ಈ ಜಗದ ಆಟವನ್ನು ನಿಚ್ಚಳವಾಗಿ ಮತ್ತು ಕಲಾತ್ಮಕವಾಗಿ ಕಾಣಿಸುವ ಹೊಣೆಹೊತ್ತ ರಂಗಭೂಮಿಯವರು ಕೊರೋನ ಕೊಟ್ಟ ವಿರಾಮದಲ್ಲಿ ಕೊಂಚ ನಿರಾಳವಾಗಿದ್ದರು. ನಿಧಾನಕ್ಕೆ ರಂಗಚಟುವಟಿಕೆಗಳು ಗರಿಗೆದರಿಕೊಳ್ಳುತ್ತಿವೆ ಅನಿಸುವ ಹೊತ್ತಿಗೇ ಒಮೈಕ್ರಾನ್ ನಮ್ಮನ್ನು ಬೆರಳೆಣಿಸುತ್ತ ಕೂರುವಂತೆ ಮಾಡುತ್ತಿದೆ. ಇದು ಏರಿಕೆ ಕಂಡು ರಂಗಮಂದಿರಗಳು ಮತ್ತೆ ಮುಚ್ಚಲ್ಪಟ್ಟರೆ ಅಥವಾ ಕೇವಲ ಅರ್ಧದಷ್ಟು ಭರ್ತಿಗೆ ಅವಕಾಶ ಅಂತಾದರೆ ಮುಂದಿನ ಕತೆ ಏನು ಎಂದು ಕೇಳಿಕೊಳ್ಳುವಂತಾಗಿದೆ. ಆದರೆ ಈ ಎರಡೂ ಎರಡೂವರೆ ವರ್ಷಗಳ ಪರ್ವ ಸಮಯದಲ್ಲಿ ರಂಗಭೂಮಿ ವಲಯದಲ್ಲಿ ಏನಾದರೂ ಬದಲಾವಣೆಗಳಾಗಿವೆಯೆ ಎಂದು ಸೂಕ್ಷ್ಮವಾಗಿ ನೋಡಿದರೆ ಏನೂ ಆದಂತಿಲ್ಲ.
ಎನ್.ಸಿ. ಮಹೇಶ್ ಬರೆಯುವ ‘ರಂಗ ವಠಾರ’ ಅಂಕಣ

 

ಕೊರೋನ ಶಖೆ ಇನ್ನೇನು ಮುಗಿಯುತ್ತಿದೆ ಅಂದುಕೊಳ್ಳುವಷ್ಟರಲ್ಲಿ ಒಮೈಕ್ರಾನ್ ಹೆಜ್ಜೆ ಊರಿದೆ. ಈ ಹೊತ್ತು ಒಬ್ಬೊಬ್ಬರಲ್ಲಿ ಒಂದೊಂದು ಬಗೆಯ ಚಿಂತೆ. ಇಷ್ಟಾದರೂ ಸಾವು ನೋವು ತಲ್ಲಣಗಳಿಗೆ ಬದುಕು ಒಗ್ಗಿಕೊಂಡಂತೆ ಕಾಣಿಸುತ್ತಿದೆ. ಜನಸಂದಣಿ ಇರುವ ಕಡೆ ಕೂಡ ಹಲವರ ಮುಖಗಳಿಂದ ಮಾಸ್ಕ್‌ಗಳು ಜಾರಿವೆ. ಕೆಲವರು ಮಾಸ್ಕ್ ಗಳನ್ನು ಧರಿಸದೆಯೇ ಓಡಾಡುವ ಧೈರ್ಯ ತೋರುತ್ತಿದ್ದಾರೆ. ಅವರ ಕಣ್ಣುಗಳನ್ನು ಓದುತ್ತಾ ಹೋದರೆ ಅದರಲ್ಲಿ ಕೊರೋನ ಆರಂಭದ ಘಟ್ಟದಲ್ಲಿ ಇದ್ದ ಭೀತಿ ಕಾಣಿಸುತ್ತಿಲ್ಲ. ನಡೆಯುವುದು ನಡೆಯಲಿ ಎಂದು ಸಿದ್ಧಗೊಂಡವರಂತೆ ಓಡಾಡುತ್ತಿರುವಂತಿದೆ. ಬದಲಿಗೆ ಈಗ ಹಲವರಲ್ಲಿ ಕದಲುತ್ತಿರುವ ಪ್ರಶ್ನೆಯೇ ಬೇರೆ.

