಲ್ಲೆಡೆ ಕಂಡುಬರುತ್ತಿರುವುದರಿಂದಲೇ ಕನ್ನಡಿಗರು ಈ ಕುರಿತು ಗಮನ ಹರಿಸಿಲ್ಲದಿರಬಹುದು. ಆದರೆ, ಭುವನೇಶ್ವರಿ ಎಂದೇ ಹೆಸರಾಂತದೇವಿಯ ಪೂರ್ಣಪ್ರಮಾಣದ ದೇಗುಲವೊಂದು ನಮ್ಮ ರಾಜ್ಯದ ಉತ್ತರಕನ್ನಡ ಜಿಲ್ಲೆಯಲ್ಲಿದೆ. ಸಿದ್ದಾಪುರದಿಂದ ಶಿರಸಿಯತ್ತ ಸಾಗುವ ಹೆದ್ದಾರಿಯಲ್ಲಿಎಂಟು ಕಿಲೋಮೀಟರುಗಳಷ್ಟು ಕ್ರಮಿಸಿದರೆ ಈ ದೇಗುಲವನ್ನುತಲುಪಬಹುದು. ಇದೇ ಭುವನಗಿರಿ ಎಂಬ ಗ್ರಾಮದಗುಡ್ಡದ ಮೇಲಿರುವ ಭುವನೇಶ್ವರಿದೇವಾಲಯ. ಮುಖ್ಯರಸ್ತೆಯಿಂದ ಅಂದಾಜು ಮುನ್ನೂರು ಅಡಿ ಎತ್ತರದಗುಡ್ಡದ ಮೇಲಿರುವ ಇಲ್ಲಿಗೆ ತಲುಪಲು ಮೆಟ್ಟಿಲುಗಳೂ ಇವೆ. ದೇಗುಲದ ಬಾಗಿಲವರೆಗೆ ವಾಹನವನ್ನು ತಲುಪಿಸಲು ಯೋಗ್ಯ ರಸ್ತೆಯೂಇದೆ.

ಪ್ರತ್ಯೇಕವಾದ ದೇವಾಲಯ, ದೇವಿಯ ಪ್ರತೀಕವಾದ ಮೂಲಶಿಲಾರೂಪ ಎಲ್ಲವನ್ನೂ ಒಳಗೊಂಡಿರುವ ಭುವನಗಿರಿ ಕ್ಷೇತ್ರವು ಕರ್ನಾಟಕದ ಅಧಿದೇವತೆ ಭುವನೇಶ್ವರೀ ದೇವಿಯ ಪೂರ್ಣಪ್ರಮಾಣದ ನೆಲೆಯೆಂಬ ಕೀರ್ತಿಗೆ ಪಾತ್ರವಾಗಿದೆ. ಹಂಪೆಯಲ್ಲಿ ಇದ್ದಿರಬಹುದಾದ ಭುವನೇಶ್ವರಿಯ ಗುಡಿ ಈಗ ಅಸ್ತಿತ್ವದಲ್ಲಿ ಇಲ್ಲದಿರುವುದರಿಂದ ಭುವನಗಿರಿಗೆ ಇನ್ನಷ್ಟು ಮಹತ್ವ ಪ್ರಾಪ್ತವಾಗಿದೆ. ವಿಜಯನಗರದ ದೊರೆಗಳ ಸಾಮಂತರಾದ ಬಿಳಗಿಯ ಅರಸರು ಈ ಗುಡಿಯನ್ನು ಕಟ್ಟಿಸಿದವರು. ಭುವನಗಿರಿಯಿಂದ ಏಳು ಕಿ.ಮೀ. ದೂರದ ಬಿಳಗಿಯನ್ನು ರಾಜಧಾನಿಯಾಗಿ ಹೊಂದಿದ್ದ ರಾಜರಲ್ಲಿ ಕೊನೆಯವನಾದ ಬಸವೇಂದ್ರನು 1692ರಲ್ಲಿ ಈ ಗುಡಿಯನ್ನು ಕಟ್ಟಿಸಿದುದಾಗಿ ತಿಳಿದುಬರುತ್ತದೆ. ಈ ಗುಡಿಗೆ ಹೊಂದಿಕೊಂಡಂತೆ ಕಲ್ಯಾಣಿಯೊಂದಿದ್ದು ಇದೂ ಬಿಳಗಿ ಅರಸರಕಾಲದಲ್ಲೇ ನಿರ್ಮಾಣವಾಯಿತು. ಉತ್ತರಕನ್ನಡ ಜಿಲ್ಲೆಯ ಹಸಿರು ಸಮೃದ್ಧಿಯ ನಡುವೆ ಶೋಭಿಸುವ ಈ ತಾಣ ತನ್ನ ಪ್ರಶಾಂತತೆಯಿಂದಲೂ ರಮಣೀಯ ಪ್ರಾಕೃತಿಕ ಸೊಬಗಿನಿಂದಲೂ ಮನಸೆಳೆಯುತ್ತದೆ.