ಮುಂದೆ ಒಮೈಕ್ರಾನ್ ಆರ್ಭಟ ಹೆಚ್ಚಾಗಿ ಮತ್ತೇನಾದರೂ ಲಾಕ್ಡೌನ್ ಆಗಿದ್ದಾದರೆ ಬದಲಾಗುವ ಕಾರ್ಯನಿರ್ವಹಣೆಯ ಸ್ವರೂಪದ ಬಗ್ಗೆ ಹಲವರ ಕಣ್ಣುಗಳಲ್ಲಿ ಪ್ರಶ್ನೆಗಳು ಇದ್ದಂತಿವೆ. ಹಲವು ಸ್ತರದ ಕಾಯಕಜೀವಿಗಳಲ್ಲಿ ಒಂದೊಂದು ಬಗೆಯ ಪ್ರಶ್ನೆ. ಅಂದಂದಿನ ಬದುಕಿಗೆ ಅನ್ನ ಹೊಂಚಿಕೊಳ್ಳುವ ಜೀವಿಗಳ ಕಣ್ಣುಗಳಲ್ಲಿ ಧಾವಂತ ಕಾಣಿಸುತ್ತಿದ್ದರೆ ಕಾರ್ಪೊರೇಟ್‌ಗಳು ಮನೆಯಲ್ಲಿ ಹೆಚ್ಚು ದಣಿಯುತ್ತಿರುವ ಬಗ್ಗೆ ಮಾತಾಡುತ್ತಿದ್ದಾರೆ.

ಆದರೆ ಈ ಜಗದ ಆಟವನ್ನು ನಿಚ್ಚಳವಾಗಿ ಮತ್ತು ಕಲಾತ್ಮಕವಾಗಿ ಕಾಣಿಸುವ ಹೊಣೆಹೊತ್ತ ರಂಗಭೂಮಿಯವರು ಕೊರೋನ ಕೊಟ್ಟ ವಿರಾಮದಲ್ಲಿ ಕೊಂಚ ನಿರಾಳವಾಗಿದ್ದರು. ನಿಧಾನಕ್ಕೆ ರಂಗಚಟುವಟಿಕೆಗಳು ಗರಿಗೆದರಿಕೊಳ್ಳುತ್ತಿವೆ ಅನಿಸುವ ಹೊತ್ತಿಗೇ ಒಮೈಕ್ರಾನ್ ನಮ್ಮನ್ನು ಬೆರಳೆಣಿಸುತ್ತ ಕೂರುವಂತೆ ಮಾಡುತ್ತಿದೆ.

ಇದು ಏರಿಕೆ ಕಂಡು ರಂಗಮಂದಿರಗಳು ಮತ್ತೆ ಮುಚ್ಚಲ್ಪಟ್ಟರೆ ಅಥವಾ ಕೇವಲ ಅರ್ಧದಷ್ಟು ಭರ್ತಿಗೆ ಅವಕಾಶ ಅಂತಾದರೆ ಮುಂದಿನ ಕಥೆ ಏನು ಎಂದು ಕೇಳಿಕೊಳ್ಳುವಂತಾಗಿದೆ. ಆದರೆ ಈ ಎರಡೂ ಎರಡೂವರೆ ವರ್ಷಗಳ ಪರ್ವ ಸಮಯದಲ್ಲಿ ರಂಗಭೂಮಿ ವಲಯದಲ್ಲಿ ಏನಾದರೂ ಬದಲಾವಣೆಗಳಾಗಿವೆಯೆ ಎಂದು ಸೂಕ್ಷ್ಮವಾಗಿ ನೋಡಿದರೆ ಏನೂ ಆದಂತಿಲ್ಲ.

ಈ ಹಿಂದೆ ಇಸಂಗಳನ್ನ ಹಿಡಿದುಕೊಂಡು ಓಡಾಡುತ್ತಿದ್ದವರು ಇನ್ನೂ ಹಾಗೇ ಅದನ್ನ ಹಿಡಿದುಕೊಂಡಿದ್ದಾರೆ. ತಾವು ಮಾತ್ರ ಕಲೆಯ ಬೆನ್ನು ಹತ್ತಿದ್ದೇವೆ ಎಂದು ಬೀಗುತ್ತಿದ್ದವರ ನೋಟಕ್ರಮದಲ್ಲೇನಾದರೂ ಬದಲಾವಣೆಗಳಾಗಿವೆಯೇ ಎಂದು ನೋಡಿದರೆ ಅದೂ ಆದಂತಿಲ್ಲ. ಇಷ್ಟರ ನಡುವೆ ಬೆಂಗಳೂರಿನ ರಾಮಾಂಜನೇಯ ಗುಡ್ಡದ ಮೇಲಿದ್ದ ಕೆ.ಎಚ್. ಕಲಾಸೌಧ ಹಲವು ಹೊಸ ರಂಗತಂಡಗಳ ಪ್ರಯೋಗಗಳಿಗೆ ನೆಲೆತಾಣವಾಗಿತ್ತು. ಅದು ಬಾಗಿಲಿಕ್ಕಿಕೊಂಡು ಕಾಲ ಆಗುತ್ತಾ ಬರುತ್ತಿದೆ. ಯಾರ ನಿರ್ಲಕ್ಷ್ಯದಿಂದ ಅದು ಸ್ಥಗಿತಗೊಂಡಿದೆ ಎಂದು ಪತ್ತೆಹಚ್ಚುವ ದರ್ದು ಯಾರಿಗೂ ಇದ್ದಂತಿಲ್ಲ. ಹಾಗೆಯೇ ಕಲಾಗ್ರಾಮದಲ್ಲಿದ್ದ ರಂಗಮಂದಿರ ಈ ಹಿಂದೆ ಬೆಂಕಿಗೆ ಆಹುತಿಯಾಯಿತು. ಅದನ್ನು ಸಿದ್ಧಪಡಿಸಲು ಸರ್ಕಾರಕ್ಕೆ ಎಷ್ಟು ತಿಂಗಳಿನ ಕೆಲಸ? ಈ ಹೊತ್ತು ನಮಗೆ ಅಲ್ಲಿ ರಂಗಮಂದಿರವೊಂದಿತ್ತು ಎಂಬುದೇ ಮರೆತುಹೋಗುತ್ತಿದೆ. ಇದೆಲ್ಲ ಘಟಿಸುತ್ತಿರುವ ಹೊತ್ತಿನಲ್ಲೇ ಕೆಲವೊಂದು ರಂಗಮಂದಿರಗಳು ಕಟ್ಟುಪಾಡುಗಳಲ್ಲಿ ತಮ್ಮನ್ನು ತಾವು ಬಂಧಿಸಿಕೊಂಡು ಮಿಕ್ಕವರನ್ನೂ ಆ ಕಟ್ಟುಪಾಡುಗಳಲ್ಲಿ ಬಂಧಿಸುತ್ತ ನಿತ್ಯ ಸೃಜನಶೀಲ ಮಾಧ್ಯಮವಾದ ರಂಗಭೂಮಿಗೆ ಒಂದು ಪ್ರಿಜುಡೈಸ್ಡ್ ಫ್ರೇಮ್ ಹೊಡೆಯುವ ಕೆಲಸದಲ್ಲಿ ತಮ್ಮ ಔನ್ನತ್ಯ ಮೆರೆಯುತ್ತಿದ್ದಾರೆ. ಈ ಎಲ್ಲದರ ಮತ್ತು ಎಲ್ಲವುಗಳ ನಡುವೆ ನಾಟಕಗಳನ್ನು ರಂಗಕ್ಕೆ ತರುವುದು ಚಾಲೆಂಜಿಂಗ್ ಕೆಲಸ.