ಪ್ರಕೃತಿ-ಪುರುಷರ ಪ್ರತೀಕವಾದ ಶಕ್ತಿ-ಶಿವರೂಪಿ ದೇವತೆಗಳನ್ನು ಪ್ರಾಚೀನ ಕಾಲದಿಂದಲೂ ಶಿಲಾರೂಪದಲ್ಲಿ ಗುರುತಿಸಿಕೊಂಡು ಆ ದೇವದೇವಿಯರ ಆರಾಧನೆಯನ್ನು ರೂಢಿಯಲ್ಲಿ ಆಚರಿಸುತ್ತ ಬರಲಾಗಿದೆ. ಶಿವನು ಆಲಯಗಳಲ್ಲಿ ಲಿಂಗರೂಪಿಯಾಗಿಯೇ ಗೋಚರಿಸಿದರೆ, ದೇವಿಯ ಶಿಲಾರೂಪವನ್ನು ಲೋಹಮುಖ, ಪುಷ್ಪಾದಿ ಅಲಂಕಾರಗಳಿಂದ ಸಿಂಗರಿಸಲಾಗಿರುತ್ತದೆ. ಭುವನಗಿರಿಯಲ್ಲೂ ಭುವನೇಶ್ವರಿಯರೂಪವು ವ್ಯಕ್ತವಾಗಿರುವುದು ಹೀಗೆಯೇ. ದೇವಿಯಿರುವಗರ್ಭಗುಡಿಯಲ್ಲದೆ, ಬಲಬದಿಯ ಶಿವಲಿಂಗದ ಗುಡಿ, ನಂದಿ, ಕಕ್ಷಾಸನ, ಸೋಪಾನ ಮುಂತಾದವು ಪುರಾತನವಾದಗುಡಿಯ ಭಾಗಗಳಾಗಿ ಉಳಿದುಕೊಂಡಿವೆ.

ಒಳಗುಡಿಯತ್ತ ಮೊಗಮಾಡಿ ನಿಂತ ಸಿಂಹದ ಪುರಾತನಶಿಲ್ಪ ಚಿಕ್ಕದಾದರೂ ಬಹು ಆಕರ್ಷಕವಾಗಿದೆ. ಸಿಂಹವು ಮುಂಗಾಲುಗಳನ್ನು ಮೇಲೆತ್ತಿದ ಭಂಗಿ, ಹೊರಚಾಚಿಕೊಂಡಂತಿರುವ ಕಣ್ಣುಗಳು, ಸೂಕ್ಷ್ಮಕೆತ್ತನೆಯ ವಿನ್ಯಾಸ- ಎಲ್ಲವೂ ಗಮನಸೆಳೆಯುತ್ತವೆ. ಕಕ್ಷಾಸನದ ಸುತ್ತ ಪಟ್ಟಿಕೆಗಳಲ್ಲಿ ಆಕರ್ಷಕ ಪುಷ್ಪವಿನ್ಯಾಸಗಳನ್ನು ಚಿತ್ರಿಸಲಾಗಿದೆ. ಒಳಗುಡಿಯ ಹೊರಭಿತ್ತಿಯ ಮೇಲೆ ಕಂಡುಬರುವ ಶಿಲ್ಪಗಳಲ್ಲಿ ಚಾಮರಧಾರಿಣಿಯರೊಡನೆ ದರ್ಪಣಸುಂದರಿಯೂ ಸೇರಿರುವುದೊಂದು ವಿಶೇಷ. ಬಾಗಿಲ ಆಚೀಚೆಗೆ ಶೈವದ್ವಾರಪಾಲಕರ ಶಿಲ್ಪಗಳಿವೆ. ಬಲಬದಿಯ ಗುಡಿಗಳಲ್ಲಿ ಪುರಾತನ ಶಿವಲಿಂಗವೂ, ಕೇಶವನ ಶಿಲ್ಪವೂ ಕಂಡುಬರುತ್ತವೆ. ಕೇಶವನ ವಿಗ್ರಹ ಇತ್ತೀಚಿನದಾದರೂ ಸೊಬಗಿನದು.

ಉಳಿದಂತೆ ಗುಡಿಯನ್ನೂ ಗೋಪುರವನ್ನೂ ಇತ್ತೀಚಿನ ವರ್ಷಗಳಲ್ಲಿ ನವೀಕರಿಸಲಾಗಿದೆ. ದೇವಿಯ ಸನ್ನಿಧಿಯಲ್ಲಿ ಶುಭಸಮಾರಂಭಗಳನ್ನು ನಡೆಸುವ ಜನರ ಅಪೇಕ್ಷೆಗೆ ನೆರವಾಗುವ ಸಲುವಾಗಿ ಗುಡಿಯ ಸುತ್ತದೊಡ್ಡ ಕಟ್ಟಡಗಳೂ ಎದ್ದಿವೆ. ನಾಡಿನಲ್ಲೇ ಬಹುಪ್ರಚಾರ ಪಡೆಯದ ನಾಡದೇವಿಯ ಗುಡಿಯನ್ನೊಮ್ಮೆ ನೋಡಲು ಹೊರಟುಬನ್ನಿ. ಸನಿಹದಲ್ಲಿರುವ ಬಿಳಗಿಯಲ್ಲಿರುವ ಪುರಾತನ ಜೈನಬಸದಿ, ಬಾವಿಗಳನ್ನೂ ನೋಡಿ ಬರಬಹುದು. ಮುಂದೆ ಶಿರಸಿ ಮಾರಿಕಾಂಬಾ ದೇವಿಯದರ್ಶನಕ್ಕೂ ತೆರಳಬಹುದು.