ಇಸಂಗಳನ್ನು ಬೆನ್ನಿಗೆ ಕಟ್ಟಿಕೊಂಡಿರುವವರು ಸಿಕ್ಕಾಗಲೂ ಅನಿವಾರ್ಯವಾಗಿ ನಗಬೇಕು; ಕಲೆಯ ಪರ್ವತವನ್ನು ತಾವು ಮಾತ್ರ ಹತ್ತುತ್ತಿರುವ ಪರ್ವತಾರೋಹಿಗಳು ಎಂದುಕೊಂಡಿರುವವರ ಮುಖಗಳು ಅನಿವಾರ್ಯವಾಗಿ ಕಣ್ಣುಗಳಿಗೆ ನಿಲುಕುತ್ತಿರುತ್ತವೆ. ಆಗಲೂ ನಗಬೇಕು ಮತ್ತು ಕೈಕುಲುಕಬೇಕು. ರಂಗಮಂದಿರವನ್ನು ತಮ್ಮ ಕಟ್ಟುಪಾಡುಗಳಲ್ಲಿ ಬಂಧಿಸಿಟ್ಟುಕೊಂಡು ಗುತ್ತಿಗೆ ಪಡೆದಿರುವವರ ರೀತಿ ಆಡುವವರು ಮತ್ತು ಅಲ್ಲಿ ನಾಟಕಕ್ಕೆ ಸ್ಲಾಟ್ ಗಿಟ್ಟಿಸಿಕೊಳ್ಳುವವರ ಗುಂಪೂ ಆಗಾಗ ಎದುರಾಗುತ್ತಿರುತ್ತದೆ. ಅವರು ನಮ್ಮಂಥ ರಿಯಲಿಸ್ಟಿಕ್ ನಾಟಕಗಳನ್ನು ಮಾಡುವವರು ಕಂಡಾಗ ಕಲೆಯ ರಸಸಿದ್ಧಾಂತದ ಬಗ್ಗೆ ಹೇಳಲು ಆರಂಭಿಸುತ್ತಾರೆ. ಆ ಹೊತ್ತು ನಾವು ಕನಲಿದರೆ ಕೆಲಸ ಕೆಡುತ್ತದೆ. ಮೊದಲಾಗಿದ್ದರೆ ನಾನು ಇದೇ ಕೆಲಸ ಮಾಡುತ್ತಿದ್ದೆ. ಈಗ ನಗುವ ಪರಿಪಾಠ ಬೆಳೆಸಿಕೊಂಡಿದ್ದೇನೆ.

ಬದುಕು ನಮ್ಮನ್ನು ನಲುಗಿಸುತ್ತ ಹೇಗೆ ಒಂದು ಅನುಭವದ ಅನನ್ಯ ಲೋಕ ಕಟ್ಟಿಕೊಟ್ಟು ಎಲ್ಲರ ನಡುವೆ ಜಾಣತನದಿಂದ ಮತ್ತು ಡಿಪ್ಲಮಾಟಿಕ್ ಆಗಿ ಬದುಕುವ ಬಗೆ ಕಲಿಸುತ್ತದೆಯೋ ಹಾಗೆಯೇ ರಂಗದ ಬದುಕೂ ಕಲಿಸುತ್ತದೆ. ಕಲಿತುಕೊಳ್ಳುವ ಉಮೇದು ನಮ್ಮಲ್ಲಿ ಇರಬೇಕು ಅಷ್ಟೇ. ಕೊರೋನ ಯಾರೊಳಗಿನ ಜಡ್ಡನ್ನೂ ಕರಗಿಸಿಲ್ಲ ಎಂದು ಯೋಚಿಸುತ್ತಿದ್ದ ಹೊತ್ತಿನಲ್ಲೇ ಪ್ರಕಸಂ (ಪ್ರದರ್ಶನ ಕಲಾ ಸಂಸ್ಥೆ) ತಂಡ ಕನ್ನಡ ಹವ್ಯಾಸಿ ರಂಗಭೂಮಿ ವಲಯದಲ್ಲಿ ಇಪ್ಪತ್ತು ವರ್ಷ ಪೂರೈಸಿರುವ ಸುದ್ದಿ ನಮ್ಮ ನಡುವೆ ಹರಿದಾಡಲು ಆರಂಭಿಸಿತು.

ಇದು ಸಂತೋಷದ ಸಂಗತಿ ಖಂಡಿತ ಹೌದು. ಜೊತೆಗೆ ಹುಬ್ಬೇರಿಸುವ ಸಂಗತಿಯೂ ಹೌದು. ಯಾಕೆಂದರೆ ಈಗ್ಗೆ ಹದಿನೈದು ವರ್ಷಗಳ ಹಿಂದೆ ರಂಗತಂಡವೊಂದನ್ನು ನಡೆಸುವ ರೀತಿಗೂ ಇಂದು ನಡೆಸುವ ರೀತಿಗೂ ತುಂಬ ವ್ಯತ್ಯಾಸವಿದೆ. ಇಂದಿನದು ಹೆಚ್ಚಿನ ಚಾಲೆಂಜಿಂಗ್. ಯಾಕೆಂದರೆ ತೊಡಕುಗಳು, ಸ್ಪರ್ಧೆ, ತಂಡಗಳು, ಕುಹಕ, ರಸಸಿದ್ಧಾಂತ ಪ್ರತಿಪಾದನೆ ಹೆಚ್ಚು. ಮೊದಲಾಗಿದ್ದರೆ ತಮ್ಮ ಹರಿವಾಣದಲ್ಲಿ ಊಟ ಹೊಂದಿಸಿಕೊಳ್ಳುವ ಕಡೆ ಹೆಚ್ಚಿನ ಗಮನ ಎಲ್ಲರಿಗೂ ಇತ್ತು. ಈ ಹೊತ್ತು ತಮ್ಮ ಹರಿವಾಣ ತುಂಬಿದೆಯೋ ಇಲ್ಲವೋ ಮಿಕ್ಕವರ ಹರಿವಾಣದ ಕಡೆಗೇ ಕಣ್ಣುನೆಟ್ಟು ಕೂರುವ ಮತ್ತು ಕುದಿಯುವ ಪರಿಪಾಠ ಬೆಳೆದಿದೆ. ಇದು ಜಿದ್ದು ಮತ್ತು ಕುತರ್ಕಗಳನ್ನು ದೊಡ್ಡ ಪ್ರಮಾಣದಲ್ಲಿ ಬೆಳೆಸಿದೆ. ಇಂಥದ್ದರ ನಡುವೆ ರಂಗದ ಬಂಡಿಯನ್ನು ಬಹಳ ಕಾಲ ಮುಂದಕ್ಕೆ ದೂಡಿಕೊಂಡು ನಡೆಯುವುದು ಅತೀ ಕಷ್ಟದ ಕೆಲಸ. ನೊಗಕ್ಕೆ ಕುತ್ತಿಗೆ ಕೊಡುವ ಕಷ್ಟವನ್ನು ನಾನು ದೂರದಿಂದ ಕಂಡುಕೊಂಡಿದ್ದೇನೆ.

ರಾಮಾಂಜನೇಯ ಗುಡ್ಡದ ಮೇಲಿದ್ದ ಕೆ.ಎಚ್. ಕಲಾಸೌಧ ಹಲವು ಹೊಸ ರಂಗತಂಡಗಳ ಪ್ರಯೋಗಗಳಿಗೆ ನೆಲೆತಾಣವಾಗಿತ್ತು. ಅದು ಬಾಗಿಲಿಕ್ಕಿಕೊಂಡು ಕಾಲ ಆಗುತ್ತಾ ಬರುತ್ತಿದೆ. ಯಾರ ನಿರ್ಲಕ್ಷ್ಯದಿಂದ ಅದು ಸ್ಥಗಿತಗೊಂಡಿದೆ ಎಂದು ಪತ್ತೆಹಚ್ಚುವ ದರ್ದು ಯಾರಿಗೂ ಇದ್ದಂತಿಲ್ಲ.

ಈ ಹಿನ್ನೆಲೆಯಲ್ಲಿ ಪ್ರಕಸಂ ತಂಡ ಎರಡು ದಶಕ ಪೂರೈಸಿರುವುದು ನಿಜಕ್ಕೂ ನನಗೆ ದೊಡ್ಡ ಸಂಗತಿಯಾಗಿ ಕಂಡಿತು. ಆ ತಂಡದ ಪ್ರಮುಖರಲ್ಲಿ ಒಬ್ಬರಾದ ಪಿ.ಡಿ. ಸತೀಶ್ ಚಂದ್ರ ಅವರು ನನಗೆ ಗೆಳೆಯರು. ರಂಗದ ಬದುಕಿನ ಆಗುಹೋಗುಗಳನ್ನು ಅಂದಂದಿನ ಕಾಲಮಾನಕ್ಕೆ ತಕ್ಕಂತೆ ಅಪ್‍ಡೇಟ್ ಆಗುತ್ತ ಅರಿಯುತ್ತ ಬಂದವರು. ಸದಾ ತುಂಬು ನಗೆ. ಕಚಗುಳಿ ಇಡುವ ಮಾತುಗಳು. ಕೆ.ಎಚ್. ಕಲಾಸೌಧದ ಉಸ್ತುವಾರಿ ನಿರ್ವಹಣೆ ತೆಗೆದುಕೊಂಡು ಬಹಳಕಾಲ ಸಮರ್ಥವಾಗಿ ನಿಭಾಯಿಸಿದವರು. ಕಟ್ಟುಪಾಡು ರಂಗಮಂದಿರವೊಂದು ಕೆಲವೊಂದು ತಂಡದ ನಾಟಕಗಳನ್ನ ಮತ್ತು ನಾಟಕ ತಂಡದವರನ್ನು ಅಸ್ಪೃಶ್ಯರಂತೆ ಕಾಣುತ್ತಿದ್ದಾಗ ಪಿ.ಡಿ. ಸತೀಶ್ ಚಂದ್ರ ಅವರು ಅಸ್ಪೃಶ್ಯತೆಯಿಂದ ಮುಕ್ತವಾದ ವಾತಾವರಣವನ್ನು ಹಲವು ರಂಗತಂಡಗಳಿಗೆ ಕಲ್ಪಿಸಿಕೊಟ್ಟವರು. ಇವರ ಪ್ರಕಸಂ ತಂಡ ಎರಡು ದಶಕ ಪೂರೈಸಿರುವ ಹೊತ್ತು ಇದನ್ನು ಅನನ್ಯವಾಗಿ ಮತ್ತು ಭಿನ್ನವಾಗಿ ಆಚರಿಸಬೇಕು ಎಂಬ ಯೋಚನೆ ಆ ತಂಡದವರಿಗೆ ಬಂದಿದೆ.

(ಪಿ.ಡಿ. ಸತೀಶ್ ಚಂದ್ರ)

ಹೇಗೆ ಅಂದರೆ- ತಂಡ ಇಪ್ಪತ್ತು ವರ್ಷ ಪೂರೈಸಿರುವುದರಿಂದ ಇಪ್ಪತ್ತು ನಿಮಿಷದ ಇಪ್ಪತ್ತು ಕಿರು ನಾಟಕಗಳ ಸ್ಪರ್ಧೆಯನ್ನು ನಡೆಸಬೇಕು; ಮತ್ತು ಮೂರು ನಗದು ಬಹುಮಾನ ನಿಗದಿ ಮಾಡಬೇಕು. ಇದು ಅವರ ಆಲೋಚನೆ.

ಇಷ್ಟೇ ಆಗಿದ್ದರೆ ಅಷ್ಟೇನೂ ವಿಶೇಷ ಅನಿಸುತ್ತಿರಲಿಲ್ಲ. ಇಪ್ಪತ್ತು ನಿಮಿಷದ ಇಪ್ಪತ್ತು ಕಿರು ನಾಟಕ ಸ್ಪರ್ಧೆಗಳಿಗೆ ಥೀಮನ್ನು ಅವರೇ ಗೊತ್ತು ಮಾಡಿದ್ದಾರೆ. ಸ್ಪರ್ಧೆಯಲ್ಲಿ ಭಾಗವಹಿಸುವವರು ಆ ಥೀಮಿಗೆ ಒಳಪಟ್ಟೇ ನಾಟಕ ಕಟ್ಟಬೇಕು. ‘ರಿಫ್ರೆಶ್’ ಎನ್ನುವುದು ಥೀಮ್. ಒಟ್ಟು ನಾಟಕ ಸ್ಪರ್ಧೆಗೆ ಕೊಟ್ಟುಕೊಂಡಿರುವ ಹೆಸರು ‘ರಿಫ್ರೆಶ್ ಟಿ20’.

ಏನಿದು ‘ರಿಫ್ರೆಶ್’ ಎಂದು ಕೆದಕಿದರೆ ತಿಳಿದದ್ದು ತಂಡ ಎಷ್ಟು ರಿಫ್ರೆಶ್ ಆಗಿದೆ ಎನ್ನುವ ಸೂಚನೆ. ಈಗ್ಗೆ ಸರಿಸುಮಾರು ಎರಡೂವರೆ ವರ್ಷಗಳಿಂದ ನಮ್ಮೆಲ್ಲರ ಬದುಕು ಕೊರೋನ ಕಾರಣದಿಂದ ಒಂದಿಲ್ಲೊಂದು ಬಗೆಯಲ್ಲಿ ಜಡ್ಡುಗಟ್ಟುಹೋಗಿದೆ. ಈ ಜಡ್ಡಿನಿಂದ ಬಿಡಿಸಿಕೊಂಡು ರಿಫ್ರೆಶ್ ಆಗುವ ಮತ್ತು ಆಗಿರುವ ಬಗೆ ಹೇಗೆ? ಇದನ್ನ ಇಪ್ಪತ್ತು ನಿಮಿಷದ ನಾಟಕವಾಗಿ ಕಟ್ಟಬೇಕು. ಯಾರು ಯಾರು ಯಾವ್ಯಾವ ಬಗೆಯ ಥಾಟ್ಸ್ ಹೊಂದಿದ್ದಾರೆ ಎನ್ನುವುದರ ಚಿತ್ರ ಕಾಣಿಸುತ್ತದೆ. ಇದು ಒಂದು ಬಗೆಯ ಪಾಸಿಟಿವಿಟಿ. ಅಥವಾ ಇನ್ನೂ ಅಪಸವ್ಯ ಮುಗಿದಿರದ ಹೊತ್ತಲ್ಲೂ ಅದನ್ನು ದಾಟುವ ಪ್ರಯತ್ನದ ಸಲುವಾಗಿಯೂ ಇದನ್ನು ಕಂಡುಕೊಳ್ಳಬಹುದು.

ಹಲವು ರಂಗತಂಡಗಳು ಈ ಸ್ಪರ್ಧೆಯಲ್ಲಿ ನೋಂದಣಿಯಾಗಿವೆ ಎನ್ನುವ ವರ್ತಮಾನ ಬರುತ್ತಿದೆ. ಸಾಕಷ್ಟು ರಂಗ ತಂಡಗಳು ಇದ್ದರೂ ನಾಟಕದ ಒಟ್ಟು ಹೂರಣ ಅಥವಾ ಜಿಸ್ಟ್ ನೋಡಿ ಸ್ಪರ್ಧೆಗೆ ಆಯ್ಕೆ ಮಾಡಿಕೊಳ್ಳಲಾಗಿದೆ. ನಂತರದಲ್ಲಿ ಒಟ್ಟು ಇಪ್ಪತ್ತು ತಂಡಗಳು ಇಂದು ನಾವು ನಮ್ಮ ಮನಸ್ಸನ್ನ ಬೇರೆ ಕಡೆಗೆ ತಿರುಗಿಸಿ ರಿಫ್ರೆಶ್ ಆಗುವ ಬಗೆಯನ್ನು ಹೇಗೆ ಕಾಣಿಸುತ್ತವೆ ಎನ್ನುವ ಕುತೂಹಲ ಹುಟ್ಟುಹಾಕಿದೆ. ಇದು ನನಗೆ ಸ್ಪರ್ಧೆ ಅನಿಸುವುದಕ್ಕಿಂತ ಈ ಕಾಲದ ದೊಡ್ಡ ಜರೂರು ಅನಿಸುತ್ತಿದೆ. ಇಂಥದೊಂದು ಥಾಟ್ ಹುಟ್ಟುಹಾಕಿರುವ ಪ್ರಕಸಂ ತಂಡ ನಿಜಕ್ಕೂ ಅಭಿನಂದನೀಯ. ಇಪ್ಪತ್ತು ವರ್ಷ ಮಾಗಿರುವ ದ್ಯೋತಕವಾಗಿ ನನಗೆ ಇದು ಕಾಣುತ್ತಿದೆ.

ಇದು ಒಂದು ಕಡೆಯಾದರೆ ಮತ್ತೆ ಕೆಲವೆಡೆ ನಾವು ಕಾಣುವ ಸಂದರ್ಭಗಳು ಈ  ಮೇಲಿನ ಸಂಗತಿಗೆ ವಿರುದ್ಧವಾಗಿರುವುದೂ ಉಂಟು. ಗೋಪಾಲ ಕೃಷ್ಣ ಅಡಿಗರು ಕವನವೊಂದರಲ್ಲಿ ಹೇಳಿದಂತೆ ‘ಹೊಸನೀರು ಬಂದರೂ ಅದೇ ಪುರಾತನದ ಅಮಲು’ ಎನ್ನುವಂತೆ ವರ್ತಿಸುವ ಸಂಘಟನೆಗಳೂ ಇವೆ. ಎಷ್ಟೋ ಮಂದಿ ಆಯೋಜಕರು, ಸ್ಪರ್ಧೆಯಲ್ಲಿ  ‘ಹೊಸ ನಾಟಕ ಪ್ರಯೋಗಗಳಿಗೆ ಆದ್ಯತೆ’ ಎನ್ನುವ ಸಾಲು ಬರೆದುಕೊಂಡರೂ, ಅದಕ್ಕೆ ಮುಕ್ತ ಅವಕಾಶ ಸಿಗುತ್ತದೆ ಎಂಬ ವಿಶ್ವಾಸವಿಡುವಂತಿಲ್ಲ.  ಸ್ಪರ್ಧೆಯಲ್ಲಿ ಭಾಗಿಯಾಗುವ ನಾಟಕಗಳು ಈಗಾಗಲೇ ಮೊದಲೇ ಮೆಚ್ಚುಗೆ ಪಡೆದುಕೊಂಡು ರಂಗವಲಯದಲ್ಲಿ ಮಾತಿಗೆ ನಿಲುಕಿರಬೇಕು ಎಂದು ಅಪೇಕ್ಷಿಸುವುದೂ ಉಂಟು.  ರಿಯಲಿಸ್ಟಿಕ್ ನಾಟಕಗಳನ್ನು ಕಡೆಗಣಿಸಲಾಗುತ್ತಿದೆ ಅನಿಸಿಕೊಳ್ಳಬಾರದು ಎನ್ನುವ ಕಾರಣಕ್ಕೆ ಅವಕ್ಕೂ ಅನಿವಾರ್ಯವಾಗಿ ಮಣೆ ಹಾಕುತ್ತಾರೆ. ಉಳಿದಂತೆ ಪುರಾಣಕ್ಕೇ ಹೆಚ್ಚು ಒತ್ತು. ಅದಿರಲಿ.

ಹೀಗೆ ಕಠಿಣವಾದ ಪೂರ್ವ ಷರತ್ತುಗಳನ್ನು ವಿಧಿಸಿ ನಾಟಕ ಮಾಡುವಂತೆ ಸೂಚಿಸುವುದರಿಂದ  ಆಲೋಚನೆಯು ವಿಕಾಸವಾಗುವುದು ಸಾಧ್ಯವಿಲ್ಲ ಅಲ್ಲವೇ.

ಸ್ಪರ್ಧೆಗಳೆಲ್ಲ ಹೀಗೆ ಭೋಳೆತನದಿಂದ ಕೂಡಿರುತ್ತವೆ ಎಂದು ಸಾರಾಸಗಟಾಗಿ ತಳ್ಳಿಹಾಕಿಬಿಡೋಣ ಅಂದುಕೊಂಡರೆ ಪ್ರಕಸಂ ತಂಡದ ಚಿಂತನೆ ಮತ್ತು ಪ್ರಯೋಗ ನನ್ನ ನಿರ್ಧಾರಕ್ಕೆ ಬ್ರೇಕ್ ಒತ್ತುತ್ತದೆ. ಜೊತೆಗೆ ಆ ಪುರಾತನ ಅಮಲಿನ ರಂಗಸಂಸ್ಥೆಯ ಪೂರ್ವಗ್ರಹಗಳು ನೆನಪಾಗುತ್ತದೆ.

ಸದ್ಯಕ್ಕೆ ಇದರಿಂದ ರಿಫ್ರೆಶ್ ಆಗುವ ಬಗೆ ಯೋಚಿಸುತ್ತಿದ್ದೇನೆ. ಪುರಾತನ ಅಮಲನ್ನು ಕಳೆದುಕೊಂಡು ರಿಫ್ರೆಶ್ ಆಗುವ ಕಡೆ ತುಡಿಯುವ ಇಪ್ಪತ್ತು ನಿಮಿಷಗಳ ಇಪ್ಪತ್ತು ನಾಟಕಗಳ ಕಡೆಗೆ ಚಿತ್ತ ಹರಿಸುತ್ತಿದ್ದೇನೆ.